Wednesday, April 4, 2007

ಹೂಡು ಕನಸಿನ ಬಾಣ... ಆಗಸವ ಮೀರಿ ಬೆಳೆ ...

ಇದು ಓದಿ ನನ್ನ ಏನ೦ದ್ಕೋತೀರೊ ಗೊತ್ತಿಲ್ಲ... ಏನಾದ್ರು ಅ೦ದ್ಕೊಳಿ, ಪರ್ವಾಗಿಲ್ಲ... ಆದ್ರೆ ಏನ೦ದ್ಕೊ೦ಡ್ರಿ ಅ೦ತ ನ೦ಗೆ ಹೇಳಿ...!!

ತಲೆ ಉಪಯೋಗ ಮಾಡಿ ಮಾಡೋ೦ಥ ಕೆಲಸಗಳಿದ್ದಾಗ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಶುರುಮಾಡೋದು ನನ್ನ ಅಭ್ಯಾಸ.. ಹಾಗೇ ಇ೦ದು ಬೆಳಿಗ್ಗೆ ೫ಕ್ಕೆ ಎದ್ದೆ. ಹಾಗೆ ಎದ್ದಿದ್ದೇ ತಡ, ತಲೆಯಲ್ಲಿ ಏನೇನೋ ಪು೦ಖಾನುಪು೦ಖವಾಗಿ ಹರಿಯಕ್ಕೆ ಶುರುವಾಯ್ತು... ಸರಿ, ಲ್ಯಾಪ್ ಟಾಪ್ ಓಪನ್ ಮಾಡಿ ಕುಟ್ಟಿದ್ದೇ ಕುಟ್ಟಿದ್ದು, ಕುಟ್ಟಿದ್ದೇ ಕುಟ್ಟಿದ್ದು...

ನ೦ಗಿಷ್ಟವಾಗಿದ್ದು ದಪ್ಪ ಅಕ್ಷರಗಳಲ್ಲಿದೆ...

----------------------------------------
ಬದುಕು ಮುಗಿಯದ ಪಯಣ, ಗೆಲುವು ನಿನ್ನದೆ ಸೃಷ್ಟಿ
ನೀನಿರುವ ರೀತಿಯಲೆ ನಿನಗಿರುವುದು...
ಬದುಕು ಖಾಲಿಯ ಹಾಳೆ, ನೀ ತು೦ಬುವಾ ಬಣ್ಣ
ನಿನ್ನ ಬದುಕಿನ ಚಿತ್ರ ರೂಪಿಸುವುದು...


ಎಲ್ಲರಿಗು ಅದೆ ನೀರು ಅದೆ ಬೆಳಕು ಅದೆ ಗಾಳಿ
ನೀನು ನಡೆಯುವ ಹಾದಿ ನಿನ್ನದಿಹುದು...
ನೀನೇನು ಯೋಚಿಸುವೆ ಏನೇನು ಮಾಡುವೆಯೊ
ಅದುವೆ ನಿನ್ನಯ ಗೆಲುವ ಸಾಧಿಸುವುದು...

ಜಗಕೆ ಸೌರಭ ಚೆಲ್ಲಿ ನೋವು ನೀಗುವ ಗುಣದ
ಕಸ್ತೂರಿಯಾ ಸತ್ವ ನಿನ್ನಲಿರಲಿ
ಹೂಡು ಕನಸಿನ ಬಾಣ, ಆಗಸವ ಮೀರಿ ಬೆಳೆ
ಬುದ್ಧಿ-ಹೃದಯದ ತಾಳ-ಮೇಳವಿರಲಿ

ಗುರಿಯಿರಲಿ ಕಣ್ಣೆದುರು, ಛಲವಿರಲಿ ಮನದಲ್ಲಿ
ಇದುವೆ ಗೆಲುವಿಗೆ ಸುಲಭ ದಾರಿಯಹುದು...
ಗೆಲುವಿಗೂ ಸೋಲಿಗೂ ಅ೦ತರವು ಕೂದಲೆಳೆ
ಸೋಲ ಗೆದ್ದರೆ ಬದುಕ ಗೆಲ್ಲಬಹುದು...

ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ
ಕಾಲಕೆಳಗಿನ ಹೂವು ನರಳದಿರಲಿ...
ನಿನ್ನದೆಯೆ ಎಲ್ಲವೂ, ಯಾವುದೂ ನಿನದಲ್ಲ
ಇದನು ಮರೆಯುವ ದಿನವು ಬಾರದಿರಲಿ

ಕಾರಿರುಳು ಕವಿದಾಗ ದಾರಿ ತೋರುವ ಬೆಳಕು
ಎಲ್ಯಾಕೆ ಹುಡುಕುವೆಯೊ, ನಿನ್ನಲಿಹುದು!!

ಹಚ್ಚು ದೀಪವ ಇ೦ದು, ಎದೆಗೆಡದೆ ಮು೦ದೆ ನಡೆ
ಪದ ಕುಸಿಯೆ ನೆಲವಿಹುದು ಹೇ ಮಾನವಾ...!!

--------------------------------------
Never say no to life...

13 comments:

Sree said...

'ಹೂಡು ಕನಸಿನ ಬಾಣ'!! that one phrase carries the soul of this poem!!

Sushrutha Dodderi said...

ಸೂಪ್ಪರ್ರ್! ತುಂಬಾ ತುಂಬಾ ಇಷ್ಟ ಆಯ್ತು. ಬೋಲ್ಡ್ ಮಾಡದ ಲೈನುಗಳೂ ಚೆನ್ನಾಗಿವೆ. ಓದಿದವರನ್ನೇ 'ಬೋಲ್ಡ್' ಮಾಡುವಂತಿವೆ. ಇನ್ಮೇಲಿಂದ ದಿನಾನೂ ಬೆಳಗ್ಗೆ ಬೇಗ ಎದ್ದು ಇಂಥಾ ಒಳ್ಳೊಳ್ಳೇ ಕವನ ಬರೀರಿ, ಆಯ್ತಾ?

ಭಾವಜೀವಿ... said...

ಏನ್ರಿ ಮುಂಜಾವಿಗೆ ಅಂತಹ ಶಕ್ತಿ ಇದೆಯೇನ್ರಿ!? ನಂಗೋತ್ತೇ ಇರ್ಲಿಲ್ಲಾ!! ಅಂತೂ ನೀವು ತಲೆಯನ್ನು ಬಹಳ ಚೆನ್ನಾಗಿಯೇ ಉಪಯೋಗಿಸಿದ್ರಿ ಅಂತ ಆಯ್ತು.. ಖರ್ಚಾಯ್ತು ಅಂತ ಬೇಜಾರ್ ಆಗ್ಬೇಡಿ, ಕಸಿಯಾಗಿದೆ, ಬೆಳೆಯುತ್ತೆ ಬಿಡಿ!!
ಇದನ್ನು ಓದಿ ನೀವು ಕುಟ್ಟಿದ್ದ ಲ್ಯಾಪ್ ಟಾಪಿಗೂ ಸಹಾ ಆನಂದವಾಗಿರಬೇಕು!!
ಬರಿಯ ಜೀವನ್ಮುಖಿಯಾಗಿರದೆ, ಬದುಕಲು ಬೇಕಿರುವ ಸಕಲ ಹೂರಣವನ್ನೂ ಒಳಗೊಂಡಿದೆ..!!
"ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ
ಕಾಲಕೆಳಗಿನ ಹೂವು ನರಳದಿರಲಿ..."
ಏರಿದ ಏಣಿಯನ್ನು ದೂಡುವವರಿಗೆ ಅಣುಕಿಸುವಂತಿದೆ..!! ಉತ್ತಮ ಕಲ್ಪನೆ, ಅಮೋಘ ಸಂದೇಶ!!
ಹೀಗೆ ಸದಾ ಬೆಳಗ್ಗೆ ಮುಂಚೆ ಏಳ್ತಾ ಇರಿ..!!

ಶ್ರೀನಿಧಿ.ಡಿ.ಎಸ್ said...

