ನನ್ನಂಥ ನೂರಾರು ಮಂದಿಯನ್ನು ಹುಟ್ಟುಹಾಕಿದ ಸಂಸ್ಥೆ... ಅದರ ಹಿಂದಿನ ಶಕ್ತಿಯನ್ನು ಈಗ ಇಷ್ಟು ದೂರದಿಂದ ನೋಡುವಾಗಲೂ ಹೆಮ್ಮೆಯೆನಿಸುತ್ತದೆ, ಬರೆಯಲು ಒಂದು ಸಾರಿ ಸಂಕೋಚವಾಯಿತು, ಆದರೂ, ಬರೆಯುತ್ತಿದ್ದೇನೆ...
'ಟೆಲಿವಿಶನ್ ಪ್ರೊಡಕ್ಷನ್ ಬಗ್ಗೆ ನಿಂಗೆ ಏನೇನು ಗೊತ್ತು?'
ಓದಿದ್ದು ಸಮೂಹ ಸಂವಹನವಾದರೂ, ಪ್ರೊಡಕ್ಷನ್ ಅಂದರೇನು ಅಂತ ಪ್ರಾಯೋಗಿಕವಾಗಿ ಗೊತ್ತಿಲ್ಲದಿದ್ದ ಕಾಲವದು. ಹಾಗಾಗಿ ನನಗೆ ಸುಳ್ಳುಹೇಳುವ ಇರಾದೆಯಿರಲಿಲ್ಲ, 'ಏನೂ ಗೊತ್ತಿಲ್ಲ' ಅಂತ ನೀಟಾಗಿ ಒಪ್ಪಿಕೊಂಡು ಬಿಟ್ಟೆ...
ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದ ಹಿರಿಯ, ಆಗ ಈಟಿವಿ ನ್ಯೂಸ್-ನ ಮುಖ್ಯಸ್ಥರಾಗಿದ್ದ ಎಸ್.ರಾಮಾನುಜನ್. ಒಂದು ಕ್ಷಣ ಸುಮ್ಮನಿದ್ದವರು, ಮತ್ತೆ ಕೇಳಿದರು... 'ಕಲೀತೀಯಾ ಹೇಳ್ಕೊಟ್ಟಿದ್ದನ್ನ?'
'ಕಲೀತೇನೆ' ಅಂದೆ.
ಹಾಗೆ ಸೇರಿಕೊಂಡಿದ್ದೆ ಈಟಿವಿ, 8 ವರ್ಷಗಳ ಹಿಂದೆ. ಸುದ್ದಿಯ output ಕೊಡುವ production ವಿಭಾಗದಲ್ಲಿ ಆರಂಭವಾಗಿತ್ತು ನನ್ನ ವೃತ್ತಿ. ಅಲ್ಲಿ ಕಲಿಯುವ ಮನಸಿದ್ದವರಿಗೆ ಯಾವುದೇ boundary ಇರಲಿಲ್ಲವಾಗಿ, ಕಲಿಯುವ ಮನಸೂ ಇದ್ದುದರಿಂದ ಸುದ್ದಿ ನಿರ್ವಹಣೆಗೆ ಸಂಬಂಧಿಸಿದ್ದೆಲ್ಲವನ್ನೂ ಕಲಿಯುವ ಸದವಕಾಶ ಸಿಕ್ಕಿತ್ತು... ತಾಂತ್ರಿಕವಾಗಿ ಎಡಿಟಿಂಗ್-ನಿಂದ ಹಿಡಿದು, ಪಿಸಿಆರ್ ಕೆಲಸ, ಕಾರ್ಯಕ್ರಮ ನಿರ್ವಹಣೆ, ಸುದ್ದಿ ನೀಡುವ ಕಲೆ... ಹೀಗೆ ಎಲ್ಲವೂ ಒಂದೊಂದಾಗಿ ಒಲಿದು ಬಂತು.
