Thursday, June 21, 2007

ನಾ ಕೊಂದ ಹೂವು

ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದೆಯಲ್ಲವೆ ಗೆಳತಿ... ಹಾಗೆ ಹೇಳಿ, ವರುಷಗಳ ಹಿಂದಿನ ಇಂಥದೇ ಒಂದು ನೆನಪನ್ನು ಕೆದಕಿದ್ದೀಯ... ಜೇನುಗೂಡಿಗೆ ಕಲ್ಲೆಸೆದಿದ್ದೀಯ. ನಿನಗೆ ಇದನ್ನು ಹೇಳಲೇಬೇಕು.

*************

ಗಂಗೋತ್ರಿಯ ಹಾಸ್ಟೆಲ್. ನನ್ನ ಮೊದಲದಿನ. ಹಿಂದಿನ ದಿನವಷ್ಟೇ ಸಾಮಾನುಸಮೇತ ಬಂದು ಗಂಗೋತ್ರಿಯ ಹಾಸ್ಟೆಲಿಗೆ ಸೇರಿಕೊಂಡಿದ್ದೇನೆ. ರೂಂಮೇಟ್ ಗಳ ಪರಿಚಯವಾಗಿದೆ. ಹೊಸ ಹಾಸ್ಟೆಲ್ ಬದುಕು ಆರಂಭವಾಗಿದೆ. ಕಳೆದ ಐದು ವರ್ಷಗಳಿಂದಲೂ ಹಾಸ್ಟೆಲ್-ನಲ್ಲೇ ಇದ್ದುಕೊಂಡು ಓದಿದ ನನಗೆ ಇದು just another hostel.

ಬೆಳಿಗ್ಗೆ ತಿಂಡಿಯ ಸಮಯ. ಡೈನಿಂಗ್ ಹಾಲ್-ನಲ್ಲಿ ನಾನು, ನನ್ನ ಹೊಸ ರೂಂಮೇಟ್-ಗಳಾದ ರೂಪ ಮತ್ತು ಸ್ವಾತಿ ಕುಳಿತುಕೊಂಡಿದ್ದೇವೆ. ಡೈನಿಂಗ್ ಹಾಲ್ ಭರ್ತಿಯಾಗಿದೆ. ನಮ್ಮ ಟೇಬಲ್-ನಲ್ಲಿ ನನ್ನೆದುರಿಗಿನ ನಾಲ್ಕನೇ ಕುರ್ಚಿ ಖಾಲಿಯಿದೆ. ನಮ್ಮ ಊರುಗಳ ಬಗ್ಗೆ, ಕಾಲೇಜು ಬದುಕಿನ ಬಗ್ಗೆ ಮಾತಾಡುತ್ತಾ ತಿಂಡಿ ತಿನ್ನುತ್ತಿದ್ದೆವು.

ನನ್ನ ಹಿಂದಿನಿಂದ Hi, can I sit here? ವಿನಯಭರಿತ ದನಿ ಕೇಳಿಸಿತು. ಹಿಂದೆ ತಿರುಗಿದರೆ ನಿಂತಿದ್ದಳಾಕೆ. ಒಂದು ಕೈಯಲ್ಲಿ ಚಹಾ, ಇನ್ನೊಂದು ಕೈಯಲ್ಲಿ ತಿಂಡಿಯ ತಟ್ಟೆ ಹಿಡಿದು. ಬಾಬ್ ಕಟ್ ಕೂದಲು. ಸ್ವಲ್ಪವೇ ಉಬ್ಬಿ ಎದುರು ಬಂದ ಹಲ್ಲುಗಳನ್ನು ಮುಂಬರದಂತೆ ತಡೆಯುತ್ತಿರುವ ಸ್ಪ್ರಿಂಗ್. ಕುತೂಹಲದ ಮುಗುಳ್ನಗು.

ನನ್ನೆದುರಿಗಿದ್ದ ರೂಪ Ofcourse ಅನ್ನುತ್ತ ಪರ್ಮಿಶನ್ ಕೊಟ್ಟಳು. ಖಾಲಿಯಿದ್ದ ಕುರ್ಚಿಯಲ್ಲಿ ಕೂತುಕೊಂಡು ಸೆಟಲ್ ಆಗುತ್ತ ಅವಳು ತನ್ನನ್ನು ತಾನು ಪರಿಚಯಿಸಿಕೊಂಡಳು - I'm Priya, doing my PG in Sociology... I come from Delhi, Can't understand Kannada...ಇತ್ಯಾದಿ. ನಾವೂ ನಮ್ಮನ್ನ ಪರಿಚಯಿಸಿಕೊಂಡೆವು. ಹಾಗೆ ನಮಗೆ ಆಕೆ ಹೊಸ ಒಡನಾಡಿಯಾದಳು.

ನಮ್ಮ ರೂಮಿನಿಂದ ಎರಡು ರೂಂಗಳಾಚೆಗಿದ್ದ ಆಕೆಯ ಕೋಣೆಯಲ್ಲಿ ಕನ್ನಡ ಎಂಎ ಮಾಡುವ ವಿದ್ಯಾರ್ಥಿನಿಯರಿದ್ದು, ಅವರ ನಡುವೆ ಭಾಷೆ ಗೋಡೆಯಾಗಿ ನಿಂತಿತ್ತು. ಆಕೆ ತನ್ನ ರೂಂಮೇಟ್-ಗಳಿಗಿಂತ ಹೆಚ್ಚಾಗಿ ನಮ್ಮ ಜತೆ ಒಗ್ಗಿಕೊಂಡಳು. ದಿನದಿನದ ಕಥೆಗಳು, ಜೋಕುಗಳು, ನಗೆಚಾಟಿಕೆಗಳು - ಎಲ್ಲವೂ ಹಂಚಿಕೆಯಾದವು. ಹೊಸತನದ ಬೆಸುಗೆಗೆ ಸೇತುವೆಯಾದವು.

***********

ಭಾನುವಾರ ಬಂತು. ರೂಪ, ಸ್ವಾತಿ ಇಬ್ಬರೂ ಮಲಗಿದ್ದರೆ, ನಾನು ಚಹಾ ತೆಗೆದುಕೊಂಡು ಬರೋಣವೆಂದು ಡೈನಿಂಗ್ ಹಾಲಿಗೆ ಹೋದೆ. ಟೀವಿ ಹಚ್ಚಿತ್ತು. ಟೀವಿಯಲ್ಲಿ ಡಿಸ್ಕವರಿ ಚಾನೆಲ್ ಹಾಕಿದ್ದರು. ಅದ್ಯಾವುದೋ ದೇಶದಲ್ಲಿ ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊರಹೋಗಲೊಲ್ಲದ ಬುಡಕಟ್ಟು ಜನಾಂಗದವರ ಮೇಲೆ ಸಾಕ್ಷ್ಯಚಿತ್ರ ಬರುತ್ತಿತ್ತು. ಮೊನ್ನೆ ಮೊನ್ನೆಯಷ್ಟೆ ಅಭಿವೃದ್ಧಿ ಪತ್ರಿಕೋದ್ಯಮವೆಂದರೇನು, ಅದು ಹೇಗಿರಬೇಕು ಎನ್ನುವುದರ ಬಗ್ಗೆ ಪ್ರೊಫೆಸರ್ ತರಗತಿಯಲ್ಲಿ ಹೇಳುತ್ತಿದ್ದಾಗ ಮನಸಿಟ್ಟು ಕೇಳಿಕೊಂಡಿದ್ದೆ. ಈ ಸಾಕ್ಷ್ಯಚಿತ್ರ ಅವರು ಹೇಳಿದ ಮಾತುಗಳಿಗೆಲ್ಲ ನೇರ ಸಂಬಂಧವುಳ್ಳದ್ದಾಗಿ ಕಂಡು ನಾನು ಚಹಾ ಕುಡಿಯುತ್ತಾ ನೋಡುತ್ತಾ ಕುಳಿತೆ.

Oh, you are here? ಪ್ರಿಯಾ ದನಿ ಕೇಳಿ ಹಿಂತಿರುಗಿದೆ. ನಮ್ಮ ಕೋಣೆಗೆ ಹೋಗಿದ್ದಳಂತೆ, ಅವರಿಬ್ಬರು ಮಲಗಿದ್ದರಂತೆ, ನಾನೂ ಕಾಣಲಿಲ್ಲವಾದ್ದರಿಂದ ಒಬ್ಬಳೇ ಡೈನಿಂಗ್ ಹಾಲಿಗೆ ಬಂದಳಂತೆ. ಯಾಕಷ್ಟು ಆಸಕ್ತಿಯಿಂದ ಸಾಕ್ಷ್ಯಚಿತ್ರ ನೋಡುತ್ತಿದ್ದೀಯೆಂದು ಪ್ರಶ್ನಿಸಿದಳು. ಹೇಳಿದೆ. ಅವಳೂ ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಳು. ಹೊಸ ವಿಷಯವೊಂದು ತಿಳಿದುಕೊಂಡ ಹಿಗ್ಗು, ಅವಳಿಗೆ ತಿಳಿಸಿದವಳ ಮೇಲೆ ತಣಿಯದ ಕುತೂಹಲಕ್ಕೆ ಕಾರಣವಾಯಿತು.

ಹಾಗೇ ನನ್ನ ಹಿನ್ನೆಲೆ ಕೇಳಿದಳು. 'I can't believe you are a Brahmin...' ಆಶ್ಚರ್ಯದಿಂದ ಉದ್ಗರಿಸಿದಳು. 'ಜಾತಿಯ ಬಗ್ಗೆ ಯಾಕಷ್ಟು ಯೋಚನೆ ಮಾಡ್ತೀಯ, ಆ ಕಾಲ ಎಂದೋ ಹೋಯ್ತು, ಈಗೇನಿದ್ರೂ ನಾವು ಏನಾಗಿದ್ದೇವೆ ಅನ್ನುವುದಷ್ಟೆ ಮುಖ್ಯ' ಅಂದೆ. ಬಸವಣ್ಣ 'ಜ್ಯೋತಿ ಯಾವ ಜಾತಿಯಮ್ಮ' ಅಂದಿದ್ದು ನೆನಪಾಯಿತು, ಅದನ್ನೂ ಹೇಳಿದೆ.

ಅವಳು ನನ್ನ ಬಗ್ಗೆ ಇನ್ನಷ್ಟು ಗೌರವ ತುಂಬಿಕೊಂಡಳು. ತನ್ನ ಜಗತ್ತಿಗೆ ನನ್ನನ್ನು ಸ್ವಾಗತಿಸಿದಳು. ಆಂಧ್ರದ ರಾಯಲಸೀಮೆಯ ಯಾವುದೋ ಹಳ್ಳಿಗೆ ಸೇರಿದ ತನ್ನ ದಲಿತ ಹಿನ್ನೆಲೆಯ ಬಗ್ಗೆ, ಆ ಹಳ್ಳಿಯಲ್ಲಿ ದಲಿತರು ಅನುಭವಿಸುವ ಕಷ್ಟಗಳ ಬಗ್ಗೆ, ಅವಳ ಈ ಹಿಂದಿನ ಹಾಸ್ಟೆಲ್ ಬದುಕಿನ ಬಗ್ಗೆ, ದೆಹಲಿಯಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಿರುವ ಅಕ್ಕ-ಭಾವನ ಬಗ್ಗೆ, ಅವರ ಪ್ರೇಮವಿವಾಹದ ಬಗ್ಗೆ, ದೆಹಲಿಯಲ್ಲಿ ಕಳೆದ ದಿನಗಳ ಬಗ್ಗೆ, ಐಎಎಸ್ ಅಧಿಕಾರಿಯಾಗಬೇಕೆನ್ನುವ ತನ್ನ ಬಯಕೆಯ ಬಗ್ಗೆ - ಹೀಗೇ ಸಾವಿರ ವಿಷಯಗಳನ್ನು ಹಂಚಿಕೊಂಡಳು. ಅವಳ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಹಂಬಲ ನನ್ನಲ್ಲೂ ಹುಟ್ಟಿತು. ಅವಳ ಮಾತುಗಳಿಗೆ ಕಿವಿಯಾಗುತ್ತಿದ್ದೆ.

