Showing posts with label ನಾ ನೋಡಿದಂತೆ.... Show all posts
Showing posts with label ನಾ ನೋಡಿದಂತೆ.... Show all posts

Sunday, March 29, 2009

ಥ್ರಿಲ್ ಬೇಕಾ? 13B ನೋಡಿ!

ತುಂಬಾ ದಿನದಿಂದ ನೋಡಬೇಕೆಂದುಕೊಂಡು ನೋಡಲಾಗಿರಲಿಲ್ಲ, ಆದರೆ ಇವತ್ತು 13B ಚಿತ್ರ ನೋಡಿಯೇ ಬಿಟ್ಟೆ. ಮೊದಲೇ ಪ್ಲಾನ್ ಮಾಡದಿದ್ದರೂ ಅಚಾನಕ್ಕಾಗಿ ಹೊರಟದ್ದಾಯ್ತು. ಎದ್ದೂ ಬಿದ್ದೂ ಓಡಿ ಹೋಗಿ ಟಿಕೆಟ್ ತಗೊಂಡು ಥಿಯೇಟರಲ್ಲಿ ಕೂತುಕೊಳ್ಳುವಾಗ ಆಗಲೇ ಮಾಧವನ್ ಮತ್ತು ಕುಟುಂಬ ನಂಬರ್ 13ರ ಹೊಸಾ ಮನೆಗೆ ಪ್ರವೇಶಿಸಿಯಾಗಿತ್ತು. ಇಂಟರ್-ಮಿಶನ್ ಬರುವಷ್ಟರಲ್ಲಿ ಇನ್ನೇನಾಗುತ್ತದೋ ಅಂತ ಉಸಿರು ಬಿಗಿಹಿಡಿದು ಕಾಯುವ ಹಂತಕ್ಕೆ ನಮ್ಮನ್ನು ಚಿತ್ರ ತಂದು ನಿಲ್ಲಿಸಿತ್ತು.

ಇಡಿಯ ಚಿತ್ರ ಎಷ್ಟು ಚೆನ್ನಾಗಿತ್ತೆಂದರೆ, ಚಿತ್ರ ಮುಗಿದಿದ್ದೇ ಗೊತ್ತಾಗಲಿಲ್ಲ. ನಾನು ಯಾವುದೇ ಹಾರರ್-ಗೆ ಸುಲಭಕ್ಕೆ ಹೆದರುವವಳಲ್ಲ, ಸ್ವಲ್ಪಮಟ್ಟಿಗೆ ಗಟ್ಟಿಮನಸ್ಸಿನವಳು ಅಂತ ಅಂದುಕೊಂಡಿದ್ದೆ. ಅಂತಹ ನನ್ನನ್ನು 4-5 ಸಾರಿ ಈಚಿತ್ರ ಬೆಚ್ಚಿಬೀಳಿಸಿತು... ಕೊನೆಗೆ ಪಕ್ಕದಲ್ಲಿದ್ದ ಅರ್ಪಣಾಳ ಕೈಹಿಡಿದುಕೊಂಡು ಕೂತು ಸಿನಿಮಾ ನೋಡಿದ್ದಾಯಿತು :-)

ಕಥೆ ವಿಭಿನ್ನವಾಗಿತ್ತು. ಅದೃಶ್ಯಶಕ್ತಿಗಳು ಇವೆಯೆಂಬುದರಲ್ಲಿ ನಮಗೆ ನಂಬಿಕೆಯಿಲ್ಲದಿದ್ದರೆ 13B ನಂಬಿಸಲು ಯತ್ನಿಸುವುದಂತೂ ನಿಜ. ಚಿತ್ರದೊಳಗಂತೂ ಯಾವುದೇ ಸಂಶಯವಿಲ್ಲದಂತೆ ಅದೃಶ್ಯಶಕ್ತಿಗಳ ಇರವನ್ನು ಚಿತ್ರಿಸಲಾಗಿದೆ. ಇದೇ ವಿಷಯದ ಮೇಲೆ ಈಹಿಂದೆಯೂ ಚಿತ್ರಗಳು ಬಂದಿವೆ, ಆದರೆ ಇದು ಅವ್ಯಾವುದನ್ನೂ ನೆನಪಿಸುವುದಿಲ್ಲ. ನಾ ನೋಡಿದ ಎಲ್ಲಾ ಹಾರರ್ ಚಿತ್ರಗಳಿಗಿಂತ ಇದು ವಿಭಿನ್ನ. ಹಾರರ್ / ಥ್ರಿಲ್ಲರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟು ಹಾರರ್ ಸೃಷ್ಟಿಸಲಾಗುತ್ತದೆ (ಉದಾಹರಣೆ - ಆಪ್ತಮಿತ್ರ, ವಾಸ್ತುಶಾಸ್ತ್ರ ಇತ್ಯಾದಿ). ಈ ಚಿತ್ರದ ಸಂಗೀತ ಹಾರರ್ ಸೃಷ್ಟಿಸುವುದರಲ್ಲಿ ಕೆಲವೆಡೆ ಸಫಲವಾದರೂ ಕೆಲವು ಕಡೆ ಸ್ಟೀರಿಯೋಟೈಪಿಕ್ ಅನಿಸಿ ಕಿರಿಕಿರಿಯಾಗುತ್ತಿತ್ತು. ಮಾಧವನ್ ಪೂಜಾಕೋಣೆಯಲ್ಲಿ ಮೊಳೆ ಹೊಡೆಯುವಾಗ ಧ್ವನಿ ಸುತ್ತಿಗೆಯಚಲನೆಯ ಜತೆ ಸಿಂಕ್ ಆಗದಿರುವುದು, ಒಂದೆರಡು ಶಾಟ್-ಗಳಲ್ಲಿ ತುಟಿ ಚಲನೆಗೂ ಮಾತಿಗೂ ಸಂಬಂಧವಿಲ್ಲದಿರುವುದು ಇತ್ಯಾದಿಗಳಿಂದಾಗಿ, ಧ್ವನಿವಿನ್ಯಾಸ ಕೂಡ ತನ್ನ ಉತ್ಕೃಷ್ಟತೆ ಕಳೆದುಕೊಂಡಿದೆ.

ಆದರೆ ಚಿತ್ರದ ವಿಶೇಷತೆಯೇನಪ್ಪಾ ಅಂದ್ರೆ, ಸಂಗೀತದ ಅಥವಾ ಸೌಂಡ್ ಇಫೆಕ್ಟ್-ಗಳ ಹೊರತಾಗಿಯೂ ಪದೇ ಪದೇ ಬರುವ ಲಿಫ್ಟ್-ನ ಶಾಟ್-ಗಳು, ಮಾಧವನ್ ಮುಖ, ಶಾಟ್ ಸಂಯೋಜನೆ - ಇಷ್ಟರಿಂದಲೇ ಚಿತ್ರ ಥ್ರಿಲ್ಲಿಂಗ್ ಅನಿಸುತ್ತದೆ, ಹಾರರ್ ಸೃಷ್ಟಿಸುತ್ತದೆ. ಮೊದಮೊದಲು ಕೆಲವೆಡೆ silhouette shots ಕಿರಿಕಿರಿ ಅನಿಸಿದರೂ, ಕ್ಯಾಮರಾ ವರ್ಕ್ ಚೆನ್ನಾಗಿತ್ತು. ಕಪ್ಪು-ಬಿಳುಪಿನಲ್ಲೇ ತೋರಿಸಿದ ಭಯಾನಕತೆ ಕೂಡ ಇಷ್ಟವಾಯ್ತು. ಕೆಲಕಡೆ ಚಿತ್ರ ಅದ್ಯಾಕೋ ಹಿಚ್-ಕಾಕ್-ನ ಸೈಕೋದ ಕೆಲ ಶಾಟ್-ಗಳನ್ನು ನೆನಪಿಸಿತು.

ಮೊದಲ ಭಾಗದಲ್ಲಿ ನಾಯಿ ಹಿಡಿದ ಮುದುಕ ಮತ್ತು ಮಾಧವನ್ ಇರುವ ದೃಶ್ಯಗಳ ಸಂರಚನೆ ಚಿತ್ರದ ಪೂರ್ಣ ವಿನ್ಯಾಸಕ್ಕೆ ಹೊಂದುವುದಿಲ್ಲ. ಅವುಗಳನ್ನು ಚಿತ್ರಿಸಿರುವ ರೀತಿ ಆತನೂ ಈ ಹಾರರ್-ನ ಅವಿಭಾಜ್ಯ ಭಾಗವೇನೋ ಅನ್ನುವ ಅನಿಸಿಕೆ ಮೂಡಿಸುತ್ತದೆ. ನಂತರ ಆತ ಏನೂ ಅಲ್ಲದೆ ಹೋಗುತ್ತಾನೆ, ಕಥೆಗೆ ಅನವಶ್ಯಕವಾಗಿ ಹೋಗುತ್ತಾನೆ, ನಾಯಿ ಮಾತ್ರ ಮಹತ್ವ ಪಡೆಯುತ್ತದೆ. ಕೊನೆಗೆ ಆತನ ನಾಯಿ ಮಾತ್ರ ಚಿತ್ರದ ಕ್ಲೈಮಾಕ್ಸ್ ಶಾಟ್-ನಲ್ಲಿರುತ್ತದೆ, ಆತ ಇರುವುದಿಲ್ಲ. ಇಡಿಯ ಚಿತ್ರದಲ್ಲಿ ಯಾರ ಮೇಲೂ ಸಂಶಯ ಪಡಲಾರದೆ ವೀಕ್ಷಕ ಒದ್ದಾಡುತ್ತಾನೆ, ಮಾಧವನ್ ಮತ್ತು ಗೆಳೆಯನ ಮೂಲಕವೇ ಕಥೆ ಗೊತ್ತಾಗುತ್ತ ಹೋಗುತ್ತದೆ. ಹಾಗಿರುವಾಗ ಸುಮ್ಮನೆ ಸಂಶಯ ಹುಟ್ಟಿಸಲಿಕ್ಕಾಗಿ ಮುದುಕನ ವೈಭವೀಕರಣ ಬೇಕಿರಲಿಲ್ಲ. ಈ ಅಂಶ ನನಗೆ ಕಿರಿಕಿರಿ ಹುಟ್ಟಿಸಿತು, ಮತ್ತು ಇದನ್ನು ಸ್ವಲ್ಪ ಜಾಣತನದಿಂದ ಸಂಯೋಜಿಸಿದ್ದರೆ ಸಮಯ ಉಳಿಸಬಹುದಿತ್ತೇನೋ ಅನಿಸಿತು. ಒಂದೇ ಒಂದು ಹಾಡಿದೆ ಚಿತ್ರದಲ್ಲಿ, ಅದು ಕೂಡ ಅನವಶ್ಯಕವಾಗಿತ್ತು.

ಇದು ಬಿಟ್ಟರೆ ಹೆಚ್ಚಿನೆಡೆ ಚಿತ್ರಕಥೆ ಚೆನ್ನಾಗಿತ್ತು. ನ್ಯಾರೇಶನ್ ಟೆಕ್ನಿಕ್ ಕೆಲವೆಡೆ ತುಂಬಾನೇ ಚೆನ್ನಾಗಿತ್ತು. ಮಾಧವನ್ ಮತ್ತು ಡಾಕ್ಟರ್ ಶಿಂಧೆ ನಟನೆಯಂತೂ ಸಿಕ್ಕಾಪಟ್ಟೆ ಖುಷಿಯಾಯಿತು, ಅಷ್ಟು ಸಹಜವಾಗಿತ್ತು. ಅಲ್ಲಲ್ಲಿ ಹಾರರ್ ಜತೆ ಕಾಮೆಡಿ ಮಿಕ್ಸ್ ಚೆನ್ನಾಗಿತ್ತು., ಹೊಟ್ಟೆತುಂಬ ನಗು ತರಿಸಿತು. ಅಲ್ಲಲ್ಲಿ ಕಥೆ ಸಾಗುವ ದಾರಿಯ ಬಗ್ಗೆ ಯಾವುದೋ ಸಂದರ್ಶನದ ಮೂಲಕ, ಮತ್ತು ಗೋಡೆ ಮೇಲಿನ ಒಂದು ಫೋಟೋ ಮೂಲಕ ಕ್ಲೂ ಕೊಟ್ಟರೂ, ಅದು ವೀಕ್ಷಕ ಗಮನಿಸಲಾಗದಷ್ಟು ಸಹಜವಾಗಿತ್ತು. ಇವೆಲ್ಲದರ ನಡುವೆ ಕೊನೆಯ ಎರಡು ದೃಶ್ಯಗಳ ತನಕವೂ ಸಸ್ಪೆನ್ಸ್ ಉಳಿಸಿಕೊಂಡು ಚಿತ್ರ ಖುಷಿಕೊಟ್ಟಿತು.

