Monday, August 25, 2008

ಕೊನೆಗೂ ಅಣ್ಣಾವ್ರನ್ನು ಭೇಟಿಯಾದೆ...


ನಾನಾಗ ತುಂಬಾ ಚಿಕ್ಕವಳು, ಅದು ಸಿನಿಮಾ ಅಂದರೆ ನನಗೆ ಏನೇನೂ ಗೊತ್ತಿರದಿದ್ದ ಕಾಲ. ಥಿಯೇಟರುಗಳಿಗೆ ಹೋಗಿ ಸಿನಿಮಾ ನೋಡ್ತಿದ್ದಿದ್ದು ತುಂಬಾ ಅಪರೂಪ. ಅಜ್ಜನ ಮನೆಗೆ ಹೋದಾಗ ಒಂದು ಸಲ ಅಜ್ಜ ನಮ್ಮನ್ನು ಸಿನಿಮಾ ನೋಡಲು ಕರೆದುಕೊಂಡು ಹೋದರು. ಪುತ್ತೂರಿನ ಸಿನಿಮಾ ಥಿಯೇಟರ್. ಸಿಪಾಯಿ ರಾಮು ಅನ್ನುವ ಆ ಚಿತ್ರದಲ್ಲಿ ನಟ-ನಟಿಯರು ಯಾರು, ಚಿತ್ರದ ಕಥೆ ಏನು, ಯಾವುದೂ ಅರ್ಥ ಮಾಡಿಕೊಳ್ಳಲು ಗೊತ್ತಾಗದಿದ್ದ ಪ್ರಾಯ ನನ್ನದು...

ಸಿನಿಮಾ ಥಿಯೇಟರಿನೊಳಗೆ ಹೋಗಿ ಕೂತು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸ್ಕ್ರೀನಿನಲ್ಲಿ ಇಬ್ಬರು ಕತ್ತಿ ಹಿಡಿದುಕೊಂಡು ಜೋರಾಗಿ ಯುದ್ಧ ಮಾಡುತ್ತಿದ್ದಂತೆ ನೆನಪು. ಇನ್ನೇನೂ ನೆನಪಿಲ್ಲ, ಅವರು ಬಡಿದಾಡಿಕೊಳ್ಳುತ್ತಿದ್ದಾರೆ, ನಾವು ಹೋಗುವ ಇಲ್ಲಿಂದ ಅಂತ ಹಠಮಾಡಿದ್ದು ಬಿಟ್ಟರೆ... ಹೋಗಿ ಅರ್ಧವೇ ಗಂಟೆಯಲ್ಲಿ ರಚ್ಚೆಹಿಡಿದು, ಹಠ ಮಾಡಿ, ಸಿನಿಮಾ ಥಿಯೇಟರಿನಿಂದ ವಾಪಸ್ ಬಂದಿದ್ದು ಮಾತ್ರ ಗೊತ್ತು. ಪಾಪ, ನನ್ನಿಂದಾಗಿ ನಮ್ಮಮ್ಮ, ಅಜ್ಜನಿಗೆ ಕೂಡ ಸಿನಿಮಾ ಮಿಸ್ ಆಯಿತು. ಅದರಲ್ಲಿದ್ದ ನಟ ರಾಜ್ಕುಮಾರ್ ಅಂತ ಗೊತ್ತಾಗಿದ್ದು ಎಷ್ಟೋ ವರ್ಷಗಳ ನಂತರ. ಆದರೆ ಆ ಸಿನಿಮಾ ನಾನಿನ್ನೂ ನೋಡಲು ಸಾಧ್ಯವಾಗಿಲ್ಲ.

ನಾನಾಗ 6ನೇ ಕ್ಲಾಸೋ 7ನೇ ಕ್ಲಾಸೋ ಇರಬೇಕು. ಅತ್ತೆಮನೆಗೆ ಹೋದಾಗ ಅಲ್ಲಿದ್ದ ಸನಾದಿ ಅಪ್ಪಣ್ಣದ ಧ್ವನಿಮುದ್ರಿಕೆಯನ್ನು ಕೇಳುತ್ತಿದ್ದೆ. ಅದರಲ್ಲಿ ಅಪ್ಪಣ್ಣನ ಪಾತ್ರದ ದನಿಗೆ ನಾನು ಮರುಳಾಗಿ ಬಿಟ್ಟೆ. ಕೇಳುತ್ತಾ ಕೇಳುತ್ತಾ ಆ ದನಿ ತುಂಬಾ ಆತ್ಮೀಯವಾಗುತ್ತ ಹೋಯಿತು. ಅದರ ಡೈಲಾಗು ಡೈಲಾಗೂ ಮನಸ್ಸಲ್ಲಿ ಉಳಿಯುವಷ್ಟು ಸಲ ಕೇಳಿದ್ದೆ.


+++++++++

ನಾನು ಎಂಟನೇ ಕ್ಲಾಸಿರಬಹುದು. ಅದು ನಮ್ಮೂರಲ್ಲಿ ಟಿವಿ ಯುಗ ಇನ್ನೂ ಆರಂಭವಾಗುತ್ತಿದ್ದ ಕಾಲ. ನಮ್ಮ ಪಕ್ಕದ ಮನೆಯಲ್ಲೇ ಟಿವಿ ತಂದರು. ದೂರದರ್ಶನ ಮಾತ್ರ ಅದರಲ್ಲಿ ಕಾಣುತ್ತಿತ್ತು. ನನ್ನನ್ನು
ಸೇರಿದಂತೆ ಅಕ್ಕಪಕ್ಕದ ಮನೆಗಳ ಚಿಳ್ಳೆಪಿಳ್ಳೆಗಳಿಗೆಲ್ಲಾ ಟೀವಿ ನೋಡಲು ಅಲ್ಲಿ ಹೋಗುವ ಸಂಭ್ರಮ. ನಾನಂತೂ ಏನಿದ್ದರೂ ಇಲ್ಲದಿದ್ದರೂ ಶುಕ್ರವಾರ ಚಿತ್ರಮಂಜರಿ, ಭಾನುವಾರ ಚಲನಚಿತ್ರ - ಇವೆರಡನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದು, ಹೋಂವರ್ಕ್, ಕೊನೆಗೆ ಪರೀಕ್ಷೆಗೆ ಓದುವುದನ್ನೂ ಬಿಟ್ಟು ಶ್ರದ್ಧೆಯಿಂದ ಸಿನಿಮಾ ನೋಡಿದ ದಿನಗಳಿತ್ತು.

