Tuesday, March 10, 2009

ಮತ್ತೆ ನೆನಪಾದ ಗಾಂಧೀಜಿ ...

ಗಾಂಧೀಜಿ ಹೆಚ್ಚಾಗಿ ನಮಗೆಲ್ಲ ನೆನಪಾಗುವುದು ಅಕ್ಟೋಬರ್ 2ಕ್ಕೆ... ಮತ್ತು ಒಂದೊಂದು ಸಾರಿ ಜನವರಿ 30ಕ್ಕೆ. ಆದರೆ ಈಸಾರಿ ಮಾತ್ರ ಕಾಲವಲ್ಲದ ಕಾಲದಲ್ಲಿ ಗಾಂಧಿ ಸುದ್ದಿಯಾಗಿದ್ದಾರೆ. ಮತ್ತು ನಾನು ಯೋಚಿಸಲು ತೊಡಗಿದ್ದೇನೆ, ಒಬ್ಬ ವ್ಯಕ್ತಿ ಜೀವಿಸುವುದು ಮತ್ತು ಅಮರನಾಗುವುದು ತನ್ನ ಯೋಚನೆಗಳ ಮೂಲಕವಾ, ಅಥವಾ ವಸ್ತುಗಳ ಮೂಲಕವಾ ಅಂತ.
------------------------------
SMALL IS BEAUTIFUL ಅಂತ ಒಂದು ಪುಸ್ತಕ ಇದೆ. It is - A STUDY OF ECONOMICS AS IF PEOPLE MATTERED. ಗಾಂಧೀಜಿಯ ಸರ್ವೋದಯ model of development, ಬುದ್ಧನ ಅರ್ಥಶಾಸ್ತ್ರ ಇತ್ಯಾದಿಗಳಿಂದ ಸ್ಫೂರ್ತಿ ಪಡೆದ ಬ್ರಿಟಿಷ್ ಲೇಖಕ ಇ.ಎಫ್. ಶೂಮೇಕರ್ ಎಂಬವರು ಬರೆದ ಪುಸ್ತಕ. 1973ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ನೆಲವನ್ನು ಹೇಗೆ ಉಪಯೋಗಿಸಬೇಕೆಂಬುದರಿಂದ ಹಿಡಿದು, ನ್ಯೂಕ್ಲಿಯರ್ ತಂತ್ರಜ್ಞಾನದವರೆಗೆ, sustainable economic development ಕುರಿತು ಹಲವಾರು ಲೇಖನಗಳಿವೆ. 30 ವರ್ಷದ ಹಿಂದೆ ಬರೆದಿದ್ದ ಈ ಪುಸ್ತಕದಲ್ಲಿರುವ ವಿಚಾರಗಳನ್ನು ಜಗತ್ತು ಅಂದೇ ಅರಗಿಸಿಕೊಂಡು ಆಚರಿಸಿದ್ದರೆ, ಇಂದು ನಾವು ಅನುಭವಿಸುತ್ತಿರುವ recession ಇರುತ್ತಿರಲಿಲ್ಲ. ಈ ಪುಸ್ತಕದ ಬಗ್ಗೆಯೇ ನಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ. (ನಾನು ಇದನ್ನು ಯಾರಿಗೋ ಗಿಫ್ಟ್ ಕೊಟ್ಟಿದ್ದೆ. ಅದು ಒಂದು ದಿನ ಎಲ್ಲೋ ಓದುವವರಿಲ್ಲದೆ ಅನಾಥವಾಗಿ ಬಿದ್ದಿದ್ದು ಕಂಡು, ನಂಗೆ ಎಲ್ಲಿಲ್ಲದ ಸಿಟ್ಟು ಬಂದು, ಅದನ್ನು ಮತ್ತೆ ತೆಗೆದುಕೊಂಡು ಬಂದು ನನ್ನ ಶೋಕೇಸ್-ನಲ್ಲಿ ಇಟ್ಟಿದ್ದೇನೆ, ಹಾಗೂ करो ज्यादा का इरादा ಅನ್ನುವ ಇಂದಿನ ಜನರೇಶನ್ನಿಗೆ SMALL IS BEAUTIFUL ಎಂಬ ಕಲ್ಪನೆಯೇ ಒಪ್ಪಿಕೊಳ್ಳಲು ಸಾಧ್ಯವಾಗದಂತಹುದು, ಗಾಂಧಿಯ ವಿಚಾರಧಾರೆಗಳು ಇಂದಿಗೆ ಅಪ್ರಸ್ತುತ ಅಂತ ಬಲವಾಗಿ ನಂಬಲು ಆರಂಭಿಸಿದ್ದೇನೆ.)
