Sunday, January 4, 2009

ಭ್ರಮೆಯ ಭೂತ ತೊಲಗಿದೆ...

ಮುಂದುವರಿದಿದೆ...


ಮುಂಬೈ ದಾಳಿಯ ಕುರಿತು ಓದುತ್ತ ಓದುತ್ತ ಅಂತರ್ಜಾಲದಲ್ಲಿ ಓಡಾಡುತ್ತಿರುವಾಗ ಎಲ್ಲೋ ಒಂದು ಕಡೆ ಮುಂಬೈ ದಾಳಿಯನ್ನು ಪಾರ್ಲಿಮೆಂಟ್ ದಾಳಿಗೆ ಹೋಲಿಸಿ ಬರೆದಿದ್ದಿದ್ದು, ಮತ್ತು ಅದಕ್ಕೆ ಅರುಂಧತಿ ರಾಯ್ ಲೇಖನದ ಸಹಾಯ ಕೂಡ ತೆಗೆದುಕೊಂಡಿದ್ದು ಕಾಣಿಸಿತು. ಅರುಂಧತಿ ರಾಯ್ (THE GREATER COMMON GOOD ಲೇಖನಕ್ಕಾಗಿ) ನಾ ಕಂಡ ಧೈರ್ಯವಂತ ಲೇಖಕಿಯರಲ್ಲೊಬ್ಬರು ಆಕೆ... ಗಮನವಿಟ್ಟು ಆಕೆಯ ಲೇಖನ ಓದಿದೆ... ಈಗಾಗಲೇ ಅರ್ಧ ಕೆಟ್ಟಿದ್ದ ತಲೆ, ಸಂಪೂರ್ಣ ಕೆಟ್ಟು ಹೋಯಿತು.

ಅಫ್ಝಲ್ ಗುರುಗೆ ಗಲ್ಲು ಯಾಕಿಲ್ಲ?

ಮುತಾಲಿಕ್ ಅಥವಾ ತೊಗಾಡಿಯಾ ಅಥವಾ ಇನ್ಯಾರೋ ಅಫ್ಝಲ್ ಗುರುವನ್ನು ಗಲ್ಲಿಗೇರಿಸದ ಸರಕಾರದ ಮೇಲೆ ಕೆಂಡಕಾರುವಾಗ ನಮಗೆಲ್ಲ ಹೌದುಹೌದೆನ್ನಿಸಿ ರಕ್ತ ಕುದಿಯುತ್ತದೆ. ಸುಳ್ಯಾಕೆ ಹೇಳಲಿ, ನನಗೂ ರಾಷ್ಟ್ರದ ಹೃದಯವನ್ನೇ ಆಕ್ರಮಿಸಿದ ಒಬ್ಬ ಅಪರಾಧಿಯನ್ನು ಗಲ್ಲಿಗೇರಿಸದಷ್ಟು ಹೀನಾಯವಾಗಿ ಹೋಯಿತಾ ನಮ್ಮ ದೇಶ ಅನಿಸಿ ಬೇಸರವಾಗಿತ್ತು. ನಮ್ಮಲ್ಲಿ ತುಂಬಾ ಜನ, ಅಫ್ಝಲ್ ಗುರು ಭಯೋತ್ಪಾದಕನೆಂದು ಸಾಧಿತವಾಗಿದೆ ಅಂತಲೇ ಅಂದುಕೊಂಡಿರುತ್ತೇವೆ, ಆದರೆ - ವಿಷಯ ಯಾವುದೇ ಇರಲಿ, ಅದನ್ನು ಮನಸ್ಸು ಮುಟ್ಟುವಂತೆ ಶಕ್ತಿಯುತವಾಗಿ ಬರೆಯುವುದು ರಾಯ್-ಗೆ ಚೆನ್ನಾಗಿ ಗೊತ್ತು ಅನ್ನುವುದು ನಿಜವಾದರೂ, ಅದರಲ್ಲಿರುವ ಸತ್ಯಗಳು ಸತ್ಯಗಳೇ ತಾನೇ. ಅರುಂಧತಿ ರಾಯ್ ಬರೆದುದು ಓದಿದಾಗ ನನ್ನ ಭ್ರಮೆ ಸ್ವಲ್ಪ ಮಟ್ಟಿಗೆ ತೊಲಗಿದ್ದಂತೂ ಸತ್ಯ. ನೀವೂ ಓದಿ ನೋಡಿ...

ಆಕೆ ಸೂಚಿಸಿರುವ ಪುಸ್ತಕ, Nirmalangshu Mukherji ಬರೆದಿರುವ December 13th: Terror Over Democracy ನಾನಿನ್ನೂ ಓದಬೇಕಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಿದರೆ ಅದನ್ನೂ ನೋಡಬೇಕಿದೆ. ಹಾಗೇ ಅಫ್ಝಲ್ ಗುರುವಿನ ಹೇಳಿಕೆ ಕೂಡ ನೋಡಬೇಕಿದೆ. ಆದರೆ ಮೇಲ್ನೋಟಕ್ಕೆ ಅನಿಸಿದ್ದು - ಇಂದಿಗೂ ಅಫ್ಝಲ್ ಗುರುವನ್ನು ಯಾರು ಕಳುಹಿಸಿದರು, ಯಾಕೆ ಕಳುಹಿಸಿದರು, ಎಂಬುದನ್ನು ನಮ್ಮ ವ್ಯವಸ್ಥೆ ಪತ್ತೆಹಚ್ಚಲು ಸಾಧ್ಯವಾಗದೆಯೇ ವಿಚಾರಣೆ ಮುಗಿದಿರುವುದು ನಮ್ಮ ದೇಶದ ದುರಂತ. ಸಿಪಿಸಿ 313ನೇ ವಿಭಾಗದಡಿ ಆತ ನೀಡಿದ ಹೇಳಿಕೆಯನ್ನು ಯಾಕೆ ಸುಪ್ರೀಂಕೋರ್ಟ್ ಪರಿಗಣಿಸಲಿಲ್ಲ ಎಂಬುದು ಕೂಡ ಉತ್ತರ ಸಿಗದ ಪ್ರಶ್ನೆ. (ಯಾರಾದರೂ ಕಾನೂನು ಬಲ್ಲವರು ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡಿದ್ದಲ್ಲಿ, ಅಥವಾ ಅರುಂಧತಿ ರಾಯ್ ಲೇಖನಕ್ಕೆ ಏನಾದರೂ ಪ್ರತಿವಾದಗಳು ಇದ್ದಲ್ಲಿ ತಿಳಿಸಿ, ನಾವೂ ತಿಳಿದುಕೊಳ್ಳುತ್ತೇವೆ...) ಇವೆಲ್ಲ ಗೊತ್ತಾಗದೆ ಏನೇ ಮಾಡಿದರೂ, ನಮ್ಮ ಕಡೆ ಮುಳ್ಳಿಟ್ಟು ಮದ್ದು ಉಜ್ಜುವುದು ಅಂತಾರಲ್ಲ, ಹಾಗಾಗುತ್ತದೆ - ಅಷ್ಟೆ.

