Sunday, March 29, 2009

ಥ್ರಿಲ್ ಬೇಕಾ? 13B ನೋಡಿ!

ತುಂಬಾ ದಿನದಿಂದ ನೋಡಬೇಕೆಂದುಕೊಂಡು ನೋಡಲಾಗಿರಲಿಲ್ಲ, ಆದರೆ ಇವತ್ತು 13B ಚಿತ್ರ ನೋಡಿಯೇ ಬಿಟ್ಟೆ. ಮೊದಲೇ ಪ್ಲಾನ್ ಮಾಡದಿದ್ದರೂ ಅಚಾನಕ್ಕಾಗಿ ಹೊರಟದ್ದಾಯ್ತು. ಎದ್ದೂ ಬಿದ್ದೂ ಓಡಿ ಹೋಗಿ ಟಿಕೆಟ್ ತಗೊಂಡು ಥಿಯೇಟರಲ್ಲಿ ಕೂತುಕೊಳ್ಳುವಾಗ ಆಗಲೇ ಮಾಧವನ್ ಮತ್ತು ಕುಟುಂಬ ನಂಬರ್ 13ರ ಹೊಸಾ ಮನೆಗೆ ಪ್ರವೇಶಿಸಿಯಾಗಿತ್ತು. ಇಂಟರ್-ಮಿಶನ್ ಬರುವಷ್ಟರಲ್ಲಿ ಇನ್ನೇನಾಗುತ್ತದೋ ಅಂತ ಉಸಿರು ಬಿಗಿಹಿಡಿದು ಕಾಯುವ ಹಂತಕ್ಕೆ ನಮ್ಮನ್ನು ಚಿತ್ರ ತಂದು ನಿಲ್ಲಿಸಿತ್ತು.

ಇಡಿಯ ಚಿತ್ರ ಎಷ್ಟು ಚೆನ್ನಾಗಿತ್ತೆಂದರೆ, ಚಿತ್ರ ಮುಗಿದಿದ್ದೇ ಗೊತ್ತಾಗಲಿಲ್ಲ. ನಾನು ಯಾವುದೇ ಹಾರರ್-ಗೆ ಸುಲಭಕ್ಕೆ ಹೆದರುವವಳಲ್ಲ, ಸ್ವಲ್ಪಮಟ್ಟಿಗೆ ಗಟ್ಟಿಮನಸ್ಸಿನವಳು ಅಂತ ಅಂದುಕೊಂಡಿದ್ದೆ. ಅಂತಹ ನನ್ನನ್ನು 4-5 ಸಾರಿ ಈಚಿತ್ರ ಬೆಚ್ಚಿಬೀಳಿಸಿತು... ಕೊನೆಗೆ ಪಕ್ಕದಲ್ಲಿದ್ದ ಅರ್ಪಣಾಳ ಕೈಹಿಡಿದುಕೊಂಡು ಕೂತು ಸಿನಿಮಾ ನೋಡಿದ್ದಾಯಿತು :-)

ಕಥೆ ವಿಭಿನ್ನವಾಗಿತ್ತು. ಅದೃಶ್ಯಶಕ್ತಿಗಳು ಇವೆಯೆಂಬುದರಲ್ಲಿ ನಮಗೆ ನಂಬಿಕೆಯಿಲ್ಲದಿದ್ದರೆ 13B ನಂಬಿಸಲು ಯತ್ನಿಸುವುದಂತೂ ನಿಜ. ಚಿತ್ರದೊಳಗಂತೂ ಯಾವುದೇ ಸಂಶಯವಿಲ್ಲದಂತೆ ಅದೃಶ್ಯಶಕ್ತಿಗಳ ಇರವನ್ನು ಚಿತ್ರಿಸಲಾಗಿದೆ. ಇದೇ ವಿಷಯದ ಮೇಲೆ ಈಹಿಂದೆಯೂ ಚಿತ್ರಗಳು ಬಂದಿವೆ, ಆದರೆ ಇದು ಅವ್ಯಾವುದನ್ನೂ ನೆನಪಿಸುವುದಿಲ್ಲ. ನಾ ನೋಡಿದ ಎಲ್ಲಾ ಹಾರರ್ ಚಿತ್ರಗಳಿಗಿಂತ ಇದು ವಿಭಿನ್ನ. ಹಾರರ್ / ಥ್ರಿಲ್ಲರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟು ಹಾರರ್ ಸೃಷ್ಟಿಸಲಾಗುತ್ತದೆ (ಉದಾಹರಣೆ - ಆಪ್ತಮಿತ್ರ, ವಾಸ್ತುಶಾಸ್ತ್ರ ಇತ್ಯಾದಿ). ಈ ಚಿತ್ರದ ಸಂಗೀತ ಹಾರರ್ ಸೃಷ್ಟಿಸುವುದರಲ್ಲಿ ಕೆಲವೆಡೆ ಸಫಲವಾದರೂ ಕೆಲವು ಕಡೆ ಸ್ಟೀರಿಯೋಟೈಪಿಕ್ ಅನಿಸಿ ಕಿರಿಕಿರಿಯಾಗುತ್ತಿತ್ತು. ಮಾಧವನ್ ಪೂಜಾಕೋಣೆಯಲ್ಲಿ ಮೊಳೆ ಹೊಡೆಯುವಾಗ ಧ್ವನಿ ಸುತ್ತಿಗೆಯಚಲನೆಯ ಜತೆ ಸಿಂಕ್ ಆಗದಿರುವುದು, ಒಂದೆರಡು ಶಾಟ್-ಗಳಲ್ಲಿ ತುಟಿ ಚಲನೆಗೂ ಮಾತಿಗೂ ಸಂಬಂಧವಿಲ್ಲದಿರುವುದು ಇತ್ಯಾದಿಗಳಿಂದಾಗಿ, ಧ್ವನಿವಿನ್ಯಾಸ ಕೂಡ ತನ್ನ ಉತ್ಕೃಷ್ಟತೆ ಕಳೆದುಕೊಂಡಿದೆ.