ಗಾಂಧೀಜಿ ಜತೆಗೆ ಬಹುಕಾಲವಿದ್ದ ಮದ್ರಾಸ್ ಮೂಲದ ಡಾ.ಜೆ.ಸಿ. ಕುಮಾರಪ್ಪ ಅವರು ಬರೆದ 'ಶಾಶ್ವತ ಅರ್ಥಶಾಸ್ತ್ರ' ಎಂಬ ಪುಸ್ತಕ ಕೂಡ ಗಾಂಧಿಯನ್ ಫಿಲಾಸಫಿಯ ತಳಹದಿಯಲ್ಲೇ ಬಹಳಷ್ಟು ವಿಚಾರಗಳನ್ನು ವಿವರಿಸುತ್ತದೆ. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್-ನವರು ಇದನ್ನು 1991ರಲ್ಲಿ ಪ್ರಕಟಿಸಿದ್ದರು. 1997ರಲ್ಲಿ ಇದು ಮರುಮುದ್ರಣ ಕಂಡಿತು, ಇತ್ತೀಚೆಗೆ ಯಾವುದೇ ಪುಸ್ತಕ ಅಂಗಡಿಯಲ್ಲೂ ಇದನ್ನು ನಾನು ಕಂಡೇ ಇಲ್ಲ. ಓದುವವರಿಲ್ಲದ ಮೇಲೆ ಮರುಮುದ್ರಣವಾದರೂ ಯಾಕಾಗಬೇಕು?
------------------------------
ಈಗ ಯಾವನೋ ಗಾಂಧೀಜಿ ಚಪ್ಪಲಿ, ಗಿಂಡಿ, ಕನ್ನಡಕ ಇತ್ಯಾದಿ ವಸ್ತುಗಳನ್ನು ಹರಾಜಿಗೆ ಹಾಕಿದಾಗ. ನಮಗೆಲ್ಲ ಗಾಂಧೀಜಿ ನೆನಪಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು ಎಂಬುದು ಬಿಟ್ಟರೆ ಇಂದಿನ ಜನರೇಶನ್ನಿಗೆ ಗಾಂಧಿ ಬಗ್ಗೆ ಏನೇನೂ ಗೊತ್ತಿರಲಿಕ್ಕಿಲ್ಲ. ಬೇಕೆಂದರೆ ಗಾಂಧೀಜಿ ಇಬ್ಬರು ಹುಡುಗಿಯರ ಜತೆಗೇ ಇರುತ್ತಿದ್ದರು, ಗಾಂಧೀಜಿ ದೇಶ ಒಡೆದರು ಎಂಬಂತಹ ಸೆನ್ಸೇಶನಲ್ ವಿಚಾರಗಳಿಗೆ ಬೇಕಾದಷ್ಟು ಪಬ್ಲಿಸಿಟಿ ಸಿಕ್ಕಿದೆ. ಆದರೆ, ದೇಶ ಹೇಗೆ ನಡೆಯಬೇಕು ಎಂಬುದರ ಬಗ್ಗೆ, ಸ್ವರಾಜ್ಯದ ಬಗ್ಗೆ, ಸ್ವಾವಲಂಬನೆಯ ಬಗ್ಗೆ, ಗ್ರಾಮಸ್ವರಾಜ್ಯದ ಬಗ್ಗೆ, ಸರ್ವೋದಯದ ಬಗ್ಗೆ ಗಾಂಧೀಜಿಯ ಪರಿಕಲ್ಪನೆಗಳು ಇಂದು ಯಾರಿಗೂ ಗೊತ್ತಿಲ್ಲ. ಗಾಂಧಿ ಎಂಬ ಚಾರಿತ್ರಿಕ ವ್ಯಕ್ತಿತ್ವದ ಧನಾತ್ಮಕ ಭಾಗವನ್ನು ಅರಿಯುವ ಅಗತ್ಯ ಇಂದು ಯಾರಿಗೂ ಕಾಣುತ್ತಿಲ್ಲ. ಇಂದು ಖಾದಿ ಡಿಸ್ಕೌಂಟಿನಲ್ಲಿ ಸಿಕ್ಕಿದರೂ ಕೊಳ್ಳುವವರು ಕಡಿಮೆ. ಇನ್ನು ಚರಕ? What's that?
