Tuesday, April 19, 2011

ಮತ್ತೆ ಮಳೆ...!

ಮಳೆ ಬಂತೆಂದರೆ ಸಾಕು, ನೆನಪುಗಳ ಜಡಿಮಳೆ ಕೂಡ ಶುರು...

ಚಿಕ್ಕಂದಿನಲ್ಲಿ ಅಮ್ಮ ಕರಿಯುತ್ತಿದ್ದ ಬಿಸಿ ಬಿಸಿ ಹಪ್ಪಳ... ಸುರಿವ ಮಳೆಗೆ ಗಂಟೆ ಎಂಟಾರೂ ಏಳಲು ಮನಸಿಲ್ಲದೆ ಕೌದಿಯೊಳಗೆ ಮುದುರಿಕೊಳ್ಳುತ್ತಿದ್ದ ದಿನಗಳು... ಮಳೆ ಹೆಚ್ಚಾದರೆ ಶಾಲೆಗೆ ಸಿಗುತ್ತಿದ್ದ ರಜಾ... ಹೊದಿಕೆಯೊಳಗೆ ಸೇರಿಕೊಂಡು ತರಂಗವೋ ಸುಧಾವೋ ಯಾವುದಾದರೂ ಕಾದಂಬರಿಯೋ ಹಿಡಿದು ಓದತೊಡಗಿದರೆ ಜಗತ್ತೇ ಸುಂದರ... ಮಳೆಯ ಜತೆಗೆ ತಳಕುಹಾಕಿಕೊಂಡ ನೂರೆಂಟು ಕಥೆಗಳು... ಕನಸುಗಳು...

ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ... ಇದರ ಅನುಭವ ಬೇರೆಯೇ...

ಸದಾ ಹೊಸ್ತಿಲು ದಾಟಹೊರಡುವ ಪುಟ್ಟಿ ಮಳೆ ಬರುತ್ತಿದ್ದರೂ ಚಳಿಯಾಗುತ್ತಿದ್ದರೂ ಲೆಕ್ಕಿಸದೆ ಹೊಸ್ತಿಲು ದಾಟಹೊರಡುತ್ತಾಳೆ... ಅವಳನ್ನು ಹಿಡಿಯುವಷ್ಟರಲ್ಲೇ ಅರ್ಧ ಸುಸ್ತು! ಕೈಲಿ ಹಿಡಿದುಕೊಳ್ಳಲೂ ಬಿಡದೆ ಚಿಮ್ಮುವ ಅವಳಿಗೆ ಬೆಚ್ಚಗೆ ಬಟ್ಟೆ ಹಾಕಿ, ಗಿಲಕಿ ಮತ್ತು ಟೀಥರ್ ಕೈಲಿ ಕೊಟ್ಟು ಬಣ್ಣ ಬಣ್ಣದ ಪುಸ್ತಕ, ಗೊಂಬೆ ಇತ್ಯಾದಿ ಅವಳ ಸುತ್ತಲೂ ಇಟ್ಟು ರೂಮಿನೊಳಗೆ ಕುಳ್ಳಿರಿಸಿ 'ಹೊರಗೆ ಬರಬೇಡ ಗುಮ್ಮ ಬರ್ತಾನೆ' ಅಂತ ಹೇಳಿ ಆಟವಾಡಲು ಬಿಟ್ಟು ಹೊರಗೆ ಬಂದರೆ, ಉಸ್ಸಪ್ಪಾ!

ಅಚಾನಕ್ಕಾಗಿ ಬಂದ ಮಳೆಗೆ ಇನ್ನೇನು ಒಣಗುತ್ತಿದ್ದ ಬಟ್ಟೆಯೆಲ್ಲಾ ಮತ್ತೆ ನೆನೆದು, ಮತ್ತೆ ಅದನ್ನು ನಾಳೆ ಪುನ: ನೆನೆ ಹಾಕಬೇಕು, ದಿನವೂ ನಿಮ್ಮ ಬಟ್ಟೆಯೇ ಹಾಕುತ್ತೀರಿ, ನಮ್ಮ ಬಟ್ಟೆಗೆ ಜಾಗವಿಲ್ಲವಲ್ಲಾ ಎಂದು ಮನೆ ಓನರ್ ಕೈಲಿ ಹೇಳಿಸಿಕೊಳ್ಳಬೇಕಲ್ಲಾ ಎಂಬ ಕಳವಳ...
ಮಳೆ ಬರಬಹುದೆಂಬ ಅರಿವಿಲ್ಲದೆ ಕೊಡೆರಹಿತರಾಗಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೇಗೆ ಬರುತ್ತಾರೋ ಎಂದು ಕಾತರ... ನೆನೆದುಕೊಂಡು ಬಂದವರಿಗೆ ತಲೆ ಒರಸಿ ಉಪಚಾರ... ಹಾಗೇ ಬಿಸಿ ಬಿಸಿ ಸೂಪಿಗೆ, ಕರಿದ ತಿಂಡಿಗೆ ಡಿಮಾಂಡಪ್ಪೋ ಡಿಮಾಂಡ್...

ಮಳೆಯೆಂದರೆ ಇಷ್ಟೇ ಅಲ್ಲ... ಆದರೆ ಈಗ, ಈ ಕ್ಷಣಕ್ಕೆ ಕಂಪ್ಯೂಟರ್ ಕೀಲಿಗೆ ನಿಲುಕಿದ್ದು ಇಷ್ಟು ಮಾತ್ರ. ವಾಚ್ಯಕ್ಕೆ ನಿಲುಕದೆ ಭಾವವಾಗಿ ಉಳಿದಿದ್ದು ಇನ್ನೆಷ್ಟೋ...