ನನ್ನ ಬಗ್ಗೆ ಕೇಳಿದಳು. ಹೇಳಿಕೊಂಡೆ. ಪಕ್ಕಾ ಸಂಪ್ರದಾಯಸ್ತ ಮನೆತನದ ಬಗ್ಗೆ, ನಿಯಮಗಳನ್ನು ಮುರಿಯುವ ನನ್ನ ತುಂಟತನದ ಬಗ್ಗೆ. ಯಾರೇ ಗೆಳತಿಯರ, ಗೆಳೆಯರ ಅಥವಾ ಗುರುಗಳ ಹೆಸರು ನಾನು ಮಾತಾಡುವಾಗ ನುಸುಳಿದರೂ ಅವರು ಯಾವ ಜಾತಿಯೆಂದು ಕಳಕಳಿಯಿಂದ ಕೇಳುವ ಅಮ್ಮನ ಬಗ್ಗೆ, ಮನುಷ್ಯ ಜಾತಿ ಎನ್ನುವ ನನ್ನ ಧಿಮಾಕಿನ ಉತ್ತರದ ಬಗ್ಗೆ. ನಮ್ಮನೆಗೆ ಕೆಲಸಕ್ಕೆ ಬರುವ ಲಚ್ಚಿಮಿಯ ಬಗ್ಗೆ, ನಮ್ಮನೆಯ ಎದುರಿನ ಗುಡ್ಡದಾಚೆಗೆ ಗುಡಿಸಲು ಕಟ್ಟಿಕೊಂಡು ಬುಟ್ಟಿ ನೇಯ್ದು ಬದುಕುವ ಐತ ಮತ್ತು ತುಕ್ರುವಿನ ಬಗ್ಗೆ. ನಮ್ಮ ತೋಟದಲ್ಲಿ ಅಜ್ಜ ಮಲೆನಾಡಿನಿಂದ ತಂದು ನೆಟ್ಟ ಏಲಕ್ಕಿಯ ಬಗ್ಗೆ, ಏಲಕ್ಕಿ ಹೂವರಳುತ್ತಿದ್ದಂತೆಯೇ ಅದನ್ನು ಕಾಯಾಗಲು ಬಿಡದೆ ಬಂದು ತಿನ್ನುವ ಕೇರೆಹಾವಿನ ಬಗ್ಗೆ. ಮಳೆಗಾಲ ಶುರುವಾಗಿ ಕೆಲದಿನಕ್ಕೆ ಅರಳುವ ವಿಶೇಷ ಹೂವುಗಳಾದ ರಾತ್ರಿರಾಣಿ ಮತ್ತು ಕೇನೆಹೂಗಳ ಬಗ್ಗೆ, ಬೇರೆ ಹೂಗಳಿಗಿಂತ ಅವು ಹೇಗೆ ಭಿನ್ನವೆಂಬುದರ ಬಗ್ಗೆ. ಅವಳ ಕಣ್ಣಿಗೆ ಕಟ್ಟುವಂತೆ ನಾ ವಿವರಿಸುತ್ತಿದ್ದರೆ, ಅಕ್ಷರವೂ ಬಿಡದೆ ಅವಳು ಕೇಳಿಕೊಳ್ಳುವಳು.

ಹಾಗೇ ಚರ್ಚೆಗಳು. ನರ್ಮದಾ ಬಚಾವೋ ಆಂದೋಲನದ ಬಗ್ಗೆ. ದಕ್ಷಿಣ ಕನ್ನಡವೆಲ್ಲ ಒಮ್ಮೆ ಹೊಗೆಯೆಬ್ಬಿಸಿ ತಣ್ಣಗಾದ ಎಂ.ಆರ್.ಪಿ.ಎಲ್ ಪೈಪ್ಲೈನ್ ವಿವಾದ ಬಗ್ಗೆ, ಇನ್ನೂ ಹೊಗೆಯುಗುಳುತ್ತ ಪರಿಸರವನ್ನು ನುಂಗುತ್ತಿರುವ ಎಂ.ಆರ್.ಪಿ.ಎಲ್ ಬಗ್ಗೆ. ಅಭಿವೃದ್ಧಿಯ ಬಗ್ಗೆ. ಸಾಮಾನ್ಯ ಮನುಷ್ಯನ ಬಗ್ಗೆ. ಬುದ್ಧಿಜೀವಿಗಳ ಬಗ್ಗೆ. ಗಾಂಧೀಜಿಯ ಬಗ್ಗೆ. ಕೇರಳದಲ್ಲಿ ಅವಾಗಷ್ಟೆ ಕಾಲಿಟ್ಟಿದ್ದ ಡಿ.ಪಿ.ಇ.ಪಿ.ವಿದ್ಯಾಭ್ಯಾಸ ಪದ್ಧತಿಯ ಬಗ್ಗೆ. ಮಂಗಳೂರಿನ ಪೀತಪತ್ರಿಕೆಗಳ ಬಗ್ಗೆ. ಸಾಮಾಜಿಕ ಜವಾಬ್ದಾರಿರಹಿತ ಜರ್ನಲಿಸ್ಟ್-ಗಳ ಬಗ್ಗೆ. ಮುಗಿಯದ ಕಾಸರಗೋಡು ಗಡಿವಿವಾದದ ಬಗ್ಗೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಉಗ್ರವಾಗಿ ಹೋರಾಡಿ, ಅದಕ್ಕಾಗಿ ಮರಣಶಯ್ಯೆಯಲ್ಲೂ ಹಂಬಲಿಸಿದ ನನ್ನಜ್ಜನ ಬಗ್ಗೆ. ಕಾಸರಗೋಡು ಕೇರಳದಲ್ಲೇ ಇರಬೇಕೆಂಬ, ಯಾರೂ ಒಪ್ಪಲು ಸಿದ್ಧವಿಲ್ಲದ ನನ್ನ ವಾದದ ಬಗ್ಗೆ.

ಆಂಧ್ರದಲ್ಲಿ ತಾಂಡವವಾಡುತ್ತಿದ್ದ, ಅವಾಗಷ್ಟೆ ಚಿಕ್ಕಮಗಳೂರು ಕಡೆ ಸುದ್ದಿ ಶುರು ಮಾಡಿದ್ದ ನಕ್ಸಲಿಸಂ ಬಗ್ಗೆ. ನನ್ನೂರಲ್ಲಿ ಕಾಲಕ್ರಮೇಣ ತೋಟಗಳಾಗಿ ಮಾರ್ಪಟ್ಟ ಭತ್ತದ ಗದ್ದೆಗಳ ಬಗ್ಗೆ. ಗ್ಲೋಬಲೈಸೇಶನ್ ಬಗ್ಗೆ. ವ್ಯಾಪಾರಿ ಪತ್ರಿಕೋದ್ಯಮದಿಂದ ಮತ್ತು ತನ್ನ ಬ್ರಿಗೇಡ್ ರೋಡ್ ಲ್ಯಾಂಗ್ವೇಜ್-ನಿಂದ ಮಾಧ್ಯಮಜಗತ್ತನ್ನೇ ಹಾಳುಮಾಡುತ್ತಿರುವ ಟೈಮ್ಸ್ ಆಫ್ ಇಂಡಿಯಾದ ಬಗ್ಗೆ. ಸಾಯಿನಾಥರ ಅಭಿವೃದ್ಧಿ ಪತ್ರಿಕೋದ್ಯಮ ಲೇಖನಗಳ ಬಗ್ಗೆ. ಕಿರಣ್ ಬೇಡಿಯ ಬಗ್ಗೆ. ಸಮಾಜದ ಮತ್ತು ಮಾಧ್ಯಮದ ಭವಿಷ್ಯದ ಬಗ್ಗೆ. ದಲಿತ ಸಂಘರ್ಷದ ಬಗ್ಗೆ.

***********

ವಾರಾಂತ್ಯಕ್ಕೆ ರಜೆ ಸಿಕ್ಕಿದಾಗ ಮನೆಗೆ ಹೋಗುತ್ತಿದ್ದೆ. ಅಮ್ಮ ಕಟ್ಟಿಕೊಡುವ ಹಲಸಿನಕಾಯಿ ಚಿಪ್ಸ್, ತೆಂಗಿನಕಾಯಿ ಹೋಳಿಗೆ, ಉಪ್ಪಿನಕಾಯಿ ಚಟ್ನಿಪುಡಿ ಇತ್ಯಾದಿಗಳು ಹೊತ್ತುತರುತ್ತಿದ್ದೆ. ಸ್ವಾತಿ, ರೂಪಾಗೆ ಇವು ಹೊಸದಲ್ಲ, ಆದರೆ ಪ್ರಿಯಾ ಮಾತ್ರ ಇವನ್ನೆಲ್ಲ ತಿನ್ನುವುದು ಬಿಡು, ಕಂಡುಕೇಳರಿಯಳು. ಅದರ ರುಚಿಗೆ ಮಾರುಹೋಗಿದ್ದಳು. ಹೇಗೆ ಮಾಡುವುದೆಂದು ಕೇಳಿದಳು. ಗೊತ್ತಿದ್ದದ್ದು ಹೇಳಿದೆ. ಗೊತ್ತಿಲ್ಲದ್ದು ನಮ್ಮನೆಗೆ ಹೋದಾಗ ಅಮ್ಮನ ಕೈಯಲ್ಲಿ ಹೇಳಿಸಿಕೊಳ್ಳೋಣವೆಂದೆ.

ಹುಟ್ಟಿದ ಮೇಲೆ ಸಮುದ್ರ ಕಂಡಿಲ್ಲದ ಪ್ರಿಯಾಗೆ ಸುರತ್ಕಲ್-ನ ಇಡ್ಯದ ಬೀಚಿಗೆ ಕರೆದುಕೊಂಡುಹೋಗಿ ಸಮುದ್ರ, ಬೀಚ್ ತೋರಿಸಿದೆ. ಬೀಚ್-ನಲ್ಲಿ ಕೂತು ಶೆಟ್ಟಿ ಐಸ್ಕ್ರೀಂ ತಿಂದೆವು. ವಾಪಸ್ ಬರುವಾಗ ಬೈಕಂಪಾಡಿಯ ಸಂಕದ ಮೇಲಿಂದ ಕತ್ತಲಲ್ಲಿ ಹೊತ್ತಿ ಉರಿಯುತ್ತಿದ್ದ ಎಂ.ಆರ್.ಪಿ.ಎಲ್. ಬೆಂಕಿ ಮತ್ತು ಹೊಗೆ ತೋರಿಸಿದೆ.

ನನ್ನ – ಪ್ರಿಯಾಳ ಗೆಳೆತನ ಆರಂಭವಾಗಿ ಎರಡು ತಿಂಗಳು ಕಳೆದಿತ್ತು. ಒಂದು ದಿನ ಪ್ರಿಯಾಗೆ ನನ್ನ ಜತೆ ನನ್ನ ಮನೆಗೆ ಬರಬೇಕೆಂದು ತುಂಬಾ ಅನಿಸಿಬಿಟ್ಟಿತು. ನನ್ನ ಅನುಭವಗಳ ಭಾವಧಾಮಕ್ಕೆ ಪಯಣಿಸಿ ನಾನು ಬದುಕಿದ ಬದುಕನ್ನು ಸವಿಯಬೇಕೆಂಬ ಅವಳ ಹಂಬಲ ನನಗೂ ಇಷ್ಟವಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳಿದೆ, ನನ್ನ ಗೆಳತಿಯನ್ನು ಕರೆದುಕೊಂಡು ಬರುತ್ತಿದ್ದೇನೆಂದು. ಅಮ್ಮ ಎಂದಿನಂತೆ ಜಾತಿಯ ಬಗ್ಗೆ ಕಾಳಜಿಯಿಂದ ಕೇಳಿದರೆ ನಾನು ಹೇಳದೆಯೆ ಎಂದಿನಂತೆ ಉಡಾಫೆಯಿಂದ ಮಾತು ಹಾರಿಸಿದೆ. ನಾನು, ಪ್ರಿಯಾ ಒಂದು ಶುಕ್ರವಾರ ಸಂಜೆ ನಮ್ಮನೆಗೆ ಹೊರಟೆವು.

ದಾರಿಯುದ್ದಕ್ಕೂ ಪ್ರಿಯಾಗೆ ನನ್ನ ವಿವರಣೆಗಳು. ಬಸ್ಸು ರಾಷ್ಟ್ರೀಯ ಹೆದ್ದಾರಿ ಬಿಟ್ಟು ನಮ್ಮೂರಿಗೆ ಹೋಗುವ ಒಳದಾರಿ ಹಿಡಿಯುತ್ತಿದ್ದಂತೆಯೇ ಪುಟ್ಟ ಪುಟ್ಟ ಹಸಿರು ಗುಡ್ಡಗಳ ನಡುವೆ ಹಾವಿನಂತೆ ಹರಿದ ಕಪ್ಪು ಟಾರುರೋಡು, ಎತ್ತ ನೋಡಿದರೂ ಹಸಿರನ್ನೇ ಹೊದ್ದು ಮಲಗಿದ ಊರು, ಭಯ ಹುಟ್ಟಿಸುವಷ್ಟು ಕಡಿದಾದ ಒಂದೆರಡು ತಿರುವುಗಳು, ಸಣ್ಣಗೆ ಜಿನುಗುತ್ತಿದ್ದ ಮಳೆ, ಕೆಂಪು ಮಣ್ಣಿನೊಳಗಿಂದ ಅವಾಗಷ್ಟೆ ಎದ್ದು ತೆವಳುವ ಕೆಂಪು ದೇವರ ಹುಳ, ಒದ್ದೆ ಒದ್ದೆ ಗಾಳಿ - ಎಲ್ಲವೂ ಹಸಿರು ಕಾಣದ, ಕಡಲತೀರದ ಮಳೆಯ ಸವಿಯರಿಯದ ಪ್ರಿಯಾಗೆ ಹೊಸದು. ಅವಳು ಅನಿರ್ವಚನೀಯ ಭಾವದ ಭಾರದಿಂದ ಕಂಗೆಟ್ಟರೆ, ನಾನು ಧನ್ಯತಾಭಾವದಿಂದ ಬೀಗಿದೆ.

