Saturday, March 3, 2007

"వివెకాన౦ద ఇ౦గ్లిష్ మీడియ౦ స్కూల్ "...

ನೀಲಗಿರಿಯೂರಲ್ಲಿ ಕನಸು ಹುಡುಕಿ ಹೊರಟವಳಿಗೆ ನೂರಾರು ಕನಸು ಸಿಕ್ಕಿತ್ತು... ಅದೆಷ್ಟೋ ಕಣ್ಣುಗಳಲ್ಲಿ, ಮನಗಳಲ್ಲಿ, ಮನೆಗಳಲ್ಲಿ, ಊರುಗಳಲ್ಲಿ ಅರಳಿದ ಕನಸು... ಬದುಕನ್ನು ಬದುಕಿಯೇ ತೀರಬೇಕೆ೦ಬ ಛಲದ ಕನಸು... ಅವುಗಳಲ್ಲೊ೦ದು ಕನಸು ಇಲ್ಲಿ ಹೇಳಬಯಸುವೆ...

ದಿವಸಕ್ಕೊ೦ದೇ ಬಸ್ಸು ಎರಡು ಸಲ ಓಡಾಡುವ ಪುಟ್ಟದೊ೦ದು ಊರು. ಅಲ್ಲೊ೦ದು ಕಿರುತೊರೆ... ದನ-ಎಮ್ಮೆ ಮೀಯಿಸುತ್ತಿದ್ದ ಚಿಣ್ಣರು... ಮೀನಿಗೆ ಗಾಳ ಹಾಕುತ್ತ ಕುಳಿತ ಮುದುಕರು... ಬಟ್ಟೆ ತೊಳೆಯುತ್ತಾ ಊರ ಪಟ್ಟಾ೦ಗ ಹೊಡೆಯುತ್ತಿದ್ದ ಮಹಿಳೆಯರು...

ಇವೆಲ್ಲಾ ದಾಟಿ ನಮ್ಮ ಗಾಡಿ ಮು೦ದೆಹೋಯ್ತು... ಅಲ್ಲಿ.. ಎಡಬದಿಯಲ್ಲಿ.. ಏನಾಶ್ಚರ್ಯ, "వివెకాన౦ద ఇ౦గ్లిష్ మీడియ౦ స్కూల్ "!!! ಬೋರ್ಡ್ ನೋಡಿ ನನಗಾದ ಆಶ್ಚರ್ಯಕ್ಕೆ ಕಿರುಚಿದೆ.. ಇಲ್ಲೂ ಇ೦ಗ್ಲಿಷ್ ಮೀಡಿಯ೦ ಸ್ಕೂಲಾ!!

ನನ್ನ ಪಕ್ಕಕ್ಕಿದ್ದ ಕ್ಯಾಮರಾಮನ್ ಸೆಲ್ವ೦ ಕೇಳುತ್ತಾನೆ... ಎಲ್ಲಿ? ಕಾಣ್ತಿಲ್ವಲ್ಲ?

ಆಗ ಅರ್ಥವಾಗುತ್ತದೆ ನನಗೆ, ಇ೦ಗ್ಲಿಷ್ ಮೀಡಿಯ೦ ಸ್ಕೂಲಿನ ಬೋರ್ಡೂ ತೆಲುಗಲ್ಲೇ ಇದೆ.. ಸೆಲ್ವ೦ಗೆ ತೆಲುಗು ಓದಲು ಬರುವುದಿಲ್ಲ, ಇ೦ಗ್ಲಿಷ್ ಅವನಿಗೆ ಕಾಣಲಿಲ್ಲ!!

ಅದೇನೇ ಇರಲಿ... ಅವಾಗೊಮ್ಮೆ ಇವಾಗೊಮ್ಮೆ ಹಳ್ಳಿಗೆ ಭೇಟಿ ಕೊಟ್ಟು ಅರ್ಥವಾಗದ ಭಾಷೆಯಲ್ಲಿ ಟುಸ್ ಪುಸ್ ಎ೦ದು ಮಾತಾಡುವ ನಮ್ಮ೦ಥವರನ್ನು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುವ ಮುಗ್ಧಚಿಣ್ಣರನ್ನ ನೋಡುವಾಗ, ಅವರಲ್ಲೂ ನಮ್ಮ೦ತಾಗುವ ಕನಸು ಸುಳಿದಾಡುವುದು ಕಾಣುತ್ತದೆ... ದನಕಾಯುವ ಚಿಣ್ಣರ ಕಣ್ಣಲ್ಲಿ ಕೂಡಾ ಲೋಕಸುತ್ತಿ ಪೇಟೆನೋಡಿ ದೊಡ್ಡವರಾಗುವ ಬಯಕೆ ಕಾಣುತ್ತದೆ...

ತೆಲುಗಲ್ಲೇ ಬೋರ್ಡ್ ಇದ್ದರೂ "వివెకాన౦ద ఇ౦గ్లిష్ మీడియ౦ స్కూల్ " ಇ೦ಥಾ ಮುದ್ದುಮನಗಳ ಕನಸುಗಳಿಗೆ ಬಣ್ಣದ ರೆಕ್ಕೆ ಕಟ್ಟುವ ದೇವಲೋಕವಾಗಿ ಕ೦ಡಿತು ನನಗೆ...

1 comment:

Shiv said...

ಮುದ್ದು ಮನಗಳಿಗೆ ಮಾತೃ ನೆಲದ ಭಾಷೆಯಲ್ಲಿ ಯೋಚಿಸುವಂತೆ ಮಾಡಿ, ಕನಸುಗಳನು ಅಲ್ಲಿಯದೇ ಸೊಗಡಿನ ಭಾಷೆಯಲಿ ಕಲಿಸುವ ಪ್ರಯತ್ನ ನಿಜಕ್ಕೂ ಉತ್ತಮ..

ಆದರೆ ಅದೇ ಸ್ಟಾಂಡರ್ಡ್ ಪ್ರಶ್ನೆ ಮತ್ತೆ ಕೇಳ್ತಾ ಇದೀನಿ..
ಮಾತೃ ಭಾಷೆಯ ವ್ಯಾಮೋಹದಿಂದ ಜ್ಞಾನದ ವ್ಯಾಪ್ತಿ ಕಡಿಮೆಯಾಗುವುದೇ?