Friday, April 18, 2008

ಅಧರ್ಮ

ಕಾಸರಗೋಡಿನಲ್ಲಿ ಕೋಮು ಗಲಭೆ ಅನ್ನುವಾಗ ಮನಸ್ಸು ಅದ್ಯಾಕೋ ಹುಳಿ ಹುಳಿಯಾಗುತ್ತದೆ. ನಾನು ಹಲ ವರ್ಷಗಳ ಹಿಂದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಬಿಟ್ಟು ಬಂದ ನನ್ನ ಹುಟ್ಟೂರಿನಲ್ಲಿ ಇನ್ನೂ ಅದೇ ನಡೆಯುತ್ತಿದೆ ಎನ್ನುವ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

++++++++++

ನಮ್ಮ ಊರಲ್ಲಿ ಇರುವುದು ೪೦-೫೦ ಮನೆಗಳು. ಹಲವಾರು ಹಿಂದು ಮನೆಗಳ ನಡುವೆ ಒಂದೇ ಒಂದು ಮುಸ್ಲಿಂ ಮನೆ ಇದೆ. ನಮ್ಮ ಊರಿನಿಂದ ಬೇರೆಲ್ಲಿ ಹೋಗಬೇಕಾದರೂ ಗುಡ್ಡ ಹತ್ತಿ ಇನ್ನೊಂದು ಸಣ್ಣ ಊರಿಗೆ ಇಳಿಯಬೇಕು, ೨೦ ನಿಮಿಷದ ನಡಿಗೆ. ಆ ಊರಿನಲ್ಲಿ ಹೆಚ್ಚಿರುವುದು ಮುಸ್ಲಿಂ ಮನೆಗಳು. ಬಸ್ಸಿಗೆ ಕಾಯುವಾಗ ಅಲ್ಲೆ ಪಕ್ಕದ ಮನೆಯಲಿ ನೀರು ಕುಡಿಯುವಾಗ, ಯಾರಿಗೂ ಅದು ಮುಸ್ಲಿಂ ಮನೆಯ ನೀರಾಗಿ ಕಾಣುತ್ತಿರಲಿಲ್ಲ. ಹಾಗೆಯೇ, ಮೊಳಕೆ ಬರಿಸಿದ ತೆಂಗಿನ ಗಿಡಗಳನ್ನು ನಮ್ಮಪ್ಪ ಅಲ್ಲಿನ ದರ್ಗಾಕ್ಕೆ ಹರಿಕೆಯೆಂದು ಕೊಡುವಾಗ ಆ ದೇವರು ಮುಸ್ಲಿಂ ದೇವರಾಗಿರುತ್ತಿರಲಿಲ್ಲ. ಅಲ್ಲಿಂದ ಅಪ್ಪ ಪ್ರಸಾದವೆಂದು ತರುವ ಖರ್ಜೂರವನ್ನು ತಿನ್ನುವುದೇ ನಮಗೆಲ್ಲ ಒಂದು ದೊಡ್ಡ ಸಂಭ್ರಮ. ಹಾಗೆಯೇ ವಿಷುವಿನ ಸಂಭ್ರಮ ಸವಿಯಲು ಮತ್ತು ಆಗಾಗ ನಡೆಯುವ ಭೂತ ಕೋಲಗಳಿಗೆ, ನಾಗನ ತಂಬಿಲಕ್ಕೆ ಹರಿಕೆ ತೆಗೆದುಕೊಂಡು ಬರುವ ಮೋಞಿ ಬ್ಯಾರಿ, ಹಮೀದ್ ಮುಂತಾದವರು ನಮ್ಮನ್ನು ಬೇರೆಯವರೆಂದು ಎಣಿಸಿರಲಿಲ್ಲ.