ನನ್ನೊಡನೆ ಮನೆಯೊಳಗೆ ಕಾಲಿಟ್ಟ ಪ್ರಿಯಾಳನ್ನು ಅಮ್ಮ – ಅಪ್ಪ ಸ್ವಾಗತಿಸಿದರು. ಅಪ್ಪ ಅಷ್ಟಾಗಿ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲವಾಗಿ ಆರಾಮಾಗಿ ಪ್ರಿಯಾ ಜತೆ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಾತಾಡಿದರು. (ಅಮ್ಮ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವಾಗಲೆಲ್ಲ ಅಪ್ಪ ತಾವು ಮಡಪ್ಪಾಡಿಯಲ್ಲಿದ್ದಾಗ ದಿನಾ ಮುಸಲ್ಮಾನ ಅಡಿಗೆ ಭಟ್ಟನ ಕೈರುಚಿ ತಿನ್ನುತ್ತಿದ್ದಿದ್ದು, ಆಮೂಲಕ ತನಗೂ ಜಾತಿಯಿಲ್ಲದಾಗಿರುವುದು ಹೇಳಿ ಅಮ್ಮನಿಗೆ ರೇಗಿಸುತ್ತಾರೆ)

ಅಮ್ಮ ಒಳಗೊಳಗೆಯೇ ಗೊಣಗಿಕೊಂಡಳು, 'ಯಾವ ಜಾತಿಯೋ ಏನೋ, ನಾಳೆ ಅಶುದ್ಧ-ಗಿಶುದ್ಧ ಆಗಿ ನಾಗ ಬಂದಮೇಲೆ ಗೊಂತಕ್ಕು... ಆರಿಂಗೆಂತ, ಅನುಭವಿಸೂದು ಇಲ್ಲಿಪ್ಪೋರಲ್ದಾ...' ಪ್ರಿಯಾ ಅವರೇನು ಹೇಳುತ್ತಿದ್ದಾರೆಂದು ಕೇಳಿದಳು, ನಾನು ಸಾಕು ಇನ್ನು ಸುತ್ತಾಡಬೇಡ, ಅವಳಿಗೆ ಸುಸ್ತಾಗಿರುತ್ತದೆ, ರೆಸ್ಟ್ ತೆಗೆದುಕೊಳ್ಳಲು ಬಿಡು ಅನ್ನುತ್ತಿದ್ದಾರೆ ಅಂದೆ. ಅವಳು ನನಗೇನು ಸುಸ್ತಾಗಿಲ್ಲ ಆಂಟೀ ಅಂತ ಅಮ್ಮನಿಗೆ ಇಂಗ್ಲಿಷಿನಲ್ಲಿ ಹೇಳಿ ನಕ್ಕಳು. ಇಂಗ್ಲಿಷ್ ಅರ್ಥವಾಗದಿದ್ದರೂ ಅಮ್ಮ ನಗಲೇ ಬೇಕಾಯಿತು.

ಪ್ರಿಯಾ ನನ್ನೊಡನೆ ಮನೆಯಿಡೀ ಸುತ್ತಾಡಿದಳು. ಅಟ್ಟದಲ್ಲಿ ಕಟ್ಟಿಟ್ಟಿದ್ದ ನನ್ನಜ್ಜ ಕಾಸರಗೋಡು ಹೋರಾಟಕಾಲದಲ್ಲಿ ಉಪಯೋಗಿಸುತ್ತಿದ್ದ ಮೈಕು, ಹಳೆಯ ಪುಸ್ತಕಗಳನ್ನಿಟ್ಟ ಮಸಿಹಿಡಿದ ಬೆತ್ತದ ಪೆಟ್ಟಿಗೆಯಿಂದ ಹಿಡಿದು ಅನೇಕಾನೇಕ ವಸ್ತುಗಳನ್ನು ತೋರಿಸಿದೆ. ಮಣ್ಣಿನಿಂದಲೇ ಕಟ್ಟಿದ ಮನೆಯ ಎರಡಂತಸ್ತುಗಳನ್ನು ಕಂಡು ಜಗತ್ತಿನ ಯಾವುದೋ ಅದ್ಭುತ ವಾಸ್ತುವನ್ನು ನೋಡಿದಂತೆ ರೋಮಾಂಚನಗೊಂಡಳು ಆಕೆ. (ಈಗ ಗೊತ್ತಾಗಿದೆ ನನಗೆ, ರಾಯಲಸೀಮೆಯಲ್ಲಿ ಆಕೆ ಹುಟ್ಟಿದ್ದು ಮಾತ್ರ, ಅಲ್ಲಿಯ ಬದುಕು ಆಕೆಗೆ ನಿಜವಾಗಿ ಗೊತ್ತಿರಲಿಲ್ಲ ಅಂತ. ಯಾಕೆಂದರೆ, ಆಂಧ್ರದಲ್ಲಿ ಮಣ್ಣಿನಲ್ಲಿಯೇ ಕಟ್ಟಿದ ಮನೆಗಳು ಅತಿಸಾಮಾನ್ಯ.)

ಅದೇನು ಇದೇನು ಅನ್ನುತ್ತ ಸಾವಿರ ಪ್ರಶ್ನೆಗಳೆಸೆಯವ ಪ್ರಿಯಾಳ ಕುತೂಹಲವನ್ನು ಸಮರ್ಪಕವಾದ ಉತ್ತರಗಳಿಂದ ತಣಿಸುತ್ತಿದ್ದೆ ನಾನು. ಎಲ್ಲ ಕಡೆ ಸುತ್ತಾಡಿ ಕೊನೆಗೆ ದೇವರಮನೆಗೆ ಬಂದೆವು. ದೇವರ ಮಂಟಪದೊಳಗೆ ಸಾಲಿಗ್ರಾಮ ಮತ್ತಿತರ ದೇವರುಗಳನ್ನು ಸಣ್ಣ ತಾಮ್ರದ ತೆರೆದ ಪೆಟ್ಟಿಗೆಯೊಳಗೆ ಹಾಕಿ ಇಟ್ಟಿರುತ್ತಾರೆ. ಕಟೀಲು ದುರ್ಗಾಪರಮೇಶ್ವರಿ, ಪಂಚಲಿಂಗೇಶ್ವರ, ಮಹಾಲಿಂಗೇಶ್ವರ ಇತ್ಯಾದಿ ದೇವರ ಫೋಟೋಗಳನ್ನೂ ಕಟ್ಟುಹಾಕಿ ಮಂಟಪದೊಳಗಿಟ್ಟಿದ್ದಾರೆ. ಇದರ ವೈಭವವನ್ನು ಪ್ರಿಯಾ ನೋಡುತ್ತಿದ್ದರೆ, ಅಮ್ಮ ಅಡಿಗೆಗೆ ಸಹಾಯಕ್ಕೆಂದು ಕರೆದಳು, ನಾನು ಈಗ ಬಂದೆ ಎಂದು ಪ್ರಿಯಾಗೆ ಹೇಳಿ ಅಡಿಗೆಮನೆಗೆ ಹೋದೆ.


ಅಮ್ಮನಿಗೆ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿ ಆರೇಳು ನಿಮಿಷಗಳಲ್ಲಿ ವಾಪಸ್ ಬಂದಾಗ ನಾನು ಕಂಡಿದ್ದೇನು... ಪೆಟ್ಟಿಗೆಯೊಳಗಿನ ದೇವರು ಪ್ರಿಯಾಳ ಕೈಯಲ್ಲಿತ್ತು. ದೇವರನ್ನಲಂಕರಿಸಿದ್ದ ರುದ್ರಾಕ್ಷಿ ಸರವನ್ನು ತನ್ನ ಕುತ್ತಿಗೆಗೆ ಧರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು ಪ್ರಿಯಾ.

ನನಗೆ ಮನಸಿನ ಅದ್ಯಾವುದೋ ಮೂಲೆಯಲ್ಲಿ ವಿಚಿತ್ರ ಸಂಕಟ ಹುಟ್ಟಿಕೊಂಡಂತೆ ಅನಿಸಿತು. ಯಾಕೆ, ಏನು - ಒಂದೂ ಗೊತ್ತಾಗಲಿಲ್ಲ. ನಾನು ಆ ಮನೆಯಲ್ಲಿ ಬದುಕಿದ 20 ವರ್ಷಗಳಲ್ಲಿ ಇಲ್ಲಿಯವರೆಗೆ ನಾನೇ ನಮ್ಮನೆ ದೇವರನ್ನು, ರುದ್ರಾಕ್ಷಿಯನ್ನು - ಯಾವುದನ್ನೂ ಮುಟ್ಟಿರಲಿಲ್ಲ. ನನಗೆ ಅವುಗಳನ್ನು ಮುಟ್ಟಲು ಅವಕಾಶಗಳಿತ್ತು, ಆದರೆ ಬುದ್ಧಿಪೂರ್ವಕವಾಗಿಯೇ ಮುಟ್ಟಿರಲಿಲ್ಲ. ಅದಕ್ಕಾಗಿ ಅವಳು ಅದನ್ನು ಮುಟ್ಟಿದ್ದು ಅಸಹನೀಯವಾಯಿತೆ...? ಇಂದಿಗೂ ಗೊತ್ತಿಲ್ಲ ನನಗೆ.

ಊಟಕ್ಕೆ ಕರೆದೆ ಅವಳಿಗೆ. ಎಲ್ಲ ದೇವರನ್ನೂ ಪೆಟ್ಟಿಗೆಯೊಳಗಿಡುವ ಬದಲು ಮಂಟಪದೊಳಗೆ ಅವಳು ಇಟ್ಟು ಬಂದದ್ದು ನನ್ನ ಅಸಹನೆಯ ಕಿಡಿಗೆ ಗಾಳಿಯೂದಿತು.

ಊಟ ಮಾಡುವಾಗ ನನ್ನ-ಅವಳ ನಡುವಿನ ಅಂತರ ನಿಚ್ಚಳವಾಗುತ್ತ ಹೋಯಿತು. ನೀಟಾಗಿ, ಕ್ರಮಪ್ರಕಾರವಾಗಿ ಬಡಿಸಿಕೊಂಡು ಊಟಮಾಡುವ ನಾನು. ಮೊದಲು ಕಂಡಿದ್ದನ್ನು, ಕುತೂಹಲ ಹುಟ್ಟಿಸಿದ್ದನ್ನು ಮೊದಲು ತಿನ್ನುವ ಅವಳು. ನಿಯಮಗಳು ಗೊತ್ತಿದ್ದೂ ಮುರಿಯುವ ನಾನು, ಗೊತ್ತಿಲ್ಲದೆ ಮುರಿಯುವ ಅವಳು. ನನಗೆ ಅವಳು-ನಾನು ಒಂದೇ ಎನ್ನುವ ಭ್ರಮೆಯಿರಲಿಲ್ಲವಾದರೂ, ನನಗೆ ಇಷ್ಟವಾಗದ ರೀತಿಯ ಭಿನ್ನತೆಗಳು ನನ್ನ-ಅವಳ ನಡುವೆ ಇರಬಹುದೆಂಬ, ಇದೆಯೆಂಬ ಸತ್ಯ ನನ್ನ ಅನುಭವದ ಕಡಲಿಗೆ ಅವಳು ಬಂದಾಗ ಹೊಸದಾಗಿ ಹುಟ್ಟಿಕೊಂಡಿತ್ತು.