ಟೇಪ್-ಗಳನ್ನು ಹಾಕಿಕೊಂಡು MANUAL ಆಗಿ, ಲಕ್ಷಗಟ್ಟಲೆ ಬೆಲೆಯ ಎಡಿಟಿಂಗ್ ಮೆಶಿನುಗಳ ಮೂಲಕ ಎಡಿಟಿಂಗ್ ಮಾಡುತ್ತಿದ್ದ ಕಾಲದಲ್ಲಿ ನಾವೆಲ್ಲ ಈಟಿವಿ ಸೇರಿಕೊಂಡಿದ್ದೆವು. ನಂತರ ಒಂದೆರಡು ವರ್ಷಗಳಲ್ಲಿ ಪ್ರವೇಶಿಸಿದ್ದು NON-LINEAR ಯುಗ. ಇದರಲ್ಲಿ ಕಂಪ್ಯೂಟರ್ ಮೂಲಕ ಎಡಿಟಿಂಗ್ ಸಾಫ್ಟ್-ವೇರ್ ಉಪಯೋಗಿಸಿ ಎಡಿಟಿಂಗ್ ಮಾಡಬಹುದಿತ್ತು. ಬಂದ ಸುದ್ದಿಚಿತ್ರಗಳನ್ನು ಕಂಪ್ಯೂಟರಿನಲ್ಲಿ ನೋಡಿ, ಕೇಳಿ, ಚೊಕ್ಕವಾಗಿ ಸ್ಕ್ರಿಪ್ಟ್ ಬರೆಯುವ ಜತೆಗೆ, ಅವರವರು ಬರೆದ ಸುದ್ದಿ ಅವರವರೇ ಎಡಿಟಿಂಗ್ ಮಾಡಬಹುದಿತ್ತು, ಸೃಜನಾತ್ಮಕವಾಗಿ ಏನಾದರೂ ಮಾಡಬಹುದಿತ್ತು...ಈ ವ್ಯವಸ್ಥೆಯಲ್ಲಿ ಸುದ್ದಿ ಕೊಡಲು ಬೇಕಾದ ಸಮಯ ಕಡಿಮೆಯಾಯಿತು, ವೇಗ ಹೆಚ್ಚಿತು.
ಎಲ್ಲಾ ಚಾನೆಲ್-ಗಳಿಗೆ ಬರುವ ಸುದ್ದಿಚಿತ್ರಗಳನ್ನು ಸ್ಟೋರ್ ಮಾಡಲು ಸೆಂಟ್ರಲೈಸ್ಡ್ ಸರ್ವರ್- ವ್ಯವಸ್ಥೆಯಿತ್ತು. ಕಡಿಮೆ ಸ್ಟೋರೇಜ್ ಸ್ಪೇಸ್-ನಲ್ಲಿ ಹೆಚ್ಚು ಸುದ್ದಿಚಿತ್ರಗಳನ್ನು ಇಟ್ಟುಕೊಳ್ಳಬಹುದಿತ್ತು. ಯಾವುದೇ ಜಿಲ್ಲೆಯ ಸುದ್ದಿಯಿರಲಿ, ಬಂದ ತಕ್ಷಣ ತಂತಾನೇ copy ಆಗಿ ಅದಕ್ಕಿರುವ ಫೋಲ್ಡರಲ್ಲಿ ಹೋಗಿ ಕೂರುತ್ತಿತ್ತು, ಹುಡುಕುವ ಕಷ್ಟವಿಲ್ಲದೆ ಬಂದ ತಕ್ಷಣ ಕೈಗೆ ಸಿಗುತ್ತಿತ್ತು. ತಾಂತ್ರಿಕವಾಗಿ ಯಾವುದೇ ಗ್ಲೋಬಲ್ ಸಂಸ್ಥೆಯ ಕಾಪಿರೈಟ್-ಗೆ ಒಳಗಾಗದ, ಕಡಿಮೆ ಖರ್ಚಿನ ಸರಳವಾದ NEWS EDITING SOFTWARES, ON-AIR SOFTWARE, LOWER THIRD GRAPHICS, ಮತ್ತು ಬರೆಯಲು ಬೇಕಿರುವ ಸಾಫ್ಟ್-ವೇರ್ ಅಭಿವೃದ್ಧಿಯಾಗಿತ್ತು. ಅದೂ ಲೈನಕ್ಸ್-ಬೇಸ್ಡ್ ಪ್ಲಾಟ್-ಫಾರಂನಲ್ಲಿ. ಟೀವಿ ಚಾನೆಲ್ಲುಗಳು ಸಾಫ್ಟ್-ವೇರ್-ಗಳಲ್ಲಿ ಸ್ವಾವಲಂಬನ ಸಾಧಿಸಬಹುದು ಎಂದು ಇಲ್ಲಿನ ವ್ಯವಸ್ಥೆ ಸಾಧಿಸಿ ತೋರಿಸಹೊರಟಿತ್ತು. ಈಗ ಹೊಸದಾಗಿ ಬರುತ್ತಿರುವ ಟೀವಿ ಚಾನೆಲ್ಲುಗಳೆಲ್ಲ ಎಡಿಟಿಂಗ್, ಸುದ್ದಿಕೋಣೆಯ ಸಾಫ್ಟ್-ವೇರ್ ಎಲ್ಲ ಒಟ್ಟು ಸೇರಿಸಿರುವ ನೆಟ್ವರ್ಕುಗಳಿಗೆ ತಲೆಬಾಗುತ್ತಿವೆ, ಲೈಸೆನ್ಸಿಗಾಗಿ ಪ್ರತಿವರ್ಷ ಕೋಟಿಗಟ್ಟಲೆ ದುಡ್ಡು ಮಲ್ಟಿನ್ಯಾಶನಲ್ ಸಾಫ್ಟ್-ವೇರ್ ಕಂಪೆನಿಗೆ ಸುರಿದು ದಾಸ್ಯದ ಬದುಕು ಬದುಕಹೊರಡುತ್ತಿವೆ.
