Sunday, May 27, 2007

ಅವರವರ ಭಾವಕ್ಕೆ...?

ದಿನಾ ಬೆಳಿಗ್ಗೆ ಈ ಹೆಗ್ಗಣ ನನ್ನ ಕಣ್ಣಿಗೆ ಬೀಳುತ್ತದೆ.

ತನ್ನ ಬಿಲದಿಂದ ಮೆಲ್ಲ ಹೊರಗಿಣುಕಿ ರಸ್ತೆಯುದ್ದಕ್ಕೂ ನೋಡುತ್ತದೆ.

ಬೇಗನೆದ್ದು ಕೆಲಸಕ್ಕೆ ಹೋಗುವವರು, ಪೇಪರ್ ಹಾಕುವ ಹುಡುಗರು, ಕೊಳವೆ ಬಾವಿಯಿಂದ ನೀರು ಹಿಡಿಯಲು ಓಡಾಡುವವರು ಬಿಟ್ಟರೆ ಬೇರ್ಯಾರೂ ಇರುವುದಿಲ್ಲ.

ಮತ್ತು ಇವರೆಲ್ಲ ಹೆಗ್ಗಣ ದಿನಾ ನೋಡುವವರೇ. ಅವರಿದ್ದರೆ ಹೆಗ್ಗಣ ಅಷ್ಟು ಕೇರ್ ಮಾಡುವುದಿಲ್ಲ. ಅಪರಿಚಿತರ್ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ತನ್ನ ಬಿಲದಾಚೆಗೆ ಕಾಲಿಡುತ್ತದೆ.

ನಂತರ ತನ್ನದೇ ರಾಜ್ಯವಿದು ಎನ್ನುವಂತೆ ಅತ್ತಿತ್ತ ಓಡಾಡುತ್ತದೆ.

ನೂರು ಫೀಟ್ ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಬದಿಯಲ್ಲಿ ತನಗೆ ಬೇಕಾದುದು ಆರಿಸಿಕೊಳ್ಳುತ್ತದೆ. ಮತ್ತೆ ಭಕ್ತಿಯಿಂದ, ಇದು ತನ್ನ ದಿನ ನಿತ್ಯದ ಕೆಲಸವೋ ಎಂಬಂತೆ ತಿನ್ನುತ್ತದೆ.

ಆ ತಿನ್ನುವ ಕೆಲಸದಲ್ಲಿ ನನಗೆ ಹಸಿವು ಕಾಣುವುದೇ ಇಲ್ಲ.

ನನಗೆ ಈ ಹೆಗ್ಗಣ, ಆ ರಸ್ತೆಯ ಶುಚಿತ್ವದ ಜವಾಬ್ದಾರಿ ಹೊತ್ತ ಜಾಡಮಾಲಿಯ ಹಾಗೆ ಕಾಣುತ್ತದೆ.

ಅದೆಂದೂ ಇದೇ ರಸ್ತೆಯ ಬೇರೆ ಹೆಗ್ಗಣಗಳ ಜತೆ ಬೆರೆತುದು ನಾನು ನೋಡಿಯೇ ಇಲ್ಲ.

ಬೇರೆ ಹೆಗ್ಗಣಗಳು ಸಮಯದ ಪರಿವೆಯೇ ಇಲ್ಲದೆ ಎಲ್ಲಂದರಲ್ಲಿ ಸುತ್ತಾಡುತ್ತವೆ. ಈ ಹೆಗ್ಗಣ ಹಾಗಲ್ಲ. ಟೈಮ್ ಟೇಬಲ್ ನಿಯತ್ತಾಗಿ ಕಾಪಾಡಿಕೊಳ್ಳುತ್ತದೆ.

ಬಹಳಷ್ಟು ಸಲ ಬೇರೆ ಬೇರೆ ಹೆಗ್ಗಣಗಳು ರಸ್ತೆಯಲ್ಲಿ ಗಾಡಿಗಳ ಚಕ್ರದಡಿ ಸಿಕ್ಕಿ ಅಪ್ಪಚ್ಚಿಯಾಗಿ, ಆಮೇಲೆ ಕಾಗೆಗಳಿಗೆ ಆಹಾರವಾದುದು ಕಣ್ಣಾರೆ ನೋಡಿದ್ದೇನೆ. ಕಣ್ಣು ಮುಚ್ಚಿಕೊಳ್ಳುತ್ತಲೇ, ಆ ಹೆಣ ಈ ಹೆಗ್ಗಣದ್ದಾಗಿರದಿರಲಿ ಅಂತ ಪ್ರಾರ್ಥಿಸಿದ್ದೇನೆ.

ಮಾರನೇ ದಿನ ಎಂದಿನಂತೆಯೇ ಬಿಲದಿಂದ ಹೊರಗೆ ಬಂದು ಓಡಾಡುವ ಹೆಗ್ಗಣಕ್ಕಾಗಿ ಕಾದು ಕುಳಿತು ಅದನ್ನು ನೋಡಿ ಸಂತಸ ಪಟ್ಟಿದ್ದೇನೆ.

ಅದು ರಸ್ತೆಯಲ್ಲಿ ತಿರುಗಾಡುವ ಹೊತ್ತು ಏನೆಂಬುದು ನನಗೆ ನಿಖರವಾಗಿ ಗೊತ್ತು.
ಅಷ್ಟು ಹೊತ್ತಿನ ನಂತರ ಅದು ಅದರ ಬಿಲದೊಳಗೆಯೇ ಇರುತ್ತದೆಯೆ ಅಥವಾ ಇನ್ನೆಲ್ಲಿಯಾದರೂ ಹೋಗುತ್ತದೆಯೇ ಅನ್ನುವುದು ನನ್ನ ಪಾಲಿಗೆ ರಹಸ್ಯ.

