Saturday, July 7, 2007

ಒಂದು ಒಳ್ಳೇ ದಿವಸ...

ಇವತ್ತು 07-07-07 ಶನಿವಾರ, ವಾರದ 7ನೇ ದಿನ, ಸಪ್ತಮಿ - ಒಳ್ಳೇ ದಿವಸವಂತೆ, ಒಳ್ಳೇ ಕೆಲಸ ಮಾಡಬೇಕಂತೆ. ಮೂರು ದಿವಸದಿಂದ ಬೇರೆ ಬೇರೆಯವರು ಹೇಳುತ್ತಲೇ ಇದ್ದಾರೆ. ಮೆಸೇಜುಗಳು ಬರುತ್ತಲೇ ಇವೆ. ಒಳ್ಳೇ ಕೆಲಸ ಅಂದ್ರೇನು? ಅದು ಮಾಡ್ಲಿಕ್ಕೆ ಒಳ್ಳೇ ದಿವಸವೇ ಬೇಕಾ? ಇವತ್ತು ಯಾರಿಗೂ ಏನೂ ಕೆಟ್ಟದಾಗುವುದಿಲ್ಲ ಅಂತೇನು ಗ್ಯಾರಂಟಿ? ಹೀಗೆಲ್ಲ ನಿನ್ನೆ ರಾತ್ರಿ ಯೋಚಿಸುತ್ತ ಕುಳಿತಿದ್ದೆ.
ಇವತ್ತು ಎದ್ದಾಗ ಮತ್ತೆ ಯಾರದೋ ಮೆಸೇಜು. ನೋಡುತ್ತಿದ್ದ ಹಾಗೇ ನನ್ನಿಂದಾಗುವ ನಾನು ಒಳ್ಳೇದು ಅಂದ್ಕೊಳ್ಳುವ ಕೆಲಸಗಳನ್ನು ಇವತ್ತು ಒಳ್ಳೇ ದಿವಸ ಅನ್ನುವ ನೆಪದಲ್ಲಾದರೂ ಮಾಡಿಬಿಡೋಣ ಅಂತನಿಸಿತು. ಹಾಗೆ ಒಂದು ಸಲ ಅನಿಸುವುದಷ್ಟೇ ಮುಖ್ಯ, ಅನಿಸಿದ ಮೇಲೆ ಕಾರ್ಯರೂಪಕ್ಕೆ ತರುವುದೇನು ಕಷ್ಟವಲ್ಲ!


************

ಕೆಲ ಸಮಯದ ಹಿಂದೆ ನಮ್ಮ ಚಿನ್ನಿ ಜತೆ ಮಾತಾಡುತ್ತ ಕುಳಿತಿದ್ದೆ. ಅವನು ವಿಶ್ವಗೋಸಮ್ಮೇಳನಕ್ಕೆ ಹೋಗಿ ಅಲ್ಲಿಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ. ಅದನ್ನು ನನಗೂ ಹಂಚುತ್ತಿದ್ದ. ಅಲ್ಲಿ ಏನೇನು ಇತ್ತು, ಹೇಗಿತ್ತು, ಗುರುಗಳು ಏನು ಮಾತಾಡಿದರು, ಬೇರೆಬೇರೆ ಸೆಲೆಬ್ರಿಟಿಗಳು ಏನು ಮಾಡಿದರು, ಯಾವ್ಯಾವ ರೀತಿಯ ದನ ಇತ್ತು, ಇತ್ಯಾದಿ ಇತ್ಯಾದಿ. ಜತೆಗೆ ಅಲ್ಲಿಯ ಪರಿಸರ ಹೇಗಿತ್ತು, ಸುತ್ತಮುತ್ತ ಹೇಗಿತ್ತು, ಅಲ್ಲಿ ಪಕ್ಕದ ಕಾಡು ಹೇಗಿದೆ -ಇತ್ಯಾದಿ ಕೂಡಾ.

ಕೊನೆಗೆ ಆತ ಕೇಳಿದ, 'ಅಕ್ಕಾ, ನಾನು ದೊಡ್ಡೋನಾದ್ಮೇಲೆ ಏನ್ಮಾಡ್ತೀನಿ ಗೊತ್ತಾ?'

'ಗೊತ್ತಿಲ್ಲ, ಏನ್ಮಾಡ್ತಿ?' - ನಾನು.

'ಯಾವ್ದಾದ್ರು ದೂರದ ಹಳ್ಳಿಯಲ್ಲಿ ಜಾಗ ತಗೊಂಡು ಮನೆ ಕಟ್ಟಿಸ್ತೀನಿ, ನಾನು ರಿಟೈರ್ಡ್ ಆದ್ಮೇಲೆ ಅಲ್ಲಿ ಹೋಗಿ ಬದುಕ್ತೀನಿ... ಅಲ್ಲಿ ಜನ ಜಾಸ್ತಿ ಇರಲ್ಲ, ಗಲಾಟೆ ಇರಲ್ಲ, ಸುತ್ತಲೂ ಹಸಿರಿರತ್ತೆ, ಚೆನ್ನಾಗಿರತ್ತೆ...'

