Thursday, August 2, 2007

ನಿಶೆ, ನಶೆ, ಉಷೆ... ಮತ್ತು ಹೀಗೊಬ್ಬ ಪ್ರೀತಿಕಾರ :)

ಇಳೆಯನ್ನು ನಿಶೆ ತಬ್ಬಿಕೊಳ್ಳುತ್ತಿರುವ ತಂಪು ಹೊತ್ತಿನಲ್ಲಿ ನಶೆಯ ರಂಗೇರಿಸಿಕೊಂಡ ನಿಶಾಚರನೊಬ್ಬ ರಸ್ತೆ ಬದಿಯ ಮಸುಕು ದೀಪದಡಿ ಮಿಸುಕಾಡುತ್ತ ಕುಳಿತಿದ್ದ. ಅವನ ಜೋಶ್-ಬಾರಿತನಕ್ಕೆ ಕೈಲಿದ್ದ ಮೊಬೈಲು ಕಂಪೆನಿ ನೀಡಿತ್ತು.

ಮೊಬೈಲಿನ ಎಲ್ಲಾ ನಂಬರುಗಳನ್ನೂ ಒಂದರ ನಂತರ ಒಂದರಂತೆ ನೋಡುತ್ತ ಕುಳಿತವನಿಗೆ ಒಂದು ನಂಬರು ಸಿಕ್ಕಾಪಟ್ಟೆ ಸೆಳೆಯಿತು. ಅದು ಚಂದದ ನಂಬರಾಗಿ ಕಂಡಿತು. ಹಾಗೇ ಅದರಲ್ಲಿದ್ದ ಎಲ್ಲಾ ನಂಬರನ್ನೂ ಒಂದಕ್ಕೊಂದು ಕೂಡಿಸಿದ. ಒಂದೊಂದು ಸರ್ತಿ ಕೂಡಿಸಿದಾಗ ಒಂದೊಂದು ಉತ್ತರ ಬಂತು. ಅವನಿಗೆ ಪ್ರತಿಸಲ ಕೂಡಿಸಿದಾಗವೂ ಬೇರೆ ಬೇರೆ ಉತ್ತರ ಕೊಡುವ ಅದ್ಭುತ ನಂಬರು ಅಂತನಿಸಿತು... ಏನೋ ಕಂಡುಹಿಡಿದ ಹಾಗೆ ಸಿಕ್ಕಾಪಟ್ಟೆ ಖುಷಿಯಾಯಿತು.

ಬೇರೆಬೇರೆ ದಿಕ್ಕಿನಲ್ಲಿ ಮೊಬೈಲು ಹಿಡಿದು ತಿರುಗಿಸಿ ತಿರುಗಿಸಿ ನೋಡಿದ ಕುಡುಕ. ಹೇಗೆ ನೋಡಿದರೂ ಆ ನಂಬರಿನ ಚಂದ ಮತ್ತು ರಹಸ್ಯ ಇಮ್ಮಡಿಸುತ್ತ ಹೋಯಿತು. ಕೊನೆಗೆ ಮನಸೋತ ಕುಡುಕ ಆ ನಂಬರಿಗೆ ಒಂದು ಎಸ್ಸೆಮ್ಮೆಸ್ಸು ಕಳಿಸಿದ... 'ನೀನಂದ್ರೆ ನಂಗೆ ತುಂಬಾ ಪ್ರೀತಿ'!!

ಅಷ್ಟು ಕಳಿಸಿದ್ದೇ ತಡ, ಕುಡುಕನ ಹೃದಯ ಹಕ್ಕಿಯಾಗಿ ಡವಡವನೆ ಹೊಡೆದುಕೊಂಡಿತು... ಏನೋ ಸಂಭ್ರಮಕ್ಕೆ ಕಾಯತೊಡಗಿತು... ಚೂರು ಹೊತ್ತಿನ ನಂತರ ಆ ನಂಬರು ಮಾರುತ್ತರ ಕೊಟ್ಟಿತು... 'ಈ ಸಮಯದಲ್ಲಿ ಈ ಮಾತಾ? ಅದೂ ನಿನ್ನಿಂದ?'

ಕುಡುಕ ಡವಗುಟ್ಟುವ ಎದೆಯನ್ನು ಒಂದು ಕೈಯಲ್ಲಿ ನೀವಿಕೊಳ್ಳುತ್ತ ಉತ್ತರಿಸಿದ... 'ಹೌದು... ನನಗೆ ಹೇಳಲು ಭಯ... ನನಗೆ ಕೆಲದಿನಗಳಿಂದ ಹೊಸದಾಗಿ ನೀನು ಕಾಡುತ್ತಿದ್ದೀಯ... ಇದನ್ನು ಹೇಳಲು ಈಗ ಧೈರ್ಯ ಬಂದಿದೆ...'

