Friday, June 18, 2021

ಮಿಡಿಯಲು ನನ್ಸಲಿ ಹೃದಯವೇ ಇಲ್ಲ

ಕಾಯುವರಿಲ್ಲದೆ ಬಾಡಿದ ಹೆಣಗಳು
ದಿನವಿಡಿ ಧಗಧಗ ಉರಿಯುವ ಚಿತೆಗಳು
ಮನೆಗಳು ಮನಗಳು ಭಣಭಣಭಣಭಣ
ಕಿಟಿಕೆಯ ಆಚೆಗೆ ಗದ್ದಲ ಗದ್ದಲ
ಆಡುವ ಮಾತಿಗೆ ಕಾಣದು ಅಳತೆ
ಕೇಳುವ ಕಿವಿಗಳಿಗಿಲ್ಲಿದೆ ಕೊರತೆ
ಇಂದ ಬವಣೆಯಲಿ ತಳ್ಳಿದ ಮೇಲೆ
ನಾಳೆಯ ಬಸಿರಲಿ ಅಡಗಿಹ ಚಿಂತೆ
ಎದೆಯಿದು ಒರಟು, ಬುದ್ಧಿಯು ಬರಡು
ಕಾಯುವುದಾರಿಗೆ ಈಗಲೆ ಹೊರಡು
ಕತ್ತಲ ದಾರಿ, ಕಹಿ ಸಾಮಾನ್ಯ
ಪಾಡಿನ ಜಾಡಲಿ ಭಾವವು ಶೂನ್ಯ
ಬೆಳಗಿನ ಜಾವದ ಕನಸಿನ ತೆರದಲಿ
ಎಂದೋ ಮರೆತಿಹ ಹಾಡಿನಂದದಲಿ
ಮನವನು ಮೀಟುವ ನಿನ್ನಯ ಒಲವಿಗೆ
ಮಿಡಿಯಲು ನನ್ಸಲಿ ಹೃದಯವೇ ಇಲ್ಲ

Friday, February 28, 2020

ನೀನಿಲ್ಲದ ಹಾದಿ

ನೆನಪಿನ ದಳಗಳ ಬಣ್ಣ ನೀಲಿ. ನೀ ಬಿಟ್ಟ ನಿಟ್ಟುಸಿರಿನ ರಭಸಕ್ಕೆ ಹಾರಿ ಹೋದ ನೆನಪಿನ ಪಕಳೆಗಳಿಗೇನು ಗೊತ್ತು ಅವು ಉಳಿಸಿ ಹೋದ ಕಣ್ಣಂಚಿನ ಹನಿಗಳ ರುಚಿ.
ಕಣ್ಣ ಹನಿಗಳ ರುಚಿಯೇನೋ ಉಪ್ಪು. ನಿನ್ನ ಬಿಸಿ ಮುತ್ತು ತಾಗಿ ಮುಚ್ಚಿಯೇ ಸುಖಿಸಿದ ರೆಪ್ಪೆಗಳಿಗೇನು ಗೊತ್ತು ಅದರಿಂದ ಕಣ್ಣೀರೂ ಸಿಹಿಯಾಯಿತೆಂದು... 
ನೋವೊಂದು ಬೆಚ್ಚಗಿನ ಚಾದರವಿದ್ದಂತೆ. ನಿನ್ನ ಕನಸಿನ ಬಿಸಿ ಅಪ್ಪುಗೆಯೊಳಗೆ ಸಿಕ್ಕಿ ನಲುಗಿದ ಎದೆಯೊಳಗೆ ನೀನುಳಿಸಿ ಹೋದ ನೋವಿಗೇನು ಗೊತ್ತು, ಅದರ ವಾಸನೆ ಹಿತವಾಗಿದೆಯೆಂದು.
******
ನನ್ನ ಜೊತೆ ನೀ ನಡೆದ ಹಾದಿಯ ತಿರುಗಿ ನೋಡುವ ಯೋಚನೆಯೇ ನನ್ನೆದೆ ಬಡಿತದ ಹದ ತಪ್ಪಿಸುತ್ತದೆ... ನೀಲಿ ನೀಲಿಯ ಸಿಹಿಯಾದ ಹಿತವಾದ ನೆನಪುಗಳು ನೋವುಗಳು ಕಣ್ಣೀರುಗಳು ನಮ್ಮನ್ನ ತಡೆಯದಿರೆಂದು ಗೋಗರೆಯುತ್ತವೆ, ಮತ್ತು ಹರಳುಹರಳಾಗಿ ಉಳಿಯುತ್ತವೆ.

Saturday, February 1, 2020

ಕಡಲು ಮತ್ತೆ ರೆಕ್ಕೆ ಮುರಿದ ಹಕ್ಕಿ

ನೀ ಕೊಟ್ಟ ನೋವೆಲ್ಲ 
ಮನದ ಚಿಪ್ಪೊಳಗೆ ಕೂಡಿಟ್ಟು 
ಸ್ವಾತಿಯ ಮಳೆಗಾಗಿ ಕಾದೆ 
ಮಳೆ ಬೀಳಲಿಲ್ಲ, 
ಮುತ್ತು ಅರಳಲಿಲ್ಲ
*******
ಅಂದು ಹೊರಗೆ ಹುಣ್ಣಿಮೆ
ಒಳಗೂ ಹುಣ್ಣಿಮೆ
ನೋಡುತ್ತ ಮೈಮರೆತಿದ್ದೆವು
ಕಡಲ ಅಲೆಗಳ ನಾಟ್ಯ
ನನ್ನೊಳಗಿನ ಕಡಲಲ್ಲೂ
ಅಲೆಗಳ ಭೋರ್ಗರೆತ
ನಿನ್ನ ಮುಟ್ಟುವ ತವಕದ ಹೊರಳಾಟ
ಆದರೆ
ನನ್ನೆದೆಗೆ ನೀ ಕಿವಿಯಿಡಲಿಲ್ಲ
ಹಾಗಾಗಿ ನಿನಗದು ತಿಳಿಯಲೇ ಇಲ್ಲ
*******
You sat empty
And I remained dry
And the evening passed
With no high tides
And no high in heart
Where did love vanish?
******
ನೀ ಜತೆಗಿದ್ದರೆ ನನಗೆ
ನೀ ಏನೂ ಕುಡಿಸಬೇಕಿಲ್ಲ ಗೆಳೆಯ
ಯಾಕೆಂದರೆ
ನನಗೆ ನೀನೇ ಒಂದು
ಇಳಿಸಲಾಗದ ಅಮಲು
******
ಆದಿನ ನನ್ನ-ನಿನ್ನ ನಡುವೆ
ನಿಚ್ಚಳವಾಗಿತ್ತು ಗೋಡೆ
ಅದ ಹತ್ತಿ ಹಾರಿ
ನಿನ್ನಾಳಕ್ಕಿಳಿಯುವ ತವಕ
ಆದರೆ ಗೋಡೆ ದೊಡ್ಡದೇ ಇತ್ತು
ನನ್ನ ಎತ್ತರಕ್ಕೆ ನಿಲುಕದ್ದಾಗಿತ್ತು
ಕಷ್ಟಪಟ್ಟು ಹಾರಿದರೆ
ನಾ ಬೀಳಲೂಬಹುದು
ಆಗ ನನ್ನ ಎತ್ತುತ್ತಿದ್ದೆಯಾ ನೀನು
ಇಲ್ಲ ಕಾಲುಮುರಿದು ಬಿದ್ದವಳ
ಹಾಗೇ ಇರು ಅಂತ
ಬಿಟ್ಟು ಹೋಗುತ್ತಿದ್ದೆಯಾ
ತಿಳಿದಿರಲಿಲ್ಲ...
ಅದಕ್ಕೇ ಗೋಡೆ ದಾಟಿರಲಿಲ್ಲ ಗೆಳೆಯ.
ಇಂದು ಹೀಗೆ ಅಚಾನಕ್ ಗೋಡೆ ದಾಟಿ
ಕಾಲು ಮುರಿದು ರೆಕ್ಕೆ ಮುರಿದು
ಬಿಕ್ಕುತ್ತಿರುವ ಈ ದಿವಸ...
ನೀನೆಲ್ಲಿ, ನಿನ್ನಾಳವೆಲ್ಲಿದೆಯೆಂದು
ಇನ್ನೂ ತಿಳಿದಿಲ್ಲ.
******

Wednesday, September 26, 2018

ಎಂಜಿ ರೋಡಲ್ಲಿ ಕಾಮನಬಿಲ್ಲು, ಆಷಾಢ ಮತ್ತು ಬೆಂಡೆಕಾಯಿ

Image may contain: one or more people
(ಕಾಮನಬಿಲ್ಲು, ಓನಾಮ, ಮಜಲು, ಎಂಜಿರೋಡ್)
ಎಂ ಜಿ ರೋಡಿನ ತುಂಬೆಲ್ಲ ಹೂಳಿದ
ಕರಿಕಾಂಕ್ರೀಟಿನ ಕಂಬಗಳ
ಮೈ ತಿಕ್ಕಿತೊಳೆದು
ಪೋಸ್ಟರುಗಳಿಗೆ ಓನಾಮ ಹಾಕಿ
ಹೊಸ ಬಣ್ಣ ಮೆತ್ತಿದಾಗ
ಮಜಲುಮಜಲಲ್ಲೂ ಕಾಣುವುದು
ಬರೀ ಕೆಂಪುಕಂಬಗಳಲ್ಲ,
ಕಾಮನಬಿಲ್ಲೂ ಕೂಡ.
ಕಾಣಬೇಕೆಂಬವರಿಗೆ ಕಾಣುತ್ತದೆ
ಮಳೆಯಿಲ್ಲದ ಬರಡುಬಾನಿನ
ಎಂಜಿರೋಡಿನ ಭುವಿಯಲ್ಲೂ
ಹಾಸಿ ಕಾಡುವ ಕಾಮನಬಿಲ್ಲು

===================

(ಪುನೀತ -ದರ್ಶನ- ಯಶ- ಸುದೀಪ)
ಬೆಂಗಳೂರ ಆಷಾಢವೆಂದರೆ ಹೀಗೆ...
ಯಾವಾಗಲೋ ಬರುವ ಮಳೆ,
ಹೊರಹೋದರೆ ಕೊಚ್ಚೆಕೊಳಕು,
ಒಂದಿನವೂ ಇರದಾಗದ ಟ್ರಾಫಿಕ್ ಜಾಮು
ಎಲ್ಲೆಲ್ಲೂ ಡಿಸ್ಕೌಂಟ್ ಸೇಲು..
ಮನೆಯೊಳಗೆ ಅಮ್ಮನ ಕೈಯಡುಗೆ,
ಚಳಿಜ್ವರ, ಕಷಾಯ, ಟ್ಯಾಬ್ಲೆಟ್ಟು,
ಉಪಚಾರ, ಬುದ್ಧಿಮಾತು,
ನನಗೆ ಮಾತ್ರ ನಿನ್ನದೇ ಧ್ಯಾನ
ಎಲ್ಲರೂ ಶ್ರಾವಣಕ್ಕೆ ಚಾತಕವಾದರೆ
ನಾ ಮಾತ್ರ ಇನ್ನೆಲ್ಲಿವರೆಗೆ ಕಾಯಬೇಕೋ,
ಅದ್ಯಾವಾಗಲೋ ನಿನ್ನ ದರ್ಶನ?
ಹೊದಿಕೆಯೊಳಗಿನ ಬಿಸುಪು,
ನೀತಂದ ಕನವರಿಕೆಯ ಕೋಶ,
ಅದೇನೋ ಅರಿಯದ ಆತಂಕ,
ವಿಷ್ಣು ಸಹಸ್ರನಾಮ ದಿನಾ ಕೇಳಿದರೆ
ಯಶಂ ಪ್ರಾಪ್ನೋತಿ ವಿಪುಲಂ ಅನ್ನುತ್ತಾಳೆ
ಕಂಪ್ಯೂಟರಿನೊಳಗಿಂದ ಸುಬ್ಬುಲಕ್ಷ್ಮಿ
ಅದ್ಹೇಗೆ ಅಮ್ಮ, ಅಂದರೆ ನನ್ನಮ್ಮ ಬೈಯುತ್ತಾಳೆ,
ಹೊತ್ತಾಯಿತು ಮಲಕೋ ಕೂಸೇ,
ಸಾಕು ತಲೆಹರಟೆ, ಆರಿಸು ದೀಪ.

=======
(ಗಮನ-ಗಹನ-ಗಗನ-ಬೆಂಡೆಕಾಯಿ)
ಬೆಂಡೆಕಾಯಿ ಬೆಳೆಸುವುದೆಂದರೆ ಸುಮ್ಮನೆಯಲ್ಲ
ಬೇಕದಕೆ ಬಹಳ ತಿಳುವಳಿಕೆ, ಅದು ಆಟವಲ್ಲ
ಮಣ್ಣು ಗೊಬ್ಬರ ಹಾಕಿ ಬೀಜ ಬಿತ್ತು
ಹಕ್ಕಿತಿನ್ನದಿರಲಿ, ಅದಕ್ಕೊಂದು ಕೋಟೆ ಕಟ್ಟು
ನೀರು ಹಾಕು, ಹೆಚ್ಚೂ ಬೇಡ, ಕಡಿಮೆಯೂ ಬೇಡ
ನೆರಳಿರಲಿ, ಬೆಳಕಲ್ಲಿ ಬೀಜ ಚಿಗುರೊಡೆಯುವುದು ತಡ
ಮೊಳಕೆ ಬಂದೀತು ಇನ್ನೇನು, ಗಮನವಿರಲಿ,
ಎಳೆಚಿಗುರು ತಿನ್ನಲು ಓಡಿಬರುವವು ಹೆಗ್ಗಣ, ಇಲಿ..
ಗಿಡ ಬಂತೇ, ಮನೆಯ ಚಿಳ್ಳೆಪಿಳ್ಳೆಗಳಿಗೆ ಬಲು ಖುಷಿ
ನೀರು ಹಾಕುವ ಭರಕೆ ಗಿಡದ ಬುಡವೆಂದೂ ಹಸಿಹಸಿ
ಮತ್ತೆ ಸುರಿ ಗೊಬ್ಬರ, ಇದು ಮಗುವಿಗಿಂತ ಹೆಚ್ಚು
ತಾನೆ ಬೆಳೆವ ತರಕಾರಿ ಅಂದ್ರೆ ಅದೊಂದು ಹುಚ್ಚು
ಹಂತ ಹಂತಕ್ಕೆ ಚಿತ್ರ ತೆಗೆದು ಫೇಸ್ಬುಕ್ಕಲ್ಹಾಕು
ಲೈಕು ಕಮೆಂಟು ಶೇರು ಆಹಾ ಎಂಥಾ ಶೋಕು
'ಓಹ್, ಇದ್ಯಾಕೆ ಮುರುಟಿದೆ ಎಲೆ,' ಅಂತಾರೆ ಗೆಳತಿ
'ಹಾಗ್ಮಾಡು ಹೀಗ್ಮಾಡು' ಚರ್ಚೆ ಮುಟ್ಟುತ್ತದೆ ಗಹನಗತಿ
ಅಂತೂ ಇಂತೂ ಬಂತು ಹೂವು, ಎಲ್ಲೆಲ್ಲೂ ಖುಷಿ ಖುಷಿ
ಅಗೋ ಎಳೆಕಾಯಿಯೂ ಬಂತು, ಈಗ ತಟ್ಟುತ್ತಿದೆ ಬಿಸಿ
ಪಕ್ಕದ್ಮನೆ ಆಂಟಿ ಕಣ್ಣಿಂದ ಹೇಗೆ ಕಾಪಾಡಲಿ ಇದನು?
ಹಾಕು ಪುಟ್ಟುಕೂಸಿನ ಸುಸ್ಸು, ಎಕ್ಸೆಲೆಂಟ್ ಪ್ಲಾನು :-)
ಹಾಕಿದರೆ ಸಾಕೇ, ಹೇಳು, ಇದೇ ಗೊಬ್ಬರ ನಮ್ಮನೇಲಿ..
ಆಂಟಿ ಕೇಳಬೇಕು, ಅಂದುಕೊಳ್ಳಬೇಕು, ನಂಗ್ಬೇಡ, ಅಲ್ಲೇ ಇರ್ಲಿ
ಪೇಟೆಯಲ್ಲಿ ಬೆಂಡೆಕಾಯಿ ಬೆಲೆ ಮುಟ್ಟಿದೆ ಗಗನ
ನಾ ಕಷ್ಟಪಟ್ಟು ಉಳಿಸಿದ ಬೆಂಡೆಕಾಯಿ, ಬೆಲೆಕಟ್ಟಲಾಗದ ರತ್ನ!