ಕರ್ನಾಟಕದ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿದ, ಬಿಜೆಪಿಯೇ ಪರಿಹಾರ ಸಿರೀಸ್-ನ ಜಾಹೀರಾತುಗಳಲ್ಲಿ ಇನ್ನೂ ಅಫ್ಝಲ್ ಗುರುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿಲ್ಲದ ಕಾಂಗ್ರೆಸ್ ಸರಕಾರವನ್ನು ಹೀಗಳೆಯಲಾಗಿತ್ತು. ದೇಶದ ಯಾವುದೋ ಮೂಲೆಯಲ್ಲಿದ್ದುಕೊಂಡು ಮಾಹಿತಿಗೆ ಮಾಧ್ಯಮವನ್ನೇ ಅವಲಂಬಿಸುವ ನಮ್ಮ ಹಾಗೆಯೇ, ದೇಶದೆಲ್ಲೆಡೆ ಇರುವ ಬಿಜೆಪಿ ನಾಯಕರು ಕೂಡ ಅಫ್ಝಲ್ ಗುರುವಿನ TRIAL ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲವೋ ಏನೋ... ಅಥವಾ ಅಷ್ಟೊಂದು ಸೂಕ್ಷ್ಮವಾಗಿ ನೋಡುವ ಅವಶ್ಯಕತೆಯಿಲ್ಲ ಎನ್ನುವ ಅಸಡ್ಡೆಯೋ... ಅಥವಾ ಇನ್ನೇನೋ.... ?

ಅಷ್ಟು ಮಾತ್ರವಲ್ಲ. ಈಗ ಈ ಕೇಸ್ ಮೇಲೆ ಏನೇ ಹೇಳಿದರೂ ನ್ಯಾಯಾಂಗ ನಿಂದನೆಯಾಗುವ ಭಯಕ್ಕೆ ಸುಮ್ಮನಿದ್ದರೂ ಇರಬಹುದೇನೋ. ಹಾಗೇ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಸರಕಾರ ಮೀನ-ಮೇಷ ಎಣಿಸುತ್ತಿರುವುದಕ್ಕೆ ಆತನ ವಿಚಾರಣೆಯೇ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ಕಾರಣವಿರಬಹುದೇನೋ, ಆತನನ್ನು ಗಲ್ಲಿಗೇರಿಸಿದರೂ ಆತನ ಹಿಂದಿನ ಸೂತ್ರಧಾರಿಗಳು ಯಾರೆಂಬುದು ತಿಳಿಯುವುದಿಲ್ಲ ಎಂಬ ಸತ್ಯ ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರಕ್ಕೆ ಚುಚ್ಚುತ್ತಿರಬಹುದೇನೋ, ಅಂತ ನನಗನಿಸಿತು. (ಇದಕ್ಕೆ ಸರಬ್ಜಿತ್ ಕೂಡ ಕಾರಣ ಅನ್ನುವ ಹಳೆಯ ವಾದ ಕೂಡ ಇದೆ)

ಅರುಂಧತಿ ರಾಯ್ ಮಾತ್ರ ಇಂದಿಗೂ ತನ್ನ ಈ ಲೇಖನಕ್ಕಾಗಿ ನ್ಯಾಯಾಂಗ ನಿಂದನೆಯ ಆರೋಪ ಹೊತ್ತಿದ್ದಾರೆ. ಆಕೆ ನರ್ಮದಾ ಬಚಾವೋ ಆಂದೋಲನವನ್ನು ಬೆಂಬಲಿಸಿ ಬರೆದ, ನಿರ್ವಸಿತರಿಗೆ ಸರಿಯಾದ ವ್ಯವಸ್ಥೆಯಾಗಿರದಿದ್ದರೂ ಸರ್ದಾರ್ ಸರೋವರ್ ಅಣೆಕಟ್ಟಿನ ಎತ್ತರ ಹೆಚ್ಚಿಸಲು ಅನುಮತಿಯಿತ್ತ ಸುಪ್ರೀಂಕೋರ್ಟಿನ ತೀರ್ಮಾನವನ್ನು ಪ್ರಶ್ನಿಸಿದ THE GREATER COMMON GOOD ಕೂಡ ನ್ಯಾಯಾಂಗ ನಿಂದನೆಯ ಆರೋಪ ಎದುರಿಸಿತ್ತು.

ಒಂದಿಷ್ಟು ಸಂಶಯಗಳು...

ಇಷ್ಟೆಲ್ಲ ಬರೆದ ಮೇಲೆ, ನನಗೆ ಕೆಲವು ಸಂಶಯಗಳು ಉಳಿದಿವೆ, ಅವುಗಳನ್ನೂ ಹಂಚಿಕೊಂಡುಬಿಡುತ್ತೇನೆ... ಚುನಾವಣೆಯಲ್ಲಿ ಎರಡನೇ ಹಂತದ ಮತದಾನ - ಉತ್ತರಕರ್ನಾಟಕ ಮತ ಹಾಕುವ ಮೊದಲಿನ ಆದಿತ್ಯವಾರ ಹುಬ್ಬಳ್ಳಿ ಕೋರ್ಟಲ್ಲಿ ಕೂಡ ಸ್ಫೋಟ ಆಗಿತ್ತು. ಧಾರವಾಡದಲ್ಲಿ ಜೀವಂತ ಬಾಂಬುಗಳು ಸಿಕ್ಕಿದ್ದವು. ಇವೆಲ್ಲ ಯಾರ ಕೃತ್ಯ ಅಂತ ಇಲ್ಲಿವರೆಗೆ ಪತ್ತೆಯಾಗಿಲ್ಲ. ನಮ್ಮ ಬೆಂಗಳೂರಿನಲ್ಲಿ ಐದಾರು ನಾಟಿ ಬಾಂಬ್ ಸಿಡಿಸಿ ಒಬ್ಬರನ್ನು ಕೊಂದು ಡ್ರೈ ರನ್ ಮಾಡಿದ್ದು ಯಾರು ಅಂತ ಇಷ್ಟು ದಿನವಾದರೂ ಪತ್ತೆಯಾಗಿಲ್ಲ. ಸಾಕ್ಷ್ಯ ಸಿಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇರುವ ನಮ್ಮ ದೇಶದಲ್ಲಿ, ಮುಂಬೈ ಭಯೋತ್ಪಾದಕ ಕೃತ್ಯದ ಪ್ರತಿ ಸಾಕ್ಷ್ಯವೂ ಪಾಕ್ ಕಡೆ ನೇರವಾಗಿ ಬೆಟ್ಟುಮಾಡಿ ತೋರಿಸುತ್ತಿದೆ. ಮುಂಬೈಯ ಇಂಚಿಂಚು ತಿಳಿದುಕೊಂಡು ಅದ್ಭುತವಾಗಿ ಪ್ಲಾನ್ ಮಾಡಿ, ಜಿಪಿಎಸ್, ಸ್ಯಾಟಲೈಟ್ ಫೋನ್ ಇತ್ಯಾದಿ ಉಪಯೋಗಿಸಿಕೊಂಡು ಹೈಟೆಕ್ ವಿಧಾನದಲ್ಲಿ ಭಯೋತ್ಪಾದನೆಯ ಕೆಲಸ ಮಾಡಿಸುವ ಅಂತರ್ರಾಷ್ಟ್ರೀಯ ಉಗ್ರರು - ನಮ್ಮ ನಾಟಿ ಉಗ್ರರಿಗಿಂತ ದಡ್ಡರಾ? ಅದೂ ಸಿಕ್ಕಿಸಿಕ್ಕಿದಲ್ಲಿ ಸಾಕ್ಷ್ಯ ಬಿಟ್ಟು ಹೋಗುವಷ್ಟು? ತಾವು ಉಪಯೋಗಿಸಿದ ಫೋನನ್ನು, ಸಿಮ್ ಕಾರ್ಡುಗಳನ್ನು ಯಾರಾದರೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಗುವ ಹಾಗೆ ಬಿಟ್ಟುಹೋಗುತ್ತಾರಾ? ಅಥವಾ, ಇಂತಹ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ಏನಾಗುತ್ತದೆಂದು ಗೊತ್ತಿದ್ದು ಪೊಲೀಸರಿಗೆ ಸಿಕ್ಕಿಬೀಳುವ ಪರಿಸ್ಥಿತಿಯಲ್ಲಿ ತಮ್ಮನ್ನು ಇಟ್ಟುಕೊಳ್ಳುತ್ತಾರಾ? ಇವೆಲ್ಲ ಪ್ರಜ್ಞಾಪೂರ್ವಕವಾಗಿ ಯೋಚನೆಮಾಡುವ ಯಾರನ್ನೇ ಆದರೂ ಕಾಡುವ ಪ್ರಶ್ನೆಗಳು ಅನ್ನುವುದು ನಿಜ ತಾನೇ ?

