ಬೌ… ಬೌವೌ… ಬೌವೌವೌ….
ಎರಡೆರಡು ನಾಯಿಗಳು ಬೊಗಳುತ್ತ ತನ್ನತ್ತ ಓಡಿಬರುವುದು ಕಂಡು ದಣಪೆ ತೆರೆಯಹೊರಟಿದ್ದ ರಮೇಶ ಪಟ್ಟನೆ ಅದನ್ನು ಮುಚ್ಚಿ ಅಂಗಳದಾಚೆಗೇ ನಿಂತ. ಪಕ್ಕದಲ್ಲೇ ಬಿದ್ದಿದ್ದ ಕೋಲೊಂದನ್ನು ಕೈಗೆತ್ತಿಕೊಂಡ.
ಅಷ್ಟರಲ್ಲಿ ಮನೆಯ ಬಾಗಿಲು ತೆರೆದು ದಣಪೆಯತ್ತ ಕಣ್ಣು ತೂರಿದ ವಯಸ್ಕರೊಬ್ಬರು "ಯಾರೂ" ಅಂತ ಕೇಳುತ್ತ ಕೆಳಗಿಳಿದು ಬಂದರು. ಬಾಯಲ್ಲಿದ್ದ ಬಳ್ಳೆಲೆ ಪಿಚಕ್ಕೆಂದು ತೆಂಗಿನ ಮರದ ಬುಡಕ್ಕೆ ಉಗಿದು "ಏಯ್ ಹಡಬೆಗ್ಳೇ, ಸಾಕ್ ನಿಮ್ಮ ಗಲಾಟೆ, ಬಾಯ್ ಮುಚ್ನಿ ಕಾಂಬ," ಎಂದು ನಾಯಿಗಳಿಗೆ ಬೈದು ಸುಮ್ಮನಾಗಿಸಿದರು.
"ಐತಾಳಮಾವ, ನಾನು ರಮೇಶ… ರುಕ್ಮಕ್ಕನ ಮಗ, ನೆನಪುಂಟಾ," ಅಂತ ಕೇಳಿದ ರಮೇಶ.
"ಓಹೋ... ನೀನೋ ಮಾರಾಯ… ಬೆಂಗ್ಳೂರಲ್ಲಿ ದೊಡ್ಡ ಡಾಕ್ಟರು ಅಲ್ವ ಈಗ ನೀನು… ಬಾ..ಬಾ.." ಅನ್ನುತ್ತ ಐತಾಳರು ದಣಪೆ ಸರಿಸಿದರು. "ಹೌದು, ಊರು ಬಿಟ್ಟು ಎಷ್ಟೋ ವರ್ಷ ಆಯ್ತಲ್ಲ, ನಿಮ್ಮ ಮನೆಯೊಂದು ನೆನ್ಪಿತ್ತು ನಂಗೆ" ಎಂದ ರಮೇಶ.
"ಎಷ್ಟು ವರ್ಷ ಆಯ್ತು ನಿಮ್ದೆಲ್ಲ ಸುದ್ದಿ ಇಲ್ದೇ… ಕೈಕಾಲು ತೊಳ್ಕೋ ಬಾ, ಕಾಫಿ ಮಾಡ್ತೇನೆ" ಅಂತ ಐತಾಳರು ಮನೆಯೊಳಗೆ ನಡೆದರು.
ಗುಡ್ಡಕ್ಕಾನಿಸಿದಂತೆ ಕಟ್ಟಿದ್ದ ಮನೆಯ ಬದಿಯಲ್ಲಿ ಕಾಲುಹಾದಿಯ ಪಕ್ಕವಿದ್ದ ಸುರಂಗದಿಂದ ಪೈಪಿನಲ್ಲಿ ಬರುತ್ತಿದ್ದ ನೀರಿನಲ್ಲಿ ಕಾಲು ತೊಳೆದುಕೊಂಡ ರಮೇಶ. ಚಿಕ್ಕವನಿರಬೇಕಾದರೆ ಶಾಲೆಯಿಂದ ಬರುವಾಗ ದಿನಾ ಸಂಜೆ ಇದೇ ಸುರಂಗದ ನೀರು ಕುಡಿಯುತ್ತಿದ್ದುದು ನೆನಪಾಯ್ತು. ಹಾಗೇ ಈಗಲೂ ಕುಡಿಯಬೇಕೆಂದು ತೀವ್ರವಾಗಿ ಅನಿಸಿ ಬೊಗಸೆ ತುಂಬಿಕೊಂಡು ಕುಡಿದೇ ಕುಡಿದ.
ತಣ್ಣಗಿನ ಸಿಹಿ ನೀರು ಗಂಟಲಲ್ಲಿಳಿದಾಗ ಬೆಂಗಳೂರಿನಿಂದ ಬಂದ ಪ್ರಯಾಣದ ಸುಸ್ತೆಲ್ಲ ಒಂದು ತೂಕ ಕಡಿಮೆಯಾದಂತಾಯಿತು.
ಒಳಗೆ ಹೋಗಿ ಕುಳಿತುಕೊಂಡು ಗೋಡೆಯಲ್ಲಿದ್ದ ಫೋಟೋಗಳನ್ನೆಲ್ಲ ನೋಡತೊಡಗಿದ. ಕಾಫಿ ಜತೆ ಬಂದ ಐತಾಳರು ಪಟ್ಟಾಂಗ ಆರಂಭಿಸಿದರು. ಮಕ್ಕಳೆಲ್ಲ ಮಂಗಳೂರಲ್ಲಿದ್ದಾರೆ. ಹೆಂಡತಿ ದೊಡ್ಡ ಮಗನ ಮನೆಗೆ ಹೋಗಿದ್ದಾಳೆ, ಬರುವುದು ಒಂದು ತಿಂಗಳಾಗಬಹುದು, "ಹೀಗಾಗಿ ಮನೆಗೆಲ್ಲಾ ನನ್ನದೇ ಸಾಮ್ರಾಜ್ಯ" ಅಂತ ನಕ್ಕರು. ರಮೇಶನೂ ನಕ್ಕ.
ಐತಾಳರು ಊರಲ್ಲಿದ್ದ ಕಾರ್ಯಕ್ರಮಗಳಿಗೆಲ್ಲ ಅಡಿಗೆಮಾಡುತ್ತ ತಮ್ಮ ತುಂಬುಸಂಸಾರವನ್ನು ಸಾಕಿದವರು. ಈಗ ಆ ಕೆಲಸ ನಿಲ್ಲಿಸಿದ್ದರೂ ಊರಲ್ಲಿರುವ ಎಲ್ಲರ ಬಗ್ಗೆಯೂ ವಿಷಯಗಳು ಗೊತ್ತು. ತನಗೆ ಬೇಕಿರದಿದ್ದರೂ ಐತಾಳರ ಹತ್ತಿರ ಇನ್ನೇನು ಮಾತಾಡಲೂ ತೋಚದೆ ಅವರು ಹೇಳಿದ್ದೆಲ್ಲ ಕೇಳಿಸಿಕೊಂಡ.
“ನಿಮ್ಮಪ್ಪ ಅಮ್ಮ ಚೆನ್ನಾಗಿದ್ದಾರಾ,” ಅಂತ ಕೇಳಿದ ಐತಾಳರಿಗೆ, “ಅಮ್ಮ ತೀರಿಹೋಗಿ ಒಂದು ತಿಂಗ್ಳಾಯ್ತು. ಅವ್ಳು ಹೇಳಿದ್ದೊಂದು ಕೆಲಸ ಬಾಕಿಯಿತ್ತು, ಅದಕ್ಕೆ ಬಂದದ್ದು ನಾನು. ಅಪ್ಪನ ಕತೆ ಗೊತ್ತಿಲ್ಲ, ನಮ್ ಮನೆಗೆ ಬರ್ಲೇ ಇಲ್ಲ, ನೀವೇನಾದ್ರೂ ನೋಡಿದ್ರಾ,” ಅಂದ ರಮೇಶ.
“ಅಯ್ಯೋ ರುಕ್ಮಕ್ಕ ತೀರ್ಕೊಂಡ್ಲಾ... ಪುಣ್ಯಾತ್ಗಿತ್ತಿ ಅವಳು ಜೀವನದಲ್ಲಿ ಅನುಭವಿಸಿದಷ್ಟು ಯಾರೂ ಅನುಭವಿಸಿರೂದಿಲ್ಲ ಬಿಡು, ಆ ದೊಡ್ಮನೆಗೋಸ್ಕರ ಏನೇನೋ ಮಾಡ್ಬೇಕಾಯ್ತು ಅವ್ಳು. ಊರು ಬಿಟ್ಟು ಬೇರೆಕಡೆ ಹೋಗಿ ಒಳ್ಳೆ ಕೆಲಸ ಮಾಡಿದ್ಲು,” ಎಂದು ನಿಟ್ಟುಸಿರು ಬಿಟ್ಟರು ಐತಾಳರು.
ರಮೇಶನಿಗೆ ಗೊತ್ತಿಲ್ಲದ್ದೇನಲ್ಲ ಅವನಮ್ಮ ಪಟ್ಟ ಕಷ್ಟ. ಪಾಪ, ಕೆಲಸ ಮಾಡಿ ಮಾಡಿ ಜೀವ ತೇದಿದ್ದಳು ಅವಳು. "ದೊಡ್ಮನೆಯಲ್ಲಿ ಈಗ ಯಾರಿದಾರೆ?" ಕೇಳಿದ.
