Wednesday, September 24, 2008

ಪರಿಚಯವಿದ್ದವ್ರು ಎದುರು ಸಿಕ್ರೆ...

ಆದಿನ ಬೆಳಿಗ್ಗೆ ಸುಶ್ರುತನ ಮೆಸೇಜು, ''ಗುಲಾಬಿ ಟಾಕೀಸು, ಪಿವಿಆರ್-ನಲ್ಲಿ, ಬರ್ತೀಯಾದ್ರೆ ಕನ್ಫರ್ಮ್ ಮಾಡು, ಟಿಕೆಟ್ ಬುಕ್ ಮಾಡ್ತಿದೀನಿ". ಕನ್ನಡ ಸಿನಿಮಾ ನೋಡಿ ತುಂಬಾ ದಿನವಾಗಿತ್ತು. ಜತೆಗೆ ನೆಚ್ಚಿನ ಲೇಖಕಿ ವೈದೇಹಿಯ ಕಥೆ ಆಧರಿತ ಚಿತ್ರ, ಕಾಸರವಳ್ಳಿ ಆಕರ್ಷಣೆ ಬೇರೆ. ಸರಿಯೆಂದೆ. ಹಾಗೆ ಆ ಸಂಜೆ ಗುಲಾಬಿ ಟಾಕೀಸು ನೋಡುವುದೆಂದು ನಿರ್ಧಾರವಾಯಿತು. ಬೆಂಗಳೂರಿನ ಟ್ರಾಫಿಕ್ಕಿನಲ್ಲೂ ಸಮಯಕ್ಕೆ ಸರಿಯಾಗಿ ಥಿಯೇಟರಿನ ಎದುರಿಗೆ ತಲುಪಿದೆವು. ನಮ್ಮ ಗುಂಪಿನ ಉಳಿದವರೂ ಬರಲಿ ಅಂತ ಥಿಯೇಟರಿನೆದುರು ಕಾಯುತ್ತಿದ್ದೆವು.
ಇದ್ದಕ್ಕಿದ್ದಂತೆ ನನ್ನ ಜತೆಗಿದ್ದ ನಿಧಿ ಖುಷಿಯಿಂದ ಕುಣಿದ, ನನ್ನೆಡೆಗೆ ತಿರುಗಿ ಗುಟ್ಟುಗುಟ್ಟಾಗಿ ಕಿರುಚಿಕೊಂಡ, ''ಅಲ್ಲಿ ನೋಡಿ, ಅವರ ಹೆಸರೇನು, ಕನ್ನಡ ಚಲನಚಿತ್ರರಂಗದ ಮಹಾನ್ ತಾರೆ ಅವ್ರು... ಹೆಸ್ರು ಮರ್ತು ಹೋಯ್ತು...'' ನಾನು ಎಲ್ಲಿ, ಯಾರು ಅಂತ ತಿರುಗಿ ನೋಡಿದರೆ.. ಹೌದು...! ಶೃತಿ... ಸಿನಿಮಾ ನಟಿ ಶೃತಿ...! ತಾಯಿ ಮತ್ತು ತವರಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ, ಪ್ರೇಕ್ಷಕರ - ಅದರಲ್ಲೂ ಹೆಂಗಳೆಯರ ಮನಗೆದ್ದಿದ್ದ ಖ್ಯಾತ ನಟಿ, ಶ್ವೇತವಸ್ತ್ರಧಾರಿಣಿಯಾಗಿ ನಿಂತಿದ್ದರು. ಪಕ್ಕಕ್ಕೆ ಆಕೆಯ ಪತಿ ಮಹೇಂದರ್ ಅವರೂ ಇದ್ದರು. ನಾವು ಅವರನ್ನು ನೋಡಿದರೆ ಅವರೂ ನಮ್ಮನ್ನು ಅಪರಿಚಿತಭಾವದಲ್ಲಿ ನೋಡಿದರು. ನಮಗೆ ಅವರ ಪರಿಚಯವಿತ್ತೇನೋ ನಿಜ. ಆದರೆ ಅವರಿಗೆ ನಮ್ಮ ಪರಿಚಯವಿರಲಿಲ್ಲವಲ್ಲ.. ಹಾಗಾಗಿ ಅವರೆಡೆಗೆ ಪರಿಚಯದ ನಗು ಬೀರಬೇಕೆಂದರೂ ನಗಲಾಗಲಿಲ್ಲ..