11ರ ಪುಟ್ಟ ಪೋರನಿಗೆ ಎಷ್ಟು ದೂರದೃಷ್ಟಿ ಬೆಳೆದುಬಿಟ್ಟಿದೆ! ಇವಾಗ್ಲೇ ರಿಟೈರ್-ಮೆಂಟ್ ನಂತರ ಏನ್ಮಾಡ್ಬೇಕು ಅಂತ ಪ್ಲಾನ್! ನನಗೆ ಮೊದಲಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆಮೇಲೆ ಅಂದೆ, 'ಸೂಪರ್ ಆಗಿದೆ ನಿನ್ ಐಡಿಯಾ. ನನ್ನೂ ಕರೀತೀಯ ತಾನೇ?'

ಏನಿಲ್ಲವೆಂದರೂ ಇನ್ನೂ 45 ವರ್ಷಗಳ ನಂತರದ ಮಾತು. ಅವಾಗ ಹಳ್ಳಿಗಳು ಹಳ್ಳಿಗಳಾಗಿ ಉಳಿದಿರುತ್ತವೆಯಾ? ಪಟ್ಟಣಗಳಲ್ಲಿ ಇರಲು ಜಾಗವಿಲ್ಲದೆ ಮಹಡಿಯ ಮೇಲೆ ಮಹಡಿ ಕಟ್ಟಿಸಿ ಅದರಲ್ಲಿ ಬದುಕುತ್ತಾರೆ. ಹೀಗೆ Vertical ಆಗಿ ಎಷ್ಟು ದಿನ ಪಟ್ಟಣಗಳು ಬೆಳೆಯಲು ಸಾಧ್ಯ? Horizontal ಆಗಿ ಬೆಳೆಯಲು ಇನ್ನು ಪಟ್ಟಣಗಳಲ್ಲಿ ಜಾಗವಿಲ್ಲವೆಂದ ಮೇಲೆ ಪಟ್ಟಣಗಳು ಹಳ್ಳಿ ಕಡೆ ಹಬ್ಬಲೇ ಬೇಕು, ಹಬ್ಬಿಯೇ ಹಬ್ಬುತ್ತವೆ. ಇವನ್ನೆಲ್ಲಾ ಅವನಿಗೆ ಹೇಳಿ, ಅವನಿಗೆ ಅರ್ಥವಾಗದೆ, ಈ ಅಕ್ಕ ಏನು ಹೀಗೆ ಮಾತಾಡ್ತಾಳೆ ಅಂತ ಅವನಿಗನಿಸುವುದು ಬೇಡವೆಂದುಕೊಂಡೆ.

ಜತೆಗೇ ಪೇಟೆಯಲ್ಲಿಯೇ ಹುಟ್ಟಿ ಪೇಟೆಯಲ್ಲೇ ಬೆಳೆದ, ಸಹಜವಾಗಿಯೇ ಹಳ್ಳಿಯೆಂದರೆ ಅಕ್ಕರೆಗಳಿರಲಾರದ 5ನೇ ಕ್ಲಾಸಿನ ಹುಡುಗನಲ್ಲಿ ಇಷ್ಟು ಯೋಚನೆಯನ್ನಾದರೂ ಹುಟ್ಟಿಸಲು ಶಕ್ತವಾದ ವಿಶ್ವ ಗೋಸಮ್ಮೇಳನಕ್ಕೆ ನಾನು ಮನಸಿನಲ್ಲಿಯೇ ಥ್ಯಾಂಕ್ಸ್ ಹೇಳಿದೆ.

************

ಭಾಗಮಂಡಲದಿಂದ ಬಂದ ನಮ್ಮ ಹುಡುಗಿಯೊಬ್ಬಳು ಮೊನ್ನೆ ಅಲ್ಲಿಯ ಮಳೆಯ ಕಥೆ ಹೇಳುತ್ತಿದ್ದರೆ, ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆ. ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡು, ಕೇರಳ, ಪಾಂಡಿಚೆರಿ- ಹೀಗೆ ಮನಬಂದಲ್ಲಿ ಹರಿದು ಜಗಳ ಹುಟ್ಟಿಸಿದ ತುಂಟಿ ಕಾವೇರಿ ಹುಟ್ಟುವ ಆ ಜಾಗದಲ್ಲಿ ಈ ಸಲ ಮಳೆ ಹೆಚ್ಚಂತೆ. (ಮಳೆರಾಯನಿಗೂ ಸುಪ್ರೀಕೋರ್ಟ್ ತೀರ್ಪು, ಅದರಿಂದಾಗಿ ಆಗುತ್ತಿರುವ ಜಗಳ ಗೊತ್ತಾಗಿ ಕರುಣೆ ತೋರಿದ್ದಾನೇನೋ?) ಎಲ್ಲಿ ನೋಡಿದರೂ ನೀರೇ ನೀರಂತೆ. ಸಿಕ್ಕಾಪಟ್ಟೆ ಚಳಿಯಂತೆ. ವರ್ಷಕ್ಕೆ ಆರು ತಿಂಗಳು ಚಳಿಗೆ ಗಾಡಿಯ ಬ್ಯಾಟರಿ ಸತ್ತು ಹೋಗಿ ಗಾಡಿ ಸ್ಟಾರ್ಟ್ ಮಾಡಲು ಹರಸಾಹಸ ಪಡುತ್ತಾರಂತೆ.

