Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

12 comments:

ಸಿಂಧು Sindhu said...

ಶ್ರೀ..

ನಂಗೆ ತುಂಬ ಮುಜುಗರ ಅವರ ಸಂತಸದ ದಿನಗಳಲ್ಲಿ ಅವರನ್ನ ವಿಶ್ ಮಾಡೊಕ್ಕೆ ಮತ್ತು ನಾನು ತುಂಬ ಪ್ರೀತಿಸುವ ಅವರಿಗೆ ಐ ಲವ್ ಯೂ ಅಂತ ಹೇಳೊಕ್ಕೆ. ಅವರ ಜನ್ಮದಿನಕ್ಕೆ, ಆನಿವರ್ಸರಿಗೆ - ದೂರವಿದ್ದರೆ ಫೋನ್ ಮಾಡ್ತೀನಿ - ಏನೋ ಕುಶಲೋಪರಿ ಕೇಳಿ, (ಆನಿವರ್ಸರಿ ಆಗಿದ್ರೆ) ಶಿರವಂತೆ ದೇವಸ್ಥಾನಕ್ಕೆ ಹೋಗಿದ್ರಾ ಅಂತ ಕೇಳಿ ಸುಮ್ಮನಾಗುತ್ತೇನೆ. ಅವರಿಗೆ ಗೊತ್ತು ನನಗೇನನ್ನಿಸಿತು ಅಂತ, ನನಗೇನು ಹೇಳಬೇಕಿತ್ತು ಅಂತ.

ಕೆರೆಯ ನೀರನು ಕೆರೆಗೆ ಚೆಲ್ಲುವುದು - ತುಂಬ ಕಷ್ಟದ ಕೆಲಸ.. :)

ಇಷ್ಟೊಳ್ಳೆಯ ಭಾವಲಹರಿಗಾಗಿ ತುಂಬ ಧನ್ಯವಾದಗಳು.ನಿಮ್ಮ ಅಪ್ಪನನ್ನು ನಾನು ಕೇಳ್ದೆ ಅಂತ ಹೇಳಿ. ಅವರಿಗೆ ಗೊತ್ತು ನನಗೇನು ಹೇಳಬೇಕಿತ್ತು ಅಂತ.

ಪ್ರೀತಿಯಿರಲಿ.

SHREE said...

ಹೌದು ಸಿಂಧು, ಯಾವಾಗಲೂ ಬಾಯಿ ನೇರವಾಗಿ ಮಾತಾಡಬೇಕಿಲ್ಲ, ಸಂವಹನಕ್ಕೆ ಬೇರೆ ಬೇರೆ ರೀತಿಗಳಿರ್ತವೆ... Wavelengths match ಆದಾಗ ಮಾತ್ರ ಯಾವ ಮಾತಿಗೆ ಏನರ್ಥ ಅಂತ ತಿಳೀತಾ ಹೋಗತ್ತೆ..
ಧನ್ಯವಾದ, ಅಪ್ಪ ನಂಗೆ ಈ ವಾರಾಂತ್ಯಕ್ಕೆ ಫೋನ್ ನಲ್ಲಿ ಸಿಗ್ತಾರೆ, ಅವಾಗ ಹೇಳ್ತೀನಿ... :-)

Govinda said...

Obviously idu "KETTTTA KUTHUHALA"ve.
Hetthavara birthday marudina hego nenapu maadkondu call maadidaru "KELAVARIGE" wish maaduvudake saadhyavaaguvudilla.
Gotthaa..??
:-)

Aniketana said...

Shree,
Its one of those moments where we can express in words , how much we care for our beloved parents.
On 26th even I called up my 'Amma'to wish her on her B'day. Her presence was with me for the whole day ..
Happy posting ...!

VENU VINOD said...

ನಾನೆಂದೂ ಹೆತ್ತವರಿಗೆ ಶುಭಾಶಯ ಹೇಳ್ಲೇ ಇಲ್ಲ. ಅದು ತಪ್ಪೋ ಸರಿಯೋ ಅನ್ನೋದೂ ಚರ್ಚೆಯ ವಿಷಯ ಇರಬಹುದೇನೋ. ನಾನು ಆತ್ಮೀಯರಿಗೆ ಥ್ಯಾಂಕ್ಸ್ ಹೇಳೋ ವಿಷಯದಲ್ಲೂ ಗೊಂದಲ ಅನುಭವಿಸುವುದಿದೆ.
ಏನೇ ಆಗಲಿ ಆಸಕ್ತಿದಾಯಕ ವಿಚಾರ ಬರೆದಿದ್ದೀರ.

ಸುಶ್ರುತ ದೊಡ್ಡೇರಿ said...

ಶ್ರೀ,

ಹೇಳಬೇಕಾದ್ದನ್ನು ತುಂಬಾ ಭಾವನಾತ್ಮಕವಾಗಿ ಹೇಳಿದೀರಿ. ಊರಲ್ಲಿದ್ದಾಗ ನಾನು ಏನೂ ಹೇಳ್ತಿರ್ಲಿಲ್ಲ. ಆದ್ರೆ ಊರು ಬಿಟ್ಟು ಬೆಂಗ್ಳೂರಿಗೆ ಬಂದ್ನಲ್ಲ, ಆಮೇಲೆ fathers day, mothers day ಗೆ ಫೋನ್ ಮಾಡಿ ವಿಶ್ ಮಾಡೋದಕ್ಕೆ ಶುರು ಮಾಡಿದೆ. ಒಂದ್ಸಲ ಮದರ್ಸ್ ಡೇ ದಿನಾನೇ ಊರಿಗೆ ಹೋಗಿದ್ದೆ. ಆಗ ಅಮ್ಮಂಗಾಗಿ ಒಂದು 'Mothers Love' ಅನ್ನೋ ಟೈಟ್ಲ್ ಇರೋ ಪೋಸ್ಟರ್ (ತಾಯಿ ಮಗೂನ ಎತ್ಕೋಂಡಿರೋ ಬ್ಲಾಕ್ & ವ್ಹೈಟ್ ಫೋಟೋ), ತಗೊಂಡು ಹೋಗಿದ್ದೆ. 'Happy Mothers Day Amma' ಅಂತಂದು ಕೊಟ್ಟಿದಿದ್ದೆ... Amma became so emotional u know...?