ಅದೊಂದು ರಾತ್ರಿ. ಹುಂಬಾ ಚಿಕ್ಕವಳಿದ್ದೆ, ಅಜ್ಜ, ಅಜ್ಜಿ, ಅಮ್ಮ ಇದ್ದರು ಮನೆಯಲ್ಲಿ. ಕರೆಂಟು, ಫೋನು ಏನೂ ಇಲ್ಲದ ಕಾಲ. ಸಂಜೆ ಹೊತ್ತಿಗೆ ಪಕ್ಕದ ಮನೆಯ ಮಾಸ್ತರು ಮಾವ ಶಾಲೆಯಿಂದ ಎಂದಿಗಿಂತ ಬೇಗನೆ ಬಂದವರು, ನಮ್ಮನೆ ಅಂಗಳದಲ್ಲಿ ಹೋಗುವಾಗ, ಅಜ್ಜನಿಗೆ ಹೇಳಿದರು, ಹಿಂದು ಮುಸ್ಲಿಂ ಗಲಾಟೆ ಶುರುವಾಗಿದೆ ಕಾಸರಗೋಡಲ್ಲಿ, ಸೆಕ್ಷನ್ ಹಾಕಿದ್ದಾರೆ, ಹಾಗಾಗಿ ನಾಳೆ ಹೊರಗೆಲ್ಲೂ ಹೋಗಬೇಡಿ ಅಂತ. ಇದ್ದಕ್ಕಿದ್ದಂತೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿತು. ಬಹುಶ ಅವರು ಕೋಮು ಗಲಭೆ ಅಂದ್ರೆ ಹೇಗಿರುತ್ತದೆ ಅಂತ ಕಣ್ಣಾರೆ ನೋಡಿರಬೇಕೇನೋ... ಬೇಗ ಬೇಗನೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡರು. ಯಾಕೋ ಏನೋ ಒಂದು ರೀತಿಯ ಉದ್ವಿಗ್ನತೆ ಇತ್ತು. ಏನೂ ಗೊತ್ತಿಲ್ಲದ ನಾನು ಅಮ್ಮನಿಗೆ ಕೇಳಿದೆ, ಹಿಂದು ಮುಸ್ಲಿಂ ಗಲಾಟೆಯಲ್ಲಿ ಏನಾಗ್ತದೆ, ಅದು ಯಾಕೆ ಆಗ್ತದೆ ಅಂತ. ಯಾಕೆ ಆಗ್ತದೆ ಅಂತ ಹೇಳಲಿಕ್ಕೆ ಬೇಕಾದ ಲೋಕಜ್ಞಾನ ಅಮ್ಮನಿಗಿರಲಿಲ್ಲ, ಆದರೆ, ರಾತ್ರಿಯಾಗುತ್ತಿದ್ದಂತೆ ಪಕ್ಕದ ಊರಿನಿಂದ ದೊಂದಿ ಹಿಡ್ಕೊಂಡು ಕಳ್ರು ಬರ್ತಾರೆ ಅದಕ್ಕೆ ಬೇಗ ಬೇಗ ಉಂಡು ಮಲಗಬೇಕು ಅಂತ ಹೇಳಿ ನಂಗೆ ಅಮ್ಮ ಸಮಾಧಾನ ಮಾಡಿದಳು.

ಆನಂತರ ಹಲವು ಸಲ ಕಾಸರಗೋಡಿನಲ್ಲಿ ಈರೀತಿಯ ಗಲಭೆಗಳು, ಪರಿಣಾಮವಾಗಿ ಬಂದ್, ಸರ್ವೇ ಸಾಮಾನ್ಯವಾಗಿತ್ತು. ಬಂದ್ ಇದ್ದಾಗ ಶಾಲೆಗೆ ರಜೆ ಇರುತ್ತಿತ್ತು ಅನ್ನುವುದು ಬಿಟ್ಟರೆ ಗಲಭೆಯ ಜ್ವಾಲೆ ನಮ್ಮೂರ ತನಕ ಎಂದೂ ಬಂದಿದ್ದು ನನಗೆ ನೆನಪಿಲ್ಲ. ಆದರೆ, ೧೦ನೇ ತರಗತಿ ಮುಗಿಸಿದ ಮೇಲೆ ಕಾಸರಗೋಡಿನಲ್ಲೇ ಕೇರಳದ ಸಿಲೇಬಸ್ ಪ್ರಕಾರ ಓದು ಮುಂದುವರಿಸುವ ಅವಕಾಶವಿದ್ದ ನನ್ನಂತಹ ಹಲವಾರು ಮಂದಿ, ವಿಶೇಷವಾಗಿ ಹುಡುಗಿಯರು ಓದು ಮುಂದುವರಿಸಲು ಕರ್ನಾಟಕಕ್ಕೆ ವಲಸೆ ಬರುತ್ತಿದ್ದುದಕ್ಕೆ ಈ ಹಿಂದು ಮುಸ್ಲಿಂ ಗಲಾಟೆಯೂ ಒಂದು ಕಾರಣ. ಹೆತ್ತವರಿಗೆ ಕಾಳಜಿ, ಯಾವಾಗೆಂದರವಾಗ ಕಾರಣವೇ ಇಲ್ಲದೆ ಹುಟ್ಟಿಕೊಳ್ಳುತ್ತಿದ್ದ ಕಿಚ್ಚು ತೊಂದರೆ ಕೊಟ್ಟರೆ ಅಂತ. ಹಾಗಾಗಿ ಪಕ್ಕದ ದಕ್ಷಿಣ ಕನ್ನಡದ ಒಳ್ಳೆಯ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ( ಹಾಗೆ ನಾನೂ ಕರ್ನಾಟಕಕ್ಕೆ ಬಂದು, ಓದಿ, ಬೆಳೆದು, ಈ ಬ್ಲಾಗು ನೀವು ಓದುವಂತಾಗಿದೆ :) ಇಲ್ಲವಾದರೆ ನಾನು ಈ ಹೊತ್ತಿಗೆ ಕೇರಳದ ಯಾವುದೋ ಮೂಲೆಯಲ್ಲೋ ನಗರದಲ್ಲೋ ಸುಖವಾಗಿರುತ್ತಿದ್ದೆ :) )