ಚಿತ್ರವಿಡೀ ಧಾರಾವಾಹಿಯ ಪಾತ್ರಗಳ ಮೂಲಕ ಮಾಧವನ್ ಕುಟುಂಬದ ಸದಸ್ಯರ ಬದುಕಿನ ಘಟನಾವಳಿಗಳನ್ನು ತೋರಿಸಿ, ಮುಂದೆ ಹೀಗೇ ಆಗಲಿದೆ ಅಂತ ಸುಲಭವಾಗಿ ಊಹಿಸಲು ವೀಕ್ಷಕನಿಗೆ ಚಿತ್ರ ಅವಕಾಶ ಕೊಡುತ್ತದೆ. ಅದಕ್ಕೆ ಅಡಿಕ್ಟ್ ಆಗಿಬಿಡುವ ವೀಕ್ಷಕನಿಗೆ ಕೊಲೆಗಾರನ ರೂಪದಲ್ಲಿ ಮಾಧವನ್-ಗೆ ಮಾಧವನ್-ಅನ್ನೇ ತೋರಿಸುವ ಮೂಲಕ ಚಿತ್ರ ಅನಿರೀಕ್ಷಿತವಾಗಿ ಚಮಕ್ ಕೊಡುತ್ತದೆ. ಅಲ್ಲಿ ಧಾರಾವಾಹಿಯಲ್ಲಿ ಮಾಧವನ್ ಪಾತ್ರಧಾರಿಯಾಗಿರುವ ಮಿಹಿರ್-ನ ತೋರಿಸಿದರೂ ತೊಂದರೆಯಿರಲಿಲ್ಲ, ಅದು ಮಾಮೂಲಾಗಿ, ಸಾಂಪ್ರದಾಯಿಕವಾಗಿ ಯೋಚಿಸಬಹುದಾದಂಥದ್ದು. ಆದರೆ, ಮಿಹಿರ್ ಪಾತ್ರ ಕಾಣಿಸುವುದಕ್ಕೂ, ಮಾಧವನ್ ಸ್ವತಹ ಕಾಣಿಸುವುದಕ್ಕೂ ನಡುವಿನ ವ್ಯತ್ಯಾಸದ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಇದು ಏನು ನಡೆಯಲಿದೆ, ಮುಂದೆ ಏನಾಗಬಹುದು ಅಂತ ಊಹಿಸಲಿಕ್ಕೇ ಸಾಧ್ಯವಾಗದ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದೇ ನಿಜವಾದ ಥ್ರಿಲ್! ಈ ಅಂಶ ನಂಗೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಷ್ಟವಾಯ್ತು. ಕ್ಲೈಮಾಕ್ಸ್-ನಲ್ಲಿ ಬರುವ ಕೊಲೆಯ ದೃಶ್ಯಕ್ಕೆ ಕೊಲೆಗಾರ ಮೊದಲೇ ಪ್ಲಾನ್ ಮಾಡದಿದ್ದರೂ ಆತ ಕೊಲೆಗಾರನಾಗಹೊರಡುವ ದೃಶ್ಯ ಚೆನ್ನಾಗಿತ್ತು.

ತಾಂತ್ರಿಕವಾದ ಹಲವಾರು ತಪ್ಪುಗಳು ಚಿತ್ರದಲ್ಲಿವೆ. ಪೂಜಾಕೋಣೆಯಲ್ಲಿ ಡ್ರಿಲ್ಲರ್ ಬಂದು ಶಾಕ್ ಹೊಡೆದು ಬಿದ್ದಾಗ ಅಲ್ಲಿಯ ಗೋಡೆಯಲ್ಲಿ ಪ್ಲಗ್ ಪಾಯಿಂಟ್ ಇರುತ್ತದೆ, ನಂತರದ ಶಾಟ್-ಗಳಲ್ಲಿ ಅದು ಇಲ್ಲ. ಮಾಧವನ್ ತಾನು ಕೆಲಸ ಮಾಡುವ ಜಾಗದಲ್ಲಿ ಮಾತನಾಡುತ್ತಿರುವ ಶಾಟ್-ನಲ್ಲಿ ಲಾಂಗ್ ಶಾಟ್ ಮತ್ತು ಕ್ಲೋಸ್ ಶಾಟ್-ನಲ್ಲಿ continuity ಇಲ್ಲ.

ಆದರೆ ಇವೆಲ್ಲಾ ಚಿತ್ರವನ್ನು ಕಲಾಕೃತಿಯೆಂದುಕೊಂಡು ನೋಡುವಾಗ ಮಾತ್ರ ಕಾಣಿಸುತ್ತವೆ, ಕಥೆಯನ್ನೇ ಮುಖ್ಯವೆಂದುಕೊಂಡು ಚಿತ್ರ ನೋಡುವಾಗ ಇವ್ಯಾವುದೂ ಮುಖ್ಯವೆನಿಸುವುದಿಲ್ಲ, ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ನೋಡಿದ ಉತ್ತಮ ಚಿತ್ರಗಳಲ್ಲೊಂದು 13B.

---------------------

ಮುಗಿಸುವ ಮುನ್ನ...
---------------------

4-5 ವರ್ಷದ ಹಿಂದೊಂದು ರಾತ್ರಿ. ರಾಂಗೋಪಾಲ್ ವರ್ಮಾ ನಿರ್ಮಾಣದ ವಾಸ್ತುಶಾಸ್ತ್ರ ನೋಡಿ ಆಗಷ್ಟೆ ಮನೆಗೆ ಬಂದಿದ್ದೆವು. ಊಟ ಮಾಡಿ ಲೈಟ್ ಆರಿಸಿ ಮಲಗಿಕೊಂಡೆವು. ಸ್ವಲ್ಪ ಹೊತ್ತಿಗೆ ಮನೆಯೊಳಗೆ ವಿಚಿತ್ರ ಸೌಂಡು, ಪರಪರಾ... ಪರಪರಾ... ಅಂತ...
ನಾನು ಸ್ವಲ್ಪ ಹೊತ್ತು ಸೌಂಡ್ ಕೇಳಿಸಿಕೊಂಡೆ... ನಂತರ ಮೆಲ್ಲಗೆ ರೂಂಮೇಟನ್ನು ಎಬ್ಬಿಸಿ ಏನೇ ಅದು ಅಂತ ಕೇಳಿದೆ... ಅವಳಿಗೂ ಗೊತ್ತಾಗಲಿಲ್ಲ... ವಾಸ್ತುಶಾಸ್ತ್ರ ಚಿತ್ರದಲ್ಲಿನ ಬಿಳಿಬಿಳಿ ಕಣ್ಣುಗಳ ದೆವ್ವಗಳು, ಸುಶ್ಮಿತಾ ಸೇನ್ ಮಗುವಿನ ಸಮೇತ ಉಳಿದುಕೊಂಡಳು ಅಂದುಕೊಂಡಾಗಲೇ ಮಗು ಬಿಳಿಕಣ್ಣು ತೋರಿಸಿ ವೀಕ್ಷಕರಿಗೆ ತಾನು ದೆವ್ವವೆಂದು ತೋರಿಸಿಕೊಡುವುದು, ಭಯಂಕರ ಸಂಗೀತ ಎಲ್ಲವೂ ಸೇರಿ ನನ್ನ ಮೇಲೆ ಸಿಕ್ಕಾಪಟ್ಟೆ ಇಫೆಕ್ಟ್ ಆಗಿತ್ತು ಕಾಣುತ್ತೆ... ಆಗೇ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಗಿತ್ತು... ಆದರೂ ನನಗೇನೇ ಆದರೂ ರೂಂಮೇಟ್-ಗೆ ಕೂಡ ಅದರಲ್ಲ ಪಾಲಿರುತ್ತದೆ ಅಂತ ಧೈರ್ಯ...
ಕೊನೆಗೆ ಮೆಲ್ಲಗೆ ಇಬ್ಬರೂ ಎದ್ದು ಕೂತು ಕತ್ತಲಲ್ಲಿ ಶಬ್ದ ಎತ್ತಲಿಂದ ಬರುತ್ತಿದೆಯೆಂದು ಗಮನಿಸಿದೆವು... ಶಬ್ದ ಬರುತ್ತಿದ್ದುದು ರೂಮಿನ ಬದಿಯಲ್ಲಿ ಎತ್ತರದಲ್ಲಿದ್ದ ಸಾಮಾನು ಪೇರಿಸಿಡುವ ಜಾಗದಿಂದ. ಸರಿ, ಶಬ್ದ ಮಾಡದೆ ಸ್ವಲ್ಪ ಹೊತ್ತು ಕೂತವರು ಇದ್ದಕ್ಕಿದ್ದಂತೆ ಲೈಟ್ ಹಾಕಿದೆವು. ಶಬ್ದ ಬರುತ್ತಿದ್ದುದು ಅಲ್ಲಿ ಏರಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲದ ಸಂತೆಯೊಳಗಿಂದ. ಅದನ್ನು ಕೂಡಲೇ ಹಿಡಿಸೂಡಿಯಿಂದ ಕೆಳಗೆ ಹಾಕಿದೆವು. ನೋಡುವುದೇನು, ಅದರಲ್ಲಿನ ಪ್ಲಾಸ್ಟಿಕ್ ಚೀಲವೊಂದರಿಂದ ಜಿರಳೆಯೊಂದು ಹೊರಬರಲು ವಿಫಲಯತ್ನ ಮಾಡುತ್ತಾ ಪರಪರಾ ಪರಪರಾ ಅಂತ ಸೌಂಡ್ ಮಾಡುತ್ತಿತ್ತು!!

Sunday, January 18, 2009

ಸ್ಲಂಡಾಗ್ ಸುತ್ತ...


ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು... ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
----------
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು... ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ... ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ.... ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ... ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂತಹದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು... ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು... ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು... ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು... ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು... ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು... ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು... ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು...  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.

ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
-----------
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ... ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ... ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.

ಮಿಸ್ಟ್ರೆಸ್ ಆಫ್ ಸ್ಪೈಸಸ್... ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ... ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ... ತಾಕಲಾಟಗಳು... ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.

ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ... ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು... ಕಣ್ಣಿಗೆ ಕಾಣಿಸುವ ಬಣ್ಣಗಳು... ಮನಸನ್ನು ಕಾಡುವ ಬಣ್ಣಗಳು... ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ... ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
-----------
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು - ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.

ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.

ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ... ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ... ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿಕ್ಕಿಲ್ಲ. ಇದು ನನಗನಿಸಿದ್ದು.
------------
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ - ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.

Saturday, November 15, 2008

ನೀವು ಕಾಣುವುದರ ಹಿಂದಿರುವ ನೀವು ಕಂಡಿಲ್ಲದವರು...!

ನನ್ನಂಥ ನೂರಾರು ಮಂದಿಯನ್ನು ಹುಟ್ಟುಹಾಕಿದ ಸಂಸ್ಥೆ... ಅದರ ಹಿಂದಿನ ಶಕ್ತಿಯನ್ನು ಈಗ ಇಷ್ಟು ದೂರದಿಂದ ನೋಡುವಾಗಲೂ ಹೆಮ್ಮೆಯೆನಿಸುತ್ತದೆ, ಬರೆಯಲು ಒಂದು ಸಾರಿ ಸಂಕೋಚವಾಯಿತು, ಆದರೂ, ಬರೆಯುತ್ತಿದ್ದೇನೆ...

'ಟೆಲಿವಿಶನ್ ಪ್ರೊಡಕ್ಷನ್ ಬಗ್ಗೆ ನಿಂಗೆ ಏನೇನು ಗೊತ್ತು?'

ಓದಿದ್ದು ಸಮೂಹ ಸಂವಹನವಾದರೂ, ಪ್ರೊಡಕ್ಷನ್ ಅಂದರೇನು ಅಂತ ಪ್ರಾಯೋಗಿಕವಾಗಿ ಗೊತ್ತಿಲ್ಲದಿದ್ದ ಕಾಲವದು. ಹಾಗಾಗಿ ನನಗೆ ಸುಳ್ಳುಹೇಳುವ ಇರಾದೆಯಿರಲಿಲ್ಲ, 'ಏನೂ ಗೊತ್ತಿಲ್ಲ' ಅಂತ ನೀಟಾಗಿ ಒಪ್ಪಿಕೊಂಡು ಬಿಟ್ಟೆ...

ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದ ಹಿರಿಯ, ಆಗ ಈಟಿವಿ ನ್ಯೂಸ್-ನ ಮುಖ್ಯಸ್ಥರಾಗಿದ್ದ ಎಸ್.ರಾಮಾನುಜನ್. ಒಂದು ಕ್ಷಣ ಸುಮ್ಮನಿದ್ದವರು, ಮತ್ತೆ ಕೇಳಿದರು... 'ಕಲೀತೀಯಾ ಹೇಳ್ಕೊಟ್ಟಿದ್ದನ್ನ?'

'ಕಲೀತೇನೆ' ಅಂದೆ.