ಮುಖ್ಯ ಸುದ್ದಿವಿಭಾಗವಿರುವುದು ಆಂಧ್ರದಲ್ಲಾದರೂ ಅದು ಗೊತ್ತೇ ಆಗದ ಹಾಗೆ, ಕರ್ನಾಟಕದ - ಮಾತ್ರವಲ್ಲ ದೇಶದೆಲ್ಲೆಡೆಯ ಸುದ್ದಿಗಳನ್ನು ವೇಗವಾಗಿ ಕೊಡುವ ತಾಂತ್ರಿಕತೆ ಈಟಿವಿಯಲ್ಲಿತ್ತು. ಸೆಟ್ - ತಯಾರಿ, ಗ್ರಾಫಿಕ್ಸ್-ನಿಂದ ಹಿಡಿದು, ಸ್ಟುಡಿಯೋ ಲೈಟಿಂಗ್-ವರೆಗೆ ಎಲ್ಲವನ್ನೂ ಗೊತ್ತಿಲ್ಲವೆಂಬ ಕುತೂಹಲಕ್ಕೆ ಕೇಳಿದರೆ ಹೇಳಿಕೊಡುವವರಿದ್ದರು. ಸಾಮರ್ಥ್ಯ ಮತ್ತು ಆಸಕ್ತಿಯಿದ್ದವರಿಗೆ ಇತರ ಭಾಷೆಗಳ ಚಾನೆಲ್-ಗಳಿಗೋಸ್ಕರ ಭಾರತದ ಇತರ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿತ್ತು. ಆಸಕ್ತಿಯಿಂದ ಏನಾದರೂ ಮಾಡಹೊರಟರೆ ಪ್ರೋತ್ಸಾಹ ಸಿಗುತ್ತಿತ್ತು. ಒಳ್ಳೆಯ value addition-ಗಳಿಗೆ ಸ್ವಾಗತವಿರುತ್ತಿತ್ತು. ಅಲ್ಲಿ ಸರಿ-ತಪ್ಪುಗಳನ್ನು ಪ್ರಶ್ನಿಸಬಹುದಿತ್ತು, ಕೇಳುವವರಿದ್ದರು, ಸ್ಪಂದಿಸುವವರಿದ್ದರು. ತಪ್ಪಿದ್ದರೆ ತಿಳಿಸಿ ಹೇಳುವವರೂ ಇದ್ದರು. ವೃತ್ತಿಯಲ್ಲಿ ಹೆಚ್ಚುಹೆಚ್ಚು ಕಲಿಸುವ ಜತೆಗೆ ಬದುಕಲಿಕ್ಕೂ ಕಲಿಸಿದ ಪಾಠಶಾಲೆ ರಾಮೋಜಿ ಫಿಲ್ಮ್ ಸಿಟಿ.
