Tuesday, November 9, 2021

ಹಾಗೇ ಇರಲಿ ಬಿಡು...

ನನ್ನ ನಿನ್ನ ನಡುವಿರುವುದು

ಒಂದು ದೊಡ್ಡ ಆನೆ-

ಯಾಗಿದ್ದರೆ ಏನು ಮಾಡುವುದು? 

ಮುಟ್ಟುವುದು ಬೇಡ - 

ನಾನು-ನೀನು ತಲೆಗೊಂದು ಮಾತಾಡಿ

ಆನೆಯ ಇರುವಿಕೆಯೇ ಹಾಳಾದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದೊಂದು

ದೊಡ್ಡ ಬಣ್ಣದ ಗುಳ್ಳೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ-

ಮುಟ್ಟಿದರೆ ಗುಳ್ಳೆ ಒಡೆದು 

ಕಣ್ಣೊಳಗಣ ಬಣ್ಣ ಅಳಿಸಿಹೋದೀತು...

ಹಾಗೇ ಇರಲಿ ಬಿಡು


ನನ್ನ ನಿನ್ನ ನಡುವಿರುವುದು 

ದೊಡ್ಡದೊಂದು ಸೊನ್ನೆ-

ಯಾಗಿದ್ದರೆ ಏನು ಮಾಡುವುದು?

ಮುಟ್ಟುವುದು ಬೇಡ ಬಿಡು -

ಸೊನ್ನೆಯೊಳಗಿನ ಸೆಳೆತಕ್ಕೆ

ನಾನೂ ನೀನೂ ಸೊನ್ನೆಯಾದೇವು...

ಹಾಗೇ ಇರಲಿ ಬಿಡು.

Thursday, August 5, 2021

ಅಜ್ಜನ ಮೈಕ್


ನಾನು ಆಗ ತುಂಬಾ ಚಿಕ್ಕವಳಿದ್ದೆ. ನಮ್ಮ ಮನೆಯ ಅಟ್ಟವೆಂದರೆ ನನಗೆ ಅದೇನೋ ಪ್ರೀತಿ. ಅಲ್ಲಿ ನಮ್ಮಜ್ಜಿ ಅಜ್ಜ ಒಟ್ಟು ಹಾಕಿದ ಸಾಮಾನು ಏನೇನಿದೆ ಅಂತ ತೆಗೆದು ನೋಡುವ ಚಾಳಿ ನನಗೆ.
ಅಟ್ಟದಲ್ಲಿ ಒಂದು ಹಳೆಯ ಕಬ್ಬಿಣದ ತಗಡಿನ ಕೈಯಲ್ಲಿ ಹಿಡಿಯುವಂತಹ ಧ್ವನಿವರ್ಧಕ ಬಹಳ ಸಮಯದಿಂದ ಬಿದ್ದಿತ್ತು. ನಾನು ಒಂದು ದಿನ ಈ ಅಟ್ಟದಲ್ಲಿ ನಿಧಿ ಹುಡುಕುವ ಸಾಹಸಕ್ಕಿಳಿದಾಗ ನನ್ನ ಕೈಗೆ ಈ ಮೈಕ್ ಸಿಕ್ಕಿತು. ಕುತೂಹಲಕ್ಕೆ ಇದೇನು ಅಂತ ಕೇಳಿದಾಗ ಅಜ್ಜ ಅಜ್ಜಿ ಅಪ್ಪ ಎಲ್ಲ ಅದರ ಕಥೆ ಹೇಳಿದರು.
ನಮ್ಮಜ್ಜ ಆ ಮೈಕನ್ನು ಹಿಡಿದುಕೊಂಡು ಜೊತೆಗೆ ಹಲವಾರು ಚಳವಳಿಗಾರರನ್ನು ಕಟ್ಟಿಕೊಂಡು ಕುಂಬಳೆ ಮತ್ತು ಉಪ್ಪಳ ಇತ್ಯಾದಿ ಪುಟ್ಟ ಪಟ್ಟಣಗಳಲ್ಲಿ ಕಾಸರಗೋಡು ಕನ್ನಡ ನಾಡು, ಕನ್ನಡ ಮಕ್ಕಳ ತವರೂರು ಎಂದು ಕೂಗುತ್ತ ಜಾಥಾ ಹೋಗಿದ್ದರಂತೆ.


