Sunday, March 29, 2009

ಥ್ರಿಲ್ ಬೇಕಾ? 13B ನೋಡಿ!

ತುಂಬಾ ದಿನದಿಂದ ನೋಡಬೇಕೆಂದುಕೊಂಡು ನೋಡಲಾಗಿರಲಿಲ್ಲ, ಆದರೆ ಇವತ್ತು 13B ಚಿತ್ರ ನೋಡಿಯೇ ಬಿಟ್ಟೆ. ಮೊದಲೇ ಪ್ಲಾನ್ ಮಾಡದಿದ್ದರೂ ಅಚಾನಕ್ಕಾಗಿ ಹೊರಟದ್ದಾಯ್ತು. ಎದ್ದೂ ಬಿದ್ದೂ ಓಡಿ ಹೋಗಿ ಟಿಕೆಟ್ ತಗೊಂಡು ಥಿಯೇಟರಲ್ಲಿ ಕೂತುಕೊಳ್ಳುವಾಗ ಆಗಲೇ ಮಾಧವನ್ ಮತ್ತು ಕುಟುಂಬ ನಂಬರ್ 13ರ ಹೊಸಾ ಮನೆಗೆ ಪ್ರವೇಶಿಸಿಯಾಗಿತ್ತು. ಇಂಟರ್-ಮಿಶನ್ ಬರುವಷ್ಟರಲ್ಲಿ ಇನ್ನೇನಾಗುತ್ತದೋ ಅಂತ ಉಸಿರು ಬಿಗಿಹಿಡಿದು ಕಾಯುವ ಹಂತಕ್ಕೆ ನಮ್ಮನ್ನು ಚಿತ್ರ ತಂದು ನಿಲ್ಲಿಸಿತ್ತು.

ಇಡಿಯ ಚಿತ್ರ ಎಷ್ಟು ಚೆನ್ನಾಗಿತ್ತೆಂದರೆ, ಚಿತ್ರ ಮುಗಿದಿದ್ದೇ ಗೊತ್ತಾಗಲಿಲ್ಲ. ನಾನು ಯಾವುದೇ ಹಾರರ್-ಗೆ ಸುಲಭಕ್ಕೆ ಹೆದರುವವಳಲ್ಲ, ಸ್ವಲ್ಪಮಟ್ಟಿಗೆ ಗಟ್ಟಿಮನಸ್ಸಿನವಳು ಅಂತ ಅಂದುಕೊಂಡಿದ್ದೆ. ಅಂತಹ ನನ್ನನ್ನು 4-5 ಸಾರಿ ಈಚಿತ್ರ ಬೆಚ್ಚಿಬೀಳಿಸಿತು... ಕೊನೆಗೆ ಪಕ್ಕದಲ್ಲಿದ್ದ ಅರ್ಪಣಾಳ ಕೈಹಿಡಿದುಕೊಂಡು ಕೂತು ಸಿನಿಮಾ ನೋಡಿದ್ದಾಯಿತು :-)

