ಹೀಗೇ ಒಂದು ಮೋಡಕವಿದ ಬೇಸರದ ರಾತ್ರಿ ತಾರಸಿಯಲ್ಲಿ ಕುಳಿತು ಬಾನು ದಿಟ್ಟಿಸುತ್ತೇನೆ.
ಅಲ್ಲೆಲ್ಲೋ ಇರಬಹುದಾದ ನನ್ನ ನಕ್ಷತ್ರವನ್ನು, ನನ್ನ ತಾರಾಪುಂಜವನ್ನು, ನನ್ನ ರಾಶಿಯನ್ನು, ನನ್ನ ಆಕಾಶಗಂಗೆಯನ್ನು, ನನ್ನ ಕ್ಷೀರಪಥವನ್ನು ಹುಡುಕಲು ಪ್ರಯತ್ನಿಸುತ್ತೇನೆ.
ಬಾನ ತುಂಬಾ ಕರಿಮೋಡ ಕವಿದು ಮಳೆಯ ಆಶೆ ಹುಟ್ಟಿಸುತ್ತಿವೆ... ಯಾವಾಗಲೋ ಎಲ್ಲೋ ಕೇಳಿದ ’ಆಸೆ-ಮೋಸ’ ಪದ ನೆನಪಾಗುತ್ತದೆ...
ಮಳೆ ಯಾಕೋ ಕಣ್ಣುಮುಚ್ಚಾಲೆಯಾಡುತ್ತಿದ್ದಾಳೆ.
ಮೋಡಗಳ ನಡುವಿನಿಂದ ಒಬ್ಬ ಹಳದಿ ಚಂದ್ರ ಆಗಷ್ಟೆ ಇಣುಕಿದ್ದಾನೆ.
ಕೇಳುತ್ತಾನೆ, ’ಒಬ್ಬಳೇ ಕುಳಿತು ಆಕಾಶದ ಚಂದ ನೋಡುತ್ತಿದ್ದೀಯಾ?’
’ಹೌದು, ನಿಂಗೇನು ಕಷ್ಟ?’ ನನ್ನ ಕೊಂಕು ನುಡಿ.
’ಸುಮ್ನೆ ಕೇಳಿದೆ ಅಷ್ಟೆ’ ಅಂತಾನೆ ಚಂದ್ರ.
’ನೀನು ಹಾಗೆ ಕೇಳಲಿ ನನ್ಹತ್ರ ಅಂತ ಒಬ್ಬಳೇ ಕುಳಿತಿದ್ದೇನೆ’ - ನೇರ ಉತ್ತರ ನೀಡುವ ಇಚ್ಛೆಯಿಲ್ಲದ ನಾನು ಮಾತು ಹಾರಿಸುತ್ತೇನೆ.
’ಸರಿ ಕೇಳಿ ಆಯಿತಲ್ಲ, ಇನ್ನೇನು?’ ಅವನ ಕೆಣಕು ನುಡಿ.
’ಇನ್ನೇನು ಅಂದ್ರೆ? ನಿನ್ಹತ್ರ ಕೇಳು ಅಂತ ನಾನಂದ್ನಾ?’ ಮತ್ತೆ ನನ್ನ ಕೊಂಕು.
’ಬಾಯಿಬಿಟ್ಟು ಹೇಳದಿದ್ರೂ ನಾನು ಕೇಳಲಿ ಅಂತ ಅಂದ್ಕೊಂಡಿದ್ದು ನಿಜ ತಾನೇ?’ ದಿವ್ಯಜ್ಞಾನಿಯಂತೆ ಪೋಸು ಕೊಟ್ಟು ಕೇಳುತ್ತಾನೆ ಚಂದ್ರ.
ಇಲ್ಲವೆನ್ನಲಾರೆ, ನಾನೇ ನನ್ನ ಬಾಯಾರ ಹೇಳಿದೆನಲ್ಲ ಹಾಗೆಂದು?
