Sunday, March 23, 2008

ನೀವೇನಂತೀರಾ?

ಬ್ಲಾಗರ್ಸ್ ಮೀಟು ಕಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಮಾತಾಡಿದ ಹೆಚ್ಚಿನವರು ಹೇಳಿದ್ದು, ಬ್ಲಾಗುಗಳು ಭಾವನೆಗಳ ತೀರದಿಂದಾಚೆಗೆ ಕಾಲಿಟ್ಟು ಗಂಭೀರ ವಿಚಾರಗಳ ಕುರಿತು ಮಾತಾಡಬೇಕು, ಮಾಹಿತಿ ನೀಡುವಂತಹ ಬರಹಗಳು ಹೆಚ್ಚಬೇಕು ಅಂತ. ಈ ಹಿನ್ನೆಲೆಯಲ್ಲಿ ಈ ಬರಹ.

++++++++++

ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಹತ್ತಿರ ಹತ್ತಿರ ಎರಡು ವರ್ಷಗಳಾಯಿತು. ನನಗೆ ಅನಿಸಿದ ಗಂಭೀರ ವಿಚಾರಗಳನ್ನು ಮಾತ್ರ ಬ್ಲಾಗಿನಲ್ಲಿ ಬರೆಯುತ್ತಿದ್ದೆ. ಆಗ ನನಗೆ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪು ಮಾಡಬಹುದು ಎಂದಾಗಲೀ, ಕನ್ನಡ ಬ್ಲಾಗರುಗಳ ಸಮುದಾಯವೊಂದು ರೂಪುಗೊಳ್ಳುತ್ತಿರುವುದಾಗಲೀ ಯಾವುದೂ ತಿಳಿದಿರಲಿಲ್ಲ. ನನ್ನ ಬರಹಗಳಿಗೆ ಸಿಗುತ್ತಿದ್ದ ಓದುಗರು ಮತ್ತು ಪ್ರೋತ್ಸಾಹ ಅಷ್ಟೇನಿರಲಿಲ್ಲ. ಬರೆಯಲೇಬೇಕು ಅನಿಸಿದಾಗ ಮಾತ್ರ ಮನಸಿಟ್ಟು ಬರೆಯುತ್ತಿದ್ದೆ.

