ಮಟಮಟ ಮಧ್ಯಾಹ್ನ, ಅಂದು ದೂರದೂರಿಗೆ ಪಯಣ... ಕಣ್ಣು ತೇವವಾಗಿಸಿಕೊಂಡು ಕಳಿಸಿಕೊಟ್ಟ ಅಮ್ಮನ ಮುಖ, ಕಾಳಜಿಯಿಂದ ಬಸ್ಸು ಹತ್ತಿಸಿದ ಅಪ್ಪನ ಮುಖವನ್ನು ಮರೆಯಲೆತ್ನಿಸುತ್ತಾ ಆಕೆ ಬಸ್ಸಿನಲ್ಲಿ ಕುಳಿತಿದ್ದಳು. ಒಂದು ದಿನದ ಪಯಣ, ಕಿಟಿಕಿ ಬದಿಯ ಸೀಟು. ಓದಲೆಂದು ಸುಧಾ, ತರಂಗ... ಬೋರಾದಾಗ ಬಾಯಿಯಾಡಿಸಲೆಂದು ಅಮ್ಮ ಕಟ್ಟಿಕೊಟ್ಟ ಚಕ್ಕುಲಿ... ಜತೆಗೆ ರಜಾದಲ್ಲಿ ಮನೆಯಲ್ಲಿ ಕಳೆದ ನೆನಪುಗಳು.
ಆಕೆ ಸುಧಾ ತೆರೆದು ಕಥೆಯೊಂದನ್ನು ಓದಲು ಶುರುಮಾಡಿದಳು. ಹಾಗೇ ಅದರಲ್ಲಿ ಮುಳುಗಿದಳು. ಬಸ್ಸು ಹೊರಡಲು ಇನ್ನು ಹತ್ತೇ ನಿಮಿಷ. ಆಕೆಯ ಪಕ್ಕದ ಸೀಟಿನಲ್ಲಿ ಬಂದು ಕುಳಿತನಾತ. ಲಗೇಜನ್ನೆಲ್ಲ ಮೇಲಿಟ್ಟು, ಜಾಕೆಟು ಸೀಟಿನ ಮೇಲೆ ಬಿಚ್ಚಿಟ್ಟು ಸುತ್ತಮುತ್ತ ಎಲ್ಲಾ ನೋಡಿ, ಮತ್ತೆ ಕೆಳಗಿಳಿದು, ನೀರು ಕೊಂಡು ತಂದು, ಹೋಲ್ಡರಲ್ಲಿ ಇಟ್ಟು ಸೆಟಲ್ ಆದ. ಅವಳು ಪುಸ್ತಕದೊಳಗಿದ್ದರೂ ಒಳಗೊಳಗೇ ಕಳವಳ. ಎಂತಹವನೋ ಏನೋ, ಸರಿಯಿಲ್ಲವೆನಿಸಿದರೆ ಇದ್ದೇ ಇದ್ದಾನೆ ಕಂಡಕ್ಟರ್. ಆತನಲ್ಲಿ ಸಿಂಗಲ್ ಸೀಟ್ ಕೇಳಿದರಾಯಿತು ಅಂದುಕೊಂಡಳು ಒಳಗೊಳಗೇ.
ಸ್ವಲ್ಪ ಹೊತ್ತಲ್ಲಿ ಬಸ್ ಹೊರಟಿತು. ಕೊಂಚ ಹೊತ್ತಿನ ನಂತರ ಒಬ್ಬೊಬ್ಬರದೇ ಟಿಕೆಟ್ ಚೆಕ್ ಮಾಡುತ್ತಾ ಕಂಡಕ್ಟರ್ ಇವರ ಹತ್ತಿರಕ್ಕೆ ಬಂದ. ಆತ ಟಿಕೆಟ್ ತೋರಿಸಿದ. ಓದಿನಿಂದ ಬ್ರೇಕ್ ತೆಗೆದುಕೊಂಡ ಆಕೆಯೂ ಟಿಕೆಟ್ ತೋರಿಸಿದಳು. ಒಂದು ಕಥೆ ಓದಿ ಮುಗಿಸಿಯಾಗಿತ್ತು. ಹಾಗೇ ಅದನ್ನು ಮೆಲುಕು ಹಾಕುತ್ತಿದ್ದರೆ ಆತ ಇಂಗ್ಲೀಷಿನಲ್ಲಿ ಕೇಳಿದ, ಎಲ್ಲಿ ಹೋಗುತ್ತಿದ್ದೀಯಾ ಎಂತ. ಯಾಕೋ ಒಳ್ಳೆಯವನ ಥರ ಕಂಡ. ಯಾವಾಗಲೂ ಸುಳ್ಳು ಹೇಳುವ ಅವಳು ಈಸಲ ಸತ್ಯ ಹೇಳಿದಳು. ಪ್ರಯಾಣದ ಉದ್ದೇಶ ಕೇಳಿದ. ಕೆಲಸದ ಮೇಲೆಂದಳು. ಇದು ಸ್ವಂತ ಊರಾ ಅಂತ ಕೇಳಿದ. ಹೌದೆಂದಳು. ಮತ್ತೆ ಆಕೆಯನ್ನು ಪುಸ್ತಕದೆಡೆಗೆ ಕಣ್ಣು ಹಾಯಿಸಲು ಬಿಡದೆ ಮಾತು ಆರಂಭಿಸಿದನಾತ. ದಿಲ್ಲಿಯವನಂತೆ. ಈ ಊರಲ್ಲಿ ಕೆಲಸ ಮಾಡುತ್ತಾನಂತೆ. ಆ ಊರಲ್ಲಿ ಅವನ ತಮ್ಮನಿದ್ದಾನಂತೆ. ಆತನನ್ನು ಭೇಟಿ ಮಾಡಲು ಹೋಗುತ್ತಿರುವುದಂತೆ. ಅಲ್ಲಿಂದ ಹಾಗೇ ದಿಲ್ಲಿಗೆ ಹೋಗುತ್ತಾನಂತೆ. ಆ ಊರಿನ ಬಗ್ಗೆ ಏನೂ ಗೊತ್ತಿಲ್ಲವಂತೆ. ಮೊದಲ ಸಲ ಹೋಗುತ್ತಿರುವುದಂತೆ.
