Saturday, March 7, 2009

ದಾನೇದಾನೇಪೇ ಲಿಖಾ ಹೋತಾ ಹೈ...

 ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು... :-)
ಬಹಳ ದಿನದ ನಂತರ ಕಳೆದ ವಾರ ನಂಗೂ ನನ್ನ ರೂಂಮೇಟ್-ಗೂ ಒಟ್ಟಿಗೆ ಮಾರ್ನಿಂಗ್ ಶಿಫ್ಟ್ ಬಿದ್ದಿತ್ತು. ಮಾಮೂಲಾಗಿ ನಾನು  ಆಫೀಸಿಗೆ ಹೋಗುವುದು ಬೆಳಿಗ್ಗೆ 7.30ಕ್ಕೆ. ಆದರೆ ನಿನ್ನೆ ಬೆಳಿಗ್ಗೆ ಆಫೀಸಿಗೆ ಮಾತ್ರ ರಾತ್ರಿ ತನಕ ಆಫೀಸಲ್ಲಿರಬೇಕಾದ ಕಾರಣ ಸ್ವಲ್ಪ ಲೇಟ್ ಆಗಿ ಹೋಗ್ಬೇಕಿತ್ತು. ರೂಂಮೇಟ್ ಬೇಗ ಎದ್ದು ಚಪಾತಿ ಮಾಡಿದಳು. ಹಿಂದಿನ ದಿನ ಮಂಗಳೂರು ಸ್ಟೋರಿನಿಂದ  ತಂದ ಬ್ರಾಹ್ಮಿ (ಒಂದೆಲಗ) ಚಟ್ನಿ ಮಾಡಿ ಬಾಕ್ಸಿನಲ್ಲಿ ಹಾಕಿಕೊಂಡು 7.30ಕ್ಕೆ ಹೊರಟು ಹೋದಳು. ನಾನು ನಿಧಾನಕ್ಕೆದ್ದು 9ಕ್ಕೆ ಹೊರಟರೆ ಸಾಕಿತ್ತು.
ಗಂಟೆ 9.10 ಆಗಿತ್ತು. ಇನ್ನೂ ನಾನು ಮನೆಯಿಂದ ಹೊರಟಿರಲಿಲ್ಲ, ಆಗ ನನ್ನ ರೂಂಮೇಟ್ ಫೋನ್ ಮಾಡಿದಳು, ಚಟ್ನಿ ಮರೆತು ಬಂದಿದ್ದೇನೆ, ತರುತ್ತೀರಾ ಅಂತ ಕೇಳಿದಳು. ಆಯಿತು, ಅಂತ ಒಪ್ಪಿ, ಚಿಕ್ಕ ಬಾಕ್ಸಿನಲ್ಲಿ ಚಟ್ನಿ ಹಾಕಿ ತಗೊಂಡು ಆಫೀಸಿಗೆ ಹೊರಟೆ. ಬಸ್ಸಿನಲ್ಲಿ ಹೋಗಲು ಉದಾಸೀನವಾದ ಕಾರಣ ಯಾವುದೋ ಆಟೋ ನಿಲ್ಲಿಸಿ ಹತ್ತಿಕೊಂಡೆ. ಬ್ಯಾಗಿನಲ್ಲಿ ಚಟ್ನಿ ಇಡುವ ಬದಲು ನನ್ನ ಬದಿಯಲ್ಲಿ ಇಟ್ಟುಕೊಂಡು ಕೂತೆ. 
ಆಟೋ ಮೀಟರ್ ಯದ್ವಾತದ್ವಾ ಓಡುತ್ತಿದ್ದುದನ್ನೇ ನೋಡುತ್ತ ಕುಳಿತೆ. ಆಟೋದಲ್ಲಿ ಹೋಗುವಾಗ ಇದು ಮಾಮೂಲಾದ ಕಾರಣ ದಾರಿಯಲ್ಲೇ ಮೀಟರ್ ಜಾಸ್ತಿ ಓಡುತ್ತಿದೆ ಅಂತ ಹೇಳಿ ಕೆಟ್ಟವಳಾಗುವ ಅಭ್ಯಾಸ ಬಿಟ್ಟುಬಿಟ್ಟಿದ್ದೇನೆ. ಸರಿಯಾಗಿ ನಲುವತ್ತಮೂರು ರೂಪಾಯಿ ಎಣಿಸಿ ಕೈಲಿ ಹಿಡಿದುಕೊಂಡೆ. ಇಳಿದ ಮೇಲೆ ಅದನ್ನು ಕೊಟ್ಟು ತಿರುಗಿ ನೋಡದೇ ಆಫೀಸಿನೊಳಗೆ ಹೋಗುವುದು ಅಂತ ಪ್ಲಾನ್ ಹಾಕಿದೆ. ಒಂದು ವೇಳೆ  ಡ್ರೈವರ ಎದುರು ಮಾತನಾಡಿದರೆ ಆತನಿಗೆ ಹೇಗೆ ದಬಾಯಿಸಬೇಕು ಅಂತಲೂ ಆಭ್ಯಾಸ ಮಾಡಿಕೊಂಡೆ. 
