Showing posts with label ನೆನಪು. Show all posts
Showing posts with label ನೆನಪು. Show all posts

Tuesday, May 5, 2009

ತಿಳಿವಿನತ್ತಲಿನ ಪಯಣಕ್ಕೊಂದು ವಿದಾಯ...

'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.

++++++++++++

ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.

ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.

This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...

ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...

ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...

ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...

ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...

ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++

300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...

ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.

++++++++++++

Sunday, April 12, 2009

ಒಂದಿಷ್ಟು ಹಾಡು... ಒಂದಿಷ್ಟು ನೆನಪು...



'ತಾತಾ... ಪೀಪೀ...'
(ಇದು ಪ್ರತಿಸಲ ನೋಡಿದಾಗಲೂ ನಂಗೆ ಅಳು ಬರುತ್ತದೆ... ಇವತ್ತಿಗೂ... ಸುಮ್ಮಸುಮ್ಮಗೆ...)



ಈ ಸ್ವರ ಕೇಳ್ತಿದ್ರೆ ಸಾಕು, ಮತ್ತೇನೂ ಬೇಡ ಬದುಕಲ್ಲಿ! :-)



ನಂಗಿಷ್ಟವಾದ ರಾಜ್ ಹಾಡು...



ಕೊನೆಗೆ ಉಳಿದಿದ್ದು ಇಷ್ಟು.
ಒಂದಿಷ್ಟು ಹಾಡು... ಒಂದಿಷ್ಟು ನೆನಪು...
ಮತ್ತು ಅಳಿಸಲಾಗದ ಹೆಜ್ಜೆಗಳು.


ಅಣ್ಣಾವ್ರು ಅಗಲಿ ಇಂದಿಗೆ ಮೂರು ವರ್ಷ.

Wednesday, December 3, 2008

ನಾವು ಮರೆತ ಪ್ರತಿಜ್ಞೆ...

GENERAL PLEDGE

India is my country. All Indians are my brothers and sisters. I Love my country. I am proud of its rich and varied culture. I shall always strive to be worthy of it. I shall love and respect my parents, teachers and elders. To my country and my people I pledge my devotion. In their well being and prosperity alone lies my happiness.

NATIONAL INTEGRATION PLEDGE
I solemnly pledge to work with dedication to preserve and strengthen the freedom and integrity of the nation. I further affirm that I shall never resort to violence and that all differences and disputes relating to religion, language, region or other political or economic grievances should be settled by peaceful and constitutional means.

ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತಿದ್ದು

ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಅದರ ಸಂಪನ್ನ ಹಾಗೂ ವೈವಿಧ್ಯಪೂರ್ಣ ಪರಂಪರೆಗೆ ನಾನು ಹೆಮ್ಮೆ ಪಡುತ್ತೇನೆ. ಅದಕ್ಕೆ ಅರ್ಹನಾಗಲು ನಾನು ಸದಾ ಪ್ರಯತ್ನಿಸುತ್ತೇನೆ. ನಾನು ನನ್ನ ತಂದೆತಾಯಿ ಮತ್ತು ಗುರುಹಿರಿಯರನ್ನು ಗೌರವಿಸುತ್ತೇನೆ ಹಾಗೂ ಅವರೊಡನೆ ಸೌಜನ್ಯದಿಂದ ವರ್ತಿಸುತ್ತೇನೆ. ನಾನು ನನ್ನ ದೇಶ ಮತ್ತು ಜನರಿಗೆ ನನ್ನ ಶ್ರದ್ಧೆಯನ್ನು ಮುಡಿಪಾಗಿಡುತ್ತೇನೆ. ಅವರ ಕ್ಷೇಮ ಮತ್ತು ಸಮೃದ್ಧಿಯಲ್ಲೇ ನನ್ನ ಆನಂದವಿದೆ.

ನಾವೆಲ್ಲ ಚಿಕ್ಕವರಿರುವಾಗ, ನಾ ಕಲಿತ ಕೇರಳದ ಕಾಸರಗೋಡಿನಲ್ಲಿರುವ ಸರಕಾರಿ ಶಾಲೆಯಲ್ಲಿ ದಿನವೂ ಬೆಳಿಗ್ಗೆ ಪ್ರತಿಜ್ಞೆ ಮತ್ತು ಪ್ರಾರ್ಥನೆಗಳ ನಂತರವೇ ಪಾಠಗಳು ಆರಂಭವಾಗುತ್ತಿದ್ದವು. ಕರ್ನಾಟಕದಲ್ಲೂ ಹಾಗೆಯೇ ಇತ್ತಾ? ಈಗಲೂ ಈ ಪದ್ಧತಿ ಇದೆಯಾ? ಬೇರೆ ರಾಜ್ಯಗಳಲ್ಲಿ ಕೂಡ ಪ್ರತಿಜ್ಞೆ ಬೋಧಿಸುವ ಪದ್ಧತಿ ಇದೆಯಾ? ನೀವೆಲ್ಲಾ ನನ್ನ ಹಾಗೆ ದಿನವೂ ಪ್ರತಿಜ್ಞೆ ಮಾಡಿಕೊಂಡೇ ಬೆಳೆದವರಾ? :-)

ಗೊತ್ತಿದ್ದವರಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ.

Saturday, November 29, 2008

ಈಶ್ವರ್ ಅಲ್ಲಾ...

ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ.
ईश्वर अल्लाह तेरे जहाँ में
नफ़रत क्यों है जंग है क्यों
तेरा दिल तो इतना बड़ा है
इन्साँ का दिल तंग है क्यों...

क़दम क़दम पर सरहद क्यों है
सारी ज़मीं जो तेरी है
सूरज के फेरे करती है
फिर भी कितनी अंधेरी है
इस दुनिया के दामन पर
इन्साँ के लहू का रंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्साँ का दिल तंग है क्यों...

गूँज रही हैं कितनी चीखें
प्यार की बातें कौन सुने
टूट रहे हैं कितने सपने
इनके टुकड़े कौन चुने
दिल के दरवाज़ों पर ताले
तालों पर ये ज़ंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्सां का दिल तंग है क्यों...

ಜಾವೇದ್ ಅಖ್ತರ್ ಬರೆದ ಚಂದದ ಈ ಹಾಡು, 1947-EARTH ಚಿತ್ರದ್ದು. ಎ ಆರ್ ರೆಹಮಾನ್ ಸಂಗೀತ, ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ, ದೇಶವಿಭಜನೆಯ ಸಮಯದಲ್ಲಿ ಆದ ದಂಗೆಗಳ ಸಮಯ ನಡೆದ ಘಟನೆಗಳ ಕುರಿತು ಚಿತ್ರಣವಿದೆ... ಸ್ವಾರ್ಥಕ್ಕೆ ಅಡಿಯಾಳಾಗುವ ಮಾನವ, ಧರ್ಮದ ಹೆಸರಲ್ಲಿ ತನ್ನ ಸ್ವಾರ್ಥಸಾಧನೆ ಹೇಗೆ ಮಾಡಿಕೊಳ್ಳುತ್ತಾನೆಂಬುದನ್ನು ಎಳೆಎಳೆಯಾಗಿ ಬಿಡಿಸಲಾಗಿದೆ... ನಂದಿತಾ ದಾಸ್, ಅಮೀರ್ ಖಾನ್, ರಾಹುಲ್ ಖನ್ನಾರ ಅದ್ಭುತ ನಟನೆಯಿದೆ... ಬೆಚ್ಚಿಬೀಳಿಸುವಂತಹ ಕೋಲ್ಡ್-ಬ್ಲಡೆಡ್ ಮರ್ಡರ್-ನ ದೃಶ್ಯಗಳಿವೆ... ಜತೆಗೆ ಈ ಚಂದದ ಹಾಡೂ ಕೂಡ. ಈ ಚಿತ್ರ ನೋಡದವರಿಗೆ ನೋಡಲಿಕ್ಕಿದು ಸಕಾಲ.

--------------------

ಒಬ್ಬನಿದ್ದ, ಸೃಜನಶೀಲ ವ್ಯಕ್ತಿ. ಬರಿಯ ನಗೆಚಾಟಿಕೆ ಹಾರಿಸಿಕೊಂಡು, ಸರಳವಾಗಿದ್ದ ಆತ, ಎಲ್ಲರ ನಡುವಿದ್ದೂ ಎಲ್ಲರಿಗಿಂತ ಭಿನ್ನವಾಗಿದ್ದ. ನಗುವಿದ್ದರೆ ಎಲ್ಲರಿಗೂ ಹಂಚುತ್ತಿದ್ದ ಗೆಳೆಯ, ಅಳುವಿದ್ದರೆ ಬಿಸ್ಮಿಲ್ಲಾಖಾನ್ ಜತೆ ಮಾತ್ರ ಹಂಚಿಕೊಳ್ಳುತ್ತಿದ್ದ.
ಸುಮ್ಮನೆ ಕೂತಲ್ಲಿ ಕೂರಲಾರದವ, ಏನಾದರೂ ವಿಭಿನ್ನವಾಗಿ ಮಾಡುತ್ತಲೇ ಇರುತ್ತಿದ್ದವ. ದೇಶದ ವಿವಿಧೆಡೆಯಿಂದ ಬಂದ ದೃಶ್ಯಗಳನ್ನು ಕತ್ತರಿಸಿ, ಈ ಹಾಡಿಗೆ ಸೂಕ್ತವಾಗುವಂತೆ ದೃಶ್ಯಗಳನ್ನು ಸೂಪರ್-ಇಂಪೋಸ್ ಮಾಡಿದ್ದ. ಸೂಕ್ತವಾದ ದೃಶ್ಯಗಳು ಸಿಗದಿದ್ದಲ್ಲಿ ಸಿಗುವವರೆಗೆ ಹುಡುಕಿ ಹಾಕಿದ್ದ. ಚಲನಚಿತ್ರದಲ್ಲಿರುವ visualizationಗಿಂತ ಭಿನ್ನವಾಗಿ, ಪ್ರಸ್ತುತ ಪರಿಸ್ಥಿತಿಗೆ ಅನ್ವಯವಾಗುವಂತೆ ಅದನ್ನು ದೃಶ್ಯೀಕರಿಸಿ ಎಡಿಟ್ ಮಾಡಿದ್ದ. (ಅದರ ವೀಡಿಯೋ ನನ್ನ ಬಳಿ ಇಲ್ಲ, ಇದ್ದವರು ಇಂಟರ್ನೆಟ್ಟಿಗೆ ಅಪ್-ಲೋಡ್ ಮಾಡಿ, ತುಂಬಾನೇ ಚೆನ್ನಾಗಿದೆ ಅದು.)

--------------------

ಇನ್ನೊಂದು ಪ್ರೋಮೋ ಮಾಡಿದ್ದ ಈತ, ನಂಗಂತೂ ತುಂಬಾ ಇಷ್ಟವಾಗಿತ್ತು ಅದು. abstract ಆಗಿದ್ದರೂ ಸುಲಭವಾಗಿ ಅರ್ಥವಾಗುವ ಯೋಚನಾ ಸರಣಿ... (ಸಿದ್ದೇಶ್, ಅದರ ಆಡಿಯೋ ಸರಿಮಾಡಿ ಅಪ್-ಲೋಡ್ ಮಾಡಿದರೆ ಉತ್ತಮ...)
" ನಮ್ಮ ಊರುಗಳು, ಮತ್ತೆ ನಮಗೆ ಸಿಗಬೇಕಾಗಿದೆ...
ನಮ್ಮ ಮನೆಗಳಲ್ಲಿ ದೀಪಗಳು ಪ್ರೀತಿಯಿಂದ ಉರಿಯಬೇಕಾಗಿದೆ...
ನಾವು, ಬಾಪೂಜಿಯ ಆದರ್ಶಗಳೊಂದಿಗೆ ಬೆಳೆದವರು...
ಬಸವಣ್ಣನ ಕರ್ಮಭೂಮಿ ನಮ್ಮದು...
ಪ್ರಾಮಾಣಿಕತೆ, ನೇರ ನೋಡುವ ಶಕ್ತಿ
ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುವ ನಿಷ್ಠುರತೆ...
ನಮ್ಮಲ್ಲಿರಬೇಕು..
ಅದೇ ಪ್ರಜಾಪ್ರಭುತ್ವದ ಗೆಲುವು...
ಅದೇ ಪ್ರಜಾಪ್ರಭುತ್ವದ ಹೆಮ್ಮೆ.

ಈ ಹೆಮ್ಮೆಗಾಗಿ, ಈ ಗೆಲುವಿಗಾಗಿ, ನಾವು ನಿಮ್ಮೊಂದಿಗಿದ್ದೇವೆ..."

-----------------------------------
ಈಗ ರವೀಂದ್ರ ಇಲ್ಲ... ಇರಬೇಕಿತ್ತು.

Friday, July 18, 2008

ಬೆಳಕಿಲ್ಲದ ದಾರಿಯಲ್ಲಿ...

ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು... ಅದರ ನಡುವೆಯೂ ಗುಡ್ಡ... ಬೆಟ್ಟ... ಕಾಡು... ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು...

ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ... ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು... ಜೀರುಂಡೆಗಳ ಜೀರ್ಗುಟ್ಟುವಿಕೆ... ಹೆಸರು ತಿಳಿಯದ ಹಕ್ಕಿಗಳು ಮಾಡುವ ಇಲ್ಲಿವರೆಗೆ ಕೇಳದ ಶಬ್ದಗಳು...

ಇವೆಲ್ಲವನ್ನೂ ತೂರಿಕೊಂಡು, ಮೀರಿಕೊಂಡು ರೈಲು ತನ್ನದೇ ಆದ ಹದದಲ್ಲಿ ಸಾಗುತ್ತದೆ... ಅದರಲ್ಲಿರುವವರಲ್ಲಿ ಕೆಲವರಿಗೆ ತಮ್ಮದೇ ಚಿಂತೆ.. ಇನ್ನು ಕೆಲವರಿಗೆ ಯಾವುದೋ ಧ್ಯಾನ... ಗುಂಪುಗಳಿದ್ದ ಕಂಪಾರ್ಟ್-ಮೆಂಟುಗಳಲ್ಲಿ ತಡೆಯಿಲ್ಲದೆ ಸಾಗಿದ ಹರಟೆಗಳು... ಯಾವ ಉಸಾಬರಿಯೂ ಬೇಡವೆಂದು ಆಗಲೇ ಮುಸುಕು ಹೊದ್ದು ಮಲಗಿರುವ ಹಲವರು... ಇವರೆಲ್ಲರ ನಡುವೆ, ಕಿಟಿಕಿ ತೆಗೆದು ಕುಳಿತಿರುವವರು ಅಲ್ಲೊಬ್ಬರು, ಇಲ್ಲೊಬ್ಬರು...