ಹೌದು ಎಂದು ಯಾಕೆನ್ನಲಿ? ಹಾಗೇನು ಅಂದುಕೊಂಡಿರಲಿಲ್ಲವಲ್ಲ ನಾನು?
ಇವತ್ತು ಆಕಾಶ ನೋಡುತ್ತ ಕುಳಿತುಕೊಳ್ಳುತ್ತೇನೆ, ಅಲ್ಲಿ ಈ ಚಂದ್ರ ಬರುತ್ತಾನೆ ಅಂತ ಕನಸು ಬಿದ್ದಿತ್ತೆ ನನಗೆ, ಅವನ ಬಗ್ಗೆ ಏನಾದರೂ ಅಂದುಕೊಳ್ಳಲಿಕ್ಕೆ?
ಅವನ ವಾದಕ್ಕೆ ಪ್ರತಿವಾದ ಬೆಳೆಸುವ ಇರಾದೆ ಬದಿಗಿಟ್ಟು ಸುಮ್ಮನೆ ನಗುತ್ತೇನೆ.
ಚಂದ್ರನೂ ನಗುತ್ತಾನೆ. ತಾನು ಗೆದ್ದೆನೆಂಬ ಹೆಮ್ಮೆ ಕಾಣುತ್ತದೆ ದೂರದಿಂದ ಕಾಣಿಸುವ ಅವನ ಹೊಳೆವ ಮುಖದಲ್ಲಿ.
’ನನ್ನ ಗೆಳೆಯನಾಗುತ್ತೀಯಾ’ ಕೇಳುತ್ತೇನೆ.
ಸಂತಸದಿಂದ ಒಪ್ಪಿಕೊಳ್ಳುತ್ತಾನೆ ಚಂದ್ರ.
ಇರುಳು ಕಳೆದು, ಮತ್ತೆ ಹಗಲಾಗಿ ಮತ್ತೆ ರಾತ್ರಿ ಬರುತ್ತದೆ. ಮತ್ತೆ ನಾನು ತಾರಸಿಗೆ ಹೋಗುತ್ತೇನೆ. ಮತ್ತೆ ಅಲ್ಲಿ ಚಂದ್ರ ಕಾಣಿಸುತ್ತಾನೆ.
ಮತ್ತೆ ಮಾತಾಡುತ್ತೇವೆ. ಸೂರ್ಯನಡಿ ಇರುವ ಎಲ್ಲಾ ವಿಷಯ. ಸುಮ್ಮಸುಮ್ಮಗೆ ಕಾಡುತ್ತಾನೆ ಅವನು. ನಾನೇನು ಕಡಿಮೆಯೆ? ನಾನೂ ಕಾಡುತ್ತೇನೆ.
ಹೀಗೇ ಒಂದು ದಿನ ಯಾಕೋ ಉದಾಸೀನವಾಯಿತು. ರಾತ್ರಿ ತಾರಸಿಗೆ ಹೋಗಿರಲಿಲ್ಲ... ಮನೆಯ ಕಿಟಿಕಿಯಲ್ಲಿ ಪರದೆಯೆಡೆಯಿಂದ ಬೆಳಕು ಇಣುಕುತ್ತಿದೆ..! ಏನೆಂದು ನೋಡಿದರೆ, ಅಲ್ಲಿ ನಿಂತು ಹೊರಗೆ ಬಾರೆಂದು ಕರೆಯುತ್ತಾನೆ ಚಂದ್ರ..!!!
ಎಷ್ಟೊಂದು ಜನ ತಾರೆಯರು ಇವನನ್ನು ಸುತ್ತುವರಿದಿರುತ್ತಾರೆ, ನನ್ನನ್ನೊಬ್ಬಳನ್ನೇ ಯಾಕೆ ಕರೆಯುತ್ತಾನೆ? ಪ್ರಶ್ನೆ ಅವನಿಗೆ ಕೇಳುತ್ತೇನೆ. ಉತ್ತರ ಸಿಗುವುದಿಲ್ಲ.
