Saturday, May 12, 2007

ಕಡಲು ಮುನಿದಿದೆ...


ರಾಶಿ ರಾಶಿ ನೊರೆಯ ಚೆಲ್ಲಿ ಸದಾ ನಗುವ ಕಡಲಿದು...
ಇಂದು ಏಕೊ ಅರಿಯೆ ನಾನು, ನನ್ನ ಮೇಲೆ ಮುನಿದಿದೆ...

ಕಪ್ಪೆ ಚಿಪ್ಪು ದಡಕೆ ದೂಡಿ ಸಂಭ್ರಮಿಸುವ ಅಂಬುಧಿ..
ಮೌನದಲ್ಲಿ ಮಿಡುಕುತಿಹುದು, ಯಾಕೊ? ನನಗೆ ತಿಳಿಯದು...

ನೀಲಿ ಬಾನು ಎಲ್ಲೋ ಕಾಣೆ, ಬೆಳಕು ಎಲ್ಲೂ ಕಾಣದು
ಕರಿಯ ಮೋಡ, ಬೂದಿ ಮೋಡ, ದುಗುಡ ತುಂಬಿಕೊಂಡಿದೆ...

ಮುಳುಗು ಹಾಕೊ ಮುನ್ನ ನಿಶೆಗೆ ಸಪ್ತವರ್ಣದುಡುಗೆಯ
ತೊಡಿಸಿ ನಲಿವ ರವಿಗೆ ಇಂದು ಮಂಕು ಕಟ್ಟಿಕೊಂಡಿದೆ...

ಸ್ವರ್ಣ ವರ್ಣ ನೀರ ಮೇಲೆ ಚೆಲ್ಲಿ ಆಟವಾಡುವ
ಇವನು ಇಂದು ಯಾಕೋ ಕಾಣೆ, ಮುದುಡಿ ತಣ್ಣಗಾಗಿಹ...

ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ...

oooooooooooo

ಬತ್ತದಿರುವ ಜಲದ ರಾಶಿ, ಏಕೆ ನಿನಗೆ ಬೇಸರ?
ಮಾತನಾಡು ಎಂದಿನಂತೆ, ಸಹಿಸಲಾರೆ ನೀರವ...

ಮುಗಿಯದಾಳವಿರುವೆ ನೀನು, ನಿನ್ನ ಹರವನಳೆಯಲಾರೆನು
ಕುದಿಯುತಿರುವೆ, ಏಕೆ ಮೌನ? -ಮರ್ಮ ತಿಳಿಯದಾದೆನು

ಮೋಡ ತೊಲಗಬೇಕು, ರವಿಯು ಮತ್ತೆ ನಲಿಯಬೇಕಿದೆ,
ಮೌನ ಮುರಿಯಬೇಕು, ಮತ್ತೆ ನೀನು ಮೊರೆಯಬೇಕಿದೆ...

ಬೆಳ್ಳಿ ನೊರೆಯು ಚೆಲ್ಲಬೇಕು, ನಿನ್ನ ನಗುವು ಬೇಕಿದೆ..
ಕಪ್ಪೆ ಚಿಪ್ಪು ದಡಕೆ ದೂಡಿ ನೀನು ಮೆರೆಯಬೇಕಿದೆ...

oooooooooooooooo

3 comments:

Shiv said...

ತುಂಬಾ ಇಷ್ಟವಾಯ್ತು ಶ್ರೀ..

>ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ

ದೋಣಿಯೆಂದರೆ ಇಲ್ಲಿ ಮೀನುಗಾರರ ದೋಣಿ ಅಂತಾ ನನ್ನ ಊಹೆ. ಹಾಗಿದ್ದರೆ ಮೀನುಗಾರರ ದೋಣಿ ಮರಳಲಿ ಸುಮ್ಮನಿದ್ದರೆ,ಮೀನು ದಿಕ್ಕುಗೆಟ್ಟು ಅಲೆದಿವೆಯೇ..
ಆದರ ಬದಲು ಮೀನುಗಾರರ ಕಾಟವಿಲ್ಲದೇ ಖುಷಿಯಾಗಿರಬೇಕಿತ್ತಲ್ಲಾ !

Shree said...