ಬಸ್ಸು ನಿಂತಲ್ಲಿ ಊಟಕ್ಕೆ ಕರೆದ. ಆಕೆ ನಯವಾಗಿ ನಿರಾಕರಿಸಿದಳು, ಅಮ್ಮ ಚಪಾತಿ ಕಟ್ಟಿಕೊಟ್ಟಿದ್ದಳಲ್ಲ. ತಿಂದು ಮುಗಿಸಿ ನೀರು ಕುಡಿಯುತ್ತಿದ್ದರೆ ಆತ ಫ್ರೂಟಿ ಪ್ಯಾಕೆಟ್ ಹಿಡಿದು ಬಂದ. This is for you ಅಂದ. ಅಯ್ಯೋ ಇದ್ಯಾಕೆ ತರಲಿಕ್ಕೆ ಹೋದೆ ಎಂದಳು. ಅವನು ನಾನು ಅಲ್ಲೇ ಕುಡಿದೆ, ನಿನಗೆಂದೇ ತಂದೆ ಎಂದ. ಮತ್ತೆ ಬೇಡವೆನ್ನದೆ ತೆಗೆದುಕೊಂಡಳು. ಮತ್ತೆ ಮಾತು ಶುರು. ಶುದ್ಧ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದ ಆತ ರಾಜಕೀಯದಿಂದ ಹಿಡಿದು ದಿಲ್ಲಿಯವರೆಗೆ, ತಾನಿದ್ದ ಊರಿನ ಸಮುದ್ರತೀರದಿಂದ ಹಿಡಿದು ಚೆನ್ನೈಯ ಹೋಟೆಲುಗಳ ವರೆಗೆ ಸುಮಾರು ವಿಚಾರಗಳನ್ನು ಹೇಳುತ್ತಿದ್ದರೆ ಆಕೆಯೂ ಹೂಂಗುಟ್ಟಿದಳು, ತನಗನಿಸಿದ್ದು ಹೇಳಿದಳು. ಆತನ ವಾಗ್ಧಾರೆಯ ನಡುವೆ ಪುಸ್ತಕ ಓದುವುದಂತೂ ದೂರದ ಮಾತು. ಮಾತಾಡುತ್ತ ಹೋದಂತೆ ಅಪರಿಚಿತ ಭಾವ ಕಳೆಯುತ್ತ ತಕ್ಕಮಟ್ಟಿಗೆ ಪರಿಚಿತನೆಂಬಷ್ಟು ಮಟ್ಟದ ಬಂಧ ಆತನ ಜತೆಗೆ ಬೆಳೆಯಿತು.
ಹಾಗೇ ಸಮಯ ಕಳೆದು ರಾತ್ರಿಯಾಯಿತು. ಎಲ್ಲೋ ಬಸ್ ಊಟಕ್ಕೆಂದು ನಿಂತಲ್ಲಿ ಊಟವೂ ಮುಗಿಯಿತು. ಬಸ್ ಮತ್ತೆ ಹೊರಟಿತು. ಹೊರಗೆ ಕೊರೆವ ಚಳಿ, ಬೆಚ್ಚಗಿನ ಸ್ವೆಟರ್, ಅಮ್ಮ ಕಟ್ಟಿಕೊಟ್ಟ ಚಕ್ಕುಲಿ ಅವನ ಜತೆ ಹಂಚಿಕೊಂಡು ಹರಟೆ ಹೊಡೆದಳು. ದೇವರ ಬಗ್ಗೆ, ಅಮ್ಮನ ಬಗ್ಗೆ, ಪ್ರೀತಿಯ ಬಗ್ಗೆ, ದ್ವೇಷದ ಬಗ್ಗೆ. ಹಾಗೇ ಸ್ವಲ್ಪ ಹೊತ್ತಿಗೆ ಅವಳಿಗೆ ಆಕಳಿಕೆ, ಕಣ್ಣು ಎಳೆಯಲಾರಂಭಿಸಿತು. ಅಷ್ಟರಲ್ಲಿ ಅವನೇ ಗುಡ್ ನೈಟ್ ಹೇಳಿದ. ಪ್ರತಿಗುಡ್ ನೈಟ್ ಹೇಳಿ ಮಲಗಿದಳು.