ಹಾಸಿಗೆ ಹಾಕಿ ಮಲಗಿಕೊಂಡೆವು. ಅವಳು ಮಾತಿಗೆಳೆಯಲು ನೋಡಿದರೆ, ನನಗೆ ಮಾತು ಬೇಕಿರಲಿಲ್ಲ. 'ಸುಸ್ತು, ಮಲ್ಕೋ, ನಾಳೆ ಮಾತಾಡೋಣ' ಅಂದೆ. ಅವಳಿಗೆ ಸುಸ್ತಾಗಿತ್ತು. ಬೇಗನೆ ನಿದ್ದೆ ಹೋದಳು... ನಾನು ನನ್ನ ಅಂತಃಸತ್ವದ ಜತೆ ಮಾತಾಡತೊಡಗಿದೆ. ಅವಳಿಗೆ ನಾನು ನಂಬಿಕೆಗರ್ಹ ಗೆಳತಿಯೆಂದು ಅನಿಸುವ ಹಾಗೆ ನಾನು ನಡೆದುಕೊಂಡಿದ್ದು ನನಗೆ ನಾನು ಮಾಡಿಕೊಂಡ ಮೋಸವಾಗಿ ಮಾರ್ಪಟ್ಟಿತ್ತು. ಇಂದಿನವರೆಗೆ ಚೆನ್ನಾಗಿದ್ದ ಬಾಂಧವ್ಯಕ್ಕೆ ನನ್ನ ಮನೆಯ ಆವರಣದಲ್ಲಿ ಹುಳಿ ಬೆರೆತಿತ್ತು. ಹೇಗೆ... ಯಾಕೆ... ಇದು ನಾನು ಮಾಡುತ್ತಿರುವ ತಪ್ಪಲ್ಲವೆ... ಅಥವಾ ಇದು ಕ್ಷಣಿಕವಾಗಿ ನನ್ನ ಮನದಲ್ಲಿ ಹುಟ್ಟಿಕೊಂಡ ದೆವ್ವವಿರಬಹುದೆ...ನಾಳೆ ಎಲ್ಲ ಸರಿಯಾದೀತೆ... ಸರಿಯಾಗಬೇಕಲ್ವಾ... ಕೊರೆವ ಸಾವಿರ ಪ್ರಶ್ನೆಗಳ, ಹೊಳೆಯುವ ಸಾವಿರ ಉತ್ತರಗಳ ನಡುವೆ ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

***************

'ಉಠೋ ಯಾರ್, enough sleeping...' ಪ್ರಿಯಾ ಪ್ರೀತಿಯಲ್ಲಿಯೇ ಗದರುತ್ತ ಎಬ್ಬಿಸಿದಾಗ ನಿದ್ದೆಯಿನ್ನೂ ಸಿಹಿಸಿಹಿಯಾಗಿತ್ತು. ಸಮಯ ಇನ್ನೂ ಬೆಳಿಗ್ಗೆ 5.45 ಅಷ್ಟೇ. ಅಯ್ಯೋ ಇಷ್ಟು ಬೇಗ ಎದ್ದೇನು ಮಾಡೋಣ ಅಂತ ಮತ್ತೆ ಮಲಗಹೊರಟೆ. 'U had told me that we will go for a morning walk...' ನೆನಪಿಸಿದಳು. ಹೌದಲ್ಲಾ, ನಾನೇ ಹೇಳಿದ್ದೆ ಅವಳಿಗೆ. ಸೋಮಾರಿಯಂತೆ ಬಿದ್ದುಕೊಳ್ಳುವ ಅವಕಾಶಕ್ಕೆ ಕೈಯಾರ ಕಲ್ಲುಹಾಕಿಕೊಂಡಿದ್ದಕ್ಕೆ ನನಗೆ ನಾನೇ ಬೈದುಕೊಳ್ಳುತ್ತ ಎದ್ದೆ. ಮಳೆಯೂ ಕೈಕೊಟ್ಟಿದ್ದಳು, ಅವಳಾದರೂ ಬಂದಿದ್ದರೆ ಹೊರಗೆ ಹೋಗುವ ಮಾತೇ ಇರಲಿಲ್ಲ.

ಅಮ್ಮ ಕೊಟ್ಟ ಚಹಾ ಉರ್ಪಿ, ಪ್ರಿಯಾಳ ಕ್ಯಾಮರಾ ಜತೆಯಲ್ಲಿ ತೆಗೆದುಕೊಂಡು ನಮ್ಮನೆಯ ಹಿಂದಿನ ಉಕ್ಕುಡ ಗುಡ್ಡೆಗೆ ವಾಕಿಂಗ್ ಹೊರಟೆವು. ಮನೆಯಿಂದ ಮೇಲೆ ಸ್ವಲ್ಪ ಕಡಿದಾದ ದಾರಿಯಲ್ಲಿ ಮೇಲೆ ಹತ್ತುತ್ತಿದ್ದಂತೆಯೇ ಕೆಳಗಿದ್ದ ನಮ್ಮ ಪುಟ್ಟ ಊರು ಮಳೆಹೊಗೆಯಿಂದ ಆವೃತವಾಗಿತ್ತು. ಮನಮೋಹಕ ದೃಶ್ಯವಿಲಾಸ ನಮ್ಮಿಬ್ಬರನ್ನೂ ಮುದಗೊಳಿಸಿತು.

ಅರ್ಧದಾರಿ ಕ್ರಮಿಸಿದಾಗ ಪಂಜಿಕಲ್ಲು ಸಿಗುತ್ತದೆ. ಆಮೇಲೆ ಉಕ್ಕುಡ ಗುಡ್ಡೆಗೆ ಕ್ರಮಿಸುವ ದಾರಿ ಇನ್ನಷ್ಟು ಕಡಿದಾಗಿದೆ. ನಾವು ಪಂಜಿಕಲ್ಲಿನಲ್ಲಿರುವಾಗ ಸೂರ್ಯ ಅವಾಗಷ್ಟೇ ಮೇಲೆಬರುತ್ತಿದ್ದ. ಹಂಗೇ ಒಂದಷ್ಟು ಫೋಟೋಗಳು ಕ್ಲಿಕ್ಕಿಸಿದ್ದಾಯಿತು. ನಮ್ಮ ಗುರಿ ಉಕ್ಕುಡಗುಡ್ಡೆಯ ತುದಿಯಾಗಿದ್ದು, ಅದೂ ಇದೂ ಮಾತಾಡುತ್ತ ಮುಂದೆ ಸಾಗಿದೆವು.

ಹೀಗೆ ಐದು ನಿಮಿಷಗಳು ಕಳೆದಿರಬಹುದು. ಪುಟ್ಟ ಕಣಿವೆಯೊಂದು ಎದುರಾಯಿತು. ಚಿಕ್ಕಂದಿನಿಂದಲೂ ಸಾವಿರ ಸಲ ಈ ಗುಡ್ಡ ಹತ್ತಿದ್ದೆ ನಾನು. ಸಲೀಸಾಗಿ ಹಾರಿ ದಾಟಿಹೋದೆ. ಪ್ರಿಯಾಗೆ ದಾಟಲಾಗಲಿಲ್ಲ. ಹಾರುವಾಗ ಬಿದ್ದರೆ ಎಂದು ಹೆದರಿದಳು.

ಅಷ್ಟೆ. ಮತ್ತೆ ಹೆಡೆಯೆತ್ತಿತ್ತು ಮನದೊಳಡಗಿದ್ದ ಮರೆತ ಹಾವು... ಕಾಲೇಜಿನಲ್ಲಿ ಓದುತ್ತಿದ್ದಾಗ ತಾನು ಯೂನಿವರ್ಸಿಟಿ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದೆ ಅನ್ನುತ್ತಿದ್ದಳು. ನಿಜಜೀವನದಲ್ಲಿ ಅದು ಉಪಯೋಗಕ್ಕೆ ಬರಲಿಲ್ಲವೆ...? ತನ್ನ ಬಗ್ಗೆ ತಾನು ಹೇಳಿಕೊಳ್ಳುವಾಗ ಅತಿಶಯೋಕ್ತಿ ನುಸುಳಿತ್ತೆ... ಅಥವಾ ಅದು ನನ್ನನ್ನು ಇಂಪ್ರೆಸ್ ಮಾಡುತ್ತದೆಂದುಕೊಂಡು ಸುಳ್ಳು ಹೇಳಿದಳೆ... ಅಥವಾ ಈ ಕ್ಷಣದ ಭಯವೆ... ಇವೆಲ್ಲದರಲ್ಲಿ ಯಾವುದೇ ಆದರೂ ಅವು ನನಗಿಷ್ಟವಾದವುಗಳಲ್ಲ... ನನ್ನ ಒಡನಾಡಿಗಳಲ್ಲಿ ನಾನು ಬಯಸುವ ಗುಣಗಳಲ್ಲ.

*******************

ಆಮೇಲೆ ಆದಿನ, ಮರುದಿನ ಇಡೀ ಜತೆಗಿದ್ದೆವು. ನನ್ನೊಳಗಿನ ಬದಲಾವಣೆ ಅವಳಿಗೆ ಗೊತ್ತಾಗಲಿಲ್ಲ. ಬೇರೇನೋ ಬೇಸರದಲ್ಲಿರಬೇಕು ನಾನು ಎಂದುಕೊಂಡಳು, ನನ್ನನ್ನು ತಪ್ಪುತಿಳಿದುಕೊಳ್ಳುವಂಥವಳಲ್ಲ ಪಾಪದ ಹುಡುಗಿ, ಸರಿಯಾಗಿ ತಿಳಿದುಕೊಳ್ಳುವಲ್ಲಿ ವಿಫಲಳಾಗಿದ್ದಳು. ನಾನು ನನ್ನೊಳಗೆ ಹೆಡೆಯೆತ್ತಿದ ಅಸಮಾಧಾನವನ್ನು, ನಿರಾಸೆಯನ್ನು ಕೊಲ್ಲಲು ಹೆಣಗುತ್ತಿದ್ದೆ.

ಕೇನೆಹೂವು ಹುಡುಕಿ ತೋರಿಸಿದರೆ ಮುಖ ಸಿಂಡರಿಸಿಕೊಂಡಳು. ಇಷ್ಟು ಚಂದದ ಹೂವಿಗೆ ಇಷ್ಟು ಕೊಳಕು ವಾಸನೆ ಯಾಕಿರಬಹುದು ಅಂತ ಪ್ರಶ್ನಿಸಿದಳು. ಬಹುಶಃ ಪ್ರಕೃತಿ ಒದಗಿಸಿದ ಪ್ರೊಟೆಕ್ಷನ್ ಮೆಕ್ಯಾನಿಸಂ ಇರಬಹುದೆಂದು ನಾನಂದರೆ, ಇರಬಹುದು ಎಂದು ಒಪ್ಪಿಕೊಂಡಳು. ನನಗೆ ಇರಲಿಕ್ಕಿಲ್ಲ ಎಂದು ವಾದಿಸುವವರು ಬೇಕಿತ್ತು. ಹೀಗೂ ಇರಬಹುದು ಅಂತ ಇನ್ನೊಂದು ದೃಷ್ಟಿಕೋನದತ್ತ ನನ್ನ ಗಮನಸೆಳೆಯುವವರು ಬೇಕಿತ್ತು. ಇವೆಲ್ಲ ಈ ಹಿಂದೆ ಯಾಕೆ ನನಗೆ ಕಾಣಲಿಲ್ಲ...

ಗುಡ್ಡೆ ಗುಡ್ಡೆ ಅಲೆದಾಡುತ್ತಿದ್ದಾಗ ನಾಟಿ ಸಾರಾಯಿ ತಯಾರು ಮಾಡಲಿಕ್ಕೆಂದು ಮಣ್ಣಿನ ಮಡಕೆಯಲ್ಲಿಟ್ಟು ಯಾವುದೋ ಕಣಿಯಲ್ಲಿ ಅಡಗಿಸಿಟ್ಟಿದ್ದ ಗೋಂಕು (ಗೇರುಹಣ್ಣಿನ ರಸ) ನನ್ನ ಕಣ್ಣಿಗೆ ಬಿತ್ತು. ಅದೇನೆಂದು ಅವಳಿಗೆ ವಿವರಿಸಿದೆ. ಅದೇನೋ ಉದ್ವೇಗ ಅವಳಲ್ಲಿ ಕಂಡಿತು. ಅವಳ ಹಿರಿಯರೂ ಇದನ್ನೇ ಮಾಡುತ್ತಿದ್ದರಂತೆ, ಅದರ ವೀರಕಥೆ ನನಗೆ ಹೇಳಿದಳು.