ಹಳೇಕಾಲದ ಅವರ ಮನೆಯಲ್ಲಿ ಮಣ್ಣಿನಲ್ಲಿ ಮಾಡಿದ ಎರಡು ಅಂತಸ್ತು ಇವೆಯಂತೆ. ಒಂದರಲ್ಲಿರುವ ಕೋಣೆಗಳನ್ನು ಯಾರೂ ಉಪಯೋಗಿಸುವುದಿಲ್ಲವಂತೆ, ಇನ್ನೊಂದನ್ನು ಮಳೆಗಾಲದಲ್ಲಿ ಶಟಲ್ ಆಡಲು ಉಪಯೋಗಿಸುತ್ತಾರಂತೆ. ಅದರ ವಿಸ್ತಾರವೆಷ್ಟಿರಬಹುದು, ಹೇಗೆ ಕಟ್ಟಿರಬಹುದು, ಅದನ್ನೊಮ್ಮೆ ಕಣ್ಣಿಂದಾದರೂ ನೋಡಬೇಕಲ್ಲಾ ಅಂತೆಲ್ಲಾ ಯೋಚಿಸುತ್ತಿದ್ದೆ ನಾನು.

ಅಲ್ಲಿ ಕಾವೇರೀ ನದೀ ಪಾತ್ರದಲ್ಲಿ ಅವರಿಗೆ ಸೇರಿದ ಮಟ್ಟಸವಾದ ಬಯಲು ಜಾಗವಿದೆ, ಅದರ ಮೇಲೆ ಅವಾಗಲೇ ಯಾರ್ಯಾರದೋ ಕಣ್ಣು ಬಿದ್ದಿದೆಯಂತೆ. ಸ್ವಿಮ್ಮಿಂಗ್ ಪೂಲ್ ಮಾಡುತ್ತೇವೆ, ಅದನ್ನು ನಮಗೆ ಮಾರಿ ಅಂತ ಕೇಳುತ್ತಿದ್ದಾರಂತೆ. ಅವಳ ಅಪ್ಪ ಒಪ್ಪಿಲ್ಲವಂತೆ.

************

ವರ್ಷಗಳ ಹಿಂದೆ ನಮ್ಮೂರಲ್ಲಿ ಒಂದು ಮಲಯಾಳಂ ಸಿನಿಮಾದ ಶೂಟಿಂಗ್ ನಡೆದಿತ್ತು. ಸಿನಿಮಾದ ಹೆಸರು WAR AND LOVE. ನಮ್ಮೂರಿನ ಗುಂಪೆ ಗುಡ್ಡೆಯನ್ನು ಕಥೆಯಲ್ಲಿ ಕಾರ್ಗಿಲ್ ಸಮೀಪದ ಯಾವುದೋ ಬೆಟ್ಟವೆಂದು ತೆಗೆದುಕೊಂಡಿದ್ದರು. ಅಲ್ಲಿಯೇ ಶೂಟಿಂಗ್ ನಡೆಸಿದ್ದರು. ಒಂದು ವಾರ ಅಲ್ಲಿ ಶೂಟಿಂಗ್ ತಂಡ ಬೀಡುಬಿಟ್ಟಿತ್ತು. ಊರಿನಲ್ಲಿ ಚಿಳ್ಳೆಪಿಳ್ಳೆಗಳಿಂದ ಹಿಡಿದು ಮುದುಕರ ವರೆಗೆ ಎಲ್ಲರಿಗೂ ಸಂಭ್ರಮ, ಗುಂಪೆಗುಡ್ಡೆಲಿ ಸಿನ್ಮಾ ಶೂಟಿಂಗ್ ಆಗ್ತಿದೆ ಅಂತ. ಊರಿಗೆ ಊರೇ ದಿನಾ ಶೂಟಿಂಗ್ ನೋಡಲು ಗುಂಪೆಗುಡ್ಡೆಗೆ ಹೋಗುತ್ತಿತ್ತು. ಅಷ್ಟು ದೂರ ಹೋಗಲು ಆಗದವರು ಅಕ್ಕಪಕ್ಕದ ಗುಡ್ಡಗಳನ್ನೇರಿ ಚುಕ್ಕೆಯ ಹಾಗೆ ಕಾಣುವ ಮನುಷ್ಯರನ್ನೂ, ಅಲ್ಲಿದ್ದ ಕ್ರೇನ್ ಇತ್ಯಾದಿಗಳನ್ನೂ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ನಾನು ಊರಿಗೆ ಹೋಗಿದ್ದು ಶೂಟಿಂಗ್-ನ ಕೊನೆಯ ದಿನ. ಆದಿನ ಅದೇನ್ಮಾಡ್ತಾರೋ ನೋಡೋಣ ಅಂತ ನಾನೂ ಗುಂಪೆಗುಡ್ಡೆಗೆ ಹೋದೆ. ಕಥೆ ನೆನಪಿಲ್ಲ ನನಗೆ. ಬೆಂಕಿ ಹತ್ತಿಕೊಂಡು ಉರಿಯುವ ದೃಶ್ಯ, ಯಾರೋ ಯಾರನ್ನೋ ಉಳಿಸುವ ದೃಶ್ಯ ಇತ್ಯಾದಿಗಳ ಶೂಟಿಂಗ್ ನಡೆಯಿತು.

