Friday, January 2, 2009

ಇಸ್ರೇಲಿ ಭೂತ ತಲೆಗೆ ಹೊಕ್ಕಿದೆ...

ನವೆಂಬರ್ - 29:

ಚೆನ್ನೈಯಲ್ಲಿ ಎಡೆಬಿಡದೆ ಮಳೆ ಸುರಿದಿತ್ತು. ಬೆಂಗಳೂರಿನಲ್ಲೂ ಅದರ ಪರಿಣಾಮ, ಥಂಡಿ ಹವೆ, ವಿಚಿತ್ರ ಮಳೆ. ಸೈಕ್ಲೋನ್ ನಿಶಾಕ್ಕೆ 82 ಜನ ಸತ್ತಿದ್ದು ದೊಡ್ಡದಾಗಿಯೇನೂ ಸುದ್ದಿಯಾಗಿರಲಿಲ್ಲ. ಇನ್ನು ಮುಂದೆ ಮಾನವನ ಅಟ್ಟಹಾಸದೆದುರು ಕಾಲನ ಅಬ್ಬರ ಏನೂ ಅಲ್ಲ ಬಿಡಿ... ಹಿಂದಿನ ದಿನ ಮಳೆಗೆ ನೆನೆದ ಪರಿಣಾಮ ಜ್ವರ ಕಾಡುತ್ತಿತ್ತು. ಆಫೀಸಿಗೆ ರಜಾ ಹಾಕಿ ಮನೆಯಲ್ಲೇ ಕೂತಿದ್ದೆ. ಮುಂಬೈಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿತ್ತು. ತಾಜ್ ಇನ್ನೂ ಬಿಡುಗಡೆಯಾಗಿರಲಿಲ್ಲ. ಟೀವಿ ನೋಡಿನೋಡಿ ತಲೆ ಸಿಡಿಯುತ್ತಿತ್ತು.

ಹಾಗೆಂದು ಮಲಗಲೂ ಆಗದೆ, ಹಳಸಿದ ಸುದ್ದಿಯಿದ್ದ ನಿನ್ನೆಯ ಪೇಪರ್ ಓದಲು ಇಷ್ಟವಿಲ್ಲದೆ, ಬೇರೆ ವಿಧಿಯಿಲ್ಲದೇ ಮತ್ತೆ ಟೀವಿಗೆ ಮೊರೆ ಹೋದೆ. ಚಾನೆಲಿಂದ ಚಾನೆಲಿಗೆ ಬದಲಾಯಿಸುತ್ತ ಕೂತಿದ್ದೆ. ಟೈಮ್ಸ್ ನವ್ ಯಥಾಪ್ರಕಾರ ಕಿರುಚುತ್ತಿತ್ತು... ಹಿಂದಿ ಚಾನೆಲುಗಳ ಗತಿಯೋ, ದೇವರಿಗೇ ಪ್ರೀತಿ. NDTV ಮತ್ತು CNN IBN ಆಗಷ್ಟೇ ಬುದ್ಧಿ ಕಲಿತಂತೆ LIVE ಕೊಡುವುದು ಬಿಟ್ಟು ಹುತಾತ್ಮರಾದವರ ಬಗ್ಗೆ ಗಮನ ಹರಿಸಲು ಆರಂಭಿಸಿದ್ದವು.

ನೋಡುತ್ತ ನೋಡುತ್ತ ನನಗೆ ಘಟನೆಯ ಬಗ್ಗೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆಗಳು ಏನಿವೆ ಅಂತ ತಿಳಿಯಬೇಕೆನಿಸಿತು, ಯಾವ ಚಾನೆಲ್ಲೂ ಏನೂ ಕೊಡುತ್ತಿರಲಿಲ್ಲ. CNNನಲ್ಲೂ ಏನೂ ಇರಲಿಲ್ಲ. ಸರಿ, ಇಂಟರ್ನೆಟ್ಟಲ್ಲಿ ಏನಾದರೂ ಸಿಗಬಹುದು ಅಂತ ಎಣಿಸಿಕೊಂಡು ಸಿಸ್ಟಮ್ ಆನ್ ಮಾಡಿದೆ. ಪಕ್ಕದ ಮನೆಯಲ್ಲೆಲ್ಲೋ ಇರುವ ಅದೃಶ್ಯ ಅನ್-ಸೆಕ್ಯೂರ್ಡ್ ಇಂಟರ್ನೆಟ್ ನೀಟಾಗಿ ಕನೆಕ್ಷನ್ನು ಕೆಲಸ ಮಾಡುತ್ತಿತ್ತು. ಸರಿ, ಲಾಗಿನ್ ಆದೆ. ಅಲ್ಲೂ ಸುಲಭಕ್ಕೆ ಏನೂ ಸಿಗಲಿಲ್ಲ, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ತೂಕದ ಪ್ರತಿಕ್ರಿಯೆಗಳ ಹೊರತಾಗಿ.