ಆಫೀಸು ಬಂತು. ಪ್ಲಾನ್ ಮಾಡಿದ ಹಾಗೆಯೇ ನಲುವತ್ತಮೂರು ರೂಪಾಯಿ ಆತನ ಕೈಲಿಟ್ಟು ಆತ ಎಣಿಸುವುದಕ್ಕೆ ಕಾಯದೆ ಕೆಳಗಿಳಿದೆ, ನನ್ನ ಪಾಡಿಗೆ ನಾನು ಆಫೀಸಿನ ಮೆಟ್ಟಿಲು ಹತ್ತಿದೆ. ಬ್ಯಾಗ್ ಇಟ್ಟು ಡೆಸ್ಕಿಗೆ ಬರುತ್ತಿದ್ದ ಹಾಗೇ ರೂಂಮೇಟ್ ಕಾಣಿಸಿದಳು, ಆಗಷ್ಟೇ ನಂಗೆ ಚಟ್ನಿ ನೆನಪಾಗಿದ್ದು. ಮೀಟರ್ ಜಾಸ್ತಿ ಓಡಿದೆ ಅನ್ನುವ ತಲೆಬಿಸಿಯಲ್ಲಿ ನನ್ನ ಬದಿಯಲ್ಲಿಟ್ಟ ಬಾಕ್ಸ್ ಮರೆತು ಬಿಟ್ಟಿದ್ದೆ, ಹಾಗೇ ಎದ್ದುಕೊಂಡು ಬಂದಿದ್ದೆ. ಅವಳಿಗೆ ಹೇಳಿದೆ, ಚಟ್ನಿ ಆಟೋನಲ್ಲಿ ಹೋಯಿತು ಅಂತ. ಕೊನೆಗೆ ಡ್ರೈವರ್ ತಿನ್ನಲಿ ಬಿಡು ಅಂತ ಇಬ್ಬರೂ ನಕ್ಕು ಸುಮ್ಮನಾದೆವು.
ಒಂದು ಗಂಟೆ ಕಳೆದ ನಂತರ ರಿಸೆಪ್ಷನ್-ನಿಂದ ಕರೆ ಬಂತು, ನಿಮಗೊಂದು ಬಾಕ್ಸ್ ತಂದುಕೊಟ್ಟುಹೋಗಿದ್ದಾರೆ ಯಾರೋ, ಬಂದು ಕಲೆಕ್ಟ್ ಮಾಡಿ ಅಂತ. ಸರಿ, ಏನಪ್ಪಾ ಅಂತ ಹೋಗಿ ನೋಡಿದರೆ, ಅದೇ ಚಟ್ನಿ ಬಾಕ್ಸ್..! :-) ಆಟೋ ಡ್ರೈವರ್ ಸೆಕ್ಯೂರಿಟಿಯವರ ಹತ್ತಿರ ಅದನ್ನು ಕೊಟ್ಟುಹೋಗಿದ್ದನಂತೆ. ಚಟ್ನಿ ಸಿಕ್ಕಿತಲ್ಲ, ನನ್ನ ರೂಂಮೇಟ್ ಖುಷಿಯಾದಳು. ಅವಳ ಹಣೆಯಲ್ಲಿ ಆ ಚಟ್ನಿ ತಿನ್ನುವುದು ಅಷ್ಟು ಗಟ್ಟಿಯಾಗಿ ಬರೆದಿತ್ತು ಅನ್ಸುತ್ತೆ... ಇದನ್ನೇ ಹೇಳ್ತಾರೇನೋ, ದಾನೇದಾನೇಪೇ ಲಿಖಾ ಹೋತಾ ಹೈ.. ಅಂತ...! :-)
-----------------
ಕೆಲ ತಿಂಗಳ ಹಿಂದೆ ಇದೇ ರೀತಿ ಕ್ಯಾಮರಾ ಯಾವುದೋ ಆಟೋನಲ್ಲಿ ಮರೆತು ಎದ್ದುಬಂದಿದ್ದೆ. ಆ ಆಟೋದ ಡ್ರೈವರ್ ಕೂಡ ಇಷ್ಟೇ ಒಳ್ಳೆಯವನಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನಿಸ್ತಿದೆ. ಈಗ ನಂಗೆ ಕ್ಯಾಮರಾ ತಗೊಳ್ಳಲಿಕ್ಕೆಯೇ ಭಯ ಬಿಡ್ತಿಲ್ಲ, ಎಲ್ಲಾದ್ರೂ ಕಳೆದುಹಾಕಿಬಿಡ್ತೀನಿ ಅಂತ.