ಈ ಎಲ್ಲಾ ವ್ಯವಹಾರದಲ್ಲಿ ನನಗೆ ರಾಜ್ಕುಮಾರ ಮತ್ತಷ್ಟು ಆತ್ಮೀಯವಾಗಿದ್ದ. ರಾಜ್ಕುಮಾರ್ ಸಿನಿಮಾ ದೂರದರ್ಶನದಲ್ಲಿ ಹಾಕಿದರೆ ಸಾಕು, ಬೇರೆಲ್ಲವನ್ನೂ ಮಿಸ್ ಮಾಡ್ಕೊಂಡಾದರೂ ಅದನ್ನು ನೋಡಿಯೇ ನೋಡುತ್ತಿದ್ದೆ. ಅಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿಐಡಿ 999, ನಾಂದಿ ಇತ್ಯಾದಿ ಚಿತ್ರಗಳಿಂದ ಶುರುವಾಗಿ, ದಾರಿ ತಪ್ಪಿದಮಗ, ಶ್ರಾವಣ ಬಂತು ವರೆಗೆ ದೂರದರ್ಶನ ಯಾವ್ಯಾವ ಚಿತ್ರಗಳನ್ನು ಹಾಕಿದ್ದರೋ ಅದೆಲ್ಲವನ್ನೂ ನೋಡಿದ ಸಾಧನೆ ನನ್ನದು. ರಾಜ್ಕುಮಾರನ ಜೇನುದನಿಯ ಜತೆಗೆ ಆ ಉದ್ದ ಮೂಗು ಕೂಡ ಆತ್ಮೀಯವೆನಿಸಿತು.

ಬರಬರುತ್ತಾ ನನ್ನ ರಾಜ್ಕುಮಾರ್ ಅಭಿಮಾನ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಸಿನಿಮಾದಲ್ಲಿ ರಾಜ್ಕುಮಾರ್ ಅತ್ತುಬಿಟ್ಟರೆ ನಾನೂ ಅತ್ತುಬಿಡುತ್ತಿದ್ದೆ. ಆಗ ಚಾಲ್ತಿಯಲ್ಲಿದ್ದ ಚಲನಚಿತ್ರ ಪತ್ರಿಕೆಗಳಾದ ವಿಜಯಚಿತ್ರ, ರೂಪತಾರಾ ಇತ್ಯಾದಿಗಳನ್ನು ಸುರತ್ಕಲ್ಲಿನಲ್ಲಿದ್ದ ಅತ್ತೆ ಮನೆಗೆ ತರಿಸುತ್ತಿದ್ದರು. ನಾನು ಅಲ್ಲಿ ರಜೆಯಲ್ಲಿ ಹೋದಾಗೆಲ್ಲ ಹಳೆಯ ಪತ್ರಿಕೆಗಳೆಲ್ಲವನ್ನೂ ಅಲ್ಲಿಂದ ತಂದು ಭಕ್ತಿಯಿಂದ ಓದುತ್ತಿದ್ದೆ. ಆಮೇಲೆ ಅದರಲ್ಲಿರುತ್ತಿದ್ದ ಚಿತ್ರನಟ-ನಟಿಯರ ಚಿತ್ರಗಳನ್ನು ಕತ್ತರಿಸಿ ಆಲ್ಬಂ ಮಾಡುವ ಹುಚ್ಚು ಹತ್ತಿಕೊಂಡಿತು. ಇದರಲ್ಲಿಯೂ ರಾಜ್ಕುಮಾರ್-ಗೆ ಮಾತ್ರ ವಿಶೇಷ ಸ್ಥಾನ. ರಾಜಕುಮಾರ್ ಸಿನಿಮಾಗಳ ಪಟ್ಟಿಯೊಂದನ್ನು ರೆಡಿ ಮಾಡಿದ್ದೆ. ಅದರಲ್ಲಿ ಯಾರು ಸಂಗೀತ ನಿರ್ದೇಶಕರಿದ್ದರು, ಯಾರು ಹೀರೋಯಿನ್, ಯಾವ್ಯಾವ ಹಾಡಿತ್ತು, ಯರು ಹಾಡಿದ್ದರು ಇತ್ಯಾದಿಗಳೆಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡಿದ್ದೆ. ರಾಜ್ಕುಮಾರ್ ಜೀವನದ ಬಗ್ಗೂ ಸ್ವಲ್ಪ ಹೆಚ್ಚು ತಿಳಿಯಿತು. ಏನು ತಿಳಿದರೂ ತಿಳಿಯದಿದ್ದರೂ ಅವರ ಮೇಲಿದ್ದ ಅಭಿಮಾನ ಮಾತ್ರ ಹೆಚ್ಚುತ್ತಲೇ ಹೋಯಿತು.