ಒಂದು ಸಲ ಏನೂ ಬರೆಯದೆಯೇ ತಿಂಗಳುಗಟ್ಟಲೆ ಕಾಲ ಬ್ಲಾಗು ತೆಪ್ಪಗಿತ್ತು. ಹಾಗಿದ್ದಾಗ ರಾಧಾಕೃಷ್ಣ ನನಗೆ ಸಿಂಧು ಮತ್ತು ಶ್ರೀಮಾತಾರ ಬ್ಲಾಗುಗಳನ್ನು ತೋರಿಸಿದ. ಹಲವು ದಿನ ಅವುಗಳನ್ನು ನೋಡಿದೆ. ಅವುಗಳಲ್ಲಿದ್ದ ಲಿಂಕುಗಳಿಂದ ಇನ್ನಿತರ ಹಲವಾರು ಬ್ಲಾಗುಗಳಿಗೆ ಹೋದೆ. ಹೊಸ ಲೋಕವಿತ್ತು ಅಲ್ಲಿ. ಕೊನೆಗೆ ನಾನೂ ಕನ್ನಡ ಕುಟ್ಟುವುದು ಹೇಗೆ ಅಂತ ತಿಳಿದುಕೊಂಡೆ, ಹಲವರಿಗೆ ಅನಿಸಿದ್ದನ್ನು ಕಮೆಂಟು ಮಾಡಿ ಕುಟ್ಟಿದೆ. ನಾನು ಕನ್ನಡ ಕಲಿತಿದ್ದನ್ನು ಜಗತ್ತಿಗೆ ತಿಳಿಸಲಿಕ್ಕಾಗಿ ಮನಸು ಮಾತಾಡ್ತಿದೆ ಅಂತ ಶುರು ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಒಂದು ದಿನ ಕುಳಿತು ನನ್ನ ಹಳೆಯ ಬ್ಲಾಗು ನೋಡಿದರೆ ಅದರಲ್ಲಿ ನನಗೆ ಬರುವ ಹರಕು ಮುರುಕು ಇಂಗ್ಲಿಷಿನಲ್ಲಿ ಬರೆದ, ನಾನು ಇಂಟರ್-ನೆಟ್ಟಿಗಾಗಿ ಟಾಟಾ ಇಂಡಿಕಾಂ ಮೊರೆಹೋಗಿ ಪಟ್ಟ ಕಷ್ಟಕೋಟಲೆಗಳಿಂದ ಹಿಡಿದು, ರೇಡಿಯೋ-ಟಿವಿ ಜಾಹೀರಾತು ಜಗತ್ತಿನ ಕುರಿತು, ನನ್ನ ಮನೆಯೆದುರು ದಿನಾ ಬರುವ ಮಾಟ ತೆಗೆಯುವವಳ ವರೆಗೆ ಒಂದಿಷ್ಟು ವಿಚಾರಗಳ ಕುರಿತು ಬರಹಗಳಿದ್ದವು. ಅವೆಲ್ಲವೂ ನನಗೆ ಆಗ ಮುಖ್ಯವಾಹಿನಿಯಲ್ಲಿದ್ದ ಬ್ಲಾಗುಗಳಿಗಿಂತ ತುಂಬಾ ಭಿನ್ನವಾಗಿಯೂ ಜಗತ್ತಿನ ಕಷ್ಟಗಳನ್ನೆಲ್ಲಾ ನಾನೊಬ್ಬಳೇ ತಲೆಮೇಲೆ ಹೊತ್ತಿದ್ದೇನೆ ಅನ್ನುವಂತಹ ಭಾವನೆ ಬರುವಂತಹವಾಗಿಯೂ ಕಾಣತೊಡಗಿದವು. ಬಹುಶ: ಇವೆಲ್ಲ ಬ್ಲಾಗಿನಲ್ಲಿ ಹೇಳಿಕೊಳ್ಳುವಂತಹವಲ್ಲ ಅನಿಸಿತು. ಸರಿ, ನಿರ್ದಾಕ್ಷಿಣ್ಯವಾಗಿ ಆ ಬ್ಲಾಗ್ ಡಿಲೀಟ್ ಮಾಡಿದೆ. ಅದಕ್ಕೆ ರೆಗ್ಯುಲರ್ ಆಗಿ ಬಂದು ಓದಿ ಹೋಗುತ್ತಿದ್ದಿದ್ದು ಭಾಗವತರು ಮಾತ್ರ ಅಂತ ನೆನಪು. ನಾನು ಮಾತ್ರ ನನಗೆ ಗೊತ್ತಿರುವುದನ್ನು ನಾನು ಬರೆದು ಕಡಿದು ಕಟ್ಟೆ ಹಾಕುವುದು ಏನೂ ಇಲ್ಲವೆಂದುಕೊಂಡೆ.

++++++++++

ಈಗ ಅನಿಸುತ್ತಿದೆ, ಬಹುಶ ಆ ಕಾಲಕ್ಕೆ ಟ್ರೆಂಡ್ ಹಾಗೆ ಇತ್ತು ಅಂತ. ಆದರೆ ಈ ಕಾಲದಲ್ಲಿ ಮಾಹಿತಿಯುಕ್ತ ಅಥವಾ ಯೋಚನೆಗೆ ಹಚ್ಚುವ ಬರಹಗಳಿಗೆ ಪ್ರೋತ್ಸಾಹ ಇದೆಯೇನೋ ಅಂತ ಮೊನ್ನೆ ಮೊನ್ನೆ ಟೀನಾ, ಚೇತನಾ ಬ್ಲಾಗುಗಳಲ್ಲಿ ವಿಹರಿಸುತ್ತಿದ್ದಾಗ ಅನಿಸಿತು. ಏನು ಮಾಡಬಹುದು? ಅಂತ ಟೀನಾ ಕೇಳಿಕೊಂಡಿದ್ದಾರೆ. ಮಹಿಳಾದಿನ ಮತ್ತು ಅಮೃತಾಳ ಬಗೆಗೆ ಚೇತನಾ ಬರೆದಿದ್ದು ಕೂಡ ಎಲ್ಲರನ್ನೂ ಯೋಚನೆಗೆ ಹಚ್ಚುವ ವಿಷಯವನ್ನೇ.