ಹಾಗೇ ಅವನ ಜಗತ್ತಿನ ಬಗ್ಗೆ, ಅವನೊಳಗಿನ ಜಗತ್ತಿನ ಬಗ್ಗೆ ಮಾತಾಡುತ್ತಾನೆ. ನಾನು ಮನಸೆಲ್ಲ ಕಿವಿಯಾಗುತ್ತೇನೆ.
ನನಗೂ ಅವನ ಜತೆ ತುಂಬಾ ಮಾತಾಡಬೇಕೆನಿಸುತ್ತದೆ. ಆದರ್ಯಾಕೋ ಅಂತರ್ಯಾಮಿಯಾಗಿರುವ ಮೌನ ಮಾತಾಡಲು ಬಿಡುವುದಿಲ್ಲ.
ಅವನು ಚತುರ ಮಾತುಗಾರ. ಕೇಳುತ್ತ ಕುಳಿತರೆ ಸಮಯದ ಗಾಡಿ ಸಾಗಿಹೋಗುವುದೇ ತಿಳಿಯುವುದಿಲ್ಲ.
*********
ಚಂದ್ರನ ಜತೆ ಜಗಳಗಳೂ ಆಗುತ್ತವೆ. ಅವನಿಗೆ ಬೇಕಾದ ಸಮಯ ನಾನು ಕೊಡಲಿಲ್ಲ, ಅವನಿಗೆ ಬೇಕಾದಹಾಗೆ ವರ್ತಿಸಲಿಲ್ಲ, ಅವನು ಅಂದುಕೊಂಡ ಹಾಗೆ ನಾನಿರಲಿಲ್ಲ - ಇತ್ಯಾದಿ ದೂರುಗಳು.
ಪುಟ್ಟ ಮಗುವಿಗೆ ಸಮಾಧಾನಿಸುವಂತೆ ಅವನಿಗೆ ಸಮಾಧಾನಿಸುತ್ತೇನೆ. ಅವನು ಸಮಾಧಾನಗೊಳ್ಳುತ್ತಾನೆ.
*********
ಚಂದ್ರ ಯಾಕೆ ನನ್ನ ಜತೆ ಅಷ್ಟು ಮಾತಾಡುತ್ತಾನೆಂಬುದಕ್ಕೆ ಉತ್ತರ ಹುಡುಕುವ ಯತ್ನ ಮುಂದುವರಿದಿವೆ.. ಆದರೆ ಅವೆಲ್ಲ ಕತ್ತಲಲ್ಲಿ ಕಣ್ಮುಚ್ಚಿಕೊಂಡು ಹುಡುಕಿದಂತಾಗುತ್ತವೆ.
ಇನ್ನೊಮ್ಮೆ ಚಂದ್ರನಿಗೆ ಕೇಳುತ್ತೇನೆ.. ’ಯಾಕೆ ಅಷ್ಟು ಹಚ್ಚಿಕೊಂಡಿದ್ದೀಯ’ ಅಂತ.
ಅವನು ಕಳ್ಳನಗುವಿನ ಜತೆ ಮಗುವಿನಂತೆ ಹೇಳುತ್ತಾನೆ.. ’ನಾನು ಬದುಕಿನಿಂದ ಕದಿಯುತ್ತೇನೆ, ಕದ್ದ ಬುತ್ತಿ ತಿಂದು ಬದುಕುತ್ತೇನೆ’ ಅಂತ.
ತಾನು ಕಳ್ಳನೆಂದು ಪ್ರಾಮಾಣಿಕವಾಗಿ ಹೇಳಿಕೊಳ್ಳುವ ಚಂದ್ರನನ್ನು ನಂಬುವುದೇ ಬಿಡುವುದೇ ಅಂತ ಯೋಚನೆ ಶುರುವಾಗುತ್ತದೆ ನನಗೆ... ಜತೆಗೇ ನಂಬುವುದು ಅಂದರೇನು ಅಂತ ಪ್ರಶ್ನೆಯೂ ಮೂಡುತ್ತದೆ.