ಕಥೆ ವಿಭಿನ್ನವಾಗಿತ್ತು. ಅದೃಶ್ಯಶಕ್ತಿಗಳು ಇವೆಯೆಂಬುದರಲ್ಲಿ ನಮಗೆ ನಂಬಿಕೆಯಿಲ್ಲದಿದ್ದರೆ 13B ನಂಬಿಸಲು ಯತ್ನಿಸುವುದಂತೂ ನಿಜ. ಚಿತ್ರದೊಳಗಂತೂ ಯಾವುದೇ ಸಂಶಯವಿಲ್ಲದಂತೆ ಅದೃಶ್ಯಶಕ್ತಿಗಳ ಇರವನ್ನು ಚಿತ್ರಿಸಲಾಗಿದೆ. ಇದೇ ವಿಷಯದ ಮೇಲೆ ಈಹಿಂದೆಯೂ ಚಿತ್ರಗಳು ಬಂದಿವೆ, ಆದರೆ ಇದು ಅವ್ಯಾವುದನ್ನೂ ನೆನಪಿಸುವುದಿಲ್ಲ. ನಾ ನೋಡಿದ ಎಲ್ಲಾ ಹಾರರ್ ಚಿತ್ರಗಳಿಗಿಂತ ಇದು ವಿಭಿನ್ನ. ಹಾರರ್ / ಥ್ರಿಲ್ಲರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟು ಹಾರರ್ ಸೃಷ್ಟಿಸಲಾಗುತ್ತದೆ (ಉದಾಹರಣೆ - ಆಪ್ತಮಿತ್ರ, ವಾಸ್ತುಶಾಸ್ತ್ರ ಇತ್ಯಾದಿ). ಈ ಚಿತ್ರದ ಸಂಗೀತ ಹಾರರ್ ಸೃಷ್ಟಿಸುವುದರಲ್ಲಿ ಕೆಲವೆಡೆ ಸಫಲವಾದರೂ ಕೆಲವು ಕಡೆ ಸ್ಟೀರಿಯೋಟೈಪಿಕ್ ಅನಿಸಿ ಕಿರಿಕಿರಿಯಾಗುತ್ತಿತ್ತು. ಮಾಧವನ್ ಪೂಜಾಕೋಣೆಯಲ್ಲಿ ಮೊಳೆ ಹೊಡೆಯುವಾಗ ಧ್ವನಿ ಸುತ್ತಿಗೆಯಚಲನೆಯ ಜತೆ ಸಿಂಕ್ ಆಗದಿರುವುದು, ಒಂದೆರಡು ಶಾಟ್-ಗಳಲ್ಲಿ ತುಟಿ ಚಲನೆಗೂ ಮಾತಿಗೂ ಸಂಬಂಧವಿಲ್ಲದಿರುವುದು ಇತ್ಯಾದಿಗಳಿಂದಾಗಿ, ಧ್ವನಿವಿನ್ಯಾಸ ಕೂಡ ತನ್ನ ಉತ್ಕೃಷ್ಟತೆ ಕಳೆದುಕೊಂಡಿದೆ.

ಆದರೆ ಚಿತ್ರದ ವಿಶೇಷತೆಯೇನಪ್ಪಾ ಅಂದ್ರೆ, ಸಂಗೀತದ ಅಥವಾ ಸೌಂಡ್ ಇಫೆಕ್ಟ್-ಗಳ ಹೊರತಾಗಿಯೂ ಪದೇ ಪದೇ ಬರುವ ಲಿಫ್ಟ್-ನ ಶಾಟ್-ಗಳು, ಮಾಧವನ್ ಮುಖ, ಶಾಟ್ ಸಂಯೋಜನೆ - ಇಷ್ಟರಿಂದಲೇ ಚಿತ್ರ ಥ್ರಿಲ್ಲಿಂಗ್ ಅನಿಸುತ್ತದೆ, ಹಾರರ್ ಸೃಷ್ಟಿಸುತ್ತದೆ. ಮೊದಮೊದಲು ಕೆಲವೆಡೆ silhouette shots ಕಿರಿಕಿರಿ ಅನಿಸಿದರೂ, ಕ್ಯಾಮರಾ ವರ್ಕ್ ಚೆನ್ನಾಗಿತ್ತು. ಕಪ್ಪು-ಬಿಳುಪಿನಲ್ಲೇ ತೋರಿಸಿದ ಭಯಾನಕತೆ ಕೂಡ ಇಷ್ಟವಾಯ್ತು. ಕೆಲಕಡೆ ಚಿತ್ರ ಅದ್ಯಾಕೋ ಹಿಚ್-ಕಾಕ್-ನ ಸೈಕೋದ ಕೆಲ ಶಾಟ್-ಗಳನ್ನು ನೆನಪಿಸಿತು.