ಐತಾಳರು ರಮೇಶನನ್ನ ದಿಟ್ಟಿಸಿ ನೋಡಿದರು. "ಅಲ್ಲಿ ಯಾರಿರ್ತಾರೆ, ಲಕ್ಷ್ಮಮ್ಮ ಇರುವವರೆಗೆ ಮನೇಲಿ ಜನ ಇದ್ರು. ಈಗ ಮೂರನೇ ಮಗ ವಿಶ್ವನಾಥ ತಿಂಗಳಿಗೊಂದ್ಸಲ ಬಂದು ಕೆಲಸದವರಿಗೆ ಸಂಬಳ ಕೊಟ್ಟು ಹೋಗ್ತಾನೆ, ಉಳಿದವರು ಮೂವರು ಅಮೆರಿಕಾದಲ್ಲಿದ್ದಾರೆ," ಎಂದರು. ಏನೋ ನಾಲಿಗೆ ತುದಿಗೆ ಬಂದ ಮಾತು ಹಿಡಿದಿಡುತ್ತಿದ್ದಾರೆ ಅಂತನಿಸಿತು ರಮೇಶನಿಗೆ. ಅವರಾಗಿಯೇ ಹೇಳಲಿ ಅಂದುಕೊಂಡ, ಆದರೆ ಅವರು ಹೇಳಲಿಲ್ಲ.
“ಕೃಷ್ಣಪ್ಪಂದು ಏನೂ ಸುದ್ದಿ ಇಲ್ಲ, ಅವ ಇಲ್ಲಿ ಬಂದು ಒಂದು ನಾಕು ವರ್ಷ ಆಯ್ತೇನೋ. ಒಂದಿನ ರಾತ್ರಿ ಬಂದವ ಇಲ್ಲಿಯೇ ಇದ್ದ. ಹೆಚ್ಚು ಮಾತಾಡ್ಲೇ ಇಲ್ಲ, ಮರುದಿನ ಬೆಳಿಗ್ಗೆ ಹೊರಟೋದವ ಆಮೇಲೆ ಬರ್ಲೇ ಇಲ್ಲ,” ಅಂದರು.
"ನೀನು ಮಲ್ಕೊಂಡು ರೆಸ್ಟ್ ತಕ್ಕೋ, ನಾನು ತಿಂಡಿ ಏನಾದ್ರು ಮಾಡ್ತೇನೆ," ಅಂತ ಚಾಪೆ ಹಾಸಿ ಕೊಟ್ಟು ಐತಾಳರು ಒಳನಡೆದರು.
ಹೀಗೆ ತನ್ನ ಅಪ್ಪ ಏನಾದ ಅಂತ ಯಾರಿಗೂ ಗೊತ್ತಿಲ್ಲದಿರುವುದು ರಮೇಶನಿಗೆ ಅದೇನೋ ಖುಷಿ ಕೊಟ್ಟಿತು. ಬದುಕಿದ್ದಾಗ ಅಪ್ಪ ಮಾಡಿದ ಪಾಪಕ್ಕೆ ಇದೇ ಶಿಕ್ಷೆ ಅಂದುಕೊಂಡ. ಕಾಫಿ ಕುಡಿದು ಹಾಗೇ ಚಾಪೆಯಲ್ಲಿ ಮೈಚಾಚಿ ಅರೆಗಣ್ಣಾದ.
************
ರಮೇಶನ ಅಪ್ಪ ಮಾಡುತ್ತಿದ್ದ ಕೆಲಸಕ್ಕೆ ಹೆಸರು ಸಂಸ್ಕೃತದಲ್ಲಿ ಪರಿಕರ್ಮ ಅಂತ, ಕನ್ನಡದಲ್ಲಿ ಹಾಗಂದರೆ ಸೇವೆ. ಪೂಜೆಗಳಿಗೆ ಪುರೋಹಿತರ ಜತೆ ಹೋಗಿ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಂಡಲ ಹಾಕುವುದು ಇತ್ಯಾದಿಗೆ ಅವರಿಗೆ ಸಹಾಯ ಮಾಡಬೇಕು. ಯಾರಾದರೂ ಸತ್ತಾಗ ಅವರ ಅಪರಕ್ರಿಯೆ, ಬೊಜ್ಜ, ಶಪಿಂಡಿ ಇತ್ಯಾದಿಗಳಲ್ಲಿ ದೊಡ್ಡ ಪುರೋಹಿತರ ಜತೆ ಪಾಲ್ಗೊಳ್ಳಬೇಕು. ಬೇಕಾದಾಗ ಗರುಡಪುರಾಣವೂ ಓದಬೇಕು.
ಪಾಪ ಪರಿಹಾರಕ್ಕೆಂದು ಅವರು ಕೊಡುವ ದಾನಗಳನ್ನು ತೆಗೆದುಕೊಳ್ಳಬೇಕು. ತೆಗೆದುಕೊಂಡ ದಾನಗಳು ತನ್ನ ಮೇಲೆ ಕೆಟ್ಟ ಪರಿಣಾಮ ಬೀರದಿರಲೆಂದು ನಿಷ್ಟೆಯಿಂದ ಅದಕ್ಕಿರುವ ಮಂತ್ರಗಳನ್ನು ಹೇಳಿ ಜಪ ಮಾಡಬೇಕು. ಇಲ್ಲವಾದರೆ ಸತ್ತವರ ಪಾಪವು ಭೂತವಾಗಿ ಕಾಡುತ್ತದೆಯೆಂದು ಅಮ್ಮ ಹೇಳುತ್ತಿದ್ದಳು. ಇವೆಲ್ಲ ಕೇಳಿ ಕೇಳಿ ಪಾಪವೆಂದರೆ ಒಂದು ಅಸಹ್ಯವಾದ ವಾಸನೆ ಬರುವ ಅಂಟುಪದಾರ್ಥವೆಂಬ ಕಲ್ಪನೆ ರಮೇಶನ ಮನಸಲ್ಲಿ ಕೂತುಬಿಟ್ಟಿತು.
ಇದು ಬಿಟ್ಟರೆ ಚಿಕ್ಕಪುಟ್ಟ ವಾರ್ಷಿಕ ತಿಥಿಗಳಿಗೆ ಅಪ್ಪ ಹೋಗ್ತಿದ್ದ. ಅವರಿಗೆ ಬೇರೆ ಆದಾಯವೇನೂ ಇರಲಿಲ್ಲ. ಕಾಡಿನ ನಡುವಿರುವ ಪುಟ್ಟ ಊರಿನಲ್ಲಿ ಜನರೂ ಕಡಿಮೆ, ಹುಟ್ಟುಸಾವುಗಳೂ ಕಡಿಮೆ. ಹಾಗಾಗಿ ದೂರದೂರುಗಳಿಗೆ ಅಪ್ಪ ಹೋಗಬೇಕಾಗಿ ಬರುತ್ತಿತ್ತು. ಮನೆಗೆ ಬಂದಾಗೆಲ್ಲ ಅಪ್ಪ ಮೌನಿಯಾಗಿರುತ್ತಿದ್ದ. ಮೂರು ಹೊತ್ತೂ ಬೀಡಿ ಸೇದುತ್ತಿದ್ದ. ಆಚೆಗೆ ಯಾರ ಜತೆಯೂ ಹೆಚ್ಚು ಬೆರೆಯುತ್ತಿರಲಿಲ್ಲ.
ಅಪ್ಪ ಇರುವ ರೀತಿ ನೋಡಿದ ರಮೇಶನಿಗೆ ಪರಿಕರ್ಮ, ಅಪರಕರ್ಮ, ದಾನ, ಪುರಾಣ, ಪಾಪ, ಪುಣ್ಯ, ನೀತಿ, ನಿಯಮ, ಸ್ವರ್ಗ, ನರಕ, ಪೂಜೆ, ಪುನಸ್ಕಾರ ಎಲ್ಲದರ ಮೇಲೆಯೂ ಚಿಕ್ಕವನಿದ್ದಾಗಲೇ ಜಿಗುಪ್ಸೆ ಹುಟ್ಟಿತ್ತು. ಅಪ್ಪ ಜಪ ಮಾಡುತ್ತಾ ಕೂತಿರುವುದು ಕಂಡರೆ ಅವನಿಗೆ ಅಪ್ಪನ ಮೈಮೇಲೆಲ್ಲ ಪಾಪ ಕೂತಿದೆ ಎನಿಸಿ ಅಸಹ್ಯವೆನಿಸುತ್ತಿತ್ತು.
ಮನೆಯಲ್ಲಿದ್ದ ಹಸುಗಳು, ಅವಕ್ಕೆ ಮೇವು, ತೋಟಕ್ಕೆ ಮಣ್ಣು, ಗೊಬ್ಬರ ಇತ್ಯಾದಿ ಖರ್ಚುಗಳಿಗೆ ಅಪ್ಪ ದುಡಿಯುತ್ತಿದ್ದುದು ಸಾಕಾಗುತ್ತಿರಲಿಲ್ಲ. ಆದರೆ ಅಮ್ಮ ಪಕ್ಕದಲ್ಲಿದ್ದ ಶಂಕರಮಾಮನ ಮನೆಯಲ್ಲಿ ದುಡಿಯುತ್ತಿದ್ದಳಲ್ಲ, ಹಾಗಾಗಿ ಮನೆ ಸುಸೂತ್ರವಾಗಿ ಸಾಗಿತ್ತು. ಶಂಕರಮಾಮ ರಮೇಶ ಹುಟ್ಟುವುದಕ್ಕೆ ಮೊದಲೇ ತೀರಿಕೊಂಡಿದ್ದರಂತೆ. ಅವರಿಗೆ ನಾಲ್ಕು ಗಂಡು ಮಕ್ಕಳು. ಚೆನ್ನಾಗಿ ಓದಿಕೊಂಡು ದೇಶವಿದೇಶಗಳ ಬೇರೆ ಬೇರೆ ಊರುಗಳಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದರಂತೆ. ಅವರ್ಯಾರನ್ನೂ ರಮೇಶ ನೋಡಿಯೇ ಇರಲಿಲ್ಲ.