ಶೂಟಿಂಗ್ ಮುಗಿಸಿ ತಂಡ ಹೊರಟುಹೋದ ಮೇಲೆ ಗುಂಪೆ ಗುಡ್ಡೆ ಹೇಗಿತ್ತು ಅಂತೀರಾ? ಚಾ ಕುಡಿದು ಬಿಸಾಕಿದ ಪ್ಲಾಸ್ಟಿಕ್ ಲೋಟಗಳು, ಕೂಲ್ ಡ್ರಿಂಕ್ಸ್ ಬಾಟಲ್-ಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್-ನಿಂದ ಮಾಡಿದ ಮಾಡೆಲ್ ಗೊಂಬೆಗಳು, ಥರ್ಮಾಕೋಲ್, ಬ್ರಾಂಡಿ, ವಿಸ್ಕಿ ರಂ ಬಾಟಲ್-ಗಳು, ಅರ್ಧಮರ್ಧ ಉರಿದ ಮರದ ದಿಮ್ಮಿಗಳು, ಮಸಿ ಮೆತ್ತಿಕೊಂಡ ಕಲ್ಲುಗಳು, ನಿಜವಾಗಿಯೂ ಅಲ್ಲಿ WAR ಕಾಣುತ್ತಿತ್ತು... ಮನುಷ್ಯನ ಮತ್ತೆ ಪ್ರಕೃತಿಯ ನಡುವೆ. ಪ್ರಕೃತಿ ಸ್ವಲ್ಪ ಘಾಸಿಗೊಂಡು ಬಿದ್ದ ಹಾಗಿತ್ತು.

ಆದರೆ ಪ್ರಕೃತಿ ಅದನ್ನೆಲ್ಲ ಮರೆತು ಮತ್ತೆ ಅರಳುತ್ತಾಳೆ. ಈಗ ನೋಡಿ, ಅದೇ ಗುಂಪೆಗುಡ್ಡೆ. ಮಳೆಗೆ ಚಿಗುರಿಸಿಕೊಂಡಿದೆ, ಹಸಿರಾಗಿದೆ. ಕೆಲ ದಿನಗಳ ಹಿಂದೆ ತೆಗೆದಿದ್ದು.





(ಚಿತ್ರಗಳನ್ನು ಉಪಯೋಗಿಸಲು ಅನುಮತಿಯಿತ್ತ ಮಹೇಶನಿಗೆ ಪ್ರೀತಿಯಿಂದ ಥ್ಯಾಂಕ್ಸ್)





(ಪ್ರಕೃತಿ ಎಲ್ಲಿಯವರೆಗೆ ಚೇತರಿಸಿಕೊಳ್ಳಲು ಸಾಧ್ಯ? ಆಗಿರುವ ಹಾನಿ ಮಿತಿಯಲ್ಲಿರುವವರೆಗೆ ಮಾತ್ರ. ಗುಂಪೆಗುಡ್ಡೆಗೆ ಅಥವಾ ಇನ್ಯಾವುದೇ ಪಸಿರು ಪರಿಸರದ ತಾಣಕ್ಕೆ ಜಾಗಕ್ಕೆ ಟ್ರೆಕ್ಕಿಂಗ್ ಹೋಗುವ ಮಿತ್ರರೆಲ್ಲರಿಗೂ ಒಂದು ಸಲಹೆ... ನಿಮ್ಮಿಂದಾಗಿ ಅಲ್ಲಿಯ ಪರಿಸರ, ಜನ ತೊಂದರೆಗೊಳಗಾಗದಂತೆ ಪ್ರಕೃತಿಯ ಚೆಲುವನ್ನು ಆನಂದಿಸಿ. ಪ್ಲಾಸ್ಟಿಕ್, ಗ್ಲಾಸ್, ರಬ್ಬರ್, ರಾಸಾಯನಿಕಗಳಿಂದ ಮಾಡಿದ ಇನ್ಯಾವುದೇ ವಸ್ತು ಇತ್ಯಾದಿಗಳು ಮಣ್ಣೊಳಗೆ ಸೇರಿಕೊಂಡರೆ, non-biodegradable ಆಗಿರುವ ಕಾರಣ ಅವು ವರ್ಷಾನುಗಟ್ಟಲೆ FOREIGN BODYಗಳಾಗಿ ಹಾಗೇ ಉಳಿದುಕೊಳ್ಳುತ್ತವೆ. ಹಾಗಾಗಿ ಅಂಥವುಗಳ ಕೊಡುಗೆ ಪರಿಸರಕ್ಕೆ, ಮಣ್ಣಿಗೆ ನಿಮ್ಮಿಂದ ಸಿಗದ ಹಾಗೆ ನೋಡಿಕೊಳ್ಳಿ. ನಿಮಗೆಲ್ಲ ಇದು ಗೊತ್ತಿರಲಾರದು ಅಂತಲ್ಲ, ಆದರೆ ಗೊತ್ತಿಲ್ಲದವರು, ಅಥವಾ ಇದರ ಬಗ್ಗೆ ಹೆಚ್ಚು ಯೋಚಿಸದವರೂ ಕೂಡಾ ಇರಬಹುದು ಅನ್ನುವುದಕ್ಕೋಸ್ಕರ ಈ ಮಾತು)

