Friday, April 18, 2008

ಅಧರ್ಮ

ಕಾಸರಗೋಡಿನಲ್ಲಿ ಕೋಮು ಗಲಭೆ ಅನ್ನುವಾಗ ಮನಸ್ಸು ಅದ್ಯಾಕೋ ಹುಳಿ ಹುಳಿಯಾಗುತ್ತದೆ. ನಾನು ಹಲ ವರ್ಷಗಳ ಹಿಂದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಬಿಟ್ಟು ಬಂದ ನನ್ನ ಹುಟ್ಟೂರಿನಲ್ಲಿ ಇನ್ನೂ ಅದೇ ನಡೆಯುತ್ತಿದೆ ಎನ್ನುವ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

++++++++++

ನಮ್ಮ ಊರಲ್ಲಿ ಇರುವುದು ೪೦-೫೦ ಮನೆಗಳು. ಹಲವಾರು ಹಿಂದು ಮನೆಗಳ ನಡುವೆ ಒಂದೇ ಒಂದು ಮುಸ್ಲಿಂ ಮನೆ ಇದೆ. ನಮ್ಮ ಊರಿನಿಂದ ಬೇರೆಲ್ಲಿ ಹೋಗಬೇಕಾದರೂ ಗುಡ್ಡ ಹತ್ತಿ ಇನ್ನೊಂದು ಸಣ್ಣ ಊರಿಗೆ ಇಳಿಯಬೇಕು, ೨೦ ನಿಮಿಷದ ನಡಿಗೆ. ಆ ಊರಿನಲ್ಲಿ ಹೆಚ್ಚಿರುವುದು ಮುಸ್ಲಿಂ ಮನೆಗಳು. ಬಸ್ಸಿಗೆ ಕಾಯುವಾಗ ಅಲ್ಲೆ ಪಕ್ಕದ ಮನೆಯಲಿ ನೀರು ಕುಡಿಯುವಾಗ, ಯಾರಿಗೂ ಅದು ಮುಸ್ಲಿಂ ಮನೆಯ ನೀರಾಗಿ ಕಾಣುತ್ತಿರಲಿಲ್ಲ. ಹಾಗೆಯೇ, ಮೊಳಕೆ ಬರಿಸಿದ ತೆಂಗಿನ ಗಿಡಗಳನ್ನು ನಮ್ಮಪ್ಪ ಅಲ್ಲಿನ ದರ್ಗಾಕ್ಕೆ ಹರಿಕೆಯೆಂದು ಕೊಡುವಾಗ ಆ ದೇವರು ಮುಸ್ಲಿಂ ದೇವರಾಗಿರುತ್ತಿರಲಿಲ್ಲ. ಅಲ್ಲಿಂದ ಅಪ್ಪ ಪ್ರಸಾದವೆಂದು ತರುವ ಖರ್ಜೂರವನ್ನು ತಿನ್ನುವುದೇ ನಮಗೆಲ್ಲ ಒಂದು ದೊಡ್ಡ ಸಂಭ್ರಮ. ಹಾಗೆಯೇ ವಿಷುವಿನ ಸಂಭ್ರಮ ಸವಿಯಲು ಮತ್ತು ಆಗಾಗ ನಡೆಯುವ ಭೂತ ಕೋಲಗಳಿಗೆ, ನಾಗನ ತಂಬಿಲಕ್ಕೆ ಹರಿಕೆ ತೆಗೆದುಕೊಂಡು ಬರುವ ಮೋಞಿ ಬ್ಯಾರಿ, ಹಮೀದ್ ಮುಂತಾದವರು ನಮ್ಮನ್ನು ಬೇರೆಯವರೆಂದು ಎಣಿಸಿರಲಿಲ್ಲ.

