Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)

4 comments:

sunaath said...

ಈ ಕರಡಿ, ಈ ಗೂಳಿ ಇದೆಲ್ಲಾ ಏನು,ಶ್ರೀ?
ಸೆನ್ಸೆಕ್ಸ್ ಅಂದರೆ ಏನು, ಅದು ಯಾಕೆ ಮೇಲೆರುತ್ತದೆ ಅಥವಾ
ಕೆಳಗಿಳಿಯುತ್ತದ?
ಇದೆಲ್ಲಾ ನಾಗರಿಕರಿಗೆ ಮಾತ್ರ ತಿಳಿಯುವ ವಿಷಯ ಅಂತ ಹೇಳ್ತೀರಾ?

Shrinidhi Hande said...

:) huchmunde maduvEli undavane JaaNa...

VENU VINOD said...

:( naanu kooda kadame labhakke kelavu share maaaribitte

ವೀರಣ್ಣ ಮಂಠಾಳಕರ್ said...

ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು, ನಿಮ್ಮ ವಿಚಾರ ಸಂಗತಿಗಳು ವಾಸ್ತವಿಕ ನೆಲೆಗಟ್ಟಿನಿಂದ ಕೂಡಿವೆ. ನಿಮಗೆ ನಾನು ಬರೆದ ಕೆಲವೊಂದು ಹನಿಗವನಗಳು ಕಳುಹಿಸುತಿದ್ದೇನೆ. ಇಷ್ಟವಾದ್ರೆ ಹೇಳಿ. ಇನ್ನೂ ಹೆಚ್ಚಿನ ಕವನ, ಕಥೆ, ಹನಿಗವನಗಳು ಮತ್ತು ನನ್ನ ಕವನ ಸಂಕಲನಗಳು ಕಳುಹಿಸುವೆ.

1) ಕನಸುಗಳಿಲ್ಲದ ಭಾವನೆಗಳು
ರೆಕ್ಕೆಗಳಿಲ್ಲದ ಹಕ್ಕಿಗಳು
ನಗುವಿಲ್ಲದ ಮುಖದಲ್ಲಿ
ಕೋಪವಿದ್ದರೂ....
ಅದು ಪ್ರೀತಿ ತುಂಬಿದ
ಮಮತೆಯ ಮಡಿಲು
ಸದಾ ಜೊತೆಯಾಗಿರಲು
ಸಾಕು.......

2) ಭ್ರಮ್ಮ ಬರೆದ ಹಣೆಬರಹದಂತೆ
ಈ ಜೀವನಕ್ಕೆ ತುತ್ತು ಕೂಳಿನ ಚಿಂತೆ
ಮಾನ ಮಯಾ೯ದಕ್ಕೆ ಬೇಕು ಪ್ರತಿಷ್ಠೆ
ಸಾಧನೆಯ ಪಥದಲ್ಲಿ ಸಾಗುವವನಿಗೆ
ಇರುವುದೊಂದೇ ಗುರಿಮುಟ್ಟುವ ಚಿಂತೆ.....||ಪ||

3) ನಿನ್ನ ನೆನಪುಗಳೆಂದರೆ ಗೆಳತಿ
ಕಾಣದ ದೇವರನ್ನು
ಧ್ಯಾನಿಸುತ್ತ
ಧ್ಯಾನದಲ್ಲಿ ಲೀನವಾಗಿ
ವರವೊಂದು ಪಡೆದ
ಖುಷಿ ಸಂಭ್ರಮ

4) ನಿನ್ನ ನೆನಪುಗಳೆಂದರೆ ಗೆಳತಿ
ಈ ಕವಿತೆಯ ಜೀವಭಾವದಲ್ಲಿ
ಒಂದಾಗಿ,
ನಿನಗಾಗಿರುವ ನನ್ನುಸಿರಿನ ಧ್ವನಿ

5) ನಿನ್ನ ನೆನಪುಗಳೆಂದರೆ ಗೆಳತಿ
ಕಣ್ಗಳ ಬಿಂಬದಲ್ಲಿ ಕಾಣುವ
ಆ ಕನಸಿನ ಪಯಣ

6) ನಾ ನೊಂದರೂ
ನೀ ನೋಯದಿರು ಗೆಳತಿ
ನನ್ನ ಮೇಲೆ ನಿನಗೆ ಪ್ರೀತಿ
ಇರಲಿ... ಇಲ್ಲದಿರಲಿ
ನಿನ್ನ ನೋವುಗಳೆಲ್ಲ
ನನಗಿರಲಿ.....