ಉಗ್ರವಾದದ ವಿಚಾರದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿರುವ ಅಮೆರಿಕಾ, ಬ್ರಿಟನ್ ಇತ್ಯಾದಿ ರಾಷ್ಟ್ರಗಳಿಗೆ ಎದುರಾಗಿ ನಿಂತರೆ ಆಗುವ ಪರಿಣಾಮಗಳು ಗೊತ್ತಿದ್ದೂ ಪಾಕ್, ಯಾಕೆ ಅಷ್ಟು ಧೃಢವಾಗಿ ಭಾರತಕ್ಕೆ ಸಾಕ್ಷ್ಯ ಸಾಲದು, ಸರಿಯಾದ ಸಾಕ್ಷ್ಯ ತೋರಿಸಿ ಅನ್ನುತ್ತಿದೆ? ಅದರ ಪರವಾದ ಯಾವ ಸತ್ಯ ಅದಕ್ಕೆ ಅಷ್ಟು ಶಕ್ತಿ ಕೊಟ್ಟಿದೆ? ಮೊದಮೊದಲು ಪಾಕ್ ನಡೆಸಿದ ಕೃತ್ಯ ಎಂದು ಪಾಕ್ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದ ಪ್ರಣಬ್ ಮುಖರ್ಜಿ, ನಂತರ ಪಾಕ್ ನೆಲದಲ್ಲಿನ ಉಗ್ರರು ನಡೆಸಿದ ಕೃತ್ಯ ಅನ್ನಲು ಕಾರಣವೇನು? ನಮ್ಮಲ್ಲಿ ಆದ ಉಗ್ರರ ಕೃತ್ಯಕ್ಕೆ ಅಮೆರಿಕಾದಿಂದ, ಬ್ರಿಟನ್-ನಿಂದ ಸಾಕ್ಷ್ಯ ಹೇಗೆ ಸಿಗುತ್ತಿದೆ? ಅಷ್ಟಕ್ಕೂ, ಭಾರತ ಸರಕಾರ ಇಲ್ಲಿವರೆಗೆ ತೋರಿಸಿದ ಸಾಕ್ಷ್ಯಗಳಲ್ಲಿ ಯಾವುದು ತಾನೇ ಬಂಧಿತ ಉಗ್ರ ಪಾಕ್-ನವ ಅಂತ UNDISPUTABLE ಆಗಿ ಹೇಳುತ್ತಿದೆ? ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು? (ಟೀವಿ ಚಾನೆಲ್ಲುಗಳು ಮಾಡಿದ ಸ್ಟಿಂಗ್ ಆಪರೇಶನ್ ಅಥವಾ ಮಾಧ್ಯಮ ವರದಿಗಳು ಸಾಕ್ಷ್ಯವೆಂದು ಒಪ್ಪಿಕೊಳ್ಳಲು ಯ:ಕಶ್ಚಿತ್ ನಾನೇ ಸಿದ್ಧಳಿಲ್ಲ, ಇನ್ನು ಪಾಕ್ ಹೇಗೆ ಒಪ್ಪಿಕೊಳ್ಳುತ್ತದೆ?) ಇವಕ್ಕೆಲ್ಲ ಸರಿಯಾದ ಉತ್ತರಗಳು ಇಲ್ಲಿವರೆಗೆ ಸಿಕ್ಕಿಲ್ಲ ನನಗೆ. ಇವಕ್ಕೆಲ್ಲ ಸರಿಯಾದ ಉತ್ತರಗಳು ಸಿಗುವ ವರೆಗೆ conspiracy theoryಗಳ ಪ್ರಭಾವ ನನ್ನ ತಲೆಯಿಂದಲಂತೂ ಹೋಗುವುದಿಲ್ಲ.

ಇಂದು.....

ನಾ ಬರೆದಿದ್ದರ ಸತ್ಯಾಸತ್ಯತೆ ಪರಿಶೀಲಿಸಿ, ನಂಬಲಿಕ್ಕೆ ಇಷ್ಟವಿದ್ದವರು ನಂಬಬಹುದು, ಇಷ್ಟವಿಲ್ಲದವರು ನಂಬದಿರಬಹುದು, ಅಥವಾ ಇದಕ್ಕೆ ವಿರುದ್ಧವಾದ ಸಂಶೋಧನೆ, ಯೋಚನಾಸರಣಿ ಇತ್ಯಾದಿಗಳ ಮೂಲಕ ನನಗನಿಸಿದ್ದು ತಪ್ಪು ಅಂತ ಸಾಧಿಸಲು ಕೂಡ ಹೊರಡಬಹುದು. ಮೊಸ್ಸಾಡ್ ಮತ್ತು ಇಸ್ರೇಲ್ ಕುರಿತ ಆಪಾದನೆಗಳು ಊಹಾಪೋಹಗಳು ಅಥವಾ conspiracy theory ಕೂಡ ಆಗಿಬಹುದಾದ ಸಾಧ್ಯತೆಯನ್ನೂ ನಾನು ಅಲ್ಲಗಳೆಯುವುದಿಲ್ಲ. ಆದರೆ, ಎಲ್ಲೆಲ್ಲೋ ಅಲೆದಾಡಿ ಜಗತ್ತಿನ ಯಾವ ಭಾಗದಲ್ಲಿ ಏನು ಚರ್ಚೆ ನಡೆಯುತ್ತಿದೆ ಅಂತ ತಿಳಿದುಕೊಂಡದ್ದರಿಂದ ನನ್ನ ಜಗತ್ತು ವಿಶಾಲವಾಗಿದೆ. ನಾನು ತಿಳಿದುಕೊಂಡುದೇ ಸತ್ಯ ಅಂದುಕೊಂಡಿದ್ದೆ ನಾನು, ಅದು ಸುಳ್ಳಾಗಿದೆ, ಭ್ರಮೆಯ ಗುಳ್ಳೆಗಳೆಲ್ಲ ಒಡೆದುಹೋಗಿವೆ.

