Showing posts with label ಮಾಧ್ಯಮ. Show all posts
Showing posts with label ಮಾಧ್ಯಮ. Show all posts

Tuesday, May 5, 2009

ತಿಳಿವಿನತ್ತಲಿನ ಪಯಣಕ್ಕೊಂದು ವಿದಾಯ...

'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.

++++++++++++

ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.

ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.

This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...

ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...

ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...

ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...

ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...

ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++

300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...

ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.

++++++++++++

Sunday, March 29, 2009

ಥ್ರಿಲ್ ಬೇಕಾ? 13B ನೋಡಿ!

ತುಂಬಾ ದಿನದಿಂದ ನೋಡಬೇಕೆಂದುಕೊಂಡು ನೋಡಲಾಗಿರಲಿಲ್ಲ, ಆದರೆ ಇವತ್ತು 13B ಚಿತ್ರ ನೋಡಿಯೇ ಬಿಟ್ಟೆ. ಮೊದಲೇ ಪ್ಲಾನ್ ಮಾಡದಿದ್ದರೂ ಅಚಾನಕ್ಕಾಗಿ ಹೊರಟದ್ದಾಯ್ತು. ಎದ್ದೂ ಬಿದ್ದೂ ಓಡಿ ಹೋಗಿ ಟಿಕೆಟ್ ತಗೊಂಡು ಥಿಯೇಟರಲ್ಲಿ ಕೂತುಕೊಳ್ಳುವಾಗ ಆಗಲೇ ಮಾಧವನ್ ಮತ್ತು ಕುಟುಂಬ ನಂಬರ್ 13ರ ಹೊಸಾ ಮನೆಗೆ ಪ್ರವೇಶಿಸಿಯಾಗಿತ್ತು. ಇಂಟರ್-ಮಿಶನ್ ಬರುವಷ್ಟರಲ್ಲಿ ಇನ್ನೇನಾಗುತ್ತದೋ ಅಂತ ಉಸಿರು ಬಿಗಿಹಿಡಿದು ಕಾಯುವ ಹಂತಕ್ಕೆ ನಮ್ಮನ್ನು ಚಿತ್ರ ತಂದು ನಿಲ್ಲಿಸಿತ್ತು.

ಇಡಿಯ ಚಿತ್ರ ಎಷ್ಟು ಚೆನ್ನಾಗಿತ್ತೆಂದರೆ, ಚಿತ್ರ ಮುಗಿದಿದ್ದೇ ಗೊತ್ತಾಗಲಿಲ್ಲ. ನಾನು ಯಾವುದೇ ಹಾರರ್-ಗೆ ಸುಲಭಕ್ಕೆ ಹೆದರುವವಳಲ್ಲ, ಸ್ವಲ್ಪಮಟ್ಟಿಗೆ ಗಟ್ಟಿಮನಸ್ಸಿನವಳು ಅಂತ ಅಂದುಕೊಂಡಿದ್ದೆ. ಅಂತಹ ನನ್ನನ್ನು 4-5 ಸಾರಿ ಈಚಿತ್ರ ಬೆಚ್ಚಿಬೀಳಿಸಿತು... ಕೊನೆಗೆ ಪಕ್ಕದಲ್ಲಿದ್ದ ಅರ್ಪಣಾಳ ಕೈಹಿಡಿದುಕೊಂಡು ಕೂತು ಸಿನಿಮಾ ನೋಡಿದ್ದಾಯಿತು :-)

ಕಥೆ ವಿಭಿನ್ನವಾಗಿತ್ತು. ಅದೃಶ್ಯಶಕ್ತಿಗಳು ಇವೆಯೆಂಬುದರಲ್ಲಿ ನಮಗೆ ನಂಬಿಕೆಯಿಲ್ಲದಿದ್ದರೆ 13B ನಂಬಿಸಲು ಯತ್ನಿಸುವುದಂತೂ ನಿಜ. ಚಿತ್ರದೊಳಗಂತೂ ಯಾವುದೇ ಸಂಶಯವಿಲ್ಲದಂತೆ ಅದೃಶ್ಯಶಕ್ತಿಗಳ ಇರವನ್ನು ಚಿತ್ರಿಸಲಾಗಿದೆ. ಇದೇ ವಿಷಯದ ಮೇಲೆ ಈಹಿಂದೆಯೂ ಚಿತ್ರಗಳು ಬಂದಿವೆ, ಆದರೆ ಇದು ಅವ್ಯಾವುದನ್ನೂ ನೆನಪಿಸುವುದಿಲ್ಲ. ನಾ ನೋಡಿದ ಎಲ್ಲಾ ಹಾರರ್ ಚಿತ್ರಗಳಿಗಿಂತ ಇದು ವಿಭಿನ್ನ. ಹಾರರ್ / ಥ್ರಿಲ್ಲರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟು ಹಾರರ್ ಸೃಷ್ಟಿಸಲಾಗುತ್ತದೆ (ಉದಾಹರಣೆ - ಆಪ್ತಮಿತ್ರ, ವಾಸ್ತುಶಾಸ್ತ್ರ ಇತ್ಯಾದಿ). ಈ ಚಿತ್ರದ ಸಂಗೀತ ಹಾರರ್ ಸೃಷ್ಟಿಸುವುದರಲ್ಲಿ ಕೆಲವೆಡೆ ಸಫಲವಾದರೂ ಕೆಲವು ಕಡೆ ಸ್ಟೀರಿಯೋಟೈಪಿಕ್ ಅನಿಸಿ ಕಿರಿಕಿರಿಯಾಗುತ್ತಿತ್ತು. ಮಾಧವನ್ ಪೂಜಾಕೋಣೆಯಲ್ಲಿ ಮೊಳೆ ಹೊಡೆಯುವಾಗ ಧ್ವನಿ ಸುತ್ತಿಗೆಯಚಲನೆಯ ಜತೆ ಸಿಂಕ್ ಆಗದಿರುವುದು, ಒಂದೆರಡು ಶಾಟ್-ಗಳಲ್ಲಿ ತುಟಿ ಚಲನೆಗೂ ಮಾತಿಗೂ ಸಂಬಂಧವಿಲ್ಲದಿರುವುದು ಇತ್ಯಾದಿಗಳಿಂದಾಗಿ, ಧ್ವನಿವಿನ್ಯಾಸ ಕೂಡ ತನ್ನ ಉತ್ಕೃಷ್ಟತೆ ಕಳೆದುಕೊಂಡಿದೆ.

ಆದರೆ ಚಿತ್ರದ ವಿಶೇಷತೆಯೇನಪ್ಪಾ ಅಂದ್ರೆ, ಸಂಗೀತದ ಅಥವಾ ಸೌಂಡ್ ಇಫೆಕ್ಟ್-ಗಳ ಹೊರತಾಗಿಯೂ ಪದೇ ಪದೇ ಬರುವ ಲಿಫ್ಟ್-ನ ಶಾಟ್-ಗಳು, ಮಾಧವನ್ ಮುಖ, ಶಾಟ್ ಸಂಯೋಜನೆ - ಇಷ್ಟರಿಂದಲೇ ಚಿತ್ರ ಥ್ರಿಲ್ಲಿಂಗ್ ಅನಿಸುತ್ತದೆ, ಹಾರರ್ ಸೃಷ್ಟಿಸುತ್ತದೆ. ಮೊದಮೊದಲು ಕೆಲವೆಡೆ silhouette shots ಕಿರಿಕಿರಿ ಅನಿಸಿದರೂ, ಕ್ಯಾಮರಾ ವರ್ಕ್ ಚೆನ್ನಾಗಿತ್ತು. ಕಪ್ಪು-ಬಿಳುಪಿನಲ್ಲೇ ತೋರಿಸಿದ ಭಯಾನಕತೆ ಕೂಡ ಇಷ್ಟವಾಯ್ತು. ಕೆಲಕಡೆ ಚಿತ್ರ ಅದ್ಯಾಕೋ ಹಿಚ್-ಕಾಕ್-ನ ಸೈಕೋದ ಕೆಲ ಶಾಟ್-ಗಳನ್ನು ನೆನಪಿಸಿತು.

ಮೊದಲ ಭಾಗದಲ್ಲಿ ನಾಯಿ ಹಿಡಿದ ಮುದುಕ ಮತ್ತು ಮಾಧವನ್ ಇರುವ ದೃಶ್ಯಗಳ ಸಂರಚನೆ ಚಿತ್ರದ ಪೂರ್ಣ ವಿನ್ಯಾಸಕ್ಕೆ ಹೊಂದುವುದಿಲ್ಲ. ಅವುಗಳನ್ನು ಚಿತ್ರಿಸಿರುವ ರೀತಿ ಆತನೂ ಈ ಹಾರರ್-ನ ಅವಿಭಾಜ್ಯ ಭಾಗವೇನೋ ಅನ್ನುವ ಅನಿಸಿಕೆ ಮೂಡಿಸುತ್ತದೆ. ನಂತರ ಆತ ಏನೂ ಅಲ್ಲದೆ ಹೋಗುತ್ತಾನೆ, ಕಥೆಗೆ ಅನವಶ್ಯಕವಾಗಿ ಹೋಗುತ್ತಾನೆ, ನಾಯಿ ಮಾತ್ರ ಮಹತ್ವ ಪಡೆಯುತ್ತದೆ. ಕೊನೆಗೆ ಆತನ ನಾಯಿ ಮಾತ್ರ ಚಿತ್ರದ ಕ್ಲೈಮಾಕ್ಸ್ ಶಾಟ್-ನಲ್ಲಿರುತ್ತದೆ, ಆತ ಇರುವುದಿಲ್ಲ. ಇಡಿಯ ಚಿತ್ರದಲ್ಲಿ ಯಾರ ಮೇಲೂ ಸಂಶಯ ಪಡಲಾರದೆ ವೀಕ್ಷಕ ಒದ್ದಾಡುತ್ತಾನೆ, ಮಾಧವನ್ ಮತ್ತು ಗೆಳೆಯನ ಮೂಲಕವೇ ಕಥೆ ಗೊತ್ತಾಗುತ್ತ ಹೋಗುತ್ತದೆ. ಹಾಗಿರುವಾಗ ಸುಮ್ಮನೆ ಸಂಶಯ ಹುಟ್ಟಿಸಲಿಕ್ಕಾಗಿ ಮುದುಕನ ವೈಭವೀಕರಣ ಬೇಕಿರಲಿಲ್ಲ. ಈ ಅಂಶ ನನಗೆ ಕಿರಿಕಿರಿ ಹುಟ್ಟಿಸಿತು, ಮತ್ತು ಇದನ್ನು ಸ್ವಲ್ಪ ಜಾಣತನದಿಂದ ಸಂಯೋಜಿಸಿದ್ದರೆ ಸಮಯ ಉಳಿಸಬಹುದಿತ್ತೇನೋ ಅನಿಸಿತು. ಒಂದೇ ಒಂದು ಹಾಡಿದೆ ಚಿತ್ರದಲ್ಲಿ, ಅದು ಕೂಡ ಅನವಶ್ಯಕವಾಗಿತ್ತು.

ಇದು ಬಿಟ್ಟರೆ ಹೆಚ್ಚಿನೆಡೆ ಚಿತ್ರಕಥೆ ಚೆನ್ನಾಗಿತ್ತು. ನ್ಯಾರೇಶನ್ ಟೆಕ್ನಿಕ್ ಕೆಲವೆಡೆ ತುಂಬಾನೇ ಚೆನ್ನಾಗಿತ್ತು. ಮಾಧವನ್ ಮತ್ತು ಡಾಕ್ಟರ್ ಶಿಂಧೆ ನಟನೆಯಂತೂ ಸಿಕ್ಕಾಪಟ್ಟೆ ಖುಷಿಯಾಯಿತು, ಅಷ್ಟು ಸಹಜವಾಗಿತ್ತು. ಅಲ್ಲಲ್ಲಿ ಹಾರರ್ ಜತೆ ಕಾಮೆಡಿ ಮಿಕ್ಸ್ ಚೆನ್ನಾಗಿತ್ತು., ಹೊಟ್ಟೆತುಂಬ ನಗು ತರಿಸಿತು. ಅಲ್ಲಲ್ಲಿ ಕಥೆ ಸಾಗುವ ದಾರಿಯ ಬಗ್ಗೆ ಯಾವುದೋ ಸಂದರ್ಶನದ ಮೂಲಕ, ಮತ್ತು ಗೋಡೆ ಮೇಲಿನ ಒಂದು ಫೋಟೋ ಮೂಲಕ ಕ್ಲೂ ಕೊಟ್ಟರೂ, ಅದು ವೀಕ್ಷಕ ಗಮನಿಸಲಾಗದಷ್ಟು ಸಹಜವಾಗಿತ್ತು. ಇವೆಲ್ಲದರ ನಡುವೆ ಕೊನೆಯ ಎರಡು ದೃಶ್ಯಗಳ ತನಕವೂ ಸಸ್ಪೆನ್ಸ್ ಉಳಿಸಿಕೊಂಡು ಚಿತ್ರ ಖುಷಿಕೊಟ್ಟಿತು.

ಚಿತ್ರವಿಡೀ ಧಾರಾವಾಹಿಯ ಪಾತ್ರಗಳ ಮೂಲಕ ಮಾಧವನ್ ಕುಟುಂಬದ ಸದಸ್ಯರ ಬದುಕಿನ ಘಟನಾವಳಿಗಳನ್ನು ತೋರಿಸಿ, ಮುಂದೆ ಹೀಗೇ ಆಗಲಿದೆ ಅಂತ ಸುಲಭವಾಗಿ ಊಹಿಸಲು ವೀಕ್ಷಕನಿಗೆ ಚಿತ್ರ ಅವಕಾಶ ಕೊಡುತ್ತದೆ. ಅದಕ್ಕೆ ಅಡಿಕ್ಟ್ ಆಗಿಬಿಡುವ ವೀಕ್ಷಕನಿಗೆ ಕೊಲೆಗಾರನ ರೂಪದಲ್ಲಿ ಮಾಧವನ್-ಗೆ ಮಾಧವನ್-ಅನ್ನೇ ತೋರಿಸುವ ಮೂಲಕ ಚಿತ್ರ ಅನಿರೀಕ್ಷಿತವಾಗಿ ಚಮಕ್ ಕೊಡುತ್ತದೆ. ಅಲ್ಲಿ ಧಾರಾವಾಹಿಯಲ್ಲಿ ಮಾಧವನ್ ಪಾತ್ರಧಾರಿಯಾಗಿರುವ ಮಿಹಿರ್-ನ ತೋರಿಸಿದರೂ ತೊಂದರೆಯಿರಲಿಲ್ಲ, ಅದು ಮಾಮೂಲಾಗಿ, ಸಾಂಪ್ರದಾಯಿಕವಾಗಿ ಯೋಚಿಸಬಹುದಾದಂಥದ್ದು. ಆದರೆ, ಮಿಹಿರ್ ಪಾತ್ರ ಕಾಣಿಸುವುದಕ್ಕೂ, ಮಾಧವನ್ ಸ್ವತಹ ಕಾಣಿಸುವುದಕ್ಕೂ ನಡುವಿನ ವ್ಯತ್ಯಾಸದ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಇದು ಏನು ನಡೆಯಲಿದೆ, ಮುಂದೆ ಏನಾಗಬಹುದು ಅಂತ ಊಹಿಸಲಿಕ್ಕೇ ಸಾಧ್ಯವಾಗದ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದೇ ನಿಜವಾದ ಥ್ರಿಲ್! ಈ ಅಂಶ ನಂಗೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಷ್ಟವಾಯ್ತು. ಕ್ಲೈಮಾಕ್ಸ್-ನಲ್ಲಿ ಬರುವ ಕೊಲೆಯ ದೃಶ್ಯಕ್ಕೆ ಕೊಲೆಗಾರ ಮೊದಲೇ ಪ್ಲಾನ್ ಮಾಡದಿದ್ದರೂ ಆತ ಕೊಲೆಗಾರನಾಗಹೊರಡುವ ದೃಶ್ಯ ಚೆನ್ನಾಗಿತ್ತು.

ತಾಂತ್ರಿಕವಾದ ಹಲವಾರು ತಪ್ಪುಗಳು ಚಿತ್ರದಲ್ಲಿವೆ. ಪೂಜಾಕೋಣೆಯಲ್ಲಿ ಡ್ರಿಲ್ಲರ್ ಬಂದು ಶಾಕ್ ಹೊಡೆದು ಬಿದ್ದಾಗ ಅಲ್ಲಿಯ ಗೋಡೆಯಲ್ಲಿ ಪ್ಲಗ್ ಪಾಯಿಂಟ್ ಇರುತ್ತದೆ, ನಂತರದ ಶಾಟ್-ಗಳಲ್ಲಿ ಅದು ಇಲ್ಲ. ಮಾಧವನ್ ತಾನು ಕೆಲಸ ಮಾಡುವ ಜಾಗದಲ್ಲಿ ಮಾತನಾಡುತ್ತಿರುವ ಶಾಟ್-ನಲ್ಲಿ ಲಾಂಗ್ ಶಾಟ್ ಮತ್ತು ಕ್ಲೋಸ್ ಶಾಟ್-ನಲ್ಲಿ continuity ಇಲ್ಲ.

ಆದರೆ ಇವೆಲ್ಲಾ ಚಿತ್ರವನ್ನು ಕಲಾಕೃತಿಯೆಂದುಕೊಂಡು ನೋಡುವಾಗ ಮಾತ್ರ ಕಾಣಿಸುತ್ತವೆ, ಕಥೆಯನ್ನೇ ಮುಖ್ಯವೆಂದುಕೊಂಡು ಚಿತ್ರ ನೋಡುವಾಗ ಇವ್ಯಾವುದೂ ಮುಖ್ಯವೆನಿಸುವುದಿಲ್ಲ, ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ನೋಡಿದ ಉತ್ತಮ ಚಿತ್ರಗಳಲ್ಲೊಂದು 13B.