ನಡೆದರೆ ಭೂಮಿ ನಡುಗುವಷ್ಟು ದಪ್ಪವಿದ್ದ ಶಂಕರಮಾಮನ ಹೆಂಡತಿ ಲಕ್ಷ್ಮಮ್ಮನಿಗೆ ಮನೆ, ತೋಟ ನೋಡಿಕೊಳ್ಳಲು, ಪಾತ್ರೆ-ಬಟ್ಟೆ ತೊಳೆಯಲು, ಕೆಲಸಕ್ಕೆ ಬರುವ ಆಳುಗಳಿಗೆ ಮತ್ತು ಮನೆಯವರಿಗೆ ಅಡಿಗೆ ಮಾಡಿಹಾಕಲು, ಹಸುಗಳನ್ನು ನೋಡಿಕೊಳ್ಳಲು ಸಹಾಯ ಬೇಕಿತ್ತು. ಅಮ್ಮ ದೊಡ್ಮನೆಗೆ ಹೆಚ್ಚು ಕಮ್ಮಿ ಇಪ್ಪತ್ತು ವರ್ಷದಿಂದ ಹೋಗ್ತಿದ್ದಳಂತೆ. ಅವರ ಮನೆಕೆಲಸವೆಲ್ಲ ಅಮ್ಮನೇ ಮಾಡುತ್ತಿದ್ದಳು, ತಿಂಗಳಿಗೆ ಅವರು ಕೊಡುವ ಇನ್ನೂರು ರುಪಾಯಿ, ಜತೆಗೆ ಅವರ ಮನೆ ಹಳೆಬಟ್ಟೆಗಳು, ಹೆಚ್ಚಾಗಿ ಉಳಿದ ಊಟ ಇತ್ಯಾದಿಗಳಲ್ಲಿ ಮನೆವಾರ್ತೆ ಕಳೆಯುತ್ತಿತ್ತು. ಪ್ರತಿವರ್ಷ ಕರು ಹಾಕುತ್ತಿದ್ದ ಹಸುವಿನ ಹಾಲು ಮಾರುವುದರಿಂದಲೂ ಒಂದಷ್ಟು ದುಡ್ಡು ಬರುತ್ತಿತ್ತು.
ರಮೇಶ ಅವನಮ್ಮನಿಗೆ ಕೊನೇಮಗ. ಅವನಿಗೊಬ್ಬ ಅಕ್ಕ ಮತ್ತು ಅಣ್ಣ. ಅಕ್ಕನಿಗೂ ಇವನಿಗೂ ಹದಿನಾರು ವರ್ಷದ ಅಂತರ. ಅವಳಿಗೆ ಹದಿನೆಂಟು ತುಂಬುತ್ತಲೇ ಇವನು ತೀರಾ ಚಿಕ್ಕವನಿದ್ದಾಗಲೇ ತಿರುವನಂತಪುರದ ನಂಬೂದಿರಿಗಳೊಬ್ಬರ ಮನೆಗೆ ಮದುವೆ ಮಾಡಿ ಕೊಟ್ಟಿದ್ದರು. ಅವಳು ಅದ್ಯಾಕೋ ಏನೋ, ಮನೆಕಡೆಗೆ ಬರುತ್ತಲೇ ಇರಲಿಲ್ಲ.
ಅಣ್ಣ ಇವನಿಗಿಂತ ಐದು ವರ್ಷ ದೊಡ್ಡವನಂತೆ, ಆದರೆ ಅವನನ್ನು ನೋಡಿದ್ದೇ ರಮೇಶನಿಗೆ ನೆನಪಿಲ್ಲ. ಎಂಟು ವರ್ಷದ ಹುಡುಗನ ಹೆಣ ಅಕ್ಕನ ಮದುವೆಯಾದ ಮರುವರ್ಷ ಶಂಕರಮಾಮನ ಹಿತ್ತಿಲಲ್ಲಿ ತೋಟದಲ್ಲಿದ್ದ ಬಾವಿಯಲ್ಲಿ ಸಿಕ್ಕಿತ್ತು. ಬಾವಿಗಿಳಿದು ಅವನ ಹೆಣವನ್ನು ಮೇಲೆತ್ತಿ ತಂದಿದ್ದ ಅಪ್ಪ ವಾರಗಟ್ಟಲೆ ಮಂಕುಬಡಿದವನಂತೆ ಕೂತಿದ್ದನಂತೆ. ಇದಾದ ಮೇಲೆ ಆ ಬಾವಿಯನ್ನು ಮುಚ್ಚಿಯೇ ಬಿಟ್ಟಿದ್ದರು.
ಇವೆಲ್ಲ ರಮೇಶನಿಗೆ ಅವನ ಅತ್ತೆ ಹೇಳಿ ಗೊತ್ತಾಗಿದ್ದು. ಅಮ್ಮ-ಅಪ್ಪ ಇಬ್ಬರೂ ಈ ಬಗ್ಗೆ ಯಾವತ್ತೂ ಮಾತಾಡಿರಲಿಲ್ಲ. ಅಮ್ಮನ ಕಪ್ಪುಕಣ್ಣುಗಳಲ್ಲಿ ಅಡಗಿದ ನೋವು ರಮೇಶನಿಗೆ ಅರ್ಥವಾಗಿರಲಿಲ್ಲ. ಅವಳು ಅವನ ಜೊತೆಗೆ ಅದನ್ನು ಹಂಚಿಕೊಂಡಿರಲೂ ಇಲ್ಲ.
************
ಮನೆಗೆಲ್ಲ ಒಬ್ಬನೇ ಮಗನಾಗಿ ಬೆಳೆದರೂ ಅಪ್ಪನ ಪ್ರೀತಿ ಅಂದರೇನು ಅಂತಲೇ ರಮೇಶನಿಗೆ ಗೊತ್ತಿರಲಿಲ್ಲ. ಆತ ಯಾವತ್ತೂ ಸಮಾಧಾನದಲ್ಲಿ ಮಾತಾಡಿಸಿದ್ದಾಗಲೀ ಮುಖಕ್ಕೆ ಮುಖ ಕೊಟ್ಟು ಪ್ರೀತಿಯಿಂದ ನೋಡಿದ್ದಾಗಲೀ ಅವನಿಗೆ ನೆನಪೇ ಇಲ್ಲ. ಇವನ ಮುಖ ಕಂಡರೆ ಸಿಂಡರಿಸಿಕೊಳ್ಳುತ್ತಿದ್ದ. ಆಗಾಗ ಮೈಮೇಲೆ ಬಂದವರಂತೆ ಬೈಯುತ್ತಿದ್ದ, ಹೊಡೆಯುತ್ತಿದ್ದ. ಅಮ್ಮನಿಗಂತೂ ಅಪ್ಪ ದನಕ್ಕೆ ಬಡಿದಂತೆ ಬಡಿದಿದ್ದಕ್ಕೆ ಲೆಕ್ಕವೇ ಇಲ್ಲ. ಅವಳ ಮೈತುಂಬಾ ತರತರದ ಗಾಯಗಳಿತ್ತು. ಅಷ್ಟಾದರೂ ಅಮ್ಮ ಸುಮ್ಮನಿರುತ್ತಿದ್ದಳು, ಒಂದು ದಿನವೂ ಆಕೆ ಎದುರಾಡಿದ್ದು ರಮೇಶ ನೋಡಿರಲಿಲ್ಲ. ಸದಾ ಗಂಟುಮುಖ ಹಾಕಿರುತ್ತಿದ್ದ ಅಪ್ಪ ಅಂದರೆ ರಮೇಶನ ಮನಸ್ಸಲ್ಲಿರುವುದು ದ್ವೇಷ ಮಾತ್ರ.
ಅಮ್ಮ ರಮೇಶನ ಮೇಲೆ ಜೀವವನ್ನೇ ಇಟ್ಟಿದ್ದಳು. ಅವನನ್ನು ಒಂಟಿಯಾಗಿ ಅಪ್ಪನ ಜತೆ ಯಾವತ್ತೂ ಬಿಡುತ್ತಿರಲಿಲ್ಲ. ಅವನ ಶಾಲೆ, ಫೀಸು, ಯೂನಿಫಾರ್ಮು, ಪುಸ್ತಕ ಎಲ್ಲದೂ ಅವಳೇ ನೋಡಿಕೊಳ್ಳುತ್ತಿದ್ದಳು. ರಮೇಶನೂ ಅಷ್ಟೇ, ಅಮ್ಮ ಮನೆಯಲ್ಲಿರಬೇಕಾದರೆ ಅವಳ ಬೆನ್ನು ಬಿಡುತ್ತಿರಲಿಲ್ಲ. ಹಸುವಿಗೆ ಹುಲ್ಲು ತರಲಿಕ್ಕೆ, ನೀರು ತರಲಿಕ್ಕೆ, ತೋಟಕ್ಕೆ - ಹೀಗೆ ಅಮ್ಮ ಎಲ್ಲೇ ಹೋದರೂ ಅವಳ ಜತೆಯೇ ಹೋಗುತ್ತಿದ್ದ.
