Showing posts with label ಹನಿ. Show all posts
Showing posts with label ಹನಿ. Show all posts

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Saturday, June 30, 2018

ಚಹಾ ಕಾಫಿ ಮತ್ತು ಪರಮಾತ್ಮ

ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ
ಕುಡಿದು ಕುಡಿದು ವಾಡಿಕೆ
ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ
ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು
ಬೆರಗಾಗುತ್ತಿದ್ದೆ, ಆಹಾ ಏನು ರುಚೀ...
ಅದೇನೋ ಮ್ಯಾಜಿಕ್, 

ಮಾಡುವ ಗುಟ್ಟು ಮಾತ್ರ ಕೈಗೆಟುಕದು
ಆಮೇಲೊಂದು ದಿನ
ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ...
ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ
ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ
ಮೇಲಿನ ಮಾಳಿಗೆಗೆ ಕಾಫಿಫುಡಿ ಸುರಿದು
ಕುದಿನೀರುಹಾಕಿ ಕೆಳಮಾಳಿಗೆಯಿಂದ ಡಿಕಾಕ್ಷನ್ ಇಳಿಸಿ
ಹಾಲುಸಕ್ಕರೆ ಬೆರೆಸಿ ಕೊಟ್ಟ ಕಾಫಿ
ಕುಡಿದಾಗಲೇ ಗೊತ್ತಾಗಿದ್ದು,
ಇದೇ ನಿಜವಾದ ಕಾಫಿ ಅಂತ...
ಅದನ್ನೂ ಮಾಡಲು ಕಲಿತು
ಬೇರೆಬೇರೆ ಪುಡಿಯಲ್ಲಿ ಪ್ರಯೋಗ ಮಾಡಿ
ವಿಧವಿಧದ ಫಿಲ್ಟರುಗಳು ಹಾಕಿ
ರುಚಿರುಚಿಯಾಗಿ ಕಪ್ ಗಟ್ಟಲೆ ಮಾಡಿ ಕುಡಿಕುಡಿದು
ಎಲ್ಲಾ ನಡೆಯುತ್ತಿರುವಾಗಲೇ
ಹೆತ್ತೂರು ಬಾ ಅನ್ನುತ್ತದೆ
ಅಲ್ಲಿ ಸ್ವಾಗತಿಸುತ್ತದೆ ಅದೇ ಅಮ್ಮ ಮಾಡುವ ಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ...
ಇತ್ತೀಚೆಗೆ ನನಗೊಂದು ಸಂಶಯ
ನಾನು ಬೆಂಗಳೂರಿಗೆ ಬಂದು
ಬಾಯಿರುಚಿಗೆ ಸೋತು ಸಂಪ್ರದಾಯ ಮರೆತೆನೇ?
ನನ್ನ ಮೇಲೆ ಫಿಲ್ಟರ್ ಕಾಫಿ ಹೇರಿಕೆಯಾಯಿತೇ?
ಯಾವ ಕಾಫಿ ನಿಜವಾದ ಕಾಫಿ,
ಅಮ್ಮ ಕಲಿಸಿದ್ದೇ ಅಲ್ಲ ಬೆಂಗಳೂರು ಹುಚ್ಚುಹಿಡಿಸಿದ್ದೇ?
ರುಚಿ ಕಮ್ಮಿಯಿದ್ದರೂ ಹುಟ್ಟು ಸಂಪ್ರದಾಯ ಉಳಿಸಲೇ
ಅಥವಾ ಇದು ಬೆಂಗಳೂರು -

