Tuesday, July 14, 2009

ಕಳೆದುಕೊಳ್ಳುವ ಬಗೆಗೊಂದು ಸ್ವಗತ...

ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು ಕೂರಿಸುವಾಗ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದ ಮಗುವಿನ ಮುಖ ನೋಡ್ತಾ ಇದ್ದೆ. ಅವಳು ಕೂರಿಸಿಯಾದ ಮೇಲೆ ಮಗುವನ್ನು ನಾನು ಹಿಡಿದುಕೊಂಡು ಕೂತೆ.

ಸ್ವಲ್ಪ ದೂರ ಹೋದನಂತರ ಆಕೆ ಮಗುವನ್ನು ನನ್ನ ಮಡಿಲಿನಿಂದ ತೆಗೆದುಕೊಂಡು ಬಸ್ ಇಳಿದಳು. ಅದ್ಯಾಕೋ ಅವಳು ಸ್ವಲ್ಪ ಜಾಸ್ತಿಯೇ ನನ್ನ ಮಡಿಲು ತಡಕಿದಳೇನೋ ಅಂತನಿಸಿದರೂ ಅದೇಕೋ ಆಕಡೆ ಗಮನ ಕೊಡಲಿಲ್ಲ.

ನಂತರ ಜಯನಗರದಲ್ಲಿ ಬಸ್ಸಿಂದ ಇಳಿಯುವಾಗ ಪರ್ಸ್ ಝಿಪ್ ತೆರೆದಿದ್ದು ಗಮನಕ್ಕೆ ಬಂತು. ಆಗಲೂ ನನಗೇನೂ ಅನಿಸಲಿಲ್ಲ. ಝಿಪ್ ಹಾಕಿಕೊಂಡು ಆಟೋ ಹಿಡಿದು, ವಿದ್ಯಾಪೀಠ ಸರ್ಕಲ್ಲಿಗೆ ಹೋದೆ. ಅಲ್ಲಿ ಫ್ರೆಂಡ್ ಮನೆಯ ಹತ್ತಿರ ಇಳಿದು ದುಡ್ಡಿಗೆಂದು ಪರ್ಸ್ ತಡಕಾಡಿದರೆ- ಬ್ಯಾಂಕಿಗೆ ಹಾಕಬೇಕೆಂದು ಬ್ಯಾಗಲ್ಲಿಟ್ಟುಕೊಂಡಿದ್ದ ಉಳಿತಾಯದ 9,500 ರೂಪಾಯಿ ಇದ್ದ ಕಟ್ಟು ಕಾಣೆ... ಕಳ್ಳಿ ಮೊಬೈಲ್ ಉಳಿಸಿಹೋಗಿದ್ದಳು. ಗೆಳತಿಯ ಮನೆ ಅಲ್ಲೇ ಇದ್ದ ಕಾರಣ ಆಟೋ ಚಾರ್ಜ್ ಕೊಟ್ಟು ಬಚಾವಾದೆ. (ಪೊಲೀಸ್ ಹತ್ತಿರ ದೂರು ಕೊಡಲಿಕ್ಕೆ ಹೋಗಿದ್ದೆ, ಆಕಥೆ ಇನ್ನೊಮ್ಮೆ ಹೇಳ್ತೀನಿ)