---------------------

ಮುಗಿಸುವ ಮುನ್ನ...
---------------------

4-5 ವರ್ಷದ ಹಿಂದೊಂದು ರಾತ್ರಿ. ರಾಂಗೋಪಾಲ್ ವರ್ಮಾ ನಿರ್ಮಾಣದ ವಾಸ್ತುಶಾಸ್ತ್ರ ನೋಡಿ ಆಗಷ್ಟೆ ಮನೆಗೆ ಬಂದಿದ್ದೆವು. ಊಟ ಮಾಡಿ ಲೈಟ್ ಆರಿಸಿ ಮಲಗಿಕೊಂಡೆವು. ಸ್ವಲ್ಪ ಹೊತ್ತಿಗೆ ಮನೆಯೊಳಗೆ ವಿಚಿತ್ರ ಸೌಂಡು, ಪರಪರಾ... ಪರಪರಾ... ಅಂತ...
ನಾನು ಸ್ವಲ್ಪ ಹೊತ್ತು ಸೌಂಡ್ ಕೇಳಿಸಿಕೊಂಡೆ... ನಂತರ ಮೆಲ್ಲಗೆ ರೂಂಮೇಟನ್ನು ಎಬ್ಬಿಸಿ ಏನೇ ಅದು ಅಂತ ಕೇಳಿದೆ... ಅವಳಿಗೂ ಗೊತ್ತಾಗಲಿಲ್ಲ... ವಾಸ್ತುಶಾಸ್ತ್ರ ಚಿತ್ರದಲ್ಲಿನ ಬಿಳಿಬಿಳಿ ಕಣ್ಣುಗಳ ದೆವ್ವಗಳು, ಸುಶ್ಮಿತಾ ಸೇನ್ ಮಗುವಿನ ಸಮೇತ ಉಳಿದುಕೊಂಡಳು ಅಂದುಕೊಂಡಾಗಲೇ ಮಗು ಬಿಳಿಕಣ್ಣು ತೋರಿಸಿ ವೀಕ್ಷಕರಿಗೆ ತಾನು ದೆವ್ವವೆಂದು ತೋರಿಸಿಕೊಡುವುದು, ಭಯಂಕರ ಸಂಗೀತ ಎಲ್ಲವೂ ಸೇರಿ ನನ್ನ ಮೇಲೆ ಸಿಕ್ಕಾಪಟ್ಟೆ ಇಫೆಕ್ಟ್ ಆಗಿತ್ತು ಕಾಣುತ್ತೆ... ಆಗೇ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಗಿತ್ತು... ಆದರೂ ನನಗೇನೇ ಆದರೂ ರೂಂಮೇಟ್-ಗೆ ಕೂಡ ಅದರಲ್ಲ ಪಾಲಿರುತ್ತದೆ ಅಂತ ಧೈರ್ಯ...
ಕೊನೆಗೆ ಮೆಲ್ಲಗೆ ಇಬ್ಬರೂ ಎದ್ದು ಕೂತು ಕತ್ತಲಲ್ಲಿ ಶಬ್ದ ಎತ್ತಲಿಂದ ಬರುತ್ತಿದೆಯೆಂದು ಗಮನಿಸಿದೆವು... ಶಬ್ದ ಬರುತ್ತಿದ್ದುದು ರೂಮಿನ ಬದಿಯಲ್ಲಿ ಎತ್ತರದಲ್ಲಿದ್ದ ಸಾಮಾನು ಪೇರಿಸಿಡುವ ಜಾಗದಿಂದ. ಸರಿ, ಶಬ್ದ ಮಾಡದೆ ಸ್ವಲ್ಪ ಹೊತ್ತು ಕೂತವರು ಇದ್ದಕ್ಕಿದ್ದಂತೆ ಲೈಟ್ ಹಾಕಿದೆವು. ಶಬ್ದ ಬರುತ್ತಿದ್ದುದು ಅಲ್ಲಿ ಏರಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲದ ಸಂತೆಯೊಳಗಿಂದ. ಅದನ್ನು ಕೂಡಲೇ ಹಿಡಿಸೂಡಿಯಿಂದ ಕೆಳಗೆ ಹಾಕಿದೆವು. ನೋಡುವುದೇನು, ಅದರಲ್ಲಿನ ಪ್ಲಾಸ್ಟಿಕ್ ಚೀಲವೊಂದರಿಂದ ಜಿರಳೆಯೊಂದು ಹೊರಬರಲು ವಿಫಲಯತ್ನ ಮಾಡುತ್ತಾ ಪರಪರಾ ಪರಪರಾ ಅಂತ ಸೌಂಡ್ ಮಾಡುತ್ತಿತ್ತು!!

Sunday, January 4, 2009

ಭ್ರಮೆಯ ಭೂತ ತೊಲಗಿದೆ...

ಮುಂದುವರಿದಿದೆ...


ಮುಂಬೈ ದಾಳಿಯ ಕುರಿತು ಓದುತ್ತ ಓದುತ್ತ ಅಂತರ್ಜಾಲದಲ್ಲಿ ಓಡಾಡುತ್ತಿರುವಾಗ ಎಲ್ಲೋ ಒಂದು ಕಡೆ ಮುಂಬೈ ದಾಳಿಯನ್ನು ಪಾರ್ಲಿಮೆಂಟ್ ದಾಳಿಗೆ ಹೋಲಿಸಿ ಬರೆದಿದ್ದಿದ್ದು, ಮತ್ತು ಅದಕ್ಕೆ ಅರುಂಧತಿ ರಾಯ್ ಲೇಖನದ ಸಹಾಯ ಕೂಡ ತೆಗೆದುಕೊಂಡಿದ್ದು ಕಾಣಿಸಿತು. ಅರುಂಧತಿ ರಾಯ್ (THE GREATER COMMON GOOD ಲೇಖನಕ್ಕಾಗಿ) ನಾ ಕಂಡ ಧೈರ್ಯವಂತ ಲೇಖಕಿಯರಲ್ಲೊಬ್ಬರು ಆಕೆ... ಗಮನವಿಟ್ಟು ಆಕೆಯ ಲೇಖನ ಓದಿದೆ... ಈಗಾಗಲೇ ಅರ್ಧ ಕೆಟ್ಟಿದ್ದ ತಲೆ, ಸಂಪೂರ್ಣ ಕೆಟ್ಟು ಹೋಯಿತು.

ಅಫ್ಝಲ್ ಗುರುಗೆ ಗಲ್ಲು ಯಾಕಿಲ್ಲ?

ಮುತಾಲಿಕ್ ಅಥವಾ ತೊಗಾಡಿಯಾ ಅಥವಾ ಇನ್ಯಾರೋ ಅಫ್ಝಲ್ ಗುರುವನ್ನು ಗಲ್ಲಿಗೇರಿಸದ ಸರಕಾರದ ಮೇಲೆ ಕೆಂಡಕಾರುವಾಗ ನಮಗೆಲ್ಲ ಹೌದುಹೌದೆನ್ನಿಸಿ ರಕ್ತ ಕುದಿಯುತ್ತದೆ. ಸುಳ್ಯಾಕೆ ಹೇಳಲಿ, ನನಗೂ ರಾಷ್ಟ್ರದ ಹೃದಯವನ್ನೇ ಆಕ್ರಮಿಸಿದ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸದಷ್ಟು ಹೀನಾಯವಾಗಿ ಹೋಯಿತಾ ನಮ್ಮ ದೇಶ ಅನಿಸಿ ಬೇಸರವಾಗಿತ್ತು. ನಮ್ಮಲ್ಲಿ ತುಂಬಾ ಜನ, ಅಫ್ಝಲ್ ಗುರು ಭಯೋತ್ಪಾದಕನೆಂದು ಸಾಧಿತವಾಗಿದೆ ಅಂತಲೇ ಅಂದುಕೊಂಡಿರುತ್ತೇವೆ, ಆದರೆ - ವಿಷಯ ಯಾವುದೇ ಇರಲಿ, ಅದನ್ನು ಮನಸ್ಸು ಮುಟ್ಟುವಂತೆ ಶಕ್ತಿಯುತವಾಗಿ ಬರೆಯುವುದು ರಾಯ್-ಗೆ ಚೆನ್ನಾಗಿ ಗೊತ್ತು ಅನ್ನುವುದು ನಿಜವಾದರೂ, ಅದರಲ್ಲಿರುವ ಸತ್ಯಗಳು ಸತ್ಯಗಳೇ ತಾನೇ. ಅರುಂಧತಿ ರಾಯ್ ಬರೆದುದು ಓದಿದಾಗ ನನ್ನ ಭ್ರಮೆ ಸ್ವಲ್ಪ ಮಟ್ಟಿಗೆ ತೊಲಗಿದ್ದಂತೂ ಸತ್ಯ. ನೀವೂ ಓದಿ ನೋಡಿ...

ಆಕೆ ಸೂಚಿಸಿರುವ ಪುಸ್ತಕ, Nirmalangshu Mukherji ಬರೆದಿರುವ December 13th: Terror Over Democracy ನಾನಿನ್ನೂ ಓದಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿದರೆ ಅದನ್ನೂ ನೋಡಬೇಕಿದೆ. ಹಾಗೇ ಅಫ್ಝಲ್ ಗುರುವಿನ ಹೇಳಿಕೆ ಕೂಡ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಅನಿಸಿದ್ದು - ಇಂದಿಗೂ ಅಫ್ಝಲ್ ಗುರುವನ್ನು ಯಾರು ಕಳುಹಿಸಿದರು, ಯಾಕೆ ಕಳುಹಿಸಿದರು, ಎಂಬುದನ್ನು ನಮ್ಮ ವ್ಯವಸ್ಥೆ ಪತ್ತೆಹಚ್ಚಲು ಸಾಧ್ಯವಾಗದೆಯೇ ವಿಚಾರಣೆ ಮುಗಿದಿರುವುದು ನಮ್ಮ ದೇಶದ ದುರಂತ. ಸಿಪಿಸಿ 313ನೇ ವಿಭಾಗದಡಿ ಆತ ನೀಡಿದ ಹೇಳಿಕೆಯನ್ನು ಯಾಕೆ ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ ಎಂಬುದು ಕೂಡ ಉತ್ತರ ಸಿಗದ ಪ್ರಶ್ನೆ. (ಯಾರಾದರೂ ಕಾನೂನು ಬಲ್ಲವರು ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡಿದ್ದಲ್ಲಿ, ಅಥವಾ ಅರುಂಧತಿ ರಾಯ್ ಲೇಖನಕ್ಕೆ ಏನಾದರೂ ಪ್ರತಿವಾದಗಳು ಇದ್ದಲ್ಲಿ ತಿಳಿಸಿ, ನಾವೂ ತಿಳಿದುಕೊಳ್ಳುತ್ತೇವೆ...) ಇವೆಲ್ಲ ಗೊತ್ತಾಗದೆ ಏನೇ ಮಾಡಿದರೂ, ನಮ್ಮ ಕಡೆ ಮುಳ್ಳಿಟ್ಟು ಮದ್ದು ಉಜ್ಜುವುದು ಅಂತಾರಲ್ಲ, ಹಾಗಾಗುತ್ತದೆ - ಅಷ್ಟೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ, ಬಿಜೆಪಿಯೇ ಪರಿಹಾರ ಸಿರೀಸ್-ನ ಜಾಹೀರಾತುಗಳಲ್ಲಿ ಇನ್ನೂ ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿಲ್ಲದ ಕಾಂಗ್ರೆಸ್ ಸರಕಾರವನ್ನು ಹೀಗಳೆಯಲಾಗಿತ್ತು. ದೇಶದ ಯಾವುದೋ ಮೂಲೆಯಲ್ಲಿದ್ದುಕೊಂಡು ಮಾಹಿತಿಗೆ ಮಾಧ್ಯಮವನ್ನೇ ಅವಲಂಬಿಸುವ ನಮ್ಮ ಹಾಗೆಯೇ, ದೇಶದೆಲ್ಲೆಡೆ ಇರುವ ಬಿಜೆಪಿ ನಾಯಕರು ಕೂಡ ಅಫ್ಝಲ್ ಗುರುವಿನ TRIAL ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲವೋ ಏನೋ... ಅಥವಾ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅವಶ್ಯಕತೆಯಿಲ್ಲ ಎನ್ನುವ ಅಸಡ್ಡೆಯೋ... ಅಥವಾ ಇನ್ನೇನೋ.... ?

ಅಷ್ಟು ಮಾತ್ರವಲ್ಲ. ಈಗ ಈ ಕೇಸ್ ಮೇಲೆ ಏನೇ ಹೇಳಿದರೂ ನ್ಯಾಯಾಂಗ ನಿಂದನೆಯಾಗುವ ಭಯಕ್ಕೆ ಸುಮ್ಮನಿದ್ದರೂ ಇರಬಹುದೇನೋ. ಹಾಗೇ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಸರಕಾರ ಮೀನ-ಮೇಷ ಎಣಿಸುತ್ತಿರುವುದಕ್ಕೆ ಆತನ ವಿಚಾರಣೆಯೇ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ಕಾರಣವಿರಬಹುದೇನೋ, ಆತನನ್ನು ಗಲ್ಲಿಗೇರಿಸಿದರೂ ಆತನ ಹಿಂದಿನ ಸೂತ್ರಧಾರಿಗಳು ಯಾರೆಂಬುದು ತಿಳಿಯುವುದಿಲ್ಲ ಎಂಬ ಸತ್ಯ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರಕ್ಕೆ ಚುಚ್ಚುತ್ತಿರಬಹುದೇನೋ, ಅಂತ ನನಗನಿಸಿತು. (ಇದಕ್ಕೆ ಸರಬ್ಜಿತ್ ಕೂಡ ಕಾರಣ ಅನ್ನುವ ಹಳೆಯ ವಾದ ಕೂಡ ಇದೆ)

ಅರುಂಧತಿ ರಾಯ್ ಮಾತ್ರ ಇಂದಿಗೂ ತನ್ನ ಈ ಲೇಖನಕ್ಕಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊತ್ತಿದ್ದಾರೆ. ಆಕೆ ನರ್ಮದಾ ಬಚಾವೋ ಆಂದೋಲನವನ್ನು ಬೆಂಬಲಿಸಿ ಬರೆದ, ನಿರ್ವಸಿತರಿಗೆ ಸರಿಯಾದ ವ್ಯವಸ್ಥೆಯಾಗಿರದಿದ್ದರೂ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿಯಿತ್ತ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿದ THE GREATER COMMON GOOD ಕೂಡ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿತ್ತು.

ಒಂದಿಷ್ಟು ಸಂಶಯಗಳು...

ಇಷ್ಟೆಲ್ಲ ಬರೆದ ಮೇಲೆ, ನನಗೆ ಕೆಲವು ಸಂಶಯಗಳು ಉಳಿದಿವೆ, ಅವುಗಳನ್ನೂ ಹಂಚಿಕೊಂಡುಬಿಡುತ್ತೇನೆ... ಚುನಾವಣೆಯಲ್ಲಿ ಎರಡನೇ ಹಂತದ ಮತದಾನ - ಉತ್ತರಕರ್ನಾಟಕ ಮತ ಹಾಕುವ ಮೊದಲಿನ ಆದಿತ್ಯವಾರ ಹುಬ್ಬಳ್ಳಿ ಕೋರ್ಟಲ್ಲಿ ಕೂಡ ಸ್ಫೋಟ ಆಗಿತ್ತು. ಧಾರವಾಡದಲ್ಲಿ ಜೀವಂತ ಬಾಂಬುಗಳು ಸಿಕ್ಕಿದ್ದವು. ಇವೆಲ್ಲ ಯಾರ ಕೃತ್ಯ ಅಂತ ಇಲ್ಲಿವರೆಗೆ ಪತ್ತೆಯಾಗಿಲ್ಲ. ನಮ್ಮ ಬೆಂಗಳೂರಿನಲ್ಲಿ ಐದಾರು ನಾಟಿ ಬಾಂಬ್ ಸಿಡಿಸಿ ಒಬ್ಬರನ್ನು ಕೊಂದು ಡ್ರೈ ರನ್ ಮಾಡಿದ್ದು ಯಾರು ಅಂತ ಇಷ್ಟು ದಿನವಾದರೂ ಪತ್ತೆಯಾಗಿಲ್ಲ. ಸಾಕ್ಷ್ಯ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ, ಮುಂಬೈ ಭಯೋತ್ಪಾದಕ ಕೃತ್ಯದ ಪ್ರತಿ ಸಾಕ್ಷ್ಯವೂ ಪಾಕ್ ಕಡೆ ನೇರವಾಗಿ ಬೆಟ್ಟುಮಾಡಿ ತೋರಿಸುತ್ತಿದೆ. ಮುಂಬೈಯ ಇಂಚಿಂಚು ತಿಳಿದುಕೊಂಡು ಅದ್ಭುತವಾಗಿ ಪ್ಲಾನ್ ಮಾಡಿ, ಜಿಪಿಎಸ್, ಸ್ಯಾಟಲೈಟ್ ಫೋನ್ ಇತ್ಯಾದಿ ಉಪಯೋಗಿಸಿಕೊಂಡು ಹೈಟೆಕ್ ವಿಧಾನದಲ್ಲಿ ಭಯೋತ್ಪಾದನೆಯ ಕೆಲಸ ಮಾಡಿಸುವ ಅಂತರ್ರಾಷ್ಟ್ರೀಯ ಉಗ್ರರು - ನಮ್ಮ ನಾಟಿ ಉಗ್ರರಿಗಿಂತ ದಡ್ಡರಾ? ಅದೂ ಸಿಕ್ಕಿಸಿಕ್ಕಿದಲ್ಲಿ ಸಾಕ್ಷ್ಯ ಬಿಟ್ಟು ಹೋಗುವಷ್ಟು? ತಾವು ಉಪಯೋಗಿಸಿದ ಫೋನನ್ನು, ಸಿಮ್ ಕಾರ್ಡುಗಳನ್ನು ಯಾರಾದರೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಗುವ ಹಾಗೆ ಬಿಟ್ಟುಹೋಗುತ್ತಾರಾ? ಅಥವಾ, ಇಂತಹ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ಏನಾಗುತ್ತದೆಂದು ಗೊತ್ತಿದ್ದು ಪೊಲೀಸರಿಗೆ ಸಿಕ್ಕಿಬೀಳುವ ಪರಿಸ್ಥಿತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುತ್ತಾರಾ? ಇವೆಲ್ಲ ಪ್ರಜ್ಞಾಪೂರ್ವಕವಾಗಿ ಯೋಚನೆಮಾಡುವ ಯಾರನ್ನೇ ಆದರೂ ಕಾಡುವ ಪ್ರಶ್ನೆಗಳು ಅನ್ನುವುದು ನಿಜ ತಾನೇ ?