ಅದು ಎಪ್ಪತ್ತು-ಎಂಭತ್ತರ ದಶಕ. ಮಹಾಜನ ವರದಿ ಜಾರಿ ಮಾಡಬೇಕು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಚಳವಳಿಗಳು ನಡೆಯುತ್ತಿದ್ದ ಕಾಲ. ನಮ್ಮಜ್ಜ ಜೀವನ ಪರ್ಯಂತ ಒಂದು ರೀತಿಯ ಸಾಮಾಜಿಕ ಕಳಕಳಿ ಕಾಪಾಡಿಕೊಂಡೇ ಬಂದವರು. ಜೀವನಕ್ಕೆ ಹೋಟೆಲ್ ನಡೆಸುತ್ತಿದ್ದರು.
ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸಿದಾಗ ಅಜ್ಜ ಕರ್ನಾಟಕದಿಂದ ತರಬೇಕಾದಂತಹ ಅಗತ್ಯ ಸಾಮಗ್ರಿಗಳನ್ನು ಅಡ್ಡದಾರಿಗಳಲ್ಲಿ ಕದ್ದು ತಂದು ಅಗತ್ಯ ಇರುವವರಿಗೆ ಹಂಚುತ್ತಿದ್ದರಂತೆ. ಅದಕ್ಕೋ ಅಥವಾ ಅವರ ಹೋಟೆಲಿಗೋ ಗೊತ್ತಿಲ್ಲ, ಅವರ ಹೆಸರಿಗೆ ಊರಿನ ಜನ 'ಸಪ್ಲೈ' ಅಂತ ಸೇರಿಸಿ ಸಪ್ಲೈ ಗೋವಿಂದಣ್ಣ ಅಂತ ಕರೆಯುತ್ತಿದ್ದರು.
ಕಾಸರಗೋಡು ಕರ್ನಾಟಕಕ್ಕೆ ಸೇರುವ ತನಕ ಗಡ್ಡ ಬೋಳಿಸುವುದಿಲ್ಲ ಅಂತ ಶಪಥ ಮಾಡಿ ಮೊಣಕಾಲುದ್ದದ ಗಡ್ಡ ವರ್ಷಗಳ ಕಾಲ ಬಿಟ್ಟಿದ್ದರು ನನ್ನಜ್ಜ.
ಕೊನೆಗೊಂದು ದಿನ ರಾಮಕೃಷ್ಣ ಹೆಗಡೆಯವರು ಜನತಾದಳದಿಂದ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಮಯ ಅವರೆದುರು ಜನರ ಗುಂಪುಕಟ್ಟಿಕೊಂಡು ಬೆಂಗಳೂರಿಗೆ ಹೋಗಿ ಅವರಿಗೆ ತೊಂದರೆಗಳನ್ನೆಲ್ಲ ತಿಳಿಸಿ ಹೇಳಿ ಅವರಿಂದ 'ಆಯಿತು, ವರದಿ ಜಾರಿ ಮಾಡಿಸಲು ಪ್ರಯತ್ನ ಮಾಡುತ್ತೇವೆ' ಅಂತ ಆಶ್ವಾಸನೆ ಪಡೆದುಕೊಂಡು ಬಂದರು. ಆಮೇಲೆ ಮಂತ್ರಾಲಯಕ್ಕೆ ಹೋಗಿ ಗಡ್ಡ ಬೋಳಿಸಿಕೊಂಡರು.
*****
ಆಗೆಲ್ಲ ನನಗೆ ಅವರೇನು ಮಾಡಿದ್ದು ಯಾಕೆ ಮಾಡಿದ್ದು ಎಂದು ಅರ್ಥವಾಗುವ ಕಾಲವಾಗಿರಲಿಲ್ಲ. ಅಜ್ಜ ನಾನು 11 ವರ್ಷದವಳಿರಬೇಕಾದರೆ ತೀರಿಕೊಂಡರು. ಆಮೇಲೆ ಬೆಳೆಯುತ್ತಾ ಬೆಳೆಯುತ್ತಾ 10ನೇ ತರಗತಿಗೆ ಬಂದಾಗ ನಿಜವಾದ ಸಮಸ್ಯೆ ಅರ್ಥವಾಗಲು ಶುರುವಾಯಿತು.
ನಾನು ಓದಿದ್ದು ಸರಕಾರಿ ಶಾಲೆಯಲ್ಲಿ. ನಮಗೆ ಪಾಠಗಳೆಲ್ಲ ಕನ್ನಡದಲ್ಲಿಯೇ ಇರುತ್ತಿತ್ತು. ಮಲಯಾಳಂ ಒಂದು ಭಾಷೆಯಾಗಿಯೂ ಕೂಡ ಕಲಿಯುವ ಅವಕಾಶವಿರಲಿಲ್ಲ. ರಜೆಯಲ್ಲಿ ಕರ್ನಾಟಕದಲ್ಲಿರುವ ಅಜ್ಜನ ಮನೆಗೆ ಹೋದಾಗ ಅಲ್ಲಿಯ ಮಕ್ಕಳ ಪಾಠಪುಸ್ತಕಗಳನ್ನು ತೆಗೆದು ಓದುವ ಅಭ್ಯಾಸವಿದ್ದ ನನಗೆ ಕೇರಳದ ಪಠ್ಯಕ್ರಮ ತುಂಬಾ ಮುಂದುವರಿದಿದೆ ಎಂದು ಅನಿಸಿತ್ತು.
ಉದಾಹರಣೆಗೆ ಹೇಳುವುದಾದರೆ. ನಾನು ಸಂಸ್ಕೃತ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದೆ. ನಾನು ಸಂಸ್ಕೃತ ಪರೀಕ್ಷೆ ಬರೆಯಬೇಕೆಂದರೆ ಸಂಸ್ಕೃತದಲ್ಲಿಯೇ ಬರೆಯಬೇಕಿತ್ತು. ಕರ್ನಾಟಕದಲ್ಲಿ ಸಂಸ್ಕೃತ ಒಂದು ಸ್ಕೋರಿಂಗ್ ಸಬ್ಜೆಕ್ಟ್ ಅಂತ ಪರಿಗಣನೆಯಾಗಿತ್ತು. ಅದನ್ನು ಕನ್ನಡದಲ್ಲಿ ಬರೆದು ಕೂಡ ಪರೀಕ್ಷೆ ಪಾಸಾಗಬಹುದಿತ್ತು ಅಂತ ಕೇಳಿದಾಗ ನನಗೆ ಅದರಷ್ಟು ವಿಚಿತ್ರ ಇನ್ಯಾವುದೂ ಕಾಣಿಸಿರಲಿಲ್ಲ.
