Showing posts with label ಮನಸು. Show all posts
Showing posts with label ಮನಸು. Show all posts

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ,  ಸಿಕ್ಕ ಪಾಲು ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಯೋಗವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬಿದ್ದ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)

Tuesday, April 19, 2011

ಮತ್ತೆ ಮಳೆ...!

ಮಳೆ ಬಂತೆಂದರೆ ಸಾಕು, ನೆನಪುಗಳ ಜಡಿಮಳೆ ಕೂಡ ಶುರು...

ಚಿಕ್ಕಂದಿನಲ್ಲಿ ಅಮ್ಮ ಕರಿಯುತ್ತಿದ್ದ ಬಿಸಿ ಬಿಸಿ ಹಪ್ಪಳ... ಸುರಿವ ಮಳೆಗೆ ಗಂಟೆ ಎಂಟಾರೂ ಏಳಲು ಮನಸಿಲ್ಲದೆ ಕೌದಿಯೊಳಗೆ ಮುದುರಿಕೊಳ್ಳುತ್ತಿದ್ದ ದಿನಗಳು... ಮಳೆ ಹೆಚ್ಚಾದರೆ ಶಾಲೆಗೆ ಸಿಗುತ್ತಿದ್ದ ರಜಾ... ಹೊದಿಕೆಯೊಳಗೆ ಸೇರಿಕೊಂಡು ತರಂಗವೋ ಸುಧಾವೋ ಯಾವುದಾದರೂ ಕಾದಂಬರಿಯೋ ಹಿಡಿದು ಓದತೊಡಗಿದರೆ ಜಗತ್ತೇ ಸುಂದರ... ಮಳೆಯ ಜತೆಗೆ ತಳಕುಹಾಕಿಕೊಂಡ ನೂರೆಂಟು ಕಥೆಗಳು... ಕನಸುಗಳು...

ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ... ಇದರ ಅನುಭವ ಬೇರೆಯೇ...

ಸದಾ ಹೊಸ್ತಿಲು ದಾಟಹೊರಡುವ ಪುಟ್ಟಿ ಮಳೆ ಬರುತ್ತಿದ್ದರೂ ಚಳಿಯಾಗುತ್ತಿದ್ದರೂ ಲೆಕ್ಕಿಸದೆ ಹೊಸ್ತಿಲು ದಾಟಹೊರಡುತ್ತಾಳೆ... ಅವಳನ್ನು ಹಿಡಿಯುವಷ್ಟರಲ್ಲೇ ಅರ್ಧ ಸುಸ್ತು! ಕೈಲಿ ಹಿಡಿದುಕೊಳ್ಳಲೂ ಬಿಡದೆ ಚಿಮ್ಮುವ ಅವಳಿಗೆ ಬೆಚ್ಚಗೆ ಬಟ್ಟೆ ಹಾಕಿ, ಗಿಲಕಿ ಮತ್ತು ಟೀಥರ್ ಕೈಲಿ ಕೊಟ್ಟು ಬಣ್ಣ ಬಣ್ಣದ ಪುಸ್ತಕ, ಗೊಂಬೆ ಇತ್ಯಾದಿ ಅವಳ ಸುತ್ತಲೂ ಇಟ್ಟು ರೂಮಿನೊಳಗೆ ಕುಳ್ಳಿರಿಸಿ 'ಹೊರಗೆ ಬರಬೇಡ ಗುಮ್ಮ ಬರ್ತಾನೆ' ಅಂತ ಹೇಳಿ ಆಟವಾಡಲು ಬಿಟ್ಟು ಹೊರಗೆ ಬಂದರೆ, ಉಸ್ಸಪ್ಪಾ!

ಅಚಾನಕ್ಕಾಗಿ ಬಂದ ಮಳೆಗೆ ಇನ್ನೇನು ಒಣಗುತ್ತಿದ್ದ ಬಟ್ಟೆಯೆಲ್ಲಾ ಮತ್ತೆ ನೆನೆದು, ಮತ್ತೆ ಅದನ್ನು ನಾಳೆ ಪುನ: ನೆನೆ ಹಾಕಬೇಕು, ದಿನವೂ ನಿಮ್ಮ ಬಟ್ಟೆಯೇ ಹಾಕುತ್ತೀರಿ, ನಮ್ಮ ಬಟ್ಟೆಗೆ ಜಾಗವಿಲ್ಲವಲ್ಲಾ ಎಂದು ಮನೆ ಓನರ್ ಕೈಲಿ ಹೇಳಿಸಿಕೊಳ್ಳಬೇಕಲ್ಲಾ ಎಂಬ ಕಳವಳ...
ಮಳೆ ಬರಬಹುದೆಂಬ ಅರಿವಿಲ್ಲದೆ ಕೊಡೆರಹಿತರಾಗಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೇಗೆ ಬರುತ್ತಾರೋ ಎಂದು ಕಾತರ... ನೆನೆದುಕೊಂಡು ಬಂದವರಿಗೆ ತಲೆ ಒರಸಿ ಉಪಚಾರ... ಹಾಗೇ ಬಿಸಿ ಬಿಸಿ ಸೂಪಿಗೆ, ಕರಿದ ತಿಂಡಿಗೆ ಡಿಮಾಂಡಪ್ಪೋ ಡಿಮಾಂಡ್...