ಆದರೆ ಚಿತ್ರದ ವಿಶೇಷತೆಯೇನಪ್ಪಾ ಅಂದ್ರೆ, ಸಂಗೀತದ ಅಥವಾ ಸೌಂಡ್ ಇಫೆಕ್ಟ್-ಗಳ ಹೊರತಾಗಿಯೂ ಪದೇ ಪದೇ ಬರುವ ಲಿಫ್ಟ್-ನ ಶಾಟ್-ಗಳು, ಮಾಧವನ್ ಮುಖ, ಶಾಟ್ ಸಂಯೋಜನೆ - ಇಷ್ಟರಿಂದಲೇ ಚಿತ್ರ ಥ್ರಿಲ್ಲಿಂಗ್ ಅನಿಸುತ್ತದೆ, ಹಾರರ್ ಸೃಷ್ಟಿಸುತ್ತದೆ. ಮೊದಮೊದಲು ಕೆಲವೆಡೆ silhouette shots ಕಿರಿಕಿರಿ ಅನಿಸಿದರೂ, ಕ್ಯಾಮರಾ ವರ್ಕ್ ಚೆನ್ನಾಗಿತ್ತು. ಕಪ್ಪು-ಬಿಳುಪಿನಲ್ಲೇ ತೋರಿಸಿದ ಭಯಾನಕತೆ ಕೂಡ ಇಷ್ಟವಾಯ್ತು. ಕೆಲಕಡೆ ಚಿತ್ರ ಅದ್ಯಾಕೋ ಹಿಚ್-ಕಾಕ್-ನ ಸೈಕೋದ ಕೆಲ ಶಾಟ್-ಗಳನ್ನು ನೆನಪಿಸಿತು.

ಮೊದಲ ಭಾಗದಲ್ಲಿ ನಾಯಿ ಹಿಡಿದ ಮುದುಕ ಮತ್ತು ಮಾಧವನ್ ಇರುವ ದೃಶ್ಯಗಳ ಸಂರಚನೆ ಚಿತ್ರದ ಪೂರ್ಣ ವಿನ್ಯಾಸಕ್ಕೆ ಹೊಂದುವುದಿಲ್ಲ. ಅವುಗಳನ್ನು ಚಿತ್ರಿಸಿರುವ ರೀತಿ ಆತನೂ ಈ ಹಾರರ್-ನ ಅವಿಭಾಜ್ಯ ಭಾಗವೇನೋ ಅನ್ನುವ ಅನಿಸಿಕೆ ಮೂಡಿಸುತ್ತದೆ. ನಂತರ ಆತ ಏನೂ ಅಲ್ಲದೆ ಹೋಗುತ್ತಾನೆ, ಕಥೆಗೆ ಅನವಶ್ಯಕವಾಗಿ ಹೋಗುತ್ತಾನೆ, ನಾಯಿ ಮಾತ್ರ ಮಹತ್ವ ಪಡೆಯುತ್ತದೆ. ಕೊನೆಗೆ ಆತನ ನಾಯಿ ಮಾತ್ರ ಚಿತ್ರದ ಕ್ಲೈಮಾಕ್ಸ್ ಶಾಟ್-ನಲ್ಲಿರುತ್ತದೆ, ಆತ ಇರುವುದಿಲ್ಲ. ಇಡಿಯ ಚಿತ್ರದಲ್ಲಿ ಯಾರ ಮೇಲೂ ಸಂಶಯ ಪಡಲಾರದೆ ವೀಕ್ಷಕ ಒದ್ದಾಡುತ್ತಾನೆ, ಮಾಧವನ್ ಮತ್ತು ಗೆಳೆಯನ ಮೂಲಕವೇ ಕಥೆ ಗೊತ್ತಾಗುತ್ತ ಹೋಗುತ್ತದೆ. ಹಾಗಿರುವಾಗ ಸುಮ್ಮನೆ ಸಂಶಯ ಹುಟ್ಟಿಸಲಿಕ್ಕಾಗಿ ಮುದುಕನ ವೈಭವೀಕರಣ ಬೇಕಿರಲಿಲ್ಲ. ಈ ಅಂಶ ನನಗೆ ಕಿರಿಕಿರಿ ಹುಟ್ಟಿಸಿತು, ಮತ್ತು ಇದನ್ನು ಸ್ವಲ್ಪ ಜಾಣತನದಿಂದ ಸಂಯೋಜಿಸಿದ್ದರೆ ಸಮಯ ಉಳಿಸಬಹುದಿತ್ತೇನೋ ಅನಿಸಿತು. ಒಂದೇ ಒಂದು ಹಾಡಿದೆ ಚಿತ್ರದಲ್ಲಿ, ಅದು ಕೂಡ ಅನವಶ್ಯಕವಾಗಿತ್ತು.

ಇದು ಬಿಟ್ಟರೆ ಹೆಚ್ಚಿನೆಡೆ ಚಿತ್ರಕಥೆ ಚೆನ್ನಾಗಿತ್ತು. ನ್ಯಾರೇಶನ್ ಟೆಕ್ನಿಕ್ ಕೆಲವೆಡೆ ತುಂಬಾನೇ ಚೆನ್ನಾಗಿತ್ತು. ಮಾಧವನ್ ಮತ್ತು ಡಾಕ್ಟರ್ ಶಿಂಧೆ ನಟನೆಯಂತೂ ಸಿಕ್ಕಾಪಟ್ಟೆ ಖುಷಿಯಾಯಿತು, ಅಷ್ಟು ಸಹಜವಾಗಿತ್ತು. ಅಲ್ಲಲ್ಲಿ ಹಾರರ್ ಜತೆ ಕಾಮೆಡಿ ಮಿಕ್ಸ್ ಚೆನ್ನಾಗಿತ್ತು., ಹೊಟ್ಟೆತುಂಬ ನಗು ತರಿಸಿತು. ಅಲ್ಲಲ್ಲಿ ಕಥೆ ಸಾಗುವ ದಾರಿಯ ಬಗ್ಗೆ ಯಾವುದೋ ಸಂದರ್ಶನದ ಮೂಲಕ, ಮತ್ತು ಗೋಡೆ ಮೇಲಿನ ಒಂದು ಫೋಟೋ ಮೂಲಕ ಕ್ಲೂ ಕೊಟ್ಟರೂ, ಅದು ವೀಕ್ಷಕ ಗಮನಿಸಲಾಗದಷ್ಟು ಸಹಜವಾಗಿತ್ತು. ಇವೆಲ್ಲದರ ನಡುವೆ ಕೊನೆಯ ಎರಡು ದೃಶ್ಯಗಳ ತನಕವೂ ಸಸ್ಪೆನ್ಸ್ ಉಳಿಸಿಕೊಂಡು ಚಿತ್ರ ಖುಷಿಕೊಟ್ಟಿತು.