( :-P :-P :-P ಪಕ್ಕದ್ಮನೆ ತರಕಾರಿ ಕದಿಯೋ ಎಲ್ಲಾ ಆಂಟಿಯರ ಕ್ಷಮೆಕೋರಿ )


Saturday, June 30, 2018

ಚಹಾ ಕಾಫಿ ಮತ್ತು ಪರಮಾತ್ಮ

ಚಹಾಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ
ಕುಡಿದು ಕುಡಿದು ವಾಡಿಕೆ
ಬೆಂಗಳೂರಿನ ಹೋಟೆಲುಗಳಲ್ಲಿ ಸಿಗುವ
ಎರಡೇ ಎರಡು ಗುಟುಕು ನೊರೆಕಾಫಿ ಕುಡಿದು
ಬೆರಗಾಗುತ್ತಿದ್ದೆ, ಆಹಾ ಏನು ರುಚೀ...
ಅದೇನೋ ಮ್ಯಾಜಿಕ್, 

ಮಾಡುವ ಗುಟ್ಟು ಮಾತ್ರ ಕೈಗೆಟುಕದು
ಆಮೇಲೊಂದು ದಿನ
ಹೊಸಮನೆ, ಹೊಸಕುಟುಂಬ ಮತ್ತು ಹೊಸಜೀವನ...
ಅಡಿಗೆಮನೆಯಲ್ಲಿನ ಪುಟ್ಟ ಮಾಳಿಗೆಮನೆಯಂತ ಸ್ಟೀಲ್ ಡಬ್ಬ
ಮನೆಯಲ್ಲಿದ್ದ ನೂರು ನೆರಿಗೆಮುಖದ ಬೆನ್ನು ಬಾಗಿದ ಅಜ್ಜಿ
ಮೇಲಿನ ಮಾಳಿಗೆಗೆ ಕಾಫಿಫುಡಿ ಸುರಿದು
ಕುದಿನೀರುಹಾಕಿ ಕೆಳಮಾಳಿಗೆಯಿಂದ ಡಿಕಾಕ್ಷನ್ ಇಳಿಸಿ
ಹಾಲುಸಕ್ಕರೆ ಬೆರೆಸಿ ಕೊಟ್ಟ ಕಾಫಿ
ಕುಡಿದಾಗಲೇ ಗೊತ್ತಾಗಿದ್ದು,
ಇದೇ ನಿಜವಾದ ಕಾಫಿ ಅಂತ...
ಅದನ್ನೂ ಮಾಡಲು ಕಲಿತು
ಬೇರೆಬೇರೆ ಪುಡಿಯಲ್ಲಿ ಪ್ರಯೋಗ ಮಾಡಿ
ವಿಧವಿಧದ ಫಿಲ್ಟರುಗಳು ಹಾಕಿ
ರುಚಿರುಚಿಯಾಗಿ ಕಪ್ ಗಟ್ಟಲೆ ಮಾಡಿ ಕುಡಿಕುಡಿದು
ಎಲ್ಲಾ ನಡೆಯುತ್ತಿರುವಾಗಲೇ
ಹೆತ್ತೂರು ಬಾ ಅನ್ನುತ್ತದೆ
ಅಲ್ಲಿ ಸ್ವಾಗತಿಸುತ್ತದೆ ಅದೇ ಅಮ್ಮ ಮಾಡುವ ಕಾಫಿ
ನೀರಿಗೆ ಕಾಫಿಫುಡಿ ಹಾಕಿ ಕುದಿಸಿ ಸೋಸಿ
ಹಾಲು ಸಕ್ಕರೆ ಹಾಕಿದ ನಮ್ಮೂರಿನ ಕಾಫಿ...
ಇತ್ತೀಚೆಗೆ ನನಗೊಂದು ಸಂಶಯ
ನಾನು ಬೆಂಗಳೂರಿಗೆ ಬಂದು
ಬಾಯಿರುಚಿಗೆ ಸೋತು ಸಂಪ್ರದಾಯ ಮರೆತೆನೇ?
ನನ್ನ ಮೇಲೆ ಫಿಲ್ಟರ್ ಕಾಫಿ ಹೇರಿಕೆಯಾಯಿತೇ?
ಯಾವ ಕಾಫಿ ನಿಜವಾದ ಕಾಫಿ,
ಅಮ್ಮ ಕಲಿಸಿದ್ದೇ ಅಲ್ಲ ಬೆಂಗಳೂರು ಹುಚ್ಚುಹಿಡಿಸಿದ್ದೇ?
ರುಚಿ ಕಮ್ಮಿಯಿದ್ದರೂ ಹುಟ್ಟು ಸಂಪ್ರದಾಯ ಉಳಿಸಲೇ
ಅಥವಾ ಇದು ಬೆಂಗಳೂರು -

ಇಲ್ಲಿ ನಾನು ಬೆಂಗಳೂರಿಗಳಾಗಿರುತ್ತೇನೆಂದುಕೊಳ್ಳಲೇ?
**************
ಪರಮಾತ್ಮ

ನೀವೂ ಬಸಿದುಕೊಳ್ಳುತ್ತೀರಿ
ನಾನೂ ಬಸಿದುಕೊಳ್ಳುತ್ತೇನೆ
ಇಷ್ಟೇ ನನ್ನ-ನಿಮ್ಮ ಹೋಲಿಕೆ
ಉಳಿದಿದ್ದು ಪಕ್ವವಾಗುವಿಕೆಯ ಕಥೆ
ನೀವು ಬೆಂಕಿಯಲ್ಲಿ ಕಾಯುವವರು
ನಾನು ಕಾಯುವುದು ಕಾಲಕ್ಕೆ
ನಿಮಗೋಸ್ಕರ ಕಷ್ಟ ಪಟ್ಟು ಕಾಯುವವರು
ನನಗಾಗಿ ಕಾಯುತ್ತಾರೆ ಇಷ್ಟಪಟ್ಟು
ಯಾಕಂದರೆ ಕಾಯುವಿಕೆಯೊಂದು ಧ್ಯಾನ
ಕಾದಷ್ಟು ಖುಷಿ ಕೊಡುತ್ತಾನೆ ಪರಮಾತ್ಮ
ನೀವಿಳಿದ ಗಂಟಲೇನೋ ಬೆಚ್ಚಬೆಚ್ಚಗೆ, ನಿಜ
ಆದರೆ ನಾನಿಳಿದಾಗ ಬೆಚ್ಚಗಾಗುವುದು ಆತ್ಮ
ನೀವು 'ಫಿಲ್ಟರ್' ರುಚಿಕೊಟ್ಟು ಸೊಕ್ಕಿಸಿದ
ನಾಲಿಗೆಯ ಫಿಲ್ಟರ್ ನಾ ಕಳಚುತ್ತೇನೆ,
ಹೃದಯದ ಕೀಲಿ ತೆರೆಯುತ್ತೇನೆ
ನೀವು ಸುಖದ, ಸಂತೋಷದ ಸಂಕೇತ,
ನಾನು ದುಃಖದ ಸಂಗಾತಿ, ಕಣ್ಣೀರಿನ ಗೆಳತಿ
ಯಾವಾಗಲೂ ಎಷ್ಟೆಂದು ಎಚ್ಚರಿರುತ್ತಾರೆ ಜನ
ಅವರಿಗೂ ಬೇಕು ಆಗಾಗ ಹೆಜ್ಜೆತಪ್ಪುವ ಸ್ವಾತಂತ್ರ್ಯ
ವಾಸನೆಗೆ ಮರುಳಾಗುವ, ಬೀಳುವ ಅವಕಾಶ
ಕಾವು ಕಳೆದು ಎಲ್ಲ ಮರೆತು
ತಣ್ಣಗೆ ಮಲಗುವ ಪರಮಸುಖ...
ನಾನೆಂದರೆ ಚಹಾ-ಕಾಫಿ-ಹಾಲುಗಳಲ್ಲಿ ಸಿಗದ
ಅತ್ಯಗತ್ಯದ ಜಾರುವ ಅನುಕೂಲ

===
30 June 2017ರಂದು ಅಚಾನಕ್ ಫೇಸ್ಬುಕ್ಕಿನಲ್ಲಿ ಚಹಾಕಾಫಿ ಕವಿತೆಗಳ ಸುರಿಮಳೆಯಾಗಲಾರಂಭಿಸಿತು. ಅವಾಗ ಬರೆದಿದ್ದು.


Friday, October 20, 2017

ಯಾರಿಗೆಷ್ಟು ಬೇಕೋ ಅಷ್ಟು ಬೆಳಕು, ಕತ್ತಲು ದಕ್ಕಲಿ....



ಕತ್ತಲು ಮತ್ತು ಬೆಳಕಿನ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಒಂದಿಲ್ಲದೆ ಇನ್ನೊಂದಿಲ್ಲ, ಒಂದಿಲ್ಲದೆ ಇನ್ನೊಂದಕ್ಕೆ ಬೆಲೆಯೂ ಇಲ್ಲ. ನಾಣ್ಯವೊಂದರ ಎರಡು ಮುಖಗಳಂತೆ ಇವು. ಎರಡೂ ಇದ್ದರೇ ಜೀವನ ಪೂರ್ಣ. ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಲು ಬೆಳಕಿನ ಸಾಂಗತ್ಯ ಬೇಕು. ನಂತರದ ವಿಶ್ರಾಂತಿಗೆ ಕತ್ತಲಿನ ಮಡಿಲೇ ಬೇಕು.
ನಿಶೆ ಕನಸು ಹೊತ್ತು ತರುವವಳು, ಭರವಸೆಯ ಬೀಜ ಮನದಲ್ಲಿ ಬಿತ್ತುವವಳು. ಆದರೆ, ಉಷೆಯ ಸಹಕಾರವಿಲ್ಲವಾದಲ್ಲಿ ಇವು ನನಸಾಗುವುದು ಸಾಧ್ಯವೇ? ಉಷೆ ಪ್ರೋತ್ಸಾಹಿಸುವ ಕಾರ್ಯಶೀಲತೆ, ಚಟುವಟಿಕೆಗಳ ಮೂಲಕವೇ ಕನಸುಗಳಿಗೆ ರೆಕ್ಕೆ ಮೂಡಿ ಜೀವತಳೆಯಬೇಕು.. ಹಾಗೇ ಕನಸಿಲ್ಲದ, ಕತ್ತಲೆಯ ನೆಮ್ಮದಿಯಿಂದ ವಂಚಿತವಾದ ಜೀವನವೂ ಒಂದು ಜೀವನವೇ? ಸದಾ ಬೆಳಕು ತುಂಬಿದ ಕೋಣೆಯಲ್ಲಿ ನೆಮ್ಮದಿಯ ನಿದ್ದೆ ಸಾಧ್ಯವೇ?
ಬೆಳಕು-ಕತ್ತಲೆ - ಇವೆರಡರಲ್ಲಿ ಒಂದು ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುವ 'ತಮಸೋಮಾ ಜ್ಯೋತಿರ್ಗಮಯ' ಎಂಬ ಘೋಷಣೆ, ಹುಲುಮಾನವರು ಅತಿ ಬುದ್ಧಿವಂತಿಕೆಯಿಂದ ಮಾಡಿದ ರಾಜಕಾರಣ—ಅಷ್ಟೇ.
******************
ಕಾರ್ಗತ್ತಲ ಹಾದಿ... ಮನೆ ದೂರ, ಕನಿಕರಿಸಿ ನನ್ನ ಕೈಹಿಡಿದು ನಡೆಸು ಬೆಳಕೇ, ಬಾ ಎಂದು ಕೇಳಿದ ಕವಿಗೆ ಈ ರಾಜಕಾರಣದ ಅರಿವಿದ್ದಿರಲಾರದು. ಇದ್ದಿದ್ದರೆ, ಹಾದಿ ತಪ್ಪಿದಾಗ ಕತ್ತಲ ದಾರಿಗೆ ಬೇಕಾದ ಕೈದೀಪ ಮನದೊಳಗೇ ಇದೆ ಎಂಬುದರ ಅರಿವೂ ಆತನಿಗೆ ಆಗಿರುತ್ತಿತ್ತು. ಎಲ್ಲೋ ಇರುವ ಬೆಳಕಿಗೆ ಹಾತೊರೆಯುವ ಬದಲು ಒಳಗಿನ ಬೆಳಕನ್ನು ಆತ ಕಂಡುಕೊಳ್ಳುತ್ತಿದ್ದನೇನೋ...
******************
ಕೆಲವು ವಿಧದ ಬೆಳಕುಗಳು ಅಪಾಯಕಾರಿಯೂ ಹೌದು... ಮಡಿಲಲ್ಲಿರುವ ನಿಗಿನಿಗಿ ಸುಡುವ ಕೆಂಡ ಬೆಳಕೇನೋ ನಿಜ. ಆದರೆ ಅದಕ್ಕೆ ಹಾಕಬೇಕಿರುವುದು ನೀರು, ಇದ್ದಲು ಅಥವಾ ಸೌದೆಯಲ್ಲ. ಸೌದೆ ಹಾಕಿದಲ್ಲಿ ಅದು ಮಡಿಲು ಸುಡುವುದು ಖಚಿತ. ಸುಡುವ ಸತ್ಯಕ್ಕೆ ನೀರು ಹಾಕುವವರು ಬೆಳಕನ್ನು ನಂದಿಸಿದರು, ಸತ್ಯವನ್ನು ಅಡಗಿಸಿದರು ಎಂಬ ಇನ್ನೊಂದು ರೀತಿಯ ಅಪವಾದಕ್ಕೂ ಒಳಗಾಗಬೇಕಾಗುತ್ತದೆ.
ಕುಶಾಲಿಗೆಂದು ಹಚ್ಚುವ ಬಣ್ಣಬಣ್ಣದ ಬಿರುಸುಮತಾಪುಗಳೂ ಅಷ್ಟೆ. ಬಣ್ಣ ಬರಬೇಕೆಂದು ಅದಕ್ಕೆ ಹಾಕುವ ವಿಧವಿಧದ ಪದಾರ್ಥಗಳಿಂದ ಹಾನಿಕಾರಕವಾಗಿ ಬದಲಾಗುತ್ತವೆ. ತಮಾಷೆ ನೋಡುವ ಭರದಲ್ಲಿ ಮಗು ಹಚ್ಚುವ ಬೆಳಕಿನ ಪುಂಜ ಹಾದಿಯಲ್ಲಿ ಹೋಗುವವರ ಕಣ್ಣು ತೆಗೆದರೂ ತೆಗೆದೀತು, ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದರೂ ಹಚ್ಚೀತು.
******************
ಈ ಬೆಳಕಿನ ಹುಚ್ಚು ಇನ್ನೂ ಹಲವು ಬಗೆ ಅನಾಹುತಗಳಿಗೆ ಕಾರಣವಾಗುತ್ತದೆ. ಅರ್ಧ ಜಗತ್ತಿಗೆ ಕತ್ತಲೆ ಯಾವಾಗಲೂ ಇರುತ್ತದೆ. ಇನ್ನರ್ಧಕ್ಕೆ ಬೆಳಕು. ಆದರೆ ಕತ್ತಲಲ್ಲಿರುವವರೂ ಕೃತಕ ಬೆಳಕು ಸೃಷ್ಟಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ನಿಜ ತಾನೇ. ಬೆಳಕಿನ ಶ್ರೇಷ್ಠತೆ ಬರುವುದು ಇದರಿಂದಲೇ. ಬೆಳಕಿನ ಬೆಲೆ ವ್ಯಾವಹಾರಿಕವಾಗಿ ಜಾಸ್ತಿ. ಬೆಳಕು ಕತ್ತಲೆಯನ್ನು ಮೀರಿ ನಮ್ಮನ್ನು ಮುನ್ನಡೆಸುವ ಸಾಧನ, ಮತ್ತು ಇದರ ಅವಶ್ಯಕತೆ ಎಲ್ಲರಿಗೂ ಇದೆ. ಬೆಳಕಿಲ್ಲದೇ ಬದುಕು, ವ್ಯವಹಾರ ಯಾವುದೂ ಇಲ್ಲ. ಅದಕ್ಕೇ ತಮಸೋಮಾ ಜ್ಯೋತಿರ್ಗಮಯ ಅಂದರು. ತಪ್ಪಲ್ಲ, ಆದರೆ ಅದು ಬೆಳಕಿಗೆ ಅಗತ್ಯಕ್ಕಿಂತ ಹೆಚ್ಚಿನ ತೂಕ ಕೊಟ್ಟು, ಕತ್ತಲೆ ಕೆಟ್ಟದೆಂಬಂತೆ ತೋರಿಸುತ್ತದೆಯಲ್ಲವೇ? ಅದೇ ಸಮಸ್ಯೆ.
 