ಮಳೆಯೆಂದರೆ ಇಷ್ಟೇ ಅಲ್ಲ... ಆದರೆ ಈಗ, ಈ ಕ್ಷಣಕ್ಕೆ ಕಂಪ್ಯೂಟರ್ ಕೀಲಿಗೆ ನಿಲುಕಿದ್ದು ಇಷ್ಟು ಮಾತ್ರ. ವಾಚ್ಯಕ್ಕೆ ನಿಲುಕದೆ ಭಾವವಾಗಿ ಉಳಿದಿದ್ದು ಇನ್ನೆಷ್ಟೋ...

Tuesday, January 16, 2007

ಮನಸು ಏಕಾಂಗಿಯಾದಾಗ...

ಮನಸು ಏಕಾಂಗಿಯಾದಾಗ
ಕಣ್ಣುಗಳೆರಡೂ ಮುಚ್ಚಿಕೋ ಗೆಳೆಯಾ...
ನಿನ್ನ ಮನದ ಬಲು ಸನಿಹವಿದ್ದು,
ನಿನಗೆ ಒಳಿತಾಗಲೆ೦ದು ಬಯಸುವ
ಈ ಬೆಚ್ಚನೆಯ ಅನುಭೂತಿಯ
ಅನುಭವ ನಿನಗಾದರೆ
ಅದಕ್ಕಿಂತ ಬೇರೇನು ಬೇಕು?
ಬದುಕು ಮೊಗೆದು ಕೊಟ್ಟಿದ್ದು
ನೀನು-ನಾನು ಪಡಕೊಂಡಿದ್ದು
ಎಲ್ಲವೂ ಸುಂದರ ಅನುಭೂತಿ...
ಉಳಿಯುವುದೂ ಅನುಭೂತಿ.

Saturday, January 13, 2007

ಹಸಿರು - ಮನಸು

Orkutನಲ್ಲಿ ಪರಿಸರ ಸ೦ಬ೦ಧಿ ಗ್ರೂಪ್ ಗಳಲ್ಲಿ ಏನಿದೆ ಅ೦ತ ನೋಡ್ತಿದ್ದೆ. ಅದ್ಯಾಕೋ ಬೇಜಾರಾಯ್ತು.. ನಮ್ಮಲ್ಲಿ ಹೊಸದಾಗಿ ಯೋಚನೆಗಳೇ ಇಲ್ವಾ.. ಅನಿಸ್ತು... ಅಥವಾ, ಆಧುನಿಕ ಜೀವನಶೈಲಿಗೆ ನಾವೆಷ್ಟು ಒಗ್ಗಿ ಹೋದಿದ್ದೀವ೦ದ್ರೆ, ವಾಪಸ್ ಹೋಗಲಿಕ್ಕೆ ಸಾಧ್ಯವೇ ಆಗದಷ್ಟು.

ಪರಿಸರ ಉಳಿಸಬೇಕಾದ್ರೆ, ನಮ್ಮ comfort, convenience, ಸುಖಕ್ಕೆ ಉಪಯೋಗವಾಗುವ ಎಷ್ಟೊ೦ದು ವಸ್ತುಗಳನ್ನ ಬಿಟ್ಟು ಬಿಡಬೇಕು... ಅದು ಆಗೋದಿಲ್ಲ.. practically impossible!! ಮತ್ತೆ ಯಾಕೆ ಪರಿಸರ ಉಳಿಸೋ ತವಕ? ಬರೀ ತವಕ ಇದ್ರೆ ಸಾಕಾ? ಅದನ್ನ ಸಾಧಿಸೋದಕ್ಕೆ ಬೇಕಾದ will power - ಇಚ್ಛಾಶಕ್ತಿ ನಮ್ಮಲ್ಲಿಲ್ಲ.. ನನ್ನೊಬ್ಬಳಿ೦ದ, ಅಥವಾ ನನ್ನೊಬ್ಬನಿ೦ದ ಏನಾಗತ್ತೆ? ಅನ್ನೋ ಮನೋಭಾವ - ನನ್ನನ್ನೂ ಸೇರಿಸಿ, ಎಲ್ಲರಲ್ಲೂ ಇದೆಯೇನೋ..

ಇದೆಲ್ಲಾ ಯೋಚಿಸದೆ ಇರುವಷ್ಟು ಸಮಯ ಆರಾಮಾಗಿರ್ತೀವಿ, ಯೋಚಿಸಿದ್ರೆ ಹಿ೦ಸೆ ಅನ್ಸತ್ತೆ... ಪರಿಹಾರ???

Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...