ಆಫೀಸ್ ಕ್ಯಾಂಟೀನ್-ನಲ್ಲಿ ಕಡಿಮೆ ಬೆಲೆಗೆ ಹಲವಾರು ಐಟಂಗಳಿರುವ ಊಟ ಸಿಗುತ್ತಿತ್ತು. ಕ್ಯಾಂಟೀನ್ ಊಟವಾದ ಕಾರಣ ಸರಿಯಿಲ್ಲವೆಂದು ಬೈದುಕೊಳ್ಳುತ್ತಿದ್ದರೂ ಹೊಟ್ಟೆಹಸಿವಿಗೆ ಸೋತು ಕಬಳಿಸುತ್ತಿದ್ದವರು ಹಲವರು. ಯುಗಾದಿಯ ದಿನ ಪಕ್ಕಾ ಆಂಧ್ರ ಶೈಲಿಯ ಬೇವು-ಬೆಲ್ಲದ ಪಾನಕ ಸಿಗುತ್ತಿತ್ತು. ಉದ್ಯೋಗಿಗಳಿಗೆ ಪ್ರಿಯಾ ಉಪ್ಪಿನಕಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು... :-) ಮನೆಯ ಹತ್ತಿರದ ಪಿಕಪ್ ಪಾಯಿಂಟ್-ನಿಂದ ನಿಗದಿತ ಸಮಯಕ್ಕೆ ಬಸ್, ನಂತರ ವಾಪಸ್ ಅದೇ ಪಾಯಿಂಟ್-ನಲ್ಲಿ ಡ್ರಾಪ್...
ರಾಮೋಜಿ ಫಿಲ್ಮ್ ಸಿಟಿಯೆಂದರೆ ಮಿನಿ ಇಂಡಿಯಾ. ದೇಶದೆಲ್ಲೆಡೆಯ ವ್ಯಕ್ತಿಗಳನ್ನು ಮತ್ತು ಭಾಷೆಗಳನ್ನು ಅಲ್ಲಿ ಕಾಣಬಹುದು. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ತಾನ - ನಾಲ್ಕು ರಾಜ್ಯಗಳಿಗೆ ನಾಲ್ಕು ಚಾನೆಲ್... ಉರ್ದು, ಬಾಂಗ್ಲಾ, ಮರಾಠಿ, ಗುಜರಾತಿ, ಒರಿಯಾ, ಕನ್ನಡ... ತೆಲುಗಿನಲ್ಲಿ ಎರಡು ಚಾನೆಲ್. ಎಲ್ಲಾ ರಾಜ್ಯಗಳಲ್ಲಿ ವರದಿಗಾರರು... ದೇಶದ ಅತಿದೊಡ್ಡ ಮೈಕ್ರೋ ನ್ಯೂಸ್ ನೆಟ್ವರ್ಕ್ ಇರುವ ಖ್ಯಾತಿ ಈಟಿವಿಯದು. 8 ವರ್ಷದ ಹಿಂದೆ ಕನ್ನಡದಲ್ಲಿ ದೂರದರ್ಶನ, ಉದಯ ಟೀವಿ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲದ ಸಮಯ ಆರಂಭವಾದ ಈಟಿವಿ, 'ಹಚ್ಚೇವು ಕನ್ನಡದ ದೀಪ...' ಹಾಡಿನ ಜತೆಗೆ ಪ್ರಸಾರ ಆರಂಭಿಸಿತು. ಕನ್ನಡಿಗರ ಮನೆ-ಮಮನ ತಟ್ಟಿ, ಮಧ್ಯಮವರ್ಗದ ಆಶೋತ್ತರಗಳ ಪ್ರತೀಕವಾಗಿ ಮೂಡಿಬರಲಾರಂಭಿಸಿತು. ನಿಧನಿಧಾನವಾಗಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆಯಿತು.
ಒಂದು ವ್ಯವಸ್ಥೆ ಇಷ್ಟು ಆಳವಾಗಿ, ಚೆನ್ನಾಗಿ ಬೇರುಬಿಡಬೇಕೆಂದರೆ, ಗಟ್ಟಿಯಾಗಿ ನಿಲ್ಲಬೇಕೆಂದರೆ, ಅದರ ಹಿಂದೆ ಒಂದು ಕನಸುಗಾರ ಹೃದಯ ಇರಲೇಬೇಕು. ಈಟಿವಿಯ ಹಿಂದಿರುವ ಇಚ್ಛಾಶಕ್ತಿ, ಶ್ರೀಯುತ ರಾಮೋಜಿ ರಾವ್.
