Saturday, October 25, 2008

ದೇವರು ಹೆಚ್ಚಿದ ದೀಪ...


ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹೆಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ

ಕೊಲ್ಲಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ...

ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ
ನೀಡದೆ ಅನ್ನದ ಬೆಳೆಯ?

ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ತಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ...
- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ನಿಮ್ಮ ಮನೆ-ಮನಗಳಲ್ಲಿ ಹೊಸಬೆಳಕು ಚೆಲ್ಲಲಿ,
ಬೆಳಕಿನ ಹಬ್ಬದ ಶುಭಾಶಯಗಳು

Sunday, October 12, 2008

ಲ್ಯಾಂಡ್ ಲೈನೂ - ಮೊಬೈಲೂ


>>>>>>>>>>>>>>>>>>>>>>>

ಗಂಟೆ ಸರಿಯಾಗಿ ಹನ್ನೊಂದೂಮುಕ್ಕಾಲು. ರಾಜ್ಯದ ಒಂದು ಕಡೆ ಸಿಎಂ ಭೇಟಿ ಇದ್ದರೆ, ಇನ್ನೊಂದು ಕಡೆ ಯಾವುದೋ ಮಠದ ಸ್ವಾಮೀಜಿ ಪ್ರೆಸ್ ಕಾನ್ಫರೆನ್ಸ್, ಮತ್ತೊಂದೆಡೆ ಇಂಧನ ಸಚಿವರ ಭೇಟಿ... ಇದಲ್ಲದೇ ಅಲ್ಲಲ್ಲಿ ನಡೆಯುತ್ತಿರುವ ಧರಣಿಗಳು... ದಸರಾ ಮುಗಿಸಿ ಕಾಡಿಗೆ ಹೋಗ್ತಾ ಇರೋ ಆನೆಗಳು... ಹೀಗೆ ಒಂದು ಗಂಟೆಯ ಬುಲೆಟಿನ್ನಿಗೆ ಸುದ್ದಿಯ ಮಹಾಪೂರ ಹರಿದು ಹರ್ತಾ ಇರೋ ಟೈಮು. ಒಂದಾದ ಮೇಲೊಂದರ ಹಾಗೆ ಮೊಬೈಲಿಗೆ ಬರುತ್ತಾ ಇರುವ ಸುದ್ದಿ ಕರೆಗಳನ್ನು ರಿಸೀವ್ ಮಾಡುತ್ತ ಮಾತಾಡುತ್ತ ಕೆಲಸದಲ್ಲಿ ಕುತ್ತಿಗೆ ತನಕ ಮುಳುಗಿದ್ದಳು ಅವಳು. ಅಷ್ಟರಲ್ಲಿ ಪಕ್ಕದಲ್ಲಿದ್ದ ಪರ್ಸನಲ್ ಫೋನ್ ರಿಂಗ್ ಆಯಿತು. ಯಾರೆಂದು ನೋಡಿದರೆ, ಅಮ್ಮ ನಿನ್ನೆ ತಾನೇ ತೆಗೆದುಕೊಂಡ ಹೊಸಾ ಮೊಬೈಲಿನಿಂದ ಕರೆ ಬರುತ್ತಿದೆ.

ಸಾಧ್ಯವಾದಷ್ಟು ಬೇಗ ಸುದ್ದಿ ಕಳುಹಿಸಲು ಹೇಳಿ ಮಾತು ಮುಗಿಸಿ ಅಮ್ಮನ ಕರೆ ರಿಸೀವ್ ಮಾಡಿದಳು. ಹಲೋ ಎಂದಳು. ಆ ಕಡೆಯಿಂದ ಸುದ್ದಿಯೇ ಇಲ್ಲ. ಯಾರೂ ಮಾತಾಡುತ್ತಿಲ್ಲ. ಮತ್ತೆರಡು ಸಲ ಹಲೋ ಹಲೋ ಎಂದಳು. ಊಹುಂ, ಏನೂ ಕೇಳುತ್ತಿಲ್ಲ. ಹಾಗೇ ಕೆಲ ಸೆಕೆಂಡುಗಳ ನಂತರ ಫೋನ್ ಕಟ್ ಆಯಿತು. ರಿಡಯಲ್ ಮಾಡಿದಳು. ರಿಸೀವ್ ಆಯಿತು, ಆದರೆ ಏನೂ ಸ್ವರ ಕೇಳಲಿಲ್ಲ. ಕಟ್ ಮಾಡಿ ಮತ್ತೆ ಕರೆ ಮಾಡಿದರೆ ನಾಟ್ ರೀಚೇಬಲ್ ಬಂತು.

ಮನದಲ್ಲೇ ಬೈದುಕೊಳ್ಳುತ್ತ ಮನೆಯ ಲ್ಯಾಂಡ್ ಲೈನ್ ನಂಬರಿಗೆ ಕರೆ ಮಾಡಿದರೆ, ಯಥಾಪ್ರಕಾರ ಅಮ್ಮ ಫೋನೆತ್ತಲಿಲ್ಲ. ಏನಾದ್ರೂ ಮಾಡ್ಕೊಳ್ಳಲಿ, ಈಗ ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಮತ್ತೆ ಕೆಲಸದಲ್ಲಿ ಮುಳುಗಿದಳು.

ಕೆಲಸ ನಡೆಯುತ್ತಲೇ ಇದ್ದರೂ ಅಮ್ಮನ ಬಗ್ಗೆ ಆರಂಭವಾದ ಯೋಚನೆ ಮಾತ್ರ ನಿಲ್ಲಲಿಲ್ಲ. ಇತ್ತೀಚೆಗೆ ಕರೆ ಮಾಡಿದಾಗ ಅಮ್ಮ ಸ್ವಲ್ಪ ಹಿಂಜರಿಕೆಯಿಂದಲೇ 'ನಿಂಗೇನೋ ಹೇಳ್ಬೇಕಿತ್ತು, ನೀನು ಕೋಪ ಮಾಡ್ಕೋಬಾರ್ದು' ಅಂದಳು. ಮಗಳು ಏನಪ್ಪಾ ವಿಷಯ ಅಂದುಕೊಳ್ಳುತ್ತಲೇ "ಇಲ್ಲ, ಕೋಪ ಮಾಡ್ಕೊಳ್ಳುವುದಿಲ್ಲ, ಏನು ಹೇಳು" ಅಂದಳು. "ಅಪ್ಪ ನಿಂಗೆ ಅಂತ ಚಿನ್ನ ತೆಗೆದಿದ್ದಾರೆ, ನಿನ್ನ ಮದುವೆಯಲ್ಲಿ ಕೊಡಲಿಕ್ಕಾಯಿತು ಅಂತ... ನಲುವತ್ತು ಸಾವಿರ ಆಯ್ತು..."