ಉಗ್ರವಾದದ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕಾ, ಬ್ರಿಟನ್ ಇತ್ಯಾದಿ ರಾಷ್ಟ್ರಗಳಿಗೆ ಎದುರಾಗಿ ನಿಂತರೆ ಆಗುವ ಪರಿಣಾಮಗಳು ಗೊತ್ತಿದ್ದೂ ಪಾಕ್, ಯಾಕೆ ಅಷ್ಟು ಧೃಢವಾಗಿ ಭಾರತಕ್ಕೆ ಸಾಕ್ಷ್ಯ ಸಾಲದು, ಸರಿಯಾದ ಸಾಕ್ಷ್ಯ ತೋರಿಸಿ ಅನ್ನುತ್ತಿದೆ? ಅದರ ಪರವಾದ ಯಾವ ಸತ್ಯ ಅದಕ್ಕೆ ಅಷ್ಟು ಶಕ್ತಿ ಕೊಟ್ಟಿದೆ? ಮೊದಮೊದಲು ಪಾಕ್ ನಡೆಸಿದ ಕೃತ್ಯ ಎಂದು ಪಾಕ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಪ್ರಣಬ್ ಮುಖರ್ಜಿ, ನಂತರ ಪಾಕ್ ನೆಲದಲ್ಲಿನ ಉಗ್ರರು ನಡೆಸಿದ ಕೃತ್ಯ ಅನ್ನಲು ಕಾರಣವೇನು? ನಮ್ಮಲ್ಲಿ ಆದ ಉಗ್ರರ ಕೃತ್ಯಕ್ಕೆ ಅಮೆರಿಕಾದಿಂದ, ಬ್ರಿಟನ್-ನಿಂದ ಸಾಕ್ಷ್ಯ ಹೇಗೆ ಸಿಗುತ್ತಿದೆ? ಅಷ್ಟಕ್ಕೂ, ಭಾರತ ಸರಕಾರ ಇಲ್ಲಿವರೆಗೆ ತೋರಿಸಿದ ಸಾಕ್ಷ್ಯಗಳಲ್ಲಿ ಯಾವುದು ತಾನೇ ಬಂಧಿತ ಉಗ್ರ ಪಾಕ್-ನವ ಅಂತ UNDISPUTABLE ಆಗಿ ಹೇಳುತ್ತಿದೆ? ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು? (ಟೀವಿ ಚಾನೆಲ್ಲುಗಳು ಮಾಡಿದ ಸ್ಟಿಂಗ್ ಆಪರೇಶನ್ ಅಥವಾ ಮಾಧ್ಯಮ ವರದಿಗಳು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಯ:ಕಶ್ಚಿತ್ ನಾನೇ ಸಿದ್ಧಳಿಲ್ಲ, ಇನ್ನು ಪಾಕ್ ಹೇಗೆ ಒಪ್ಪಿಕೊಳ್ಳುತ್ತದೆ?) ಇವಕ್ಕೆಲ್ಲ ಸರಿಯಾದ ಉತ್ತರಗಳು ಇಲ್ಲಿವರೆಗೆ ಸಿಕ್ಕಿಲ್ಲ ನನಗೆ. ಇವಕ್ಕೆಲ್ಲ ಸರಿಯಾದ ಉತ್ತರಗಳು ಸಿಗುವ ವರೆಗೆ conspiracy theoryಗಳ ಪ್ರಭಾವ ನನ್ನ ತಲೆಯಿಂದಲಂತೂ ಹೋಗುವುದಿಲ್ಲ.

ಇಂದು.....

ನಾ ಬರೆದಿದ್ದರ ಸತ್ಯಾಸತ್ಯತೆ ಪರಿಶೀಲಿಸಿ, ನಂಬಲಿಕ್ಕೆ ಇಷ್ಟವಿದ್ದವರು ನಂಬಬಹುದು, ಇಷ್ಟವಿಲ್ಲದವರು ನಂಬದಿರಬಹುದು, ಅಥವಾ ಇದಕ್ಕೆ ವಿರುದ್ಧವಾದ ಸಂಶೋಧನೆ, ಯೋಚನಾಸರಣಿ ಇತ್ಯಾದಿಗಳ ಮೂಲಕ ನನಗನಿಸಿದ್ದು ತಪ್ಪು ಅಂತ ಸಾಧಿಸಲು ಕೂಡ ಹೊರಡಬಹುದು. ಮೊಸ್ಸಾಡ್ ಮತ್ತು ಇಸ್ರೇಲ್ ಕುರಿತ ಆಪಾದನೆಗಳು ಊಹಾಪೋಹಗಳು ಅಥವಾ conspiracy theory ಕೂಡ ಆಗಿಬಹುದಾದ ಸಾಧ್ಯತೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲೆಲ್ಲೋ ಅಲೆದಾಡಿ ಜಗತ್ತಿನ ಯಾವ ಭಾಗದಲ್ಲಿ ಏನು ಚರ್ಚೆ ನಡೆಯುತ್ತಿದೆ ಅಂತ ತಿಳಿದುಕೊಂಡದ್ದರಿಂದ ನನ್ನ ಜಗತ್ತು ವಿಶಾಲವಾಗಿದೆ. ನಾನು ತಿಳಿದುಕೊಂಡುದೇ ಸತ್ಯ ಅಂದುಕೊಂಡಿದ್ದೆ ನಾನು, ಅದು ಸುಳ್ಳಾಗಿದೆ, ಭ್ರಮೆಯ ಗುಳ್ಳೆಗಳೆಲ್ಲ ಒಡೆದುಹೋಗಿವೆ.

ಇವೆಲ್ಲಾ ಆದ ಮೇಲೆ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿದೆ, ದಾಳಿಯಲ್ಲಿ ಸತ್ತ ನಾಗರಿಕರ ಸಂಖ್ಯೆ ಮುಂಬೈ ದಾಳಿಯಲ್ಲಿ ಸತ್ತವರಿಗಿಂತ ಮೂರು ಪಟ್ಟಿನಷ್ಟು ಹೆಚ್ಚಿದೆ. ಈ ನಡುವೆ ಹೊಟ್ಟೆಪಾಡಿಗಾಗಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಹೊರಟಿದ್ದ 400ಕ್ಕೂ ಹೆಚ್ಚು ಜನರನ್ನು ಮೋಸದಿಂದ ಇಂಧನವಿಲ್ಲದ ಬೋಟುಗಳಲ್ಲಿ ಸಮುದ್ರ ಮಧ್ಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ, 100ರಷ್ಟು ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿತು, ಉಳಿದ 300 ಜನರ ಪತ್ತೆಯಿಲ್ಲ. ಈ ಎರಡೂ ಘಟನೆಗಳು ಮುಂಬೈ ಭಯೋತ್ಪಾದನೆ ಹುಟ್ಟಿಸಿದ ಗಾಬರಿ ಜಗತ್ತಿನಲ್ಲಿ ಹುಟ್ಟಿಸಿಯೇ ಇಲ್ಲ. ಆಲ್ಲಿ ಸತ್ತ ಜೀವಗಳಿಗೆ ಜಗತ್ತು ಮುಂಬೈ ದಾಳಿಯಲ್ಲಿ ಬಲಿಯಾದವರಿಗೆ ಕೊಟ್ಟ ಬೆಲೆ ಕೊಟ್ಟಿಲ್ಲ.

ನನಗೆ ಸಿಕ್ಕಿದ ಇಸ್ರೇಲಿ ಭೂತದ ಕಥೆ ಎಷ್ಟು ಸತ್ಯವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ, ಧರ್ಮದ ಆಧಾರದಲ್ಲಿಯೇ ಯೋಚಿಸುವ ಬಹಳಷ್ಟು ಜನರಿಗೆ ಈ ಎಲ್ಲಾ ಘಟನೆಗಳು, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮೀಕರಣಗಳು, ರಾಜಕೀಯ ಪಕ್ಷಗಳ ಜಾಣ ಕೃತ್ಯಗಳು ಈಗಲಾದರೂ ಕಣ್ಣು ತೆರೆಸಬೇಕು. ಮತ್ತು ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಎಲ್ಲಿ ಸಾಗುತ್ತಿದೆ ಎಂಬುದೂ ಅರಿವಾಗಬೇಕು. ಯುದ್ಧ-ಯುದ್ಧವೆಂದು ಕುಣಿಯುತ್ತಿರುವವರು ಯಾರೆಂದು ಕಣ್ಣುಬಿಟ್ಟು ನೋಡಿದರೆ ಸತ್ಯ ಗೊತ್ತಾಗುತ್ತದೆ. ಯುದ್ಧದ ಮಾತು, ಹಾಗೂ ಅಮೆರಿಕಾ-ಫ್ರಾನ್ಸ್ ಮತ್ತಿತರ ದೇಶಗಳ ಜತೆಗಿನ ನಾಗರಿಕ ಅಣು ಒಪ್ಪಂದದ ಭರದಲ್ಲಿ ಇಂಡೋ-ಇರಾನ್ ಗ್ಯಾಸ್ ಪೈಪ್ ಲೈನ್ ಮಾತುಕತೆಯನ್ನು ಮುಂದೆ ತೆಗೆದುಕೊಂಡು ಹೋಗುವುದನ್ನು ಮರೆತೇ ಬಿಟ್ಟಿತು ಭಾರತ... ದೂರದಲ್ಲಿರುವ ನೆಂಟರನ್ನು ಮೆಚ್ಚಿಸಲು ಪಕ್ಕದ ಮನೆಯವರನ್ನು ದೂರವಿಟ್ಟ ತಪ್ಪಿಗೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ದಿನ ಬರಬಹುದು. ಯಾರಿಗೆ ಯುದ್ಧದಿಂದ ಉಪಕಾರವೋ, ಅವರು ನಾವಲ್ಲ - ಅಂದರೆ ಭಾರತವಲ್ಲ, ಪಾಕಿಸ್ತಾನವೂ ಅಲ್ಲ. ಶಾಂತಿಗಿರುವ ಶಕ್ತಿ ಯುದ್ಧಕ್ಕಿಲ್ಲ ಎಂಬುದು ನಮಗೆಲ್ಲ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಾಗುತ್ತದೆ. ಮತ್ತು ನಮ್ಮೊಳಗಿದ್ದುಕೊಂಡು ಪಾಕ್ ನಮ್ಮ ಬದ್ಧ ವೈರಿಯೆಂಬಂತೆ ಆಡುತ್ತ ನಿಜವಾದ ಹಿತಶತ್ರುಗಳ ಬಗ್ಗೆ ಜಾಣಕುರುಡರಾಗುವ ಮಹಾನುಭಾವರುಗಳಿಗೂ ಒಳ್ಳೆಯದಾಗುತ್ತದೆ.

ಉಗ್ರರು ಯಾರೇ ಇರಲಿ, ಅವರು ತಮ್ಮ ಕೃತಿಗಳ ಮೂಲಕ ಕೊಲ್ಲುವುದು ಯಾವಾಗಲೂ ಮುಗ್ಧರನ್ನು. ಇಬ್ಬರ ಜಗಳ ಮೂರನೆಯವನಿಗೆ ಲಾಭ - ಸರಳ ಸಿದ್ಧಾಂತ, ಇತರ ಧರ್ಮಗಳ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೋಸ್ಕರ ಹಿಂದುಗಳಲ್ಲಿ ಅಡಕವಾಗಿರುವ ಮುಸ್ಲಿಂ ವಿರೋಧಿ ಭಾವನೆಯ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಅರ್ಥವಾದಾಗಲಾದರೂ ಹಿಂದು ಹಿಂದು ಎಂದು ಸಾಯುವವರು ಬದಲಾಗಬಹುದು ಅಂತ ಆಶಿಸಲೇ? ಒಂದು ಕಡೆ ಕಡೆ ಹಿಂದುತ್ವವೆಂದರೆ ವೇ ಆಫ್ ಲೈಫ್ ಅಂತ ಭಾಷಣ ಮಾಡುತ್ತ, ಇನ್ನೊಂದು ಕಡೆ ಚರ್ಚ್-ಗಳ ಮೇಲೆ ದಾಳಿ ನಡೆಸುತ್ತ so-called ಹಿಂದುತ್ವ ಮೆರೆಯುವ FANATICಗಳಿಗೆ, ಇನ್ನೊಂದು ಕಡೆ CHRISTIAN AGGRESSION ಬಗ್ಗೆ ದೊಡ್ಡದೊಡ್ಡದಾಗಿ ಮಾತಾಡುತ್ತ ಚರಿತ್ರೆಯ ಭಾರವನ್ನೆಲ್ಲ ಇಂದಿನ ಜನತೆಯ ಮೇಲೆ ಹಾಕಿ ನಾಳೆಗಳನ್ನು ಹಾಳುಮಾಡುವ SO-CALLED ಇತಿಹಾಸಕಾರರಿಗೆ ಅಥವಾ ಬುದ್ಧಿಜೀವಿಗಳಿಗೆ, ಮತ್ತು ಅದಕ್ಕೆ ಅಗತ್ಯವಿಲ್ಲದಷ್ಟು ಪ್ರಚಾರ ಕೊಟ್ಟು ಮನಸುಗಳನ್ನು ಕದಡಿದ ಮಾಧ್ಯಮಕ್ಕೆ ಈಗಲಾದರೂ ಜ್ಞಾನೋದಯವಾಗಬೇಕು.

ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಹಾಳುಗೆಡವದಿರಲಿ...

ಒಂದು ಕಾಲದಲ್ಲಿ, ಮಂದಿರವಲ್ಲೇ ಕಟ್ಟುವೆವು ಅಂದವರ ಹಾಡಿಗೆ ದನಿಗೂಡಿಸಿದವರಲ್ಲಿ ನಾನೂ ಇದ್ದೆ. ಆಗ ತುಂಬಾ ಚಿಕ್ಕವಳಿದ್ದೆ. ಆರ್ ಎಸ್ ಎಸ್-ನವರಿಂದ ಬದುಕಿನಲ್ಲಿ ಶಿಸ್ತು, ಕರ್ತವ್ಯಪರತೆ, ದೇಶಪ್ರೇಮ ಮೈಗೂಡಿಸಿಕೊಂಡವರು ನಾವು. ನಮ್ಮನೆಯಲ್ಲಿ ಇವತ್ತಿಗೂ ಬಿಜೆಪಿಗೇ ಓಟು. ಒಂದಾನೊಂದು ಕಾಲದಲ್ಲಿ ನಾನೇ ಅನ್ನುತ್ತಿದ್ದೆ, ಸೇರಿದರೆ ಬಿಜೆಪಿ ಸೇರ್ತೇನೆ, ಬಿಜೆಪಿಯಿಂದಲೇ ಓಟಿಗೆ ನಿಲ್ತೇನೆ ಅಂತ... ಆದರೆ, ಈಗ ಅದೆಲ್ಲಾ ಹುಚ್ಚೂ ಬಿಟ್ಟುಹೋಗಿದೆ :-) ಸತ್ಯದ ವಿವಿಧ ಮಜಲುಗಳನ್ನು ಅರಿತುಕೊಳ್ಳುತ್ತ ಹೋದಂತೆ , ಕಾಲ ತನ್ನ ಹೆಜ್ಜೆಗಳನ್ನು ಹಾಕುತ್ತ ಹೋಗುವಾಗ ತಂದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ, ನನಗಿದ್ದ ಭ್ರಮೆಗಳು ತೊಲಗಿವೆ.

ಭಯೋತ್ಪಾದನೆ ಇಂದು ಚುನಾವಣಾವಿಷಯವಾಗಿ ಉಳಿದಿಲ್ಲ. ಈಗ ಅದು ನಮ್ಮಲ್ಲಿ ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ, ಸರಿ-ತಪ್ಪಿನ ನಡುವಿನ ತೂಗಾಟದ ಪ್ರಶ್ನೆ, ನಿನ್ನೆಗಳ ನೆರಳಿನಲ್ಲಿ ಇಂದು ಎಸಗುವ ಕೃತ್ಯಗಳ ಮೂಲಕ, ನಾಳೆಗಳನ್ನು ನಾಶಪಡಿಸಹೊರಟ ಪಿಡುಗು. ಇದು ಎಲ್ಲಾ ಜಾತಿ-ಮತಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆ. ಇದನ್ನು ಹೇಳಹೊರಟವರು ಮೊದಮೊದಲು ವಿರೋಧ ಎದುರಿಸಿಯೇ ಎದುರಿಸುತ್ತಾರೆ, ಯಾಕೆಂದರೆ ನಮ್ಮ ಕೆಟ್ಟತನವನ್ನು ಒಪ್ಪಿಕೊಳ್ಳಲು ನಮಗೆ ಸಮಯ ಬೇಕು. ಕೆಲವೊಮ್ಮೆ ಬಹಳ ಸಮಯ ಕಳೆದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರಬಹುದು, ಅಥವಾ ಒಪ್ಪಿಕೊಳ್ಳುವುದು ಬೇಕಿಲ್ಲವಿರಬಹುದು. ಭಯೋತ್ಪಾದನೆ ನಿಗ್ರಹವಾಗಬೇಕು ಎಂದು ಹೋರಾಡುವವರೆಲ್ಲರೂ ಈ ಬೇಸಿಕ್ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಈನಿಟ್ಟಿನಲ್ಲಿ ಯೋಚಿಸುವಾಗ, ನಮ್ಮ ರಾಜ್ಯದಲ್ಲಿ ಹೀಗಾದರೆ ಎಷ್ಟು ಚೆನ್ನ ಅಂತ ಮನಸು ಲೆಕ್ಕ ಹಾಕುತ್ತದೆ...

1) ಒಂದಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ, ಯುವಜನತೆಗೆ ಉದ್ಯೋಗಗಳು ಕಲ್ಪಿಸಿ ಕೊಟ್ಟಲ್ಲಿ, ಅವರ ವಿಚಾರಧಾರೆಗಳು ಸರಿದಾರಿಯಲ್ಲಿ ಸಾಗುವಂತೆ ಮಾಡಿದಲ್ಲಿ, ಮುಂದೆ ಕೈಯಲ್ಲಿ ಕೋವಿ ಹಿಡಿದು ಭಯೋತ್ಪಾದಕರಾಗಬಹುದಾದ ಯುವಜನತೆ ಹಾದಿ ತಪ್ಪುವ ಬದಲು ತಮ್ಮ ಬದುಕಿನಲ್ಲಿ ತಾವು ವ್ಯಸ್ತರಾಗಬಹುದಲ್ಲವೇ?

2) ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿಸುತ್ತೇವೆಂದು ಪ್ರಾಥಮಿಕ ಶಿಕ್ಷಣ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಜತೆಗೆ, ನಮ್ಮ ರಾಷ್ಟ್ರದ ಪ್ರತಿ ಪ್ರಜೆಗೂ ಗೊತ್ತಿರಬೇಕಾದ ಪ್ರತಿಜ್ಞೆ, ಮತ್ತು ರಾಷ್ಟ್ರೀಯ ಭಾವೈಕ್ಯದ ಪ್ರತಿಜ್ಞೆ ಕೂಡ ಕಡ್ಡಾಯವಾಗಿಸಬಹುದಲ್ಲವೇ?

3) ಯಾವ್ಯಾವುದೋ ಸಂಘಸಂಸ್ಥೆಗಳಿಗೆ ಸೇನೆಯ ತರಬೇತಿ ನೀಡಲು ಅನುಮತಿ ನೀಡುವ ಬದಲು, ಸರಕಾರದೊಳಗಿನ ವ್ಯವಸ್ಥೆಯಲ್ಲಿ ನೇರವಾಗಿಯೇ ಇರುವ ಪೊಲೀಸರಿಗೇ ಅದನ್ನು ನೀಡಬಹುದಲ್ಲವೇ, ಸಂಘಸಂಸ್ಥೆಗಳಿಂದ ಈರೀತಿಯ ತರಬೇತಿ ತೆಗೆದುಕೊಳ್ಳುವವರನ್ನು ನೇರವಾಗಿ ಪೊಲೀಸ್ ಇಲಾಖೆ ಅಥವಾ ಸೇನೆಗೆ ಸೇರಲು ಪ್ರೋತ್ಸಾಹಿಸಬಹುದಲ್ಲವೇ?

4) ಭಯೋತ್ಪಾದನೆಯನ್ನು ಚುನಾವಣಾ ವಿಷಯವನ್ನಾಗಿಸಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿ ಅಂತ ಬೊಬ್ಬೆ ಹಾಕುವ ಬದಲು, ಎಲ್ಲೆಲ್ಲಿ ಅಧಿಕಾರವಿದೆಯೋ ಅಲ್ಲಿ ಚೆನ್ನಾಗಿ, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿ, ಒಳ್ಳೆ ಹೆಸರು ತೆಗೆದುಕೊಳ್ಳಬಾರದೇ?

5) ರಾಜ್ಯದಲ್ಲಿ ಸ್ಫೋಟಕ ವಸ್ತುಗಳು, ರಾಸಾಯನಿಕಗಳು ಇತ್ಯಾದಿಗಳ ಸಾಗಣಿಕೆ, ಉಪಯೋಗಗಳ ಮೇಲೆ ಇಂದಿಗೂ ಸರಿಯಾದ ನಿಯಂತ್ರಣವಿಲ್ಲ. ಅದನ್ನೆಲ್ಲ ಸರಿಪಡಿಸಿ, ಪೊಲೀಸ್ ಇಲಾಖೆಗೆ ಬೇಕಾದ ಸೌಲಭ್ಯ ಕೊಟ್ಟು ಆಧುನೀಕರಿಸಿ, ಸರಿಯಾದ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ರೈಲು ಹೋದ ಮೇಲೆ ಟಿಕೇಟು ತೆಗೆದುಕೊಳ್ಳುವ ಉದಾಸೀನದ ಬುದ್ಧಿ ಬಿಟ್ಟು ಮುಂದಾಲೋಚನೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಾಡಬೇಕಾದ್ದು ಮಾಡಬಹುದಲ್ಲವೇ?

6) ಭಯೋತ್ಪಾದನೆ ವಿರುದ್ಧ ನಮ್ಮ ಬಿಜೆಪಿ ಸರಕಾರ ನೇರವಾಗಿ ಕಾಲೇಜುಗಳಲ್ಲಿ ಭಾಷಣಗಳನ್ನು ಆಯೋಜಿಸುತ್ತಿದೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಈ ರ್ಯಾಲಿಗಳಲ್ಲಿ, ಭಾಷಣಗಳಲ್ಲಿ ಉಗ್ರವಾದದ definition ಮತ್ತು ವ್ಯಾಪ್ತಿ ಮತ್ತು ವಿಸ್ತಾರವನ್ನು ಹೆಚ್ಚಿಸಿ, ಜಾತಿ-ಮತ-ದೇಶ-ಕಾಲ ರಹಿತವಾಗಿ ಉಗ್ರವಾದದ ಬಗ್ಗೆ ಮಾತ್ರ ಜಾಗೃತಿ ಮೂಡಿಸಲು ಯತ್ನಿಸಿದರೆ ಅದು ಶ್ಲಾಘನೀಯ. ಅದು ಬಿಟ್ಟು, ಪಾಕಿಸ್ತಾನದ ಮೇಲೆ ಕೆಂಡಕಾರುತ್ತ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ಮಾಡಿದರೆ ಅದು ವೋಟ್ ಬ್ಯಾಂಕ್ ರಾಜಕೀಯ.

7) ಎಲ್ಲಕ್ಕಿಂತ ಹೆಚ್ಚಾಗಿ, ಉಗ್ರವಾದವನ್ನು ವೈಚಾರಿಕ ನೆಲೆಗಟ್ಟಿನಲ್ಲಿಯೇ ಇಲ್ಲವಾಗಿಸುವ ಯತ್ನ ನಡೆಯಬೇಕಿದೆ. ಇಂದು ನಡೆಯುತ್ತಿರುವಷ್ಟು intellectual terrorism, ಮತ್ತು manipulation of media ಬಹುಶ ಎಂದೂ ನಡೆದಿರಲಿಲ್ಲ. ಸರ್ಕಾರ್ ಚಿತ್ರದಲ್ಲಿ ಕುತಂತ್ರಿ ಸಾಧು ಹೇಳುವ ಮಾತು ನೆನಪಿಗೆ ಬರುತ್ತಿದೆ... "अगर तुम सर्कार को मारना चाहते हो, तो पहले उसकी सोच को मारो..." ಉಗ್ರವಾದ ಹುಟ್ಟುವುದೂ ಯೋಚನೆಗಳಲ್ಲಿ, ಅದರ ಸಾವೂ ಕೂಡ ಯೋಚನೆಗಳಲ್ಲೇ ಅಡಗಿದೆ. ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನೇ ಬದಲಾಯಿಸುತ್ತೇವಂತೆ, ನಮ್ಮ ಮನಸುಗಳಲ್ಲಿ ಹುದುಗಿರುವ ಉಗ್ರನನ್ನು ಕೊಲ್ಲುವುದು ಕಷ್ಟವಾ?

10 ಜನರನ್ನಿಟ್ಟುಕೊಂಡು ಇಡೀ ರಾಷ್ಟ್ರದ ನಿದ್ದೆ ಮೂರುದಿನ ಕೆಡಿಸಿದ, ಒಂದು ಬಿಲಿಯನ್ ಜನರ ಧೈರ್ಯಗೆಡಿಸಿದ ಮುಂಬೈ ದಾಳಿಯಂತಹ ಹೇಯಕೃತ್ಯಗಳು ಮುಂದೆಂದೂ ನಡೆಯದಿರಲಿ, ಯಾರಿಂದಲೂ ನಡೆಯದಿರಲಿ. ಎಲ್ಲೂ ನಡೆಯದಿರಲಿ... ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ... ನಮ್ಮಲ್ಲಿ ಸಾಯುತ್ತಿರುವ ಮಾನವತ್ವವನ್ನು ಮತ್ತೆ ನೀರೆರೆದು ಬದುಕಿಸೋಣ, ಸುತ್ತಲವರ ನೋವಿಗೆ ನಮ್ಮ ಜೀವಗಳೂ ಜಾತಿ-ಮತ ಮರೆತು ಸ್ಪಂದಿಸಲಿ... ಮರೆತುಬಿಡೋಣ ಕಪ್ಪುಕಾಲನ ಮಡಿಲಲ್ಲಿ ಸೇರಿಹೋದ ನಿನ್ನೆಗಳನ್ನು... ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಎಂದಿಗೂ ಹಾಳುಗೆಡವದಿರಲಿ...

(ವಿ.ಸೂ. - ವೈಯಕ್ತಿಕ ಹಾಗೂ ಅಸಭ್ಯ ಕಮೆಂಟುಗಳನ್ನು ಪ್ರಕಟಿಸಲಾಗುವುದಿಲ್ಲ, ಮತ್ತು ಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ, ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ)

Friday, January 2, 2009

ಇಸ್ರೇಲಿ ಭೂತ ತಲೆಗೆ ಹೊಕ್ಕಿದೆ...

ನವೆಂಬರ್ - 29:

ಚೆನ್ನೈಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಅದರ ಪರಿಣಾಮ, ಥಂಡಿ ಹವೆ, ವಿಚಿತ್ರ ಮಳೆ. ಸೈಕ್ಲೋನ್ ನಿಶಾಕ್ಕೆ 82 ಜನ ಸತ್ತಿದ್ದು ದೊಡ್ಡದಾಗಿಯೇನೂ ಸುದ್ದಿಯಾಗಿರಲಿಲ್ಲ. ಇನ್ನು ಮುಂದೆ ಮಾನವನ ಅಟ್ಟಹಾಸದೆದುರು ಕಾಲನ ಅಬ್ಬರ ಏನೂ ಅಲ್ಲ ಬಿಡಿ... ಹಿಂದಿನ ದಿನ ಮಳೆಗೆ ನೆನೆದ ಪರಿಣಾಮ ಜ್ವರ ಕಾಡುತ್ತಿತ್ತು. ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೂತಿದ್ದೆ. ಮುಂಬೈಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿತ್ತು. ತಾಜ್ ಇನ್ನೂ ಬಿಡುಗಡೆಯಾಗಿರಲಿಲ್ಲ. ಟೀವಿ ನೋಡಿನೋಡಿ ತಲೆ ಸಿಡಿಯುತ್ತಿತ್ತು.

ಹಾಗೆಂದು ಮಲಗಲೂ ಆಗದೆ, ಹಳಸಿದ ಸುದ್ದಿಯಿದ್ದ ನಿನ್ನೆಯ ಪೇಪರ್ ಓದಲು ಇಷ್ಟವಿಲ್ಲದೆ, ಬೇರೆ ವಿಧಿಯಿಲ್ಲದೇ ಮತ್ತೆ ಟೀವಿಗೆ ಮೊರೆ ಹೋದೆ. ಚಾನೆಲಿಂದ ಚಾನೆಲಿಗೆ ಬದಲಾಯಿಸುತ್ತ ಕೂತಿದ್ದೆ. ಟೈಮ್ಸ್ ನವ್ ಯಥಾಪ್ರಕಾರ ಕಿರುಚುತ್ತಿತ್ತು... ಹಿಂದಿ ಚಾನೆಲುಗಳ ಗತಿಯೋ, ದೇವರಿಗೇ ಪ್ರೀತಿ. NDTV ಮತ್ತು CNN IBN ಆಗಷ್ಟೇ ಬುದ್ಧಿ ಕಲಿತಂತೆ LIVE ಕೊಡುವುದು ಬಿಟ್ಟು ಹುತಾತ್ಮರಾದವರ ಬಗ್ಗೆ ಗಮನ ಹರಿಸಲು ಆರಂಭಿಸಿದ್ದವು.

ನೋಡುತ್ತ ನೋಡುತ್ತ ನನಗೆ ಘಟನೆಯ ಬಗ್ಗೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆಗಳು ಏನಿವೆ ಅಂತ ತಿಳಿಯಬೇಕೆನಿಸಿತು, ಯಾವ ಚಾನೆಲ್ಲೂ ಏನೂ ಕೊಡುತ್ತಿರಲಿಲ್ಲ. CNNನಲ್ಲೂ ಏನೂ ಇರಲಿಲ್ಲ. ಸರಿ, ಇಂಟರ್ನೆಟ್ಟಲ್ಲಿ ಏನಾದರೂ ಸಿಗಬಹುದು ಅಂತ ಎಣಿಸಿಕೊಂಡು ಸಿಸ್ಟಮ್ ಆನ್ ಮಾಡಿದೆ. ಪಕ್ಕದ ಮನೆಯಲ್ಲೆಲ್ಲೋ ಇರುವ ಅದೃಶ್ಯ ಅನ್-ಸೆಕ್ಯೂರ್ಡ್ ಇಂಟರ್ನೆಟ್ ನೀಟಾಗಿ ಕನೆಕ್ಷನ್ನು ಕೆಲಸ ಮಾಡುತ್ತಿತ್ತು. ಸರಿ, ಲಾಗಿನ್ ಆದೆ. ಅಲ್ಲೂ ಸುಲಭಕ್ಕೆ ಏನೂ ಸಿಗಲಿಲ್ಲ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ತೂಕದ ಪ್ರತಿಕ್ರಿಯೆಗಳ ಹೊರತಾಗಿ.