ಹಾಗೆ ಸೇರಿಕೊಂಡಿದ್ದೆ ಈಟಿವಿ, 8 ವರ್ಷಗಳ ಹಿಂದೆ. ಸುದ್ದಿಯ output ಕೊಡುವ production ವಿಭಾಗದಲ್ಲಿ ಆರಂಭವಾಗಿತ್ತು ನನ್ನ ವೃತ್ತಿ. ಅಲ್ಲಿ ಕಲಿಯುವ ಮನಸಿದ್ದವರಿಗೆ ಯಾವುದೇ boundary ಇರಲಿಲ್ಲವಾಗಿ, ಕಲಿಯುವ ಮನಸೂ ಇದ್ದುದರಿಂದ ಸುದ್ದಿ ನಿರ್ವಹಣೆಗೆ ಸಂಬಂಧಿಸಿದ್ದೆಲ್ಲವನ್ನೂ ಕಲಿಯುವ ಸದವಕಾಶ ಸಿಕ್ಕಿತ್ತು... ತಾಂತ್ರಿಕವಾಗಿ ಎಡಿಟಿಂಗ್-ನಿಂದ ಹಿಡಿದು, ಪಿಸಿಆರ್ ಕೆಲಸ, ಕಾರ್ಯಕ್ರಮ ನಿರ್ವಹಣೆ, ಸುದ್ದಿ ನೀಡುವ ಕಲೆ... ಹೀಗೆ ಎಲ್ಲವೂ ಒಂದೊಂದಾಗಿ ಒಲಿದು ಬಂತು.

ಟೇಪ್-ಗಳನ್ನು ಹಾಕಿಕೊಂಡು MANUAL ಆಗಿ, ಲಕ್ಷಗಟ್ಟಲೆ ಬೆಲೆಯ ಎಡಿಟಿಂಗ್ ಮೆಶಿನುಗಳ ಮೂಲಕ ಎಡಿಟಿಂಗ್ ಮಾಡುತ್ತಿದ್ದ ಕಾಲದಲ್ಲಿ ನಾವೆಲ್ಲ ಈಟಿವಿ ಸೇರಿಕೊಂಡಿದ್ದೆವು. ನಂತರ ಒಂದೆರಡು ವರ್ಷಗಳಲ್ಲಿ ಪ್ರವೇಶಿಸಿದ್ದು NON-LINEAR ಯುಗ. ಇದರಲ್ಲಿ ಕಂಪ್ಯೂಟರ್ ಮೂಲಕ ಎಡಿಟಿಂಗ್ ಸಾಫ್ಟ್-ವೇರ್ ಉಪಯೋಗಿಸಿ ಎಡಿಟಿಂಗ್ ಮಾಡಬಹುದಿತ್ತು. ಬಂದ ಸುದ್ದಿಚಿತ್ರಗಳನ್ನು ಕಂಪ್ಯೂಟರಿನಲ್ಲಿ ನೋಡಿ, ಕೇಳಿ, ಚೊಕ್ಕವಾಗಿ ಸ್ಕ್ರಿಪ್ಟ್ ಬರೆಯುವ ಜತೆಗೆ, ಅವರವರು ಬರೆದ ಸುದ್ದಿ ಅವರವರೇ ಎಡಿಟಿಂಗ್ ಮಾಡಬಹುದಿತ್ತು, ಸೃಜನಾತ್ಮಕವಾಗಿ ಏನಾದರೂ ಮಾಡಬಹುದಿತ್ತು...ಈ ವ್ಯವಸ್ಥೆಯಲ್ಲಿ ಸುದ್ದಿ ಕೊಡಲು ಬೇಕಾದ ಸಮಯ ಕಡಿಮೆಯಾಯಿತು, ವೇಗ ಹೆಚ್ಚಿತು.

ಎಲ್ಲಾ ಚಾನೆಲ್-ಗಳಿಗೆ ಬರುವ ಸುದ್ದಿಚಿತ್ರಗಳನ್ನು ಸ್ಟೋರ್ ಮಾಡಲು ಸೆಂಟ್ರಲೈಸ್ಡ್ ಸರ್ವರ್- ವ್ಯವಸ್ಥೆಯಿತ್ತು. ಕಡಿಮೆ ಸ್ಟೋರೇಜ್ ಸ್ಪೇಸ್-ನಲ್ಲಿ ಹೆಚ್ಚು ಸುದ್ದಿಚಿತ್ರಗಳನ್ನು ಇಟ್ಟುಕೊಳ್ಳಬಹುದಿತ್ತು. ಯಾವುದೇ ಜಿಲ್ಲೆಯ ಸುದ್ದಿಯಿರಲಿ, ಬಂದ ತಕ್ಷಣ ತಂತಾನೇ copy ಆಗಿ ಅದಕ್ಕಿರುವ ಫೋಲ್ಡರಲ್ಲಿ ಹೋಗಿ ಕೂರುತ್ತಿತ್ತು, ಹುಡುಕುವ ಕಷ್ಟವಿಲ್ಲದೆ ಬಂದ ತಕ್ಷಣ ಕೈಗೆ ಸಿಗುತ್ತಿತ್ತು. ತಾಂತ್ರಿಕವಾಗಿ ಯಾವುದೇ ಗ್ಲೋಬಲ್ ಸಂಸ್ಥೆಯ ಕಾಪಿರೈಟ್-ಗೆ ಒಳಗಾಗದ, ಕಡಿಮೆ ಖರ್ಚಿನ ಸರಳವಾದ NEWS EDITING SOFTWARES, ON-AIR SOFTWARE, LOWER THIRD GRAPHICS, ಮತ್ತು ಬರೆಯಲು ಬೇಕಿರುವ ಸಾಫ್ಟ್-ವೇರ್ ಅಭಿವೃದ್ಧಿಯಾಗಿತ್ತು. ಅದೂ ಲೈನಕ್ಸ್-ಬೇಸ್ಡ್ ಪ್ಲಾಟ್-ಫಾರಂನಲ್ಲಿ. ಟೀವಿ ಚಾನೆಲ್ಲುಗಳು ಸಾಫ್ಟ್-ವೇರ್-ಗಳಲ್ಲಿ ಸ್ವಾವಲಂಬನ ಸಾಧಿಸಬಹುದು ಎಂದು ಇಲ್ಲಿನ ವ್ಯವಸ್ಥೆ ಸಾಧಿಸಿ ತೋರಿಸಹೊರಟಿತ್ತು. ಈಗ ಹೊಸದಾಗಿ ಬರುತ್ತಿರುವ ಟೀವಿ ಚಾನೆಲ್ಲುಗಳೆಲ್ಲ ಎಡಿಟಿಂಗ್, ಸುದ್ದಿಕೋಣೆಯ ಸಾಫ್ಟ್-ವೇರ್ ಎಲ್ಲ ಒಟ್ಟು ಸೇರಿಸಿರುವ ನೆಟ್ವರ್ಕುಗಳಿಗೆ ತಲೆಬಾಗುತ್ತಿವೆ, ಲೈಸೆನ್ಸಿಗಾಗಿ ಪ್ರತಿವರ್ಷ ಕೋಟಿಗಟ್ಟಲೆ ದುಡ್ಡು ಮಲ್ಟಿನ್ಯಾಶನಲ್ ಸಾಫ್ಟ್-ವೇರ್ ಕಂಪೆನಿಗೆ ಸುರಿದು ದಾಸ್ಯದ ಬದುಕು ಬದುಕಹೊರಡುತ್ತಿವೆ.

ಮುಖ್ಯ ಸುದ್ದಿವಿಭಾಗವಿರುವುದು ಆಂಧ್ರದಲ್ಲಾದರೂ ಅದು ಗೊತ್ತೇ ಆಗದ ಹಾಗೆ, ಕರ್ನಾಟಕದ - ಮಾತ್ರವಲ್ಲ ದೇಶದೆಲ್ಲೆಡೆಯ ಸುದ್ದಿಗಳನ್ನು ವೇಗವಾಗಿ ಕೊಡುವ ತಾಂತ್ರಿಕತೆ ಈಟಿವಿಯಲ್ಲಿತ್ತು. ಸೆಟ್ - ತಯಾರಿ, ಗ್ರಾಫಿಕ್ಸ್-ನಿಂದ ಹಿಡಿದು, ಸ್ಟುಡಿಯೋ ಲೈಟಿಂಗ್-ವರೆಗೆ ಎಲ್ಲವನ್ನೂ ಗೊತ್ತಿಲ್ಲವೆಂಬ ಕುತೂಹಲಕ್ಕೆ ಕೇಳಿದರೆ ಹೇಳಿಕೊಡುವವರಿದ್ದರು. ಸಾಮರ್ಥ್ಯ ಮತ್ತು ಆಸಕ್ತಿಯಿದ್ದವರಿಗೆ ಇತರ ಭಾಷೆಗಳ ಚಾನೆಲ್-ಗಳಿಗೋಸ್ಕರ ಭಾರತದ ಇತರ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿತ್ತು. ಆಸಕ್ತಿಯಿಂದ ಏನಾದರೂ ಮಾಡಹೊರಟರೆ ಪ್ರೋತ್ಸಾಹ ಸಿಗುತ್ತಿತ್ತು. ಒಳ್ಳೆಯ value addition-ಗಳಿಗೆ ಸ್ವಾಗತವಿರುತ್ತಿತ್ತು. ಅಲ್ಲಿ ಸರಿ-ತಪ್ಪುಗಳನ್ನು ಪ್ರಶ್ನಿಸಬಹುದಿತ್ತು, ಕೇಳುವವರಿದ್ದರು, ಸ್ಪಂದಿಸುವವರಿದ್ದರು. ತಪ್ಪಿದ್ದರೆ ತಿಳಿಸಿ ಹೇಳುವವರೂ ಇದ್ದರು. ವೃತ್ತಿಯಲ್ಲಿ ಹೆಚ್ಚುಹೆಚ್ಚು ಕಲಿಸುವ ಜತೆಗೆ ಬದುಕಲಿಕ್ಕೂ ಕಲಿಸಿದ ಪಾಠಶಾಲೆ ರಾಮೋಜಿ ಫಿಲ್ಮ್ ಸಿಟಿ.

ಆಫೀಸ್ ಕ್ಯಾಂಟೀನ್-ನಲ್ಲಿ ಕಡಿಮೆ ಬೆಲೆಗೆ ಹಲವಾರು ಐಟಂಗಳಿರುವ ಊಟ ಸಿಗುತ್ತಿತ್ತು. ಕ್ಯಾಂಟೀನ್ ಊಟವಾದ ಕಾರಣ ಸರಿಯಿಲ್ಲವೆಂದು ಬೈದುಕೊಳ್ಳುತ್ತಿದ್ದರೂ ಹೊಟ್ಟೆಹಸಿವಿಗೆ ಸೋತು ಕಬಳಿಸುತ್ತಿದ್ದವರು ಹಲವರು. ಯುಗಾದಿಯ ದಿನ ಪಕ್ಕಾ ಆಂಧ್ರ ಶೈಲಿಯ ಬೇವು-ಬೆಲ್ಲದ ಪಾನಕ ಸಿಗುತ್ತಿತ್ತು. ಉದ್ಯೋಗಿಗಳಿಗೆ ಪ್ರಿಯಾ ಉಪ್ಪಿನಕಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು... :-) ಮನೆಯ ಹತ್ತಿರದ ಪಿಕಪ್ ಪಾಯಿಂಟ್-ನಿಂದ ನಿಗದಿತ ಸಮಯಕ್ಕೆ ಬಸ್, ನಂತರ ವಾಪಸ್ ಅದೇ ಪಾಯಿಂಟ್-ನಲ್ಲಿ ಡ್ರಾಪ್...

ರಾಮೋಜಿ ಫಿಲ್ಮ್ ಸಿಟಿಯೆಂದರೆ ಮಿನಿ ಇಂಡಿಯಾ. ದೇಶದೆಲ್ಲೆಡೆಯ ವ್ಯಕ್ತಿಗಳನ್ನು ಮತ್ತು ಭಾಷೆಗಳನ್ನು ಅಲ್ಲಿ ಕಾಣಬಹುದು. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ - ನಾಲ್ಕು ರಾಜ್ಯಗಳಿಗೆ ನಾಲ್ಕು ಚಾನೆಲ್... ಉರ್ದು, ಬಾಂಗ್ಲಾ, ಮರಾಠಿ, ಗುಜರಾತಿ, ಒರಿಯಾ, ಕನ್ನಡ... ತೆಲುಗಿನಲ್ಲಿ ಎರಡು ಚಾನೆಲ್. ಎಲ್ಲಾ ರಾಜ್ಯಗಳಲ್ಲಿ ವರದಿಗಾರರು... ದೇಶದ ಅತಿದೊಡ್ಡ ಮೈಕ್ರೋ ನ್ಯೂಸ್ ನೆಟ್ವರ್ಕ್ ಇರುವ ಖ್ಯಾತಿ ಈಟಿವಿಯದು. 8 ವರ್ಷದ ಹಿಂದೆ ಕನ್ನಡದಲ್ಲಿ ದೂರದರ್ಶನ, ಉದಯ ಟೀವಿ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲದ ಸಮಯ ಆರಂಭವಾದ ಈಟಿವಿ, 'ಹಚ್ಚೇವು ಕನ್ನಡದ ದೀಪ...' ಹಾಡಿನ ಜತೆಗೆ ಪ್ರಸಾರ ಆರಂಭಿಸಿತು. ಕನ್ನಡಿಗರ ಮನೆ-ಮಮನ ತಟ್ಟಿ, ಮಧ್ಯಮವರ್ಗದ ಆಶೋತ್ತರಗಳ ಪ್ರತೀಕವಾಗಿ ಮೂಡಿಬರಲಾರಂಭಿಸಿತು. ನಿಧನಿಧಾನವಾಗಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆಯಿತು.