ಕೇಳುತ್ತಿದ್ದಂತೆ ಇವಳಿಗೆ ತಲೆ ಚಚ್ಚಿಕೊಳ್ಳಬೇಕು ಅಂತನಿಸಿತು. ಕೆಲದಿನದ ಹಿಂದಷ್ಟೇ ಚಿನ್ನ ಕೊಳ್ಳುವ ಪ್ರಸ್ತಾಪ ಮಾಡಿದ್ದಾಗ ಅಮ್ಮನಿಗೆ ಹೇಳಿದ್ದಳು, "ಈಗ ಚಿನ್ನಕ್ಕೆ ರೇಟು ಜಾಸ್ತಿ, ಕಡಿಮೆಯಾದಾಗ ತೆಗೆದುಕೊಳ್ಳುವ, ನಾನಿದ್ದಾಗಲೇ ತೆಗೆದುಕೊಳ್ಳುವ, ನಾನೇ ಹೇಳುತ್ತೇನೆ ಯಾವಾಗ ಅಂತ, ಈಗ ಬೇಡ..." ಅಮ್ಮ ಆಯಿತು ಎಂದಿದ್ದಳು. ಮತ್ತು ಈಗ, ಸ್ಟಾಕ್ ಮಾರ್ಕೆಟ್ ಪೂರ್ತಿ ಕುಸಿದಿರುವಾಗ, ಚಿನ್ನಕ್ಕೆ ದಿನದಿಂದ ದಿನಕ್ಕೆ ಬೆಲೆ ಏರುತ್ತಿರುವಾಗ, 1350 ರೂಪಾಯಿ ಕೊಟ್ಟು ಅಪ್ಪ-ಅಮ್ಮ ಚಿನ್ನ ಕೊಂಡಿದ್ದರು. ಏನು ಅರ್ಜೆಂಟಿತ್ತು ಚಿನ್ನ ಕೊಳ್ಳಲಿಕ್ಕೆ ಅಷ್ಟು? ಇಷ್ಟು ಸಮಯ ಕಾದವರಿಗೆ ಇನ್ನೊಂದಿಷ್ಟು ದಿನ ಕಾಯಬಾರದಿತ್ತೇ ಎನಿಸಿ ಬೇಸರವಾಗಿತ್ತು. ತನ್ನ ಇಷ್ಟು ವರ್ಷಗಳ ಲೋಕಜ್ಞಾನ, ತಿಳುವಳಿಕೆ, ವಿವೇಚನೆ ಎಲ್ಲವೂ ಜಗತ್ತಿಗೆ ಉಪದೇಶ ಕೊಡಲಿಕ್ಕೆ ಮಾತ್ರ ಉಪಯೋಗವಾಗುತ್ತಿದ್ದು, ದೀಪದ ಬುಡ ಕತ್ತಲಾಯಿತಲ್ಲ ಅಂತನಿಸಿತು. ಈಗ ಬೇಡಾಂತ ಹೇಳಿದ್ನಲ್ಲ, ಮತ್ತೆ ಯಾಕೆ ತಗೊಂಡಿದ್ದು ಅಂತ ಅಮ್ಮನಿಗೆ ಕೇಳಿದಳು. ಅಮ್ಮ ಅಪ್ಪನ ಮೇಲೆ ಹಾಕಿದಳು, "ಅವರೇ ಹಠ ಮಾಡಿ ತಗೊಂಡ್ರು, ನಾನು ಏನು ಮಾಡ್ಲಿಕ್ಕೂ ಆಗ್ಲಿಲ್ಲ" ಅಂತ...

ಆಫೀಸ್ ಮೊಬೈಲು ರಿಂಗಾಯಿತು, ಯೋಚನೆ ಕಟ್ಟಾಯಿತು. ಕರೆಮಾಡಿದವರಿಗೆ ಉತ್ತರಿಸಿ, ಹೇಳಬೇಕಾದ್ದು ಹೇಳಿ ಮತ್ತೆ ಇಟ್ಟಳು, ಮತ್ತೆ ಮುಂದುವರಿಯಿತು ಯೋಚನೆ... ಚಿನ್ನ ತೆಗೆದುಕೊಳ್ಳುವಾಗ ಮಾಡಿದ್ದನ್ನೇ ಈಗ ಮತ್ತೆ ಮಾಡಿದ್ದಾರೆ. ಆಗ ಚಿನ್ನ, ಈಗ ಮೊಬೈಲು.

ನಿಜವಾಗಿ ಹೇಳಬೇಕೆಂದರೆ ಮೊಬೈಲು ತೆಗೆದುಕೊಳ್ಳುವುದು ಅಮ್ಮನ ಸ್ವಂತ ನಿರ್ಧಾರವಲ್ಲವೆಂಬುದು ಅವಳಿಗೂ ಗೊತ್ತು. ಅಮ್ಮನಿಗೆ ಮೊಬೈಲು ತೆಗೆದುಕೊಳ್ಳುವ ಐಡಿಯಾ ಕೊಟ್ಟು, ಅಪ್ಪನನ್ನೂ ಅದಕ್ಕೆ ಒಪ್ಪಿಸಿ ಮೊಬೈಲು ತೆಗೆಸಿಕೊಟ್ಟವರ ಬಗ್ಗೆ ಅವಳಿಗೆ ವಿಪರೀತ ಕೋಪವಿತ್ತು. ಮೂರನೇ ಕ್ಲಾಸು ಓದಿದ, ಇಂಗ್ಲೀಷು-ಪಂಗ್ಲೀಷು ಅರಿಯದ ಅಮ್ಮನ ಮುಗ್ಧತೆಯ ಲಾಭ, ಮೇಸ್ತರಾಗಿದ್ದರೂ ಅಪ್ಪನಲ್ಲಿದ್ದ ವ್ಯವಹಾರ ಜ್ಞಾನದ ಕೊರತೆಯ ಸದುಪಯೋಗವನ್ನು ಪಡೆದವರು ತಮ್ಮ ಲಾಭಕ್ಕೋಸ್ಕರ ಅಪ್ಪ-ಅಮ್ಮನಿಗೆ ಮೊಬೈಲು ಹಿಡಿಸಿದ್ದರು. ಆದರೂ ಅಮ್ಮ ಸ್ವಲ್ಪ ಗಟ್ಟಿಯಾಗಿ ನಿಂತು ನನಗೆ ಮೊಬೈಲು ಬೇಡವೆಂದಿದ್ದರೆ ಮೊಬೈಲು ಖಂಡಿತಾ ಬರುತ್ತಿರಲಿಲ್ಲ.

ಅದಕ್ಕೇ ಅಮ್ಮನಿಗೆ ತಿಳಿಸಿ ಹೇಳಿದ್ದಳು. "ಅಮ್ಮಾ, ಅಲ್ಲಿ ನೆಟ್ ವರ್ಕೇ ಇಲ್ಲ, ಮೊಬೈಲಲ್ಲಿ ಮಾತಾಡಬೇಕೆಂದರೆ ನೀನು ನೆಟ್ ವರ್ಕ್ ಹುಡುಕಿಕೊಂಡು ಗುಡ್ಡೆ ಹತ್ತಬೇಕು. ಯಾಕಮ್ಮಾ ಅಷ್ಟೊಂದು ಕಷ್ಟ? ನೀನು ಹೋದರೆ ಎಲ್ಲಿಗೆ ಹೋಗುತ್ತೀ? ಹೆಚ್ಚೆಂದರೆ ತಂಗಿ ಮನೆ, ಅದು ಬಿಟ್ಟು ಬೇರೆಲ್ಲಿ ಹೋಗುವಾಗಲೂ ಹೇಳಿಯೇ ಹೋಗುತ್ತೀಯಲ್ಲ, ಅಲ್ಲೆಲ್ಲ ಲ್ಯಾಂಡ್ ಲೈನ್ ಫೋನ್ ಇರ್ತದೆ, ಎಲ್ಲರ ನಂಬರೂ ನನ್ನ ಹತ್ರ ಇದೆ... ಮತ್ಯಾಕೆ ಮೊಬೈಲಿನ ಸಹವಾಸ... ನಿಂಗೆ ಗೊತ್ತಾಗುವುದಿಲ್ಲ ಮೊಬೈಲಿನ ಕಷ್ಟಗಳು, ನಾವೆಲ್ಲ ಅನುಭವಿಸ್ತಾ ಇದೇವೆ, ಅನಿವಾರ್ಯ.. ನಿಂಗೂ ಯಾಕಮ್ಮಾ ಅದು... ಒಂದು ವೇಳೆ ಮೊಬೈಲು ನೆಟ್ ವರ್ಕು ಬಂತು ಅಂತಿಟ್ಕೋ, ಮೊಬೈಲು ಎಷ್ಟು ಡೇಂಜರ್ ಅಂತ ಗೊತ್ತಾ ನಿಂಗೆ, ತುಂಬಾ ಹೊತ್ತು ಮಾತಾಡಿದ್ರೆ ಕಿವಿ ಬಿಸಿಯಾಗ್ತದೆ, ತಲೆನೋವಾಗ್ತದೆ, ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಕೂಡ ಹೇಳ್ತಾರೆ, ತಂಗಿಮನೆಯಲ್ಲಿ ಪೆಟ್ಟಿಗೆಯಲ್ಲಿಟ್ಟ ಜೇನುಹುಳುವೆಲ್ಲ ವಾಪಸ್ ಬರದೇ ಹೋಗಿದ್ದು, ಹೊಸ ಜೇನುಹುಳು ತರಲಿಕ್ಕೆ ಎಲ್ಲೂ ಸಿಗದಿದ್ದದ್ದು, ಎಲ್ಲವೂ ನಿಂಗೇ ಗೊತ್ತು, ಅದಕ್ಕೆ ಮೊಬೈಲೇ ಕಾರಣ ಅನ್ನುವುದು ತಂಗಿ ಮನೆಯವರಿಗೂ ಗೊತ್ತು, ನಿಂಗೂ ಗೊತ್ತು, ಬೇಡಮ್ಮಾ ಮೊಬೈಲಿನ ಸಹವಾಸ... "