******************
ಎಲ್ಲೋ ಇರುವ ಬೆಳಕಿಗೆ ಹಾತೊರೆಯುವುದರಿಂದ ಏನು ತೊಂದರೆ? ಒಂದು ವಸ್ತು ಯಾವುದೋ ರೀತಿಯಲ್ಲಿ ಅಗತ್ಯ ಎನ್ನುವ ಅರಿವು, ಆ ವಸ್ತುವಿನ ಬೆಲೆಯನ್ನು ಹೆಚ್ಚಿಸುತ್ತದೆ. ಮತ್ತು ನಕಲಿ ವ್ಯವಹಾರಗಳಿಗೆ ಎಡೆಮಾಡಿಕೊಡುತ್ತದೆ. ಕಲಬೆರಕೆಗಳು ಹೆಚ್ಚುತ್ತವೆ.
ಬೆಳಕಿನ ವಿಚಾರದಲ್ಲೂ ಅಷ್ಟೇ. ಕತ್ತಲಿಗೂ ಬೆಳಕಿನ ವೇಷ ತೊಡಿಸಿ ಮಾರುವವರು ಹುಟ್ಟಿಕೊಳ್ಳುತ್ತಾರೆ. ಅಂಗೈಯ ಕಿಟಿಕಿಯಲ್ಲಿ ವಿಶ್ವ ನೋಡಬಹುದಾದಷ್ಟು ಬೆಳಕಿರುವ ಈ ಕಾಲಘಟ್ಟದಲ್ಲಿಯೂ ಕಿಟಿಕಿಯಲ್ಲಿ ಕೋಣೆ ತೋರಿಸಿ ಅದನ್ನೇ ವಿಶ್ವವೆಂದು ಮಾರಾಟ ಮಾಡುವವರು ಕಡಿಮೆಯಿಲ್ಲ. ಕತ್ತಲೆಯನ್ನು ಬೆಳಕನ್ನಾಗಿಸಿ, ಬೆಳಕನ್ನು ಕತ್ತಲೆಯಾಗಿಸಿ ಆಟವಾಡುವವರ ಸಂಖ್ಯೆ ಬಲುಜಾಸ್ತಿ. ಅರೆಗತ್ತಲೆಯಲ್ಲಿ ಅಥವಾ ಬಣ್ಣದ ಬೆಳಕಲ್ಲಿ ಏನು ಮಾಡಿದರೂ ಚಂದ—ಹಾಲಿಗೆ ಹುಳಿ ಹಿಂಡಬಹುದು, ಮನಸ್ಸುಗಳನ್ನು ಒಡೆಯಬಹುದು, ವಿಷಬೀಜ ಬಿತ್ತಬಹುದು. ತಮ್ಮೊಳಗಿನ ಬೆಳಕನ್ನು ನಂಬದ, ತಮ್ಮ ತಿಳುವಳಿಕೆಯಲ್ಲಿ ನಂಬಿಕೆಯಿಲ್ಲದ ಜನವನ್ನು ಹೇಗೆ ಬೇಕಾದರೂ ಆಟವಾಡಿಸಬಹುದು.
******************
ನಮ್ಮೊಳಗಿನ ತಿಳಿವಿನ ಬೆಳಕು ಎಷ್ಟು ಕಡಿಮೆಯೋ, ಬಾಹ್ಯದಲ್ಲಿ ಕಾಣುವ ಬೆಳಕು ನಮಗೆ ಅಷ್ಟೇ ಭೀಕರವೆನಿಸುತ್ತದೆ. ಬೆಳಕಿನ ಸಹವಾಸವೇ ಬೇಡವೆನಿಸಿ ಬೆಳಕಿಗೊಂದು ನಮಸ್ಕಾರ ಹಾಕಿ ಕತ್ತಲಲ್ಲೇ ಇರುತ್ತೇವೆ ಎಂಬ ಜನಕ್ಕೇನೂ ಕಡಿಮೆಯಿಲ್ಲ. ಬೆಳಕಿನ ಕುರಿತು ವ್ಯಂಗ್ಯವಾಡುವವರಿಗೂ ಕಡಿಮೆಯಿಲ್ಲ.
ಆದರೆ ಇಷ್ಟು ಮಾತ್ರ ನಿಜ. ಕತ್ತಲೆ-ಬೆಳಕು ಎರಡೂ ಜೀವನಕ್ಕೆ ಅವಶ್ಯಕ. ಯಾರೋ ಹೊಗಳಿದರೆಂದು ಬೆಳಕು ಹಿಗ್ಗುವುದಿಲ್ಲ, ಇನ್ಯಾರೋ ತೆಗಳಿದರೆಂದು ಕತ್ತಲೆ ಕುಗ್ಗುವುದಿಲ್ಲ. ಕತ್ತಲೆಯ ಕೆಲಸವೇ ಬೇರೆ. ಬೆಳಕಿನ ಕೆಲಸವೇ ಬೇರೆ. ಕತ್ತಲಿನಲ್ಲಿ ಬೆಳೆಯುವ ಹೂವು ಅರಳಲು ಸೂರ್ಯಕಿರಣಗಳು ತಾಗಲೇಬೇಕು. ಹಗಲಿನ ಬೆಳಕಲ್ಲಿ ಆಹಾರ ಸಂಪಾದಿಸುವ ಗಿಡ-ಮರಗಳು ಇರುಳಾದಾಗ ಬೆಳೆಯುತ್ತವೆ. ಹಗಲಲ್ಲಾದ ಗಾಯಗಳು ಮಾಯಲು ಇರುಳಿನ ಮಡಿಲೇ ಬೇಕು.
******************
ಹಾಗಂತ ಹಗಲು ನಿದ್ರಿಸುವ, ಇರುಳಲ್ಲೇ ತಮ್ಮ ಕೆಲಸ ಕಾರ್ಯಗಳು ಮಾಡುವವರು ಇಲ್ಲವೆಂದಲ್ಲ. ಸಂಜೆ ಮಲ್ಲಿಗೆ ಅರಳಲು ಮುಳುಗುವ ಸೂರ್ಯನ ಬಿಸಿಲೇ ಬೀಳಬೇಕು. ರಾತ್ರಿರಾಣಿ ಅಥವಾ ಬ್ರಹ್ಮಕಮಲ ಅರಳುವುದು ಸಂಪೂರ್ಣ ಕತ್ತಲೆಯಲ್ಲೇ. ಬಾವಲಿಗಳು, ಜಿರಲೆಗಳು, ಸರೀಸೃಪಗಳು ಇರುಳಿಲ್ಲವೆಂದರೆ, ಕತ್ತಲೆಯಿಲ್ಲವೆಂದರೆ ಸ್ವಾಭಾವಿಕವಾಗಿ ಎದ್ದು ಆಚೆಗೆ ಬರಲಾರವು. ರಾತ್ರಿಯ ಬದಲು ಹಗಲು ನಿದ್ರಿಸುವವರಿಗೆ, ಕನಸು ಕಾಣುವವರಿಗೇನೂ ಕಡಿಮೆಯಿಲ್ಲ. ಇವರೆಲ್ಲರಿಗೂ ಪ್ರಕೃತಿಯಲ್ಲಿ ಅವರದೇ ಆದಂತಹ ಸ್ಥಾನವಿದೆ, ಅಲ್ಲಗಳೆಯಲಾಗದಂತಹ ಕೆಲಸಕಾರ್ಯವಿದೆ.
ಹಾಗೇ ಕಳ್ಳಕಾಕರಿಗೂ ಕತ್ತಲೆಯೆಂದರೆ ಪ್ರೀತಿ, ಬೆಳಕಿದ್ದಲ್ಲಿ ಅವರ ಕಾರ್ಯಗಳು ಕೈಗೂಡುವ ಸಾಧ್ಯತೆ ಕಡಿಮೆ. ಈ ಜಗದ ವಿನ್ಯಾಸದಲ್ಲಿ ಕಳ್ಳಕಾಕರಿಗೂ ಬೆಳಕಿನ ಹೆಸರಲ್ಲಿ ಕತ್ತಲೆ ಹಂಚುವವರಿಗೂ ಅವರದೇ ಆದ ಸ್ಥಾನವಿದೆ. ಇವರೆಲ್ಲರೂ ಜಗತ್ತು ಸಂಪೂರ್ಣವೆನಿಸಿಕೊಳ್ಳಲು ಅತ್ಯಗತ್ಯ.
******************
ಬದುಕೊಂದು ಹಾವು-ಏಣಿ ಆಟದ ಹಾಗೆ. ಕತ್ತಲಿನಲ್ಲಿ ಜಾರಿ ಬೆಳಕಿನಲ್ಲೇಳುವುದು, ಕತ್ತಲಿನಲ್ಲಿ ಏರಿ ಬೆಳಕಿನಲ್ಲಿ ಜಾರುವುದು... ಎಲ್ಲಿ ಕತ್ತಲು ಬೇಕೋ ಅಲ್ಲಿ ಬೆಳಕಿದ್ದರೆ, ಬೆಳಕು ಬೇಕಾದಲ್ಲಿ ಕತ್ತಲಿದ್ದರೆ, ಆಟ ಹದತಪ್ಪಿಬಿಡುತ್ತದೆ.
ಬೆಳಕಿನ ಹಬ್ಬವೇನೋ ಈಗ ಕೊನೆಯಾಗುತ್ತಿದೆ, ಆದರೆ ಬದುಕು ನಿರಂತರ. ಬದುಕಿನಲ್ಲಿ ಯಾರಿಗೆಷ್ಟು ಬೆಳಕು ಬೇಕೋ ಅಷ್ಟು ಬೆಳಕು ದಕ್ಕಲಿ... ಯಾರಿಗೆಷ್ಟು ಬೇಕೋ ಅಷ್ಟು ಕತ್ತಲು ದಕ್ಕಲಿ. ಆದರೆ ಕಳ್ಳಕಾಕರ ಬಗ್ಗೆ, ಹುಳಿ ಹಿಂಡುವವರ ಬಗ್ಗೆ, ವಿಷ ಹಂಚುವವರ ಬಗ್ಗೆ ಎಚ್ಚರವಿರಲಿ, ಮಡಿಲಲ್ಲಿ ಸುಡುವ ಬೆಂಕಿಯ ಬೆಳಕನ್ನು, ಬೆಳಕಿನ ವೇಷ ಧರಿಸಿ ಬರುವ ಕತ್ತಲನ್ನು ಹೇಗೆ ನಿಭಾಯಿಸಬೇಕೆಂಬ ವಿವೇಚನೆ ಹುಟ್ಟಿಕೊಳ್ಳುವಷ್ಟು ತಿಳಿವಿನ ಬೆಳಕು ಮನದಲ್ಲಿರಲಿ. ಈ ತಿಳಿವಿನ ನಂದಾದೀಪ ಕಡುಗತ್ತಲೆಯಲ್ಲೂ ಮನದಲ್ಲಿ ಬೆಳಗುತ್ತಿರಲಿ. ಶುಭಾಶಯ...

Wednesday, April 5, 2017

ಸೌಟು ಹಿಡಿಯೋ ಕೈಲಿ ಪತ್ತೇದಾರಿ ಮಾಡೋ ಪ್ರತಿಭಾ ಬಡಿದೆಬ್ಬಿಸಿದ ನೆನಪುಗಳು...

ಎಲ್ಲಾರಿಗೂ ಏನೇನೋ ಚಿಂತೆ ಫೇಸ್ಬುಕ್ಕಲ್ಲಿ. ನಂಗೆ ಮಾತ್ರ ಈ ಪ್ರತಿಭಾದು ಸೌಟಿನ ಚಿಂತೆ ಆಗ್ಬಿಟ್ಟಿದೆ.

ಈ ಸೌಟು ಹಿಡಿಯೋ ವಿಚಾರದಲ್ಲಿ ಒಂದೇ ಒಂದು ಪ್ರಾಬ್ಲೆಂ ಇದೆ, ಅದು ಸೀರಿಯಸ್ ಪ್ರಾಬ್ಲೆಂ. ನೀವು ಟೀವಿನಲ್ಲಿ ಯಾರ ಅಡಿಗೆ ಷೋ ನೋಡ್ತೀರಾ ಅಂತ ಕೇಳಿದ್ರೆ ಯಾರ ಹೆಸರು ನೆನಪಿಗೆ ಬರತ್ತೆ...? ಸಂಜೀವ್ ಕಪೂರ್? ಸಿಹಿಕಹಿ ಚಂದ್ರು? ನಮ್ಮಲ್ಲಿ ಹೆಸರುವಾಸಿಯಾಗಿರುವ ಅಡಿಗೆಯವರೆಲ್ಲರೂ ಗಂಡಸರೇ. ದೊಡ್ಡ ದೊಡ್ಡ ಕಿಚನ್ ಗಳಲ್ಲಿ, ಅಕ್ಷಯಪಾತ್ರಾದಿಂದ ಹಿಡಿದು ಧರ್ಮಸ್ಥಳ ದೇವಸ್ಥಾನದವರೆಗೆ, ರಾಯರ ಮಠದ ಮಡಿ ಅಡಿಗೆಯಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲುಗಳ ವೆಜ್ ನಾನ್ ವೆಜ್ ಚೈನೀಸ್ ಬರ್ಮೀಸ್ ವರೆಗೆ, ಅಡಿಗೆ ಮಾಡಾಕೋರು ಯಾರು? ಗಂಡಸರೇ. ದಮಯಂತಿ ಫೇಮಸ್ ಆಗಿದ್ದಳೋ ಇಲ್ವೋ ಗೊತ್ತಿಲ್ಲ, ನಳ ಮಹಾರಾಜನ ಅಡಿಗೆಯಂತೂ ಪ್ರಸಿದ್ಧವಾಗಿತ್ತು. ಇಷ್ಟೆಲ್ಲಾ ಇದ್ದೂ ಗಂಡಸರ ಅಡಿಗೆ ಸಾಮರ್ಥ್ಯದ ಮೇಲೆ ವಾಹಿನಿಗಳಿಗೆ ಅಪನಂಬಿಕೆ ಇರುವುದು ಗಂಡಸರಿಗೆ ಮಾಡ್ತಾ ಇರುವ ಅತಿದೊಡ್ಡ ಅವಮಾನ ಅಂತ ನನಗನಿಸುತ್ತದೆ.

ನಾನು ಮದುವೆಗೆ ಮುಂಚೆಯೇ ಗಂಡ ಆಗೋರ ಕೈಲಿ ನಿಮಗೆ ಅಡಿಗೆ ಬರತ್ತೆ ತಾನೇ, ನನಗೆ ಬರಲ್ಲ ಅಂತ ಹೇಳಿ, ಅಡ್ಜಸ್ಟ್ ಮಾಡ್ಕೊಳೋಣ ಬಿಡಿ ಅಂತ ಮಾತು ತೆಗೆದುಕೊಂಡ ಮೇಲೆಯೇ ಮದುವೆ ಆಗಿದ್ದು. ನನ್ನ ಗಂಡನ ಕುರಿತು ಯಾರಾದ್ರೂ ಲಟ್ಟಣಿಗೆ ಹಿಡಿಯೋ ಕೈಯಿ ಲ್ಯಾಪ್ ಟಾಪಲ್ಲಿ ಟೆಂಡರ್, ಕೊಟೇಶನ್ ಕೂಡ ಕುಟ್ಟತ್ತೆ ಅಂತೇನಾದ್ರೂ ಅಂದ್ರೆ ನಾನು ತುಂಬಾ ಹೆಮ್ಮೆ ಪಡ್ತೀನಿ, ಯಾಕಂದ್ರೆ ನಮ್ಮನೇಲಿ ನಾವು ಅಡಿಗೆ ಹಂಚಿಕೊಂಡು ಮಾಡ್ತೀವಿ.  (ನನ್ ಗಂಡ ಲಟ್ಟಣಿಗೆ ಹಿಡಿಯಲ್ಲ, ಸೌಟು ಹಿತಾರೆ, ಲಟ್ಟಣಿಗೆ ನನ್ ಡಿಪಾರ್ಟಮೆಟು. ಯಾಕಂದ್ರೆ ನಮ್ಮವ್ರು ಲಟ್ಟಣಿಗೆ ಹಿಡಿದ್ರು ಅಂದ್ರೆ ಜಿಯಾಗ್ರಫಿ ಪಾಠಗಳೇ ಬೇಡ, ಎಲ್ಲಾ ಕಾಂಟಿನೆಂಟ್ಸು ಮತ್ತು ಸ್ಟೇಟ್ಸಿದು ಮ್ಯಾಪ್ಸು ಅವ್ರೇ ಚಪಾತಿನಲ್ಲಿ ರೆಡಿ ಮಾಡ್ ಬಿಡ್ತಾರೆ. ಅದಿಕ್ಕೇ ನಾನು ಲಟ್ಟಣಿಗೆ ಹಿಡೀತೀನಿ, ಸೌಟು ಅವ್ರು ಹಿಡೀತಾರೆ. ಅವ್ರು ಮಾಡೋಥರ ಹುಳಿ ಮಾಡಕ್ಕೆ ನಂಗಿವತ್ತಿಗೂ ಬರಲ್ಲ.)

ಅಡುಗೆ ಒಂದು essential life skill, ಹಾಗಾಗಿ ನನ್ನ ಮಗುವಿಗೂ ನಾನದನ್ನ ಕಲಿಸಲೇ ಬೇಕು, ಕಲಿಸ್ತೀನಿ. ಪಾಪ ಕೆಲವು ಗಂಡಸರು ಅವರಮ್ಮಂದಿರು ನಮ್ ಥರ ಯೋಚನೆ ಮಾಡದೆ, ಹೆಚ್ಚು ತಲೆಕೆಡಿಸಿಕೊಳ್ಳದೆ ಕಾಲಕಾಲಕ್ಕೆ ಸರಿಯಾಗಿ ಮಾಡಿ ಹಾಕುತ್ತಿದ್ದ ಕಾರಣ ಅಡಿಗೆ ಕಲಿತಿರುವುದಿಲ್ಲ, ಅದು ಪಾಪ ಅವರ ತಪ್ಪಲ್ಲ.
********************
ಅದೊಂದು ಕಾಲವಿತ್ತು. ಈಟಿವಿಯಲ್ಲಿ ಕೆಲಸ ಮಾಡ್ತಿರಬೇಕಾದ್ರೆ ನಾಕು ವಾರಕ್ಕೊಂದ್ ಸಲ ರೊಟೇಶನ್ ಮೇಲೆ ನೈಟ್ ಶಿಫ್ಟ್ ಬೀಳ್ತಿತ್ತು. ನಮ್ಮದು ಡೆಸ್ಕು ಗ್ರೌಂಡ್ ಫ್ಲೋರಲ್ಲಿ, ಪ್ರೋಗ್ರಾಮ್ ಕಂಟ್ರೋಲ್ ರೂಮು 3ನೇದೋ ಅಥವಾ 4ನೇದೋ ಫ್ಲೋರಲ್ಲಿತ್ತು. ಪ್ರತಿ ಬಾರಿ ಸುದ್ದಿ ವಾಚನ ಅಗಬೇಕಾದರೂ ಅದನ್ನು ನಡೆಸಿಕೊಡುವ ಹಲವರಲ್ಲಿ ನಾನೂ ಒಬ್ಬಳಾಗಿದ್ದೆ.
ರಾತ್ರಿಪಾಳಿಯಿದ್ದಾಗ ರಾತ್ರಿ 12 ಗಂಟೆಗೆ ದಿನದ ಕೊನೆಯ ಬುಲೆಟಿನ್ ಮುಗಿಸಿ ಡೆಸ್ಕಿಗೆ ಬಂದಾ ಅಂದ್ರೆ ಮತ್ತೆ ಬೆಳಿಗ್ಗೆ 6 ಗಂಟೆಗೆ ಮೇಲೆ ಹೋದ್ರಾಯ್ತು, ಅಲ್ಲೀತನಕ ಡೆಸ್ಕಲ್ಲಿ ಕೂತಿರೋದು. ಹರಟೆ ಹೊಡೆಯೋದಕ್ಕೆ ಕಂಪೆನಿ ಇದ್ರೆ ಹರಟೆ... ಇಲ್ಲಾಂದ್ರೆ ಏನಾದ್ರೂ ಮಾಡು, ಏನೂ ಇಲ್ಲಾಂದ್ರೆ ಯಾರಾದ್ರೂ ಎಬ್ಸೋ ತನಕ ನಿದ್ದೆ ಹೊಡಿ.