+++++++++


ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆ ನಮ್ಮನೆಯಲ್ಲಿ ನಿಜವಾಗಲಿಲ್ಲ. ನನ್ನ ಹಾಗೇ ಟೀವಿ ನೋಡುತ್ತಿದ್ದ ತಮ್ಮ ನಟ ಅಂಬರೀಷ್-ನ ಅಭಿಮಾನಿಯಾಗಿ ಬೆಳೆದ. ಅಂಬರೀಷ್ ನಟರಲ್ಲಿ ಶ್ರೇಷ್ಠಾತಿಶ್ರೇಷ್ಠನೆಂದು ತಮ್ಮ ವಾದಿಸಿದರೆ, ನಾನು ಇಲ್ಲ, ಅಂಬರೀಷೆಂದರೆ ಕೆಂಗಣ್ಣಿನ ಕುಡುಕ, ರಾಜ್ಕುಮಾರನೇ ಶ್ರೇಷ್ಠನೆಂದು ವಾದಿಸುತ್ತಿದ್ದೆ. ನನಗಿಂತ ಆರು ವರ್ಷ ಚಿಕ್ಕವನಾದರೂ ವಾದ ಮಾಡುವುದರಲ್ಲಿ ನನ್ನ ತಮ್ಮನನ್ನು ಬಿಟ್ಟರಿಲ್ಲ... ಈ ವಿಚಾರವಾಗಿ ನಾವಿಬ್ಬರು ಸೇರಿ ಮನೆಯನ್ನು ಕುರುಕ್ಷೇತ್ರ ಮಾಡಿದ್ದೂ ಇತ್ತು. ಕೊನೆಗೆ ಅಮ್ಮ ಬಂದು ನೀನ್ ದೊಡ್ಡೋಳು, ತಮ್ಮನ ಜತೆ ಜಗಳವಾಡಲು ನಾಚಿಕೆಯಾಗುವುದಿಲ್ವಾ ಅಂತ ನನಗೆ ಬಯ್ಯುವುದರೊಡನೆ ಪರ್ಯವಸಾನವಾಗುತ್ತಿತ್ತು.

ಚಿಕ್ಕಂದಿನಲ್ಲಿ ನನಗೆ ಚಿತ್ರ ಬಿಡಿಸುವ ಗೀಳು ಕೂಡ ಇತ್ತು. ಆಗ ಅದ್ಯಾಕೋ ಗೊತ್ತಿಲ್ಲ, ಪದೇ ಪದೇ, ಸದಾ ಕಣ್ಣಲೀ ಪ್ರಣಯದಾ ಗೀತೆ ಹಾಡಿದೇ... ಹಾಡಿನ ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ... ಹಾಡು ನೆನಪಿಸಿಕೊಳ್ಳುತ್ತಿದ್ದೆ. ಅದರಲ್ಲಿ ಇಂಟ್ರ್-ಲ್ಯೂಡ್ ಆಗಿ ಬರುವ ಸಂಗೀತ ನನಗೆ ಇವತ್ತಿಗೂ ಇಷ್ಟ.

ಇದರ ಜತೆ ಅಂಟಿಕೊಂಡಿದ್ದು ರೇಡಿಯೋ ಕೇಳುವ ಚಾಳಿ. ರಾತ್ರಿ ರೇಡಿಯೋ ಹಾಕಿ, ಅದರಲ್ಲಿ 11 ಗಂಟೆಗೆ ಬರುತ್ತಿದ್ದ ಹಳೆ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಕೇಳದೆ ನಾನು ಮಲಗುತ್ತಲೇ ಇರಲಿಲ್ಲ. ಇತರೆಲ್ಲಾ ಹಾಡುಗಳ ಜತೆಗೆ ಅದರಲ್ಲಿ ಬರುವ ರಾಜ್ಕುಮಾರ್ ಸಿನಿಮಾದ ಹಾಡುಗಳನ್ನು ಕೂಡ ಭಕ್ತಿಯಿಂದ ಕೇಳುತ್ತಿದ್ದೆ. ಅದರ ಲಿರಿಕ್ಸ್ ನೆನಪಿಟ್ಟುಕೊಳ್ಳುತ್ತಿದ್ದೆ. ಹಾಡುಗಳಿಗೆ ರಾಜ್ಕುಮಾರ್-ದೇ ದನಿಯಿದ್ದರಂತೂ ಕೇಳುವುದೇ ಬೇಡ, ನನಗೆ ಫುಲ್ ಖುಷಿಯೋ ಖುಷಿ.

+++++++++

ಕಾಲ ಉರುಳಿತು. ನಾನು 10ನೇ ತರಗತಿ ಮುಗಿಸಿ ಕಾಲೇಜಿಗೆಂದು ದೂರದ ಉಜಿರೆಗೆ ಸೇರಿಕೊಂಡೆ. ಆಗ ಟೀವಿಯಲ್ಲಿ ಸಿನಿಮಾ ಬಿಟ್ಟು ಬೇರೆ ಕಾರ್ಯಕ್ರಮಗಳೂ ಕುತೂಹಲಕರವಾಗಿಬಲ್ಲವು ಅಂತ ಗೊತ್ತಾಯಿತು. ಪಿಯುಸಿ ಮತ್ತು ಡಿಗ್ರಿ ದಿನಗಳಲ್ಲಿ ನನ್ನ ಟೀವಿ ನೋಡುವಿಕೆ ಕ್ರಿಕೆಟ್ ಮ್ಯಾಚ್-ಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಎಂಎ ಮಾಡುವಾಗ ಸಿದ್ಧಾರ್ಥಕಾಕ್ ಮತ್ತು ರೇಣುಕಾ ಶಹಾಣೆ ನಡೆಸಿಕೊಡುತ್ತಿದ್ದ 'ಸುರಭಿ' ಕಾರ್ಯಕ್ರಮಕ್ಕೆ, ಹಾಗೂ ಒಂದು ಸೀರಿಯಲ್ ನೂರ್-ಜಹಾನ್-ಗೆ ಮೀಸಲಾಯಿತು. ಇವುಗಳ ನಡುವೆ, ಮತ್ತು ಓದಿನ ಸೀರಿಯಸ್-ನೆಸ್ ನಡುವೆ ನನ್ನ ಆರಾಧ್ಯದೇವತೆ ರಾಜ್ಕುಮಾರ ಮಸುಕಾಗಿ ಹೋದ. ನಾನು ಟೀವಿಯೇ ನೋಡದಿದ್ದ ಕಾಲವೂ ಇತ್ತು. ಇದೇ ರೀತಿ ನನ್ನ ಪೋಸ್ಟ್ ಗ್ರಾಜುವೇಶನ್ ಕಳೆಯುವ ತನಕವೂ ಮುಂದುವರಿಯಿತು.