ಊಹುಂ. ಯಾವುದೇ ಉಪಯೋಗವಾಗಿರಲಿಲ್ಲ. ಲ್ಯಾಂಡ್ ಲೈನು ಸರಿ ಮಾಡಿಸಲು 500 ರುಪಾಯಿ ಖರ್ಚಿದೆ ಅಂತ ತಿಂಗಳಾನುಗಟ್ಟಲೆ ಸುಮ್ಮನೆ ಕೂತಿದ್ದ ಅಪ್ಪ-ಅಮ್ಮ, 1500 ರುಪಾಯಿ ಕೊಟ್ಟು ಹೊಸಾ ಮೊಬೈಲು ತೆಗೆದುಕೊಂಡು ಅಂಗಡಿಯಿಂದಲೇ ಫೋನ್ ಮಾಡಿ ಸುದ್ದಿ ಹೇಳಿದ್ದರು. ಅಪ್ಪ-ಅಮ್ಮನ ಖುಷಿಗೆ ನೀರೆರಚುವುದು ಸರಿಯಲ್ಲ... ಈಗ ತೆಗೆದುಕೊಂಡಾಗಿದೆಯಲ್ಲ, ಏನು ಹೇಳಿ ಏನು ಉಪಯೋಗ ಅಂದುಕೊಳ್ಳುತ್ತ ಅವಳು ತೆಪ್ಪಗಾಗಿದ್ದಳು.

ಹಾಗೆ ಅಂಗಡಿಯಲ್ಲಿ ಮಾತಾಡಿದ್ದೇ ಕೊನೆ. ಮನೆಯಲ್ಲಿ ಹೋಗಿ ಮೊಬೈಲಿನಿಂದ ಕರೆ ಮಾಡಲು ಯತ್ನಿಸಿರಬಹುದು, ಮೊಬೈಲ್ ನೆಟ್ ವರ್ಕು ಸರಿಯಾಗಿ ಬರುತ್ತಿರಲಿಕ್ಕಿಲ್ಲ. ಬಂದರೂ ತುಂಬಾ ದುರ್ಬಲವಾಗಿರುತ್ತದೆ, ಅದಕ್ಕೇ ಮಾತಾಡಿದ್ದು ಕೇಳುತ್ತಿಲ್ಲ. ಈಗ ಗೊತ್ತಾಗಿರುತ್ತದೆ, ನೆಟ್ ವರ್ಕೇ ಬರದ ಮನೆಯಲ್ಲಿ ಮೊಬೈಲು ಇಟ್ಟುಕೊಂಡು ಏನು ಮಾಡುತ್ತಾರೆ. ಲ್ಯಾಂಡ್ ಲೈನ್ ಸರಿಮಾಡಿಸಿದ್ದರೆ ಮನೆಯೊಳಗೇ ಕುಳಿತು ಮಾತಾಡುವ ಸೌಲಭ್ಯ. ಅದು ಬಿಟ್ಟು ನೆಟ್-ವರ್ಕ್ ಎಲ್ಲಿದೆ ಅಂತ ಹುಡುಕಿಕೊಂಡು ಗುಡ್ಡೆ ಹತ್ತಬೇಕಾದ ಖರ್ಮ... ತಿಳಿಸಿ ಹೇಳಿದರೆ ಅರ್ಥವೇ ಆಗಲಿಲ್ಲ...

ಆಫೀಸ್ ಮೊಬೈಲು ಮತ್ತೆ ರಿಂಗಾಯಿತು, ಯೋಚನೆಗಳಿಗೆ ಫುಲ್-ಸ್ಟಾಪ್ ಹಾಕಿ ಕರ್ತವ್ಯದ ಕರೆಗೆ ಓಗೊಟ್ಟು ಮತ್ತೆ ಕೆಲಸದಲ್ಲಿ ಮುಳುಗಿದಳು. ಒಂದು ಗಂಟೆ ಲೈವ್ ನ್ಯೂಸ್ ಶುರುವಾಯಿತು. ಬರಬೇಕಾದ ಸುದ್ದಿಯೆಲ್ಲ ಬಂದಾಗಿತ್ತು. ನಂತರ ಸ್ವಲ್ಪ ಆರಾಮಾಗಿ ಕುಳಿತರೆ, ಮತ್ತೆ ಅಮ್ಮನ ಕರೆ, ಈಸಾರಿ ಲ್ಯಾಂಡ್ ಲೈನಿನಿಂದ. "ನಿಂಗೆ ಮೊಬೈಲಿನಿಂದ ಫೋನ್ ಮಾಡಿದ್ರೆ ರಿಂಗ್ ಆಗ್ತದೆ ಮಗಾ, ಮಾತಾಡಲಿಕ್ಕೆ ಆಗುವುದಿಲ್ಲ ... ಪಕ್ಕದ ಮನೆಯವ್ರು ಹೇಳ್ತಾರೆ, ಸ್ವಲ್ಪದಿನದಲ್ಲಿ ಸರಿಯಾಗ್ಬಹುದು ಅಂತ..."

ಅವಳಿಗೆ ವಿಪರೀತ ಬೇಸರವಾಯಿತು... ನಾನು ತಿಳಿದುಕೊಂಡು ಹೇಳುವ ಮಾತ್ಯಾವುದೂ ಇವರಿಗೆ ತಲೆಗೇ ಹೋಗುವುದಿಲ್ಲ. ಯಾರ್ಯಾರೋ ಹೇಳುವುದು ಮಾತ್ರ ಸರಿಯೆನಿಸುತ್ತದೆ. "ನೋಡಮ್ಮಾ, ನಾನು ಹೇಳುವುದು ಮೊದಲೇ ಹೇಳಿದ್ದೆ, ನೀವಿಬ್ರೂ ನನ್ನ ಮಾತು ಕೇಳ್ಲಿಲ್ಲ... ನಂಗಂತೂ ಅರ್ಥವಾಗ್ತಿಲ್ಲ, ಇದರಿಂದ ಯಾರಿಗೆ ಉಪಯೋಗ ಅಂತ. ಬೇಡ ಅಂದಿದ್ದು ಮಾಡಿ ಈಗ ಪಶ್ಚಾತ್ತಾಪ ಪಟ್ರೆ ಏನುಪಯೋಗ, ನಿಂಗೆ ಈಗ್ಲೂ ಅಕ್ಕಪಕ್ಕದವ್ರು ಹೇಳುವುದೇ ಸರಿ ಅನಿಸಿದರೆ ಇಟ್ಕೋ ಮೊಬೈಲು. ನಂಗೇನಿಲ್ಲ"

