Tuesday, July 27, 2021

ಕಣ್ಣಿನ ಭಾಷೆಯ ಬಣ್ಣವೆ ಬದಲುಕಣ್ಣಿನ ಭಾಷೆಯ
ಬಣ್ಣವೆ ಬದಲು
ತಣ್ಣನೆ ಕೊಲ್ಲುವ ಪರಕೀಯ

ಸೊಲ್ಲನು ಮರೆತು
ಎಲ್ಲೋ ಕಳೆದಿಹ
ಕಲ್ಲಾಗಿಹೆ ನೀ ಓ ಗೆಳೆಯ

ಮನಸಲಿ ಕಟ್ಟಿದ
ನೀರಿಗೆ ಬೇಕು
ಒಡ್ಡುಗಳಿಲ್ಲದ ಹಾದಿಗಳು

ಮಾತೇ ಮನಗಳ
ಬೆಸೆಯುವ ಬಳ್ಳಿ
ಮೌನದೆ ಬೆಳೆವವು ಗೋಡೆಗಳು

ಗೋಡೆಗಳಳಿಯಲಿ
ಸೇತುವೆ ಬೆಳೆಯಲಿ
ಮುಳುಗಲಿ ಹಗೆತನ ಒಲವಿನಲಿ

ಬೆಳಕಿನ ತಿಳಿವಲಿ
ಕರಗಲಿ ಮಬ್ಬಿದು
ಕಾವಳವಳಿಯಲಿ ನಲಿವಿನಲಿ

ತೆರೆಯಲಿ ಮನಮನೆ
ಕಳೆಯಲಿ ಕೊಳೆಯು
ಹೊಸಬೆಳಗನು ಸ್ವಾಗತಿಸೋಣ

ನಾ ನಿನಗಿರುವೆನು
ನೀ ಬಾ ನನ್ನೆಡೆ
ಹರುಷದ ಸೇತುವೆ ಕಟ್ಟೋಣ

Friday, June 18, 2021

ಮಿಡಿಯಲು ನನ್ಸಲಿ ಹೃದಯವೇ ಇಲ್ಲ

ಕಾಯುವರಿಲ್ಲದೆ ಬಾಡಿದ ಹೆಣಗಳು
ದಿನವಿಡಿ ಧಗಧಗ ಉರಿಯುವ ಚಿತೆಗಳು
ಮನೆಗಳು ಮನಗಳು ಭಣಭಣಭಣಭಣ
ಕಿಟಿಕೆಯ ಆಚೆಗೆ ಗದ್ದಲ ಗದ್ದಲ
ಆಡುವ ಮಾತಿಗೆ ಕಾಣದು ಅಳತೆ
ಕೇಳುವ ಕಿವಿಗಳಿಗಿಲ್ಲಿದೆ ಕೊರತೆ
ಇಂದ ಬವಣೆಯಲಿ ತಳ್ಳಿದ ಮೇಲೆ
ನಾಳೆಯ ಬಸಿರಲಿ ಅಡಗಿಹ ಚಿಂತೆ
ಎದೆಯಿದು ಒರಟು, ಬುದ್ಧಿಯು ಬರಡು
ಕಾಯುವುದಾರಿಗೆ ಈಗಲೆ ಹೊರಡು
ಕತ್ತಲ ದಾರಿ, ಕಹಿ ಸಾಮಾನ್ಯ
ಪಾಡಿನ ಜಾಡಲಿ ಭಾವವು ಶೂನ್ಯ
ಬೆಳಗಿನ ಜಾವದ ಕನಸಿನ ತೆರದಲಿ
ಎಂದೋ ಮರೆತಿಹ ಹಾಡಿನಂದದಲಿ
ಮನವನು ಮೀಟುವ ನಿನ್ನಯ ಒಲವಿಗೆ
ಮಿಡಿಯಲು ನನ್ಸಲಿ ಹೃದಯವೇ ಇಲ್ಲ

Friday, February 28, 2020

ನೀನಿಲ್ಲದ ಹಾದಿ

ನೆನಪಿನ ದಳಗಳ ಬಣ್ಣ ನೀಲಿ. ನೀ ಬಿಟ್ಟ ನಿಟ್ಟುಸಿರಿನ ರಭಸಕ್ಕೆ ಹಾರಿ ಹೋದ ನೆನಪಿನ ಪಕಳೆಗಳಿಗೇನು ಗೊತ್ತು ಅವು ಉಳಿಸಿ ಹೋದ ಕಣ್ಣಂಚಿನ ಹನಿಗಳ ರುಚಿ.
ಕಣ್ಣ ಹನಿಗಳ ರುಚಿಯೇನೋ ಉಪ್ಪು. ನಿನ್ನ ಬಿಸಿ ಮುತ್ತು ತಾಗಿ ಮುಚ್ಚಿಯೇ ಸುಖಿಸಿದ ರೆಪ್ಪೆಗಳಿಗೇನು ಗೊತ್ತು ಅದರಿಂದ ಕಣ್ಣೀರೂ ಸಿಹಿಯಾಯಿತೆಂದು... 
ನೋವೊಂದು ಬೆಚ್ಚಗಿನ ಚಾದರವಿದ್ದಂತೆ. ನಿನ್ನ ಕನಸಿನ ಬಿಸಿ ಅಪ್ಪುಗೆಯೊಳಗೆ ಸಿಕ್ಕಿ ನಲುಗಿದ ಎದೆಯೊಳಗೆ ನೀನುಳಿಸಿ ಹೋದ ನೋವಿಗೇನು ಗೊತ್ತು, ಅದರ ವಾಸನೆ ಹಿತವಾಗಿದೆಯೆಂದು.
******
ನನ್ನ ಜೊತೆ ನೀ ನಡೆದ ಹಾದಿಯ ತಿರುಗಿ ನೋಡುವ ಯೋಚನೆಯೇ ನನ್ನೆದೆ ಬಡಿತದ ಹದ ತಪ್ಪಿಸುತ್ತದೆ... ನೀಲಿ ನೀಲಿಯ ಸಿಹಿಯಾದ ಹಿತವಾದ ನೆನಪುಗಳು ನೋವುಗಳು ಕಣ್ಣೀರುಗಳು ನಮ್ಮನ್ನ ತಡೆಯದಿರೆಂದು ಗೋಗರೆಯುತ್ತವೆ, ಮತ್ತು ಹರಳುಹರಳಾಗಿ ಉಳಿಯುತ್ತವೆ.

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Saturday, June 30, 2018

ಚಹಾ ಕಾಫಿ ಮತ್ತು ಪರಮಾತ್ಮ

ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ
ಕುಡಿದು ಕುಡಿದು ವಾಡಿಕೆ
ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ
ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು
ಬೆರಗಾಗುತ್ತಿದ್ದೆ, ಆಹಾ ಏನು ರುಚೀ...
ಅದೇನೋ ಮ್ಯಾಜಿಕ್, 