--------------------------------

ವರ್ಷದ ಹಿಂದಿನ ಕಥೆ. ಒಂದು ಮಧ್ಯಾಹ್ನ. ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಬಂತು. ಏನೆಂದು ಕೇಳಿದರೆ, "ನೀವು ನಿನ್ನೆ ಮಾಡಿದ ಖರೀದಿಯನ್ನು ಇಎಂಐ ಮೂಲಕ ಕಟ್ಟಬಹುದು, ತಿಳಿಸಲಿಕ್ಕೆ ಕರೆ ಮಾಡಿರುವೆವು" ಎಂದರು. ಆ 'ನಿನ್ನೆ' ನಾನೆಲ್ಲೂ ಕ್ರೆಡಿಟ್ ಕಾರ್ಡ್ ಉಜ್ಜಿರಲಿಲ್ಲವಾದ್ದರಿಂದ ಇವರು ಯಾವುದರ ಬಗ್ಗೆ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ. ಕೇಳಿದರೆ ಹೇಳಿದರು, ನಾನು 37,000+ ಮೌಲ್ಯದ ವಿಮಾನದ ಟಿಕೆಟ್-ಗಳು ಕ್ರೆಡಿಟ್ ಕಾರ್ಡ್ ಮೂಲಕ ಹಿಂದಿನ ದಿನ ಖರೀದಿಸಿದ್ದೆನಂತೆ.

ಕೂಡಲೇ ಎಚ್ಚತ್ತ ನಾನು, ನಾನು ಖರೀದಿಸಿಯೇ ಇಲ್ಲವೆಂದು ಹೇಳಿದೆ. ಸ್ವಲ್ಪ ವಿಚಾರಣೆ ನಡೆಸಿ ನಾನು ಆಸಮಯದಲ್ಲಿ ಬೇರೇನೋ ಮಾಡುತ್ತಿದ್ದೆ, ಮತ್ತು ಕ್ರೆಡಿಟ್ ಕಾರ್ಡ್ ನನ್ನ ಹತ್ತಿರವೇ ಇತ್ತು, ಬೇರೆಲ್ಲೂ ಹೋಗಿರಲಿಲ್ಲ ಎಂಬ ಉತ್ತರ ಪಡೆದ ನಂತರ, ಆಕೆ ನನಗೆ ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಡಿವಿಜನ್ನಿಗೆ ಟ್ರಾನ್ಸಾಕ್ಷನ್ ಡಿಸ್ಪ್ಯೂಟ್ ಹಾಕಲು ಹೇಳಿದಳು. ಕೊನೆಗೆ ಅದೇನೇನು ಮಾಡಬೇಕೋ ಎಲ್ಲಾ ಮಾಡಿ, ಬ್ಯಾಂಕಿಗೆ ನಾನು ಮಾಡಿದ ಖರೀದಿಯಲ್ಲವೆಂಬುದನ್ನು ತಿಳಿಯಪಡಿಸಿದೆ. ಅವರು ಒಪ್ಪಿಕೊಂಡು ನನ್ನ ಬಿಲ್-ನಿಂದ ತಾತ್ಕಾಲಿಕವಾಗಿ ಅದನ್ನು ತೆಗೆಯುತ್ತೇವೆಂದರು. ಒಂದು ವೇಳೆ ತಮ್ಮ ತನಿಖೆಯಲ್ಲಿ ನಾನೇ ಖರೀದಿಸಿದ್ದೆಂದು ಪ್ರೂವ್ ಆದರೆ ಮಾತ್ರ ಅದನ್ನು ನಾನೇ ಕಟ್ಟಬೇಕಾಗುತ್ತದೆಂದು ಎಚ್ಚರಿಸಿದರು. ನಾನು ಖರೀದಿಯೇ ಮಾಡಿಲ್ಲವಾದ ಕಾರಣ ಅವರು ಸಾಧಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ನಾನು ಭರವಸೆ ನೀಡಿದೆ.

ಕೆಲ ದಿನ ಬಿಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಬಂತು. ಅದರಲ್ಲಿ ನಾನು ಕಟ್ಟಬೇಕಿರುವ ದುಡ್ಡು ಸೊನ್ನೆ ರೂಪಾಯಿಯಿತ್ತು, ನನಗೆ ದುಡ್ಡು ಬರಬೇಕಿತ್ತು. ಏನೆಂದು ಚೆಕ್ ಮಾಡಿದರೆ, ವಿಮಾನ ಟಿಕೆಟ್ ಖರೀದಿಸಿದಾಗ ಅದರಲ್ಲಿ 5% cash-back offer ಇದ್ದುದರಿಂದ 1800 ರೂಪಾಯಿಯಷ್ಟು ನನ್ನ ಅಕೌಂಟಿಗೆ ವಾಪಸ್ ಬಂದು, ನಾ ಕಟ್ಟಬೇಕಿರುವ 1700+ರಷ್ಟು ದುಡ್ಡು ಮಾಫಿಯಾಗಿತ್ತು..!