ಚಿತ್ರವಿಡೀ ಧಾರಾವಾಹಿಯ ಪಾತ್ರಗಳ ಮೂಲಕ ಮಾಧವನ್ ಕುಟುಂಬದ ಸದಸ್ಯರ ಬದುಕಿನ ಘಟನಾವಳಿಗಳನ್ನು ತೋರಿಸಿ, ಮುಂದೆ ಹೀಗೇ ಆಗಲಿದೆ ಅಂತ ಸುಲಭವಾಗಿ ಊಹಿಸಲು ವೀಕ್ಷಕನಿಗೆ ಚಿತ್ರ ಅವಕಾಶ ಕೊಡುತ್ತದೆ. ಅದಕ್ಕೆ ಅಡಿಕ್ಟ್ ಆಗಿಬಿಡುವ ವೀಕ್ಷಕನಿಗೆ ಕೊಲೆಗಾರನ ರೂಪದಲ್ಲಿ ಮಾಧವನ್-ಗೆ ಮಾಧವನ್-ಅನ್ನೇ ತೋರಿಸುವ ಮೂಲಕ ಚಿತ್ರ ಅನಿರೀಕ್ಷಿತವಾಗಿ ಚಮಕ್ ಕೊಡುತ್ತದೆ. ಅಲ್ಲಿ ಧಾರಾವಾಹಿಯಲ್ಲಿ ಮಾಧವನ್ ಪಾತ್ರಧಾರಿಯಾಗಿರುವ ಮಿಹಿರ್-ನ ತೋರಿಸಿದರೂ ತೊಂದರೆಯಿರಲಿಲ್ಲ, ಅದು ಮಾಮೂಲಾಗಿ, ಸಾಂಪ್ರದಾಯಿಕವಾಗಿ ಯೋಚಿಸಬಹುದಾದಂಥದ್ದು. ಆದರೆ, ಮಿಹಿರ್ ಪಾತ್ರ ಕಾಣಿಸುವುದಕ್ಕೂ, ಮಾಧವನ್ ಸ್ವತಹ ಕಾಣಿಸುವುದಕ್ಕೂ ನಡುವಿನ ವ್ಯತ್ಯಾಸದ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಇದು ಏನು ನಡೆಯಲಿದೆ, ಮುಂದೆ ಏನಾಗಬಹುದು ಅಂತ ಊಹಿಸಲಿಕ್ಕೇ ಸಾಧ್ಯವಾಗದ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದೇ ನಿಜವಾದ ಥ್ರಿಲ್! ಈ ಅಂಶ ನಂಗೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಷ್ಟವಾಯ್ತು. ಕ್ಲೈಮಾಕ್ಸ್-ನಲ್ಲಿ ಬರುವ ಕೊಲೆಯ ದೃಶ್ಯಕ್ಕೆ ಕೊಲೆಗಾರ ಮೊದಲೇ ಪ್ಲಾನ್ ಮಾಡದಿದ್ದರೂ ಆತ ಕೊಲೆಗಾರನಾಗಹೊರಡುವ ದೃಶ್ಯ ಚೆನ್ನಾಗಿತ್ತು.

ತಾಂತ್ರಿಕವಾದ ಹಲವಾರು ತಪ್ಪುಗಳು ಚಿತ್ರದಲ್ಲಿವೆ. ಪೂಜಾಕೋಣೆಯಲ್ಲಿ ಡ್ರಿಲ್ಲರ್ ಬಂದು ಶಾಕ್ ಹೊಡೆದು ಬಿದ್ದಾಗ ಅಲ್ಲಿಯ ಗೋಡೆಯಲ್ಲಿ ಪ್ಲಗ್ ಪಾಯಿಂಟ್ ಇರುತ್ತದೆ, ನಂತರದ ಶಾಟ್-ಗಳಲ್ಲಿ ಅದು ಇಲ್ಲ. ಮಾಧವನ್ ತಾನು ಕೆಲಸ ಮಾಡುವ ಜಾಗದಲ್ಲಿ ಮಾತನಾಡುತ್ತಿರುವ ಶಾಟ್-ನಲ್ಲಿ ಲಾಂಗ್ ಶಾಟ್ ಮತ್ತು ಕ್ಲೋಸ್ ಶಾಟ್-ನಲ್ಲಿ continuity ಇಲ್ಲ.

ಆದರೆ ಇವೆಲ್ಲಾ ಚಿತ್ರವನ್ನು ಕಲಾಕೃತಿಯೆಂದುಕೊಂಡು ನೋಡುವಾಗ ಮಾತ್ರ ಕಾಣಿಸುತ್ತವೆ, ಕಥೆಯನ್ನೇ ಮುಖ್ಯವೆಂದುಕೊಂಡು ಚಿತ್ರ ನೋಡುವಾಗ ಇವ್ಯಾವುದೂ ಮುಖ್ಯವೆನಿಸುವುದಿಲ್ಲ, ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ನೋಡಿದ ಉತ್ತಮ ಚಿತ್ರಗಳಲ್ಲೊಂದು 13B.