"ಹಾಗಲ್ಲ ಮಗಾ. ಏನು ಮಾಡ್ಬೇಕು ಅಂತ ಕೇಳೋಣಾಂತ ಮಾಡಿದೆ, ಈಗ ರಿಲಯನ್ಸ್ ಇದೆ, ಪಕ್ಕದ ಮನೆ ಅಣ್ಣ ಹೇಳ್ತಾರೆ ಏರ್ ಟೆಲ್ ಹಾಕಿದ್ರೆ ನೆಟ್ ವರ್ಕು ಸಿಗಬಹುದು ಅಂತ... ಹಾಕಿಸಲಾ ಅಂತ ಕೇಳಲಿಕ್ಕೆ ಫೋನ್ ಮಾಡಿದೆ..." ಅಮ್ಮ ಸಮಜಾಯಿಷಿ ಕೊಡುತ್ತಿದ್ದಳು. ಅವಳ ಬೇಸರ ಕೋಪಕ್ಕೆ ತಿರುಗಿತು. "ನನ್ನ ಕೇಳೋದಿದ್ರೆ ಆ ಮೊಬೈಲು ಎಲ್ಲಿಂದ ತಂದ್ರೋ ಅಲ್ಲಿಯೇ ವಾಪಸ್ ಕೊಡಿ, ದುಡ್ಡು ವಾಪಸ್ ತಗೊಂಡು ಅದೇ ದುಡ್ಡಲ್ಲಿ ಲ್ಯಾಂಡ್ ಲೈನು ಸರಿಮಾಡಿಸಿ... ಮೊಬೈಲು ಸಹವಾಸ ಬೇಡ... ಇಷ್ಟರ ಮೇಲೆ ನಿನ್ನಿಷ್ಟ ಅಮ್ಮಾ, ಈಸಲ ನಾನು ಹೇಳಿದ್ದು ನಿಂಗರ್ಥ ಆಗದೇ ಇದ್ರೆ ಮತ್ತೆ ನನ್ ಹತ್ರ ಏನೂ ಕೇಳ್ಬೇಡ" ಅಂದಳು. ಅಮ್ಮ "ಸರಿ, ಅಪ್ಪನ ಹತ್ರ ಹೇಳ್ತೇನೆ" ಅಂತ ಹೇಳಿ ಫೋನಿಟ್ಟಳು.

>>>>>>>>>>>>>>

ಮೂರು ದಿನ ಕಳೆಯಿತು. ನಡುವಿನಲ್ಲಿ ಎರಡು ಸಾರಿ ಅಮ್ಮ ಏನು ಮಾಡಿದಳು ಅಂತ ತಿಳಿದುಕೊಳ್ಳಲು ಅಮ್ಮನಿಗೆ ಫೋನ್ ಮಾಡಿದರೆ, ಯಥಾಪ್ರಕಾರ, ಲ್ಯಾಂಡ್ ಲೈನು ರಿಸೀವಾಗಿರಲಿಲ್ಲ, ಮೊಬೈಲು ರೀಚಾಗಿರಲಿಲ್ಲ. ಕೋಪ, ಬೇಸರದಿಂದ ಕರೆ ಮಾಡುವುದು ನಿಲ್ಲಿಸಿದ್ದಳು. ಆ ಮಧ್ಯಾಹ್ನ ಅಮ್ಮನ ಕರೆ ಬಂತು, ಲ್ಯಾಂಡ್ ಲೈನಿನಿಂದ... ಏನಂತ ಕೇಳಿದರೆ, ''ಬಿಎಸ್ಸೆನ್ನೆಲ್ ನೆಟ್ವರ್ಕು ಬರಬಹುದು, ಅದನ್ನು ಹಾಕುವ ಅಂತ ಹೇಳ್ತಿದಾರೆ... ಏನ್ಮಾಡ್ಲಿ...'' ಪ್ರತಿ ಸಲ ಮನೆಗೆ ಹೋದಾಗಲೂ ನೆಟ್ ವರ್ಕ್ ಸರ್ಚ್ ಕೊಟ್ಟು ಫೇಲ್ ಆಗಿದ್ದ ಅವಳಿಗೆ ಗೊತ್ತಿತ್ತು, ಬಿಎಸ್ಸೆನ್ನೆಲ್ ಮೊಬೈಲ್ ಕಥೆ ಕೂಡ ಇದೇ ಅಂತ.


"ನೀನಿನ್ನೂ ವಾಪಸ್ ಕೊಟ್ಟಿಲ್ವಾ ಅದನ್ನು..." ಕೇಳಿದಳು. ಇಲ್ಲ, "ಏನಾದ್ರೂ ಮಾಡ್ಬಹುದಾ ಅಂತ ನೋಡ್ಲಿಕ್ಕೆ ಹೇಳಿದರು ಅಂಗಡಿಯವರು..." ಅಂದಳು ಅಮ್ಮ. ಪ್ರತೀ ಸಲ ಏನು ಮಾಡಬೇಕು ಅಂತ ತನ್ನ ಅಭಿಪ್ರಾಯ ಹೇಳಿದ ಮೇಲೂ ಮತ್ತೆ ಅಕ್ಕಪಕ್ಕದವರ ಮಾತು ಕೇಳಿಕೊಂಡು ಒದ್ದಾಡುವ ಅಮ್ಮನ ಮೇಲೆ ಅವಳಿಗೆ ವಿಪರೀತ ಕೋಪ ಬಂತು. ಕೇಳಿಯೇ ಬಿಟ್ಟಳು ಅಮ್ಮನಿಗೆ, "ಅಮ್ಮಾ ನೀನು ಮೊಬೈಲು ತಗೊಳ್ಳುವ ಉದ್ದೇಶ ಏನು" ಅಂತ. "ನಿನ್ನ ಹತ್ರ ಬೇಕಾದಾಗ ಮಾತಾಡಲಿಕ್ಕೆ ಅನುಕೂಲವಾಗಲಿ ಅಂತ" ಅಂದಳು ಅಮ್ಮ.


ಅವಳ ತಲೆ ಕೆಟ್ಟು ಹೋಯಿತು. ಆ ವ್ಯವಸ್ಥೆ ಈಗಲೂ ಅಮ್ಮನಿಗಿತ್ತು. ಮಾತಾಡಬೇಕೆನಿಸಿದಾಗಲೆಲ್ಲ ಲ್ಯಾಂಡ್ ಲೈನಿಂದ ಫೋನ್ ಮಾಡುವ ಅಮ್ಮ ಆಫೀಸಿನಲ್ಲಿದೀಯಾ ಅಂತ ಕೇಳುತ್ತಿದ್ದಳು. ಹೌದೆಂದ ಮೇಲೂ ಅಲ್ಲಿ ಬೊಜ್ಜ, ಇಲ್ಲಿ ಇಂಥವರ ಸೊಸೆ ಹೆತ್ತಳು, ನಾಳೆ ಅವರ ಮಗಳಿಗೆ ಮದುವೆ, ಇವರ ಮನೆಯ ಗೃಹಪ್ರವೇಶ - ಇತ್ಯಾದಿ ಸಿಕ್ಕಿಸಿಕ್ಕಿದವರ ವಿಚಾರಗಳನ್ನು ಮಗಳಿಗೆ ಬೇಕೋ ಬೇಡವೋ ಅಂತ ಯೋಚಿಸದೆ ಅಮ್ಮ ಹೇಳುತ್ತಿದ್ದಳು. ಅದನ್ನೆಲ್ಲ ಕೇಳಿಸಿಕೊಳ್ಳುವ ತಾಳ್ಮೆಯಿಲ್ಲದಿದ್ದರೂ, ಫೋನ್ ಕಟ್ ಮಾಡಿದರೆ ಅಮ್ಮನಿಗೆ ಬೇಸರವಾಗುತ್ತದೆಂದು ಸುಮ್ಮನೆ ಕೇಳಿಸಿಕೊಳ್ಳುತ್ತಲೇ ಬೇರೆ ಕೆಲಸ ಮಾಡುತ್ತಿದ್ದಳು ಅವಳು. ಕೊನೆಗೆ ಇಡಲಾ ಅಂತ ಕೇಳಿ ಅಮ್ಮ ಫೋನಿಟ್ಟ ಮೇಲೆ, ಅಷ್ಟು ಹೊತ್ತು ಅದೇನು ಮಾತಾಡಿದಳೋ ನೆನಪಿರುತ್ತಿರಲಿಲ್ಲ. ಹಾಗೆಯೇ ಅವಳಿಗೆ ಬೇಕಾದಾಗ ಅಮ್ಮನಿಗೆ ಫೋನ್ ಮಾಡಿದರೆ ಅದು ರಿಂಗಾಗಿದ್ದೇ ಕೇಳದ ಕಾರಣ ತನಗೆ ಬೇಕಾದಾಗ ಅಮ್ಮನ ಜತೆ ಮಾತಾಡುವ ಸೌಲಭ್ಯ ಅವಳಿಗಿಲ್ಲವಾಗಿತ್ತು.