ಚಾನೆಲ್ಲುಗಳಲ್ಲಿ ಪದೇಪದೇ ದಾಳಿಯ ಹೊಣೆಹೊತ್ತ ಡೆಕ್ಕನ್ ಮುಜಾಹಿದೀನ್ ಸಂಸ್ಥೆಯ ಹೆಸರು ಕೇಳಿ ಬರುತ್ತಿತ್ತು. ಹಿಂದಿಯಲ್ಲಿ ಮೈಲ್ ಕಳುಹಿಸಿತ್ತು ಅದು, ಹಾಗಿತ್ತು, ಹೀಗಿತ್ತು ಇತ್ಯಾದಿ. ನನಗೆ ಭಯೋತ್ಪಾದಕರು ಮೈಲ್ ಮಾಡಿದರೆ ಹೇಗಿರುತ್ತದೆ, ಪೂರ್ತಿಯಾಗಿ ಒಂದು ಸಲ ಓದಬೇಕಲ್ಲ ಅನಿಸಿ ಒಂದಷ್ಟು ಹುಡುಕಿದೆ. ಸಿಕ್ಕಿಯೇ ಬಿಟ್ಟಿತು - ಇಂಡಿಯನ್ ಮುಜಾಹಿದೀನ್ ಕಳುಹಿಸಿದ ಮೈಲ್.... ದೆಹಲಿ ಸ್ಫೋಟದ ಸಮಯ ಕಳುಹಿಸಿದ್ದು.
ಇದರಲ್ಲಿ, ಉಗ್ರರು ಹಲವು ರಾಜ್ಯಗಳಲ್ಲಿ ಶಂಕಿತ ಉಗ್ರರ ಹೆಸರಲ್ಲಿ ಮುಸ್ಲಿಮರನ್ನು ಬಂಧಿಸಿ ಕಾಟ ಕೊಡುವುದಕ್ಕೆ ಕೆಂಡಾಮಂಡಲವಾಗಿದ್ದರು. (ಇಂತಹ ಕೇಸುಗಳು ಹಲವಾರು. ನಾಲ್ಕೈದು ವರ್ಷಗಳ ಹಿಂದೆ ಒಂದು ದಿನ ಹೈದರಾಬಾದಿನಲ್ಲಿ ದಿನಾ ಹಾಲು ಮಾರುತ್ತ ಎಲ್ಲರಂತೆ ಬದುಕುತ್ತಿದ್ದ ಮಾಮೂಲು ಹುಡುಗನನ್ನು ಉಗ್ರನೆಂದು ಗುಂಡುಹಾರಿಸಿ ಕೊಂದಿದ್ದರು ಪೊಲೀಸ್. ಹೈದರಾಬಾದಿನಲ್ಲಿ ಮತ್ತೆ ಹಲವರನ್ನು ಶಂಕಿತರೆಂದು ಬಂಧಿಸಿ ಕೊನೆಗವರು ಮುಗ್ಧರೆಂದು ಸಾಧಿತವಾದ ಬಳಿಕ ಬಿಡುಗಡೆಗೊಳಿಸುವಾಗ ಅವರಿಗೆ ಪರಿಹಾರ ಕೂಡ ಕೊಟ್ಟಿತ್ತು ಆಂಧ್ರಪ್ರದೇಶ ಸರಕಾರ. ಧಾರವಾಡದಲ್ಲಿ ತನ್ನ ಹೊಲದಲ್ಲಿ ಬಾಂಬ್ ಸಿಕ್ಕಿತೆಂದು ಪೊಲೀಸರಿಗೆ ತಿಳಿಸಹೊರಟ ಮುಸ್ಲಿಂ ರೈತನನ್ನು ಮನಬಂದಂತೆ ಹೊಡೆದು, ಕೊನೆಗೆ ಅವನ ತಪ್ಪಿಲ್ಲವೆಂದು ತಿಳಿದಾಗ ವಾಪಸ್ ಕಳುಹಿಸಿತ್ತು ಅಲ್ಲಿನ ಪೊಲೀಸ್. ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರನ್ನು ಮುಂಬೈಗೆ, ಮತ್ತೆ ಬೆಂಗಳೂರಿಗೆ, ಪುನಹ ಗುಜರಾತಿಗೆ, ಹೀಗೆ ಬೇಕಾದಲ್ಲಿಗೆ ಕರೆಸಿಕೊಂಡು ಇನ್ವೆಸ್ಟಿಗೇಟ್ ಮಾಡುತ್ತಾರೆ. ಮುಂಬೈಯಲ್ಲಿ ಇದೇ ಖರ್ಖರೆಯ ಕೈಲಿ ಇನ್ವೆಸ್ಟಿಗೇಶನ್ ನಡೆದು ಅವರಿಗೆ ಬೇಕಾದ್ದು ಏನೂ ಸಿಗಲಿಲ್ಲವಾಗಿ ವಾಪಸ್ ತಂದುಬಿಟ್ಟಿದ್ದರು. ಆದರೂ ಅವರಿಗೆ ಮುಕ್ತಿ ಸಿಕ್ಕಿಲ್ಲ. ಮುಗ್ಧರು ಶಂಕಿತರ ಹೆಸರಲ್ಲಿ ಪೊಲೀಸರ ವಶವಾಗುವುದು ಹೊಸತೇನಲ್ಲ, ಒಬ್ಬ ಕಳ್ಳನನ್ನು ಹಿಡಿಯಲು ಕೆಲವೊಮ್ಮೆ ನೂರು ಜನ ಮುಗ್ಧರನ್ನು ಪರೀಕ್ಷೆ ಮಾಡಬೇಕಾಗುತ್ತದೆ, ಅದು ಅನಿವಾರ್ಯ ಕೂಡ, ಒಪ್ಪಬಹುದಾದದ್ದು ಕೂಡ - ಕಾನೂನಿನ ಚೌಕಟ್ಟಿನಲ್ಲಿ ನಡೆಯವ ವರೆಗೆ) ಉಗ್ರ ಮೈಲ್ ಕಳುಹಿಸಿದವರು ತಮ್ಮ ಮುಂದಿನ ಗುರಿ ಮುಂಬೈ ಅಂತ ನೇರವಾಗಿ ಹೇಳಿದ್ದರು. ಮುಂಬೈ ಎಟಿಎಸ್ (ಹೇಮಂತ್ ಕಾರ್ಕರೆ), ಗುಜರಾತ್ ಎಟಿಎಸ್ (ಪಿಸಿ ಪಾಂಡೆ), ಮೋದಿ, ವಿಲಾಸ್ ರಾವ್ ದೇಶಮುಖ್, ಆರ್ ಆರ್ ಪಾಟೀಲ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ - ಎಲ್ಲರ ಮೇಲೆ ಕಿಡಿಕಾರಲಾಗಿತ್ತು. ಸಂಘಪರಿವಾರದ ಉಗ್ರಕೃತ್ಯಗಳ ಮೇಲೆ ಕ್ರಮ ಕೈಗೊಂಡಿಲ್ಲವೆಂದು ನೇರವಾಗಿ ಮುಂಬೈ ಎಟಿಎಸ್ ಮೇಲೆ ಆಪಾದಿಸಲಾಗಿತ್ತು. ಕೇಸರಿ ಭಯೋತ್ಪಾದನೆಯ ವಿಚಾರ ಬಂದಾಗ ಮಾಧ್ಯಮಗಳು ಹೇಗೆ ಇಡಿಯ ಎಪಿಸೋಡನ್ನು ಮುಚ್ಚಿಹಾಕಿದವೆಂದು reference ಸಮೇತ ವಿವರಿಸಲಾಗಿತ್ತು. ಅಲ್ಲಿಂದ ಎಲ್ಲೆಲ್ಲೋ ಹೋಗಿ, ಕೊನೆಗೆ ಜೆಹಾದ್ ಪ್ರತಿಜ್ಞೆಯೊಡನೆ ಮುಕ್ತಾಯವಾಗಿತ್ತು.

ಸರಿ, ಅದರಲ್ಲಿ ಹೇಳಿದ ಬಜರಂಗ್ ಬಾಂಬ್ ಬಗ್ಗೆ ಏನಾದರೂ ಇಂಡಿಯನ್ ಎಕ್ಸ್-ಪ್ರೆಸ್ ವೆಬ್-ಸೈಟಲ್ಲಿ ಸಿಗುತ್ತದಾ ಅಂತ ಹುಡುಕಿದೆ. ಸರ್ಚ್ ರಿಸಲ್ಟ್-ನಲ್ಲಿ ಹಲವು ವರದಿಗಳು ಸಿಕ್ಕಿದವು. ಲಿಂಕ್ ತೆರೆಯಹೋದರೆ ಯಾಕೋ ಗೊತ್ತಿಲ್ಲ, ಹಲವು ಲಿಂಕುಗಳಲ್ಲಿದ್ದ ಲೇಖನಗಳು ಡಿಲೀಟ್ ಆಗಿಬಿಟ್ಟಿದ್ದವು, ಇನ್ನು ಹಲವು ಓದಲು ಸಿಕ್ಕಿದವು. ಓದಲು ಸಿಕ್ಕಿದ್ದೆಲ್ಲವನ್ನೂ ಓದಿದೆ. ಓದುತ್ತ ಓದುತ್ತ ಎಲ್ಲೆಲ್ಲೋ ಹೋಗಿ, ನಾನು ಈ ಪುಟಕ್ಕೆ ಬಂದು ನಿಂತೆ... ಅಂತರ್ರಾಷ್ಟ್ರೀಯ ವಿಚಾರಗಳ ಬಗ್ಗೆ ಎಂದೂ ಹೆಚ್ಚು ತಲೆಕೆಡಿಸಿಕೊಂಡಿಲ್ಲದ ನಾನು ಇಲ್ಲಿವರೆಗೆ ಕೇಳಿಯೇ ಇರದ ಹೆಸರು - ಮೊಸ್ಸಾಡ್, ಮೊದಲ ಬಾರಿಗೆ ಅತ್ಯಂತ ಶಾಕಿಂಗ್ ಅನಿಸುವ ರೀತಿಯಲ್ಲಿ ಕಣ್ಣೆದುರಿಗೆ ಬಂದು ನಿಂತಿತ್ತು..

ಅಲ್ಲಿಂದ ಮತ್ತೆ ಅಲ್ಲಿರುವ ಎಲ್ಲಾ ಲಿಂಕುಗಳಿಗೂ ವಿಸಿಟ್ ಕೊಟ್ಟು, ಏನೇನಿದೆ ಅಂತ ನೋಡಿದೆ, ಅರ್ಥವಾದದ್ದು ಓದಿದೆ, ಅರ್ಥವಾಗದ್ದು ಬಿಟ್ಟೆ. ನನಗೆ ಅರ್ಥವಾದುದರ ಸಾರಾಂಶ ಇಷ್ಟು - ಭಾರತದಲ್ಲಿ ನಡೆಯುತ್ತಿರುವ anti-islamic ಉಗ್ರವಾದದ ಹಿಂದೆ - ಅಂದರೆ ಸಪ್ಟೆಂಬರ್ 26 -2008ರ ಮಾಲೆಗಾಂವ್ ಸ್ಫೋಟ, ನಾಂದೆಡ್-ನಲ್ಲಿ ಭಜರಂಗ ಕಾರ್ಯಕರ್ತರು ಸತ್ತ ಸ್ಫೋಟದ ಹಿಂದೆ, 64 ಜನ ಪಾಕಿಸ್ತಾನಿಗಳನ್ನು ಕೊಂದ, ಭಾರತ-ಪಾಕ್ ಸ್ನೇಹಸೇತುವಾದ ಸಂಝೋತಾ ಎಕ್ಸ್-ಪ್ರೆಸ್ ಸ್ಫೋಟದ ಹಿಂದೆ, ಹೈದರಾಬಾದಿನ ಲುಂಬಿನಿ ಗಾರ್ಡನ್ ಮಸೀದಿ ಸ್ಫೋಟದ ಹಿಂದೆ - ಸಂಘಪರಿವಾರವಿದೆ; ಅದರ ಹಿಂದೆ ಇಸ್ರೇಲಿ ಗುಪ್ತಚರ ಸಂಸ್ಥೆ MOSSADನ ಕೈವಾಡವಿದೆ, ಪ್ರೋತ್ಸಾಹವಿದೆ ಅಂತ ಈ ಲೇಖನಗಳನ್ನು ಬರೆದವರ ಹೇಳಿಕೆ. MOSSADಗೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಂಬಂಧವಿದೆಯೆಂದು ಕೂಡ ಇಲ್ಲಿ ಕಂಡುಬರುವ ಲೇಖನಗಳಲ್ಲಿ ಓದಲು ಸಿಗುತ್ತದೆ. ಅಮೆರಿಕಾದ CIA ಮತ್ತು ಭಾರತದ RAW MOSSADನ ಬೆಂಬಲಕ್ಕಿದ್ದು ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕೆಲಸ ಮಾಡಿಸುತ್ತವೆ ಅಂತಲೂ ಓದಿ, ತಲೆಬಿಸಿಯಾಯಿತು. ಇವನ್ನೆಲ್ಲ ಸತ್ಯವೇ ಸುಳ್ಳೇ ಅಂತ ತೂಗುವುದು ನನ್ನ ಪೆದ್ದು ತಲೆಯ ಲಾಜಿಕ್-ಗೆ ಸಾಧ್ಯವಾಗಲಿಲ್ಲ. ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗದೆ ಸುಮ್ಮನೆ ಎಲ್ಲವನ್ನೂ ಓದುತ್ತಾ ಹೋದೆ.

ಹೀಗೆ ಇಸ್ರೇಲ್ ಬಗ್ಗೆ ಓದುತ್ತಿರುವಾಗ, ಇಸ್ರೇಲ್-ನವರು ಯಾರೋ ಈ ಸ್ಫೋಟದಲ್ಲಿ ಸತ್ತಿದ್ದರಲ್ಲ, ಯಾವುದೋ ಪುಟ್ಟ ಅನಾಥ ಮಗುವಿದು ಸುದ್ದಿಯಾಗಿತ್ತಲ್ಲ ಅಂತ ನೆನಪಾಯ್ತು. ಹುಡುಕಿದರೆ ಹೌದು - ಮೂವತ್ತೂ ದಾಟದ ಯುವಜೋಡಿ Gavriel Holtzberg ಮತ್ತು Rivka Holtzberg, ನಾರಿಮನ್ ಹೌಸ್-ನಲ್ಲಿ ಮುಂಬೈನ ಯಹೂದಿಗಳ ಸಮುದಾಯಕ್ಕೆ ಬೇಕಾದ ಧಾರ್ಮಿಕ ಮತ್ತು ಸಾಮುದಾಯಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದವರು... ಇವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕೊನೆಗೆ ಉಗ್ರರು ಸಾಯಿಸಿದ್ದರು. ನಾರಿಮನ್ ಹೌಸ್-ಗೆ ಚಬಡ್ ಹೌಸ್ ಅನ್ನುತ್ತಾರೆ, ಅದರಲ್ಲಿದ್ದವರು ಮುಖ್ಯವಾಗಿ ಇಸ್ರೇಲಿ ಯಹೂದಿಗಳೇ, ಮತ್ತು ಇಸ್ರೇಲಿಗಳಿಗಾಗಿಯೇ ಅದು ಇತ್ತು ಅಂತ ಆಗಷ್ಟೇ ನಂಗೆ ಗೊತ್ತಾಯಿತು.

ಹಾಗೆಯೇ, MOSSAD ವೆಬ್-ಸೈಟಿಗೆ ಹೋದೆ. ಗುಪ್ತಚರ ಕೆಲಸಗಳ ಜತೆಗೆ ಅಗತ್ಯವಿರುವ counterterrorism ಕೆಲಸಗಳನ್ನು ಕೂಡ ತಾನು ನಡೆಸುವುದಾಗಿ ತನ್ನ ವೆಬ್-ಸೈಟಿನಲ್ಲಿ MOSSAD ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಓದಿದ ನಂತರ ತಲೆಯೆಲ್ಲ ಕೆಟ್ಟು ಚಿತ್ರಾನ್ನವಾಯಿತು. ಸರಿ, ಸಹವಾಸ ಬೇಡವೆಂದುಕೊಂಡು ಕಂಪ್ಯೂಟರ್ ಲಾಗಾಫ್ ಮಾಡಿದೆ.
---------------
ನವೆಂಬರ್ 30, ಡಿಸೆಂಬರ್ 1:
ಆ ಪುಟ್ಟ ಮಗು, ಅದರ ಸತ್ತುಹೋದ ಇಸ್ರೇಲಿ ಅಪ್ಪ-ಅಮ್ಮನ ಬಗ್ಗೆ ಕರುಳು ಮಿಡಿಯುವ ಹಾಗೆ ಚಾನೆಲುಗಳು ಕೊಡುತ್ತಿದ್ದವು. ಕೆಲವು ಚಾನೆಲುಗಳು 22 ಉಗ್ರರಿದ್ದರು, 10 ಜನ ಮಾತ್ರ ಸಿಕ್ಕಿದ್ದಾರೆ, ಉಳಿದ ಉಗ್ರರು ಮಿಸ್ ಆಗಿದ್ದಾರೆ, ಅಂದವು. ಮತ್ತೆ ಕೆಲವು ಚಾನೆಲುಗಳು ಹೇಮಂತ ಖರ್ಖರೆಯ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವು. ಪಾಟೀಲ್ ಮತ್ತು ದೇಶಮುಖ್ ತಲೆದಂಡದ ಪ್ರಕ್ರಿಯೆ ಆರಂಭವಾಗಿತ್ತು. ಸುತ್ತಮುತ್ತಿಂದೆಲ್ಲ ತನ್ನ ಮೇಲೆ ಬರುತ್ತಿದ್ದ ಆಪಾದನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪಾಕ್ ಕಕ್ಕಾಬಿಕ್ಕಿಯಾಗಿತ್ತು. ತಲೆ ಕೆಡಿಸುವ ಇಂಟರ್ನೆಟ್ಟು, ಮೂರ್ಖ ಟೀವಿಗಳ ಸಹವಾಸ ಬೇಡವೆಂದು ನಾನು ಮನೆಯ ಕೆಲಸಕಾರ್ಯಗಳಲ್ಲಿ, ಎಷ್ಟೋದಿನಗಳಿಂದ ಮಾಡಲು ಬಾಕಿಯಿದ್ದಂತಹ ಕೆಲಸಗಳಲ್ಲಿ ತೊಡಗಿದೆ. ಒಂದಿಷ್ಟು ಕಥೆಗಳು ಓದಿದೆ. ಆದರೂ ಕುತೂಹಲ ತಡೆಯಲಾಗದೆ ನಮ್ಮ ಬ್ಲಾಗಿಗರು ಏನು ಬರೆದಿದ್ದಾರೆ ಅಂತ ನೋಡಿದೆ. ಖುಷಿಯಾದದ್ದನ್ನು ಗೂಗಲ್-ರೀಡರಿನಲ್ಲಿ ಶೇರ್ ಮಾಡಿಕೊಂಡೆ.

ಡಿಸೆಂಬರ್ 2:
ಬೆಳಗಾಗೆದ್ದು ನೋಡಿದರೆ ಕನ್ನಡಪ್ರಭದಲ್ಲಿ ಇಸ್ರೇಲ್-ನ ಮೇಜರ್ ಜನರಲ್ ಭಾರತದ NSG ಕಾರ್ಯಾಚರಣೆ ಸರಿಯಿಲ್ಲವೆಂದಿದ್ದು ಕಾಣಿಸಿತು. ಆದರೆ ಇಸ್ರೇಲ್ ಸರಕಾರ ಭಾರತದ ಕಾರ್ಯಾಚರಣೆಯನ್ನು ಶ್ಲಾಘಿಸಿತ್ತು. ಇರಲಿ, ಕನ್ನಡ ಬ್ಲಾಗಿಗರೆಲ್ಲ ಏನೇನು ಬರೆದಿದ್ದಾರೆ ಅಂತ ನೋಡಹೊರಟರೆ ಗೃಹಸಚಿವರ ಬ್ಲಾಗಿನಲ್ಲಿ ಇಸ್ರೇಲಿಗೆ ಹೊಗಳಿ ಬರೆದಿದ್ದು ಕಾಣಿಸಿತು. ಹಾಗೇ ವೇಣುವಿನೋದ್ ಬ್ಲಾಗಿನಲ್ಲೂ ಕೂಡ. ಇದ್ಯಾಕಪ್ಪಾ ಕೇವಲ ಎರಡು-ಮೂರು ದಿನದಲ್ಲಿ ಎಲ್ಲೆಲ್ಲೂ ನಂಗೆ ಇಸ್ರೇಲೇ ಕಾಣ್ತಿದೆ... ಇಷ್ಟು ದಿನ ಗೊತ್ತೇ ಇಲ್ಲದ ವಿಚಾರಗಳೆಲ್ಲ ಗೊತ್ತಾಗ್ತಿವೆ ಅಂತ ತಲೆಬಿಸಿಯಾಯಿತು. ಇದ್ದಕ್ಕಿದ್ದಂತೆ ಇಸ್ರೇಲ್ ಭಾರತದಲ್ಲಿ ಇಷ್ಟು ಹೆಸರು ಯಾಕೆ ಮಾಡುತ್ತಿದೆ ಅಂತ ಟೆನ್ಶನ್ ಆಯಿತು.