ಚಾನೆಲ್ಲುಗಳಲ್ಲಿ ಪದೇಪದೇ ದಾಳಿಯ ಹೊಣೆಹೊತ್ತ ಡೆಕ್ಕನ್ ಮುಜಾಹಿದೀನ್ ಸಂಸ್ಥೆಯ ಹೆಸರು ಕೇಳಿ ಬರುತ್ತಿತ್ತು. ಹಿಂದಿಯಲ್ಲಿ ಮೈಲ್ ಕಳುಹಿಸಿತ್ತು ಅದು, ಹಾಗಿತ್ತು, ಹೀಗಿತ್ತು ಇತ್ಯಾದಿ. ನನಗೆ ಭಯೋತ್ಪಾದಕರು ಮೈಲ್ ಮಾಡಿದರೆ ಹೇಗಿರುತ್ತದೆ, ಪೂರ್ತಿಯಾಗಿ ಒಂದು ಸಲ ಓದಬೇಕಲ್ಲ ಅನಿಸಿ ಒಂದಷ್ಟು ಹುಡುಕಿದೆ. ಸಿಕ್ಕಿಯೇ ಬಿಟ್ಟಿತು - ಇಂಡಿಯನ್ ಮುಜಾಹಿದೀನ್ ಕಳುಹಿಸಿದ ಮೈಲ್.... ದೆಹಲಿ ಸ್ಫೋಟದ ಸಮಯ ಕಳುಹಿಸಿದ್ದು.
ಇದರಲ್ಲಿ, ಉಗ್ರರು ಹಲವು ರಾಜ್ಯಗಳಲ್ಲಿ ಶಂಕಿತ ಉಗ್ರರ ಹೆಸರಲ್ಲಿ ಮುಸ್ಲಿಮರನ್ನು ಬಂಧಿಸಿ ಕಾಟ ಕೊಡುವುದಕ್ಕೆ ಕೆಂಡಾಮಂಡಲವಾಗಿದ್ದರು. (ಇಂತಹ ಕೇಸುಗಳು ಹಲವಾರು. ನಾಲ್ಕೈದು ವರ್ಷಗಳ ಹಿಂದೆ ಒಂದು ದಿನ ಹೈದರಾಬಾದಿನಲ್ಲಿ ದಿನಾ ಹಾಲು ಮಾರುತ್ತ ಎಲ್ಲರಂತೆ ಬದುಕುತ್ತಿದ್ದ ಮಾಮೂಲು ಹುಡುಗನನ್ನು ಉಗ್ರನೆಂದು ಗುಂಡುಹಾರಿಸಿ ಕೊಂದಿದ್ದರು ಪೊಲೀಸ್. ಹೈದರಾಬಾದಿನಲ್ಲಿ ಮತ್ತೆ ಹಲವರನ್ನು ಶಂಕಿತರೆಂದು ಬಂಧಿಸಿ ಕೊನೆಗವರು ಮುಗ್ಧರೆಂದು ಸಾಧಿತವಾದ ಬಳಿಕ ಬಿಡುಗಡೆಗೊಳಿಸುವಾಗ ಅವರಿಗೆ ಪರಿಹಾರ ಕೂಡ ಕೊಟ್ಟಿತ್ತು ಆಂಧ್ರಪ್ರದೇಶ ಸರಕಾರ. ಧಾರವಾಡದಲ್ಲಿ ತನ್ನ ಹೊಲದಲ್ಲಿ ಬಾಂಬ್ ಸಿಕ್ಕಿತೆಂದು ಪೊಲೀಸರಿಗೆ ತಿಳಿಸಹೊರಟ ಮುಸ್ಲಿಂ ರೈತನನ್ನು ಮನಬಂದಂತೆ ಹೊಡೆದು, ಕೊನೆಗೆ ಅವನ ತಪ್ಪಿಲ್ಲವೆಂದು ತಿಳಿದಾಗ ವಾಪಸ್ ಕಳುಹಿಸಿತ್ತು ಅಲ್ಲಿನ ಪೊಲೀಸ್. ಇತ್ತೀಚೆಗೆ ಮಂಗಳೂರಿನಲ್ಲಿ ಬಂಧಿತರಾದ ಶಂಕಿತ ಉಗ್ರರನ್ನು ಮುಂಬೈಗೆ, ಮತ್ತೆ ಬೆಂಗಳೂರಿಗೆ, ಪುನಹ ಗುಜರಾತಿಗೆ, ಹೀಗೆ ಬೇಕಾದಲ್ಲಿಗೆ ಕರೆಸಿಕೊಂಡು ಇನ್ವೆಸ್ಟಿಗೇಟ್ ಮಾಡುತ್ತಾರೆ. ಮುಂಬೈಯಲ್ಲಿ ಇದೇ ಖರ್ಖರೆಯ ಕೈಲಿ ಇನ್ವೆಸ್ಟಿಗೇಶನ್ ನಡೆದು ಅವರಿಗೆ ಬೇಕಾದ್ದು ಏನೂ ಸಿಗಲಿಲ್ಲವಾಗಿ ವಾಪಸ್ ತಂದುಬಿಟ್ಟಿದ್ದರು. ಆದರೂ ಅವರಿಗೆ ಮುಕ್ತಿ ಸಿಕ್ಕಿಲ್ಲ. ಮುಗ್ಧರು ಶಂಕಿತರ ಹೆಸರಲ್ಲಿ ಪೊಲೀಸರ ವಶವಾಗುವುದು ಹೊಸತೇನಲ್ಲ, ಒಬ್ಬ ಕಳ್ಳನನ್ನು ಹಿಡಿಯಲು ಕೆಲವೊಮ್ಮೆ ನೂರು ಜನ ಮುಗ್ಧರನ್ನು ಪರೀಕ್ಷೆ ಮಾಡಬೇಕಾಗುತ್ತದೆ, ಅದು ಅನಿವಾರ್ಯ ಕೂಡ, ಒಪ್ಪಬಹುದಾದದ್ದು ಕೂಡ - ಕಾನೂನಿನ ಚೌಕಟ್ಟಿನಲ್ಲಿ ನಡೆಯವ ವರೆಗೆ) ಉಗ್ರ ಮೈಲ್ ಕಳುಹಿಸಿದವರು ತಮ್ಮ ಮುಂದಿನ ಗುರಿ ಮುಂಬೈ ಅಂತ ನೇರವಾಗಿ ಹೇಳಿದ್ದರು. ಮುಂಬೈ ಎಟಿಎಸ್ (ಹೇಮಂತ್ ಕಾರ್ಕರೆ), ಗುಜರಾತ್ ಎಟಿಎಸ್ (ಪಿಸಿ ಪಾಂಡೆ), ಮೋದಿ, ವಿಲಾಸ್ ರಾವ್ ದೇಶಮುಖ್, ಆರ್ ಆರ್ ಪಾಟೀಲ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ - ಎಲ್ಲರ ಮೇಲೆ ಕಿಡಿಕಾರಲಾಗಿತ್ತು. ಸಂಘಪರಿವಾರದ ಉಗ್ರಕೃತ್ಯಗಳ ಮೇಲೆ ಕ್ರಮ ಕೈಗೊಂಡಿಲ್ಲವೆಂದು ನೇರವಾಗಿ ಮುಂಬೈ ಎಟಿಎಸ್ ಮೇಲೆ ಆಪಾದಿಸಲಾಗಿತ್ತು. ಕೇಸರಿ ಭಯೋತ್ಪಾದನೆಯ ವಿಚಾರ ಬಂದಾಗ ಮಾಧ್ಯಮಗಳು ಹೇಗೆ ಇಡಿಯ ಎಪಿಸೋಡನ್ನು ಮುಚ್ಚಿಹಾಕಿದವೆಂದು reference ಸಮೇತ ವಿವರಿಸಲಾಗಿತ್ತು. ಅಲ್ಲಿಂದ ಎಲ್ಲೆಲ್ಲೋ ಹೋಗಿ, ಕೊನೆಗೆ ಜೆಹಾದ್ ಪ್ರತಿಜ್ಞೆಯೊಡನೆ ಮುಕ್ತಾಯವಾಗಿತ್ತು.