ಹೌದು, ಕಿಟಿಕಿ ತೆಗೆದು ಹೆಚ್ಚಿನವರು ಹೊರನೋಡಲಿಕ್ಕಿಲ್ಲ... ಯಾಕೆಂದರೆ, ಆಗಾಗ ತಿರುವಿನಲ್ಲಿ ಕಾಣುವ ಅಲ್ಪಸ್ವಲ್ಪ ಬೆಳಕಲ್ಲಿ ರೈಲು ಹೋಗುವ ಹಾದಿ ನೋಡಿದರೆ ಸಾಕು, ಎಂಟೆದೆಯವರಿಗೂ ಒಂದು ಕ್ಷಣ ಎದೆ ಝಲ್ಲೆನ್ನಬಹುದು... ಗುಡ್ಡಗಳನ್ನೇ ಕಡಿದು ಮಾಡಿದ ರೈಲಿನ ಹಾದಿ, ಕೊರಕಲಿದ್ದಲ್ಲಿ ಅದು ಹೇಗೋ ಅದರ ಮೇಲೆಯೇ ಹಾದುಹೋಗುತ್ತದೆ... ಇದರ ಬಗ್ಗೆ ನಾ ಹೇಳುವುದನ್ನು ಕೇಳುವ ಬದಲು, ನೀವೇ ಅನುಭವಿಸಿದರೆ ಚೆನ್ನ...

ದೂರದೂರದವರೆಗೂ ಸುತ್ತ ಬರೀ ಕಾಡು... ಮರ... ಗುಡ್ಡ... ರಾತ್ರಿ ಮಾಡಿದ ಕರಾಮತ್ತೋ ಅಥವಾ ನಿಜವಾಗಿಯೂ ಅದು ಹಾಗೆಯೋ, ಮನುಷ್ಯರ ಅಥವಾ ಜನವಾಸದ ಸುಳಿವೇ ಇಲ್ಲ... ಯಾಮಿನಿ ತನ್ನೆಲ್ಲಾ ಸೌಂದರ್ಯದೊಡನೆ ಕಾಲುಮುರಿದುಕೊಂಡು ಬಿದ್ದ ಹಾಗಿದೆ ಇಲ್ಲಿ... ಹತ್ತಿಯ ಹಾಗೆ ಹರಡಿದ ಬಿಳಿಮೋಡಗಳು ಇನ್ನೇನು, ಕೈಚಾಚಿದರೆ ಕೈಗೆ ಸಿಕ್ಕೇಬಿಡುತ್ತವೇನೋ ಎಂಬ ಭ್ರಮೆ ಹುಟ್ಟಿಸುತ್ತವೆ... ಒಂದು ಗುಡ್ಡದಿಂದ ಇನ್ನೊಂದಕ್ಕಿರುವ ನಡುವಿನ ಅಂತರದಲ್ಲೆಲ್ಲ ಈ ಹತ್ತಿಮೋಡಗಳದೇ ಕಾರುಬಾರು...

ಮತ್ತೂ ಮೇಲೆ ಆಗಸಕ್ಕೆ ದೃಷ್ಟಿ ತೂರಿದರೆ ಕಾಣುವುದು, ಇನ್ನೇನು ಮಳೆ ಸುರಿಸಿಯೇ ಬಿಡುತ್ತವೆನ್ನುವ ಭಾರವಾದ ಕರಿಮೋಡಗಳ ರಾಶಿ ರಾಶಿ... ಚಂದ್ರನ ತಣ್ಣಗಿನ ಮಂದ ಬೆಳಕಿನ ಹೊನಲು ಆಗೀಗ ಇವುಗಳ ನಡುವೆ ಇಣುಕಿ ತಾನಿದ್ದೇನೆನ್ನುತ್ತದೆ...

ಬೆಟ್ಟಗಳ ನಡುವಿನ ಕೊರಕಲಿನಲ್ಲಿ ತಿರುವಿನ ದಾರಿಯಲ್ಲಿ ನಿಧಾನವಾಗಿ ರೈಲು ಸಾಗುವಾಗ ಮೆಲ್ಲನೆದ್ದು ಕಂಪಾರ್ಟ್ಮೆಂಟಿನ ಬಾಗಿಲು ತೆಗೆಯುವ ಸಾಹಸಕ್ಕಿಳಿಯುತ್ತೇನೆ. ಮೆಲ್ಲಗಿಣುಕಿದರೆ, ಆ ಕಡೆಯೂ ದೂರದಲ್ಲಿ ಬೆಟ್ಟ, ಈ ಕಡೆಯೂ ದೂರದಲ್ಲಿಯೇ ಬೆಟ್ಟ... ಹಿಂದೆ ಬೆಟ್ಟದ ನಡುವೆ ಕಾಣುವ ಸಾಗಿ ಬಂದ ದಾರಿ, ಮುಂದೆ ಕಾಣುವುದು ಇನ್ನೊಂದು ಬೆಟ್ಟ, ಮತ್ತು ಹೋಗಲಿರುವ ದಾರಿ. ಕೆಳಗೆ ಕೆಲವು ಅಡಿಗಳ ಆಳದಲ್ಲಿ ಸುಮ್ಮನೇ ಜುಳುಜುಳು ಹರಿವ ನೀರು ಚಂದ್ರನ ಬೆಳಕಿಗೆ ಪ್ರತಿಫಲಿಸುತ್ತದೆ. ಅಷ್ಟರಲ್ಲಿಯೇ ಅಲ್ಲಿ ಬಂದ ಗಾರ್ಡ್ ಕೈಲಿ ಬೈಗುಳ ತಿಂದು ಬಾಗಿಲು ಮುಚ್ಚಿ ತೆಪ್ಪಗೆ ನನ್ನ ಜಾಗದಲ್ಲಿ ಹೋಗಿ ಕೂರುತ್ತೇನೆ.

ಇದೊಂದು ಏಕಾಂಗಿ ಜಗತ್ತು. ಯಾವುದೋ ಲೋಕಕ್ಕೆ ಹೋಗುವ ದಾರಿಯಿದು ಎನ್ನುವ ಭ್ರಮೆ ಹುಟ್ಟಿಸುವ ಮಾಯಾಪ್ರಪಂಚ. ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬೇಕೆಂದರೆ ಇಲ್ಲಿ ಏನೇನೂ ಇಲ್ಲ... ದೂರದೂರದ ವರೆಗೆ ರೈಲು ಹೋಗುವ ದಾರಿಯಲ್ಲೆಲ್ಲೂ ಮೊಬೈಲ್ ನೆಟ್-ವರ್ಕ್ ಇಲ್ಲ... ಟೆಲಿಫೋನ್ ಅಂತೂ ಇಲ್ಲವೇ ಇಲ್ಲ. ಸುಮ್ಮಸುಮ್ಮನೇ ಮೊಬೈಲಿನಿಂದ SOS ಕಾಲ್ ಪ್ರಯತ್ನಿಸಿ ವಿಫಲಳಾಗುತ್ತೇನೆ.

ಇಲ್ಲಿ ಎಲ್ಲೂ ವಿದ್ಯುತ್ ಸಂಪರ್ಕವಿಲ್ಲ, ಬೆಳಕೇ ಇಲ್ಲ.. ಹಾಂ, ಬೆಳಕು ಇಲ್ಲವೇ ಇಲ್ಲವೆನ್ನುವುದು ಸುಳ್ಳು. ಅಲ್ಲಲ್ಲಿ, ಕೆಲವು ಕಿಲೋಮೀಟರುಗಳಿಗೊಮ್ಮೆ, ರೈಲ್ವೇ ಕಟ್ಟಿಸಿದ ಚಿಕ್ಕಚಿಕ್ಕ ನಿಲ್ದಾಣಗಳಂತಹ ಕಟ್ಟಡಗಳು ಕಾಣಬರುತ್ತವೆ... ಪ್ರತಿ ಕಟ್ಟಡಕ್ಕೊಬ್ಬ ರೈಲ್ವೇ ಸಿಬ್ಬಂದಿಯಿರುತ್ತಾನೆ... ಆತ ರೈಲು ಬರುವವರೆಗೆ ಎಚ್ಚರವಿದ್ದು, ಸಿಳ್ಳೆ ಹಾಕಿ ರೈಲು ಮುಂದೆ ಹೋಗಬಹುದೆನ್ನುವ ಸೂಚನೆ ನೀಡುತ್ತಾನೆ. ಬೆಳಕೇ ಇಲ್ಲದ ಈ ವಾತಾವರಣದಲ್ಲಿ ಒಂದು ರೀತಿಯಲ್ಲಿ ಈತನೇ ಬೆಳಕು... ಅರೆಬೆಳಕಿನ ದಾರಿಯನ್ನು ಕಾಯುತ್ತಿರುವ ಇಂತಹ ಹಲವಾರು ಮಾನವರೂಪದ ದೇವದೂತರಿಗೆ ಬೆಳಕು ನೀಡಲು ಸೋಲಾರ್ ಅಳವಡಿಸಿದ ಕಂಬಗಳಲ್ಲಿರುವ ದೀಪ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ. ಇವರನ್ನು ಬಿಟ್ಟರೆ ಸುತ್ತಮುತ್ತ ಎಲ್ಲೂ ನರಮಾನವರೆನ್ನುವವರ ಕುರುಹೇ ಇಲ್ಲ... ಅದ್ಯಾಕೋ ಭಾರತೀಯ ರೈಲ್ವೇ ಬಗೆಗೆ ಹೆಮ್ಮೆ ಮೂಡುತ್ತದೆ.

ಈ ಜಗತ್ತಿನ ಮಾಯೆಗೆ ಮರುಳಾಗಿ ಕಳೆದು ಹೋಗಿದ್ದೇನೆ... ಇದ್ದಕ್ಕಿದ್ದಂತೆ, ದೂರದಲ್ಲಿ, ಗುಡ್ಡಗಳ ನಡುವಿನ ತಳಭಾಗದಲ್ಲಿ, ಕತ್ತಲನ್ನು ಸೀಳಿ, ಸಾಲುಸಾಲು ಬೆಳಕಿನ ಮಾಲೆ ಗೋಚರಿಸುತ್ತದೆ...

ಕತ್ತಲ ಸೀಳಿ ಬೆಳಕು ನುಗ್ಗಿದರೆ ಅದಕ್ಕೊಂದು ಒಳ್ಳೆಯ ಅರ್ಥವಿದೆ... ಬೆಳಕು ಬದುಕಿನ ಸಂಕೇತ. ಇದಕ್ಕಾಗಿಯೇ ತಮಸೋಮಾ ಜ್ಯೋತಿರ್ಗಮಯ ಅಂತ ಮಾತೇ ಇದೆ... ಆದರೆ, ಇಲ್ಲಿ ಕಾಣುವ ಬೆಳಕು ಯಾಕೋ ಕ್ರೂರವಾಗಿದೆ... ಈ ಬೆಳಕು ಸುತ್ತ ಹೊನಲಾಗಿ ಸೂಸುತ್ತಿರುವ ಚಂದ್ರಧಾರೆಯ ಜತೆಗೆ ಬೆರೆಯದಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಮಾಯಾಜಾಲದ ಪ್ರಪಂಚಕ್ಕೆ ಸೇರದಾಗಿದೆ... ಕೃತಕವಾದ ಬೆಳಕು ಏನೋ ಅಪಶಕುನದಂತೆ ತೋರುತ್ತದೆ.

ಅಷ್ಟೊಂದು ಬೆಳಕು ಚೆಲ್ಲುತ್ತ ದೂರದ ಗುಡ್ಡದ ತಪ್ಪಲಲ್ಲಿ ಕಾಣುತ್ತಿರುವುದು ಸಾಲು ಸಾಲಾಗಿ ಹೋಗುತ್ತಿರುವ ವಾಹನಗಳ ಫ್ಲಡ್ ಲೈಟ್-ಗಳ ಬೆಳಕು. ಗಂಟೆ ನೋಡುತ್ತೇನೆ. ಸರಿಯಾಗಿ ಒಂದು. ಅಷ್ಟು ಹೊತ್ತಿನಲ್ಲಿ ಆ ಗುಡ್ಡಗಳ ತಪ್ಪಲಲ್ಲಿ ಅಷ್ಟೊಂದು ವಾಹನಗಳಿಗೇನು ಕೆಲಸ? ಈ ಅಪರಾತ್ರಿಯಲ್ಲಿ ಏನು ಮಾಡುತ್ತಿರಬಹುದು? ಇತ್ಯಾದಿ ತರ್ಕಗಳು ಮನದಲ್ಲಿ ಮೂಡಲಾರಂಭಿಸುತ್ತವೆ...

ರಸಭಂಗವೆಂದರೆ ಇದೇ ಇರಬೇಕು. ಹಾಗೇ ಹೊರಗೆ ಕಣ್ಣು ತೂರಿಸಿ ಕೂರುವ ಯತ್ನ ಮಾಡುತ್ತೇನೆ. ಝರಿ-ತೊರೆಗಳ ಜುಳುಜುಳ ಆಗಲೇ ಕಡಿಮೆಯಾಗಿಬಿಟ್ಟಿದೆ. ಸ್ವಲ್ಪವೇ ಸಮಯದಲ್ಲಿ ಗುಡ್ಡ-ಬೆಟ್ಟಗಳ ಶ್ರೇಣಿಯೂ ಬರಬರುತ್ತ ಕಡಿಮೆಯಾಗಿ, ಅಲ್ಲೊಂದು-ಇಲ್ಲೊಂದು ಮನೆಗಳು ಕಾಣಲಾರಂಭ... ಯಾವುದೋ ಪಟ್ಟಣದ ಕುರುಹುಗಳು ಇಲ್ಲಿವರೆಗೆ ನೋಡಿದ್ದೆಲ್ಲ ಕನಸೆಂಬಷ್ಟು ಸತ್ಯವಾಗಿ ಕಣ್ಣಿಗೆದುರಾಗುತ್ತವೆ... ಸರಿ, ಇನ್ನೇನೂ ನೋಡಲು ಉಳಿದಿಲ್ಲ, ಕಿಟಿಕಿ ಹಾಕಿ ಮಲಗಿ ಕಣ್ಣು ಮುಚ್ಚುತ್ತೇನೆ...

ಕಣ್ಮುಚ್ಚಿದವಳೇ, ಇಲ್ಲಿವರೆಗೆ ನೋಡಿದ್ದರಲ್ಲಿ ಒಳ್ಳೆಯದು ಕನಸಲ್ಲದಿರಲಿ, ಕೆಟ್ಟದು ನನಸಾಗದಿರಲಿ ಎಂದು ಜಗತ್ತನ್ನು ನಡೆಸುವ ಶಕ್ತಿಯೊಡನೆ ಬೇಡಿಕೊಳ್ಳುತ್ತೇನೆ...