9 ಕೋಟಿ ಕೊಟ್ಟು ಗಾಂಧೀಜಿಯ ವಸ್ತುಗಳನ್ನು ಕೊಂಡ ವಿಜಯ ಮಲ್ಯ ಕರ್ನಾಟಕದ ಹೆಮ್ಮೆಯ ಕುವರ, ಬೆಂಗಳೂರಿನ ಮಿಲಿಯಾಧಿಪತಿ. ಹೀಗೆ, ಇಂಡೈರೆಕ್ಟ್ ಆಗಿ ಭಾರತದ ಮರ್ಯಾದೆ ಉಳಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ... :-) ಆದರೆ ಬೆಂಗಳೂರಲ್ಲಿ ಒಂದು ಗಾಂಧಿ ಭವನವಿದೆ. ಶಿವಾನಂದ ಸರ್ಕಲ್ಲಿಗೆ ಸಮೀಪವಿದೆ. ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದರಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಹಿರಿಯರ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಈ ಗಾಂಧಿಭವನದಲ್ಲಿ ಏನೇನು ನಡೆಯುತ್ತದೆ, ಅದನ್ನು ನಾವು ಯಾವುದಾದರೂ ರೀತಿಯಲ್ಲಿ ಪ್ರೋತ್ಸಾಹಿಸಬಹುದಾ, ಊಹುಂ, ಯಾರಾದರೂ ಯೋಚಿಸುತ್ತೀವಾ? ಪರಿಣಾಮ, ಇಂದು ಗಾಂಧಿಭವನಕ್ಕೆ ಕೂಡ ಹೆಚ್ಚುಕಡಿಮೆ ಗಾಂಧೀಜಿಗಾದ ಗತಿಯೇ ಆಗಿದೆ. ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕ ನಿಧಿಯಂತೆ, ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘವಂತೆ, ಇವೆಲ್ಲ ಈಗಲೂ ಇವೆಯಾ, ಏನು ಮಾಡುತ್ತಿವೆ, ಯಾವುದೂ ಯಾರಿಗೂ ಗೊತ್ತಿರಲಿಕ್ಕಿಲ್ಲ, ನನಗೂ ಗೊತ್ತಿಲ್ಲ.
------------------------------
ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ಅವರ ವಸ್ತುಗಳನ್ನು ಯಾವನೋ ಕೊಂಡುಕೊಂಡು ವಾಪಸ್ ಭಾರತಕ್ಕೆ 'ದಾನ' ಮಾಡಿದಾಗ ಭಾರತದ 'ಮಾನ' ಉಳಿಯಿತೆಂದು ಸುಳ್ಳುಸುಳ್ಳೇ ಖುಷಿಪಡುತ್ತೇವೆ. ಗಾಂಧಿತಾತನ ಕನ್ನಡಕ, ಚಪ್ಪಲಿ ವಾಪಸ್ ಬಂದಿದ್ದರಿಂದ ಏನು ಉಪಯೋಗವಾಯಿತೋ ತಿಳಿಯದು. ಆದರೆ, ಚುನಾವಣೆಯ ನಡುವೆಯೇ ಐಪಿಎಲ್ ನಡೆಯುವುದೆಂದು ನಿರ್ಧಾರವಂತೂ ಆಗಿದೆ. ಭಾರತಕ್ಕೆ ಕೋಟಿಕೋಟಿ ಲಾಭವಾಗಲಿದೆ. (ಭಾರತದಲ್ಲಿ ಯಾರಿಗೆ ಲಾಭ ಅಂತ ಮಾತ್ರ ಕೇಳಬೇಡಿ ಪ್ಲೀಸ್, ಅದಕ್ಕೆ ನಂಗೆ ಉತ್ತರ ಗೊತ್ತಿಲ್ಲ... ಮ್ಯಾಚ್ ನೋಡುವ ಖುಷಿ ಬಿಟ್ಟರೆ ನನಗೂ ನಿಮಗೂ ಇದರಿಂದ ಏನು ಲಾಭ ಅಂತ ನಿಜಕ್ಕೂ ನಂಗೆ ಗೊತ್ತಿಲ್ಲ)