ಸರಿ, ಅದರಲ್ಲಿ ಹೇಳಿದ ಬಜರಂಗ್ ಬಾಂಬ್ ಬಗ್ಗೆ ಏನಾದರೂ ಇಂಡಿಯನ್ ಎಕ್ಸ್-ಪ್ರೆಸ್ ವೆಬ್-ಸೈಟಲ್ಲಿ ಸಿಗುತ್ತದಾ ಅಂತ ಹುಡುಕಿದೆ. ಸರ್ಚ್ ರಿಸಲ್ಟ್-ನಲ್ಲಿ ಹಲವು ವರದಿಗಳು ಸಿಕ್ಕಿದವು. ಲಿಂಕ್ ತೆರೆಯಹೋದರೆ ಯಾಕೋ ಗೊತ್ತಿಲ್ಲ, ಹಲವು ಲಿಂಕುಗಳಲ್ಲಿದ್ದ ಲೇಖನಗಳು ಡಿಲೀಟ್ ಆಗಿಬಿಟ್ಟಿದ್ದವು, ಇನ್ನು ಹಲವು ಓದಲು ಸಿಕ್ಕಿದವು. ಓದಲು ಸಿಕ್ಕಿದ್ದೆಲ್ಲವನ್ನೂ ಓದಿದೆ. ಓದುತ್ತ ಓದುತ್ತ ಎಲ್ಲೆಲ್ಲೋ ಹೋಗಿ, ನಾನು ಈ ಪುಟಕ್ಕೆ ಬಂದು ನಿಂತೆ... ಅಂತರ್ರಾಷ್ಟ್ರೀಯ ವಿಚಾರಗಳ ಬಗ್ಗೆ ಎಂದೂ ಹೆಚ್ಚು ತಲೆಕೆಡಿಸಿಕೊಂಡಿಲ್ಲದ ನಾನು ಇಲ್ಲಿವರೆಗೆ ಕೇಳಿಯೇ ಇರದ ಹೆಸರು - ಮೊಸ್ಸಾಡ್, ಮೊದಲ ಬಾರಿಗೆ ಅತ್ಯಂತ ಶಾಕಿಂಗ್ ಅನಿಸುವ ರೀತಿಯಲ್ಲಿ ಕಣ್ಣೆದುರಿಗೆ ಬಂದು ನಿಂತಿತ್ತು..

ಅಲ್ಲಿಂದ ಮತ್ತೆ ಅಲ್ಲಿರುವ ಎಲ್ಲಾ ಲಿಂಕುಗಳಿಗೂ ವಿಸಿಟ್ ಕೊಟ್ಟು, ಏನೇನಿದೆ ಅಂತ ನೋಡಿದೆ, ಅರ್ಥವಾದದ್ದು ಓದಿದೆ, ಅರ್ಥವಾಗದ್ದು ಬಿಟ್ಟೆ. ನನಗೆ ಅರ್ಥವಾದುದರ ಸಾರಾಂಶ ಇಷ್ಟು - ಭಾರತದಲ್ಲಿ ನಡೆಯುತ್ತಿರುವ anti-islamic ಉಗ್ರವಾದದ ಹಿಂದೆ - ಅಂದರೆ ಸಪ್ಟೆಂಬರ್ 26 -2008ರ ಮಾಲೆಗಾಂವ್ ಸ್ಫೋಟ, ನಾಂದೆಡ್-ನಲ್ಲಿ ಭಜರಂಗ ಕಾರ್ಯಕರ್ತರು ಸತ್ತ ಸ್ಫೋಟದ ಹಿಂದೆ, 64 ಜನ ಪಾಕಿಸ್ತಾನಿಗಳನ್ನು ಕೊಂದ, ಭಾರತ-ಪಾಕ್ ಸ್ನೇಹಸೇತುವಾದ ಸಂಝೋತಾ ಎಕ್ಸ್-ಪ್ರೆಸ್ ಸ್ಫೋಟದ ಹಿಂದೆ, ಹೈದರಾಬಾದಿನ ಲುಂಬಿನಿ ಗಾರ್ಡನ್ ಮಸೀದಿ ಸ್ಫೋಟದ ಹಿಂದೆ - ಸಂಘಪರಿವಾರವಿದೆ; ಅದರ ಹಿಂದೆ ಇಸ್ರೇಲಿ ಗುಪ್ತಚರ ಸಂಸ್ಥೆ MOSSADನ ಕೈವಾಡವಿದೆ, ಪ್ರೋತ್ಸಾಹವಿದೆ ಅಂತ ಈ ಲೇಖನಗಳನ್ನು ಬರೆದವರ ಹೇಳಿಕೆ. MOSSADಗೆ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸಂಬಂಧವಿದೆಯೆಂದು ಕೂಡ ಇಲ್ಲಿ ಕಂಡುಬರುವ ಲೇಖನಗಳಲ್ಲಿ ಓದಲು ಸಿಗುತ್ತದೆ. ಅಮೆರಿಕಾದ CIA ಮತ್ತು ಭಾರತದ RAW MOSSADನ ಬೆಂಬಲಕ್ಕಿದ್ದು ಭಾರತದಲ್ಲಿ ಮತ್ತು ಜಗತ್ತಿನ ಇತರೆಡೆ ಕೆಲಸ ಮಾಡಿಸುತ್ತವೆ ಅಂತಲೂ ಓದಿ, ತಲೆಬಿಸಿಯಾಯಿತು. ಇವನ್ನೆಲ್ಲ ಸತ್ಯವೇ ಸುಳ್ಳೇ ಅಂತ ತೂಗುವುದು ನನ್ನ ಪೆದ್ದು ತಲೆಯ ಲಾಜಿಕ್-ಗೆ ಸಾಧ್ಯವಾಗಲಿಲ್ಲ. ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾಗದೆ ಸುಮ್ಮನೆ ಎಲ್ಲವನ್ನೂ ಓದುತ್ತಾ ಹೋದೆ.

ಹೀಗೆ ಇಸ್ರೇಲ್ ಬಗ್ಗೆ ಓದುತ್ತಿರುವಾಗ, ಇಸ್ರೇಲ್-ನವರು ಯಾರೋ ಈ ಸ್ಫೋಟದಲ್ಲಿ ಸತ್ತಿದ್ದರಲ್ಲ, ಯಾವುದೋ ಪುಟ್ಟ ಅನಾಥ ಮಗುವಿದು ಸುದ್ದಿಯಾಗಿತ್ತಲ್ಲ ಅಂತ ನೆನಪಾಯ್ತು. ಹುಡುಕಿದರೆ ಹೌದು - ಮೂವತ್ತೂ ದಾಟದ ಯುವಜೋಡಿ Gavriel Holtzberg ಮತ್ತು Rivka Holtzberg, ನಾರಿಮನ್ ಹೌಸ್-ನಲ್ಲಿ ಮುಂಬೈನ ಯಹೂದಿಗಳ ಸಮುದಾಯಕ್ಕೆ ಬೇಕಾದ ಧಾರ್ಮಿಕ ಮತ್ತು ಸಾಮುದಾಯಿಕ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದವರು... ಇವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಕೊನೆಗೆ ಉಗ್ರರು ಸಾಯಿಸಿದ್ದರು. ನಾರಿಮನ್ ಹೌಸ್-ಗೆ ಚಬಡ್ ಹೌಸ್ ಅನ್ನುತ್ತಾರೆ, ಅದರಲ್ಲಿದ್ದವರು ಮುಖ್ಯವಾಗಿ ಇಸ್ರೇಲಿ ಯಹೂದಿಗಳೇ, ಮತ್ತು ಇಸ್ರೇಲಿಗಳಿಗಾಗಿಯೇ ಅದು ಇತ್ತು ಅಂತ ಆಗಷ್ಟೇ ನಂಗೆ ಗೊತ್ತಾಯಿತು.