--------------------------------

ಇವತ್ತು ಶಿವಾಜಿನಗರದಲ್ಲಿ ಬಸ್ಸಿಗೆ ಕಾದುನಿಂತಿದ್ದೆ. ಬಸ್ ಬಂತು, ಸಹಜವಾಗಿಯೇ ರಶ್ ಇತ್ತು. ನೂಕುನುಗ್ಗಲಿನಲ್ಲಿ ಬಸ್ಸಿಗೆ ಹತ್ತುವಾಗ ನನ್ನ ಹಿಂದಿದ್ದವಳ ಕೈ ನನ್ನ ಹ್ಯಾಂಡ್ ಬ್ಯಾಗಿನ ಬದಿಯಲ್ಲಿ ಝಿಪ್ ತೆರೆಯಲು ಯತ್ನಿಸುತ್ತಿದ್ದುದು ಅನುಭವಕ್ಕೆ ಬಂತು. ಮೆಲ್ಲಗೆ ನೋಡಿ ವಿಷಯ ಹೌದೆಂದು ಕನ್-ಫರ್ಮ್ ಮಾಡಿಕೊಂಡೆ. ಬ್ಯಾಗ್ ಹಾಕಿಕೊಂಡಿದ್ದ ಕೈಯಿಂದ ಆಕೆಯ ಕೈಹಿಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಳು. ನಾ ಬಿಡಲಿಲ್ಲ. ಹಾಗೇ ಹಿಂತಿರುಗಿ ನೋಡಿ "ಏನ್ರೀ ಮಾಡ್ತಿದೀರಾ, ಮರ್ಯಾದಸ್ತರ ಥರ ಕಾಣ್ತೀರಾ, ಮಾಡೋದು ಇಂಥಾ ಕಚಡಾ ಕೆಲಸಾನಾ" ಅಂತ ರೋಪ್ ಹಾಕಿದೆ.

ಆಕೆ ತಕ್ಷಣ ಕೈಬಿಡಿಸಿಕೊಂಡಳು, "ನಾನೇನು ಮಾಡಿದೀನಿ, ನನ್ನ ಪಾಡಿಗೆ ಬಸ್ಸಿಗೆ ಹತ್ತುತಾ ಇದ್ದೀನಿ" ಅಂದಳು. ಬಸ್ಸಿಗೆ ಹತ್ತೋರು ನನ್ "ಬ್ಯಾಗಿಗೆ ಯಾಕ್ ಕೈಹಾಕ್ತಿದೀರಾ" ಅಂದೆ. "ಹಿಡ್ಕೊಳ್ಳೋಕೆ ಏನೂ ಸಿಕ್ಕಿಲ್ಲ, ಹಾಗಾಗಿ ಬ್ಯಾಗ್ ಹಿಡಿದೆ" ಎಂದಳು. ಉಳಿದವರು ನಮ್ಮ ಜಗಳ ನೋಡುತ್ತಿದ್ದರು. ಆದರೆ ಆಕೆ ಕದಿಯಲು ಹೊರಟವಳೆಂದು ಸಾಧಿಸಲು ನನ್ನಲ್ಲೇನೂ ಇರಲಿಲ್ಲವಾದ ಕಾರಣ ಕೊನೆಗೆ ನಾನೇ ಸುಮ್ಮನಾದೆ. ಆಕೆ ತನ್ನನ್ನು ಕಳ್ಳಿಯೆಂದ ನನಗೆ ಹಿಡಿಶಾಪ ಹಾಕುತ್ತಿದ್ದಳು.