ಅಷ್ಟರಲ್ಲಿ ಶೃತಿಯ ಜತೆಗೆ ಗುಲಾಬಿ ಟಾಕೀಸು ನಾಯಕಿ ಉಮಾಶ್ರೀ ಕೂಡ ಕಂಡುಬಂದರು. ಮಾತ್ರವಲ್ಲ, ಇನ್ನಷ್ಟು ಜನ ಸಿಲೆಬ್ರಿಟಿಗಳ ದಂಡೇ ನೆರೆದಿತ್ತು. ಅವರನ್ನೆಲ್ಲ ನೋಡಿಕೊಂಡು, ಈರೀತಿಯ ಹೈಫೈ ಕ್ರೌಡ್ ಜತೆ ಕೂತು ಫಿಲಂ ನೋಡೋ ಭಾಗ್ಯ ನಮ್ಮದಾದದ್ದಕ್ಕೆ ಒಳಗೊಳಗೇ ಖುಷಿಪಡುತ್ತಾ ಥಿಯೇಟರಿನ ಆವರಣದೊಳಗೆ ಹೋದೆವು.
ಥಿಯೇಟರಿನ ಆವರಣದೊಳಗೆ ನಾವೆಲ್ಲ ಥಿಯೇಟರಿನ ಬಾಗಿಲು ತೆರೆಯಲು ಕಾಯುತ್ತಿದ್ದರೆ, ನಮ್ಮಂತೇ ಕಾಯುತ್ತಿದ್ದ ಇನ್ನಷ್ಟು ಸೆಲೆಬ್ರಿಟಿಗಳ ದಂಡು ಕಾಣಿಸಿತು. ಅದರಲ್ಲೊಬ್ಬರು ನೀಲಿ ಅಂಗಿ ಹಾಕಿದವರನ್ನು ಎಲ್ಲೋ ನೋಡಿದ ನೆನಪು ನನಗೆ... ಆದರೆ, ಎಷ್ಟು ನೆನಪಿಸಿಕೊಂಡರೂ ಯಾರೆಂದು ನೆನಪಾಗಲೊಲ್ಲದು. ತುಂಬಾ ಪರಿಚಿತ ಚರ್ಯೆ, ತುಂಬಾ ಆತ್ಮೀಯರೆನ್ನುವ ಅನಿಸಿಕೆ. ಅವರೂ ನನ್ನನ್ನು ಒಂದೆರಡು ಬಾರಿ ನೋಡಿದರು. ಆಗ ಖಂಡಿತವಾಗಿಯೂ ಇವರನ್ನು ನಾನು ಭೇಟಿಯಾಗಿರಬೇಕು ಅಂತ ಅನಿಸಿತು. ಆದರೆ ಯಾವಾಗ, ಹೇಗೆ, ಎಲ್ಲಿ ಭೇಟಿಯಾಗಿದ್ದೇನೆ ಅಂತ ಮಾತ್ರ ಎಷ್ಟು ತಲೆಕೆರೆದುಕೊಂಡರೂ ಗೊತ್ತಾಗಲಿಲ್ಲ.