ಡಿಸೆಂಬರ್ 5:

ಇವತ್ತು ಇದೇ ವಿಚಾರದಲ್ಲಿ ಮತ್ತಷ್ಟು ಲಿಂಕುಗಳು ಸಿಕ್ಕಿವೆ. ವಿವಿಧ ಆಧಾರಗಳನ್ನಿಟ್ಟುಕೊಂಡು ಈಸಲದ ದಾಳಿ ಕೂಡ ಇಸ್ರೇಲ್ ಮತ್ತು ಅಮೆರಿಕಾ ಕುಮ್ಮಕ್ಕಿನಿಂದಲೇ ನಡೆದಿವೆ ಅನ್ನುತ್ತಿವೆ. ಇವರ ಲೆಕ್ಕಾಚಾರಗಳ ಮತ್ತು ಅಭಿಪ್ರಾಯಗಳ ಪ್ರಕಾರ, ಪಾಕಿಸ್ತಾನವನ್ನು ಸಿಕ್ಕಿಸಲು ಮತ್ತು ಜೆಹಾದ್ ಹೆಸರಲ್ಲಿ ನಡೆಯುವ ಉಗ್ರವಾದವನ್ನು ಹತ್ತಿಕ್ಕಲು ಉಳಿದೆಲ್ಲಾ ದೇಶಗಳು ಸೇರಿಕೊಂಡು ಮಾಡಿದ ಷಡ್ಯಂತ್ರವೇ ಈ ಉಗ್ರರ ದಾಳಿ. ಇವರು ಹೇಳುವುದನ್ನು ನಂಬುವುದಾದರೆ, ಪಾಕ್ ಈಗ ಪಾಪ, ಮೊಸರು ತಿಂದ ಮಂಗನ ಪಕ್ಕದಲ್ಲಿದ್ದ ಆಡಿನಂತಾಗಿದೆ. ಭಾರತ ಕೊಟ್ಟ ಮೋಸ್ಟ್ ವಾಂಟೆಡ್ ಲಿಸ್ಟ್-ನ ವ್ಯಕ್ತಿಗಳನ್ನು ಪಾಕ್ ಒಪ್ಪಿಸದಿದ್ದರೆ, ಮುಂದಾಗುವುದು ಬಹುಶ: ಸಮರವೇ. ಅದಕ್ಕಾಗಿ ಅತ್ತಕಡೆಯಿಂದ ಈಗಾಗಲೇ ತಾಲಿಬಾನನ್ನೂ ಎತ್ತಿಕಟ್ಟಿಯಾಗಿದೆ.

ಹಾಗೆಂದು ಇಸ್ರೇಲಿ ರಾಬ್ಬಿಗಳು ಸತ್ತಿದ್ದಕ್ಕೂ ಇವರು ಕಾರಣ ಹೇಳುತ್ತಾರೆ - ಸತ್ತ ರಾಬ್ಬಿಗಳು ಝಿಯೋನಿಸ್ಟ್-ಗಳು ಅಲ್ಲವಂತೆ, MOSSAD ಯಹೂದಿಗಳು ವಿಶ್ವವನ್ನಾಳಬೇಕೆಂದು ಹೇಳುವ ಕಟ್ಟಾ ಝಿಯೋನಿಸ್ಟ್ ಪಂಗಡವನ್ನು ಬೆಂಬಲಿಸುತ್ತದಂತೆ. ಅಂದಹಾಗೆ, ಸತ್ತ ಇಸ್ರೇಲಿಗಳ ಶರೀರಗಳನ್ನು ವಾಪಸ್ ತಗೊಂಡು ಹೋದಾಗ ಅಲ್ಲಿ ಸರಕಾರ STATE HONOURS ಕೊಡುತ್ತೇನೆಂದರೆ ಸಂಬಂಧಿಕರೆಲ್ಲ ಅದನ್ನು ತಿರಸ್ಕರಿಸಿದರಂತೆ. ಯಾಕೆಂದರೆ, ಚಬಡ್ ಹೌಸ್-ನಲ್ಲಿ ಸತ್ತವರು ಕಟ್ಟಾ ಝಿಯೋನಿಸ್ಟ್-ಗಳು ಆಗಿರಲಿಲ್ಲವಂತೆ. ಅವರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು, ಭಾರತದ ಮುಸ್ಲಿಮರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು ಅಂತ ನಾರಿಮನ್ ಹೌಸ್ ಮೇಲೆ ಕೂಡ ಅಟ್ಯಾಕ್ ಮಾಡಿದರಂತೆ.

ಇದಕ್ಕಿಂತ ಹಿಂದೆ ನಾನು ಏಳೆಂಟು ವರ್ಷದ ಹಿಂದೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಾಡುವ ದಾಳಿಗಳ ಮೂಲಕ ಮಾತ್ರ ಇಸ್ರೇಲ್ ಬಗ್ಗೆ ತಿಳಿದಿದ್ದೆ. ಎಷ್ಟೋ ವರ್ಷಗಳ ನಂತರ ನಂಗೆ ಇಸ್ರೇಲ್ ಬಗ್ಗೆ ಹುಟ್ಟಿದ್ದು ಒಂದುರೀತಿಯ ಪವಿತ್ರ ಕಲ್ಪನೆ, ಅದು ಬಂದಿದ್ದು ನೇಮಿಚಂದ್ರ ಬರೆದ ಯಾದ್ ವಶೇಮ್ ಓದಿ. ಈಗ ನಂಗೆ ಕಾಣುತ್ತಿರುವ ಇಸ್ರೇಲ್ ಬೇರೆಯದೇ... ಇದು, ಅಮೆರಿಕಾ ಜತೆ ಸೇರಿ ಯಹೂದಿ ಜಗತ್ತು ಕಟ್ಟಹೊರಟಿರುವ ಇಸ್ರೇಲ್. ಜೆಹಾದಿ ಭಯೋತ್ಪಾದನೆಯನ್ನು, ಮುಸ್ಲಿಂ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡಲು ಕಟಿಬದ್ಧವಾದ ರಾಷ್ಟ್ರ...

ನನಗೆ ಈ ಮಾಹಿತಿಗಳು ಮತ್ತು ಸಂಬಂಧಿಸಿದ ವಿಷಯಗಳು ಸಿಕ್ಕಿದ ಲಿಂಕುಗಳು...

http://ghulammuhammed.blogspot.com/2008/11/cia-mossad-hand-behind-sangh-parivars.html

http://www.wakeupfromyourslumber.com/node/8534

http://en.wikipedia.org/wiki/Mossad

http://en.wikipedia.org/wiki/Mumbai_Chabad_House

http://en.wikipedia.org/wiki/Gavriel_Holtzberg

http://www.chabad.org/centers/default_cdo/aid/118651/jewish/Chabad-Mumbai.htm

http://timesofindia.indiatimes.com/India/Rabbi_wife_found_dead_at_Nariman/articleshow/3771244.cms
http://www.wakeupfromyourslumber.com/node/8534

http://www.indianmuslims.info/book/export/html/2736

http://www.wakeupfromyourslumber.com/comment/reply/9310#comment-form

http://www.thenews.com.pk/updates.asp?id=62200

http://www.hindu.com/2008/12/11/stories/2008121155660900.htm

http://www.hindu.com/2008/12/17/stories/2008121752001000.htm

http://therearenosunglasses.wordpress.com/

http://www.countercurrents.org/gatade241208.htm

(ಮುಂದುವರಿಯುವುದು...)

Saturday, November 29, 2008

ಈಶ್ವರ್ ಅಲ್ಲಾ...

ಸುಮ್ಮನಿರೋಣ ಅಂದುಕೊಂಡಿದ್ದು ನಿಜ. ಆದರೆ ಯಾಕೋ ಬೇಜಾರಾಗಿದೆ. ಯಾಕೋ ಬರೆಯಲೇಬೇಕೆನ್ನಿಸಿದೆ.
ईश्वर अल्लाह तेरे जहाँ में
नफ़रत क्यों है जंग है क्यों
तेरा दिल तो इतना बड़ा है
इन्साँ का दिल तंग है क्यों...

क़दम क़दम पर सरहद क्यों है
सारी ज़मीं जो तेरी है
सूरज के फेरे करती है
फिर भी कितनी अंधेरी है
इस दुनिया के दामन पर
इन्साँ के लहू का रंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्साँ का दिल तंग है क्यों...

गूँज रही हैं कितनी चीखें
प्यार की बातें कौन सुने
टूट रहे हैं कितने सपने
इनके टुकड़े कौन चुने
दिल के दरवाज़ों पर ताले
तालों पर ये ज़ंग है क्यों...

ईश्वर अल्लाह तेरे जहाँ में
नफ़रत क्यों है, जंग है क्यों
तेरा दिल तो इतना बड़ा है
इन्सां का दिल तंग है क्यों...

ಜಾವೇದ್ ಅಖ್ತರ್ ಬರೆದ ಚಂದದ ಈ ಹಾಡು, 1947-EARTH ಚಿತ್ರದ್ದು. ಎ ಆರ್ ರೆಹಮಾನ್ ಸಂಗೀತ, ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ, ದೇಶವಿಭಜನೆಯ ಸಮಯದಲ್ಲಿ ಆದ ದಂಗೆಗಳ ಸಮಯ ನಡೆದ ಘಟನೆಗಳ ಕುರಿತು ಚಿತ್ರಣವಿದೆ... ಸ್ವಾರ್ಥಕ್ಕೆ ಅಡಿಯಾಳಾಗುವ ಮಾನವ, ಧರ್ಮದ ಹೆಸರಲ್ಲಿ ತನ್ನ ಸ್ವಾರ್ಥಸಾಧನೆ ಹೇಗೆ ಮಾಡಿಕೊಳ್ಳುತ್ತಾನೆಂಬುದನ್ನು ಎಳೆಎಳೆಯಾಗಿ ಬಿಡಿಸಲಾಗಿದೆ... ನಂದಿತಾ ದಾಸ್, ಅಮೀರ್ ಖಾನ್, ರಾಹುಲ್ ಖನ್ನಾರ ಅದ್ಭುತ ನಟನೆಯಿದೆ... ಬೆಚ್ಚಿಬೀಳಿಸುವಂತಹ ಕೋಲ್ಡ್-ಬ್ಲಡೆಡ್ ಮರ್ಡರ್-ನ ದೃಶ್ಯಗಳಿವೆ... ಜತೆಗೆ ಈ ಚಂದದ ಹಾಡೂ ಕೂಡ. ಈ ಚಿತ್ರ ನೋಡದವರಿಗೆ ನೋಡಲಿಕ್ಕಿದು ಸಕಾಲ.

--------------------

ಒಬ್ಬನಿದ್ದ, ಸೃಜನಶೀಲ ವ್ಯಕ್ತಿ. ಬರಿಯ ನಗೆಚಾಟಿಕೆ ಹಾರಿಸಿಕೊಂಡು, ಸರಳವಾಗಿದ್ದ ಆತ, ಎಲ್ಲರ ನಡುವಿದ್ದೂ ಎಲ್ಲರಿಗಿಂತ ಭಿನ್ನವಾಗಿದ್ದ. ನಗುವಿದ್ದರೆ ಎಲ್ಲರಿಗೂ ಹಂಚುತ್ತಿದ್ದ ಗೆಳೆಯ, ಅಳುವಿದ್ದರೆ ಬಿಸ್ಮಿಲ್ಲಾಖಾನ್ ಜತೆ ಮಾತ್ರ ಹಂಚಿಕೊಳ್ಳುತ್ತಿದ್ದ.
ಸುಮ್ಮನೆ ಕೂತಲ್ಲಿ ಕೂರಲಾರದವ, ಏನಾದರೂ ವಿಭಿನ್ನವಾಗಿ ಮಾಡುತ್ತಲೇ ಇರುತ್ತಿದ್ದವ. ದೇಶದ ವಿವಿಧೆಡೆಯಿಂದ ಬಂದ ದೃಶ್ಯಗಳನ್ನು ಕತ್ತರಿಸಿ, ಈ ಹಾಡಿಗೆ ಸೂಕ್ತವಾಗುವಂತೆ ದೃಶ್ಯಗಳನ್ನು ಸೂಪರ್-ಇಂಪೋಸ್ ಮಾಡಿದ್ದ. ಸೂಕ್ತವಾದ ದೃಶ್ಯಗಳು ಸಿಗದಿದ್ದಲ್ಲಿ ಸಿಗುವವರೆಗೆ ಹುಡುಕಿ ಹಾಕಿದ್ದ. ಚಲನಚಿತ್ರದಲ್ಲಿರುವ visualizationಗಿಂತ ಭಿನ್ನವಾಗಿ, ಪ್ರಸ್ತುತ ಪರಿಸ್ಥಿತಿಗೆ ಅನ್ವಯವಾಗುವಂತೆ ಅದನ್ನು ದೃಶ್ಯೀಕರಿಸಿ ಎಡಿಟ್ ಮಾಡಿದ್ದ. (ಅದರ ವೀಡಿಯೋ ನನ್ನ ಬಳಿ ಇಲ್ಲ, ಇದ್ದವರು ಇಂಟರ್ನೆಟ್ಟಿಗೆ ಅಪ್-ಲೋಡ್ ಮಾಡಿ, ತುಂಬಾನೇ ಚೆನ್ನಾಗಿದೆ ಅದು.)

--------------------

ಇನ್ನೊಂದು ಪ್ರೋಮೋ ಮಾಡಿದ್ದ ಈತ, ನಂಗಂತೂ ತುಂಬಾ ಇಷ್ಟವಾಗಿತ್ತು ಅದು. abstract ಆಗಿದ್ದರೂ ಸುಲಭವಾಗಿ ಅರ್ಥವಾಗುವ ಯೋಚನಾ ಸರಣಿ... (ಸಿದ್ದೇಶ್, ಅದರ ಆಡಿಯೋ ಸರಿಮಾಡಿ ಅಪ್-ಲೋಡ್ ಮಾಡಿದರೆ ಉತ್ತಮ...)
" ನಮ್ಮ ಊರುಗಳು, ಮತ್ತೆ ನಮಗೆ ಸಿಗಬೇಕಾಗಿದೆ...
ನಮ್ಮ ಮನೆಗಳಲ್ಲಿ ದೀಪಗಳು ಪ್ರೀತಿಯಿಂದ ಉರಿಯಬೇಕಾಗಿದೆ...
ನಾವು, ಬಾಪೂಜಿಯ ಆದರ್ಶಗಳೊಂದಿಗೆ ಬೆಳೆದವರು...
ಬಸವಣ್ಣನ ಕರ್ಮಭೂಮಿ ನಮ್ಮದು...
ಪ್ರಾಮಾಣಿಕತೆ, ನೇರ ನೋಡುವ ಶಕ್ತಿ
ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುವ ನಿಷ್ಠುರತೆ...
ನಮ್ಮಲ್ಲಿರಬೇಕು..
ಅದೇ ಪ್ರಜಾಪ್ರಭುತ್ವದ ಗೆಲುವು...
ಅದೇ ಪ್ರಜಾಪ್ರಭುತ್ವದ ಹೆಮ್ಮೆ.

ಈ ಹೆಮ್ಮೆಗಾಗಿ, ಈ ಗೆಲುವಿಗಾಗಿ, ನಾವು ನಿಮ್ಮೊಂದಿಗಿದ್ದೇವೆ..."

-----------------------------------
ಈಗ ರವೀಂದ್ರ ಇಲ್ಲ... ಇರಬೇಕಿತ್ತು.

Saturday, November 15, 2008

ನೀವು ಕಾಣುವುದರ ಹಿಂದಿರುವ ನೀವು ಕಂಡಿಲ್ಲದವರು...!

ನನ್ನಂಥ ನೂರಾರು ಮಂದಿಯನ್ನು ಹುಟ್ಟುಹಾಕಿದ ಸಂಸ್ಥೆ... ಅದರ ಹಿಂದಿನ ಶಕ್ತಿಯನ್ನು ಈಗ ಇಷ್ಟು ದೂರದಿಂದ ನೋಡುವಾಗಲೂ ಹೆಮ್ಮೆಯೆನಿಸುತ್ತದೆ, ಬರೆಯಲು ಒಂದು ಸಾರಿ ಸಂಕೋಚವಾಯಿತು, ಆದರೂ, ಬರೆಯುತ್ತಿದ್ದೇನೆ...

'ಟೆಲಿವಿಶನ್ ಪ್ರೊಡಕ್ಷನ್ ಬಗ್ಗೆ ನಿಂಗೆ ಏನೇನು ಗೊತ್ತು?'

ಓದಿದ್ದು ಸಮೂಹ ಸಂವಹನವಾದರೂ, ಪ್ರೊಡಕ್ಷನ್ ಅಂದರೇನು ಅಂತ ಪ್ರಾಯೋಗಿಕವಾಗಿ ಗೊತ್ತಿಲ್ಲದಿದ್ದ ಕಾಲವದು. ಹಾಗಾಗಿ ನನಗೆ ಸುಳ್ಳುಹೇಳುವ ಇರಾದೆಯಿರಲಿಲ್ಲ, 'ಏನೂ ಗೊತ್ತಿಲ್ಲ' ಅಂತ ನೀಟಾಗಿ ಒಪ್ಪಿಕೊಂಡು ಬಿಟ್ಟೆ...

ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದ ಹಿರಿಯ, ಆಗ ಈಟಿವಿ ನ್ಯೂಸ್-ನ ಮುಖ್ಯಸ್ಥರಾಗಿದ್ದ ಎಸ್.ರಾಮಾನುಜನ್. ಒಂದು ಕ್ಷಣ ಸುಮ್ಮನಿದ್ದವರು, ಮತ್ತೆ ಕೇಳಿದರು... 'ಕಲೀತೀಯಾ ಹೇಳ್ಕೊಟ್ಟಿದ್ದನ್ನ?'

'ಕಲೀತೇನೆ' ಅಂದೆ.