ಈ ಯಶೋಗಾಥೆಯ ಹಿಂದಿನ ರೂವಾರಿಯ ಬದುಕಿನ ಕಥೆ, ಮುಗಿಯದ ಹೋರಾಟದ್ದು. ಪ್ರಿಯಾ ಉಪ್ಪಿನಕಾಯಿಯಿಂದ ಆರಂಭಿಸಿ, ಮಾರ್ಗದರ್ಶಿ ಚಿಟ್ ಫಂಡ್, ಈನಾಡು, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಇತ್ಯಾದಿ ಸಂಸ್ಥೆಗಳನ್ನು ಸ್ಥಾಪಿಸಿ, ಗೆಲುವು ಕಂಡವರು ರಾಮೋಜಿ ರಾವ್. ರಾಮೋಜಿ ಫಿಲ್ಮ್ ಸಿಟಿ, ಉಷೋದಯ ಎಂಟರ್-ಪ್ರೈಸಸ್, ಉಷಾಕಿರಣ ಮೂವೀಸ್, ನ್ಯೂಸ್ ಟುಡೇ ಪ್ರೈವೇಟ್ ಲಿಮಿಟೆಡ್ - ಹೀಗೆ ಹಲವು ರೀತಿಯಲ್ಲಿ ದೃಶ್ಯ ಮಾಧ್ಯಮದ ಹಲವು ಆಯಾಮಗಳನ್ನು ಅನ್ವೇಷಿಸಿ ಗೆದ್ದವರು. ಬರಿಯ ಈಟೀವಿ-ಈನಾಡು ಸಮೂಹದ ಮೂಲಕವೇ 2000ಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಅನ್ನದಾತರಾಗಿರುವವರು.
ಅನ್ನದಾತ ಎಂದ ತಕ್ಷಣ ಹೇಳಲೇಬೇಕಾದ ಮಾತೊಂದು ನೆನಪಾಗುತ್ತದೆ... ನಿರಂತರವಾಗಿ 8 ವರ್ಷಗಳಿಂದ ಈಟಿವಿಯಲ್ಲಿ ಬೆಳಗಿನ 6.30ಕ್ಕೆ ಮೂಡಿಬರುತ್ತಿದೆ, ಅನ್ನದಾತ ಕಾರ್ಯಕ್ರಮ. ಭಾರತ ಕೃಷಿಪ್ರಧಾನ ದೇಶವೆಂಬ ಸತ್ಯವನ್ನು ನಾವೆಲ್ಲರೂ ಮರೆತು ಕೃಷಿ ಮಾಡುವವರೂ ಕಡಿಮೆಯಾಗುತ್ತಿರುವ ಈದಿನಗಳಲ್ಲಿ ಅಳಿದುಳಿದ ಕೃಷಿಕರಿಗೆ ಧೈರ್ಯ ತುಂಬುವಂತೆ ಇರುವ ಈ ಕಾರ್ಯಕ್ರಮ ವಿವಿಧ ಬೆಳೆಗಳ ಕೃಷಿಯ ಮೇಲೆ ಬೆಳಕು ಚೆಲ್ಲುತ್ತದೆ. ಯಂತ್ರೋಪಕರಣಗಳ ಕುರಿತು, ಹೊಸ ಕೃಷಿವಿಧಾನಗಳ ಕುರಿತು, ಮಾರುಕಟ್ಟೆಯ ಕುರಿತು ಮಾಹಿತಿ... ಸೋತವರಿಗೆ ಧೈರ್ಯ ತುಂಬುವ ಗೆದ್ದವರ ಕಥೆಗಳು...