ಮೊದಲ ಭಾಗದಲ್ಲಿ ನಾಯಿ ಹಿಡಿದ ಮುದುಕ ಮತ್ತು ಮಾಧವನ್ ಇರುವ ದೃಶ್ಯಗಳ ಸಂರಚನೆ ಚಿತ್ರದ ಪೂರ್ಣ ವಿನ್ಯಾಸಕ್ಕೆ ಹೊಂದುವುದಿಲ್ಲ. ಅವುಗಳನ್ನು ಚಿತ್ರಿಸಿರುವ ರೀತಿ ಆತನೂ ಈ ಹಾರರ್-ನ ಅವಿಭಾಜ್ಯ ಭಾಗವೇನೋ ಅನ್ನುವ ಅನಿಸಿಕೆ ಮೂಡಿಸುತ್ತದೆ. ನಂತರ ಆತ ಏನೂ ಅಲ್ಲದೆ ಹೋಗುತ್ತಾನೆ, ಕಥೆಗೆ ಅನವಶ್ಯಕವಾಗಿ ಹೋಗುತ್ತಾನೆ, ನಾಯಿ ಮಾತ್ರ ಮಹತ್ವ ಪಡೆಯುತ್ತದೆ. ಕೊನೆಗೆ ಆತನ ನಾಯಿ ಮಾತ್ರ ಚಿತ್ರದ ಕ್ಲೈಮಾಕ್ಸ್ ಶಾಟ್-ನಲ್ಲಿರುತ್ತದೆ, ಆತ ಇರುವುದಿಲ್ಲ. ಇಡಿಯ ಚಿತ್ರದಲ್ಲಿ ಯಾರ ಮೇಲೂ ಸಂಶಯ ಪಡಲಾರದೆ ವೀಕ್ಷಕ ಒದ್ದಾಡುತ್ತಾನೆ, ಮಾಧವನ್ ಮತ್ತು ಗೆಳೆಯನ ಮೂಲಕವೇ ಕಥೆ ಗೊತ್ತಾಗುತ್ತ ಹೋಗುತ್ತದೆ. ಹಾಗಿರುವಾಗ ಸುಮ್ಮನೆ ಸಂಶಯ ಹುಟ್ಟಿಸಲಿಕ್ಕಾಗಿ ಮುದುಕನ ವೈಭವೀಕರಣ ಬೇಕಿರಲಿಲ್ಲ. ಈ ಅಂಶ ನನಗೆ ಕಿರಿಕಿರಿ ಹುಟ್ಟಿಸಿತು, ಮತ್ತು ಇದನ್ನು ಸ್ವಲ್ಪ ಜಾಣತನದಿಂದ ಸಂಯೋಜಿಸಿದ್ದರೆ ಸಮಯ ಉಳಿಸಬಹುದಿತ್ತೇನೋ ಅನಿಸಿತು. ಒಂದೇ ಒಂದು ಹಾಡಿದೆ ಚಿತ್ರದಲ್ಲಿ, ಅದು ಕೂಡ ಅನವಶ್ಯಕವಾಗಿತ್ತು.

ಇದು ಬಿಟ್ಟರೆ ಹೆಚ್ಚಿನೆಡೆ ಚಿತ್ರಕಥೆ ಚೆನ್ನಾಗಿತ್ತು. ನ್ಯಾರೇಶನ್ ಟೆಕ್ನಿಕ್ ಕೆಲವೆಡೆ ತುಂಬಾನೇ ಚೆನ್ನಾಗಿತ್ತು. ಮಾಧವನ್ ಮತ್ತು ಡಾಕ್ಟರ್ ಶಿಂಧೆ ನಟನೆಯಂತೂ ಸಿಕ್ಕಾಪಟ್ಟೆ ಖುಷಿಯಾಯಿತು, ಅಷ್ಟು ಸಹಜವಾಗಿತ್ತು. ಅಲ್ಲಲ್ಲಿ ಹಾರರ್ ಜತೆ ಕಾಮೆಡಿ ಮಿಕ್ಸ್ ಚೆನ್ನಾಗಿತ್ತು., ಹೊಟ್ಟೆತುಂಬ ನಗು ತರಿಸಿತು. ಅಲ್ಲಲ್ಲಿ ಕಥೆ ಸಾಗುವ ದಾರಿಯ ಬಗ್ಗೆ ಯಾವುದೋ ಸಂದರ್ಶನದ ಮೂಲಕ, ಮತ್ತು ಗೋಡೆ ಮೇಲಿನ ಒಂದು ಫೋಟೋ ಮೂಲಕ ಕ್ಲೂ ಕೊಟ್ಟರೂ, ಅದು ವೀಕ್ಷಕ ಗಮನಿಸಲಾಗದಷ್ಟು ಸಹಜವಾಗಿತ್ತು. ಇವೆಲ್ಲದರ ನಡುವೆ ಕೊನೆಯ ಎರಡು ದೃಶ್ಯಗಳ ತನಕವೂ ಸಸ್ಪೆನ್ಸ್ ಉಳಿಸಿಕೊಂಡು ಚಿತ್ರ ಖುಷಿಕೊಟ್ಟಿತು.