ಇವೆಲ್ಲಾ ಆದ ಮೇಲೆ ಇಸ್ರೇಲ್ ಮತ್ತೆ ಗಾಜಾ ಪಟ್ಟಿಯ ಮೇಲೆ ದಾಳಿ ಆರಂಭಿಸಿದೆ, ದಾಳಿಯಲ್ಲಿ ಸತ್ತ ನಾಗರಿಕರ ಸಂಖ್ಯೆ ಮುಂಬೈ ದಾಳಿಯಲ್ಲಿ ಸತ್ತವರಿಗಿಂತ ಮೂರು ಪಟ್ಟಿನಷ್ಟು ಹೆಚ್ಚಿದೆ. ಈ ನಡುವೆ ಹೊಟ್ಟೆಪಾಡಿಗಾಗಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಹೊರಟಿದ್ದ 400ಕ್ಕೂ ಹೆಚ್ಚು ಜನರನ್ನು ಮೋಸದಿಂದ ಇಂಧನವಿಲ್ಲದ ಬೋಟುಗಳಲ್ಲಿ ಸಮುದ್ರ ಮಧ್ಯದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ, 100ರಷ್ಟು ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿತು, ಉಳಿದ 300 ಜನರ ಪತ್ತೆಯಿಲ್ಲ. ಈ ಎರಡೂ ಘಟನೆಗಳು ಮುಂಬೈ ಭಯೋತ್ಪಾದನೆ ಹುಟ್ಟಿಸಿದ ಗಾಬರಿ ಜಗತ್ತಿನಲ್ಲಿ ಹುಟ್ಟಿಸಿಯೇ ಇಲ್ಲ. ಆಲ್ಲಿ ಸತ್ತ ಜೀವಗಳಿಗೆ ಜಗತ್ತು ಮುಂಬೈ ದಾಳಿಯಲ್ಲಿ ಬಲಿಯಾದವರಿಗೆ ಕೊಟ್ಟ ಬೆಲೆ ಕೊಟ್ಟಿಲ್ಲ.

ನನಗೆ ಸಿಕ್ಕಿದ ಇಸ್ರೇಲಿ ಭೂತದ ಕಥೆ ಎಷ್ಟು ಸತ್ಯವೋ ಸುಳ್ಳೋ ಕಾಲವೇ ಹೇಳಬೇಕು. ಆದರೆ, ಧರ್ಮದ ಆಧಾರದಲ್ಲಿಯೇ ಯೋಚಿಸುವ ಬಹಳಷ್ಟು ಜನರಿಗೆ ಈ ಎಲ್ಲಾ ಘಟನೆಗಳು, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮೀಕರಣಗಳು, ರಾಜಕೀಯ ಪಕ್ಷಗಳ ಜಾಣ ಕೃತ್ಯಗಳು ಈಗಲಾದರೂ ಕಣ್ಣು ತೆರೆಸಬೇಕು. ಮತ್ತು ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಎಲ್ಲಿ ಸಾಗುತ್ತಿದೆ ಎಂಬುದೂ ಅರಿವಾಗಬೇಕು. ಯುದ್ಧ-ಯುದ್ಧವೆಂದು ಕುಣಿಯುತ್ತಿರುವವರು ಯಾರೆಂದು ಕಣ್ಣುಬಿಟ್ಟು ನೋಡಿದರೆ ಸತ್ಯ ಗೊತ್ತಾಗುತ್ತದೆ. ಯುದ್ಧದ ಮಾತು, ಹಾಗೂ ಅಮೆರಿಕಾ-ಫ್ರಾನ್ಸ್ ಮತ್ತಿತರ ದೇಶಗಳ ಜತೆಗಿನ ನಾಗರಿಕ ಅಣು ಒಪ್ಪಂದದ ಭರದಲ್ಲಿ ಇಂಡೋ-ಇರಾನ್ ಗ್ಯಾಸ್ ಪೈಪ್ ಲೈನ್ ಮಾತುಕತೆಯನ್ನು ಮುಂದೆ ತೆಗೆದುಕೊಂಡು ಹೋಗುವುದನ್ನು ಮರೆತೇ ಬಿಟ್ಟಿತು ಭಾರತ... ದೂರದಲ್ಲಿರುವ ನೆಂಟರನ್ನು ಮೆಚ್ಚಿಸಲು ಪಕ್ಕದ ಮನೆಯವರನ್ನು ದೂರವಿಟ್ಟ ತಪ್ಪಿಗೆ ಮುಂದೆಂದೋ ಒಂದು ದಿನ ಪಶ್ಚಾತ್ತಾಪ ಪಡುವ ದಿನ ಬರಬಹುದು. ಯಾರಿಗೆ ಯುದ್ಧದಿಂದ ಉಪಕಾರವೋ, ಅವರು ನಾವಲ್ಲ - ಅಂದರೆ ಭಾರತವಲ್ಲ, ಪಾಕಿಸ್ತಾನವೂ ಅಲ್ಲ. ಶಾಂತಿಗಿರುವ ಶಕ್ತಿ ಯುದ್ಧಕ್ಕಿಲ್ಲ ಎಂಬುದು ನಮಗೆಲ್ಲ ಎಷ್ಟು ಬೇಗ ಅರ್ಥವಾಗುತ್ತದೋ ಅಷ್ಟು ಎರಡೂ ರಾಷ್ಟ್ರಗಳಿಗೆ ಒಳ್ಳೆಯದಾಗುತ್ತದೆ. ಮತ್ತು ನಮ್ಮೊಳಗಿದ್ದುಕೊಂಡು ಪಾಕ್ ನಮ್ಮ ಬದ್ಧ ವೈರಿಯೆಂಬಂತೆ ಆಡುತ್ತ ನಿಜವಾದ ಹಿತಶತ್ರುಗಳ ಬಗ್ಗೆ ಜಾಣಕುರುಡರಾಗುವ ಮಹಾನುಭಾವರುಗಳಿಗೂ ಒಳ್ಳೆಯದಾಗುತ್ತದೆ.