ಅದೊಂದು ರಾತ್ರಿ. ಹುಂಬಾ ಚಿಕ್ಕವಳಿದ್ದೆ, ಅಜ್ಜ, ಅಜ್ಜಿ, ಅಮ್ಮ ಇದ್ದರು ಮನೆಯಲ್ಲಿ. ಕರೆಂಟು, ಫೋನು ಏನೂ ಇಲ್ಲದ ಕಾಲ. ಸಂಜೆ ಹೊತ್ತಿಗೆ ಪಕ್ಕದ ಮನೆಯ ಮಾಸ್ತರು ಮಾವ ಶಾಲೆಯಿಂದ ಎಂದಿಗಿಂತ ಬೇಗನೆ ಬಂದವರು, ನಮ್ಮನೆ ಅಂಗಳದಲ್ಲಿ ಹೋಗುವಾಗ, ಅಜ್ಜನಿಗೆ ಹೇಳಿದರು, ಹಿಂದು ಮುಸ್ಲಿಂ ಗಲಾಟೆ ಶುರುವಾಗಿದೆ ಕಾಸರಗೋಡಲ್ಲಿ, ಸೆಕ್ಷನ್ ಹಾಕಿದ್ದಾರೆ, ಹಾಗಾಗಿ ನಾಳೆ ಹೊರಗೆಲ್ಲೂ ಹೋಗಬೇಡಿ ಅಂತ. ಇದ್ದಕ್ಕಿದ್ದಂತೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿತು. ಬಹುಶ ಅವರು ಕೋಮು ಗಲಭೆ ಅಂದ್ರೆ ಹೇಗಿರುತ್ತದೆ ಅಂತ ಕಣ್ಣಾರೆ ನೋಡಿರಬೇಕೇನೋ... ಬೇಗ ಬೇಗನೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡರು. ಯಾಕೋ ಏನೋ ಒಂದು ರೀತಿಯ ಉದ್ವಿಗ್ನತೆ ಇತ್ತು. ಏನೂ ಗೊತ್ತಿಲ್ಲದ ನಾನು ಅಮ್ಮನಿಗೆ ಕೇಳಿದೆ, ಹಿಂದು ಮುಸ್ಲಿಂ ಗಲಾಟೆಯಲ್ಲಿ ಏನಾಗ್ತದೆ, ಅದು ಯಾಕೆ ಆಗ್ತದೆ ಅಂತ. ಯಾಕೆ ಆಗ್ತದೆ ಅಂತ ಹೇಳಲಿಕ್ಕೆ ಬೇಕಾದ ಲೋಕಜ್ಞಾನ ಅಮ್ಮನಿಗಿರಲಿಲ್ಲ, ಆದರೆ, ರಾತ್ರಿಯಾಗುತ್ತಿದ್ದಂತೆ ಪಕ್ಕದ ಊರಿನಿಂದ ದೊಂದಿ ಹಿಡ್ಕೊಂಡು ಕಳ್ರು ಬರ್ತಾರೆ ಅದಕ್ಕೆ ಬೇಗ ಬೇಗ ಉಂಡು ಮಲಗಬೇಕು ಅಂತ ಹೇಳಿ ನಂಗೆ ಅಮ್ಮ ಸಮಾಧಾನ ಮಾಡಿದಳು.