ಇಲ್ಲಿ ನಾನು ಬೆಂಗಳೂರಿಗಳಾಗಿರುತ್ತೇನೆಂದುಕೊಳ್ಳಲೇ?
**************
ಪರಮಾತ್ಮ

ನೀವೂ ಬಸಿದುಕೊಳ್ಳುತ್ತೀರಿ
ನಾನೂ ಬಸಿದುಕೊಳ್ಳುತ್ತೇನೆ
ಇಷ್ಟೇ ನನ್ನ-ನಿಮ್ಮ ಹೋಲಿಕೆ
ಉಳಿದಿದ್ದು ಪಕ್ವವಾಗುವಿಕೆಯ ಕಥೆ
ನೀವು ಬೆಂಕಿಯಲ್ಲಿ ಕಾಯುವವರು
ನಾನು ಕಾಯುವುದು ಕಾಲಕ್ಕೆ
ನಿಮಗೋಸ್ಕರ ಕಷ್ಟ ಪಟ್ಟು ಕಾಯುವವರು
ನನಗಾಗಿ ಕಾಯುತ್ತಾರೆ ಇಷ್ಟಪಟ್ಟು
ಯಾಕಂದರೆ ಕಾಯುವಿಕೆಯೊಂದು ಧ್ಯಾನ
ಕಾದಷ್ಟು ಖುಷಿ ಕೊಡುತ್ತಾನೆ ಪರಮಾತ್ಮ
ನೀವಿಳಿದ ಗಂಟಲೇನೋ ಬೆಚ್ಚಬೆಚ್ಚಗೆ, ನಿಜ
ಆದರೆ ನಾನಿಳಿದಾಗ ಬೆಚ್ಚಗಾಗುವುದು ಆತ್ಮ
ನೀವು 'ಫಿಲ್ಟರ್' ರುಚಿಕೊಟ್ಟು ಸೊಕ್ಕಿಸಿದ
ನಾಲಿಗೆಯ ಫಿಲ್ಟರ್ ನಾ ಕಳಚುತ್ತೇನೆ,
ಹೃದಯದ ಕೀಲಿ ತೆರೆಯುತ್ತೇನೆ
ನೀವು ಸುಖದ, ಸಂತೋಷದ ಸಂಕೇತ,
ನಾನು ದುಃಖದ ಸಂಗಾತಿ, ಕಣ್ಣೀರಿನ ಗೆಳತಿ
ಯಾವಾಗಲೂ ಎಷ್ಟೆಂದು ಎಚ್ಚರಿರುತ್ತಾರೆ ಜನ
ಅವರಿಗೂ ಬೇಕು ಆಗಾಗ ಹೆಜ್ಜೆತಪ್ಪುವ ಸ್ವಾತಂತ್ರ್ಯ
ವಾಸನೆಗೆ ಮರುಳಾಗುವ, ಬೀಳುವ ಅವಕಾಶ
ಕಾವು ಕಳೆದು ಎಲ್ಲ ಮರೆತು
ತಣ್ಣಗೆ ಮಲಗುವ ಪರಮಸುಖ...
ನಾನೆಂದರೆ ಚಹಾ-ಕಾಫಿ-ಹಾಲುಗಳಲ್ಲಿ ಸಿಗದ
ಅತ್ಯಗತ್ಯದ ಜಾರುವ ಅನುಕೂಲ

===
30 June 2017ರಂದು ಅಚಾನಕ್ ಫೇಸ್ಬುಕ್ಕಿನಲ್ಲಿ ಚಹಾಕಾಫಿ ಕವಿತೆಗಳ ಸುರಿಮಳೆಯಾಗಲಾರಂಭಿಸಿತು. ಅವಾಗ ಬರೆದಿದ್ದು.


Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Monday, December 29, 2008

ಹಕ್ಕಿ ಗೂಡು ಮರೆತು ಹಾರಿದಾಗ...

ವಲಸೆ ಹಕ್ಕಿ ಸಮಯ ಬಂದಾಗ ತನ್ನ ಪಾಡಿಗೆ ತಾನು ಹಾರಿ ಹೋಗುತ್ತದೆ... ಆದರೆ ಹಕ್ಕಿಯ ಗೂಡು ಮಾತ್ರ ಮತ್ತೆಂದಾದರೂ ಹಕ್ಕಿ ಮರಳುವುದೆಂಬ ಆಸೆಯಲ್ಲಿ ಕಾಯುತ್ತದೆ...
--------
ಗೂಡು ನಿರ್ಜೀವ. ಅದಕ್ಕೆ ಹಾರಲಾಗದು.
--------
ಹಾರಲಾಗದ್ದೆಲ್ಲಾ ನಿರ್ಜೀವವಲ್ಲ... ಹಕ್ಕಿಯೇ ಶ್ರದ್ಧೆಯಿಂದ ಕಟ್ಟಿದ ಗೂಡದು, ಬೇಕಾದಾಗ ಬೆಚ್ಚನೆಯ ಮನೆಯಾಗಿತ್ತು... ಹಕ್ಕಿಗೆ ಎಷ್ಟು ಗೂಡೋ? ಆದರೆ ಗೂಡಿಗೆ ಅದೊಂದೇ ಹಕ್ಕಿ...!
--------
ಹಕ್ಕಿಯೇ ಕಟ್ಟಿದ್ದು ಗೂಡನ್ನ!
--------
ಹೌದು, ಹಕ್ಕಿಯೇ ಕಟ್ಟಿದ್ದು ಗೂಡನ್ನ! ಮತ್ತೆ ಬರೋದಿಲ್ಲ ಅಂತ ಗೊತ್ತಿದ್ಮೇಲೆ ಕಟ್ಬೇಕು ಯಾಕೆ?
--------
ಹಕ್ಕಿಗೆ ಬಯಲಲ್ಲಿ ಮಲಗಲಾಗದು! ಮನೆ ಬೇಕು, ಅದರ ಶ್ರಮ, ಅದರ ಆಸಕ್ತಿ, ಗೂಡು ಕಟ್ಟಿತು.
--------
ಬಯಲಲ್ಲಿ ಮಲಗಲಾಗದಿದ್ದ ಮೇಲೂ ಬಯಲಿನ ಮೋಹ ಹಕ್ಕಿಯನ್ನು ಬಿಡಲಿಲ್ಲ... ಈಗೇನೋ ಇರುವುದೆಲ್ಲವ ಬಿಟ್ಟು ಹಾರಿಹೋಗಿದೆ ಹಕ್ಕಿ, ಎಷ್ಟಂದರೂ ವಲಸೆ ಹಕ್ಕಿ, ಮರಳಿ ಬಂದೀತು ಒಂದು ದಿನ, ಆಗ ಗೂಡಿರದು, ಮತ್ತೆ ಹೊಸ ಗೂಡು ಕಟ್ಟುವ ಸಂಭ್ರಮದ ಹಕ್ಕಿಗೆ ಗೂಡಿನ ನೆನಪೂ ಇರದು!
----------
ಅದು ಜೀವನ ಚಕ್ರ...
----------