+++++++++++++

ಹಿಂದು ಮುಸ್ಲಿಂ ಗಲಭೆ ಅಂದರೆ ಏನು ಅಂತ ಕಣ್ಣಾರೆ ನಾನು ನೋಡಿಲ್ಲದಿದ್ದರೂ ತಿಳಿಯುವ ಕುತೂಹಲಕ್ಕೆ ಓದಿದ್ದು ಖುಶ್ವಂತ್ ಸಿಂಗರ "ಟ್ರೈನ್ ಟು ಪಾಕಿಸ್ತಾನ್"... ಡಿಗ್ರಿಯಲ್ಲಿದ್ದಾಗ ಓದಿದ್ದೆ, ಅತ್ತುಬಿಟ್ಟಿದ್ದೆ. ಆಮೇಲೆ ನೋಡಿದ್ದು "EARTH - 1947". ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ, ಮಾನವತ್ವ ಮಾಸಿ ಹೋಗಿ ದಾನವ ಹುಟ್ಟುವ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು... ಇದರಲ್ಲಿನ ಈ ಹಾಡು ನನಗೆ ಎಂದಿಗೂ ಇಷ್ಟದ ಹಾಡು.

+++++++++++++

ಝಾರ್ಖಂಡದ ರಾಂಚಿಗೆ ಮೂರು ವರ್ಷದ ಹಿಂದೆ, ಚುನಾವಣೆಯ ಸಮಯ ಭೇಟಿ ನೀಡಿದ್ದೆ. ಆಗ ಮೊಹರಂ ಹಬ್ಬ ನಡೀತಾ ಇತ್ತು. ಅದರ ಮೆರವಣಿಗೆ ಹೋಗುತ್ತಿತ್ತು. ಸರಿ, ಕ್ಯಾಮರಾಮನ್ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡಲು ಹೊರಟ, ನಾನೂ ಅವನ ಜತೆ ಹೊರಟೆ. ಮೆರವಣಿಗೆಯ ಶಾಟ್ಸ್ ತೆಗೆದಿದ್ದಾಯಿತು. ನಂತರ ಅದನ್ನು ನೋಡುತ್ತಿದ್ದ ಜನಜಂಗುಳಿಯ ಶಾಟ್ಸ್ ತೆಗೆಯಬೇಕಿತ್ತು. ಕ್ಯಾಮರಾ ಜನರತ್ತ ತಿರುಗಿಸಿದ್ದೇ ತಡ. ನಾಲ್ಕೈದು ಯುವಕರು ಮೆರವಣಿಗೆಯೊಳಗಿಂದ ಈಚೆಗೆ ಬಂದು ಕ್ಯಾಮರಾಮನ್-ನನ್ನು ತಡೆದರು. "ಹಮಾರೇ ಔರತೋಂಕೋ ತುಮಾರೇ ಟಿವಿ ಮೇ ಮತ್ ದಿಖಾವೋ, ಶೂಟಿಂಗ್ ಮತ್ ಕರ್ನಾ" ಅಂತ ಹೇಳಿದರು. ಕ್ಯಾಮರಾಮನ್ ಒಪ್ಪಿ, ಬುರ್ಖಾಧಾರಿ ಹೆಂಗಸರನ್ನು ಶೂಟ್ ಮಾಡದೆ ಬಿಟ್ಟ. ಬೇರೆ ಗಂಡಸರ ಶಾಟ್ಸ್ ತೆಗೆದುಕೊಂಡ.