ಹಾಗೆಯೇ, MOSSAD ವೆಬ್-ಸೈಟಿಗೆ ಹೋದೆ. ಗುಪ್ತಚರ ಕೆಲಸಗಳ ಜತೆಗೆ ಅಗತ್ಯವಿರುವ counterterrorism ಕೆಲಸಗಳನ್ನು ಕೂಡ ತಾನು ನಡೆಸುವುದಾಗಿ ತನ್ನ ವೆಬ್-ಸೈಟಿನಲ್ಲಿ MOSSAD ಹೇಳಿಕೊಳ್ಳುತ್ತದೆ. ಇಷ್ಟೆಲ್ಲ ಓದಿದ ನಂತರ ತಲೆಯೆಲ್ಲ ಕೆಟ್ಟು ಚಿತ್ರಾನ್ನವಾಯಿತು. ಸರಿ, ಸಹವಾಸ ಬೇಡವೆಂದುಕೊಂಡು ಕಂಪ್ಯೂಟರ್ ಲಾಗಾಫ್ ಮಾಡಿದೆ.
---------------
ನವೆಂಬರ್ 30, ಡಿಸೆಂಬರ್ 1:
ಆ ಪುಟ್ಟ ಮಗು, ಅದರ ಸತ್ತುಹೋದ ಇಸ್ರೇಲಿ ಅಪ್ಪ-ಅಮ್ಮನ ಬಗ್ಗೆ ಕರುಳು ಮಿಡಿಯುವ ಹಾಗೆ ಚಾನೆಲುಗಳು ಕೊಡುತ್ತಿದ್ದವು. ಕೆಲವು ಚಾನೆಲುಗಳು 22 ಉಗ್ರರಿದ್ದರು, 10 ಜನ ಮಾತ್ರ ಸಿಕ್ಕಿದ್ದಾರೆ, ಉಳಿದ ಉಗ್ರರು ಮಿಸ್ ಆಗಿದ್ದಾರೆ, ಅಂದವು. ಮತ್ತೆ ಕೆಲವು ಚಾನೆಲುಗಳು ಹೇಮಂತ ಖರ್ಖರೆಯ ಸಾವಿನ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದವು. ಪಾಟೀಲ್ ಮತ್ತು ದೇಶಮುಖ್ ತಲೆದಂಡದ ಪ್ರಕ್ರಿಯೆ ಆರಂಭವಾಗಿತ್ತು. ಸುತ್ತಮುತ್ತಿಂದೆಲ್ಲ ತನ್ನ ಮೇಲೆ ಬರುತ್ತಿದ್ದ ಆಪಾದನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಪಾಕ್ ಕಕ್ಕಾಬಿಕ್ಕಿಯಾಗಿತ್ತು. ತಲೆ ಕೆಡಿಸುವ ಇಂಟರ್ನೆಟ್ಟು, ಮೂರ್ಖ ಟೀವಿಗಳ ಸಹವಾಸ ಬೇಡವೆಂದು ನಾನು ಮನೆಯ ಕೆಲಸಕಾರ್ಯಗಳಲ್ಲಿ, ಎಷ್ಟೋದಿನಗಳಿಂದ ಮಾಡಲು ಬಾಕಿಯಿದ್ದಂತಹ ಕೆಲಸಗಳಲ್ಲಿ ತೊಡಗಿದೆ. ಒಂದಿಷ್ಟು ಕಥೆಗಳು ಓದಿದೆ. ಆದರೂ ಕುತೂಹಲ ತಡೆಯಲಾಗದೆ ನಮ್ಮ ಬ್ಲಾಗಿಗರು ಏನು ಬರೆದಿದ್ದಾರೆ ಅಂತ ನೋಡಿದೆ. ಖುಷಿಯಾದದ್ದನ್ನು ಗೂಗಲ್-ರೀಡರಿನಲ್ಲಿ ಶೇರ್ ಮಾಡಿಕೊಂಡೆ.

ಡಿಸೆಂಬರ್ 2:
ಬೆಳಗಾಗೆದ್ದು ನೋಡಿದರೆ ಕನ್ನಡಪ್ರಭದಲ್ಲಿ ಇಸ್ರೇಲ್-ನ ಮೇಜರ್ ಜನರಲ್ ಭಾರತದ NSG ಕಾರ್ಯಾಚರಣೆ ಸರಿಯಿಲ್ಲವೆಂದಿದ್ದು ಕಾಣಿಸಿತು. ಆದರೆ ಇಸ್ರೇಲ್ ಸರಕಾರ ಭಾರತದ ಕಾರ್ಯಾಚರಣೆಯನ್ನು ಶ್ಲಾಘಿಸಿತ್ತು. ಇರಲಿ, ಕನ್ನಡ ಬ್ಲಾಗಿಗರೆಲ್ಲ ಏನೇನು ಬರೆದಿದ್ದಾರೆ ಅಂತ ನೋಡಹೊರಟರೆ ಗೃಹಸಚಿವರ ಬ್ಲಾಗಿನಲ್ಲಿ ಇಸ್ರೇಲಿಗೆ ಹೊಗಳಿ ಬರೆದಿದ್ದು ಕಾಣಿಸಿತು. ಹಾಗೇ ವೇಣುವಿನೋದ್ ಬ್ಲಾಗಿನಲ್ಲೂ ಕೂಡ. ಇದ್ಯಾಕಪ್ಪಾ ಕೇವಲ ಎರಡು-ಮೂರು ದಿನದಲ್ಲಿ ಎಲ್ಲೆಲ್ಲೂ ನಂಗೆ ಇಸ್ರೇಲೇ ಕಾಣ್ತಿದೆ... ಇಷ್ಟು ದಿನ ಗೊತ್ತೇ ಇಲ್ಲದ ವಿಚಾರಗಳೆಲ್ಲ ಗೊತ್ತಾಗ್ತಿವೆ ಅಂತ ತಲೆಬಿಸಿಯಾಯಿತು. ಇದ್ದಕ್ಕಿದ್ದಂತೆ ಇಸ್ರೇಲ್ ಭಾರತದಲ್ಲಿ ಇಷ್ಟು ಹೆಸರು ಯಾಕೆ ಮಾಡುತ್ತಿದೆ ಅಂತ ಟೆನ್ಶನ್ ಆಯಿತು.