ಇಂಥಾ ಬೋರಿಂಗ್ ಲೈಫಲ್ಲಿ ನನ್ನ ಪಾಲಿಗೆ ಆಶಾಕಿರಣವಾಗಿ ಬಂದಿದ್ದು ಇದೇ ಕನ್ನಡ ಧಾರಾವಾಹಿಗಳು. ಈಟೀವಿ ಕನ್ನಡದ ಆಗಿನ ಕಾಲದ ಧಾರಾವಾಹಿಗಳು. ಸೀತಾರಾಂ ಸರ್-ದು ಮುಕ್ತ ಮುಕ್ತ ಬರ್ತಾ ಇದ್ದ ಕಾಲ ಅದು. ಭೂಮಿಕಾ ಗ್ಯಾಂಗ್ ದು ಕೆಲವು ಸೀರಿಯಲ್ಲುಗಳು ಬರ್ತಾ ಇತ್ತು. ಅವಾಗೆಲ್ಲ ಕ್ಯಾಸೆಟ್ಟೇ ಇದ್ದಿದ್ದು, ಫುಲ್ ಡಿಜಿಟಲ್ ಆಗಿರಲಿಲ್ಲ. ಅನಾಲಾಗಸ್ ಎಡಿಟ್ ಸೂಟುಗಳೆಲ್ಲ ಅವಾಗಷ್ಟೇ ಚರಿತ್ರೆಯ ಪುಟಗಳಿಗೆ ಸೇರಿ ಎಡಿಟಿಂಗ್ ಮಾತ್ರ ಡಿಜಿಟಲ್ ಆಗಿ ಬದಲಾಗಿದ್ದ ಕಾಲ ಅದು.

ನಾನು (ಮತ್ತು ನೈಟ್ ಶಿಫ್ಟ್ ಮಾಡೋ ಎಲ್ಲರೂ) ಬೆಳಿಗ್ಗೆ ಡ್ಯೂಟಿ ಮುಗಿಸಿ ಮನೆಗೆ ಹೋಗಿ ತಿಂಡಿ ಮಾಡ್ಕೊಂಡು ತಿಂದು ಮಲಗಿದ್ರೆ ಏಳ್ತಾ ಇದ್ದಿದ್ದು ಮುಸ್ಸಂಜೆಗೇನೇ. ಹಾಗಾಗಿ ಸೀರಿಯಲ್ಲುಗಳೆಲ್ಲ ಮನೆಯಲ್ಲಿ ನೋಡಲಿಕ್ಕೆ ಆಗ್ತಿರಲಿಲ್ಲ. ಆದರೇನಂತೆ, ರಾತ್ರಿಯ ಕೊನೆಯ ಬುಲೆಟಿನ್ ಮುಗಿಸಿ ಕೆಳಗೆ ಬರುವಾಗ ಕಂಟ್ರೋಲ್ ರೂಮಿಂದ ಸೀರಿಯಲ್ ಕ್ಯಾಸೆಟ್ಟುಗಳು ಎತ್ಕೊಂಬರ್ತಿದ್ದೆ. ಪ್ರತಿ ದಿನದ ಪ್ರತಿ ಸೀರಿಯಲ್ಲನ್ನೂ ಒಂದು ಫ್ರೇಮೂ ಬಿಡದೆ ನೋಡಿದರೇನೇ ನಮಗೆಲ್ಲ ತೃಪ್ತಿ.

 ಮುಕ್ತ ಮುಕ್ತ ಮುಗಿದಾದ ಮೇಲೆ ನಾನು ಸೀರಿಯಲ್ಸ್ ನೋಡೋದು ಬಿಟ್ಟೇ ಬಿಟ್ಟಿದ್ದೆ, ಆಮೇಲೆ ಮುಕ್ತ ಮುಕ್ತ ಮುಕ್ತ ಶುರುವಾದಾಗ ಮತ್ತೆ ಕೆಲಕಾಲ ಅದೊಂದೇ ಸೀರಿಯಲ್ಲು ನೋಡಿದ್ದೆ. ಈಗ ಯಾವ ಸೀರಿಯಲ್ಲೂ ನೋಡುವುದಿಲ್ಲ, ಯಾಕೋ ಸೀರಿಯಲ್ಲಿನ ಚಾರ್ಮು ನನ್ನ ಪಾಲಿಗೆ ಮುಗಿದಿದೆ.

ನಾನು ಸೀರಿಯಲ್ ನೋಡಲ್ಲಾ ಅಂತ ಸೀರಿಯಲ್-ಗಳೇನೂ ಕಡಿಮೆಯಾಗಿಲ್ಲ, ಹೊಸಾಬಾಟಲಿಯಲ್ಲಿ ಹಳೇಮದ್ಯದತರ ಅದೇ ಅದೇ ಟಾಪಿಕ್ಕುಗಳು ವಿಧವಿಧದಂಗಿ ಧರಿಸಿ ಬರ್ತಾನೇ ಇವೆ... ಕ್ಯಾಮರಾವರ್ಕು, ತಾಂತ್ರಿಕತೆ ಮೊದಲಿಗಿಂತ ತುಂಬಾನೇ ಚೆನ್ನಾಗಿದೆ, ಆದರೆ ತಿರುಳು.. ಊಹೂಂ. ಹಳೇ ಸೀರಿಯಲ್ಲುಗಳೇ ಚೆನ್ನಾಗಿತ್ತು, ಇವತ್ತು ಗುಡ್ಡದ ಭೂತ, ಮುಕ್ತ, ಮನ್ವಂತರ, ಗೃಹಭಂಗದ ರೀತಿಯ ಧಾರಾವಾಹಿಗಳು ಬರುವುದು ಸಾಧ್ಯವಾ? ಮಿನಿಟು-ಟು-ಮಿನಿಟ್ ಟೀಆರ್ಪಿ ಗೊತ್ತಾಗೋ ಈಗಿನ ಕಾಲದಲ್ಲಿ ನಾಟಕಕ್ಕೆ, ಡ್ರೆಸ್ಸುಗಳಿಗೆ, ಮತ್ತು ನೀವು ಒಂದು ಕಥೆಯನ್ನು ಅದುಹೇಗೆ ಚೂಯಿಂಗ್ ಗಮ್ ಥರಾ ಎಳೆದು ಟ್ವಿಸ್ಟ್ಸು ಟರ್ನ್ಸು ಇತ್ಯಾದಿ ತರಬಲ್ಲಿರಿ ಎಂಬುದಕ್ಕೆ ಅತಿಹೆಚ್ಚಿನ ಪ್ರಾಧಾನ್ಯ, ನಿಜವಾದ ಕಥೆಗಲ್ಲ ಅಂತ ಅನಿಸ್ತಾ ಇದೆ. 17ವರ್ಷಗಳ ಹಿಂದೆ ಸೋಪ್ ಒಪೇರಾಸ್ ಮತ್ತು ಸೋಶಿಯಲ್ ಇಂಪಾಕ್ಟ್ಸ್ ಬಗ್ಗೆ ಓದಿದ್ದ ವಿಚಾರಗಳು ಇವತ್ತಿಗೆ ಬೇರೆ ಬೇರೆ ರೀತಿಯಲ್ಲಿ ಹೆಚ್ಚುಹೆಚ್ಚು ಅರ್ಥವಾಗ್ತಾ ಹೋಗ್ತಿವೆ.

ಇದೇರೀತಿ ಇನ್ನೊದು ಕಾಲವಿತ್ತು, ಮಹಿಳಾ ಕಾದಂಬರಿಕಾರರ ಕಾದಂಬರಿಗಳನ್ನು ಹುಚ್ಚು ಹಿಡಿದಂತೆ ಓದುತ್ತಿದ್ದ ಕಾಲ. ಒಂದಷ್ಟು ಕಾದಂಬರಿ ಓದಿಯಾದ ಮೇಲೆ ಇಂಥಾ ಬರಹಗಾರರ ಕಾದಂಬರಿಯಾದರೆ ಇನ್ನು ಮುಂದೇನಾಗತ್ತೆ ಅಂತ ಹೇಳುವಷ್ಟು ಪರಿಣತಳಾಗಿದ್ದೆ. ನಾವು ಕೂತ್ಕೊಂಡು ಒಂದು ಕಾದಂಬರಿಯಲ್ಲಿ ಎಷ್ಟು ತಿಂಡಿ ಹೆಸರಿದೆ ಅಂತ ಕೂಡ ಎಣಿಸ್ತಾ ಇದ್ದ ದಿನಗಳಿತ್ತು. ಆ ಕಾಲದ ಬೆಂಗಳೂರು, ಅದರ ಅಗ್ರಹಾರಗಳು, ವಠಾರಗಳು ಇತ್ಯಾದಿ ಆ ಕಾಲದಲ್ಲೇ ನಮಗೆ ಕಾದಂಬರಿಗಳ ಮೂಲಕ ಪರಿಚಿತವಾಗಿತ್ತು. Those times have passed long back. ಅದೇ ಕಾಲವನ್ನು ಬೇರೆಯ ರೀತಿಯಲ್ಲಿ ಕಳೆದಿದ್ದರೆ ಅಂತ ಒಮ್ಮೊಮ್ಮೆ ಅನಿಸುತ್ತದೆ, ಆಗ ಮಾಡಲಾಗದ ಕೆಲಸಗಳು ಈಗ ಮಾಡ್ತಾ ಇದೀನಿ, ಓದದಿದ್ದಿದ್ದು ಈಗ ಓದ್ತಾ ಇದೀನಿ.

ಹಾಂ, ಹೇಳೋದು ಮರೆತೆ. ನಮ್ಮನೆ ಪುಟ್ಟುಗೌರಿ ನಾನಿಲ್ದೇ ಇರ್ಬೇಕಾದ್ರೆ ಕೂತ್ಕೊಂಡು ಪುಟ್ಟಗೌರಿಮದುವೆ ರಿಪೀಟ್ ಎಪಿಸೋಡ್ಸ್ ನೋಡ್ತಾಳೆ, ಎಷ್ಟುದಿನ ಅಂತ ಗೊತ್ತಿಲ್ಲ. ನೋಡಲಿಬಿಡಿ, ಅವಳಾಗವಳೇ ಇವೆಲ್ಲದರ ತಿರುಳು ತಿಳ್ಕೊಳೋತನಕ. This too will pass!
++++++++

ಸೌಟು ಹಿಡಿಯೋ ಪ್ರತಿಭಾ ಪತ್ತೇದಾರಿ ಮಾಡಿದ್ದೇ ಈ ಎಲ್ಲ ನೆನಪುಗಳು ಆಚೆಗೆ ಬರಲು ಕಾರಣವಾಯ್ತು. ನಾಕುದಿನವಾದ್ರೂ ಇನ್ನೂ ಪಾಪ ಕಾಸಿನ ಸರ ಹುಡುಕ್ತಾನೇ ಇದಾಳೆ ಆಕೆ, ಅವಳಿಗೆ ಕಾಸಿನ ಸರ ಬೇಗನೇ ಸಿಗಲಿ ಅಂತ ನನ್ನದೊಂದು ಹಾರೈಕೆ. ನಮ್ಮ ಅಣ್ಣಾವ್ರು ಈಸ್ ಆಫರಿಂಗ್ ಟು ಹೆಲ್ಪ್ ವಿದ್ ಅಡಿಗೆ ಮನೆ ಟ್ರೇನಿಂಗ್ ಫಾರ್ ಹರ್ ಪೀಪಲ್ - ಟು ಹೆಲ್ಪ್ ಹರ್ ಗೆಟ್ ರಿಡ್ ಆಫ್ ದಟ್ ಬ್ಲಡಿ ಸೌಟ್ :-)

ಇದೊಂಥರಾ ನಿರಾಶಾವಾದಿ ಹೇಳಿಕೆ, ಆದ್ರೆ ಆ ಮಹಾದೇವಿಯೂ ನಾಗಿಣಿಯೂ ಮಿಕ್ಕುಳಿದ ಮೂವತ್ತಮೂರುಕೋಟಿ ದೇವತೆಗಳೂ ಎಲ್ಲಾ ಕನ್ನಡ ಮನರಂಜನಾವಾಹಿನಿಗಳ ಮುಖ್ಯಸ್ಥರಿಗೆ ಮತ್ತು ಧಾರಾವಾಹಿ ನಿರ್ದೇಶಕರುಗಳಿಗೆ ಎಲ್ಲಾ ರೀತಿಯಲ್ಲಿ ಒಳ್ಳೇ ಬುದ್ಧಿಕೊಡಲಿ ಅಂತ ಹಾರೈಸ್ತೀನಿ... 
 
ಕನ್ನಡ ಚಲನಚಿತ್ರಗಳಲ್ಲಿ ಇವತ್ತು ನಾವು ನೋಡ್ತಾ ಇರೋ ರೀತಿ ಚಿತ್ರಗಳು ಬರಬಹುದು ಅಂತ ಕನಸಲ್ಲೂ ಅಂದ್ಕೊಂಡಿರಲಿಲ್ಲ, ಆದ್ರೆ ಇವಾಗ ಬರ್ತಾ ಇದೆಯಲ್ಲ, ಹಾಗೇ ಧಾರಾವಾಹಿ ಜಗತ್ತಲ್ಲೂ ಮುಂದೊಂದು ದಿನ ನವೋದಯವಾದೀತು, ಕಾದು ನೋಡೋಣ!

Monday, August 29, 2016

ಪರಮಪಾಪಿಯ ಹಾಡುಗಳು...

ಹಳೆಯ ಹಾಳೆ ನಡುವೆ ಸಿಕ್ಕ ನವಿಲುಗರಿಯು ನೀನು
ಅದರ ಕಣ್ಣಿನೊಳಗೆ ಸಿಲುಕಿ ಚಿತ್ರವಾದೆ ನಾನು
ನಗುನಗುತಲೆ ಜಗವ ಸೆಳೆವ ಮೋಡಿಗಾರ ನೀನು
ಕಾಣದಿರುವ ಬಲೆಗೆ ಬಿದ್ದ ಮೊದ್ದುಮಿಕವು ನಾನು
ಬೇಕು ಎಂದು ಕೇಳಲಿಲ್ಲ,  ಸಿಕ್ಕ ಪಾಲು ನೀನು
ಬೇಡ ಎಂದು ಹೇಳಲಿಲ್ಲ, ತುಂಬಿಕೊಂಡೆ ನಾನು
ಸಿಕ್ಕೂ ಸಿಗದ, ಬಿಟ್ಟೂ ಬಿಡದ ಆಟಗಾರ ನೀನು
ಯೋಗವೋ ಅನುರಾಗವೋ ಅರಿಯಲಾರೆ ನಾನು
ನನಸಿನಲ್ಲೇ ಕಾಡಿಕೊಲುವ ಸಿಹಿವೇದನೆ ನೀನು
ನೆನಪಿನಲ್ಲೇ ಕಳೆದುಹೋದ ಮೋಹದಾಹಿ ನಾನು
ಬಿಟ್ಟ ಬಂಧ ಮತ್ತೆ ಬಂದು ಕಾಡಿದಾಗ ನೀನು
ಎದೆಹೂಡಿದ ಮುಷ್ಕರಕ್ಕೆ ನಲುಗಿ ಹೋದೆ ನಾನು
ರೆಪ್ಪೆಯಿಂದ ಜಾರಿ ಬಿದ್ದ ನೋವಹನಿಯು ನೀನು
ಎದೆಯ ಕೀಲಿ ಹಾಕಲೊಲ್ಲೆ, ಪರಮಪಾಪಿ ನಾನು...