ನಡುನಡುವೆ ರಜೆಯಲ್ಲಿ ಊರಿಗೆ ಹೋದಾಗ ಮಾತ್ರ ಹಳೆಯ ಚಾಳಿ ಬೆಂಬಿಡದೆ ಕಾಡುತ್ತಿತ್ತು, ರಾಜ್ಕುಮಾರ ಸಿನಿಮಾ ಇದ್ದರೆ ತಪ್ಪದೇ ನೋಡುತ್ತಿದ್ದೆ. ಹಾಡುಗಳನ್ನಂತೂ ತಪ್ಪದೇ ಕೇಳುತ್ತಿದ್ದೆ. ಪ್ರತಿ ಸಲವೂ ಆ ದನಿಗೆ, ಆ ನಟನಾಕೌಶಲ್ಯಕ್ಕೆ ಬೆರಗಾಗುತ್ತಿದ್ದೆ. ಅದು ಹೇಗೆ ಇಷ್ಟೆಲ್ಲ ಶ್ರೇಷ್ಠಗುಣಗಳು ಒಂದೇ ವ್ಯಕ್ತಿಯಲ್ಲಿರುವಂತೆ ಮಾಡಿದ ಆ ಸೃಷ್ಟಿಕರ್ತ ಅಂದುಕೊಳ್ಳುತ್ತಿದ್ದೆ.

+++++++++
ಪೋಸ್ಟ್ ಗ್ರಾಜುವೇಶನ್ ಮುಗಿದು, ಇಂಟರ್ನ್-ಶಿಪ್-ಗೋಸ್ಕರ ಬೆಂಗಳೂರಿಗೆ ಬಂದೆ. 2000ನೇ ಇಸವಿಯ ಮೇ ತಿಂಗಳ ಆ ಮುಂಜಾವು, ನಾನಿನ್ನೂ ಮರೆತಿಲ್ಲ. ಮೊದಲ ಬಾರಿ ನಾನು ಬೆಂಗಳೂರಿಗೆ ಬರುವ ಉತ್ಸಾಹಕ್ಕೆ ಹೊರಗೆ ಬೆಳಕು ಮೂಡುವ ಮೊದಲೇ ಬಸ್ಸಿನಲ್ಲಿ ಎದ್ದು ಕುಳಿತು ಚನ್ನಪಟ್ನ ದಾಟಿ ಬೆಂಗಳೂರಿನತ್ತ ಬರುವ ದಾರಿಯಲ್ಲಿ ಮುಂಜಾವಿನ ಸೊಬಗನ್ನು ಸವಿಯುತ್ತಿದ್ದೆ. ಹಾಗೇ ಬೆಂಗಳೂರಿನಲ್ಲಿ ನಾನಿರುವ ಎರಡು ತಿಂಗಳಲ್ಲಿ ಮಾಡಬೇಕಿರುವ ಕಾರ್ಯಗಳ ಬಗ್ಗೆ ಲಿಸ್ಟ್ ಹಾಕಿಕೊಳ್ಳುತ್ತಿದ್ದೆ. ಅದರಲ್ಲಿ ರಾಜ್ಕುಮಾರ್ ಭೇಟಿಯೂ ಒಂದು.

ಈ ಸಮಯಕ್ಕೆ ಹುಚ್ಚು ಅಭಿಮಾನವೆ
ಲ್ಲ ಕೊಚ್ಚಿ ಹೋಗಿ, ರಾಜ್ಕುಮಾರ್ ವ್ಯಕ್ತಿತ್ವದ ಮೇಲೊಂದು ಬಗೆಯ ಗೌರವ ಹುಟ್ಟಿತ್ತು ನನಗೆ. ಇಂಟರ್ನ್-ಶಿಪ್ ಮಾಡುತ್ತಿದ್ದಾಗಲೊಂದು ದಿನ, ಅದ್ಯಾವುದೋ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಇಟ್ಟಿದ್ದ ಪ್ರೆಸ್ ಟ್ರಿಪ್-ನ ಮೂಲಕ ದೇವನಹಳ್ಳಿಯ ಆಸುಪಾಸಿನಲ್ಲಿರುವ ಕೆಂಪತಿಮ್ಮನಹಳ್ಳಿ ಎಂಬ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಹೋದಾಗ, ಬೆಳ್ಳಿ ಮೂಡಿತೋ ಕೋಳಿ ಕೂಗಿತು ಅಂತ ಕುಣಿಯುತ್ತಿದ್ದ ರಾಜ್ಕುಮಾರ್ ದನಿ ನಮ್ಮನ್ನು ಸ್ವಾಗತಿಸಿತು. ರಾಜ್ಕುಮಾರ್ ಅಭಿಮಾನಿ ಸಂಘಗಳ ಬಗೆಗೆ ಬಹಳವಾಗಿ ಕೇಳಿದ್ದ ನನಗೆ ಅದನ್ನು ನೋಡುವ, ಅನುಭವಿಸುವ ಅವಕಾಶ ಸಿಕ್ಕಿತು. ನಮ್ಮೂರ ಫಂಕ್ಷನುಗಳಲ್ಲಿ ದೇವರ ಭಜನೆಗಳನ್ನು ಹಾಕಿಟ್ಟಿರುತ್ತಾರಲ್ಲ, ಅದೇ ರೀತಿ ಅಲ್ಲಿ ರಾಜ್ಕುಮಾರ್ ಹಾಡಿದ ಹಾಡುಗಳ ಸುರಿಮಳೆಯಾಗುತ್ತಿತ್ತು. ಆ ಊರಲ್ಲೆಲ್ಲ ರಾಜ್ಕುಮಾರ್ ಅಭಿಮಾನಿಗಳು ತುಂಬಿ ಹೋಗಿದ್ದರು.

