ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು, ಬಣ್ಣ ಹಚ್ಚುವುದೇ ಕೆಲಸವಾಗಿರುವಾಗ? ಕಥೆ ಹೇಳುವವರಿಗೆ ಎಲ್ಲಾದರೇನು, ಕೇಳಲು ಜನವಿದ್ದರಾಯಿತು. ಬದುಕಿಗದ್ದಿದ ಮನಸಿನ ಕುಂಚ ತನಗೆ ಸಿಕ್ಕ ಕ್ಯಾನ್ವಾಸಿನಲ್ಲಿ ಬಣ್ಣ ತುಂಬಹೊರಟಿದೆ, ಮತ್ತೆ ತನಗೆ ಬೇಕಾದ ಕ್ಯಾನ್ವಾಸು ಮನಸಿಗೆ ಸಿಗುವ ತನಕ ಕನಸು ರೆಕ್ಕೆ ಮುಚ್ಚಿರುತ್ತದೆ, ಬ್ಲಾಗು ತಣ್ಣಗಿರುತ್ತದೆ.
ತಾನೇ ಕಥೆಯಾಗಹೊರಟ ಬದುಕಿಗೆ ಕಥೆ ಬರೆಯುವ ಹುಚ್ಚು... ಇನ್ನೊಬ್ಬರ ಕಥೆಯಾಳಕ್ಕಿಳಿಯುವ ಹುಚ್ಚು. ಹಾಗೆ ನೋಡಿದರೆ ಬದುಕೇ ದೊಡ್ಡ ಕ್ಯಾನ್ವಾಸು... ಇದರಲ್ಲಿ ಬ್ಲಾಗ್ ಪ್ರಪಂಚ ಬಿಡಿಸಿದ ಚಿತ್ರಗಳು ಹಲವು, ನೀಡಿದ ನೋಟಗಳು ನೂರು, ಪರಿಚಯವಾದ ಸಹಪಯಣಿಗರು ಹಲವರು. ಕಲ್ಪನೆಯ ಲೋಕದಲ್ಲಿ ಗರಿಬಿಚ್ಚಿ ಹಾರುವಾಗ ಹಕ್ಕಿ, ಕನಸು, ಚಂದ್ರ, ಬೇಸರ, ಮೆಸೇಜು, ನೆನಪು, ಕುಡುಕ, ಕರಿಪರದೆ, ಚಿನ್ನು, ಮೀನು ಇತ್ಯಾದಿ ಜೀವತಾಳಿದ್ದವು.. ಅಲ್ಲೊಂದು ಇಲ್ಲೊಂದು ಹನಿಗಳು, ಹರಟೆಗಳು ಹುಟ್ಟಿಕೊಂಡಿದ್ದವು.
ರಶೀದ್ ಅಂಕಲ್-ರ ಟ್ರೇಡ್-ಮಾರ್ಕ್ ಪದ್ಯಚಿತ್ರಗಳು, ಜೋಗಿಯವರ ಅದ್ಭುತ ಕಥೆಗಳು, ಮಯ್ಯರ(ಭಾಗವತ್ರ) ಕುಂದಾಪ್ರ ಕನ್ನಡ ಕ್ಲಾಸು, ಸಿಂಧುವಿನ ಭಾವಯಾನದ ಬರಹಗಳು, ಹತ್ವಾರರ ಮಾಯಾಜಗತ್ತು, ತುಳಸೀವನ, ಕುಂಟಿನಿಯವರ ನಾಲ್ಕೇ ನಾಲ್ಕು ಸಾಲುಗಳು, ಸತೀಶರ ಎನ್ನಾರೈ ಕನ್ನಡಿಗನ ಮನದಾಳದ ಹಲುಬುಗಳು, ಈಗಷ್ಟೆ ಮತ್ತೆ ಚಿಗುರಿಕೊಂಡ ಇಸ್ಮಾಯಿಲ್, ನಾಡಿಗ್ ಮತ್ತು ಪಿಚ್ಚರ್ ಬ್ಲಾಗ್ಸ್ ಮತ್ತು ಹಲವಾರು ಬ್ಲಾಗರ್ಸ್ ಬರೆಯುವ ನೂರಾರು ಭರವಸೆ ಮೂಡಿಸುವ ಬರಹಗಳು - ಎಲ್ಲಾ ಇಷ್ಟಪಟ್ಟು ಓದುತ್ತಿದ್ದೆ, ಎಲ್ಲಾದರಿಂದಲೂ ಸ್ವಲ್ಪ ಸಮಯ ನಾನು ದೂರ.
ಮತ್ತೆ ಸಮಯ ಸಿಕ್ಕಾಗ, ಕನಸು ಕರೆದಾಗ, ಕಲ್ಪನೆ ಪದಗಳಲ್ಲಿ ಗೂಡುಕಟ್ಟಿಕೊಳ್ಳುತ್ತ ಕಾಯುವಾಗ, ಇಲ್ಲಿ ಬರುವೆ, ಮನಸಿನ ಮಾತುಗಳನ್ನು ಹಂಚಿಕೊಳ್ಳಲು. ಅಲ್ಲೀತನಕ ನನ್ನ ಕೊರೆತಪುರಾಣದಿಂದ ಮುಕ್ತಿ ಸಿಕ್ಕಿತೆಂದು, ಒಂದು ಬ್ಲಾಗು ಓದುವ ಕಷ್ಟ ಕಡಿಮೆಯಾಯಿತೆಂದು ಖುಷಿ ಪಡಿ :) ಆಮೇಲೆ ಇದ್ದೇ ಇದೆ!!!