ಎಲ್ಲಾ ಅಸಮಾಧಾನ, ಸಿಟ್ಟು ಹೊಟ್ಟೆಯಿಂದ ಹೊರಬರುವ ಕಾಲ ಬಂದಿತ್ತು. ಹೇಳಿದಳು - "ಅಮ್ಮಾ ದಮ್ಮಯ್ಯ, ನನ್ನ ಮಾತಿಗೆ ಏನಾದ್ರೂ ಒಂಚೂರು ಬೆಲೆ ಇದೆ ಅಂತಾದ್ರೆ ಆ ಮೊಬೈಲು ವಾಪಸ್ ಕೊಡು, ಲ್ಯಾಂಡ್ ಲೈನು ಸರಿಮಾಡಿಸು. ಹಾಗೆ ನೀ ಮಾಡಿಸ್ಲಿಲ್ಲಾಂದ್ರೆ ಮತ್ತೆ ನನ್ ಹತ್ರ ಮಾತಾಡೂದೇ ಬೇಡ, ನಿಂಗೆ ಯೂರ್ ಬೇಕೋ ಅವರ ಮಾತು ಕೇಳ್ಕೊಂಡು ನಿಂಗೆ ಬೇಕಾದ್ದು ಮಾಡ್ಕೋ, ನಾ ನಿನ್ನ ತಂಟೆಗೇ ಬರೂದಿಲ್ಲ... ಊರಿಗೂ ಬರೂದಿಲ್ಲ" ಅಷ್ಟು ಹೇಳಬೇಕಾದರೆ ಅವಳ ದನಿ ಗದ್ಗದವಾಗಿತ್ತು...


ಅಮ್ಮ ಏನು ಮಾಡಬೇಕೆಂದು ತಿಳಿಯದೇ ಮಗಳನ್ನು ಸಮಾಧಾನಿಸತೊಡಗಿದಳು... "ಹಾಗೆಲ್ಲಾ ಹೇಳ್ಬೇಡ, ಕೋಪ ಮಾಡ್ಬೇಡ, ನೀ ಹೇಳಿದಂಗೇ ಮಾಡ್ತೇನೆ, ನಿನ್ನ ಹತ್ರ ಮಾತಾಡ್ಲಿಕ್ಕಾಗದಿದ್ದ ಮೇಲೆ ಮೊಬೈಲು ಯಾಕೆ ನಂಗೆ, ಊರಿಗೇ ಬರೂದಿಲ್ಲ ಅಂತೆಲ್ಲ ಹೇಳ್ಬೇಡ, ಅಪ್ಪ ಬೇಜಾರ್ ಮಾಡ್ಕೊಳ್ತಾರೆ, ನಿನಗೋಸ್ಕರವೇ ತಾನೇ ಇಷ್ಟೆಲ್ಲ ಮಾಡ್ತಿರೂದು..." ಇತ್ಯಾದಿ... ಮಾತಾಡುತ್ತ ಮಾತಾಡುತ್ತ ಅಮ್ಮನ ದನಿ ಒದ್ದೆಯಾಗಿ ನೀರೊಡೆದಿತ್ತು, ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ ಮಗಳ ಕಣ್ಣಲ್ಲೂ ಗಂಗಾಧಾರೆ ಹರಿದಿತ್ತು...

ಆತುದಿಯ ರಿಂಗಾಗಲಾರದ ಲ್ಯಾಂಡ್ ಲೈನು ಅಮ್ಮನ ಕಣ್ಣೀರಿಗೆ ಸಾಕ್ಷಿಯಾದರೆ, ಈ ತುದಿಯಲ್ಲಿದ್ದ ಮೊಬೈಲು ಮಗಳ ಸಂಕಟಕ್ಕೆ ಸಾಥ್ ಕೊಟ್ಟಿತ್ತು.

Saturday, October 4, 2008

ಎಲ್ಲವೂ ಸರಿಯಿತ್ತು...


ಮಟಮಟ ಮಧ್ಯಾಹ್ನ, ಅಂದು ದೂರದೂರಿಗೆ ಪಯಣ... ಕಣ್ಣು ತೇವವಾಗಿಸಿಕೊಂಡು ಕಳಿಸಿಕೊಟ್ಟ ಅಮ್ಮ, ಕಾಳಜಿಯಿಂದ ಬಸ್ಸು ಹತ್ತಿಸಿದ ಅಪ್ಪನ ಮುಖಗಳನ್ನು ಮರೆಯಲೆತ್ನಿಸುತ್ತಾ ಆಕೆ ಬಸ್ಸಿನಲ್ಲಿ ಕುಳಿತಿದ್ದಳು.

ಒಂದು ದಿನದ ಪಯಣ, ಕಿಟಿಕಿ ಬದಿಯ ಸೀಟು. ಓದಲೆಂದು ಸುಧಾ, ತರಂಗ... ಬೋರಾದಾಗ ಬಾಯಿಯಾಡಿಸಲೆಂದು ಅಮ್ಮ ಕಟ್ಟಿಕೊಟ್ಟ ಚಕ್ಕುಲಿ... ಜತೆಗೆ ರಜಾದಲ್ಲಿ ಮನೆಯಲ್ಲಿ ಕಳೆದ ನೆನಪುಗಳು.

ಆಕೆ ಸುಧಾ ತೆರೆದು ಕಥೆಯೊಂದನ್ನು ಓದಲು ಶುರುಮಾಡಿದಳು. ಹಾಗೇ ಅದರಲ್ಲಿ ಮುಳುಗಿದಳು. ಬಸ್ಸು ಹೊರಡಲು ಇನ್ನು ಹತ್ತೇ ನಿಮಿಷ. 

ಆಕೆಯ ಪಕ್ಕದ ಸೀಟಿನಲ್ಲಿ ಬಂದು ಕುಳಿತನಾತ. ಲಗೇಜನ್ನೆಲ್ಲ ಮೇಲಿಟ್ಟು, ಜಾಕೆಟು ಸೀಟಿನ ಮೇಲೆ ಬಿಚ್ಚಿಟ್ಟು ಸುತ್ತಮುತ್ತ ಎಲ್ಲಾ ನೋಡಿ, ಮತ್ತೆ ಕೆಳಗಿಳಿದು, ನೀರು ಕೊಂಡು ತಂದು, ಹೋಲ್ಡರಲ್ಲಿ ಇಟ್ಟು ಸೆಟಲ್ ಆದ. 

ಅವಳು ಪುಸ್ತಕದೊಳಗಿದ್ದರೂ ಅವಳೊಳಗೆ ಕಳವಳ. ಎಂತಹವನೋ ಏನೋ, ಅಪರಿಚಿತನ ಜತಗೆ ಕುಳಿತುಕೊಳ್ಳುವ ಕರ್ಮ. ಲೇಡೀಸ್ ಸೀಟ್ ಕೇಳಬೇಕಿತ್ತು ಅಂದುಕೊಂಡಳು. 