ಚಿತ್ರವಿಡೀ ಧಾರಾವಾಹಿಯ ಪಾತ್ರಗಳ ಮೂಲಕ ಮಾಧವನ್ ಕುಟುಂಬದ ಸದಸ್ಯರ ಬದುಕಿನ ಘಟನಾವಳಿಗಳನ್ನು ತೋರಿಸಿ, ಮುಂದೆ ಹೀಗೇ ಆಗಲಿದೆ ಅಂತ ಸುಲಭವಾಗಿ ಊಹಿಸಲು ವೀಕ್ಷಕನಿಗೆ ಚಿತ್ರ ಅವಕಾಶ ಕೊಡುತ್ತದೆ. ಅದಕ್ಕೆ ಅಡಿಕ್ಟ್ ಆಗಿಬಿಡುವ ವೀಕ್ಷಕನಿಗೆ ಕೊಲೆಗಾರನ ರೂಪದಲ್ಲಿ ಮಾಧವನ್-ಗೆ ಮಾಧವನ್-ಅನ್ನೇ ತೋರಿಸುವ ಮೂಲಕ ಚಿತ್ರ ಅನಿರೀಕ್ಷಿತವಾಗಿ ಚಮಕ್ ಕೊಡುತ್ತದೆ. ಅಲ್ಲಿ ಧಾರಾವಾಹಿಯಲ್ಲಿ ಮಾಧವನ್ ಪಾತ್ರಧಾರಿಯಾಗಿರುವ ಮಿಹಿರ್-ನ ತೋರಿಸಿದರೂ ತೊಂದರೆಯಿರಲಿಲ್ಲ, ಅದು ಮಾಮೂಲಾಗಿ, ಸಾಂಪ್ರದಾಯಿಕವಾಗಿ ಯೋಚಿಸಬಹುದಾದಂಥದ್ದು. ಆದರೆ, ಮಿಹಿರ್ ಪಾತ್ರ ಕಾಣಿಸುವುದಕ್ಕೂ, ಮಾಧವನ್ ಸ್ವತಹ ಕಾಣಿಸುವುದಕ್ಕೂ ನಡುವಿನ ವ್ಯತ್ಯಾಸದ ಪರಿಣಾಮವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಇದು ಏನು ನಡೆಯಲಿದೆ, ಮುಂದೆ ಏನಾಗಬಹುದು ಅಂತ ಊಹಿಸಲಿಕ್ಕೇ ಸಾಧ್ಯವಾಗದ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದೇ ನಿಜವಾದ ಥ್ರಿಲ್! ಈ ಅಂಶ ನಂಗೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಇಷ್ಟವಾಯ್ತು. ಕ್ಲೈಮಾಕ್ಸ್-ನಲ್ಲಿ ಬರುವ ಕೊಲೆಯ ದೃಶ್ಯಕ್ಕೆ ಕೊಲೆಗಾರ ಮೊದಲೇ ಪ್ಲಾನ್ ಮಾಡದಿದ್ದರೂ ಆತ ಕೊಲೆಗಾರನಾಗಹೊರಡುವ ದೃಶ್ಯ ಚೆನ್ನಾಗಿತ್ತು.

ತಾಂತ್ರಿಕವಾದ ಹಲವಾರು ತಪ್ಪುಗಳು ಚಿತ್ರದಲ್ಲಿವೆ. ಪೂಜಾಕೋಣೆಯಲ್ಲಿ ಡ್ರಿಲ್ಲರ್ ಬಂದು ಶಾಕ್ ಹೊಡೆದು ಬಿದ್ದಾಗ ಅಲ್ಲಿಯ ಗೋಡೆಯಲ್ಲಿ ಪ್ಲಗ್ ಪಾಯಿಂಟ್ ಇರುತ್ತದೆ, ನಂತರದ ಶಾಟ್-ಗಳಲ್ಲಿ ಅದು ಇಲ್ಲ. ಮಾಧವನ್ ತಾನು ಕೆಲಸ ಮಾಡುವ ಜಾಗದಲ್ಲಿ ಮಾತನಾಡುತ್ತಿರುವ ಶಾಟ್-ನಲ್ಲಿ ಲಾಂಗ್ ಶಾಟ್ ಮತ್ತು ಕ್ಲೋಸ್ ಶಾಟ್-ನಲ್ಲಿ continuity ಇಲ್ಲ.