ಅವಳು ಹೇಳಿ ಮುಗಿಸುವುದನ್ನೇ ಕಾದಿದ್ದೆ. ದಲಿತರು ಬೇರೆಯವರಿಂದ ಸಮಾಜದಲ್ಲಿ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಕುಡಿತ ಎನ್ನುವುದು ನನ್ನ ಬಲವಾದ ಅಭಿಪ್ರಾಯವಾಗಿದ್ದು, ಅದನ್ನು ಅವಳಿಗೆ ಹೇಳಿದೆ. ನಾಟಿ ಸಾರಾಯಿ ಮಾಡುವುದು ಅತಿದೊಡ್ಡ ಕಲೆಯೇ ಇರಬಹುದು, ನಿನ್ನ ಅಪ್ಪನಿಗೆ ಅದರಿಂದ ದುಡ್ಡು ಬಿಟ್ಟು ಬೇರೇನಾದರೂ ಉಪಯೋಗ ಆಯ್ತಾ ಅಂತ ಕೇಳಿದೆ. ಉತ್ತರವಿರಲಿಲ್ಲ ಆಕೆಯಲ್ಲಿ. ನನ್ನ ಪ್ರಶ್ನೆ ಅವಳಿಗೆ ಯೋಚನೆಗೆ ಹಚ್ಚಿತ್ತು.

ಅವಳಾಸೆಯಂತೆ ದಲಿತರು ವಾಸವಾಗಿದ್ದ ನಮ್ಮ ಮನೆಯೆದುರಿನ ಗುಡ್ಡದ ಕಡೆಗೆ ಹೋದೆವು. ಗುಡ್ಡದ ನಡುವೆ ನಾಕೈದು ದಲಿತರ ಮನೆಗಳಿದ್ದವು ಅಲ್ಲಿ. ಕೇರಳ ಸರಕಾರ ಕಟ್ಟಿಸಿಕೊಟ್ಟ ಮನೆಗಳು. ಅವುಗಳಲ್ಲಿ ಎರಡು ಮನೆಗಳು ಯಾವ ನರಪ್ರಾಣಿಯೂ ಇಲ್ಲದೆ, ಹಂಚುಗಳು ಕಿತ್ತುಹೋಗಿ ಕಾಲದ ಜತೆ ಇವತ್ತೋ ನಾಳೆಯೋ ಅಂತ ಸೆಣಸುತ್ತಿದ್ದವು. ಐತ ವಿನಯವೇ ಜೀವವಾಗಿ 'ದಾನೆ ದೆತ್ತೀ' ಅನ್ನುತ್ತ ನಮಗೆ ಸ್ವಾಗತಿಸಿ ಮಾತಾಡಿಸಿದ. ಅವನಿಗೆ ಆ ಮನೆಗಳಲ್ಲಿ ಯಾರೂ ಇಲ್ಲವಾ, ಯಾಕೆ ಹಾಗಿವೆ ಅಂತ ಕೇಳಿದೆ.

ಅವನು ಹೇಳಿದ, ಮನೆಯಲ್ಲಿ ಯಾರಾದರೂ ಸತ್ತರೆ ಆ ಮನೆಯನ್ನು ಬಿಟ್ಟುಹೋಗುವುದು ಅವರ ಸಂಪ್ರದಾಯವಂತೆ. ಹಾಗೇ ಯಾರೋ ಸತ್ತಾಗ ಈ ಎರಡು ಮನೆಗಳು ಖಾಲಿಯಾಗಿವೆ. ನಾಳೆ ಐತ ಸತ್ತರೆ ತುಕ್ರು ಕೂಡ ತನ್ನ ಮನೆ ಖಾಲಿ ಮಾಡುತ್ತಾಳೆ. ನಾನು ಕೇಳಿದೆ, ಸರಕಾರ ನಿಮಗೆ ಮನೆ ಮಾಡಿಕೊಟ್ಟಿದ್ದೇ ದೊಡ್ಡದು, ಅಂಥದರಲ್ಲಿ ನೀವು ಹೀಗೆ ಮಾಡಿದರೆ ಹೇಗೆ ಅಂತ. ನಾವೇನು ಸರಕಾರಕ್ಕೆ ಹೇಳಿದ್ದೇವಾ ದೆತ್ತೀ ಮನೆ ಕಟ್ಟಿಕೊಡಿ ಅಂತ.. ಅವರಾಗವರೇ ಮಾಡಿಕೊಟ್ಟರು, ನಾವೇನು ಮಾಡೋಣ ಅಂತ ಬೊಚ್ಚುಬಾಯಿ ಬಿಟ್ಟು ನಕ್ಕ ಐತ. ಅವನ ಮುಗ್ಧತನಕ್ಕೆ, ನೇರಮಾತುಗಳಿಗೆ ಯಾವಾಗಲೂ ಸೋಲುತ್ತೇನೆ ನಾನು, ಮಾತುಮರೆಯುತ್ತೇನೆ. ನಾನು ಗೌರವಿಸುವ ಪ್ರೀತಿಯ ಹಿರಿಯ ಜೀವ ಆತ. ನಮ್ಮಜ್ಜನ ಹಾಗೆ.

ಪ್ರಿಯಾಗೆ ದಲಿತರು ಮನೆಖಾಲಿಮಾಡುವ ವಿಷಯ ವಿವರಿಸಿದರೆ, ಮಂಕಾದಳು. ಒಬ್ಬ ವ್ಯಕ್ತಿ ಶೋಷಣೆಗೊಳಗಾದರೆ, ಅದರ ಕಾರಣ ಎಲ್ಲೋ ಇರುವುದಿಲ್ಲ, ಅವನಲ್ಲೇ ಇರುತ್ತದೆ, ಅದನ್ನು ಸರಿಪಡಿಸಿಕೊಳ್ಳುವವರೆಗೆ ಶೋಷಣೆ ಮುಂದುವರಿಯುತ್ತದೆ ಅನ್ನುವುದು ನನ್ನ ವಾದ. ಅವಳು ಇದನ್ನೊಪ್ಪಲಿಲ್ಲ. ಕೆಲವರಿಗೆ ಶೋಷಣೆಗೊಳಗಾಗಿದ್ದೇವೆಂದು ಗೊತ್ತೇ ಇರದಷ್ಟು, ಕಾರಣಗಳು ಗೊತ್ತಿರದಷ್ಟು ಮುಗ್ಧರಿರುತ್ತಾರೆ ಅಂದಳು. ಹಾಗಿದ್ದಾಗ ಅವರ ಜಗತ್ತಿನಲ್ಲಿ ಅವರು ಚೆನ್ನಾಗಿರುತ್ತಾರೆ, ಸಂತೋಷವಾಗಿರುತ್ತಾರೆ, ಐತನ ಹಾಗೆ. ಅವರ ಮನಸ್ಸಲ್ಲಿ ದೊಡ್ಡ ದೊಡ್ಡ ಮಾತಾಡಿ ವೈರಸ್ ಯಾಕೆ ಬಿಡಬೇಕು ನಾವು, ನಮ್ಮ ಕೈಲಾದ ಸಹಾಯ ಮಾಡೋಣ, ಅವರಿಗೆ ಬೇಕಾದ್ದನ್ನು ಕೊಡದೇ, ಬೇಡದ್ದನ್ನು ಕೊಟ್ಟು, ದೊಡ್ಡ ದಾನಿಗಳಂತೆ ಪೋಸ್ ಯಾರಾದರೂ ಯಾಕೆ ಕೊಡಬೇಕು ಅಂತ ನಾನು. ಅವರಿಗೇನು ಬೇಕು ಏನು ಬೇಡ ಎಂಬುದು ಅವರಿಗೇ ಗೊತ್ತಿಲ್ಲವಲ್ಲ ಅಂತ ಅವಳು. ಹಾಗಂತ ನೀನಂದುಕೊಂಡಿರ್ತೀಯ, ಅವರು ಅಂದುಕೊಂಡಿರಬೇಕಿಲ್ಲ ಅಂತ ನಾನು.

ದಲಿತ ಚಳವಳಿಯ ಹೆಸರಲ್ಲಿ ರಾಜಕೀಯ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿವೆ ಅಂತ ನಾನು. ಆರ್ಥಿಕವಾಗಿ ದಲಿತರೇ ಅತ್ಯಂತ ಹಿಂದುಳಿದವರು, ಅದಕ್ಕೆ ಚಳವಳಿ ಅಗತ್ಯ ಅಂತ ಅವಳು. ಬೇರೆಯವರ ದುಡ್ಡು ನುಂಗಿ ಸೊಕ್ಕುತ್ತಿರುವ ಶ್ರೀಮಂತ ಲಂಚಕೋರ 'ದಲಿತ'ರನ್ನೂ, ಅರೆಹೊಟ್ಟೆ ಊಟಕ್ಕೆ ಗತಿಯಿಲ್ಲದೆ ವೈದೀಕಗಳು ಮಾಡಿ, ಬೇರೆಯವರ ಮನೆಯಲ್ಲಿ ಕೆಲಸಮಾಡಿ ಬದುಕುವ ಬ್ರಾಹ್ಮಣರನ್ನೂ ತೋರಿಸಲೆ ನಿನಗೆ, ಅವರೂ ಚಳುವಳಿ ಅಂತ ಹೊರಟರೆ ಚೆನ್ನಾಗಿರುತ್ತದಲ್ಲವೆ ಅಂತ ನಾನು.

ವಾದದಲ್ಲಿ ವಿಜೃಂಭಿಸಿದ್ದು ನಮ್ಮ ನಡುವಿನ ವ್ಯತ್ಯಾಸಗಳು. ನಂಬಿಕೆಯ ಆಧಾರ ಬೇಕಿಲ್ಲದ / ಬಯಸದ ಬಾಂಧವ್ಯಗಳಲ್ಲಿ ನಂಬಿಕೆಯಿಟ್ಟ ನಾನು. ತಾನು ಕಾಣುತ್ತಿರುವ ವ್ಯಕ್ತಿಯೇ ಸರ್ವಸ್ವವೆಂದು ತನ್ನನ್ನು ಪೂರ್ತಿಯಾಗಿ ಸಂಬಂಧಕ್ಕೆ ಒಪ್ಪಿಸಿಕೊಳ್ಳುವ ಅವಳು. ಸಂಬಂಧಕ್ಕೂ ಬಾಂಧವ್ಯಕ್ಕೂ ಸ್ಪಷ್ಟ ಗಡಿಗಳನ್ನಿಟ್ಟು ಉತ್ತಮ ಬಾಂಧವ್ಯಗಳಿಗಾಗಿ ಆಶಿಸುವ ನಾನು, ಅವೆರಡರ ನಡುವೆ ವ್ಯತ್ಯಾಸವೇ ಅರಿಯದ ಅವಳು. ಮುಗ್ಧೆಯಂತೆ ಕಂಡೂ ಮುಗ್ಧೆಯಲ್ಲದ ನಾನು. ಮುಗ್ಧೆಯಂತೆ ಕಾಣದೆಯೂ ಮುಗ್ಧೆಯಾದ ಅವಳು. ಮನಸಿಗನಿಸಿದ್ದು ತಕ್ಷಣ ಹೇಳುವ ನಾನು. ಏನೇನೋ ಅನಿಸಿಯೂ ಏನೂ ಹೇಳದೆ ಕೊರಗುವ ಅವಳು. ಮಾತಾಡುವ ಮೊದಲೇ ಯೋಚಿಸಿ ಮಾತಾಡುವ ನಾನು. ಏನೋ ಮಾತಾಡಿ ಅದು ತಪ್ಪೆಂದು ಮನವರಿಕೆಯಾದಾಗ ಕೊರಗುವ ಅವಳು.

ಹೀಗೇ ಕೊನೆಯಿಲ್ಲದೆ ಮುಂದುವರಿದ ವಾದಧಾರೆಯಲ್ಲಿ ನನಗಂತೂ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು. ಈ ಒಂದು ಸಂಬಂಧ ಶುರುವಾದಾಗ ಇದ್ದಂತಹ ನನ್ನನ್ನು ನಾನು ಕಳೆದುಕೊಂಡಿದ್ದೆ. ಅವಳಿಲ್ಲದ ರೀತಿಯಲ್ಲಿ ಅವಳನ್ನು ಅರ್ಥೈಸಿಕೊಂಡಿದ್ದೆ. ನಾನಿಲ್ಲದ ರೀತಿಯಲ್ಲಿ ಅವಳು ನನ್ನನ್ನು ಅರ್ಥೈಸಿಕೊಂಡಿದ್ದಳು. ಅಥವಾ ನಾವಿಬ್ಬರೂ ಪರಸ್ಪರರ ಬಗ್ಗೆ ಭ್ರಮೆಗಳಲ್ಲೇ ಬದುಕಿದ್ದೆವು. ವಿಚಾರಸಾಮ್ಯವಿಲ್ಲದ ಈ ಇಂಟೆಲೆಕ್ಚುವಲ್ ಸಂಬಂಧ ಈಗ ಬಾಂಧವ್ಯದ ವ್ಯಾಪ್ತಿಯಿಂದ ಕುಸಿದಿತ್ತು. ಮತ್ತೆ ಅದನ್ನು ಬೆಳೆಸಲು ಶಕ್ತವಾದ ಭಾವಸಾಮ್ಯ ಇನ್ನೂ ಹುಟ್ಟಿಯೇ ಇರಲಿಲ್ಲ.