Friday, April 18, 2008

ಅಧರ್ಮ

ಕಾಸರಗೋಡಿನಲ್ಲಿ ಕೋಮು ಗಲಭೆ ಅನ್ನುವಾಗ ಮನಸ್ಸು ಅದ್ಯಾಕೋ ಹುಳಿ ಹುಳಿಯಾಗುತ್ತದೆ. ನಾನು ಹಲ ವರ್ಷಗಳ ಹಿಂದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಬಿಟ್ಟು ಬಂದ ನನ್ನ ಹುಟ್ಟೂರಿನಲ್ಲಿ ಇನ್ನೂ ಅದೇ ನಡೆಯುತ್ತಿದೆ ಎನ್ನುವ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

++++++++++

ನಮ್ಮ ಊರಲ್ಲಿ ಇರುವುದು ೪೦-೫೦ ಮನೆಗಳು. ಹಲವಾರು ಹಿಂದು ಮನೆಗಳ ನಡುವೆ ಒಂದೇ ಒಂದು ಮುಸ್ಲಿಂ ಮನೆ ಇದೆ. ನಮ್ಮ ಊರಿನಿಂದ ಬೇರೆಲ್ಲಿ ಹೋಗಬೇಕಾದರೂ ಗುಡ್ಡ ಹತ್ತಿ ಇನ್ನೊಂದು ಸಣ್ಣ ಊರಿಗೆ ಇಳಿಯಬೇಕು, ೨೦ ನಿಮಿಷದ ನಡಿಗೆ. ಆ ಊರಿನಲ್ಲಿ ಹೆಚ್ಚಿರುವುದು ಮುಸ್ಲಿಂ ಮನೆಗಳು. ಬಸ್ಸಿಗೆ ಕಾಯುವಾಗ ಅಲ್ಲೆ ಪಕ್ಕದ ಮನೆಯಲಿ ನೀರು ಕುಡಿಯುವಾಗ, ಯಾರಿಗೂ ಅದು ಮುಸ್ಲಿಂ ಮನೆಯ ನೀರಾಗಿ ಕಾಣುತ್ತಿರಲಿಲ್ಲ. ಹಾಗೆಯೇ, ಮೊಳಕೆ ಬರಿಸಿದ ತೆಂಗಿನ ಗಿಡಗಳನ್ನು ನಮ್ಮಪ್ಪ ಅಲ್ಲಿನ ದರ್ಗಾಕ್ಕೆ ಹರಿಕೆಯೆಂದು ಕೊಡುವಾಗ ಆ ದೇವರು ಮುಸ್ಲಿಂ ದೇವರಾಗಿರುತ್ತಿರಲಿಲ್ಲ. ಅಲ್ಲಿಂದ ಅಪ್ಪ ಪ್ರಸಾದವೆಂದು ತರುವ ಖರ್ಜೂರವನ್ನು ತಿನ್ನುವುದೇ ನಮಗೆಲ್ಲ ಒಂದು ದೊಡ್ಡ ಸಂಭ್ರಮ. ಹಾಗೆಯೇ ವಿಷುವಿನ ಸಂಭ್ರಮ ಸವಿಯಲು ಮತ್ತು ಆಗಾಗ ನಡೆಯುವ ಭೂತ ಕೋಲಗಳಿಗೆ, ನಾಗನ ತಂಬಿಲಕ್ಕೆ ಹರಿಕೆ ತೆಗೆದುಕೊಂಡು ಬರುವ ಮೋಞಿ ಬ್ಯಾರಿ, ಹಮೀದ್ ಮುಂತಾದವರು ನಮ್ಮನ್ನು ಬೇರೆಯವರೆಂದು ಎಣಿಸಿರಲಿಲ್ಲ.

ಅದೊಂದು ರಾತ್ರಿ. ಹುಂಬಾ ಚಿಕ್ಕವಳಿದ್ದೆ, ಅಜ್ಜ, ಅಜ್ಜಿ, ಅಮ್ಮ ಇದ್ದರು ಮನೆಯಲ್ಲಿ. ಕರೆಂಟು, ಫೋನು ಏನೂ ಇಲ್ಲದ ಕಾಲ. ಸಂಜೆ ಹೊತ್ತಿಗೆ ಪಕ್ಕದ ಮನೆಯ ಮಾಸ್ತರು ಮಾವ ಶಾಲೆಯಿಂದ ಎಂದಿಗಿಂತ ಬೇಗನೆ ಬಂದವರು, ನಮ್ಮನೆ ಅಂಗಳದಲ್ಲಿ ಹೋಗುವಾಗ, ಅಜ್ಜನಿಗೆ ಹೇಳಿದರು, ಹಿಂದು ಮುಸ್ಲಿಂ ಗಲಾಟೆ ಶುರುವಾಗಿದೆ ಕಾಸರಗೋಡಲ್ಲಿ, ಸೆಕ್ಷನ್ ಹಾಕಿದ್ದಾರೆ, ಹಾಗಾಗಿ ನಾಳೆ ಹೊರಗೆಲ್ಲೂ ಹೋಗಬೇಡಿ ಅಂತ. ಇದ್ದಕ್ಕಿದ್ದಂತೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿತು. ಬಹುಶ ಅವರು ಕೋಮು ಗಲಭೆ ಅಂದ್ರೆ ಹೇಗಿರುತ್ತದೆ ಅಂತ ಕಣ್ಣಾರೆ ನೋಡಿರಬೇಕೇನೋ... ಬೇಗ ಬೇಗನೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡರು. ಯಾಕೋ ಏನೋ ಒಂದು ರೀತಿಯ ಉದ್ವಿಗ್ನತೆ ಇತ್ತು. ಏನೂ ಗೊತ್ತಿಲ್ಲದ ನಾನು ಅಮ್ಮನಿಗೆ ಕೇಳಿದೆ, ಹಿಂದು ಮುಸ್ಲಿಂ ಗಲಾಟೆಯಲ್ಲಿ ಏನಾಗ್ತದೆ, ಅದು ಯಾಕೆ ಆಗ್ತದೆ ಅಂತ. ಯಾಕೆ ಆಗ್ತದೆ ಅಂತ ಹೇಳಲಿಕ್ಕೆ ಬೇಕಾದ ಲೋಕಜ್ಞಾನ ಅಮ್ಮನಿಗಿರಲಿಲ್ಲ, ಆದರೆ, ರಾತ್ರಿಯಾಗುತ್ತಿದ್ದಂತೆ ಪಕ್ಕದ ಊರಿನಿಂದ ದೊಂದಿ ಹಿಡ್ಕೊಂಡು ಕಳ್ರು ಬರ್ತಾರೆ ಅದಕ್ಕೆ ಬೇಗ ಬೇಗ ಉಂಡು ಮಲಗಬೇಕು ಅಂತ ಹೇಳಿ ನಂಗೆ ಅಮ್ಮ ಸಮಾಧಾನ ಮಾಡಿದಳು.

ಆನಂತರ ಹಲವು ಸಲ ಕಾಸರಗೋಡಿನಲ್ಲಿ ಈರೀತಿಯ ಗಲಭೆಗಳು, ಪರಿಣಾಮವಾಗಿ ಬಂದ್, ಸರ್ವೇ ಸಾಮಾನ್ಯವಾಗಿತ್ತು. ಬಂದ್ ಇದ್ದಾಗ ಶಾಲೆಗೆ ರಜೆ ಇರುತ್ತಿತ್ತು ಅನ್ನುವುದು ಬಿಟ್ಟರೆ ಗಲಭೆಯ ಜ್ವಾಲೆ ನಮ್ಮೂರ ತನಕ ಎಂದೂ ಬಂದಿದ್ದು ನನಗೆ ನೆನಪಿಲ್ಲ. ಆದರೆ, ೧೦ನೇ ತರಗತಿ ಮುಗಿಸಿದ ಮೇಲೆ ಕಾಸರಗೋಡಿನಲ್ಲೇ ಕೇರಳದ ಸಿಲೇಬಸ್ ಪ್ರಕಾರ ಓದು ಮುಂದುವರಿಸುವ ಅವಕಾಶವಿದ್ದ ನನ್ನಂತಹ ಹಲವಾರು ಮಂದಿ, ವಿಶೇಷವಾಗಿ ಹುಡುಗಿಯರು ಓದು ಮುಂದುವರಿಸಲು ಕರ್ನಾಟಕಕ್ಕೆ ವಲಸೆ ಬರುತ್ತಿದ್ದುದಕ್ಕೆ ಈ ಹಿಂದು ಮುಸ್ಲಿಂ ಗಲಾಟೆಯೂ ಒಂದು ಕಾರಣ. ಹೆತ್ತವರಿಗೆ ಕಾಳಜಿ, ಯಾವಾಗೆಂದರವಾಗ ಕಾರಣವೇ ಇಲ್ಲದೆ ಹುಟ್ಟಿಕೊಳ್ಳುತ್ತಿದ್ದ ಕಿಚ್ಚು ತೊಂದರೆ ಕೊಟ್ಟರೆ ಅಂತ. ಹಾಗಾಗಿ ಪಕ್ಕದ ದಕ್ಷಿಣ ಕನ್ನಡದ ಒಳ್ಳೆಯ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ( ಹಾಗೆ ನಾನೂ ಕರ್ನಾಟಕಕ್ಕೆ ಬಂದು, ಓದಿ, ಬೆಳೆದು, ಈ ಬ್ಲಾಗು ನೀವು ಓದುವಂತಾಗಿದೆ :) ಇಲ್ಲವಾದರೆ ನಾನು ಈ ಹೊತ್ತಿಗೆ ಕೇರಳದ ಯಾವುದೋ ಮೂಲೆಯಲ್ಲೋ ನಗರದಲ್ಲೋ ಸುಖವಾಗಿರುತ್ತಿದ್ದೆ :) )

+++++++++++++

ಹಿಂದು ಮುಸ್ಲಿಂ ಗಲಭೆ ಅಂದರೆ ಏನು ಅಂತ ಕಣ್ಣಾರೆ ನಾನು ನೋಡಿಲ್ಲದಿದ್ದರೂ ತಿಳಿಯುವ ಕುತೂಹಲಕ್ಕೆ ಓದಿದ್ದು ಖುಶ್ವಂತ್ ಸಿಂಗರ "ಟ್ರೈನ್ ಟು ಪಾಕಿಸ್ತಾನ್"... ಡಿಗ್ರಿಯಲ್ಲಿದ್ದಾಗ ಓದಿದ್ದೆ, ಅತ್ತುಬಿಟ್ಟಿದ್ದೆ. ಆಮೇಲೆ ನೋಡಿದ್ದು "EARTH - 1947". ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ, ಮಾನವತ್ವ ಮಾಸಿ ಹೋಗಿ ದಾನವ ಹುಟ್ಟುವ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು... ಇದರಲ್ಲಿನ ಈ ಹಾಡು ನನಗೆ ಎಂದಿಗೂ ಇಷ್ಟದ ಹಾಡು.

+++++++++++++

ಝಾರ್ಖಂಡದ ರಾಂಚಿಗೆ ಮೂರು ವರ್ಷದ ಹಿಂದೆ, ಚುನಾವಣೆಯ ಸಮಯ ಭೇಟಿ ನೀಡಿದ್ದೆ. ಆಗ ಮೊಹರಂ ಹಬ್ಬ ನಡೀತಾ ಇತ್ತು. ಅದರ ಮೆರವಣಿಗೆ ಹೋಗುತ್ತಿತ್ತು. ಸರಿ, ಕ್ಯಾಮರಾಮನ್ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡಲು ಹೊರಟ, ನಾನೂ ಅವನ ಜತೆ ಹೊರಟೆ. ಮೆರವಣಿಗೆಯ ಶಾಟ್ಸ್ ತೆಗೆದಿದ್ದಾಯಿತು. ನಂತರ ಅದನ್ನು ನೋಡುತ್ತಿದ್ದ ಜನಜಂಗುಳಿಯ ಶಾಟ್ಸ್ ತೆಗೆಯಬೇಕಿತ್ತು. ಕ್ಯಾಮರಾ ಜನರತ್ತ ತಿರುಗಿಸಿದ್ದೇ ತಡ. ನಾಲ್ಕೈದು ಯುವಕರು ಮೆರವಣಿಗೆಯೊಳಗಿಂದ ಈಚೆಗೆ ಬಂದು ಕ್ಯಾಮರಾಮನ್-ನನ್ನು ತಡೆದರು. "ಹಮಾರೇ ಔರತೋಂಕೋ ತುಮಾರೇ ಟಿವಿ ಮೇ ಮತ್ ದಿಖಾವೋ, ಶೂಟಿಂಗ್ ಮತ್ ಕರ್ನಾ" ಅಂತ ಹೇಳಿದರು. ಕ್ಯಾಮರಾಮನ್ ಒಪ್ಪಿ, ಬುರ್ಖಾಧಾರಿ ಹೆಂಗಸರನ್ನು ಶೂಟ್ ಮಾಡದೆ ಬಿಟ್ಟ. ಬೇರೆ ಗಂಡಸರ ಶಾಟ್ಸ್ ತೆಗೆದುಕೊಂಡ.

+++++++++++++

ಮೆರವಣಿಗೆ ಹೋಗುತ್ತಿದ್ದವರಲ್ಲಿ ಹಲವು ಚಿಣ್ಣರು ಕೂಡ ದಂಡ, ಕತ್ತಿ ಹಿಡಿದು ವರಸೆ (ಕತ್ತಿಯುದ್ಧವಾ? ಏನು ಹೇಳ್ತಾರೋ ಗೊತ್ತಿಲ್ಲ.) ಅಭ್ಯಾಸ ಮಾಡುತ್ತ ಸಾಗಿದ್ದರು. ನಾನು ಮೆಲ್ಲನೆ ಒಬ್ಬ ೫-೬ ವರ್ಷದ ಪುಟ್ಟ ಪೋರನನ್ನು ನಿಲ್ಲಿಸಿ ಕೇಳಿದೆ, "ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ".

ನಾನು ದಂಗು ಬಡಿದವಳು ಮತ್ತೆ ಕೇಳಿದೆ, "ಜೆಹಾದ್ ಕ್ಯಾ ಹೈ" ಅಂತ. ಆ ಪುಟ್ಟ ಚಂದಕ್ಕೆ ನಕ್ಕು ಉತ್ತರ ಕೊಡದೆ ಮುಂದೆ ಸಾಗಿದ.