ವಿಜಯ ಮಲ್ಯ ಹಾಲಿ ರಾಜ್ಯಸಭಾಸದಸ್ಯರು ಅಂತಲೂ ನಾವೆಲ್ಲ ಮರೆತಿದ್ದೇವೆ. ಅವರು ಎಂಪಿ ಆಗಿ ಮಾಡಿದ ಕೆಲಸಗಳ ಲಿಸ್ಟ್ ಇಲ್ಲಿದೆ. http://mplads.nic.in/sslapps/mpladsworks/masterrep.htm. ಈ ವೆಬ್ ಸೈಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಎಷ್ಟು ಹಣ sanction ಮಾಡಿಸಿಕೊಂಡಿದ್ದಾರೆ ಎಂಬುದೂ ಲೆಕ್ಕಹಾಕಬಹುದು. ಇದು ಸುಮ್ಮನೆ, ಮಾಹಿತಿಗಾಗಿ.
------------------------------
ಗಾಂಧಿತಾತನ ಶರೀರದ ಕೊಲೆ 1948ರಲ್ಲೇ ಆಗಿತ್ತೇನೋ ನಿಜ, ಆದರೆ ಈಗ ಗಾಂಧಿಯ ವಿಚಾರಧಾರೆಗಳ ಕಗ್ಗೊಲೆ ಭಾರತದೆಲ್ಲೆಡೆ ನಡೆಯುತ್ತಿದೆ. ದಿನದಿನವೂ ನಮ್ಮೆಲ್ಲರೊಳಗಿನ ಗಾಂಧೀಜಿ ಸಾಯುತ್ತಲೇ ಇದ್ದಾರೆ. ನಾವೆಲ್ಲರೂ ನೋಡುತ್ತಲೇ ಇದ್ದೇವೆ ಹೊರತು ಏನು ಮಾಡಲೂ ಸಾಧ್ಯವಾಗಿಲ್ಲ.
ಎಷ್ಟಂದರೂ ನಮ್ಮದು ಹೇಳುವವರು ಕೇಳುವವರು ಇಲ್ಲದ ದೇಶ, ಯಾರಾದರೂ ಯಾವಾಗ ಏನು ಬೇಕಾದರೂ ಇಲ್ಲಿ ಮಾಡಬಹುದು. ದುಡ್ಡು ಇದ್ದವರು ಖಾಸಗಿ ಏರೋಪ್ಲೇನುಗಳಲ್ಲೇ ದೇಶದಿಂದ ದೇಶಕ್ಕೆ ಹಾರಿಕೊಂಡು ಸುಲಭವಾಗಿ ಹೀರೋ ಆಗಿ ಮೆರೆಯಬಹುದು, ದುಡ್ಡು ಬಿತ್ತಿ ಮತ್ತಷ್ಟು ದುಡ್ಡು ಬೆಳೆಯಬಹುದು, ದುಡ್ಡಿಲ್ಲದವರಿಗೆ ಇದ್ದೇ ಇದೆಯಲ್ಲ ಭಿಕ್ಷೆ ಬೇಡುವುದು, ಸ್ಲಂಗಳಲ್ಲಿ ಬದುಕುವುದು, ಅಥವಾ ಯಾರದೋ ತಲೆ ಒಡೆದು ಕೊಲೆ ಮಾಡಿ ದುಡ್ಡು ಎತ್ತುವುದು! ಇರಲಿ ಬಿಡಿ, ನಾವಾದರೂ ಏನು ಮಾಡಲಿಕ್ಕಾಗುತ್ತದೆ, ಗಾಂಧಿ ಪುಸ್ತಕಗಳು ಸಿಕ್ಕಿದರೆ ಶೋಕೇಸಿನಲ್ಲಿಡೋಣ, ಚಪ್ಪಲಿ, ಕನ್ನಡಕ ಸಿಕ್ಕಿದರೆ ಮ್ಯೂಸಿಯಂನಲ್ಲಿಡೋಣ. ಗಾಂಧಿ ವಿಚಾರಗಳು ಯಾರಿಗೆ ಬೇಕು? He's not relevant anymore!