++++++++++

ನಿಜಕ್ಕೂ ಬ್ಲಾಗಿಂಗ್-ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ, ಇನ್ನೂ ಏನೇನೋ ಆಗಬೇಕಿದೆ. ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ, ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು. ಮಾಹಿತಿ ನೀಡುವ, ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ.

ಆದರೆ, ಯಾವುದೇ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳು ಹೆಚ್ಚಬೇಕಿದೆ. ಇದು ಸಾಧ್ಯವಾಗುವುದು ಸಂಖ್ಯೆಯಲ್ಲಿ ೩೫೦ಕ್ಕೂ ಹೆಚ್ಚಿರುವ ಬ್ಲಾಗರುಗಳ, ಮತ್ತು ಕಮೆಂಟು ಹಾಕಿ ಚರ್ಚಿಸುವ, ಪ್ರೋತ್ಸಾಹಿಸುವ, ಅಥವಾ ಭೇಟಿಕೊಟ್ಟು ಓದುವ- ಆದರೆ ಏನೂ ಹೇಳಲು ಇಷ್ಟ ಪಡದ ಇನ್ನೆಷ್ಟೋ ಅಂತರ್ಜಾಲಿ ಕನ್ನಡಿಗರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಅದು ಆಗಬೇಕಿದೆ.

++++++++++

ಇಷ್ಟು ಮಾತ್ರವಲ್ಲ. ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು. ಬರಹಗಾರ ಅಥವಾ ಬರಹಗಾರ್ತಿಯ ಹೆಸರಿನ ಮೇಲೆ ಬರಹವನ್ನು ಅಳೆಯುವುದು ತಪ್ಪು ಅಂತ ಹೇಳ್ತಿಲ್ಲ ನಾನು, ಆದ್ರೆ ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ.

++++++++++

ಕನ್ನಡ ಬ್ಲಾಗುಗಳ ಸಂಖ್ಯೆ ೩೫೦ ದಾಟಿದೆ ಅಂತ ಮೊನ್ನೆ ಸುಶ್ರುತ ಮಾಡಿದ ಪಟ್ಟಿ ನೋಡುವಾಗ ತಿಳಿಯಿತು. ಆ ಪಟ್ಟಿಯಿಂದಲೂ ಅನೇಕ ಬ್ಲಾಗುಗಳು ಮಿಸ್ ಆಗಿವೆ. ಅವುಗಳಲ್ಲಿ ಮುಕ್ಕಾಲುಪಾಲು ನಾನು ನೋಡೇ ಇರಲಿಲ್ಲ, ಅಷ್ಟು ಅಗಾಧವಾಗಿ ಇಂದು ಕನ್ನಡದಲ್ಲಿ ಬ್ಲಾಗಿಂಗ್ ಬೆಳೆದಿದೆ. ಇಷ್ಟು ಜನರಲ್ಲಿ ಅರ್ಧ ಸೇರ್ಕೊಂಡ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಬಹುದಲ್ವಾ? ಕಥೆ-ಕವನ ಬರೆಯುವುದು ಒಳ್ಳೆಯದು ಅನ್ನುವುದು ನಿಜ. ಆದರೆ ಬರೀ ಬರೆಯುತ್ತಾ ಕೂತರೆ ಅದು ಥಿಯರಿಯ ಹಂತದಲ್ಲಿಯೇ ಕೊನೆಯಾಗುವ ಅಪಾಯ ಇದೆಯೇನೋ ಅಂತ ಇತ್ತೀಚೆಗೆ ನಂಗೆ ಅನಿಸ್ತಿದೆ... ಬರಹಕ್ಕೆ ಉದ್ದೇಶ ಇರಬೇಕೆ ಇರಬೇಡವೆ ಅಂತ ನನ್ನಲ್ಲೇ ಲೆಕ್ಕಾಚಾರ ಶುರುವಾಗಿದೆ! ನೀವೇನಂತೀರಾ?