(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ರೆಪ್ಪೆ- ಅನುರಾಗ-ಮುಷ್ಕರ -ಕೀಲಿ - 28 ಜುಲೈ 2016)
***********************************
ಸಂಜೆಮಲ್ಲಿಗೆಯು ಎದೆಯಲರಳಿಹುದು
ಬಿಡುವ ಚಿಟ್ಟೆ ನೀನಾ?
ಮೌನ, ಬೆಳಕು, ಹಲಬಣ್ಣ ಹರಡಿಹುದು
ನನ್ನ ಹೊಳಹು ನೀನಾ?
ಬೇಕು ಬೇಡಗಳ ಹಾವು ಏಣಿಯಲಿ
ಸೋತೆ, ತಿಳಿಯಿತೇನಾ?
ತಾರೆಗಳೂರಲಿ ಸೂರ್ಯರು ಹಲವರು
ನನ್ನ ರವಿಯು ನೀನಾ...?
ಬೆಳಕು ನೀನು ಬರಿ ಚಂದ್ರ ನಾನು
ನಿನ್ನಿಂದೆ ನಾನು ಕೇಳಾ...
ನಿನ್ನ ವೃತ್ತದಲಿ ನೀನು ಸುತ್ತುತಿರೆ
ಜಗದ ಪರಿಯು ಸರಳ...
ಅಡ್ಡರಸ್ತೆಯಲಿ ಬರಲೇಬಾರದು
ಎದೆಯಹಾದಿ ಜಟಿಲ...
ಜಾರುವ ದಾರಿಯು ನಲ್ಮೆಯ ನಾಳೆಗೆ
ಕತ್ತರಿಯದು, ತಾಳಾ...
ಒಲವ ಕೊಲ್ಲುವವು ಮಾತಿನಾಟಗಳು
ಬಾಯಿ ಬೀಗವಿರಲಿ..
ಬಾನು ನೀರು ಭುವಿಗ್ಯಾವ ಹಂಗಿಹುದು
ಮನಸಿಗ್ಯಾಕೆ ಬೇಲಿ?
ಎಲ್ಲೆ ಮೀರದೆಯೆ ಬೆಳಕು ಹರಿದಿಹುದು
ಗಾಳಿ ಹಗುರ ಹಗುರಾ..
ಇಲ್ಲಿ ನಾನಿರುವೆ ನೀನು ಅಲ್ಲೇ ಇರು
ಕಲ್ಲಾಗುವ ಬಾರಾ..
(ಚೌಚೌಪದಿಗಾಗಿ ಬರೆದಿದ್ದು. ಪದಗುಚ್ಛ: ಬಾಯಿ-ಬೀಗ-ಕತ್ತರಿ-ಅಡ್ಡರಸ್ತೆ-ಬೇಲಿ-ಹೂವು-ಚಿಟ್ಟೆ-ಹಾವು- 29 ಆಗಸ್ಟ್ 2016)

Tuesday, December 3, 2013

ನಮ್ಮನೆ ಪುಟ್ಟ ಬೆಕ್ಕು


ಅಮ್ಮಾ... ನಂಗೆ ಚೆಟರು ಬೇಡಮ್ಮಾ.... ನೀ ಯಾಕೆ ನಂಗೆ ಹಾಕ್ತೀಯಾ...
ಪುಟ್ಟವಳದು ರಾತ್ರಿರಾಗ ಶುರು... ಅಂದರೆ ನಿದ್ದೆ ಮಾಡುವ ಸಮಯ ಹತ್ತಿರವಾಗಿದೆ.
ಹೀಗವಳು  ಅತ್ತಾಗಲೆಲ್ಲಾ ಮೊದಮೊದಲು ಕೈಕಾಲು ಬೀಳುತ್ತಿತ್ತು. ಆಮೇಲೆ ನಿನ್ನ ಹಠವೆಲ್ಲಾ ಕಲಿತಿದ್ದಾಳೆ ಅಂತ ನಮ್ಮವರು ನನ್ನನ್ನು ದೂರಿದರೆ, ಅವೆಲ್ಲಾ ನಿಮ್ಮದೇ ಬಳುವಳಿ ಅಂತ ನಾನು ಅವರನ್ನು ದೂರುವುದು ಸ್ವಲ್ಪ ದಿನ ನಡೆಯಿತು. ಈಗೊಂದು ತಿಂಗಳಿಂದ ಹೊಸ ಉಪಾಯ ಕಂಡುಕೊಂಡಿದ್ದೇವೆ.
"ಪಪ್ಪಾ, ಅಳೋರೆಲ್ಲಾ ಅಳ್ತಾ ಇರ್ಲಿ, ನಾವು ನೀವು ನಾಟ್ಕ ಮಾಡೋಣ...!" ನಾ ಶುರು ಮಾಡುತ್ತೇನೆ. ಇಬ್ಬರೂ ಮಂಚದ ಮೇಲೆ ಎದುರು-ಬದುರು ಕುಳಿತಿದ್ದಾಗಿದೆ. ಅವಳಿನ್ನೂ ಬಾಗಿಲಾಚೆಗೆ ನಿಂತಿದ್ದಾಳೆ.
"ಹೌದು ಹೌದು, ಶುರು ಮಾಡೋಣ" ಅಂತಾರೆ ನಮ್ಮವರು.
ಅಳು ಇನ್ನೂ ಮುಂದುವರಿದೇ ಇದೆ.
"ನಾನು ಮಂಗ, ನೀವೂ ಮಂಗ, ಬನ್ನಿ, ಬೆಣ್ಣೆ ಕದಿಯೋಣ'' ಅಂತೀನಿ ನಾನು.
''ಸರಿ, ಕದಿಯೋಣ,  ಆದ್ರೆ ನಂಗೆ ಜಾಸ್ತಿ ಬೆಣ್ಣೆ ಬೇಕು'' ಅಂತಾರೆ ನಮ್ಮವರು.
'' ಇಲ್ಲ, ನಂಗೆನೇ ಜಾಸ್ತಿ'' ಅಂತೀನಿ ನಾನು.
''ಹಂಗಾರೆ ನಾನು ಕದಿಯಕ್ಕೇ ಬರಲ್ಲ'' ಅಂತಾರೆ ನಮ್ಮವರು.
ನಾಟಕದ ಪರಿಣಾಮ ಕಾಣಿಸಲು ಶುರುವಾಗಿದೆ,
''ಇಲ್ಲಿಲ್ಲ, ಬನ್ನಿ ಪ್ಲೀಸ್, ಇಬ್ರೂ ಕದ್ದು ಬಿಟ್ಟು ತಿನ್ನೋಣ'' ಅಂತೀನಿ ನಾನು.
ಸರಿ, ದಿಂಬಿನ ಆಚೆಗೆ ಕೈಹಾಕಿ ಪಪ್ಪಮಂಕಿ ಬೆಣ್ಣೆ ಕದಿಯಲು ಶುರುಮಾಡಿದರೆ, ಅಮ್ಮ ಮಂಕಿ ಕೈಯನ್ನು ಎತ್ತಿಹಾಕಿ ಸಪೋರ್ಟ್ ಮಾಡುತ್ತಾಳೆ.
ಮಂಚದಿಂದಾಚೆಗೆ ಬೆಕ್ಕು ಮೇಲೆ ಬರಲು ಸಿದ್ಧವಾಗುತ್ತಿರುವುದು ಕಣ್ಣಂಚಿನಲ್ಲೇ ಕಾಣಿಸಿ ಪಪ್ಪ-ಅಮ್ಮ ಮಂಕಿ ಇಬ್ಬರಿಗೂ ನಗು ಬರುತ್ತದೆ, ಆದರೆ ತೋರಿಸಿಕೊಳ್ಳುವುದಿಲ್ಲ. ನಾಟಕ ಮುಂದುವರಿಯುತ್ತದೆ.
''ಆಹಾ, ಎಷ್ಟೊಂದು ಬೆಣ್ಣೆ.... ಘಮ್ಮಂತಿದೆಯಲ್ಲಾ..'' ಪಪ್ಪ ಮಂಕಿಯ ಉದ್ಗಾರ.
ಅಮ್ಮ ಮಂಕಿ ''ಹೂಂ, ನಾನು ನಿಮ್ಗೆ ಬೆಣ್ಣೆ ಕದಿಯಕ್ಕೆ ಸಹಾಯ ಮಾಡಿದ್ದೀನಲ್ಲಾ, ನಂಗೆ ಜಾಸ್ತಿ ಬೆಣ್ಣೆ ಬೇಕು'' ಅನ್ನುತ್ತಾಳೆ.
''ಕದ್ದಿದ್ದು ನಾನು ತಾನೇ, ನನಗೇ ಜಾಸ್ತಿ,'' ಅಂತಾರೆ ಪಪ್ಪ ಮಂಕಿ. ಜಗಳ ಶುರುವಾಗುತ್ತದೆ.
ಅಷ್ಟರಲ್ಲಿ...
''ಮಿಯ್ಯಾಂವ್!''
ಪುಟ್ಟವಳು ಬೆಕ್ಕಾಗಿ ಮಂಚದ ಮೇಲೇರುತ್ತಾಳೆ, ಕಣ್ಣಂಚಿನ ಹನಿಯೆಲ್ಲಾ ಒರಸಿಕೊಂಡಿದ್ದಾಗಿದೆ, ಹಠ ಮರೆತುಹೋಗಿದೆ.
ಪಪ್ಪ ಹೇಳುತ್ತಾರೆ, ''ಬೆಕ್ಕೇ ನೀನು ನಮಗಿಬ್ರಿರಿಗೂ ಬೆಣ್ಣೆ ಹಂಚು'' ಅಂತ.
ಬೆಕ್ಕು ಬೆಣ್ಣೆ ಹಂಚುವ ಬದಲು ತಾನೇ ತಿನ್ನುವ ನಾಟಕವಾಡುತ್ತಿದ್ದರೆ, ಅಪ್ಪ- ಅಮ್ಮನ ಮನಸ್ಸು ನಿರಾಳ.
ಆಮೇಲೊಂದಿಷ್ಟು ಕಥೆ, ಹಾಗೇ ಎಲ್ಲರಿಗೂ ನಿದ್ದೆ.

Thursday, November 21, 2013

ಈರುಳ್ಳಿ ವಿಷ್ಣು, ವಿಷ್ಣು ಅಂತ ತಪಸ್ಸು ಮಾಡಿದ ಕಥೆ

ಈರುಳ್ಳಿ ಕುಯ್ದರೆ ಯಾಕೆ ಕಣ್ಣೀರು ಬರುತ್ತೆ ಅನ್ನೋದಕ್ಕೆ ಈರುಳ್ಳಿ ತಪಸ್ಸು ಮಾಡಿ ಅದನ್ನು ಕುಯ್ದವರಿಗೆಲ್ಲಾ ಕಣ್ಣೀರು ಬರುವಂತೆ ವರ ಪಡೆದ ಕಥೆ ಹೇಳಿದ್ದೆ ನಮ್ಮನೆ ಪುಟ್ಟವಳಿಗೆ. ನಾನು ಹೇಳಿದ ಕಥೆಯಲ್ಲಿ ದೇವರು ಶಿವ ಆಗಿದ್ದ, ಯಾಕೆಂದರೆ ನನಗೆ ತಪಸ್ಸು ಅಂದ ಕೊಡಲೇ ನಾ ಕೇಳಿದ ಕಥೆಯಲ್ಲೆಲ್ಲ ಇದ್ದಿದ್ದು ಓಂ ನಮ: ಶಿವಾಯ, ಅದೇ ನೆನಪಿಗೆ ಬರೋದು.

ಸ್ವಲ್ಪ ಹೊತ್ತಾದ ಮೇಲೆ ಮನೆಯ ಹೊರಗಡೆ ನನ್ನ ಕಥೆ ರಿಪ್ರೊಡಕ್ಷನ್ ಆಗ್ತಿರುವುದು ಕೇಳಿಸ್ತು, ಹಾಗೇ ಒಂದು ಕಿವಿ ಆಕಡೆಗೆ ಇಟ್ಟಿದ್ದೆ. ನಮ್ಮನೆ ಪುಟ್ಟವಳು ಅವಳ ಬೇಬಿ ಸಿಟ್ಟರು ಹುಡುಗಿ, ಎದುರುಮನೆ ಅಜ್ಜಿ, ಪಕ್ಕದ ಮನೆ ಹುಡುಗನ್ನ ಸೇರಿಸಿಕೊಂಡು ಕಥೆ ಹೇಳ್ತಿದ್ದಳು. ಅವಳ ಕಥೆಯಲ್ಲಿ ದೇವರು ಶಿವ ಹೋಗಿ ವಿಷ್ಣು ಆಗಿಬಿಟ್ಟಿತ್ತು! :-)

ಓಂ ವಿಷ್ಣವೇ ನಮ: ಅಂತ ನಾ ಹೇಳ್ಕೊಟ್ಟಿರಲಿಲ್ಲವಾದ್ದರಿಂದ ಅವಳ ಕಥೆಯಲ್ಲಿ ಈರುಳ್ಳಿ 'ವಿಷ್ಣು ವಿಷ್ಣು' ಅಂತ ತಪಸ್ಸು ಮಾಡ್ತಿತ್ತು. ಪಕ್ಕಾ ಮಾಧ್ವ ಸಂತತಿ :-) ನಮ್ಮಲ್ಲಿ ಗೌರಿ ಪೂಜೆ ಮಾಡ್ಬೇಕಾದ್ರೆ ಒಂದೊಂದ್ಸಲ ಹಿರಿಯರು ಲಕ್ಷ್ಮಿ ಹಾಡು ಹಾಡ್ತಾರೆ! ಶಿವ ಭಜನೆ ಮಾಡ್ಬೇಕಾದ್ರೆ "ಕೈಲಾಸವಾಸ ಗೌರೀಶ ಈಶ.. ತೈಲಧಾರೇಯಂತೆ ಮನಸು ಕೊಡು ಹರಿಯಲ್ಲಿ ಶಂಭೋ.." ಅಂತಾರೆ...

ಸದ್ಯ.. ಶಿವ ದೇವ್ರು narrow-minded ಆಗಿದ್ದಿದ್ದರೆ ಎಲ್ಲಾರ್ನೂ ಲಯ ಮಾಡ್ಬಿಡ್ತಾ ಇದ್ನೇನೋ!!! :-)

Friday, November 1, 2013

ಮತ್ತೆ ಕಾಡಿದ ಸತ್ಯ...

ಬಿಸಿ ಹಬೆ ಸುತ್ತ ತುಂಬಿದಾಗ
ಮಸುಕಾಗುತ್ತದೆ ಮನದ ಕನ್ನಡಿ
ಬಿಸಿ ತಣಿಸಿ ಮಸುಕು ತಿಳಿಯಾಗಿಸಬೇಕು -
ಇಲ್ಲ, ಕನ್ನಡಿ ನೋಡುವ ಹುಚ್ಚು ಬಿಡಬೇಕು...

*********

ಮಸುಕು ತಣಿಯದ ಮನಕೆ
ನೀನಾರೆಂದು ಕೇಳಿದರೆ
ಕನ್ನಡಿಗೆ ಉತ್ತರ ಹೇಳಲು ತಿಳಿದೀತೆ,
ಕಾಣುವ ಮಸುಕೇ ಸತ್ಯವಾಗುತ್ತದೆ,
ನಿಜವಾದ ಸತ್ಯ ಕಾಣುವುದು ಸುಲಭವಲ್ಲ.

***********

ಅಸಲು, ಈ 'ಸತ್ಯ' ಅಂದರೇನು?
ಅವರವರ ಭಾವಕ್ಕೆ ಅವರವರ ಬುದ್ಧಿಗೆ
ನಿಲುಕುವುದಷ್ಟೇ ಸತ್ಯ
ಉಳಿದಿದ್ದು ಮಿಥ್ಯ....
ನಾವು ನೋಡಬಯಸಿದ್ಧಷ್ಟೇ ಸತ್ಯ
ನಮಗಿಷ್ಟವಿಲ್ಲದ್ದು ಮಿಥ್ಯ....
ಸಂತೋಷ ಕೊಡುವುದು ಸತ್ಯ...
ದು:ಖ ಕೊಟ್ಟಲ್ಲಿ ಮಿಥ್ಯ...

************

ಮಿಥ್ಯವೂ ಬೇಕಲ್ಲವೇ ಜೀವನಕ್ಕೆ?
ಬದುಕು ಸಹನೀಯವಾಗಲಿಕ್ಕೆ
ಸತ್ಯದ ಸಾಂಗತ್ಯ ಬೆಂಕಿಯಿದ್ದಂತಲ್ಲವೇ?
ಬೆಂಕಿಯೊಳಗಿದ್ದೂ ಬಿಸಿಯಾಗದೆ ಬದುಕುವುದು
ಸಾಧ್ಯವಾ?

*************

ಬಿಸಿಯಾದರೆ ಮತ್ತೆ ಕನ್ನಡಿ ಮಸುಕು...
ಮತ್ತದೇ ಚಕ್ರದ ಆವರ್ತನ...!

Thursday, July 26, 2012

ಮಂಗಳಗೌರಿಯ ನೆಪದಲ್ಲಿ....