+++++++++++++

ಮೆರವಣಿಗೆ ಹೋಗುತ್ತಿದ್ದವರಲ್ಲಿ ಹಲವು ಚಿಣ್ಣರು ಕೂಡ ದಂಡ, ಕತ್ತಿ ಹಿಡಿದು ವರಸೆ (ಕತ್ತಿಯುದ್ಧವಾ? ಏನು ಹೇಳ್ತಾರೋ ಗೊತ್ತಿಲ್ಲ.) ಅಭ್ಯಾಸ ಮಾಡುತ್ತ ಸಾಗಿದ್ದರು. ನಾನು ಮೆಲ್ಲನೆ ಒಬ್ಬ ೫-೬ ವರ್ಷದ ಪುಟ್ಟ ಪೋರನನ್ನು ನಿಲ್ಲಿಸಿ ಕೇಳಿದೆ, "ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ".

ನಾನು ದಂಗು ಬಡಿದವಳು ಮತ್ತೆ ಕೇಳಿದೆ, "ಜೆಹಾದ್ ಕ್ಯಾ ಹೈ" ಅಂತ. ಆ ಪುಟ್ಟ ಚಂದಕ್ಕೆ ನಕ್ಕು ಉತ್ತರ ಕೊಡದೆ ಮುಂದೆ ಸಾಗಿದ.

+++++++++++++

ಏನೇ ಆದರೂ, ನನ್ನ ಸುತ್ತಲ ವಾತಾವರಣದಲ್ಲಿ ನನ್ನ ಕಣ್ಣೆದುರಿಗೆ ಕೋಮು ಗಲಭೆಗಳು ಆದದ್ದಿಲ್ಲ. ಧರ್ಮದ ಹೆಸರಲ್ಲಿ ಜಗಳಗಳು ಯಾಕೆ ಆಗುತ್ತವೆಂಬುದಕ್ಕೆ ಲಾಜಿಕಲ್ ಉತ್ತರ ನನಗಿನ್ನೂ ಸಿಕ್ಕಿಲ್ಲ.

Sunday, April 6, 2008

28ರಲ್ಲಿ ಗುಂಪಿಗೆ ಸೇರದವರು..!

1998 ಅಥವಾ 1999ನೇ ಇಸವಿ. ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ಕಾಲ. ರಜದಲ್ಲಿ ಇರಬೇಕು, ಸರಿಯಾಗಿ ನೆನಪಿಲ್ಲ, ಅಜ್ಜನ ಮನೆಗೆ ಒಂದು ಸಾರಿ ಹೋಗಿದ್ದೆ. ಅಲ್ಲಿ ಮಾವಂದಿರ ಮಕ್ಕಳೊಡನೆ ಮಾತಾಡುತ್ತಿದ್ದಾಗ ನಾನು ಜರ್ನಲಿಸಂ ಸೇರಲಿರುವುದನ್ನು, ಆಮೇಲೆ ನನಗೆ ಜರ್ನಲಿಸ್ಟ್ ಉದ್ಯೋಗ ಸಿಗಲಿರುವುದನ್ನು ತಿಳಿಸಿದೆ. ಆಗ ನನ್ನ ಪುಟ್ಟ ಭಾವ, 6-7 ವರ್ಷದ ಪ್ರಶಾಂತ, ’ಜರ್ನಲಿಸ್ಟಾ?’ ಎಂಬ ಉದ್ಗಾರ ತೆಗೆದ. ಯಾಕೋ ಎಂದು ಕೇಳಿದರೆ, ಸಿಕ್ಕಾಪಟ್ಟೆ ನಾಚಿಕೊಂಡ.