ಶಂಕರಮಾಮನ ಮನೆಗೆ ಮಾತ್ರ ಬರುವುದು ಬೇಡವೆಂದು ಹೇಳಿಬಿಟ್ಟಿದ್ದಳು ಅಮ್ಮ. ರಮೇಶ ಶಾಲೆಗೆ ಹೋದ ಸಮಯ ತಾನು ಅಲ್ಲಿಗೆ ಹೋಗಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಳು, ಭಾನುವಾರ ರಮೇಶನಿಗೆ ರಜಾ ಇರಬೇಕಾದರೆ ಮನೆಯಲ್ಲೇ ಇರುತ್ತಿದ್ದಳು.
ಮನೆಯ ಹಸು ನಂದಿನಿಯೆಂದರೆ ರಮೇಶನಿಗೆ ಸಿಕ್ಕಾಪಟ್ಟೆ ಪ್ರೀತಿ. ಮೇಯಲಿಕ್ಕೆ ಬಿಟ್ಟ ನಂದಿನಿಯನ್ನು ಸಂಜೆ ಹೊತ್ತು ಮನೆಗೆ ಕರೆಯುವುದು ರಮೇಶನ ಪ್ರೀತಿಯ ಕೆಲಸ. ಐದಾಗುತ್ತಲೇ ಮನೆಯಂಗಳದಲ್ಲಿ ನಿಂತು “ನಂದಿನೀ ಬಾ… ಬಾ...” ಅಂತ ಕರೆದು, ತನ್ನ ದನಿ ಸುತ್ತಲ ಕಾಡು ತುಂಬಿದ ಗುಡ್ಡಗಳಿಗೆ ಹೊಡೆದು ಮಾರ್ದನಿಸುವುದನ್ನು ಕೇಳಿ ಖುಷಿ ಪಡುತ್ತಿದ್ದ. ನಂದಿನಿಯ ಕರುಗಳೆಂದರೆ ರಮೇಶನಿಗೆ ತುಂಬಾ ಪ್ರೀತಿ.
ಒಂದು ಸಾರಿ ಪ್ರಶ್ನೆಯೆದ್ದಿತ್ತು ಅವನಲ್ಲಿ, ನಂದಿನಿ ಹಾಕಿದ ಕರುಗಳ ಅಪ್ಪ ಯಾರು ಅಂತ. ಅದು ಯಾಕಂದರೆ ಎಲ್ಲರಿಗೆ ಎಲ್ಲರೂ ಗೊತ್ತಿರುವ ಊರಿನಲ್ಲಿ ಆವ ಹೋಗುತ್ತಿದ್ದ ಶಾಲೆಯಲ್ಲಿ ಮಾಸ್ತರೊಬ್ಬರು ನೀನಿರೋದು ನಿಮ್ಮಪ್ಪನ ಹಾಗಲ್ಲ ಅಂತಂದಿದ್ದರು. ಅವನ ಮನಸಿನಲ್ಲಿ ವಿಧವಿಧದ ಪ್ರಶ್ನೆಗಳೆದ್ದಿದ್ದವು. ನಂದಿನಿಯ ಕರು ಅವಳ ಹಾಗಿರಲಿಲ್ಲ. ಅದರ ಅಪ್ಪನ ಹಾಗಿದೆಯೇನೋ ಎಂಬ ಸಂಶಯಕ್ಕೆ ಅಮ್ಮನಿಗೆ ಕೇಳಿದರೆ “ಹುಟ್ಟಿಸಿದ್ರು ಅನ್ನೂದಷ್ಟೇ ಕಾರಣಕ್ಕೆ ಹೋರಿಗಳು ಅಪ್ಪ ಆಗೂದಿಲ್ಲ ಮಗಾ. ಅಪ್ಪ ಯಾರಾದ್ರೇನು, ಕರು ನೋಡ್ಕೊಳೋದು ನಂದಿನಿ ತಾನೇ,” ಅಂತಿದ್ದಳು.
ಆದರೆ ಹುಟ್ಟಿದ ಹೆಣ್ಣುಕರುಗಳನ್ನೆಲ್ಲಾ ಸಾಕುವವರಿಗೆ ಮಾರಿ, ಗಂಡು ಕರುಗಳನ್ನು ಕಸಾಯಿಖಾನೆಯ ಬ್ಯಾರಿಗೆ ಅಮ್ಮ ಕೊಡುವಾಗ ಮಾತ್ರ ರಮೇಶನಿಗೆ ಬೇಸರವೆನಿಸುತ್ತಿತ್ತು. ಆದರೇನು ಮಾಡುವುದು, ಹಟ್ಟಿಯಲ್ಲಿದ್ದ ಜಾಗ ಒಂದು ಹಸು, ಒಂದು ಕರುವಿಗೆ ಮಾತ್ರ ಸಾಲುವಷ್ಟಿದ್ದು ಬೇರೆ ಉಪಾಯವಿರಲಿಲ್ಲ.
************
ಅಪ್ಪ ಎನ್ನುವ ಶಬ್ದ ರಮೇಶನಿಗೆ ನೆನಪಿಸುವುದು ಮಾತ್ರ ಅವನು ಆರನೇ ಕ್ಲಾಸು ಇರಬೇಕಾದರೆ ಆಗಿದ್ದ ಘಟನೆ.
ಆದಿನ ಊರು ಬಿಟ್ಟು ವಾರವಾದ ಮೇಲೆ ಅಪ್ಪ ಮನೆಗೆ ಬಂದ. ಅಮ್ಮ ಶಂಕರಮಾಮನ ಮನೆಯಿಂದ ಇನ್ನೂ ಬಂದಿರಲಿಲ್ಲ. ಮನೆಯ ಚಾವಡಿಯಲ್ಲಿ ರಮೇಶ ಕೂತುಕೊಂಡು ಶಾಲೆಯ ಹೋಂವರ್ಕ್ ಮಾಡ್ತಿದ್ದ.
ತನ್ನ ಚೀಲದಿಂದ ಅಕ್ಕಿ, ತೆಂಗಿನಕಾಯಿ, ಬಟ್ಟೆ ಇತ್ಯಾದಿಗಳು ತೆಗೆದಿಟ್ಟ ಅಪ್ಪ ಜೋರಾಗಿ ಕೆಮ್ಮಿದಂತೆ ಮಾಡಿ ತಾನು ಬಂದಿದ್ದೇನೆಂದು ತಿಳಿಯಪಡಿಸಿದ. ಅಮ್ಮ ಇದ್ದಿದ್ದರೆ ಸ್ವಲ್ಪ ಹೊತ್ತಿನಲ್ಲೇ ಅಲ್ಯುಮಿನಿಯಂ ಚೊಂಬಿನಲ್ಲಿ ನೀರು, ಪ್ಲೇಟಿನಲ್ಲಿ ಬೆಲ್ಲ ತಂದಿಡುತ್ತಿದ್ದಳು. ಅವಳಿರಲಿಲ್ಲವಾದ ಕಾರಣ ರಮೇಶ ಹೆದರುತ್ತಲೇ ನೀರು ತಂದು ಕೊಟ್ಟ.
ಪ್ರಯಾಣದ ಸುಸ್ತಿಗೋ ಏನೋ ಹಾಗೇ ಗೋಡೆಗೆ ತಲೆಯೊರಗಿಸಿ ಕುಳಿತ ಅಪ್ಪ ಚೊಂಬು ನೆಲದಲ್ಲಿಟ್ಟ ಶಬ್ದಕ್ಕೆ ಕಣ್ತೆರೆದ. ಮಗನನ್ನೇ ದಿಟ್ಟಿಸಿದ. ರಮೇಶನಿಗೆ ಭಯಕ್ಕೆ ತೊಡೆ ನಡುಗಲು ಶುರುವಾಯಿತು. ದೂರ ಕುಳಿತುಕೊಂಡು ಪುಸ್ತಕ ಬಿಡಿಸಿ ಬರೆಯುವಂತೆ ನಟಿಸತೊಡಗಿದ.
ನೀರು ಕುಡಿಯದೇ ಹಾಗೇ ಬೀಡಿ ಹಚ್ಚಿ ಸೇದತೊಡಗಿದ ಅಪ್ಪ ಎರಡು ನಿಮಿಷಕ್ಕೆ ಎದ್ದು ರಮೇಶನ ಬಳಿ ಬಂದ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅವನ ಬಲತೋಳಿನಲ್ಲಿದ್ದ ಕಾಸಗಲದ ಮಚ್ಚೆಗೆ ಉರಿಯುತ್ತಿದ್ದ ಬೀಡಿಯಿಂದ ಚುಚ್ಚಿದ. ರಮೇಶ ಜೋರಾಗಿ ಅಳುತ್ತ ತಪ್ಪಿಸಿಕೊಳ್ಳಲು ಹೊರಟರೆ ಅಪ್ಪ ಬಿಡಲಿಲ್ಲ.
ಮಗನನ್ನು ಅಟ್ಟಾಡಿಸಿಕೊಂಡು ಮನೆಯಾಚೆಗೆ ಬಂದ ಅಪ್ಪನನ್ನು ಶಂಕರಮಾಮನ ಮನೆಯಿಂದ ತೋಟದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಕೆಲಸದವರು ಹಿಡಿದು ನಿಲ್ಲಿಸಿ, “ಇದೆಂತ ಅಣ್ಣೇರೇ, ಮಗುವಿಗೆ ಯಾಕೆ ಹೊಡೀತೀರಿ, ಬಿಡಿ,” ಅಂತ ಸುಮ್ಮನಾಗಿಸದೇ ಇದ್ದಿದ್ದರೆ ತನ್ನ ಗತಿ ಏನಾಗಿರುತ್ತಿತ್ತು ಅಂತ ರಮೇಶನಿಗೆ ಇವತ್ತಿಗೂ ಯೋಚನೆಯಾಗುತ್ತದೆ.