ಆದರೆ ಇವೆಲ್ಲಾ ಚಿತ್ರವನ್ನು ಕಲಾಕೃತಿಯೆಂದುಕೊಂಡು ನೋಡುವಾಗ ಮಾತ್ರ ಕಾಣಿಸುತ್ತವೆ, ಕಥೆಯನ್ನೇ ಮುಖ್ಯವೆಂದುಕೊಂಡು ಚಿತ್ರ ನೋಡುವಾಗ ಇವ್ಯಾವುದೂ ಮುಖ್ಯವೆನಿಸುವುದಿಲ್ಲ, ಒಟ್ಟಿನಲ್ಲಿ ಹೇಳಬೇಕೆಂದರೆ ಇತ್ತೀಚೆಗೆ ನೋಡಿದ ಉತ್ತಮ ಚಿತ್ರಗಳಲ್ಲೊಂದು 13B.

---------------------

ಮುಗಿಸುವ ಮುನ್ನ...
---------------------

4-5 ವರ್ಷದ ಹಿಂದೊಂದು ರಾತ್ರಿ. ರಾಂಗೋಪಾಲ್ ವರ್ಮಾ ನಿರ್ಮಾಣದ ವಾಸ್ತುಶಾಸ್ತ್ರ ನೋಡಿ ಆಗಷ್ಟೆ ಮನೆಗೆ ಬಂದಿದ್ದೆವು. ಊಟ ಮಾಡಿ ಲೈಟ್ ಆರಿಸಿ ಮಲಗಿಕೊಂಡೆವು. ಸ್ವಲ್ಪ ಹೊತ್ತಿಗೆ ಮನೆಯೊಳಗೆ ವಿಚಿತ್ರ ಸೌಂಡು, ಪರಪರಾ... ಪರಪರಾ... ಅಂತ...
ನಾನು ಸ್ವಲ್ಪ ಹೊತ್ತು ಸೌಂಡ್ ಕೇಳಿಸಿಕೊಂಡೆ... ನಂತರ ಮೆಲ್ಲಗೆ ರೂಂಮೇಟನ್ನು ಎಬ್ಬಿಸಿ ಏನೇ ಅದು ಅಂತ ಕೇಳಿದೆ... ಅವಳಿಗೂ ಗೊತ್ತಾಗಲಿಲ್ಲ... ವಾಸ್ತುಶಾಸ್ತ್ರ ಚಿತ್ರದಲ್ಲಿನ ಬಿಳಿಬಿಳಿ ಕಣ್ಣುಗಳ ದೆವ್ವಗಳು, ಸುಶ್ಮಿತಾ ಸೇನ್ ಮಗುವಿನ ಸಮೇತ ಉಳಿದುಕೊಂಡಳು ಅಂದುಕೊಂಡಾಗಲೇ ಮಗು ಬಿಳಿಕಣ್ಣು ತೋರಿಸಿ ವೀಕ್ಷಕರಿಗೆ ತಾನು ದೆವ್ವವೆಂದು ತೋರಿಸಿಕೊಡುವುದು, ಭಯಂಕರ ಸಂಗೀತ ಎಲ್ಲವೂ ಸೇರಿ ನನ್ನ ಮೇಲೆ ಸಿಕ್ಕಾಪಟ್ಟೆ ಇಫೆಕ್ಟ್ ಆಗಿತ್ತು ಕಾಣುತ್ತೆ... ಆಗೇ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರುವಾಗಿತ್ತು... ಆದರೂ ನನಗೇನೇ ಆದರೂ ರೂಂಮೇಟ್-ಗೆ ಕೂಡ ಅದರಲ್ಲ ಪಾಲಿರುತ್ತದೆ ಅಂತ ಧೈರ್ಯ...
ಕೊನೆಗೆ ಮೆಲ್ಲಗೆ ಇಬ್ಬರೂ ಎದ್ದು ಕೂತು ಕತ್ತಲಲ್ಲಿ ಶಬ್ದ ಎತ್ತಲಿಂದ ಬರುತ್ತಿದೆಯೆಂದು ಗಮನಿಸಿದೆವು... ಶಬ್ದ ಬರುತ್ತಿದ್ದುದು ರೂಮಿನ ಬದಿಯಲ್ಲಿ ಎತ್ತರದಲ್ಲಿದ್ದ ಸಾಮಾನು ಪೇರಿಸಿಡುವ ಜಾಗದಿಂದ. ಸರಿ, ಶಬ್ದ ಮಾಡದೆ ಸ್ವಲ್ಪ ಹೊತ್ತು ಕೂತವರು ಇದ್ದಕ್ಕಿದ್ದಂತೆ ಲೈಟ್ ಹಾಕಿದೆವು. ಶಬ್ದ ಬರುತ್ತಿದ್ದುದು ಅಲ್ಲಿ ಏರಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲದ ಸಂತೆಯೊಳಗಿಂದ. ಅದನ್ನು ಕೂಡಲೇ ಹಿಡಿಸೂಡಿಯಿಂದ ಕೆಳಗೆ ಹಾಕಿದೆವು. ನೋಡುವುದೇನು, ಅದರಲ್ಲಿನ ಪ್ಲಾಸ್ಟಿಕ್ ಚೀಲವೊಂದರಿಂದ ಜಿರಳೆಯೊಂದು ಹೊರಬರಲು ವಿಫಲಯತ್ನ ಮಾಡುತ್ತಾ ಪರಪರಾ ಪರಪರಾ ಅಂತ ಸೌಂಡ್ ಮಾಡುತ್ತಿತ್ತು!!