ನಂಬರು ಸ್ವಲ್ಪ ಸಮಯದ ನಂತರ ಉತ್ತರಿಸಿತು... 'ತಿಂಗಳ ಬೆಳಕು, ತಂಪು ಗಾಳಿ, ರಾತ್ರಿಯ ಅಮಲು ಹುಟ್ಟಿಸುವ ಮ್ಯಾಜಿಕ್, ಬೆಳಗಿನ ಸೂರ್ಯ ಹುಟ್ಟಿದಾಗ ನಿಜದ ಬಿಸಿಲಿಗೆ ಕರಗಿಹೋಗುತ್ತೆ... ಎಲ್ಲೋ ಒಂದು ಸ್ವರ ಮನಸನ್ನ ಮಿಡಿಯುತ್ತೆ... ಇನ್ನೆಲ್ಲೋ ಒಂದು ಮುಖ ಕನಸಾಗಿ ಕಾಡುತ್ತೆ... ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ...'

ಕುಡುಕ ಇದನ್ನು ಒಂದು ಸಲ ಓದಿದ. ಅರ್ಥವಾಗಲಿಲ್ಲ. ಎರಡು ಸಲ ಓದಿದ. ಅರ್ಥವಾಗಲಿಲ್ಲ. ಮೂರು ಸಲ ಓದಿದ. ಅರ್ಥವಾಗಲಿಲ್ಲ. ನಾಲ್ಕನೇ ಸಲವೂ ಅರ್ಥವಾಗಲಿಲ್ಲ. ಐದನೇ ಸಲ ಎಲ್ಲವೂ ಕಲಸುಮೇಲೋಗರವಾಯಿತು, ತಲೆ ಕೆರೆದುಕೊಂಡ ರಭಸಕ್ಕೆ ನಾಲ್ಕು ಕೂದಲು ಕಿತ್ತುಬಂತು.

ಯಾಕೋ ಇವತ್ತು ಪರಮಾತ್ಮ ಸ್ವಲ್ಪ ಹೆಚ್ಚಾದ ಹಾಗಿದೆ, ಇದೇನು ಅಂತಲೇ ಅರ್ಥವಾಗುತ್ತಿಲ್ಲವಲ್ಲ... ಇಷ್ಟು ಚಂದದ ನಂಬರು ಹೀಗ್ಯಾಕೆ ಮೆಸೇಜು ಕಳಿಸುತ್ತೆ ಅಂತ ಮೂಗಿನ ಮೇಲೆ ಬೆರಳಿಟ್ಟು ಯೋಚಿಸಿದ... 'ಹಂಗಂದ್ರೇನು, ಅರ್ಥವಾಗಲಿಲ್ಲ, ನಾನು ದಡ್ಡ, ಬಿಡಿಸಿ ಹೇಳು' ಅಂತ ಮತ್ತೆ ಮೆಸೇಜು ಮಾಡಿ ನಂಬರಿಗೆ ಕೇಳಿದ.

ನಂಬರು 'ಅರ್ಥಗಳು ನೀನು ಕಟ್ಟಿಕೊಂಡ ಹಾಗಿರುತ್ತವೆ' ಅಂತ ಉತ್ತರಿಸಿತು.

ಅರ್ಥಗಳನ್ನು ನಾನು ಕಟ್ಟಿಕೊಳ್ಳುವುದೆಂದರೇನು, ಹೇಗೆ? ಈ ನಂಬರೇ ಹಾಗೆ ಹೇಳುತ್ತದಾದರೆ ಅರ್ಥ ಕಾಣುತ್ತದೆ ಅಂತಾಯಿತಲ್ಲ. ಇಲ್ಲೇ ಎಲ್ಲಿಯೋ ಇರಬೇಕು. ಕಂಡರೆ ಕಟ್ಟಬಹುದು, ಕಾಣದಿದ್ದರೆ ಹುಡುಕಿಕೊಂಡು ಎಲ್ಲಿ ಹೋಗುವುದು, ಹೇಗೆ ಕಟ್ಟುವುದು ಅಂತೆಲ್ಲ ಯೋಚಿಸಿ ತಲೆಬಿಸಿಯಾಯಿತು.

ಇರಲಿರಲಿ, ಈಗ ರಾತ್ರಿ ಬಹಳವಾಗಿದೆ, ಏನೂ ಕಾಣಿಸುತ್ತಿಲ್ಲ, ರಸ್ತೆದೀಪದ ಬೆಳಕು ಸಾಲುತ್ತಿಲ್ಲ, ನಾಳೆ ಸೂರ್ಯ ಹುಟ್ಟಲಿ, ಅರ್ಥ ಎಲ್ಲಿದ್ದರೂ ಹುಡುಕಿ ಕಟ್ಟುತ್ತೇನೆ ಅಂತ ಪ್ರತಿಜ್ಞೆ ಮಾಡಿ ಕುಡುಕ ರಸ್ತೆಬದಿಯಲ್ಲೇ ಬಿದ್ದುಕೊಂಡು ನಿದ್ದೆ ಹೋದ.

........................