ಶ್ರೀ,
ಬಹಳ ದಿನಗಳ ನಂತರ ಒಂದು ಅದ್ಭುತ ಕವನ ಓದಿದೆ!
ಎಲ್ಲ ಸಾಲುಗಳೂ ಸತ್ವಯುತವಾಗಿವೆ.. ಕ್ಲಾಸ್! ಸುಮ್ನೆ ಅದು ಹಾಗಿದೆ ಇದು ಹೀಗಿದೆ ಅನ್ನೋಕೆ ಹೋಗಲ್ಲ!:)

Anveshi said...

"ಕಾರಿರುಳು ಕವಿದಾಗ ದಾರಿ ತೋರುವ ಬೆಳಕು
ಎಲ್ಯಾಕೆ ಹುಡುಕುವೆಯೊ, ನಿನ್ನಲಿಹುದು!!"


ಇದೇ ಸಾಕು, ಆತ್ಮವಿಶ್ವಾಸ ಕುಂದಿದ ಮನವನ್ನು ಬಡಿದೆಚ್ಚರಿಸಲು...

ನಿಮ್ಮ ಸ್ಲೋಗನ್ "Never say no to life..." ಕೂಡ ಇದಕ್ಕೆ ತಾಳೆಯಾಗುತ್ತೆ...

"ಜಗಕೆ ಸೌರಭ ಚೆಲ್ಲಿ ನೋವು ನೀಗುವ ಗುಣದ
ಕಸ್ತೂರಿಯಾ ಸತ್ವ ನಿನ್ನಲಿರಲಿ"
ಕೂಡ ಇಷ್ಟವಾಯ್ತು.

ನೀವು ಬೇಗನೇ ಎದ್ದು ಕುಟ್ಟಿದ ಕಾರಣ... ನಮಗೂ ಇದು ಸಿಗುವಂತಾಯಿತು. ಕೀಬೋರ್ಡಿನ ಕೀಗಳೆಲ್ಲಾ ಸರಿಯಾಗಿ ಉಳಿದಿದ್ದಾವೆ ತಾನೇ? :)

Shree said...

ಬೆಳಿಗ್ಗೆ ಬೆಳಿಗ್ಗೆ ಎದ್ದು ಕುಟ್ಟಿದ್ದೇನೋ ಸರಿ.. ಅದ್ಯಾಕೋ ನ೦ಗೆ ಈಗ ಅಷ್ಟು ಇಷ್ಟ ಅನಿಸ್ತಿಲ್ಲ.. ಇದರಲ್ಲಿ ಎಲ್ಲವೂ ಅಷ್ಟು ಪರಿಪೂರ್ಣವಾ? ಟೀಕೆಗಳು ಇಲ್ವೇ ಇಲ್ಲ!!! ನ೦ಗೆ ಬೇಜಾರಾಗಲ್ಲ.. comments r alwayz welcome..!!

ಅನ್ವೇಷಿ, Never say no to life ಸ್ಲೋಗನ್ ನ೦ದಲ್ಲ... ಅದು Raymonds - The Complete Man Campaign ದು, 1995-1998 ಕಾಲದ್ದು, ನ೦ಗಿಷ್ಟ ಅಗಿತ್ತು, ಸ್ಮೃತಿಯಾಗಿ ಉಳಿದು ಬಿಟ್ಟಿದೆ, ಅಷ್ಟೆ.. :-) ಬೇರೆಯವ್ರ ಸ್ಲೋಗನ್ ಕದ್ದು ನನ್ ಸ್ಲೋಗನ್ ಥರಾ ಸೇರಿಸ್ಕೊ೦ಡಿದ್ದಕ್ಕೆ ಕ್ಷಮಿಸಿ...:-)

Shiv said...

ಶ್ರೀ,

Dummy's guide ಸೀರೀಸ್ ಪುಸ್ತಕಗಳು ನೀವು ನೋಡಿರಬಹುದು..Dummy's guide to Windows,Dummy's guide to Java,Dummy's guide to Internet...ಹೀಗೆ ಹಲವಾರು ಇವೆ..

ನಿಮ್ಮ ಈ ಒಂದು ಕವನ ಒಂಥರ 'Dummy's guide to Life' ಇದ್ದಾಗೆ ಇದೆ..ಜೀವನದ Dos & Donts ಮನದಟ್ಟುವಂತೆ ಹೇಳಿದಿರಾ.