11 comments:

Shrinidhi Hande said...

appreciate your technical observations

ತೇಜಸ್ವಿನಿ ಹೆಗಡೆ said...

ನಾನೂ ಈ ಚಿತ್ರವನ್ನು ಹಿಂದಿನ ವಾರವಷ್ಟೇ ನೋಡಿದೆ. ತುಂಬಾ ಇಷ್ಟವಾಯಿತು. ನೀವು ಹೇಳಿದ ಟೆಕ್ನಿಕಲ್ ವಿಷಯವನ್ನು ಮಾತ್ರ ಗಮನಿಸಿರಲೇ ಇಲ್ಲಾ! ಎಲ್ಲಕ್ಕಿಂತ ಈಗಲೂ ನಗುತರಿಸುವ ಘಟನೆ ಎಂದರೆ ಪೋಲಿಸ್ ಆಫಿಸರ್ ಘಟನೆ :)

ಸೀರಿಯಲ್‌ನಲ್ಲಿ ತನ್ನ ಪಾತ್ರದ continuity ನೋಡುವಂತೆ ಮಾಧವನ್‌ಗೆ ಆತ ವಿನಂತಿಸುವ ದೃಶ್ಯ ಕಣ್ಣುಕಟ್ಟುವಂತಿದೆ :)

ಆದರೆ ವಾಸ್ತುಶಾಸ್ತ್ರ ಚಿತ್ರವನ್ನು 13B ಗಿಂತಲೂ ಸ್ವಲ್ಪ ಹೆಚ್ಚು ಭಯಾನಕ ಚಿತ್ರವೆನ್ನಬಹುದು.

sunaath said...

ಚಿತ್ರದ ಎಲ್ಲಾ ಅಂಶಗಳ ಬಗೆಗೆ (both positive and
negative)ಒಳ್ಳೆಯ ವಿವರಣೆ ಕೊಟ್ಟಿದೀರಿ.ಚಿತ್ರದ ಮೂಲ್ಯಾಂಕನಕ್ಕೆ ಇದು ಸಹಾಯಕಾರಿಯಾಗಿದೆ.

ಹರೀಶ ಮಾಂಬಾಡಿ said...

Good observation..
nodbeku anisutte

ವನಿತಾ / Vanitha said...

ಹೇ.ಹೇ...ಲಾಯಿಕ್ಕಿದ್ದು ಜಿರಳೆ ಪರಾ.. ಪರಾ....
ನೋಡಿದ್ದಿಲ್ಲೇ..13B.ಈ ವೀಕ್ ಲಿ ನೋಡುತ್ತೆ..ಆಮೇಲೆ ಹೇಳುತ್ತೆ..ಒಟ್ಟಾರೆ..ಲಾಯಿಕಂಗೆ ಬರದ್ದೆ...

Parisarapremi said...