+++++++++++++

ಏನೇ ಆದರೂ, ನನ್ನ ಸುತ್ತಲ ವಾತಾವರಣದಲ್ಲಿ ನನ್ನ ಕಣ್ಣೆದುರಿಗೆ ಕೋಮು ಗಲಭೆಗಳು ಆದದ್ದಿಲ್ಲ. ಧರ್ಮದ ಹೆಸರಲ್ಲಿ ಜಗಳಗಳು ಯಾಕೆ ಆಗುತ್ತವೆಂಬುದಕ್ಕೆ ಲಾಜಿಕಲ್ ಉತ್ತರ ನನಗಿನ್ನೂ ಸಿಕ್ಕಿಲ್ಲ.

Thursday, June 21, 2007

ನಾ ಕೊಂದ ಹೂವು

ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದೆಯಲ್ಲವೆ ಗೆಳತಿ... ಹಾಗೆ ಹೇಳಿ, ವರುಷಗಳ ಹಿಂದಿನ ಇಂಥದೇ ಒಂದು ನೆನಪನ್ನು ಕೆದಕಿದ್ದೀಯ... ಜೇನುಗೂಡಿಗೆ ಕಲ್ಲೆಸೆದಿದ್ದೀಯ. ನಿನಗೆ ಇದನ್ನು ಹೇಳಲೇಬೇಕು.

*************

ಗಂಗೋತ್ರಿಯ ಹಾಸ್ಟೆಲ್. ನನ್ನ ಮೊದಲದಿನ. ಹಿಂದಿನ ದಿನವಷ್ಟೇ ಸಾಮಾನುಸಮೇತ ಬಂದು ಗಂಗೋತ್ರಿಯ ಹಾಸ್ಟೆಲಿಗೆ ಸೇರಿಕೊಂಡಿದ್ದೇನೆ. ರೂಂಮೇಟ್ ಗಳ ಪರಿಚಯವಾಗಿದೆ. ಹೊಸ ಹಾಸ್ಟೆಲ್ ಬದುಕು ಆರಂಭವಾಗಿದೆ. ಕಳೆದ ಐದು ವರ್ಷಗಳಿಂದಲೂ ಹಾಸ್ಟೆಲ್-ನಲ್ಲೇ ಇದ್ದುಕೊಂಡು ಓದಿದ ನನಗೆ ಇದು just another hostel.

ಬೆಳಿಗ್ಗೆ ತಿಂಡಿಯ ಸಮಯ. ಡೈನಿಂಗ್ ಹಾಲ್-ನಲ್ಲಿ ನಾನು, ನನ್ನ ಹೊಸ ರೂಂಮೇಟ್-ಗಳಾದ ರೂಪ ಮತ್ತು ಸ್ವಾತಿ ಕುಳಿತುಕೊಂಡಿದ್ದೇವೆ. ಡೈನಿಂಗ್ ಹಾಲ್ ಭರ್ತಿಯಾಗಿದೆ. ನಮ್ಮ ಟೇಬಲ್-ನಲ್ಲಿ ನನ್ನೆದುರಿಗಿನ ನಾಲ್ಕನೇ ಕುರ್ಚಿ ಖಾಲಿಯಿದೆ. ನಮ್ಮ ಊರುಗಳ ಬಗ್ಗೆ, ಕಾಲೇಜು ಬದುಕಿನ ಬಗ್ಗೆ ಮಾತಾಡುತ್ತಾ ತಿಂಡಿ ತಿನ್ನುತ್ತಿದ್ದೆವು.

ನನ್ನ ಹಿಂದಿನಿಂದ Hi, can I sit here? ವಿನಯಭರಿತ ದನಿ ಕೇಳಿಸಿತು. ಹಿಂದೆ ತಿರುಗಿದರೆ ನಿಂತಿದ್ದಳಾಕೆ. ಒಂದು ಕೈಯಲ್ಲಿ ಚಹಾ, ಇನ್ನೊಂದು ಕೈಯಲ್ಲಿ ತಿಂಡಿಯ ತಟ್ಟೆ ಹಿಡಿದು. ಬಾಬ್ ಕಟ್ ಕೂದಲು. ಸ್ವಲ್ಪವೇ ಉಬ್ಬಿ ಎದುರು ಬಂದ ಹಲ್ಲುಗಳನ್ನು ಮುಂಬರದಂತೆ ತಡೆಯುತ್ತಿರುವ ಸ್ಪ್ರಿಂಗ್. ಕುತೂಹಲದ ಮುಗುಳ್ನಗು.

ನನ್ನೆದುರಿಗಿದ್ದ ರೂಪ Ofcourse ಅನ್ನುತ್ತ ಪರ್ಮಿಶನ್ ಕೊಟ್ಟಳು. ಖಾಲಿಯಿದ್ದ ಕುರ್ಚಿಯಲ್ಲಿ ಕೂತುಕೊಂಡು ಸೆಟಲ್ ಆಗುತ್ತ ಅವಳು ತನ್ನನ್ನು ತಾನು ಪರಿಚಯಿಸಿಕೊಂಡಳು - I'm Priya, doing my PG in Sociology... I come from Delhi, Can't understand Kannada...ಇತ್ಯಾದಿ. ನಾವೂ ನಮ್ಮನ್ನ ಪರಿಚಯಿಸಿಕೊಂಡೆವು. ಹಾಗೆ ನಮಗೆ ಆಕೆ ಹೊಸ ಒಡನಾಡಿಯಾದಳು.

ನಮ್ಮ ರೂಮಿನಿಂದ ಎರಡು ರೂಂಗಳಾಚೆಗಿದ್ದ ಆಕೆಯ ಕೋಣೆಯಲ್ಲಿ ಕನ್ನಡ ಎಂಎ ಮಾಡುವ ವಿದ್ಯಾರ್ಥಿನಿಯರಿದ್ದು, ಅವರ ನಡುವೆ ಭಾಷೆ ಗೋಡೆಯಾಗಿ ನಿಂತಿತ್ತು. ಆಕೆ ತನ್ನ ರೂಂಮೇಟ್-ಗಳಿಗಿಂತ ಹೆಚ್ಚಾಗಿ ನಮ್ಮ ಜತೆ ಒಗ್ಗಿಕೊಂಡಳು. ದಿನದಿನದ ಕಥೆಗಳು, ಜೋಕುಗಳು, ನಗೆಚಾಟಿಕೆಗಳು - ಎಲ್ಲವೂ ಹಂಚಿಕೆಯಾದವು. ಹೊಸತನದ ಬೆಸುಗೆಗೆ ಸೇತುವೆಯಾದವು.

***********

ಭಾನುವಾರ ಬಂತು. ರೂಪ, ಸ್ವಾತಿ ಇಬ್ಬರೂ ಮಲಗಿದ್ದರೆ, ನಾನು ಚಹಾ ತೆಗೆದುಕೊಂಡು ಬರೋಣವೆಂದು ಡೈನಿಂಗ್ ಹಾಲಿಗೆ ಹೋದೆ. ಟೀವಿ ಹಚ್ಚಿತ್ತು. ಟೀವಿಯಲ್ಲಿ ಡಿಸ್ಕವರಿ ಚಾನೆಲ್ ಹಾಕಿದ್ದರು. ಅದ್ಯಾವುದೋ ದೇಶದಲ್ಲಿ ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊರಹೋಗಲೊಲ್ಲದ ಬುಡಕಟ್ಟು ಜನಾಂಗದವರ ಮೇಲೆ ಸಾಕ್ಷ್ಯಚಿತ್ರ ಬರುತ್ತಿತ್ತು. ಮೊನ್ನೆ ಮೊನ್ನೆಯಷ್ಟೆ ಅಭಿವೃದ್ಧಿ ಪತ್ರಿಕೋದ್ಯಮವೆಂದರೇನು, ಅದು ಹೇಗಿರಬೇಕು ಎನ್ನುವುದರ ಬಗ್ಗೆ ಪ್ರೊಫೆಸರ್ ತರಗತಿಯಲ್ಲಿ ಹೇಳುತ್ತಿದ್ದಾಗ ಮನಸಿಟ್ಟು ಕೇಳಿಕೊಂಡಿದ್ದೆ. ಈ ಸಾಕ್ಷ್ಯಚಿತ್ರ ಅವರು ಹೇಳಿದ ಮಾತುಗಳಿಗೆಲ್ಲ ನೇರ ಸಂಬಂಧವುಳ್ಳದ್ದಾಗಿ ಕಂಡು ನಾನು ಚಹಾ ಕುಡಿಯುತ್ತಾ ನೋಡುತ್ತಾ ಕುಳಿತೆ.

Oh, you are here? ಪ್ರಿಯಾ ದನಿ ಕೇಳಿ ಹಿಂತಿರುಗಿದೆ. ನಮ್ಮ ಕೋಣೆಗೆ ಹೋಗಿದ್ದಳಂತೆ, ಅವರಿಬ್ಬರು ಮಲಗಿದ್ದರಂತೆ, ನಾನೂ ಕಾಣಲಿಲ್ಲವಾದ್ದರಿಂದ ಒಬ್ಬಳೇ ಡೈನಿಂಗ್ ಹಾಲಿಗೆ ಬಂದಳಂತೆ. ಯಾಕಷ್ಟು ಆಸಕ್ತಿಯಿಂದ ಸಾಕ್ಷ್ಯಚಿತ್ರ ನೋಡುತ್ತಿದ್ದೀಯೆಂದು ಪ್ರಶ್ನಿಸಿದಳು. ಹೇಳಿದೆ. ಅವಳೂ ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಳು. ಹೊಸ ವಿಷಯವೊಂದು ತಿಳಿದುಕೊಂಡ ಹಿಗ್ಗು, ಅವಳಿಗೆ ತಿಳಿಸಿದವಳ ಮೇಲೆ ತಣಿಯದ ಕುತೂಹಲಕ್ಕೆ ಕಾರಣವಾಯಿತು.

ಹಾಗೇ ನನ್ನ ಹಿನ್ನೆಲೆ ಕೇಳಿದಳು. 'I can't believe you are a Brahmin...' ಆಶ್ಚರ್ಯದಿಂದ ಉದ್ಗರಿಸಿದಳು. 'ಜಾತಿಯ ಬಗ್ಗೆ ಯಾಕಷ್ಟು ಯೋಚನೆ ಮಾಡ್ತೀಯ, ಆ ಕಾಲ ಎಂದೋ ಹೋಯ್ತು, ಈಗೇನಿದ್ರೂ ನಾವು ಏನಾಗಿದ್ದೇವೆ ಅನ್ನುವುದಷ್ಟೆ ಮುಖ್ಯ' ಅಂದೆ. ಬಸವಣ್ಣ 'ಜ್ಯೋತಿ ಯಾವ ಜಾತಿಯಮ್ಮ' ಅಂದಿದ್ದು ನೆನಪಾಯಿತು, ಅದನ್ನೂ ಹೇಳಿದೆ.

ಅವಳು ನನ್ನ ಬಗ್ಗೆ ಇನ್ನಷ್ಟು ಗೌರವ ತುಂಬಿಕೊಂಡಳು. ತನ್ನ ಜಗತ್ತಿಗೆ ನನ್ನನ್ನು ಸ್ವಾಗತಿಸಿದಳು. ಆಂಧ್ರದ ರಾಯಲಸೀಮೆಯ ಯಾವುದೋ ಹಳ್ಳಿಗೆ ಸೇರಿದ ತನ್ನ ದಲಿತ ಹಿನ್ನೆಲೆಯ ಬಗ್ಗೆ, ಆ ಹಳ್ಳಿಯಲ್ಲಿ ದಲಿತರು ಅನುಭವಿಸುವ ಕಷ್ಟಗಳ ಬಗ್ಗೆ, ಅವಳ ಈ ಹಿಂದಿನ ಹಾಸ್ಟೆಲ್ ಬದುಕಿನ ಬಗ್ಗೆ, ದೆಹಲಿಯಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಿರುವ ಅಕ್ಕ-ಭಾವನ ಬಗ್ಗೆ, ಅವರ ಪ್ರೇಮವಿವಾಹದ ಬಗ್ಗೆ, ದೆಹಲಿಯಲ್ಲಿ ಕಳೆದ ದಿನಗಳ ಬಗ್ಗೆ, ಐಎಎಸ್ ಅಧಿಕಾರಿಯಾಗಬೇಕೆನ್ನುವ ತನ್ನ ಬಯಕೆಯ ಬಗ್ಗೆ - ಹೀಗೇ ಸಾವಿರ ವಿಷಯಗಳನ್ನು ಹಂಚಿಕೊಂಡಳು. ಅವಳ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಹಂಬಲ ನನ್ನಲ್ಲೂ ಹುಟ್ಟಿತು. ಅವಳ ಮಾತುಗಳಿಗೆ ಕಿವಿಯಾಗುತ್ತಿದ್ದೆ.

ನನ್ನ ಬಗ್ಗೆ ಕೇಳಿದಳು. ಹೇಳಿಕೊಂಡೆ. ಪಕ್ಕಾ ಸಂಪ್ರದಾಯಸ್ತ ಮನೆತನದ ಬಗ್ಗೆ, ನಿಯಮಗಳನ್ನು ಮುರಿಯುವ ನನ್ನ ತುಂಟತನದ ಬಗ್ಗೆ. ಯಾರೇ ಗೆಳತಿಯರ, ಗೆಳೆಯರ ಅಥವಾ ಗುರುಗಳ ಹೆಸರು ನಾನು ಮಾತಾಡುವಾಗ ನುಸುಳಿದರೂ ಅವರು ಯಾವ ಜಾತಿಯೆಂದು ಕಳಕಳಿಯಿಂದ ಕೇಳುವ ಅಮ್ಮನ ಬಗ್ಗೆ, ಮನುಷ್ಯ ಜಾತಿ ಎನ್ನುವ ನನ್ನ ಧಿಮಾಕಿನ ಉತ್ತರದ ಬಗ್ಗೆ. ನಮ್ಮನೆಗೆ ಕೆಲಸಕ್ಕೆ ಬರುವ ಲಚ್ಚಿಮಿಯ ಬಗ್ಗೆ, ನಮ್ಮನೆಯ ಎದುರಿನ ಗುಡ್ಡದಾಚೆಗೆ ಗುಡಿಸಲು ಕಟ್ಟಿಕೊಂಡು ಬುಟ್ಟಿ ನೇಯ್ದು ಬದುಕುವ ಐತ ಮತ್ತು ತುಕ್ರುವಿನ ಬಗ್ಗೆ. ನಮ್ಮ ತೋಟದಲ್ಲಿ ಅಜ್ಜ ಮಲೆನಾಡಿನಿಂದ ತಂದು ನೆಟ್ಟ ಏಲಕ್ಕಿಯ ಬಗ್ಗೆ, ಏಲಕ್ಕಿ ಹೂವರಳುತ್ತಿದ್ದಂತೆಯೇ ಅದನ್ನು ಕಾಯಾಗಲು ಬಿಡದೆ ಬಂದು ತಿನ್ನುವ ಕೇರೆಹಾವಿನ ಬಗ್ಗೆ. ಮಳೆಗಾಲ ಶುರುವಾಗಿ ಕೆಲದಿನಕ್ಕೆ ಅರಳುವ ವಿಶೇಷ ಹೂವುಗಳಾದ ರಾತ್ರಿರಾಣಿ ಮತ್ತು ಕೇನೆಹೂಗಳ ಬಗ್ಗೆ, ಬೇರೆ ಹೂಗಳಿಗಿಂತ ಅವು ಹೇಗೆ ಭಿನ್ನವೆಂಬುದರ ಬಗ್ಗೆ. ಅವಳ ಕಣ್ಣಿಗೆ ಕಟ್ಟುವಂತೆ ನಾ ವಿವರಿಸುತ್ತಿದ್ದರೆ, ಅಕ್ಷರವೂ ಬಿಡದೆ ಅವಳು ಕೇಳಿಕೊಳ್ಳುವಳು.

