Tuesday, November 9, 2021

ಹಾಗೇ ಇರಲಿ ಬಿಡು...

ನನ್ನ ನಿನ್ನ ನಡುವಿರುವುದು

ಒಂದು ದೊಡ್ಡ ಆನೆ-

ಯಾಗಿದ್ದರೆ ಏನು ಮಾಡುವುದು? 

ಮುಟ್ಟುವುದು ಬೇಡ - 

ನಾನು-ನೀನು ತಲೆಗೊಂದು ಮಾತಾಡಿ

ಆನೆಯ ಇರುವಿಕೆಯೇ ಹಾಳಾದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದೊಂದು

ದೊಡ್ಡ ಬಣ್ಣದ ಗುಳ್ಳೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ-

ಮುಟ್ಟಿದರೆ ಗುಳ್ಳೆ ಒಡೆದು 

ಕಣ್ಣೊಳಗಣ ಬಣ್ಣ ಅಳಿಸಿಹೋದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದು 

ದೊಡ್ಡದೊಂದು ಸೊನ್ನೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ ಬಿಡು -

ಸೊನ್ನೆಯೊಳಗಿನ ಸೆಳೆತಕ್ಕೆ

ನಾನೂ ನೀನೂ ಸೊನ್ನೆಯಾದೇವು...

ಹಾಗೇ ಇರಲಿ ಬಿಡು.

1 comment:

sunaath said...

ಆನೆಯು ಸೊನ್ನೆಯಾದೀತು ಒಂದು ದಿನ. ಬಣ್ಣದ ಗುಳ್ಳೆ ಆದೀತು ಕಾಮನ ಬಿಲ್ಲು, ಕಾಲ ಕೂಡಿ ಬಂದಾಗ!