************

ಹಣ್ಣು, ತರಕಾರಿ, ಸೊಪ್ಪುಗಳನ್ನು ರೈತರಿಂದ ಪಡೆದುಕೊಂಡು ಸುಪರ್ ಮಾರ್ಕೆಟಿನಲ್ಲಿ ಮಾರುವ ರಿಲಯನ್ಸ್ ಫ್ರೆಷ್ ಕೇರಳದಲ್ಲಿ ತನ್ನ ಚಟುವಟಿಕೆಗಳನ್ನು ಹಬ್ಬಿಸದ ಹಾಗೆ ಕೇರಳ ಸರಕಾರ ತಡೆದ ಸುದ್ದಿಯ ಮೇಲೆ ಗೆಳತಿ ನನ್ನ ಗಮನ ಸೆಳೆದಳು. ಆಗ ಹೈದರಾಬಾದಿನಲ್ಲಿದ್ದಾಗ ನಾವೆಲ್ಲ ರೈತ ಬಜಾರಿಗೆ ಹೋಗಿ ತರಕಾರಿ ಕೊಳ್ಳುತ್ತಿದ್ದ ದಿನಗಳು ನೆನಪಾಯಿತು. ಆ ರೈತ ಬಜಾರಿನಲ್ಲಿ ಎಷ್ಟು ಗಮ್ಮತ್ತು ಗೊತ್ತಾ? ಸಂಜೆಹೊತ್ತು ನಾವೆಲ್ಲ ಪುಟ್ಟ ಪುಟ್ಟ ಗುಂಪು ಕಟ್ಟಿಕೊಂಡು ತಿರುಗಾಡಲೆಂದು ರೈತಬಜಾರಿಗೆ ಹೋಗುತ್ತಿದ್ದುದು... ಆ ಸಂತೆಗೆ ಬರುತ್ತಿದ್ದ ಚಿಗುರುತ್ತಿರುವ ಮಕ್ಕಳು, ಬದುಕಿನ ಸಂಜೆಯಲ್ಲಿದ್ದ ಮುದುಕರು, ಜವಾಬ್ದಾರಿ ಹೊತ್ತ ಹೆಂಗಸರು, ಹಣ್ಣಿನ ವ್ಯಾಪಾರಿಗಳು, ಬದುಕಿನ ಬವಣೆಗೆ ಒರಟಾದರೂ ಒಳ್ಳೆ ಹೃದಯದ ಮೋಸವರಿಯದ ರೈತರು... ತೆಲುಗು ಬಿಟ್ಟು ಬೇರೆ ಭಾಷೆ ಬರದ ಆ ರೈತರು ಮತ್ತು ತೆಲುಗು ಬಿಟ್ಟು ಬೇರೆಲ್ಲ ಭಾಷೆಗಳು ಗೊತ್ತಿದ್ದ ನಾವುಗಳು ಸಂವಹನ ಸಾಧಿಸಲು ಪಡುತ್ತಿದ್ದ ಸಾಹಸ, ಕೊನೆಗೂ ಹರಕು ಮುರುಕು ಉರ್ದುವಿನಲ್ಲಿ ಡೀಲ್ ಮಾಡಿ ಕಡಿಮೆ ಬೆಲೆಗೆ ತರಕಾರಿ ಕೊಳ್ಳುತ್ತಿದ್ದುದು...

ಹೈದರಾಬಾದಿನ ಗೆಳತಿಯೊಬ್ಬಳು ಇತ್ತೀಚೆಗೆ ಹೇಳುತ್ತಿದ್ದಳು, ಈಗ ಆ ರೈತಬಜಾರಿನೆದುರಿಗೇ ರಿಲಯನ್ಸ್ ಫ್ರೆಶ್ ಸುಪರ್ ಮಾರ್ಕೆಟ್ ಬಂದಿದೆಯಂತೆ. ರೈತ ಬಜಾರಿನಲ್ಲಿ ರೈತರು ಮಾರುವುದಕ್ಕಿಂತ ಕಡಿಮೆ ಬೆಲೆಗೆ ತರಕಾರಿ ಅವರು ಮಾರುತ್ತಾರಂತೆ. ಅದರ ಜತೆಗೆ SUPER MARKETನ AMBIENCE ಬೇರೆ ಇರುತ್ತದಲ್ಲ? SOPHISTICATED ಜನ ರೈತಬಜಾರಿಗೆ ಹೋಗುವುದು ನಿಲ್ಲಿಸಿ ರಿಲಯನ್ಸ್ ಫ್ರೆಶ್-ಗೇ ಹೋಗುತ್ತಿದ್ದಾರಂತೆ.