ಹಾಗೇ ಚರ್ಚೆಗಳು. ನರ್ಮದಾ ಬಚಾವೋ ಆಂದೋಲನದ ಬಗ್ಗೆ. ದಕ್ಷಿಣ ಕನ್ನಡವೆಲ್ಲ ಒಮ್ಮೆ ಹೊಗೆಯೆಬ್ಬಿಸಿ ತಣ್ಣಗಾದ ಎಂ.ಆರ್.ಪಿ.ಎಲ್ ಪೈಪ್ಲೈನ್ ವಿವಾದ ಬಗ್ಗೆ, ಇನ್ನೂ ಹೊಗೆಯುಗುಳುತ್ತ ಪರಿಸರವನ್ನು ನುಂಗುತ್ತಿರುವ ಎಂ.ಆರ್.ಪಿ.ಎಲ್ ಬಗ್ಗೆ. ಅಭಿವೃದ್ಧಿಯ ಬಗ್ಗೆ. ಸಾಮಾನ್ಯ ಮನುಷ್ಯನ ಬಗ್ಗೆ. ಬುದ್ಧಿಜೀವಿಗಳ ಬಗ್ಗೆ. ಗಾಂಧೀಜಿಯ ಬಗ್ಗೆ. ಕೇರಳದಲ್ಲಿ ಅವಾಗಷ್ಟೆ ಕಾಲಿಟ್ಟಿದ್ದ ಡಿ.ಪಿ.ಇ.ಪಿ.ವಿದ್ಯಾಭ್ಯಾಸ ಪದ್ಧತಿಯ ಬಗ್ಗೆ. ಮಂಗಳೂರಿನ ಪೀತಪತ್ರಿಕೆಗಳ ಬಗ್ಗೆ. ಸಾಮಾಜಿಕ ಜವಾಬ್ದಾರಿರಹಿತ ಜರ್ನಲಿಸ್ಟ್-ಗಳ ಬಗ್ಗೆ. ಮುಗಿಯದ ಕಾಸರಗೋಡು ಗಡಿವಿವಾದದ ಬಗ್ಗೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಉಗ್ರವಾಗಿ ಹೋರಾಡಿ, ಅದಕ್ಕಾಗಿ ಮರಣಶಯ್ಯೆಯಲ್ಲೂ ಹಂಬಲಿಸಿದ ನನ್ನಜ್ಜನ ಬಗ್ಗೆ. ಕಾಸರಗೋಡು ಕೇರಳದಲ್ಲೇ ಇರಬೇಕೆಂಬ, ಯಾರೂ ಒಪ್ಪಲು ಸಿದ್ಧವಿಲ್ಲದ ನನ್ನ ವಾದದ ಬಗ್ಗೆ.

ಆಂಧ್ರದಲ್ಲಿ ತಾಂಡವವಾಡುತ್ತಿದ್ದ, ಅವಾಗಷ್ಟೆ ಚಿಕ್ಕಮಗಳೂರು ಕಡೆ ಸುದ್ದಿ ಶುರು ಮಾಡಿದ್ದ ನಕ್ಸಲಿಸಂ ಬಗ್ಗೆ. ನನ್ನೂರಲ್ಲಿ ಕಾಲಕ್ರಮೇಣ ತೋಟಗಳಾಗಿ ಮಾರ್ಪಟ್ಟ ಭತ್ತದ ಗದ್ದೆಗಳ ಬಗ್ಗೆ. ಗ್ಲೋಬಲೈಸೇಶನ್ ಬಗ್ಗೆ. ವ್ಯಾಪಾರಿ ಪತ್ರಿಕೋದ್ಯಮದಿಂದ ಮತ್ತು ತನ್ನ ಬ್ರಿಗೇಡ್ ರೋಡ್ ಲ್ಯಾಂಗ್ವೇಜ್-ನಿಂದ ಮಾಧ್ಯಮಜಗತ್ತನ್ನೇ ಹಾಳುಮಾಡುತ್ತಿರುವ ಟೈಮ್ಸ್ ಆಫ್ ಇಂಡಿಯಾದ ಬಗ್ಗೆ. ಸಾಯಿನಾಥರ ಅಭಿವೃದ್ಧಿ ಪತ್ರಿಕೋದ್ಯಮ ಲೇಖನಗಳ ಬಗ್ಗೆ. ಕಿರಣ್ ಬೇಡಿಯ ಬಗ್ಗೆ. ಸಮಾಜದ ಮತ್ತು ಮಾಧ್ಯಮದ ಭವಿಷ್ಯದ ಬಗ್ಗೆ. ದಲಿತ ಸಂಘರ್ಷದ ಬಗ್ಗೆ.

***********

ವಾರಾಂತ್ಯಕ್ಕೆ ರಜೆ ಸಿಕ್ಕಿದಾಗ ಮನೆಗೆ ಹೋಗುತ್ತಿದ್ದೆ. ಅಮ್ಮ ಕಟ್ಟಿಕೊಡುವ ಹಲಸಿನಕಾಯಿ ಚಿಪ್ಸ್, ತೆಂಗಿನಕಾಯಿ ಹೋಳಿಗೆ, ಉಪ್ಪಿನಕಾಯಿ ಚಟ್ನಿಪುಡಿ ಇತ್ಯಾದಿಗಳು ಹೊತ್ತುತರುತ್ತಿದ್ದೆ. ಸ್ವಾತಿ, ರೂಪಾಗೆ ಇವು ಹೊಸದಲ್ಲ, ಆದರೆ ಪ್ರಿಯಾ ಮಾತ್ರ ಇವನ್ನೆಲ್ಲ ತಿನ್ನುವುದು ಬಿಡು, ಕಂಡುಕೇಳರಿಯಳು. ಅದರ ರುಚಿಗೆ ಮಾರುಹೋಗಿದ್ದಳು. ಹೇಗೆ ಮಾಡುವುದೆಂದು ಕೇಳಿದಳು. ಗೊತ್ತಿದ್ದದ್ದು ಹೇಳಿದೆ. ಗೊತ್ತಿಲ್ಲದ್ದು ನಮ್ಮನೆಗೆ ಹೋದಾಗ ಅಮ್ಮನ ಕೈಯಲ್ಲಿ ಹೇಳಿಸಿಕೊಳ್ಳೋಣವೆಂದೆ.

ಹುಟ್ಟಿದ ಮೇಲೆ ಸಮುದ್ರ ಕಂಡಿಲ್ಲದ ಪ್ರಿಯಾಗೆ ಸುರತ್ಕಲ್-ನ ಇಡ್ಯದ ಬೀಚಿಗೆ ಕರೆದುಕೊಂಡುಹೋಗಿ ಸಮುದ್ರ, ಬೀಚ್ ತೋರಿಸಿದೆ. ಬೀಚ್-ನಲ್ಲಿ ಕೂತು ಶೆಟ್ಟಿ ಐಸ್ಕ್ರೀಂ ತಿಂದೆವು. ವಾಪಸ್ ಬರುವಾಗ ಬೈಕಂಪಾಡಿಯ ಸಂಕದ ಮೇಲಿಂದ ಕತ್ತಲಲ್ಲಿ ಹೊತ್ತಿ ಉರಿಯುತ್ತಿದ್ದ ಎಂ.ಆರ್.ಪಿ.ಎಲ್. ಬೆಂಕಿ ಮತ್ತು ಹೊಗೆ ತೋರಿಸಿದೆ.

ನನ್ನ – ಪ್ರಿಯಾಳ ಗೆಳೆತನ ಆರಂಭವಾಗಿ ಎರಡು ತಿಂಗಳು ಕಳೆದಿತ್ತು. ಒಂದು ದಿನ ಪ್ರಿಯಾಗೆ ನನ್ನ ಜತೆ ನನ್ನ ಮನೆಗೆ ಬರಬೇಕೆಂದು ತುಂಬಾ ಅನಿಸಿಬಿಟ್ಟಿತು. ನನ್ನ ಅನುಭವಗಳ ಭಾವಧಾಮಕ್ಕೆ ಪಯಣಿಸಿ ನಾನು ಬದುಕಿದ ಬದುಕನ್ನು ಸವಿಯಬೇಕೆಂಬ ಅವಳ ಹಂಬಲ ನನಗೂ ಇಷ್ಟವಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳಿದೆ, ನನ್ನ ಗೆಳತಿಯನ್ನು ಕರೆದುಕೊಂಡು ಬರುತ್ತಿದ್ದೇನೆಂದು. ಅಮ್ಮ ಎಂದಿನಂತೆ ಜಾತಿಯ ಬಗ್ಗೆ ಕಾಳಜಿಯಿಂದ ಕೇಳಿದರೆ ನಾನು ಹೇಳದೆಯೆ ಎಂದಿನಂತೆ ಉಡಾಫೆಯಿಂದ ಮಾತು ಹಾರಿಸಿದೆ. ನಾನು, ಪ್ರಿಯಾ ಒಂದು ಶುಕ್ರವಾರ ಸಂಜೆ ನಮ್ಮನೆಗೆ ಹೊರಟೆವು.

ದಾರಿಯುದ್ದಕ್ಕೂ ಪ್ರಿಯಾಗೆ ನನ್ನ ವಿವರಣೆಗಳು. ಬಸ್ಸು ರಾಷ್ಟ್ರೀಯ ಹೆದ್ದಾರಿ ಬಿಟ್ಟು ನಮ್ಮೂರಿಗೆ ಹೋಗುವ ಒಳದಾರಿ ಹಿಡಿಯುತ್ತಿದ್ದಂತೆಯೇ ಪುಟ್ಟ ಪುಟ್ಟ ಹಸಿರು ಗುಡ್ಡಗಳ ನಡುವೆ ಹಾವಿನಂತೆ ಹರಿದ ಕಪ್ಪು ಟಾರುರೋಡು, ಎತ್ತ ನೋಡಿದರೂ ಹಸಿರನ್ನೇ ಹೊದ್ದು ಮಲಗಿದ ಊರು, ಭಯ ಹುಟ್ಟಿಸುವಷ್ಟು ಕಡಿದಾದ ಒಂದೆರಡು ತಿರುವುಗಳು, ಸಣ್ಣಗೆ ಜಿನುಗುತ್ತಿದ್ದ ಮಳೆ, ಕೆಂಪು ಮಣ್ಣಿನೊಳಗಿಂದ ಅವಾಗಷ್ಟೆ ಎದ್ದು ತೆವಳುವ ಕೆಂಪು ದೇವರ ಹುಳ, ಒದ್ದೆ ಒದ್ದೆ ಗಾಳಿ - ಎಲ್ಲವೂ ಹಸಿರು ಕಾಣದ, ಕಡಲತೀರದ ಮಳೆಯ ಸವಿಯರಿಯದ ಪ್ರಿಯಾಗೆ ಹೊಸದು. ಅವಳು ಅನಿರ್ವಚನೀಯ ಭಾವದ ಭಾರದಿಂದ ಕಂಗೆಟ್ಟರೆ, ನಾನು ಧನ್ಯತಾಭಾವದಿಂದ ಬೀಗಿದೆ.

ನನ್ನೊಡನೆ ಮನೆಯೊಳಗೆ ಕಾಲಿಟ್ಟ ಪ್ರಿಯಾಳನ್ನು ಅಮ್ಮ – ಅಪ್ಪ ಸ್ವಾಗತಿಸಿದರು. ಅಪ್ಪ ಅಷ್ಟಾಗಿ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲವಾಗಿ ಆರಾಮಾಗಿ ಪ್ರಿಯಾ ಜತೆ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಾತಾಡಿದರು. (ಅಮ್ಮ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವಾಗಲೆಲ್ಲ ಅಪ್ಪ ತಾವು ಮಡಪ್ಪಾಡಿಯಲ್ಲಿದ್ದಾಗ ದಿನಾ ಮುಸಲ್ಮಾನ ಅಡಿಗೆ ಭಟ್ಟನ ಕೈರುಚಿ ತಿನ್ನುತ್ತಿದ್ದಿದ್ದು, ಆಮೂಲಕ ತನಗೂ ಜಾತಿಯಿಲ್ಲದಾಗಿರುವುದು ಹೇಳಿ ಅಮ್ಮನಿಗೆ ರೇಗಿಸುತ್ತಾರೆ)

ಅಮ್ಮ ಒಳಗೊಳಗೆಯೇ ಗೊಣಗಿಕೊಂಡಳು, 'ಯಾವ ಜಾತಿಯೋ ಏನೋ, ನಾಳೆ ಅಶುದ್ಧ-ಗಿಶುದ್ಧ ಆಗಿ ನಾಗ ಬಂದಮೇಲೆ ಗೊಂತಕ್ಕು... ಆರಿಂಗೆಂತ, ಅನುಭವಿಸೂದು ಇಲ್ಲಿಪ್ಪೋರಲ್ದಾ...' ಪ್ರಿಯಾ ಅವರೇನು ಹೇಳುತ್ತಿದ್ದಾರೆಂದು ಕೇಳಿದಳು, ನಾನು ಸಾಕು ಇನ್ನು ಸುತ್ತಾಡಬೇಡ, ಅವಳಿಗೆ ಸುಸ್ತಾಗಿರುತ್ತದೆ, ರೆಸ್ಟ್ ತೆಗೆದುಕೊಳ್ಳಲು ಬಿಡು ಅನ್ನುತ್ತಿದ್ದಾರೆ ಅಂದೆ. ಅವಳು ನನಗೇನು ಸುಸ್ತಾಗಿಲ್ಲ ಆಂಟೀ ಅಂತ ಅಮ್ಮನಿಗೆ ಇಂಗ್ಲಿಷಿನಲ್ಲಿ ಹೇಳಿ ನಕ್ಕಳು. ಇಂಗ್ಲಿಷ್ ಅರ್ಥವಾಗದಿದ್ದರೂ ಅಮ್ಮ ನಗಲೇ ಬೇಕಾಯಿತು.