ನಾಳೆಯಿಂದ ಅದೇ ಆಫೀಸು. ಅದೇ ಕೆಲಸ... ದಿನಾ ಆಫೀಸಿಗೆ ಹೋಗುವ ಅದೇ ಹಳೆಯ ದಾರಿ... ಮಾತಿಲ್ಲದ, ಯಾವುದೇ ಉದ್ದೇಶವಿಲ್ಲದೆ ಸುಮ್ಮನೆ ಕಾಡುವ ಅದೇ ಅವನು... ತಲೆಗೊಂದು ಮಾತಾಡುವ ಅದೇ ಅವರು... ಎಲ್ಲವೂ ಬೋರ್ ಅನಿಸುತ್ತಿತ್ತು. ಮಾತಿದ್ದಷ್ಟು ಹೊತ್ತು ಕಾಡದ ಭಾವಗಳು ಶೂನ್ಯದ ಬಂಡಿ ಹೊಡೆಯುತ್ತ ಬಂದು ಮನದೊಳಗೆ ನುಗ್ಗಿದವು. ಪಕ್ಕದಲ್ಲಿದ್ದ ಆತ ನಿದ್ದೆಯಲ್ಲೇ ಆಕೆಯ ಕಡೆ ತಿರುಗಿ ಮಲಗಿದ. ಅವಳು ನಿದ್ದೆ ಮರೆತುಹೋಗಿ ಸುಮ್ಮನೆ ಯೋಚಿಸುತ್ತ ಕಿಟಿಕಿಯಾಚೆಗೆ ಕತ್ತಲು ನೋಡುತ್ತ ಮಲಗಿದ್ದಳು.
ಆತ ನಿದ್ದೆಯಲ್ಲೇ ಹತ್ತಿರ ಸರಿದ. ಮಗುವಿನಂತೆ ನಿದ್ದೆ ಮಾಡುತ್ತಿದ್ದಾನೆ. ತಾನು ಪುಟ್ಟ ಮಗುವಾಗಿದ್ದಾಗ ಕೋಣೆಯ ಒಂದು ಬದಿಯಲ್ಲಿ ಮಲಗಿದವಳು ನಿದ್ದೆಯಲ್ಲೇ ಮೀಟರ್-ಗಟ್ಟಲೆ ದೂರ ಉರುಳಿ ಎಚ್ಚರವಾದಾಗ ಇನ್ನೊಂದು ಬದಿಯಲ್ಲಿರುತ್ತಿದ್ದುದು ನೆನಪಾಗಿ ನಗು ಬಂತು. ಹಾಗೇ ಮತ್ತೆ ನೆನಪುಗಳಲ್ಲಿ ಕಳೆದುಹೋದಳು.
ಸ್ವಲ್ಪ ಹೊತ್ತಿನ ನಂತರ ನಿದ್ದೆಯಲ್ಲಿದ್ದ ಆತನ ಕೈ ನಿಧಾನವಾಗಿ ಅವಳ ಕಾಲಿನ ಮೇಲೆ ಬಂತು. ನಿದ್ದೆಯಲ್ಲಿ ಹೀಗೆಲ್ಲಾ ಆಗೋ ಸಾಧ್ಯತೆ ಇದೆಯಾ ಅಂತ ಸಂಶಯದಲ್ಲಿ ಆತನ ಮುಖ ನೋಡಿದರೆ ಹೌದು, ಆತನಿಗೆ ಗಾಢ ನಿದ್ರೆ. ಕೈಯನ್ನು ಪಕ್ಕಕ್ಕೆ ಸರಿಸಿದಳು.
ಮತ್ತೆ ಸ್ವಲ್ಪ ಹೊತ್ತಿಗೆ ಪುನಹ ಆತನ ಕೈ ಅವಳ ಕಾಲಮೇಲೆ ಬಂತು. ಮತ್ತೆ ಅದನ್ನು ಸರಿಸಿದವಳ ನಿದ್ರೆ ಹಾರಿಹೋಯಿತು. ತಲೆ ಮಿಂಚಿನ ವೇಗದಲ್ಲಿ ಕೆಲಸ ಮಾಡಲಾರಂಭಿಸಿತು. ಅವನ ಉಸಿರಾಟ ನಿದ್ರೆಯಲ್ಲಿದ್ದಾಗ ಇರಬೇಕಾದಂತೆ ಮಾಮೂಲಾಗಿಯೇನೂ ಇರಲಿಲ್ಲ, ನಿದ್ರೆಯ ನಟನೆ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಎಷ್ಟು ಸಲ ಇದನ್ನು ಸಹಿಸಲು ಸಾಧ್ಯ. ಅಲ್ಲಿಯವರೆಗಿನ ಪ್ರಯಾಣದಲ್ಲಿ ಆತನ ಜತೆಗೆ ಚೆನ್ನಾಗಿ ಹೊಂದಿಕೊಂಡು, ಮಾತಾಡುತ್ತ ಬಂದಿದ್ದಳಾದ ಕಾರಣ, ಈಗ ಆತನ ಬಗ್ಗೆ ಕಂಡಕ್ಟರನಿಗೆ ದೂರು ಕೊಡುವುದು ಯಾಕೋ ಸರಿಯೆನ್ನಿಸಲಿಲ್ಲ. ಅಕ್ಕಪಕ್ಕದವರಿಗೆ ಹೇಳುವುದಂತೂ ದೂರವೇ ಉಳಿಯಿತು. ಏನು ಮಾಡಬಹುದು?