ಹಾಗೆ ಸೇರಿಕೊಂಡಿದ್ದೆ ಈಟಿವಿ, 8 ವರ್ಷಗಳ ಹಿಂದೆ. ಸುದ್ದಿಯ output ಕೊಡುವ production ವಿಭಾಗದಲ್ಲಿ ಆರಂಭವಾಗಿತ್ತು ನನ್ನ ವೃತ್ತಿ. ಅಲ್ಲಿ ಕಲಿಯುವ ಮನಸಿದ್ದವರಿಗೆ ಯಾವುದೇ boundary ಇರಲಿಲ್ಲವಾಗಿ, ಕಲಿಯುವ ಮನಸೂ ಇದ್ದುದರಿಂದ ಸುದ್ದಿ ನಿರ್ವಹಣೆಗೆ ಸಂಬಂಧಿಸಿದ್ದೆಲ್ಲವನ್ನೂ ಕಲಿಯುವ ಸದವಕಾಶ ಸಿಕ್ಕಿತ್ತು... ತಾಂತ್ರಿಕವಾಗಿ ಎಡಿಟಿಂಗ್-ನಿಂದ ಹಿಡಿದು, ಪಿಸಿಆರ್ ಕೆಲಸ, ಕಾರ್ಯಕ್ರಮ ನಿರ್ವಹಣೆ, ಸುದ್ದಿ ನೀಡುವ ಕಲೆ... ಹೀಗೆ ಎಲ್ಲವೂ ಒಂದೊಂದಾಗಿ ಒಲಿದು ಬಂತು.

ಟೇಪ್-ಗಳನ್ನು ಹಾಕಿಕೊಂಡು MANUAL ಆಗಿ, ಲಕ್ಷಗಟ್ಟಲೆ ಬೆಲೆಯ ಎಡಿಟಿಂಗ್ ಮೆಶಿನುಗಳ ಮೂಲಕ ಎಡಿಟಿಂಗ್ ಮಾಡುತ್ತಿದ್ದ ಕಾಲದಲ್ಲಿ ನಾವೆಲ್ಲ ಈಟಿವಿ ಸೇರಿಕೊಂಡಿದ್ದೆವು. ನಂತರ ಒಂದೆರಡು ವರ್ಷಗಳಲ್ಲಿ ಪ್ರವೇಶಿಸಿದ್ದು NON-LINEAR ಯುಗ. ಇದರಲ್ಲಿ ಕಂಪ್ಯೂಟರ್ ಮೂಲಕ ಎಡಿಟಿಂಗ್ ಸಾಫ್ಟ್-ವೇರ್ ಉಪಯೋಗಿಸಿ ಎಡಿಟಿಂಗ್ ಮಾಡಬಹುದಿತ್ತು. ಬಂದ ಸುದ್ದಿಚಿತ್ರಗಳನ್ನು ಕಂಪ್ಯೂಟರಿನಲ್ಲಿ ನೋಡಿ, ಕೇಳಿ, ಚೊಕ್ಕವಾಗಿ ಸ್ಕ್ರಿಪ್ಟ್ ಬರೆಯುವ ಜತೆಗೆ, ಅವರವರು ಬರೆದ ಸುದ್ದಿ ಅವರವರೇ ಎಡಿಟಿಂಗ್ ಮಾಡಬಹುದಿತ್ತು, ಸೃಜನಾತ್ಮಕವಾಗಿ ಏನಾದರೂ ಮಾಡಬಹುದಿತ್ತು...ಈ ವ್ಯವಸ್ಥೆಯಲ್ಲಿ ಸುದ್ದಿ ಕೊಡಲು ಬೇಕಾದ ಸಮಯ ಕಡಿಮೆಯಾಯಿತು, ವೇಗ ಹೆಚ್ಚಿತು.

ಎಲ್ಲಾ ಚಾನೆಲ್-ಗಳಿಗೆ ಬರುವ ಸುದ್ದಿಚಿತ್ರಗಳನ್ನು ಸ್ಟೋರ್ ಮಾಡಲು ಸೆಂಟ್ರಲೈಸ್ಡ್ ಸರ್ವರ್- ವ್ಯವಸ್ಥೆಯಿತ್ತು. ಕಡಿಮೆ ಸ್ಟೋರೇಜ್ ಸ್ಪೇಸ್-ನಲ್ಲಿ ಹೆಚ್ಚು ಸುದ್ದಿಚಿತ್ರಗಳನ್ನು ಇಟ್ಟುಕೊಳ್ಳಬಹುದಿತ್ತು. ಯಾವುದೇ ಜಿಲ್ಲೆಯ ಸುದ್ದಿಯಿರಲಿ, ಬಂದ ತಕ್ಷಣ ತಂತಾನೇ copy ಆಗಿ ಅದಕ್ಕಿರುವ ಫೋಲ್ಡರಲ್ಲಿ ಹೋಗಿ ಕೂರುತ್ತಿತ್ತು, ಹುಡುಕುವ ಕಷ್ಟವಿಲ್ಲದೆ ಬಂದ ತಕ್ಷಣ ಕೈಗೆ ಸಿಗುತ್ತಿತ್ತು. ತಾಂತ್ರಿಕವಾಗಿ ಯಾವುದೇ ಗ್ಲೋಬಲ್ ಸಂಸ್ಥೆಯ ಕಾಪಿರೈಟ್-ಗೆ ಒಳಗಾಗದ, ಕಡಿಮೆ ಖರ್ಚಿನ ಸರಳವಾದ NEWS EDITING SOFTWARES, ON-AIR SOFTWARE, LOWER THIRD GRAPHICS, ಮತ್ತು ಬರೆಯಲು ಬೇಕಿರುವ ಸಾಫ್ಟ್-ವೇರ್ ಅಭಿವೃದ್ಧಿಯಾಗಿತ್ತು. ಅದೂ ಲೈನಕ್ಸ್-ಬೇಸ್ಡ್ ಪ್ಲಾಟ್-ಫಾರಂನಲ್ಲಿ. ಟೀವಿ ಚಾನೆಲ್ಲುಗಳು ಸಾಫ್ಟ್-ವೇರ್-ಗಳಲ್ಲಿ ಸ್ವಾವಲಂಬನ ಸಾಧಿಸಬಹುದು ಎಂದು ಇಲ್ಲಿನ ವ್ಯವಸ್ಥೆ ಸಾಧಿಸಿ ತೋರಿಸಹೊರಟಿತ್ತು. ಈಗ ಹೊಸದಾಗಿ ಬರುತ್ತಿರುವ ಟೀವಿ ಚಾನೆಲ್ಲುಗಳೆಲ್ಲ ಎಡಿಟಿಂಗ್, ಸುದ್ದಿಕೋಣೆಯ ಸಾಫ್ಟ್-ವೇರ್ ಎಲ್ಲ ಒಟ್ಟು ಸೇರಿಸಿರುವ ನೆಟ್ವರ್ಕುಗಳಿಗೆ ತಲೆಬಾಗುತ್ತಿವೆ, ಲೈಸೆನ್ಸಿಗಾಗಿ ಪ್ರತಿವರ್ಷ ಕೋಟಿಗಟ್ಟಲೆ ದುಡ್ಡು ಮಲ್ಟಿನ್ಯಾಶನಲ್ ಸಾಫ್ಟ್-ವೇರ್ ಕಂಪೆನಿಗೆ ಸುರಿದು ದಾಸ್ಯದ ಬದುಕು ಬದುಕಹೊರಡುತ್ತಿವೆ.

ಮುಖ್ಯ ಸುದ್ದಿವಿಭಾಗವಿರುವುದು ಆಂಧ್ರದಲ್ಲಾದರೂ ಅದು ಗೊತ್ತೇ ಆಗದ ಹಾಗೆ, ಕರ್ನಾಟಕದ - ಮಾತ್ರವಲ್ಲ ದೇಶದೆಲ್ಲೆಡೆಯ ಸುದ್ದಿಗಳನ್ನು ವೇಗವಾಗಿ ಕೊಡುವ ತಾಂತ್ರಿಕತೆ ಈಟಿವಿಯಲ್ಲಿತ್ತು. ಸೆಟ್ - ತಯಾರಿ, ಗ್ರಾಫಿಕ್ಸ್-ನಿಂದ ಹಿಡಿದು, ಸ್ಟುಡಿಯೋ ಲೈಟಿಂಗ್-ವರೆಗೆ ಎಲ್ಲವನ್ನೂ ಗೊತ್ತಿಲ್ಲವೆಂಬ ಕುತೂಹಲಕ್ಕೆ ಕೇಳಿದರೆ ಹೇಳಿಕೊಡುವವರಿದ್ದರು. ಸಾಮರ್ಥ್ಯ ಮತ್ತು ಆಸಕ್ತಿಯಿದ್ದವರಿಗೆ ಇತರ ಭಾಷೆಗಳ ಚಾನೆಲ್-ಗಳಿಗೋಸ್ಕರ ಭಾರತದ ಇತರ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿತ್ತು. ಆಸಕ್ತಿಯಿಂದ ಏನಾದರೂ ಮಾಡಹೊರಟರೆ ಪ್ರೋತ್ಸಾಹ ಸಿಗುತ್ತಿತ್ತು. ಒಳ್ಳೆಯ value addition-ಗಳಿಗೆ ಸ್ವಾಗತವಿರುತ್ತಿತ್ತು. ಅಲ್ಲಿ ಸರಿ-ತಪ್ಪುಗಳನ್ನು ಪ್ರಶ್ನಿಸಬಹುದಿತ್ತು, ಕೇಳುವವರಿದ್ದರು, ಸ್ಪಂದಿಸುವವರಿದ್ದರು. ತಪ್ಪಿದ್ದರೆ ತಿಳಿಸಿ ಹೇಳುವವರೂ ಇದ್ದರು. ವೃತ್ತಿಯಲ್ಲಿ ಹೆಚ್ಚುಹೆಚ್ಚು ಕಲಿಸುವ ಜತೆಗೆ ಬದುಕಲಿಕ್ಕೂ ಕಲಿಸಿದ ಪಾಠಶಾಲೆ ರಾಮೋಜಿ ಫಿಲ್ಮ್ ಸಿಟಿ.

ಆಫೀಸ್ ಕ್ಯಾಂಟೀನ್-ನಲ್ಲಿ ಕಡಿಮೆ ಬೆಲೆಗೆ ಹಲವಾರು ಐಟಂಗಳಿರುವ ಊಟ ಸಿಗುತ್ತಿತ್ತು. ಕ್ಯಾಂಟೀನ್ ಊಟವಾದ ಕಾರಣ ಸರಿಯಿಲ್ಲವೆಂದು ಬೈದುಕೊಳ್ಳುತ್ತಿದ್ದರೂ ಹೊಟ್ಟೆಹಸಿವಿಗೆ ಸೋತು ಕಬಳಿಸುತ್ತಿದ್ದವರು ಹಲವರು. ಯುಗಾದಿಯ ದಿನ ಪಕ್ಕಾ ಆಂಧ್ರ ಶೈಲಿಯ ಬೇವು-ಬೆಲ್ಲದ ಪಾನಕ ಸಿಗುತ್ತಿತ್ತು. ಉದ್ಯೋಗಿಗಳಿಗೆ ಪ್ರಿಯಾ ಉಪ್ಪಿನಕಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು... :-) ಮನೆಯ ಹತ್ತಿರದ ಪಿಕಪ್ ಪಾಯಿಂಟ್-ನಿಂದ ನಿಗದಿತ ಸಮಯಕ್ಕೆ ಬಸ್, ನಂತರ ವಾಪಸ್ ಅದೇ ಪಾಯಿಂಟ್-ನಲ್ಲಿ ಡ್ರಾಪ್...

ರಾಮೋಜಿ ಫಿಲ್ಮ್ ಸಿಟಿಯೆಂದರೆ ಮಿನಿ ಇಂಡಿಯಾ. ದೇಶದೆಲ್ಲೆಡೆಯ ವ್ಯಕ್ತಿಗಳನ್ನು ಮತ್ತು ಭಾಷೆಗಳನ್ನು ಅಲ್ಲಿ ಕಾಣಬಹುದು. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ - ನಾಲ್ಕು ರಾಜ್ಯಗಳಿಗೆ ನಾಲ್ಕು ಚಾನೆಲ್... ಉರ್ದು, ಬಾಂಗ್ಲಾ, ಮರಾಠಿ, ಗುಜರಾತಿ, ಒರಿಯಾ, ಕನ್ನಡ... ತೆಲುಗಿನಲ್ಲಿ ಎರಡು ಚಾನೆಲ್. ಎಲ್ಲಾ ರಾಜ್ಯಗಳಲ್ಲಿ ವರದಿಗಾರರು... ದೇಶದ ಅತಿದೊಡ್ಡ ಮೈಕ್ರೋ ನ್ಯೂಸ್ ನೆಟ್ವರ್ಕ್ ಇರುವ ಖ್ಯಾತಿ ಈಟಿವಿಯದು. 8 ವರ್ಷದ ಹಿಂದೆ ಕನ್ನಡದಲ್ಲಿ ದೂರದರ್ಶನ, ಉದಯ ಟೀವಿ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲದ ಸಮಯ ಆರಂಭವಾದ ಈಟಿವಿ, 'ಹಚ್ಚೇವು ಕನ್ನಡದ ದೀಪ...' ಹಾಡಿನ ಜತೆಗೆ ಪ್ರಸಾರ ಆರಂಭಿಸಿತು. ಕನ್ನಡಿಗರ ಮನೆ-ಮಮನ ತಟ್ಟಿ, ಮಧ್ಯಮವರ್ಗದ ಆಶೋತ್ತರಗಳ ಪ್ರತೀಕವಾಗಿ ಮೂಡಿಬರಲಾರಂಭಿಸಿತು. ನಿಧನಿಧಾನವಾಗಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆಯಿತು.

ಒಂದು ವ್ಯವಸ್ಥೆ ಇಷ್ಟು ಆಳವಾಗಿ, ಚೆನ್ನಾಗಿ ಬೇರುಬಿಡಬೇಕೆಂದರೆ, ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರ ಹಿಂದೆ ಒಂದು ಕನಸುಗಾರ ಹೃದಯ ಇರಲೇಬೇಕು. ಈಟಿವಿಯ ಹಿಂದಿರುವ ಇಚ್ಛಾಶಕ್ತಿ, ಶ್ರೀಯುತ ರಾಮೋಜಿ ರಾವ್.



ಈ ಯಶೋಗಾಥೆಯ ಹಿಂದಿನ ರೂವಾರಿಯ ಬದುಕಿನ ಕಥೆ, ಮುಗಿಯದ ಹೋರಾಟದ್ದು. ಪ್ರಿಯಾ ಉಪ್ಪಿನಕಾಯಿಯಿಂದ ಆರಂಭಿಸಿ, ಮಾರ್ಗದರ್ಶಿ ಚಿಟ್ ಫಂಡ್, ಈನಾಡು, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ, ಗೆಲುವು ಕಂಡವರು ರಾಮೋಜಿ ರಾವ್. ರಾಮೋಜಿ ಫಿಲ್ಮ್ ಸಿಟಿ, ಉಷೋದಯ ಎಂಟರ್-ಪ್ರೈಸಸ್, ಉಷಾಕಿರಣ ಮೂವೀಸ್, ನ್ಯೂಸ್ ಟುಡೇ ಪ್ರೈವೇಟ್ ಲಿಮಿಟೆಡ್ - ಹೀಗೆ ಹಲವು ರೀತಿಯಲ್ಲಿ ದೃಶ್ಯ ಮಾಧ್ಯಮದ ಹಲವು ಆಯಾಮಗಳನ್ನು ಅನ್ವೇಷಿಸಿ ಗೆದ್ದವರು. ಬರಿಯ ಈಟೀವಿ-ಈನಾಡು ಸಮೂಹದ ಮೂಲಕವೇ 2000ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಅನ್ನದಾತರಾಗಿರುವವರು.

ಅನ್ನದಾತ ಎಂದ ತಕ್ಷಣ ಹೇಳಲೇಬೇಕಾದ ಮಾತೊಂದು ನೆನಪಾಗುತ್ತದೆ... ನಿರಂತರವಾಗಿ 8 ವರ್ಷಗಳಿಂದ ಈಟಿವಿಯಲ್ಲಿ ಬೆಳಗಿನ 6.30ಕ್ಕೆ ಮೂಡಿಬರುತ್ತಿದೆ, ಅನ್ನದಾತ ಕಾರ್ಯಕ್ರಮ. ಭಾರತ ಕೃಷಿಪ್ರಧಾನ ದೇಶವೆಂಬ ಸತ್ಯವನ್ನು ನಾವೆಲ್ಲರೂ ಮರೆತು ಕೃಷಿ ಮಾಡುವವರೂ ಕಡಿಮೆಯಾಗುತ್ತಿರುವ ಈದಿನಗಳಲ್ಲಿ ಅಳಿದುಳಿದ ಕೃಷಿಕರಿಗೆ ಧೈರ್ಯ ತುಂಬುವಂತೆ ಇರುವ ಈ ಕಾರ್ಯಕ್ರಮ ವಿವಿಧ ಬೆಳೆಗಳ ಕೃಷಿಯ ಮೇಲೆ ಬೆಳಕು ಚೆಲ್ಲುತ್ತದೆ. ಯಂತ್ರೋಪಕರಣಗಳ ಕುರಿತು, ಹೊಸ ಕೃಷಿವಿಧಾನಗಳ ಕುರಿತು, ಮಾರುಕಟ್ಟೆಯ ಕುರಿತು ಮಾಹಿತಿ... ಸೋತವರಿಗೆ ಧೈರ್ಯ ತುಂಬುವ ಗೆದ್ದವರ ಕಥೆಗಳು...