ನಾನು ಕೇರಳ ಸರಕಾರ ಒಳ್ಳೆಯದೇ ಮಾಡಿದೆ ಅಂದುಕೊಂಡೆ. ಈ ತಡೆ ಕೂಡ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಕೇರಳ ಸರಕಾರ ರಿಲಯನ್ಸ್-ಗೆ ತಡೆಯೊಡ್ಡಿದ್ದು ಸರಿಯೇ ತಪ್ಪೇ ಅನ್ನುವುದರ ಬಗ್ಗೆ CNN IBNನಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. SMS POLL ನಲ್ಲಿ 70% ಜನ ತಡೆಯೊಡ್ಡಿದ್ದು ಸರಿಯಲ್ಲ ಅಂದಿದ್ದರು. ಎಷ್ಟು ಜನ SMS ಕಳಿಸಿದ್ದರು ಅನ್ನುವುದು ಗೊತ್ತಾಗಲಿಲ್ಲ.

************

ಮೊನ್ನೆ ಮೊನ್ನೆ ಎಲ್ಲಾ ಪತ್ರಿಕೆಗಳಲ್ಲಿ, ರಿಯಲ್ ಎಸ್ಟೇಟ್ ಕುರಿತ ವೆಬ್ಸೈಟ್-ಗಳಲ್ಲಿ, ಪಬ್ಲಿಕ್ ರಿಲೇಶನ್ ವೆಬ್-ಸೈಟ್-ಗಳಲ್ಲಿ - ಒಂದು ಮಹತ್ವದ ಸುದ್ದಿ. ರಿಯಲ್ ಎಸ್ಟೇಟಿಗೆಂದೇ ಒಂದು ಟಿವಿ ಚಾನೆಲ್ ಆರಂಭವಾಗುತ್ತದಂತೆ. ಭಾರತಕ್ಕೆ ಮೊತ್ತಮೊದಲನೆಯದಾದ ಈ ಚಾನೆಲ್ ರಿಯಲ್ ಎಸ್ಟೇಟ್ ಕುರಿತ ಎಲ್ಲಾ ಸುದ್ದಿಗಳನ್ನೂ ನೀಡುತ್ತದಂತೆ. 24 ಘಂಟೆ, 365 ದಿವಸ ತುಂಬಬೇಕು ಅವರು, ದೇಶದೆಲ್ಲಾ ಮೂಲೆಗೂ ಹೋಗಲಿದ್ದಾರೆ, unexplored ಜಾಗಗಳ ಬಗ್ಗೆ ಮಾಹಿತಿಯಂತೆ. ಟೂರಿಸ್ಟ್ ಸ್ಪಾಟ್-ಗಳ ಬಗ್ಗೆ, heritage homeಗಳ ಬಗ್ಗೆ, ಪರಿಸರದ ಬಗ್ಗೆ (:-]) ಮಾಹಿತಿಯಂತೆ.

ಇದಕ್ಕೆ ಜಾಹೀರಾತುಗಳ ಮಳೆಯೇ ಸುರಿಯಲಿದೆ, ಯಾಕಂದರೆ ಚಾನೆಲ್-ನ ಗುರಿ ಧನಿಕರು, ದುಡ್ಡಿರುವವರು, ಅಂದುಕೊಂಡದ್ದನ್ನು ಕ್ಷಣಮಾತ್ರದಲ್ಲಿ ಕೊಳ್ಳುವ ಶಕ್ತಿಯುಳ್ಳವರು ಮಾತ್ರ. ಚಾನೆಲ್ ಜತೆ ನಾವೂ ಅವರನ್ನು ಮುಟ್ಟೋಣ, ಅವರ ದುಡ್ಡಿನ ಪಾಲೊಂದು ತಮಗಿರಲಿ ಎಂದು ವಿವಿಧ ಬ್ರಾಂಡ್-ಗಳು ಆಶಿಸುವುದು ತಪ್ಪಲ್ಲ ಬಿಡಿ. ಅದು ಉಳ್ಳವರಿಂದ, ಉಳ್ಳವರಿಗಾಗಿ ಉಳ್ಳವರೇ ನಡೆಸುವ ಚಾನೆಲ್, ಉಳ್ಳವರುಳಿದು ಬೇರೆಲ್ಲರೂ ಅಲ್ಲಿ ಅಪ್ರಸ್ತುತ.