9 comments:

VENU VINOD said...

ಮಹಾತ್ಮಾ ಗಾಂಧೀಜಿಯವರ ವಸ್ತುಗಳನ್ನು ಕಾರ್ಪೊರೇಟ್ ದೊರೆಯೊಬ್ಬರು ಮತ್ತೆ ಭಾರತಕ್ಕೆ ತಂದ ಕಾರಣ ಕೆಲವರಾದರೂ ಗಾಂಧೀಜಿಯವರ ಬಗ್ಗೆ ಯೋಚಿಸಬಹುದೇನೋ....!!!

ತೇಜಸ್ವಿನಿ ಹೆಗಡೆ said...

ಗಾಂಧೀಜಿ ಎಂದರೆ ಸತ್ಯಾಗ್ರಹ, ಅಹಿಂಸೆ, ತುಂಡು ಪಂಚೆ ಇಷ್ಟೇ ಎಂದು, ಅರೆಜ್ಞಾನವನ್ನೇ ತುಂಬಿಕೊಂಡವರೇ ಹೆಚ್ಚಾಗಿ ಇರುವಾಗ ಅವರ ತತ್ವಗಳಿಗೆ, ಆದರ್ಶಗಳಿಗೆ, ದಾರ್ಶನಿಕತೆಗೆ ಬೆಲೆ ಕೊಡುವವರು ಯಾರಿರುವರು ಹೇಳಿ?!

ಅವರ ವಸ್ತುಗಳನ್ನು ಬೆಲೆಕಟ್ಟಿಯಾದರೂ ಕೊಳ್ಳಬಹುದು. ಆದರೆ ಅವರ ದೂರದರ್ಶಿತ್ವವನ್ನು, ಛಲ, ಸಾಧನೆ, ಕ್ಷಮಾಗುಣ, ಸರಳತೆ ಇವನ್ನೆಲ್ಲಾ ಮೈಗೂಡಿಸಿಕೊಳ್ಳಲು ಯಾವ ಬೆಲೆ ಕಟ್ಟಬಹುದು ಹೇಳಿ?

ಮಲ್ಯ ಅವರು ಮಾಡಿದ್ದು ರಾಜಕೀಯಕ್ಕೋ ಇಲ್ಲಾ ಮೆರೆಯುವುದಕ್ಕೋ ಕಾಣೆ. ಆದರೆ ಅವರು ಹಾಗೆ ಹರಾಜಿಕೆ ಕೊಂಡದ್ದು ಕೇವಲ ಗಾಂಧಿಯವರ ಮೇಲಿನ ಗೌರವ, ಪ್ರೀತಿಗಾಗಿ ಎಂದು ಹೇಳಿದರೆ ಖಂಡಿತ ಒಪ್ಪೊಲ್ಲ. ಗಾಂಧೀಜೊಯವರ ತತ್ವಗಳಲ್ಲಿ ಎಷ್ಟನ್ನು ಅವರು ಅಳವಡಿಸಿಕೊಂಡಿರುವರು ಎಂದು ನೋಡಿದರೆ ಸತ್ಯ ಕಣ್ಣೆದುರು ಬರುತ್ತದೆ. ಮದ್ಯದ ದೊರೆ ಎಂದೇ ಹೇಳಿಸಿಕೊಳ್ಳುವವ ಮದ್ಯವನ್ನು ನಿಷೇಧಿಸಲು ಕರೆಕೊಟ್ಟ ವ್ಯಕ್ತಿಯ ವಸ್ತುವಿಗೆ ಬೆಲೆಕಟ್ಟುತ್ತಾನೆ!!

ನೀವು ಹೇಳಿದ್ದು ನಿಜ. ಗಾಂಧೀಜಿ ಈಗ ಯಾರಿಗೂ ಬೇಡವಾಗಿದ್ದಾರೆ. ಅವರ ಹೆಸರೊಂದನ್ನು ಮಾತ್ರ ತಮ್ಮ ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಬಳಸಿಕೊಳ್ಳುತ್ತಿದ್ದಾರೆ. ನಿತ್ಯ ಅವರ ಹಾಗೂ ಅವರ ಹೆಸರಿನ ಕಗ್ಗೊಲೆ ಆಗುತ್ತಲೇ ಇದೆ....:(

sunaath said...

ಗಾಂಧೀಜಿಯವರ ವಿಚಾರಗಳನ್ನು ಬಿಸಾಕಿಬಿಟ್ಟು, ಅವರ ಕನ್ನಡಕ,
ಚಪ್ಪಲಿ ಇತ್ಯಾದಿ ವಸ್ತುಗಳಿಗಾಗಿ ತಾರಕ ಮನೋಸ್ಥಿತಿಯನ್ನು ನಿರ್ಮಿಸುವದರಲ್ಲಿ ಕೆಲವರಿಗೆ ಲಾಭವಿದೆ.
ಮಲ್ಯರಿಗಂತೂ ದುಡ್ಡಿನ ಬರವಿಲ್ಲ; ಅವರು ಸಾಬರಮತಿ ಆಶ್ರಮವನ್ನೇ ಕೊಳ್ಳಬಹುದು.
ನಿಮ್ಮ ಲೇಖನ ತುಂಬ relevant ಆಗಿದೆ.