ಸ್ವಲ್ಪ ಒತ್ತಾಯ ಮಾಡಿದ ಮೇಲೆ, ಅವನ ಬಾಯಿಂದ ಕಾರಣ ಹೊರಬಂತು. ಕೆಲದಿನಗಳ ಹಿಂದೆ ಉದಯ ಟಿವಿಯಲ್ಲಿ ಬರುತ್ತಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪನವರ ಸಂದರ್ಶನ ನೋಡಿದ್ದನಂತೆ. ಅದರಲ್ಲಿ ಇಂಟರ್ವ್ಯೂ ಮಾಡುತ್ತಿದ್ದ ತೇಜಸ್ವಿನಿ ಎಂಬ ಪತ್ರಕರ್ತೆಯ ಹಣೆಗೆ, ಇಂಟರ್ವ್ಯೂ ಮುಗಿಸಿ ಏಳುವಾಗ ನಿಜಲಿಂಗಪ್ಪನವರು ಮುತ್ತು ಕೊಟ್ಟಿದ್ದರಂತೆ... :) ಅದಕ್ಕೆ ಪುಟ್ಟ ತನ್ನ ಅತ್ತಿಗೆಗೆ ಎಲ್ಲಿ ಹಾಗಾಗುತ್ತದೋ ಅಂತ ಭಯಪಟ್ಟು, ಜರ್ನಲಿಸಂ ಬಿಟ್ಟುಬಿಡಲು ಸಲಹೆ ನೀಡಿದ್ದ... :)


++++++++++++++++++


ಕನ್ನಡ ದೃಶ್ಯ ಪತ್ರಿಕೋದ್ಯಮದಲ್ಲಿ ’ಜರ್ನಲಿಸ್ಟ್’ ಆಗಿರುವ, extra-ordinary ಎನ್ನುವಂತಹ ಮಹಿಳೆಯರ ಹೆಸರು ಹೆಚ್ಚೇನೂ ಕೇಳಿಬರುವುದಿಲ್ಲ. ಇಂತಹದರಲ್ಲಿ, ತೇಜಸ್ವಿನಿ ತನ್ನ ವೃತ್ತಿಪರತೆಯಿಂದಲೇ ಪ್ರಸಿದ್ಧಿ ಪಡೆದಿದ್ದರು. ಅದರ ಜತೆಗೆ ಬೆಳೆದ ರಾಜಕೀಯದ ನಂಟು 2004ರಲ್ಲಿ ಅವರನ್ನು ದೇವೇಗೌಡರ ವಿರುದ್ಧ ಗೆದ್ದು ಸಂಸದೆಯಾಗುವಂತೆ ಮಾಡಿತು.


ಮೊನ್ನೆ ಮೊನ್ನೆ ಒಂದು ದಿನ ನನ್ನ ಹಣೆಬರಹ ನನ್ನನ್ನು ಕೊನೆಗೂ ಅದೇ ತೇಜಸ್ವಿನಿಯ ಎದುರು ತಂದು ನಿಲ್ಲಿಸಿತು :) ಅಲ್ಲಿ ಕಂಡವರು, ಒಬ್ಬ ಬಿಸಿರಕ್ತದ, ಆದರ್ಶಗಳೇನೆಂದು ಗೊತ್ತಿರುವ, ಕನಸುಗಳನ್ನು ಕಾಣುವ ಶಕ್ತಿಯಿರುವ ರಾಜಕಾರಣಿ, ಸಂಸದೆ. ಆಕೆಯೊಳಗಿನ ಪತ್ರಕರ್ತೆ ಮಾತ್ರ ಸ್ವಲ್ಪ ನಿರಾಶರಾಗಿದ್ದುದನ್ನು ಈ ಹಿಂದೆ ಬೇರ್ಯಾವುದೋ ಸಂದರ್ಶನದಲ್ಲಿ ನೋಡಿದ್ದೆ. ರಾಜಕಾರಣಿಯಾಗಿ ಕನಸು ಕಾಣುವ ಹಕ್ಕು ಕಳೆದುಕೊಂಡಿದ್ದೇನೆ ಎಂದಿದ್ದರು ಆಕೆ. ಬಂದಿದ್ದನ್ನು ಎದುರಿಸಲೇಬೇಕಾದ ಅನಿವಾರ್ಯತೆಯನ್ನು ಆಕೆ ಒಪ್ಪಿಕೊಂಡಿದ್ದರು.