ಎಲ್ಲ ಪ್ರಶ್ನೆಗಳ ನಡುವೆ, ಸಿಗದ ಉತ್ತರಗಳಾಚೆಗೆ, ವಿವಿಧ ಬಣ್ಣಗಳನ್ನು ತುಂಬಿಕೊಂಡು, ಕಹಿಯನ್ನು ದೂರವಿಟ್ಟು, ಸಿಹಿಭರವಸೆಗಳ ಜತೆ, ಮಾತು ಮುಂದುವರಿಯುತ್ತದೆ.
*********
ನನಗೆ ಹತ್ತಿರವಾಗಿ ಚಂದ್ರ ಇಂದು ಹಾದುಹೋಗಲಿದ್ದಾನೆ. ಹತ್ತಿರದಿಂದ ಅವನನ್ನು ನೋಡಲಿದ್ದೇನೆ, ಮಾತಾಡಿಸುತ್ತೇನೆ.
*********
ಇವತ್ತು ಚಂದ್ರ ಬಂದಿದ್ದಾನೆ. ನನ್ನ ಹತ್ತಿರವಿದ್ದಾನೆ. ಆದರೆ ಯಾಕೋ ಇವನು ದೂರದಲ್ಲಿ ನಿಂತು ನನ್ನನ್ನು ಕಾಡುತ್ತಿದ್ದ ಚಂದ್ರನಲ್ಲವೆನಿಸುತ್ತದೆ.
ಗಾಬರಿಗೋ.. ನಾಚಿಕೆಗೋ.. ಕೆಂಪಾಗಿದ್ದಾನೆ ಚಂದ್ರ. ಮತ್ತೆ ನನ್ನ ಅನುಭವಕ್ಕೆ, ಅಳತೆಗೆ ನಿಲುಕದ ಇನ್ನೇನೋ ತಣ್ಣಗಿನ ಭಾವನೆ ಅವನಲ್ಲಿ ಕಾಣಿಸುತ್ತದೆ.
ದೂರದಲ್ಲಿದ್ದಾಗ ಅವನು ಚೆಲ್ಲುತ್ತಿದ್ದ ಬೆಚ್ಚನೆ ಬೆಳದಿಂಗಳು ಹತ್ತಿರ ಬಂದಾಗ ಕಾಣೆಯಾಗಿದೆ.. ಚಂದ್ರ ತಣ್ಣತಣ್ಣಗೆ ಮಾತು ಮರೆತು ಕುಳಿತಿದ್ದರೆ ನನಗೂ ಮಾತು ಬೇಡವೆನಿಸುತ್ತದೆ.
ಅವನ ಕಣ್ಣುಗಳ ಅಪರಿಚಿತ ಭಾವ ತಣ್ಣನೆ ಕೊಲ್ಲುತ್ತದೆ.
*************
ಚಂದ್ರ ಆಚೆ ಹೋದಮೇಲೆ ಅದ್ಯಾಕೋ ಹೇಳತೀರದ ನೋವು ಕಾಡುತ್ತದೆ. ಅದೇನೆಂದು ವಿವರಿಸಲಾಗದೆ ಶಬ್ದಗಳು ಪರದಾಡುತ್ತವೆ..
ಮತ್ತೆ ಹೋಗಿ ತಾರಸಿಯಲ್ಲಿ ಕುಳಿತುಕೊಳ್ಳುತ್ತೇನೆ. ಚುಕ್ಕಿ ಕಾಣುವವೇ ನೋಡುತ್ತೇನೆ. ಹಬ್ಬಿದ ಕತ್ತಲಿಗೆ ನೀಲಿ ಆಕಾಶದ ಕರಿಮೋಡ ಸಾಥ್ ನೀಡುತ್ತದೆ. ಆದರೆ ನನಗೆ ಅನಿಸುತ್ತದೆ, ಆ ಮೋಡ ಮುಂಗಾರು ಮಳೆ ತರುವುದಿಲ್ಲ ಅಂತ.