ಮತ್ತೆ ಸ್ವಲ್ಪ ಹೊತ್ತಿಗೆ ಪುನಹ ಆತನ ಕೈ ಅವಳ ಕಾಲಮೇಲೆ ಬಂತು. ಮತ್ತೆ ಅದನ್ನು ಸರಿಸಿದವಳ ನಿದ್ರೆ ಹಾರಿಹೋಯಿತು. ತಲೆ ಮಿಂಚಿನ ವೇಗದಲ್ಲಿ ಕೆಲಸ ಮಾಡಲಾರಂಭಿಸಿತು. ಅವನ ಉಸಿರಾಟ ನಿದ್ರೆಯಲ್ಲಿದ್ದಾಗ ಇರಬೇಕಾದಂತೆ ಮಾಮೂಲಾಗಿಯೇನೂ ಇರಲಿಲ್ಲ, ನಿದ್ರೆಯ ನಟನೆ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು. ಎಷ್ಟು ಸಲ ಇದನ್ನು ಸಹಿಸಲು ಸಾಧ್ಯ. ಅಲ್ಲಿಯವರೆಗಿನ ಪ್ರಯಾಣದಲ್ಲಿ ಆತನ ಜತೆಗೆ ಚೆನ್ನಾಗಿ ಹೊಂದಿಕೊಂಡು, ಮಾತಾಡುತ್ತ ಬಂದಿದ್ದಳಾದ ಕಾರಣ, ಈಗ ಆತನ ಬಗ್ಗೆ ಕಂಡಕ್ಟರನಿಗೆ ದೂರು ಕೊಡುವುದು ಯಾಕೋ ಸರಿಯೆನ್ನಿಸಲಿಲ್ಲ. ಅಕ್ಕಪಕ್ಕದವರಿಗೆ ಹೇಳುವುದಂತೂ ದೂರವೇ ಉಳಿಯಿತು. ಏನು ಮಾಡಬಹುದು?
ಕಾಲೇಜು ಓದುತ್ತಿದ್ದಾಗಲೊಮ್ಮೆ ಬಸ್-ನಲ್ಲಿ ಹೋಗುವಾಗ ಹದಮೀರಿ ವರ್ತಿಸಿದವನನ್ನು ಎದುರಿಸಲಾಗದೆ, ಆಡಲಾಗದೆ, ಅನುಭವಿಸಲಾಗದೆ ಕಷ್ಟಪಟ್ಟಿದ್ದು ನೆನಪಾಯಿತು. ಆವತ್ತಿಗೂ ಇವತ್ತಿಗೂ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲವೆನಿಸಿತು.
ಮತ್ತೊಂದು ಸಾರಿ ಇದೇ ರೀತಿ ದೂರಪ್ರಯಾಣಕ್ಕೆ ಎಂಎಲ್ ಎ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಬಂದು ಕೂತಿದ್ದ ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿದ ಮರಿಪುಢಾರಿ. ಈಕೆಯ ಪೂರ್ವಾಪರವೆಲ್ಲ ವಿಚಾರಿಸಿದ್ದ ಅವನಿಗೆ ಪ್ರತಿಯೊಂದೂ ಹಸಿಹಸಿಸುಳ್ಳು ಹೇಳಿದಳು. ಕೊನೆಗೆ ನನ್ನೂರಿಗೆ ಬಾ, ನಿನಗೆ ಕೆಲಸ ಕೊಡಿಸುತ್ತೇನೆ ಎಂದ. ಅದಕ್ಕೆ ನಿರಾಕರಿಸಿದಳು. ಲೈಟು ಆರಿದ ಮೇಲೆ ತನ್ನ ಮಿತಿ ದಾಟಹೊರಟ ಆತನಿಗೆ ಐಡಿ ಕಾರ್ಡ್ ತೋರಿಸಿ ನಿಜವಾಗಿ ತಾನ್ಯಾರೆಂಬುದು ತಿಳಿಸಿ, ಎಚ್ಚರಿಸಿದ್ದಳು. ಅಷ್ಟಕ್ಕೇ sorry ಹೇಳಿ ಸುಮ್ಮನಾಗಿದ್ದ ಆತ ಮತ್ತೆ ಬೆಳತನಕ ಅವಳ ತಂಟೆಗೆ ಬಂದಿರಲಿಲ್ಲ.