ಡಾ.ರಾಜ್ ಮತ್ತು ಊರ್ವಶಿ ಅಭಿನಯದ 'ಶ್ರಾವಣ ಬಂತು' ಸಿನಿಮಾ ನೋಡುವಾಗ ಶ್ರಾವಣವೆಂದರೆ ಯಾಕೆ ಸಂಭ್ರಮವೆಂದು ಅರ್ಥವಾಗುತ್ತಿರಲಿಲ್ಲ, ಸುರಿವ ಜಡಿಮಳೆ ಬಿಟ್ಟು ಬೇರೆ ಕಾರಣವೂ ಇರಬಹುದೆಂದು ಹೊಳೆದಿರಲಿಲ್ಲ. ಎಷ್ಟೆಂದರೂ ದಕ್ಷಿಣ ಕನ್ನಡದಲ್ಲಿ ಇರುವ ಹಬ್ಬ-ಹರಿದಿನಗಳ ಪಟ್ಟಿಯಲ್ಲಿ ಶ್ರಾವಣಕ್ಕೆ ಅಷ್ಟೊಂದು ಮಹತ್ವ ಇರುತ್ತಿರಲಿಲ್ಲ, ಅಲ್ಲಿ ಈ ತಿಂಗಳು 'ಆಟಿ' ಎಂದು ಕರೆಯಲ್ಪಡುತ್ತದೆ. ಯಾವ ಶುಭಕಾರ್ಯವನ್ನೂ ಈ ತಿಂಗಳಲ್ಲಿ ಮಾಡುವುದಿಲ್ಲ.
ಆದರೆ ಬೆಂಗಳೂರಿನ ಕಥೆಯೇ ಬೇರೆ. ಶ್ರಾವಣವೆಂದರೇನೆಂದು ಗೊತ್ತಾಗಬೇಕಾದರೆ ಬರಬೇಕು, ಮಲ್ಲೇಶ್ವರದ 8ನೇ ಕ್ರಾಸ್ ಮಾರುಕಟ್ಟೆಗೆ. ಹೂವು, ಹಣ್ಣು, ಪೂಜಾಸಾಮಗ್ರಿಗಳನ್ನು ಜನ ಕೊಳ್ಳುವ ಸಂಭ್ರಮ ನೋಡಿಯೇ ಅರಿಯಬೇಕು.
ಭೀಮನಮಾವಾಸ್ಯೆಯಿಂದ ಆರಂಭವಾಗುವ ಶ್ರಾವಣದ ಹಬ್ಬದ ಸೀಸನ್, ಒಂದು ತಿಂಗಳು ಪೂರ್ತಿ ನಡೆದು, ಗೌರಿ-ಗಣಪತಿ, ದೀಪಾವಳಿ, ನವರಾತ್ರಿಯ ನೆಪದಲ್ಲಿ ಭಾದ್ರಪದ, ಕಾರ್ತೀಕಕ್ಕೂ ಹಬ್ಬುತ್ತದೆ.
ಮದುವೆಯಾದ ಹುಡುಗಿಯರು ಐದು ವರ್ಷಗಳ ಕಾಲ ಶ್ರಾವಣದ ಪ್ರತಿ ಮಂಗಳವಾರ ಆಚರಿಸುವ ವ್ರತ ಮಂಗಳಗೌರಿ. ಇದಕ್ಕಾಗಿ ಬೇಕಾದ ಸಾಮಾನನ್ನು (ಮಂಗಳಗೌರಿ ಮೂರ್ತಿ, ಕಲಶದ ಗಿಂಡಿ, ಉದ್ಧರಣೆ, ಪಂಚಪಾತ್ರೆ, ದೀಪಗಳು ಇತ್ಯಾದಿ, ಹೆಚ್ಚಾಗಿ ಎಲ್ಲವೂ ಬೆಳ್ಳಿಯದು) ಮದುವೆಯಲ್ಲಿಯೇ ತಾಯಿ ಮನೆಯಿಂದ ಕೊಟ್ಟಿರುತ್ತಾರೆ. ಗಂಡನಿಗೆ ಸುದೀರ್ಘ ಆಯುಷ್ಯ ಬರಲೆಂದು ಆಚರಿಸುವ ಈ ವ್ರತ ಮನೆಯಲ್ಲಿರುವ ಮಕ್ಕಳಿಗೆ ಕೂಡ ಅಚ್ಚುಮೆಚ್ಚು, ಯಾಕೆಂದರೆ, ಇದರಲ್ಲಿ ನೈವೇದ್ಯಕ್ಕೆ ಮತ್ತೆ ದೀಪಕ್ಕೆಂದು ಸಿದ್ಧಪಡಿಸುವ ತಂಬಿಟ್ಟು, ತಿನ್ನಲು ತುಂಬಾ ರುಚಿ!


ಬೇಕಾದ ಸಾಮಾನುಗಳು
ಅಂಚಿರುವ ರವಿಕೆ ಕಣ - 3
ಖಾಲಿ ರವಿಕೆ ಕಣ - 1
ಈಶ್ವರ ಪಾರ್ವತಿ ಫೋಟೋ
ಮಂಗಳ ಗೌರಿ, ಗಣಪತಿ ಮೂರ್ತಿಗಳು
ಅರಿಶಿನ, ಕುಂಕುಮ, ಗಂಧ
ಹೂಬತ್ತಿ, ಎಳೆ ಬತ್ತಿ, ಕರ್ಪೂರ
ಬಿಚ್ಚೋಲೆ, ಕನ್ನಡಿ, ಕಲಶದ ಗಿಂಡಿ
ಆರತಿ ಬಟ್ಲು
ಜೋಡಿ ದೀಪಗಳು(ಎಷ್ಟಿದ್ದರೂ ಚೆನ್ನ)
ಮಣೆ (ದೇವರಿಡಲು)
ಮೊಗಚೆ ಕೈ (ಕಾಡಿಗೆ ಹಿಡಿಯಲು)
ಮಂಗಳಗೌರಿ ಹಾಡುಗಳು, ಕಥೆಯಿರುವ ಪುಸ್ತಕ / ಮಂಗಳಗೌರಿ ವ್ರತದ ಕ್ಯಾಸಟ್ ಅಥವಾ ಸೀಡಿ
ಹೂವು - ಮಲ್ಲಿಗೆ, ಜಾಜಿ, ಗುಲಾಬಿ, ಸೇವಂತಿಗೆ, ಮರುಗ, ದವನ, ಸಂಪಿಗೆ (ಪರಿಮಳಯುಕ್ತವಾದದ್ದು)ಟ
ಹಣ್ಣು - ನೈವೇದ್ಯಕ್ಕೆ
ಬೆಲ್ಲದಚ್ಚು - 1
ಕೊಬರಿ ಗಿಟಕು - 2
ವೀಳ್ಯೆದೆಲೆ - 32(ದೇವರಿಗೆ) +2 (ಕಲಶಕ್ಕೆ)+ ಬಂದವರಿಗೆ ತಲಾ 5
ಬಟ್ಲಡಿಕೆ - 32
ತುಪ್ಪ - ದೀಪಕ್ಕೆ, ನೈವೇದ್ಯ ತಯಾರಿಸಲು
ಗೋಧಿಹಿಟ್ಟು, ಬೆಲ್ಲ (ತಂಬಿಟ್ಟಿಗೆ)
ಶಾವಿಗೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಏಲಕ್ಕಿ (ಪಾಯಸಕ್ಕೆ)
ಅಕ್ಕಿ, ಹೆಸರುಬೇಳೆ, ಜೀರಿಗೆ, ಕಾಳುಮೆಣಸು, ಉಪ್ಪು, ತುರಿದ ಕೊಬರಿ, ಗೋಡಂಬಿ (ಹುಗ್ಗಿ/ಪೊಂಗಲ್ ತಯಾರಿಸಲು)

ಸಿದ್ಧತೆ:
ಸ್ನಾನ ಮಾಡಿ ರೇಷ್ಮೆ ಸೀರೆಯುಟ್ಟುಕೊಂಡು ದೇವರನ್ನಿಡುವ ಜಾಗ ಶುಚಿಯಾಗಿಸಬೇಕು.
ಮಣೆಯಿಟ್ಟು ಅದರ ಸುತ್ತ ರಂಗೋಲಿ ಬಿಡಿಸಿ, ಮಣ ಮೇಲೆ ಖಾಲಿ ರವಿಕೆ ಕಣವನ್ನು ಹಾಕಬೇಕು. ಅದರ ಮೇಲೆ ಹಿಂದೆ ಈಶ್ವರ ಪಾರ್ವತಿ ಫೋಟೋ ಇಡಬೇಕು. ತ್ರಿಕೋನಾಕೃತಿಯಲ್ಲಿ ಮಡಚಿದ ರವಿಕೆ ಕಣಗಳನ್ನು ಫೋಟೋದ ಎಡ, ಬಲ ಹಾಗೂ ಮೇಲೆ ಜೋಡಿಸಬೇಕು.
ಕಲಶದ ಗಿಂಡಿಗೆ ಸುಣ್ಣದಿಂದ ಸುತ್ತಲೂ ಗೆರೆಯೆಳೆದು, ಅದರಲ್ಲಿ ಕುಂಕುಮದ ಚುಕ್ಕೆಗಳನ್ನು ಹಾಕಬೇಕು. ನಂತರ ಅರಿಶಿನ, ಕುಂಕುಮ ಇಡಬೇಕು. ಫೋಟೋದ ಎದುರು ಕನ್ನಡಿಯಿಟ್ಟು ಅದರೆದುರು ಕಲಶದ ಗಿಂಡಿಯಿಡಬೇಕು. ಅದರಲ್ಲಿ ಎರಡು (ದೊಡ್ಡ ಗಿಂಡಿಯಾದರೆ ಐದು) ವೀಳ್ಯದೆಲೆ ಇಟ್ಟು, ಅರಿಶಿನ ಕುಂಕುಮ ಹಾಕಿ, ನಂತರ ನೀರು ಹಾಕಬೇಕು.
ಒಂದಿಷ್ಟು ಅರಿಶಿನವನ್ನು ತೆಗೆದುಕೊಂಡು ನೀರು ಹಾಕಿ ದಪ್ಪಕ್ಕೆ ಕಲಸಬೇಕು. ನಂತರ ಅದನ್ನು ತಿದ್ದಿ ತೀಡಿ ಗೋಪುರಾಕಾರ ಕೊಡಬೇಕು. ಇದನ್ನು ಬೆಲ್ಲದಚ್ಚಿನ ಮೇಲಿಡಬೇಕು. ಇದು ಅರಿಶಿನದ ಗೌರಿ. (ಕೆಲವರು ಇದಕ್ಕೆ ಸುಣ್ಣದ ಚುಕ್ಕೆ ಕೂಡ ಹಾಕುತ್ತಾರೆ). ಇದನ್ನು ಕಲಶದ ಎದುರು ಪುಟ್ಟ ತಟ್ಟೆಯಲ್ಲಿ ಜೋಡಿಸಬೇಕು.
ಅರಿಶಿನದ ಗೌರಿಯೆದುರಿಗೆ ಮಂಗಳಗೌರಿ ಮೂರ್ತಿಯನ್ನಿಡಬೇಕು. ಅದರ ಎಡಬದಿಗೆ ಗಣಪತಿ ಮೂರ್ತಿಯನ್ನಿಡಬೇಕು. 16 ವೀಳ್ಯದೆಲೆಯ ಮೇಲೆ ಕೊಬರಿ ಗಿಟಕು ಇಟ್ಟು ಅದರೊಳಗೆ 16 ಬಟ್ಲಡಿಕೆ ಜೋಡಿಸಬೇಕು. ಈಥರದ ಎರಡು ಸೆಟ್ ಮಾಡಿ ಅವುಗಳನ್ನು ಅರಿಶಿನದ ಗೌರಿಯ ಎಡ ಮತ್ತು ಬಲಬದಿಗೆ ಜೋಡಿಸಬೇಕು. ಇದ್ದಷ್ಟು ಜೋಡಿ ದೀಪಗಳನ್ನು ತುಪ್ಪದ ಹೂಬತ್ತಿ ಹಾಕಿ ಸಿದ್ಧಪಡಿಸಬೇಕು. ಆರತಿ ತಟ್ಟೆ ಸಿದ್ಧ ಪಡಿಸಬೇಕು. ಮೊಗಚೆ ಕೈಗೆ ವೀಳ್ಯದೆಲೆ ಮತ್ತು ತುಪ್ಪದ ರಸ ಹಚ್ಚಿ ಸಿದ್ಧ ಪಡಿಸಿ ಇಟ್ಟುಕೊಳ್ಳಬೇಕು.
ಪೂಜೆಗೆ ಅರಿಶಿನ -ಕುಂಕುಮ-ಅಕ್ಷತೆ ತುಂಬಿದ ಬಟ್ಟಲು, ವೀಳ್ಯದೆಲೆ, ಅಡಿಕೆ, ಆರತಿ, ಕರ್ಪೂರ ಇತ್ಯಾದಿ ಸಿದ್ಧವಾಗಿಟ್ಟುಕೊಳ್ಳಿ.



ತಂಬಿಟ್ಟಿನ ದೀಪ:
ಇದು ಅಕ್ಕಿ ಅಥವಾ ಗೋಧಿಯಲ್ಲಿ ಮಾಡಬಹುದು. ಅಕ್ಕಿ ಅಥವಾ ಗೋಧಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬೇಕಾದಷ್ಟು ಬೆಲ್ಲವನ್ನು ಬಿಸಿಗಿಟ್ಟು ಕರಗಿಸಬೇಕು. ಬೆಲ್ಲವೆಲ್ಲ ನೀರಾದ ಮೇಲೆ ಹುರಿದ ಗೋಧಿ ಅಥವಾ ಅಕ್ಕಿ ಹಿಟ್ಟನ್ನು ಅದಕ್ಕೆ ಸೇರಿಸಿ ಗಟ್ಟಿಯಾಗಿ ಕಲಿಸಿಕೊಳ್ಳಬೇಕು. (ಇದಕ್ಕೆ ಹುರಿಗಡಲೆ ಪುಡಿ, ಗೋಡಂಬಿ, ಏಲಕ್ಕಿ ಪುಡಿ ಇತ್ಯಾದಿ ಸೇರಿಸಬಹುದು, ಸೇರಿಸಿಕೊಂಡರೆ ಆಮೇಲೆ ತಿನ್ನುವಾಗ ರುಚಿ ಹೆಚ್ಚು :-)). ನಂತರ ಇದರಲ್ಲಿ ಉಂಡೆ ಕಟ್ಟಿ ತಂಬಿಟ್ಟು ಸಿದ್ಧಪಡಿಸಬೇಕು. 16 ತಂಬಿಟ್ಟುಗಳಿಗೆ ಮಧ್ಯದಲ್ಲಿ ಹೊಂಡದಂತೆ ಮಾಡಿ ದೀಪ ಸಿದ್ಧಪಡಿಸಬೇಕು. ಉಳಿದ ಹಿಟ್ಟನ್ನು ಸುಮ್ಮನೇ ಉಂಡೆ ಮಾಡಿ ನೈವೇದ್ಯಕ್ಕಿಡಬೇಕು.
ಶಾವಿಗೆ ಪಾಯಸ:
ಸುಲಭ. ಶಾವಿಗೆ ಹುರಿದುಕೊಳ್ಳಿ, ಹಾಲು ಹಾಕಿ ಬೇಯಿಸಿ, ಬೇಕಾದಷ್ಟು ಸಕ್ಕರೆ ಹಾಕಿ, ದ್ರಾಕ್ಷಿ, ಗೋಡಂಬಿ ಸೇರಿಸಿ.
ಹುಗ್ಗಿ:
ಅತಿಸುಲಭ. ಕುಕ್ಕರ್ ನಲ್ಲಿ ತುಪ್ಪ ಹಾಕಿ ತುಪ್ಪದಲ್ಲಿ ಜೀರಿಗೆ, ಮೆಣಸಿನಕಾಳು, ಅಕ್ಕಿ ಹುರಿದುಕೊಳ್ಳಿ. ಅಕ್ಕಿ ಎಷ್ಟಿದೆಯೋ ಅಷ್ಟೇ ಹೆಸರು ಬೇಳೆ ಕೂಡ ಸೇರಿಸಿ ಮತ್ತೆ ಕೈಯಾಡಿಸಿ. ನಂತರ ಎರಡರಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ. ಕುಕ್ಕರ್ 4-5 ಸಲ (ಅಕ್ಕಿ-ಹೆಸರುಬೇಳೆ ಮೆತ್ತಗಾಗುವ ತನಕ) ಕೂಗಬೇಕು. ಇದು ಇಳಿದ ನಂತರ ಗೋಡಂಬಿ ಸೇರಿಸಿ ಚೆನ್ನಾಗಿ ತಿರುಗಿಸಿ, ಉಪ್ಪು, ತುರಿದ ಕೊಬರಿ ಸೇರಿಸಿ. ಒಂದು ಮಧ್ಯಮಗಾತ್ರದ ಬಟ್ಟಲಲ್ಲಿ ಹುಗ್ಗಿ ಹಾಕಿ ನೈವೇದ್ಯಕ್ಕೆ ಸಿದ್ಧವಾಗಿಡಿ.


****************
ಇನ್ನುಳಿದಿದ್ದು ಮುಂದಿನ ವಾರ ಬರೆಯುವೆ. ಇದು ಒಂದು ರೀತಿಯಲ್ಲಿ ನನಗೆ ಮುಂದಿನ ವರ್ಷ ಸಹಾಯವಾಗಲೆಂದು ಬರೆದುಕೊಳ್ಳುತ್ತಿರುವ ಸ್ವಂತಪಾಠವಾದ್ದರಿಂದ ಇವತ್ತೇ ಪೂರ್ತಿಗೊಳಿಸಬೇಕೆಂಬ ಕಮಿಟ್ಮೆಂಟ್ ನನಗಿಲ್ಲ! :-) ಇದರಲ್ಲಿ ಇನ್ನೂ ಏನಾದರೂ value addition ಅಥವಾ ariaions ಇದ್ದಲ್ಲಿ ಕಮೆಂಟಿಸಿ ತಿಳಿಸಿದರೆ ಉಪಕಾರವಾಗುತ್ತದೆ...:-)
****************
ಕನ್ನಡದಲ್ಲಿ ಬರೆಯುವುದು ಮರೆತೇ ಹೋಗಿದೆ ಎಂದುಕೊಳ್ಳುತ್ತಿದ್ದೆ, ಮರೆತು ಹೋಗಿಲ್ಲ ಅಂತ ಸಮಾಧಾನವಾಗುತ್ತಿದೆ. ಸಂಸಾರ ಸಾಗರದಲ್ಲಿ ಮುಳುಗಿ ಹೋದ ಕಾರಣ ಬ್ಲಾಗ್ ಮನೆಯ ದಾರಿ ಆಗಾಗ ಮರೆತುಹೋಗುತ್ತಿದೆ. ಏನು ಮಾಡಲಿ?

Tuesday, April 19, 2011

ಮತ್ತೆ ಮಳೆ...!

ಮಳೆ ಬಂತೆಂದರೆ ಸಾಕು, ನೆನಪುಗಳ ಜಡಿಮಳೆ ಕೂಡ ಶುರು...

