Tuesday, June 5, 2007

ಹೊಸ ಕನಸು ಹುಟ್ಟಿದೆ!!!

ಈ ಕನಸಿಗೆ ೨೦ ದಿನ ತುಂಬಿತು. ೪೦೦ಕ್ಕೂ ಹೆಚ್ಚು ಹಿಟ್ಟುಗಳನ್ನು ದಾಖಲಿಸಿಕೊಂಡು ನಾಗಾಲೋಟದಲ್ಲಿ ಸಾಗುತ್ತಿರುವ ಈ ಕನಸನ್ನು ಕಂಡರೆ (ಸ್ವಲ್ಪ) ಖುಷಿಯಾಗುತ್ತದೆ!

ಈ ಕನಸಿನ ಹೆಸರು ಚಿತ್ರಕವನ ...

ಜನ ಯಾಕೆ ಬ್ಲಾಗ್ ಬರೆಯುತ್ತಾರೆ?

ಬ್ಲಾಗ್ ಬರೆಯುವ ಜನ ಎಂಥವರಿರುತ್ತಾರೆ? ಅವರಿಗೇನಿಷ್ಟವಾಗುತ್ತದೆ? ಯಾಕಿಷ್ಟವಾಗುತ್ತದೆ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದ ಹಾದಿಯಲ್ಲಿ ಸುಮ್ಮನೇ ಹುಟ್ಟಿಕೊಂಡ ಕೂಸು ಚಿತ್ರಕವನ.

ಇಲ್ಲಿ ಪ್ರತಿವಾರ ಒಂದೊಂದು ಚಿತ್ರವನ್ನು ಹಾಕಲಾಗುತ್ತದೆ. ಚಿತ್ರಗಳು ಇದರ ನಿರ್ವಹಣ ತಂಡದ ಸದಸ್ಯರು ಸೆರೆಹಿಡಿದವಾಗಿರುತ್ತವೆ/ ಸೃಷ್ಟಿಸಿದವಾಗಿರುತ್ತವೆ. ಈ ಚಿತ್ರದ ಮೇಲೆ ಬರಹ/ ಕವನಗಳನ್ನು ಬರೆದು ಹಾಕುವ ಅವಕಾಶ ಇಲ್ಲಿ ಭೇಟಿ ನೀಡುವವರಿಗಿದೆ.


ವಿವಿಧ ರೀತಿಯ ದೃಷ್ಟಿಕೋನಗಳು... ಒಂದೇ ದೃಷ್ಟಿಕೋನದ ಬೇರೆ ಬೇರೆ ರೀತಿಯ ಅಭಿವ್ಯಕ್ತಿಗಳು... ವಿವಿಧ ಭಾಷೆಗಳು... ವಿವಿಧ ಶೈಲಿಗಳು... ವಿವಿಧ ಪೂರ್ವಾಗ್ರಹಗಳು... ವಿಭಿನ್ನ ನೋಟಗಳು.. ಇವೆಲ್ಲವನ್ನೂ ಸೆರೆಹಿಡಿಯುವ ಒಂದು ಯತ್ನ ಚಿತ್ರಕವನ.


**********


ಮೊದಲ ಎರಡು ವಾರ ಈ ಮಗುವಿಗೆ ಅಂಗಿ ಹೊಲಿಸಿ ತೊಡಿಸಿ ಅಲಂಕರಿಸುವುದರಲ್ಲಿ ಕಳೆಯಿತು... ಬೇರೆ ಬೇರೆ ಲೇಔಟ್-ಗಳು, ಬಣ್ಣಗಳು...


ಬಂದು ಹೋದವರ ಲೆಕ್ಕವಿಡಲು ಇಲ್ಲಿರಿಸಿರುವ ಲೆಕ್ಕಿಗ ಹೇಳುತ್ತಾನೆ, ದಿನಕ್ಕೆ ಸರಾಸರಿ ೨೦ ಜನ ಇಲ್ಲಿ ಬಂದು ಹೋಗ್ತಾರಂತೆ...(ಅವನಿಗೆ ನಿರ್ವಾಹಕರೈವರನ್ನು ಲೆಕ್ಕಿಸದಿರಲು ಸೂಚಿಸಲಾಗಿದೆ).

ಬಂದು ಹೋಗುವವರು ಅಷ್ಟಿರುವಾಗ, ಕವನಗಳ ಸಂಖ್ಯೆ ಕಡಿಮೆಯೆನಿಸುತ್ತಿದೆಯಲ್ಲ? ಇದರ ಮರ್ಮವೇನೆಂದು ತಿಳಿಯಲಿಲ್ಲ. ಅದಕ್ಕೆ, ಭೇಟಿಗರಿಗೆ ಅನಿಸಿದ್ದು ಹೇಳಲು, ಸಲಹೆ-ಸಂದೇಶ- ಅಭಿವ್ಯಕ್ತಿಗಳಿಗೋಸ್ಕರವೇ ಒಂದು ಮಾಧ್ಯಮವೂ ಇಲ್ಲಿ ಹಾಕಿದ್ದಾಗಿದೆ...