8 comments:

chetana said...

ನನ್ನ ಬ್ಲಾಗಿನಲ್ಲಿ ನಿಮ್ಮ ಲಿಂಕು ಇಣುಕಿತ್ತು. ಅದರ ಎಳೆ ಹಿಡಿದು ಬಂದೆ. ಬ್ಲಾಗ್ ಚೆನ್ನಾಗಿದೆ. ಪ್ರಾಮಾಣಿಕವಾಗಿ, ಇವತ್ತೇ ಮೊದಲ ಎಂಟ್ರಿ ನನ್ನದು.
ನೀವು ಈ ಬರಹದಲ್ಲಿ ಹೇಳಿರುವ ವಿಷಯಗಳು ಸಮ್ಮತ್ವಾಗಿವೆ. ನಿಜ. ಬರಹಕ್ಕೆ ಉದ್ದೇಶವಿರಬೇಕೇ ಬೇಡವೇ, ಅದು ಕೇವಲ ಮನರೆಅಂಜನೆಗೆ ಸೀಮಿತವಾಗಬೇಕೆ? ಮನರಂಜನೆಯೂ ಉದ್ದೇಶವಲ್ಲವೇ- ಹೀಗೆಲ್ಲ ತಲೆ ಕೆಡಿಸಿಕೊಂಡಿದ್ದೆ ನಾನು ಕೂಡ.
ಆದರೆ ಇತ್ತೀಚೆಗೆ ನಮಗೇ ಗೊತ್ತಿಲ್ಲದ ಹಾಗೆ ಬರಹದ ಪ್ರೀತಿಯ ನದುವೆಯೂ ಚರ್ಚೆಗೆ ಆಹಾರವಾಗುವ, ಚಿಂತನೆಗೆ ಪ್ರೇರೇಪಿಸುವ ಲೇಖನಗಳು ಬ್ಲಾಗ್ ಅಂಗಳದಲ್ಲಿ ಕಾಣಿಸ್ಕೊಳ್ತಿವೆ.
ಸಿಟಿಜನ್ ಜರ್ನಲಿಸಮ್ಮಿನ ಬಗ್ಗೆ ಬೆಳಗ್ಗೆ ಒಂದು ಲೇಖನ ಓದಿದೆ. ಮೊನ್ನೆ ಕನ್ನದ ಪ್ರಭದಲ್ಲಿ ಬಂದಿತ್ತು ಕೂಡ. ಬ್ಲಾಗರುಗಳು ಆ ಜವಾಬ್ದಾರಿಯನ್ನೂ ಹೊತ್ತರೆ ಕ್ರಾಂತಿಯ ದಿನ ದೂರವಿಲ್ಲ ಎನಿಸುತ್ತೆ ನಮ್ಗೆ.
- ಚೇತನಾ

ಸಂತೋಷಕುಮಾರ said...

"ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು"
ಇದಕ್ಕೆ ನನ್ನ ಸಹಮತವೂ ಇದೆ ಮತ್ತು ನಿನ್ನ ಬರಹಕ್ಕೆ ನಾನು, ನನ್ನ ಬರಹಕ್ಕೆ ನೀನು ಕಮೆಂಟಿಸು, ಅನ್ನುವ ಮನೋಭಾವ ದೂರವಾಗಬೇಕಿದೆ. ಅಂತೆಯೇ ನೀವು ಹೇಳಿದಂತೆ ಆದ್ರೆ "ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ".

Sree said...