ತಿಂಗಳ ಬೆಳಕು ಕರಗಿ ಉಷೆ ಮೆಲ್ಲನೆ ಮುಸುಕು ತೆಗೆದು ಹೊರಗಿಣುಕಿದಳು. ಅವಳ ಕಿರುನಗುವಿನ ಎಳೆಬಿಸಿಲು ಜಗವೆಲ್ಲ ಹಬ್ಬಿ, ರಸ್ತೆಬದಿಯಲ್ಲಿ ಮಲಗಿದವನ ಮುಖದ ಮೇಲೆ ತುಂಟುತುಂಟಾಗಿ ಕುಣಿದು ಎಬ್ಬಿಸಿತು. ಆತ ಎದ್ದು ಕುಳಿತ. ನಿದ್ರೆ ರಾತ್ರಿಯ ನೆನಪೆಲ್ಲ ಅಳಿಸಿ ಹಾಕಿದ್ದಳು. ಅರ್ಥವನ್ನು ಹುಡುಕಿ ಕಟ್ಟಬೇಕೆಂದು ಆತ ಮಾಡಿದ ಪ್ರತಿಜ್ಞೆ ಅಲ್ಲೇ ಪಕ್ಕದ ಚರಂಡಿ ಪಾಲಾದಳು. ಮೈಮುರಿಯುತ್ತ ಎದ್ದು ಮನೆಯ ಹಾದಿ ಹಿಡಿದು ನಡೆದ ಆತ.

ಹೀಗೆ ಅಮಲು ಇಳಿದಿತ್ತು. ಪ್ರೀತಿ ಅಳಿದಿತ್ತು. ತಿಂಗಳ ಬೆಳಕಿನ ಜತೆ ಹಾರಿ ಬಂದು ಮೊಬೈಲಿನಲ್ಲಿ ಕುಳಿತಿದ್ದ ಮೆಸೇಜು, ನಿಶೆನಶೆಯರು ಹುಟ್ಟಿಸಿದ ಪ್ರೀತಿ ಉಷೆಗೆ ಹೆದರಿ ಕಾಣೆಯಾಗಿದ್ದು ಕಂಡು ಸದ್ದಿಲ್ಲದೆ ನಗುತ್ತಿತ್ತು.

4 comments:

PRAVINA KUMAR.S said...

ನಿಶೆ,ನಶೆ, ಉಷೆ, ಅಲ್ಲಿನ ಪ್ರೀತಿಕಾರ, ಅವನ ಎಸ್ಸೆಮ್ಮೆಸ್ ಎಲ್ಲವೂ ಚೆನ್ನಾಗಿದೆ.

ಅನಿಕೇತನ said...

ಝೆನ್ ಕಾವ್ಯದಂತೆ..
ಕಂಡೂ ಕಾಣದಂತೆ
ಶಬ್ದಗಳ ಹೂಗೊಂಚಲಲಿ
ಅರ್ಥ ಹುಡುಕುತಿರಲು
ಹೂವುಗಳು ರೆಕ್ಕೆ ಬಂದಂತೆ
ಹಾರಿ ಹೋಗಲು
ಸಿಕ್ಕ ಚಿತ್ರ
ವಿಭ್ಭಿನ್ನ...
ನೂತನ.....

In simple terms ... ಚೆನ್ನಾಗಿದೆ !

ಸ್ವಗತ.... said...

'ತಿಂಗಳ ಬೆಳಕು, ತಂಪು ಗಾಳಿ, ರಾತ್ರಿಯ ಅಮಲು ಹುಟ್ಟಿಸುವ ಮ್ಯಾಜಿಕ್, ಬೆಳಗಿನ ಸೂರ್ಯ ಹುಟ್ಟಿದಾಗ ನಿಜದ ಬಿಸಿಲಿಗೆ ಕರಗಿಹೋಗುತ್ತೆ... ಎಲ್ಲೋ ಒಂದು ಸ್ವರ ಮನಸನ್ನ ಮಿಡಿಯುತ್ತೆ... ಇನ್ನೆಲ್ಲೋ ಒಂದು ಮುಖ ಕನಸಾಗಿ ಕಾಡುತ್ತೆ... ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ... - - - - ಈ ಸಾಲುಗಳನ್ನ ನಾನು ಎತ್ತಿಕೊಂಡಿದ್ದೇನೆ. ಅನುಮತಿ ಇಲ್ಲದೆ ಎತ್ತಿಕೊಂಡಿದ್ದೇನೆ, ಚೆನ್ನಾಗಿದೆ ಅಂತ ಸ್ಪೆಷಲ್ ಆಗಿ ಹೇಳಬೇಕಿಲ್ಲ ತಾನೆ. ನೀವೇ ಕಲ್ಪಿಸಿಕೊಂಡು ಬರೆದ ಸಾಲುಗಳು ವಿಚಾರ ಮಾಡಲು ದೂಡುತ್ತವೆ. ದೋಣಿ ಸಾಗಲಿ. ನಾನು ಕದ್ದುಕೊಂಡ ನಿಮ್ಮ ಸಾಲುಗಳಿಗೆ ಧನ್ನ್ಯವಾದಗಳು.

Rohini Joshi said...

ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ... - - -

Tumba satyavaada maatugaLu