ಕರ್ನಾಟಕದಲ್ಲಿ ಲೆಕ್ಕದ, ವಿಜ್ಞಾನದ ಪಾಠಗಳಲ್ಲಿ ಎಂಟನೇ ತರಗತಿಗೆ ಬರುವ ಪಾಠಗಳು ನಾವು ಏಳನೇ ತರಗತಿಯಲ್ಲೇ ಕಲಿತಿರುತ್ತಿದ್ದೆವು—ಹೀಗೆಲ್ಲ ನೋಡಿ ನನಗೆ ಕೇರಳವೇ ಒಂಥರಾ ಶ್ರೇಷ್ಠ ಎಂಬ ಭಾವನೆ ಅವಾಗಿಂದಲೇ ತಲೆಯಲ್ಲಿ ಕೂತುಬಿಟ್ಟಿತು.
ಆದರೆ ಒಂದು ಸಮಸ್ಯೆ ಏನಾಗಿತ್ತೆಂದರೆ, ನಾವು ಕಾಲೇಜಿಗೆ ಕೇರಳದಲ್ಲಿ ಹೋಗಬೇಕೆಂದರೆ ಕಾಸರಗೋಡು ಪಟ್ಟಣಕ್ಕೆ ಹೋಗಬೇಕಿತ್ತು. ಆಗ ಅವಾಗವಾಗ ಪ್ರತಿಭಟನೆಗಳು, ಅಲ್ಲಿ ಇಲ್ಲಿ ಕೋಮು ಗಲಭೆಗಳು ಆಗಿ ಬಸ್ ಸಂಚಾರಗಳು ಏಕಾಏಕಿ ನಿಲ್ಲುತ್ತಿದ್ದ ಕಾಲ. ಹಾಗಾಗಿ ಹೆಚ್ಚಿನ ಅಪ್ಪ ಅಮ್ಮಂದಿರಿಗೆ ಮಕ್ಕಳನ್ನು ಕರ್ನಾಟಕದಲ್ಲಿದ್ದ ಕಾಲೇಜುಗಳಿಗೆ ಕಳಿಸುವ ಪರಂಪರೆ ಬೆಳೆದು ಬಂದಿತ್ತು.
ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಭಾಷೆ ಬರದಿರುವುದು. ಮಲಯಾಳ ಗೊತ್ತಿಲ್ಲದೆ ಅಲ್ಲಿನ ಕಾಲೇಜುಗಳಿಗೆ ಹೋಗಿ ಸೇರಿಕೊಳ್ಳುವುದರಿಂದ ಆಗಬಹುದಾದ ಸಮಸ್ಯೆಗಳ ಅರಿವಿದ್ದುದರಿಂದಲೇ ಸುಮ್ಮನೆ ಕರ್ನಾಟಕಕ್ಕೆ ಸೇರಿಸುತ್ತಿದ್ದರು. ನಾನು, ತನ್ನ ತಂಗಿ, ತಮ್ಮ ಮೂರೂ ಜನ ಕರ್ನಾಟಕದ್ದೇ ಬೇರೆ ಬೇರೆ ಕಾಲೇಜುಗಳಲ್ಲಿ ಕಲಿತೆವು, ಬದುಕು ಕಟ್ಟಿಕೊಂಡೆವು.
ನಮ್ಮ ಹಾಗೆ ಜಾತಿ ಮತ್ತು ಮೆರಿಟ್ ಎರಡರ ಬಲ ಇಲ್ಲದ ನಮ್ಮೂರಿನ ಇತರ ಹುಡುಗರು ಹುಡುಗಿಯರು ಹೆಚ್ಚು ಓದದೇ ಅದೇ ಊರಲ್ಲಿಯೇ ಕೂಲಿ ನಾಲಿ ಮಾಡುವುದು, ಇಲ್ಲ ಮಂಗಳೂರು ಕಡೆಗೆ ಹೋಗಿ ಏನಾದರೂ ಮಾಡುವುದು ಮಾಡುತ್ತಿದ್ದರು. ಹಲವಾರು ಜನ ದುಬೈ ಕಡೆಗೆ ಮುಖ ಮಾಡಿ ಹೋಟೆಲ್ ನಲ್ಲಿ ಪಾತ್ರೆ ತೊಳೆಯುವುದು ಸಪ್ಲೈಯರ್ ಈ ಥರದ ಕೆಲಸಗಳಿಗೆ ಹೋಗಿ ಸೇರಿಕೊಳ್ಳುತ್ತಿದ್ದರು.
ನಮ್ಮಪ್ಪ ಕೇರಳದಲ್ಲಿ ಪಿಯುಸಿ ತನಕ ಅದು ಹೇಗೋ ಕಲಿತರೂ ಅಲ್ಲಿ ಕೆಲಸ ಸಿಗುವಷ್ಟು ಏನೂ ಮಾಡಲಾಗದೆ ಕೊನೆಗೆ ಮೈಸೂರಲ್ಲಿ ಹಿಂದಿ ಅಧ್ಯಾಪನದ ಕೋರ್ಸ್ ಮಾಡಿ ಹಿಂದಿ ಟೀಚರ್ ಆಗಿ ಗುತ್ತಿಗೆ ಕೆಲಸಕ್ಕೆ ಕರ್ನಾಟಕದಲ್ಲಿ ಸೇರಿಕೊಂಡರು. ಅವರಿದ್ದಿದ್ದು ಸುಳ್ಯದ ಗುತ್ತಿಗಾರಿನ ಹತ್ತಿರದ ಮಡಪಾಡಿ ಎಂಬ ಕುಗ್ರಾಮವಾಗಿದ್ದು, ನಮಗೆ ಅಪ್ಪನ ಮುಖ ವಾರಕ್ಕೋ 15 ದಿನಕ್ಕೋ ಒಂದು ಸಲ ಮಾತ್ರ ಕಾಣಲು ಸಿಗುತ್ತಿತ್ತು.