ಮಾಡುವ ಗುಟ್ಟು ಮಾತ್ರ ಕೈಗೆಟುಕದು
ಆಮೇಲೊಂದು ದಿನ
ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ...
ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ
ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ
ಮೇಲಿನ ಮಾಳಿಗೆಗೆ ಕಾಫಿಫುಡಿ ಸುರಿದು
ಕುದಿನೀರುಹಾಕಿ ಕೆಳಮಾಳಿಗೆಯಿಂದ ಡಿಕಾಕ್ಷನ್ ಇಳಿಸಿ
ಹಾಲುಸಕ್ಕರೆ ಬೆರೆಸಿ ಕೊಟ್ಟ ಕಾಫಿ
ಕುಡಿದಾಗಲೇ ಗೊತ್ತಾಗಿದ್ದು,
ಇದೇ ನಿಜವಾದ ಕಾಫಿ ಅಂತ...
ಅದನ್ನೂ ಮಾಡಲು ಕಲಿತು
ಬೇರೆಬೇರೆ ಪುಡಿಯಲ್ಲಿ ಪ್ರಯೋಗ ಮಾಡಿ
ವಿಧವಿಧದ ಫಿಲ್ಟರುಗಳು ಹಾಕಿ
ರುಚಿರುಚಿಯಾಗಿ ಕಪ್ ಗಟ್ಟಲೆ ಮಾಡಿ ಕುಡಿಕುಡಿದು
ಎಲ್ಲಾ ನಡೆಯುತ್ತಿರುವಾಗಲೇ
ಹೆತ್ತೂರು ಬಾ ಅನ್ನುತ್ತದೆ
ಅಲ್ಲಿ ಸ್ವಾಗತಿಸುತ್ತದೆ ಅದೇ ಅಮ್ಮ ಮಾಡುವ ಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ...
ಇತ್ತೀಚೆಗೆ ನನಗೊಂದು ಸಂಶಯ
ನಾನು ಬೆಂಗಳೂರಿಗೆ ಬಂದು
ಬಾಯಿರುಚಿಗೆ ಸೋತು ಸಂಪ್ರದಾಯ ಮರೆತೆನೇ?
ನನ್ನ ಮೇಲೆ ಫಿಲ್ಟರ್ ಕಾಫಿ ಹೇರಿಕೆಯಾಯಿತೇ?
ಯಾವ ಕಾಫಿ ನಿಜವಾದ ಕಾಫಿ,
ಅಮ್ಮ ಕಲಿಸಿದ್ದೇ ಅಲ್ಲ ಬೆಂಗಳೂರು ಹುಚ್ಚುಹಿಡಿಸಿದ್ದೇ?
ರುಚಿ ಕಮ್ಮಿಯಿದ್ದರೂ ಹುಟ್ಟು ಸಂಪ್ರದಾಯ ಉಳಿಸಲೇ
ಅಥವಾ ಇದು ಬೆಂಗಳೂರು -

ಇಲ್ಲಿ ನಾನು ಬೆಂಗಳೂರಿಗಳಾಗಿರುತ್ತೇನೆಂದುಕೊಳ್ಳಲೇ?
**************
ಪರಮಾತ್ಮ

ನೀವೂ ಬಸಿದುಕೊಳ್ಳುತ್ತೀರಿ
ನಾನೂ ಬಸಿದುಕೊಳ್ಳುತ್ತೇನೆ
ಇಷ್ಟೇ ನನ್ನ-ನಿಮ್ಮ ಹೋಲಿಕೆ
ಉಳಿದಿದ್ದು ಪಕ್ವವಾಗುವಿಕೆಯ ಕಥೆ
ನೀವು ಬೆಂಕಿಯಲ್ಲಿ ಕಾಯುವವರು
ನಾನು ಕಾಯುವುದು ಕಾಲಕ್ಕೆ
ನಿಮಗೋಸ್ಕರ ಕಷ್ಟ ಪಟ್ಟು ಕಾಯುವವರು
ನನಗಾಗಿ ಕಾಯುತ್ತಾರೆ ಇಷ್ಟಪಟ್ಟು
ಯಾಕಂದರೆ ಕಾಯುವಿಕೆಯೊಂದು ಧ್ಯಾನ
ಕಾದಷ್ಟು ಖುಷಿ ಕೊಡುತ್ತಾನೆ ಪರಮಾತ್ಮ
ನೀವಿಳಿದ ಗಂಟಲೇನೋ ಬೆಚ್ಚಬೆಚ್ಚಗೆ, ನಿಜ
ಆದರೆ ನಾನಿಳಿದಾಗ ಬೆಚ್ಚಗಾಗುವುದು ಆತ್ಮ
ನೀವು 'ಫಿಲ್ಟರ್' ರುಚಿಕೊಟ್ಟು ಸೊಕ್ಕಿಸಿದ
ನಾಲಿಗೆಯ ಫಿಲ್ಟರ್ ನಾ ಕಳಚುತ್ತೇನೆ,
ಹೃದಯದ ಕೀಲಿ ತೆರೆಯುತ್ತೇನೆ
ನೀವು ಸುಖದ, ಸಂತೋಷದ ಸಂಕೇತ,
ನಾನು ದುಃಖದ ಸಂಗಾತಿ, ಕಣ್ಣೀರಿನ ಗೆಳತಿ
ಯಾವಾಗಲೂ ಎಷ್ಟೆಂದು ಎಚ್ಚರಿರುತ್ತಾರೆ ಜನ
ಅವರಿಗೂ ಬೇಕು ಆಗಾಗ ಹೆಜ್ಜೆತಪ್ಪುವ ಸ್ವಾತಂತ್ರ್ಯ
ವಾಸನೆಗೆ ಮರುಳಾಗುವ, ಬೀಳುವ ಅವಕಾಶ
ಕಾವು ಕಳೆದು ಎಲ್ಲ ಮರೆತು
ತಣ್ಣಗೆ ಮಲಗುವ ಪರಮಸುಖ...
ನಾನೆಂದರೆ ಚಹಾ-ಕಾಫಿ-ಹಾಲುಗಳಲ್ಲಿ ಸಿಗದ
ಅತ್ಯಗತ್ಯದ ಜಾರುವ ಅನುಕೂಲ

===
30 June 2017ರಂದು ಅಚಾನಕ್ ಫೇಸ್ಬುಕ್ಕಿನಲ್ಲಿ ಚಹಾಕಾಫಿ ಕವಿತೆಗಳ ಸುರಿಮಳೆಯಾಗಲಾರಂಭಿಸಿತು. ಅವಾಗ ಬರೆದಿದ್ದು.