ಆಮೇಲೆ ತನಗೆ ತಾನೇ ಬೈದುಕೊಂಡಳು, ಕಂಡವರನ್ನೆಲ್ಲ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದೀನಲ್ಲ ಅಂತ ತನ್ನ ಬಗ್ಗೆ ತನಗೇ ಅಸಹ್ಯವೆನಿಸಿತು. ಸರಿ ಹೋಗದಿದ್ದರೆ ಇದ್ದೇ ಇದ್ದಾನೆ ಕಂಡಕ್ಟರ್. ಆತನಲ್ಲಿ ಸಿಂಗಲ್ ಸೀಟ್ ಕೇಳಿದರಾಯಿತು ಅಂದುಕೊಂಡಳು.

ಸ್ವಲ್ಪ ಹೊತ್ತಲ್ಲಿ ಬಸ್ ಹೊರಟಿತು. ಒಬ್ಬೊಬ್ಬರದೇ ಟಿಕೆಟ್ ಚೆಕ್ ಮಾಡುತ್ತಾ ಕಂಡಕ್ಟರ್ ಇವರ ಹತ್ತಿರಕ್ಕೆ ಬಂದ. ಆತ ಟಿಕೆಟ್ ತೋರಿಸಿದ. ಓದಿನಿಂದ ಬ್ರೇಕ್ ತೆಗೆದುಕೊಂಡ ಆಕೆಯೂ ಟಿಕೆಟ್ ತೋರಿಸಿದಳು. ಒಂದು ಕಥೆ ಓದಿ ಮುಗಿಸಿಯಾಗಿತ್ತು. ಹಾಗೇ ಅದನ್ನು ಮೆಲುಕು ಹಾಕುತ್ತಿದ್ದರೆ ಆತ ಇಂಗ್ಲೀಷಿನಲ್ಲಿ ಕೇಳಿದ, ಎಲ್ಲಿ ಹೋಗುತ್ತಿದ್ದೀಯಾ ಅಂತ. 

ಯಾಕೋ ಒಳ್ಳೆಯವನ ಥರ ಕಂಡ. ಯಾವಾಗಲೂ ಸುಳ್ಳು ಹೇಳುವ ಅವಳು ಈಸಲ ಸತ್ಯ ಹೇಳಿದಳು. ಪ್ರಯಾಣದ ಉದ್ದೇಶ ಕೇಳಿದ. ಕೆಲಸದ ಮೇಲೆಂದಳು. ಇದು ಸ್ವಂತ ಊರಾ ಅಂತ ಕೇಳಿದ. ಹೌದೆಂದಳು. 

ಮತ್ತೆ ಆಕೆಯನ್ನು ಪುಸ್ತಕದೆಡೆಗೆ ಕಣ್ಣು ಹಾಯಿಸಲು ಬಿಡದೆ ಮಾತು ಆರಂಭಿಸಿದನಾತ. ದಿಲ್ಲಿಯವನಂತೆ. ಈ ಊರಲ್ಲಿ ಕೆಲಸ ಮಾಡುತ್ತಾನಂತೆ. ಆ ಊರಲ್ಲಿ ಅವನ ತಮ್ಮನಿದ್ದಾನಂತೆ. ಆತನನ್ನು ಭೇಟಿ ಮಾಡಲು ಹೋಗುತ್ತಿರುವುದಂತೆ. ಅಲ್ಲಿಂದ ಹಾಗೇ ದಿಲ್ಲಿಗೆ ಹೋಗುತ್ತಾನಂತೆ. ಆ ಊರಿನ ಬಗ್ಗೆ ಏನೂ ಗೊತ್ತಿಲ್ಲವಂತೆ. ಮೊದಲ ಸಲ ಹೋಗುತ್ತಿರುವುದಂತೆ.

ಬಸ್ಸು ನಿಂತಲ್ಲಿ ಊಟಕ್ಕೆ ಕರೆದ. ಆಕೆ ನಯವಾಗಿ ನಿರಾಕರಿಸಿದಳು, ಅಮ್ಮ ಚಪಾತಿ ಕಟ್ಟಿಕೊಟ್ಟಿದ್ದಳಲ್ಲ. ತಿಂದು ಮುಗಿಸಿ ನೀರು ಕುಡಿಯುತ್ತಿದ್ದರೆ ಆತ ಫ್ರೂಟಿ ಪ್ಯಾಕೆಟ್ ಹಿಡಿದು ಬಂದ. This is for you ಅಂದ. ಅಯ್ಯೋ ಇದ್ಯಾಕೆ ತರಲಿಕ್ಕೆ ಹೋದೆ ಎಂದಳು. ಅವನು ನಾನು ಅಲ್ಲೇ ಕುಡಿದೆ, ನಿನಗೆಂದೇ ತಂದೆ ಎಂದ. ಮತ್ತೆ ಬೇಡವೆನ್ನದೆ ತೆಗೆದುಕೊಂಡಳು. 

ಮತ್ತೆ ಮಾತು ಶುರು. ಶುದ್ಧ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಆತ ರಾಜಕೀಯದಿಂದ ಹಿಡಿದು ದಿಲ್ಲಿಯವರೆಗೆ, ತಾನಿದ್ದ ಊರಿನ ಸಮುದ್ರತೀರದಿಂದ ಹಿಡಿದು ಚೆನ್ನೈಯ ಹೋಟೆಲುಗಳ ವರೆಗೆ ಸುಮಾರು ವಿಚಾರಗಳನ್ನು ಹೇಳುತ್ತಿದ್ದರೆ ಆಕೆಯೂ ಹೂಂಗುಟ್ಟಿದಳು, ತನಗನಿಸಿದ್ದು ಹೇಳಿದಳು. ಆತನ ವಾಗ್ಧಾರೆಯ ನಡುವೆ ಪುಸ್ತಕ ಓದುವುದಂತೂ ದೂರದ ಮಾತು. ಮಾತಾಡುತ್ತ ಹೋದಂತೆ ಅಪರಿಚಿತ ಭಾವ ಕಳೆಯುತ್ತ ತಕ್ಕಮಟ್ಟಿಗೆ ಪರಿಚಿತನೆಂಬಷ್ಟು ಮಟ್ಟದ ಬಂಧ ಆತನ ಜತೆಗೆ ಬೆಳೆಯಿತು.

ಹಾಗೇ ಸಮಯ ಕಳೆದು ರಾತ್ರಿಯಾಯಿತು. ಎಲ್ಲೋ ಬಸ್ ಊಟಕ್ಕೆಂದು ನಿಂತಲ್ಲಿ ಜತೆಗೇ ಊಟವೂ ಮುಗಿಯಿತು. ಬಸ್ ಮತ್ತೆ ಹೊರಟಿತು. ಹೊರಗೆ ಕೊರೆವ ಚಳಿ, ಬೆಚ್ಚಗಿನ ಸ್ವೆಟರ್, ಅಮ್ಮ ಕಟ್ಟಿಕೊಟ್ಟ ಚಕ್ಕುಲಿ ಅವನ ಜತೆ ಹಂಚಿಕೊಂಡು ಹರಟೆ ಹೊಡೆದಳು. ದೇವರ ಬಗ್ಗೆ, ಅಮ್ಮನ ಬಗ್ಗೆ, ಬಾಲ್ಯದ ಬಗ್ಗೆ, ಬದುಕಿನ ಬಗ್ಗೆ, ದ್ವೇಷದ ಬಗ್ಗೆ, ಪ್ರೀತಿಯ ಬಗ್ಗೆ… 

ಆತನ ಬಗ್ಗೆ ತಪ್ಪು ತಿಳಿದುಕೊಂಡಿದ್ದಕ್ಕೆ ತನ್ನ ಬಗ್ಗೆಯೇ ನಾಚಿಕೆಯಾಗಿದ್ದಕ್ಕೋ ಏನೋ, ಸ್ವಲ್ಪ ಹೆಚ್ಚಾಗಿಯೇ ಆತನ ಜತೆಗೆ ಮಾತಾಡಿದಳು. 