ಡಿಸೆಂಬರ್ 5:

ಇವತ್ತು ಇದೇ ವಿಚಾರದಲ್ಲಿ ಮತ್ತಷ್ಟು ಲಿಂಕುಗಳು ಸಿಕ್ಕಿವೆ. ವಿವಿಧ ಆಧಾರಗಳನ್ನಿಟ್ಟುಕೊಂಡು ಈಸಲದ ದಾಳಿ ಕೂಡ ಇಸ್ರೇಲ್ ಮತ್ತು ಅಮೆರಿಕಾ ಕುಮ್ಮಕ್ಕಿನಿಂದಲೇ ನಡೆದಿವೆ ಅನ್ನುತ್ತಿವೆ. ಇವರ ಲೆಕ್ಕಾಚಾರಗಳ ಮತ್ತು ಅಭಿಪ್ರಾಯಗಳ ಪ್ರಕಾರ, ಪಾಕಿಸ್ತಾನವನ್ನು ಸಿಕ್ಕಿಸಲು ಮತ್ತು ಜೆಹಾದ್ ಹೆಸರಲ್ಲಿ ನಡೆಯುವ ಉಗ್ರವಾದವನ್ನು ಹತ್ತಿಕ್ಕಲು ಉಳಿದೆಲ್ಲಾ ದೇಶಗಳು ಸೇರಿಕೊಂಡು ಮಾಡಿದ ಷಡ್ಯಂತ್ರವೇ ಈ ಉಗ್ರರ ದಾಳಿ. ಇವರು ಹೇಳುವುದನ್ನು ನಂಬುವುದಾದರೆ, ಪಾಕ್ ಈಗ ಪಾಪ, ಮೊಸರು ತಿಂದ ಮಂಗನ ಪಕ್ಕದಲ್ಲಿದ್ದ ಆಡಿನಂತಾಗಿದೆ. ಭಾರತ ಕೊಟ್ಟ ಮೋಸ್ಟ್ ವಾಂಟೆಡ್ ಲಿಸ್ಟ್-ನ ವ್ಯಕ್ತಿಗಳನ್ನು ಪಾಕ್ ಒಪ್ಪಿಸದಿದ್ದರೆ, ಮುಂದಾಗುವುದು ಬಹುಶ: ಸಮರವೇ. ಅದಕ್ಕಾಗಿ ಅತ್ತಕಡೆಯಿಂದ ಈಗಾಗಲೇ ತಾಲಿಬಾನನ್ನೂ ಎತ್ತಿಕಟ್ಟಿಯಾಗಿದೆ.

ಹಾಗೆಂದು ಇಸ್ರೇಲಿ ರಾಬ್ಬಿಗಳು ಸತ್ತಿದ್ದಕ್ಕೂ ಇವರು ಕಾರಣ ಹೇಳುತ್ತಾರೆ - ಸತ್ತ ರಾಬ್ಬಿಗಳು ಝಿಯೋನಿಸ್ಟ್-ಗಳು ಅಲ್ಲವಂತೆ, MOSSAD ಯಹೂದಿಗಳು ವಿಶ್ವವನ್ನಾಳಬೇಕೆಂದು ಹೇಳುವ ಕಟ್ಟಾ ಝಿಯೋನಿಸ್ಟ್ ಪಂಗಡವನ್ನು ಬೆಂಬಲಿಸುತ್ತದಂತೆ. ಅಂದಹಾಗೆ, ಸತ್ತ ಇಸ್ರೇಲಿಗಳ ಶರೀರಗಳನ್ನು ವಾಪಸ್ ತಗೊಂಡು ಹೋದಾಗ ಅಲ್ಲಿ ಸರಕಾರ STATE HONOURS ಕೊಡುತ್ತೇನೆಂದರೆ ಸಂಬಂಧಿಕರೆಲ್ಲ ಅದನ್ನು ತಿರಸ್ಕರಿಸಿದರಂತೆ. ಯಾಕೆಂದರೆ, ಚಬಡ್ ಹೌಸ್-ನಲ್ಲಿ ಸತ್ತವರು ಕಟ್ಟಾ ಝಿಯೋನಿಸ್ಟ್-ಗಳು ಆಗಿರಲಿಲ್ಲವಂತೆ. ಅವರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು, ಭಾರತದ ಮುಸ್ಲಿಮರ ಮೇಲೆ ಸೇಡು ತೀರಿಸಿದ ಹಾಗೂ ಆಯಿತು ಅಂತ ನಾರಿಮನ್ ಹೌಸ್ ಮೇಲೆ ಕೂಡ ಅಟ್ಯಾಕ್ ಮಾಡಿದರಂತೆ.

ಇದಕ್ಕಿಂತ ಹಿಂದೆ ನಾನು ಏಳೆಂಟು ವರ್ಷದ ಹಿಂದೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಾಡುವ ದಾಳಿಗಳ ಮೂಲಕ ಮಾತ್ರ ಇಸ್ರೇಲ್ ಬಗ್ಗೆ ತಿಳಿದಿದ್ದೆ. ಎಷ್ಟೋ ವರ್ಷಗಳ ನಂತರ ನಂಗೆ ಇಸ್ರೇಲ್ ಬಗ್ಗೆ ಹುಟ್ಟಿದ್ದು ಒಂದುರೀತಿಯ ಪವಿತ್ರ ಕಲ್ಪನೆ, ಅದು ಬಂದಿದ್ದು ನೇಮಿಚಂದ್ರ ಬರೆದ ಯಾದ್ ವಶೇಮ್ ಓದಿ. ಈಗ ನಂಗೆ ಕಾಣುತ್ತಿರುವ ಇಸ್ರೇಲ್ ಬೇರೆಯದೇ... ಇದು, ಅಮೆರಿಕಾ ಜತೆ ಸೇರಿ ಯಹೂದಿ ಜಗತ್ತು ಕಟ್ಟಹೊರಟಿರುವ ಇಸ್ರೇಲ್. ಜೆಹಾದಿ ಭಯೋತ್ಪಾದನೆಯನ್ನು, ಮುಸ್ಲಿಂ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡಲು ಕಟಿಬದ್ಧವಾದ ರಾಷ್ಟ್ರ...