ಒಂದು ವ್ಯವಸ್ಥೆ ಇಷ್ಟು ಆಳವಾಗಿ, ಚೆನ್ನಾಗಿ ಬೇರುಬಿಡಬೇಕೆಂದರೆ, ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರ ಹಿಂದೆ ಒಂದು ಕನಸುಗಾರ ಹೃದಯ ಇರಲೇಬೇಕು. ಈಟಿವಿಯ ಹಿಂದಿರುವ ಇಚ್ಛಾಶಕ್ತಿ, ಶ್ರೀಯುತ ರಾಮೋಜಿ ರಾವ್.



ಈ ಯಶೋಗಾಥೆಯ ಹಿಂದಿನ ರೂವಾರಿಯ ಬದುಕಿನ ಕಥೆ, ಮುಗಿಯದ ಹೋರಾಟದ್ದು. ಪ್ರಿಯಾ ಉಪ್ಪಿನಕಾಯಿಯಿಂದ ಆರಂಭಿಸಿ, ಮಾರ್ಗದರ್ಶಿ ಚಿಟ್ ಫಂಡ್, ಈನಾಡು, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ, ಗೆಲುವು ಕಂಡವರು ರಾಮೋಜಿ ರಾವ್. ರಾಮೋಜಿ ಫಿಲ್ಮ್ ಸಿಟಿ, ಉಷೋದಯ ಎಂಟರ್-ಪ್ರೈಸಸ್, ಉಷಾಕಿರಣ ಮೂವೀಸ್, ನ್ಯೂಸ್ ಟುಡೇ ಪ್ರೈವೇಟ್ ಲಿಮಿಟೆಡ್ - ಹೀಗೆ ಹಲವು ರೀತಿಯಲ್ಲಿ ದೃಶ್ಯ ಮಾಧ್ಯಮದ ಹಲವು ಆಯಾಮಗಳನ್ನು ಅನ್ವೇಷಿಸಿ ಗೆದ್ದವರು. ಬರಿಯ ಈಟೀವಿ-ಈನಾಡು ಸಮೂಹದ ಮೂಲಕವೇ 2000ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಅನ್ನದಾತರಾಗಿರುವವರು.

ಅನ್ನದಾತ ಎಂದ ತಕ್ಷಣ ಹೇಳಲೇಬೇಕಾದ ಮಾತೊಂದು ನೆನಪಾಗುತ್ತದೆ... ನಿರಂತರವಾಗಿ 8 ವರ್ಷಗಳಿಂದ ಈಟಿವಿಯಲ್ಲಿ ಬೆಳಗಿನ 6.30ಕ್ಕೆ ಮೂಡಿಬರುತ್ತಿದೆ, ಅನ್ನದಾತ ಕಾರ್ಯಕ್ರಮ. ಭಾರತ ಕೃಷಿಪ್ರಧಾನ ದೇಶವೆಂಬ ಸತ್ಯವನ್ನು ನಾವೆಲ್ಲರೂ ಮರೆತು ಕೃಷಿ ಮಾಡುವವರೂ ಕಡಿಮೆಯಾಗುತ್ತಿರುವ ಈದಿನಗಳಲ್ಲಿ ಅಳಿದುಳಿದ ಕೃಷಿಕರಿಗೆ ಧೈರ್ಯ ತುಂಬುವಂತೆ ಇರುವ ಈ ಕಾರ್ಯಕ್ರಮ ವಿವಿಧ ಬೆಳೆಗಳ ಕೃಷಿಯ ಮೇಲೆ ಬೆಳಕು ಚೆಲ್ಲುತ್ತದೆ. ಯಂತ್ರೋಪಕರಣಗಳ ಕುರಿತು, ಹೊಸ ಕೃಷಿವಿಧಾನಗಳ ಕುರಿತು, ಮಾರುಕಟ್ಟೆಯ ಕುರಿತು ಮಾಹಿತಿ... ಸೋತವರಿಗೆ ಧೈರ್ಯ ತುಂಬುವ ಗೆದ್ದವರ ಕಥೆಗಳು...

ಇತ್ತೀಚೆಗೆ ಇಂಥದೇ ಯತ್ನ ಮಾಡಹೊರಟ ಇತರ ಹಲವು ವಾಹಿನಿಗಳು ಟಿಆರ್-ಪಿಯೆಂಬ ಭೂತ ಕೈಕೊಟ್ಟ ತಕ್ಷಣ ಕಾರ್ಯಕ್ರಮವನ್ನು ನಿಲ್ಲಿಸಿದವು. ಆದರೆ ಎಂಥದೇ ಪರಿಸ್ಥಿತಿಯಲ್ಲಿ ಕೂಡ, ಟಿಆರ್-ಪಿ ಬರಲಿ-ಬಿಡಲಿ, ನಿರಂತರವಾಗಿ 8 ವರ್ಷದಿಂದ ನಡೆದುಬರುತ್ತಿದೆ ಅನ್ನದಾತ. ಇದು ಕನ್ನಡದ ವಾಹಿನಿಗಳಲ್ಲಿ ಬಹುಶ: ದೂರದರ್ಶನ ಬಿಟ್ಟರೆ ಕೃಷಿಕರಿಗೋಸ್ಕರವಿರುವ ಒಂದೇ ಒಂದು ಕಾರ್ಯಕ್ರಮ ಅಂತ ನನ್ನ ತಿಳುವಳಿಕೆ. (ಉದಯ ಟೀವಿಯಲ್ಲಿ ಇದೆಯೇನೋ ಗೊತ್ತಿಲ್ಲ, ನಾನು ಉದಯ ಟೀವಿ ನೋಡುವುದೇ ಇಲ್ಲ).

ತುಂಬಿದ ಕೊಡ ತುಳುಕುವುದಿಲ್ಲ, ದೊಡ್ಡ ಮನುಷ್ಯರು ಯಾವಾಗಲೂ ದೊಡ್ಡ ಮನಸ್ಸಿನವರೇ ಆಗಿರುತ್ತಾರೆಂಬುದಕ್ಕೆ ಅತ್ಯುತ್ತಮ ಉದಾಹರಣೆ ರಾಮೋಜಿ ರಾವ್... ನಾವಿದ್ದ ಕಾಲದಲ್ಲಿ ಈಟಿವಿಯಲ್ಲಿ ಪ್ರತಿ ವಾಹಿನಿಯ ಸುದ್ದಿವಿಭಾಗಕ್ಕೂ ನೇರವಾಗಿ ಚೇರ್ಮನ್ ರಾಮೋಜಿ ರಾವ್ ಜತೆ ಮೂರು ತಿಂಗಳಿಗೊಮ್ಮೆ ಮೀಟಿಂಗ್ ಇರುತ್ತಿತ್ತು. ಅದಕ್ಕಾಗಿ ನಾವೆಲ್ಲ ಚಾನೆಲ್ ಬಗ್ಗೆ, ಒಳ್ಳೆದು-ಕೆಟ್ಟದರ ಬಗ್ಗೆ ನಮ್ಮ ವಿಶ್ಲೇಷಣೆ ಕೊಡಬೇಕಿತ್ತು. ಹಾಗೆ ಕೊಟ್ಟ ವಿಶ್ಲೇಷಣೆಗಳನ್ನು ಖುದ್ದು ಚೇರ್ಮನ್ನರೇ ಓದಿ, ಫೀಡ್-ಬ್ಯಾಕ್ ತೆಗೆದುಕೊಳ್ಳುತ್ತಿದ್ದರು, ಮೀಟಿಂಗ್-ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರು. ಮೀಟಿಂಗ್-ನಲ್ಲಿ ತಾಂತ್ರಿಕ ವಿಭಾಗದವರು, ಗ್ರಾಫಿಕ್ಸ್, ಎಂಜಿನಿಯರುಗಳು, ಕ್ಯಾಮರಾ ವಿಭಾಗದವರು, ಅಡ್ಮಿನಿಸ್ಟ್ರೇಶನ್-ನವರು, ಹೆಚ್ಚಾರ್-ನವರು - ಎಲ್ಲರೂ ಇರಬೇಕಿತ್ತು. ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಿಯೇ ಆ ವಿಭಾಗದ ಗಮನಕ್ಕೆ ತರಲಾಗುತ್ತಿತ್ತು. ಅತ್ಯಂತ ground levelನಿಂದ ಕೂಡ ಅಭಿಪ್ರಾಯಗಳು ಬರಬಹುದಿತ್ತು, ಅವುಗಳಲ್ಲಿ ಸತ್ವವಿದ್ದರೆ ಅದಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲುತ್ತಿತ್ತು. ವ್ಯವಸ್ಥೆ ಹಾಗಿತ್ತು.

ಈ ರೀತಿಯ ಮೀಟಿಂಗ್-ಗೆ ಸಂಬಂಧಿಸಿದಂತೆ ನಡೆದ ಘಟನೆಯೊಂದು ನನಗೆ ಈ ಹಿರಿಯ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸಿತು... ಆಸಮಯದಲ್ಲಿ ಈಟಿವಿ ಸುದ್ದಿವಾಚಕಿಯರು ಉಡುತ್ತಿದ್ದ ಸೀರೆಗಳು, ಹತ್ತಿಯ ಸೀರೆಗಳಾಗಿದ್ದು, ವಿಧವಿಧದ dignified ವಿನ್ಯಾಸಗಳೊಡನೆ ಸುದ್ದಿವಾಚಕಿಯರ ವ್ಯಕ್ತಿತ್ವವನ್ನೇ ಬದಲಾಯಿಸುವಂತಿದ್ದವು. ಹೈದರಾಬಾದಿನಲ್ಲಿದ್ದ 'ಕಲಾಂಜಲಿ'ಯಿಂದ ತರುತ್ತಿದ್ದ ಹತ್ತಿ ಸೀರೆಗಳು ಸಾವಿರ-ಸಾವಿರದೈನೂರು ರೂಪಾಯಿ ಬೆಲೆಯವಾದರೂ, ಉಟ್ಟವರನ್ನು ನೋಡಿದರೆ ಬೆಲೆ ಹೆಚ್ಚಾಯಿತು ಎನಿಸುತ್ತಿರಲಿಲ್ಲ. ಹೀಗಿರಲು ಒಂದು ಸಾರಿ, ಹೊಸ ಸೀರೆಗಳನ್ನು ತರುವಾಗ ಹತ್ತಿ ಸೀರೆಯ ಬದಲು ಗ್ರಾಂಡ್ ಆದ ಜರತಾರಿ ಅಂಚಿನ ರೇಷ್ಮೆ ಸೀರೆಗಳನ್ನು ತರಲಾಯಿತು. ಸುದ್ದಿ ಓದುವವರು ಆ ಸೀರೆಗಳಲ್ಲಿ ಮದುವಣಗಿತ್ತಿಯರಂತೆ ಕಾಣುತ್ತಿದ್ದುದು ನ್ಯೂಸ್ ಪ್ರೊಡಕ್ಷನ್-ನಲ್ಲಿದ್ದ ನನಗೆ ಹಿತವಾಗಿರಲಿಲ್ಲ. ಜತೆಗೆ ಕ್ಯಾಮರಾದಲ್ಲೂ ಸರಿಯಾಗಿರುತ್ತಿರಲಿಲ್ಲ. ಮೊದಲೇ ಹೇಳಿದ್ನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದ ಸಂಸ್ಥೆ ಅದು. ನಾನು ಕಾರಣಗಳ ಸಹಿತ ಜರತಾರಿ ಸೀರೆಗಳ ವಿರುದ್ಧ ಆಸಲದ ಮೀಟಿಂಗ್-ಗೆ ಸಿದ್ಧಪಡಿಸಿದ ರಿಪೋರ್ಟ್-ನಲ್ಲಿ ಬರೆದೆ.