ಹಲವು ಗೆಳೆಯ-ಗೆಳೆತಿಯರು ಬೆನ್ನು ತಟ್ಟಿ ಒಳ್ಳೆ ಪ್ರಯತ್ನವೆಂದರು.. ಇನ್ನು ಹಲವರು ಸಾವಿರ ಬ್ಲಾಗುಗಳಲ್ಲಿ ಇದೂ ಒಂದಾಗಬಹುದೆಂಬ ಆತಂಕ ತೋರಿಸಿದರು...

ಚಿತ್ರಕವನ ದ ನಿರ್ವಹಣ ತಂಡದ ಸದಸ್ಯರು ಯಾರೂ ಇಲ್ಲಿಯವರೆಗೆ ಒಬ್ಬರು ಇನ್ನೊಬ್ಬರನ್ನು ಭೇಟಿಯಾಗಿಲ್ಲದಿರುವುದು ಒಂದು ವಿಶೇಷ. ಅನಿಕೇತನ್ ಟೋಕಿಯೋದಲ್ಲಿದ್ದರೆ, ಭಾಗವತ ಅಮೆರಿಕಾದಲ್ಲಿ. ಕಿಶೋರ್ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದರೆ, ಶ್ರೀನಿಧಿ ಮತ್ತು ನಾನು ಬೆಂಗಳೂರಿನಲ್ಲಿ.

ಸಂಪರ್ಕದಲ್ಲಿ ಅವಾಗಾವಾಗ ಉಂಟಾಗುವ ವ್ಯತ್ಯಯ, ಭೌಗೋಳಿಕವಾಗಿ ಇರುವ ದೂರ - ನಮ್ಮ ಉತ್ಸಾಹಕ್ಕೆ ಭಂಗ ತಂದಿಲ್ಲ. ಕನಸು ಕಟ್ಟುವ ಹೊಸ ಉತ್ಸಾಹದಿಂದ ಹೊರಟಿದ್ದೇವೆ.

ದಿನದಿನಕ್ಕೂ ಈ ಕನಸು ಬೆಳೆಯುತ್ತಾ ಹೋಗಬೇಕು...

ಬೆಳೆಯುತ್ತದೆ ಕೂಡಾ...
.
.

3 comments:

Sandy said...

ಜನ ಯಾಕೆ ಬ್ಲಾಗ್ ಬರೆಯುತ್ತಾರೆ?



ಸರ್ವ ಪ್ರಾಣಿಗಳಿಗೂ ಅತಿ ಬುದ್ದೀಷಾಲಿ ಎಂದು ಪ್ರಸಿದ್ದನಾಗಿರುವ ಮನುಷ್ಯನ ಮನ್ಷತ್ವ ದಲ್ಲಿನ ಅತಿ ಮೂಲಭೂತ ಅಂಶವೇನೆಂದರೆ ಅವನ ಮಾತಿನ ಚುರುಕೂ.. ಅವನ ಈ ಮಾತನ್ನು ಅವನ ಭಾಷೆಯಲ್ಲಿ ಸಂಪೂರ್ಣ ಪ್ರಪಂಚವು ನೋಡುವಂತೆ ಮಾಡುವುದು( ಅವರು ನೂಡುತಾರೋ ಇಲ್ಲವೋ ಅನ್ನುವುದು ಬೇರೆ ವಿಷಯ..:) ದೊಡ್ಡ ವಿಷಾಯವೀ ಹೌದು... ..

ಅದನ್ನು ನನಗೆ ಸಾಧ್ಯ ಮಾಡಿಧ ಈ ಸೈಟಿಗೆ ನಾನು ಚಿರಋಣಿ.. ಇದು ಬಂದು.. * ನಾನು ಕನ್ನಡದಲ್ಲಿ ಬರೆಯ ಬೇಕಾದ್ದನ್ನು ಆಂಗ್ಲದಲ್ಲಿ ಟೈಪ್ ಮಾಡಿ ಅದು ಕನ್ನಡಕ್ಕೆ ಬದಲಾಗುವುದು ಕಣ್ಣ ಮುಂದೆಯೀ ನೋಡಬಹುದು.. ದಯವಿಟ್ಟು ಇದನ್ನು ನೋಡಿ ಉಪಯೋಗೀಸಿರಿ. ..

Sandy said...

ಸಾರಿ.. ಸೈಟ್ ಮರೆತು ಬಿಟ್ಟೆ.

http://quillpad.in/kannada/

Shree said...

ಅದೇನೋ ನಿಜ. ನಾನು ಬರಹ ಡೈರೆಕ್ಟ್ -ನಲ್ಲಿ ಯೂನಿಕೋಡ್ ಉಪಯೋಗಿಸಿ ಟೈಪ್ ಮಾಡುತ್ತೇನೆ. ವಿಂಡೋಸ್ ಎಕ್ಸ್-ಪಿ ಆಪರೇಟಿಂಗ್ ಸಿಸ್ಟಮ್-ನಲ್ಲಿ ಕೂಡ ಕನ್ನಡ ಸಿಗುತ್ತಿದೆ, ಅದನ್ನು ಎನೇಬಲ್ ಮಾಡಿಕೊಂಡು ಕೂಡ ಮಾಡಬಹುದು.. ಆ ಪ್ರಯೋಗ ನಾನು ಸದ್ಯಕ್ಕೆ ಮಾಡುತ್ತಿದ್ದೇನೆ.