ನನಗೆ ಈ ಮಾಹಿತಿಗಳು ಮತ್ತು ಸಂಬಂಧಿಸಿದ ವಿಷಯಗಳು ಸಿಕ್ಕಿದ ಲಿಂಕುಗಳು...

http://ghulammuhammed.blogspot.com/2008/11/cia-mossad-hand-behind-sangh-parivars.html

http://www.wakeupfromyourslumber.com/node/8534

http://en.wikipedia.org/wiki/Mossad

http://en.wikipedia.org/wiki/Mumbai_Chabad_House

http://en.wikipedia.org/wiki/Gavriel_Holtzberg

http://www.chabad.org/centers/default_cdo/aid/118651/jewish/Chabad-Mumbai.htm

http://timesofindia.indiatimes.com/India/Rabbi_wife_found_dead_at_Nariman/articleshow/3771244.cms
http://www.wakeupfromyourslumber.com/node/8534

http://www.indianmuslims.info/book/export/html/2736

http://www.wakeupfromyourslumber.com/comment/reply/9310#comment-form

http://www.thenews.com.pk/updates.asp?id=62200

http://www.hindu.com/2008/12/11/stories/2008121155660900.htm

http://www.hindu.com/2008/12/17/stories/2008121752001000.htm

http://therearenosunglasses.wordpress.com/

http://www.countercurrents.org/gatade241208.htm

(ಮುಂದುವರಿಯುವುದು...)

9 comments:

Harisha - ಹರೀಶ said...

ಇದೇನಿದು? ಪೂರ್ತಿ ಹೊಸ ವಿಷಯಗಳನ್ನೇ ಒಳಗೊಂಡಿದೆ.. ಯಾವುದು ನಿಜವೋ ಯಾವುದೋ ಸುಳ್ಳೋ?

Ittigecement said...

ನಿಮ್ಮ ಲೇಖನ ಓದಿ ನನಗೂ ತಲೆ ಬಿಸಿಯಾಯಿತು....
ನಿಮ್ಮ "ಹುಡುಕುವ " ಮತ್ತು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು..

ಚಂದವಾದ ಬರಹ..

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

ಸುಖ, ಶಾಂತಿ , ಸಮ್ರುದ್ಧಿಯನ್ನು ತರಲಿ...

ನಿಮ್ಮೆಲ್ಲ ಕನಸು ನನಸಾಗಲಿ...

ಶುಭ ಹಾರೈಕೆಗಳು...

sunaath said...

ಉಗ್ರವಾದಿಗಳನ್ನು ಪತ್ತೆ ಹಚ್ಚುವ ನೆವದಲ್ಲಿ ಅಮಾಯಕ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ ಎನ್ನುವ ಉಗ್ರವಾದಿಗಳ ವಾದ ವಿಚಿತ್ರವಾಗಿದೆ. ಅಮಾಯಕ ಮುಸ್ಲಿಮರು ಎಂದು ಕೆಲವರನ್ನು ಕರೆದರೆ, ಉಗ್ರವಾದಿಗಳು ತಾವು ಅಮಾಯಕರಲ್ಲ ಅರ್ಥಾತ್ ಕ್ರಿಮಿನಲ್ ಅಂತ ಒಪ್ಪಿಕೊಂಡಂತಾಯಿತಲ್ಲ!

ಚಂದ್ರಕಾಂತ ಎಸ್ said...

ನಿಮ್ಮ ಈ ಲೇಖನ ಓದಿದ ಮೇಲೆ ನನ್ನ ತಲೆ ಒಂದು ತರಹ ಬ್ಲ್ಯಾಂಕ್ ಸ್ಥಿತಿಗೆ ಬಂದಿದೆ. ನಿಜ ಹೇಳಬೇಕೆಂದರೆ ಪ್ರತಿಯೊಂದು ದೇಶದ ಪ್ರತಿಯೊಂದು ಇಂತಹ ಸಾಮೂಹಿಕ ಹತ್ಯಾಕಾಂಡ( ಅಂದರೆ ಬಾಂಬ್ ಸ್ಫೋಟ ಇತ್ಯಾದಿ ಇತ್ಯಾದಿ.) ಗಳ ಹಿಂದೆ ಯಾವ ಯಾವ ಶಕ್ತಿಗಳು ಕೆಲಸ ಮಾಡಿರುತ್ತದೋ ಅದನ್ನು ತಿಳಿಯುವುದೂ ಒಂದೇ ಮೀನಿನ ಹೆಜ್ಜೆ ಅರಿಯುವುದೂ ಒಂದೇ.

ಮುಂಬಯ್ ಪ್ರಸಂಗದಲ್ಲಂತೂ ನಮ್ಮಂತಹ ಸಾಮಾನ್ಯ ಪ್ರಜೆಗಳ ಮನಸ್ಸಿನಲ್ಲಿ ಎಷ್ಟೊಂದು ಅನುಮಾನಗಳು ಉಳಿದವೆಂದರೆ ಹೇಳಲಸಾಧ್ಯ.ಒಂದು ಹಂತದಲ್ಲಿ ಮಾಲೆಗಾವ್ ಪ್ರಕರಣ ಭೇಧಿಸುತ್ತಿದ್ದ ಕರ್ಕರೆಯವರನ್ನು ಇಲ್ಲವಾಗಿಸಲು ಅದಕ್ಕೆ ಸಂಬಂಧಿಸದವರು ಮಾಡಿದ್ದು ಎಂಬ ಭಾವನೆ ಮೂಡುತ್ತಿತ್ತು. ಈಗಲೂ ಕಾಡುತ್ತಿರುವ ಪ್ರಶ್ನೆಯೆಂದರೆ ಮೂರು ಜನ ಉನ್ನತ ಪೋಲಿಸ್ ಅಧಿಕಾರಿಗಳು ಒಂದೇ ವಾಹನದಲ್ಲಿ ಏಕೆ ಹೊರಟರು ? ಭಯೋತ್ಪಾದಕರ ಕಾರ್ಯಾಚರಣೆ ಪ್ರಾರಂಭವಾದ ಆಅಂಭದಲ್ಲೇ ಅವರು ಸತ್ತುಹೋದ್ದರಿಂದ ಅವರಿಗಾಗದವರು ಮುಂದಿನ ಕಾರ್ಯಾಚರಣೆ ಏಕೆ ಮಾಡಿದರು?