ಒಂದು ಕ್ಷೇತ್ರಕ್ಕೆ ಒಬ್ಬನೇ ರಾಜ ಸಾಧಾರಣವಾಗಿ ಈಗಿನ ಕಾಲದಲ್ಲಿ ಎಲ್ಲೂ ಇಲ್ಲ. ಇನ್ನೂ ಒಂದಷ್ಟು ಇದೇ ರೀತಿಯ ಚಾನೆಲ್-ಗಳು ಆರಂಭವಾಗಲಿಕ್ಕಿದೆ. ರಿಯಲ್ ಎಸ್ಟೇಟ್ ಕುರಿತ ಮಾಹಿತಿ ಮುಂದಿನ ದಿನಗಳಲ್ಲಿ ವೇಗವಾಗಿ ಹಬ್ಬಲಿದೆ, ಹಾಗೇ Suburban area ಮತ್ತು ಹಳ್ಳಿಗಳಲ್ಲಿ ಜಾಗಗಳ ಕೊಡು-ಕೊಳ್ಳುವಿಕೆ ಕೂಡಾ ಹಾಗೇ ಹೆಚ್ಚಲಿದೆ. ಮನೆಗಳು ಹೆಚ್ಚಲಿವೆ. Construction companyಗಳು, ಮತ್ತು ಇದಕ್ಕೆ ಸಂಬಂಧಿಸಿದ ಬೇರೆ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಟುವಟಿಕೆ ಹೆಚ್ಚಲಿದೆ. ಈ ಬೆಳವಣಿಗೆಗೆ ಪೂರಕವಾಗಿ ಸೂಪರ್ ಮಾರ್ಕೆಟ್-ಗಳು, ಮಾಲ್-ಗಳು, ಐಷಾರಾಮದ ವಸ್ತುಗಳು ಮತ್ತಿತರ ಬಿಸಿನೆಸ್-ಗಳು ಹಳ್ಳಿಗಳಿಗೆ ಹಬ್ಬುವ ದಿನಗಳು ದೂರವಿಲ್ಲ.

ಅದೆಲ್ಲಾ ಹಾಗಿರಲಿ, ನಾನು ಮಾತ್ರ ನಮ್ಮ ಚಿನ್ನಿ 45 ವರ್ಷಗಳ ನಂತರ ಕೊಂಡುಕೊಳ್ಳಲಿಕ್ಕಿರುವ ದೂರದ ಹಳ್ಳಿಯಲ್ಲಿರುವ ಪರಿಸರದ ನಡುವಿರುವ ಗಲಾಟೆಯಿಲ್ಲದ ಶಾಂತ ಜಾಗ ಸಿಗಬಹುದೇ ಅಂತ ಯೋಚಿಸುತ್ತಿದ್ದೇನೆ. ಜಾಹೀರಾತು, ಮಾಧ್ಯಮ ಎಲ್ಲವೂ ಎಷ್ಟು ಹಾನಿ ಮಾಡಬಲ್ಲವು ಅಂತ ಗೊತ್ತಿದ್ದೂ ಅದರಲ್ಲೇ ಬದುಕಬೇಕಾದ ಅನಿವಾರ್ಯತೆ, ಮೋನೋಕಲ್ಚರ್ ಪರಿಸರಕ್ಕೆ ಕೆಟ್ಟದು ಅಂತ ಗೊತ್ತಿದ್ದೂ ಅದರ ಬಗ್ಗೆ ಸುಳ್ಳುಸುಳ್ಳೇ ಹೊಗಳಿ ಡಾಕ್ಯುಮೆಂಟರಿ ಮಾಡಬೇಕಾದ ನನ್ನ ಖರ್ಮ, ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆಗೆ ಮೌನ ಸಾಥಿಯಾಗಿದೆ.

*************

ಒಳ್ಳೇ ಕೆಲಸ ಅಂದ್ನಲ್ಲ, ನಮ್ಮನೆ ಎದುರು ಹೂವಿನ ಗಿಡದ ಚಟ್ಟಿ ಹಾಕುತ್ತಿದ್ದೇನೆ. ಮತ್ತು ಬಿಡಬ್ಲ್ಯುಎಸ್ ಎಸ್ ಬಿಯವರು ಪ್ರತಿ ಎರಡು ದಿವಸಕ್ಕೆ ಒಂದು ಸಲ ಮರೆಯದೇ ನೀರುಬಿಡುವ ಕೃಪೆ ತೋರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

*************

WORLD IS NOT WHAT WE INHERIT FROM OUR ANCESTORS, BUT WHAT WE BORROW FROM OUR CHILDREN...

10 comments:

ಅನಿಕೇತನ said...

ನಿಸರ್ಗದ ಬಗ್ಗೆ ಜವಾಬ್ದಾರಿಯುತ ಕಾಳಜಿ, ಕಳಕಳಿ ಲೇಖನದಲ್ಲಿ ಮೂಡಿಬಂದಿದೆ, ಶ್ರೀ ...
ಚೆನ್ನಾಗಿದೆ..

ShaK said...

Hello Shree,

Shashi here from ShakReviews blogspot. I have not had the chance to see any new Kannada movies adakke aa blog silent ide. I am now in Bangalore on my vacation so saw Mungaru Male. Will write a review on it sometime this week.

Thanks.

Shashi / ShaKri

ಸಿಂಧು sindhu said...

ಪ್ರೀತಿಯ ಶ್ರೀ...