Friday, December 12, 2008

......


ಮೊಗತುಂಬಿದ ಗತ್ತು ಕರಗಿಸಿ
ನಗುವಿನ ಮುಖವಾಡ ಸರಿಸುತ್ತ
ಖಾಲಿಖಾಲಿಯ ಹೊತ್ತುಬರುವ
ನೀಲಿನೀಲಿಯ ಈ ಹೊತ್ತು
ನೀ ನನ್ನೊಡನಿರಬೇಕಿತ್ತು...

ನಾನಲ್ಲದ ನಾನು
ನನ್ನಿಂದ ಹೊರಬಂದು
ನಾನು ನಾನಾಗುವ ಹೊತ್ತು
ನೀ ನನ್ನೊಡನಿರಬೇಕಿತ್ತು...

ಮನತುಂಬಿದ ಸೊನ್ನೆಗೆ ಅರಿವಿದೆ
ಕಣ್ಣಂಚಲರಳಿದ ಹನಿಗೆ ಅನಿಸಿದೆ
ಸೋಗಲಾಡಿ ನಗುವಿಗೂ ಬೇಕಿದೆ

ನೀನಿದ್ದರೆ ಚೆನ್ನಾಗಿತ್ತು...
ನೀನಿರಬೇಕಿತ್ತು...

ನೀ ನನ್ನೊಡನಿರಬೇಕಿತ್ತು...

Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

Saturday, February 16, 2008

ಎರಡು ಹನಿಗಳು...

*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ

ಕೊನೆಯದಾಗಿ ಕೇಳಿದ್ದು
ನಿನ್ನನ್ನು...

ಕೇಳದೆ ಇದ್ದಿದ್ದು
ನಿನ್ನನ್ನು...

***************************

ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ

ಕೋಮಾದೊಡನೆ
ಮುಂದೆ ಹೋಗಲೇ ಬೇಕು

ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************

Saturday, January 19, 2008

ಬೇಸರವಾದಾಗ..!

ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!!

ಬಣ್ಣ ಹಚ್ಚುವವರು...

ಚಿತ್ರ ಯಾರದಾದರೇನು,
ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ...
ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ.
ನಮ್ಮದೇ ಚಿತ್ರ ಕೂಡ.
ಇವೆಲ್ಲ ಆಟ ನಡೆಯುವುದು
ನಮಗೆ ಬೇಕಾದ ಬಣ್ಣ
ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!!


ಯಾಕೆ?

ಹೂಗಿಡಕ್ಕೆ ನೀರು ಹೊಯ್ದು,
ಗೊಬ್ಬರ ಹಾಕಿ,
ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ
ಪ್ರೀತಿಯಿಂದ ಬೆಳೆಸುವುದು
ಯಾಕೆ?
ಕೊನೆಗೊಂದು ದಿನ ಹೂಬಿಟ್ಟಾಗ
ಕೊಯ್ದು ಕೊಲ್ಲಲಿಕ್ಕೆಯೇ?


ಬದುಕು ಅಡಗಿರುವುದೇ
ಅಡಗಿರುವುದನ್ನು ಹುಡುಕುವುದರಲ್ಲಿ...