ಶ್ರೀ(೨),:P
ಭಾವಲಹರಿ Vs ವಿಷಯಾಧಾರಿತ ಬ್ಲಾಗುಗಳು - ಈ ವಿಷ್ಯ ತುಂಬಾ ದಿನಗಳಿಂದ ಕೊರೀತಿದೆ...ನಂಗೆ ಅನ್ನಿಸೋದು ಸುಮ್ನೆ ಭಾವಗಳಲ್ಲಿ ಮುಳುಗೆದ್ದು ಕಳೆದುಹೋಗದೇ ಬೇರೆ ವಿಷಯಗಳ ಬಗ್ಗೆಯೂ ಬರೀಬೇಕು, ಬರೀಬಹುದು ಅನ್ನೋ ಸಾಧ್ಯತೆಯ ಅರಿವು, ಜವಾಬ್ದಾರಿ ಅರ್ಥಮಾಡಿಕೊಂಡ್ರೆ ಸಾಕು, ಕಥೆ-ಕವನ ನಿಲ್ಲಿಸೋ ಮಟ್ಟಿಗೆ ಹೋಗ್ಬೇಕಿಲ್ಲ ಅಂತ. ಎಲ್ಲರಿಗೂ ಎಲ್ಲ ಸಮಯದಲ್ಲೂ ಕಥೆ-ಕವನಗಳನ್ನಾಗ್ಲೀ ವಿಷಯಾಧಾರಿತ ಬರಹಗಳನ್ನಾಗ್ಲೀ ಬರೆಯೋಕೆ ಸಾಧ್ಯವಾಗಲ್ಲ ಅನ್ನಿಸುತ್ತೆ... ನೀವ್ ಹೇಳಿದ್ ಹಾಗೆ ಇತ್ತೀಚಿನವರೆಗೆ ನಾವೆಲ್ಲ ಒಂಥರಾ ಭಾವಲೋಕದ ಟ್ರೆಂಡಿಗೆ ಬಿದ್ದು ಬರೀತಿದ್ದದ್ದನ್ನ ಬಿಟ್ಟರೆ ಸಾಕೇನೋ. ಮತ್ತೆ ಎಲ್ಲಾ ಬರೀ ಘನಘೋರ ವಿಷಯಾಧಾರಿತ ಬರಹಗಳನ್ನಷ್ಟೇ ಬರೀತೀವಿ ಅಂತ ಇನ್ನೊಂದು ಟ್ರೆಂಡಿಗೆ ಸೀಮಿತಗೊಳಿಸಬೇಕಿಲ್ಲ ಅಲ್ಲ್ವಾ? ಚೇತನಾ, ಟೀನಾ - ಇವರೆಲ್ಲ ಈ ಬಗೆಯ ಬ್ಯಾಲೆನ್ಸ್ ಈಗಾಗಲೇ ಹುಡುಕಿಹೊರಟಿದ್ದಾರೆ. ಕಥೆ-ಕವನ ಬಿಟ್ಟೂ ಬೇರೆ ಹಲವು possibilities ಇವೆ, ಅದನ್ನ ಉಪಯೋಗಿಸಿಕೊಳ್ಳಬಹುದು ಅಂತ ಅರ್ಥವಾಗಿಬಿಟ್ರೆ ಸಾಕನ್ನಿಸುತ್ತೆ.
especially ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡು ಬೇರೆ ಬೇರೆ ಅನುಭವಗಳಿಗೆ ತೆರೆದುಕೊಂಡಿರುವ ನಾವೆಲ್ಲ ಆ ಎಲ್ಲ ಅನುಭವಗಳಿಗೆ ಕನ್ನಡದಲ್ಲಿ ಅಭಿವ್ಯಕ್ತಿ ನೀಡಿದರೆ ಕನ್ನಡ ಕಟ್ಟುವ ಕೆಲಸ ಎಷ್ಟು ಚೆನ್ನಾಗಿ ಆಗುತ್ತೆ ಅನ್ನಿಸುತ್ತೆ...ಇಂಥಾ possibility ಇದ್ದಾಗ್ಯೂ ಎಲ್ಲರೂ ನೆನಪು-ಕನಸುಗಳಲ್ಲೇ ತಿರುಗುತ್ತಿದ್ದರೆ ಬರೆಯೋದ್ರಿಂದ ನಮ್ಮ contribution ಆಗದೇ ಬರೇ ಒಂದ್ ಥರಾ ego satisfaction ಅಷ್ಟೆ ಆಗಿಹೋಗೋ ಸಾಧ್ಯತೆಗಳಿರತ್ವೆ

ನೀವು ಹೇಳಿರೋ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳ ಬಗೆಗಿನ್ ಮಾತು ತುಂಬಾ ಮುಖ್ಯ ಅನ್ನಿಸ್ತು.