ಆ ದಿನ ತುಂಬ ಒಳ್ಳೆಯದು. ನಿಮ್ಮ ಬ್ಲಾಗನ್ನು ಓದುವ ಹಲವು ಸ್ನೇಹಿತರನ್ನು ಯೋಚನೆಗೆ ಹಚ್ಚುವ ಅತ್ಯುತ್ತಮ ವಿಷಯ ವೈವಿಧ್ಯದ ವಿಶಾಲ ನೋಟವನ್ನು ಕೊಟ್ಟ ದಿನ..

ಈ ಬರಹಕ್ಕೆ ನನ್ನ ಕೃತಜ್ಞತೆಗಳು.

ನಿಮ್ಮ ಗಿಡ ಚಿಗುರಿ ಹೂಗಳರಳುತ್ತವೆ. ಅದಕ್ಕೆ ನೀರಿನ ಜೊತೆಗೆ ನೀವೆರೆಯುವುದು ಜೀವನ್ಮುಖೀ ಪ್ರೀತಿಯಲ್ಲವಾ?

ಕೊನೆಯ ಕೋಟ್, ನಾವೆಲ್ಲ ನೆನಪಿಟ್ಟುಕೊಳ್ಲಬೇಕಾಗಿದ್ದು.

ತುಂಬ ಪ್ರೀತಿಯೊಂದಿಗೆ
ಸಿಂಧು

Chevar said...

ಅಕ್ಕಾ ಪ್ರೇಮಿಯನ್ನು ಕಾದ ಹಾಗೆ ಸರಿಯಲ್ವಾ. ಊರಿಗೆ ಹೋದರೆ ಅಲ್ಲಿನ ಮಳೆಯ ರಭಸವೇನು? ಅದು ನಂಗೆ ಇಲ್ಲಿ ಕಾಣಿಸ್ತಾ ಇಲ್ಲ. ನಿನ್ನೆ ಊರಿಂದ ಬರುವಾಗಲೂ ಏನು ಜಡಿಮಳೆ ಗೊತ್ತಾ? ಅದರ ಸುಖ ನಮಗೇ ಗೊತ್ತು ಕಣೇ....

Sanath said...

ಶ್ರೀ,
ಯಾಕೋ ಎನೋ ರೈತ ಬಜಾರ್ ನ ಎದುರು FRESH ಒಪೆನ್ ಆಗಿದ್ದು ಓದಿ ಅಂತ ಬೇಜಾರಾಯಿತು...

ಶ್ರೀನಿಧಿ.ಡಿ.ಎಸ್ said...

ಒಳ್ಳೇ ಬರಹ ! ಏನು ಶ್ರೀ ಉದ್ದುದ್ದ ಬರಿಯೋಕೆ ಶುರು ಮಾಡಿದ್ದು?:)

Shree said...

ಅನಿಕೇತನ, ಸಿಂಧು, ನಿಮ್ಮ ಅಭಿಪ್ರಾಯಗಳಿಗೆ, ಪ್ರೋತ್ಸಾಹಕ್ಕೆ ಚಿರಋಣಿ ನಾನು.

ಸನತ್, ಇದು ಬರೆಯುವಾಗ ನಾನೂ ಬೇಜಾರಲ್ಲೇ ಬರೆದೆ...

ನಿಧಿ, ಇನ್ನು ಮುಂದೆ ಸಾಧ್ಯವಾದಷ್ಟು ಗಿಡ್ಡಗಿಡ್ಡವಾಗಿ ಬರೀತೇನೆ :)

ಮಹೇಶ್, ಮಳೆ ಎಷ್ಟು ಹೊಗಳಿದರೂ ಅಷ್ಟೆಯೇ. ಅತಿಯಾದ್ರೆ ಅಮೃತವೂ ವಿಷ.. :)

ಶಕ್ರಿ, ನಿಮ್ಮ ಬ್ಲಾಗಿಗೆ ಸಾಧ್ಯವಾದಾಗೆಲ್ಲ ಭೇಟಿ ನೀಡುತ್ತಿರುತ್ತೇನೆ.

ಧನ್ಯವಾದ.

KRISHNA said...

ನಾನೂ ಗುಂಪೆಯಲ್ಲಿ ಶೂಟಿಂಗ್ ನೋಡಲು ಹೋಗಿದ್ದೆ....ಅದ ನನ್ನ ಊರಿನ ಹತ್ತಿರ

Suma Udupa said...

Hi Shree,
Nangu ee vishayagalu kaadutta irutave. Nimma parisara preethi, kalaji nammanna aaluvavarigu barali!!
-Suma.

Shree said...

ಕೃಷ್ಣಮೋಹನ್, ನಾನು ನಿಮ್ಮನ್ನು ನೋಡಿರಬೇಕು ಹಾಗಾದರೆ :) :)
ಸುಮಾ, ಏನು ಅನಿಸಿದರೂ ಏನೂ ಮಾಡಲಿಕ್ಕಾಗದ ಅಸಹಾಯಕತೆ, ಏನು ಮಾಡುವುದು?