ಹೀಗೆಲ್ಲ ತಲೆ ಓಡಿಸುತ್ತ ಕುಳಿತಿದ್ದಾಗ, ಮತ್ತೆ ಆತನ ಕೈ ಮೆಲ್ಲಗೆ ಅವಳ ಕಾಲಮೇಲೆ ಸ್ವಲ್ಪವೇ ಸ್ವಲ್ಪ ಚಲಿಸಿತು. ಅಚಾನಕ್ಕಾಗಿ ಆಕೆ ತನ್ನ ಎಡಗೈಯನ್ನು ಆತನ ಕೈಯಮೇಲೆ ಇಟ್ಟಳು. ಆತನ ಕೈ ಇದ್ದಲ್ಲೇ ಸ್ತಬ್ಧವಾಯಿತು. ಆತನೆಡೆಗೆ ನೋಡಿದರೆ ಮುದ್ದುಮಗುವಿನಂತೆ ಮಲಗಿದ್ದ ಅವನಿಗೆ ಏನೊಂದೂ ತಿಳಿಯದಂತಹ ಗಾ....ಢ ನಿದ್ರೆ...! ಯಾರೇ ಆದರೂ ಹಾಗೆ ನಂಬಬೇಕು, ಆರೀತಿಯ ನಟನೆ! ಆಕೆ ತನ್ನ ಕೈಯನ್ನು ಹಿಡಿದಿಟ್ಟಿದ್ದು ಕೂಡ ಗೊತ್ತಾಗದಂತೆ. ಸಿಕ್ಕಿಬಿದ್ದ ಕಳ್ಳ, ಹೇಗೆ ಪಾರಾಗುವುದೆಂದು ತಿಳಿಯದಾಗಿದ್ದ. ನಿದ್ರೆ ನಟಿಸುವ ಹೊರತು ಬೇರೇನೂ ಆತ ಮಾಡುವ ಹಾಗಿಲ್ಲ.
ಅವಳಿಂದ ಬೇರೆಲ್ಲ ಯೋಚನೆ ಓಡಿಹೋಗಿ, ಸದ್ಯದ ಪರಿಸ್ಥಿತಿ ಮಾತ್ರ ಸತ್ಯವಾಯಿತು. ಎಲ್ಲೂ ತಪ್ಪಿಸಿಕೊಳ್ಳಲು, ಚಲಿಸಲು ಸಾಧ್ಯವಿಲ್ಲದಂತೆ ಆ ಕೈ ಹಿಡಿದಿದ್ದ ಅವಳಿಗೆ ಅದೆಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ. ಬೆಳಗಿನ ಜಾವಕ್ಕೆ ಎಚ್ಚರಾದಾಗಲೂ ಆತ ಅವಳ ಕಡೆಗೇ ತಿರುಗಿ ಮಲಗಿದ್ದ. ಆತನ ಕೈ ಅವಳ ಕೈಯೊಳಗೆ ಹಾಗೇ ಇತ್ತು. ಇನ್ನು ಸಾಕು, ಇನ್ನೇನೂ ಆಗಲಾರದು ಅಂತ ಖಚಿತವಾದ ಮೇಲೆ ಆತನ ಕೈ ಕಿತ್ತೆಸೆದಳು. ಆತ ಯಾವುದೇ ಪ್ರತಿಕ್ರಿಯೆ ತೋರಿಸದೇ ಹಾಗೇ ಬಿದ್ದುಕೊಂಡಿದ್ದ.
ಸ್ವಲ್ಪ ಹೊತ್ತಿಗೆ ಆತ ಎದ್ದ. ಆಕೆಯ ಜತೆ ಮಾತು ಆರಂಭಿಸಲು ಯತ್ನಿಸಿದ. ಅಷ್ಟರಲ್ಲಾಗಲೇ ಪುಸ್ತಕದಲ್ಲಿ ಮುಳುಗಿದ್ದ ಅವಳು ಪ್ರತಿಕ್ರಿಯಿಸಲಿಲ್ಲ. ನಿನ್ನೆಯೊಂದು ಸುಳ್ಳಾಗಿ ಇಂದೇ ಸತ್ಯವಾಗಿತ್ತು. ಆತ ಉಗುರು ಕಚ್ಚುತ್ತ ಅವಳ ಪಕ್ಕದಲ್ಲಿ ಕೂತಿದ್ದ. ಅವಳು ಬಂಡೆಕಲ್ಲಾಗಿದ್ದಳು.
ನಿನ್ನೆ ಅಷ್ಟೆಲ್ಲ ಮಾತಾಡುತ್ತಿದ್ದವರು ಇವತ್ತು ಯಾಕೆ ಮಾತಾಡುತ್ತಿಲ್ಲವೆಂದು ಇವರಿಬ್ಬರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಎಲ್ಲವೂ ಸರಿಯಿತ್ತು. ಬಸ್ ಓಡುತ್ತಲೇ ಇತ್ತು. ಬದುಕು ಓಡುತ್ತಲೇ ಇತ್ತು.