ಕೊನೆಗೆ, ಪಕ್ಕದಲ್ಲಿ ನಿಂತಿದ್ದ ಸುಶ್ರುತನಿಗೆ ಮೆಲ್ಲಗೆ ಕೇಳಿದೆ, ಅವರು ಯಾರು ಅಂತ. ಸುಶ್ರುತ ಜೋರಾಗಿ ನಕ್ಕು ''ಹೆಚ್ಚೆಸ್ ವೆಂಕಟೇಶ್ ಮೂರ್ತಿ ಕಣೇ, ಗೊತ್ತಿಲ್ವಾ'' ಅಂತ ವಿಚಿತ್ರಪ್ರಾಣಿಯನ್ನು ನೋಡುವಂತೆ ನನ್ನನ್ನು ನೋಡಿದ. ನನಗೆ ಆಕ್ಷಣ ಭೂಮಿ ಬಿರಿದು ನನ್ನನ್ನು ನುಂಗಬಾರದೇ ಅನಿಸಿತು. ಯಾಕೆಂದರೆ, ಹೆಚ್ಚು ಕಡಿಮೆ ಒಂದುವರೆ ವರ್ಷದ ಹಿಂದೆ ನಾನು ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸಮಾಡುತ್ತಿದ್ದಾಗ ಹೆಚ್ಚೆಸ್ವಿ ಮನೆಗೆ ಹೋಗಿ, ಅರ್ಧಗಂಟೆ ಕೂತು ಅವರ ಜತೆ ಯಾವುದೋ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದೆವು. ನನಗವರ ಮುಖ ಮಾತ್ರ ಪರಿಚಿತವೆನ್ನಿಸಿದರೂ ಮರೆತೇ ಹೋಗಿತ್ತು...!
ಅಷ್ಟು ಮಾತ್ರವಲ್ಲ.... ಚಿನ್ನಾರಿಮುತ್ತದ ''ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು'' ನನ್ನ ಫೇವರಿಟ್ ಹಾಡುಗಳಲ್ಲೊಂದು. ಹಾಗೇ ಮುಕ್ತದ ''ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರದೂರಾ... ಎಲ್ಲುಂಟು ಆಚೆ ತೀರಾ...'' "ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿದೆ ಜೀವನ ಪಾಠ..." ಮತ್ತು ಸಹಗಮನ ಧಾರಾವಾಹಿಯ '' ಗಾಳಿಯ ಜತೆಯಲಿ ಯಾರಿಗು ಕಾಣದ ಗಂಧದ ಸಹಗಮನ..." ಇತ್ಯಾದಿಗಳನ್ನು ತುಂಬಾ ಇಷ್ಟ ಪಡುವ ನನಗೆ ಇವೆಲ್ಲದರ ಕರ್ತೃ ಹೆಚ್ಚೆಸ್ವಿ ಅಂತ ಚೆನ್ನಾಗಿ ಗೊತ್ತಿತ್ತು. ಆದರೆ, ಅವರು ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಂದೂ ಹೋಗಿಯೇ ಇರದ ನನಗೆ ಅವರ ಮುಖ ಹೇಗಿದೆಯೆಂದೇ ಮರೆತು ಹೋಗಿತ್ತು! ಅವರೇನಾದರೂ ನನ್ನ ಗುರುತು ಹಿಡಿದರೆ ಏನು ಮಾಡಲಿ ಅಂತ ಭಯವಾಯಿತಾದರೂ ನನ್ನ ಪುಣ್ಯಕ್ಕೆ ಅವರಿಗೂ ನನ್ನ ಪರಿಚಯ ಮರೆತುಹೋಗಿದ್ದ ಕಾರಣ ನಾನು ಬಚಾವಾಗಿದ್ದೆ... :-)
ಅಷ್ಟರಲ್ಲಿ ಥಿಯೇಟರ್ ಬಾಗಿಲು ತೆರೆಯಿತು. ಸರಿ, ಒಳಗೆ ಹೋಗಿ ಸೀಟು ಹಿಡಿದು ಕುಳಿತೆವು. ಅಲ್ಲಿ ಗಿರೀಶ್ ಕಾಸರವಳ್ಳಿ, ವಿಧಾನಪರಿಷತ್ ಮಾಜಿ ಸಭಾಪತಿ ಸುದರ್ಶನ್, ಮಾಜಿ ನೀರಾವರಿ ಸಚಿವ ಹೆಚ್ ಕೆ ಪಾಟೀಲ್, ಜಯಂತಿ, ಅನು ಪ್ರಭಾಕರ್, ಇನ್ನೂ ಹಲವಾರು ಜನ. ಕುಳಿತು ನೋಡುತ್ತಿದ್ದರೆ ಅದೇನೋ ಖುಷಿ... ಪರವಾಗಿಲ್ಲ, ಒಳ್ಳೆ ದಿನವೇ ಸಿನಿಮಾ ನೋಡಲು ಬಂದಿದ್ದೇವೆ ಅಂತ ಏನೋ ಉನ್ನತವಾದಂತಹ ಭಾವ ...