*******
ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇರಳ ಸರಕಾರ ಕನ್ನಡಲ್ಲಿಯೇ ಕಾಸರಗೋಡಿನ ಶಾಲೆಗಳಲ್ಲಿ ಶಿಕ್ಷಣ ಬಹುಕಾಲ ಕೊಟ್ಟಿತ್ತು. ಆಮೇಲೆ ನಿಧಾನವಾಗಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಬರಲು ಆರಂಭವಾದ ಮೇಲೆ ಪರಿಸ್ಥಿತಿ ಬದಲಾಗಲು ಆರಂಭವಾಯಿತು.
ನನ್ನ ನಂತರದ ತಲೆಮಾರಿನವರು ಕೇರಳದಲ್ಲಿಯೇ ಓದಿ ಕೆಲಸ ಗಳಿಸಿಕೊಂಡು ಜೀವನ ನಡೆಸುತ್ತಿರುವುದು ಈಗ ಅಪರೂಪವೇನಲ್ಲ, ಆದರೆ ತುಂಬಾ ಇಲ್ಲ. ಬಹಳಷ್ಟು ಜನ ಚಿಕ್ಕ ಪುಟ್ಟ ಸ್ವ-ಉದ್ಯೋಗಗಳು ಮತ್ತು ಕೃಷಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಕಿತ್ತು ತಿನ್ನುವ ಬಡತನ ಎಂಬುದು ನಿಮಗೆ ಕಾಸರಗೋಡಿನಲ್ಲಿ ಅಷ್ಟೇನೂ ಕಾಣುವುದಿಲ್ಲ. ಸಹಜವಾದ ಪ್ರಕೃತಿ ಮತ್ತು ಕೃಷಿಭೂಮಿಯ ಪಾಲು ಇದರಲ್ಲಿ ಹೆಚ್ಚು.
ಕೃಷಿ ಕೆಲಸಗಳಿಗೆ ದಿನನಿತ್ಯ ಮಜೂರಿ ಮೇಲೆ ಕೆಲಸ ಮಾಡುವವರು ಸಿಗುವುದು ಕಷ್ಟ. ಸಿಕ್ಕಿದರೂ ದಿನಗೂಲಿ ತುಂಬಾ ಜಾಸ್ತಿ. ಆಮೇಲೆ ಸರಕಾರದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಊರುಗಳಿಗೆ ಬೇಕಾದ ಮತ್ತು ಕಮ್ಯುನಿಟಿ ಕೆಲಸಗಳು ಅನ್ನಬಹುದಾದ ಕೃಷಿ ಕೆಲಸಗಳನ್ನು ಮಾಡಿಸಿಕೊಳ್ಳಲು ಕೂಡ ಅನುಕೂಲವಾಗುತ್ತದೆ. ಇದರಲ್ಲಿ ಜಾತಿಭೇದವಿಲ್ಲದೆ ಕೂಲಿಗೆ ಸೇರಿದ ಎಲ್ಲರಿಗೂ ಸಂಬಳ ಸಿಗುತ್ತದೆ.
ಈಗ ಕಲಿಯುತ್ತಿರುವ ಮಕ್ಕಳಿಗೆ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಎಂದೋ ಆಗಬೇಕಿದ್ದ ಕೆಲಸ ಇಂದು ಆಗುತ್ತಿದೆ. ತಂಗಿಯ ಮಗ ಪಿಯುಸಿ ಓದಲು ಬೇರೆ ಬೇರೆ ದೊಡ್ಡ, ಒಳ್ಳೆಯ ಕಾಲೇಜಿನ ಕನಸು ಕಾಣುತ್ತಿದ್ದವನು ಕೋವಿಡ್ ಬಂದಕಾರಣ ಏನೂ ಮಾಡಲಾಗದೆ ಈಗ ಮನೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಸರಕಾರಿ ಕಾಲೇಜಿನಲ್ಲಿ ಪಿಯುಸಿಗೆ ಸೇರಿಕೊಂಡು ಮನೆಯಲ್ಲಿಯೇ ಪಾಠಗಳನ್ನು ಮಲಯಾಳಂ ಮತ್ತೆ ಇಂಗ್ಲಿಷ್ ಭಾಷೆಗಳಲ್ಲಿ ಆನ್ಲೈನಿನಲ್ಲಿ ಕಲಿಯುತ್ತಿದ್ದಾನೆ. ಪ್ರೈವೇಟ್ ಬ್ರಾಂಡ್ ಬ್ಯಾಂಡ್ ಮತ್ತು ಇಂಟರ್ ನೆಟ್ ಕಾಸರಗೋಡಿನ ಹಳ್ಳಿ ಹಳ್ಳಿಗೂ ಬಂದಿದೆ, ಎಲ್ಲಾ ಮಕ್ಕಳಿಗೂ ತಲುಪಿದೆ.
*******
ಕಾಸರಗೋಡಿನ ಸಮಸ್ಯೆಗಳೆಂದು ನೋಡಿದರೆ ಮುಖ್ಯವಾಗಿ ಇಂದು ಇರುವುದು - ದೊಡ್ಡ ಸ್ಪೆಶಾಲಿಟಿ ಆಸ್ಪತ್ರೆಗಳು ಮತ್ತು ದೊಡ್ಡ ಕಾಲೇಜುಗಳು ಜನಕ್ಕೆ ಹತ್ತಿರವಾಗಿಲ್ಲ, ಮತ್ತು ಬೇಕಾದಷ್ಟಿಲ್ಲ. ಯಾರಿಗಾದರೂ ಹೃದಯದ ತೊಂದರೆ, ಕ್ಯಾನ್ಸರ್, ಪಾರ್ಶ್ವವಾಯು ಇತ್ಯಾದಿ ಬಂದರೆ ಕರ್ನಾಟಕದ ಮಂಗಳೂರೇ ಗತಿ. ಒಳ್ಳೆಯ ಕಾಲೇಜು ಬೇಕಂದರೂ ಇದೇ ಕಥೆ.