****

ಮಾತಾಡುತ್ತ ಮಾತಾಡುತ್ತ ಎಷ್ಟು ಹೊತ್ತು ಕಳೆಯಿತೋ ಗೊತ್ತಿಲ್ಲ. ಅದ್ಯಾವುದೋ ಅಪರಾತ್ರಿಯಲ್ಲಿ ಅವಳಿಗೆ ಆಕಳಿಕೆ, ಕಣ್ಣು ಎಳೆಯಲಾರಂಭಿಸಿತು. ಅಷ್ಟರಲ್ಲಿ ಅವನೇ ಗುಡ್ ನೈಟ್ ಹೇಳಿದ. ತಿರುಗಿ ಗುಡ್ ನೈಟ್ ಹೇಳಿ ಮಲಗಿದಳು. ಆದರೆ ನಿದ್ದೆ ಬರಲಿಲ್ಲ.

ನಾಳೆಯಿಂದ ಅದೇ ಆಫೀಸು. ಅದೇ ಕೆಲಸ... ದಿನಾ ಆಫೀಸಿಗೆ ಹೋಗುವ ಅದೇ ಹಳೆಯ ದಾರಿ... ಮಾತಿಲ್ಲದ, ಯಾವುದೇ ಉದ್ದೇಶವಿಲ್ಲದೆ ಸುಮ್ಮನೆ ಕಾಡುವ ಅದೇ ಅವನು... ತಲೆಗೊಂದು ಮಾತಾಡುವ ಅದೇ ಅವರು... ಎಲ್ಲವೂ ಬೋರ್ ಅನಿಸುತ್ತಿತ್ತು. ಮಾತಿದ್ದಷ್ಟು ಹೊತ್ತು ಕಾಡದ ಭಾವಗಳು ಶೂನ್ಯದಲ್ಲಿ ಬಂಡಿ ಹೊಡೆಯುತ್ತ ಬಂದು ಮನದೊಳಗೆ ನುಗ್ಗಿದವು. 

ಪಕ್ಕದಲ್ಲಿದ್ದ ಆತ ನಿದ್ದೆಯಲ್ಲೇ ಆಕೆಯ ಕಡೆ ತಿರುಗಿ ಮಲಗಿದ. ಅವಳು ನಿದ್ದೆ ಮರೆತುಹೋಗಿ ಸುಮ್ಮನೆ ಯೋಚಿಸುತ್ತ ಕಿಟಿಕಿಯಾಚೆಗೆ ಕತ್ತಲು ನೋಡುತ್ತ ಮಲಗಿದ್ದಳು.

ಆತ ನಿದ್ದೆಯಲ್ಲೇ ಹತ್ತಿರ ಸರಿದ. ಮಗುವಿನಂತೆ ನಿದ್ದೆ ಮಾಡುತ್ತಿದ್ದಾನೆ. ತಾನು ಪುಟ್ಟ ಮಗುವಾಗಿದ್ದಾಗ ಕೋಣೆಯ ಒಂದು ಬದಿಯಲ್ಲಿ ಮಲಗಿದವಳು ನಿದ್ದೆಯಲ್ಲೇ ಮೀಟರ್-ಗಟ್ಟಲೆ ದೂರ ಉರುಳಿ ಎಚ್ಚರವಾದಾಗ ಇನ್ನೊಂದು ಬದಿಯಲ್ಲಿರುತ್ತಿದ್ದುದು ನೆನಪಾಗಿ ನಗು ಬಂತು. ಹಾಗೇ ಮತ್ತೆ ನೆನಪುಗಳಲ್ಲಿ ಕಳೆದುಹೋದಳು.

ಸ್ವಲ್ಪ ಹೊತ್ತಿನ ನಂತರ ನಿದ್ದೆಯಲ್ಲಿದ್ದ ಆತನ ಕೈ ನಿಧಾನವಾಗಿ ಅವಳ ಕಾಲಿನ ಮೇಲೆ ಬಂತು. ನಿದ್ದೆಯಲ್ಲಿ ಹೀಗೆಲ್ಲಾ ಆಗೋ ಸಾಧ್ಯತೆ ಇದೆಯಾ ಅಂತ ಸಂಶಯದಲ್ಲಿ ಆತನ ಮುಖ ನೋಡಿದರೆ ಹೌದು, ಆತನಿಗೆ ಗಾಢ ನಿದ್ರೆ. ಕೈಯನ್ನು ಪಕ್ಕಕ್ಕೆ ಸರಿಸಿದಳು, ಆದರೆ ತಲೆಲ್ಲಿ ಅಲಾರಂ ಜೋರಾಗಿ ಹೊಡೆಯಲಾರಂಭಿಸಿತು.

ಮತ್ತೆ ಸ್ವಲ್ಪ ಹೊತ್ತಿಗೆ ಪುನಹ ಆತನ ಕೈ ಅವಳ ಕಾಲಮೇಲೆ ಬಂತು. ಮತ್ತೆ ಅದನ್ನು ಸರಿಸಿದವಳ ನಿದ್ರೆ ಹಾರಿಹೋಯಿತು. ತಲೆ ಮಿಂಚಿನ ವೇಗದಲ್ಲಿ ಕೆಲಸ ಮಾಡಲಾರಂಭಿಸಿತು. ಅವನ ಉಸಿರಾಟ ನಿದ್ರೆಯಲ್ಲಿದ್ದಾಗ ಇರಬೇಕಾದಂತೆ ಮಾಮೂಲಾಗಿಯೇನೂ ಇರಲಿಲ್ಲ, ನಿದ್ರೆಯ ನಟನೆ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಎಷ್ಟು ಸಲ ಇದನ್ನು ಸಹಿಸಲು ಸಾಧ್ಯ?

ಅಲ್ಲಿಯವರೆಗಿನ ಪ್ರಯಾಣದಲ್ಲಿ ಆತನ ಜತೆಗೆ ಚೆನ್ನಾಗಿ ಹೊಂದಿಕೊಂಡು, ಮಾತಾಡುತ್ತ ಬಂದಿದ್ದಳಾದ ಕಾರಣ, ಈಗ ಆತನ ಬಗ್ಗೆ ಕಂಡಕ್ಟರನಿಗೆ ದೂರು ಕೊಡುವುದು ಯಾಕೋ ಸರಿಯೆನ್ನಿಸಲಿಲ್ಲ. ಅಕ್ಕಪಕ್ಕದವರಿಗೆ ಹೇಳುವುದಂತೂ ದೂರವೇ ಉಳಿಯಿತು. ಏನು ಮಾಡಬಹುದು?