ಹರೀಶ ಮಾಂಬಾಡಿ said...

ಮದ್ಯಪಾನ ಕಟುವಾಗಿ ವಿರೋಧಿಸಿದ ಗಾಂಧೀಜಿ, ಮದ್ಯದ ದೊರೆ ಮಲ್ಯ-- ಎತ್ತಣ ಸಂಬಂಧ!
ಏನೇ ಇರಲಿ.. ಮಲ್ಯ ಇಂದು ಗಾಂಧೀಜಿಯನ್ನು ನೆನಪಿಸಿದ್ದು ಹೌದು.

ಗಿರಿ said...

"ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳಲು ಗೊತ್ತಿಲ್ಲದ ನಾವು, ಅವರ ವಸ್ತುಗಳನ್ನು ಯಾವನೋ ಕೊಂಡುಕೊಂಡು ವಾಪಸ್ ಭಾರತಕ್ಕೆ 'ದಾನ' ಮಾಡಿದಾಗ ಭಾರತದ 'ಮಾನ' ಉಳಿಯಿತೆಂದು ಸುಳ್ಳುಸುಳ್ಳೇ ಖುಷಿಪಡುತ್ತೇವೆ."

ಹೌದು ಶ್ರೀ... ನಾವೀಗ ಸುಳ್ಳು ಸುಳ್ಳೇ ಖುಶಿಪಡೂತ್ತಿದ್ದೇವಾ? ಹಾಗನಿಸುತ್ತಿದೆ ಅಲ್ವಾ...?
ನೀವು ಹೇಳಿದ್ದು ನಿಜ...

ಗಾಂಧಿಯ ವೈಚಾರಿಕತೆಯನ್ನು ಪ್ರಶ್ನಿಸಲು ಬೆಕಾದಷ್ಟು ಜನ ಸಿಗ್ತಾರೆ. ಇವರಾರೂ ಗಾಂಧಿಯವರನ್ನು ತಿಳಿದುಕ್ಕೊಳ್ಳಲು ಪ್ರಯತ್ನಿಸಿದವರಲ್ಲ. ಅಷ್ಟೇ ಯಾಕೆ, ಕೆಲವರು ಗಾಂಧಿಯ ಯಾವುದೇ ಪುಸ್ತಕಗಳನ್ನು, ಬರಹಗಳನ್ನು ಓದದೇ, ಉಡಾಫೆಯಿಂದ ನೀವಂದಂತೆ ತುಂಡು ಬಟ್ಟೆಯ ಮನುಷ್ಯ ಎಂದು ಕರೀತಾರೆ. ಗಾಂಧಿಯನ್ನು ಹೀಯಳಿಸುವುದೇ ಒಂದು ಫ್ಯಾಶನ್ ಮಡಿಕ್ಕೊಂಡವರಿಗೇನು ಕಮ್ಮಿ ಇಲ್ಲ ನಮ್ಮಲ್ಲಿ...

ಪ್ರಸ್ತುತ ಸನ್ನಿವೇಶದಲ್ಲಿ ನಿಮ್ಮ ಲೇಖನ ಕಠೋರವಾದರೂ ಸತ್ಯ ಎನ್ನುವಂತೆ ಮೂಡಿಬಂತು... ಕೆಲವರಾದರೂ ಎಚ್ಚೆತ್ತುಕ್ಕೊಳ್ಳಲಿ....
ಗಾಂಧಿಯ ವಿಚಾರಗಳನ್ನು ಉಳಿಸಿಕೊಳ್ಳುವ ನಿಮ್ಮ ತುಡಿತಕ್ಕೆ ಅಭಿನಂದನೆಗಳು...

-ಗಿರಿ

ವನಿತಾ / Vanitha said...

well written article..

ಮಲ್ಲಿಕಾರ್ಜುನ.ಡಿ.ಜಿ. said...