ಚಿಕ್ಕಂದಿನಲ್ಲಿ ಅಮ್ಮ ಕರಿಯುತ್ತಿದ್ದ ಬಿಸಿ ಬಿಸಿ ಹಪ್ಪಳ... ಸುರಿವ ಮಳೆಗೆ ಗಂಟೆ ಎಂಟಾರೂ ಏಳಲು ಮನಸಿಲ್ಲದೆ ಕೌದಿಯೊಳಗೆ ಮುದುರಿಕೊಳ್ಳುತ್ತಿದ್ದ ದಿನಗಳು... ಮಳೆ ಹೆಚ್ಚಾದರೆ ಶಾಲೆಗೆ ಸಿಗುತ್ತಿದ್ದ ರಜಾ... ಹೊದಿಕೆಯೊಳಗೆ ಸೇರಿಕೊಂಡು ತರಂಗವೋ ಸುಧಾವೋ ಯಾವುದಾದರೂ ಕಾದಂಬರಿಯೋ ಹಿಡಿದು ಓದತೊಡಗಿದರೆ ಜಗತ್ತೇ ಸುಂದರ... ಮಳೆಯ ಜತೆಗೆ ತಳಕುಹಾಕಿಕೊಂಡ ನೂರೆಂಟು ಕಥೆಗಳು... ಕನಸುಗಳು...

ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ... ಇದರ ಅನುಭವ ಬೇರೆಯೇ...

ಸದಾ ಹೊಸ್ತಿಲು ದಾಟಹೊರಡುವ ಪುಟ್ಟಿ ಮಳೆ ಬರುತ್ತಿದ್ದರೂ ಚಳಿಯಾಗುತ್ತಿದ್ದರೂ ಲೆಕ್ಕಿಸದೆ ಹೊಸ್ತಿಲು ದಾಟಹೊರಡುತ್ತಾಳೆ... ಅವಳನ್ನು ಹಿಡಿಯುವಷ್ಟರಲ್ಲೇ ಅರ್ಧ ಸುಸ್ತು! ಕೈಲಿ ಹಿಡಿದುಕೊಳ್ಳಲೂ ಬಿಡದೆ ಚಿಮ್ಮುವ ಅವಳಿಗೆ ಬೆಚ್ಚಗೆ ಬಟ್ಟೆ ಹಾಕಿ, ಗಿಲಕಿ ಮತ್ತು ಟೀಥರ್ ಕೈಲಿ ಕೊಟ್ಟು ಬಣ್ಣ ಬಣ್ಣದ ಪುಸ್ತಕ, ಗೊಂಬೆ ಇತ್ಯಾದಿ ಅವಳ ಸುತ್ತಲೂ ಇಟ್ಟು ರೂಮಿನೊಳಗೆ ಕುಳ್ಳಿರಿಸಿ 'ಹೊರಗೆ ಬರಬೇಡ ಗುಮ್ಮ ಬರ್ತಾನೆ' ಅಂತ ಹೇಳಿ ಆಟವಾಡಲು ಬಿಟ್ಟು ಹೊರಗೆ ಬಂದರೆ, ಉಸ್ಸಪ್ಪಾ!

ಅಚಾನಕ್ಕಾಗಿ ಬಂದ ಮಳೆಗೆ ಇನ್ನೇನು ಒಣಗುತ್ತಿದ್ದ ಬಟ್ಟೆಯೆಲ್ಲಾ ಮತ್ತೆ ನೆನೆದು, ಮತ್ತೆ ಅದನ್ನು ನಾಳೆ ಪುನ: ನೆನೆ ಹಾಕಬೇಕು, ದಿನವೂ ನಿಮ್ಮ ಬಟ್ಟೆಯೇ ಹಾಕುತ್ತೀರಿ, ನಮ್ಮ ಬಟ್ಟೆಗೆ ಜಾಗವಿಲ್ಲವಲ್ಲಾ ಎಂದು ಮನೆ ಓನರ್ ಕೈಲಿ ಹೇಳಿಸಿಕೊಳ್ಳಬೇಕಲ್ಲಾ ಎಂಬ ಕಳವಳ...
ಮಳೆ ಬರಬಹುದೆಂಬ ಅರಿವಿಲ್ಲದೆ ಕೊಡೆರಹಿತರಾಗಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೇಗೆ ಬರುತ್ತಾರೋ ಎಂದು ಕಾತರ... ನೆನೆದುಕೊಂಡು ಬಂದವರಿಗೆ ತಲೆ ಒರಸಿ ಉಪಚಾರ... ಹಾಗೇ ಬಿಸಿ ಬಿಸಿ ಸೂಪಿಗೆ, ಕರಿದ ತಿಂಡಿಗೆ ಡಿಮಾಂಡಪ್ಪೋ ಡಿಮಾಂಡ್...

ಮಳೆಯೆಂದರೆ ಇಷ್ಟೇ ಅಲ್ಲ... ಆದರೆ ಈಗ, ಈ ಕ್ಷಣಕ್ಕೆ ಕಂಪ್ಯೂಟರ್ ಕೀಲಿಗೆ ನಿಲುಕಿದ್ದು ಇಷ್ಟು ಮಾತ್ರ. ವಾಚ್ಯಕ್ಕೆ ನಿಲುಕದೆ ಭಾವವಾಗಿ ಉಳಿದಿದ್ದು ಇನ್ನೆಷ್ಟೋ...

Friday, October 8, 2010

ಮುಂಗಾರು ಮಳೆಯೇ...

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ... ಮಹಾಮಾರಿ ಜನರಿಗೆ ಉರುಳೇ
ಸುರಿವ ಬಲುಮೆಯಾ ಜಡಿಮಳೆಗೆ ಭೀತಿ ಮೂಡಿದೆ...
ಯಾವ ತಿಪ್ಪೆಯಲ್ಲಿ ಎಷ್ಟು ಪ್ಲಾಸ್ಟಿಕ್ ಬ್ಲಾಕಾಗುವುದೊ
ಎಲ್ಲಿ ಕೆಸರು ಹೊರಚಿಮ್ಮುವುದೋ ತಿಳಿಯದಾಗಿದೇ...

ಎದುರು ರೋಡಿನಲ್ಲಿ.. ನೀರು ತುಂಬಿ ಹರಿವಾ ಒನಪು
ನನ್ನ ಮನೆಯ ಎದುರು.. ಕೆಂಪು ಮಣ್ಣ ಹೆಜ್ಜೆಯ ಗುರುತು
ಗುಡುಗು ಸಿಡಿಲಿನಾ ಅಡಚಿಕ್ಕು... ಏನು ರಭಸವೋ...
ಅಕ್ಕ ಪಕ್ಕದಾ ಮನೆಗಳಿಗೆ ನೀರು ನುಗ್ಗಿ ಚೆಲ್ಲಾಪಿಲ್ಲಿ
ಕಂಗಾಲಾದ ಮನುಜರ ನೋಡು.. ಯಾಕೆ ಹೀಗೆಯೋ...

ಮನೆಯು ಮುಳುಗಿ ಹೋಯ್ತು.. ಅಳುತ ನಿಂದ ಹೆಂಗಸರೆಲ್ಲಾ
ಇದ್ದಬದ್ದದ್ದೆಲ್ಲಾ.. ಕಟ್ಟಿ ಹೊರಟರು ಮೆರವಣಿಗೆ...
ನೆರೆಯು ಬರದ ಊರಿನ ಕಡೆಗೆ... ವಿಧಿಯ ಆಟವೋ...
ಕೂಡಿಇಟ್ಟುದೆಲ್ಲಾ... ಕಳೆದು ಹೋದ ದು:ಖವು ಕಾಡಿ
ನೆಲೆಯು ಇಲ್ಲದಾಗಿ ಹೋಗಿ... ಏನು ನೋವಿದೂ...
...............

ಎಂದೋ ಬರೆದಿದ್ದು, ಅರ್ಧಕ್ಕೇ ನಿಂತುಬಿಟ್ಟಿದೆ. ಮುಂಗಾರು ಮಳೆ ಪಿಚ್ಚರ್ ಬಿಡುಗಡೆಯಾದ ಸಮಯದಲ್ಲಿ ಬರೆದಿದ್ದು... ಅದಾದ ನಂತರ ಎರಡು ಮುಂಗಾರು ಮಳೆ ಸೀಸನ್ ಕಳೆದಿದೆ, ಈಗಂತೂ ಪಕ್ಕಾ ಹಿಂಗಾರು ಮಳೆ ಸೀಸನ್... ಬರೆಯುವುದು ಬಿಟ್ಟು ಎಷ್ಟು ಸಮಯವಾಗಿದೆಯೆಂದರೆ, ಮುಂದುವರಿಸುವುದು ಹೇಗೆಂದೇ ಹೊಳೆಯುತ್ತಿಲ್ಲ!