ನನ್ನ ಅಜ್ಜ ಚಳುವಳಿಕಾರರಾಗಿದ್ದ ಸಮಯ ಮಹಾಜನ ವರದಿ ಬಂದು 20 ವರ್ಷಗಳೂ ಆಗಿರಲಿಲ್ಲ ಮತ್ತು ಜನಕ್ಕೆ ಇಂದಲ್ಲ ನಾಳೆ ಕರ್ನಾಟಕಕ್ಕೆ ಸೇರುತ್ತೇವೆ ಎಂಬ ಕನಸಿತ್ತು.
ಇಂದಿಗೆ ವರದಿ ಬಂದು 50 ವರ್ಷಗಳ ಮೇಲಾಗಿದೆ. ಆ ಕಾಲದ ಜನರ ಭಾವನೆಗಳಿಗೆ ಕೇರಳ ಸರಕಾರ ಕೊಟ್ಟ ಬೆಲೆಗೆ ಎರಡು ತಲೆಮಾರಿನ ಮಕ್ಕಳು ಪಟ್ಟ ಕಷ್ಟಗಳ ಮೂಲಕ ಕಪ್ಪ ಕಟ್ಟಬೇಕಾಯ್ತು. ಇದನ್ನೆಲ್ಲ ನೋಡಿದಮೇಲೂ ಹಲವಾರು ಹಳಬರ ಎದೆಯಲ್ಲಿ ಈ
ಕರ್ನಾಟಕಕ್ಕೆ ಸೇರುವ ಕನಸಿನ್ನೂ ಜೀವಂತವಿದೆ ಅಂತ ಇತ್ತೀಚೆಗೆ ಅರ್ಥವಾಯ್ತು.
ಇದಕ್ಕೆ ಗಾಳಿ ಹಾಕುವವರು ಕರ್ನಾಟಕದ ಇನ್ಯಾವುದೋ ಮೂಲೆಯಲ್ಲಿ ಕುಳಿತುಕೊಂಡು ಸಮಸ್ಯೆಯ ಹಿಂದು ಮುಂದಿನ ಅರಿವಿಲ್ಲದ ಮಾತಿನಮಲ್ಲರು. ಇದರಿಂದಾಗಿ ನಿಜ ಸಮಸ್ಯೆ ಎಲ್ಲೋ ಹೋಗಿ ಕೇರಳದವರು ಹೆಸರು ಬದಲಾಯಿಸಲು ಪ್ರಯತ್ನಿಸಿದರು ಎಂಬಂತಹ ಸುದ್ದಿಗಳು ಅಗತ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತವೆ.
ಕೆಲವು ರಾಜಕೀಯ ವಲಯಗಳು ಕೂಡ ಇವುಗಳಿಗೆ ಗಾಳಿ ಹಾಕಿ ಬೆಂಕಿ ಹತ್ತಿಸಲು ನೋಡುತ್ತವೆ ಯಾಕೆಂದರೆ ಅಲ್ಲಿರುವ ಎಡಪಕ್ಷದ ಸರಕಾರದ ಕೆಲಸಕಾರ್ಯದಲ್ಲಿ ಕಲ್ಲು ಹುಡುಕಲು ಇವೆಲ್ಲಾ ಬೇಕಾಗುತ್ತದೆ.
*******
ಈ ವಾರ ಕೋವಿಡ್ ಕೇಸುಗಳು ಜಾಸ್ತಿ ಇರುವ ಕಾರಣ ಕೇರಳದಿಂದ ಕರ್ನಾಟಕಕ್ಕೆ ಬರುವ ಎಲ್ಲಾ ದಾರಿಗಳೂ ಬಂದ್ ಆಗಿವೆ. ಪಕ್ಷಭೇದ ಮರೆತು ಜನ ಪ್ರತಿಭಟನೆಗಳು ಮಾಡುವುದು, ರಾಜಕೀಯ ಒತ್ತಡಗಳು ತರುವುದು ಇತ್ಯಾದಿ ಕೆಲಸಗಳು ಆಗುತ್ತಿವೆ.
ಈ ರೀತಿಯ ಬಂದ್ ಎರಡನೇ ಅಲೆ ಮತ್ತು ಮೊಡಲನೇ ಅಲೆ ಬಂದಾಗಲೂ ಆಗಿತ್ತು. ಅದರ ಪರಿಣಾಮ 23 ಜನ ಕರ್ನಾಟಕದಲ್ಲಿ (ಬೇರೆಯ ತೊಂದರೆಗಳಿಗೆ, ಕೋವಿಡ್ ಗೆ ಅಲ್ಲ) ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮರಣ ಹೊಂದಿದ್ದರು ಹಾಗೂ ನೂರಾರು ಜನ ಕೇರಳದಲ್ಲಿ ಮನೆಯಿದ್ದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ಜವರು ಹೋಗಿ ಬಂದು ಮಾಡಲು ಆಗದೆ ಕೆಲಸ ಕಳೆದುಕೊಂಡಿದ್ದರು.
ಕೋವಿಡ್ ಬರುವ ಮೂರು ವರ್ಷ ಮೊದಲು ನಮ್ಮಪ್ಪ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹತ್ತಿರದ
ಚಿಕ್ಕಪುಟ್ಟ ವೃದ್ಯರ ಮದ್ದಿನಿಂದ ಗುಣವಾಗದೇ ಕೊನೆಗೆ ಮಂಗಳೂರಿಗೆ ಕರೆದು ತಂದು. ಕ್ಯಾನ್ಸರ್ ಅಂತ ಗೊತ್ತಾಗಿ ಅದಕ್ಕೆ ಬೇಕಾದ ಸಂಪೂರ್ಣ ಚಿಕಿತ್ಸೆ ಮಂಗಳೂರಿನಲ್ಲಿಯೇ ಮಾಡಿಸಿದ್ದೆವು. ಆದಕ್ಕಿಂತ ಹಿಂದೆ ಕೂಡ ಮನೆಯಲ್ಲಿ ಯಾರಿಗೇ ಏನೇ ಕಾಯಿಲೆ ಬಂದಲ್ಲಿ ಮಂಗಳೂರಿಗೇ ಅಥವಾ ಕರ್ನಾಟಕ್ಕೇ ಹೋಗುತ್ತಿದ್ದೆವು ಯಾಕೆಂದರೆ ಕಾಸರಗೋಡು ಸಿಟಿಯಲ್ಲಿ ಹೋಗಿ ಮಲಯಾಳಂ ಮಾತನಾಡಿ ಕೆಂಲಸ ಮಾಡಿಸಿಕೊಳ್ಳುವ ಸಾಮರ್ಥ್ಯ ನಮಗಿರಲಿಲ್ಲ.
