ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ ಕಾರ್ಯಶೀಲತೆ, ಚಟುವಟಿಕೆಗಳ ಮೂಲಕವೇ ಕನಸುಗಳಿಗೆ ರೆಕ್ಕೆ ಮೂಡಿ ಜೀವತಳೆಯಬೇಕು.. ಹಾಗೇ ಕನಸಿಲ್ಲದ, ಕತ್ತಲೆಯ ನೆಮ್ಮದಿಯಿಂದ ವಂಚಿತವಾದ ಜೀವನವೂ ಒಂದು ಜೀವನವೇ? ಸದಾ ಬೆಳಕು ತುಂಬಿದ ಕೋಣೆಯಲ್ಲಿ ನೆಮ್ಮದಿಯ ನಿದ್ದೆ ಸಾಧ್ಯವೇ?
ಬೆಳಕು-ಕತ್ತಲೆ - ಇವೆರಡರಲ್ಲಿ ಒಂದು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವ 'ತಮಸೋಮಾ ಜ್ಯೋತಿರ್ಗಮಯ' ಎಂಬ ಘೋಷಣೆ, ಹುಲುಮಾನವರು ಅತಿ ಬುದ್ಧಿವಂತಿಕೆಯಿಂದ ಮಾಡಿದ ರಾಜಕಾರಣ—ಅಷ್ಟೇ.
******************
ಕಾರ್ಗತ್ತಲ ಹಾದಿ... ಮನೆ ದೂರ, ಕನಿಕರಿಸಿ ನನ್ನ ಕೈಹಿಡಿದು ನಡೆಸು ಬೆಳಕೇ, ಬಾ ಎಂದು ಕೇಳಿದ ಕವಿಗೆ ಈ ರಾಜಕಾರಣದ ಅರಿವಿದ್ದಿರಲಾರದು. ಇದ್ದಿದ್ದರೆ, ಹಾದಿ ತಪ್ಪಿದಾಗ ಕತ್ತಲ ದಾರಿಗೆ ಬೇಕಾದ ಕೈದೀಪ ಮನದೊಳಗೇ ಇದೆ ಎಂಬುದರ ಅರಿವೂ ಆತನಿಗೆ ಆಗಿರುತ್ತಿತ್ತು. ಎಲ್ಲೋ ಇರುವ ಬೆಳಕಿಗೆ ಹಾತೊರೆಯುವ ಬದಲು ಒಳಗಿನ ಬೆಳಕನ್ನು ಆತ ಕಂಡುಕೊಳ್ಳುತ್ತಿದ್ದನೇನೋ...
******************
ಕೆಲವು ವಿಧದ ಬೆಳಕುಗಳು ಅಪಾಯಕಾರಿಯೂ ಹೌದು... ಮಡಿಲಲ್ಲಿರುವ ನಿಗಿನಿಗಿ ಸುಡುವ ಕೆಂಡ ಬೆಳಕೇನೋ ನಿಜ. ಆದರೆ ಅದಕ್ಕೆ ಹಾಕಬೇಕಿರುವುದು ನೀರು, ಇದ್ದಲು ಅಥವಾ ಸೌದೆಯಲ್ಲ. ಸೌದೆ ಹಾಕಿದಲ್ಲಿ ಅದು ಮಡಿಲು ಸುಡುವುದು ಖಚಿತ. ಸುಡುವ ಸತ್ಯಕ್ಕೆ ನೀರು ಹಾಕುವವರು ಬೆಳಕನ್ನು ನಂದಿಸಿದರು, ಸತ್ಯವನ್ನು ಅಡಗಿಸಿದರು ಎಂಬ ಇನ್ನೊಂದು ರೀತಿಯ ಅಪವಾದಕ್ಕೂ ಒಳಗಾಗಬೇಕಾಗುತ್ತದೆ.
ಕುಶಾಲಿಗೆಂದು ಹಚ್ಚುವ ಬಣ್ಣಬಣ್ಣದ ಬಿರುಸುಮತಾಪುಗಳೂ ಅಷ್ಟೆ. ಬಣ್ಣ ಬರಬೇಕೆಂದು ಅದಕ್ಕೆ ಹಾಕುವ ವಿಧವಿಧದ ಪದಾರ್ಥಗಳಿಂದ ಹಾನಿಕಾರಕವಾಗಿ ಬದಲಾಗುತ್ತವೆ. ತಮಾಷೆ ನೋಡುವ ಭರದಲ್ಲಿ ಮಗು ಹಚ್ಚುವ ಬೆಳಕಿನ ಪುಂಜ ಹಾದಿಯಲ್ಲಿ ಹೋಗುವವರ ಕಣ್ಣು ತೆಗೆದರೂ ತೆಗೆದೀತು, ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದರೂ ಹಚ್ಚೀತು.