ಇತ್ತೀಚೆಗೆ ಇಂಥದೇ ಯತ್ನ ಮಾಡಹೊರಟ ಇತರ ಹಲವು ವಾಹಿನಿಗಳು ಟಿಆರ್-ಪಿಯೆಂಬ ಭೂತ ಕೈಕೊಟ್ಟ ತಕ್ಷಣ ಕಾರ್ಯಕ್ರಮವನ್ನು ನಿಲ್ಲಿಸಿದವು. ಆದರೆ ಎಂಥದೇ ಪರಿಸ್ಥಿತಿಯಲ್ಲಿ ಕೂಡ, ಟಿಆರ್-ಪಿ ಬರಲಿ-ಬಿಡಲಿ, ನಿರಂತರವಾಗಿ 8 ವರ್ಷದಿಂದ ನಡೆದುಬರುತ್ತಿದೆ ಅನ್ನದಾತ. ಇದು ಕನ್ನಡದ ವಾಹಿನಿಗಳಲ್ಲಿ ಬಹುಶ: ದೂರದರ್ಶನ ಬಿಟ್ಟರೆ ಕೃಷಿಕರಿಗೋಸ್ಕರವಿರುವ ಒಂದೇ ಒಂದು ಕಾರ್ಯಕ್ರಮ ಅಂತ ನನ್ನ ತಿಳುವಳಿಕೆ. (ಉದಯ ಟೀವಿಯಲ್ಲಿ ಇದೆಯೇನೋ ಗೊತ್ತಿಲ್ಲ, ನಾನು ಉದಯ ಟೀವಿ ನೋಡುವುದೇ ಇಲ್ಲ).
ತುಂಬಿದ ಕೊಡ ತುಳುಕುವುದಿಲ್ಲ, ದೊಡ್ಡ ಮನುಷ್ಯರು ಯಾವಾಗಲೂ ದೊಡ್ಡ ಮನಸ್ಸಿನವರೇ ಆಗಿರುತ್ತಾರೆಂಬುದಕ್ಕೆ ಅತ್ಯುತ್ತಮ ಉದಾಹರಣೆ ರಾಮೋಜಿ ರಾವ್... ನಾವಿದ್ದ ಕಾಲದಲ್ಲಿ ಈಟಿವಿಯಲ್ಲಿ ಪ್ರತಿ ವಾಹಿನಿಯ ಸುದ್ದಿವಿಭಾಗಕ್ಕೂ ನೇರವಾಗಿ ಚೇರ್ಮನ್ ರಾಮೋಜಿ ರಾವ್ ಜತೆ ಮೂರು ತಿಂಗಳಿಗೊಮ್ಮೆ ಮೀಟಿಂಗ್ ಇರುತ್ತಿತ್ತು. ಅದಕ್ಕಾಗಿ ನಾವೆಲ್ಲ ಚಾನೆಲ್ ಬಗ್ಗೆ, ಒಳ್ಳೆದು-ಕೆಟ್ಟದರ ಬಗ್ಗೆ ನಮ್ಮ ವಿಶ್ಲೇಷಣೆ ಕೊಡಬೇಕಿತ್ತು. ಹಾಗೆ ಕೊಟ್ಟ ವಿಶ್ಲೇಷಣೆಗಳನ್ನು ಖುದ್ದು ಚೇರ್ಮನ್ನರೇ ಓದಿ, ಫೀಡ್-ಬ್ಯಾಕ್ ತೆಗೆದುಕೊಳ್ಳುತ್ತಿದ್ದರು, ಮೀಟಿಂಗ್-ನಲ್ಲಿ ಅದರ ಬಗ್ಗೆ ಮಾತಾಡುತ್ತಿದ್ದರು. ಮೀಟಿಂಗ್-ನಲ್ಲಿ ತಾಂತ್ರಿಕ ವಿಭಾಗದವರು, ಗ್ರಾಫಿಕ್ಸ್, ಎಂಜಿನಿಯರುಗಳು, ಕ್ಯಾಮರಾ ವಿಭಾಗದವರು, ಅಡ್ಮಿನಿಸ್ಟ್ರೇಶನ್-ನವರು, ಹೆಚ್ಚಾರ್-ನವರು - ಎಲ್ಲರೂ ಇರಬೇಕಿತ್ತು. ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಿಯೇ ಆ ವಿಭಾಗದ ಗಮನಕ್ಕೆ ತರಲಾಗುತ್ತಿತ್ತು. ಅತ್ಯಂತ ground levelನಿಂದ ಕೂಡ ಅಭಿಪ್ರಾಯಗಳು ಬರಬಹುದಿತ್ತು, ಅವುಗಳಲ್ಲಿ ಸತ್ವವಿದ್ದರೆ ಅದಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲುತ್ತಿತ್ತು. ವ್ಯವಸ್ಥೆ ಹಾಗಿತ್ತು.