ಇದನ್ನೆಲ್ಲ ನೋಡಿದ ಮೇಲೆ ನನಗೆ ರಾಜ್ಕುಮಾರನ್ನು ಒಂದ್ಸಲವಾದರೂ ಭೇಟಿಯಾಗಬೇಕೆಂಬ ಆಸೆ ಬಲವಾಗುತ್ತ ಹೋಯಿತು. ಆದರೆ ನನ್ನ ಹೊಸ ದಿನಚರಿಯ ನಡುವೆ ಕಾಲ ಕೂಡಿ ಬರಲಿಲ್ಲ. ಹೀಗೆ ತಿಂಗಳೊಂದು ಕಳೆದಿರಬಹುದೇನೋ... ಗೆಳತಿಯೊಬ್ಬಳ ಮನೆಗೆ ಹೋಗುತ್ತಿದ್ದ ಸಮಯ ಸಂಭವಿಸಿದ ಅಪಘಾತದಲ್ಲಿ ನನ್ನ ಕೈ ಫ್ರಾಕ್ಚರ್ ಆಯಿತು. ಗುಣಪಡಿಸಿಕೊಂಡು ಬರೋಣವೆಂದು ಊರಿಗೆ ಹೊರಟುಹೋದೆ. ನಂತರ ಇಂಟರ್ನ್-ಶಿಪ್ ಮುಗಿಸಲು ಪುನಃ ಬೆಂಗಳೂರಿಗೆ ಬಂದೆ.

ಹಾಗೆ ನಾನು ಬರುವ ಹಿಂದಿನ ದಿನವೇ ರಾಜ್ಕುಮಾರನ ಕಿಡ್ನ್ಯಾಪ್ ಅಗಿತ್ತು. ಬೆಂಗಳೂರೆಲ್ಲ ಬಂದ್... ಗಲಾಟೆಯೋ ಗಲಾಟೆ... ಸರಿ, ಆ ಪರಿಸ್ಥಿತಿಯಲ್ಲಿ ಏನು ಮಾಡಲೂ ಸಾಧ್ಯವಿಲ್ಲದೆ, ಇಂಟರ್ನ್-ಶಿಪ್ ಮುಗಿಸುವುದೂ ಕಷ್ಟವಾದ ಕಾರಣ ವಾಪಸ್ ಊರಿಗೆ ಹೊರಟುಹೋದೆ. ನಂತರ ಬೆಂಗಳೂರಿಗೆ ಬರಲಾಗಲಿಲ್ಲ. ಹಾಗಾಗಿ ರಾಜ್ಕುಮಾರ್ ನೋಡುವ ಮಹದಾಸೆ ಮೂಲೆಸರಿಯಿತು.

+++++++++
ರಾಜ್ಕುಮಾರ್ ಕ್ಷೇಮವಾಗಿ ವೀರಪ್ಪನ್ ಕೈಯಿಂದ ತಪ್ಪಿಸಿಕೊಂಡು ವಾಪಸ್ ಬರಲೆಂದು ಬೇಡಿಕೊಂಡವರಲ್ಲಿ ನಾನೂ ಒಬ್ಬಳು. ರಾಜ್ಕುಮಾರ್ ವಾಪಸ್ ಬರುವ ಸಮಯದಲ್ಲಿ ನಾನು ಮಾಧ್ಯಮ ಜಗತ್ತಿನೊಳಗೆ ಪ್ರವೇಶ ಪಡೆದಿದ್ದೆ, ಹೈದರಾಬಾದಿಗೆ ವಲಸೆ ಹೋದೆ. ಆ ಸಮಯದ ಕಥೆಗಳನ್ನೆಲ್ಲ ಮಾಧ್ಯಮದೊಳಗಿನಿಂದಲೇ ಕುತೂಹಲದಿಂದ ಕೇಳಿದೆ, ನೋಡಿದೆ. ವೀರಪ್ಪನ್, ನಕ್ಕೀರನ್ ಗೋಪಾಲನ್, ಕರುಣಾನಿಧಿ, ಎಸ್ಸೆಂ ಕೃಷ್ಣ ಇತ್ಯಾದಿ ಪಾತ್ರಗಳು ನನಗೆ ಹೊಸದಾಗಿ ಪರಿಚಯವಾದವು. ದಿನಕರ್ ಅವರು ಬರೆದ ರಾಜರಹಸ್ಯ - ರಾಜ್ಕುಮಾರ್ ಬಿಡುಗಡೆಗಾಗಿ ನಡೆದ ನಾಟಕಗಳನ್ನೆಲ್ಲ ಅನಾವರಣಗೊಳಿಸಿದ ಪುಸ್ತಕವನ್ನೂ ಓದಿದೆ. ಇವೆಲ್ಲದರ ನಡುವೆ, ರಾಜ್ಕುಮಾರ್ ನೋಡುವ, ಮಾತಾಡುವ ಆಸೆ ಮಾತ್ರ ಆಸೆಯಾಗಿಯೇ ಉಳಿಯಿತು.