ಆನಂತರ ಹಲವು ಸಲ ಕಾಸರಗೋಡಿನಲ್ಲಿ ಈರೀತಿಯ ಗಲಭೆಗಳು, ಪರಿಣಾಮವಾಗಿ ಬಂದ್, ಸರ್ವೇ ಸಾಮಾನ್ಯವಾಗಿತ್ತು. ಬಂದ್ ಇದ್ದಾಗ ಶಾಲೆಗೆ ರಜೆ ಇರುತ್ತಿತ್ತು ಅನ್ನುವುದು ಬಿಟ್ಟರೆ ಗಲಭೆಯ ಜ್ವಾಲೆ ನಮ್ಮೂರ ತನಕ ಎಂದೂ ಬಂದಿದ್ದು ನನಗೆ ನೆನಪಿಲ್ಲ. ಆದರೆ, ೧೦ನೇ ತರಗತಿ ಮುಗಿಸಿದ ಮೇಲೆ ಕಾಸರಗೋಡಿನಲ್ಲೇ ಕೇರಳದ ಸಿಲೇಬಸ್ ಪ್ರಕಾರ ಓದು ಮುಂದುವರಿಸುವ ಅವಕಾಶವಿದ್ದ ನನ್ನಂತಹ ಹಲವಾರು ಮಂದಿ, ವಿಶೇಷವಾಗಿ ಹುಡುಗಿಯರು ಓದು ಮುಂದುವರಿಸಲು ಕರ್ನಾಟಕಕ್ಕೆ ವಲಸೆ ಬರುತ್ತಿದ್ದುದಕ್ಕೆ ಈ ಹಿಂದು ಮುಸ್ಲಿಂ ಗಲಾಟೆಯೂ ಒಂದು ಕಾರಣ. ಹೆತ್ತವರಿಗೆ ಕಾಳಜಿ, ಯಾವಾಗೆಂದರವಾಗ ಕಾರಣವೇ ಇಲ್ಲದೆ ಹುಟ್ಟಿಕೊಳ್ಳುತ್ತಿದ್ದ ಕಿಚ್ಚು ತೊಂದರೆ ಕೊಟ್ಟರೆ ಅಂತ. ಹಾಗಾಗಿ ಪಕ್ಕದ ದಕ್ಷಿಣ ಕನ್ನಡದ ಒಳ್ಳೆಯ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ( ಹಾಗೆ ನಾನೂ ಕರ್ನಾಟಕಕ್ಕೆ ಬಂದು, ಓದಿ, ಬೆಳೆದು, ಈ ಬ್ಲಾಗು ನೀವು ಓದುವಂತಾಗಿದೆ :) ಇಲ್ಲವಾದರೆ ನಾನು ಈ ಹೊತ್ತಿಗೆ ಕೇರಳದ ಯಾವುದೋ ಮೂಲೆಯಲ್ಲೋ ನಗರದಲ್ಲೋ ಸುಖವಾಗಿರುತ್ತಿದ್ದೆ :) )

+++++++++++++

ಹಿಂದು ಮುಸ್ಲಿಂ ಗಲಭೆ ಅಂದರೆ ಏನು ಅಂತ ಕಣ್ಣಾರೆ ನಾನು ನೋಡಿಲ್ಲದಿದ್ದರೂ ತಿಳಿಯುವ ಕುತೂಹಲಕ್ಕೆ ಓದಿದ್ದು ಖುಶ್ವಂತ್ ಸಿಂಗರ "ಟ್ರೈನ್ ಟು ಪಾಕಿಸ್ತಾನ್"... ಡಿಗ್ರಿಯಲ್ಲಿದ್ದಾಗ ಓದಿದ್ದೆ, ಅತ್ತುಬಿಟ್ಟಿದ್ದೆ. ಆಮೇಲೆ ನೋಡಿದ್ದು "EARTH - 1947". ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ, ಮಾನವತ್ವ ಮಾಸಿ ಹೋಗಿ ದಾನವ ಹುಟ್ಟುವ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು... ಇದರಲ್ಲಿನ ಈ ಹಾಡು ನನಗೆ ಎಂದಿಗೂ ಇಷ್ಟದ ಹಾಡು.

+++++++++++++

ಝಾರ್ಖಂಡದ ರಾಂಚಿಗೆ ಮೂರು ವರ್ಷದ ಹಿಂದೆ, ಚುನಾವಣೆಯ ಸಮಯ ಭೇಟಿ ನೀಡಿದ್ದೆ. ಆಗ ಮೊಹರಂ ಹಬ್ಬ ನಡೀತಾ ಇತ್ತು. ಅದರ ಮೆರವಣಿಗೆ ಹೋಗುತ್ತಿತ್ತು. ಸರಿ, ಕ್ಯಾಮರಾಮನ್ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡಲು ಹೊರಟ, ನಾನೂ ಅವನ ಜತೆ ಹೊರಟೆ. ಮೆರವಣಿಗೆಯ ಶಾಟ್ಸ್ ತೆಗೆದಿದ್ದಾಯಿತು. ನಂತರ ಅದನ್ನು ನೋಡುತ್ತಿದ್ದ ಜನಜಂಗುಳಿಯ ಶಾಟ್ಸ್ ತೆಗೆಯಬೇಕಿತ್ತು. ಕ್ಯಾಮರಾ ಜನರತ್ತ ತಿರುಗಿಸಿದ್ದೇ ತಡ. ನಾಲ್ಕೈದು ಯುವಕರು ಮೆರವಣಿಗೆಯೊಳಗಿಂದ ಈಚೆಗೆ ಬಂದು ಕ್ಯಾಮರಾಮನ್-ನನ್ನು ತಡೆದರು. "ಹಮಾರೇ ಔರತೋಂಕೋ ತುಮಾರೇ ಟಿವಿ ಮೇ ಮತ್ ದಿಖಾವೋ, ಶೂಟಿಂಗ್ ಮತ್ ಕರ್ನಾ" ಅಂತ ಹೇಳಿದರು. ಕ್ಯಾಮರಾಮನ್ ಒಪ್ಪಿ, ಬುರ್ಖಾಧಾರಿ ಹೆಂಗಸರನ್ನು ಶೂಟ್ ಮಾಡದೆ ಬಿಟ್ಟ. ಬೇರೆ ಗಂಡಸರ ಶಾಟ್ಸ್ ತೆಗೆದುಕೊಂಡ.

