ಅಮ್ಮಾ... ನಂಗೆ ಚೆಟರು ಬೇಡಮ್ಮಾ.... ನೀ ಯಾಕೆ ನಂಗೆ ಹಾಕ್ತೀಯಾ...
ಪುಟ್ಟವಳದು ರಾತ್ರಿರಾಗ ಶುರು... ಅಂದರೆ ನಿದ್ದೆ ಮಾಡುವ ಸಮಯ ಹತ್ತಿರವಾಗಿದೆ.
ಹೀಗವಳು ಅತ್ತಾಗಲೆಲ್ಲಾ ಮೊದಮೊದಲು ಕೈಕಾಲು ಬೀಳುತ್ತಿತ್ತು. ಆಮೇಲೆ ನಿನ್ನ ಹಠವೆಲ್ಲಾ ಕಲಿತಿದ್ದಾಳೆ ಅಂತ ನಮ್ಮವರು ನನ್ನನ್ನು ದೂರಿದರೆ, ಅವೆಲ್ಲಾ ನಿಮ್ಮದೇ ಬಳುವಳಿ ಅಂತ ನಾನು ಅವರನ್ನು ದೂರುವುದು ಸ್ವಲ್ಪ ದಿನ ನಡೆಯಿತು. ಈಗೊಂದು ತಿಂಗಳಿಂದ ಹೊಸ ಉಪಾಯ ಕಂಡುಕೊಂಡಿದ್ದೇವೆ.
"ಪಪ್ಪಾ, ಅಳೋರೆಲ್ಲಾ ಅಳ್ತಾ ಇರ್ಲಿ, ನಾವು ನೀವು ನಾಟ್ಕ ಮಾಡೋಣ...!" ನಾ ಶುರು ಮಾಡುತ್ತೇನೆ. ಇಬ್ಬರೂ ಮಂಚದ ಮೇಲೆ ಎದುರು-ಬದುರು ಕುಳಿತಿದ್ದಾಗಿದೆ. ಅವಳಿನ್ನೂ ಬಾಗಿಲಾಚೆಗೆ ನಿಂತಿದ್ದಾಳೆ.
"ಹೌದು ಹೌದು, ಶುರು ಮಾಡೋಣ" ಅಂತಾರೆ ನಮ್ಮವರು.
ಅಳು ಇನ್ನೂ ಮುಂದುವರಿದೇ ಇದೆ.
"ನಾನು ಮಂಗ, ನೀವೂ ಮಂಗ, ಬನ್ನಿ, ಬೆಣ್ಣೆ ಕದಿಯೋಣ'' ಅಂತೀನಿ ನಾನು.
''ಸರಿ, ಕದಿಯೋಣ, ಆದ್ರೆ ನಂಗೆ ಜಾಸ್ತಿ ಬೆಣ್ಣೆ ಬೇಕು'' ಅಂತಾರೆ ನಮ್ಮವರು.
'' ಇಲ್ಲ, ನಂಗೆನೇ ಜಾಸ್ತಿ'' ಅಂತೀನಿ ನಾನು.
''ಹಂಗಾರೆ ನಾನು ಕದಿಯಕ್ಕೇ ಬರಲ್ಲ'' ಅಂತಾರೆ ನಮ್ಮವರು.
ನಾಟಕದ ಪರಿಣಾಮ ಕಾಣಿಸಲು ಶುರುವಾಗಿದೆ,
''ಇಲ್ಲಿಲ್ಲ, ಬನ್ನಿ ಪ್ಲೀಸ್, ಇಬ್ರೂ ಕದ್ದು ಬಿಟ್ಟು ತಿನ್ನೋಣ'' ಅಂತೀನಿ ನಾನು.