ಇನ್ನು ನೀವು ಹೇಳಿದ ಇಸ್ರೇಲಿಗಳ ಬಗ್ಗೆ ತೆಗೆದುಕೊಂಡಾಗ- ಇಸ್ರೇಲಿ ಯಹೂದಿಗಳೇ ಇದ್ದ ನಾರಿಮನ್ ಹೌಸ್ ನಲ್ಲಿದ್ದ ಎಲ್ಲರನ್ನು ಅಮಾನವೀಯವಾಗಿ ಕೊಂದ ವಿಷಯ. ಅದನ್ನು ಒಂದು ನ್ಯೂಸ್ ಮಾಧ್ಯಮವೇ ಪ್ರಸಾರಮಾಡಿತು. ಅವರನ್ನೆಲ್ಲಾ ಕೈ ಕಾಲು ಕತ್ತರಿಸಿ ಅಲ್ಲಿ ಬರೀ ರಕ್ತವೇ ಹರಿದಿತ್ತೆಂಬ ಸುದ್ಧಿ.ಒಟ್ಟಾರೆಯಾಗಿ ಇಡೀ ಪ್ರಸಂಗ ಗೋಜಲು ಗೋಜಲಾಗಿದೆ.

ಎಷ್ಟೊಂದು ವಿಷಯಗಳನ್ನು ಸಂಗ್ರಹಿಸಿಕೊಟ್ಟಿದ್ದು ನನಗೆ ಹೆಚ್ಚು ಉಪಯುಕ್ತವಾಯಿತು.

ತೇಜಸ್ವಿನಿ ಹೆಗಡೆ said...

ಪುಟ್ಟ ದೇಶವೊಂದು ತನ್ನ ದೇಶವನ್ನು ಕಾಪಾಡಿಕೊಳ್ಳುತ್ತಿರುವುದಷ್ಟೇ ಅಲ್ಲದೇ.. ಭಯೋತ್ಪಾದಕತೆಯನ್ನು ಮೆಟ್ಟಿಹಾಕಲು ಪಣ ತೊಟ್ಟಿರುವುದನ್ನು ನೋಡಿದರೆ ತುಂಬಾ ಖುಶಿಯಾಗುತ್ತದೆ. ೧೦೦ ಕೋಟಿ ಮೀರಿರುವ ಅತಿ ದೊಡ್ಡ ದೇಶವಾದ ಭಾರತಕ್ಕೆ ಯಾಕೆ ನಮ್ಮ ದೇಶವನ್ನು ಹಗೂ ಪ್ರಜೆಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲವೋ ಕಾಣೆ!! ಇದಕ್ಕೆ ಯಾರು ಹೊಣೆ?!

Shree said...

ಹರೀಶ್, ಪ್ರಕಾಶ್, ತೇಜಸ್ವಿನಿ, ನಾನಿನ್ನೂ ಯಾವುದು ಸರಿ, ಯಾವುದು ಸುಳ್ಳು ಅನ್ನುವ ನಿರ್ಧಾರಕ್ಕೆ ಬಂದಿಲ್ಲ. ಸುಮ್ಮನೆ ಜಗತ್ತನ್ನು ನೋಡುತ್ತಾ ಇದ್ದೇನೆ... ನಿರ್ಧಾರವನ್ನು ಸಮಯವೇ ಮಾಡುತ್ತದೆ ಅಂದುಕೊಂಡಿದ್ದೇನೆ. ಈ ಪುಟ್ಟ ದೇಶ ತನ್ನ ಉಗ್ರರ ಮೇಲಿನ ದಾಳಿಯಲ್ಲಿ ಅಮಾಯಕರಾದ ಪ್ರಜೆಗಳನ್ನು ಕೂಡ ಕೊಲ್ಲುತ್ತಿದೆ, ಸತ್ತವರಲ್ಲಿ ಉಗ್ರರಿಗಿಂತ ಅಮಾಯಕರ ಸಂಖ್ಯೆಯೇ ಹೆಚ್ಚು. ಅದು ನನಗೆ ಯಾಕೋ ಸರಿಯೆನಿಸಲಿಲ್ಲ. ಹಿಂಸೆಗೆ ಹಿಂಸೆಯೇ ಉತ್ತರವಾ? ನನಗನಿಸುವುದೆಂದರೆ, ಉಗ್ರವಾದವೆಂದರೆ ರಕ್ತಬೀಜಾಸುರನಿದ್ದಂತೆ.. ಒಂದೊಂದು ರಕ್ತಕಣದಿಂದ ಮತ್ತೆ ನೂರು ಜನ ಉಗ್ರರು ಹುಟ್ಟಿಬರುತ್ತಾರೆ. ಕಾರ್ಯಾಚರಣೆಗಳಿಂದ ಉಗ್ರವಾದ ಕಡಿಮೆಯಾಗುವುದಾದರೆ ಜಗತ್ತು ಇವತ್ತು ಹೀಗಿರುತ್ತಿರಲಿಲ್ಲ...!

ಚಂದ್ರಕಾಂತ... ನಿಮ್ಮೆಲ್ಲಾ ಸಂಶಯಗಳು ನನ್ನಲ್ಲೂ ಉಳಿದುಕೊಂಡಿವೆ.. ನಾನು ಅಂತುಳೆಯ ಜಾಗದಲ್ಲಿರಲಿಲ್ಲ, ಸದ್ಯ! :-) ಹಾಗೇನಾದ್ರೂ ಆಗಿದ್ರೆ ವಿವಾದ ಇವತ್ತಿಗೂ ಮುಂದುವರಿದಿರ್ತಿತ್ತೋ ಏನೋ... ಖರ್ಖರೆ, ಉಗ್ರರ ಬುಲೆಟ್ಟಿಂದ ಸತ್ತಿದ್ದು ನಿಜವಿರಬಹುದು, ಆದರೆ ಉಗ್ರರು ಎಲ್ಲಿಂದ ಬಂದ್ರು? ಇದಕ್ಕೆ ಉತ್ತರ ಮಾತ್ರ ಕಾಲವೇ ಕೊಡಬೇಕು.

ಸುನಾಥ್, ದೆಹಲಿ ಸ್ಫೋಟ ಜೆಹಾದಿ ಉಗ್ರರೇ ಮಾಡಿದ ದಾಳಿ ಅಂತ ಪ್ರೂವ್ ಆಗಿದೆ. ನಾನು ದೆಹಲಿ ಅಂತ ಸೇರಿಸಲು ಮರೆತಿದ್ದೆ, ಈಗ ಸೇರಿಸಿರುವೆ. ತಾವು ಮಾಡ್ತಾ ಇರೋದನ್ನು ಒಪ್ಕೊಂಡು ಅಮಾಯಕರನ್ನು ಹಿಂಸಿಸಬೇಡಿ, ಸಾಧ್ಯವಾದ್ರೆ ನಿಜವಾದ ಅಪರಾಧಿಗಳನ್ನು ಹಿಡೀರಿ ಅನ್ನೋ ಸಂದೇಶ ಕೊಟ್ಟಿದಾರೆ, ಸರಿಯಾಗೇ ಇದೆ. ಮತ್ತು ಅವರ ಮೈಲ್-ನಲ್ಲಿ ಹೇಳಿದ ಹೆಚ್ಚಿನ ವಿಚಾರಗಳು ಕಹಿಯಾದ್ರೂ ಸತ್ಯವೇ ಅನ್ನೋದು ನಮಗೆ ಒಪ್ಪಿಕೊಳ್ಳಲು ಕಷ್ಟ... :) ಏನ್ಮಾಡೋಣ, ಅದು ನಮ್ಮ ಪ್ರಾಬ್ಲೆಮ್.