ಶಿವ್,
ಕಡಲು ಯಾವಾಗ್ಲು ನಗುನಗ್ತಾ ಇರತ್ತೆ... ಮೀನುಗಳೂ ಆ pace ಅರ್ಥ ಮಾಡ್ಕೊಂಡು ಚಿನ್ನಾಟವಾಡ್ತಾ ಇರ್ತವೆ... ಅವಕ್ಕೆ ದಿನಾ ಬರೋ ಮೀನುಗಾರರ ದೋಣಿಗಳ ಬರುವಿಕೆಯ ಗುರುತು ಗೊತ್ತಿರತ್ತೆ, ಬಲೆಗಳಿಗೆ ಸಿಗದೆ ತಪ್ಪಿಸ್ಕೊಂಡು ಓಡಾಡ್ತಾ ಇರ್ತವೆ.. ಅದೇ ಒಂದು ಆಟ ಆಗಿರತ್ತೆ ಅವಕ್ಕೆ.. ಈ ಮಸುಕು ಕವಿದ ದಿನ ಮಾತ್ರ ಕಡಲಿನ ಮೌನ, ದೋಣಿಗಳ ಶಬ್ದವಿಲ್ಲದೆ, ಏನು ಮಾಡ್ಬೇಕೊ ಗೊತ್ತಾಗ್ದೆ, ದಿಕ್ಕುಗೆಟ್ಟು ಅಲೆದಾಡ್ತವೆ - ಅನ್ಬಹುದಾ? (ತಪ್ಪಾಗಿ ಬರೆಯೋದೂ ಅಲ್ದೆ ಸಮರ್ಥನೆ ನೋಡಿ ಹೇಗೆ ಕೊಡ್ತಿದೀನಿ :-p)
ಯಾವುದೋ ಒಂದು ಅಭ್ಯಾಸಕ್ಕೆ / ಅನುಭವಕ್ಕೆ addict ಆಗಿರ್ತೀವಲ್ಲ, ಒಮ್ಮೊಮ್ಮೆ ಅದು ಇಲ್ಲದೆ ಇದ್ರೆ ಏನೋ ಇಲ್ಲ, ಕಳ್ಕೊಂಡಿದೀವಿ ಅಂತ ಅನ್ಸೋದಿಲ್ವಾ?

ಭಾವಜೀವಿ... said...

ನಿಜ ಶ್ರೀ, ನೀವು ನಿಮ್ಮ ಸಾಲುಗಳನ್ನು ಸಮರ್ಥಿಸಿಕೊಳ್ಳುವಾಗ ನನಗೆ ಇಲ್ಲಿ ಟಾಂ ಅಂಡ್ ಜೆರಿ ನೆನಪಾಗುತ್ತೆ! ಜೆರಿಗೆ ಟಾಂ ಎಷ್ಟೇ ಕಾಟ ಕೊಟ್ರು, ಟಾಂ ಇಲ್ಲದೇ ಹೋದಾಗ ಅದಕ್ಕೆ ಕೈಕಾಲೆ ಓಡೋದಿಲ್ಲ!! ಎಕಾಂಗಿತನ ಕಾಡುತ್ತೆ!! ಸಾವು ಬದುಕಿನ ಮಧ್ಯೆ ಹೋರಾಡುವುದು ಒಂದು ಆಟವಲ್ಲವ!!

ಇನ್ನು ನಿಮ್ಮ ಕವನದ ಬಗ್ಗೆ ಎರಡು ಸಾಲು!
ನಾನು ಇದರ ಶೀರ್ಷಿಕೆ ನೋಡಿ, ಕೋಪಗೊಂಡ ಕಡಲ ಆರ್ಭಟದ ಬಗ್ಗೆ, ಸುನಾಮಿಯ ಬಗ್ಗೆ ಇರಬಹುದು ಎಂದು ಭಾವಿಸಿದ್ದೆ, ಆದರೆ ಇದಕ್ಕೆ ಏಕೋ ನಿಮ್ಮ ಮೇಲೆ ಮುನಿಸು ಜಾಸ್ತಿಯಾಗಿರಬೇಕು, ಅಥವ ನಿಮ್ಮೆದುರು ಏನೂ ಮಾಡಲಾಗದೆ ತಾನೆ ಮಂಕಾಗಿದೆ, ಮುಖ ಗಂಟಿಕ್ಕಿದೆ!! ;) ಬೇಸರ ಬೇಡ, ಒಂದೇ ಒಂದು ಮಳೆ ("ಮುಂಗಾರು ಮಳೆ" ಆದರೆ ಇನ್ನೂ ಒಳ್ಳೆಯದು!! ;) ) ಎಲ್ಲವನ್ನೂ ರಿಪೇರಿ ಮಾಡುತ್ತದೆ!!!