+++++++++
ಮತ್ತೆ ನಾಲ್ಕು ವರ್ಷಗಳು ಕಳೆದವು. ಬದುಕಿನ ಹೊಳೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಎಪ್ರಿಲ್ 4, 2006. ಹೈದರಾಬಾದಿನ ನಂಟು ಮುಗಿದು ಬೆಂಗಳೂರಿಗೆ ಕಾಲಿಟ್ಟಿದ್ದೆ. ಇನ್ನೇನು, ಇಲ್ಲೇ ಟೆಂಟು, ಯಾವಾಗ ಬೇಕಾದರೂ ರಾಜ್ಕುಮಾರ್ ನೋಡಬಹುದು ಅಂದುಕೊಂಡೆ.

ಆದರೆ, ಕಾಲ ಯಾರಿಗೂ ಕಾಯದ ಕ್ರೂರಿ... ನಾನಿನ್ನೂ ಸರಿಯಾಗಿ ರಾಜ್ಕುಮಾರ್ ನೋಡುವ ಪ್ಲಾನ್ ಹಾಕುವ ಮೊದಲೇ ಕಾದಿತ್ತು ನನಗೆ ಆಘಾತ... ಎಪ್ರಿಲ್ 13, 2006ರಂದು, ರಾಜ್ಕುಮಾರ್ ಇದ್ದಕ್ಕಿದ್ದಂತೆ ಇನ್ನಿಲ್ಲವಾದರು.

+++++++++
ಅಣ್ಣಾವ್ರು ಇನ್ನಿಲ್ಲವಾದ ದಿನ ಎಲ್ಲೆಲ್ಲೂ ಗಲಾಟೆ... ಯಾಕೆ ಗಲಾಟೆ ಅಂತ ಯಾರಿಗೂ ಗೊತ್ತಿಲ್ಲ. ರಸ್ತೆಯಲ್ಲೆಲ್ಲ ಗ್ಲಾಸಿನ ಚೂರುಚೂರು, ಮುಚ್ಚಿದ ಕಟ್ಟಡಗಳು... ಒಡೆದ ಗಾಜಿನ ಕಿಟಿಕಿಗಳು... ರಸ್ತೆಯಲ್ಲಿ ಅಲ್ಲಲ್ಲಿ ಬೆಂಕಿ... ಸುಡುತ್ತಿದ್ದ ಟಯರುಗಳು... ರಸ್ತೆಗಳಲ್ಲಿ ವಾಹನಸಂಚಾರ ಬಲುವಿರಳ... ಜನರ ಸುಳಿವೇ ಇಲ್ಲ... ಎಲ್ಲೆಡೆ ಹಾರುತ್ತಿದ್ದ ಹಳದಿ-ಕೆಂಪು ಬಣ್ಣದ ಬಾವುಟ...
ಆರ್. ಟಿ. ನಗರದಿಂದ ವಿಜಯನಗರಕ್ಕೆ ಕಾರ್ಡ್ ರೋಡಿನಲ್ಲಿ ಆಟೋವೊಂದರಲ್ಲಿ ಕುಳಿತು ಓಡುತ್ತಿದ್ದ ನಾನು, ಎಲ್ಲಿ ಕಲ್ಲು ಬೀಳುತ್ತದೋ, ಎಲ್ಲಿ ಗೂಂಡಾಗಳು ಬರುತ್ತಾರೋ, ಏನು ಮಾಡುತ್ತಾರೋ ಅಂತ ಹೆದರಿ ಜೀವ ಕೈಲಿ ಹಿಡ್ಕೊಂಡು ಕೂತಿದ್ದೆ... ಹಿಂಸೆಯನ್ನು ಎಂದೂ ಬೆಂಬಲಿಸದ ಸಾಧು ರಾಜ್ಕುಮಾರ್ ಹೆಸರಲ್ಲಿ, ಕನ್ನಡತನದ ಹೆಸರಲ್ಲಿ ಆದಿನ ಬೆಂಕಿ ಹಚ್ಚಿದವರನ್ನು, ಗಲಾಟೆ ಮಾಡಿದವರನ್ನು, ಗ್ಲಾಸು ಒಡೆದವರನ್ನು, ದುಡ್ಡು ಕಿತ್ತವರನ್ನು, ನಾನೆಷ್ಟು ದ್ವೇಷಿಸುತ್ತೇನೆಂದರೆ, ಕೆಂಪು-ಹಳದಿ ಬಣ್ಣದ 'ಕನ್ನಡ' ಬಾವುಟವೇನಾದರೂ ಕಣ್ಣಿಗೆ ಕಂಡರೆ ಇಂದಿಗೂ ನನಗೆ ಸಿಟ್ಟು ನೆತ್ತಿಗೇರುತ್ತದೆ. ಆ ಬಾವುಟದ ಜತೆ ಗುರುತಿಸಿಕೊಂಡ ಗೂಂಡಾಗಳು ಮಾಡುತ್ತಿರುವ ಅನ್ಯಾಯವನ್ನು ಹತ್ತಿಕ್ಕಲು ಯಾರೂ ಇಲ್ಲವಲ್ಲಾ ಅನಿಸುತ್ತದೆ.
+++++++++
ಕೊನೆಗೂ ನಾನು ಅಣ್ಣಾವ್ರನ್ನು ಭೇಟಿಯಾದೆ... ಅವರು ಸತ್ತು ಒಂದು ವಾರದ ನಂತರ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಅವರ ಸಮಾಧಿಯ ಎದುರು ಫೋಟೋವಾಗಿ ಕುಳಿತಿದ್ದರು ಅಣ್ಣಾವ್ರು... 80ರ ದಶಕದ ಫೋಟೋ ಇರಬೇಕು. ಇನ್ನೂ ತಲೆ ಬೋಳಾಗುತ್ತಿದ್ದಂತಿತ್ತು. ಆದರೆ ಅದೇ ತುಂಬು ನಗು... ಅದೇ ಉದ್ದ ಮೂಗು... ನೋಡುತ್ತಿದ್ದರೆ ಅವರ ಜೇನುದನಿಯೂ ಕೇಳಿದಂತಾಗುತ್ತಿತ್ತು. ಭೇಟಿಯಾಗಿದ್ದರೆ ಏನು ಮಾತಾಡುತ್ತಿದ್ದೆನೋ ಗೊತ್ತಿಲ್ಲ. ಆದರೆ, ಜಗದಲ್ಲಿಲ್ಲದೆಯೂ ಮನದಲ್ಲುಳಿದುಹೋದವರ ಭಾವಚಿತ್ರದೆದುರು ನಿಂತ ಕ್ಷಣ ಯೋಚನೆಗಳೆಲ್ಲ ಫುಲ್-ಸ್ಟಾಪ್ ಹೂಡಿ ನಿಂತವು. ರಾಜ್ ಸಮಾಧಿಯ ಸಾನ್ನಿಧ್ಯದ ತಂಗಾಳಿಗೆ ಖಾಲಿ ಮನಸ್ಸು ಅಂತರ್ಮುಖಿಯಾಗಿತ್ತು... ಸ್ಮೃತಿಯಲ್ಲಿ ಅಚ್ಚೊತ್ತಿ ಕುಳಿತಿದ್ದ ಹಾಡೊಂದು ಸುಮ್ಮನೇ ಸುಳಿದಾಡತೊಡಗಿತು...
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು...
ನಾವು ಬಯಸಿದಂತೆ ಬಾಳಲೇನು ನಡೆಯದು...
ವಿಷಾದವಾಗಲೀ ವಿನೋದವಾಗಲಿ...
ಅದೇನೆ ಆಗಲೀ ಅವನೆ ಕಾರಣ...