ಕಾಲೇಜು ಓದುತ್ತಿದ್ದಾಗಲೊಮ್ಮೆ ಬಸ್-ನಲ್ಲಿ ಹೋಗುವಾಗ ಹದಮೀರಿ ವರ್ತಿಸಿದವನನ್ನು ಎದುರಿಸಲಾಗದೆ, ಆಡಲಾಗದೆ, ಅನುಭವಿಸಲಾಗದೆ ಕಷ್ಟಪಟ್ಟಿದ್ದು ನೆನಪಾಯಿತು. ಮತ್ತೊಂದು ಸಾರಿ ಇದೇ ರೀತಿ ದೂರಪ್ರಯಾಣದ ಸಮಯ ಪಕ್ಕ ಕೂತ ರಾಜಕಾರಣಿಯೊಬ್ಬ ಈಕೆಯ ಪೂರ್ವಾಪರವೆಲ್ಲ ವಿಚಾರಿಸಿದ್ದಾದ ಮೇಲೆ, ನನ್ನೂರಿಗೆ ಬಾ, ನಿನಗೆ ಕೆಲಸ ಕೊಡಿಸುತ್ತೇನೆಂದು ಕಣ್ಣುಹೊಡೆದು ಹೇಳಿದ್ದು, ಲೈಟು ಆರಿದ ಮೇಲೆ ತನ್ನ ಮಿತಿ ದಾಟಹೊರಟ ಆತನಿಗೆ ತಾನು ಕೆಲಸ ಮಾಡುವುದು ಎಲ್ಲಿ ಎಂದು ತಿಳಿಸಿ ಸಾರಿ ಕೇಳುವಂತೆ ಮಾಡಿದ್ದು, ಎಲ್ಲಾ ನೆನಪಾಯ್ತು…

ಈ ಬಾರಿ ಏನು ಮಾಡುವುದು ಅಂತ ಮಿಂಚಿನ ವೇಗದಲ್ಲಿ ತಲೆ ಕೆಲಸ ಮಾಡುತ್ತಿರುವಾಗ ಆತನ ಕೈ ಮತ್ತೆ, ಮೆಲ್ಲಗೆ, ಅವಳ ಕಾಲಮೇಲೆ ಸ್ವಲ್ಪವೇ ಸ್ವಲ್ಪ ಚಲಿಸಿತು. ಅಚಾನಕ್ಕಾಗಿ ಆಕೆ ತನ್ನ ಎಡಗೈಯನ್ನು ಆತನ ಕೈಯ ಮೇಲಿಟ್ಟಳು. ಆತನ ಕೈ ಇದ್ದಲ್ಲೇ ಸ್ತಬ್ಧವಾಯಿತು. 

ಆತನೆಡೆಗೆ ನೋಡಿದರೆ ಮುದ್ದುಮಗುವಿನಂತೆ ಮಲಗಿದ್ದ ಅವನಿಗೆ ಏನೊಂದೂ ತಿಳಿಯದಂತಹ ಗಾ....ಢ ನಿದ್ರೆ… ಅಂತ ಯಾರೇ ಆದರೂ ನಂಬಬೇಕು, ಆರೀತಿಯ ನಟನೆ! ಆಕೆ ತನ್ನ ಕೈಯನ್ನು ಹಿಡಿದಿಟ್ಟಿದ್ದು ಕೂಡ ಗೊತ್ತಾಗದಂತೆ. ಸಿಕ್ಕಿಬಿದ್ದ ನಂತರ ಹೇಗೆ ಪಾರಾಗುವುದೆಂದು ತಿಳಿಯದಾಗಿದ್ದ ಆತ ನಿದ್ರೆ ನಟಿಸುವ ಹೊರತು ಬೇರೇನೂ ಮಾಡುವ ಹಾಗಿರಲಿಲ್ಲ.

ಅವಳಿಂದ ಬೇರೆಲ್ಲ ಯೋಚನೆ ಓಡಿಹೋಗಿ, ಸದ್ಯದ ಪರಿಸ್ಥಿತಿ ಮಾತ್ರ ಸತ್ಯವಾಯಿತು. ಎಲ್ಲೂ ತಪ್ಪಿಸಿಕೊಳ್ಳಲು, ಚಲಿಸಲು ಸಾಧ್ಯವಿಲ್ಲದಂತೆ ಆ ಕೈ ಹಿಡಿದಿದ್ದ ಅವಳಿಗೆ ಅದೆಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ. ಬೆಳಗಿನ ಜಾವಕ್ಕೆ ಎಚ್ಚರಾದಾಗಲೂ ಆತ ಅವಳ ಕಡೆಗೇ ತಿರುಗಿ ಮಲಗಿದ್ದ. ಆತನ ಕೈ ಅವಳ ಕೈಯೊಳಗೆ ಹಾಗೇ ಇತ್ತು. ಇನ್ನು ಸಾಕು, ಇನ್ನೇನೂ ಆಗಲಾರದು ಅಂತ ಖಚಿತವಾದ ಮೇಲೆ ಆತನ ಕೈ ಕಿತ್ತೆಸೆದಳು. ಆತ ಏನೂ ಗೊತ್ತಾಗದವನಂತೆ ಹಾಗೇ ಬಿದ್ದುಕೊಂಡಿದ್ದ.

ಸ್ವಲ್ಪ ಹೊತ್ತಿಗೆ ಆತ ಎಚ್ಚರಾದ ನಟನೆ ಮಾಡಿದ. ಆಕೆಯನ್ನು ಮಾತಾಡಿಸಲು ಯತ್ನಿಸಿದ. ಅಷ್ಟರಲ್ಲಾಗಲೇ ಪುಸ್ತಕದಲ್ಲಿ ಮುಳುಗಿದ್ದ ಅವಳು ಪ್ರತಿಕ್ರಿಯಿಸಲಿಲ್ಲ. ಆತ ಉಗುರು ಕಚ್ಚುತ್ತ ಅವಳ ಪಕ್ಕದಲ್ಲಿ ಕೂತಿದ್ದರೆ, ಅವಳು ಬಂಡೆಕಲ್ಲಾಗಿದ್ದಳು.

ಅವಳೊಳಗೆ ಯೋಚನೆ ಸಾಗಿಯೇ ಇತ್ತು. ಇದು ನನಗೆ ಬೇಕಾಗಿದ್ದಾಗಿತ್ತಾ ಅಥವಾ ಬೇಡವಿದ್ದೂ ಅನಿವಾರ್ಯವಾಗಿ ಆತನ ಜತೆ ಅಷ್ಟು ಮಾತಾಡಿದೆನಾ ಅಥವಾ ನಾನು ಮಾತಾಡದಿರುವ ಆಯ್ಕೆ ಇತ್ತಾ? ಆತನ ಜತೆ ಮಾತಾಡಿದಾಗ ಖುಷಿಯಾಗಿದ್ದು ಸುಳ್ಳಾ? ಅಷ್ಟೆಲ್ಲ ತಿಳಿದುಕೊಂಡಂತಿದ್ದ ವ್ಯಕ್ತಿ ನಾ ಮಾತಾಡಿದ್ದೇ ಗಡಿ ಮೀರಲಿಕ್ಕೆ ಅನುಮತಿ ಎಂದುಕೊಂಡಿದ್ದು ಯಾಕಿರಬಹುದು? ಮನಸು ಕಲ್ಲಾಗಿದ್ದು ಯಾವ ಬಿಂದುವಿನಲ್ಲಿ?

ಅವಳ ತಲೆಯಲ್ಲಿ ಗಾಡಿ ಹೀಗೆಲ್ಲಓಡುತ್ತಿದ್ದರೂ ಬೇರೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ನಿನ್ನೆ ಅಷ್ಟೆಲ್ಲ ಮಾತಾಡುತ್ತಿದ್ದವರು ಇವತ್ತು ಯಾಕೆ ಮಾತಾಡುತ್ತಿಲ್ಲವೆಂದು ಯಾರಿಗೂ ಪ್ರಶ್ನೆಗಳಿದ್ದಂತೆ ಕಾಣಲಿಲ್ಲ. ಇವರ ನಡುವಿನ ಖಾಸಗಿ ವ್ಯವಹಾರಗಳು ಖಾಸಗಿಯಾಗಿಯೇ ಉಳಿದಿತ್ತು. ಎಲ್ಲವೂ ಸರಿಯಿತ್ತು. ಬಸ್ ಅದರ ಪಾಡಿಗೆ ಓಡುತ್ತಿತ್ತು. ಬದುಕೂ ಅದರ ಪಾಡಿಗೆ ಓಡುತ್ತಲೇ ಇತ್ತು.