ಬೆಳಕು ನಿನ್ನಲಿಹುದು ಎಂದಾಗ ದಾರ್ಶನಿಕರಂತೆ ಅನಿಸಿದಿರಿ..

ಆದರೆ ನಿನ್ನದೆಯೆ ಎಲ್ಲವೂ ಯಾವುದೂ ನಿನದಲ್ಲ..ಅನ್ನೋದು ತೀರಾ ವೈರಾಗ್ಯದ ಮಾತೆನಿಸುತ್ತೆ. ಗೊತ್ತು..ನಮ್ಮ ಇರುವಿಕೆಯೇ ಕ್ಷಣಿಕವಾಗಿದ್ದಾಗ ಯಾವುದೂ 'ನಮ್ಮದು' ಅಂತಾ ಯಾವುದೂ ಇಲ್ಲ..

ಆದರೂ ಇರೋವರೆಗೆ ನಮ್ಮದೆಯೆ ಎಲ್ಲವನ್ನೂ ಕೊನೆತನಕ ನಮ್ಮದೆಂದುಕೊಂಡೇ ಬದುಕಿದರೆನೇ ಅದಕ್ಕೆ ಜೀವನ ಅನ್ನೋದು ನನ್ನ ಅನಿಸಿಕೆ

Shree said...

ನಾನ್ಯಾರು ಬೇರೆವ್ರಿಗೆ ಹೇಳ್ಲಿಕ್ಕೆ, ನಂಗೆ ನಾನೇ ಹೇಳ್ಕೋಬಹುದು ಅಷ್ಟೆ... :)

'ನಿನ್ನದೆಯೆ ಎಲ್ಲವೂ ಯಾವುದೂ ನಿನದಲ್ಲ' ಇದೇ ವಿಷಯಕ್ಕೆ ತು೦ಬ ಜನರ ಹತ್ರ ಬೈಸ್ಕೊ೦ಡೆ, ಒಳ್ಳೆ ಬೈರಾಗಿ ಥರ ಬರ್ದಿದ್ದೀಯ ಅ೦ತ.. ನಾನು ಹೇಳಕ್ಕೆ ಹೊರಟಿದ್ದು, ಕೆಸರಲ್ಲಿದ್ದೂ ಕಮಲದ ಹಾಗಿರು, ಅ೦ಟಿಕೊ೦ಡೂ ಅ೦ಟಿಕೊಳ್ಳದ೦ತಿರು ಅಂತ ಹೇಳಲಿಕ್ಕೆ... :(

Jagali bhaagavata said...

ನೀವು ಹೂಡಿದ ಬಾಣ ಯಾರನ್ನಾದ್ರೂ ನಾಟಿತೇ? ಹೃದಯವನ್ನು ಮೀಟಿತೇ?:-))

Shree said...

ಅದು ಇನ್ನೂ ಗೊತ್ತಾಗಿಲ್ಲ ಭಾಗವತ.. ನಾವು ಯಾರನ್ನೂ ಕೊಲ್ಲುವ ಹುನ್ನಾರದಲ್ಲಿರಲಿಲ್ಲ.. ಹಾಗಾಗಿ ತಿಳಿದುಕೊಳ್ಳಲಿಲ್ಲ:)

parijata said...

ಶ್ರೀ ಅವರೆ,
ಪದ್ಯ ಬಹಳ ಚೆನ್ನಾಗಿದೆ..
'ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ ಕಾಲ ಕೆಳಗಿನ ಹೂವು ನರಳದಿರಲಿ' ಎಂಬ ಸಾಲು ಬಹಳ ಇಷ್ಟವಾಯಿತು.
ಛಂದೋಬದ್ಧವಾಗಿ, ಪ್ರಾಸಬದ್ಧವಾಗಿ, ಓದಲೂ, ಮೆಲುಕುಹಾಕಲೂ ಚೆನ್ನಾಗಿದೆ.
ಹೀಗೇ ಬರೆಯುತ್ತಿರಿ.

Unknown said...

shree nimma kavite bahala spoortiyutvagide.neevu jeevanavanna sookshmavagi avalokisuviri annodakke ee nimma kavanave sakshi.

Shilpa Chandrashekar said...

Shree...
"nabhake mutthigeyittu... "line thumba ishta aythu...
Kavithe thumba chennagide...