+++++++++++++

ಮೆರವಣಿಗೆ ಹೋಗುತ್ತಿದ್ದವರಲ್ಲಿ ಹಲವು ಚಿಣ್ಣರು ಕೂಡ ದಂಡ, ಕತ್ತಿ ಹಿಡಿದು ವರಸೆ (ಕತ್ತಿಯುದ್ಧವಾ? ಏನು ಹೇಳ್ತಾರೋ ಗೊತ್ತಿಲ್ಲ.) ಅಭ್ಯಾಸ ಮಾಡುತ್ತ ಸಾಗಿದ್ದರು. ನಾನು ಮೆಲ್ಲನೆ ಒಬ್ಬ ೫-೬ ವರ್ಷದ ಪುಟ್ಟ ಪೋರನನ್ನು ನಿಲ್ಲಿಸಿ ಕೇಳಿದೆ, "ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ".

ನಾನು ದಂಗು ಬಡಿದವಳು ಮತ್ತೆ ಕೇಳಿದೆ, "ಜೆಹಾದ್ ಕ್ಯಾ ಹೈ" ಅಂತ. ಆ ಪುಟ್ಟ ಚಂದಕ್ಕೆ ನಕ್ಕು ಉತ್ತರ ಕೊಡದೆ ಮುಂದೆ ಸಾಗಿದ.

+++++++++++++

ಏನೇ ಆದರೂ, ನನ್ನ ಸುತ್ತಲ ವಾತಾವರಣದಲ್ಲಿ ನನ್ನ ಕಣ್ಣೆದುರಿಗೆ ಕೋಮು ಗಲಭೆಗಳು ಆದದ್ದಿಲ್ಲ. ಧರ್ಮದ ಹೆಸರಲ್ಲಿ ಜಗಳಗಳು ಯಾಕೆ ಆಗುತ್ತವೆಂಬುದಕ್ಕೆ ಲಾಜಿಕಲ್ ಉತ್ತರ ನನಗಿನ್ನೂ ಸಿಕ್ಕಿಲ್ಲ.

5 comments:

VENU VINOD said...

ಕೋಮುಗಲಭೆ ನಡೆಸುವುದರಲ್ಲಿ ನಾವು ಮಂಗಳೂರಿನವರದ್ದೇ ಎತ್ತಿದ ಕೈ. ಕಳೆದೆರಡು ವರ್ಷ ಹಿಂದೆ ಮಂಗಳೂರಿನಲ್ಲಿ ಕರ್ಫ್ಯೂ ಹಾಕಿ ಸಾರ್ವಜನಿಕರಿಗೆ ಊಟಕ್ಕೆ ಅಕ್ಕಿಯೂ ಇಲ್ಲ ಎಂಬ ಪರಿಸ್ಥಿತಿ ಬಂದ ನಂತರ ಈಗ ಗಲಭೆಯೆಲ್ಲಾ ಕಾಸರಗೋಡಿಗೆ ವರ್ಗಾಯಿಸಿದ್ದೇವೆ.
ಗುಂಪು ಸೇರಿದಾಗ ಎಂತಹ ’ಪಾಪದವರು’ ಕೂಡಾ ಎಷ್ಟು ದುಷ್ಟರಾಗಿಬಿಡ್ತಾರೆ ಎನ್ನುವುದು ಕೋಮುಗಲಭೆ ಸಂದರ್ಭ ಪ್ರೂವ್ ಆಗಿದೆ

Unknown said...