ನೀವ್ ಎತ್ತಿರೋ ಇನ್ನೊಂದು ಪ್ರಶ್ನೆ ಬರೀ ಬರೆಯುತ್ತಾ ಕೂತ್ರೆ ಥಿಯರಿಯೇ ಆಗಿಹೋಗುತ್ತೇನೋ ಅನ್ನೋದು- ಇದು ತುಂಬಾ ದೊಡ್ಡ ಪ್ರಶ್ನೆ ಅನ್ನಿಸುತ್ತೆ... ಒಂದು - ಬರಹಕ್ಕೂ ಆ‍ಯ್‌ಕ್ಟಿವಿಸಮಿಗೂ ಇರುವ/ಇರಬೇಕಾದ ಸಂಬಂಧದ್ದು. ಇದು ಅವರವರ ವೈಯುಕ್ತಿಕ ಆಯ್ಕೆಗೆ ಬಿಟ್ಟದ್ದು ಅನ್ನಿಸುತ್ತೆ. ಅಲ್ಲದೇ ನಮ್ಮಲ್ಲೇ ಹಲವಾರು ಜನ ನಮ್ಮ ನಮ್ಮ ಕ್ಷೇತ್ರಗಳಲ್ಲಿ hands on ಕೆಲಸಗಳಲ್ಲಿ ತೊಡಗಿಸಿಕೊಂಡಿರೋದೂ ಇದೆ. ಇನ್ನು ಬರೆಯುವ ಕ್ರಿಯೆಯೇ ಎಷ್ಟು ಮುಖ್ಯ ಅನ್ನೋದು...ಕನ್ನಡದಲ್ಲಿ ಓದಿ-ಬರೆಯುವ, ಸಾಹಿತ್ಯವಲ್ಲದೇ ಇತರ ವಿಷಯಗಳಿಗೂ ಕನ್ನಡವನ್ನು ಒದಗಿಸುವ ಕೆಲ್ಸ ಯಾವ developmental activismಗೂ ಕಡಿಮೆಯದ್ದಲ್ಲ ಅನ್ನೋದು ನನ್ನ ಅನಿಸಿಕೆ. ಆದ್ರೆ ಇದನ್ನೂ ಸುಮ್ಮನೆ ಅನ್ನಿಸಿದಾಗ ಅನ್ನಿಸಿದಷ್ಟು ಕುಟ್ಟೋದು ಬಿಟ್ಟು ಈ ಜವಾಬ್ದಾರಿಯ ಅರಿವಿನಿಂದ ಬರೆದ್ರೆ ಅದು ಮುಂದೆ ದೊಡ್ಡ contribution ಆಗಬಹುದು...
ಉದ್ದೇಶ ಬೇಕು, ಆದ್ರೆ ಜೊತೆಗೆ propogandistಆಗಿ ಕಳೆದುಹೋಗೋ ಸಾಧ್ಯತೆಯ ಅರಿವೂ ಇರ್ಬೇಕೇನೋ... ಯಾಕೋ ನಿಮ್ಮ ಕೊನೆಯ ಪ್ಯಾರಾ ನನಗೆ ಸರಿಯಾಗಿ ಅರ್ಥವಾಗಿಲ್ಲವೇನೋ ಅನ್ನಿಸ್ತಿದೆ - ನನ್ನ ಪ್ರತಿಕ್ರಿಯೆಯಲ್ಲಿ ಹಾಗನ್ನಿಸ್ದ್ರೆ ಕ್ಷಮಿಸಿ, ಸ್ವಲ್ಪ ಎಕ್ಸ್‌ಪ್ಲೇನ್ ಮಾಡ್ಬಿಡಿ:p

ಬಾನಾಡಿ said...

