ಸತ್ಯ ಅಮೀಬದಂತೆ...
ಇಂದಿಗೊಂದು ಆಕಾರ
ನಾಳೆಗಿನ್ನೊಂದೇ ಆಕಾರ
ಈ ಕ್ಷಣಕ್ಕೆ ಸತ್ಯವಾಗಿದ್ದು
ಮುಂದಿನ ಕ್ಷಣಕ್ಕೆ ಸುಳ್ಳಾಗಬಹುದು
ನಾಳೆಯ ಸತ್ಯ
ಇಂದಿಗೆ ಸುಳ್ಳಾಗಬಹುದು
ಸತ್ಯ ವಿಶ್ವರೂಪಿ
ಸಾವಿರ ಮುಖಗಳ ಕಾಮರೂಪಿ
ಅವರವರ ಭಾವಕ್ಕೆ
ಅವರದೇ ಸತ್ಯಗಳು
ಭಾವ-ಬುದ್ಧಿಗೆ ನಿಲುಕದ
ಇನ್ನೆಷ್ಟೋ ಸತ್ಯಗಳು
ಶಾಶ್ವತ ಸತ್ಯಕ್ಕೆ ಅರಸಿದರೆ
ಎಲ್ಲವೂ ಶಾಶ್ವತವೆನಿಸಬಹುದು!
ಒಂದು ಸತ್ಯವ ಹುಡುಕಿ ಹೊರಟಾಗ
ದಾರಿಯಲಿ ನೂರಾರು ಸತ್ಯಗಳು
ಕೈಬೀಸಿ ಕರೆದಾವು!
ಹುಡುಕುವ ಸತ್ಯ ಮಾತ್ರ ಸಿಗದಾಗಬಹುದು...
ಸುಳ್ಳೆಂಬುದೇ ಇಲ್ಲವಾಗಿ
ಸರ್ವವೂ ಸತ್ಯವಾದೀತು...
ಸತ್ಯದ ಜಾಡು ಹುಡುಕಿ ಹೊರಟಲ್ಲಿ
ಹಾದಿ ಮರೆತು ಜಾಡು ತಪ್ಪಿ
ನಾವೇ ಕಳೆದುಹೋದೇವು!
ಅಷ್ಟೇನಾ?
ಹೀಗೂ ಆಗುವುದುಂಟು ಹುಡುಗೀ...
ಸತ್ಯಶೋಧನೆಗಾಗಿ
ಶಬ್ದಗಳ ಕತ್ತರಿಸಿ ಕತ್ತರಿಸಿ
ಅರ್ಥ ಹುಡುಕುತ್ತೇವೆ..
ಕ್ರಿಯೆಗಳ ಕತ್ತು ಕುಯ್ದು
ಅದರಲ್ಲೂ ಅರ್ಥ ಅರಸುತ್ತೇವೆ...
ಪ್ರತಿಕ್ರಿಯೆಗಳಿಗೆ ಕಾಯುತ್ತೇವೆ,
ಅದರಲ್ಲೂ ಅರ್ಥ ಕಾಣುತ್ತೇವೆ...
ಆದರೆ,
ಇಂದಿಗೆ ಅರ್ಥವಾಗಿದ್ದು
ನಾಳೆಗೆ ಬಿಡಿಸಲಾಗದ ಕಗ್ಗಂಟಾಗಿ
ಕಗ್ಗಂಟೇ ಪರಮಸತ್ಯವಾಗುವುದು -
ಸತ್ಯಕ್ಕೆ ಅರ್ಥ ಹುಡುಕಹೊರಟಾಗ
ನೂರೆಂಟು ಅರ್ಥಗಳು ಹೊಳೆದು
ಅಸಲಿ ಸತ್ಯವೆಲ್ಲೋ ಕಳೆದುಹೋಗುವುದು -
ಕಳೆದುಹೋದ ಸತ್ಯವ
ಮತ್ತೆ ಹುಡುಕಹೊರಟಾಗ
ಏನೇನೂ ಸಿಗದೆ
ಶೂನ್ಯವೇ ಪರಮಸತ್ಯವಾಗುವುದು!
10 comments:
ಕವಿತೆಯ ಆಶಯ ಚೆನ್ನಾಗಿದೆ. ಆದರೆ ಕವಿತ್ವ ಇನ್ನೂ ಬೇಕಾಗಿತ್ತು. ಅನ್ನಿಸಿದ್ದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸಬೇಕು.
ಸುಂದರ ಕವನದ ಮೂಲಕ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ! ಶೂನ್ಯವೇ ಅಂತಿಮ ಸತ್ಯ. ಹಾಗೆ ನೋಡಿದರೆ ಸುಳ್ಳಿನ ತುಂಬೆಲ್ಲಾ ಸತ್ಯ.. ಸತ್ಯದ ತುಂಬೆಲ್ಲಾ ಸುಳ್ಳೇ ಸಿಗಲೂ ಬಹುದು ಅಲ್ಲವೇ?
ಈ ಕವಿತೆಗೆ ’ಕೆಟ್ಟ ಕವಿತೆ’ ಅಂತ ಲೇಬಲ್ ಕೊಟ್ಟಿದ್ದೀರಲ್ಲ ಅದು ಸುಳ್ಳಲ್ವ??
ಅಥವ ಅದು ಕ್ಷಣಿಕ ಸತ್ಯ ವಾ??
ಏನೋ ಅವರವರ ಭಾವಕ್ಕೆ ಅವರದೇ ಸತ್ಯಗಳು !
"ಸುಳ್ಳು ನಮ್ಮಲ್ಲಿಲ್ಲವಯ್ಯಾ,
ಸುಳ್ಳೇ ನಮ್ಮನಿ ದೇವರು"
-ಪುರಂದರದಾಸರು
:)
ಸತ್ಯ ಅಮೀಬದಂತೆ...
100% correct
sundara kaviteya moolaka.....satya darshanakke dhanyavaada.....
ಕಳೆದುಹೋದ ಸತ್ಯವ
ಮತ್ತೆ ಹುಡುಕಹೊರಟಾಗ
ಏನೇನೂ ಸಿಗದೆ
ಶೂನ್ಯವೇ ಪರಮಸತ್ಯವಾಗುವುದು!
ಅದ್ಭುತ...
ಶೂನ್ಯವೇ ಸತ್ಯವಾಗ ಹೊರಟ ಪರಿ ತುಂಬಾ ಚಂದ ಉಂಟು...
ಸುಂದರವಾಗಿದೆ...
ನೆನಪಾಗ್ತಾ ಇದೆ ಒಂದು ಈಶೊಪನಿಶದ ಶ್ಲೋಕ,
purnam adah purnam idam purnat purnam udachyate purnasya purnam adaya purnam evavashishyate
ನಿಮ್ಮ ಕವಿತೆ ಓದಿದ ಮೇಲೆ ಶೂನ್ಯವೂ ಪೂರ್ಣವೂ ಒಂದೇ ಏನೋ ಎಂಬ ಜಿಜ್ಞಾಸೆ ಮೂಡ್ತಾ ಇದೆ...!
-ಗಿರೀಶ್
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
Post a Comment