ಮೀಟಿಂಗ್-ನಲ್ಲಿ ನನ್ನ ವರದಿಯ ಬಗ್ಗೆ ಚರ್ಚೆಗೆ ಬಂತು. ಮೀಟಿಂಗಲ್ಲಿ ಈಸಲ ನನಗೂ ಜಾಗವಿತ್ತು. ಒಳಗೊಳಗೇ ನನಗೆ ಭಯ, ಬರೆಯುವುದು ಬರೆದಾಗಿತ್ತು, ಇನ್ನೇನಾಗುತ್ತದೋ ಅಂತ. ನನ್ನ ಅಭಿಪ್ರಾಯಗಳ ಸತ್ಯಾಸತ್ಯತೆಯ ಬಗ್ಗೆ ಚೇರ್ಮನ್ ತಾಂತ್ರಿಕ ವಿಭಾಗದವರಲ್ಲಿ ಕೇಳಿದಾಗ ಅವರು ನಾ ಕೊಟ್ಟ ಕಾರಣಗಳನ್ನು ಒಪ್ಪಿಕೊಂಡು ವಿವರಿಸಿದರು. ಸ್ವಲ್ಪ ಹೊತ್ತಿನ ವಿಚಾರವಿನಿಮಯದ ನಂತರ ಸುದ್ದಿವಾಚಕಿಯರಿಗೆ ಹತ್ತಿ ಸೀರೆಯೇ ಬೇಕೆಂಬ ನನ್ನ ವಾದವನ್ನು ಒಪ್ಪಿದ ಚೇರ್ಮನ್, ರೇಷ್ಮೆ ಸೀರೆಗಳನ್ನು ಖರೀದಿಸಲು ಹೇಳಿದ್ದು ತಾನೇ ಆಗಿದ್ದು, ಅದು ಸರಿಯಲ್ಲವೆಂದಾದಲ್ಲಿ ಸರಿಮಾಡಿಕೊಳ್ಳೋಣ ಅಂತ ಹೇಳಿದರು... ನನ್ನ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿ ವಾಚಕರಿಗೆ ಸೂಕ್ತ ಡ್ರೆಸ್ ಕೋಡ್ ಸಿದ್ಧಪಡಿಸಲು ತಾಂತ್ರಿಕ ವಿಭಾಗದವರಿಗೆ ಹೇಳಿದರು. ಅಷ್ಟು ನೇರವಾಗಿ, ಎಲ್ಲರ ಎದುರು, ಅನುಭವದಲ್ಲಿ ಎಷ್ಟೋ ವರ್ಷ ಚಿಕ್ಕವಳಾದರೂ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು, ಸರಿ-ತಪ್ಪು ತೂಗಿ ನೋಡಿದ ಹಿರಿತನಕ್ಕೆ ಹೃದಯ ತುಂಬಿ ಬಂತು ನನಗೆ.

ಕಹಿ ಮರೆತು ಸಿಹಿ ನೆನಪಿಟ್ಟುಕೊಂಡು ಮುನ್ನಡೆಯುವಲ್ಲಿ ನನಗೆ ಸ್ಫೂರ್ತಿಯಾದ ಹಿರಿಯರಿವರು. ಸರಳತೆ, ವೃತ್ತಿಯ ಮೇಲೆ ಪ್ರೀತಿ, ಒಳ್ಳೆಯದು ಎಲ್ಲಿಂದ ಬಂದರೂ ತೆಗೆದುಕೊಳ್ಳುವ ಮನಸ್ಸು, ಮನಸು ಒಪ್ಪಿದ ತತ್ವಕ್ಕೆ ಬದ್ಧವಾಗಿ ಮುನ್ನಡೆಯುವ ಛಾತಿ - ನಾನು ಈ ಹಿರಿಯರಿಂದ ಕಲಿತೆ. ಅವರ ಜತೆಗಾಗಿದ್ದು ಒಂದೋ ಎರಡೋ ಭೇಟಿಗಳಾದರೂ ನನಗೆ ಅವು ಸ್ಮರಣೀಯ. ಬದುಕಲು ಕಲಿಯುವಲ್ಲಿ, ಬದುಕು ಕಟ್ಟಿಕೊಳ್ಳುವಲ್ಲಿ, ಸಹಾಯ ಮಾಡಿದವರಲ್ಲಿ, ಕುಸಿಯುವ ಹೆಜ್ಜೆಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುವ ಧೈರ್ಯ ತುಂಬಿದ ಹಿರಿಯರಲ್ಲಿ ಒಬ್ಬರು ರಾಮೋಜಿ ರಾವ್.

ಸದಾ ಬಿಳಿ ಬಟ್ಟೆಯ ಹಸನ್ಮುಖಿ, ಅಷ್ಟೇ ಒಳ್ಳೆಯ ಮನಸ್ಸಿನ ಈ ಹಿರಿಯರಿಗೆ ನಾಳೆಗೆ 72 ತುಂಬುತ್ತದೆ. ಸದ್ದಿಲ್ಲದೆ ಉರಿದು ಸುತ್ತಲಿಗೆ ಬೆಳಕ ನೀಡುವ ದೀಪಗಳಲ್ಲೊಬ್ಬರು ರಾಮೋಜಿರಾವ್... ನೂರ್ಕಾಲ ಬಾಳಲೆಂಬ ಹಾರೈಕೆ ಎಂದೆಂದೂ ನನ್ನದು.

Monday, August 25, 2008

ಕೊನೆಗೂ ಅಣ್ಣಾವ್ರನ್ನು ಭೇಟಿಯಾದೆ...


ನಾನಾಗ ತುಂಬಾ ಚಿಕ್ಕವಳು, ಅದು ಸಿನಿಮಾ ಅಂದರೆ ನನಗೆ ಏನೇನೂ ಗೊತ್ತಿರದಿದ್ದ ಕಾಲ. ಥಿಯೇಟರುಗಳಿಗೆ ಹೋಗಿ ಸಿನಿಮಾ ನೋಡ್ತಿದ್ದಿದ್ದು ತುಂಬಾ ಅಪರೂಪ. ಅಜ್ಜನ ಮನೆಗೆ ಹೋದಾಗ ಒಂದು ಸಲ ಅಜ್ಜ ನಮ್ಮನ್ನು ಸಿನಿಮಾ ನೋಡಲು ಕರೆದುಕೊಂಡು ಹೋದರು. ಪುತ್ತೂರಿನ ಸಿನಿಮಾ ಥಿಯೇಟರ್. ಸಿಪಾಯಿ ರಾಮು ಅನ್ನುವ ಆ ಚಿತ್ರದಲ್ಲಿ ನಟ-ನಟಿಯರು ಯಾರು, ಚಿತ್ರದ ಕಥೆ ಏನು, ಯಾವುದೂ ಅರ್ಥ ಮಾಡಿಕೊಳ್ಳಲು ಗೊತ್ತಾಗದಿದ್ದ ಪ್ರಾಯ ನನ್ನದು...

ಸಿನಿಮಾ ಥಿಯೇಟರಿನೊಳಗೆ ಹೋಗಿ ಕೂತು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸ್ಕ್ರೀನಿನಲ್ಲಿ ಇಬ್ಬರು ಕತ್ತಿ ಹಿಡಿದುಕೊಂಡು ಜೋರಾಗಿ ಯುದ್ಧ ಮಾಡುತ್ತಿದ್ದಂತೆ ನೆನಪು. ಇನ್ನೇನೂ ನೆನಪಿಲ್ಲ, ಅವರು ಬಡಿದಾಡಿಕೊಳ್ಳುತ್ತಿದ್ದಾರೆ, ನಾವು ಹೋಗುವ ಇಲ್ಲಿಂದ ಅಂತ ಹಠಮಾಡಿದ್ದು ಬಿಟ್ಟರೆ... ಹೋಗಿ ಅರ್ಧವೇ ಗಂಟೆಯಲ್ಲಿ ರಚ್ಚೆಹಿಡಿದು, ಹಠ ಮಾಡಿ, ಸಿನಿಮಾ ಥಿಯೇಟರಿನಿಂದ ವಾಪಸ್ ಬಂದಿದ್ದು ಮಾತ್ರ ಗೊತ್ತು. ಪಾಪ, ನನ್ನಿಂದಾಗಿ ನಮ್ಮಮ್ಮ, ಅಜ್ಜನಿಗೆ ಕೂಡ ಸಿನಿಮಾ ಮಿಸ್ ಆಯಿತು. ಅದರಲ್ಲಿದ್ದ ನಟ ರಾಜ್ಕುಮಾರ್ ಅಂತ ಗೊತ್ತಾಗಿದ್ದು ಎಷ್ಟೋ ವರ್ಷಗಳ ನಂತರ. ಆದರೆ ಆ ಸಿನಿಮಾ ನಾನಿನ್ನೂ ನೋಡಲು ಸಾಧ್ಯವಾಗಿಲ್ಲ.

ನಾನಾಗ 6ನೇ ಕ್ಲಾಸೋ 7ನೇ ಕ್ಲಾಸೋ ಇರಬೇಕು. ಅತ್ತೆಮನೆಗೆ ಹೋದಾಗ ಅಲ್ಲಿದ್ದ ಸನಾದಿ ಅಪ್ಪಣ್ಣದ ಧ್ವನಿಮುದ್ರಿಕೆಯನ್ನು ಕೇಳುತ್ತಿದ್ದೆ. ಅದರಲ್ಲಿ ಅಪ್ಪಣ್ಣನ ಪಾತ್ರದ ದನಿಗೆ ನಾನು ಮರುಳಾಗಿ ಬಿಟ್ಟೆ. ಕೇಳುತ್ತಾ ಕೇಳುತ್ತಾ ಆ ದನಿ ತುಂಬಾ ಆತ್ಮೀಯವಾಗುತ್ತ ಹೋಯಿತು. ಅದರ ಡೈಲಾಗು ಡೈಲಾಗೂ ಮನಸ್ಸಲ್ಲಿ ಉಳಿಯುವಷ್ಟು ಸಲ ಕೇಳಿದ್ದೆ.


+++++++++

ನಾನು ಎಂಟನೇ ಕ್ಲಾಸಿರಬಹುದು. ಅದು ನಮ್ಮೂರಲ್ಲಿ ಟಿವಿ ಯುಗ ಇನ್ನೂ ಆರಂಭವಾಗುತ್ತಿದ್ದ ಕಾಲ. ನಮ್ಮ ಪಕ್ಕದ ಮನೆಯಲ್ಲೇ ಟಿವಿ ತಂದರು. ದೂರದರ್ಶನ ಮಾತ್ರ ಅದರಲ್ಲಿ ಕಾಣುತ್ತಿತ್ತು. ನನ್ನನ್ನು
ಸೇರಿದಂತೆ ಅಕ್ಕಪಕ್ಕದ ಮನೆಗಳ ಚಿಳ್ಳೆಪಿಳ್ಳೆಗಳಿಗೆಲ್ಲಾ ಟೀವಿ ನೋಡಲು ಅಲ್ಲಿ ಹೋಗುವ ಸಂಭ್ರಮ. ನಾನಂತೂ ಏನಿದ್ದರೂ ಇಲ್ಲದಿದ್ದರೂ ಶುಕ್ರವಾರ ಚಿತ್ರಮಂಜರಿ, ಭಾನುವಾರ ಚಲನಚಿತ್ರ - ಇವೆರಡನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದು, ಹೋಂವರ್ಕ್, ಕೊನೆಗೆ ಪರೀಕ್ಷೆಗೆ ಓದುವುದನ್ನೂ ಬಿಟ್ಟು ಶ್ರದ್ಧೆಯಿಂದ ಸಿನಿಮಾ ನೋಡಿದ ದಿನಗಳಿತ್ತು.

ಈ ಎಲ್ಲಾ ವ್ಯವಹಾರದಲ್ಲಿ ನನಗೆ ರಾಜ್ಕುಮಾರ ಮತ್ತಷ್ಟು ಆತ್ಮೀಯವಾಗಿದ್ದ. ರಾಜ್ಕುಮಾರ್ ಸಿನಿಮಾ ದೂರದರ್ಶನದಲ್ಲಿ ಹಾಕಿದರೆ ಸಾಕು, ಬೇರೆಲ್ಲವನ್ನೂ ಮಿಸ್ ಮಾಡ್ಕೊಂಡಾದರೂ ಅದನ್ನು ನೋಡಿಯೇ ನೋಡುತ್ತಿದ್ದೆ. ಅಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿಐಡಿ 999, ನಾಂದಿ ಇತ್ಯಾದಿ ಚಿತ್ರಗಳಿಂದ ಶುರುವಾಗಿ, ದಾರಿ ತಪ್ಪಿದಮಗ, ಶ್ರಾವಣ ಬಂತು ವರೆಗೆ ದೂರದರ್ಶನ ಯಾವ್ಯಾವ ಚಿತ್ರಗಳನ್ನು ಹಾಕಿದ್ದರೋ ಅದೆಲ್ಲವನ್ನೂ ನೋಡಿದ ಸಾಧನೆ ನನ್ನದು. ರಾಜ್ಕುಮಾರನ ಜೇನುದನಿಯ ಜತೆಗೆ ಆ ಉದ್ದ ಮೂಗು ಕೂಡ ಆತ್ಮೀಯವೆನಿಸಿತು.