*******
ಕೇರಳ ಸರಕಾರಕ್ಕೆ ಇಲ್ಲಿ ಆಸ್ಪತ್ರೆಗಳು ಮಾಡಲು ಏನು ಕಷ್ಟ? ಮೊದಲ ಕಾರಣ ಕಾಣಿಸುವುದೆಂದರೆ ಇಲ್ಲಿನ ಜನಪ್ರತಿನಿಧಿಗಳು ಅದರ ಬಗ್ಗೆ ಸರಕಾರಕ್ಕೆ ಸರಿಯಾಗಿ ಒತ್ತಡ ಹಾಕಿಲ್ಲ. ಅದಕ್ಕೆ ಒಂದು ಕಾರಣವೇನಿರಬಹುದೆಂದರೆ ಇದ್ದ ವ್ಯವಸ್ಥೆಗಳು ಸಾಕಾಗುತ್ತಿತ್ತು, ಮತ್ತು ಹೇಗೂ ಹತ್ತು ಹಲವು ದೊಡ್ಡ ದೊಡ್ಡ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳಿರುವ ಮಂಗಳೂರು ಪಕ್ಕದಲ್ಲೇ ಇತ್ತು. ಮತ್ತೆ ಹೃದಯಾಘಾತದಲ್ಲಿ ಅಕಾಲದಲ್ಲಿ ಸತ್ತುಹೋದವರ ಸಂಖ್ಯೆ ನಮ್ಮೂರಲ್ಲಿ ತೀರಾ ತೀರಾ ಕಡಿಮೆ. ಹಳ್ಳಿಯ ಕ್ರಿಯಾಶೀಲ ಜೀವನದಿಂದಾಗಿ ಸಕ್ಕರೆಕಾಯಿಲೆ ಅಥವಾ ಹೃದಯದ ತೊಂದರೆಗಳಂತಹ ದೊಡ್ಡ ದೊಡ್ಡ ವಿಚಾರಗಳು ಇರಲೇ ಇಲ್ಲ.
ನಾನು ಕಂಡಂತೆ ಮಾನಸಿಕ ಸಮಸ್ಯೆಗಳದ್ದೇ ಇಲ್ಲಿನ ಕಾಯಿಲೆಗಳಲ್ಲಿ ಬಹುಪಾಲು. ಇದಕ್ಕೆ ಮಂಗಳೂರಲ್ಲೂ ಸರಿಯಾದ ಮದ್ದಿರಲಿಲ್ಲ. ಆದರೆ ಮಾನಸಿಕ ಕಾಯಿಲೆಗಳು ಕಾಯಿಲೆಗಳೇ ಅಂತ ನೋಡುವ ಮನಸ್ಥಿತಿ ಯಾರಿಗೂ ಇರಲಿಲ್ಲ. ಅದು ಬಂದವರು ಮರ್ಲು, ಭ್ರಾಂತು ಎಂದು ಬದಿಗೆ ತಳ್ಳಲ್ಪಟ್ಟು ಅವರು ಎಷ್ಟು ದಿನವಾಗುತ್ತದೋ ಅಷ್ಚು ದಿನ ಇದ್ದು ತೀರಿಹೋಗುತ್ತಿದ್ದರು. ಅವರಿಗೂ ಮದ್ದು ಮಾಡಬಹುದು ಎಂಬ ಕಾನ್ಸೆಪ್ಟ್ ಯಾರಿಗೂ ಗೊತ್ತಿರಲಿಲ್ಲ.
ಇನ್ನೊಂದು ಕಾರಣ ಕೇರಳ ಸರಕಾರಕ್ಕೆ ಇದ್ದಿದ್ದು administrational problems. ದೊಡ್ಡ ಸರಕಾರಿ ಆಸ್ಪತ್ರೆಯೊಂದನ್ನು ತೆರೆಯುವಾಗ ಅದರಲ್ಲಿ ನೇಮಕಾತಿಯಿಂದ ಹಿಡಿದು ಎಲ್ಲದಕ್ಕೂ ತಲೆಕೆಡಿಸಿಕೊಳ್ಳಬೇಕು. ಮಲಯಾಳಂ ಬರದ ಮನುಷ್ಯರಿಗೆ ಕನ್ನಡದಲ್ಲಿ ಮಾತಾಡುವಂಥವರೇ ಇರಬೇಕು. ಕಾಸರಗೋಡಿಂದ ಮೇಲೆ ಬಂದು ಕೇರಳದ ವ್ವವಸ್ಥೆಯಲ್ಲಿ ಕಲಿತವರು ಕಡಿಮೆಯಿರುವ ಕಾರಣ ಇವನ್ನೆಲ್ಲ ಮಾಡುವುದು ದೊಡ್ಡ ಸವಾಲು. ಮಾಡಲಿಕ್ಕೆ ಬಹಳ ಪ್ಲಾನಿಂಗ್ ಮಾಡಬೇಕಾಗ್ತದೆ.
ಇನ್ನೂ ಒಂದು ಕಾರಣ-ಪ್ರತಿ ಐದು ವರ್ಷಕ್ಕೆ ಸರಕಾರ ಬದಲಾಗುತ್ತಿದ್ದ ಕೇರಳದಲ್ಲಿ ಬಂದಂತಹ ಸರಕಾರಗಳಿಗೆ ಮುಖ್ಯವಾಗಿ ಮಲಯಾಳಂ ಮಾತಾಡುವ ಜಿಲ್ಲೆಗಳ ಸಮಸ್ಯೆಗಳನ್ನು ಪರಿಹರಿಸುವುದೇ ಮುಖ್ಯವಾಗುತ್ತಿತ್ತು, ಯಾಕಂದರೆ ಇಲ್ಲಿನ ಜನ ಎಷ್ಟೆಂದರೂ ಕೇರಳವನ್ನು ಧಿಕ್ಕರಿಸಿವರಲ್ಲವೇ? ಇಂದಿಗೂ ಕರ್ನಾಟಕದ ಕನಸು ಕಾಣುತ್ತಿರುವವರಲ್ಲವೇ? ಕೇರಳ ಸರಕಾರದ ಪ್ರಯತ್ನಗಳಿಗೆ ಪೂರಕವಾದ ಯಾವುದೇ ಕೆಲಸಗಳು ಮಾಡದೇ, ಮಲಯಾಳಂ ಬೇಡಬೇಡವೆನ್ನುತ್ತಲೇ ನಮಗೆಲ್ಲಾ ಸವಲತ್ತುಗಳೂ ಕೊಡಿ ಎಂದು ಕೇಳಿದರೆ, ರಾಜಕೀಯ ಲಾಭವಿಲ್ಲದ ಇಂತಹಾ ಇರುವೆ ಗೂಡಿಗೆ ಕೈಹಾಕುವ ಕೆಲಸ ಮಾಡಲಿಕ್ಕೆ ಯಾರಾದರೂ ಯಾಕೆ ತಲೆಕೆಡಿಸಿಕೊಳ್ಳುತ್ತಾರೆ?