7) ಪ್ರೀತಿಯೆಂದರೆ
ನಿನ್ನೊಳಗಿನ ಭೀತಿ ಬಿಡು
ಒಂದಿಷ್ಟು ಖರೇ ಪ್ರೀತಿ ಅಂದ್ರೆ
ನಿನ್ನ ಮನಸು ಕೊಡು....

8) ನೆನಪುಗಳೇ ಹೀಗೆ
ಎಲ್ಲೆಂದರಲ್ಲಿ ಕಾಲು ಕೆದರಿ
ಕಾಳಗಕಿಳಿಯುವ ಗೂಳಿಯಂತೆ

ನೆನಪುಗಳೇ ಹೀಗೆ
ಮೌನ ಮಾತುಗಳ ಮಧ್ಯೆ
ಬಂದು ಹೇಗುವ ಬಂಧುಗಳಂತೆ

ನೆನಪುಗಳೇ ಹೀಗೆ
ಎಲ್ಲೆಂದರಲ್ಲಿ
ಮನಸಿಗೆ ಮುದ ನೀಡುವ
ಮಲ್ಲಿಗೆಯ ಕಂಪು ಬೀರುವಂತೆ

9) ನಿನ್ನ ಪ್ರೀತಿಗಾಗಿ
ಹಾತೊರೆದ ಮನಸ್ಸು
ಸೆಳೆಯಿತು ಗೆಳತಿ
ಗುಟ್ಟಾದ ನಿನ್ನಾ....
ವಯಸ್ಸು.

10 ಪ್ರೀತಿಯೆಂಬುದು
ಅದೇಷ್ಟು ಸೊಗಸು
ಒಂದಿಷ್ಟು ಕೋಪ, ಹುಸಿ ಮುನಿಸು
ಬೆಚ್ಚನೆಯ ಬಾವನೆಗಳಲ್ಲಿ ಕನಸು

11) ನಾ ಏನು ಹೇಳಲಿ ಗೆಳತಿ
ಬೇಡ ಬೇಡವೆಂದರೂ
ಬಿಡದೆ ಕಾಡುತಿವೆ
ನಿನ್ನ ನೆನಪುಗಳು
***

ಖಾಲಿ ಹಾಳೆಯಂತಲ್ಲ
ಈ ಬದುಕು
ಬರೆದಂತೆಲ್ಲ
ತುಂಬು ಬಸುರಿ...
ತನ್ನ ಪ್ರಸವ ಕಾಲದ
ನಿರೀಕ್ಷೆ
ಓದುಗನ ಮುಂದಿಡುತ್ತದೆ.
***

ಪ್ರಿಯೆ
ನಿನ್ನ ಸ್ಪಶ೯ಕ್ಕೆ
ಕಾತರಿಸುವ ಮನದಲ್ಲಿ
ಕಾ.... ಇರದಿದ್ದರೆ
ನಿನ್ನ ಮೇಲೆ ಪ್ರೇಮ ಉಕ್ಕಿ
ಪ್ರೀತಿಗಾಗಿ ಹಾತೊರೆಯುತಿರಲಿಲ್ಲ
***

ಅಂತ್ಯ ವಿರಾಮ
ಎಂಬುದಿಲ್ಲ
ಪ್ರೀತಿಗೆ
ಇರುವತನಕ
ಕಾ.....,
****

ನೀನಿಲ್ಲದ ಕಾವ್ಯ
ಅಪೂಣ೯
ನೀನಿರುವಾಗ
ಗೆಳತಿ
ಪರಿಪೂಣ೯ ಕವಿತೆ
****