ಈ ರೀತಿಯ ಮೀಟಿಂಗ್-ಗೆ ಸಂಬಂಧಿಸಿದಂತೆ ನಡೆದ ಘಟನೆಯೊಂದು ನನಗೆ ಈ ಹಿರಿಯ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪರಿಚಯಿಸಿತು... ಆಸಮಯದಲ್ಲಿ ಈಟಿವಿ ಸುದ್ದಿವಾಚಕಿಯರು ಉಡುತ್ತಿದ್ದ ಸೀರೆಗಳು, ಹತ್ತಿಯ ಸೀರೆಗಳಾಗಿದ್ದು, ವಿಧವಿಧದ dignified ವಿನ್ಯಾಸಗಳೊಡನೆ ಸುದ್ದಿವಾಚಕಿಯರ ವ್ಯಕ್ತಿತ್ವವನ್ನೇ ಬದಲಾಯಿಸುವಂತಿದ್ದವು. ಹೈದರಾಬಾದಿನಲ್ಲಿದ್ದ 'ಕಲಾಂಜಲಿ'ಯಿಂದ ತರುತ್ತಿದ್ದ ಹತ್ತಿ ಸೀರೆಗಳು ಸಾವಿರ-ಸಾವಿರದೈನೂರು ರೂಪಾಯಿ ಬೆಲೆಯವಾದರೂ, ಉಟ್ಟವರನ್ನು ನೋಡಿದರೆ ಬೆಲೆ ಹೆಚ್ಚಾಯಿತು ಎನಿಸುತ್ತಿರಲಿಲ್ಲ. ಹೀಗಿರಲು ಒಂದು ಸಾರಿ, ಹೊಸ ಸೀರೆಗಳನ್ನು ತರುವಾಗ ಹತ್ತಿ ಸೀರೆಯ ಬದಲು ಗ್ರಾಂಡ್ ಆದ ಜರತಾರಿ ಅಂಚಿನ ರೇಷ್ಮೆ ಸೀರೆಗಳನ್ನು ತರಲಾಯಿತು. ಸುದ್ದಿ ಓದುವವರು ಆ ಸೀರೆಗಳಲ್ಲಿ ಮದುವಣಗಿತ್ತಿಯರಂತೆ ಕಾಣುತ್ತಿದ್ದುದು ನ್ಯೂಸ್ ಪ್ರೊಡಕ್ಷನ್-ನಲ್ಲಿದ್ದ ನನಗೆ ಹಿತವಾಗಿರಲಿಲ್ಲ. ಜತೆಗೆ ಕ್ಯಾಮರಾದಲ್ಲೂ ಸರಿಯಾಗಿರುತ್ತಿರಲಿಲ್ಲ. ಮೊದಲೇ ಹೇಳಿದ್ನಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದ ಸಂಸ್ಥೆ ಅದು. ನಾನು ಕಾರಣಗಳ ಸಹಿತ ಜರತಾರಿ ಸೀರೆಗಳ ವಿರುದ್ಧ ಆಸಲದ ಮೀಟಿಂಗ್-ಗೆ ಸಿದ್ಧಪಡಿಸಿದ ರಿಪೋರ್ಟ್-ನಲ್ಲಿ ಬರೆದೆ.