Friday, October 20, 2017

ಯಾರಿಗೆಷ್ಟು ಬೇಕೋ ಅಷ್ಟು ಬೆಳಕು, ಕತ್ತಲು ದಕ್ಕಲಿ....ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ ಕಾರ್ಯಶೀಲತೆ, ಚಟುವಟಿಕೆಗಳ ಮೂಲಕವೇ ಕನಸುಗಳಿಗೆ ರೆಕ್ಕೆ ಮೂಡಿ ಜೀವತಳೆಯಬೇಕು.. ಹಾಗೇ ಕನಸಿಲ್ಲದ, ಕತ್ತಲೆಯ ನೆಮ್ಮದಿಯಿಂದ ವಂಚಿತವಾದ ಜೀವನವೂ ಒಂದು ಜೀವನವೇ? ಸದಾ ಬೆಳಕು ತುಂಬಿದ ಕೋಣೆಯಲ್ಲಿ ನೆಮ್ಮದಿಯ ನಿದ್ದೆ ಸಾಧ್ಯವೇ?
ಬೆಳಕು-ಕತ್ತಲೆ - ಇವೆರಡರಲ್ಲಿ ಒಂದು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವ 'ತಮಸೋಮಾ ಜ್ಯೋತಿರ್ಗಮಯ' ಎಂಬ ಘೋಷಣೆ, ಹುಲುಮಾನವರು ಅತಿ ಬುದ್ಧಿವಂತಿಕೆಯಿಂದ ಮಾಡಿದ ರಾಜಕಾರಣ—ಅಷ್ಟೇ.
******************
ಕಾರ್ಗತ್ತಲ ಹಾದಿ... ಮನೆ ದೂರ, ಕನಿಕರಿಸಿ ನನ್ನ ಕೈಹಿಡಿದು ನಡೆಸು ಬೆಳಕೇ, ಬಾ ಎಂದು ಕೇಳಿದ ಕವಿಗೆ ಈ ರಾಜಕಾರಣದ ಅರಿವಿದ್ದಿರಲಾರದು. ಇದ್ದಿದ್ದರೆ, ಹಾದಿ ತಪ್ಪಿದಾಗ ಕತ್ತಲ ದಾರಿಗೆ ಬೇಕಾದ ಕೈದೀಪ ಮನದೊಳಗೇ ಇದೆ ಎಂಬುದರ ಅರಿವೂ ಆತನಿಗೆ ಆಗಿರುತ್ತಿತ್ತು. ಎಲ್ಲೋ ಇರುವ ಬೆಳಕಿಗೆ ಹಾತೊರೆಯುವ ಬದಲು ಒಳಗಿನ ಬೆಳಕನ್ನು ಆತ ಕಂಡುಕೊಳ್ಳುತ್ತಿದ್ದನೇನೋ...
******************
ಕೆಲವು ವಿಧದ ಬೆಳಕುಗಳು ಅಪಾಯಕಾರಿಯೂ ಹೌದು... ಮಡಿಲಲ್ಲಿರುವ ನಿಗಿನಿಗಿ ಸುಡುವ ಕೆಂಡ ಬೆಳಕೇನೋ ನಿಜ. ಆದರೆ ಅದಕ್ಕೆ ಹಾಕಬೇಕಿರುವುದು ನೀರು, ಇದ್ದಲು ಅಥವಾ ಸೌದೆಯಲ್ಲ. ಸೌದೆ ಹಾಕಿದಲ್ಲಿ ಅದು ಮಡಿಲು ಸುಡುವುದು ಖಚಿತ. ಸುಡುವ ಸತ್ಯಕ್ಕೆ ನೀರು ಹಾಕುವವರು ಬೆಳಕನ್ನು ನಂದಿಸಿದರು, ಸತ್ಯವನ್ನು ಅಡಗಿಸಿದರು ಎಂಬ ಇನ್ನೊಂದು ರೀತಿಯ ಅಪವಾದಕ್ಕೂ ಒಳಗಾಗಬೇಕಾಗುತ್ತದೆ.
ಕುಶಾಲಿಗೆಂದು ಹಚ್ಚುವ ಬಣ್ಣಬಣ್ಣದ ಬಿರುಸುಮತಾಪುಗಳೂ ಅಷ್ಟೆ. ಬಣ್ಣ ಬರಬೇಕೆಂದು ಅದಕ್ಕೆ ಹಾಕುವ ವಿಧವಿಧದ ಪದಾರ್ಥಗಳಿಂದ ಹಾನಿಕಾರಕವಾಗಿ ಬದಲಾಗುತ್ತವೆ. ತಮಾಷೆ ನೋಡುವ ಭರದಲ್ಲಿ ಮಗು ಹಚ್ಚುವ ಬೆಳಕಿನ ಪುಂಜ ಹಾದಿಯಲ್ಲಿ ಹೋಗುವವರ ಕಣ್ಣು ತೆಗೆದರೂ ತೆಗೆದೀತು, ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದರೂ ಹಚ್ಚೀತು.
******************
ಈ ಬೆಳಕಿನ ಹುಚ್ಚು ಇನ್ನೂ ಹಲವು ಬಗೆ ಅನಾಹುತಗಳಿಗೆ ಕಾರಣವಾಗುತ್ತದೆ. ಅರ್ಧ ಜಗತ್ತಿಗೆ ಕತ್ತಲೆ ಯಾವಾಗಲೂ ಇರುತ್ತದೆ. ಇನ್ನರ್ಧಕ್ಕೆ ಬೆಳಕು. ಆದರೆ ಕತ್ತಲಲ್ಲಿರುವವರೂ ಕೃತಕ ಬೆಳಕು ಸೃಷ್ಟಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ನಿಜ ತಾನೇ. ಬೆಳಕಿನ ಶ್ರೇಷ್ಠತೆ ಬರುವುದು ಇದರಿಂದಲೇ. ಬೆಳಕಿನ ಬೆಲೆ ವ್ಯಾವಹಾರಿಕವಾಗಿ ಜಾಸ್ತಿ. ಬೆಳಕು ಕತ್ತಲೆಯನ್ನು ಮೀರಿ ನಮ್ಮನ್ನು ಮುನ್ನಡೆಸುವ ಸಾಧನ, ಮತ್ತು ಇದರ ಅವಶ್ಯಕತೆ ಎಲ್ಲರಿಗೂ ಇದೆ. ಬೆಳಕಿಲ್ಲದೇ ಬದುಕು, ವ್ಯವಹಾರ ಯಾವುದೂ ಇಲ್ಲ. ಅದಕ್ಕೇ ತಮಸೋಮಾ ಜ್ಯೋತಿರ್ಗಮಯ ಅಂದರು. ತಪ್ಪಲ್ಲ, ಆದರೆ ಅದು ಬೆಳಕಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕ ಕೊಟ್ಟು, ಕತ್ತಲೆ ಕೆಟ್ಟದೆಂಬಂತೆ ತೋರಿಸುತ್ತದೆಯಲ್ಲವೇ? ಅದೇ ಸಮಸ್ಯೆ.
 