ಕರ್ನಾಟಕದ ಜನ ಆರಿಸಿ ದೆಹಲಿಗೆ ಕಳುಹಿಸಿದ 28 ಮಂದಿಯಲ್ಲಿ ಆಟಿಗೊಮ್ಮೆ, ಹುಣ್ಣಿಮೆಗೊಮ್ಮೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಹಾಜರಾಗಿ ತುಟಿ ಹೊಲಿದುಕೊಂಡು ಕೂರುವವರೇ ಹೆಚ್ಚು. ಕೆಲವೇ ಕೆಲವು ಮಂದಿ ಮಾತ್ರ ನಿಯಮಿತವಾಗಿ ಸದನಕ್ಕೆ ಹಾಜರಾಗುವವರು, ಹಾಜರಾದರೂ ಮಾತಾಡುವವರ, ಚರ್ಚೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯೇ ಇದೆ.

ಪರಿಸ್ಥಿತಿ ಹೀಗಿರುವಾಗ ರೆಗ್ಯುಲರ್ ಆಗಿ ಸಿನ್ಸಿಯರ್ ಆಗಿ ಉತ್ಸಾಹ ಕಳೆದುಕೊಳ್ಳದೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಈ‍ ಅಪರೂಪದ ಸಂಸದೆಗೆ ಇನ್ನೂ ಹೆಚ್ಚು ಮಹಿಳೆಯರನ್ನು ಸದನದಲ್ಲಿ ನೋಡುವ ಆಸೆಯಿದೆ. ಪಾರ್ಲಿಮೆಂಟಿನಲ್ಲಿ ಎಂದೋ ಚರ್ಚೆಗೆ ಬರಬೇಕಾಗಿದ್ದ 33% ಮಹಿಳಾ ಮೀಸಲಾತಿ ಮಸೂದೆಗಾಗಿ ಇವತ್ತಿಗೂ ಹೋರಾಡುತ್ತಿರುವವರಲ್ಲಿ ಈಕೆಯೂ ಒಬ್ಬರು. ಮಹಿಳೆಯರನ್ನು ಬದಿಗೊತ್ತಿಯೇ ಸಾಗುತ್ತಿರುವ ವ್ಯವಸ್ಥೆಯ ಬಗೆಗೆ ಸಾಧ್ಯವಾದಾಗಲೆಲ್ಲ ದನಿಯೆತ್ತುವ ಈಕೆ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಅತಿ ಹೆಚ್ಚು ಹಾಜರಾತಿಯಿರುವ ಕರ್ನಾಟಕದ ಸಂಸದೆ.


ರಾಜಕೀಯವೆಂದರೆ ತನ್ನೊಳಗೆ ಇಳಿದವರಿಗೆಲ್ಲ ಕೊಳಕಿನ ಕೆಸರು ಮೆತ್ತುವ ಕೂಪವೆಂಬುದು ಒಂದು ಹಂತದ ತನಕ ಒಪ್ಪಬಹುದಾದ ಮಾತು. ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ. ಬಹುಶ: ಈ ಸಿದ್ದಾಂತದ ಬೆನ್ನಹಿಂದೆ ಬಿದ್ದು ರಾಜಕೀಯಕ್ಕೆ ಇಳಿದಿರಬೇಕು ತೇಜಸ್ವಿನಿ... ಮೆತ್ತಿದ ಕೆಸರಿನ ನಡುವೆಯೂ ನಗು ಮರೆಯದ ಈಕೆ ಮುಂದೆಯೂ ಹೀಗೆಯೇ ಇರಲಿ, ಸಂಸತ್ ಸದನದಲ್ಲಿ ಇಂತಹ ಬಿಸಿರಕ್ತ-ಹೊಸ ಯೋಚನೆಗಳು ತುಂಬಿದ ಮಹಿಳೆಯರ ಸಂಖ್ಯೆ ಹೆಚ್ಚಲಿ ಅಂತ (ಇಲ್ಲಿವರೆಗೆ ಓಟೇ ಹಾಕದ ಕಾರಣ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕು ನನಗೆ ಇಲ್ಲದಿದ್ದರೂ) ಮನದುಂಬಿ ಹಾರೈಸ್ತೀನಿ... :)

(ಚಿತ್ರ ಕೃಪೆ : ಶ್ರೀನಿಧಿ ಡಿ.ಎಸ್.)