ಪ್ರಿಯಾ ನನ್ನೊಡನೆ ಮನೆಯಿಡೀ ಸುತ್ತಾಡಿದಳು. ಅಟ್ಟದಲ್ಲಿ ಕಟ್ಟಿಟ್ಟಿದ್ದ ನನ್ನಜ್ಜ ಕಾಸರಗೋಡು ಹೋರಾಟಕಾಲದಲ್ಲಿ ಉಪಯೋಗಿಸುತ್ತಿದ್ದ ಮೈಕು, ಹಳೆಯ ಪುಸ್ತಕಗಳನ್ನಿಟ್ಟ ಮಸಿಹಿಡಿದ ಬೆತ್ತದ ಪೆಟ್ಟಿಗೆಯಿಂದ ಹಿಡಿದು ಅನೇಕಾನೇಕ ವಸ್ತುಗಳನ್ನು ತೋರಿಸಿದೆ. ಮಣ್ಣಿನಿಂದಲೇ ಕಟ್ಟಿದ ಮನೆಯ ಎರಡಂತಸ್ತುಗಳನ್ನು ಕಂಡು ಜಗತ್ತಿನ ಯಾವುದೋ ಅದ್ಭುತ ವಾಸ್ತುವನ್ನು ನೋಡಿದಂತೆ ರೋಮಾಂಚನಗೊಂಡಳು ಆಕೆ. (ಈಗ ಗೊತ್ತಾಗಿದೆ ನನಗೆ, ರಾಯಲಸೀಮೆಯಲ್ಲಿ ಆಕೆ ಹುಟ್ಟಿದ್ದು ಮಾತ್ರ, ಅಲ್ಲಿಯ ಬದುಕು ಆಕೆಗೆ ನಿಜವಾಗಿ ಗೊತ್ತಿರಲಿಲ್ಲ ಅಂತ. ಯಾಕೆಂದರೆ, ಆಂಧ್ರದಲ್ಲಿ ಮಣ್ಣಿನಲ್ಲಿಯೇ ಕಟ್ಟಿದ ಮನೆಗಳು ಅತಿಸಾಮಾನ್ಯ.)

ಅದೇನು ಇದೇನು ಅನ್ನುತ್ತ ಸಾವಿರ ಪ್ರಶ್ನೆಗಳೆಸೆಯವ ಪ್ರಿಯಾಳ ಕುತೂಹಲವನ್ನು ಸಮರ್ಪಕವಾದ ಉತ್ತರಗಳಿಂದ ತಣಿಸುತ್ತಿದ್ದೆ ನಾನು. ಎಲ್ಲ ಕಡೆ ಸುತ್ತಾಡಿ ಕೊನೆಗೆ ದೇವರಮನೆಗೆ ಬಂದೆವು. ದೇವರ ಮಂಟಪದೊಳಗೆ ಸಾಲಿಗ್ರಾಮ ಮತ್ತಿತರ ದೇವರುಗಳನ್ನು ಸಣ್ಣ ತಾಮ್ರದ ತೆರೆದ ಪೆಟ್ಟಿಗೆಯೊಳಗೆ ಹಾಕಿ ಇಟ್ಟಿರುತ್ತಾರೆ. ಕಟೀಲು ದುರ್ಗಾಪರಮೇಶ್ವರಿ, ಪಂಚಲಿಂಗೇಶ್ವರ, ಮಹಾಲಿಂಗೇಶ್ವರ ಇತ್ಯಾದಿ ದೇವರ ಫೋಟೋಗಳನ್ನೂ ಕಟ್ಟುಹಾಕಿ ಮಂಟಪದೊಳಗಿಟ್ಟಿದ್ದಾರೆ. ಇದರ ವೈಭವವನ್ನು ಪ್ರಿಯಾ ನೋಡುತ್ತಿದ್ದರೆ, ಅಮ್ಮ ಅಡಿಗೆಗೆ ಸಹಾಯಕ್ಕೆಂದು ಕರೆದಳು, ನಾನು ಈಗ ಬಂದೆ ಎಂದು ಪ್ರಿಯಾಗೆ ಹೇಳಿ ಅಡಿಗೆಮನೆಗೆ ಹೋದೆ.


ಅಮ್ಮನಿಗೆ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿ ಆರೇಳು ನಿಮಿಷಗಳಲ್ಲಿ ವಾಪಸ್ ಬಂದಾಗ ನಾನು ಕಂಡಿದ್ದೇನು... ಪೆಟ್ಟಿಗೆಯೊಳಗಿನ ದೇವರು ಪ್ರಿಯಾಳ ಕೈಯಲ್ಲಿತ್ತು. ದೇವರನ್ನಲಂಕರಿಸಿದ್ದ ರುದ್ರಾಕ್ಷಿ ಸರವನ್ನು ತನ್ನ ಕುತ್ತಿಗೆಗೆ ಧರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು ಪ್ರಿಯಾ.

ನನಗೆ ಮನಸಿನ ಅದ್ಯಾವುದೋ ಮೂಲೆಯಲ್ಲಿ ವಿಚಿತ್ರ ಸಂಕಟ ಹುಟ್ಟಿಕೊಂಡಂತೆ ಅನಿಸಿತು. ಯಾಕೆ, ಏನು - ಒಂದೂ ಗೊತ್ತಾಗಲಿಲ್ಲ. ನಾನು ಆ ಮನೆಯಲ್ಲಿ ಬದುಕಿದ 20 ವರ್ಷಗಳಲ್ಲಿ ಇಲ್ಲಿಯವರೆಗೆ ನಾನೇ ನಮ್ಮನೆ ದೇವರನ್ನು, ರುದ್ರಾಕ್ಷಿಯನ್ನು - ಯಾವುದನ್ನೂ ಮುಟ್ಟಿರಲಿಲ್ಲ. ನನಗೆ ಅವುಗಳನ್ನು ಮುಟ್ಟಲು ಅವಕಾಶಗಳಿತ್ತು, ಆದರೆ ಬುದ್ಧಿಪೂರ್ವಕವಾಗಿಯೇ ಮುಟ್ಟಿರಲಿಲ್ಲ. ಅದಕ್ಕಾಗಿ ಅವಳು ಅದನ್ನು ಮುಟ್ಟಿದ್ದು ಅಸಹನೀಯವಾಯಿತೆ...? ಇಂದಿಗೂ ಗೊತ್ತಿಲ್ಲ ನನಗೆ.

ಊಟಕ್ಕೆ ಕರೆದೆ ಅವಳಿಗೆ. ಎಲ್ಲ ದೇವರನ್ನೂ ಪೆಟ್ಟಿಗೆಯೊಳಗಿಡುವ ಬದಲು ಮಂಟಪದೊಳಗೆ ಅವಳು ಇಟ್ಟು ಬಂದದ್ದು ನನ್ನ ಅಸಹನೆಯ ಕಿಡಿಗೆ ಗಾಳಿಯೂದಿತು.

ಊಟ ಮಾಡುವಾಗ ನನ್ನ-ಅವಳ ನಡುವಿನ ಅಂತರ ನಿಚ್ಚಳವಾಗುತ್ತ ಹೋಯಿತು. ನೀಟಾಗಿ, ಕ್ರಮಪ್ರಕಾರವಾಗಿ ಬಡಿಸಿಕೊಂಡು ಊಟಮಾಡುವ ನಾನು. ಮೊದಲು ಕಂಡಿದ್ದನ್ನು, ಕುತೂಹಲ ಹುಟ್ಟಿಸಿದ್ದನ್ನು ಮೊದಲು ತಿನ್ನುವ ಅವಳು. ನಿಯಮಗಳು ಗೊತ್ತಿದ್ದೂ ಮುರಿಯುವ ನಾನು, ಗೊತ್ತಿಲ್ಲದೆ ಮುರಿಯುವ ಅವಳು. ನನಗೆ ಅವಳು-ನಾನು ಒಂದೇ ಎನ್ನುವ ಭ್ರಮೆಯಿರಲಿಲ್ಲವಾದರೂ, ನನಗೆ ಇಷ್ಟವಾಗದ ರೀತಿಯ ಭಿನ್ನತೆಗಳು ನನ್ನ-ಅವಳ ನಡುವೆ ಇರಬಹುದೆಂಬ, ಇದೆಯೆಂಬ ಸತ್ಯ ನನ್ನ ಅನುಭವದ ಕಡಲಿಗೆ ಅವಳು ಬಂದಾಗ ಹೊಸದಾಗಿ ಹುಟ್ಟಿಕೊಂಡಿತ್ತು.

ಹಾಸಿಗೆ ಹಾಕಿ ಮಲಗಿಕೊಂಡೆವು. ಅವಳು ಮಾತಿಗೆಳೆಯಲು ನೋಡಿದರೆ, ನನಗೆ ಮಾತು ಬೇಕಿರಲಿಲ್ಲ. 'ಸುಸ್ತು, ಮಲ್ಕೋ, ನಾಳೆ ಮಾತಾಡೋಣ' ಅಂದೆ. ಅವಳಿಗೆ ಸುಸ್ತಾಗಿತ್ತು. ಬೇಗನೆ ನಿದ್ದೆ ಹೋದಳು... ನಾನು ನನ್ನ ಅಂತಃಸತ್ವದ ಜತೆ ಮಾತಾಡತೊಡಗಿದೆ. ಅವಳಿಗೆ ನಾನು ನಂಬಿಕೆಗರ್ಹ ಗೆಳತಿಯೆಂದು ಅನಿಸುವ ಹಾಗೆ ನಾನು ನಡೆದುಕೊಂಡಿದ್ದು ನನಗೆ ನಾನು ಮಾಡಿಕೊಂಡ ಮೋಸವಾಗಿ ಮಾರ್ಪಟ್ಟಿತ್ತು. ಇಂದಿನವರೆಗೆ ಚೆನ್ನಾಗಿದ್ದ ಬಾಂಧವ್ಯಕ್ಕೆ ನನ್ನ ಮನೆಯ ಆವರಣದಲ್ಲಿ ಹುಳಿ ಬೆರೆತಿತ್ತು. ಹೇಗೆ... ಯಾಕೆ... ಇದು ನಾನು ಮಾಡುತ್ತಿರುವ ತಪ್ಪಲ್ಲವೆ... ಅಥವಾ ಇದು ಕ್ಷಣಿಕವಾಗಿ ನನ್ನ ಮನದಲ್ಲಿ ಹುಟ್ಟಿಕೊಂಡ ದೆವ್ವವಿರಬಹುದೆ...ನಾಳೆ ಎಲ್ಲ ಸರಿಯಾದೀತೆ... ಸರಿಯಾಗಬೇಕಲ್ವಾ... ಕೊರೆವ ಸಾವಿರ ಪ್ರಶ್ನೆಗಳ, ಹೊಳೆಯುವ ಸಾವಿರ ಉತ್ತರಗಳ ನಡುವೆ ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

***************

'ಉಠೋ ಯಾರ್, enough sleeping...' ಪ್ರಿಯಾ ಪ್ರೀತಿಯಲ್ಲಿಯೇ ಗದರುತ್ತ ಎಬ್ಬಿಸಿದಾಗ ನಿದ್ದೆಯಿನ್ನೂ ಸಿಹಿಸಿಹಿಯಾಗಿತ್ತು. ಸಮಯ ಇನ್ನೂ ಬೆಳಿಗ್ಗೆ 5.45 ಅಷ್ಟೇ. ಅಯ್ಯೋ ಇಷ್ಟು ಬೇಗ ಎದ್ದೇನು ಮಾಡೋಣ ಅಂತ ಮತ್ತೆ ಮಲಗಹೊರಟೆ. 'U had told me that we will go for a morning walk...' ನೆನಪಿಸಿದಳು. ಹೌದಲ್ಲಾ, ನಾನೇ ಹೇಳಿದ್ದೆ ಅವಳಿಗೆ. ಸೋಮಾರಿಯಂತೆ ಬಿದ್ದುಕೊಳ್ಳುವ ಅವಕಾಶಕ್ಕೆ ಕೈಯಾರ ಕಲ್ಲುಹಾಕಿಕೊಂಡಿದ್ದಕ್ಕೆ ನನಗೆ ನಾನೇ ಬೈದುಕೊಳ್ಳುತ್ತ ಎದ್ದೆ. ಮಳೆಯೂ ಕೈಕೊಟ್ಟಿದ್ದಳು, ಅವಳಾದರೂ ಬಂದಿದ್ದರೆ ಹೊರಗೆ ಹೋಗುವ ಮಾತೇ ಇರಲಿಲ್ಲ.

ಅಮ್ಮ ಕೊಟ್ಟ ಚಹಾ ಉರ್ಪಿ, ಪ್ರಿಯಾಳ ಕ್ಯಾಮರಾ ಜತೆಯಲ್ಲಿ ತೆಗೆದುಕೊಂಡು ನಮ್ಮನೆಯ ಹಿಂದಿನ ಉಕ್ಕುಡ ಗುಡ್ಡೆಗೆ ವಾಕಿಂಗ್ ಹೊರಟೆವು. ಮನೆಯಿಂದ ಮೇಲೆ ಸ್ವಲ್ಪ ಕಡಿದಾದ ದಾರಿಯಲ್ಲಿ ಮೇಲೆ ಹತ್ತುತ್ತಿದ್ದಂತೆಯೇ ಕೆಳಗಿದ್ದ ನಮ್ಮ ಪುಟ್ಟ ಊರು ಮಳೆಹೊಗೆಯಿಂದ ಆವೃತವಾಗಿತ್ತು. ಮನಮೋಹಕ ದೃಶ್ಯವಿಲಾಸ ನಮ್ಮಿಬ್ಬರನ್ನೂ ಮುದಗೊಳಿಸಿತು.

ಅರ್ಧದಾರಿ ಕ್ರಮಿಸಿದಾಗ ಪಂಜಿಕಲ್ಲು ಸಿಗುತ್ತದೆ. ಆಮೇಲೆ ಉಕ್ಕುಡ ಗುಡ್ಡೆಗೆ ಕ್ರಮಿಸುವ ದಾರಿ ಇನ್ನಷ್ಟು ಕಡಿದಾಗಿದೆ. ನಾವು ಪಂಜಿಕಲ್ಲಿನಲ್ಲಿರುವಾಗ ಸೂರ್ಯ ಅವಾಗಷ್ಟೇ ಮೇಲೆಬರುತ್ತಿದ್ದ. ಹಂಗೇ ಒಂದಷ್ಟು ಫೋಟೋಗಳು ಕ್ಲಿಕ್ಕಿಸಿದ್ದಾಯಿತು. ನಮ್ಮ ಗುರಿ ಉಕ್ಕುಡಗುಡ್ಡೆಯ ತುದಿಯಾಗಿದ್ದು, ಅದೂ ಇದೂ ಮಾತಾಡುತ್ತ ಮುಂದೆ ಸಾಗಿದೆವು.