---------------------

ಮುಗಿಸುವ ಮುನ್ನ...
---------------------

4-5 ವರ್ಷದ ಹಿಂದೊಂದು ರಾತ್ರಿ. ರಾಂಗೋಪಾಲ್ ವರ್ಮಾ ನಿರ್ಮಾಣದ ವಾಸ್ತುಶಾಸ್ತ್ರ ನೋಡಿ ಆಗಷ್ಟೆ ಮನೆಗೆ ಬಂದಿದ್ದೆವು. ಊಟ ಮಾಡಿ ಲೈಟ್ ಆರಿಸಿ ಮಲಗಿಕೊಂಡೆವು. ಸ್ವಲ್ಪ ಹೊತ್ತಿಗೆ ಮನೆಯೊಳಗೆ ವಿಚಿತ್ರ ಸೌಂಡು, ಪರಪರಾ... ಪರಪರಾ... ಅಂತ...
ನಾನು ಸ್ವಲ್ಪ ಹೊತ್ತು ಸೌಂಡ್ ಕೇಳಿಸಿಕೊಂಡೆ... ನಂತರ ಮೆಲ್ಲಗೆ ರೂಂಮೇಟನ್ನು ಎಬ್ಬಿಸಿ ಏನೇ ಅದು ಅಂತ ಕೇಳಿದೆ... ಅವಳಿಗೂ ಗೊತ್ತಾಗಲಿಲ್ಲ... ವಾಸ್ತುಶಾಸ್ತ್ರ ಚಿತ್ರದಲ್ಲಿನ ಬಿಳಿಬಿಳಿ ಕಣ್ಣುಗಳ ದೆವ್ವಗಳು, ಸುಶ್ಮಿತಾ ಸೇನ್ ಮಗುವಿನ ಸಮೇತ ಉಳಿದುಕೊಂಡಳು ಅಂದುಕೊಂಡಾಗಲೇ ಮಗು ಬಿಳಿಕಣ್ಣು ತೋರಿಸಿ ವೀಕ್ಷಕರಿಗೆ ತಾನು ದೆವ್ವವೆಂದು ತೋರಿಸಿಕೊಡುವುದು, ಭಯಂಕರ ಸಂಗೀತ ಎಲ್ಲವೂ ಸೇರಿ ನನ್ನ ಮೇಲೆ ಸಿಕ್ಕಾಪಟ್ಟೆ ಇಫೆಕ್ಟ್ ಆಗಿತ್ತು ಕಾಣುತ್ತೆ... ಆಗೇ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಗಿತ್ತು... ಆದರೂ ನನಗೇನೇ ಆದರೂ ರೂಂಮೇಟ್-ಗೆ ಕೂಡ ಅದರಲ್ಲ ಪಾಲಿರುತ್ತದೆ ಅಂತ ಧೈರ್ಯ...
ಕೊನೆಗೆ ಮೆಲ್ಲಗೆ ಇಬ್ಬರೂ ಎದ್ದು ಕೂತು ಕತ್ತಲಲ್ಲಿ ಶಬ್ದ ಎತ್ತಲಿಂದ ಬರುತ್ತಿದೆಯೆಂದು ಗಮನಿಸಿದೆವು... ಶಬ್ದ ಬರುತ್ತಿದ್ದುದು ರೂಮಿನ ಬದಿಯಲ್ಲಿ ಎತ್ತರದಲ್ಲಿದ್ದ ಸಾಮಾನು ಪೇರಿಸಿಡುವ ಜಾಗದಿಂದ. ಸರಿ, ಶಬ್ದ ಮಾಡದೆ ಸ್ವಲ್ಪ ಹೊತ್ತು ಕೂತವರು ಇದ್ದಕ್ಕಿದ್ದಂತೆ ಲೈಟ್ ಹಾಕಿದೆವು. ಶಬ್ದ ಬರುತ್ತಿದ್ದುದು ಅಲ್ಲಿ ಏರಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲದ ಸಂತೆಯೊಳಗಿಂದ. ಅದನ್ನು ಕೂಡಲೇ ಹಿಡಿಸೂಡಿಯಿಂದ ಕೆಳಗೆ ಹಾಕಿದೆವು. ನೋಡುವುದೇನು, ಅದರಲ್ಲಿನ ಪ್ಲಾಸ್ಟಿಕ್ ಚೀಲವೊಂದರಿಂದ ಜಿರಳೆಯೊಂದು ಹೊರಬರಲು ವಿಫಲಯತ್ನ ಮಾಡುತ್ತಾ ಪರಪರಾ ಪರಪರಾ ಅಂತ ಸೌಂಡ್ ಮಾಡುತ್ತಿತ್ತು!!

Tuesday, March 10, 2009

ಮತ್ತೆ ನೆನಪಾದ ಗಾಂಧೀಜಿ ...