******************
ಎಲ್ಲೋ ಇರುವ ಬೆಳಕಿಗೆ ಹಾತೊರೆಯುವುದರಿಂದ ಏನು ತೊಂದರೆ? ಒಂದು ವಸ್ತು ಯಾವುದೋ ರೀತಿಯಲ್ಲಿ ಅಗತ್ಯ ಎನ್ನುವ ಅರಿವು, ಆ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತದೆ. ಮತ್ತು ನಕಲಿ ವ್ಯವಹಾರಗಳಿಗೆ ಎಡೆಮಾಡಿಕೊಡುತ್ತದೆ. ಕಲಬೆರಕೆಗಳು ಹೆಚ್ಚುತ್ತವೆ.
ಬೆಳಕಿನ ವಿಚಾರದಲ್ಲೂ ಅಷ್ಟೇ. ಕತ್ತಲಿಗೂ ಬೆಳಕಿನ ವೇಷ ತೊಡಿಸಿ ಮಾರುವವರು ಹುಟ್ಟಿಕೊಳ್ಳುತ್ತಾರೆ. ಅಂಗೈಯ ಕಿಟಿಕಿಯಲ್ಲಿ ವಿಶ್ವ ನೋಡಬಹುದಾದಷ್ಟು ಬೆಳಕಿರುವ ಈ ಕಾಲಘಟ್ಟದಲ್ಲಿಯೂ ಕಿಟಿಕಿಯಲ್ಲಿ ಕೋಣೆ ತೋರಿಸಿ ಅದನ್ನೇ ವಿಶ್ವವೆಂದು ಮಾರಾಟ ಮಾಡುವವರು ಕಡಿಮೆಯಿಲ್ಲ. ಕತ್ತಲೆಯನ್ನು ಬೆಳಕನ್ನಾಗಿಸಿ, ಬೆಳಕನ್ನು ಕತ್ತಲೆಯಾಗಿಸಿ ಆಟವಾಡುವವರ ಸಂಖ್ಯೆ ಬಲುಜಾಸ್ತಿ. ಅರೆಗತ್ತಲೆಯಲ್ಲಿ ಅಥವಾ ಬಣ್ಣದ ಬೆಳಕಲ್ಲಿ ಏನು ಮಾಡಿದರೂ ಚಂದ—ಹಾಲಿಗೆ ಹುಳಿ ಹಿಂಡಬಹುದು, ಮನಸ್ಸುಗಳನ್ನು ಒಡೆಯಬಹುದು, ವಿಷಬೀಜ ಬಿತ್ತಬಹುದು. ತಮ್ಮೊಳಗಿನ ಬೆಳಕನ್ನು ನಂಬದ, ತಮ್ಮ ತಿಳುವಳಿಕೆಯಲ್ಲಿ ನಂಬಿಕೆಯಿಲ್ಲದ ಜನವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು.
******************
ನಮ್ಮೊಳಗಿನ ತಿಳಿವಿನ ಬೆಳಕು ಎಷ್ಟು ಕಡಿಮೆಯೋ, ಬಾಹ್ಯದಲ್ಲಿ ಕಾಣುವ ಬೆಳಕು ನಮಗೆ ಅಷ್ಟೇ ಭೀಕರವೆನಿಸುತ್ತದೆ. ಬೆಳಕಿನ ಸಹವಾಸವೇ ಬೇಡವೆನಿಸಿ ಬೆಳಕಿಗೊಂದು ನಮಸ್ಕಾರ ಹಾಕಿ ಕತ್ತಲಲ್ಲೇ ಇರುತ್ತೇವೆ ಎಂಬ ಜನಕ್ಕೇನೂ ಕಡಿಮೆಯಿಲ್ಲ. ಬೆಳಕಿನ ಕುರಿತು ವ್ಯಂಗ್ಯವಾಡುವವರಿಗೂ ಕಡಿಮೆಯಿಲ್ಲ.
ಆದರೆ ಇಷ್ಟು ಮಾತ್ರ ನಿಜ. ಕತ್ತಲೆ-ಬೆಳಕು ಎರಡೂ ಜೀವನಕ್ಕೆ ಅವಶ್ಯಕ. ಯಾರೋ ಹೊಗಳಿದರೆಂದು ಬೆಳಕು ಹಿಗ್ಗುವುದಿಲ್ಲ, ಇನ್ಯಾರೋ ತೆಗಳಿದರೆಂದು ಕತ್ತಲೆ ಕುಗ್ಗುವುದಿಲ್ಲ. ಕತ್ತಲೆಯ ಕೆಲಸವೇ ಬೇರೆ. ಬೆಳಕಿನ ಕೆಲಸವೇ ಬೇರೆ. ಕತ್ತಲಿನಲ್ಲಿ ಬೆಳೆಯುವ ಹೂವು ಅರಳಲು ಸೂರ್ಯಕಿರಣಗಳು ತಾಗಲೇಬೇಕು. ಹಗಲಿನ ಬೆಳಕಲ್ಲಿ ಆಹಾರ ಸಂಪಾದಿಸುವ ಗಿಡ-ಮರಗಳು ಇರುಳಾದಾಗ ಬೆಳೆಯುತ್ತವೆ. ಹಗಲಲ್ಲಾದ ಗಾಯಗಳು ಮಾಯಲು ಇರುಳಿನ ಮಡಿಲೇ ಬೇಕು.
******************
ಹಾಗಂತ ಹಗಲು ನಿದ್ರಿಸುವ, ಇರುಳಲ್ಲೇ ತಮ್ಮ ಕೆಲಸ ಕಾರ್ಯಗಳು ಮಾಡುವವರು ಇಲ್ಲವೆಂದಲ್ಲ. ಸಂಜೆ ಮಲ್ಲಿಗೆ ಅರಳಲು ಮುಳುಗುವ ಸೂರ್ಯನ ಬಿಸಿಲೇ ಬೀಳಬೇಕು. ರಾತ್ರಿರಾಣಿ ಅಥವಾ ಬ್ರಹ್ಮಕಮಲ ಅರಳುವುದು ಸಂಪೂರ್ಣ ಕತ್ತಲೆಯಲ್ಲೇ. ಬಾವಲಿಗಳು, ಜಿರಲೆಗಳು, ಸರೀಸೃಪಗಳು ಇರುಳಿಲ್ಲವೆಂದರೆ, ಕತ್ತಲೆಯಿಲ್ಲವೆಂದರೆ ಸ್ವಾಭಾವಿಕವಾಗಿ ಎದ್ದು ಆಚೆಗೆ ಬರಲಾರವು. ರಾತ್ರಿಯ ಬದಲು ಹಗಲು ನಿದ್ರಿಸುವವರಿಗೆ, ಕನಸು ಕಾಣುವವರಿಗೇನೂ ಕಡಿಮೆಯಿಲ್ಲ. ಇವರೆಲ್ಲರಿಗೂ ಪ್ರಕೃತಿಯಲ್ಲಿ ಅವರದೇ ಆದಂತಹ ಸ್ಥಾನವಿದೆ, ಅಲ್ಲಗಳೆಯಲಾಗದಂತಹ ಕೆಲಸಕಾರ್ಯವಿದೆ.
ಹಾಗೇ ಕಳ್ಳಕಾಕರಿಗೂ ಕತ್ತಲೆಯೆಂದರೆ ಪ್ರೀತಿ, ಬೆಳಕಿದ್ದಲ್ಲಿ ಅವರ ಕಾರ್ಯಗಳು ಕೈಗೂಡುವ ಸಾಧ್ಯತೆ ಕಡಿಮೆ. ಈ ಜಗದ ವಿನ್ಯಾಸದಲ್ಲಿ ಕಳ್ಳಕಾಕರಿಗೂ ಬೆಳಕಿನ ಹೆಸರಲ್ಲಿ ಕತ್ತಲೆ ಹಂಚುವವರಿಗೂ ಅವರದೇ ಆದ ಸ್ಥಾನವಿದೆ. ಇವರೆಲ್ಲರೂ ಜಗತ್ತು ಸಂಪೂರ್ಣವೆನಿಸಿಕೊಳ್ಳಲು ಅತ್ಯಗತ್ಯ.
******************
ಬದುಕೊಂದು ಹಾವು-ಏಣಿ ಆಟದ ಹಾಗೆ. ಕತ್ತಲಿನಲ್ಲಿ ಜಾರಿ ಬೆಳಕಿನಲ್ಲೇಳುವುದು, ಕತ್ತಲಿನಲ್ಲಿ ಏರಿ ಬೆಳಕಿನಲ್ಲಿ ಜಾರುವುದು... ಎಲ್ಲಿ ಕತ್ತಲು ಬೇಕೋ ಅಲ್ಲಿ ಬೆಳಕಿದ್ದರೆ, ಬೆಳಕು ಬೇಕಾದಲ್ಲಿ ಕತ್ತಲಿದ್ದರೆ, ಆಟ ಹದತಪ್ಪಿಬಿಡುತ್ತದೆ.
ಬೆಳಕಿನ ಹಬ್ಬವೇನೋ ಈಗ ಕೊನೆಯಾಗುತ್ತಿದೆ, ಆದರೆ ಬದುಕು ನಿರಂತರ. ಬದುಕಿನಲ್ಲಿ ಯಾರಿಗೆಷ್ಟು ಬೆಳಕು ಬೇಕೋ ಅಷ್ಟು ಬೆಳಕು ದಕ್ಕಲಿ... ಯಾರಿಗೆಷ್ಟು ಬೇಕೋ ಅಷ್ಟು ಕತ್ತಲು ದಕ್ಕಲಿ. ಆದರೆ ಕಳ್ಳಕಾಕರ ಬಗ್ಗೆ, ಹುಳಿ ಹಿಂಡುವವರ ಬಗ್ಗೆ, ವಿಷ ಹಂಚುವವರ ಬಗ್ಗೆ ಎಚ್ಚರವಿರಲಿ, ಮಡಿಲಲ್ಲಿ ಸುಡುವ ಬೆಂಕಿಯ ಬೆಳಕನ್ನು, ಬೆಳಕಿನ ವೇಷ ಧರಿಸಿ ಬರುವ ಕತ್ತಲನ್ನು ಹೇಗೆ ನಿಭಾಯಿಸಬೇಕೆಂಬ ವಿವೇಚನೆ ಹುಟ್ಟಿಕೊಳ್ಳುವಷ್ಟು ತಿಳಿವಿನ ಬೆಳಕು ಮನದಲ್ಲಿರಲಿ. ಈ ತಿಳಿವಿನ ನಂದಾದೀಪ ಕಡುಗತ್ತಲೆಯಲ್ಲೂ ಮನದಲ್ಲಿ ಬೆಳಗುತ್ತಿರಲಿ. ಶುಭಾಶಯ...

Wednesday, April 5, 2017

ಸೌಟು ಹಿಡಿಯೋ ಕೈಲಿ ಪತ್ತೇದಾರಿ ಮಾಡೋ ಪ್ರತಿಭಾ ಬಡಿದೆಬ್ಬಿಸಿದ ನೆನಪುಗಳು...

ಎಲ್ಲಾರಿಗೂ ಏನೇನೋ ಚಿಂತೆ ಫೇಸ್ಬುಕ್ಕಲ್ಲಿ. ನಂಗೆ ಮಾತ್ರ ಈ ಪ್ರತಿಭಾದು ಸೌಟಿನ ಚಿಂತೆ ಆಗ್ಬಿಟ್ಟಿದೆ.