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು...
ಬಯಸಿದಾಗ ಕಾಣದಿರುವ ಎರಡು ಮುಖಗಳು...
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆಯೇತಕೆ... ನಿರಾಸೆಯೇತಕೆ...
ಅದೇನೆ ಬಂದರೂ ಅವನ ಕಾಣಿಕೆ...
+++++++++
ಇಂದು ರಾಜ್ ಇಲ್ಲದಿರಬಹುದು. ಆದರೆ, ಆ ಜೇನ ದನಿ, ಆ ವಿನೀತ ಭಾವ, ಮೇರು ವ್ಯಕ್ತಿತ್ವ.. ಎಂದೆಂದೂ ಮರೆಯದ ಸ್ಮೃತಿಯಾಗಿ ನೆಲೆಯಾಗಿದೆ.

12 comments:

ಸಿಂಧು sindhu said...

ಶ್ರೀ,

ಚೆನಾಗಿದೆ ನೆನಪಿನ ಮಾಲೆ. ಮಾಧ್ಯಮ ಮತ್ತು ಕನ್ನಡದ ಹುಗ್ರ ಓರಾಟಗಾರರು ಮಾಡಿದ/ಮಾಡುವ ಎಲ್ಲ ಹೈಪ್ ಮತ್ತು ಉತ್ಪ್ರೇಕ್ಷಗಳ ಮಧ್ಯೆ ರಾಜ್ ಕುಮಾರ್ ನನ್ನ ಪ್ರೀತಿಸುವ ಸರಳ ಮನಸ್ಸುಗಳಿಗೆ ತಂಪೆರೆಯುವ ವ್ಯಕ್ತಿತ್ವವೇ ಅವರದ್ದು.

ಒಳ್ಳೆಯ ಬರಹ, ಇಷ್ಟವಾಯಿತು.

ಪ್ರೀತಿಯಿಂದ
ಸಿಂಧು

ಶ್ರೀನಿಧಿ.ಡಿ.ಎಸ್ said...

ಚಂದ ಬರಹ. liked it.

Harisha - ಹರೀಶ said...

ಚೆನ್ನಾಗಿ ಬರೆದಿದ್ದೀರಾ...

ರಾಜ್ ಬದುಕಿದ್ದಾಗ ನೋಡಲಾಗದಿದ್ದುದು ನಿಮ್ಮ ದುರಾದೃಷ್ಟ..

Tina said...

ಶ್ರೀ,
ಬರಹಕ್ಕೆ ಒಂದು ಪುಟ್ಟ ಮಗುವಿನ ಮನಸ್ಸಿನಂತಹ ಸರಳ, ಮುಗ್ಧ ಭಾವವಿದೆ. ಯಾವುದೇ ಆಡಂಬರವಿಲ್ಲದ ಭಾವನೆಗಳ ಹರಿವು, ಆಸೆಯನ್ನು ಈಡೇರಿಸಿಕೊಳ್ಳಲಿಕ್ಕೆ ಆಗದ ವಿಷಾದಭಾವ, ತನ್ನ matinee idol ಬಗ್ಗೆಗಿನ ನಿಷ್ಕಳಂಕ ಪ್ರೇಮ ಸುಂದರವಾಗಿ ಮೂಡಿಬಂದಿದೆ.
-ಟೀನಾ

ಚಂದಿನ | Chandrashekar said...

ಪ್ರಾಮಾಣಿಕ ಅಭಿವ್ಯಕ್ತಿ ಆಪ್ತವೆನಿಸಿತು.

-ಚಂದಿನ
http://www.koogu.blogspot.com

Sushrutha Dodderi said...

ನೈಸ್! ನೀನು ಹೀಗೆಲ್ಲಾ ಬರೀದೇ ಕಾಲವಾಗಿತ್ತು. ಥ್ಯಾಂಕ್ಯೂ. :-)

ವಿ.ರಾ.ಹೆ. said...