ಎಲ್ಲರಿಗೂ ಗಾಂಧಿ ಬೇಕು, ಗಾಂಧಿ ಬಳಸಿದ ವಸ್ತುಗಳು ಬೇಕು, ಆದರೆ ಗಾಂಧಿ ವಿಚಾರ ಬೇಕಿಲ್ಲ. ಮಲ್ಯ ಮತ್ತು ಗಾಂಧಿ ನಡುವೆ ಇರುವ common factor "ಮದ್ಯ". ಪ್ರಾಮುಖ್ಯ ಕೊಡಬಾರದ್ದಕ್ಕೆ ನಾವು ಕೊಡುತ್ತಿದ್ದೀವಾ?

Shree said...

@ ವೇಣು, ಹರೀಶ್ -
ಹಾಗೆ ಅಂದು ಕೊಳ್ಳಲಿಕ್ಕೆ ನನಗೂ ಖುಷಿ, ಆದರೆ ಯೋಚಿಸಿದರೇನು ಬಂತು ವೇಣು, ಅರಗಿಸಿಕೊಳ್ಳಬೇಕಾದದ್ದನ್ನು, ನಮ್ಮ ರಕ್ತದಲ್ಲಿ ಬೆರೆತು ಹೋಗಬೇಕಾದದ್ದನ್ನು ಬರಿದೇ ನೆನಪಿಸಿಕೊಳ್ಳುವುದರಿಂದ ಏನೂ ಉಪಯೋಗವಿಲ್ಲ.
@ ತೇಜಸ್ವಿನಿ -
ನಂಗೆ ಓಟಿಸ್ ಹೆಚ್ಚು ಸೆನ್ಸಿಬಲ್ ಆಗಿ ಕಾಣಿಸುತ್ತಿದ್ದಾನೆ.. ಆತನ ಶರತ್ತುಗಳು, ಆತನ ಉದ್ದೇಶ ಎಲ್ಲಾ ನೋಡಿದರೆ, ಅಂತಹವರು ಸಾವಿರಾರು ಮಂದಿ ಬೇಕು ಜಗತ್ತಿಗೆ ಅನಿಸುತ್ತದೆ. ಗಾಂಧಿ ಇಲ್ಲದಿದ್ದರೂ ಅವರ ತತ್್ವಗಳನ್ನು ಪ್ರಚಾರ ಮಾಡುವವರಾದರೂ ಬೇಕು, ಇಲ್ಲದಿದ್ದರೆ ಮಹಾನ್ ಚೇತನವನ್ನು ಮರೆತೇ ಬಿಡುತ್ತೇವೆ.
@ ಗಿರಿ -
ನನಗಂತೂ ಹಾಗನಿಸಿದೆ, ಅದು ಸುಳ್ಳು ಖುಷಿ ಅಂತಲೇ ಅನಿಸಿದೆ. ನಿಜವಾದ ಖುಷಿ ಅಂದರೇನಂತ ಮರೆಯುವ ಕಾಲದಲ್ಲಿದ್ದೇವೆ ನಾವು.
@ ವನಿತಾ -
ಥ್ಯಾಂಕ್ಸ್ ಮಾರಾಯ್ತಿ, ಎಲ್ಲಿ ಸುದ್ದಿಯೇ ಇಲ್ಲೆ ನಿನ್ನದು?
@ ಮಲ್ಲಿಕಾರ್ಜುನ್ ಸರ್ -@ ಸುನಾಥ್ ಕಾಕಾ -
ಲಾಭವಿಲ್ಲದೆ ಮಲ್ಯ ಮುಟ್ಟುತ್ತಾನಾ ಗಾಂಧೀಜಿಯನ್ನು? ಈ ಟರ್ಮ್ ಮುಗಿದ ಕೂಡಲೇ ಕರ್ನಾಟಕಕ್ಕೆ ಟಾಟಾ ಹೇಳಿ ಕಾಶ್ಮೀರದಲ್ಲಿ ರಾಜ್ಯಸಭಾ ಚುನಾವಣೆಗೆ ನಿಲ್ಲುತ್ತಾರಂತೆ ಮಲ್ಯ. ಆಗೆಲ್ಲ ಮಾನ ಉಳಿಯಬೇಕಲ್ಲ? :-) ನೀವು ಇಲ್ಲಿ ಭೇಟಿ ನೀಡಿದ್ದು ಖುಷಿಯಾಯ್ತು... ಹೀಗೇ ಬರ್ತಿರಿ...

Www.rpk said...

The article is wonderful to remain ourGandhiji