ಹೀಗೇ ಮೌನದ ಜತೆ ಗೆಳೆತನದಲ್ಲಿ ಸ್ವಲ್ಪ ಹೊತ್ತು ಕಳೆಯುತ್ತದೆ.
ಹಾಗೇ ಕರಿಮೋಡಗಳ ದಿಬ್ಬಣ ನೋಡುತ್ತ ಕುಳಿತವಳಿಗೆ ಅಚಾನಕ್ ಚಂದ್ರ ಕಾಣಿಸುತ್ತಾನೆ.
ಇವನು ಅದೇ ಚಂದ್ರ, ಆದರೆ ಅವನಲ್ಲ. ಅವನಲ್ಲಿ ನಾ ಕಂಡ ಅವನಿಲ್ಲ.
ಚಂದ್ರನ ಬಣ್ಣ ಮತ್ತೆ ಬದಲಾಗಿದೆ. ಈಗ ಅವನು ಕಪ್ಪು-ಬಿಳುಪಿನ ಮಿಶ್ರಣವಾಗಿದ್ದಾನೆ.
ಕರಿಮೋಡಗಳ ಕೋಟೆ ತನ್ನ ಸುತ್ತ ಕಟ್ಟಿಕೊಂಡು ಹೊರಗಿಣುಕುವ ಚಂದ್ರ ಅದ್ಯಾಕೋ ಕ್ರೂರಿಯಾಗಿ ಕಾಣುತ್ತಾನೆ.
*************
15 comments:
ಶ್ರೀ ಸೂಪ್ಪರ್ ಬರಹ..
"ಇವನು ಅದೇ ಚಂದ್ರ, ಆದರೆ ಅವನಲ್ಲ. ಅವನಲ್ಲಿ ನಾ ಕಂಡ ಅವನಿಲ್ಲ.
ಚಂದ್ರನ ಬಣ್ಣ ಮತ್ತೆ ಬದಲಾಗಿದೆ. ಈಗ ಅವನು ಕಪ್ಪು-ಬಿಳುಪಿನ ಮಿಶ್ರಣವಾಗಿದ್ದಾನೆ.
ಕರಿಮೋಡಗಳ ಕೋಟೆ ತನ್ನ ಸುತ್ತ ಕಟ್ಟಿಕೊಂಡು ಹೊರಗಿಣುಕುವ ಚಂದ್ರ ಅದ್ಯಾಕೋ ಕ್ರೂರಿಯಾಗಿ ಕಾಣುತ್ತಾನೆ."
says everything. ನೀವು ನೂರಾಹತ್ತು % ಸರಿ. :)
ತುಂಟತನ ಕೊನೆಗೆ... ತಾರಸಿ = ಜೀಟಾಕ್? ;-)
ತಾರಸಿ ಅಂದ್ರೆ ತಾರಸಿ..!!
ಅಲ್ಲಾ ತಾಯೆ, ಎಲ್ಲಾ ನೋಟಗಳಾಚೆಗಿನ ಚಿತ್ರ ಹುಡುಕುತ್ತಾ ಎಲ್ಲೆಲ್ಲೋ ಹೋಗ್ತೀರಲ್ಲ ನೀವು, ಇದು ಸರಿಯಾ? :) ನೀವೆಷ್ಟು ಎಳೆದರೂ ನನ್ ಕಾಲು ಇನ್ನು ಉದ್ದವಾಗಲು ಸಾಧ್ಯವಿಲ್ಲ!! :)
ಚೆನ್ನಾದ ಬರಹ ಶೈಲಿ. ತಾರಸಿ ಅಂದ್ರೆ ಜೀಟಾಕೆ ಅಲ್ವಾ? ಸಿಂಧು ಹೇಳಿದ್ದು ಸರಿ ಅಲ್ವಾ?