ಬರಬರುತ್ತಾ ನನ್ನ ರಾಜ್ಕುಮಾರ್ ಅಭಿಮಾನ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಸಿನಿಮಾದಲ್ಲಿ ರಾಜ್ಕುಮಾರ್ ಅತ್ತುಬಿಟ್ಟರೆ ನಾನೂ ಅತ್ತುಬಿಡುತ್ತಿದ್ದೆ. ಆಗ ಚಾಲ್ತಿಯಲ್ಲಿದ್ದ ಚಲನಚಿತ್ರ ಪತ್ರಿಕೆಗಳಾದ ವಿಜಯಚಿತ್ರ, ರೂಪತಾರಾ ಇತ್ಯಾದಿಗಳನ್ನು ಸುರತ್ಕಲ್ಲಿನಲ್ಲಿದ್ದ ಅತ್ತೆ ಮನೆಗೆ ತರಿಸುತ್ತಿದ್ದರು. ನಾನು ಅಲ್ಲಿ ರಜೆಯಲ್ಲಿ ಹೋದಾಗೆಲ್ಲ ಹಳೆಯ ಪತ್ರಿಕೆಗಳೆಲ್ಲವನ್ನೂ ಅಲ್ಲಿಂದ ತಂದು ಭಕ್ತಿಯಿಂದ ಓದುತ್ತಿದ್ದೆ. ಆಮೇಲೆ ಅದರಲ್ಲಿರುತ್ತಿದ್ದ ಚಿತ್ರನಟ-ನಟಿಯರ ಚಿತ್ರಗಳನ್ನು ಕತ್ತರಿಸಿ ಆಲ್ಬಂ ಮಾಡುವ ಹುಚ್ಚು ಹತ್ತಿಕೊಂಡಿತು. ಇದರಲ್ಲಿಯೂ ರಾಜ್ಕುಮಾರ್-ಗೆ ಮಾತ್ರ ವಿಶೇಷ ಸ್ಥಾನ. ರಾಜಕುಮಾರ್ ಸಿನಿಮಾಗಳ ಪಟ್ಟಿಯೊಂದನ್ನು ರೆಡಿ ಮಾಡಿದ್ದೆ. ಅದರಲ್ಲಿ ಯಾರು ಸಂಗೀತ ನಿರ್ದೇಶಕರಿದ್ದರು, ಯಾರು ಹೀರೋಯಿನ್, ಯಾವ್ಯಾವ ಹಾಡಿತ್ತು, ಯರು ಹಾಡಿದ್ದರು ಇತ್ಯಾದಿಗಳೆಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡಿದ್ದೆ. ರಾಜ್ಕುಮಾರ್ ಜೀವನದ ಬಗ್ಗೂ ಸ್ವಲ್ಪ ಹೆಚ್ಚು ತಿಳಿಯಿತು. ಏನು ತಿಳಿದರೂ ತಿಳಿಯದಿದ್ದರೂ ಅವರ ಮೇಲಿದ್ದ ಅಭಿಮಾನ ಮಾತ್ರ ಹೆಚ್ಚುತ್ತಲೇ ಹೋಯಿತು.


+++++++++


ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆ ನಮ್ಮನೆಯಲ್ಲಿ ನಿಜವಾಗಲಿಲ್ಲ. ನನ್ನ ಹಾಗೇ ಟೀವಿ ನೋಡುತ್ತಿದ್ದ ತಮ್ಮ ನಟ ಅಂಬರೀಷ್-ನ ಅಭಿಮಾನಿಯಾಗಿ ಬೆಳೆದ. ಅಂಬರೀಷ್ ನಟರಲ್ಲಿ ಶ್ರೇಷ್ಠಾತಿಶ್ರೇಷ್ಠನೆಂದು ತಮ್ಮ ವಾದಿಸಿದರೆ, ನಾನು ಇಲ್ಲ, ಅಂಬರೀಷೆಂದರೆ ಕೆಂಗಣ್ಣಿನ ಕುಡುಕ, ರಾಜ್ಕುಮಾರನೇ ಶ್ರೇಷ್ಠನೆಂದು ವಾದಿಸುತ್ತಿದ್ದೆ. ನನಗಿಂತ ಆರು ವರ್ಷ ಚಿಕ್ಕವನಾದರೂ ವಾದ ಮಾಡುವುದರಲ್ಲಿ ನನ್ನ ತಮ್ಮನನ್ನು ಬಿಟ್ಟರಿಲ್ಲ... ಈ ವಿಚಾರವಾಗಿ ನಾವಿಬ್ಬರು ಸೇರಿ ಮನೆಯನ್ನು ಕುರುಕ್ಷೇತ್ರ ಮಾಡಿದ್ದೂ ಇತ್ತು. ಕೊನೆಗೆ ಅಮ್ಮ ಬಂದು ನೀನ್ ದೊಡ್ಡೋಳು, ತಮ್ಮನ ಜತೆ ಜಗಳವಾಡಲು ನಾಚಿಕೆಯಾಗುವುದಿಲ್ವಾ ಅಂತ ನನಗೆ ಬಯ್ಯುವುದರೊಡನೆ ಪರ್ಯವಸಾನವಾಗುತ್ತಿತ್ತು.

ಚಿಕ್ಕಂದಿನಲ್ಲಿ ನನಗೆ ಚಿತ್ರ ಬಿಡಿಸುವ ಗೀಳು ಕೂಡ ಇತ್ತು. ಆಗ ಅದ್ಯಾಕೋ ಗೊತ್ತಿಲ್ಲ, ಪದೇ ಪದೇ, ಸದಾ ಕಣ್ಣಲೀ ಪ್ರಣಯದಾ ಗೀತೆ ಹಾಡಿದೇ... ಹಾಡಿನ ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ... ಹಾಡು ನೆನಪಿಸಿಕೊಳ್ಳುತ್ತಿದ್ದೆ. ಅದರಲ್ಲಿ ಇಂಟ್ರ್-ಲ್ಯೂಡ್ ಆಗಿ ಬರುವ ಸಂಗೀತ ನನಗೆ ಇವತ್ತಿಗೂ ಇಷ್ಟ.

ಇದರ ಜತೆ ಅಂಟಿಕೊಂಡಿದ್ದು ರೇಡಿಯೋ ಕೇಳುವ ಚಾಳಿ. ರಾತ್ರಿ ರೇಡಿಯೋ ಹಾಕಿ, ಅದರಲ್ಲಿ 11 ಗಂಟೆಗೆ ಬರುತ್ತಿದ್ದ ಹಳೆ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಕೇಳದೆ ನಾನು ಮಲಗುತ್ತಲೇ ಇರಲಿಲ್ಲ. ಇತರೆಲ್ಲಾ ಹಾಡುಗಳ ಜತೆಗೆ ಅದರಲ್ಲಿ ಬರುವ ರಾಜ್ಕುಮಾರ್ ಸಿನಿಮಾದ ಹಾಡುಗಳನ್ನು ಕೂಡ ಭಕ್ತಿಯಿಂದ ಕೇಳುತ್ತಿದ್ದೆ. ಅದರ ಲಿರಿಕ್ಸ್ ನೆನಪಿಟ್ಟುಕೊಳ್ಳುತ್ತಿದ್ದೆ. ಹಾಡುಗಳಿಗೆ ರಾಜ್ಕುಮಾರ್-ದೇ ದನಿಯಿದ್ದರಂತೂ ಕೇಳುವುದೇ ಬೇಡ, ನನಗೆ ಫುಲ್ ಖುಷಿಯೋ ಖುಷಿ.

+++++++++

ಕಾಲ ಉರುಳಿತು. ನಾನು 10ನೇ ತರಗತಿ ಮುಗಿಸಿ ಕಾಲೇಜಿಗೆಂದು ದೂರದ ಉಜಿರೆಗೆ ಸೇರಿಕೊಂಡೆ. ಆಗ ಟೀವಿಯಲ್ಲಿ ಸಿನಿಮಾ ಬಿಟ್ಟು ಬೇರೆ ಕಾರ್ಯಕ್ರಮಗಳೂ ಕುತೂಹಲಕರವಾಗಿಬಲ್ಲವು ಅಂತ ಗೊತ್ತಾಯಿತು. ಪಿಯುಸಿ ಮತ್ತು ಡಿಗ್ರಿ ದಿನಗಳಲ್ಲಿ ನನ್ನ ಟೀವಿ ನೋಡುವಿಕೆ ಕ್ರಿಕೆಟ್ ಮ್ಯಾಚ್-ಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಎಂಎ ಮಾಡುವಾಗ ಸಿದ್ಧಾರ್ಥಕಾಕ್ ಮತ್ತು ರೇಣುಕಾ ಶಹಾಣೆ ನಡೆಸಿಕೊಡುತ್ತಿದ್ದ 'ಸುರಭಿ' ಕಾರ್ಯಕ್ರಮಕ್ಕೆ, ಹಾಗೂ ಒಂದು ಸೀರಿಯಲ್ ನೂರ್-ಜಹಾನ್-ಗೆ ಮೀಸಲಾಯಿತು. ಇವುಗಳ ನಡುವೆ, ಮತ್ತು ಓದಿನ ಸೀರಿಯಸ್-ನೆಸ್ ನಡುವೆ ನನ್ನ ಆರಾಧ್ಯದೇವತೆ ರಾಜ್ಕುಮಾರ ಮಸುಕಾಗಿ ಹೋದ. ನಾನು ಟೀವಿಯೇ ನೋಡದಿದ್ದ ಕಾಲವೂ ಇತ್ತು. ಇದೇ ರೀತಿ ನನ್ನ ಪೋಸ್ಟ್ ಗ್ರಾಜುವೇಶನ್ ಕಳೆಯುವ ತನಕವೂ ಮುಂದುವರಿಯಿತು.

ನಡುನಡುವೆ ರಜೆಯಲ್ಲಿ ಊರಿಗೆ ಹೋದಾಗ ಮಾತ್ರ ಹಳೆಯ ಚಾಳಿ ಬೆಂಬಿಡದೆ ಕಾಡುತ್ತಿತ್ತು, ರಾಜ್ಕುಮಾರ ಸಿನಿಮಾ ಇದ್ದರೆ ತಪ್ಪದೇ ನೋಡುತ್ತಿದ್ದೆ. ಹಾಡುಗಳನ್ನಂತೂ ತಪ್ಪದೇ ಕೇಳುತ್ತಿದ್ದೆ. ಪ್ರತಿ ಸಲವೂ ಆ ದನಿಗೆ, ಆ ನಟನಾಕೌಶಲ್ಯಕ್ಕೆ ಬೆರಗಾಗುತ್ತಿದ್ದೆ. ಅದು ಹೇಗೆ ಇಷ್ಟೆಲ್ಲ ಶ್ರೇಷ್ಠಗುಣಗಳು ಒಂದೇ ವ್ಯಕ್ತಿಯಲ್ಲಿರುವಂತೆ ಮಾಡಿದ ಆ ಸೃಷ್ಟಿಕರ್ತ ಅಂದುಕೊಳ್ಳುತ್ತಿದ್ದೆ.

+++++++++
ಪೋಸ್ಟ್ ಗ್ರಾಜುವೇಶನ್ ಮುಗಿದು, ಇಂಟರ್ನ್-ಶಿಪ್-ಗೋಸ್ಕರ ಬೆಂಗಳೂರಿಗೆ ಬಂದೆ. 2000ನೇ ಇಸವಿಯ ಮೇ ತಿಂಗಳ ಆ ಮುಂಜಾವು, ನಾನಿನ್ನೂ ಮರೆತಿಲ್ಲ. ಮೊದಲ ಬಾರಿ ನಾನು ಬೆಂಗಳೂರಿಗೆ ಬರುವ ಉತ್ಸಾಹಕ್ಕೆ ಹೊರಗೆ ಬೆಳಕು ಮೂಡುವ ಮೊದಲೇ ಬಸ್ಸಿನಲ್ಲಿ ಎದ್ದು ಕುಳಿತು ಚನ್ನಪಟ್ನ ದಾಟಿ ಬೆಂಗಳೂರಿನತ್ತ ಬರುವ ದಾರಿಯಲ್ಲಿ ಮುಂಜಾವಿನ ಸೊಬಗನ್ನು ಸವಿಯುತ್ತಿದ್ದೆ. ಹಾಗೇ ಬೆಂಗಳೂರಿನಲ್ಲಿ ನಾನಿರುವ ಎರಡು ತಿಂಗಳಲ್ಲಿ ಮಾಡಬೇಕಿರುವ ಕಾರ್ಯಗಳ ಬಗ್ಗೆ ಲಿಸ್ಟ್ ಹಾಕಿಕೊಳ್ಳುತ್ತಿದ್ದೆ. ಅದರಲ್ಲಿ ರಾಜ್ಕುಮಾರ್ ಭೇಟಿಯೂ ಒಂದು.