******************
ಈ ಬೆಳಕಿನ ಹುಚ್ಚು ಇನ್ನೂ ಹಲವು ಬಗೆ ಅನಾಹುತಗಳಿಗೆ ಕಾರಣವಾಗುತ್ತದೆ. ಅರ್ಧ ಜಗತ್ತಿಗೆ ಕತ್ತಲೆ ಯಾವಾಗಲೂ ಇರುತ್ತದೆ. ಇನ್ನರ್ಧಕ್ಕೆ ಬೆಳಕು. ಆದರೆ ಕತ್ತಲಲ್ಲಿರುವವರೂ ಕೃತಕ ಬೆಳಕು ಸೃಷ್ಟಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ನಿಜ ತಾನೇ. ಬೆಳಕಿನ ಶ್ರೇಷ್ಠತೆ ಬರುವುದು ಇದರಿಂದಲೇ. ಬೆಳಕಿನ ಬೆಲೆ ವ್ಯಾವಹಾರಿಕವಾಗಿ ಜಾಸ್ತಿ. ಬೆಳಕು ಕತ್ತಲೆಯನ್ನು ಮೀರಿ ನಮ್ಮನ್ನು ಮುನ್ನಡೆಸುವ ಸಾಧನ, ಮತ್ತು ಇದರ ಅವಶ್ಯಕತೆ ಎಲ್ಲರಿಗೂ ಇದೆ. ಬೆಳಕಿಲ್ಲದೇ ಬದುಕು, ವ್ಯವಹಾರ ಯಾವುದೂ ಇಲ್ಲ. ಅದಕ್ಕೇ ತಮಸೋಮಾ ಜ್ಯೋತಿರ್ಗಮಯ ಅಂದರು. ತಪ್ಪಲ್ಲ, ಆದರೆ ಅದು ಬೆಳಕಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕ ಕೊಟ್ಟು, ಕತ್ತಲೆ ಕೆಟ್ಟದೆಂಬಂತೆ ತೋರಿಸುತ್ತದೆಯಲ್ಲವೇ? ಅದೇ ಸಮಸ್ಯೆ.
******************
ಎಲ್ಲೋ ಇರುವ ಬೆಳಕಿಗೆ ಹಾತೊರೆಯುವುದರಿಂದ ಏನು ತೊಂದರೆ? ಒಂದು ವಸ್ತು ಯಾವುದೋ ರೀತಿಯಲ್ಲಿ ಅಗತ್ಯ ಎನ್ನುವ ಅರಿವು, ಆ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತದೆ. ಮತ್ತು ನಕಲಿ ವ್ಯವಹಾರಗಳಿಗೆ ಎಡೆಮಾಡಿಕೊಡುತ್ತದೆ. ಕಲಬೆರಕೆಗಳು ಹೆಚ್ಚುತ್ತವೆ.
ಬೆಳಕಿನ ವಿಚಾರದಲ್ಲೂ ಅಷ್ಟೇ. ಕತ್ತಲಿಗೂ ಬೆಳಕಿನ ವೇಷ ತೊಡಿಸಿ ಮಾರುವವರು ಹುಟ್ಟಿಕೊಳ್ಳುತ್ತಾರೆ. ಅಂಗೈಯ ಕಿಟಿಕಿಯಲ್ಲಿ ವಿಶ್ವ ನೋಡಬಹುದಾದಷ್ಟು ಬೆಳಕಿರುವ ಈ ಕಾಲಘಟ್ಟದಲ್ಲಿಯೂ ಕಿಟಿಕಿಯಲ್ಲಿ ಕೋಣೆ ತೋರಿಸಿ ಅದನ್ನೇ ವಿಶ್ವವೆಂದು ಮಾರಾಟ ಮಾಡುವವರು ಕಡಿಮೆಯಿಲ್ಲ. ಕತ್ತಲೆಯನ್ನು ಬೆಳಕನ್ನಾಗಿಸಿ, ಬೆಳಕನ್ನು ಕತ್ತಲೆಯಾಗಿಸಿ ಆಟವಾಡುವವರ ಸಂಖ್ಯೆ ಬಲುಜಾಸ್ತಿ. ಅರೆಗತ್ತಲೆಯಲ್ಲಿ ಅಥವಾ ಬಣ್ಣದ ಬೆಳಕಲ್ಲಿ ಏನು ಮಾಡಿದರೂ ಚಂದ—ಹಾಲಿಗೆ ಹುಳಿ ಹಿಂಡಬಹುದು, ಮನಸ್ಸುಗಳನ್ನು ಒಡೆಯಬಹುದು, ವಿಷಬೀಜ ಬಿತ್ತಬಹುದು. ತಮ್ಮೊಳಗಿನ ಬೆಳಕನ್ನು ನಂಬದ, ತಮ್ಮ ತಿಳುವಳಿಕೆಯಲ್ಲಿ ನಂಬಿಕೆಯಿಲ್ಲದ ಜನವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು.