---------------------------------

ಕಳ್ಳರು ಬೇರೆ ಬೇರೆ ರೀತಿಯಲ್ಲಿರುತ್ತಾರೆ. ಕೆಲವರಿಗೆ ದೋಚುವುದು ಬದುಕಲಿಕ್ಕಿರುವ ಅನಿವಾರ್ಯತೆ. ಇನ್ನು ಕೆಲವರಿಗೆ ಕದಿಯುವುದು ಚಟ. ಕೆಲವರು ದೋಚಿದ್ದು ಗೊತ್ತೇ ಆಗುವುದಿಲ್ಲ - ತುಂಬಾ ಸೊಫಿಸ್ಟಿಕೇಟೆಡ್ ಆಗಿ ಕೃತ್ಯವನ್ನು ಗೈದಿರುತ್ತಾರೆ, ಮತ್ತು ಅದಕ್ಕೇನಾದರೂ ಹೆಸರು ಕೂಡ ಇಟ್ಟಿರುತ್ತಾರೆ. ಕದ್ದಿದ್ದನ್ನು ಅಥವಾ ದೋಚಿದ್ದನ್ನು ಒಪ್ಪಿಕೊಳ್ಳುವ ಕಳ್ಳರು ತುಂಬಾ ಕಡಿಮೆ. ಕದಿಸಿಕೊಳ್ಳುವುದು, ಕಳೆದುಕೊಳ್ಳುವುದು ನನಗೆ ಅಭ್ಯಾಸವಾಗಿಹೋಗಿದೆ.

ಹಾಗೆಂದು ಬದುಕಲ್ಲಿ ಕಳೆದುಕೊಳ್ಳಲು ಬೇಜಾರಿರಲಿಲ್ಲ ನನಗೆ... ಬದುಕೆಂದರೆ ಕಳೆಯುವ-ಕೂಡುವ ಲೆಕ್ಕಾಚಾರ ಎಂಬ ಮಾತು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದವಳು ನಾನು.

ಆದರೆ, ಇತ್ತೀಚೆಗೆ ಮಾತ್ರ, ನಿಜ, ಬದುಕೆಂದರೆ ಕೂಡುವುದು - ಕಳೆಯುವುದು ಬಿಟ್ರೆ ಇನ್ನೇನೂ ಇಲ್ಲ ಅಂತ ಅನಿಸ್ತಿದೆ. ಬರೀ ಕಳೆದುಕೊಳ್ಳುವುದರಿಂದ ಏನು ಸಾಧಿಸ್ತೀನಿ, ಬದುಕಿಡೀ ಇದೇ ಆದರೆ, ಪಡೆದುಕೊಳ್ಳುವುದು ಯಾವಾಗ ಅಂತ ಅನಿಸ್ತಿದೆ. ಏನು ಪಡೆದೆವೋ ಅದು ಮಾತ್ರ ಕೊನೆಗೆ ಬದುಕ ಬುತ್ತಿಯಲ್ಲುಳಿಯುತ್ತದೆ, ನಮ್ಮನ್ನು ಅಳೆಯುವವರೂ ಅದರ ಮೂಲಕವೇ ಅಳೆಯುತ್ತಾರೆ... ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುವುದು ಉಪಯೋಗವಿಲ್ಲ, ಪಡೆಯಲಿಕ್ಕೆ ಪ್ಲಾನ್ ಮಾಡಬೇಕು ಅಂತನಿಸುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮನುಷ್ಯ ಮೂಲತಹ ತುಂಬಾ ಸ್ವಾರ್ಥಿ, ಸ್ವಾರ್ಥ ಬಿಟ್ಟು ಬದುಕುವುದು ಅಪರೂಪದ ಕೆಲಸ, ಅದು ಮಾಡಿ ನಾನ್ಯಾಕೆ ಬುದ್ಧನ ಶ್ರೇಣಿಗೇರಬೇಕು, ಅದರಿಂದೇನಾಗುತ್ತದೆ - ಅಂತಲೂ ಅನಿಸ್ತಿದೆ. ನಮ್ಮ ಆತ್ಮದ ಒಳಗಿರುವ ಅಹಂ ಯಾವಾಗಲೂ ಲೆಕ್ಕಾಚಾರ ಹಾಕುತ್ತಿರುತ್ತದೆ - ಅದಕ್ಕೆ ಸ್ವಾರ್ಥದಿಂದಲೇ ತೃಪ್ತಿ - ಅಲ್ವಾ...?