ಈ ಸೌಟು ಹಿಡಿಯೋ ವಿಚಾರದಲ್ಲಿ ಒಂದೇ ಒಂದು ಪ್ರಾಬ್ಲೆಂ ಇದೆ, ಅದು ಸೀರಿಯಸ್ ಪ್ರಾಬ್ಲೆಂ. ನೀವು ಟೀವಿನಲ್ಲಿ ಯಾರ ಅಡಿಗೆ ಷೋ ನೋಡ್ತೀರಾ ಅಂತ ಕೇಳಿದ್ರೆ ಯಾರ ಹೆಸರು ನೆನಪಿಗೆ ಬರತ್ತೆ...? ಸಂಜೀವ್ ಕಪೂರ್? ಸಿಹಿಕಹಿ ಚಂದ್ರು? ನಮ್ಮಲ್ಲಿ ಹೆಸರುವಾಸಿಯಾಗಿರುವ ಅಡಿಗೆಯವರೆಲ್ಲರೂ ಗಂಡಸರೇ. ದೊಡ್ಡ ದೊಡ್ಡ ಕಿಚನ್ ಗಳಲ್ಲಿ, ಅಕ್ಷಯಪಾತ್ರಾದಿಂದ ಹಿಡಿದು ಧರ್ಮಸ್ಥಳ ದೇವಸ್ಥಾನದವರೆಗೆ, ರಾಯರ ಮಠದ ಮಡಿ ಅಡಿಗೆಯಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲುಗಳ ವೆಜ್ ನಾನ್ ವೆಜ್ ಚೈನೀಸ್ ಬರ್ಮೀಸ್ ವರೆಗೆ, ಅಡಿಗೆ ಮಾಡಾಕೋರು ಯಾರು? ಗಂಡಸರೇ. ದಮಯಂತಿ ಫೇಮಸ್ ಆಗಿದ್ದಳೋ ಇಲ್ವೋ ಗೊತ್ತಿಲ್ಲ, ನಳ ಮಹಾರಾಜನ ಅಡಿಗೆಯಂತೂ ಪ್ರಸಿದ್ಧವಾಗಿತ್ತು. ಇಷ್ಟೆಲ್ಲಾ ಇದ್ದೂ ಗಂಡಸರ ಅಡಿಗೆ ಸಾಮರ್ಥ್ಯದ ಮೇಲೆ ವಾಹಿನಿಗಳಿಗೆ ಅಪನಂಬಿಕೆ ಇರುವುದು ಗಂಡಸರಿಗೆ ಮಾಡ್ತಾ ಇರುವ ಅತಿದೊಡ್ಡ ಅವಮಾನ ಅಂತ ನನಗನಿಸುತ್ತದೆ.

ನಾನು ಮದುವೆಗೆ ಮುಂಚೆಯೇ ಗಂಡ ಆಗೋರ ಕೈಲಿ ನಿಮಗೆ ಅಡಿಗೆ ಬರತ್ತೆ ತಾನೇ, ನನಗೆ ಬರಲ್ಲ ಅಂತ ಹೇಳಿ, ಅಡ್ಜಸ್ಟ್ ಮಾಡ್ಕೊಳೋಣ ಬಿಡಿ ಅಂತ ಮಾತು ತೆಗೆದುಕೊಂಡ ಮೇಲೆಯೇ ಮದುವೆ ಆಗಿದ್ದು. ನನ್ನ ಗಂಡನ ಕುರಿತು ಯಾರಾದ್ರೂ ಲಟ್ಟಣಿಗೆ ಹಿಡಿಯೋ ಕೈಯಿ ಲ್ಯಾಪ್ ಟಾಪಲ್ಲಿ ಟೆಂಡರ್, ಕೊಟೇಶನ್ ಕೂಡ ಕುಟ್ಟತ್ತೆ ಅಂತೇನಾದ್ರೂ ಅಂದ್ರೆ ನಾನು ತುಂಬಾ ಹೆಮ್ಮೆ ಪಡ್ತೀನಿ, ಯಾಕಂದ್ರೆ ನಮ್ಮನೇಲಿ ನಾವು ಅಡಿಗೆ ಹಂಚಿಕೊಂಡು ಮಾಡ್ತೀವಿ.  (ನನ್ ಗಂಡ ಲಟ್ಟಣಿಗೆ ಹಿಡಿಯಲ್ಲ, ಸೌಟು ಹಿತಾರೆ, ಲಟ್ಟಣಿಗೆ ನನ್ ಡಿಪಾರ್ಟಮೆಟು. ಯಾಕಂದ್ರೆ ನಮ್ಮವ್ರು ಲಟ್ಟಣಿಗೆ ಹಿಡಿದ್ರು ಅಂದ್ರೆ ಜಿಯಾಗ್ರಫಿ ಪಾಠಗಳೇ ಬೇಡ, ಎಲ್ಲಾ ಕಾಂಟಿನೆಂಟ್ಸು ಮತ್ತು ಸ್ಟೇಟ್ಸಿದು ಮ್ಯಾಪ್ಸು ಅವ್ರೇ ಚಪಾತಿನಲ್ಲಿ ರೆಡಿ ಮಾಡ್ ಬಿಡ್ತಾರೆ. ಅದಿಕ್ಕೇ ನಾನು ಲಟ್ಟಣಿಗೆ ಹಿಡೀತೀನಿ, ಸೌಟು ಅವ್ರು ಹಿಡೀತಾರೆ. ಅವ್ರು ಮಾಡೋಥರ ಹುಳಿ ಮಾಡಕ್ಕೆ ನಂಗಿವತ್ತಿಗೂ ಬರಲ್ಲ.)

ಅಡುಗೆ ಒಂದು essential life skill, ಹಾಗಾಗಿ ನನ್ನ ಮಗುವಿಗೂ ನಾನದನ್ನ ಕಲಿಸಲೇ ಬೇಕು, ಕಲಿಸ್ತೀನಿ. ಪಾಪ ಕೆಲವು ಗಂಡಸರು ಅವರಮ್ಮಂದಿರು ನಮ್ ಥರ ಯೋಚನೆ ಮಾಡದೆ, ಹೆಚ್ಚು ತಲೆಕೆಡಿಸಿಕೊಳ್ಳದೆ ಕಾಲಕಾಲಕ್ಕೆ ಸರಿಯಾಗಿ ಮಾಡಿ ಹಾಕುತ್ತಿದ್ದ ಕಾರಣ ಅಡಿಗೆ ಕಲಿತಿರುವುದಿಲ್ಲ, ಅದು ಪಾಪ ಅವರ ತಪ್ಪಲ್ಲ.
********************
ಅದೊಂದು ಕಾಲವಿತ್ತು. ಈಟಿವಿಯಲ್ಲಿ ಕೆಲಸ ಮಾಡ್ತಿರಬೇಕಾದ್ರೆ ನಾಕು ವಾರಕ್ಕೊಂದ್ ಸಲ ರೊಟೇಶನ್ ಮೇಲೆ ನೈಟ್ ಶಿಫ್ಟ್ ಬೀಳ್ತಿತ್ತು. ನಮ್ಮದು ಡೆಸ್ಕು ಗ್ರೌಂಡ್ ಫ್ಲೋರಲ್ಲಿ, ಪ್ರೋಗ್ರಾಮ್ ಕಂಟ್ರೋಲ್ ರೂಮು 3ನೇದೋ ಅಥವಾ 4ನೇದೋ ಫ್ಲೋರಲ್ಲಿತ್ತು. ಪ್ರತಿ ಬಾರಿ ಸುದ್ದಿ ವಾಚನ ಅಗಬೇಕಾದರೂ ಅದನ್ನು ನಡೆಸಿಕೊಡುವ ಹಲವರಲ್ಲಿ ನಾನೂ ಒಬ್ಬಳಾಗಿದ್ದೆ.
ರಾತ್ರಿಪಾಳಿಯಿದ್ದಾಗ ರಾತ್ರಿ 12 ಗಂಟೆಗೆ ದಿನದ ಕೊನೆಯ ಬುಲೆಟಿನ್ ಮುಗಿಸಿ ಡೆಸ್ಕಿಗೆ ಬಂದಾ ಅಂದ್ರೆ ಮತ್ತೆ ಬೆಳಿಗ್ಗೆ 6 ಗಂಟೆಗೆ ಮೇಲೆ ಹೋದ್ರಾಯ್ತು, ಅಲ್ಲೀತನಕ ಡೆಸ್ಕಲ್ಲಿ ಕೂತಿರೋದು. ಹರಟೆ ಹೊಡೆಯೋದಕ್ಕೆ ಕಂಪೆನಿ ಇದ್ರೆ ಹರಟೆ... ಇಲ್ಲಾಂದ್ರೆ ಏನಾದ್ರೂ ಮಾಡು, ಏನೂ ಇಲ್ಲಾಂದ್ರೆ ಯಾರಾದ್ರೂ ಎಬ್ಸೋ ತನಕ ನಿದ್ದೆ ಹೊಡಿ.