ಓದುವಾಗ ಜೀಟಾಕೆ ಅನ್ನಿಸ್ತಾ ಇದೆ !
ಸರಿಹೋಯ್ತು ಕಥೆ... ಭಾಗವತ, ಅನಿಕೇತನ ಇಬ್ರೂ ಸಿಂಧು ಹಾಡಿಗೆ ತಾಳ ಹಾಕ್ತಿದೀರಲ್ಲಾ!! ನಾನು "ತಾರಸಿ"- ಶಬ್ದದ ಅರ್ಥ ನಿಜವಾಗಲೂ ತಾರಸಿಯೇ ಅಂತ ಬರ್ಕೊಡ್ಲಿಕ್ಕೆ ಸ್ಟ್ಯಾಂಪ್ ಪೇಪರು ಹುಡುಕುತ್ತಿದ್ದೇನೆ, ಸಿಗುತ್ತಿಲ್ಲ...:)
ಹೋಗ್ಲಿ ಬಿಡಿ :) ಎಲ್ಲವೂ ಅವರವರ ಭಾವಕ್ಕೆ, ಗ್ರಹಿಕೆಗೆ ಬಿಟ್ಟ ವಿಷಯ..
ಪ್ರೀತಿಯ ಶ್ರೀ..
ಅದು ಜೀಟಾಕ್ ಅಥವಾ ಇನ್ಯಾವುದೋ ಮೆಸೆಂಜರ್ ಆಗಿದ್ರೆ ನಮಗೆ ನಿಮ್ಮ ಬರಹದ ಸೀರೀಸ್ ಸಿಗುತ್ತಿತ್ತಲ್ಲ ಅಂತ ದುರಾಸೆ ಅಷ್ಟೆ. ಸ್ಟಾಂಪ್ ಪೇಪರ್ ಎಲ್ಲ ಬೇಡ. ನಾವೇ ರಾಗ ಬದಲಾಯಿಸುತ್ತೇವೆ ಬಿಡಿ. ಮತ್ತು ರಾಗಕ್ಕೆ ತಕ್ಕ ತಾಳ. ಕೋರಿಕೆಯ ಮೇರೆಗೆ.. :D
ಬದಲಾದ ಚಂದ್ರನ ಬಣ್ಣದಂತೆ ನಾವು ತಾರಸಿ ಮತ್ತು ಕಿಟಕಿ,ಟಾಕಿಂಗ್ ವಿಂಡೋಸ್ ಎಲ್ಲ ಬಿಟ್ಟು ಮನದಂಗಳಕ್ಕೆ ಬರೋಣವೇ? ವಿಳಾಸ ಹೇಳಿ.. ಅವನನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತೇವೆ.ಕ್ರೂರಿಯಾಗದಂತೆ.. :)
ಓಹ್, ಅಗತ್ಯವಾಗಿ. ಚಂದ್ರ, c/o ಕರಿಮೋಡ, ಸೌರವ್ಯೂಹ ಮನೆ, ಆಕಾಶ ಪೋಸ್ಟ್ - ಸಾಕಲ್ಲ? ಬೇಗ ಹುಡುಕಿ ತನ್ನಿ, ಕಾಯ್ತಿದೇನೆ.. (ಹುಷಾರು, ನೆನಪಿರಲಿ... ಇವನು ಅದೇ ಚಂದ್ರ, ಆದರೆ ಅವನಲ್ಲ. ಅವನಲ್ಲಿ ನಾ ಕಂಡ ಅವನಿಲ್ಲ!!! :) )
ನಮಸ್ಕಾರ ಶ್ರೀ.