Anonymous said...

ಶ್ರೀ, ನಮ್ಮಲ್ಲಿ ಹಲವರು ಇಸ್ರೇಲ್‍ನಂತ ಪುಟ್ಟ ದೇಶ ಹೇಗೆ ಭಯೋತ್ಪಾದಕರನ್ನು ಎದುರಿಸುತ್ತಿದೆ ಎಂದು ಇಸ್ರೇಲ್‍ನ ಗುಣಗಾನ ಮಾಡುತ್ತಾರೆ, ಆದರೆ ಇವತ್ತು ಜಗತ್ತಿನಲ್ಲಿ ನಡೆಯುತ್ತಿರುವ ಹಲವು ಭಯೋತ್ಪಾದಕ ಕೃತ್ಯಗಳಿಗೆ ಇಸ್ರೇಲ್ ಅನ್ನೋ ದೇಶವನ್ನ ಈಗ ಇರುವ ಜಾಗದಲ್ಲಿ ಸ್ಥಾಪನೆ ಮಾಡಿರುವುದೇ ಕಾರಣ ಅನ್ನೋದನ್ನ ಮರೆಯುತ್ತಾರೆ. ಇಸ್ರೇಲ್ ಬಗ್ಗೆ ಮಾತಾಡುವಾಗ ಅದರ ಹಾಗೂ ಯಹೂದಿಗಳ ಇತಿಹಾಸವನ್ನ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದನ್ನ ಓದದೆ ಇಸ್ರೇಲ್‍ನ ವೀರಗಾಥೆ ಅಂತ ಹೊಗಳಿದರೆ ಅದು ಅರ್ಥ ಕಳೆದುಕೊಳ್ಳುತ್ತದೆ.
ಇನ್ನು ಮೊಸ್ಸಾಡ್. Conspiracy theoryಗಳು ಎಲ್ಲಾ ಕಡೆ ಇದ್ದೇ ಇರುತ್ತದೆ. ಇಂದಿಗೂ ವರ್ಲ್ಡ್ ಟ್ರೇಡ್ ಸೆಂಟರ್‌ ಅನ್ನು ನಾಶ ಮಾಡಿದ್ದು ಮೊಸ್ಸಾಡ್ ಎಂದು ಧೃಡವಾಗಿ ನಂಬುವವರು ತುಂಬಾ ಇದ್ದಾರೆ. ಇಲ್ಲ ಅದನ್ನು CIA ಮಾಡಿದ್ದು ಎಂದು ಪ್ರೂವ್‍ ಮಾಡಿ ತೋರಿಸುವ ಹಲವು ವೀಡಿಯೋಗಳು youtubeನಲ್ಲಿ ಸಿಗುತ್ತವೆ. ಇದೆಲ್ಲ conspiracy theoryಗಳು, ಚಿಕ್ಕ ಸಂಶಯವನ್ನು ಒಂದೇ ಕೋನದಿಂದ ಅವಲೋಕಿಸಿ ಇದೇ ಸರಿ ಎಂದು ವಾದಿಸುವವರು.
ಇಸ್ರೇಲ್ ಹಾಗೂ abrahmic ಧರ್ಮಗಳ ಬಗ್ಗೆ ಓದಿ. ಇವತ್ತು ನಮಗೆ ಗಾಜ಼ಾ ಪಟ್ಟಿಯಲ್ಲಿ ನಡೆಯತ್ತಿರುವುದು ಹೇಗೆ ೨೫೦೦ ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸಕ್ಕೆ relate ಮಾಡಬಹುದು ಅಂತ ಗೊತ್ತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಯಾಕೆ ಮನುಷ್ಯ ಶತಮಾನಗಳ ಇತಿಹಾಸವನ್ನು ನೆಪ ಮಾಡಿ ಕಚ್ಚಾಡುತ್ತಾನೆ ಎಂದು ತಿಳಿಯುತ್ತದೆ.
ಇನ್ನು ಮುಂದಿನ ಸಾಲು ನನ್ನನ್ನ ಕೆಲವು ಇಕ್ಕಟ್ಟಿಗೆ ಸಿಲುಕಿಸಬಹುದು. ಆರೆಸ್ಸೆಸ್ ಹಾಗೂ ವಿಶ್ವ ಹಿಂದು ಪರಿಷತ್ ವಲಯದಲ್ಲಿ ಇಸ್ರೇಲ್ ಬಗ್ಗೆ ವಿಷೇಶ ಪ್ರೀತಿ. ನಾನೂ ಹಿಂದೆ ಅವರ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾಗ ಹಲವು ಇಸ್ರೇಲನ್ನು ಹೊಗಳುವ ಭಾಷಣಗಳು, ಕಥೆಗಳನ್ನು ಕೇಳಿದ್ದೇನೆ. ನಾನೂ ಇತರರಂತೆ "ಎಂಥ ಪುಟ್ಟ ದೇಶ ಹೇಗೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ" ಎಂದು ಆಶ್ಚರ್ಯ ಪಟ್ಟಿದ್ದಿದೆ. ಯಾಕೆ ಇಸ್ರೇಲ್ ಮೇಲೆ ಅಭಿಮಾನ ಅಂತ ಆವಾಗ ಅರ್ಥವಾಗಿರಲಿಲ್ಲ, ಈಗ ಬಹುಶಃ ಅದು ಇಸ್ರೇಲ್ ಮುಸ್ಲಿಮರನ್ನು ಎಲ್ಲರಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತದೆ ಎನ್ನುವ ಕಾರಣದಿಂದ ಇರಬಹುದು.
ಇಷ್ಟುದ್ದ ಕಾಮೆಂಟ್ ಬರೆಯುತ್ತಿದ್ದೆ ಎಂದು ಅಂದುಕೊಂಡಿರಲಿಲ್ಲ :P

Sree said...

interesting! waiting to read more on this here(bere kaDe huDki Ododakke swalpa somartana!!)

Anonymous said...

good one.... well said.....