ಇವತ್ತಿಗೂ 'ನಿನ್ನ ಜೀವನದ ಅತ್ಯಂತ ಸಂತಸದ ದಿನ ಯಾವ್ದು?' ಅಂತ ಯಾರಾದ್ರೂ ಕೇಳಿದ್ರೆ ನಾನು 'ಅದು ನನ್ನ ಮೊದಲ ಸ್ಯಾಲರಿಯಲ್ಲಿ ಅಮ್ಮನಿಗಾಗಿ ಒಂದು ಸೀರೆ ಕೊಂಡುಹೋಗಿ ಕೊಟ್ಟ ದಿನ' ಅಂತಾನೇ ಹೇಳೋದು... ಆ ಸಾರ್ಥಕತೆಯ ಮುಂದೆ ಮತ್ತಿನ್ನೇನೂ ಅಲ್ಲ ಅನ್ನಿಸಿಬಿಟ್ಟಿದೆ ನಂಗೆ...

ಥ್ಯಾಂಕ್ಸ್ ಏನೆಲ್ಲಾ ನೆನಪು ಮಾಡ್ಸಿದ್ದಕ್ಕೆ...

ಶ್ರೀನಿಧಿ.ಡಿ.ಎಸ್ said...

ಶ್ರೀ,

ಶ್ರೀ,
ಬೆಳ್ಳಂಬೆಳಗ್ಗೆ ಮನದುಂಬಿತು. ಮೊನ್ನೆ ಅಷ್ಟೇ ಅಪ್ಪ ಅಮ್ಮ ಮದುವೆಯಾಗಿ ೨೫ ವರ್ಷ ಆಯಿತು. ಅಪ್ಪ ಮೈಸೂರಲ್ಲಿ paper valuation ಮಾಡುತ್ತಿದ್ದರೆ ಅಮ್ಮ ಮನೆಯಲ್ಲಿದ್ದರು. ಫೋನ್ ಮಾಡಿ ಮಾತಾಡಿದೆ , ವಿಶ್ ಮಾಡಿದೆ.. ಹೆಚ್ಚುಕಡಿಮೆ ಇದೇ ತೆರನಾದ್ದು ಬರೆಯಬೇಕೆಂದಿದ್ದೆ...

ನನ್ನ ಭಾವ ತಮ್ಮಲ್ಲೂ ಮೂಡಿದ್ದು ಸಂತಸ ತಂದಿತು..

SHREE said...

Hey Don - Hego nenapu maDkonDu phone maDiddakke hagagiddu :)

Anikethan - Words might fail to express, but feelings shouldn't fail.. thatz the basic idea.. thanx :)

Venu - thappu-sari annodu illa idaralli, avaravara rapport yav thara ide, adara mele depend agiratte alva?

Sushrutha, Shrinidhi - nimma anubhava hanchikondiddakke dhanyavada..

Thanx everybody.. nannanthavrige company idare anta samadhaana agtide :)

Shiv said...

ಶ್ರೀ,

ನಿಮ್ಮ ಗೊಂದಲ ನನಗೂ ಇದೆ

ಕೆಲವೊಮ್ಮೆ ಜೀವಕ್ಕೆ ಅಷ್ಟು ಹತ್ತಿರವಾದವರಿಗೆ ವಿಶ್ ಮಾಡೋಕೆ ಎಕೋ ಮನಸ್ಸು ಹಿಂದೆಮುಂದೆ ನೋಡುತ್ತೆ..ಹಾಗಂತ ಅವರೆಡೆಗೆ ಇರೋ ಪ್ರೀತಿಯಾಗಲಿ ವಿಶ್ವಾಸವಾಗಲಿ ಕಡಿಮೆಯಾಗಿದೆ ಅಂತಾ ಅಲ್ಲಾ..ಅದು ಒಂದು ಹೇಳಲಾಗದ ತೊಳಲಾಟ..

ಈ ವಿಷಯದ ಬಗ್ಗೆ ನೀವು ಪ್ರಸ್ತಾಪಿಸಿದ್ದು ಚೆನ್ನಾಗಿದೆ

Seema Hegde said...

Shree....
Not only this... every post is a
gem. Keep the same vigour.
All the best.

SHREE said...

ಹೇಳಲಾರದ ತೊಳಲಾಟಗಳನ್ನ ನನಗೆ ಬೇಕಾದ ಹಾಗೆ ಹೇಳ್ಕೊಳ್ಳಕ್ಕೆ ಅಂತನೇ ಇನ್ನೊಂದು ಬ್ಲಾಗ್ ಶುರು ಮಾಡಿದೆ ಶಿವ್!! ನೋಡಿ, ಓದೋ ಥರ ಇದ್ರೆ ಓದಿ, ಅಭಿಪ್ರಾಯ ತಿಳಿಸಿ.. :)
ಸೀಮಾ.. ಧನ್ಯವಾದ, ಪ್ರೋತ್ಸಾಹಕ್ಕೆ..

http://www.architectsbangalore.com said...

architects as architecural Read more about Green eco architectural designs are reusable materials, green designs etc.. ..… Create an Eco friendly Green design… Save Earth.. interior designers Bangalore as of natural materials interior designers in Bangalore with almost modern concepts architects bangalore