Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ,  ಸಿಕ್ಕ ಪಾಲು ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಯೋಗವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬಿದ್ದ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)