*******
ಸರಕಾರಗಳೆಂದರೆ ಜನರಿಗೋಸ್ಕರವೇ ಇರುವಂಥವು. ನಮ್ಮ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದುಕೊಂಡಿದೆ. ಆದರೆ ಸರಕಾರ ನಮಗಿಷ್ಟವಿಲ್ಲದ ಪಕ್ಷದ್ದು ಎಂದ ಮಾತ್ರಕ್ಕೆ ಅದನ್ನು ಬೇಕಾಬಿಟ್ಟಿ ಬಯ್ಯುವುದು ಇಂದು ಫ್ಯಾಶನ್ ಆಗಿಬಿಟ್ಟಿದೆ. ವಸ್ತುನಿಷ್ಚವಾಗಿ ಅವರು ಏನು ಮಾಡಿದ್ದಾರೆ, ಮಾಡಲಿದ್ದಾರೆ, ಯಾಕೆ ಇತ್ಯಾದಿ ನೋಡಿ ಮಾತಾಡುವ ಜನ ವಿರಳ.
ಕರ್ನಾಟಕ ಮಾಡಿದ ಕೆಲಸಕ್ಕೆ ಕರ್ನಾಟಕವನ್ನು ಬೈಯ್ಯುವುದರಿಂದ ಪ್ರಯೋಜನವಿಲ್ಲ. ಯಾಕಂದರೆ ಈ ರಾಜ್ಯದ ಜನರ ರಕ್ಷಣೆ ಅದು ಮಾಡಲೇಬೇಕು. ಒಂದು ವೇಳೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸುಗಳು ಹೆಚ್ಚಾದಲ್ಲಿ ಅದಕ್ಕೆ ಕೇರಳದಿಂದ ಬರುವವರೇ ಕಾರಣರಾಗಿರುತ್ತಾರೆ. ಹೆಚ್ಚೆಂದರೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯಾಣಗಳಿಗೆ ಮತ್ತು ದಿನನಿತ್ಯ ಕೆಲಸಕಾರ್ಯಕ್ಕೆ ಹೋಗುವವರಿಗೆ ಅನುಕೂಲವಾಗುವಂತೆ ನಿಯಮ ಬದಲಾಯಿಸಿ ಎಂದು ಹೇಳಬಹುದಷ್ಟೇ.
ಹಾಗೇ ಕಮ್ಯುನಿಸ್ಟರು ಅಂತ ಕೇರಳ ಸರಕಾರಕ್ಕೆ ಬಯ್ಯುವ ಬದಲು ಸರಕಾರದ ಜತೆ ಸೇರಿ ಜನರಿಗೆ ಬೇಕಾದ ಆರೋಗ್ಯ, ಶಿಕ್ಷಣ, ಕೆಲಸ ಇತ್ಯಾದಿಗಳನ್ನು ಒದಗಿಸುವುದು ಹೇಗೆಂದು ಯೋಚಿಸುವುದು, ಆ ನಿಟ್ಟಿನಲ್ಲಿ ಕೆಲಸ ಮಾಡುವುದು ಕಾಸರಗೋಡಿನ ಇಂದಿನ ರಾಜಕೀಯಕ್ಕೆ, ರಾಜಕಾರಣಿಗಳಿಗೆ ಅತ್ಯಗತ್ಯ. ಅದೇ ಅವರು ಮಾಡಬಹುದಾದ ಅತ್ಯುತ್ತಮ ದೇಶಸೇವೆ.
*******
ಮೊದಲಿಗೇ ಹೇಳಿದ್ದೆನಲ್ಲ, ಆ ನನ್ನ ಅಜ್ಜನ ಮೈಕ್ ನಮ್ಮ ಅಟ್ಟದಲ್ಲಿದ್ದ ಧೂಳುಕಸ ಇತ್ಯಾದಿ ತೆಗೆದು ಸ್ವಚ್ಛಮಾಡುವ ಸಮಯ ಅಮ್ಮ ತೆಗೆದು ಯಾವುದೋ ಗಿಡದ ಬುಡಕ್ಕೆ ಬಿಸಾಕಿದ್ದರಂತೆ. ನಾನು ಹುಡುಕುತ್ತಿರಬೇಕಾದರೆ ಹೇಳಿದರು.
ಆ ಮೈಕ್ ಈಗ ಇತ್ತು ಅಂದರೆ ನಾನು ಏನು ಮಾಡುತ್ತಿದ್ದೆ? ಅಬ್ಬಬ್ಬಾ ಅಂದರೆ ಯಾರಾದೂ ಮ್ಯೂಸಿಯಂನವರು ತೆಗೆದುಕೊಳ್ಳುತ್ತಾರಾ ಅಂತ ಕೇಳುತ್ತಿದ್ದೆ. ತೆಗೆದುಕೊಳ್ಳುತ್ತಾರೆ ಎಂದರೆ ಅದರ ಹಿಂದಿನ ಕಥೆಯ ಜೊತೆಗೆ ಅದನ್ನು ಅವರಿಗೆ ಕೊಡುತ್ತಿದ್ದೆ.
ಬಹಳಷ್ಟು ವಿಚಾರಗಳ ಕಥೆ ಇಷ್ಟೇ, ಒಂದು ಕಾಲಕ್ಕೆ ತುಂಬಾ ಪ್ರಸ್ತುತವಾದದ್ದು ಇನ್ನೊಂದು ಕಾಲಕ್ಕೆ ಪ್ರಸ್ತುತವಲ್ಲ. ಕಾಲಕ್ಕೆ ತಕ್ಕಂತೆ ಯೋಚಿಸದಿರುವ ಜಿಗುಟುತನ, ಜಡ್ಡುತನ ತೊಂದರೆ ಬಿಟ್ಟು ಇನ್ನೇನೂ ತರುವುದಿಲ್ಲ.