ಕೋಮುಗಲಭೆಗೆ ಲೋಜಿಕಲ್ ಉತ್ತರ ಸಿಕ್ಕಿಲ್ಲ ಮತ್ತು ಸಿಗೋದು ತುಂಬ ಕಷ್ಟ .
ಚಿಕ್ಕವನಿದ್ದಾಗ ಎಲ್ಲೊ ಕೇಳಿದ ನೆನಪು ... ಅದ್ಯವನೋ ಒಬ್ಬ ಸೇರಿದ್ದ ಜನರನ್ನು ಉದ್ದೇಶಿಸಿ ಹೇಳ್ತಿದ್ದ " ಹಿಂದುಗಳಿಗೆ ಒಂದು ದೇಶ, ಮುಸ್ಲಿಮರಿಗೆ ಒಂದು ದೇಶ, .. ಹೀಗೆ ಬೇರೆ ಬೇರೆ ಧರ್ಮದವರಿಗೆ ಬೇರೆ ಬೇರೆ ದೇಶ ಇರ್ಬೇಕು.. ಆಗ ಗಲಾಟೆಗಳು ಆಗೋದು ಕಮ್ಮಿ ಆಗತ್ವೆ" . ಬಹುಶ ಇದೆ ಸರಿಯೇನೋ? ಬೇರೆ ಬೇರೆ ಧರ್ಮದವ್ರು ದೂರ ಇದ್ರೆನೆ ಅವ್ರ ಬಗ್ಗೆ ಗೌರವ, ಪ್ರೀತಿ , ಅವ್ರ ಜೊತೆ ಮಾತಾಡೋ ಬಯಕೆ ಬರುತ್ತೇನೋ?
ಬಹುಶ ರಾಜಕೀಯ ಅನ್ನೋದು ಈ ಕೊಮುಗಳಭೆಗೆ ಲೋಜಿಕಲ್ ಕಾರಣ ಅನ್ಸುತ್ತೆ .. ನೀವೆನಂತಿರ?

Ravikanth Gore
http://ravikanth-gore.blogspot.com

createam said...

"ಬಹುಶ ರಾಜಕೀಯ ಅನ್ನೋದು ಈ ಕೊಮುಗಳಭೆಗೆ ಲೋಜಿಕಲ್ ಕಾರಣ ಅನ್ಸುತ್ತೆ .. ನೀವೆನಂತಿರ?"