ಓಹ್, 13B ಹಾರರ್ ಸಿನಿಮಾನಾ? ನಾನು ಕಾಮಿಡಿ ಅಂದ್ಕೊಂಡು ನೋಡಿದ್ದಾಯಿತು ಪೂರ್ತಿ. ಉತ್ತಮ ಮಾಹಿತಿ ಕೊಟ್ಟಿದ್ದೀರ ನೋಡಿ ಈ ಸಂದರ್ಭದಲ್ಲಿ. ;-)

Ittigecement said...

ನೂರು ಕನಸು...

ನಾನು ಈ ಸಿನೇಮಾ "ಎಂಜಾಯ್" ಮಾಡಿದ್ದೆ...
ಸಸ್ಪೆನ್ಸ್, ಥ್ರಿಲ್ಲರ್ ಎಲ್ಲ ಇದೆ...
ನಿಮ್ಮ ಟೆಕ್ನಿಕಲ್ ಆಬ್ಸರ್ವೇಷನ್ ಗೆ ನನ್ನದೊಂದು ಸಲಾಮ್...!

ಚೆನ್ನಾಗಿ ಬರೆದಿದ್ದೀರಾ..!

ಮತ್ತೊಮ್ಮೆ ನೋಡೋಣ ಎನಿಸುವಷ್ಟು..

ಅಭಿನಂದನೆಗಳು...

ಶ್ರೀನಿಧಿ.ಡಿ.ಎಸ್ said...

:)
nangyako istane aglilla ee cinma.

ಕನಸು said...

after reading ur observation I am feeling like watching it again. Realy Good movie

ಸಂದೀಪ್ ಕಾಮತ್ said...

ಚಿತ್ರ ಬಹಳ ಚೆನ್ನಾಗಿದೆ ನಂಗೆ ತುಂಬಾ ಇಷ್ಟ ಆಯ್ತು.
ಹಾಗೇ ಬರಹ ಕೂಡಾ.

Shree said...

ಪ್ರತಿಕ್ರಿಯೆಗೆ ಥ್ಯಾಂಕ್ಸ್.. ನೋಡ್ಬೇಕು ಅಂತ ಅನಿಸಿದವರೆಲ್ಲಾ ಥಿಯೇಟರಲ್ಲಿ ಹೋಗಿಯೇ ನೋಡಿ, ಮನೆಯಲ್ಲಿ ಕೂತು ನೋಡ್ಬೇಡಿ...:-)
ತೇಜಸ್ವಿನಿ, ವಾಸ್ತು ಶಾಸ್ತ್ರದಲ್ಲಿ ದೆವ್ವ-ಭೂತಗಳನ್ನು ಮತ್ತು ಭಯಾನಕವಾದ ದೃಶ್ಯಗಳನ್ನು ತೋರಿಸಿ ಭಯಹುಟ್ಟಿಸಿದ್ದಾರೆ, ಇದರಲ್ಲಿ ಅಂಥದೇನೂ ಇಲ್ಲ, ಆದರೂ ಸಿನಿಮಾದ ಒಳಗೆ ಹೊಕ್ಕು ನೋಡಿದರೆ ಭಯ ಆಗುತ್ತದೆ.
ಅರುಣ್, ನಾನು ಈ ಸಿನಿಮಾ ಹಾರರ್ ಅಂದುಕೊಂಡೇ ನೋಡಿದ್ದೆ, ಕೊನೆಗೆ ಹಾರರ್ ಅಷ್ಟೇನಿಲ್ಲ, ಇದೊಂದು ಥ್ರಿಲ್ಲರ್ ಅನ್ನುವ ನಿರ್ಣಯಕ್ಕೆ ಬಂದೆ... ಹಾಗಾಗಿ ಅದರಲ್ಲಿ ಕಾಮೆಡಿ ನೋಡಿ ಆಶ್ಚರ್ಯವಾಯಿತು! :-) ಸಿಕ್ಕಾಪಟ್ಟೆ ನಗುವೂ ಬಂತು ಆಫ್-ಕೋರ್ಸ್ :-)
Kanasu, let's watch it again, I will be pleased to accompany once again! Hopefully it shouldn't be out of theaters.. :-)
ನಿಧಿ, ಅದು ಹಾಗೇನೇ, ಎಲ್ಲವೂ ಎಲ್ಲರಿಗೂ ಇಷ್ಟ ಆಗ್ಬೇಕಾಗಿಲ್ಲ... :-)