ಗಾಂಧೀಜಿ ಹೆಚ್ಚಾಗಿ ನಮಗೆಲ್ಲ ನೆನಪಾಗುವುದು ಅಕ್ಟೋಬರ್ 2ಕ್ಕೆ... ಮತ್ತು ಒಂದೊಂದು ಸಾರಿ ಜನವರಿ 30ಕ್ಕೆ. ಆದರೆ ಈಸಾರಿ ಮಾತ್ರ ಕಾಲವಲ್ಲದ ಕಾಲದಲ್ಲಿ ಗಾಂಧಿ ಸುದ್ದಿಯಾಗಿದ್ದಾರೆ. ಮತ್ತು ನಾನು ಯೋಚಿಸಲು ತೊಡಗಿದ್ದೇನೆ, ಒಬ್ಬ ವ್ಯಕ್ತಿ ಜೀವಿಸುವುದು ಮತ್ತು ಅಮರನಾಗುವುದು ತನ್ನ ಯೋಚನೆಗಳ ಮೂಲಕವಾ, ಅಥವಾ ವಸ್ತುಗಳ ಮೂಲಕವಾ ಅಂತ.
------------------------------
SMALL IS BEAUTIFUL ಅಂತ ಒಂದು ಪುಸ್ತಕ ಇದೆ. It is - A STUDY OF ECONOMICS AS IF PEOPLE MATTERED. ಗಾಂಧೀಜಿಯ ಸರ್ವೋದಯ model of development, ಬುದ್ಧನ ಅರ್ಥಶಾಸ್ತ್ರ ಇತ್ಯಾದಿಗಳಿಂದ ಸ್ಫೂರ್ತಿ ಪಡೆದ ಬ್ರಿಟಿಷ್ ಲೇಖಕ ಇ.ಎಫ್. ಶೂಮೇಕರ್ ಎಂಬವರು ಬರೆದ ಪುಸ್ತಕ. 1973ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ನೆಲವನ್ನು ಹೇಗೆ ಉಪಯೋಗಿಸಬೇಕೆಂಬುದರಿಂದ ಹಿಡಿದು, ನ್ಯೂಕ್ಲಿಯರ್ ತಂತ್ರಜ್ಞಾನದವರೆಗೆ, sustainable economic development ಕುರಿತು ಹಲವಾರು ಲೇಖನಗಳಿವೆ. 30 ವರ್ಷದ ಹಿಂದೆ ಬರೆದಿದ್ದ ಈ ಪುಸ್ತಕದಲ್ಲಿರುವ ವಿಚಾರಗಳನ್ನು ಜಗತ್ತು ಅಂದೇ ಅರಗಿಸಿಕೊಂಡು ಆಚರಿಸಿದ್ದರೆ, ಇಂದು ನಾವು ಅನುಭವಿಸುತ್ತಿರುವ recession ಇರುತ್ತಿರಲಿಲ್ಲ. ಈ ಪುಸ್ತಕದ ಬಗ್ಗೆಯೇ ನಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ. (ನಾನು ಇದನ್ನು ಯಾರಿಗೋ ಗಿಫ್ಟ್ ಕೊಟ್ಟಿದ್ದೆ. ಅದು ಒಂದು ದಿನ ಎಲ್ಲೋ ಓದುವವರಿಲ್ಲದೆ ಅನಾಥವಾಗಿ ಬಿದ್ದಿದ್ದು ಕಂಡು, ನಂಗೆ ಎಲ್ಲಿಲ್ಲದ ಸಿಟ್ಟು ಬಂದು, ಅದನ್ನು ಮತ್ತೆ ತೆಗೆದುಕೊಂಡು ಬಂದು ನನ್ನ ಶೋಕೇಸ್-ನಲ್ಲಿ ಇಟ್ಟಿದ್ದೇನೆ, ಹಾಗೂ करो ज्यादा का इरादा ಅನ್ನುವ ಇಂದಿನ ಜನರೇಶನ್ನಿಗೆ SMALL IS BEAUTIFUL ಎಂಬ ಕಲ್ಪನೆಯೇ ಒಪ್ಪಿಕೊಳ್ಳಲು ಸಾಧ್ಯವಾಗದಂತಹುದು, ಗಾಂಧಿಯ ವಿಚಾರಧಾರೆಗಳು ಇಂದಿಗೆ ಅಪ್ರಸ್ತುತ ಅಂತ ಬಲವಾಗಿ ನಂಬಲು ಆರಂಭಿಸಿದ್ದೇನೆ.)
ಗಾಂಧೀಜಿ ಜತೆಗೆ ಬಹುಕಾಲವಿದ್ದ ಮದ್ರಾಸ್ ಮೂಲದ ಡಾ.ಜೆ.ಸಿ. ಕುಮಾರಪ್ಪ ಅವರು ಬರೆದ 'ಶಾಶ್ವತ ಅರ್ಥಶಾಸ್ತ್ರ' ಎಂಬ ಪುಸ್ತಕ ಕೂಡ ಗಾಂಧಿಯನ್ ಫಿಲಾಸಫಿಯ ತಳಹದಿಯಲ್ಲೇ ಬಹಳಷ್ಟು ವಿಚಾರಗಳನ್ನು ವಿವರಿಸುತ್ತದೆ. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್-ನವರು ಇದನ್ನು 1991ರಲ್ಲಿ ಪ್ರಕಟಿಸಿದ್ದರು. 1997ರಲ್ಲಿ ಇದು ಮರುಮುದ್ರಣ ಕಂಡಿತು, ಇತ್ತೀಚೆಗೆ ಯಾವುದೇ ಪುಸ್ತಕ ಅಂಗಡಿಯಲ್ಲೂ ಇದನ್ನು ನಾನು ಕಂಡೇ ಇಲ್ಲ. ಓದುವವರಿಲ್ಲದ ಮೇಲೆ ಮರುಮುದ್ರಣವಾದರೂ ಯಾಕಾಗಬೇಕು?