ಹೀಗೆ ಐದು ನಿಮಿಷಗಳು ಕಳೆದಿರಬಹುದು. ಪುಟ್ಟ ಕಣಿವೆಯೊಂದು ಎದುರಾಯಿತು. ಚಿಕ್ಕಂದಿನಿಂದಲೂ ಸಾವಿರ ಸಲ ಈ ಗುಡ್ಡ ಹತ್ತಿದ್ದೆ ನಾನು. ಸಲೀಸಾಗಿ ಹಾರಿ ದಾಟಿಹೋದೆ. ಪ್ರಿಯಾಗೆ ದಾಟಲಾಗಲಿಲ್ಲ. ಹಾರುವಾಗ ಬಿದ್ದರೆ ಎಂದು ಹೆದರಿದಳು.

ಅಷ್ಟೆ. ಮತ್ತೆ ಹೆಡೆಯೆತ್ತಿತ್ತು ಮನದೊಳಡಗಿದ್ದ ಮರೆತ ಹಾವು... ಕಾಲೇಜಿನಲ್ಲಿ ಓದುತ್ತಿದ್ದಾಗ ತಾನು ಯೂನಿವರ್ಸಿಟಿ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದೆ ಅನ್ನುತ್ತಿದ್ದಳು. ನಿಜಜೀವನದಲ್ಲಿ ಅದು ಉಪಯೋಗಕ್ಕೆ ಬರಲಿಲ್ಲವೆ...? ತನ್ನ ಬಗ್ಗೆ ತಾನು ಹೇಳಿಕೊಳ್ಳುವಾಗ ಅತಿಶಯೋಕ್ತಿ ನುಸುಳಿತ್ತೆ... ಅಥವಾ ಅದು ನನ್ನನ್ನು ಇಂಪ್ರೆಸ್ ಮಾಡುತ್ತದೆಂದುಕೊಂಡು ಸುಳ್ಳು ಹೇಳಿದಳೆ... ಅಥವಾ ಈ ಕ್ಷಣದ ಭಯವೆ... ಇವೆಲ್ಲದರಲ್ಲಿ ಯಾವುದೇ ಆದರೂ ಅವು ನನಗಿಷ್ಟವಾದವುಗಳಲ್ಲ... ನನ್ನ ಒಡನಾಡಿಗಳಲ್ಲಿ ನಾನು ಬಯಸುವ ಗುಣಗಳಲ್ಲ.

*******************

ಆಮೇಲೆ ಆದಿನ, ಮರುದಿನ ಇಡೀ ಜತೆಗಿದ್ದೆವು. ನನ್ನೊಳಗಿನ ಬದಲಾವಣೆ ಅವಳಿಗೆ ಗೊತ್ತಾಗಲಿಲ್ಲ. ಬೇರೇನೋ ಬೇಸರದಲ್ಲಿರಬೇಕು ನಾನು ಎಂದುಕೊಂಡಳು, ನನ್ನನ್ನು ತಪ್ಪುತಿಳಿದುಕೊಳ್ಳುವಂಥವಳಲ್ಲ ಪಾಪದ ಹುಡುಗಿ, ಸರಿಯಾಗಿ ತಿಳಿದುಕೊಳ್ಳುವಲ್ಲಿ ವಿಫಲಳಾಗಿದ್ದಳು. ನಾನು ನನ್ನೊಳಗೆ ಹೆಡೆಯೆತ್ತಿದ ಅಸಮಾಧಾನವನ್ನು, ನಿರಾಸೆಯನ್ನು ಕೊಲ್ಲಲು ಹೆಣಗುತ್ತಿದ್ದೆ.

ಕೇನೆಹೂವು ಹುಡುಕಿ ತೋರಿಸಿದರೆ ಮುಖ ಸಿಂಡರಿಸಿಕೊಂಡಳು. ಇಷ್ಟು ಚಂದದ ಹೂವಿಗೆ ಇಷ್ಟು ಕೊಳಕು ವಾಸನೆ ಯಾಕಿರಬಹುದು ಅಂತ ಪ್ರಶ್ನಿಸಿದಳು. ಬಹುಶಃ ಪ್ರಕೃತಿ ಒದಗಿಸಿದ ಪ್ರೊಟೆಕ್ಷನ್ ಮೆಕ್ಯಾನಿಸಂ ಇರಬಹುದೆಂದು ನಾನಂದರೆ, ಇರಬಹುದು ಎಂದು ಒಪ್ಪಿಕೊಂಡಳು. ನನಗೆ ಇರಲಿಕ್ಕಿಲ್ಲ ಎಂದು ವಾದಿಸುವವರು ಬೇಕಿತ್ತು. ಹೀಗೂ ಇರಬಹುದು ಅಂತ ಇನ್ನೊಂದು ದೃಷ್ಟಿಕೋನದತ್ತ ನನ್ನ ಗಮನಸೆಳೆಯುವವರು ಬೇಕಿತ್ತು. ಇವೆಲ್ಲ ಈ ಹಿಂದೆ ಯಾಕೆ ನನಗೆ ಕಾಣಲಿಲ್ಲ...

ಗುಡ್ಡೆ ಗುಡ್ಡೆ ಅಲೆದಾಡುತ್ತಿದ್ದಾಗ ನಾಟಿ ಸಾರಾಯಿ ತಯಾರು ಮಾಡಲಿಕ್ಕೆಂದು ಮಣ್ಣಿನ ಮಡಕೆಯಲ್ಲಿಟ್ಟು ಯಾವುದೋ ಕಣಿಯಲ್ಲಿ ಅಡಗಿಸಿಟ್ಟಿದ್ದ ಗೋಂಕು (ಗೇರುಹಣ್ಣಿನ ರಸ) ನನ್ನ ಕಣ್ಣಿಗೆ ಬಿತ್ತು. ಅದೇನೆಂದು ಅವಳಿಗೆ ವಿವರಿಸಿದೆ. ಅದೇನೋ ಉದ್ವೇಗ ಅವಳಲ್ಲಿ ಕಂಡಿತು. ಅವಳ ಹಿರಿಯರೂ ಇದನ್ನೇ ಮಾಡುತ್ತಿದ್ದರಂತೆ, ಅದರ ವೀರಕಥೆ ನನಗೆ ಹೇಳಿದಳು.

ಅವಳು ಹೇಳಿ ಮುಗಿಸುವುದನ್ನೇ ಕಾದಿದ್ದೆ. ದಲಿತರು ಬೇರೆಯವರಿಂದ ಸಮಾಜದಲ್ಲಿ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಕುಡಿತ ಎನ್ನುವುದು ನನ್ನ ಬಲವಾದ ಅಭಿಪ್ರಾಯವಾಗಿದ್ದು, ಅದನ್ನು ಅವಳಿಗೆ ಹೇಳಿದೆ. ನಾಟಿ ಸಾರಾಯಿ ಮಾಡುವುದು ಅತಿದೊಡ್ಡ ಕಲೆಯೇ ಇರಬಹುದು, ನಿನ್ನ ಅಪ್ಪನಿಗೆ ಅದರಿಂದ ದುಡ್ಡು ಬಿಟ್ಟು ಬೇರೇನಾದರೂ ಉಪಯೋಗ ಆಯ್ತಾ ಅಂತ ಕೇಳಿದೆ. ಉತ್ತರವಿರಲಿಲ್ಲ ಆಕೆಯಲ್ಲಿ. ನನ್ನ ಪ್ರಶ್ನೆ ಅವಳಿಗೆ ಯೋಚನೆಗೆ ಹಚ್ಚಿತ್ತು.

ಅವಳಾಸೆಯಂತೆ ದಲಿತರು ವಾಸವಾಗಿದ್ದ ನಮ್ಮ ಮನೆಯೆದುರಿನ ಗುಡ್ಡದ ಕಡೆಗೆ ಹೋದೆವು. ಗುಡ್ಡದ ನಡುವೆ ನಾಕೈದು ದಲಿತರ ಮನೆಗಳಿದ್ದವು ಅಲ್ಲಿ. ಕೇರಳ ಸರಕಾರ ಕಟ್ಟಿಸಿಕೊಟ್ಟ ಮನೆಗಳು. ಅವುಗಳಲ್ಲಿ ಎರಡು ಮನೆಗಳು ಯಾವ ನರಪ್ರಾಣಿಯೂ ಇಲ್ಲದೆ, ಹಂಚುಗಳು ಕಿತ್ತುಹೋಗಿ ಕಾಲದ ಜತೆ ಇವತ್ತೋ ನಾಳೆಯೋ ಅಂತ ಸೆಣಸುತ್ತಿದ್ದವು. ಐತ ವಿನಯವೇ ಜೀವವಾಗಿ 'ದಾನೆ ದೆತ್ತೀ' ಅನ್ನುತ್ತ ನಮಗೆ ಸ್ವಾಗತಿಸಿ ಮಾತಾಡಿಸಿದ. ಅವನಿಗೆ ಆ ಮನೆಗಳಲ್ಲಿ ಯಾರೂ ಇಲ್ಲವಾ, ಯಾಕೆ ಹಾಗಿವೆ ಅಂತ ಕೇಳಿದೆ.

ಅವನು ಹೇಳಿದ, ಮನೆಯಲ್ಲಿ ಯಾರಾದರೂ ಸತ್ತರೆ ಆ ಮನೆಯನ್ನು ಬಿಟ್ಟುಹೋಗುವುದು ಅವರ ಸಂಪ್ರದಾಯವಂತೆ. ಹಾಗೇ ಯಾರೋ ಸತ್ತಾಗ ಈ ಎರಡು ಮನೆಗಳು ಖಾಲಿಯಾಗಿವೆ. ನಾಳೆ ಐತ ಸತ್ತರೆ ತುಕ್ರು ಕೂಡ ತನ್ನ ಮನೆ ಖಾಲಿ ಮಾಡುತ್ತಾಳೆ. ನಾನು ಕೇಳಿದೆ, ಸರಕಾರ ನಿಮಗೆ ಮನೆ ಮಾಡಿಕೊಟ್ಟಿದ್ದೇ ದೊಡ್ಡದು, ಅಂಥದರಲ್ಲಿ ನೀವು ಹೀಗೆ ಮಾಡಿದರೆ ಹೇಗೆ ಅಂತ. ನಾವೇನು ಸರಕಾರಕ್ಕೆ ಹೇಳಿದ್ದೇವಾ ದೆತ್ತೀ ಮನೆ ಕಟ್ಟಿಕೊಡಿ ಅಂತ.. ಅವರಾಗವರೇ ಮಾಡಿಕೊಟ್ಟರು, ನಾವೇನು ಮಾಡೋಣ ಅಂತ ಬೊಚ್ಚುಬಾಯಿ ಬಿಟ್ಟು ನಕ್ಕ ಐತ. ಅವನ ಮುಗ್ಧತನಕ್ಕೆ, ನೇರಮಾತುಗಳಿಗೆ ಯಾವಾಗಲೂ ಸೋಲುತ್ತೇನೆ ನಾನು, ಮಾತುಮರೆಯುತ್ತೇನೆ. ನಾನು ಗೌರವಿಸುವ ಪ್ರೀತಿಯ ಹಿರಿಯ ಜೀವ ಆತ. ನಮ್ಮಜ್ಜನ ಹಾಗೆ.

ಪ್ರಿಯಾಗೆ ದಲಿತರು ಮನೆಖಾಲಿಮಾಡುವ ವಿಷಯ ವಿವರಿಸಿದರೆ, ಮಂಕಾದಳು. ಒಬ್ಬ ವ್ಯಕ್ತಿ ಶೋಷಣೆಗೊಳಗಾದರೆ, ಅದರ ಕಾರಣ ಎಲ್ಲೋ ಇರುವುದಿಲ್ಲ, ಅವನಲ್ಲೇ ಇರುತ್ತದೆ, ಅದನ್ನು ಸರಿಪಡಿಸಿಕೊಳ್ಳುವವರೆಗೆ ಶೋಷಣೆ ಮುಂದುವರಿಯುತ್ತದೆ ಅನ್ನುವುದು ನನ್ನ ವಾದ. ಅವಳು ಇದನ್ನೊಪ್ಪಲಿಲ್ಲ. ಕೆಲವರಿಗೆ ಶೋಷಣೆಗೊಳಗಾಗಿದ್ದೇವೆಂದು ಗೊತ್ತೇ ಇರದಷ್ಟು, ಕಾರಣಗಳು ಗೊತ್ತಿರದಷ್ಟು ಮುಗ್ಧರಿರುತ್ತಾರೆ ಅಂದಳು. ಹಾಗಿದ್ದಾಗ ಅವರ ಜಗತ್ತಿನಲ್ಲಿ ಅವರು ಚೆನ್ನಾಗಿರುತ್ತಾರೆ, ಸಂತೋಷವಾಗಿರುತ್ತಾರೆ, ಐತನ ಹಾಗೆ. ಅವರ ಮನಸ್ಸಲ್ಲಿ ದೊಡ್ಡ ದೊಡ್ಡ ಮಾತಾಡಿ ವೈರಸ್ ಯಾಕೆ ಬಿಡಬೇಕು ನಾವು, ನಮ್ಮ ಕೈಲಾದ ಸಹಾಯ ಮಾಡೋಣ, ಅವರಿಗೆ ಬೇಕಾದ್ದನ್ನು ಕೊಡದೇ, ಬೇಡದ್ದನ್ನು ಕೊಟ್ಟು, ದೊಡ್ಡ ದಾನಿಗಳಂತೆ ಪೋಸ್ ಯಾರಾದರೂ ಯಾಕೆ ಕೊಡಬೇಕು ಅಂತ ನಾನು. ಅವರಿಗೇನು ಬೇಕು ಏನು ಬೇಡ ಎಂಬುದು ಅವರಿಗೇ ಗೊತ್ತಿಲ್ಲವಲ್ಲ ಅಂತ ಅವಳು. ಹಾಗಂತ ನೀನಂದುಕೊಂಡಿರ್ತೀಯ, ಅವರು ಅಂದುಕೊಂಡಿರಬೇಕಿಲ್ಲ ಅಂತ ನಾನು.