----------------------
ಈ ಜಗತ್ತಿನಲ್ಲಿ ನೂರಾರು ರೀತಿಯಲ್ಲಿ ಅನ್ಯಾಯಗಳಾಗುತ್ತವೆ ಹುಡುಗೀ. ಹೆಚ್ಚಿನ ಅನ್ಯಾಯಗಳನ್ನು ತಪ್ಪಿಸಿಕೊಳ್ಳುವುದು ನಿನ್ನ ಕೈಯಲ್ಲೇ ಇದೆ. ನಿನಗೆ ಅನ್ಯಾಯವಾಗಿದೆಯೆಂದುಕೊಂಡು ಸ್ವ-ಮರುಕದ ಕೂಪದಲ್ಲಿ ಬಿದ್ದು, ಬೇರೆಯವರ ಅನುಕಂಪಕ್ಕಾಗಿ ಹಾತೊರೆಯಲು ನಿನಗಿಷ್ಟವಿದೆಯಾದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅನ್ಯಾಯ ಅನುಭವಿಸದಿರುವುದು, ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ನಿನ್ನ ಕೈಯಲ್ಲೇ ಇದೆ.
14 comments:
ನೈಜ ಘಟನೆಯೊಂದನ್ನು (ಇಂತಹ ಘಟನೆಗಳನ್ನು ಕೇಳಿರುವೆ) ಸುಂದರವಾಗಿ ಬರಹದಲ್ಲಿ ಸೆರೆ ಹಿಡಿದಿದ್ದೀರಿ. ಸುಧಾ ಓದುತ್ತಾ, ಕಥೆಯೊಳಗೊಂದು ಕಥೆಯ ಸೃಷ್ಟಿ -)
ಸುಧಾ ತರಂಗ ಮಯೂರ ತುಷಾರಗಳನ್ನು ಕಂಡರೆ ಸ್ವರ್ಗವನ್ನು ಕಂಡಂತೆ ಅನುಭವ ಆಗುವವನಿಗೆ ಮತ್ತೆ ಸ್ವರ್ಗವನ್ನು ತೋರಿಸಿದಿರಿ :)
ಇಂತಹ ಬರಹಗಳಿಗಾಗಿ ಕಾಯುವೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಯಾರೂ ಯಾರನ್ನೂ ನಂಬುವ ಕಾಲವಾಗಿ ಉಳಿದಿಲ್ಲ ಇದು...
ಇದು ಒಬ್ಬೊಬ್ಬರೇ ಪ್ರಯಾಣಿಸೋ ಮಹಿಳೆಯರ ಸಮಸ್ಯೆ; ಹೆಣ್ಣು ಎಂದರೆ ನಮ್ಮ ಜನಗಳಿಗೆ ಅದೇನೇನೋ ಕಲ್ಪನೆ, ತಮ್ಮವರಿಗೊಂದು ಒಂದು ರೋಲು ಉಳಿದವರಿಗಿನ್ನೊಂದು ಪಾಲು ಅನ್ನೋ ವಿಪರ್ಯಾಸದ ಪರಮಾವಧಿ.
ನನ್ನ ಹೆಂಡತಿ ಒಮ್ಮೆ ಸೇಫ್ಟಿ ಪಿನ್ನಿನ ಪ್ರಯೋಗ ಮಾಡಿದ್ದಳಂತೆ, ಅದರ ನಂತರ ನೋವು ನಟನೆಯಿಂದ ಹೊರಗೆ ಬಂದಿದ್ದಂತೆ!
ತುಂಬಾ ಚೆನ್ನಾಗಿ ಬರೆದಿದ್ದೀರಿ. ಹೆಣ್ಣಿನ helplessness ಅನ್ನು ಒತ್ತು ಹಿಡಿಯದೆ, ಗಂಡಿನ ಅತಿಮಾನುಷ ಅಟ್ಟಹಾಸವನ್ನು ಚಿತ್ರಿಸದೆ, ಬಹಳ ನೈಜವಾಗಿ ಬರೆದಿದೀರಿ.
ಹೆಣ್ಣು ಮಕ್ಕಳು, ಅಷ್ಟೊಂದು ಸುಲಭವಾಗಿ ಯಾರೋ ಒಬ್ಬ ಗಂಡಸಿನ ಜೊತೆ friendly ಆಗ್ತಾರೇನು? ಬಹುಶಃ ಅಲ್ಲಿ avoid ಮಾಡಿದ್ದರೆ ಕಥೆ ಇಲ್ಲಿ ತನಕ ಬರುತ್ತಿರಲಿಲ್ಲವೇನು.
ಹಾಗೆ, English ನಲ್ಲಿ ಮಾತಾಡುವ ಹುಡುಗನ ಬಗ್ಗೆ ನೀವು ಕೊಡುವ ವ್ಯಾಖ್ಯಾನವೇನು?
ಶ್ರೀ,
ಚೆನ್ನಾಗಿದೆ. ಇಷ್ಟ ಆಯ್ತು.