------------------------------
ಈಗ ಯಾವನೋ ಗಾಂಧೀಜಿ ಚಪ್ಪಲಿ, ಗಿಂಡಿ, ಕನ್ನಡಕ ಇತ್ಯಾದಿ ವಸ್ತುಗಳನ್ನು ಹರಾಜಿಗೆ ಹಾಕಿದಾಗ. ನಮಗೆಲ್ಲ ಗಾಂಧೀಜಿ ನೆನಪಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು ಎಂಬುದು ಬಿಟ್ಟರೆ ಇಂದಿನ ಜನರೇಶನ್ನಿಗೆ ಗಾಂಧಿ ಬಗ್ಗೆ ಏನೇನೂ ಗೊತ್ತಿರಲಿಕ್ಕಿಲ್ಲ. ಬೇಕೆಂದರೆ ಗಾಂಧೀಜಿ ಇಬ್ಬರು ಹುಡುಗಿಯರ ಜತೆಗೇ ಇರುತ್ತಿದ್ದರು, ಗಾಂಧೀಜಿ ದೇಶ ಒಡೆದರು ಎಂಬಂತಹ ಸೆನ್ಸೇಶನಲ್ ವಿಚಾರಗಳಿಗೆ ಬೇಕಾದಷ್ಟು ಪಬ್ಲಿಸಿಟಿ ಸಿಕ್ಕಿದೆ. ಆದರೆ, ದೇಶ ಹೇಗೆ ನಡೆಯಬೇಕು ಎಂಬುದರ ಬಗ್ಗೆ, ಸ್ವರಾಜ್ಯದ ಬಗ್ಗೆ, ಸ್ವಾವಲಂಬನೆಯ ಬಗ್ಗೆ, ಗ್ರಾಮಸ್ವರಾಜ್ಯದ ಬಗ್ಗೆ, ಸರ್ವೋದಯದ ಬಗ್ಗೆ ಗಾಂಧೀಜಿಯ ಪರಿಕಲ್ಪನೆಗಳು ಇಂದು ಯಾರಿಗೂ ಗೊತ್ತಿಲ್ಲ. ಗಾಂಧಿ ಎಂಬ ಚಾರಿತ್ರಿಕ ವ್ಯಕ್ತಿತ್ವದ ಧನಾತ್ಮಕ ಭಾಗವನ್ನು ಅರಿಯುವ ಅಗತ್ಯ ಇಂದು ಯಾರಿಗೂ ಕಾಣುತ್ತಿಲ್ಲ. ಇಂದು ಖಾದಿ ಡಿಸ್ಕೌಂಟಿನಲ್ಲಿ ಸಿಕ್ಕಿದರೂ ಕೊಳ್ಳುವವರು ಕಡಿಮೆ. ಇನ್ನು ಚರಕ? What's that?
9 ಕೋಟಿ ಕೊಟ್ಟು ಗಾಂಧೀಜಿಯ ವಸ್ತುಗಳನ್ನು ಕೊಂಡ ವಿಜಯ ಮಲ್ಯ ಕರ್ನಾಟಕದ ಹೆಮ್ಮೆಯ ಕುವರ, ಬೆಂಗಳೂರಿನ ಮಿಲಿಯಾಧಿಪತಿ. ಹೀಗೆ, ಇಂಡೈರೆಕ್ಟ್ ಆಗಿ ಭಾರತದ ಮರ್ಯಾದೆ ಉಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ... :-) ಆದರೆ ಬೆಂಗಳೂರಲ್ಲಿ ಒಂದು ಗಾಂಧಿ ಭವನವಿದೆ. ಶಿವಾನಂದ ಸರ್ಕಲ್ಲಿಗೆ ಸಮೀಪವಿದೆ. ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದರಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಹಿರಿಯರ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಈ ಗಾಂಧಿಭವನದಲ್ಲಿ ಏನೇನು ನಡೆಯುತ್ತದೆ, ಅದನ್ನು ನಾವು ಯಾವುದಾದರೂ ರೀತಿಯಲ್ಲಿ ಪ್ರೋತ್ಸಾಹಿಸಬಹುದಾ, ಊಹುಂ, ಯಾರಾದರೂ ಯೋಚಿಸುತ್ತೀವಾ? ಪರಿಣಾಮ, ಇಂದು ಗಾಂಧಿಭವನಕ್ಕೆ ಕೂಡ ಹೆಚ್ಚುಕಡಿಮೆ ಗಾಂಧೀಜಿಗಾದ ಗತಿಯೇ ಆಗಿದೆ. ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕ ನಿಧಿಯಂತೆ, ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘವಂತೆ, ಇವೆಲ್ಲ ಈಗಲೂ ಇವೆಯಾ, ಏನು ಮಾಡುತ್ತಿವೆ, ಯಾವುದೂ ಯಾರಿಗೂ ಗೊತ್ತಿರಲಿಕ್ಕಿಲ್ಲ, ನನಗೂ ಗೊತ್ತಿಲ್ಲ.