8 comments:

Pramod said...

:)

ವನಿತಾ / Vanitha said...

Layikkiddu..odi odi mareguli prof...avutta eddeya....?!!..

ವನಿತಾ / Vanitha said...

Ottinge bejaru aathu..camera kalakkondadakke...

ಸಂದೀಪ್ ಕಾಮತ್ said...

ಚಟ್ನಿ ಚಟ್ನಿ ಪೆ ಲಿಖಾ ಹೋತಾ ಹೇ ಖಾನೇವಾಲೇ ಕಾ ನಾಮ್!

sunaath said...

ಕೆಲವು ಒಳ್ಳೆಯ ಆಟೋ ಡ್ರೈವರ್ಸ್ ಇರ್ತಾರೆ. ನನ್ನ ಮೊಬೈಲ್
ಒಂದು ಸಲ ಆಟೊದಲ್ಲಿ ಬಿದ್ದು ಹೋದಾಗ, ಆಟೊ ಡ್ರೈವರ್
ಅದನ್ನು ಪ್ರಾಮಾಣಿಕವಾಗಿ ಹಿಂದೆ ಕೊಟ್ಟಿದ್ದ.

ವಿ.ರಾ.ಹೆ. said...

ಜೊತೆಗೆ ಚಪಾತಿನೂ ಇದ್ದಿದ್ರೆ ಆಟೋ ಡ್ರೈವರ್ ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದಿತ್ತು. ಬರೀ ಚಟ್ನಿ ತಗಂಡು ಅವನು ತಾನೇ ಏನು ಮಾಡ್ತಾನೆ. ದಾನೇ ದಾನೇ ಪೆ ಅವನ ನಾಮ್ ಬರೆದಿರಲಿಲ್ಲ ಅನ್ಸುತ್ತೆ. :)

Sushrutha Dodderi said...

ಒಂದೆಲಗನ ಸೊಪ್ಪು ನೆನಪಿನ ಶಕ್ತಿಗೆ ಒಳ್ಳೇದು ಅಂತ ನನ್ ಅಜ್ಜಿ ಹೇಳ್ತಿದ್ಲು ಯಾವಾಗ್ಲೂ. (ಅವ್ಳಿಗೆ ತಾನು ಚಿಕ್ಕವಳಿರ್ಬೇಕಾದ್ರೆ ಯಾರಾದ್ರೂ ಬೈದಿದ್ದು, ಮೋಸ ಮಾಡಿದ್ದು ಸಹ ನೆನ್ಪಿರೋದಕ್ಕೆ ಕಾರಣ ಆ ಸೊಪ್ಪೇ ಇರ್ಬೇಕು ಅಂತ ನಾವು ತಮಾಷಿ ಮಾಡ್ಕೊಳ್ತಿದ್ವಿ!). ಅಂಥಾದ್ರಲ್ಲಿ ಅದ್ನೇ ಮರ್ತ್ ಬಿಟ್ಟು ಹೋಗಿದೀಯಲ್ಲಾ, ನಿಂದೆಂತಾ ತಲೆ ಇರ್ಬಹುದು!! :O

Shrinidhi Hande said...

ಆ ಚಟ್ನಿಯ ಬೆಲೆಗಿ೦ತ ಅದನ್ನು ವಾಪಸು ತ೦ದು ಕೊಡಲು ಆಟೋ ಡ್ರೈವರ್ ನಿಗಾದ ಪೆಟ್ರೋಲ್ ಖರ್ಚು ಜಾಸ್ತಿಯಿದ್ದಿರಬಹುದು... ಆದರೂ ತೊ೦ದರೆ ತೆಗೆದುಕೊ೦ದು ವಾಪಸು ತ೦ದುಕೊಟ್ಟ ಅವನಿಗೆ ಒಳ್ಳೆಯದಾಗಲಿ