ಆದಿತ್ಯವಾರ ಸಂಜೆ ಗಂಗೋತ್ರಿಗೆ ವಾಪಸ್ ಹೊರಟಾಗ ಪ್ರಿಯಾ ಕಣ್ಣುಗಳು ಹನಿಗೂಡಿದರೆ, ನನ್ನ ಮನಸು ವಿಚಿತ್ರ ಸಂಕಟದಿಂದ ತುಂಬಿತ್ತು. ಒಂದು ಕಡೆ ಅವಳ ಮುಗ್ಧತನಕ್ಕೆ ನಾನು ಸರಿಯಾದ ಗೆಳತಿಯಲ್ಲವೆನಿಸಿದರೆ, ಇನ್ನೊಂದು ಕಡೆ ನನ್ನ ಸಂಕೀರ್ಣ ಸಂವೇದನೆಗಳಿಗೆ ತಕ್ಕ ಗೆಳತಿ ಅವಳಲ್ಲವೆನಿಸುತ್ತಿತ್ತು. ಇಂಟಲೆಕ್ಚುವಲ್ ಅಲ್ಲದೇ ಇರುವ ಬೇರೆ ಯಾವುದೇ ರೀತಿಯ ಗೆಳೆತನ ನನಗೆ ಪ್ರಿಯಾಳಿಂದ ಬೇಕಿರಲಿಲ್ಲ. ಇಲ್ಲಿಯವರೆಗೆ ಅದು ಬೆಳೆದೂ ಇರಲಿಲ್ಲ. ಆಗಸ್ಟ್ ಕಾಂಪ್ಟೆಯ ಬಗ್ಗಾಗಲಿ, ಸಮಾಜಶಾಸ್ತ್ರ ಕಲಿಸುವ ಇತರ ವಿಚಾರಗಳ ಬಗ್ಗಾಗಲಿ ಪ್ರಿಯಾ ನನ್ನ ಜತೆಗೆ ಎಂದೂ ಹಂಚಿಕೊಂಡಿರಲಿಲ್ಲ. ನಾನು ನಾ ಕಲಿಯುತ್ತಿದ್ದ ಪತ್ರಿಕೋದ್ಯಮದ ಬಗ್ಗೆ ಅವಳಲ್ಲಿ ಹಂಚಿಕೊಂಡಷ್ಟು, ಅವಳು ಕಲಿಯುತ್ತಿದ್ದ ಸಮಾಜಶಾಸ್ತ್ರದ ಬಗ್ಗೆ ಅವಳಿಂದ ತಿಳಿದುಕೊಳ್ಳುವ ಅವಕಾಶ ಬಂದಿರಲಿಲ್ಲ. ಇದನ್ನೆಲ್ಲ ಅವಳ ಹತ್ತಿರ ಹೇಳಿದರೆ ಅವಳಿಗೆಷ್ಟು ನೋವಾಗುವುದು ಎಂಬುದೂ ನನಗೆ ಗೊತ್ತಿತ್ತು. ಏನೂ ಹೇಳದಿರುವುದು ಉತ್ತಮ ಅಂತಲೂ ಅನಿಸಿತು.

ನಾನು ಪ್ರಿಯಾ ಜತೆ ಮಾತಾಡುವುದು ಅಪರೂಪವಾಯಿತು. ಅವಳು ಪಾಪ, ಹುಡುಕಿಕೊಂಡು ಬಂದು ಹತ್ತಿರ ಕೂರುತ್ತಿದ್ದಳು. ಆದರೆ, ನಾನು ಕೆಲ ವಿಷಯಗಳನ್ನು ಎಂದಿಗೂ ಆಕೆಯೊಡನೆ ಮಾತಾಡಲಾರೆ ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ನಮ್ಮ ನಡುವೆ ವಿಷಯಗಳ ಕೊರತೆ ಕಾಡುತ್ತಿತ್ತು.

*****************

ಈಗ ಪ್ರಿಯಾ ಎಲ್ಲಿದ್ದಾಳೆ, ಏನು ಮಾಡುತ್ತಾಳೆ - ಒಂದೂ ಗೊತ್ತಿಲ್ಲ. ಈ ಕಥೆ ಕೇಳಿದರೆ ನೀನು ಖಂಡಿತಾ ನಗುವುದಿಲ್ಲವೆಂದು ಗೊತ್ತು ನನಗೆ. ಹಾಗಂತ, ಒಂದು SORRYಯಲ್ಲಿ ಎಲ್ಲ ಸರಿಹೋಗುತ್ತಿತ್ತಲ್ಲಾ, ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಂಡೆ ನಾನು ಅಂತ ನಿನಗೆ ಅನಿಸಿದರೆ, ಮತ್ತೆ SORRY, ನಿನಗರ್ಥವಾಗುವುದಿಲ್ಲ ಅದು ಅನ್ನಬೇಕಾಗುತ್ತದೆ ನಾನು.

ನನ್ನ 'ಇಂಟಲೆಕ್ಚುವಲ್' ಮಾತುಗಳು ಪ್ರಿಯಾಗೆ ನೋವುಕೊಟ್ಟಿದ್ದು ನಾನೆಂದೂ ಮರೆತಿಲ್ಲ. ಹಾಗೆಯೇ ಅವಳ ಮನಸಿಗನಿಸಿದ್ದು ಅವಳು ಮಾಡಿದಾಗ ನನಗೆ ಇಷ್ಟವಾಗದಿದ್ದದ್ದು ಕೂಡಾ ಮರೆತಿಲ್ಲ. ಜಾತಿ-ಭಾಷೆ-ದೇಶಗಳ ಎಲ್ಲೆ ಮೀರಿ ಬೆಳೆಯಲಿದ್ದ ಬಾಂಧವ್ಯ ಕಾರಣವೇ ಇಲ್ಲದೆ ಕುಲಗೆಟ್ಟಂತಿತ್ತು. ಆದರೆ ಬಲವಾದ ಕಾರಣವಿತ್ತು ಅಲ್ಲಿ.

ಈಗ ಈ ನೋವಿನ ಬಿಂದು ದಾಟಿ ಬಲುದೂರ ಬಂದಿದ್ದೇನೆ. ಜಗತ್ತು ತುಂಬ ವಿಶಾಲ ಮತ್ತು ಉದಾರ, ಹಾಗಾಗಿ ಎಲ್ಲಾ ರೀತಿಯ ಗೆಳೆಯ ಗೆಳತಿಯರ ದೊಡ್ಡ ನಿಧಿಯೇ ಇದೆ ನನ್ನ ಜತೆ. ಅವರ್ಯಾವ ಜಾತಿಯೋ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ಜಾತಿಯ ಬಗ್ಗೆ ಚರ್ಚೆಗಳು ಅಲ್ಲಿ ಬರುವುದೇ ಇಲ್ಲ. ಬಂದರೂ ನಾನದನ್ನು ಮುಂದುವರಿಸುವುದಿಲ್ಲ. ಮೊನ್ನೆ ಮೊನ್ನೆಯಷ್ಟೇ ಎಲ್ಲೋ ಓದಿದ ಮಾತು, 'There are good people doing good things and evil people doing bad things, but, for good people to do bad things, it takes Religion...' ನೂರಕ್ಕೆ ನೂರು ಸತ್ಯವೆಂದು ನನಗೆಂದೋ ಅರಿವಾಗಿದೆ.

ಬದುಕೇ ಹೀಗೆ ಗೆಳತಿ, ಯಾವುದೋ ಇನ್ಯಾವುದನ್ನೋ ನೆನಪಿಸುತ್ತದೆ. ನೀನು ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದು ಹೇಗೆ ಹಳೆಯ ಗಾಯವೊಂದನ್ನು ನೆನಪಿಸಿತು ನೋಡು. ಗಾಯ ನಿಜಕ್ಕೂ ಬಹಳ ಹಳೆಯದೇ, ಮಾಗಿದೆ, ಕಲೆ ಮಾತ್ರ ಸ್ವಲ್ಪ ಉಳಿದಿದೆ. ನಾನೂ ಆಗಿದ್ದ ಹಾಗೆ ಈಗಿಲ್ಲ. ಸಂಬಂಧವೆಂದರೆ ಬರಿಯ ಮಿದುಳಿಂದಲ್ಲ, ಹೃದಯವೂ ಇರುತ್ತದೆ, ಹಾಗೆಯೇ ಬರಿಯ ಹೃದಯದಿಂದಲ್ಲ, ಮಿದುಳೂ ಇರುತ್ತದೆ ಎನ್ನುವುದು ಸದಾ ನೆನಪಲ್ಲಿಟ್ಟಿದ್ದೇನೆ. ಆಡುವ ಮಾತಿಗಿಂತ ಬದುಕುವ ರೀತಿ ಹೆಚ್ಚು ಅರ್ಥಪೂರ್ಣವಾಗಿರಬೇಕೆಂದು ನನಗೆ ಪ್ರಿಯಾಳ ಜತೆಯ ಗೆಳೆತನ ಕಲಿಸಿಕೊಟ್ಟಿತು. ಅವಳು ಯಾವತ್ತೂ ನನ್ನ ಮನಸಲ್ಲಿ ಎಚ್ಚರಿಕೆಯ ಗಂಟೆಯಂತೆ, ನಾ ಕೊಂದ ಒಂದು ಹೂವಿನ ಹಾಗೆ ಬದುಕಿರುತ್ತಾಳೆ.

16 comments:

  1. ದಿನಾ ಬೆಳಿಗ್ಗೆ ಆಫೀಸಿಗೆ ಬಂದು 11 ಘಂಟೆ ತನಕ thatskannada ಓದುವ ನಾನು ಇವತ್ತು ಯಾಕೋ ನಿಮ್ಮ ಬ್ಲಾಗ್ ಓದ್ಲಿಕ್ಕೆ ಶುರು ಮಾಡಿದೆ. ಪ್ರಿಯ ನಿಮ್ಮ ಮನೆಗೆ ಬರೋವರೆಗಿನ ಕಥೆ ಓದಿಸ್‌ಕೊಂಡು ಹೋಯ್ತು....ನಿಮ್ಮ ಅಮ್ಮನ ಜಾತಿ ಕೇಳುವ ಅಭ್ಯಾಸ ನನ್ನ ಅಜ್ಜಿಯನ್ನು ನೆನಪಿಸಿತು..ಆದ್ರೆ ನಿಮ್ಮ ಸಾಲಿಗ್ರಾಮದ ಕಥೆ ನಂತ್ರ ಯಾಕೋ ಒಂತರಾ ಅವ್ಯಕ್ತ ಬೇಸರ ಕಾಡಿತು.. ಯಾಕೋ ಗೊತ್ತಿಲ್ಲ... ಯಾವಾಗಿನ ಹಾಗೆ ಮನಸ್ಸಿಗೆ ತಟ್ಟಿತು..ಇನ್ನೂ ಅದ್ರ hangover ನಿಂದ ಹೊರಗೆ ಬರ್ಲಿಕ್ಕೆ ಆಗ್ತಾ ಇಲ್ಲ..

    ReplyDelete
  2. ಶ್ರೀ,

    ನಿಮ್ಮ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ನಿಮ್ಮ ಕೆಲವು 'ಇಂಟಲೆಕ್ಚುವಲ್' ಮಾತುಗಳಿಗೆ ನಾನು ಒಪ್ಪದಿದ್ದರೂ ನಿಮ್ಮ ದೃಷ್ಟಿಕೋನದಿಂದ ನೋಡಿದಾಗ ಅವು ಸರಿಯೆನಿಸಬಹುದು. ರುದ್ರಾಕ್ಷಿ ಹಾರ ಮತ್ತು ಸಾಲಿಗ್ರಾಮ ಇವೆರಡೂ ಮನೆಯಲ್ಲಿ ದೇವರು ಇರುವ ಸ್ಥಳದಲ್ಲಿವೆ ಎಂದು ನೋಡಿದ್ದೂ ಆ ಹುಡುಗಿ, ಹಾಗ್ಯಾಕೆ ಮಾಡಿದಳು ಎಂಬುದು ತಿಳಿಯಲಿಲ್ಲ. ದೇವರ ಮಹತ್ವವೇ ಆಕೆಗೆ ಗೊತ್ತಿಲ್ವೆ ಅಥವಾ ಆಕ್ಕೆ ನಾಸ್ತಿಕಳೆ. ಆ ಘಟನೆಯ ನಂತರ ಆಕೆಯನ್ನು ದೂರವಿಡುವ 'ಪ್ರೊಸೆಸ್' ನಿಮ್ಮ ಮನದಲ್ಲಿ ಆರಂಭವಾಯಿತು ಎಂಬುದು ಗಮನಾರ್ಹ. ನಿಜವಾಗಿಯೂ 'ಮನಸ್ಸು ಮಾತನಾಡಿತು'

    ReplyDelete
  3. ಶ್ರೀ,

    ಏನ ಹೇಳಲಿ.?! "ಅವಳು ಯಾವತ್ತೂ ನನ್ನ ಮನಸಲ್ಲಿ ಎಚ್ಚರಿಕೆಯ ಗಂಟೆಯಂತೆ,ನಾ ಕೊಂದ ಒಂದು ಹೂವಿನ ಹಾಗೆ ಬದುಕಿರುತ್ತಾಳೆ."
    ಕಷ್ಟಕರ ಅನುಭವ ಮತ್ತು ಸತ್ಯ.