------------------------------
ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ಅವರ ವಸ್ತುಗಳನ್ನು ಯಾವನೋ ಕೊಂಡುಕೊಂಡು ವಾಪಸ್ ಭಾರತಕ್ಕೆ 'ದಾನ' ಮಾಡಿದಾಗ ಭಾರತದ 'ಮಾನ' ಉಳಿಯಿತೆಂದು ಸುಳ್ಳುಸುಳ್ಳೇ ಖುಷಿಪಡುತ್ತೇವೆ. ಗಾಂಧಿತಾತನ ಕನ್ನಡಕ, ಚಪ್ಪಲಿ ವಾಪಸ್ ಬಂದಿದ್ದರಿಂದ ಏನು ಉಪಯೋಗವಾಯಿತೋ ತಿಳಿಯದು. ಆದರೆ, ಚುನಾವಣೆಯ ನಡುವೆಯೇ ಐಪಿಎಲ್ ನಡೆಯುವುದೆಂದು ನಿರ್ಧಾರವಂತೂ ಆಗಿದೆ. ಭಾರತಕ್ಕೆ ಕೋಟಿಕೋಟಿ ಲಾಭವಾಗಲಿದೆ. (ಭಾರತದಲ್ಲಿ ಯಾರಿಗೆ ಲಾಭ ಅಂತ ಮಾತ್ರ ಕೇಳಬೇಡಿ ಪ್ಲೀಸ್, ಅದಕ್ಕೆ ನಂಗೆ ಉತ್ತರ ಗೊತ್ತಿಲ್ಲ... ಮ್ಯಾಚ್ ನೋಡುವ ಖುಷಿ ಬಿಟ್ಟರೆ ನನಗೂ ನಿಮಗೂ ಇದರಿಂದ ಏನು ಲಾಭ ಅಂತ ನಿಜಕ್ಕೂ ನಂಗೆ ಗೊತ್ತಿಲ್ಲ)
ವಿಜಯ ಮಲ್ಯ ಹಾಲಿ ರಾಜ್ಯಸಭಾಸದಸ್ಯರು ಅಂತಲೂ ನಾವೆಲ್ಲ ಮರೆತಿದ್ದೇವೆ. ಅವರು ಎಂಪಿ ಆಗಿ ಮಾಡಿದ ಕೆಲಸಗಳ ಲಿಸ್ಟ್ ಇಲ್ಲಿದೆ. http://mplads.nic.in/sslapps/mpladsworks/masterrep.htm. ಈ ವೆಬ್ ಸೈಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಎಷ್ಟು ಹಣ sanction ಮಾಡಿಸಿಕೊಂಡಿದ್ದಾರೆ ಎಂಬುದೂ ಲೆಕ್ಕಹಾಕಬಹುದು. ಇದು ಸುಮ್ಮನೆ, ಮಾಹಿತಿಗಾಗಿ.
------------------------------
ಗಾಂಧಿತಾತನ ಶರೀರದ ಕೊಲೆ 1948ರಲ್ಲೇ ಆಗಿತ್ತೇನೋ ನಿಜ, ಆದರೆ ಈಗ ಗಾಂಧಿಯ ವಿಚಾರಧಾರೆಗಳ ಕಗ್ಗೊಲೆ ಭಾರತದೆಲ್ಲೆಡೆ ನಡೆಯುತ್ತಿದೆ. ದಿನದಿನವೂ ನಮ್ಮೆಲ್ಲರೊಳಗಿನ ಗಾಂಧೀಜಿ ಸಾಯುತ್ತಲೇ ಇದ್ದಾರೆ. ನಾವೆಲ್ಲರೂ ನೋಡುತ್ತಲೇ ಇದ್ದೇವೆ ಹೊರತು ಏನು ಮಾಡಲೂ ಸಾಧ್ಯವಾಗಿಲ್ಲ.
ಎಷ್ಟಂದರೂ ನಮ್ಮದು ಹೇಳುವವರು ಕೇಳುವವರು ಇಲ್ಲದ ದೇಶ, ಯಾರಾದರೂ ಯಾವಾಗ ಏನು ಬೇಕಾದರೂ ಇಲ್ಲಿ ಮಾಡಬಹುದು. ದುಡ್ಡು ಇದ್ದವರು ಖಾಸಗಿ ಏರೋಪ್ಲೇನುಗಳಲ್ಲೇ ದೇಶದಿಂದ ದೇಶಕ್ಕೆ ಹಾರಿಕೊಂಡು ಸುಲಭವಾಗಿ ಹೀರೋ ಆಗಿ ಮೆರೆಯಬಹುದು, ದುಡ್ಡು ಬಿತ್ತಿ ಮತ್ತಷ್ಟು ದುಡ್ಡು ಬೆಳೆಯಬಹುದು, ದುಡ್ಡಿಲ್ಲದವರಿಗೆ ಇದ್ದೇ ಇದೆಯಲ್ಲ ಭಿಕ್ಷೆ ಬೇಡುವುದು, ಸ್ಲಂಗಳಲ್ಲಿ ಬದುಕುವುದು, ಅಥವಾ ಯಾರದೋ ತಲೆ ಒಡೆದು ಕೊಲೆ ಮಾಡಿ ದುಡ್ಡು ಎತ್ತುವುದು! ಇರಲಿ ಬಿಡಿ, ನಾವಾದರೂ ಏನು ಮಾಡಲಿಕ್ಕಾಗುತ್ತದೆ, ಗಾಂಧಿ ಪುಸ್ತಕಗಳು ಸಿಕ್ಕಿದರೆ ಶೋಕೇಸಿನಲ್ಲಿಡೋಣ, ಚಪ್ಪಲಿ, ಕನ್ನಡಕ ಸಿಕ್ಕಿದರೆ ಮ್ಯೂಸಿಯಂನಲ್ಲಿಡೋಣ. ಗಾಂಧಿ ವಿಚಾರಗಳು ಯಾರಿಗೆ ಬೇಕು? He's not relevant anymore!