ಉಗ್ರರು ಯಾರೇ ಇರಲಿ, ಅವರು ತಮ್ಮ ಕೃತಿಗಳ ಮೂಲಕ ಕೊಲ್ಲುವುದು ಯಾವಾಗಲೂ ಮುಗ್ಧರನ್ನು. ಇಬ್ಬರ ಜಗಳ ಮೂರನೆಯವನಿಗೆ ಲಾಭ - ಸರಳ ಸಿದ್ಧಾಂತ, ಇತರ ಧರ್ಮಗಳ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೋಸ್ಕರ ಹಿಂದುಗಳಲ್ಲಿ ಅಡಕವಾಗಿರುವ ಮುಸ್ಲಿಂ ವಿರೋಧಿ ಭಾವನೆಯ ದುರುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಅರ್ಥವಾದಾಗಲಾದರೂ ಹಿಂದು ಹಿಂದು ಎಂದು ಸಾಯುವವರು ಬದಲಾಗಬಹುದು ಅಂತ ಆಶಿಸಲೇ? ಒಂದು ಕಡೆ ಕಡೆ ಹಿಂದುತ್ವವೆಂದರೆ ವೇ ಆಫ್ ಲೈಫ್ ಅಂತ ಭಾಷಣ ಮಾಡುತ್ತ, ಇನ್ನೊಂದು ಕಡೆ ಚರ್ಚ್-ಗಳ ಮೇಲೆ ದಾಳಿ ನಡೆಸುತ್ತ so-called ಹಿಂದುತ್ವ ಮೆರೆಯುವ FANATICಗಳಿಗೆ, ಇನ್ನೊಂದು ಕಡೆ CHRISTIAN AGGRESSION ಬಗ್ಗೆ ದೊಡ್ಡದೊಡ್ಡದಾಗಿ ಮಾತಾಡುತ್ತ ಚರಿತ್ರೆಯ ಭಾರವನ್ನೆಲ್ಲ ಇಂದಿನ ಜನತೆಯ ಮೇಲೆ ಹಾಕಿ ನಾಳೆಗಳನ್ನು ಹಾಳುಮಾಡುವ SO-CALLED ಇತಿಹಾಸಕಾರರಿಗೆ ಅಥವಾ ಬುದ್ಧಿಜೀವಿಗಳಿಗೆ, ಮತ್ತು ಅದಕ್ಕೆ ಅಗತ್ಯವಿಲ್ಲದಷ್ಟು ಪ್ರಚಾರ ಕೊಟ್ಟು ಮನಸುಗಳನ್ನು ಕದಡಿದ ಮಾಧ್ಯಮಕ್ಕೆ ಈಗಲಾದರೂ ಜ್ಞಾನೋದಯವಾಗಬೇಕು.

ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಹಾಳುಗೆಡವದಿರಲಿ...

ಒಂದು ಕಾಲದಲ್ಲಿ, ಮಂದಿರವಲ್ಲೇ ಕಟ್ಟುವೆವು ಅಂದವರ ಹಾಡಿಗೆ ದನಿಗೂಡಿಸಿದವರಲ್ಲಿ ನಾನೂ ಇದ್ದೆ. ಆಗ ತುಂಬಾ ಚಿಕ್ಕವಳಿದ್ದೆ. ಆರ್ ಎಸ್ ಎಸ್-ನವರಿಂದ ಬದುಕಿನಲ್ಲಿ ಶಿಸ್ತು, ಕರ್ತವ್ಯಪರತೆ, ದೇಶಪ್ರೇಮ ಮೈಗೂಡಿಸಿಕೊಂಡವರು ನಾವು. ನಮ್ಮನೆಯಲ್ಲಿ ಇವತ್ತಿಗೂ ಬಿಜೆಪಿಗೇ ಓಟು. ಒಂದಾನೊಂದು ಕಾಲದಲ್ಲಿ ನಾನೇ ಅನ್ನುತ್ತಿದ್ದೆ, ಸೇರಿದರೆ ಬಿಜೆಪಿ ಸೇರ್ತೇನೆ, ಬಿಜೆಪಿಯಿಂದಲೇ ಓಟಿಗೆ ನಿಲ್ತೇನೆ ಅಂತ... ಆದರೆ, ಈಗ ಅದೆಲ್ಲಾ ಹುಚ್ಚೂ ಬಿಟ್ಟುಹೋಗಿದೆ :-) ಸತ್ಯದ ವಿವಿಧ ಮಜಲುಗಳನ್ನು ಅರಿತುಕೊಳ್ಳುತ್ತ ಹೋದಂತೆ , ಕಾಲ ತನ್ನ ಹೆಜ್ಜೆಗಳನ್ನು ಹಾಕುತ್ತ ಹೋಗುವಾಗ ತಂದ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋದಂತೆ, ನನಗಿದ್ದ ಭ್ರಮೆಗಳು ತೊಲಗಿವೆ.

ಭಯೋತ್ಪಾದನೆ ಇಂದು ಚುನಾವಣಾವಿಷಯವಾಗಿ ಉಳಿದಿಲ್ಲ. ಈಗ ಅದು ನಮ್ಮಲ್ಲಿ ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ, ಸರಿ-ತಪ್ಪಿನ ನಡುವಿನ ತೂಗಾಟದ ಪ್ರಶ್ನೆ, ನಿನ್ನೆಗಳ ನೆರಳಿನಲ್ಲಿ ಇಂದು ಎಸಗುವ ಕೃತ್ಯಗಳ ಮೂಲಕ, ನಾಳೆಗಳನ್ನು ನಾಶಪಡಿಸಹೊರಟ ಪಿಡುಗು. ಇದು ಎಲ್ಲಾ ಜಾತಿ-ಮತಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆ. ಇದನ್ನು ಹೇಳಹೊರಟವರು ಮೊದಮೊದಲು ವಿರೋಧ ಎದುರಿಸಿಯೇ ಎದುರಿಸುತ್ತಾರೆ, ಯಾಕೆಂದರೆ ನಮ್ಮ ಕೆಟ್ಟತನವನ್ನು ಒಪ್ಪಿಕೊಳ್ಳಲು ನಮಗೆ ಸಮಯ ಬೇಕು. ಕೆಲವೊಮ್ಮೆ ಬಹಳ ಸಮಯ ಕಳೆದ ನಂತರವೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರಬಹುದು, ಅಥವಾ ಒಪ್ಪಿಕೊಳ್ಳುವುದು ಬೇಕಿಲ್ಲವಿರಬಹುದು. ಭಯೋತ್ಪಾದನೆ ನಿಗ್ರಹವಾಗಬೇಕು ಎಂದು ಹೋರಾಡುವವರೆಲ್ಲರೂ ಈ ಬೇಸಿಕ್ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ಹೋರಾಟ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ. ಈನಿಟ್ಟಿನಲ್ಲಿ ಯೋಚಿಸುವಾಗ, ನಮ್ಮ ರಾಜ್ಯದಲ್ಲಿ ಹೀಗಾದರೆ ಎಷ್ಟು ಚೆನ್ನ ಅಂತ ಮನಸು ಲೆಕ್ಕ ಹಾಕುತ್ತದೆ...

1) ಒಂದಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಲ್ಲಿ, ಯುವಜನತೆಗೆ ಉದ್ಯೋಗಗಳು ಕಲ್ಪಿಸಿ ಕೊಟ್ಟಲ್ಲಿ, ಅವರ ವಿಚಾರಧಾರೆಗಳು ಸರಿದಾರಿಯಲ್ಲಿ ಸಾಗುವಂತೆ ಮಾಡಿದಲ್ಲಿ, ಮುಂದೆ ಕೈಯಲ್ಲಿ ಕೋವಿ ಹಿಡಿದು ಭಯೋತ್ಪಾದಕರಾಗಬಹುದಾದ ಯುವಜನತೆ ಹಾದಿ ತಪ್ಪುವ ಬದಲು ತಮ್ಮ ಬದುಕಿನಲ್ಲಿ ತಾವು ವ್ಯಸ್ತರಾಗಬಹುದಲ್ಲವೇ?

2) ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿಸುತ್ತೇವೆಂದು ಪ್ರಾಥಮಿಕ ಶಿಕ್ಷಣ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಜತೆಗೆ, ನಮ್ಮ ರಾಷ್ಟ್ರದ ಪ್ರತಿ ಪ್ರಜೆಗೂ ಗೊತ್ತಿರಬೇಕಾದ ಪ್ರತಿಜ್ಞೆ, ಮತ್ತು ರಾಷ್ಟ್ರೀಯ ಭಾವೈಕ್ಯದ ಪ್ರತಿಜ್ಞೆ ಕೂಡ ಕಡ್ಡಾಯವಾಗಿಸಬಹುದಲ್ಲವೇ?

3) ಯಾವ್ಯಾವುದೋ ಸಂಘಸಂಸ್ಥೆಗಳಿಗೆ ಸೇನೆಯ ತರಬೇತಿ ನೀಡಲು ಅನುಮತಿ ನೀಡುವ ಬದಲು, ಸರಕಾರದೊಳಗಿನ ವ್ಯವಸ್ಥೆಯಲ್ಲಿ ನೇರವಾಗಿಯೇ ಇರುವ ಪೊಲೀಸರಿಗೇ ಅದನ್ನು ನೀಡಬಹುದಲ್ಲವೇ, ಸಂಘಸಂಸ್ಥೆಗಳಿಂದ ಈರೀತಿಯ ತರಬೇತಿ ತೆಗೆದುಕೊಳ್ಳುವವರನ್ನು ನೇರವಾಗಿ ಪೊಲೀಸ್ ಇಲಾಖೆ ಅಥವಾ ಸೇನೆಗೆ ಸೇರಲು ಪ್ರೋತ್ಸಾಹಿಸಬಹುದಲ್ಲವೇ?

4) ಭಯೋತ್ಪಾದನೆಯನ್ನು ಚುನಾವಣಾ ವಿಷಯವನ್ನಾಗಿಸಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿ ಅಂತ ಬೊಬ್ಬೆ ಹಾಕುವ ಬದಲು, ಎಲ್ಲೆಲ್ಲಿ ಅಧಿಕಾರವಿದೆಯೋ ಅಲ್ಲಿ ಚೆನ್ನಾಗಿ, ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡಿ, ಒಳ್ಳೆ ಹೆಸರು ತೆಗೆದುಕೊಳ್ಳಬಾರದೇ?

5) ರಾಜ್ಯದಲ್ಲಿ ಸ್ಫೋಟಕ ವಸ್ತುಗಳು, ರಾಸಾಯನಿಕಗಳು ಇತ್ಯಾದಿಗಳ ಸಾಗಣಿಕೆ, ಉಪಯೋಗಗಳ ಮೇಲೆ ಇಂದಿಗೂ ಸರಿಯಾದ ನಿಯಂತ್ರಣವಿಲ್ಲ. ಅದನ್ನೆಲ್ಲ ಸರಿಪಡಿಸಿ, ಪೊಲೀಸ್ ಇಲಾಖೆಗೆ ಬೇಕಾದ ಸೌಲಭ್ಯ ಕೊಟ್ಟು ಆಧುನೀಕರಿಸಿ, ಸರಿಯಾದ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ರೈಲು ಹೋದ ಮೇಲೆ ಟಿಕೇಟು ತೆಗೆದುಕೊಳ್ಳುವ ಉದಾಸೀನದ ಬುದ್ಧಿ ಬಿಟ್ಟು ಮುಂದಾಲೋಚನೆಯಿಂದ ಕಾಲಕಾಲಕ್ಕೆ ಸರಿಯಾಗಿ ಮಾಡಬೇಕಾದ್ದು ಮಾಡಬಹುದಲ್ಲವೇ?

6) ಭಯೋತ್ಪಾದನೆ ವಿರುದ್ಧ ನಮ್ಮ ಬಿಜೆಪಿ ಸರಕಾರ ನೇರವಾಗಿ ಕಾಲೇಜುಗಳಲ್ಲಿ ಭಾಷಣಗಳನ್ನು ಆಯೋಜಿಸುತ್ತಿದೆ, ಕಾಲೇಜು ವಿದ್ಯಾರ್ಥಿಗಳ ಮೂಲಕ ರ್ಯಾಲಿಗಳನ್ನು ಆಯೋಜಿಸುತ್ತಿದೆ. ಈ ರ್ಯಾಲಿಗಳಲ್ಲಿ, ಭಾಷಣಗಳಲ್ಲಿ ಉಗ್ರವಾದದ definition ಮತ್ತು ವ್ಯಾಪ್ತಿ ಮತ್ತು ವಿಸ್ತಾರವನ್ನು ಹೆಚ್ಚಿಸಿ, ಜಾತಿ-ಮತ-ದೇಶ-ಕಾಲ ರಹಿತವಾಗಿ ಉಗ್ರವಾದದ ಬಗ್ಗೆ ಮಾತ್ರ ಜಾಗೃತಿ ಮೂಡಿಸಲು ಯತ್ನಿಸಿದರೆ ಅದು ಶ್ಲಾಘನೀಯ. ಅದು ಬಿಟ್ಟು, ಪಾಕಿಸ್ತಾನದ ಮೇಲೆ ಕೆಂಡಕಾರುತ್ತ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ಮಾಡಿದರೆ ಅದು ವೋಟ್ ಬ್ಯಾಂಕ್ ರಾಜಕೀಯ.

7) ಎಲ್ಲಕ್ಕಿಂತ ಹೆಚ್ಚಾಗಿ, ಉಗ್ರವಾದವನ್ನು ವೈಚಾರಿಕ ನೆಲೆಗಟ್ಟಿನಲ್ಲಿಯೇ ಇಲ್ಲವಾಗಿಸುವ ಯತ್ನ ನಡೆಯಬೇಕಿದೆ. ಇಂದು ನಡೆಯುತ್ತಿರುವಷ್ಟು intellectual terrorism, ಮತ್ತು manipulation of media ಬಹುಶ ಎಂದೂ ನಡೆದಿರಲಿಲ್ಲ. ಸರ್ಕಾರ್ ಚಿತ್ರದಲ್ಲಿ ಕುತಂತ್ರಿ ಸಾಧು ಹೇಳುವ ಮಾತು ನೆನಪಿಗೆ ಬರುತ್ತಿದೆ... "अगर तुम सर्कार को मारना चाहते हो, तो पहले उसकी सोच को मारो..." ಉಗ್ರವಾದ ಹುಟ್ಟುವುದೂ ಯೋಚನೆಗಳಲ್ಲಿ, ಅದರ ಸಾವೂ ಕೂಡ ಯೋಚನೆಗಳಲ್ಲೇ ಅಡಗಿದೆ. ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನೇ ಬದಲಾಯಿಸುತ್ತೇವಂತೆ, ನಮ್ಮ ಮನಸುಗಳಲ್ಲಿ ಹುದುಗಿರುವ ಉಗ್ರನನ್ನು ಕೊಲ್ಲುವುದು ಕಷ್ಟವಾ?