ಗಾಯ ಮಾಗಿದರೂ ಚರ್ಮ ಚಿಕ್ಕದಾಗಿ ಬೊಬ್ಬೆಯೆದ್ದು ಇನ್ನೂ ಗುರುತುಳಿದಿದ್ದ ಆ ಮಚ್ಚೆಯನ್ನು ಆಗಾಗ ಕೈಯಲ್ಲಿ ಮುಟ್ಟಿಕೊಳ್ಳುತ್ತಾನೆ ರಮೇಶ. ಅಪ್ಪನ ಮೇಲೆ ಮನಸು ಮೃದುವಾಗದಂತೆ ಅದು ಅವನನ್ನು ತಡೆಯುತ್ತದೆ.
********
ಇದಾದ ಮೇಲೆ ಅಮ್ಮ ರಮೇಶನನ್ನು ಒಬ್ಬನೇ ಇರಲು ಬಿಡಲಿಲ್ಲ. ಆ ವರ್ಷದ ಬೇಸಿಗೆ ರಜೆಯಲ್ಲಿ ಅವನನ್ನು ಹತ್ತೂರಿನಲ್ಲಿದ್ದ ತನ್ನ ಅಣ್ಣನ ಮನೆಗೆ ಕಳಿಸಿದಳು. “ಅಲ್ಲಿ ಅವರೇನಾದರೂ ಹೇಳಿದ್ರೆ ಬೇಜಾರ್ ಮಾಡ್ಕೊಬೇಡ, ಅವ್ರು ಹೇಳಿದ ಕೆಲಸಗಳೆಲ್ಲ ಮಾಡ್ಕೊಂಡು ಓದ್ಬೇಕು, ನಿನ್ನ ಗಮನ ಬೇರೆಲ್ಲೂ ಹೋಗ್ಬಾರ್ದು,” ಅಂತ ಕಟ್ಟುನಿಟ್ಟಾಗಿ ಹೇಳಿದಳು.
ಅಮ್ಮ ಹೇಳಿದಂತೆಯೇ ಮಾವನ ಮನೆಯಲ್ಲಿ ಅಜ್ಜಿ, ಮಾವ, ಅತ್ತೆ ಹೇಳಿದ ಕೆಲಸ ಮಾಡಿಕೊಂಡು ಅವರ ಮಕ್ಕಳ ಜತೆಗೆ ನಾಕು ವರ್ಷ ಇದ್ದ ರಮೇಶ. ಅತ್ತೆ ಅಮ್ಮನಷ್ಟು ಒಳ್ಳೆಯವಳಲ್ಲದಿದ್ದರೂ, ಹಸುವಿಗೆ ಹುಲ್ಲು ತರುವುದರಿಂದ ಹಿಡಿದು ಎಲ್ಲ ಕೆಲಸ ಮಾಡಿಸಿಕೊಂಡರೂ, ಊಟ ಮಾಡುವಾಗ ತನ್ನ ಮಕ್ಕಳಿಗೆ ತುಪ್ಪ ಬಡಿಸಿ ಇವನಿಗೆ ಎಣ್ಣೆ ಬಡಿಸಿದರೂ, ಒಳ್ಳೆಯವಳೇ ಆಗಿದ್ದಳು. ಹೊತ್ತು ಹೊತ್ತಿಗೆ ಊಟ ಹಾಕುತ್ತಿದ್ದಳು. ನಯವಾಗಿ ಮಾತಾಡುತ್ತಿದ್ದಳು.
ಅಜ್ಜಿ ಭಾವಂದಿರ ಹಳೆಬಟ್ಟೆಗಳು ಹೊಲಿದು ರಮೇಶನಿಗೆ ಕೊಡುತ್ತಿದ್ದಳು. ಏನೇನೋ ಕತೆಗಳು ಹೇಳುತ್ತಿದ್ದಳು. ಆದರೆ ರಮೇಶನಿಗೆ ಅಜ್ಜಿಯ ಜತೆ ಕಳೆಯಲು ಸಮಯವಿರುತ್ತಿರಲಿಲ್ಲ. ಮಾವ ಆಗಾಗ ನೀನು ಹಾಗಾಗಬೇಕು ಹಾಗಾಗಬೇಕು ಅಂತ ಉಪದೇಶ ಕೊಡುತ್ತಿದ್ದ. ಪೇಟೆಗೆ ಹೋಗಿ ಸಾಮಾನು ತರುವಾಗ ಜತೆಗೆ ಕರೆದುಕೊಂಡು ಹೋಗಿ ವ್ಯವಹಾರ ಕಲಿಸಿದ. ಜತೆಗೆ ಸಾಮಾನು ಕೂಡ ಹೊರಿಸಿದ, ಕೆಲಸಗಳು ಕೂಡ ಮಾಡಿಸಿದ.
ರಮೇಶನನ್ನು ಅಣ್ಣನ ಮನೆಗೆ ಕಳಿಸಿದ ಸಮಯದಲ್ಲೇ ಮೂಲೆಮನೆಯ ಐತಾಳರು ಅವರ ಸಂಬಂಧಿಗಳು ಯಾರೋ ಬೆಂಗಳೂರಿನಲ್ಲಿದ್ದಾರೆ, ಗಂಡ ಹೆಂಡತಿ ಆಫೀಸಿಗೆ ಹೋಗ್ತಾರೆ, ಅಡಿಗೆ ಮಾಡಿಕೊಂಡು ಮಗು ನೋಡಿಕೊಂಡು ಇರಬೇಕು, ಹೋಗ್ತೀಯಾ ಅಂತ ಅಮ್ಮನಿಗೆ ಕೇಳಿದರು. ಅಮ್ಮ ಅಪ್ಪನ ಕೈಲಿ ಕೇಳಿದ್ದಳೋ ಇಲ್ಲವೋ ಗೊತ್ತಿಲ್ಲ, ಸಿಕ್ಕಿದ್ದೇ ಅವಕಾಶವೆಂಬಂತೆ ಹಸು-ಕರುಗಳನ್ನು ಮಾರಿ ಮನೆ, ತೋಟ ಬಿಟ್ಟು ಬೆಂಗಳೂರಿಗೆ ಹೊರಟುಹೋದಳು. ಅಲ್ಲಿಂದಲೇ ಯಾವಾಗಾದರೊಮ್ಮೆ ಅಣ್ಣನ ಮನೆಗೆ ಬಂದು ಮಗನನ್ನು ನೋಡಿ ಎರಡುಮೂರು ದಿನ ಇದ್ದು ಒಂದಿಷ್ಟು ದುಡ್ಡು ಅವನ ಕೈಲಿಟ್ಟು ವಾಪಸ್ ಹೋಗುತ್ತಿದ್ದಳು.
ಇದೆಲ್ಲದರ ನಡುವೆ ರಮೇಶ ಹತ್ತನೇ ಕ್ಲಾಸಿನಲ್ಲಿ ಶೇಕಡಾ 92ರಷ್ಟು ಮಾರ್ಕು ತೆಗೆದ. ಅಷ್ಟು ಮಾರ್ಕು ತೆಗೆಯಲಾಗದ ತನ್ನ ಮಕ್ಕಳ ಅಚ್ಚರಿ ಮತ್ತೆ ಅಸೂಯೆಯ ನಡುವೆಯೇ ಮಾವ ರಮೇಶನನ್ನು ಅಲ್ಲಿಯೇ ಇದ್ದ ಕಾಲೇಜಿಗೆ ಸೇರಿಸಿದ. ಅಲ್ಲಿ ಸಯನ್ಸ್ ತೆಗೆದುಕೊಂಡು ರಮೇಶ ಪಿಯುಸಿ, ಸಿಇಟಿಗಳಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆದಿದ್ದು, ಸ್ಕಾಲರ್ಶಿಪ್ಪುಗಳು ಮತ್ತು ಮಾವನ ಸಹಾಯದಿಂದ ಮೆಡಿಕಲ್ ಓದಿದ್ದು, ಡಾಕ್ಟರಾಗಿದ್ದು ಎಲ್ಲವೂ ಈಗ ಚರಿತ್ರೆ.
ಆದರೆ, ತನ್ನ ಮೇಲೆ ಪ್ರೀತಿಯಿದ್ದ ಒಂದೇ ಒಂದು ಜೀವವಾದ ಅಮ್ಮನಿಂದ ದೂರವಾಗಿ, ಹೇಗೋ ಬೆಳೆದು ದೊಡ್ಡವನಾದ ರಮೇಶನ ಮನಸಲ್ಲಿ ತಾನು ಯಾರಿಗೂ ಬೇಡದವನು ಎಂಬ ಭಾವ ಮನೆಮಾಡಿತ್ತು. ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಚಾರಿಟಿ ಕಾಲೇಜಿನಲ್ಲಿ ಮೆಡಿಕಲ್ ಓದುವಾಗ ಹೆಚ್ಚಾಗಿ ಯಾರ ಜತೆಗೂ ಬೆರೆಯದೆ ಏಕಾಂಗಿಯಾಗಿರುತ್ತಿದ್ದ ಇವನ ಫ್ರೆಂಡ್ಶಿಪ್ ಬೆಳೆಸಿಕೊಂಡಿದ್ದ ಜೋಸೆಫ್ "ವೈ ಡು ಯೂ ವಾಂಟು ಟು ಬಿ ಎ ಲೋನರ್" ಅಂತ ಬೈದಿದ್ದ. ರಮೇಶನನ್ನು ತಾನು ನಡೆದುಕೊಳ್ಳುತ್ತಿದ್ದ ಸೆಮಿನರಿಯ ಫಾದರ್ ಹತ್ತಿರ ಕರೆದುಕೊಂಡು ಹೋಗಿ ಮನಸಿನಲ್ಲಿದ್ದ ಕಹಿಯೆಲ್ಲ ಕಕ್ಕುವಂತೆ ಮಾಡಿದ್ದ.