Saturday, March 7, 2009

ದಾನೇದಾನೇಪೇ ಲಿಖಾ ಹೋತಾ ಹೈ...

 ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು... :-)
ಬಹಳ ದಿನದ ನಂತರ ಕಳೆದ ವಾರ ನಂಗೂ ನನ್ನ ರೂಂಮೇಟ್-ಗೂ ಒಟ್ಟಿಗೆ ಮಾರ್ನಿಂಗ್ ಶಿಫ್ಟ್ ಬಿದ್ದಿತ್ತು. ಮಾಮೂಲಾಗಿ ನಾನು  ಆಫೀಸಿಗೆ ಹೋಗುವುದು ಬೆಳಿಗ್ಗೆ 7.30ಕ್ಕೆ. ಆದರೆ ನಿನ್ನೆ ಬೆಳಿಗ್ಗೆ ಆಫೀಸಿಗೆ ಮಾತ್ರ ರಾತ್ರಿ ತನಕ ಆಫೀಸಲ್ಲಿರಬೇಕಾದ ಕಾರಣ ಸ್ವಲ್ಪ ಲೇಟ್ ಆಗಿ ಹೋಗ್ಬೇಕಿತ್ತು. ರೂಂಮೇಟ್ ಬೇಗ ಎದ್ದು ಚಪಾತಿ ಮಾಡಿದಳು. ಹಿಂದಿನ ದಿನ ಮಂಗಳೂರು ಸ್ಟೋರಿನಿಂದ  ತಂದ ಬ್ರಾಹ್ಮಿ (ಒಂದೆಲಗ) ಚಟ್ನಿ ಮಾಡಿ ಬಾಕ್ಸಿನಲ್ಲಿ ಹಾಕಿಕೊಂಡು 7.30ಕ್ಕೆ ಹೊರಟು ಹೋದಳು. ನಾನು ನಿಧಾನಕ್ಕೆದ್ದು 9ಕ್ಕೆ ಹೊರಟರೆ ಸಾಕಿತ್ತು.
ಗಂಟೆ 9.10 ಆಗಿತ್ತು. ಇನ್ನೂ ನಾನು ಮನೆಯಿಂದ ಹೊರಟಿರಲಿಲ್ಲ, ಆಗ ನನ್ನ ರೂಂಮೇಟ್ ಫೋನ್ ಮಾಡಿದಳು, ಚಟ್ನಿ ಮರೆತು ಬಂದಿದ್ದೇನೆ, ತರುತ್ತೀರಾ ಅಂತ ಕೇಳಿದಳು. ಆಯಿತು, ಅಂತ ಒಪ್ಪಿ, ಚಿಕ್ಕ ಬಾಕ್ಸಿನಲ್ಲಿ ಚಟ್ನಿ ಹಾಕಿ ತಗೊಂಡು ಆಫೀಸಿಗೆ ಹೊರಟೆ. ಬಸ್ಸಿನಲ್ಲಿ ಹೋಗಲು ಉದಾಸೀನವಾದ ಕಾರಣ ಯಾವುದೋ ಆಟೋ ನಿಲ್ಲಿಸಿ ಹತ್ತಿಕೊಂಡೆ. ಬ್ಯಾಗಿನಲ್ಲಿ ಚಟ್ನಿ ಇಡುವ ಬದಲು ನನ್ನ ಬದಿಯಲ್ಲಿ ಇಟ್ಟುಕೊಂಡು ಕೂತೆ. 
ಆಟೋ ಮೀಟರ್ ಯದ್ವಾತದ್ವಾ ಓಡುತ್ತಿದ್ದುದನ್ನೇ ನೋಡುತ್ತ ಕುಳಿತೆ. ಆಟೋದಲ್ಲಿ ಹೋಗುವಾಗ ಇದು ಮಾಮೂಲಾದ ಕಾರಣ ದಾರಿಯಲ್ಲೇ ಮೀಟರ್ ಜಾಸ್ತಿ ಓಡುತ್ತಿದೆ ಅಂತ ಹೇಳಿ ಕೆಟ್ಟವಳಾಗುವ ಅಭ್ಯಾಸ ಬಿಟ್ಟುಬಿಟ್ಟಿದ್ದೇನೆ. ಸರಿಯಾಗಿ ನಲುವತ್ತಮೂರು ರೂಪಾಯಿ ಎಣಿಸಿ ಕೈಲಿ ಹಿಡಿದುಕೊಂಡೆ. ಇಳಿದ ಮೇಲೆ ಅದನ್ನು ಕೊಟ್ಟು ತಿರುಗಿ ನೋಡದೇ ಆಫೀಸಿನೊಳಗೆ ಹೋಗುವುದು ಅಂತ ಪ್ಲಾನ್ ಹಾಕಿದೆ. ಒಂದು ವೇಳೆ  ಡ್ರೈವರ ಎದುರು ಮಾತನಾಡಿದರೆ ಆತನಿಗೆ ಹೇಗೆ ದಬಾಯಿಸಬೇಕು ಅಂತಲೂ ಆಭ್ಯಾಸ ಮಾಡಿಕೊಂಡೆ. 
ಆಫೀಸು ಬಂತು. ಪ್ಲಾನ್ ಮಾಡಿದ ಹಾಗೆಯೇ ನಲುವತ್ತಮೂರು ರೂಪಾಯಿ ಆತನ ಕೈಲಿಟ್ಟು ಆತ ಎಣಿಸುವುದಕ್ಕೆ ಕಾಯದೆ ಕೆಳಗಿಳಿದೆ, ನನ್ನ ಪಾಡಿಗೆ ನಾನು ಆಫೀಸಿನ ಮೆಟ್ಟಿಲು ಹತ್ತಿದೆ. ಬ್ಯಾಗ್ ಇಟ್ಟು ಡೆಸ್ಕಿಗೆ ಬರುತ್ತಿದ್ದ ಹಾಗೇ ರೂಂಮೇಟ್ ಕಾಣಿಸಿದಳು, ಆಗಷ್ಟೇ ನಂಗೆ ಚಟ್ನಿ ನೆನಪಾಗಿದ್ದು. ಮೀಟರ್ ಜಾಸ್ತಿ ಓಡಿದೆ ಅನ್ನುವ ತಲೆಬಿಸಿಯಲ್ಲಿ ನನ್ನ ಬದಿಯಲ್ಲಿಟ್ಟ ಬಾಕ್ಸ್ ಮರೆತು ಬಿಟ್ಟಿದ್ದೆ, ಹಾಗೇ ಎದ್ದುಕೊಂಡು ಬಂದಿದ್ದೆ. ಅವಳಿಗೆ ಹೇಳಿದೆ, ಚಟ್ನಿ ಆಟೋನಲ್ಲಿ ಹೋಯಿತು ಅಂತ. ಕೊನೆಗೆ ಡ್ರೈವರ್ ತಿನ್ನಲಿ ಬಿಡು ಅಂತ ಇಬ್ಬರೂ ನಕ್ಕು ಸುಮ್ಮನಾದೆವು.
ಒಂದು ಗಂಟೆ ಕಳೆದ ನಂತರ ರಿಸೆಪ್ಷನ್-ನಿಂದ ಕರೆ ಬಂತು, ನಿಮಗೊಂದು ಬಾಕ್ಸ್ ತಂದುಕೊಟ್ಟುಹೋಗಿದ್ದಾರೆ ಯಾರೋ, ಬಂದು ಕಲೆಕ್ಟ್ ಮಾಡಿ ಅಂತ. ಸರಿ, ಏನಪ್ಪಾ ಅಂತ ಹೋಗಿ ನೋಡಿದರೆ, ಅದೇ ಚಟ್ನಿ ಬಾಕ್ಸ್..! :-) ಆಟೋ ಡ್ರೈವರ್ ಸೆಕ್ಯೂರಿಟಿಯವರ ಹತ್ತಿರ ಅದನ್ನು ಕೊಟ್ಟುಹೋಗಿದ್ದನಂತೆ. ಚಟ್ನಿ ಸಿಕ್ಕಿತಲ್ಲ, ನನ್ನ ರೂಂಮೇಟ್ ಖುಷಿಯಾದಳು. ಅವಳ ಹಣೆಯಲ್ಲಿ ಆ ಚಟ್ನಿ ತಿನ್ನುವುದು ಅಷ್ಟು ಗಟ್ಟಿಯಾಗಿ ಬರೆದಿತ್ತು ಅನ್ಸುತ್ತೆ... ಇದನ್ನೇ ಹೇಳ್ತಾರೇನೋ, ದಾನೇದಾನೇಪೇ ಲಿಖಾ ಹೋತಾ ಹೈ.. ಅಂತ...! :-)
-----------------
ಕೆಲ ತಿಂಗಳ ಹಿಂದೆ ಇದೇ ರೀತಿ ಕ್ಯಾಮರಾ ಯಾವುದೋ ಆಟೋನಲ್ಲಿ ಮರೆತು ಎದ್ದುಬಂದಿದ್ದೆ. ಆ ಆಟೋದ ಡ್ರೈವರ್ ಕೂಡ ಇಷ್ಟೇ ಒಳ್ಳೆಯವನಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸ್ತಿದೆ. ಈಗ ನಂಗೆ ಕ್ಯಾಮರಾ ತಗೊಳ್ಳಲಿಕ್ಕೆಯೇ ಭಯ ಬಿಡ್ತಿಲ್ಲ, ಎಲ್ಲಾದ್ರೂ ಕಳೆದುಹಾಕಿಬಿಡ್ತೀನಿ ಅಂತ.