10 ಜನರನ್ನಿಟ್ಟುಕೊಂಡು ಇಡೀ ರಾಷ್ಟ್ರದ ನಿದ್ದೆ ಮೂರುದಿನ ಕೆಡಿಸಿದ, ಒಂದು ಬಿಲಿಯನ್ ಜನರ ಧೈರ್ಯಗೆಡಿಸಿದ ಮುಂಬೈ ದಾಳಿಯಂತಹ ಹೇಯಕೃತ್ಯಗಳು ಮುಂದೆಂದೂ ನಡೆಯದಿರಲಿ, ಯಾರಿಂದಲೂ ನಡೆಯದಿರಲಿ. ಎಲ್ಲೂ ನಡೆಯದಿರಲಿ... ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ... ನಮ್ಮಲ್ಲಿ ಸಾಯುತ್ತಿರುವ ಮಾನವತ್ವವನ್ನು ಮತ್ತೆ ನೀರೆರೆದು ಬದುಕಿಸೋಣ, ಸುತ್ತಲವರ ನೋವಿಗೆ ನಮ್ಮ ಜೀವಗಳೂ ಜಾತಿ-ಮತ ಮರೆತು ಸ್ಪಂದಿಸಲಿ... ಮರೆತುಬಿಡೋಣ ಕಪ್ಪುಕಾಲನ ಮಡಿಲಲ್ಲಿ ಸೇರಿಹೋದ ನಿನ್ನೆಗಳನ್ನು... ನಿನ್ನೆಯ ಕರಿನೆರಳುಗಳು ನಾಳೆಗಳನ್ನು ಎಂದಿಗೂ ಹಾಳುಗೆಡವದಿರಲಿ...

(ವಿ.ಸೂ. - ವೈಯಕ್ತಿಕ ಹಾಗೂ ಅಸಭ್ಯ ಕಮೆಂಟುಗಳನ್ನು ಪ್ರಕಟಿಸಲಾಗುವುದಿಲ್ಲ, ಮತ್ತು ಗಣನೆಗೂ ತೆಗೆದುಕೊಳ್ಳಲಾಗುವುದಿಲ್ಲ, ಆರೋಗ್ಯಕರ ಚರ್ಚೆಗೆ ಮಾತ್ರ ಅವಕಾಶ)

9 comments:

hEmAsHrEe said...

shreedevi, very good article,
ತುಂಬಾ ಸಾಂದರ್ಭಿಕ ಮತ್ತು ಸತ್ವವುಳ್ಳ ಬರಹ.
ಬಹಳ ದಿನಗಳ ನಂತರ ಒಳ್ಳೆಯ ವಿಚಾರವಂತ ಲೇಖನ (with a different perception)ಓದಿದೆ.
thank you.

sunaath said...

ಶ್ರೀ,
ಅನೇಕ ವಿಚಾರಗಳನ್ನು ನಿಮ್ಮ ಲೇಖನದಲ್ಲಿ ವ್ಯಕ್ತಪಡಿಸಿದ್ದೀರಿ.
ಅವುಗಳಲ್ಲಿ ಕೆಲವನ್ನಾದರೂ ಪ್ರತ್ಯೇಕವಾಗಿಯೇ ಹಿಂಜಬೇಕಾಗುತ್ತದೆ.
೧)ಅಫಝಲ ಗುರುವಿನ ಬಗೆಗಿನ ಸಾಕ್ಷ್ಯಗಳನ್ನು ವಿಮರ್ಶಿಸಿ, ಪರಮೋಚ್ಚ ನ್ಯಾಯಾಲಯವು ಅವನಿಗೆ ಮರಣದಂಡನೆ ವಿಧಿಸಿದೆ. ದಂಡನೆಯನ್ನು ಕಾರ್ಯರೂಪಕ್ಕೆ ತರಬೇಕಾದದ್ದು ಸರಕಾರದ ಕರ್ತವ್ಯ.
ಸುಪ್ರೀಮ್ ಕೋರ್ಟಿನ ನ್ಯಾಯದಾನವನ್ನು ಪ್ರಶ್ನಿಸುವವರು, revision benchಗೆ ಹೋಗುವದನ್ನು ಬಿಟ್ಟು,
ಪುಸ್ತಕ ಬರೆಯುತ್ತ ಹೋಗುವದರಲ್ಲಿ ಅರ್ಥವಿಲ್ಲ.
೨)ನಮ್ಮ ಎಲ್ಲ ರಾಜಕೀಯ ಪಕ್ಷಗಳು ಸ್ವಾರ್ಥಸಾಧಕ ರಾಜಕಾರಣಿಗಳಿಂದ ತುಂಬಿವೆ. ಈ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಗೆಲ್ಲುವುದೊಂದೇ ಮುಖ್ಯ.
೩)ಪಾಕಿಸ್ತಾನದಲ್ಲಿರುವ ಉಗ್ರವಾದಿಗಳನ್ನು ಭಾರತಕ್ಕೆ ಒಪ್ಪಿಸಿರಿ ಎಂದು ಕೇಳುವದರಲ್ಲಿ ಅರ್ಥವಿಲ್ಲ. ಪಾಕಿಸ್ತಾನದಲ್ಲಿರುವ ಯಾವುದೇ ಅಪರಾಧಿಯನ್ನು ಅಲ್ಲಿಯೇ ವಿಚಾರಿಸಲಾಗುವದು ಎನ್ನುವ ಪಾಕಿಸ್ತಾನದ ವಾದ ಅಂತರ್ರಾಷ್ಟ್ರೀಯವಾಗಿ ಒಪ್ಪಿತವಾದ ವಾದ.
೪)ಪಾಕಿಸ್ತಾನದ ಮೇಲೆ ಭಾರತವು ಒಂದು ವೇಳೆ ದಾಳಿ ಮಾಡಿದ್ದಾದರೆ, ತಕ್ಷಣವೆ ಅಮೆರಿಕ, ಬ್ರಿಟನ್ ಹಾಗೂ ರಶಿಯಾಗಳು ಮಧ್ಯ ಪ್ರವೇಶಿಸುವವು. ಆ ದೇಶಗಳಿಗೆ ಬೇಕಾದದ್ದು ಸ್ವಂತ ಲಾಭವೇ ಹೊರತು, ಭಾರತದ ಹಿತವಲ್ಲ.
೫)ಹಾಗಿದ್ದರೆ, ಭಾರತ ಸರಕಾರವು ಯಾತಕ್ಕಾಗಿ ಯುದ್ಧದ ಮಾತನಾಡುತ್ತಿದೆ? For a show off before the Indian voters.(ಶೀಘ್ರದಲ್ಲಿಯೇ ಚುನಾವಣೆ ಬರುವದಿದೆ ಎನ್ನುವದನ್ನು ನೆನಪಿಸಿಕೊಳ್ಳಿರಿ.)
ಅಷ್ಟೇ ಏಕೆ, ಒಂದು ಸಣ್ಣ ಪ್ರಮಾಣದ limited war
ಅನ್ನು ಮಾಡಿದರೂ ಮಾಡಬಹುದು. ಆದರೆ,ಆ ಸಂದರ್ಭದಲ್ಲಿ ಚೀನಾ ಸಹ ದುರುಪಯೋಗಕ್ಕಿಳಿಯಬಹುದು.