    ಇದನ್ನ ಕಾಂಪ್ಲಿಕೇಶನ್ ಅಂತ ಕರೆಯಲಾಗದು. ಇದು ಬೆಳವಣಿಗೆಯ ಒಂದು ಹಂತ. ದೂರ ನಿಂತು ಗಮನಿಸುವ ನಿಮ್ಮ ಮನಸ್ಥಿತಿಯೇ ಹೇಳುತ್ತದೆ ನಿಮ್ಮ ಭಾವಸೂಕ್ಷ್ಮಜ್ಞತೆಯನ್ನು.

    ಅಪ್ರಿಯವಾದದ್ದನ್ನೂ ಹಿತವಾಗಿ ಬಿಡಿಸಿಟ್ಟ ಮನಮುಟ್ಟುವ ಬರಹ. ಜಾತಿದೇ ಬೇರೆ ಜಾತಿ, ಮಾತಾಡೋದೆ ಬೇಡ ಬಿಡಿ. :)

    'ಐತ' ನಮ್ಮ ತಿಳಿವಿನ ನೋಟ. ನೋಡಲು ಕಣ್ಣು ಬೇಕಷ್ಟೇ. ಅವನನ್ನು ಪರಿಚಯಿಸಿದ್ದಕ್ಕೆ ತುಂಬ ಥ್ಯಾಂಕ್ಸ್.

    ಪ್ರೀತಿಯಿಂದ
    ಸಿಂಧು

    ReplyDelete
  4. ಟೈಟಲ್ ಬದಲಾಯ್ಸಿ ಎಲ್ಲಾದ್ರೂ ಕಥೆಯಾಗಿ ಪ್ರಕಟಿಸಿ, ಲಾಯಕ್ಕಾಗಿದೆ ಅಂತ ಮೊನ್ನೇನೇ ಹೇಳಿದ್ದೆ ನಿಮಗೆ...ಹೂವನ್ನ್ ಕೊಲ್ಲೋಕಾಗುತ್ತಾ, ಅದನ್ನ ಗಿಡದಿಂದ ಬೇರ್ಪಡಿಸಿದಾಗ್ಲೇ ಸತ್ತ್ ಹೋಗುತ್ತೆ ಅನ್ನೋದು ನನ್ನ್ ಬಡ ನಂಬಿಕೆ :-)

    ***

    ನಮ್ಮ ಒಡನಾಡಿಗಳು ಅಥವಾ ಸ್ನೇಹಿತರು ಹಾಗೂ ಅವರ ವಿಚಾರಪರತೆ, ನಮ್ಮ ಮಾನಸಿಕ ಪ್ರಬುದ್ಧತೆ ಅಥವಾ ನಾವು ಬಲ್ಲ ವಿಷಯಗಳ ಸುತ್ತಲೇ ಗಿರಕಿ ಹೊಡೀಬೇಕು ಅನ್ನೋದರಲ್ಲಿ, ನಮ್ಮ ಪರಿಸರ-ಪರಂಪರೆಯೇ ನಾವು ನೆಚ್ಚಿಕೊಳ್ಳುವವರಲ್ಲಿ ಇರಬೇಕು ಅಂದುಕೊಳ್ಳೋದರಲ್ಲಿ ಯಾಕೋ ಅಷ್ಟೊಂದು ವಿಶ್ವಾಸವಿದ್ದಂತೆ ತೋರೋದಿಲ್ಲ.

    ಪತ್ರಿಕೋದ್ಯಮ, ಸಮಾಜಶಾಸ್ರ, ವಿಜ್ಞಾನದ ವಿಷಯಗಳನ್ನು ಸ್ವಯಂ ಅಸ್ಥೆಯಿಂದ ಓದಿ ಅದರಲ್ಲೇ ವಿಚಾರಮಾಡುವವರಿಗೆ ಅವರ ವ್ಯಾವಹಾರಿಕ ಜ್ಞಾನ, ಅವರನ್ನು ಗಿರಕಿ ಹೊಡೆಯೋ ವಿಷಯಗಳ ಪರಿಧಿ ಬೇರೆಬೇರೆಯಾಗಿರೋದು ಸಹಜ. ನಿರೂಪಕಿಯ ತಿಳುವಳಿಕೆ, ಗ್ರಾಹಿತನ, ತನ್ನ ಸುತ್ತಮುತ್ತಲುಗಳ ಬಗ್ಗೆ ಇರುವ ಕಾಳಜಿಯೇ ಪ್ರಿಯಾಳನ್ನು ಮೊದಲು ಪೋಷಿಸುವ ಹಾಗೆ ಕಂಡುಬಂದಿದ್ದು, ಅಲ್ಲದೇ ನಿರೂಪಕಿಯ ಉಳಿದ ಗೆಳತಿಯರು ಕನ್ನಡಿಗರಾಗಿ (ಹೆಚ್ಚೂ ಕಡಿಮೆ ಒಂದೇ ವಾತಾವರಣದ ಹಿನ್ನೆಲೆಯಿಂದ ಬಂದಿದ್ದವರಾಗಿರಬಹುದಾದಲ್ಲಿ) ಉತ್ತರ ಭಾರತದ ಹಿನ್ನೆಲೆಯ ಪ್ರಿಯಾ ಮೊದಮೊದಲು ಅಪ್ಯಾಯಮಾನವಾಗಿ ಕಂಡುಬಂದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಹುಟ್ಟಿದಾರಭ್ಯ ಸಮುದ್ರವನ್ನೇ ಕಂಡರಿಯದ ಪ್ರಿಯಾಳ ಬಗ್ಗೆ ನಿರೂಪಕಿಗೆ ಉಳಿದ ನಿರೀಕ್ಷೆಗಳು ಸಹಜವಾಗಿ ಹಬ್ಬಲಿಲ್ಲವಲ್ಲಾ ಎಂದೆನ್ನಿಸಿತು.

    ಅಮ್ಮನ, ತನ್ನ ನೆರೆಹೊರೆಯ ಒತ್ತಡದಲ್ಲಿ ಹುಟ್ಟಿ ನಿರೂಪಕಿಯ ಮನಸ್ಸಿನಲ್ಲಿ ಎಲ್ಲೋ ಸುಪ್ತವಾಗಿ ಅಡಗಿದ ಜಾತಿ-ಸಂವೇದನೆಗಳು ಅದ್ಭುತವಾಗಿ mUಡಿ ಬಂದಿವೆ. ತನ್ನ ರೆಬೆಲ್ ಮನಸ್ಥಿತಿ ಸಾಲಿಗ್ರಾಮವನ್ನು ಮುಟ್ಟುವಲ್ಲಿಗೆಂದೂ ಬೆಳೆಯಲಿಲ್ಲ ಎನ್ನುವ ಘೋಷಣೆಯೊಂದಿಗೆ, ಪ್ರಿಯಾಳ ಮುಗ್ಧತೆ ಹಾಗೂ ಎಲ್ಲವನ್ನೂ ಕ್ರಮಬದ್ಧವಾಗಿ ಪಾಲಿಸದ ಬುದ್ಧಿ - ಇವುಗಳೊಂದಿಗೆ ಆರಂಭವಾದ ವಿರಸ ಇಬ್ಬರ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಾ ಹೋಗಿದ್ದು ಆಶ್ಚರ್ಯವನ್ನುಂಟು ಮಾಡಿತು. ಏನಿಲ್ಲವೆಂದರೂ ಬೆಳಿಗ್ಗೆ ಬೇಗ ಎದ್ದು ಹೊರಗಿನ ಸೊಬಗನ್ನು ಅಹ್ಲಾದಿಸಬಲ್ಲ ಪ್ರಿಯಾಳ ಮನಸ್ಥಿತಿಗಾದರೂ ತುಸು ಕರುಣೆಯನ್ನು ತೋರಿ ಮತ್ತೊಂದು ಅವಕಾಶವನ್ನೇಕೆ ಕೊಡಬಾರದಿತ್ತು ಎನ್ನುವ ಪ್ರಶ್ನೆ ಕಾಡತೊಡಗಿತು.

    ReplyDelete
  5. @ಮೋಹನ್ - ಧನ್ಯವಾದ...

    @ವಿಜೇಂದ್ರ -
    ಬೆಳಿಗ್ಗೆ ಬೆಳಿಗ್ಗೆ ನಿಮ್ಮ Mood ಕೆಡಿಸಿ ದಿವಸ ಹಾಳುಮಾಡಿದೆ, ಕ್ಷಮೆಯಿರಲಿ.. ನೋವಲ್ಲೇ ಹುಟ್ಟಿದ ಬೆಳಕಿದು, ನಿಮಗೆ ಇದರೊಳಗಿನಿಂದ ಹೊರಬರಲಾರದಷ್ಟು ಗಟ್ಟಿಯಾಗಿ ನಿಮ್ಮನ್ನು ನನ್ನ ಬರಹ ತಟ್ಟಿದ್ದರೆ ನಾನು ಧನ್ಯೆ.. ಹೀಗೇ ಆಗಾಗ ಬರುತ್ತಿರಿ.

    @ರಾಜೇಶ್-
    ಈ ಕಥೆಯಲ್ಲಿ ಪಾತ್ರಗಳ ನಡುವೆ ಹುಟ್ಟಿದ ಅಂತರಕ್ಕೆ ಇಂಟಲೆಕ್ಚುವಲ್ ವಾದಗಳು ನಿಮಿತ್ತವಾಗಲಿಲ್ಲ, ದೇವರ ಮಹತ್ವ ಆಕೆಗೆ ಗೊತ್ತಿದೆಯೇ ಇಲ್ಲವೇ ಎಂಬುದೂ ಮುಖ್ಯವಾಗಲಿಲ್ಲ... ಪ್ರಾಸೆಸ್ ಶುರುವಾದ ಬಿಂದು ಅದೇ ಇರಬಹುದು, ಆದರೆ ಅದರ ಕಾರಣಗಳು ಸಂಕೀರ್ಣ ಎಂದಷ್ಟೆ ಹೇಳಬಯಸುತ್ತೇನೆ. ಮನುಷ್ಯರ ನಡುವಿನ ಸಂಬಂಧಗಳ ಸಂಕೀರ್ಣತೆಯನ್ನು ಇಲ್ಲಿ ಹೇಳಹೊರಟೆ, ಸಫಲವಾಗಿದ್ದೇನೋ ಇಲ್ಲವೋ ಗೊತ್ತಿಲ್ಲ... ಬರ್ತಾಇರಿ, ನಿಮ್ಮ ನೋಟಗಳ ಅಭಿವ್ಯಕ್ತಿಗಳು ನನಗೆ ಬೆಳಕು ನೀಡುತ್ತವೆ...

    @ಸಿಂಧು -
    ಓದಿದವರಿಗೆ ಬೇಸರವಾಗುವ ರೀತಿ ಇದೆ ಅಂತ ನನಗೆ ನಾನೇ ಬೈದುಕೊಂಡಿದ್ದೆ, ಆದರೆ ನೀವು ಸ್ವೀಕರಿಸಿದ ರೀತಿ ನನಗೆ ಧೈರ್ಯನೀಡಿದೆ... ಥ್ಯಾಂಕ್ಸ್ ಅನ್ನಬಾರದು :)ಅನ್ನುವುದಿಲ್ಲ...
    ಐತನಂತಹ ಜೀವಗಳು ಕಲಿಸುವ ಪಾಠ ಬದುಕಲ್ಲಿ ಯಾವ ಪಾಠಶಾಲೆಯಲ್ಲೂ ಸಿಗದ ಅನುಭವದ ಅಮೃತ.