ಈ ಸಮಯಕ್ಕೆ ಹುಚ್ಚು ಅಭಿಮಾನವೆ
ಲ್ಲ ಕೊಚ್ಚಿ ಹೋಗಿ, ರಾಜ್ಕುಮಾರ್ ವ್ಯಕ್ತಿತ್ವದ ಮೇಲೊಂದು ಬಗೆಯ ಗೌರವ ಹುಟ್ಟಿತ್ತು ನನಗೆ. ಇಂಟರ್ನ್-ಶಿಪ್ ಮಾಡುತ್ತಿದ್ದಾಗಲೊಂದು ದಿನ, ಅದ್ಯಾವುದೋ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಇಟ್ಟಿದ್ದ ಪ್ರೆಸ್ ಟ್ರಿಪ್-ನ ಮೂಲಕ ದೇವನಹಳ್ಳಿಯ ಆಸುಪಾಸಿನಲ್ಲಿರುವ ಕೆಂಪತಿಮ್ಮನಹಳ್ಳಿ ಎಂಬ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಹೋದಾಗ, ಬೆಳ್ಳಿ ಮೂಡಿತೋ ಕೋಳಿ ಕೂಗಿತು ಅಂತ ಕುಣಿಯುತ್ತಿದ್ದ ರಾಜ್ಕುಮಾರ್ ದನಿ ನಮ್ಮನ್ನು ಸ್ವಾಗತಿಸಿತು. ರಾಜ್ಕುಮಾರ್ ಅಭಿಮಾನಿ ಸಂಘಗಳ ಬಗೆಗೆ ಬಹಳವಾಗಿ ಕೇಳಿದ್ದ ನನಗೆ ಅದನ್ನು ನೋಡುವ, ಅನುಭವಿಸುವ ಅವಕಾಶ ಸಿಕ್ಕಿತು. ನಮ್ಮೂರ ಫಂಕ್ಷನುಗಳಲ್ಲಿ ದೇವರ ಭಜನೆಗಳನ್ನು ಹಾಕಿಟ್ಟಿರುತ್ತಾರಲ್ಲ, ಅದೇ ರೀತಿ ಅಲ್ಲಿ ರಾಜ್ಕುಮಾರ್ ಹಾಡಿದ ಹಾಡುಗಳ ಸುರಿಮಳೆಯಾಗುತ್ತಿತ್ತು. ಆ ಊರಲ್ಲೆಲ್ಲ ರಾಜ್ಕುಮಾರ್ ಅಭಿಮಾನಿಗಳು ತುಂಬಿ ಹೋಗಿದ್ದರು.

ಇದನ್ನೆಲ್ಲ ನೋಡಿದ ಮೇಲೆ ನನಗೆ ರಾಜ್ಕುಮಾರನ್ನು ಒಂದ್ಸಲವಾದರೂ ಭೇಟಿಯಾಗಬೇಕೆಂಬ ಆಸೆ ಬಲವಾಗುತ್ತ ಹೋಯಿತು. ಆದರೆ ನನ್ನ ಹೊಸ ದಿನಚರಿಯ ನಡುವೆ ಕಾಲ ಕೂಡಿ ಬರಲಿಲ್ಲ. ಹೀಗೆ ತಿಂಗಳೊಂದು ಕಳೆದಿರಬಹುದೇನೋ... ಗೆಳತಿಯೊಬ್ಬಳ ಮನೆಗೆ ಹೋಗುತ್ತಿದ್ದ ಸಮಯ ಸಂಭವಿಸಿದ ಅಪಘಾತದಲ್ಲಿ ನನ್ನ ಕೈ ಫ್ರಾಕ್ಚರ್ ಆಯಿತು. ಗುಣಪಡಿಸಿಕೊಂಡು ಬರೋಣವೆಂದು ಊರಿಗೆ ಹೊರಟುಹೋದೆ. ನಂತರ ಇಂಟರ್ನ್-ಶಿಪ್ ಮುಗಿಸಲು ಪುನಃ ಬೆಂಗಳೂರಿಗೆ ಬಂದೆ.

ಹಾಗೆ ನಾನು ಬರುವ ಹಿಂದಿನ ದಿನವೇ ರಾಜ್ಕುಮಾರನ ಕಿಡ್ನ್ಯಾಪ್ ಅಗಿತ್ತು. ಬೆಂಗಳೂರೆಲ್ಲ ಬಂದ್... ಗಲಾಟೆಯೋ ಗಲಾಟೆ... ಸರಿ, ಆ ಪರಿಸ್ಥಿತಿಯಲ್ಲಿ ಏನು ಮಾಡಲೂ ಸಾಧ್ಯವಿಲ್ಲದೆ, ಇಂಟರ್ನ್-ಶಿಪ್ ಮುಗಿಸುವುದೂ ಕಷ್ಟವಾದ ಕಾರಣ ವಾಪಸ್ ಊರಿಗೆ ಹೊರಟುಹೋದೆ. ನಂತರ ಬೆಂಗಳೂರಿಗೆ ಬರಲಾಗಲಿಲ್ಲ. ಹಾಗಾಗಿ ರಾಜ್ಕುಮಾರ್ ನೋಡುವ ಮಹದಾಸೆ ಮೂಲೆಸರಿಯಿತು.

+++++++++
ರಾಜ್ಕುಮಾರ್ ಕ್ಷೇಮವಾಗಿ ವೀರಪ್ಪನ್ ಕೈಯಿಂದ ತಪ್ಪಿಸಿಕೊಂಡು ವಾಪಸ್ ಬರಲೆಂದು ಬೇಡಿಕೊಂಡವರಲ್ಲಿ ನಾನೂ ಒಬ್ಬಳು. ರಾಜ್ಕುಮಾರ್ ವಾಪಸ್ ಬರುವ ಸಮಯದಲ್ಲಿ ನಾನು ಮಾಧ್ಯಮ ಜಗತ್ತಿನೊಳಗೆ ಪ್ರವೇಶ ಪಡೆದಿದ್ದೆ, ಹೈದರಾಬಾದಿಗೆ ವಲಸೆ ಹೋದೆ. ಆ ಸಮಯದ ಕಥೆಗಳನ್ನೆಲ್ಲ ಮಾಧ್ಯಮದೊಳಗಿನಿಂದಲೇ ಕುತೂಹಲದಿಂದ ಕೇಳಿದೆ, ನೋಡಿದೆ. ವೀರಪ್ಪನ್, ನಕ್ಕೀರನ್ ಗೋಪಾಲನ್, ಕರುಣಾನಿಧಿ, ಎಸ್ಸೆಂ ಕೃಷ್ಣ ಇತ್ಯಾದಿ ಪಾತ್ರಗಳು ನನಗೆ ಹೊಸದಾಗಿ ಪರಿಚಯವಾದವು. ದಿನಕರ್ ಅವರು ಬರೆದ ರಾಜರಹಸ್ಯ - ರಾಜ್ಕುಮಾರ್ ಬಿಡುಗಡೆಗಾಗಿ ನಡೆದ ನಾಟಕಗಳನ್ನೆಲ್ಲ ಅನಾವರಣಗೊಳಿಸಿದ ಪುಸ್ತಕವನ್ನೂ ಓದಿದೆ. ಇವೆಲ್ಲದರ ನಡುವೆ, ರಾಜ್ಕುಮಾರ್ ನೋಡುವ, ಮಾತಾಡುವ ಆಸೆ ಮಾತ್ರ ಆಸೆಯಾಗಿಯೇ ಉಳಿಯಿತು.

+++++++++
ಮತ್ತೆ ನಾಲ್ಕು ವರ್ಷಗಳು ಕಳೆದವು. ಬದುಕಿನ ಹೊಳೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಎಪ್ರಿಲ್ 4, 2006. ಹೈದರಾಬಾದಿನ ನಂಟು ಮುಗಿದು ಬೆಂಗಳೂರಿಗೆ ಕಾಲಿಟ್ಟಿದ್ದೆ. ಇನ್ನೇನು, ಇಲ್ಲೇ ಟೆಂಟು, ಯಾವಾಗ ಬೇಕಾದರೂ ರಾಜ್ಕುಮಾರ್ ನೋಡಬಹುದು ಅಂದುಕೊಂಡೆ.

ಆದರೆ, ಕಾಲ ಯಾರಿಗೂ ಕಾಯದ ಕ್ರೂರಿ... ನಾನಿನ್ನೂ ಸರಿಯಾಗಿ ರಾಜ್ಕುಮಾರ್ ನೋಡುವ ಪ್ಲಾನ್ ಹಾಕುವ ಮೊದಲೇ ಕಾದಿತ್ತು ನನಗೆ ಆಘಾತ... ಎಪ್ರಿಲ್ 13, 2006ರಂದು, ರಾಜ್ಕುಮಾರ್ ಇದ್ದಕ್ಕಿದ್ದಂತೆ ಇನ್ನಿಲ್ಲವಾದರು.

+++++++++
ಅಣ್ಣಾವ್ರು ಇನ್ನಿಲ್ಲವಾದ ದಿನ ಎಲ್ಲೆಲ್ಲೂ ಗಲಾಟೆ... ಯಾಕೆ ಗಲಾಟೆ ಅಂತ ಯಾರಿಗೂ ಗೊತ್ತಿಲ್ಲ. ರಸ್ತೆಯಲ್ಲೆಲ್ಲ ಗ್ಲಾಸಿನ ಚೂರುಚೂರು, ಮುಚ್ಚಿದ ಕಟ್ಟಡಗಳು... ಒಡೆದ ಗಾಜಿನ ಕಿಟಿಕಿಗಳು... ರಸ್ತೆಯಲ್ಲಿ ಅಲ್ಲಲ್ಲಿ ಬೆಂಕಿ... ಸುಡುತ್ತಿದ್ದ ಟಯರುಗಳು... ರಸ್ತೆಗಳಲ್ಲಿ ವಾಹನಸಂಚಾರ ಬಲುವಿರಳ... ಜನರ ಸುಳಿವೇ ಇಲ್ಲ... ಎಲ್ಲೆಡೆ ಹಾರುತ್ತಿದ್ದ ಹಳದಿ-ಕೆಂಪು ಬಣ್ಣದ ಬಾವುಟ...
ಆರ್. ಟಿ. ನಗರದಿಂದ ವಿಜಯನಗರಕ್ಕೆ ಕಾರ್ಡ್ ರೋಡಿನಲ್ಲಿ ಆಟೋವೊಂದರಲ್ಲಿ ಕುಳಿತು ಓಡುತ್ತಿದ್ದ ನಾನು, ಎಲ್ಲಿ ಕಲ್ಲು ಬೀಳುತ್ತದೋ, ಎಲ್ಲಿ ಗೂಂಡಾಗಳು ಬರುತ್ತಾರೋ, ಏನು ಮಾಡುತ್ತಾರೋ ಅಂತ ಹೆದರಿ ಜೀವ ಕೈಲಿ ಹಿಡ್ಕೊಂಡು ಕೂತಿದ್ದೆ... ಹಿಂಸೆಯನ್ನು ಎಂದೂ ಬೆಂಬಲಿಸದ ಸಾಧು ರಾಜ್ಕುಮಾರ್ ಹೆಸರಲ್ಲಿ, ಕನ್ನಡತನದ ಹೆಸರಲ್ಲಿ ಆದಿನ ಬೆಂಕಿ ಹಚ್ಚಿದವರನ್ನು, ಗಲಾಟೆ ಮಾಡಿದವರನ್ನು, ಗ್ಲಾಸು ಒಡೆದವರನ್ನು, ದುಡ್ಡು ಕಿತ್ತವರನ್ನು, ನಾನೆಷ್ಟು ದ್ವೇಷಿಸುತ್ತೇನೆಂದರೆ, ಕೆಂಪು-ಹಳದಿ ಬಣ್ಣದ 'ಕನ್ನಡ' ಬಾವುಟವೇನಾದರೂ ಕಣ್ಣಿಗೆ ಕಂಡರೆ ಇಂದಿಗೂ ನನಗೆ ಸಿಟ್ಟು ನೆತ್ತಿಗೇರುತ್ತದೆ. ಆ ಬಾವುಟದ ಜತೆ ಗುರುತಿಸಿಕೊಂಡ ಗೂಂಡಾಗಳು ಮಾಡುತ್ತಿರುವ ಅನ್ಯಾಯವನ್ನು ಹತ್ತಿಕ್ಕಲು ಯಾರೂ ಇಲ್ಲವಲ್ಲಾ ಅನಿಸುತ್ತದೆ.
+++++++++
ಕೊನೆಗೂ ನಾನು ಅಣ್ಣಾವ್ರನ್ನು ಭೇಟಿಯಾದೆ... ಅವರು ಸತ್ತು ಒಂದು ವಾರದ ನಂತರ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಅವರ ಸಮಾಧಿಯ ಎದುರು ಫೋಟೋವಾಗಿ ಕುಳಿತಿದ್ದರು ಅಣ್ಣಾವ್ರು... 80ರ ದಶಕದ ಫೋಟೋ ಇರಬೇಕು. ಇನ್ನೂ ತಲೆ ಬೋಳಾಗುತ್ತಿದ್ದಂತಿತ್ತು. ಆದರೆ ಅದೇ ತುಂಬು ನಗು... ಅದೇ ಉದ್ದ ಮೂಗು... ನೋಡುತ್ತಿದ್ದರೆ ಅವರ ಜೇನುದನಿಯೂ ಕೇಳಿದಂತಾಗುತ್ತಿತ್ತು. ಭೇಟಿಯಾಗಿದ್ದರೆ ಏನು ಮಾತಾಡುತ್ತಿದ್ದೆನೋ ಗೊತ್ತಿಲ್ಲ. ಆದರೆ, ಜಗದಲ್ಲಿಲ್ಲದೆಯೂ ಮನದಲ್ಲುಳಿದುಹೋದವರ ಭಾವಚಿತ್ರದೆದುರು ನಿಂತ ಕ್ಷಣ ಯೋಚನೆಗಳೆಲ್ಲ ಫುಲ್-ಸ್ಟಾಪ್ ಹೂಡಿ ನಿಂತವು. ರಾಜ್ ಸಮಾಧಿಯ ಸಾನ್ನಿಧ್ಯದ ತಂಗಾಳಿಗೆ ಖಾಲಿ ಮನಸ್ಸು ಅಂತರ್ಮುಖಿಯಾಗಿತ್ತು... ಸ್ಮೃತಿಯಲ್ಲಿ ಅಚ್ಚೊತ್ತಿ ಕುಳಿತಿದ್ದ ಹಾಡೊಂದು ಸುಮ್ಮನೇ ಸುಳಿದಾಡತೊಡಗಿತು...
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು...
ನಾವು ಬಯಸಿದಂತೆ ಬಾಳಲೇನು ನಡೆಯದು...
ವಿಷಾದವಾಗಲೀ ವಿನೋದವಾಗಲಿ...
ಅದೇನೆ ಆಗಲೀ ಅವನೆ ಕಾರಣ...