ಇತ್ತೀಚೆಗೆ ಇಂಥದೇ ಯತ್ನ ಮಾಡಹೊರಟ ಇತರ ಹಲವು ವಾಹಿನಿಗಳು ಟಿಆರ್-ಪಿಯೆಂಬ ಭೂತ ಕೈಕೊಟ್ಟ ತಕ್ಷಣ ಕಾರ್ಯಕ್ರಮವನ್ನು ನಿಲ್ಲಿಸಿದವು. ಆದರೆ ಎಂಥದೇ ಪರಿಸ್ಥಿತಿಯಲ್ಲಿ ಕೂಡ, ಟಿಆರ್-ಪಿ ಬರಲಿ-ಬಿಡಲಿ, ನಿರಂತರವಾಗಿ 8 ವರ್ಷದಿಂದ ನಡೆದುಬರುತ್ತಿದೆ ಅನ್ನದಾತ. ಇದು ಕನ್ನಡದ ವಾಹಿನಿಗಳಲ್ಲಿ ಬಹುಶ: ದೂರದರ್ಶನ ಬಿಟ್ಟರೆ ಕೃಷಿಕರಿಗೋಸ್ಕರವಿರುವ ಒಂದೇ ಒಂದು ಕಾರ್ಯಕ್ರಮ ಅಂತ ನನ್ನ ತಿಳುವಳಿಕೆ. (ಉದಯ ಟೀವಿಯಲ್ಲಿ ಇದೆಯೇನೋ ಗೊತ್ತಿಲ್ಲ, ನಾನು ಉದಯ ಟೀವಿ ನೋಡುವುದೇ ಇಲ್ಲ).

ತುಂಬಿದ ಕೊಡ ತುಳುಕುವುದಿಲ್ಲ, ದೊಡ್ಡ ಮನುಷ್ಯರು ಯಾವಾಗಲೂ ದೊಡ್ಡ ಮನಸ್ಸಿನವರೇ ಆಗಿರುತ್ತಾರೆಂಬುದಕ್ಕೆ ಅತ್ಯುತ್ತಮ ಉದಾಹರಣೆ ರಾಮೋಜಿ ರಾವ್... ನಾವಿದ್ದ ಕಾಲದಲ್ಲಿ ಈಟಿವಿಯಲ್ಲಿ ಪ್ರತಿ ವಾಹಿನಿಯ ಸುದ್ದಿವಿಭಾಗಕ್ಕೂ ನೇರವಾಗಿ ಚೇರ್ಮನ್ ರಾಮೋಜಿ ರಾವ್ ಜತೆ ಮೂರು ತಿಂಗಳಿಗೊಮ್ಮೆ ಮೀಟಿಂಗ್ ಇರುತ್ತಿತ್ತು. ಅದಕ್ಕಾಗಿ ನಾವೆಲ್ಲ ಚಾನೆಲ್ ಬಗ್ಗೆ, ಒಳ್ಳೆದು-ಕೆಟ್ಟದರ ಬಗ್ಗೆ ನಮ್ಮ ವಿಶ್ಲೇಷಣೆ ಕೊಡಬೇಕಿತ್ತು. ಹಾಗೆ ಕೊಟ್ಟ ವಿಶ್ಲೇಷಣೆಗಳನ್ನು ಖುದ್ದು ಚೇರ್ಮನ್ನರೇ ಓದಿ, ಫೀಡ್-ಬ್ಯಾಕ್ ತೆಗೆದುಕೊಳ್ಳುತ್ತಿದ್ದರು, ಮೀಟಿಂಗ್-ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರು. ಮೀಟಿಂಗ್-ನಲ್ಲಿ ತಾಂತ್ರಿಕ ವಿಭಾಗದವರು, ಗ್ರಾಫಿಕ್ಸ್, ಎಂಜಿನಿಯರುಗಳು, ಕ್ಯಾಮರಾ ವಿಭಾಗದವರು, ಅಡ್ಮಿನಿಸ್ಟ್ರೇಶನ್-ನವರು, ಹೆಚ್ಚಾರ್-ನವರು - ಎಲ್ಲರೂ ಇರಬೇಕಿತ್ತು. ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಿಯೇ ಆ ವಿಭಾಗದ ಗಮನಕ್ಕೆ ತರಲಾಗುತ್ತಿತ್ತು. ಅತ್ಯಂತ ground levelನಿಂದ ಕೂಡ ಅಭಿಪ್ರಾಯಗಳು ಬರಬಹುದಿತ್ತು, ಅವುಗಳಲ್ಲಿ ಸತ್ವವಿದ್ದರೆ ಅದಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲುತ್ತಿತ್ತು. ವ್ಯವಸ್ಥೆ ಹಾಗಿತ್ತು.

ಈ ರೀತಿಯ ಮೀಟಿಂಗ್-ಗೆ ಸಂಬಂಧಿಸಿದಂತೆ ನಡೆದ ಘಟನೆಯೊಂದು ನನಗೆ ಈ ಹಿರಿಯ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸಿತು... ಆಸಮಯದಲ್ಲಿ ಈಟಿವಿ ಸುದ್ದಿವಾಚಕಿಯರು ಉಡುತ್ತಿದ್ದ ಸೀರೆಗಳು, ಹತ್ತಿಯ ಸೀರೆಗಳಾಗಿದ್ದು, ವಿಧವಿಧದ dignified ವಿನ್ಯಾಸಗಳೊಡನೆ ಸುದ್ದಿವಾಚಕಿಯರ ವ್ಯಕ್ತಿತ್ವವನ್ನೇ ಬದಲಾಯಿಸುವಂತಿದ್ದವು. ಹೈದರಾಬಾದಿನಲ್ಲಿದ್ದ 'ಕಲಾಂಜಲಿ'ಯಿಂದ ತರುತ್ತಿದ್ದ ಹತ್ತಿ ಸೀರೆಗಳು ಸಾವಿರ-ಸಾವಿರದೈನೂರು ರೂಪಾಯಿ ಬೆಲೆಯವಾದರೂ, ಉಟ್ಟವರನ್ನು ನೋಡಿದರೆ ಬೆಲೆ ಹೆಚ್ಚಾಯಿತು ಎನಿಸುತ್ತಿರಲಿಲ್ಲ. ಹೀಗಿರಲು ಒಂದು ಸಾರಿ, ಹೊಸ ಸೀರೆಗಳನ್ನು ತರುವಾಗ ಹತ್ತಿ ಸೀರೆಯ ಬದಲು ಗ್ರಾಂಡ್ ಆದ ಜರತಾರಿ ಅಂಚಿನ ರೇಷ್ಮೆ ಸೀರೆಗಳನ್ನು ತರಲಾಯಿತು. ಸುದ್ದಿ ಓದುವವರು ಆ ಸೀರೆಗಳಲ್ಲಿ ಮದುವಣಗಿತ್ತಿಯರಂತೆ ಕಾಣುತ್ತಿದ್ದುದು ನ್ಯೂಸ್ ಪ್ರೊಡಕ್ಷನ್-ನಲ್ಲಿದ್ದ ನನಗೆ ಹಿತವಾಗಿರಲಿಲ್ಲ. ಜತೆಗೆ ಕ್ಯಾಮರಾದಲ್ಲೂ ಸರಿಯಾಗಿರುತ್ತಿರಲಿಲ್ಲ. ಮೊದಲೇ ಹೇಳಿದ್ನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದ ಸಂಸ್ಥೆ ಅದು. ನಾನು ಕಾರಣಗಳ ಸಹಿತ ಜರತಾರಿ ಸೀರೆಗಳ ವಿರುದ್ಧ ಆಸಲದ ಮೀಟಿಂಗ್-ಗೆ ಸಿದ್ಧಪಡಿಸಿದ ರಿಪೋರ್ಟ್-ನಲ್ಲಿ ಬರೆದೆ.

ಮೀಟಿಂಗ್-ನಲ್ಲಿ ನನ್ನ ವರದಿಯ ಬಗ್ಗೆ ಚರ್ಚೆಗೆ ಬಂತು. ಮೀಟಿಂಗಲ್ಲಿ ಈಸಲ ನನಗೂ ಜಾಗವಿತ್ತು. ಒಳಗೊಳಗೇ ನನಗೆ ಭಯ, ಬರೆಯುವುದು ಬರೆದಾಗಿತ್ತು, ಇನ್ನೇನಾಗುತ್ತದೋ ಅಂತ. ನನ್ನ ಅಭಿಪ್ರಾಯಗಳ ಸತ್ಯಾಸತ್ಯತೆಯ ಬಗ್ಗೆ ಚೇರ್ಮನ್ ತಾಂತ್ರಿಕ ವಿಭಾಗದವರಲ್ಲಿ ಕೇಳಿದಾಗ ಅವರು ನಾ ಕೊಟ್ಟ ಕಾರಣಗಳನ್ನು ಒಪ್ಪಿಕೊಂಡು ವಿವರಿಸಿದರು. ಸ್ವಲ್ಪ ಹೊತ್ತಿನ ವಿಚಾರವಿನಿಮಯದ ನಂತರ ಸುದ್ದಿವಾಚಕಿಯರಿಗೆ ಹತ್ತಿ ಸೀರೆಯೇ ಬೇಕೆಂಬ ನನ್ನ ವಾದವನ್ನು ಒಪ್ಪಿದ ಚೇರ್ಮನ್, ರೇಷ್ಮೆ ಸೀರೆಗಳನ್ನು ಖರೀದಿಸಲು ಹೇಳಿದ್ದು ತಾನೇ ಆಗಿದ್ದು, ಅದು ಸರಿಯಲ್ಲವೆಂದಾದಲ್ಲಿ ಸರಿಮಾಡಿಕೊಳ್ಳೋಣ ಅಂತ ಹೇಳಿದರು... ನನ್ನ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿ ವಾಚಕರಿಗೆ ಸೂಕ್ತ ಡ್ರೆಸ್ ಕೋಡ್ ಸಿದ್ಧಪಡಿಸಲು ತಾಂತ್ರಿಕ ವಿಭಾಗದವರಿಗೆ ಹೇಳಿದರು. ಅಷ್ಟು ನೇರವಾಗಿ, ಎಲ್ಲರ ಎದುರು, ಅನುಭವದಲ್ಲಿ ಎಷ್ಟೋ ವರ್ಷ ಚಿಕ್ಕವಳಾದರೂ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು, ಸರಿ-ತಪ್ಪು ತೂಗಿ ನೋಡಿದ ಹಿರಿತನಕ್ಕೆ ಹೃದಯ ತುಂಬಿ ಬಂತು ನನಗೆ.

ಕಹಿ ಮರೆತು ಸಿಹಿ ನೆನಪಿಟ್ಟುಕೊಂಡು ಮುನ್ನಡೆಯುವಲ್ಲಿ ನನಗೆ ಸ್ಫೂರ್ತಿಯಾದ ಹಿರಿಯರಿವರು. ಸರಳತೆ, ವೃತ್ತಿಯ ಮೇಲೆ ಪ್ರೀತಿ, ಒಳ್ಳೆಯದು ಎಲ್ಲಿಂದ ಬಂದರೂ ತೆಗೆದುಕೊಳ್ಳುವ ಮನಸ್ಸು, ಮನಸು ಒಪ್ಪಿದ ತತ್ವಕ್ಕೆ ಬದ್ಧವಾಗಿ ಮುನ್ನಡೆಯುವ ಛಾತಿ - ನಾನು ಈ ಹಿರಿಯರಿಂದ ಕಲಿತೆ. ಅವರ ಜತೆಗಾಗಿದ್ದು ಒಂದೋ ಎರಡೋ ಭೇಟಿಗಳಾದರೂ ನನಗೆ ಅವು ಸ್ಮರಣೀಯ. ಬದುಕಲು ಕಲಿಯುವಲ್ಲಿ, ಬದುಕು ಕಟ್ಟಿಕೊಳ್ಳುವಲ್ಲಿ, ಸಹಾಯ ಮಾಡಿದವರಲ್ಲಿ, ಕುಸಿಯುವ ಹೆಜ್ಜೆಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುವ ಧೈರ್ಯ ತುಂಬಿದ ಹಿರಿಯರಲ್ಲಿ ಒಬ್ಬರು ರಾಮೋಜಿ ರಾವ್.

ಸದಾ ಬಿಳಿ ಬಟ್ಟೆಯ ಹಸನ್ಮುಖಿ, ಅಷ್ಟೇ ಒಳ್ಳೆಯ ಮನಸ್ಸಿನ ಈ ಹಿರಿಯರಿಗೆ ನಾಳೆಗೆ 72 ತುಂಬುತ್ತದೆ. ಸದ್ದಿಲ್ಲದೆ ಉರಿದು ಸುತ್ತಲಿಗೆ ಬೆಳಕ ನೀಡುವ ದೀಪಗಳಲ್ಲೊಬ್ಬರು ರಾಮೋಜಿರಾವ್... ನೂರ್ಕಾಲ ಬಾಳಲೆಂಬ ಹಾರೈಕೆ ಎಂದೆಂದೂ ನನ್ನದು.

Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

Saturday, January 26, 2008

ಈ ಕನಸಿಗೆ ನೂರು ತುಂಬಿತು...!



ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...
========================================

ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!

Wednesday, August 8, 2007

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು...

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು, ಬಣ್ಣ ಹಚ್ಚುವುದೇ ಕೆಲಸವಾಗಿರುವಾಗ? ಕಥೆ ಹೇಳುವವರಿಗೆ ಎಲ್ಲಾದರೇನು, ಕೇಳಲು ಜನವಿದ್ದರಾಯಿತು. ಬದುಕಿಗದ್ದಿದ ಮನಸಿನ ಕುಂಚ ತನಗೆ ಸಿಕ್ಕ ಕ್ಯಾನ್ವಾಸಿನಲ್ಲಿ ಬಣ್ಣ ತುಂಬಹೊರಟಿದೆ, ಮತ್ತೆ ತನಗೆ ಬೇಕಾದ ಕ್ಯಾನ್ವಾಸು ಮನಸಿಗೆ ಸಿಗುವ ತನಕ ಕನಸು ರೆಕ್ಕೆ ಮುಚ್ಚಿರುತ್ತದೆ, ಬ್ಲಾಗು ತಣ್ಣಗಿರುತ್ತದೆ.

ತಾನೇ ಕಥೆಯಾಗಹೊರಟ ಬದುಕಿಗೆ ಕಥೆ ಬರೆಯುವ ಹುಚ್ಚು... ಇನ್ನೊಬ್ಬರ ಕಥೆಯಾಳಕ್ಕಿಳಿಯುವ ಹುಚ್ಚು. ಹಾಗೆ ನೋಡಿದರೆ ಬದುಕೇ ದೊಡ್ಡ ಕ್ಯಾನ್ವಾಸು... ಇದರಲ್ಲಿ ಬ್ಲಾಗ್ ಪ್ರಪಂಚ ಬಿಡಿಸಿದ ಚಿತ್ರಗಳು ಹಲವು, ನೀಡಿದ ನೋಟಗಳು ನೂರು, ಪರಿಚಯವಾದ ಸಹಪಯಣಿಗರು ಹಲವರು. ಕಲ್ಪನೆಯ ಲೋಕದಲ್ಲಿ ಗರಿಬಿಚ್ಚಿ ಹಾರುವಾಗ ಹಕ್ಕಿ, ಕನಸು, ಚಂದ್ರ, ಬೇಸರ, ಮೆಸೇಜು, ನೆನಪು, ಕುಡುಕ, ಕರಿಪರದೆ, ಚಿನ್ನು, ಮೀನು ಇತ್ಯಾದಿ ಜೀವತಾಳಿದ್ದವು.. ಅಲ್ಲೊಂದು ಇಲ್ಲೊಂದು ಹನಿಗಳು, ಹರಟೆಗಳು ಹುಟ್ಟಿಕೊಂಡಿದ್ದವು.

ರಶೀದ್ ಅಂಕಲ್-ರ ಟ್ರೇಡ್-ಮಾರ್ಕ್ ಪದ್ಯಚಿತ್ರಗಳು, ಜೋಗಿಯವರ ಅದ್ಭುತ ಕಥೆಗಳು, ಮಯ್ಯರ(ಭಾಗವತ್ರ) ಕುಂದಾಪ್ರ ಕನ್ನಡ ಕ್ಲಾಸು, ಸಿಂಧುವಿನ ಭಾವಯಾನದ ಬರಹಗಳು, ಹತ್ವಾರರ ಮಾಯಾಜಗತ್ತು, ತುಳಸೀವನ, ಕುಂಟಿನಿಯವರ ನಾಲ್ಕೇ ನಾಲ್ಕು ಸಾಲುಗಳು, ಸತೀಶರ ಎನ್ನಾರೈ ಕನ್ನಡಿಗನ ಮನದಾಳದ ಹಲುಬುಗಳು, ಈಗಷ್ಟೆ ಮತ್ತೆ ಚಿಗುರಿಕೊಂಡ ಇಸ್ಮಾಯಿಲ್, ನಾಡಿಗ್ ಮತ್ತು ಪಿಚ್ಚರ್ ಬ್ಲಾಗ್ಸ್ ಮತ್ತು ಹಲವಾರು ಬ್ಲಾಗರ್ಸ್ ಬರೆಯುವ ನೂರಾರು ಭರವಸೆ ಮೂಡಿಸುವ ಬರಹಗಳು - ಎಲ್ಲಾ ಇಷ್ಟಪಟ್ಟು ಓದುತ್ತಿದ್ದೆ, ಎಲ್ಲಾದರಿಂದಲೂ ಸ್ವಲ್ಪ ಸಮಯ ನಾನು ದೂರ.

ಮತ್ತೆ ಸಮಯ ಸಿಕ್ಕಾಗ, ಕನಸು ಕರೆದಾಗ, ಕಲ್ಪನೆ ಪದಗಳಲ್ಲಿ ಗೂಡುಕಟ್ಟಿಕೊಳ್ಳುತ್ತ ಕಾಯುವಾಗ, ಇಲ್ಲಿ ಬರುವೆ, ಮನಸಿನ ಮಾತುಗಳನ್ನು ಹಂಚಿಕೊಳ್ಳಲು. ಅಲ್ಲೀತನಕ ನನ್ನ ಕೊರೆತಪುರಾಣದಿಂದ ಮುಕ್ತಿ ಸಿಕ್ಕಿತೆಂದು, ಒಂದು ಬ್ಲಾಗು ಓದುವ ಕಷ್ಟ ಕಡಿಮೆಯಾಯಿತೆಂದು ಖುಷಿ ಪಡಿ :) ಆಮೇಲೆ ಇದ್ದೇ ಇದೆ!!!