ಬ್ಲಾಗ್ ಬರೆಯುವವರು ತಮ್ಮ ಮನಸನ್ನು ಅಂತರ್ಜಾಲದಲ್ಲಿ ತೆರೆದುಕೊಂಡಿರುವುದರಿಂದ ಕೆಲವೊಮ್ಮೆ ನಮಗೆ ಅವರ ಕುರಿತು ವಿಶೇಷ ಭಾವನೆಗಳು ಬರುತ್ತಿರಬಹುದು. ಅದು ನಿಜ ಬದುಕಿನಲ್ಲಿ ಸತ್ಯವಾಗಲಾರದು. ಅಥವಾ ಸತ್ಯವಾಗಲೂ ಬಹುದು.
ಬಾನಾಡಿ

Shree said...

ಚೇತನಾ, ಸ್ವಾಗತ, ಬರ್ತಾ ಇರಿ, ಸಾಧ್ಯವಾದಾಗೆಲ್ಲ ಬ್ಲಾಗ್ ಅಪ್-ಡೇಟ್ ಮಾಡ್ತೀನಿ.
ಸಂತೋಶ್, ಪ್ರಥಮ ಬಾರಿಗೆ ಇಲ್ಲಿ ಬಂದಿದೀರಿ ಅನ್ಸತ್ತೆ, ಸ್ವಾಗತ.
ಶ್ರೀಮಾತಾ, ಸಾಧ್ಯತೆಯ ಅರಿವು ಇರಬೇಕು, ಅದರಲ್ಲೇ ಕಳೆದು ಹೋಗುವುದು ಹೋಗದಿರುವುದು ಅವರವರ ವೈಯಕ್ತಿಕೆ ಆಯ್ಕೆಯೇನೊ,ಅಲ್ವ? ಹಾಗೆಯೇ, ಬರಹಕ್ಕೆ ಮತ್ತು activismಗೆ ಇರುವ ಸಂಬಂಧ ಸಂಕೀರ್ಣವಾದದ್ದು. ನಾನು ಬರಹಕ್ಕಿಂತ activismಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತೀನಿ :) ದೊಡ್ಡ ಮಟ್ಟದಲ್ಲಿ ಅಲ್ಲದೆ ಇದ್ರೂ, ನಮಗಿರುವ ಸ್ದ್ಪೇಸ್-ನಲ್ಲಿ ... ಸಾಧ್ಯವಾದಷ್ಟು...

ಬಾನಾಡಿ, ಅದಕ್ಕೆನೇ ಗಾದೆ ಮಾಡಿರೋದು, ದೂರದಬೆಟ್ಟ ನುಣ್ಣಗೆ ಅಂತ:)

ಅದ್ಸರಿ, ಹೆಚ್ಚಿನ ಸೆಲೆಬ್ರಿಟಿಗಳು ಒಟ್ಟಿಗೆನೇ ನನ್ ಬ್ಲಾಗಿಗೆ ದಾಳಿ ಇಟ್ಬಿಟ್ಟಿದೀರಾ, ಏನ್ಸಮಾಚಾರ? :)

MD said...

"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.

www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.


ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.


ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.

Rohit Ramachandraiah said...

ತಮ್ಮ ಮನವಿಯಂತೆ, kannadabala.blogspot.com ನ ಪಟ್ಟಿಯಲ್ಲಿ ತಮ್ಮ ಬ್ಲಾಗ್ ನ ಹೆಸರನ್ನು ಮನಸು ಮಾತಾಡ್ತಿದೆ....ದಿಂದ ನೂರು ಕನಸು ಎಂದು ಬದಲಿಸಿದ್ದೇನೆ.

ಧನ್ಯವಾದಗಳು.

Unknown said...

Good one.

Naveen
nbsorchid@yahoo.com