ಅಡಗಿರುವುದನ್ನು ಹುಡುಕುವುದೇ
ಒಂದು ದೊಡ್ಡ ಸಂಭ್ರಮ...
ಆದರೆ,
ಅಡಗಿರುವುದು ಎದುರಿಗೆ ತೆರೆದು ನಿಂತಾಗ
ಇನ್ಯಾವುದೋ ಅಡಗಿರುವುದರ ಕಡೆಗೆ
ಸೆಳೆಯುತ್ತದೆ ಮನ.

ನೋವು

ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು.
ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು.
ನನಗೆ ಮಾತ್ರ
ಸಿಹಿ ಬೇಕಾಗಿಲ್ಲ
ಬೆಳೆಯೋದೂ ಬೇಕಾಗಿಲ್ಲ
ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ..!! :-(

Tuesday, December 11, 2007

ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇ
ಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿ
ಕಣ್ಣಲ್ಲಿ ಕಣ್ಣಿಟ್ಟು
ನೋಡಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದು
ಅವಳಲ್ಲ...

ಸತ್ತ ಶಾಕುಂತಲೆ
ಮತ್ತು
ಶೂನ್ಯ

Monday, July 16, 2007

ಆರೋ ಬರೆದ ಚಿತ್ರಕ್ಕಾಗಿ...

ಆರೋ ಬರೆದ ಚಿತ್ರಕ್ಕೆ
ಬಣ್ಣ ತುಂಬುವ ಸಂಭ್ರಮದಲ್ಲಿ
ಎದೆಯೊಳಗಿನ ಕನಸಿನ ಬಣ್ಣ
ಖಾಲಿಯಾಗಿದ್ದು ಯಾವಾಗಲೋ
ಗೆರೆಗಳು ಮಾಸಿದ್ದು ಯಾವಾಗಲೋ

ಕನಸು ಬರಿದಾಗಿದ್ದು ಯಾವಾಗಲೋ

ತಿಳಿಯಲೇ ಇಲ್ಲ...

Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

Monday, January 22, 2007

Khud Kahaani Ban Jaathe Hain..

Kahaani likhte hain hum..
Kahaani bechte bhi hain..
Kahaani se kahaani ko nikaalke
Nayi kahaani banaa lete hain..
Lekin Maan Lijiye..
Hum sirf Kahaani bananevale hi nahin..
Khud Kahaani ban bhi jaathe hain..!!!

Tuesday, January 16, 2007

ಮನಸು ಏಕಾಂಗಿಯಾದಾಗ...

ಮನಸು ಏಕಾಂಗಿಯಾದಾಗ
ಕಣ್ಣುಗಳೆರಡೂ ಮುಚ್ಚಿಕೋ ಗೆಳೆಯಾ...
ನಿನ್ನ ಮನದ ಬಲು ಸನಿಹವಿದ್ದು,
ನಿನಗೆ ಒಳಿತಾಗಲೆ೦ದು ಬಯಸುವ
ಈ ಬೆಚ್ಚನೆಯ ಅನುಭೂತಿಯ
ಅನುಭವ ನಿನಗಾದರೆ
ಅದಕ್ಕಿಂತ ಬೇರೇನು ಬೇಕು?
ಬದುಕು ಮೊಗೆದು ಕೊಟ್ಟಿದ್ದು
ನೀನು-ನಾನು ಪಡಕೊಂಡಿದ್ದು
ಎಲ್ಲವೂ ಸುಂದರ ಅನುಭೂತಿ...
ಉಳಿಯುವುದೂ ಅನುಭೂತಿ.

Friday, January 12, 2007

ಇ೦ದು...

ಅದ್ಯಾಕೋ
ನೆನಪಿನ ಬುಟ್ಟಿ
ಕೆದಕುತ್ತಾ ಕುಳಿತಿದ್ದೆ...
ಅಲ್ಲೊ೦ದು ನೋವಿನ ಕ್ಷಣವಿತ್ತು
ಅದು
ಸಿಹಿಯಾಗಿ ಮಿಡಿದಿತ್ತು
ಹಾಡಾಗಿ ಹರಿದಿತ್ತು
ಚಿತ್ತಾರ ಬರೆದಿತ್ತು
ಹೂವಾಗಿ ಅರಳಿತ್ತು...

ಕನಸು...

ಗೊತ್ತಿದ್ದವರು
ಹೇಳುತ್ತಾರೆ,
ಕನಸಿಗೆ ಬಣ್ಣವಿಲ್ಲವ೦ತೆ...
ಆದರೆ...
ಬಣ್ಣವಿಲ್ಲದ ಕನಸು
ಬದುಕಿಗೆ ಬಣ್ಣ ತು೦ಬುತ್ತದಲ್ಲ,
ಅದು ಹೇಗೆ?