    @ಸತೀಶ -
    ಜಾತಿಯಲ್ಲಿ ನಂಬಿಕೆಯಿಲ್ಲದ ನಿರೂಪಕಿ ಸಾಲಿಗ್ರಾಮ ಯಾಕೆ ಮುಟ್ಟಲಿಲ್ಲ ಎನ್ನುವುದರ ಬಗ್ಗೆ ಇನ್ನೊಂದು ಕಥೆ ಹೇಳಬೇಕಾಗುತ್ತದೆ, ಇಲ್ಲಿ ಹೇಳದೆ ಇದ್ದುದು ಈ ಕಥೆಯ ಅರ್ಥ ಕೆಡಿಸಿದೆ... :)ಏನ್ಮಾಡಲಿ...? :)ಉದ್ದವಾಗುತ್ತದೆಂಬ ಕಾರಣಕ್ಕೆ ಇಲ್ಲಿ ಇನ್ನಷ್ಚು ಹೇಳಬೇಕಿದ್ದುದು ಹೇಳದೆ ಬಿಟ್ಟಿದ್ದೆ, ಆ ತಪ್ಪು ಇನ್ನು ಮುಂದೆ ಮಾಡಬಾರದು ಅಂದುಕೊಂಡಿದ್ದೇನೆ..
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ...

    ReplyDelete
  6. hello sri
    ello ondu kade confuse maadkonddiddeeri ansutte.
    neeve create maadkonda confusion jothe confrontation nadesiddeera
    try to b less complicating
    sorry for the advising tone
    rasheed

    ReplyDelete
  7. ದೊಡ್ಡ ನಿಧಿಯೇ ನಿಮ್ಮಲ್ಲಿದೆ ಎಂಬ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಕಣ್ರೀ.
    ನಿಮ್ಮ ಗಂಗೋತ್ರಿ ಕಾಲೇಜು, ಹಾಸ್ಟೆಲ್, ಪತ್ರಿಕೋದ್ಯಮವನ್ನೇಲ್ಲಾ ...ನನಗೆ ನನ್ನ ಕಾಲೇಜು ದಿನಗಳು ನೆನಪಾಗುತ್ತಿವೆ. ಇಬ್ಬರು ಕಥೆಗಾರರು ಒಂದೇ ಕಡೆ ನೆಲೆಸಿರುವುದರಿಂದ ನಾನು ನಿಮ್ಮಿಂದ ಇನ್ನೂ ಉತ್ತಮವಾದುದನ್ನು ನಿರೀಕ್ಷಿಸುತ್ತಿರುತ್ತೇನೆ.

    ReplyDelete
  8. ನಮಸ್ಕಾರ ಶ್ರೀ.

    ಪ್ರಬುದ್ಧ ಎಂದುಕೊಂಡಿದ್ದ ಮಿತ್ರನೊಬ್ಬನನ್ನು ಮನೆಗೆ ಕರೆಸಿದಾಗ ಆತ ಚೆಲ್ಲುಚೆಲ್ಲಾಗಿ ವರ್ತಿಸಿ ಅಪ್ಪ ಅಮ್ಮನೆದುರು ನನಗೆ ಮುಜುಗರ ಉಂಟುಮಾಡಿದ್ದು ಎಳೆ‌ಎಳೆಯಾಗಿ ನೆನಪಾಯಿತು. ನನಗೆ ಅನಿಸೋ ಪ್ರಕಾರ - ಅಟ್ ಲೀಸ್ಟ್ ನನ್ನ ಮಟ್ಟಿಗಂತೂ- ಇಂಥ ವ್ಯಕ್ತಿಗಳ ಮೇಲೆ ಆತ್ಮೀಯತೆ ಎಂದುಕೊಂಡು ನಾವು ಎತ್ತರದ ಸ್ಥಾನ ಕೊಡುತ್ತೇವೆ; ಗೊತ್ತಿಲ್ಲದೆ ಗೌರವಭಾವನೆ ತಾಳುತ್ತೇವೆ. ಆದರೆ ಅವರಲ್ಲಿ ಹುಳುಕು ಕಂಡಾಗ ಅಷ್ಟೂ ಎತ್ತರದಿಂದ ದೊಪ್ಪೆಂದು ಬೀಳಿಸುತ್ತೇವೆ; ಬಿದ್ದಾಗಿನ ನೋವು ಆಗುವುದು ಅವರಿಗಲ್ಲ, ನಮಗೆ. "ಈ ಒಂದು ಸಂಬಂಧ ಶುರುವಾದಾಗ ಇದ್ದಂತಹ ನನ್ನನ್ನು ನಾನು ಕಳೆದುಕೊಂಡಿದ್ದೆ." ಎಂಥಾ ನೋಟ! ಇದರ ಪ್ರಕಾರ ನಾನು ಕಳೆದುಕೊಂಡದ್ದು ಆ ಮಿತ್ರನನ್ನಲ್ಲ. ಅಂತಹ ಮಿತ್ರನಿರಬೇಕಾಗಿದ್ದ ನನ್ನನ್ನು. ಇದಕ್ಕಾಗಿ ಧನ್ಯವಾದ ಶ್ರೀ.

    ಐತನ ಚಿತ್ರ ನಮ್ಮೂರಿನ ಗೋಪುವನ್ನು ನೆನಪಿಸಿ ಹೇಗೆ ಖುಷಿ ಕೊಟ್ಟಿತೋ, ಸಾಲಿಗ್ರಾಮದ ಸಂಗತಿ ಅಷ್ಟೇ ವಿಚಿತ್ರ ಸಂಕಟ ತರಿಸಿತು.

    ವಾದ-ಸಂವಾದಗಳ ಬಗ್ಗೆ slb ಅವರ ದೂರಸರಿದರು ಕೃತಿಯಲ್ಲಿ ಸಾಕಷ್ಟು ಓದಿದೆ. ನನ್ನ ಬ್ಲಾಗ್‍ನಲ್ಲಿ ಅದರ ಬಗ್ಗೆ ಯಾವತ್ತಾದ್ರೂ ಮಾತಾಡುವ.

    ReplyDelete
  9. ಅಬ್ಬಾ! ಅನಿಸಿತು ಬರಹ. ಮೊದಲಿಂದ ಕೊನೇವರೆಗೆ ಕಣ್ಣುಕೀಳದೆ ಓದಿಸಿಕೊಂಡು ಕೊನೆಗೊಂದು ನಿಟ್ಟುಸಿರು ತರಿಸಿತು.

    ನಿಜ, ನಮ್ಮ ಗೆಳೆತನಗಳ ಬಣ್ಣಗಳಲ್ಲಿ ನಮ್ಮನ್ನು ನಾವು ಕಾಣಬಯಸುತ್ತೇವೆ. ಇಂಥವರು, ಅಂಥವರು ನಮ್ಮ ಸ್ನೇಹಿತರು ಅಂತೆಲ್ಲ ಹೇಳಿಕೊಳ್ಳುವಾಗಿನ ನಮ್ಮ ತೆಳುವಾದ "ಹಮ್ಮು" ಒಡೆಯುವ ಪ್ರಸಂಗಗಳು ಹೀಗೇ ಸಣ್ಣ ತೊರೆ, ಕಣಿವೆ ದಾಟಲಾಗದ ಹಿಂಜರಿಕೆಗಳು...! ಅವಕ್ಕೆಲ್ಲ ಮುಖ್ಯ ಕಾರಣವಾಗಿದ್ದು ಸಾಲಿಗ್ರಾಮ ಮತ್ತು ರುದ್ರಾಕ್ಷಿ, ನಮ್ಮ ನಂಬಿಕೆಗಳ ಪ್ರತೀಕಗಳು. "ರೆಬೆಲ್" ಆದ್ರೂ ದೇವರ ಗೂಡಿನೊಳಗೆ ಕೈಹಾಕದಷ್ಟು ಅಮ್ಮನ ಭಯ/ ದೇವರ ಭಯ ಇದ್ದದ್ದನ್ನು ಅವಳಲ್ಲಿನ 'ದೇವರ ಗೂಡಿನ ಕಲ್ಪನೆಯೇ ಇಲ್ಲದ ಮುಕ್ತ ಮನಸ್ಸು' ಹೊಡೆದೆಬ್ಬಿದೆ ಇಲ್ಲಿ. ನಮ್ಮಲ್ಲಿ ದೇವರ ಗೂಡು ಒಂಥರಾ ಮಡಿಯ ಗುರುತು. ಉತ್ತರದವರಿಗೆ ಅವಿಲ್ಲವಲ್ಲ.

    ಐತ ಮತ್ತು ಗೇರು-ಸಾರಾಯಿ ನನ್ನ ಬಾಲ್ಯದ ನೆನಪುಗಳ ಚಿತ್ರಗಳಾದರು. ನಾನೂ ಬರಲಾ ನಿಮ್ಮೂರಿಗೆ? (ದೇವರ ಗೂಡಿಗೆ ಕೈ ಹಾಕಲಾರೆ, ಕ್ಷಮಿಸಿ.)

    ReplyDelete
  10. ರಶೀದ್,
    ನೀವು ಹೇಳಿದ್ದು ನಿಜ. ಅದು ನನಗೇ ಅರ್ಥವಾಗದ confrontation. ನಿಮ್ಮೆದುರು ನಾನೊಂದು ಪುಟ್ಟ ಹನಿ, ನಿಮ್ಮ ಅನಿಸಿಕೆ ನನಗೆ ಬೆಳಕಿದ್ದ ಹಾಗೆ...

    VEE,
    ? ಬರ್ತಾ ಇರಿ.

    ಯಾತ್ರಿಕ,
    ವ್ಯಕ್ತಿಗಳನ್ನು ಅವರು ಇರುವಂತೆ ಸ್ವೀಕರಿಸುವುದು ಎಲ್ಲರಿಂದಾಗದ ಕೆಲಸ ಅನ್ನುತ್ತೀರಾ..? ನಿಮ್ಮ ಒಳನೋಟ ನನ್ನ ನೋಟಕ್ಕೆ ಹೊಸ ಆಯಾಮ ಕೊಟ್ಟಹಾಗಿದೆ. ಧನ್ಯವಾದ.

    ಸುಪ್ತದೀಪ್ತಿ,
    ಖಂಡಿತಾ ಬನ್ನಿ ನಮ್ಮೂರಿಗೆ, ಯಾವಾಗ್ ಬರ್ತೀರಾ ಭಾರತಕ್ಕೆ..? :)

    ReplyDelete
  11. ಶ್ರೀ,

    ಎರಡು ದಿನದ ಹಿಂದೆ ಓದಿದ್ದರೂ ಸ್ಪಂದಿಸಲಾಗಿರಲಿಲ್ಲ. ನಿಮ್ಮ ಲೇಖನವನ್ನು ಓದಲು ಪ್ರಾರಂಭ ಮಾಡಿದಷ್ಟೆ ಗೊತ್ತು...ಮುಗಿದದ್ದು ಗೊತ್ತೆ ಆಗಿಲ್ಲ. ಒಳ್ಳೆಯ ಲೇಖನ.

    "ಸಂಬಂಧವೆಂದರೆ ಬರಿಯ ಮಿದುಳಿಂದಲ್ಲ, ಹೃದಯವೂ ಇರುತ್ತದೆ, ಹಾಗೆಯೇ ಬರಿಯ ಹೃದಯದಿಂದಲ್ಲ, ಮಿದುಳೂ ಇರುತ್ತದೆ ಎನ್ನುವುದು" - ಒಪ್ಪುತ್ತೇನೆ ಈ ಮಾತನ್ನ.

    ReplyDelete
  12. ನಿಮ್ಮ ಬ್ಲಾಗು ಚನ್ನಾಗಿದೆ.
    ಬೊಗಳೇ ರಗಳೇ ಓದಿಕೊ೦ಡು ಅಲ್ಲಿಲ್ಲಿ ಸುತ್ತಾಡುತ್ತಾ ಇಲ್ಲಿಗೆ ಬ೦ದೆ....ಚೆನ್ನಾಗಿ ಬರೀತೀರೀ..

    ಶ್ರೀನಿಧಿ

    ReplyDelete
  13. Hi,
    Nimma ee kathe hidisitu. Naanu nanna friend obbala jote hondi kollalaagade, sneha vannu bidalu aagade chadapadisidde. Adara nenapu maadi kottiri.

    ReplyDelete
  14. ಮನಸ್ವಿನಿ, ಎಲ್ಲರ ಕೈಲಿ ಬೈಸಿಕೊಂಡಿದ್ದೇನೆ ಇದನ್ನು ಬರೆದು.. :( ಮೆಚ್ಚಿಕೊಂಡಿದ್ದೀರಿ, ಥ್ಯಾಂಕ್ಸ್. :)

    ಶ್ರೀನಿಧಿ, ಸುಮಾ - ಧನ್ಯವಾದ. ಹೀಗೇ ಆಗಾಗ ಬರ್ತಾ ಇರಿ, ನಿಮಗನಿಸಿದ್ದು ಹೇಳ್ತಾ ಇರಿ.

    ReplyDelete
  15. Shree,
    Ningala blog na havyaka bashe nodi kushi aathu. Layikkiddu.

    ReplyDelete