ಅಂತೂ ಇಂತೂ ಫಿಲಂ ಶುರುವಾಯಿತು. ನನಗೆ ಬದಿಯ ಸೀಟು ದೊರೆತಿತ್ತು. ಯಾರ ತಂಟೆಯಿಲ್ಲದೆ ಸಿನಿಮಾ ನೋಡತೊಡಗಿದೆ. ನನ್ನ ಪಕ್ಕದಲ್ಲಿ ಕೂತಿದ್ದವರ ಜತೆ ಕೂಡ ಹೆಚ್ಚು ಮಾತಾಡಲಿಲ್ಲ. ಸುಪ್ಪರ್ ಸಿನಿಮಾ, ಎಲ್ಲಾ ಸಿಲೆಬ್ರಿಟಿಗಳನ್ನು, ಎಲ್ಲವನ್ನೂ ಮರೆಸಿ ತನ್ನೊಳಗೆ ಕರೆದೊಯ್ದಿತು. ಗುಲಾಬಿಯ ಬದುಕನ್ನು ಮತ್ತು ಕಡಲ ಮಕ್ಕಳ ಬವಣೆಯನ್ನು ಪ್ರೇಕ್ಷಕರಾಗಿ ಮಾತ್ರವಲ್ಲ, ಅಲ್ಲೇ ಅಕ್ಕಪಕ್ಕದ ಊರವಳಾಗಿ ತಲ್ಲೀನತೆಯಿಂದ ನೋಡುತ್ತಿದ್ದವಳಿಗೆ ಇಂಟರ್ವಲ್ಲು ಬಂದದ್ದೇ ಗೊತ್ತಾಗಲಿಲ್ಲ..
ಇಂಟರ್ವಲ್ಲು ಬಂತು, ಜತೆಗಿದ್ದವರೆಲ್ಲ ಎದ್ದು ಹೊರಹೋದರೆ ನಾನು ಕಾಲಮೇಲೆ ಕಾಲು ಹಾಕಿ ಅಲ್ಲೇ ಕುಳಿತು ಸಿನಿಮಾ ಮೆಲುಕು ಹಾಕುತ್ತಿದ್ದೆ. ನಾನು ಕುಳಿತ ಸೀಟಿನ ಬದಿಯಲ್ಲಿ ಮೇಲಿನ ಸಾಲುಗಳಿಗೆ ಹತ್ತುವ ದಾರಿಯಿತ್ತು. ಹೀಗೇ ಚೂರು ಹೊತ್ತಾಗಿರಬಹುದು... ಎದುರಿಂದ ಜುಬ್ಬಾ ಹಾಕಿದ ಎತ್ತರದ ಪರಿಚಿತ, ಧೀರಗಂಭೀರ ವ್ಯಕ್ತಿತ್ವವೊಂದು ಮೇಲಿನ ಸಾಲಿನ ಕಡೆಗೆ ಬರುತ್ತಿದೆ...! ಮೆದುಳಿಗೆ ತಕ್ಷಣ ಫ್ಲಾಷ್ ಆಯಿತು... ಜ್ಞಾನಪೀಠ ಪ್ರಶಸ್ತಿಭಾಜನರಾದ ಗಿರೀಶ್ ಕಾರ್ನಾಡ್!