ಸರಿ, ದಿಂಬಿನ ಆಚೆಗೆ ಕೈಹಾಕಿ ಪಪ್ಪಮಂಕಿ ಬೆಣ್ಣೆ ಕದಿಯಲು ಶುರುಮಾಡಿದರೆ, ಅಮ್ಮ ಮಂಕಿ ಕೈಯನ್ನು ಎತ್ತಿಹಾಕಿ ಸಪೋರ್ಟ್ ಮಾಡುತ್ತಾಳೆ.
ಮಂಚದಿಂದಾಚೆಗೆ ಬೆಕ್ಕು ಮೇಲೆ ಬರಲು ಸಿದ್ಧವಾಗುತ್ತಿರುವುದು ಕಣ್ಣಂಚಿನಲ್ಲೇ ಕಾಣಿಸಿ ಪಪ್ಪ-ಅಮ್ಮ ಮಂಕಿ ಇಬ್ಬರಿಗೂ ನಗು ಬರುತ್ತದೆ, ಆದರೆ ತೋರಿಸಿಕೊಳ್ಳುವುದಿಲ್ಲ. ನಾಟಕ ಮುಂದುವರಿಯುತ್ತದೆ.
''ಆಹಾ, ಎಷ್ಟೊಂದು ಬೆಣ್ಣೆ.... ಘಮ್ಮಂತಿದೆಯಲ್ಲಾ..'' ಪಪ್ಪ ಮಂಕಿಯ ಉದ್ಗಾರ.
ಅಮ್ಮ ಮಂಕಿ ''ಹೂಂ, ನಾನು ನಿಮ್ಗೆ ಬೆಣ್ಣೆ ಕದಿಯಕ್ಕೆ ಸಹಾಯ ಮಾಡಿದ್ದೀನಲ್ಲಾ, ನಂಗೆ ಜಾಸ್ತಿ ಬೆಣ್ಣೆ ಬೇಕು'' ಅನ್ನುತ್ತಾಳೆ.
''ಕದ್ದಿದ್ದು ನಾನು ತಾನೇ, ನನಗೇ ಜಾಸ್ತಿ,'' ಅಂತಾರೆ ಪಪ್ಪ ಮಂಕಿ. ಜಗಳ ಶುರುವಾಗುತ್ತದೆ.
ಅಷ್ಟರಲ್ಲಿ...
''ಮಿಯ್ಯಾಂವ್!''
ಪುಟ್ಟವಳು ಬೆಕ್ಕಾಗಿ ಮಂಚದ ಮೇಲೇರುತ್ತಾಳೆ, ಕಣ್ಣಂಚಿನ ಹನಿಯೆಲ್ಲಾ ಒರಸಿಕೊಂಡಿದ್ದಾಗಿದೆ, ಹಠ ಮರೆತುಹೋಗಿದೆ.
ಪಪ್ಪ ಹೇಳುತ್ತಾರೆ, ''ಬೆಕ್ಕೇ ನೀನು ನಮಗಿಬ್ರಿರಿಗೂ ಬೆಣ್ಣೆ ಹಂಚು'' ಅಂತ.
ಬೆಕ್ಕು ಬೆಣ್ಣೆ ಹಂಚುವ ಬದಲು ತಾನೇ ತಿನ್ನುವ ನಾಟಕವಾಡುತ್ತಿದ್ದರೆ, ಅಪ್ಪ- ಅಮ್ಮನ ಮನಸ್ಸು ನಿರಾಳ.
ಆಮೇಲೊಂದಿಷ್ಟು ಕಥೆ, ಹಾಗೇ ಎಲ್ಲರಿಗೂ ನಿದ್ದೆ.
2 comments:
ವಾಹ್! ನಾಟಕ ಸೂಪರ್ ಆಗಿದೆ!
ಕನ್ನಡಕ್ಕೆ 99 %, ಇತರೆ ಭಾಷೆಗೆ 1%, ಸದ್ಯಕ್ಕೆ ವಿಕ್ಷಕರು : 23621+......
http://spn3187.blogspot.in
..
ಹೊಸದರ ಹುಡುಕಾಟದ ಕಡೆಗೆ..............
Post a Comment