ಮಳೆ ಹನೀತಾ ಇದೆ ಹೊರಗಡೆ, ಮನಸು ಕೂಡಾ ಯಾಕೋ ಒದ್ದೆಯಾಗಿದೆ...!!
......................................................
ಅ೦ದೂ ಹೀಗೇ ಇತ್ತು...
ಬಿರುನೆಲದ ಸುಡುಬಯಲ ತು೦ಬಾ
ಮಳೆಹಾತೆ ಹಾರಿತ್ತು... ಸೂರ್ಯ ಕಪ್ಪಿಟ್ಟಿತ್ತು...
ಕ್ಷಣಗಳಲ್ಲಿ ಬಾನು ಬಾಯ್ಬಿರಿದಿತ್ತು...
ನಿನ್ನ ಪ್ರೀತಿಯ ಹಾಗೆ
ತೊಟ್ಟಿಕ್ಕುತ್ತಿದ್ದ ಮಳೆಹನಿ
ನಿನ್ನ ಕಣ್ಣೀರಿನ ಹಾಗೇ ಭೋರ್ಗರೆಯ ತೊಡಗಿತ್ತು...
ಭೂಮಿ-ಆಕಾಶ ಒ೦ದಾಗಿತ್ತು
ನಿನ್ನ ಅಳುವಿಗೆ, ಬಿಕ್ಕುವಿಕೆಗೆ
ನನ್ನ ಮೌನ, ಮಿಸುಕಾಟ,
ಕಣ್ಣಿ೦ದ ಹೊರಬಾರಲೊಲ್ಲದ ಹನಿ
ಸ೦ಗಾತಿಯಾಗಿತ್ತು
ನಾ ಬೊಗಸೆಯೊಡ್ಡಿ ಹಿಡಿದ
ನಾಲ್ಕೇ ನಾಲ್ಕು ಪ್ರೀತಿ ಹನಿಗಳ
ನಿನ್ನ ಬೊಗಸೆಗೆ ಚೆಲ್ಲುವ ನನ್ನ ಆಶೆಗೆ
ಹೃದಯದ ಭಾರ ತಡೆಯಾಗಿತ್ತು
ತೂಕ ತಪ್ಪಿ ಕಣ್ಣ೦ಚಿನಿ೦ದ ಜಾರಿದ ಕ೦ಬನಿಗೆ
ರಾಚುತ್ತಿದ್ದ ಮಳೆಹನಿಯೇ
ಮತ್ತೆ ಸ೦ಗಾತಿಯಾಗಿತ್ತು...
ಸಾಂತ್ವನ ಹೇಳಿತ್ತು...
ನಿನ್ನ ಕಣ್ಣೀರಿನಿಂದಲೋ
ಸುರಿಯುತ್ತಿದ್ದ ಮಳೆಯಿಂದಲೋ
ನನ್ನೊಳಗೆ ಸುರಿಯುತ್ತಿದ್ದ ಮಳೆಯಿಂದಲೋ
ಮನಸೆಲ್ಲ ಒದ್ದೆಯಾಗಿತ್ತು...
....................................................
ಮಿಡಿಯುತ್ತಿದ್ದ ವೇದನೆಗಳಿಗೆ
ಪ್ರೀತಿಮಳೆ ತ೦ಪು ಚೆಲ್ಲಿ
ಕೊಚ್ಚೆ ಕೆಸರು ಕಳೆದು ಹೋಗಿ
ತಿಳಿನೀರು ಉಳಿದಿತ್ತು...
ಅರಿವಿನ ಕಡಲು ಸಣ್ಣಗೆ ಹುಟ್ಟಿತ್ತು...
ಸುಡುನೆಲದಲ್ಲಿ ಸುರಿದ ಜಡಿಮಳೆ ನಸುನಗುತ್ತಿತ್ತು...
9 comments:
Very nice a poem. ಪ್ರೀತಿ 'ವಿದಾಯದ ಒಂದು ಕ್ಷಣ'ದ ಪ್ರತಿ ಸಾಲಿನಲ್ಲೂ ಭಾವುಕ ಮುದ್ರೆ ಒತ್ತಿದೆ.
ಹೌದು ಮಳೆ ಹೀಗೆ ಕಾಡುತ್ತದೆ. ಬಿಸಿಲೂ ಚಳಿ ಯಲ್ಲಿ ನೆನಪುಗಳು ಕಾಡುವುದಿಲ್ಲ. ಆದರೆ ಮಳೆ ಹೇಗೆ ಕಾಡುತ್ತದೆ.ಹಳೆಯ ನೆನಪುಗಳು ಮನೆಯ, ಮನದ ಹೊಸ್ತಿಲಲ್ಲಿ ನಿಂತಿರುತ್ತದೆ. ಬೇಡವೆಂದರೂ ನೋವಿನ ಹಾಡು ಎದೆಯ ಮೇಲೆ ಬರೆ ಎಳೆಯುತ್ತದೆ. ಹಾಗಂತ ಖುಷಿ ಇಲ್ಲವೇ ಖಂಡಿತಾ ಇದೆ.............