10 comments:

ರಾಜೇಶ್ ನಾಯ್ಕ said...

ವಿವಿಧ ರೀತಿಯ ಕಳ್ಳರು. ಆದರೆ ನಮ್ಮಿಂದ ಕದ್ದವರು ಅದನ್ನು ಇನ್ನೆಲ್ಲೋ ಇನ್ಯಾವುದೋ ರೀತಿಯಲ್ಲಿ ಕಳೆದುಕೊಳ್ಳುತ್ತಾರೆ. ಅದೇ ಅವರಿಗೆ ಶಿಕ್ಷೆ. ಈ ಎಲ್ಲಾ ರೀತಿಯ ಕಳ್ಳರ ನಡುವೆ ನಾವೇ ಕಳೆದುಹೋಗದಂತೆ ಎಚ್ಚರವಾಗಿರಬೇಕು.

sunaath said...

ವಿಮಾನದ ಟಿಕೆಟ್ಟನ್ನು ಕೊಳ್ಳಲು ಕ್ರೆಡಿಟ್ ಕಾರ್ಡ್ ಮೋಸ ಮಾಡಿದ್ದಾರೆಂದರೆ, ಈ ಕಳ್ಳರು ದೊಡ್ಡ ಮನುಷ್ಯರೇ ಇರಬೇಕಾಯಿತಲ್ಲ!
survival ಇದು ಮೂಲಪ್ರವೃತ್ತಿ ಆಗಿರುವದರಿಂದ ಮನುಷ್ಯ
ಸ್ವಾರ್ಥಿಯಾಗುತ್ತಾನೆ ಅನ್ನುವದು ನಿಜ. Anyway ನಾವೇ ಜಾಗರೂಕರಾಗಿ ಇರಬೇಕಷ್ಟೆ!

Shree said...

ಶಿಕ್ಷೆಗಳ ಮೂಲಕ ಸಿಗುವ ನ್ಯಾಯದ ಬಗ್ಗೆ ನಾ ಎಂದೋ ನಂಬಿಕೆ ಕಳಕೊಂಡಿರುವೆ ರಾಜೇಶ್... ಕಳ್ಳರಾಗಿದ್ರೇ ಚೆನ್ನಾಗಿರ್ತಾರೆ. ಕಷ್ಟಗಳು ಬರೋದು ನಿಯತ್ತಾಗಿರುವವರಿಗೆ ಮಾತ್ರ.