ಪ್ರತಿಯೊಬ್ಬ ಹುಡುಗಿ/ ಹೆಂಗಸರೂ ಜೀವನದಲ್ಲಿ ಹಲವಾರು ಬಾರಿ ಅನುಭವಿಸಿಯೇ ತೀರುವಂಥ ಘಟನೆಯನ್ನು ಚೆನ್ನಾಗಿ ಬರೆದಿದ್ದೀರಿ. ಇನ್ನೂ ಒಂದೆರಡು ಸಂದರ್ಭಗಳು ಇರುತ್ತೆ ಗೊತ್ತಾ... ರಸ್ತೆ ಸ್ವಲ್ಪ ತಿರುವು ಮುರುವು ಇದ್ದರೂ ಸುಮ್ಮನೇ ಮೈಮೇಲೆ ಬೀಳುವುದು, ನಾವೇನಾದರೂ ಹೇಳಿದರೆ, ಬಸ್ಸಿನಲ್ಲಿ ನಿಮಗೆ ಅಷ್ಟೆಲ್ಲಾ ಆದರೆ ಕಾರು ಮಾಡಿಸಿಕೊಂಡು ಬರಬೇಕ್ರೀ ಅನ್ನುವುದು. ನಡುವಯಸ್ಸಿನ ಗಂಡಸರಂತೂ ಇನ್ನೂ ಕನಿಷ್ಠ ಮಟ್ಟಕ್ಕೆ ಇಳಿಯುವುದನ್ನು ನೋಡಿದ್ದೇನೆ. ಹುಡುಗಿಯರು ತಿರುಗಿ ಏನಾದರೂ ಹೇಳಿದರೆ, ನನಗೂ ನಿನ್ನಷ್ಟೇ ವಯಸ್ಸಿನ ಮಗಳಿದ್ದಾಳೆ. ನನ್ನ ಬಗ್ಗೆ ಹೀಗೆಲ್ಲಾ ಹೇಳುತ್ತೀಯ ಎಂದು ಹುಡುಗಿಯರನ್ನೇ ತಪ್ಪಿತಸ್ತ ಜಾಗಕ್ಕೆ ತಂದು ನಿಲ್ಲಿಸುವುದು.
ಬರಹ ಇಷ್ಟವಾಯಿತು. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಇಂತಹದೇ ಸಂಕಟ ಅನುಭವಿಸಿದ್ದಳು. ಪಾಪ ಶಿವಮೊಗ್ಗದಿಂದ ರಾತ್ರಿ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರು ತಲುಪುವದರೊಳಗೆ ಈ ಜೀವನದಲ್ಲೇ ಇನ್ನು ಮುಂದೆ ರಾತ್ರಿ ಬಸ್ ಪ್ರಯಾಣ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಪಕ್ಕದಲ್ಲಿ ಕೂತಿದ್ದ ಸುಸಂಸ್ಕೃತನೊಬ್ಬ ತನ್ನ ಮಗಳ ವಯಸ್ಸಿನ ಈ ಹುಡುಗಿಗೆ ಅಷ್ಟು ಕಷ್ಟ ಕೊಟ್ಟಿದ್ದ.
ಬಸ್ಸಿನಲ್ಲಿ ಹೋಗುವುದೇ ದೊಡ್ಡ ಹಿಂಸೆ ಜೊತೆಗೆ ಇಂಥವರ ಕಾಟ ಬೇರೆ.ತುಂಬ ಸಹಜವಾಗಿ ಮೂಡಿ ಬಂದಿದೆ ಕಥೆ..
ಸರಳ, ಸುಂದರ, ಬರಹ.
ವಿಷಯ ಕಟುಸತ್ಯ,ಬಿಸಿತುಪ್ಪ.
ಕೊನೆಯಲ್ಲಿ ಕಂದು ಬಣ್ಣದಲ್ಲಿ ಬರೆದ ಸಾಲುಗಳು ಬಹಳ ಇಷ್ಟ ಆಯ್ತು :)
ಬಸ್ಸಲ್ಲಿ ಇಂತಹ ಚಿತ್ರ ವಿಚಿತ್ರ ಸನ್ನಿವೇಶಗಳನ್ನ ಎದುರಿಸೋ 'ಅವಕಾಶ'ಗಳನ್ನು ಆ ದೇವರು ಬಹುಶಃ ಹೆಣ್ಣು ಮಕ್ಕಳಿಗೆ ಮಾತ್ರ ಕೊಟ್ಟಿದ್ದಾನೆ. ಓದಲು ಇದೊಂದು ಪುಟ್ಟ ಬರಹವೇ ಆದ್ರೂ ಅಲ್ಲಿ ಎಷ್ಟೋ ದಿಟ್ಟ ಚಾಣಾಕ್ಷ ಮತ್ತು ಅಸಹಾಯಕ ಹೆಣ್ಣ್ಗು ಮಕ್ಕಳ ಚಿತ್ರಣವನ್ನು ಒಂದೇ ಬರಹದಲ್ಲಿ ಸೊಗಸಾಗಿ ನಿರೂಪಿಸಿದ್ದೀರ.