ಇಂಥಾ ಬೋರಿಂಗ್ ಲೈಫಲ್ಲಿ ನನ್ನ ಪಾಲಿಗೆ ಆಶಾಕಿರಣವಾಗಿ ಬಂದಿದ್ದು ಇದೇ ಕನ್ನಡ ಧಾರಾವಾಹಿಗಳು. ಈಟೀವಿ ಕನ್ನಡದ ಆಗಿನ ಕಾಲದ ಧಾರಾವಾಹಿಗಳು. ಸೀತಾರಾಂ ಸರ್-ದು ಮುಕ್ತ ಮುಕ್ತ ಬರ್ತಾ ಇದ್ದ ಕಾಲ ಅದು. ಭೂಮಿಕಾ ಗ್ಯಾಂಗ್ ದು ಕೆಲವು ಸೀರಿಯಲ್ಲುಗಳು ಬರ್ತಾ ಇತ್ತು. ಅವಾಗೆಲ್ಲ ಕ್ಯಾಸೆಟ್ಟೇ ಇದ್ದಿದ್ದು, ಫುಲ್ ಡಿಜಿಟಲ್ ಆಗಿರಲಿಲ್ಲ. ಅನಾಲಾಗಸ್ ಎಡಿಟ್ ಸೂಟುಗಳೆಲ್ಲ ಅವಾಗಷ್ಟೇ ಚರಿತ್ರೆಯ ಪುಟಗಳಿಗೆ ಸೇರಿ ಎಡಿಟಿಂಗ್ ಮಾತ್ರ ಡಿಜಿಟಲ್ ಆಗಿ ಬದಲಾಗಿದ್ದ ಕಾಲ ಅದು.

ನಾನು (ಮತ್ತು ನೈಟ್ ಶಿಫ್ಟ್ ಮಾಡೋ ಎಲ್ಲರೂ) ಬೆಳಿಗ್ಗೆ ಡ್ಯೂಟಿ ಮುಗಿಸಿ ಮನೆಗೆ ಹೋಗಿ ತಿಂಡಿ ಮಾಡ್ಕೊಂಡು ತಿಂದು ಮಲಗಿದ್ರೆ ಏಳ್ತಾ ಇದ್ದಿದ್ದು ಮುಸ್ಸಂಜೆಗೇನೇ. ಹಾಗಾಗಿ ಸೀರಿಯಲ್ಲುಗಳೆಲ್ಲ ಮನೆಯಲ್ಲಿ ನೋಡಲಿಕ್ಕೆ ಆಗ್ತಿರಲಿಲ್ಲ. ಆದರೇನಂತೆ, ರಾತ್ರಿಯ ಕೊನೆಯ ಬುಲೆಟಿನ್ ಮುಗಿಸಿ ಕೆಳಗೆ ಬರುವಾಗ ಕಂಟ್ರೋಲ್ ರೂಮಿಂದ ಸೀರಿಯಲ್ ಕ್ಯಾಸೆಟ್ಟುಗಳು ಎತ್ಕೊಂಬರ್ತಿದ್ದೆ. ಪ್ರತಿ ದಿನದ ಪ್ರತಿ ಸೀರಿಯಲ್ಲನ್ನೂ ಒಂದು ಫ್ರೇಮೂ ಬಿಡದೆ ನೋಡಿದರೇನೇ ನಮಗೆಲ್ಲ ತೃಪ್ತಿ.

 ಮುಕ್ತ ಮುಕ್ತ ಮುಗಿದಾದ ಮೇಲೆ ನಾನು ಸೀರಿಯಲ್ಸ್ ನೋಡೋದು ಬಿಟ್ಟೇ ಬಿಟ್ಟಿದ್ದೆ, ಆಮೇಲೆ ಮುಕ್ತ ಮುಕ್ತ ಮುಕ್ತ ಶುರುವಾದಾಗ ಮತ್ತೆ ಕೆಲಕಾಲ ಅದೊಂದೇ ಸೀರಿಯಲ್ಲು ನೋಡಿದ್ದೆ. ಈಗ ಯಾವ ಸೀರಿಯಲ್ಲೂ ನೋಡುವುದಿಲ್ಲ, ಯಾಕೋ ಸೀರಿಯಲ್ಲಿನ ಚಾರ್ಮು ನನ್ನ ಪಾಲಿಗೆ ಮುಗಿದಿದೆ.

ನಾನು ಸೀರಿಯಲ್ ನೋಡಲ್ಲಾ ಅಂತ ಸೀರಿಯಲ್-ಗಳೇನೂ ಕಡಿಮೆಯಾಗಿಲ್ಲ, ಹೊಸಾಬಾಟಲಿಯಲ್ಲಿ ಹಳೇಮದ್ಯದತರ ಅದೇ ಅದೇ ಟಾಪಿಕ್ಕುಗಳು ವಿಧವಿಧದಂಗಿ ಧರಿಸಿ ಬರ್ತಾನೇ ಇವೆ... ಕ್ಯಾಮರಾವರ್ಕು, ತಾಂತ್ರಿಕತೆ ಮೊದಲಿಗಿಂತ ತುಂಬಾನೇ ಚೆನ್ನಾಗಿದೆ, ಆದರೆ ತಿರುಳು.. ಊಹೂಂ. ಹಳೇ ಸೀರಿಯಲ್ಲುಗಳೇ ಚೆನ್ನಾಗಿತ್ತು, ಇವತ್ತು ಗುಡ್ಡದ ಭೂತ, ಮುಕ್ತ, ಮನ್ವಂತರ, ಗೃಹಭಂಗದ ರೀತಿಯ ಧಾರಾವಾಹಿಗಳು ಬರುವುದು ಸಾಧ್ಯವಾ? ಮಿನಿಟು-ಟು-ಮಿನಿಟ್ ಟೀಆರ್ಪಿ ಗೊತ್ತಾಗೋ ಈಗಿನ ಕಾಲದಲ್ಲಿ ನಾಟಕಕ್ಕೆ, ಡ್ರೆಸ್ಸುಗಳಿಗೆ, ಮತ್ತು ನೀವು ಒಂದು ಕಥೆಯನ್ನು ಅದುಹೇಗೆ ಚೂಯಿಂಗ್ ಗಮ್ ಥರಾ ಎಳೆದು ಟ್ವಿಸ್ಟ್ಸು ಟರ್ನ್ಸು ಇತ್ಯಾದಿ ತರಬಲ್ಲಿರಿ ಎಂಬುದಕ್ಕೆ ಅತಿಹೆಚ್ಚಿನ ಪ್ರಾಧಾನ್ಯ, ನಿಜವಾದ ಕಥೆಗಲ್ಲ ಅಂತ ಅನಿಸ್ತಾ ಇದೆ. 17ವರ್ಷಗಳ ಹಿಂದೆ ಸೋಪ್ ಒಪೇರಾಸ್ ಮತ್ತು ಸೋಶಿಯಲ್ ಇಂಪಾಕ್ಟ್ಸ್ ಬಗ್ಗೆ ಓದಿದ್ದ ವಿಚಾರಗಳು ಇವತ್ತಿಗೆ ಬೇರೆ ಬೇರೆ ರೀತಿಯಲ್ಲಿ ಹೆಚ್ಚುಹೆಚ್ಚು ಅರ್ಥವಾಗ್ತಾ ಹೋಗ್ತಿವೆ.