ಕಾಕಾ, ಇದೊಂದು ದೊಡ್ಡ ದಂಧೆ. ನಿಜವಾಗಿ ಪ್ರಯಾಣ ಮಾಡುವ ಇಚ್ಛೆಯಿಂದ ವಿಮಾನ ಟಿಕೆಟ್ ಖರೀದಿ ಮಾಡುವುದಲ್ಲ. ಆನ್-ಲೈನ್ ಟಿಕೆಟ್ ಕೊಂಡು ಅದನ್ನು ಆಫ್-ಲೈನ್ ಕ್ಯಾನ್ಸಲ್ ಮಾಡುತ್ತಾರೆ. ಕ್ಯಾನ್ಸಲೇಶನ್ ಅಮೌಂಟ್ ಏರ್-ಲೈನ್ಸ್ ಕಂಪೆನಿಗೆ ಲಾಭ. ಅವರು ತಕ್ಷಣ ಉಳಿದ ಮೊತ್ತವನ್ನು ಕ್ಯಾನ್ಸಲ್ ಮಾಡಿದವ್ರಿಗೆ ಕೊಡ್ತಾರೆ. ಆ ಮೊತ್ತ ಟಿಕೆಟ್ ಕೊಂಡವರಿಗೆ ಲಾಭ. ಕ್ರೆಡಿಟ್ ಕಾರ್ಡ್ ಮಾಲಿಕರಿಗೆ ಈ ವ್ಯವಹಾರ ಗೊತ್ತಾಗದೇ ಇದ್ರೆ ಫುಲ್ ಕೆಂಪುಟೋಪಿ. ತಕ್ಷಣ ಗೊತ್ತಾಗಿ Transaction dispute ಹಾಕಿದರೆ ಕ್ರೆಡಿಟ್ ಕಾರ್ಡ್ ಮಾಲಿಕರಿಗೆ ವ್ಯವಹಾರದಿಂದ ಬಂದ Cash-back ಲಾಭ. ಆಗ ನಷ್ಟ ಬ್ಯಾಂಕಿಗೆ. ಬ್ಯಾಂಕಿನವರು ಎನ್-ಕ್ವಯರಿ ಶುರುಮಾಡುವಾಗ ಕಳ್ಳ ಇನ್ನೆಲ್ಲೋ ಏನೋ ಮಾಡ್ತಿರ್ತಾನೆ.

bhadra said...

ಅನುಭವ ಲೇಖನ ಉತ್ತಮವಾಗಿದೆ

ಕಳೆದುಕೊಳ್ಳುವುದರಲ್ಲಿ ನಿಸ್ಸೀಮನಾದ ನನಗೊಬ್ಬ ಪುಟ್ಟ ತಂಗಿ ದೊರೆತ ಸಮಾಧಾನ ಆಯ್ತು :)

ಡಾಕ್ಟರ್ ಮೋಸಸ್ ಎಂದರೆ ಗೊತ್ತೇ? ಎಲ್ಲೇ ಆಗಲಿ, ಯಾರಿಂದಲೇ ಆಗಲಿ ಸುಲಭವಾಗಿ ಮೋಸಿಸಿಕೊಳ್ಳುವವ ಅರ್ಥಾತ್ ... ನಾನೇ :D

ಅರಕಲಗೂಡುಜಯಕುಮಾರ್ said...

ಶ್ರೀ ಯವರೆ ಅಕಸ್ಮಿಕವಾಗಿ ನಿಮ್ಮ ಬ್ಲಾಗ್ ನೋಡುವ ಅವಕಾಶ ಸಿಕ್ಕಿತು. ಬರಹಗಳು ತುಂಬಾ ಗಂಭೀರವಾಗಿವೆ, ನಿಮ್ಮ ಅನುಭವ ಬರಹಕ್ಕೆ ಸ್ವಲ್ಪ ಪಾಲಿಶ್ ಇರಬೇಕಿತ್ತು. ಇರಲಿ ಶಿಕ್ಷೆಗಳ ಮೂಲಕ ಸಿಗುವ ನ್ಯಾಯದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದಿದ್ದೀರಿ ಅದು ಸ್ವಲ್ಪ ಮಟ್ಟಿಗೆ ಒಪ್ಪುವ ಮಾತೆ ಆದರೆ ಅಂತಹ ನಿಲುವಿನಿಂದ ಹತಾಷೆ/ವಿಷಾದ ನಮ್ಮ ಬೆನ್ನು ಬೀಳುತ್ತದಲ್ಲವೇ?

ಸಾಗರದಾಚೆಯ ಇಂಚರ said...

ನಿಜಕ್ಕೂಕಳ್ಳತನ ದೊಡ್ಡ ಪಿಡುಗು ಆಗಿದೆ ಇಂದಿನ ದಿನಗಳಲ್ಲಿ
ಸುಂದರವಾಗಿ ಇದನ್ನು ತಿಳಿಸಿದ್ದಿರಿ
ನಿಮ್ಮ ಅನುಭವ ಪಾಠ ವೂ ಹೌದು ,

Unknown said...