ಹುಹ್ಹ್... ಎಷ್ಟು ದೊಡ್ಡ ವ್ಯಕ್ತಿ ಎದುರಿಂದ ಬರುತ್ತಿದ್ದಾರೆ, ನಾನು ಕಾಲಮೇಲೆ ಕಾಲು ಹಾಕಿ ಕುಳಿತು ನನ್ನದೇ ಲೋಕದಲ್ಲಿದ್ದೇನೆ... ಈ ಯೋಚನೆ ಮೂಡಿದ್ದೇ ತಡ, ಕಾಲು ಥಟ್ಟಂತ ಕೆಳಗಿಳಿಯಿತು, ನನ್ನ ಕಣ್ಣುಗಳು ವಿನಮ್ರಭಾವದೊಡನೆ ಅವರ ಮುಖ ನೋಡಿದವು. ಮುಖದಲ್ಲಿ ನಗುವೂ ಮೂಡಿತು. ಅದೇಕ್ಷಣ ಅವರೂ ನನ್ನನ್ನು ನೋಡಿದರು. ಅವರೇನಾದರೂ ಸ್ವಲ್ಪವೇ ಸ್ವಲ್ಪ ಮುಖ ಸಡಿಲಿಸಿದ್ದರೂ ನಾನು ಅವರಿಗೊಂದು ನಮಸ್ಕಾರ ಕೊಟ್ಟೇ ಬಿಡುತ್ತಿದ್ದೆ. ಆದರೆ ಹಾಗಾಗಲಿಲ್ಲ.ಗಂಭೀರಭಾವದಲ್ಲಿ ನನ್ನನ್ನು ನೋಡುತ್ತಲೇ ಅವರು ಮೇಲೆ ನಡೆದುಹೋದರು. ಹಾಗಂತ ನನಗೇನೂ ಬೇಸರವಾಗಲಿಲ್ಲ. ನನಗೆ ಅವರೊಬ್ಬರೇ ಕಾರ್ನಾಡರು, ಆದರೆ ಅವರು ನನ್ನಂತಹ ಎಷ್ಟು ವ್ಯಕ್ತಿಗಳನ್ನು ನೋಡಿದ್ದಾರೋ ಏನೋ ಎಂಬುದು ಸತ್ಯ ತಾನೇ...?
ಅಷ್ಟರಲ್ಲಿ ಇಂಟರ್ವಲ್ಲು ಮುಗಿ.ಯಿತು. ಸಿನಿಮಾವೂ ಮುಗಿಯಿತು. ವಾಪಸ್ ಮನೆಗೆ ಬರಬೇಕಲ್ಲ. ಗಂಟೆ ರಾತ್ರಿ 9.30. ಮೆಜೆಸ್ಟಿಕ್-ಗೆ ಬಸ್ ಎಲ್ಲಿ ಬರುತ್ತದೆಂದು ನನಗೆ ಗೊತ್ತಿರಲಿಲ್ಲ. ಅಲ್ಲಿ ಪೆಟ್ರೋಲ್ ಬಂಕಿನ ಹುಡುಗನಿಗೆ ಬಸ್ ಎಲ್ಲಿ ಬರುತ್ತದೆಂದು ಕೇಳಿದೆ. ಆತ ಉತ್ತರಿಸುವ ಮುನ್ನವೇ ಆತನ ಪಕ್ಕದಲ್ಲಿ ಗಾಡಿಗೆ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದ ವ್ಯಕ್ತಿ ''ಎದುರುಗಡೆ ರಸ್ತೆಯ ಆಭಾಗದಲ್ಲಿ ಬಸ್ ಸ್ಟಾಪ್ ಇದೆ, 5 ನಿಮಿಷ ನಡೆಯಬೇಕು'' ಎಂದ. ಸರಿಯೆಂದು ನಾನು ಹೊರಟಾಗ, ''ಎರಡೇ ನಿಮಿಷ ನಿಲ್ಲಿ, ನಾನೇ ಡ್ರಾಪ್ ಮಾಡುತ್ತೇನೆ''' ಅಂದ. ಆತನ ಉದ್ದೇಶವೇನಿತ್ತೋ ಏನೋ ದೇವರಾಣೆಗೂ ನನಗೆ ಗೊತ್ತಿಲ್ಲ... ಆದರೆ ನನ್ನ ತಲೆಯಲ್ಲಿ ಕೂಡಲೇ ಅಲಾರಂ ಹೊಡೆಯಲಾರಂಭಿಸಿ ಫೋನು ಕೈಯಲ್ಲಿ ಹಿಡಿದುಕೊಂಡು ಯಾರಿಗೋ ಡಯಲ್ ಮಾಡುತ್ತಾ ಅಲ್ಲಿಂದ ಸತ್ತೆನೋ ಕೆಟ್ಟೆನೋ ಎಂಬಂತೆ ಓಟಕಿತ್ತೆ.
>>>>>>>>>>>>>>>>>
ಮನೆಗೆ ವಾಪಸ್ ಬಂದಮೇಲೆ ಹಾಗೇ ಯೋಚನೆ ಮಾಡುತ್ತಿದ್ದರೆ ಕೆಲ ತಿಂಗಳುಗಳ ಹಳೆಯ ಒಂದು ಘಟನೆ ನೆನಪಾಯಿತು. ಅದೊಂದು ದಿನ ಸಂಜೆಹೊತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಯಾವುದೋ ನಾಟಕವಿತ್ತು. ಆದಿನ ನಾನು ಬಿಡುವಾಗಿದ್ದುದರಿಂದ ನೋಡೋಣವೆಂದು ಹೋಗಿದ್ದೆ. ಟಿಕೆಟ್ ತೆಗೆದುಕೊಂಡೆ. ಒಳಗೆ ಹೋಗುವ ಮುನ್ನ ರಿವಾಜಿನಂತೆ ಬಾಗಿಲಲ್ಲಿ ನಿಂತಿದ್ದ ಟಿಕೆಟ್ ಚೆಕರ್/ ಗೇಟ್ ಕೀಪರ್-ಗೆ ಟಿಕೆಟ್ ತೋರಿಸಿದೆ. ಹಾಗೆಯೇ ಅವನ ಮುಖ ನೋಡಿದರೆ ಏನಾಶ್ಟರ್ಯ! ಆತ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ದೀಪಕ್...! ಅವನ ನಿಜಹೆಸರು ಇವತ್ತಿಗೂ ಗೊತ್ತಿಲ್ಲ ನಂಗೆ. ಆದರೆ, ಈಟಿವಿಯ ಎಲ್ಲಾ ಧಾರಾವಾಹಿಗಳನ್ನೂ ಹೆಚ್ಚುಕಮ್ಮಿ ಬಿಡದೇ ನೋಡುತ್ತಿದ್ದ ನನಗೆ, ಚಂದದ ಅಭಿವ್ಯಕ್ತಿಯಿದ್ದ ದೊಡ್ಡದೊಡ್ಡ ಕಣ್ಣುಗಳ ಆತ ದಿನನಿತ್ಯ ಏನಿಲ್ಲವೆಂದರೂ ಎರಡು ಮೂರು ಧಾರಾವಾಹಿಯಲ್ಲಿ ನೋಡಿನೋಡಿ ತುಂಬಾ ಪರಿಚಿತನಾಗಿದ್ದ.
ಅದೇ ಪರಿಚಯದ ಗುಂಗಿನಲ್ಲಿ ನನಗೇ ಅರಿವಿಲ್ಲದೆ ಮುಗುಳ್ನಕ್ಕು ಹಾಯ್ ಎಂದೆ. ಆತನೂ ಅಷ್ಟೇ ಸಹಜವಾಗಿ ನಕ್ಕು ಹಾಯ್ ಎಂದ. ಆಮೇಲಷ್ಟೇ ನನಗೆ ಅರಿವಾಯಿತು, ನನಗೆ ಮಾತ್ರ ಆತ ಪರಿಚಿತ, ಆತನಿಗೆ ನನ್ನ ಪರಿಚಯವಿಲ್ಲ ಅಂತ. ಆದರೂ ಪರಿಚಯವಿಲ್ಲ ಎನ್ನುವ ಸಂಗತಿ ನಮ್ಮ ನಡುವಿನ ಮುಗುಳುನಗುವಿನ, ಕಿರುಮಾತಿನ ವಿನಿಮಯಕ್ಕೆ ಗೋಡೆಯಾಗಲಿಲ್ಲವೆಂಬುದು ಆಕ್ಷಣದ ಸತ್ಯವಾಗಿತ್ತು.