ನನ್ನ ಅಭಿಪ್ರಾಯ ಬೇರೆ. ರಾಜಕೀಯದವ್ರು ಇದಕ್ಕೆ ಕಾರಣ ಅನ್ನೋದು ಮೇಲ್ನೋಟಕ್ಕೆ ಸರಿ ಅಂತ ಕಂಡ್ರೂ, ಮುಖ್ಯವಾಗಿ ನನ್ನ ಧರ್ಮ ಸರಿ, ಇನ್ನೊಬ್ಬರ ಧರ್ಮ ತಪ್ಪು; ನನ್ನ ಆಚರಣೆ ಇನ್ನೊಂದು ಧರ್ಮದ ಆಚರಣೆಗಿಂತ ಮೇಲು; ಈ ಭಾವನೆಗಳಿವೆಯಲ್ಲಾ ಅವು ಈ ದ್ವೇಷಕ್ಕೆ ಕಾರಣ. ಧರ್ಮ ಅನ್ನೋದು ಇರೊ ಒಂದು ದೇವ್ರನ್ನ ಕಾಣೋ ಒಂದು ದಾರಿ ಅಂತ ಯಾರೂ ತಿಳೀದೇ ಅಲ್ಲಾನೇ ಬೇರೆ ರಾಮನೇ ಬೇರೆ ಅನ್ನೊದು ಇದಕ್ಕೆ ಕಾರಣ. ರಾಜಕಾರಣಿಗಳನ್ನ ಸ್ವಲ್ಪ ಪಕ್ಕಕ್ಕಿಡಿ, ಅವ್ರು ಇಲ್ಲ ಅಂದ್ರೂ ಹಿಂದುಗಳು ತಾವೇ ಮೇಲು ಅಂತಾರೆ, ಮುಸಲ್ಮಾನರು ಧರ್ಮ ಅಂದ್ರೆ ನಂದೊಂದೇ ಅಂತಾರೆ. ಈಗ ಪಕ್ಕಕ್ಕಿಟ್ಟಿದ್ರಲ್ಲ ಆ ರಾಜಕಾರಣಿಗಳನ್ನ, ಅವ್ರನ್ನ ತನ್ನಿ, ನೋಡಿ, ಬಿರುಕು ಆಗ್ಲೆ ಇದೆ, ಇವ್ರು ಅದನ್ನ ಉಪಯೋಗಿಸ್ತಾರೆ ಅಷ್ಟೆ.
ಧರ್ಮ ಅನ್ನೋದು ಒಬ್ಬನ ವೈಯುಕ್ತಿಕ ವಿಚಾರ, ಅದನ್ನ ಯಾವಾಗ ಮನುಷ್ಯ ಇನ್ನೊಬ್ಬರ ಮೇಲೆ ಹೇರ್ತಾನೊ (ನಂದೇ ಮೇಲು ಅಂತ ಸಾಧಿಸೋಕೆ) ಅವಾಗ ಕಲಹಗಳು ಶುರು ಆಗ್ತಾವೆ. ಸಮಾಜದ ಜನರ ಮನಸ್ಸಲ್ಲಿ ಯಾವಾಗ ಎಲ್ಲ ಧರ್ಮ ಒಂದೇ ಅನ್ನೊ ಭಾವನೆ ಬರುತ್ತೊ (ಅದಕ್ಕೆ ಸರಿಯಾದ education ಸಿಗುತ್ತೊ) ಆವಾಗ ಈ ರಾಜಕರಣಿಗಳು ಏನೂ ಮಾಡೋದಕ್ಕೆ ಆಗಲ್ಲ.

createam said...

>>"ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ"
ಶ್ರೀಯವರೆ, ಇದನ್ನ ಓದಿದಾಗ ನನಗೆ ನೆನಪಾದದ್ದು ಒಂದು ಚಿಕ್ಕ ಬಾಲಕನ interview. ಈತ ಗೋಧ್ರಾದಲ್ಲಿ ತನ್ನ ಕುಟುಂಬದವರ ಹತ್ಯೆಯನ್ನ ಕಣ್ಣಾರೆ ನೋಡಿದವನು.
ಇಲ್ಲಿ ಕ್ಲಿಕ್ ಮಾಡಿ video 16:23 ರಿಂದ ಆ ಹುಡುಗನ ಮಾತಿದೆ, ಯಾರ ಮನಸ್ಸಿಗಾದ್ರೂ ಘಾಸಿ ಆಗೋ ವಿಚಾರ ಅದು.
ಇದನ್ನ ನೋಡಿ, ಕೆಲವರು ಹೇಳ್ಬೋದು, "ಇದನ್ನೆ ಮುಸ್ಲಿಮರು ಮಕ್ಕಳಿಗೆ ಕಲಿಸ್ತಾ ಇರೋದು" ಅಂತ. ಆದ್ರೆ ಸಮಸ್ಯೆ ಇನ್ನೂ ಆಳದಲ್ಲಿದೆ. ಒಂದು ಚಿಕ್ಕ ಮಗುವಿನ ಮನಸ್ಸು ಇಷ್ಟೊಂದು ವಿಷ ಕಾರ್ಬೇಕಾದ್ರೆ ಅದಕ್ಕೆ ಎಂತಾ ಆಘಾತ ಆಗಿರ್ಬೇಕು ಅಲ್ವಾ?

ವನಿತಾ / Vanitha said...

Hi Shree,
Nice blog, I apologise for typing in English. I am 'Gadinadu kannadiga' of Kasaragod dist presently persuing higher studies at US. Whatever Shree has written is exactly correct. In our childhood days we too faced a lot and lot of problems due to Kasaragod strike. Its very bad to hear that its still continuing..