ಮೀಟಿಂಗ್-ನಲ್ಲಿ ನನ್ನ ವರದಿಯ ಬಗ್ಗೆ ಚರ್ಚೆಗೆ ಬಂತು. ಮೀಟಿಂಗಲ್ಲಿ ಈಸಲ ನನಗೂ ಜಾಗವಿತ್ತು. ಒಳಗೊಳಗೇ ನನಗೆ ಭಯ, ಬರೆಯುವುದು ಬರೆದಾಗಿತ್ತು, ಇನ್ನೇನಾಗುತ್ತದೋ ಅಂತ. ನನ್ನ ಅಭಿಪ್ರಾಯಗಳ ಸತ್ಯಾಸತ್ಯತೆಯ ಬಗ್ಗೆ ಚೇರ್ಮನ್ ತಾಂತ್ರಿಕ ವಿಭಾಗದವರಲ್ಲಿ ಕೇಳಿದಾಗ ಅವರು ನಾ ಕೊಟ್ಟ ಕಾರಣಗಳನ್ನು ಒಪ್ಪಿಕೊಂಡು ವಿವರಿಸಿದರು. ಸ್ವಲ್ಪ ಹೊತ್ತಿನ ವಿಚಾರವಿನಿಮಯದ ನಂತರ ಸುದ್ದಿವಾಚಕಿಯರಿಗೆ ಹತ್ತಿ ಸೀರೆಯೇ ಬೇಕೆಂಬ ನನ್ನ ವಾದವನ್ನು ಒಪ್ಪಿದ ಚೇರ್ಮನ್, ರೇಷ್ಮೆ ಸೀರೆಗಳನ್ನು ಖರೀದಿಸಲು ಹೇಳಿದ್ದು ತಾನೇ ಆಗಿದ್ದು, ಅದು ಸರಿಯಲ್ಲವೆಂದಾದಲ್ಲಿ ಸರಿಮಾಡಿಕೊಳ್ಳೋಣ ಅಂತ ಹೇಳಿದರು... ನನ್ನ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿ ವಾಚಕರಿಗೆ ಸೂಕ್ತ ಡ್ರೆಸ್ ಕೋಡ್ ಸಿದ್ಧಪಡಿಸಲು ತಾಂತ್ರಿಕ ವಿಭಾಗದವರಿಗೆ ಹೇಳಿದರು. ಅಷ್ಟು ನೇರವಾಗಿ, ಎಲ್ಲರ ಎದುರು, ಅನುಭವದಲ್ಲಿ ಎಷ್ಟೋ ವರ್ಷ ಚಿಕ್ಕವಳಾದರೂ ನನ್ನ ಅಭಿಪ್ರಾಯಕ್ಕೆ ಬೆಲೆ ಕೊಟ್ಟು, ಸರಿ-ತಪ್ಪು ತೂಗಿ ನೋಡಿದ ಹಿರಿತನಕ್ಕೆ ಹೃದಯ ತುಂಬಿ ಬಂತು ನನಗೆ.
ಕಹಿ ಮರೆತು ಸಿಹಿ ನೆನಪಿಟ್ಟುಕೊಂಡು ಮುನ್ನಡೆಯುವಲ್ಲಿ ನನಗೆ ಸ್ಫೂರ್ತಿಯಾದ ಹಿರಿಯರಿವರು. ಸರಳತೆ, ವೃತ್ತಿಯ ಮೇಲೆ ಪ್ರೀತಿ, ಒಳ್ಳೆಯದು ಎಲ್ಲಿಂದ ಬಂದರೂ ತೆಗೆದುಕೊಳ್ಳುವ ಮನಸ್ಸು, ಮನಸು ಒಪ್ಪಿದ ತತ್ವಕ್ಕೆ ಬದ್ಧವಾಗಿ ಮುನ್ನಡೆಯುವ ಛಾತಿ - ನಾನು ಈ ಹಿರಿಯರಿಂದ ಕಲಿತೆ. ಅವರ ಜತೆಗಾಗಿದ್ದು ಒಂದೋ ಎರಡೋ ಭೇಟಿಗಳಾದರೂ ನನಗೆ ಅವು ಸ್ಮರಣೀಯ. ಬದುಕಲು ಕಲಿಯುವಲ್ಲಿ, ಬದುಕು ಕಟ್ಟಿಕೊಳ್ಳುವಲ್ಲಿ, ಸಹಾಯ ಮಾಡಿದವರಲ್ಲಿ, ಕುಸಿಯುವ ಹೆಜ್ಜೆಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುವ ಧೈರ್ಯ ತುಂಬಿದ ಹಿರಿಯರಲ್ಲಿ ಒಬ್ಬರು ರಾಮೋಜಿ ರಾವ್.
ಸದಾ ಬಿಳಿ ಬಟ್ಟೆಯ ಹಸನ್ಮುಖಿ, ಅಷ್ಟೇ ಒಳ್ಳೆಯ ಮನಸ್ಸಿನ ಈ ಹಿರಿಯರಿಗೆ ನಾಳೆಗೆ 72 ತುಂಬುತ್ತದೆ. ಸದ್ದಿಲ್ಲದೆ ಉರಿದು ಸುತ್ತಲಿಗೆ ಬೆಳಕ ನೀಡುವ ದೀಪಗಳಲ್ಲೊಬ್ಬರು ರಾಮೋಜಿರಾವ್... ನೂರ್ಕಾಲ ಬಾಳಲೆಂಬ ಹಾರೈಕೆ ಎಂದೆಂದೂ ನನ್ನದು.