ತಲೆಬರಹ ನೋಡಿ ಅಣ್ಣಾವ್ರು ತೀರ್ಕೊಂಡು ಎರಡು ವರ್ಷ ಆದಮೇಲೆ ಶ್ರೀ ಅಣ್ಣಾವ್ರನ್ನು ಹೇಗೆ ಭೇಟಿಯಾದ್ರಪ್ಪಾ ಅಂತ ಗಾಬರಿಯಿಂದಲೇ ಓದಿದೆ. :)

ಸರಳ ಸುಂದರ ಬರಹ. ಮೆಚ್ಚುಗೆಯಾಯಿತು. ಥ್ಯಾಂಕ್ಯೂ.

ಕೆಂಪು-ಹಳದಿ ಬಣ್ಣದ 'ಕನ್ನಡ' ಬಾವುಟವೇನಾದರೂ ಕಣ್ಣಿಗೆ ಕಂಡರೆ ಇಂದಿಗೂ ನನಗೆ ಸಿಟ್ಟು ನೆತ್ತಿಗೇರುತ್ತದೆ.

ಆ ಬಾವುಟ ಕಂಡಾಗ ಸಿಟ್ಟು ನೆತ್ತಿಗೇರಿಸಿಕೊಳ್ಳುವುದು ಬೇಡ. ಅದರ ದುರುಪಯೋಗವಾದಾಗ ಬರಲಿ. :)

Parisarapremi said...

ಆಹಾ!! ಸೊಗಸಾಗಿದೆ ಅಣ್ಣಾವ್ರ ಕತೆ. ಬೊಂಬಾಟ್ ಆದ ನಿರೂಪಣೆ.

sunaath said...

ಅಣ್ಣಾವ್ರ ಸುತ್ತ ಸುತ್ತುವ ಲೇಖನ ಮನ ಮುಟ್ಟುವಂತಿದೆ.

ಮಿಥುನ ಕೊಡೆತ್ತೂರು said...

ಚೆನ್ನಾಗಿದೆ ಬರೆಹ.

ಹಳ್ಳಿಕನ್ನಡ said...

ರಾಜ್ ಚಿತ್ರಗಳನ್ನು ಅಷ್ಟೇನು ನೋಡಿರದ 80ರ ದಶಕದಲ್ಲಿ ಹುಟ್ಟಿದ ನನ್ನ ಗೆಳತಿ ರಾಜ್ ತೀರಿಕೊಂಡ ಮರುದಿನ ನನ್ನ ಇನ್ನೊಬ್ಬ ಗೆಳತಿಯ ಬಳಿ ಹೇಳುತ್ತಿದ್ದಳಂತೆ 'ಇಂದೇಕೋ ಮನಸು ಭಾರವಾಗಿದೆ ರಾಜ್ ಇಲ್ಲದ ದಿನ ಯಾಕೋ ಕಲ್ಪಿಸಿಕೊಳ್ಳಲು ಕಷ್ಟವಾಗುತ್ತಿದೆ' ಎಂದಿದ್ದಳು. ರಾಜ್ ವ್ಯಕ್ತಿತ್ವವೇ ಅಂತದ್ದು. ಕನ್ನಡಿಗರ ಮನಸ್ಸಿನಲ್ಲಿ ರಾಜ್ ಎಷ್ಟು ಪ್ರಭಾವ ಬೀರಿದ್ದಾರೆ ಎನ್ನಲು ಅವಳೊಂದು ಉದಾಹರಣೆ ಅಷ್ಟೆ.
ಸೊಗಸಾಗಿ ನಿರೂಪಿಸಿದ್ದೀರಿ ರಾಜ್ ಬಗೆಗಿನ ನಿಮ್ಮ ಅಭಿಮಾನವನ್ನು.
-ಮಂಜುನಾಥ ಸ್ವಾಮಿ

sapna said...

ಬರಹ ತುಂಬಾ ಚೆನ್ನಾಗಿತ್ತು.ಡಾ.ರಾಜ್ ಕುಮಾರ್‍ ರಂತಹ ಮೇರು ನಟನ ಬಗ್ಗೆ ಗೊತ್ತಿದ್ದರೂ ಕನ್ನಡ ಚಿತ್ರರಂಗಕ್ಕೆ ಅವರೆಂತಹ ಅಮೂಲ್ಯ ರತ್ನವಾಗಿದ್ದರು ಅಂತ ನಾನು ತಿಳಿದುಕೊಂಡದ್ದು ಟಿವಿ ೯ ನ film ಬ್ಯುರೋದಲ್ಲಿ ಕೆಲ್ಸ ಮಾಡಿದಾಗ. ದುರದೃಷ್ಟವಶಾತ್ ನಮ್ಮ ಚಾನೆಲ್ ಆರಂಭವಾಗುವ ಮುನ್ನವೇ ಆ ಚೇತನ ಇಹಲೋಕದಿಂದ ಬಹುದೂರ ಹೋಗಿದ್ದರು.ಕನ್ನಡ ಚಿತ್ರ ರಂಗ ಅನಾಥವಾಗಿತ್ತು. ಅಲ್ಲಿ ನನ್ನ ಮೊದಲ assignment ಡಾ.ರಾಜ್ ಮನೆಗೆ ಹೋಗುವುದೇ ಆಗಿತ್ತು. ಆದ್ರೆ ಬಣ್ಣದ ಜಗತ್ತಿನಲ್ಲೆ ಮಿಂದೆದ್ದಿದ್ದ ಆ ಮನೆಗೆ ಅಂದು ಸೂತಕದ ಛಾಯೆ. ಅಂತೂ ನನಗೂ ವರನಟನ ದರುಶನ ಕನಸಾಗೇ ಉಳಿಯಿತು. ಆದ್ರೆ ಆ ಕ್ಷಣ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ.