Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Saturday, June 30, 2018

ಚಹಾ ಕಾಫಿ ಮತ್ತು ಪರಮಾತ್ಮ

ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ
ಕುಡಿದು ಕುಡಿದು ವಾಡಿಕೆ
ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ
ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು
ಬೆರಗಾಗುತ್ತಿದ್ದೆ, ಆಹಾ ಏನು ರುಚೀ...
ಅದೇನೋ ಮ್ಯಾಜಿಕ್, 

ಮಾಡುವ ಗುಟ್ಟು ಮಾತ್ರ ಕೈಗೆಟುಕದು
ಆಮೇಲೊಂದು ದಿನ
ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ...
ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ
ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ
ಮೇಲಿನ ಮಾಳಿಗೆಗೆ ಕಾಫಿಫುಡಿ ಸುರಿದು
ಕುದಿನೀರುಹಾಕಿ ಕೆಳಮಾಳಿಗೆಯಿಂದ ಡಿಕಾಕ್ಷನ್ ಇಳಿಸಿ
ಹಾಲುಸಕ್ಕರೆ ಬೆರೆಸಿ ಕೊಟ್ಟ ಕಾಫಿ
ಕುಡಿದಾಗಲೇ ಗೊತ್ತಾಗಿದ್ದು,
ಇದೇ ನಿಜವಾದ ಕಾಫಿ ಅಂತ...
ಅದನ್ನೂ ಮಾಡಲು ಕಲಿತು
ಬೇರೆಬೇರೆ ಪುಡಿಯಲ್ಲಿ ಪ್ರಯೋಗ ಮಾಡಿ
ವಿಧವಿಧದ ಫಿಲ್ಟರುಗಳು ಹಾಕಿ
ರುಚಿರುಚಿಯಾಗಿ ಕಪ್ ಗಟ್ಟಲೆ ಮಾಡಿ ಕುಡಿಕುಡಿದು
ಎಲ್ಲಾ ನಡೆಯುತ್ತಿರುವಾಗಲೇ
ಹೆತ್ತೂರು ಬಾ ಅನ್ನುತ್ತದೆ
ಅಲ್ಲಿ ಸ್ವಾಗತಿಸುತ್ತದೆ ಅದೇ ಅಮ್ಮ ಮಾಡುವ ಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ...
ಇತ್ತೀಚೆಗೆ ನನಗೊಂದು ಸಂಶಯ
ನಾನು ಬೆಂಗಳೂರಿಗೆ ಬಂದು
ಬಾಯಿರುಚಿಗೆ ಸೋತು ಸಂಪ್ರದಾಯ ಮರೆತೆನೇ?
ನನ್ನ ಮೇಲೆ ಫಿಲ್ಟರ್ ಕಾಫಿ ಹೇರಿಕೆಯಾಯಿತೇ?
ಯಾವ ಕಾಫಿ ನಿಜವಾದ ಕಾಫಿ,
ಅಮ್ಮ ಕಲಿಸಿದ್ದೇ ಅಲ್ಲ ಬೆಂಗಳೂರು ಹುಚ್ಚುಹಿಡಿಸಿದ್ದೇ?
ರುಚಿ ಕಮ್ಮಿಯಿದ್ದರೂ ಹುಟ್ಟು ಸಂಪ್ರದಾಯ ಉಳಿಸಲೇ
ಅಥವಾ ಇದು ಬೆಂಗಳೂರು -

ಇಲ್ಲಿ ನಾನು ಬೆಂಗಳೂರಿಗಳಾಗಿರುತ್ತೇನೆಂದುಕೊಳ್ಳಲೇ?
**************
ಪರಮಾತ್ಮ

ನೀವೂ ಬಸಿದುಕೊಳ್ಳುತ್ತೀರಿ
ನಾನೂ ಬಸಿದುಕೊಳ್ಳುತ್ತೇನೆ
ಇಷ್ಟೇ ನನ್ನ-ನಿಮ್ಮ ಹೋಲಿಕೆ
ಉಳಿದಿದ್ದು ಪಕ್ವವಾಗುವಿಕೆಯ ಕಥೆ
ನೀವು ಬೆಂಕಿಯಲ್ಲಿ ಕಾಯುವವರು
ನಾನು ಕಾಯುವುದು ಕಾಲಕ್ಕೆ
ನಿಮಗೋಸ್ಕರ ಕಷ್ಟ ಪಟ್ಟು ಕಾಯುವವರು
ನನಗಾಗಿ ಕಾಯುತ್ತಾರೆ ಇಷ್ಟಪಟ್ಟು
ಯಾಕಂದರೆ ಕಾಯುವಿಕೆಯೊಂದು ಧ್ಯಾನ
ಕಾದಷ್ಟು ಖುಷಿ ಕೊಡುತ್ತಾನೆ ಪರಮಾತ್ಮ
ನೀವಿಳಿದ ಗಂಟಲೇನೋ ಬೆಚ್ಚಬೆಚ್ಚಗೆ, ನಿಜ
ಆದರೆ ನಾನಿಳಿದಾಗ ಬೆಚ್ಚಗಾಗುವುದು ಆತ್ಮ
ನೀವು 'ಫಿಲ್ಟರ್' ರುಚಿಕೊಟ್ಟು ಸೊಕ್ಕಿಸಿದ
ನಾಲಿಗೆಯ ಫಿಲ್ಟರ್ ನಾ ಕಳಚುತ್ತೇನೆ,
ಹೃದಯದ ಕೀಲಿ ತೆರೆಯುತ್ತೇನೆ
ನೀವು ಸುಖದ, ಸಂತೋಷದ ಸಂಕೇತ,
ನಾನು ದುಃಖದ ಸಂಗಾತಿ, ಕಣ್ಣೀರಿನ ಗೆಳತಿ
ಯಾವಾಗಲೂ ಎಷ್ಟೆಂದು ಎಚ್ಚರಿರುತ್ತಾರೆ ಜನ
ಅವರಿಗೂ ಬೇಕು ಆಗಾಗ ಹೆಜ್ಜೆತಪ್ಪುವ ಸ್ವಾತಂತ್ರ್ಯ
ವಾಸನೆಗೆ ಮರುಳಾಗುವ, ಬೀಳುವ ಅವಕಾಶ
ಕಾವು ಕಳೆದು ಎಲ್ಲ ಮರೆತು
ತಣ್ಣಗೆ ಮಲಗುವ ಪರಮಸುಖ...
ನಾನೆಂದರೆ ಚಹಾ-ಕಾಫಿ-ಹಾಲುಗಳಲ್ಲಿ ಸಿಗದ
ಅತ್ಯಗತ್ಯದ ಜಾರುವ ಅನುಕೂಲ

===
30 June 2017ರಂದು ಅಚಾನಕ್ ಫೇಸ್ಬುಕ್ಕಿನಲ್ಲಿ ಚಹಾಕಾಫಿ ಕವಿತೆಗಳ ಸುರಿಮಳೆಯಾಗಲಾರಂಭಿಸಿತು. ಅವಾಗ ಬರೆದಿದ್ದು.