Unknown said...

So in a nutshell it is all ours (India's) fault. Good job.

May be you can take "NASA moon landing hoax" as your next research topic. There are millions of links available on the Net and you can expand your knowledge by "reading from all over the world" as you did with this article.

Seriously, are you an expert on law enforcement? Or intelligence? If govt is not publishing all news, intercepts (satellite phones) there is a reason for that. Our babus may be jaded but no sane intelligence apparatus gives complete details out as that will spill technology used to get those intercepts in the first place. Arundathi Roys of the world equate this to "govt has no proof" and take it from there.

I have to say it appears you are trying to be contrarian but it is not working - unless I am missing something big (like are you now a defense expert givng gyaan to cops ?when and where did you get trained?)

Anyway good luck with NASA Moon landing / Chandrayaan hoax research :)

Sean
Uppala / Mangalore

Shrinidhi Hande said...

ತು೦ಬಾ ವಿವರವಾಗಿ ಬರೆದಿದ್ದೀರ...

Anonymous said...

ಶ್ರೀ ಯವರೇ,
ಉತ್ತಮವಾದ ಲೇಖನ, ನಿಮ್ಮ "ನಾವು ಒಬ್ಬೊಬ್ಬರೂ ಬದಲಾಗೋಣ, ಆಮೂಲಕ ಇಡೀ ಸಮಾಜ ಬದಲಾಗಲಿ..." ಬಹಳ ಮೆಚ್ಚಿಗೆಯಾಯಿತು,ಹಾಗೂ ಈ ಧ್ಯೇಯ ಎಲ್ಲರದು ಆಗಲೀ ಎಂದು ಹಾರೈಸುತ್ತೇನೆ.

ಸ್ನೇಹದೊಂದಿಗೆ,
-ಬಾಲ.

ಶ್ರೀನಿಧಿ.ಡಿ.ಎಸ್ said...

December 13th: Terror Over Democracy ಪುಸ್ತಕ ಅಂಕಿತದಲ್ಲಿ ಲಭ್ಯವಿದೆ. ಮೊನ್ನೆ ಅಲ್ಲಿಗೆ ಹೋದಾಗ ಇಂಗ್ಲೀಷ್ ರ್ಯಾಕ್ ಗಳ ಮಧ್ಯ ಕಂಡಿತ್ತು.
- ಇಷ್ಟಕ್ಕೂ, ನಿಮ್ಮ ವಾದ ಸರಣಿಗ ಬಗ್ಗೆ ನನ್ನ ಸಹಮತವಿಲ್ಲ, :) ಅದು ಬೇರೆ ವಿಚಾರ. ಅರುಧಂತಿ ರಾಯ್ ಗೆ, "ನರ್ಮದಾ ಬಚಾವೋ" ಗಾಗಿ ನ್ಯಾಯಾಲಯ ನಿಂದನೆ ಆರೋಪ ಇರುವುದಕ್ಕೊ, ಈ ಕೇಸ್ ನಲ್ಲಿ ಇರುವುದಕ್ಕೂ ಬಹಳ ವ್ಯತ್ಯಾಸ ಇದೆ ಅನ್ನಿಸುತ್ತದೆ.

ಇನ್ನು ನಿಮ್ಮ "ಇಲ್ಲಿವರೆಗೆ ಭಾರತ ಇತರ ರಾಷ್ಟ್ರಗಳ ಜತೆಗೆ ಸಾಕ್ಷ್ಯ ಹಂಚಿಕೊಳ್ಳದಿದ್ದುದರ ಗುಟ್ಟೇನು?" ಪ್ರಶ್ನೆಗೆ ಈಗಾಗಲೇ ನಿಮಗೆ ಉತ್ತರ ಸಿಕ್ಕಿದೆ ಅಂತ ಭಾವಿಸುತ್ತೇನೆ:)

ಸುಪ್ತದೀಪ್ತಿ suptadeepti said...

ಉಗ್ರರ ನೆಲೆಯಾಗಿರುವ ಪಾಕ್ ಮೇಲೆ ಭಾರತ ಯಾಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ? ಬರೀ ಪೊಳ್ಳು ಬೆದರಿಕೆ ಹಾಕುತ್ತಿದೆ, ಯಾಕೆ? ಎಲ್ಲರಿಗೂ (ರಾಜಕಾರಿಣಿಗಳಿಗೆ) ಅವರವರದ್ದೇ ಸ್ವಾರ್ಥ ಬೇಕಾಗಿದೆ, ಓಟ್ ಬ್ಯಾಂಕ್ ಬೇಕಾಗಿದೆ... ಎಂತೆಲ್ಲ ಒಂದೇ ದೃಷ್ಟಿಕೋನದಲ್ಲಿ ವಾದ ಮಾಡ್ತಿದ್ದೆ. ಈ ಲೇಖನ ಬೇರೊಂದು ನೋಟವನ್ನು ಒದಗಿಸಿದೆ, ಆಯಾಮ ಇತ್ತಿದೆ. ಧನ್ಯವಾದ ಶ್ರೀ.

Shree said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಯಾವ ಪ್ರಶ್ನೆಗೂ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ, ಬಹುಷ ಸಿಗುವುದೂ ಇಲ್ಲ.

Mr/Ms. Sean, Thank you for helping me to expand my knowledge, but what to do, Nasa moon-landing hoax is almost 6 years old thing for me. Sad that I could not enrich my knowledge through your suggestion. It's my commonsense that made me write this, I don't need to be law-enforcement officer or defense expert to write this. I have right to expression, and I have not forced anyone to agree with me. It'z upto individuals to believe what they want to believe.

Satyajit K.T. said...

ತು೦ಬಾ ಕಾಡುವ ಪ್ರಶ್ನೆಗಳು. ಪ್ರಶ್ನೆಗಳಿರುವವರೆಗೆ ನಾವು ಜೀವ೦ತ.
ನನಗೆ ನನ್ನೊಳಗಿರುವ ಕರ್ತವ್ಯ ಭ್ರಷ್ಟತೆ, ಸ್ವಾರ್ಥ ಮತ್ತು ಕ್ರೌರ್ಯ ದೇಶದಲ್ಲಿ, ಪ್ರಪ೦ಚದಲ್ಲಿ ಪ್ರತಿಫಲಿಸುವ೦ತೆ ಅನಿಸುತ್ತಿದೆ.
ನಾನಿಲ್ಲಿ ಪಾಲುದಾರ.

ಬರೆಯುತ್ತಿರಿ. ಪ್ರಶ್ನಿಸುತ್ತಿರಿ.....
ಒದುವುದು ನಮ್ಮ ಸ೦ತೋಷ....