ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು... ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
----------
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು... ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ... ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ.... ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ... ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂತಹದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು... ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು... ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು... ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು... ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು... ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು... ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು... ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು... ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.
ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
-----------
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ... ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ... ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.
ಮಿಸ್ಟ್ರೆಸ್ ಆಫ್ ಸ್ಪೈಸಸ್... ಐಶ್ವರ್ಯಾ ಅಭಿನಯದ ಚಿತ್ರ. ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ... ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ... ತಾಕಲಾಟಗಳು... ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.
ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ... ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು... ಕಣ್ಣಿಗೆ ಕಾಣಿಸುವ ಬಣ್ಣಗಳು... ಮನಸನ್ನು ಕಾಡುವ ಬಣ್ಣಗಳು... ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ... ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
-----------
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು - ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.
ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.
ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ... ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ... ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿಕ್ಕಿಲ್ಲ. ಇದು ನನಗನಿಸಿದ್ದು.
------------
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ - ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.
7 comments:
ಒಳ್ಳೆಯ ವಿಶ್ಲೇಷಣೆ. ನಂಗೂ ಸಿನಿಮಾ ನೋಡಿಯಾದಕ್ಷಣ ’ಅದ್ಭುತ’ ಎನ್ನಿಸಿತಾದರೂ ನಂತರ ಬಹಳಷ್ಟು ಹೊತ್ತು ಯೋಚಿಸುವಂತೆ ಮಾಡಿತು. ಈ ಚಿತ್ರಕ್ಕೆ ಆಸ್ಕರ್ ಬಂದರೂ ಭಾರತೀಯನಾಗಿ ನಾನು ಸಂಭ್ರಮ ಪಡುವುದು ಸುಳ್ಳು. ಪಟ್ಟರೂ ಏನೋ ಒಂದು ಮುಳ್ಳು ಚುಚ್ಚುತ್ತಿರುತ್ತದೆ.
good one! innU nODilla filmu, nODteeni... cosmopolitan baduku ella kaDeyU hechchu kaDime ondE, vaividhya irOdu keLa-madhyama vargada badukinalli - nija, aadre international awards tappihOda neeve paTTi maaDiro chitragaLalli eshtu ee 'boring' cosmopolitan culturena suttha iddvu? oTTnalli yochiso vishya
ಶ್ರೀದೇವಿ,ವಿಶ್ಲೇಷಣೆ ಚೆನ್ನಾಗಿದೆ.
ಪ್ರಶಸ್ತಿ ಪಡೆಯೋದಕ್ಕೆ ಬೇಕಾಗುವ ಮಾನದಂಡಗಳು ಭಾರತೀಯ ಚಿತ್ರಗಳಲ್ಲಿ ಇದ್ದರೂ ಸಹ ಅವು notice ಆಗೋದೇ ಇಲ್ಲ. ಕಾರಣ again, cultural differences ಮತ್ತು ಒಟ್ಟು ಭಿನ್ನವಾದ ಮನಸ್ಥಿತಿಗಳು.
ಸ್ಲಂಡಾಗ್ ಮಿಲಿಯನೇರ್, ಬ್ರಿಟಿಶ್ ಚಿತ್ರ ಆಗಿರುವುದರಿಂದಲೇ ಇದು ಸಾಧ್ಯವಾಯ್ತು. what we are forgetting is that IT IS A BRITISH FILM and A BRITISH DIRECTOR. ಇದು ಭಾರತೀಯ ಚಿತ್ರವಾಗಿದ್ದಿದ್ದರೆ ಯಾರೂ ಅಲ್ಲಿ ಇದನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹಾಲಿವುಡ್ ಮತ್ತು ಜಾಗತಿಕ ಚಿತ್ರೋದ್ಯಮದ real fact ಇದು.
ಅಲ್ಲಿಗೆ ಹೋಗಿ ಬಂದವರೂ(ಅಮೀರ್,ಅಶುತೋಶ್, ಮೀರಾ,ದೀಪಾ,even ಶೇಖರ್ ಕಪೂರ್) ಈ ಸತ್ಯವನ್ನು ಅರಿತವರೇ.
ಚಿತ್ರ ಇನ್ನೂ ನೋಡಿಲ್ಲ ! ಆದ್ರೆ ರಹಮಾನ್ ಗೆ ಸಂಗೀತಕ್ಕೆ ಬಹುಮಾನ ದೊರೆತದ್ದರಿಂದ ಅವನು ಅದನ್ನು ಖಂಡಿತಾ ಸ್ವೀಕರಿಸಬಹುದು.
ಇನ್ನೂ ರಹಮಾನ್ ಸಂಗೀತವಷ್ಟೆ ನನಗೆ ಮುಖ್ಯ .ಅವನು ಲಂಡನ್ ನಲ್ಲಿ ಇರೋನು ಅವನ ಬಗ್ಗೆ ಏನು ಮಾತಾಡೋದು ಅಲ್ವ!
baraha ista aitu...
-----ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ------
ಇದ್ಯಾಕೋ ತಪ್ಪುತಿಳುವಳಿಕೆ ಅನ್ನಿಸಿತು.
ಬದುಕು ಯೂನಿವರ್ಸಲ್ ಆಗುವುದು, ಇಂಟರ್ನ್ಯಾಶನಲ್ ಆಗುವುದು, ಕಾರ್ಪೋರೆಟರೈಸ್ ಆಗುವುದು ಎಂದರೆ ಏನು. ನಾನು ಇಂಗ್ಲೀಷ್ ಗೆ ಕನ್ನಡ ಅರ್ಥ ಕೇಳುತ್ತಿಲ್ಲ. ಆದರೆ ವೆಸ್ಟರ್ನೈಸ್ ಆಗುವುದನ್ನು ಯೂನಿವರ್ಸಲ್ ಆಗುವುದು ಎಂದು ವಿಶ್ಲೇಷಿಸುತ್ತಿದ್ದೀರೇನೋ ಅಂತ ಕೇಳುತ್ತಿದ್ದೇನೆ.
ಗೋಲ್ಡನ್ ಗ್ಲೋಬು, ಆಸ್ಕರ್ ಗಳೇ ಪರಮಶ್ರೇಷ್ಠ ಎಂದು ಸಂಭ್ರಮಪಡುವುದೂ ಕೂಡ ಭಾರತೀಯರ ಕೀಳರಿಮೆಯ ಧ್ಯೋತಕ ಎಂದನಿಸುತ್ತದೆ.
Global warming isn't something people think about each day, nor do they see how it directly affects them. Your report could
provide your viewers with tangible evidence about global warming and will have more incentive to do something about it.
Here is how the report could work. You would show a global satellite image of the world. In order to maximize the effect of the
report, each report should go from the broad view to a specific one:
http://www.architectsban.webs.com as http://www.seekangroup.com Read more about Green eco architectural designs are reusable materials, green designs etc.. ..… Create an Eco friendly Green design… Save Earth.. http://www.interiordesignersbangalore.com/" as of natural materials http://www.interiordesignersinbangalore.com with almost modern concepts using A few quick ways to reduce your personal carbon footprint: employ eco-friendly methods of travel, eat, minimize use of plastic products and save electricity, water, paper and use of non-toxic alternatives http://www.architectsbangalore.com Carbon Footprint is a measure of the impact human activities have on the environment in terms of the amount of greenhouse gases produced, measured ternds
Post a Comment