******************
ನಮ್ಮೊಳಗಿನ ತಿಳಿವಿನ ಬೆಳಕು ಎಷ್ಟು ಕಡಿಮೆಯೋ, ಬಾಹ್ಯದಲ್ಲಿ ಕಾಣುವ ಬೆಳಕು ನಮಗೆ ಅಷ್ಟೇ ಭೀಕರವೆನಿಸುತ್ತದೆ. ಬೆಳಕಿನ ಸಹವಾಸವೇ ಬೇಡವೆನಿಸಿ ಬೆಳಕಿಗೊಂದು ನಮಸ್ಕಾರ ಹಾಕಿ ಕತ್ತಲಲ್ಲೇ ಇರುತ್ತೇವೆ ಎಂಬ ಜನಕ್ಕೇನೂ ಕಡಿಮೆಯಿಲ್ಲ. ಬೆಳಕಿನ ಕುರಿತು ವ್ಯಂಗ್ಯವಾಡುವವರಿಗೂ ಕಡಿಮೆಯಿಲ್ಲ.
ಆದರೆ ಇಷ್ಟು ಮಾತ್ರ ನಿಜ. ಕತ್ತಲೆ-ಬೆಳಕು ಎರಡೂ ಜೀವನಕ್ಕೆ ಅವಶ್ಯಕ. ಯಾರೋ ಹೊಗಳಿದರೆಂದು ಬೆಳಕು ಹಿಗ್ಗುವುದಿಲ್ಲ, ಇನ್ಯಾರೋ ತೆಗಳಿದರೆಂದು ಕತ್ತಲೆ ಕುಗ್ಗುವುದಿಲ್ಲ. ಕತ್ತಲೆಯ ಕೆಲಸವೇ ಬೇರೆ. ಬೆಳಕಿನ ಕೆಲಸವೇ ಬೇರೆ. ಕತ್ತಲಿನಲ್ಲಿ ಬೆಳೆಯುವ ಹೂವು ಅರಳಲು ಸೂರ್ಯಕಿರಣಗಳು ತಾಗಲೇಬೇಕು. ಹಗಲಿನ ಬೆಳಕಲ್ಲಿ ಆಹಾರ ಸಂಪಾದಿಸುವ ಗಿಡ-ಮರಗಳು ಇರುಳಾದಾಗ ಬೆಳೆಯುತ್ತವೆ. ಹಗಲಲ್ಲಾದ ಗಾಯಗಳು ಮಾಯಲು ಇರುಳಿನ ಮಡಿಲೇ ಬೇಕು.
******************
ಹಾಗಂತ ಹಗಲು ನಿದ್ರಿಸುವ, ಇರುಳಲ್ಲೇ ತಮ್ಮ ಕೆಲಸ ಕಾರ್ಯಗಳು ಮಾಡುವವರು ಇಲ್ಲವೆಂದಲ್ಲ. ಸಂಜೆ ಮಲ್ಲಿಗೆ ಅರಳಲು ಮುಳುಗುವ ಸೂರ್ಯನ ಬಿಸಿಲೇ ಬೀಳಬೇಕು. ರಾತ್ರಿರಾಣಿ ಅಥವಾ ಬ್ರಹ್ಮಕಮಲ ಅರಳುವುದು ಸಂಪೂರ್ಣ ಕತ್ತಲೆಯಲ್ಲೇ. ಬಾವಲಿಗಳು, ಜಿರಲೆಗಳು, ಸರೀಸೃಪಗಳು ಇರುಳಿಲ್ಲವೆಂದರೆ, ಕತ್ತಲೆಯಿಲ್ಲವೆಂದರೆ ಸ್ವಾಭಾವಿಕವಾಗಿ ಎದ್ದು ಆಚೆಗೆ ಬರಲಾರವು. ರಾತ್ರಿಯ ಬದಲು ಹಗಲು ನಿದ್ರಿಸುವವರಿಗೆ, ಕನಸು ಕಾಣುವವರಿಗೇನೂ ಕಡಿಮೆಯಿಲ್ಲ. ಇವರೆಲ್ಲರಿಗೂ ಪ್ರಕೃತಿಯಲ್ಲಿ ಅವರದೇ ಆದಂತಹ ಸ್ಥಾನವಿದೆ, ಅಲ್ಲಗಳೆಯಲಾಗದಂತಹ ಕೆಲಸಕಾರ್ಯವಿದೆ.