ಆ ಫಾದರ್ ಸುಮಾರು ಸಮಾಧಾನದ ಮಾತುಗಳಾಡಿ ಪ್ರತಿ ವಾರ ಬಂದು ಮಾತಾಡಲು ಹೇಳಿದಾಗ ರಮೇಶನಿಗೆ ಕೊನೆಗೂ ತನ್ನನ್ನು ಕೇಳುವವರು ಯಾರೋ ಸಿಕ್ಕರು ಅನ್ನುವ ಭಾವನೆ ಬಂದು ವಿಚಿತ್ರ ಸಮಾಧಾನ ಸಿಕ್ಕಿತ್ತು. ಫಾದರ್ ಹೇಳಿದಂತೆಯೇ ನಡೆದುಕೊಂಡ ರಮೇಶ್ ಮೆಡಿಕಲ್ ಬಿಡುವಷ್ಟೊತ್ತಿಗೆ ಎಲ್ಲರಂತಾಗಿದ್ದ. ಎಲ್ಲರ ಜತೆಗೆ ಬೆರೆತು ಬದುಕುವುದು ಅಭ್ಯಾಸ ಮಾಡಿಕೊಂಡ.
ಅಷ್ಟರಲ್ಲಾಗಲೇ ಅವ ಎಂಟನೇ ಕ್ಲಾಸಿನಲ್ಲಿರುವಾಗ ಹಾಕಿದ್ದ ಜನಿವಾರ ಕಿತ್ತು ಬಿಸಾಕಿ ತನ್ನ ಬೇರಿನೊಡನಿದ್ದ ಕೃತಕವೆನಿಸಿದ ಸಂಬಂಧವನ್ನು ಕಡಿದುಕೊಂಡಿದ್ದ. ತನಗೆ ಜೀವನದಲ್ಲಿ ಉಪಕಾರಕ್ಕೆ ಬರದ ತತ್ವಸಿದ್ಧಾಂತಗಳೆಲ್ಲ ಕಳಚಿಕೊಂಡು ಬೇರೆಯೇ ತರ ಬದಲಾದ. ಹಾಗೂ ಅಪ್ಪ ಅನ್ನುವ ಎರಡಕ್ಷರಗಳನ್ನು ತನ್ನ ಡಿಕ್ಷನರಿಯಿಂದಲೇ ಅಳಿಸಿಹಾಕಿದ.
************
ಎಂಬಿಬಿಎಸ್ ಆದ ಮೇಲೆ ಅದೇ ಚಾರಿಟಿ ಹಾಸ್ಪಿಟಲಿನಲ್ಲಿ ಶ್ವಾಸಕೋಶದ ವಿಭಾಗದಲ್ಲಿ ಎಂಡಿ ಮುಗಿಸಿದ ರಮೇಶ ಜೋಸೆಫ್ ಜತೆಗೆ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡ. ಕೆಲಸ ಸಿಕ್ಕಿದಾಗ ಮಾಡಿದ ಮೊದಲ ಕೆಲಸ ಮನೆ ಹುಡುಕಿದ್ದು, ಮತ್ತು ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನನ್ನು ಮನೆಗೆ ಕರೆ ತಂದಿದ್ದು.
ವರ್ಷಾನುಗಟ್ಟಲೆ ಅಪ್ಪನ ಸುದ್ದಿಯಿಲ್ಲದೆ ಕಳೆದು ಕೊನೆಗೊಂದು ದಿನ, ಮದರಾಸಿನಲ್ಲಿ ಯಾವುದೋ ಲಾಡ್ಜಿನಲ್ಲಿ ಅಪ್ಪನ ಹೆಣ ಸಿಕ್ಕಿದಾಗ ಪೊಲೀಸರು ಫೋನು ಮಾಡಿ ಐಡೆಂಟಿಫಿಕೇಶನಿಗೆ ಕರೆದಿದ್ದರು. ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಯಾವ ವಿಧಿವಿಧಾನಗಳಿಲ್ಲದೆ ಅಲ್ಲಿಯೇ ಆತನ ಅಂತ್ಯಕ್ರಿಯೆ ಮುಗಿಸಿದ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ವಾಪಸ್ ಬಂದ ಮೇಲೆ ಅಪ್ಪ ಜೀವನ ಪರ್ಯಂತ ಮಾಡಿದ ಹೊಡೆತಬಡಿತಗಳು, ಅವನಮೇಲೆ ಕುಳಿತ ಪಾಪ ಎಲ್ಲಾ ತನ್ನ ಮೈಗೂ ಅಂಟೀತೇನೋ ಎಂದುಕೊಂಡು ಮೈತಲೆಯೆಲ್ಲ ತಿಕ್ಕಿ ತಿಕ್ಕಿ ತೊಳೆದ. ಅಮ್ಮನಿಗೆ ವಿಷಯ ತಿಳಿಸಿದ. ಆಕೆ ತಣ್ಣೀರಲ್ಲಿ ತಲೆಸ್ನಾನ ಮಾಡಿ ಬಂದವಳು ಎಂದಿನಂತೆ ಟೀವಿ ಸೀರಿಯಲ್ಲು ಅಡಿಗೆ ಅಂತ ಬಿಸಿಯಾದಳು. ಏನಾದರೂ ಹೇಳುತ್ತಾಳೇನೋ ಅಂತ ಕಾದ ಆದರೆ ಅವಳೇನೂ ಹೇಳಲಿಲ್ಲ. ಮಳೆ ತುಂಬಿಕೊಂಡು ತೇಲುವ ಕರಿಮೋಡದಂತಿದ್ದ ಅಮ್ಮ ಹಾಕಿದ ಕಾಣದ ಗೆರೆ ದಾಟುವುದು ಹೇಗೆಂದು ಅವನಿಗೆ ತಿಳಿಯಲಿಲ್ಲ.
ಇಷ್ಟರಲ್ಲಾಗಲೇ ರಮೇಶ ತನ್ನ ಜತೆಗೆ ಕೆಲಸ ಮಾಡುತ್ತಿದ್ದ ನಫೀಸಾಳನ್ನು ಪ್ರೀತಿಸುತ್ತಿದ್ದ. ಅಮ್ಮ ಒಪ್ಪಿದಳು. ಮಾವ ಒಪ್ಪಲಿಲ್ಲ. ಆದರೆ ಕೇಳುವವರ್ಯಾರು? ನಫೀಸಾಳ ಮನೆಯಲ್ಲಿ ವಿರೋಧದ ನಡುವೆಯೂ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ರೆಜಿಸ್ಟರ್ಡ್ ಮದುವೆ ಕಳೆದ ವರ್ಷವಷ್ಟೇ ನಡೆಯಿತು.
ಇದಾದ ಮರುವರ್ಷ ಅಮ್ಮನಿಗೆ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅದೂ ಕೊನೆಯ ಹಂತದಲ್ಲಿರುವಾಗ ಪತ್ತೆಯಾದ ಕಾರಣ ಕೆಮೋಥೆರಪಿ, ರೇಡಿಯೋ ಥೆರಪಿ ಇತ್ಯಾದಿಗಳು ಉಪಯೋಗಕ್ಕಿಲ್ಲ. ಇನ್ನೇನಿದ್ದರೂ ದಿನವೆಣಿಸುವುದಷ್ಟೇ ಉಳಿದಿದೆ ಎಂದು ಡಾಕ್ಟರು ಹೇಳಿದರು.
ರುಕ್ಮಮ್ಮನಿಗೆ ಕೂಡ ಎಲ್ಲವೂ ಯಾರೂ ಹೇಳದೆಯೂ ಗೊತ್ತಾಗಿತ್ತು. ಒಂದು ರಾತ್ರಿ ರಮೇಶನನ್ನು ಕರೆದು ತನ್ನ ಪೆಟ್ಟಿಗೆಯಲ್ಲಿದ್ದ ಒಂದಷ್ಟು ಸಾವಿರ ರೂಪಾಯಿಗಳನ್ನು ಕೊಟ್ಟು “ಇದರಲ್ಲಿ ನಫೀಸಾಗೆ ಏನಾದರೂ ಮಾಡ್ಸು, ಬೇಡ್ವಾದ್ರೆ ಅವಳ ಹೆಸರಲ್ಲಿ ಬ್ಯಾಂಕಲ್ಲಿಡು,” ಅಂತಂದಳು. "ಇದೆಲ್ಲ ಯಾಕಮ್ಮ ಈಗ, ನೀನು ಹುಷಾರಾದ್ಮೇಲೆ ನಾವು ಒಟ್ಟಿಗೇ ಜೆವೆಲ್ಲರ್ಸಿನವರತ್ರ ಹೋಗುವ," ಅಂತಂದ ರಮೇಶ.