ದೂರದ ಚಂದಿರನಲ್ಲಿರುವ ಕಪ್ಪು ಮೊಲವನ್ನು ಹತ್ತಿರದಿಂದ ನೋಡಿದಾಗ ಗುಂಪುಗುಳಿಯಾಗಿ ಕಂಡಿರಿ. ಆದರೆ ಅವನನ್ನು ಹಾಗೆಯೇ ಒಪ್ಪುವುದರಲ್ಲಿ ಸಮಾಧಾನವಲ್ಲವೇ? ಮತ್ತೊಮ್ಮೆ ಚಂದಿರನ ಬರಹೇಳಿ ಅಥವಾ ನೀವೇ ಹಾರಿ ಹೋಗಿ ನೋಡಿ. ಗುಡ್ಡ-ಕಂದಕಗಳಲ್ಲಿಯೂ ನಿಸರ್ಗರಮಣೀಯತೆಯು ಕಂಡುಬರಬಹುದು.
ಅಲ್ಲದೆ, ಸಮೀಪ ಬಂದ ಚಂದ್ರನಲ್ಲಿ ಬೆಳದಿಂಗಳು ಕಾಣೆಯಾಗಿತ್ತೆಂದಿರಿ; ಆದರೆ ಅವನ ಭಾವನೆಗಳ ಬಗ್ಗೆಯೂ ಯೋಚಿಸಿ ಒಮ್ಮೆ.
- ಇದು ನಾನು ಜಿ-ಟಾಕ್ ಚಂದ್ರನ ಬಗ್ಗೆ ಹೇಳುತ್ತಿಲ್ಲ. ಉಡುಗಣವೇಷ್ಟಿತ ಚಂದ್ರಸುಶೋಭಿತನನ್ನೇ ಕುರಿತು ಹೇಳುತ್ತಿದ್ದೇನೆ.
ಯಾತ್ರಿಕ,
ನೀವು ಹೇಳಿದ್ದಕ್ಕೆ ನನ್ನ ಸಹಮತವಿದೆ... ಈ ಕನವರಿಕೆ(?) ವರ್ಷಗಳ ಹಿಂದೆ ರೂಪುಗೊಂಡಿತ್ತು, ಈಗ ಇಲ್ಲಿ ಹಾಕಿರುವೆ, ಆದರೆ ಈಗಿನ ಚಿತ್ರ ಬೇರೆಯದೇ ಇದೆ, ಸಮಯ ಸಿಕ್ಕಾಗ ಅದೂ ಇಲ್ಲಿ ಬರಲಿದೆ... :)
ಧನ್ಯವಾದ, ಹೀಗೇ ಆಗಾಗ ಬರುತ್ತಿರಿ :)
"ಆದರೆ ಈಗಿನ ಚಿತ್ರ ಬೇರೆಯದೇ ಇದೆ, ಸಮಯ ಸಿಕ್ಕಾಗ ಅದೂ ಇಲ್ಲಿ ಬರಲಿದೆ"
- ಈ ಮಾತು ಓದಿದ ನಂತರ ಯಾಕೋ ನನಗೆ ಜಿ-ಟಾಕ್ ಚಂದ್ರನ ಬಗ್ಗೆ ಅನುಮಾನ ಬರ್ತಿದೆ. ನೀವು ಸ್ಟ್ಯಾಂಪ್ ಪೇಪರ್ ರೆಡಿ ಮಾಡುದು ಒಳ್ಳೇದು :-)
ಏನೇ ಇರಲಿ, ಚೆನ್ನಾಗಿ ಬರ್ದಿದ್ದೀರಿ. ಓದ್ಲಿಕ್ಕೆ ಬರ್ತಿರ್ತೇನೆ.