ಹೆಗ್ಗಣಕ್ಕೆ ಎಷ್ಟು ನಾಚಿಕೆ ಅಂದರೆ, ನಾನು ಕ್ಯಾಮರಾ ಹಿಡಿದು ಕಾಯುತ್ತಿದ್ದರೆ ಅದು ಹೇಗೋ ಅದಕ್ಕೆ ಗೊತ್ತಾಗಿಬಿಡುತ್ತದೆ. ಹೊರಗೆ ಬರುವುದೇ ಇಲ್ಲ...
ಅಥವಾ, ಪಬ್ಲಿಸಿಟಿ ಬೇಡ ಎಂಬ ಇರಾದೆಯೋ ಏನೋ? ನನಗೆ ಗೊತ್ತಿಲ್ಲ.

ಆದರೆ ತುಂಬಾ ಜಾಣ ಹೆಗ್ಗಣ, ಶಿಸ್ತಿನ ಹೆಗ್ಗಣ.
ಅದಕ್ಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತು.
ಬೇರೆಯವರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೇಗೆ ಬದುಕಬೇಕೆಂದು ಗೊತ್ತು.
........
ಕೆಲವು ರೀತಿಯ ಮನುಷ್ಯರನ್ನು ಹೆಗ್ಗಣಕ್ಕೆ ಹೋಲಿಸುತ್ತಾರಲ್ಲ?
ಈ ಒಳ್ಳೆ ಹೆಗ್ಗಣ ನೋಡಿದ ಮೇಲೆ ಆ ಹೋಲಿಕೆ ಸುಳ್ಳೆನಿಸುತ್ತಿದೆ.
ಮತ್ತೆ ಎಲ್ಲಾ ಹೆಗ್ಗಣಗಳೂ ಹೀಗೇ ಇರಬಹುದೇನೋ ಅಂತ ಸಂಶಯ ಬರುತ್ತದೆ.

ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು ಎನ್ನುವುದು ಹಲವಾರು ಬಾರಿ ಅನುಭವವಾಗಿದೆ. ಆದರೂ ಈ ಹೆಗ್ಗಣ ಸತ್ಯವೆಂದು ನಂಬಬೇಕು ಅನಿಸುತ್ತಿದೆ.

Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

Saturday, May 12, 2007

ಕಡಲು ಮುನಿದಿದೆ...


ರಾಶಿ ರಾಶಿ ನೊರೆಯ ಚೆಲ್ಲಿ ಸದಾ ನಗುವ ಕಡಲಿದು...
ಇಂದು ಏಕೊ ಅರಿಯೆ ನಾನು, ನನ್ನ ಮೇಲೆ ಮುನಿದಿದೆ...

ಕಪ್ಪೆ ಚಿಪ್ಪು ದಡಕೆ ದೂಡಿ ಸಂಭ್ರಮಿಸುವ ಅಂಬುಧಿ..
ಮೌನದಲ್ಲಿ ಮಿಡುಕುತಿಹುದು, ಯಾಕೊ? ನನಗೆ ತಿಳಿಯದು...

ನೀಲಿ ಬಾನು ಎಲ್ಲೋ ಕಾಣೆ, ಬೆಳಕು ಎಲ್ಲೂ ಕಾಣದು
ಕರಿಯ ಮೋಡ, ಬೂದಿ ಮೋಡ, ದುಗುಡ ತುಂಬಿಕೊಂಡಿದೆ...

ಮುಳುಗು ಹಾಕೊ ಮುನ್ನ ನಿಶೆಗೆ ಸಪ್ತವರ್ಣದುಡುಗೆಯ
ತೊಡಿಸಿ ನಲಿವ ರವಿಗೆ ಇಂದು ಮಂಕು ಕಟ್ಟಿಕೊಂಡಿದೆ...

ಸ್ವರ್ಣ ವರ್ಣ ನೀರ ಮೇಲೆ ಚೆಲ್ಲಿ ಆಟವಾಡುವ
ಇವನು ಇಂದು ಯಾಕೋ ಕಾಣೆ, ಮುದುಡಿ ತಣ್ಣಗಾಗಿಹ...

ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ...

oooooooooooo

ಬತ್ತದಿರುವ ಜಲದ ರಾಶಿ, ಏಕೆ ನಿನಗೆ ಬೇಸರ?
ಮಾತನಾಡು ಎಂದಿನಂತೆ, ಸಹಿಸಲಾರೆ ನೀರವ...

ಮುಗಿಯದಾಳವಿರುವೆ ನೀನು, ನಿನ್ನ ಹರವನಳೆಯಲಾರೆನು
ಕುದಿಯುತಿರುವೆ, ಏಕೆ ಮೌನ? -ಮರ್ಮ ತಿಳಿಯದಾದೆನು

ಮೋಡ ತೊಲಗಬೇಕು, ರವಿಯು ಮತ್ತೆ ನಲಿಯಬೇಕಿದೆ,
ಮೌನ ಮುರಿಯಬೇಕು, ಮತ್ತೆ ನೀನು ಮೊರೆಯಬೇಕಿದೆ...

ಬೆಳ್ಳಿ ನೊರೆಯು ಚೆಲ್ಲಬೇಕು, ನಿನ್ನ ನಗುವು ಬೇಕಿದೆ..
ಕಪ್ಪೆ ಚಿಪ್ಪು ದಡಕೆ ದೂಡಿ ನೀನು ಮೆರೆಯಬೇಕಿದೆ...

oooooooooooooooo

Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...