ಹಾಗೇ ಕಳ್ಳಕಾಕರಿಗೂ ಕತ್ತಲೆಯೆಂದರೆ ಪ್ರೀತಿ, ಬೆಳಕಿದ್ದಲ್ಲಿ ಅವರ ಕಾರ್ಯಗಳು ಕೈಗೂಡುವ ಸಾಧ್ಯತೆ ಕಡಿಮೆ. ಈ ಜಗದ ವಿನ್ಯಾಸದಲ್ಲಿ ಕಳ್ಳಕಾಕರಿಗೂ ಬೆಳಕಿನ ಹೆಸರಲ್ಲಿ ಕತ್ತಲೆ ಹಂಚುವವರಿಗೂ ಅವರದೇ ಆದ ಸ್ಥಾನವಿದೆ. ಇವರೆಲ್ಲರೂ ಜಗತ್ತು ಸಂಪೂರ್ಣವೆನಿಸಿಕೊಳ್ಳಲು ಅತ್ಯಗತ್ಯ.
******************
ಬದುಕೊಂದು ಹಾವು-ಏಣಿ ಆಟದ ಹಾಗೆ. ಕತ್ತಲಿನಲ್ಲಿ ಜಾರಿ ಬೆಳಕಿನಲ್ಲೇಳುವುದು, ಕತ್ತಲಿನಲ್ಲಿ ಏರಿ ಬೆಳಕಿನಲ್ಲಿ ಜಾರುವುದು... ಎಲ್ಲಿ ಕತ್ತಲು ಬೇಕೋ ಅಲ್ಲಿ ಬೆಳಕಿದ್ದರೆ, ಬೆಳಕು ಬೇಕಾದಲ್ಲಿ ಕತ್ತಲಿದ್ದರೆ, ಆಟ ಹದತಪ್ಪಿಬಿಡುತ್ತದೆ.
ಬೆಳಕಿನ ಹಬ್ಬವೇನೋ ಈಗ ಕೊನೆಯಾಗುತ್ತಿದೆ, ಆದರೆ ಬದುಕು ನಿರಂತರ. ಬದುಕಿನಲ್ಲಿ ಯಾರಿಗೆಷ್ಟು ಬೆಳಕು ಬೇಕೋ ಅಷ್ಟು ಬೆಳಕು ದಕ್ಕಲಿ... ಯಾರಿಗೆಷ್ಟು ಬೇಕೋ ಅಷ್ಟು ಕತ್ತಲು ದಕ್ಕಲಿ. ಆದರೆ ಕಳ್ಳಕಾಕರ ಬಗ್ಗೆ, ಹುಳಿ ಹಿಂಡುವವರ ಬಗ್ಗೆ, ವಿಷ ಹಂಚುವವರ ಬಗ್ಗೆ ಎಚ್ಚರವಿರಲಿ, ಮಡಿಲಲ್ಲಿ ಸುಡುವ ಬೆಂಕಿಯ ಬೆಳಕನ್ನು, ಬೆಳಕಿನ ವೇಷ ಧರಿಸಿ ಬರುವ ಕತ್ತಲನ್ನು ಹೇಗೆ ನಿಭಾಯಿಸಬೇಕೆಂಬ ವಿವೇಚನೆ ಹುಟ್ಟಿಕೊಳ್ಳುವಷ್ಟು ತಿಳಿವಿನ ಬೆಳಕು ಮನದಲ್ಲಿರಲಿ. ಈ ತಿಳಿವಿನ ನಂದಾದೀಪ ಕಡುಗತ್ತಲೆಯಲ್ಲೂ ಮನದಲ್ಲಿ ಬೆಳಗುತ್ತಿರಲಿ. ಶುಭಾಶಯ...
1 comment:
ದೀಪಾವಳಿಯ ಶುಭಾಶಯಗಳು. ಬೆಳಕು ಮತ್ತು ಕತ್ತಲೆಯ ಆಟ ಬದುಕಿನಲ್ಲಿ ನಡೆಯುತ್ತಿರಲಿ; ಅದೇ ರಂಜನೆಯ ಸಾಧನ.
Post a Comment