ನಾನು ಬೆಂಗಳೂರಿನಿಂದ ಧಾರವಾಡಕ್ಕೆ ಹಗಲು ಹೊತ್ತಿನ ಸಾದಾ ಬಸ್ಸಿನಲ್ಲಿ ಬರುತ್ತಿದ್ದೆ. ತುಂಬಾ ರಶ್ ಇತ್ತು. ನನ್ನ ಸೀಟಿನ ಬದಿಗೆ ಒಬ್ಬ ಹುಡುಗಿ ನಿಂತುಕೊಂಡಿದ್ದಳು.ಸೀಟಿನ ಬದಿಯ stand ಅನ್ನು ಆಧಾರಕ್ಕೆ ಹಿಡಿದಿದ್ದಳು. ಆ ಬದಿಯ ಸೀಟಿನ ಒಬ್ಬ ಠೊಣಪ ತನ್ನ ಕೈಯನ್ನು ಸಹಜವಾಗಿ ಎಂಬಂತೆ ಅವಳ ಕೈಯ ಪಕ್ಕದಲ್ಲಿ ಇರಿಸಿ, ಆಟ ಸುರು ಮಾಡಿದ. ಅವಳು ಮುಜುಗರದಿಂದ ಚಡಪಡಿಸತೊಡಗಿದಳು. ಆದರೆ ಏನೂ ಮಾಡಲಾರಳು. ನೋಡುತ್ತಿದ್ದ ನಾನು, ನನ್ನ ಹತ್ತಿರವಿದ್ದ ದುಂಡುಸೂಜಿಯನ್ನು ಹೊರತೆಗೆದು, ಸಣ್ಣಗೆ ಅವನ ಕೈಮೇಲೆ ಗೀರಿದೆ.ಛಕ್ಕನೆ ಕೈ ಹಿಂದೆಳೆದುಕೊಂಡು, ನನ್ನ ಕಡೆಗೆ ದುರುಗುಟ್ಟಿ ನೋಡಿದ. ನಾನು ಏನೀ ತಿಳಿಯದವನಂತೆ ಸುಮ್ಮನಿದ್ದೆ. ಮತ್ತೆ ಆಟ ಸುರು ಮಾಡಿದ; ನಾನು ಮತ್ತೆ ಗೀರಿದೆ. ಈ ಸಲ ಹಿಂದೆ ಹೋದ ಕೈ ಮತ್ತೆ ಮುಂದೆ ಬರಲಿಲ್ಲ!
ಪ್ರತಿಕ್ರಿಯಿಸಿದ ಎಲ್ಲರಿಗು ಧನ್ಯವಾದ...
ವೀಣಾ, ಕಥೆ ಇದ್ದ ಹಾಗೆ ಬರೆದಿದ್ದೇನೆ... ಅವಳು ಯಾಕೆ ಸಲಿಗೆಯಲ್ಲಿ ಇರಬೇಕು ಅಂತ ಅನಿಸಿತು ಅಂತ ಅವಳಿಗೇ ಕೇಳಬೇಕು.. :) ಪ್ರಶ್ನೆ ಅರ್ಥವಾಗಲಿಲ್ಲ...
ಅನ್ನಪೂರ್ಣ, ಯಾರಿಗಾದರೂ ಅನ್ವಯಿಸುವ ಮಾತದು... ಭಂಡ ಸ್ತ್ರೀವಾದದಿಂದ ಪ್ರಯೋಜನವಿಲ್ಲ ಅಂತ ನನ್ನ ಅನಿಸಿಕೆ.
ಸುನಾಥ್ ಕಾಕಾ.. ನೀವ್ಯಾಕೆ ಗುಂಡುಸೂಜಿ ಇಟ್ಕೊಂಡಿದ್ರಿ ಅಂತ ಕೇಳಬಹುದಾ? :P
"English" nalli maatu mundu varisida antha eradu sala baredideeri.. alli english nalli maathaDuva huduga andre odi tiLida vidyaavantru haagella aadiddu annoda antha? yaakendre paDDe hudugru heegella aadudre avaranna gadrisokke ondashtu jana barbahudeno aadre intaha oLLe shirtu pantu haakondu neat aagi tale baachkondu english maathaDo hudugru heegella maadidre yaaru anumaana padalvenO antha..
Sunaath avaradu olle technique!
ದೂರದ ಪ್ರಯಾಣ ಮಾಡುವಾಗ ತುಂಬಾ ಎಚ್ಚರಿಕೆ ವಹಿಸ್ಬೇಕು.
ಗೂಡೂ ಸಹ ಹಕ್ಕಿಗಾಗಿ ಕಾಯುವದೆ? ಸುಂದರವಾದ ಕಲ್ಪನೆ.
http://www.interiordesignersbangalore.com
http://www.interiordesignersinbangalore.com
http://www.architectsbangalore.com
http://www.seekangroup.com
http://www.architectsban.webs.com a
Post a Comment