11 comments:
ಟೆರೇಸೆ ಇಲ್ಲದ ಮನೆಯ ಅನುಭವವಾಗುತ್ತಿದೆ ಮತ್ತು ಕಷ್ಟಪಟ್ಟು ಟೆರೇಸ್ ಹುಡುಕಿ ಹತ್ತಿ ಹೋದರೆ ಚಂದ್ರನಿಲ್ಲ..
ನೀವಿಲ್ಲದೆ ಬ್ಲಾಗಿಲ್ಲ, ಬ್ಲಾಗಲು ಮನಸಿಲ್ಲ ಎನ್ನುವುದೆಲ್ಲ ಕ್ಲೀಷೆ.. ಆದರೆ ಬೇಸರದ ಬೆಳಗಿದು.. ಎಂದು ಮುಗಿಯುವುದೋ..
ಅಗಲುವಿಕೆ
ತರುವುದು ನೋವ
ತಾತ್ಕಾಲಿಕ
ಆದರೂ ಸಹ ...
ಕಾಯುವಿಕೆ,
ಸದಾ ಇರಲು
ಬರಹ ಮೂಡಿಸಲು
ತಾವು ತಯಾರು ಇರಲು
ಮುಂದೊಮ್ಮೆ ಸಿಗೋಣ
ಅಂಥ ದೂರವಾದರೂ
ನಾನು ( ಬ್ಲಾಗಕಟ್ಟೇ ) ಬಂದು
ಹೋಗುವವರಿಗೆ ಹಳೆಯ
ನೆನಪು ಮೆಲಕು ಹಾಕಿಸುವದಂತೂ
ನಿಜ
- ' ಮನಸ್ಸು ಮಾತಾಡ್ತಿದೆ ' ಬ್ಲಾಗಕಟ್ಟೆ ಉವಾಚ !
ಯಾಕೋ ಕಷ್ಟ ಅನ್ನಿಸ್ತಿದೆ.. .. .. ..:(
ಎಲ್ಲಾ ಮುಂಗಾರು ಮಳೆಯ ಹನಿಗಳ ಲೀಲೆ..? ;(
ಬ್ಲಾಗಿಲುಗಳು ಒಂದೊಂದಾಗಿ ಅರ್ಧ ಅಥವಾ ಪೂರ್ತಿ ಮುಚ್ಚುತ್ತಿರುವುದು ಬೇಸರದ ಸಂಗತಿ. ಕನ್ನಡಿಗರು ಆತಿಥ್ಯಹೀನರಾದರೆ? ಬೇಡ. ಆದಷ್ಟು ಬೇಗ ಬನ್ನಿ, ನೂರಾರುಕನಸುಗಳನ್ನು ಮತ್ತೆ ಕಟ್ಟಿಕೊಡಿ ಎಂಬ ಆಶಯ ಮತ್ತು ಶುಭಹಾರೈಕೆಯೊಂದಿಗೆ ಈ ಬೀಳ್ಕೊಡುಗೆ.
yaarkri yenaythu ?
It hurts to know that you are takinga break. I wish you all the best for your work.
Come back soon.
ಜಾಲದ ಜಗಲಿಯಲ್ಲಿ ಮಾತಾಡುವ ಮೂಲಕ ಹೃದಯಕ್ಕೆ ಹತ್ತಿರವಾಗಿದ್ದ ಗೆಳೆಯರೆಲ್ಲಾ ಮುನಿದು ದೂರಾಗಿ, ನೋವುಂಟು ಮಾಡುತ್ತಿದ್ದೀರಿ ಯಾಕೆ? ಕೆಲವು ದಿನಗಳ ಹಿಂದೆ ತುಂತುರು ಹನಿ ಮಾಯ, ಈಗ ಮನಸೇ ಮಾತಾಡದಾಗಿದೆ :(
ಯಾವುದರಲ್ಲೋ ವ್ಯಸ್ತವಾಗಿರುವಂತಿದೆ ತಾವು. ಒಳ್ಳೆಯದಾಗಲಿ.
ಆದಷ್ಟು ಬೇಗ ಮರಳಿ ಮಾತನಾಡುವಿರೆಂಬ ಆಶಯ.
ಇವೆಲ್ಲಾ ಬ್ಯಾಡಾ, ಸುಮ್ನೆ ಬರೆದು ಪಬ್ಲಿಷ್ ಮಾಡಿ ಇಲ್ಲಾಂತಂದ್ರೆ ನಮ್ ಮೇಷ್ಟ್ರುನ್ನ ನಿಮ್ ಮೇಲೆ ಛೂ ಬಿಡಬೇಕಾಗುತ್ತೆ ನೋಡಿ! :-)
Enri? yaake Enoo bareetillaa? adu hEge sumnirteerO naavoo nODteevi:))
ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೆ ಏನು ಎಂದು ಹೇಳುತ್ತಿರುವಿರಿ, ಆದರೆ ಅದು ಅಷ್ಟು ಸುಲಭದ್ದೇ? ಮುದ್ದಿಸಲು ಯಾರ ಮನೆಯ ಕೂಸಾದರೇನು ಎನ್ನುವಾಗಲೂ ನಮ್ಮದೇ ಒಂದು ಕೂಸು ಇದ್ದರೆ ಎಷ್ಟು ಚೆಂದ ಎಂಬ ಭಾವ ಕಾಡುವುದಿಲ್ಲವೇ?
ಆ ಭಾವ ನಿಮ್ಮನ್ನು ಕಾಡಲಿ ಹಾಗೂ ಮನಸ್ಸನ್ನು ಮಾತಾಡಿಸಲು ಕೂಡಿಸಲಿ ಎಂಬ ಹಾರೈಕೆಯೊಂದಿಗೆ..
Post a Comment