ಚಂದ್ರನ ಬಗ್ಗೆ ಬರೆಯುತ್ತಿದ್ದರೆ ಮತ್ತೆ ಮತ್ತೆ ನೆನಪಾಗುವುದು ಕೆಎಸ್ ನ. ಅದರಷ್ಟೇ ಆಪ್ತವಾಗುವಂತೆ ಬರೆದಿದ್ದೀರಿ. ಥಟ್ಟನೆ ನೆನಪಾದ ನಾಲ್ಕು ಸಾಲು ನಿಮ್ಮ ಲೇಖನ ಹೊಮ್ಮಿಸಿದ್ದು-
ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ತಾರೆಗಳ ಮೀಟುವೆವು ಚಂದಿರನ ದಾಟುವೆವು
ತೆಂಗುಗರಿಗಳ ನಡುವೆ ತುಂಬು ಚಂದಿರ ಬಂದು
ಬೆಳ್ಳಿಹಸುಗಳ ಹಾಲು ಕರೆಯುವಂದು
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ನಗುತಿರುವಳು ಸನ್ನಿಧಿಯಲಿ...
ಇಷ್ಟನ್ನೂ ನಿಮ್ಮ ಬರೆಹ ನೆನಪಿಸಿ ದಿನವನ್ನು ಧನ್ಯವಾಗಿಸಿತು.
ಥ್ಯಾಂಕ್ಯೂರೀ..
ಜೋಗಿ
ಯಾತ್ರಿಕ, ಸ್ಟ್ಯಾಂಪ್ ಪೇಪರ್ ಇನ್ನು ಬೇಡ ಅನ್ನಿಸ್ತಿದೆ.. :)
ಜೋಗಿ ಸರ್,
ಚಂದ್ರ ಹೀಗೆಯೇ ಅಂತ ಇಲ್ಲಿವರೆಗೆ ಹೆಚ್ಚಿನ ಕವಿಗಳು, ಲೇಖಕರು ಕಟ್ಟಿಕೊಟ್ಟ ಚಿತ್ರವನ್ನು, ನಿಯಮವನ್ನು ಮುರಿದಿದ್ದೇನೋ ನಿಜ... ಆದರೆ ನಿಮ್ಮ ಕಮೆಂಟ್ ಓದಿದಮೇಲೆ, ಚಂದದ, ಒಳ್ಳೆತನದ, ಮೃದುತ್ವದ ಸಂಕೇತ ಚಂದ್ರ, ಅವನನ್ನು ಕ್ರೂರಿ ಮಾಡಿದ್ದು ಒಂದು ರೀತಿಯಲ್ಲಿ ತಪ್ಪಲ್ಲವೇ ಅನಿಸುತ್ತಿದೆ...
ನೀವು ಹೊಗಳಿದ್ದೀರೋ ಸೋಪಿಲ್ಲದೆ ತೊಳೆದಿದ್ದೀರೋ ಗೊತ್ತಾಗಲಿಲ್ಲ.. :) ಆದರೆ ನನ್ನ ಬರಹ ನಿಮ್ಮ ಕಣ್ಣಿಗೆ ಬಿದ್ದಿದ್ದೇ ನನಗೆ ತುಂಬ ಸಂತೋಷ... :) ಬರುತ್ತಿರಿ ಸರ್...:)
ಚೆನ್ನಾಗಿದೆ ಶ್ರೀ .
ಏನದು gtalk ಚಂದ್ರ? Am I missing something ? ;)
ಧನ್ಯವಾದ ಮನಸ್ವಿನಿ. ಮಕ್ಕಳು ತುಂಟಾಟ ಮಾಡುತ್ತಿದ್ದರು, ಚಂದ್ರನ ತಗೊಂಬನ್ನಿ ಅಂತ ಅಡ್ರೆಸ್ ಕೊಟ್ಟು ಕಳಿಸಿದ್ದೇನೆ, ಇನ್ನೂ ವಾಪಸ್ ಬಂದಿಲ್ಲ :) :) :) I don't think you are missing anything!
ಚಂದ್ರ ಗೊತ್ತು, ಇಲ್ಲೂ ಒಬ್ಬನಿದ್ದಾನೆ!
ಉಳಿದಿದ್ದೆಲ್ಲಾ ಕರ್ಟ್ಲಿ ಆಂಬ್ರೋಸ್ ಬೌನ್ಸರ್ ಹಾಕಿದ ಹಾಗಿದೆ :-)
Post a Comment