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು...
ಬಯಸಿದಾಗ ಕಾಣದಿರುವ ಎರಡು ಮುಖಗಳು...
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆಯೇತಕೆ... ನಿರಾಸೆಯೇತಕೆ...
ಅದೇನೆ ಬಂದರೂ ಅವನ ಕಾಣಿಕೆ...
+++++++++
ಇಂದು ರಾಜ್ ಇಲ್ಲದಿರಬಹುದು. ಆದರೆ, ಆ ಜೇನ ದನಿ, ಆ ವಿನೀತ ಭಾವ, ಮೇರು ವ್ಯಕ್ತಿತ್ವ.. ಎಂದೆಂದೂ ಮರೆಯದ ಸ್ಮೃತಿಯಾಗಿ ನೆಲೆಯಾಗಿದೆ.

Sunday, April 6, 2008

28ರಲ್ಲಿ ಗುಂಪಿಗೆ ಸೇರದವರು..!

1998 ಅಥವಾ 1999ನೇ ಇಸವಿ. ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ಕಾಲ. ರಜದಲ್ಲಿ ಇರಬೇಕು, ಸರಿಯಾಗಿ ನೆನಪಿಲ್ಲ, ಅಜ್ಜನ ಮನೆಗೆ ಒಂದು ಸಾರಿ ಹೋಗಿದ್ದೆ. ಅಲ್ಲಿ ಮಾವಂದಿರ ಮಕ್ಕಳೊಡನೆ ಮಾತಾಡುತ್ತಿದ್ದಾಗ ನಾನು ಜರ್ನಲಿಸಂ ಸೇರಲಿರುವುದನ್ನು, ಆಮೇಲೆ ನನಗೆ ಜರ್ನಲಿಸ್ಟ್ ಉದ್ಯೋಗ ಸಿಗಲಿರುವುದನ್ನು ತಿಳಿಸಿದೆ. ಆಗ ನನ್ನ ಪುಟ್ಟ ಭಾವ, 6-7 ವರ್ಷದ ಪ್ರಶಾಂತ, ’ಜರ್ನಲಿಸ್ಟಾ?’ ಎಂಬ ಉದ್ಗಾರ ತೆಗೆದ. ಯಾಕೋ ಎಂದು ಕೇಳಿದರೆ, ಸಿಕ್ಕಾಪಟ್ಟೆ ನಾಚಿಕೊಂಡ.


ಸ್ವಲ್ಪ ಒತ್ತಾಯ ಮಾಡಿದ ಮೇಲೆ, ಅವನ ಬಾಯಿಂದ ಕಾರಣ ಹೊರಬಂತು. ಕೆಲದಿನಗಳ ಹಿಂದೆ ಉದಯ ಟಿವಿಯಲ್ಲಿ ಬರುತ್ತಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪನವರ ಸಂದರ್ಶನ ನೋಡಿದ್ದನಂತೆ. ಅದರಲ್ಲಿ ಇಂಟರ್ವ್ಯೂ ಮಾಡುತ್ತಿದ್ದ ತೇಜಸ್ವಿನಿ ಎಂಬ ಪತ್ರಕರ್ತೆಯ ಹಣೆಗೆ, ಇಂಟರ್ವ್ಯೂ ಮುಗಿಸಿ ಏಳುವಾಗ ನಿಜಲಿಂಗಪ್ಪನವರು ಮುತ್ತು ಕೊಟ್ಟಿದ್ದರಂತೆ... :) ಅದಕ್ಕೆ ಪುಟ್ಟ ತನ್ನ ಅತ್ತಿಗೆಗೆ ಎಲ್ಲಿ ಹಾಗಾಗುತ್ತದೋ ಅಂತ ಭಯಪಟ್ಟು, ಜರ್ನಲಿಸಂ ಬಿಟ್ಟುಬಿಡಲು ಸಲಹೆ ನೀಡಿದ್ದ... :)


++++++++++++++++++


ಕನ್ನಡ ದೃಶ್ಯ ಪತ್ರಿಕೋದ್ಯಮದಲ್ಲಿ ’ಜರ್ನಲಿಸ್ಟ್’ ಆಗಿರುವ, extra-ordinary ಎನ್ನುವಂತಹ ಮಹಿಳೆಯರ ಹೆಸರು ಹೆಚ್ಚೇನೂ ಕೇಳಿಬರುವುದಿಲ್ಲ. ಇಂತಹದರಲ್ಲಿ, ತೇಜಸ್ವಿನಿ ತನ್ನ ವೃತ್ತಿಪರತೆಯಿಂದಲೇ ಪ್ರಸಿದ್ಧಿ ಪಡೆದಿದ್ದರು. ಅದರ ಜತೆಗೆ ಬೆಳೆದ ರಾಜಕೀಯದ ನಂಟು 2004ರಲ್ಲಿ ಅವರನ್ನು ದೇವೇಗೌಡರ ವಿರುದ್ಧ ಗೆದ್ದು ಸಂಸದೆಯಾಗುವಂತೆ ಮಾಡಿತು.


ಮೊನ್ನೆ ಮೊನ್ನೆ ಒಂದು ದಿನ ನನ್ನ ಹಣೆಬರಹ ನನ್ನನ್ನು ಕೊನೆಗೂ ಅದೇ ತೇಜಸ್ವಿನಿಯ ಎದುರು ತಂದು ನಿಲ್ಲಿಸಿತು :) ಅಲ್ಲಿ ಕಂಡವರು, ಒಬ್ಬ ಬಿಸಿರಕ್ತದ, ಆದರ್ಶಗಳೇನೆಂದು ಗೊತ್ತಿರುವ, ಕನಸುಗಳನ್ನು ಕಾಣುವ ಶಕ್ತಿಯಿರುವ ರಾಜಕಾರಣಿ, ಸಂಸದೆ. ಆಕೆಯೊಳಗಿನ ಪತ್ರಕರ್ತೆ ಮಾತ್ರ ಸ್ವಲ್ಪ ನಿರಾಶರಾಗಿದ್ದುದನ್ನು ಈ ಹಿಂದೆ ಬೇರ್ಯಾವುದೋ ಸಂದರ್ಶನದಲ್ಲಿ ನೋಡಿದ್ದೆ. ರಾಜಕಾರಣಿಯಾಗಿ ಕನಸು ಕಾಣುವ ಹಕ್ಕು ಕಳೆದುಕೊಂಡಿದ್ದೇನೆ ಎಂದಿದ್ದರು ಆಕೆ. ಬಂದಿದ್ದನ್ನು ಎದುರಿಸಲೇಬೇಕಾದ ಅನಿವಾರ್ಯತೆಯನ್ನು ಆಕೆ ಒಪ್ಪಿಕೊಂಡಿದ್ದರು.


ಕರ್ನಾಟಕದ ಜನ ಆರಿಸಿ ದೆಹಲಿಗೆ ಕಳುಹಿಸಿದ 28 ಮಂದಿಯಲ್ಲಿ ಆಟಿಗೊಮ್ಮೆ, ಹುಣ್ಣಿಮೆಗೊಮ್ಮೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಹಾಜರಾಗಿ ತುಟಿ ಹೊಲಿದುಕೊಂಡು ಕೂರುವವರೇ ಹೆಚ್ಚು. ಕೆಲವೇ ಕೆಲವು ಮಂದಿ ಮಾತ್ರ ನಿಯಮಿತವಾಗಿ ಸದನಕ್ಕೆ ಹಾಜರಾಗುವವರು, ಹಾಜರಾದರೂ ಮಾತಾಡುವವರ, ಚರ್ಚೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯೇ ಇದೆ.

ಪರಿಸ್ಥಿತಿ ಹೀಗಿರುವಾಗ ರೆಗ್ಯುಲರ್ ಆಗಿ ಸಿನ್ಸಿಯರ್ ಆಗಿ ಉತ್ಸಾಹ ಕಳೆದುಕೊಳ್ಳದೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಈ‍ ಅಪರೂಪದ ಸಂಸದೆಗೆ ಇನ್ನೂ ಹೆಚ್ಚು ಮಹಿಳೆಯರನ್ನು ಸದನದಲ್ಲಿ ನೋಡುವ ಆಸೆಯಿದೆ. ಪಾರ್ಲಿಮೆಂಟಿನಲ್ಲಿ ಎಂದೋ ಚರ್ಚೆಗೆ ಬರಬೇಕಾಗಿದ್ದ 33% ಮಹಿಳಾ ಮೀಸಲಾತಿ ಮಸೂದೆಗಾಗಿ ಇವತ್ತಿಗೂ ಹೋರಾಡುತ್ತಿರುವವರಲ್ಲಿ ಈಕೆಯೂ ಒಬ್ಬರು. ಮಹಿಳೆಯರನ್ನು ಬದಿಗೊತ್ತಿಯೇ ಸಾಗುತ್ತಿರುವ ವ್ಯವಸ್ಥೆಯ ಬಗೆಗೆ ಸಾಧ್ಯವಾದಾಗಲೆಲ್ಲ ದನಿಯೆತ್ತುವ ಈಕೆ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಅತಿ ಹೆಚ್ಚು ಹಾಜರಾತಿಯಿರುವ ಕರ್ನಾಟಕದ ಸಂಸದೆ.


ರಾಜಕೀಯವೆಂದರೆ ತನ್ನೊಳಗೆ ಇಳಿದವರಿಗೆಲ್ಲ ಕೊಳಕಿನ ಕೆಸರು ಮೆತ್ತುವ ಕೂಪವೆಂಬುದು ಒಂದು ಹಂತದ ತನಕ ಒಪ್ಪಬಹುದಾದ ಮಾತು. ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ. ಬಹುಶ: ಈ ಸಿದ್ದಾಂತದ ಬೆನ್ನಹಿಂದೆ ಬಿದ್ದು ರಾಜಕೀಯಕ್ಕೆ ಇಳಿದಿರಬೇಕು ತೇಜಸ್ವಿನಿ... ಮೆತ್ತಿದ ಕೆಸರಿನ ನಡುವೆಯೂ ನಗು ಮರೆಯದ ಈಕೆ ಮುಂದೆಯೂ ಹೀಗೆಯೇ ಇರಲಿ, ಸಂಸತ್ ಸದನದಲ್ಲಿ ಇಂತಹ ಬಿಸಿರಕ್ತ-ಹೊಸ ಯೋಚನೆಗಳು ತುಂಬಿದ ಮಹಿಳೆಯರ ಸಂಖ್ಯೆ ಹೆಚ್ಚಲಿ ಅಂತ (ಇಲ್ಲಿವರೆಗೆ ಓಟೇ ಹಾಕದ ಕಾರಣ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕು ನನಗೆ ಇಲ್ಲದಿದ್ದರೂ) ಮನದುಂಬಿ ಹಾರೈಸ್ತೀನಿ... :)

(ಚಿತ್ರ ಕೃಪೆ : ಶ್ರೀನಿಧಿ ಡಿ.ಎಸ್.)