'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.
++++++++++++
ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.
ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.
This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...
ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...
ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...
ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...
ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...
ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++
300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...
ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.
++++++++++++
2 comments:
ಜಾಗೃತಿಯ ಪಯಣದ ಬಗೆಗೆ ಓದಿ ಖುಶಿಯಾಯಿತು. ಇದೀಗ ನಿಂತರೂ ಸಹ ಪಯಣಿಗರಿಗೆ ಇನ್ನೂ ನೂರು ಹಾದಿಗಳು ತೆರೆದಿವೆ.
ಶುಭಾಸ್ತೇ ಪಂಥಾನ: ಸಂತು!
ತುಂಬಾ ಚೆನ್ನಾಗಿದೆ ಶ್ರೀ.ಮಾಡುವ ಕೆಲಸದಲ್ಲಿ ಖುಷಿ ಅನುಭವಿಸಿದಾಗ ಮಾತ್ರ ಸಾರ್ಥಕತೆ ದೊರೆಯುವುದು.ಮತ್ತಷ್ಟು ಹೊಸತು ಕಾಣಬೇಕು ಅಂತ ಅಂದ್ರೆ ಹಳೆದು ಮುಗಿಯಲೇ ಬೇಕಲ್ವ...!ಬೇಗ..ಮತ್ತಷ್ಟು ಹೊಸ ಕಾರ್ಯಕ್ರಮ ನೀಡಿ.ನನ್ನ ಬ್ಲಾಗ್ನಲ್ಲಿ ಇವೆಲ್ಲ ಬರೆದರೆ ನಿಮಗೆ ಇಷ್ಟ ..... !ಅದಕ್ಕೆ ನೇರವಾಗಿ ಇಲ್ಲೇ ಹೇಳಿಬಿಡ್ತಾ ಇದ್ದೀನಿ.ಶುಭವಾಗಲಿ:-}
Post a Comment