ವಿದಾಯದ ಒಂದು ಕ್ಷಣ ಚೆನ್ನಾಗಿದೆ. ಓದ್ತಾ ಇದ್ದಂತೆ ನಾನೂ ಏನೋ ಕಳೆದು ಕೊಳ್ಳಲಿದ್ದೇನೋ ಎಂಬ ಸಂಶಯ ಬಂತು. ಮಳೆಯೊಂದಿಗೆ ಚೆನ್ನಾಗಿ ಹೆಣೆದಿದ್ದೀರಿ ನಿಮ್ಮ ಕವಿತೆಯನ್ನು. ಹೀಗೆ ಮುಂದರಿಯಲಿ ಬರಹ....
ನಿಮ್ಮ ಬ್ಲಾಗ್ ತುಂಬ ದೊಡ್ಡದಾಗ್ತಾ ಇದೆ. I mean, font size-ನಲ್ಲಿ:-))
ಶ್ರೀ,
ಎಲ್ಲಾ ವಿದಾಯಗಳು ಹೀಗೆ ಅಲ್ವಾ..
ಕೆಲವೊಂದು ವಿದಾಯಗಳಲ್ಲಿ ಮತ್ತೆ ಸಿಗ್ತೀವಿ ಅನ್ನೋ ನಂಬುಗೆ ಇರುತ್ತೆ..ಇನ್ನು ಕೆಲವು ವಿದಾಯಗಳಲ್ಲಿ ಇದು ಕೊನೆ ವಿದಾಯ ಅಂತಾ ಗೊತ್ತಿರುತ್ತೆ..ಯಾವುದೇ ಇರಲಿ..ವಿದಾಯದ ಕ್ಷಣ ಇದೇಯಲ್ವಾ ಅದು ಮಾತ್ರ ಹೃದಯವನ್ನು ನೀರಾಗಿಸಿಬಿಡುತ್ತೆ..
ತುಂಬಾ ಹೃದಯಸ್ಪರ್ಶಿ ಕವನ..
ಕೊನೆ ಎರಡು ಸಾಲು ತುಂಬಾ ಇಷ್ಟವಾಯ್ತು
ಶ್ರೀ,
ತುಂಬಾ ಚೆನ್ನಾಗಿದೆ.
ಸುಶ್ರುತ, ರಾಧಾ, ಮಹೇಶ್, ಶಿವ್, ಯಜ್ಞೇಶ್ - ಎಲ್ಲರಿಗೂ ಧನ್ಯವಾದ, ನಾಲ್ಕುವರ್ಷ ಹಳೆಯ ಬರಹ, ಈ ಸಾರಿ ಮಳೆಗಾಲ ಸ್ವಾಗತಕ್ಕೆ ನಂದೂ ಒಂದು ಕೊಡುಗೆ ಇರಲಿ ಅಂತ ಹಾಕಿದೆ.
ಭಾಗವತ, ನಂಗೂ ಇದೊಂದು ಸಮಸ್ಯೆ.. ಕೆಲವ್ರು ಹೇಳ್ತಾರೆ font size ಜಾಸ್ತಿ ಮಾಡಿ ಅಂತ, ಇನ್ನು ಕೆಲವ್ರು ಬಣ್ಣ ಬದಲಾಯಿಸಿ ಅಂತ ಕೇಳ್ತಾರೆ. ಅದ್ಕೆನೆ layout ಬದಲಾಯಿಸಿದೆ. ನನ್ನ ಕಂಪ್ಯೂಟರ್ ನಲ್ಲಿ ಮಾತ್ರ ಅದೇನು ಮಾಡಿದ್ರೂ ಸರಿಯಾಗಿರ್ತದೆ.. !!
ಕವನ ಚೆನ್ನಾಗಿದೆ. ಇಷ್ಟವಾಯ್ತು. ಈ ಕವನ ಓದುತ್ತ ಆರಂಭದ ಸಾಲಿನಿಂದ ಒಳ ಹೋದವನು ಅಂತಿಮ ಸಾಲಿನಿಂದ ಹೂರ ಬಂದೆ...
ಮುಂದುವರೆಸು......
ಮಳೆ ಬಗ್ಗೆ ಕವನ ...ಚೆನ್ನಾಗಿದೆ
ಮಳೆ ಅಂದ್ರೆ ಬಹುಶಃ ಎಲ್ಲಾರಿಗೂ ತುಂಬಾ ಇಷ್ಟ ಅನ್ಸುತ್ತೆ :)
Post a Comment