ಸತ್ಯ ಅಮೀಬದಂತೆ...
ಇಂದಿಗೊಂದು ಆಕಾರ
ನಾಳೆಗಿನ್ನೊಂದೇ ಆಕಾರ
ಈ ಕ್ಷಣಕ್ಕೆ ಸತ್ಯವಾಗಿದ್ದು
ಮುಂದಿನ ಕ್ಷಣಕ್ಕೆ ಸುಳ್ಳಾಗಬಹುದು
ನಾಳೆಯ ಸತ್ಯ
ಇಂದಿಗೆ ಸುಳ್ಳಾಗಬಹುದು
ಸತ್ಯ ವಿಶ್ವರೂಪಿ
ಸಾವಿರ ಮುಖಗಳ ಕಾಮರೂಪಿ
ಅವರವರ ಭಾವಕ್ಕೆ
ಅವರದೇ ಸತ್ಯಗಳು
ಭಾವ-ಬುದ್ಧಿಗೆ ನಿಲುಕದ
ಇನ್ನೆಷ್ಟೋ ಸತ್ಯಗಳು
ಶಾಶ್ವತ ಸತ್ಯಕ್ಕೆ ಅರಸಿದರೆ
ಎಲ್ಲವೂ ಶಾಶ್ವತವೆನಿಸಬಹುದು!
ಒಂದು ಸತ್ಯವ ಹುಡುಕಿ ಹೊರಟಾಗ
ದಾರಿಯಲಿ ನೂರಾರು ಸತ್ಯಗಳು
ಕೈಬೀಸಿ ಕರೆದಾವು!
ಹುಡುಕುವ ಸತ್ಯ ಮಾತ್ರ ಸಿಗದಾಗಬಹುದು...
ಸುಳ್ಳೆಂಬುದೇ ಇಲ್ಲವಾಗಿ
ಸರ್ವವೂ ಸತ್ಯವಾದೀತು...
ಸತ್ಯದ ಜಾಡು ಹುಡುಕಿ ಹೊರಟಲ್ಲಿ
ಹಾದಿ ಮರೆತು ಜಾಡು ತಪ್ಪಿ
ನಾವೇ ಕಳೆದುಹೋದೇವು!
ಅಷ್ಟೇನಾ?
ಹೀಗೂ ಆಗುವುದುಂಟು ಹುಡುಗೀ...
ಸತ್ಯಶೋಧನೆಗಾಗಿ
ಶಬ್ದಗಳ ಕತ್ತರಿಸಿ ಕತ್ತರಿಸಿ
ಅರ್ಥ ಹುಡುಕುತ್ತೇವೆ..
ಕ್ರಿಯೆಗಳ ಕತ್ತು ಕುಯ್ದು
ಅದರಲ್ಲೂ ಅರ್ಥ ಅರಸುತ್ತೇವೆ...
ಪ್ರತಿಕ್ರಿಯೆಗಳಿಗೆ ಕಾಯುತ್ತೇವೆ,
ಅದರಲ್ಲೂ ಅರ್ಥ ಕಾಣುತ್ತೇವೆ...
ಆದರೆ,
ಇಂದಿಗೆ ಅರ್ಥವಾಗಿದ್ದು
ನಾಳೆಗೆ ಬಿಡಿಸಲಾಗದ ಕಗ್ಗಂಟಾಗಿ
ಕಗ್ಗಂಟೇ ಪರಮಸತ್ಯವಾಗುವುದು -
ಸತ್ಯಕ್ಕೆ ಅರ್ಥ ಹುಡುಕಹೊರಟಾಗ
ನೂರೆಂಟು ಅರ್ಥಗಳು ಹೊಳೆದು
ಅಸಲಿ ಸತ್ಯವೆಲ್ಲೋ ಕಳೆದುಹೋಗುವುದು -
ಕಳೆದುಹೋದ ಸತ್ಯವ
ಮತ್ತೆ ಹುಡುಕಹೊರಟಾಗ
ಏನೇನೂ ಸಿಗದೆ
ಶೂನ್ಯವೇ ಪರಮಸತ್ಯವಾಗುವುದು!