Tuesday, July 27, 2021

ಕಣ್ಣಿನ ಭಾಷೆಯ ಬಣ್ಣವೆ ಬದಲುಕಣ್ಣಿನ ಭಾಷೆಯ
ಬಣ್ಣವೆ ಬದಲು
ತಣ್ಣನೆ ಕೊಲ್ಲುವ ಪರಕೀಯ

ಸೊಲ್ಲನು ಮರೆತು
ಎಲ್ಲೋ ಕಳೆದಿಹ
ಕಲ್ಲಾಗಿಹೆ ನೀ ಓ ಗೆಳೆಯ

ಮನಸಲಿ ಕಟ್ಟಿದ
ನೀರಿಗೆ ಬೇಕು
ಒಡ್ಡುಗಳಿಲ್ಲದ ಹಾದಿಗಳು

ಮಾತೇ ಮನಗಳ
ಬೆಸೆಯುವ ಬಳ್ಳಿ
ಮೌನದೆ ಬೆಳೆವವು ಗೋಡೆಗಳು

ಗೋಡೆಗಳಳಿಯಲಿ
ಸೇತುವೆ ಬೆಳೆಯಲಿ
ಮುಳುಗಲಿ ಹಗೆತನ ಒಲವಿನಲಿ

ಬೆಳಕಿನ ತಿಳಿವಲಿ
ಕರಗಲಿ ಮಬ್ಬಿದು
ಕಾವಳವಳಿಯಲಿ ನಲಿವಿನಲಿ

ತೆರೆಯಲಿ ಮನಮನೆ
ಕಳೆಯಲಿ ಕೊಳೆಯು
ಹೊಸಬೆಳಗನು ಸ್ವಾಗತಿಸೋಣ

ನಾ ನಿನಗಿರುವೆನು
ನೀ ಬಾ ನನ್ನೆಡೆ
ಹರುಷದ ಸೇತುವೆ ಕಟ್ಟೋಣ

Friday, June 18, 2021

ಮಿಡಿಯಲು ನನ್ಸಲಿ ಹೃದಯವೇ ಇಲ್ಲ

ಕಾಯುವರಿಲ್ಲದೆ ಬಾಡಿದ ಹೆಣಗಳು
ದಿನವಿಡಿ ಧಗಧಗ ಉರಿಯುವ ಚಿತೆಗಳು
ಮನೆಗಳು ಮನಗಳು ಭಣಭಣಭಣಭಣ
ಕಿಟಿಕೆಯ ಆಚೆಗೆ ಗದ್ದಲ ಗದ್ದಲ
ಆಡುವ ಮಾತಿಗೆ ಕಾಣದು ಅಳತೆ
ಕೇಳುವ ಕಿವಿಗಳಿಗಿಲ್ಲಿದೆ ಕೊರತೆ
ಇಂದ ಬವಣೆಯಲಿ ತಳ್ಳಿದ ಮೇಲೆ
ನಾಳೆಯ ಬಸಿರಲಿ ಅಡಗಿಹ ಚಿಂತೆ
ಎದೆಯಿದು ಒರಟು, ಬುದ್ಧಿಯು ಬರಡು
ಕಾಯುವುದಾರಿಗೆ ಈಗಲೆ ಹೊರಡು
ಕತ್ತಲ ದಾರಿ, ಕಹಿ ಸಾಮಾನ್ಯ
ಪಾಡಿನ ಜಾಡಲಿ ಭಾವವು ಶೂನ್ಯ
ಬೆಳಗಿನ ಜಾವದ ಕನಸಿನ ತೆರದಲಿ
ಎಂದೋ ಮರೆತಿಹ ಹಾಡಿನಂದದಲಿ
ಮನವನು ಮೀಟುವ ನಿನ್ನಯ ಒಲವಿಗೆ
ಮಿಡಿಯಲು ನನ್ಸಲಿ ಹೃದಯವೇ ಇಲ್ಲ