ಇದೇರೀತಿ ಇನ್ನೊದು ಕಾಲವಿತ್ತು, ಮಹಿಳಾ ಕಾದಂಬರಿಕಾರರ ಕಾದಂಬರಿಗಳನ್ನು ಹುಚ್ಚು ಹಿಡಿದಂತೆ ಓದುತ್ತಿದ್ದ ಕಾಲ. ಒಂದಷ್ಟು ಕಾದಂಬರಿ ಓದಿಯಾದ ಮೇಲೆ ಇಂಥಾ ಬರಹಗಾರರ ಕಾದಂಬರಿಯಾದರೆ ಇನ್ನು ಮುಂದೇನಾಗತ್ತೆ ಅಂತ ಹೇಳುವಷ್ಟು ಪರಿಣತಳಾಗಿದ್ದೆ. ನಾವು ಕೂತ್ಕೊಂಡು ಒಂದು ಕಾದಂಬರಿಯಲ್ಲಿ ಎಷ್ಟು ತಿಂಡಿ ಹೆಸರಿದೆ ಅಂತ ಕೂಡ ಎಣಿಸ್ತಾ ಇದ್ದ ದಿನಗಳಿತ್ತು. ಆ ಕಾಲದ ಬೆಂಗಳೂರು, ಅದರ ಅಗ್ರಹಾರಗಳು, ವಠಾರಗಳು ಇತ್ಯಾದಿ ಆ ಕಾಲದಲ್ಲೇ ನಮಗೆ ಕಾದಂಬರಿಗಳ ಮೂಲಕ ಪರಿಚಿತವಾಗಿತ್ತು. Those times have passed long back. ಅದೇ ಕಾಲವನ್ನು ಬೇರೆಯ ರೀತಿಯಲ್ಲಿ ಕಳೆದಿದ್ದರೆ ಅಂತ ಒಮ್ಮೊಮ್ಮೆ ಅನಿಸುತ್ತದೆ, ಆಗ ಮಾಡಲಾಗದ ಕೆಲಸಗಳು ಈಗ ಮಾಡ್ತಾ ಇದೀನಿ, ಓದದಿದ್ದಿದ್ದು ಈಗ ಓದ್ತಾ ಇದೀನಿ.

ಹಾಂ, ಹೇಳೋದು ಮರೆತೆ. ನಮ್ಮನೆ ಪುಟ್ಟುಗೌರಿ ನಾನಿಲ್ದೇ ಇರ್ಬೇಕಾದ್ರೆ ಕೂತ್ಕೊಂಡು ಪುಟ್ಟಗೌರಿಮದುವೆ ರಿಪೀಟ್ ಎಪಿಸೋಡ್ಸ್ ನೋಡ್ತಾಳೆ, ಎಷ್ಟುದಿನ ಅಂತ ಗೊತ್ತಿಲ್ಲ. ನೋಡಲಿಬಿಡಿ, ಅವಳಾಗವಳೇ ಇವೆಲ್ಲದರ ತಿರುಳು ತಿಳ್ಕೊಳೋತನಕ. This too will pass!
++++++++

ಸೌಟು ಹಿಡಿಯೋ ಪ್ರತಿಭಾ ಪತ್ತೇದಾರಿ ಮಾಡಿದ್ದೇ ಈ ಎಲ್ಲ ನೆನಪುಗಳು ಆಚೆಗೆ ಬರಲು ಕಾರಣವಾಯ್ತು. ನಾಕುದಿನವಾದ್ರೂ ಇನ್ನೂ ಪಾಪ ಕಾಸಿನ ಸರ ಹುಡುಕ್ತಾನೇ ಇದಾಳೆ ಆಕೆ, ಅವಳಿಗೆ ಕಾಸಿನ ಸರ ಬೇಗನೇ ಸಿಗಲಿ ಅಂತ ನನ್ನದೊಂದು ಹಾರೈಕೆ. ನಮ್ಮ ಅಣ್ಣಾವ್ರು ಈಸ್ ಆಫರಿಂಗ್ ಟು ಹೆಲ್ಪ್ ವಿದ್ ಅಡಿಗೆ ಮನೆ ಟ್ರೇನಿಂಗ್ ಫಾರ್ ಹರ್ ಪೀಪಲ್ - ಟು ಹೆಲ್ಪ್ ಹರ್ ಗೆಟ್ ರಿಡ್ ಆಫ್ ದಟ್ ಬ್ಲಡಿ ಸೌಟ್ :-)

ಇದೊಂಥರಾ ನಿರಾಶಾವಾದಿ ಹೇಳಿಕೆ, ಆದ್ರೆ ಆ ಮಹಾದೇವಿಯೂ ನಾಗಿಣಿಯೂ ಮಿಕ್ಕುಳಿದ ಮೂವತ್ತಮೂರುಕೋಟಿ ದೇವತೆಗಳೂ ಎಲ್ಲಾ ಕನ್ನಡ ಮನರಂಜನಾವಾಹಿನಿಗಳ ಮುಖ್ಯಸ್ಥರಿಗೆ ಮತ್ತು ಧಾರಾವಾಹಿ ನಿರ್ದೇಶಕರುಗಳಿಗೆ ಎಲ್ಲಾ ರೀತಿಯಲ್ಲಿ ಒಳ್ಳೇ ಬುದ್ಧಿಕೊಡಲಿ ಅಂತ ಹಾರೈಸ್ತೀನಿ... 
 
ಕನ್ನಡ ಚಲನಚಿತ್ರಗಳಲ್ಲಿ ಇವತ್ತು ನಾವು ನೋಡ್ತಾ ಇರೋ ರೀತಿ ಚಿತ್ರಗಳು ಬರಬಹುದು ಅಂತ ಕನಸಲ್ಲೂ ಅಂದ್ಕೊಂಡಿರಲಿಲ್ಲ, ಆದ್ರೆ ಇವಾಗ ಬರ್ತಾ ಇದೆಯಲ್ಲ, ಹಾಗೇ ಧಾರಾವಾಹಿ ಜಗತ್ತಲ್ಲೂ ಮುಂದೊಂದು ದಿನ ನವೋದಯವಾದೀತು, ಕಾದು ನೋಡೋಣ!

Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ, ಬಂದ ಭಾಗ್ಯ ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಮಿಥ್ಯವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದೆ, ಮೋಹವಂತೆ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬೀಳ್ವ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)