ಕಾರ್ಪರೇಶನ್ ಟ್ಯಾಪಲ್ಲಿ ಬರುವ ನೀರಿನ ಕೊನೇ ತೊಟ್ಟಿನಂತೆ ಅಮ್ಮನ ಮುಖದಲ್ಲೊಂದು ನಗು ಜಾರಿತು. "ಇನ್ನೂ ಒಂದು ವಿಷಯ ನಿಂಗೆ ಹೇಳ್ಬೇಕು," ಅಂತಂದು ಅವಳ ಪೆಟ್ಟಿಗೆಯಿಂದ ಒಂದು ಪುಟಾಣಿ ಮರದ ಪೆಟ್ಟಿಗೆ ತೆಗೆದು ಅವನ ಕೈಲಿಟ್ಟಳು.
"ಇದ್ರಲ್ಲಿ ಶಂಕರಮಾಮನ ಹೆಂಡತಿ ಲಕ್ಷ್ಮಮ್ಮ ಕಷ್ಟಕ್ಕಾಗ್ತದೆ ಇರ್ಲಿ ಅಂತ ನಂಗೆ ಕೊಟ್ಟ ಅವಲಕ್ಕಿ ಸರ ಉಂಟು.. ಆ ಕಾಲಕ್ಕೆ ನಾನೂ ಇರ್ಲಿ ಅಂತ ತಗೊಂಡಿದ್ದೆ, ಈಗ ಅವರ ಋಣ ಮುಗಿಯಿತು, ನಮ್ಗೆ ಬೇಡ ಮಗ ಇದು, ವಾಪಸ್ ಕೊಡು," ಅಂದಳು.
"ಅವ್ರು ನಿಂಗ್ಯಾಕೆ ಕೊಟ್ರಮ್ಮಾ ಇದು, ಅವಾಗೆಲ್ಲ ಕತ್ತೆ ತರ ಕೆಲಸ ಮಾಡ್ತಿದ್ಯಲ್ಲ, ಒಂದು ಹೊಸ ಸೀರೆ-ಬಟ್ಟೆ ನಿಂಗೆ ಕೊಟ್ಟದ್ದು ನೆನ್ಪಿಲ್ಲ ನಂಗೆ," ಅಂದ ರಮೇಶ ಆಶ್ಚರ್ಯದಲ್ಲಿ.
ಅದಕ್ಕೆ ಅಮ್ಮ ರಮೇಶನ ಮುಖ ದಿಟ್ಟಿಸಿ ನೋಡಿದಳು. ಏನೋ ಹೇಳುವವಳಿದ್ದಳು, ಅಷ್ಟರಲ್ಲಿ ಕೆಮ್ಮು ಒತ್ತರಿಸಿಕೊಂಡು ಬಂದು ಮಾತು ನಿಂತಿತು. ಸುಸ್ತಾದ ಅಮ್ಮನಿಗೆ ನೀರು ಕುಡಿಸಿ ಮಲಗಿಸಿ ಹೊದಿಕೆ ಸರಿ ಮಾಡಿ, "ಸರಿ, ಇದೆಲ್ಲ ನಾಳೆ ಮಾತಾಡುವ, ಈಗ ಮಲಗಮ್ಮ" ಅಂತ ಲೈಟ್ ಆಫ್ ಮಾಡಿ ಆಚೆಗೆ ಹೋದ.
ರುಕ್ಮಮ್ಮ ಮರುದಿನ ಏಳಲೇ ಇಲ್ಲ. ರಮೇಶ ಈಸಲವೂ ಅಷ್ಟೇ, ಯಾವ ಶಾಸ್ತ್ರ ಸಂಪ್ರದಾಯಗಳಿಲ್ಲದೆ ಅಂತ್ಯಕ್ರಿಯೆಯನ್ನು ಸರಳವಾಗಿ ಮುಗಿಸಿದ. ಅಮ್ಮ ಕೊಟ್ಟಿದ್ದ ದುಡ್ಡನ್ನು ತಾನು ಕೆಲಸ ಮಾಡುತ್ತಿದ್ದ ಹಾಸ್ಪಿಟಲಿನ ಜತೆ ಕೆಲಸ ಮಾಡುತ್ತಿದ್ದ ಸರಕಾರೇತರ ಸಂಸ್ಥೆಯೊಂದಕ್ಕೆ ದಾನ ಮಾಡಿದ.
ಅಮ್ಮನ ಕೊನೆಯಾಸೆಯ ಪ್ರಕಾರ ಲಕ್ಷ್ಮಮ್ಮನ ಅವಲಕ್ಕಿ ಸರ ಕೊಡಲಿಕ್ಕೋಸ್ಕರ ಊರಿಗೆ ಬಂದಿದ್ದ ರಮೇಶ. ಎಲ್ಲವನ್ನೂ ನೆನಪಿಸಿಕೊಳ್ಳುತ್ತ ಐತಾಳರ ಮನೆಯ ಚಾವಡಿಯಲ್ಲಿ ಮಲಗಿದ್ದವನಿಗೆ ನಿದ್ದೆ ಬಂದಿದ್ದೇ ತಿಳಿಯಲಿಲ್ಲ.
****************
ಊಟ ಮುಗಿಸಿ ಊರಕತೆಯೆಲ್ಲ ಮಾತಾಡಿದ್ದಾದ ಮೇಲೆ ಐತಾಳರು ತೋಟಕ್ಕೆ ಹೋಗಿ ಬರುತ್ತೇನೆ ಅಂತ ಹೊರಟರು, ರಮೇಶ ನಾನೂ ನನ್ನ ಕೆಲಸ ಮುಗಿಸಿಕೊಂಡು ಬರ್ತೇನೆ ಅಂತ ಒಂದಾನೊಂದು ಕಾಲದಲ್ಲಿ ತಾನಿದ್ದ ಮನೆಕಡೆ ಹೊರಟ.
ಮನೆ ಹಾಳುಬಿದ್ದಿತ್ತು. ಅಂಗಳದಲ್ಲಿ ಹೂಗಿಡಗಳ ಜತೆ ಪೊದೆಗಳು ಬೆಳೆದಿದ್ದವು. ಈ ಜಾಗದ ವಿಲೇವಾರಿ ಮಾಡಬೇಕು, ಒಂದೋ ಮಾರಬೇಕು, ಅಥವಾ ಮನೆ ರಿಪೇರಿಮಾಡಿ ಹೋಮ್ ಸ್ಟೇ ಏನಾದರೂ ಮಾಡಿಸಬೇಕು ಅಂತ ಅಂದುಕೊಂಡ.
ಇನ್ನೀಗ ದೊಡ್ಡಮನೆಗೆ ಹೋಗಬೇಕು. ಲಕ್ಷ್ಮಮ್ಮ ತೀರಿಕೊಂಡು ಎಂಟು ವರ್ಷವಾಗಿತ್ತಂತೆ. ಶಂಕರಮಾಮನ ಮನೆಗೆ ರಮೇಶ ಯಾವತ್ತೂ ಹೋಗಿರಲಿಲ್ಲ. ಒಂದು ಸಲ ಚಿಕ್ಕವನಿದ್ದಾಗ ಅಪ್ಪ ಸಿಕ್ಕಾಪಟ್ಟೆ ಹೊಡೆದು ಮನೆಬಿಟ್ಟು ಹೋಗಿದ್ದಾಗ ಅಮ್ಮ ಹುಷಾರಿಲ್ಲದೆ ಮಲಗಿಬಿಟ್ಟಿದ್ದಳು. ಆಗ ಅವಳನ್ನು ವಿಚಾರಿಸಲೆಂದು ಮನೆಗೆ ಲಕ್ಷ್ಮಮ್ಮ ಬಂದಿದ್ದು, ರಮೇಶನನ್ನು ನೋಡಿ ಕಾರಣವಿಲ್ಲದೆ ಮುಖ ಸಿಂಡರಿಸಿದ್ದು ನೆನಪಿದೆ ರಮೇಶನಿಗೆ. ಅಂಥಾ ಲಕ್ಷ್ಮಮ್ಮ ತನ್ನಮ್ಮನಿಗೆ ಸರ ಯಾಕೆ ಕೊಟ್ರೋ.
ಅಲ್ಲೇ ಕಟ್ಟೆಯ ಮೇಲೆ ಕುಳಿತು ಸರವನ್ನು ಒಂದು ಸಲ ನೋಡುವ ಎಂದು ಜೇಬಿನಿಂದ ಪೆಟ್ಟಿಗೆ ತೆಗೆದ. ಅದಕ್ಕೆ ಕಟ್ಟಿದ ನೂಲು ಬಿಚ್ಚಿ ತೆರೆದಾಗ ಅಲ್ಲಿ ಕೂತಿತ್ತು ಅವಲಕ್ಕಿಸರ. ಜತೆಗೇ ಅಮ್ಮನ ಕೈಬರಹದಲ್ಲಿದ್ದ ಒಂದು ಪತ್ರ ಕೂಡ.
ಜನ್ಮಾಂತರಗಳ ಒಗಟುಗಳನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಂತಿದ್ದ ಆ ಪತ್ರವನ್ನು ಓದುತ್ತ ಓದುತ್ತ ರಮೇಶನ ಎದೆ ಬೇಯತೊಡಗಿತು. ಅಪ್ಪನಲ್ಲದ ಅಪ್ಪನಿಗೆ ಬರುತ್ತಿದ್ದ ಕೋಪ, ಅಮ್ಮ ಬಚ್ಚಿಟ್ಟುಕೊಂಡಿದ್ದ ಬೆಂಕಿಯಂತಾ ಗುಟ್ಟು, ತಾನು ಕಾಣದ ಅಣ್ಣನ ಸಾವು, ಊರವರ ಕುಹಕ, ಬಾಯಿ ಮುಚ್ಚಿ ಕೂರಲೆಂದೇ ಬಹುಶಃ ಕೊಟ್ಟಿದ್ದ ಅವಲಕ್ಕಿಸರ — ಎಲ್ಲದರ ಹಿಂದಿನ ಕರಿಪರದೆ ಬೆತ್ತಲಾದ ಆ ಕ್ಷಣ, ತನ್ನ ಇರುವಿಕೆಯೇ ಒಂದು ದೊಡ್ಡ ಸುಳ್ಳೆನಿಸಿ ಅವ ಕುಸಿದು ಕುಳಿತ.