ಕಳೆದುಕೊಳ್ಳುವ, ಅದರ ಮುಖೇನ ಕಂಡುಕೊಳ್ಳುವ ನಿಮ್ಮ ಅನುಭವದ ಪರಿ ಸೊಗಸಾಗಿದೆ...

ಜಲನಯನ said...

ಶ್ರೀ, ನಿಮ್ಮ ಅನುಭವಗಳ ಥರದ್ದು ಬಹಳ ಮಂದಿಗೆ ಆಗಿರುತ್ತವೆ, ಆದ್ರೆ..ಸಣ್ಣ ಕಥೆ ಥರ ಹೇಳಿದ್ದೀರಿ...ನಾನೂ ನಿಮ್ಮೊಂದಿಗೆ ಒಂದು ನನ್ನ ಅನುಭ ಹಮ್ಚಿಕೊಳ್ಳುತ್ತೇನೆ. ನನ್ನ ಸ್ನೇಹಿತ ನಾನು..ಶಿವಾಜಿನಗರದಿಂದ ಯಲಹಂಕಕ್ಕೆ ಹೊರಟಿದ್ದೆವು ರಷ್ ಹೆಚ್ಚಾಗಿತ್ತು..ಗಂಗೇನಹಳ್ಳಿ ಹತ್ತಿರ ಸ್ವಲ್ಪ ರಷ ಕಡಿಮೆಯಾಗುವಾಗ ಒಬ್ಬ..ಕ...ಮಗ..ನನ್ನ ಹಿಂದೇನೆ ಇದ್ದ..ಮೇಲ್ಮೇಲೆ ಬೀಳ್ತಿದ್ದ..ನೋಡಿದ್ರೆ..ಪರ್ಸನ್ನ ಎಗ್ರಿಸವ್ನೆ..ಅಂತ ತನ್ನ ಹಿಂದಿನ ಪಾಕೆಟ್ ಹರಿದಿದ್ದನ್ನ ಕಂಡಕ್ಟರ್ ಗೆ ತೋರಿಸುತ್ತಾ ಹಿಡಿ ಶಾಪ ಹಾಕಿ ಇಳಿದ...ಹೆಬ್ಬಾಳ ಸ್ತಾಪಿನಲ್ಲಿ ಈಗ ಎಲ್ಲರೂ ಕುಳಿತುಕೊಳ್ಳುವ ಹಾಗಾಯಿತು..ನನ್ನ ಸ್ನೇಹಿತ..ನನಗೆ ಅದಕ್ಕೆ ಕಣೋ ನಾನು ಹಿಮ್ದಿನ ಪಾಕೆಟ್ ನಲ್ಲಿ ಪರ್ಸು ಇಡೋದೇ ಇಲ್ಲ ಸೈಡ್ನಲ್ಲಿ ಇಡ್ತೀನಿ...ಯಾರಾದ್ರೂ ಮುಟ್ಟಿದ್ರೂ ಗೊತ್ತಾಗುತ್ತೆ..ಅನ್ನುತ್ತಾ ತನ್ನ ಪ್ಯಾಂಟಿನ ಸೈಡ್ ಪಾಕೆಟ್ ಗೆ ಕೈ ಹಾಕಿದ್ರೆ......ಬೆರಳು ಹೊರಗೆ....ಹಹಹಹ...ಎಲ್ಲ ನಕ್ಕಿದ್ದೇ ನಕ್ಕಿದ್ದು..ನನ್ನ ಸ್ನೇಹಿತನ ಮುಖ ಹಿ.ತಿ.ಮಂ. ನಂತಾಗಿತ್ತು

ಗಿರಿ said...

ha hha...
akka, kaasu kaddavara bagge.. heLiddeeralla...
swalpa hrudaya kaddavara baggenu heLi, please...! :)

dhanyavadagaLu,
giri

venkat.bhats said...

chennaagide