>>>>>>>>>>>>>>>>>>
ಮೊನ್ನೆ ಮೊನ್ನೆ ಹೀಗೇ ಒಂದು ದಿನ ರಿಲಯನ್ಸ್ ಟೈಮೌಟ್-ಗೆ ಭೇಟಿಯಿತ್ತಿದ್ದೆ. ಅಲ್ಲಿ ಒಂದು ಕಡೆ ಮಳೆಬಿಲ್ಲು ಧಾರಾವಾಹಿಯ ಮಲ್ಲಿಕಾ ಆರಾಮಾಗಿ ಕೂತಿದ್ದಳು. ಈಬಾರಿ ನನಗೇನೂ ಅನಿಸಲಿಲ್ಲ. ಪರಿಚಿತ ವ್ಯಕ್ತಿಯನ್ನು ನೋಡುತ್ತಿರುವೆನೆಂಬ ಭಾವ ಮರೆತು ನನ್ನಪಾಡಿಗೆ ನಾನು ನಡೆದು ಹೋದೆ. ಏನೂ ಆಗಲಿಲ್ಲ. ಗೋಡೆಗಳು ನಮಗೆ ಬೇಕಾದಲ್ಲೆಲ್ಲ, ನಾವು ಕಟ್ಟಿಕೊಂಡಲ್ಲೆಲ್ಲ ಹುಟ್ಟಿಕೊಳ್ಳುತ್ತವೆ ಎಂಬ ಸತ್ಯದ ದರ್ಶನ ನನಗಾಗಿತ್ತು.

ನಮ್ಮ ಪಕ್ಕದವರೇ ಸ್ವಲ್ಪ ಹೆಚ್ಚು ಸಲಿಗೆಯಿಂದಿದ್ದರೆ ಸಂಶಯದಿಂದ ನೋಡುವ ನಾವು, ಯಾರದೋ ಮುಗುಳ್ನಗುವಿಗೆ, ಗಮನಕ್ಕೆ ಹಾತೊರೆಯುತ್ತೇವೆ. ನಮಗೆ ಸುತ್ತಲವರಿಂದ ಗುರುತಿಸುವಿಕೆ ಬೇಕು, ಅದು ತರುವ ಕಿರಿಕಿರಿಗಳು ಬೇಡ. ಅದೇ ಗುರುತಿಸುವಿಕೆಯನ್ನು ಅವರೂ ನಮ್ಮಿಂದ ನಿರೀಕ್ಷಿಸುತ್ತಾರೇನೋ ಎಂದು ನಾವು ಚಿಂತಿಸುವುದಿಲ್ಲ. ಹಾದಿಯ ಕೊನೆಯಲ್ಲೆಲ್ಲೋ ಸಂತೋಷದ ಮನೆ ಕಾದಿದೆ ಅಂತಂದುಕೊಳ್ಳುವ ನಾವು ಹಾದಿಬದಿಯ ಪುಟ್ಟಪುಟ್ಟ ಸಂತೋಷಗಳಿಗೆ ಸ್ಪಂದಿಸದೇ ಸಾಗುತ್ತೇವೆ. ಒಳಿತು-ಕೆಡುಕನ್ನು ವಿವೇಚಿಸುವ ಶಕ್ತಿಯಿಲ್ಲದೇ ಎಲ್ಲವನ್ನೂ, ಎಲ್ಲರನ್ನೂದೂರವಿಡುತ್ತೇವೆ... ಸೇತುವೆಗಳ ಬಗೆಗೆ ಚಿಂತಿಸದೇ ಗೋಡೆಗಳನ್ನು ಕಟ್ಟಿಕೊಳ್ಳುತ್ತ ಸಾಗುತ್ತೇವೆ.
ಇಷ್ಟೆಲ್ಲ ಯೋಚಿಸಿದ ಮೇಲೂ, ಬಹುಷ: ಈ ಕಾಲಕ್ಕೆ ಹೀಗಿರುವುದೇ ಸರಿಯೇನೋ ಎಂಬ ಸಂಶಯ ನನ್ನನ್ನು ಆಗಾಗ ಕಾಡುತ್ತದೆ...!