************
ರಮೇಶ ದೊಡ್ಡಮನೆಯ ಕಾಲಿಂಗ್ ಬೆಲ್ ಮಾಡಿದಾಗ ಗಂಟೆ ಮೂರಾಗಿತ್ತು.
ಮೂರನೇ ಬೆಲ್ಲಿಗೆ ಬಾಗಿಲು ತೆರೆದ, ಐವತ್ತು ವರ್ಷವಿರಬಹುದಾದ ಟೀ ಶರ್ಟ್ ಹಾಕಿಕೊಂಡಿದ್ದ ವ್ಯಕ್ತಿ. ರಮೇಶನಿಗೆ ಮೊಟ್ಟಮೊದಲು ಕಂಡಿದ್ದೇ ಆತನ ಬೆಳ್ಳಗಿನ ಬಲತೋಳಿನ ಮೇಲಿನ ಕಾಸಗಲ ಮಚ್ಚೆ. ಆತ ರಮೇಶನ ಪಡಿಯಚ್ಚಿನಂತಿದ್ದ — ಹಾಗೂ ಇವನನ್ನು, ಇವನ ಬಲತೋಳಿನ ಮೇಲಿದ್ದ ಮಚ್ಚೆಯನ್ನು ಅಚ್ಚರಿಯಿಂದ ಮತ್ತು ಹೇಳಲರಿಯದ ಯಾವುದೋ ಭಾವದಿಂದ ನೋಡುತ್ತ ನಿಂತ.
ಕಣ್ಣೆದುರೇ ನಿಂತಿದ್ದ ಅಮ್ಮನ ಪತ್ರದಲ್ಲಿದ್ದ ಬೆಂಕಿಯಂತಾ ಸತ್ಯವನ್ನು ನೋಡುತ್ತ, ಅವಳ ಕಣ್ಣುಗಳ ನೋವಿನಾಳವನ್ನು ನೆನಪಿಸಿಕೊಳ್ಳುತ್ತ, ಅಚಾನಕ್ಕಾಗಿ ಬಲತೋಳಿನ ಮಚ್ಚೆ ಮುಟ್ಟಿಕೊಳ್ಳುತ್ತ ರಮೇಶ ದೊಡ್ಡಮನೆಯೊಳಗಡೆ ಕಾಲಿಟ್ಟ.
************
ಎಂಟು ದಿನಗಳ ನಂತರ:
ನಫೀಸಾಗೆ ಬೆಳಿಗ್ಗೆ ಡ್ಯೂಟಿಯಿದ್ದುದರಿಂದ ಬೇಗನೇ ಹೋಗಿದ್ದಳು. ರಮೇಶ ಇನ್ನೂ ಹೊರಟಿರಲಿಲ್ಲ. ಮೊಬೈಲು ರಿಂಗಾಯಿತು. ಐತಾಳರ ಹೆಸರು ನೋಡಿ ಒಂದು ಕ್ಷಣ ತಡೆದ ರಮೇಶ ಫೋನ್ ಎತ್ತಿದ. ಐತಾಳರು “ನಿಂಗೆ ವಿಷಯ ಗೊತ್ತಾಯ್ತಾ” ಎಂದರು. “ಎಂತ ವಿಷಯ” ಅಂತ ಕೇಳಿದ.
ಶಂಕರಮಾಮನ ಮೂರನೇ ಮಗ ವಿಶ್ವನಾಥನ ಹೆಣ ದೊಡ್ಡಮನೆಯ ಹಿತ್ತಲಹಿಂದಿನ ಹಾಳುಬಾವಿಯಲ್ಲಿ ತೇಲುತ್ತಿತ್ತೆಂಬ ವಿಚಾರವನ್ನು ರಮೇಶನಿಗೆ ಹೇಳಿದರು. “ಅದೇ, ನಿನ್ನ ಅಣ್ಣ ಬಿದ್ದಿದ್ದ ಬಾವಿಯಲ್ಲೇ,” ಅಂದರು.
“ಓಹ್, ಹೇಗೆ ಬಿದ್ರಂತೆ” ಅಂತ ಕೇಳಿದ ರಮೇಶ, ದನಿಯಲ್ಲಿ ಆತಂಕ ತುಂಬಿ. “ಏನೋ ಗೊತ್ತಿಲ್ಲ, ಮನೆಯಲ್ಲಿ ಯಾರೂ ಇರ್ಲಿಲ್ವಲ್ಲಾ, ನಿನ್ನೆ ತೋಟದ ಕೆಲಸ ಮಾಡ್ತಿದ್ದ ಐತ ಹಿತ್ತಿಲ ಬಾವಿಯಿಂದ ಬರ್ತಿದ್ದ ವಾಸನೆ ತಡೀಲಿಕ್ಕಾಗದೆ ನೋಡಿದಾಗ ಬಾಡಿ ತೇಲ್ತಾ ಇತ್ತಂತೆ, ಊರವರೆಲ್ಲ ಬಂದು ತೆಗ್ಸಿದ್ದಾಯ್ತು,” ಅಂದರು.
“ಛೇ… ಒಂದು ಸರ್ತಿ ಮಾತಾಡುವ ಚಾನ್ಸ್ ಕೂಡ ಸಿಕ್ಕಿಲ್ಲ ನಂಗೆ,” ಅಂದ ರಮೇಶ.
“ಆ ದಿನ ನೀನು ಹೋಗಿದ್ದಲ್ಲ, ಅಲ್ಲಿ ಯಾರೂ ಇರ್ಲಿಲ್ಲಾಂತ ಹೇಳಿದ್ಯಲ್ಲ,” ಅಂದರು ಐತಾಳರು. “ಹೌದು, ಕಾಲಿಂಗ್ ಬೆಲ್ ಮಾಡಿ ಮಾಡಿ ಸಾಕಾಯ್ತು,” ಅಂದ ರಮೇಶ.
“ಅವ ಯಾವಾಗ ಬಂದಿದ್ದಾಂತ ಗೊತ್ತಿಲ್ಲ, ಕಾಲುಜಾರಿ ಕತ್ತಲಲ್ಲಿ ಬಿದ್ದಿರ್ಬೇಕು ಅಂತ ಎಲ್ಲಾ ಮಾತಾಡ್ತಿದಾರೆ, ಹೆಣ ಗುರ್ತು ಸಿಕ್ಕದ ಹಾಗೆ ಬಾತಿತ್ತು," ಐತಾಳರಂದರು.
ಹೌದೋ, ಓಹೋಗಳ ಹೊರತು ಬೇರೇನೂ ಹೇಳಲು ತೋರದೆ ಕಷ್ಟ ಪಡುತ್ತಿದ್ದ ರಮೇಶ. ಅಷ್ಟರಲ್ಲಿ ತಗ್ಗಿದ ದನಿಯಲ್ಲಿ ಐತಾಳರಂದರು, "ಪೊಲೀಸುಗಳು ಕೇಳ್ತಿದ್ರು ಯಾರ್ಯಾರು ಬಂದು ಹೋಗಿದಾರೆ ಅಂತ, ನೀನು ಬಂದಿದ್ದು ನಾ ಹೇಳ್ಲಿಲ್ಲ."
ಮೌನವಾಗಿ ಕೇಳಿಸಿಕೊಂಡ ಆತ. ಐತಾಳರೂ ಸುಮ್ಮನಿದ್ದರು. ಕೆಲ ಕ್ಷಣಗಳ ನಂತರ "ಮತ್ತೇನಾದರೂ ಇದ್ರೆ ಫೋನ್ ಮಾಡ್ತೇನೆ" ಅಂತ ಫೋನಿಟ್ಟರು.
ಬೆಂಗಳೂರಿನ ಥಂಡಿಯಲ್ಲೂ ಫ್ಯಾನ್ ಹಾಕಿ ಕೂತರೂ ಮೈಯೆಲ್ಲ ಬೆವರಿ ಅಂಟಂಟಾಗಿತ್ತು. ತಲೆ ಸಿಡಿಯುತ್ತಿತ್ತು. ಅಮ್ಮನ ಪತ್ರ ತಗೊಂಡು ಬಾತ್ರೂಮಿಗೆ ಹೋದ ರಮೇಶ ಅದನ್ನ ಹರಿದು ಟಾಯ್ಲೆಟಿಗೆ ಹಾಕಿ ಫ್ಲಶ್ ಮಾಡಿ ಸ್ನಾನಕ್ಕಿಳಿದ. ತಲೆ ಮೇಲೆ ಬಿಸಿಬಿಸಿ ನೀರು ಸುರಿದುಕೊಂಡ. ಅಂಟು ಕಳೆಯುವ ಯತ್ನದಲ್ಲಿ ಬಾಡಿವಾಶ್ ಹಾಕಿ ಮೈ ತಿಕ್ಕೀ ತಿಕ್ಕೀ ತೊಳೆಯತೊಡಗಿದ.
1 comment:
ಗೂಢ ರಹಸ್ಯದ ಸುಂದರ ಕಥೆ!
Post a Comment