Tuesday, December 3, 2013

ನಮ್ಮನೆ ಪುಟ್ಟ ಬೆಕ್ಕು


ಅಮ್ಮಾ... ನಂಗೆ ಚೆಟರು ಬೇಡಮ್ಮಾ.... ನೀ ಯಾಕೆ ನಂಗೆ ಹಾಕ್ತೀಯಾ...
ಪುಟ್ಟವಳದು ರಾತ್ರಿರಾಗ ಶುರು... ಅಂದರೆ ನಿದ್ದೆ ಮಾಡುವ ಸಮಯ ಹತ್ತಿರವಾಗಿದೆ.
ಹೀಗವಳು  ಅತ್ತಾಗಲೆಲ್ಲಾ ಮೊದಮೊದಲು ಕೈಕಾಲು ಬೀಳುತ್ತಿತ್ತು. ಆಮೇಲೆ ನಿನ್ನ ಹಠವೆಲ್ಲಾ ಕಲಿತಿದ್ದಾಳೆ ಅಂತ ನಮ್ಮವರು ನನ್ನನ್ನು ದೂರಿದರೆ, ಅವೆಲ್ಲಾ ನಿಮ್ಮದೇ ಬಳುವಳಿ ಅಂತ ನಾನು ಅವರನ್ನು ದೂರುವುದು ಸ್ವಲ್ಪ ದಿನ ನಡೆಯಿತು. ಈಗೊಂದು ತಿಂಗಳಿಂದ ಹೊಸ ಉಪಾಯ ಕಂಡುಕೊಂಡಿದ್ದೇವೆ.
"ಪಪ್ಪಾ, ಅಳೋರೆಲ್ಲಾ ಅಳ್ತಾ ಇರ್ಲಿ, ನಾವು ನೀವು ನಾಟ್ಕ ಮಾಡೋಣ...!" ನಾ ಶುರು ಮಾಡುತ್ತೇನೆ. ಇಬ್ಬರೂ ಮಂಚದ ಮೇಲೆ ಎದುರು-ಬದುರು ಕುಳಿತಿದ್ದಾಗಿದೆ. ಅವಳಿನ್ನೂ ಬಾಗಿಲಾಚೆಗೆ ನಿಂತಿದ್ದಾಳೆ.
"ಹೌದು ಹೌದು, ಶುರು ಮಾಡೋಣ" ಅಂತಾರೆ ನಮ್ಮವರು.
ಅಳು ಇನ್ನೂ ಮುಂದುವರಿದೇ ಇದೆ.
"ನಾನು ಮಂಗ, ನೀವೂ ಮಂಗ, ಬನ್ನಿ, ಬೆಣ್ಣೆ ಕದಿಯೋಣ'' ಅಂತೀನಿ ನಾನು.
''ಸರಿ, ಕದಿಯೋಣ,  ಆದ್ರೆ ನಂಗೆ ಜಾಸ್ತಿ ಬೆಣ್ಣೆ ಬೇಕು'' ಅಂತಾರೆ ನಮ್ಮವರು.
'' ಇಲ್ಲ, ನಂಗೆನೇ ಜಾಸ್ತಿ'' ಅಂತೀನಿ ನಾನು.
''ಹಂಗಾರೆ ನಾನು ಕದಿಯಕ್ಕೇ ಬರಲ್ಲ'' ಅಂತಾರೆ ನಮ್ಮವರು.
ನಾಟಕದ ಪರಿಣಾಮ ಕಾಣಿಸಲು ಶುರುವಾಗಿದೆ,
''ಇಲ್ಲಿಲ್ಲ, ಬನ್ನಿ ಪ್ಲೀಸ್, ಇಬ್ರೂ ಕದ್ದು ಬಿಟ್ಟು ತಿನ್ನೋಣ'' ಅಂತೀನಿ ನಾನು.
ಸರಿ, ದಿಂಬಿನ ಆಚೆಗೆ ಕೈಹಾಕಿ ಪಪ್ಪಮಂಕಿ ಬೆಣ್ಣೆ ಕದಿಯಲು ಶುರುಮಾಡಿದರೆ, ಅಮ್ಮ ಮಂಕಿ ಕೈಯನ್ನು ಎತ್ತಿಹಾಕಿ ಸಪೋರ್ಟ್ ಮಾಡುತ್ತಾಳೆ.
ಮಂಚದಿಂದಾಚೆಗೆ ಬೆಕ್ಕು ಮೇಲೆ ಬರಲು ಸಿದ್ಧವಾಗುತ್ತಿರುವುದು ಕಣ್ಣಂಚಿನಲ್ಲೇ ಕಾಣಿಸಿ ಪಪ್ಪ-ಅಮ್ಮ ಮಂಕಿ ಇಬ್ಬರಿಗೂ ನಗು ಬರುತ್ತದೆ, ಆದರೆ ತೋರಿಸಿಕೊಳ್ಳುವುದಿಲ್ಲ. ನಾಟಕ ಮುಂದುವರಿಯುತ್ತದೆ.
''ಆಹಾ, ಎಷ್ಟೊಂದು ಬೆಣ್ಣೆ.... ಘಮ್ಮಂತಿದೆಯಲ್ಲಾ..'' ಪಪ್ಪ ಮಂಕಿಯ ಉದ್ಗಾರ.
ಅಮ್ಮ ಮಂಕಿ ''ಹೂಂ, ನಾನು ನಿಮ್ಗೆ ಬೆಣ್ಣೆ ಕದಿಯಕ್ಕೆ ಸಹಾಯ ಮಾಡಿದ್ದೀನಲ್ಲಾ, ನಂಗೆ ಜಾಸ್ತಿ ಬೆಣ್ಣೆ ಬೇಕು'' ಅನ್ನುತ್ತಾಳೆ.
''ಕದ್ದಿದ್ದು ನಾನು ತಾನೇ, ನನಗೇ ಜಾಸ್ತಿ,'' ಅಂತಾರೆ ಪಪ್ಪ ಮಂಕಿ. ಜಗಳ ಶುರುವಾಗುತ್ತದೆ.
ಅಷ್ಟರಲ್ಲಿ...
''ಮಿಯ್ಯಾಂವ್!''
ಪುಟ್ಟವಳು ಬೆಕ್ಕಾಗಿ ಮಂಚದ ಮೇಲೇರುತ್ತಾಳೆ, ಕಣ್ಣಂಚಿನ ಹನಿಯೆಲ್ಲಾ ಒರಸಿಕೊಂಡಿದ್ದಾಗಿದೆ, ಹಠ ಮರೆತುಹೋಗಿದೆ.
ಪಪ್ಪ ಹೇಳುತ್ತಾರೆ, ''ಬೆಕ್ಕೇ ನೀನು ನಮಗಿಬ್ರಿರಿಗೂ ಬೆಣ್ಣೆ ಹಂಚು'' ಅಂತ.
ಬೆಕ್ಕು ಬೆಣ್ಣೆ ಹಂಚುವ ಬದಲು ತಾನೇ ತಿನ್ನುವ ನಾಟಕವಾಡುತ್ತಿದ್ದರೆ, ಅಪ್ಪ- ಅಮ್ಮನ ಮನಸ್ಸು ನಿರಾಳ.
ಆಮೇಲೊಂದಿಷ್ಟು ಕಥೆ, ಹಾಗೇ ಎಲ್ಲರಿಗೂ ನಿದ್ದೆ.

Thursday, November 21, 2013

ಈರುಳ್ಳಿ ವಿಷ್ಣು, ವಿಷ್ಣು ಅಂತ ತಪಸ್ಸು ಮಾಡಿದ ಕಥೆ

ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.

ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ ಪುಟ್ಟವಳು ಅವಳ ಬೇಬಿ ಸಿಟ್ಟರು ಹುಡುಗಿ, ಎದುರುಮನೆ ಅಜ್ಜಿ, ಪಕ್ಕದ ಮನೆ ಹುಡುಗನ್ನ ಸೇರಿಸಿಕೊಂಡು ಕಥೆ ಹೇಳ್ತಿದ್ದಳು. ಅವಳ ಕಥೆಯಲ್ಲಿ ದೇವರು ಶಿವ ಹೋಗಿ ವಿಷ್ಣು ಆಗಿಬಿಟ್ಟಿತ್ತು! :-)

ಓಂ ವಿಷ್ಣವೇ ನಮ: ಅಂತ ನಾ ಹೇಳ್ಕೊಟ್ಟಿರಲಿಲ್ಲವಾದ್ದರಿಂದ ಅವಳ ಕಥೆಯಲ್ಲಿ ಈರುಳ್ಳಿ 'ವಿಷ್ಣು ವಿಷ್ಣು' ಅಂತ ತಪಸ್ಸು ಮಾಡ್ತಿತ್ತು. ಪಕ್ಕಾ ಮಾಧ್ವ ಸಂತತಿ :-) ನಮ್ಮಲ್ಲಿ ಗೌರಿ ಪೂಜೆ ಮಾಡ್ಬೇಕಾದ್ರೆ ಒಂದೊಂದ್ಸಲ ಹಿರಿಯರು ಲಕ್ಷ್ಮಿ ಹಾಡು ಹಾಡ್ತಾರೆ! ಶಿವ ಭಜನೆ ಮಾಡ್ಬೇಕಾದ್ರೆ "ಕೈಲಾಸವಾಸ ಗೌರೀಶ ಈಶ.. ತೈಲಧಾರೇಯಂತೆ ಮನಸು ಕೊಡು ಹರಿಯಲ್ಲಿ ಶಂಭೋ.." ಅಂತಾರೆ...

ಸದ್ಯ.. ಶಿವ ದೇವ್ರು narrow-minded ಆಗಿದ್ದಿದ್ದರೆ ಎಲ್ಲಾರ್ನೂ ಲಯ ಮಾಡ್ಬಿಡ್ತಾ ಇದ್ನೇನೋ!!! :-)