ದಲಿತ ಚಳವಳಿಯ ಹೆಸರಲ್ಲಿ ರಾಜಕೀಯ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿವೆ ಅಂತ ನಾನು. ಆರ್ಥಿಕವಾಗಿ ದಲಿತರೇ ಅತ್ಯಂತ ಹಿಂದುಳಿದವರು, ಅದಕ್ಕೆ ಚಳವಳಿ ಅಗತ್ಯ ಅಂತ ಅವಳು. ಬೇರೆಯವರ ದುಡ್ಡು ನುಂಗಿ ಸೊಕ್ಕುತ್ತಿರುವ ಶ್ರೀಮಂತ ಲಂಚಕೋರ 'ದಲಿತ'ರನ್ನೂ, ಅರೆಹೊಟ್ಟೆ ಊಟಕ್ಕೆ ಗತಿಯಿಲ್ಲದೆ ವೈದೀಕಗಳು ಮಾಡಿ, ಬೇರೆಯವರ ಮನೆಯಲ್ಲಿ ಕೆಲಸಮಾಡಿ ಬದುಕುವ ಬ್ರಾಹ್ಮಣರನ್ನೂ ತೋರಿಸಲೆ ನಿನಗೆ, ಅವರೂ ಚಳುವಳಿ ಅಂತ ಹೊರಟರೆ ಚೆನ್ನಾಗಿರುತ್ತದಲ್ಲವೆ ಅಂತ ನಾನು.

ವಾದದಲ್ಲಿ ವಿಜೃಂಭಿಸಿದ್ದು ನಮ್ಮ ನಡುವಿನ ವ್ಯತ್ಯಾಸಗಳು. ನಂಬಿಕೆಯ ಆಧಾರ ಬೇಕಿಲ್ಲದ / ಬಯಸದ ಬಾಂಧವ್ಯಗಳಲ್ಲಿ ನಂಬಿಕೆಯಿಟ್ಟ ನಾನು. ತಾನು ಕಾಣುತ್ತಿರುವ ವ್ಯಕ್ತಿಯೇ ಸರ್ವಸ್ವವೆಂದು ತನ್ನನ್ನು ಪೂರ್ತಿಯಾಗಿ ಸಂಬಂಧಕ್ಕೆ ಒಪ್ಪಿಸಿಕೊಳ್ಳುವ ಅವಳು. ಸಂಬಂಧಕ್ಕೂ ಬಾಂಧವ್ಯಕ್ಕೂ ಸ್ಪಷ್ಟ ಗಡಿಗಳನ್ನಿಟ್ಟು ಉತ್ತಮ ಬಾಂಧವ್ಯಗಳಿಗಾಗಿ ಆಶಿಸುವ ನಾನು, ಅವೆರಡರ ನಡುವೆ ವ್ಯತ್ಯಾಸವೇ ಅರಿಯದ ಅವಳು. ಮುಗ್ಧೆಯಂತೆ ಕಂಡೂ ಮುಗ್ಧೆಯಲ್ಲದ ನಾನು. ಮುಗ್ಧೆಯಂತೆ ಕಾಣದೆಯೂ ಮುಗ್ಧೆಯಾದ ಅವಳು. ಮನಸಿಗನಿಸಿದ್ದು ತಕ್ಷಣ ಹೇಳುವ ನಾನು. ಏನೇನೋ ಅನಿಸಿಯೂ ಏನೂ ಹೇಳದೆ ಕೊರಗುವ ಅವಳು. ಮಾತಾಡುವ ಮೊದಲೇ ಯೋಚಿಸಿ ಮಾತಾಡುವ ನಾನು. ಏನೋ ಮಾತಾಡಿ ಅದು ತಪ್ಪೆಂದು ಮನವರಿಕೆಯಾದಾಗ ಕೊರಗುವ ಅವಳು.

ಹೀಗೇ ಕೊನೆಯಿಲ್ಲದೆ ಮುಂದುವರಿದ ವಾದಧಾರೆಯಲ್ಲಿ ನನಗಂತೂ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು. ಈ ಒಂದು ಸಂಬಂಧ ಶುರುವಾದಾಗ ಇದ್ದಂತಹ ನನ್ನನ್ನು ನಾನು ಕಳೆದುಕೊಂಡಿದ್ದೆ. ಅವಳಿಲ್ಲದ ರೀತಿಯಲ್ಲಿ ಅವಳನ್ನು ಅರ್ಥೈಸಿಕೊಂಡಿದ್ದೆ. ನಾನಿಲ್ಲದ ರೀತಿಯಲ್ಲಿ ಅವಳು ನನ್ನನ್ನು ಅರ್ಥೈಸಿಕೊಂಡಿದ್ದಳು. ಅಥವಾ ನಾವಿಬ್ಬರೂ ಪರಸ್ಪರರ ಬಗ್ಗೆ ಭ್ರಮೆಗಳಲ್ಲೇ ಬದುಕಿದ್ದೆವು. ವಿಚಾರಸಾಮ್ಯವಿಲ್ಲದ ಈ ಇಂಟೆಲೆಕ್ಚುವಲ್ ಸಂಬಂಧ ಈಗ ಬಾಂಧವ್ಯದ ವ್ಯಾಪ್ತಿಯಿಂದ ಕುಸಿದಿತ್ತು. ಮತ್ತೆ ಅದನ್ನು ಬೆಳೆಸಲು ಶಕ್ತವಾದ ಭಾವಸಾಮ್ಯ ಇನ್ನೂ ಹುಟ್ಟಿಯೇ ಇರಲಿಲ್ಲ.


ಆದಿತ್ಯವಾರ ಸಂಜೆ ಗಂಗೋತ್ರಿಗೆ ವಾಪಸ್ ಹೊರಟಾಗ ಪ್ರಿಯಾ ಕಣ್ಣುಗಳು ಹನಿಗೂಡಿದರೆ, ನನ್ನ ಮನಸು ವಿಚಿತ್ರ ಸಂಕಟದಿಂದ ತುಂಬಿತ್ತು. ಒಂದು ಕಡೆ ಅವಳ ಮುಗ್ಧತನಕ್ಕೆ ನಾನು ಸರಿಯಾದ ಗೆಳತಿಯಲ್ಲವೆನಿಸಿದರೆ, ಇನ್ನೊಂದು ಕಡೆ ನನ್ನ ಸಂಕೀರ್ಣ ಸಂವೇದನೆಗಳಿಗೆ ತಕ್ಕ ಗೆಳತಿ ಅವಳಲ್ಲವೆನಿಸುತ್ತಿತ್ತು. ಇಂಟಲೆಕ್ಚುವಲ್ ಅಲ್ಲದೇ ಇರುವ ಬೇರೆ ಯಾವುದೇ ರೀತಿಯ ಗೆಳೆತನ ನನಗೆ ಪ್ರಿಯಾಳಿಂದ ಬೇಕಿರಲಿಲ್ಲ. ಇಲ್ಲಿಯವರೆಗೆ ಅದು ಬೆಳೆದೂ ಇರಲಿಲ್ಲ. ಆಗಸ್ಟ್ ಕಾಂಪ್ಟೆಯ ಬಗ್ಗಾಗಲಿ, ಸಮಾಜಶಾಸ್ತ್ರ ಕಲಿಸುವ ಇತರ ವಿಚಾರಗಳ ಬಗ್ಗಾಗಲಿ ಪ್ರಿಯಾ ನನ್ನ ಜತೆಗೆ ಎಂದೂ ಹಂಚಿಕೊಂಡಿರಲಿಲ್ಲ. ನಾನು ನಾ ಕಲಿಯುತ್ತಿದ್ದ ಪತ್ರಿಕೋದ್ಯಮದ ಬಗ್ಗೆ ಅವಳಲ್ಲಿ ಹಂಚಿಕೊಂಡಷ್ಟು, ಅವಳು ಕಲಿಯುತ್ತಿದ್ದ ಸಮಾಜಶಾಸ್ತ್ರದ ಬಗ್ಗೆ ಅವಳಿಂದ ತಿಳಿದುಕೊಳ್ಳುವ ಅವಕಾಶ ಬಂದಿರಲಿಲ್ಲ. ಇದನ್ನೆಲ್ಲ ಅವಳ ಹತ್ತಿರ ಹೇಳಿದರೆ ಅವಳಿಗೆಷ್ಟು ನೋವಾಗುವುದು ಎಂಬುದೂ ನನಗೆ ಗೊತ್ತಿತ್ತು. ಏನೂ ಹೇಳದಿರುವುದು ಉತ್ತಮ ಅಂತಲೂ ಅನಿಸಿತು.

ನಾನು ಪ್ರಿಯಾ ಜತೆ ಮಾತಾಡುವುದು ಅಪರೂಪವಾಯಿತು. ಅವಳು ಪಾಪ, ಹುಡುಕಿಕೊಂಡು ಬಂದು ಹತ್ತಿರ ಕೂರುತ್ತಿದ್ದಳು. ಆದರೆ, ನಾನು ಕೆಲ ವಿಷಯಗಳನ್ನು ಎಂದಿಗೂ ಆಕೆಯೊಡನೆ ಮಾತಾಡಲಾರೆ ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ನಮ್ಮ ನಡುವೆ ವಿಷಯಗಳ ಕೊರತೆ ಕಾಡುತ್ತಿತ್ತು.

*****************

ಈಗ ಪ್ರಿಯಾ ಎಲ್ಲಿದ್ದಾಳೆ, ಏನು ಮಾಡುತ್ತಾಳೆ - ಒಂದೂ ಗೊತ್ತಿಲ್ಲ. ಈ ಕಥೆ ಕೇಳಿದರೆ ನೀನು ಖಂಡಿತಾ ನಗುವುದಿಲ್ಲವೆಂದು ಗೊತ್ತು ನನಗೆ. ಹಾಗಂತ, ಒಂದು SORRYಯಲ್ಲಿ ಎಲ್ಲ ಸರಿಹೋಗುತ್ತಿತ್ತಲ್ಲಾ, ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಂಡೆ ನಾನು ಅಂತ ನಿನಗೆ ಅನಿಸಿದರೆ, ಮತ್ತೆ SORRY, ನಿನಗರ್ಥವಾಗುವುದಿಲ್ಲ ಅದು ಅನ್ನಬೇಕಾಗುತ್ತದೆ ನಾನು.

ನನ್ನ 'ಇಂಟಲೆಕ್ಚುವಲ್' ಮಾತುಗಳು ಪ್ರಿಯಾಗೆ ನೋವುಕೊಟ್ಟಿದ್ದು ನಾನೆಂದೂ ಮರೆತಿಲ್ಲ. ಹಾಗೆಯೇ ಅವಳ ಮನಸಿಗನಿಸಿದ್ದು ಅವಳು ಮಾಡಿದಾಗ ನನಗೆ ಇಷ್ಟವಾಗದಿದ್ದದ್ದು ಕೂಡಾ ಮರೆತಿಲ್ಲ. ಜಾತಿ-ಭಾಷೆ-ದೇಶಗಳ ಎಲ್ಲೆ ಮೀರಿ ಬೆಳೆಯಲಿದ್ದ ಬಾಂಧವ್ಯ ಕಾರಣವೇ ಇಲ್ಲದೆ ಕುಲಗೆಟ್ಟಂತಿತ್ತು. ಆದರೆ ಬಲವಾದ ಕಾರಣವಿತ್ತು ಅಲ್ಲಿ.

ಈಗ ಈ ನೋವಿನ ಬಿಂದು ದಾಟಿ ಬಲುದೂರ ಬಂದಿದ್ದೇನೆ. ಜಗತ್ತು ತುಂಬ ವಿಶಾಲ ಮತ್ತು ಉದಾರ, ಹಾಗಾಗಿ ಎಲ್ಲಾ ರೀತಿಯ ಗೆಳೆಯ ಗೆಳತಿಯರ ದೊಡ್ಡ ನಿಧಿಯೇ ಇದೆ ನನ್ನ ಜತೆ. ಅವರ್ಯಾವ ಜಾತಿಯೋ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ಜಾತಿಯ ಬಗ್ಗೆ ಚರ್ಚೆಗಳು ಅಲ್ಲಿ ಬರುವುದೇ ಇಲ್ಲ. ಬಂದರೂ ನಾನದನ್ನು ಮುಂದುವರಿಸುವುದಿಲ್ಲ. ಮೊನ್ನೆ ಮೊನ್ನೆಯಷ್ಟೇ ಎಲ್ಲೋ ಓದಿದ ಮಾತು, 'There are good people doing good things and evil people doing bad things, but, for good people to do bad things, it takes Religion...' ನೂರಕ್ಕೆ ನೂರು ಸತ್ಯವೆಂದು ನನಗೆಂದೋ ಅರಿವಾಗಿದೆ.

ಬದುಕೇ ಹೀಗೆ ಗೆಳತಿ, ಯಾವುದೋ ಇನ್ಯಾವುದನ್ನೋ ನೆನಪಿಸುತ್ತದೆ. ನೀನು ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದು ಹೇಗೆ ಹಳೆಯ ಗಾಯವೊಂದನ್ನು ನೆನಪಿಸಿತು ನೋಡು. ಗಾಯ ನಿಜಕ್ಕೂ ಬಹಳ ಹಳೆಯದೇ, ಮಾಗಿದೆ, ಕಲೆ ಮಾತ್ರ ಸ್ವಲ್ಪ ಉಳಿದಿದೆ. ನಾನೂ ಆಗಿದ್ದ ಹಾಗೆ ಈಗಿಲ್ಲ. ಸಂಬಂಧವೆಂದರೆ ಬರಿಯ ಮಿದುಳಿಂದಲ್ಲ, ಹೃದಯವೂ ಇರುತ್ತದೆ, ಹಾಗೆಯೇ ಬರಿಯ ಹೃದಯದಿಂದಲ್ಲ, ಮಿದುಳೂ ಇರುತ್ತದೆ ಎನ್ನುವುದು ಸದಾ ನೆನಪಲ್ಲಿಟ್ಟಿದ್ದೇನೆ. ಆಡುವ ಮಾತಿಗಿಂತ ಬದುಕುವ ರೀತಿ ಹೆಚ್ಚು ಅರ್ಥಪೂರ್ಣವಾಗಿರಬೇಕೆಂದು ನನಗೆ ಪ್ರಿಯಾಳ ಜತೆಯ ಗೆಳೆತನ ಕಲಿಸಿಕೊಟ್ಟಿತು. ಅವಳು ಯಾವತ್ತೂ ನನ್ನ ಮನಸಲ್ಲಿ ಎಚ್ಚರಿಕೆಯ ಗಂಟೆಯಂತೆ, ನಾ ಕೊಂದ ಒಂದು ಹೂವಿನ ಹಾಗೆ ಬದುಕಿರುತ್ತಾಳೆ.

Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.

Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...