Sunday, February 14, 2010

ವ್ಯಾಲೆಂಟೈನ್ಸ್ ಡೇ ಮತ್ತು ಒಂದಿಷ್ಟು ಸ್ವಗತ

ವ್ಯಾಲೆಂಟೈನ್ಸ್ ಡೇ ಅಂದ್ರೆ ನನ್ನ ಪಾಲಿಗೆ ಮೊದಲೆಲ್ಲ ಎಲ್ಲಾ ದಿನಗಳಂತೆ ಅದೂ ಒಂದು ದಿನವಾಗಿತ್ತು. ಆಮೇಲೆ ಮಾಧ್ಯಮ ಜಗತ್ತಿಗೆ ಎಂಟ್ರಿ ಕೊಟ್ಟ ಮೇಲೆ ಆ ದಿನವನ್ನ ಆಚರಿಸುವವರಿಗೆ Good feeling ತರಲಿಕ್ಕೆ ಸಹಾಯ ಮಾಡುವ ಕೆಲಸ ನಮ್ಮದು ಅಂತ ಅರ್ಥವಾಯ್ತು. ಆದರೆ ಕಳೆದ 2 ವರ್ಷಗಳಿಂದ, ಈ ದಿನ ಬಂತೆಂದರೆ ಸಾಕು, ಎಲ್ಲಿ ಏನು ಗಲಾಟೆಯಾಗುತ್ತದೋ ಅಂತ ಕಾಯಲು ಆರಂಭಿಸಿರುವುದು ವಿಚಿತ್ರವಾದರೂ ಸತ್ಯ. ಈಬಾರಿಯೂ ಅಷ್ಟೆ, ಗಲಾಟೆಯೋ ಗಲಾಟೆ.
-----------------------------------------------------
ಪ್ರೇಮಯುದ್ಧ - ನಮ್ಮ ಚಾನೆಲ್ ಆಯೋಜಿಸಿದ್ದ ಕಾರ್ಯಕ್ರಮ. ಅದರ ಶೂಟಿಂಗ್ ಟೀಮ್ ಕಾರ್ಯಕ್ರಮ ಶೂಟ್ ಮಾಡಿಕೊಂಡು ಬರಲು ಹೋಗಿದ್ದು ಗೊತ್ತಿತ್ತು. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿ, ಸುದ್ದಿಯ ಪಾಡಿಗೆ ಸುದ್ದಿ ಶಾಂತವಾಗಿ ಹೋಗುತ್ತಿದ್ದ ಸಮಯ. ಇದ್ದಕ್ಕಿದ್ದಂತೆ ಇನ್ನೊಂದು ಚಾನೆಲ್ಲಿನಲ್ಲಿ ಬ್ರೇಕಿಂಗ್ ನ್ಯೂಸ್ ಬರಲು ಆರಂಭವಾಯ್ತು, ಟೌನ್ ಹಾಲ್ ಬಳಿ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರ ಕೆಲಸ ಅಂತ. ನಮಗೂ ಸುದ್ದಿ ಬಂತು, ನಮ್ಮ ಕಾರ್ಯಕ್ರಮದಲ್ಲೇ ನಡೆದಿದ್ದು ಈ ಕೆಲಸ ಅಂತ. ಎಲ್ಲರಿಗೂ ಏನು ನಡೆಯುತ್ತಿದೆ ಅಂತ ಸರಿಯಾಗಿ ಗೊತ್ತಾಗದ ಪರಿಸ್ಥಿತಿ.
ಅಷ್ಟರಲ್ಲಿ ಪಕ್ಕದ ಚಾನೆಲ್ ಮಸಿಬಳಿಯುವ ನೀಟಾದ ದೃಶ್ಯಗಳನ್ನು ಕೊಡಲಾರಂಭಿಸಿತು. ಅಚಾನಕ್ ಆದಂತಹ ಈ ಮಸಿ ಬಳಿವ ಕೆಲಸದ ಬಗ್ಗೆ ಸ್ವಲ್ಪವೂ ಕೂಡ ಐಡಿಯಾ ಇಲ್ಲದ ಕಾರಣ ನಮಗೆ ಆ ದೃಶ್ಯಗಳು ಸಿಕ್ಕಿಲ್ಲವೆಂಬುದು ಕೂಡ ಗೊತ್ತಾಯಿತು. ನಂತರ ಬಂದಂತಹ ದೃಶ್ಯಗಳಲ್ಲಿ ಪೊಲೀಸರು ಕೂಡ ಕಾಣಿಸಿಕೊಂಡರು. ನಂತರ ನಡೆದ ವಾಗ್ವಿವಾದದ ಸಮಯ, ಮುತಾಲಿಕ್ ಬೆಂಬಲಿಗರಲ್ಲಿ ಪ್ರಮುಖನೊಬ್ಬ ವಿಮಲಾ ಮೇಡಂ ಮುಖಕ್ಕೆ ಉಗಿದು ಬಿಟ್ಟ. 4-5 ವರ್ಷಗಳಿಂದ ವಿಮಲಾ ಮೇಡಂ ಪರಿಚಯ ನನಗೆ. ಇವರು ಮುತಾಲಿಕ್ ಅಥವಾ ಬಜರಂಗಿಗಳ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ವಿರೋಧಿಸುತ್ತಲೇ ಬಂದವರು. ಬರಿಯ ವಾಗ್-ವಿರೋಧಕ್ಕಾಗಿಯೇ ಮುತಾಲಿಕ್ ಬೆಂಬಲಿಗರ ವಿರೋಧ ಕಟ್ಟಿಕೊಂಡವರು. ಕಳೆದ ವರ್ಷ ಪತ್ರಿಕೆಯೊಂದು ನಡೆಸಿದ್ದ ಕಾರ್ಯಕ್ರಮದಲ್ಲಿ ಮೊನ್ನೆ ಅವರ ಮುಖಕ್ಕೆ ಉಗಿದಾತ ಬೆದರಿಕೆ ಕೂಡ ಹಾಕಿದ್ದ ಎಂದು ವಿಮಲಾ ಮೇಡಂ ಹೇಳಿದ ನೆನಪು ನನಗೆ.
ಕಳೆದ ವರ್ಷ ಪಬ್ ಅಟಾಕ್ ಸಂಬಂಧ ಚರ್ಚೆಗೆ ಬಂದಿದ್ರು ಮೇಡಂ ಕಸ್ತೂರಿಗೆ, ಅವಾಗ ಮೇಡಂ ಹತ್ರ ಕೇಳಿದ್ದೆ, ಇವರ ಜತೆ ಚರ್ಚೆ ಮಾಡಿದ್ರೆ ಇವ್ರು ಸರಿ ಹೋಗ್ತಾರಾ ಮೇಡಂ, ವೇಸ್ಟ್ ಆಫ್ ಎನರ್ಜಿ ಅಲ್ವಾ ಅಂತ. ಇದು ವಿಚಾರಕ್ಕೆ ಸಂಬಂಧಿಸಿದ್ದಾದ ಕಾರಣ ವೈಚಾರಿಕವಾಗಿಯೇ ಎದುರಿಸಬೇಕು, ಚರ್ಚೆ ಮಾಡಿ ಮಾಡಿಯೇ ಸರಿ ಹೋಗಬಹುದೇ ಹೊರತು ದಂಡ ಮಾರ್ಗದಿಂದಲ್ಲ ಅನ್ನುವುದು ವಿಮಲಾ ಮೇಡಂ ನಿಲುವಾಗಿತ್ತು, ಇಂದು ಕೂಡ ಅದೇ ಮಾತೇ ಅವ್ರು ಹೇಳ್ತಾರೆ.
-----------------------------------------------------
TV9 ನಿಂದ ತೆಗೆದುಕೊಂಡ ಮಸಿ ಬಳಿವ ವಿಶುವಲ್ಸ್ ಹಾಕಿಕೊಂಡ TIMES NOW, SELF-STYLED MORAL POLICEMAN GETS THE TASTE OF HIS OWN MEDICINE ಅಂದಿತು. ನನಗೆ ಪಬ್ ಅಟಾಕ್ ಮತ್ತೊಮ್ಮೆ ನೆನಪಾಯಿತು.
-----------------------------------------------------
ಮಸಿ ಬಳಿದವರನ್ನು ಬಂಧಿಸಲಾಯಿತು, ಕೆಲವು ಕಾಂಗ್ರೆಸ್ಸಿಗರು ನಮ್ಮವರು ಮಾಡಿರುವುದಿಲ್ಲ ಇಂಥಾ ಕೆಲಸ ಅಂದ್ರು. ಇನ್ನು ಕೆಲವರು ಟೈಮ್ಸ್ ನವ್ ಧಾಟಿಯಲ್ಲೇ ಮಾತಾಡಿದ್ರು. ಮತ್ತೆ ಕೆಲವ್ರು ಅವರವರ ಸ್ವಂತ ಇಚ್ಛೆಯಿಂದ ಮಾಡಿದ ಕೆಲಸ, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಇದು ಅಂದ್ರು. ಮತ್ತೆ ಕೆಲವ್ರು ಅವ್ರನ್ನ ಬಂಧಿಸಿಟ್ಟಿದ್ದ ಪೊಲೀಸ್ ಠಾಣೆಗೇ ಭೇಟಿ ಕೊಟ್ಟು ನಮ್ಮ ಕ್ಯಾಮರಾಕ್ಕೆ ಸಿಗಾಕ್ಕೊಂಡ್ರು. ಮುಖಕ್ಕೆ ಮಸಿ ಬಳಿದೋರ್ನ ಬಿಡೋದಿಲ್ಲ ಅಂತ ಮುತಾಲಿಕ್ ಹೇಳಿಕೆ, ಅಂದ್ರೆ ಕಥೆ ಇಲ್ಲಿಗೇ ನಿಲ್ಲೂದಿಲ್ಲ ಅಂತ ಅರ್ಥ... There is more to come.
-----------------------------------------------------
ವಿಮಲಾ ಮೇಡಂ ಮುಖಕ್ಕೆ ಉಗಿದವ ಬಿಂದಾಸ್ ಆಗಿ ತಿರುಗಾಡ್ತಿದ್ದ. ಸಂಜೆ ನಮ್ಮ ಆಫೀಸಲ್ಲಿ ಡಿಸ್ಕಶನ್ ಇತ್ತಲ್ಲ, ಅಲ್ಲಿಗೂ ಬಂದಿತ್ತು ಕೋತಿ ಸೇನೆ, ಅವನೂ ಬಂದಿದ್ದ. ಬಾಯಲ್ಲಿ ಹೆಂಗಸರು ಅಂದ್ರೆ ದೇವ್ರು ಅದೂ ಇದೂ ಅಂತ ಬಾಯಲ್ಲಿ ಹೊಗೆ ಬಿಡುವ ಪಾರ್ಟಿಗಳು, ಮಹಿಳೆಯರು ಪಬ್-ನಲ್ಲಿ ಕೂರಬಾರದು ಅಂತ ಹೆಂಗಸರಿಗೆ ಹೊಡೆದು ಹೋರಾಡಿದ(!) ಪಾರ್ಟಿಗಳು, ಅದ್ಯಾಕೆ ನೀಟಾಗಿ ಸೀರೆಯುಟ್ಟಿದ್ದ ಅಪ್ಪಟ ಭಾರತೀಯ ನಾರಿಯಾಗಿಯೇ ಕಾಣುವ ಗೌರವಾನ್ವಿತ ಮಹಿಳೆಯೋರ್ವಳ ಮುಖದ ಮೇಲೆ ಉಗಿಯುವ ಸಂಸ್ಕೃತಿ ಬೆಳೆಸಿಕೊಂಡರೋ ಗೊತ್ತಾಗಲಿಲ್ಲ.
-----------------------------------------------------
ಲವ್ ಜೆಹಾದ್ ಆರೋಪಕ್ಕೆ ಒಳಗಾಗಿದ್ದ ಇರ್ಫಾನ್-ಅಶ್ವಿನಿ ಮತ್ತು ತೌಫೀಕ್-ಸಹನಾ ಜೋಡಿ, ರವಿ ಬೆಳಗೆರೆ ಜತೆಗೆ ಭಾಗವಹಿಸಿದ್ದ ಕಾರ್ಯಕ್ರಮ, 'ಅಹಂ ಪ್ರೇಮಾಸ್ಮಿ' . ಇದು ನೋಡಿದ ಮೇಲೆ ಅನಿಸಿದ್ದು, ಇಸ್ಲಾಂ ಧರ್ಮ ಸ್ವಲ್ಪ ಲಿಬರಲ್ ಆಗಿ ಬದಲಾಗಿದ್ರೆ ಬಹುಶ: ಈ ಲವ್-ಜೆಹಾದ್ ಅನ್ನುವ ಐಡಿಯಾವೇ ಯಾರ ತಲೆಗೂ ಬರ್ತಿರಲಿಲ್ಲ.
ಹಿಂದೂ ಧರ್ಮದಲ್ಲಿಯೂ ಬೇಕಾದಷ್ಟು ಅರೆಕೊರೆಗಳಿರಲಿಲ್ವಾ, ಈಗ ಎಲ್ಲಾ ಕಾಲಕ್ಕೆ ತಕ್ಕ ಹಾಗೆ ತಿದ್ದಿಕೊಂಡು ಮುಂದೆ ಹೋಗ್ತಾ ಇಲ್ವಾ? ಸತೀ ಪದ್ಧತಿ, ಬಾಲ್ಯವಿವಾಹ ಇತ್ಯಾದಿಗಳ ತಡೆಗೆ ಕಾಯಿದೆ-ಕಾನೂನುಗಳ ಸಹಕಾರವಿದೆ. ಆದರೆ ಮುಸ್ಲಿಂ ಮದುವೆಗಳ ರೀತಿ ಬೇರೆ. ಇವು ಪ್ರೇಮವಿವಾಹ ಅಥವಾ ಅಂತರ್ಜಾತೀಯ ವಿವಾಹವೇ ಆದರೂ, ಶೆರಿಯತ್-ನ ನಿಯಮಗಳಿಗನುಸಾರವಾಗಿ ಮುಸ್ಲಿಂ ಧರ್ಮಗುರುಗಳ ಸಮಕ್ಷಮದಲ್ಲಿ ವಿವಾಹವಾದರೆ ಮಾತ್ರ ಮಾನ್ಯವಾಗುತ್ತವೆ. ಅಂತರ್ಜಾತೀಯ ವಿವಾಹಗಳಿಗೆ ಒಪ್ಪಿಗೆ ನೀಡಿರುವ ಇಸ್ಲಾಂ, ಅನ್ಯಧರ್ಮೀಯರು ಮುಸ್ಲಿಂ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕಾದರೆ, ತಮ್ಮ ಧರ್ಮವನ್ನು ಮುಸ್ಲಿಂ ಧರ್ಮಕ್ಕೆ ಬದಲಾಯಿಸಿಕೊಳ್ಳಬೇಕಾದುದು ಕಡ್ಡಾಯವೆಂಬ ನಿಯಮ ರೂಢಿಯಲ್ಲಿಟ್ಟಿದೆ. ಇದೇ ಎಲ್ಲಾ ಗೊಂದಲಕ್ಕೂ ಮೂಲ. ಪ್ರೇಮಕ್ಕೂ ಭಯೋತ್ಪಾದನೆಯ ಬಣ್ಣ ಬರಲು ಕಾರಣ. ಬಹುಶ: ಹಿಂದೂ ಧರ್ಮದ ಹಾಗೇ ಇಸ್ಲಾಂ ಕೂಡ ಕೆಟ್ಟದನ್ನು, ಕಾಲಕ್ಕೆ ಸಲ್ಲದ್ದನ್ನು ಕಳಚಿಕೊಳ್ಳುವ ಹಾಗಿದ್ರೆ ಚೆನ್ನಾಗಿತ್ತು, ಜಗತ್ತಲ್ಲಿ ಶಾಂತಿಗೆ ಸ್ವಲ್ಪ ಹೆಚ್ಚು ಜಾಗ ಇರ್ತಿತ್ತು...
ಇದು ಧರ್ಮದ ಮಾತಾಯ್ತು. ಆದರೆ ಇಂದಿನ ದಿನದಲ್ಲಿ ಧರ್ಮಕ್ಕಿಂತ INDIVIDUAL DECISIONS ಹೆಚ್ಚು ತೂಕದ್ದು ಅಂತ ನನ್ನ ಭಾವನೆ. ಮುಸ್ಲಿಂ ಹುಡುಗನ ಜತೆಗೆ ಬದುಕು ಕಟ್ಟಿಕೊಂಡಿರುವ ನನ್ನ ಗೆಳತಿ ಹೆಸರು ಬದಲಾಯಿಸಿಕೊಂಡಿಲ್ಲ, ದೇವರನ್ನು ನಂಬದ ಆಕೆ ನಮಾಜು ಮಾಡುವುದಿಲ್ಲ. ಆಕೆಯ ಸಂಗಾತಿಯೂ ಒತ್ತಾಯಿಸಿಲ್ಲ. ಆದರೆ ಅವರ ಪಾಲಿಗೆ ಬದುಕೇನೂ ನಿಂತಿಲ್ಲ, ನಡೆಯುತ್ತಲೇ ಇದೆ.
ಆ ಇಬ್ರೂ ಹುಡುಗಿಯರು ಹೆಸರು ಬದಲಾಯಿಸಿಕೊಂಡಿದ್ದಾರೆ, ಬುರ್ಖಾ ಹಾಕ್ತಾರೆ. ಅವರಲ್ಲಿ ಒಬ್ಳು ಹೇಳಿದ್ಲು, ಮೊದ್ಲು ಇಸ್ಲಾಂನ ಇಷ್ಟ ಪಟ್ಟೆ, ಹಾಗೇ ಇಸ್ಲಾಂ ಇಷ್ಟಪಡೋ ಹುಡುಗನ್ನೂ ಇಷ್ಟ ಪಟ್ಟೆ ಅಂತ. ನಿಜವಾಗಿ ಅವರ ಕೇಸಲ್ಲಿ ಪ್ರೀತಿ ಮೊದಲು ಹುಟ್ಟಿತ್ತು, ನಂತರ ಬಂದಿದ್ದು ಜಾತಿ. ಇದೇ ಪಾಯಿಂಟ್ ಮುಂದಿಟ್ಟು ಅವ್ರು ಕೋರ್ಟಲ್ಲೂ ಗೆದ್ದಿದ್ದು. ಹೀಗಾಗಿ ಈ ಡೈಲಾಗು ನಂಗ್ಯಾಕೋ ಸ್ವಲ್ಪ ಓವರ್ ಆಯ್ತು ಅನಿಸಿತು... ಈಗ ಇಸ್ಲಾಂ ಧರ್ಮ ಫಾಲೋ ಮಾಡ್ತಿರೋದಕ್ಕೆ ಅನಗತ್ಯವಾಗಿ ಬೇಕಾದ್ದಕ್ಕಿಂತ ಹೆಚ್ಚು ಸಮರ್ಥನೆ ಕೊಡ್ತಿದಾಳೆ ಅನಿಸ್ತು. ಸೋ ಕಾಲ್ಡ್ ಲವ್ ಜೆಹಾದ್ ಬಗ್ಗೆ ಇಷ್ಟೆಲ್ಲಾ ಬರೀಬೇಕು ಅನಿಸಿತು.
-----------------------------------------------------
ನನ್ನ ಎಲ್ಲಾ ತಾಕಲಾಟಗಳ ನಡುವೆ ಲೈಫ್ ಕೊಟ್ಟಿರೋ ಗಿಫ್ಟ್ ನನ್ನವ... he makes life easier to live. ವ್ಯಾಲೆಂಟೈನ್ಸ್ ಡೇ ದಿನ ಬೇರೆಲ್ಲಾ ಬರೆದು, ಇವನ ಬಗ್ಗೆ ಮಾತ್ರ ಬರೀದಿದ್ರೆ ಹ್ಯಾಗೆ? ನಿನ್ನೆ ಪೂನಾದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ತಿಂಗಳಿಗೆ ಎರಡು ಸರ್ತಿ ಪೂನಾಕ್ಕೆ ಭೇಟಿ ನೀಡುವ ನನ್ನವ, ನಾಡಿದು ಮತ್ತೆ ಪೂನಾಕ್ಕೆ ಹೋಗ್ತಾನೆ. 'ಪೂನಾಕ್ಕಾ...' ಅಂತ ಗಾಬರಿ ಕಣ್ಣು ತೋರಿಸಿದ್ದಕ್ಕೆ, ಈಗಷ್ಟೇ ಬಾಂಬ್ ಬ್ಲಾಸ್ಟ್ ಆಯ್ತಲ್ಲ, ಇನ್ನು 15 ದಿನ ಸೆಕ್ಯೂರಿಟಿ ಹೆಚ್ಚಾಗಿರುತ್ತೆ, ನಥಿಂಗ್ ಟು ವರಿ ಅಂತ ನಕ್ಕುಬಿಟ್ಟ. ಕಳ್ಳ.

Tuesday, July 14, 2009

ಕಳೆದುಕೊಳ್ಳುವ ಬಗೆಗೊಂದು ಸ್ವಗತ...

ಎರಡು ವರ್ಷದ ಹಿಂದಿನ ಕಥೆ. ಅವತ್ತೊಂದು ದಿನ ಬನ್ನೇರುಘಟ್ಟದಲ್ಲಿರುವ ಅತ್ತಿಗೆಯ ಮನೆಯಿಂದ ವಾಪಸ್ ಹೊರಟವಳು ಗೆಳತಿಯ ಮನೆಗೆ ಹೋಗುವ ಬಸ್ಸಿನಲ್ಲಿ ಕೂತಿದ್ದೆ. ಅರ್ಧ ದಾರಿಯಲ್ಲಿ ನನ್ನ ಪಕ್ಕದಲ್ಲಿ ನಿಂತಿದ್ದ ಹೆಂಗಳೆಯೊಬ್ಬಳು ತನ್ನ ಮಗುವನ್ನು ನನ್ನ ಮಡಿಲಲ್ಲೇರಿಸಿದಳು. ಮಗುವನ್ನು ನೀಟಾಗಿ ನನ್ನ ಮಡಿಲಲ್ಲಿ ಅವಳು ಕೂರಿಸುವಾಗ ನಾನು ಪಿಳಿಪಿಳಿ ಕಣ್ಣುಬಿಡುತ್ತಿದ್ದ ಮಗುವಿನ ಮುಖ ನೋಡ್ತಾ ಇದ್ದೆ. ಅವಳು ಕೂರಿಸಿಯಾದ ಮೇಲೆ ಮಗುವನ್ನು ನಾನು ಹಿಡಿದುಕೊಂಡು ಕೂತೆ.

ಸ್ವಲ್ಪ ದೂರ ಹೋದನಂತರ ಆಕೆ ಮಗುವನ್ನು ನನ್ನ ಮಡಿಲಿನಿಂದ ತೆಗೆದುಕೊಂಡು ಬಸ್ ಇಳಿದಳು. ಅದ್ಯಾಕೋ ಅವಳು ಸ್ವಲ್ಪ ಜಾಸ್ತಿಯೇ ನನ್ನ ಮಡಿಲು ತಡಕಿದಳೇನೋ ಅಂತನಿಸಿದರೂ ಅದೇಕೋ ಆಕಡೆ ಗಮನ ಕೊಡಲಿಲ್ಲ.

ನಂತರ ಜಯನಗರದಲ್ಲಿ ಬಸ್ಸಿಂದ ಇಳಿಯುವಾಗ ಪರ್ಸ್ ಝಿಪ್ ತೆರೆದಿದ್ದು ಗಮನಕ್ಕೆ ಬಂತು. ಆಗಲೂ ನನಗೇನೂ ಅನಿಸಲಿಲ್ಲ. ಝಿಪ್ ಹಾಕಿಕೊಂಡು ಆಟೋ ಹಿಡಿದು, ವಿದ್ಯಾಪೀಠ ಸರ್ಕಲ್ಲಿಗೆ ಹೋದೆ. ಅಲ್ಲಿ ಫ್ರೆಂಡ್ ಮನೆಯ ಹತ್ತಿರ ಇಳಿದು ದುಡ್ಡಿಗೆಂದು ಪರ್ಸ್ ತಡಕಾಡಿದರೆ- ಬ್ಯಾಂಕಿಗೆ ಹಾಕಬೇಕೆಂದು ಬ್ಯಾಗಲ್ಲಿಟ್ಟುಕೊಂಡಿದ್ದ ಉಳಿತಾಯದ 9,500 ರೂಪಾಯಿ ಇದ್ದ ಕಟ್ಟು ಕಾಣೆ... ಕಳ್ಳಿ ಮೊಬೈಲ್ ಉಳಿಸಿಹೋಗಿದ್ದಳು. ಗೆಳತಿಯ ಮನೆ ಅಲ್ಲೇ ಇದ್ದ ಕಾರಣ ಆಟೋ ಚಾರ್ಜ್ ಕೊಟ್ಟು ಬಚಾವಾದೆ. (ಪೊಲೀಸ್ ಹತ್ತಿರ ದೂರು ಕೊಡಲಿಕ್ಕೆ ಹೋಗಿದ್ದೆ, ಆಕಥೆ ಇನ್ನೊಮ್ಮೆ ಹೇಳ್ತೀನಿ)

--------------------------------

ವರ್ಷದ ಹಿಂದಿನ ಕಥೆ. ಒಂದು ಮಧ್ಯಾಹ್ನ. ಐಸಿಐಸಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಬಂತು. ಏನೆಂದು ಕೇಳಿದರೆ, "ನೀವು ನಿನ್ನೆ ಮಾಡಿದ ಖರೀದಿಯನ್ನು ಇಎಂಐ ಮೂಲಕ ಕಟ್ಟಬಹುದು, ತಿಳಿಸಲಿಕ್ಕೆ ಕರೆ ಮಾಡಿರುವೆವು" ಎಂದರು. ಆ 'ನಿನ್ನೆ' ನಾನೆಲ್ಲೂ ಕ್ರೆಡಿಟ್ ಕಾರ್ಡ್ ಉಜ್ಜಿರಲಿಲ್ಲವಾದ್ದರಿಂದ ಇವರು ಯಾವುದರ ಬಗ್ಗೆ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ. ಕೇಳಿದರೆ ಹೇಳಿದರು, ನಾನು 37,000+ ಮೌಲ್ಯದ ವಿಮಾನದ ಟಿಕೆಟ್-ಗಳು ಕ್ರೆಡಿಟ್ ಕಾರ್ಡ್ ಮೂಲಕ ಹಿಂದಿನ ದಿನ ಖರೀದಿಸಿದ್ದೆನಂತೆ.

ಕೂಡಲೇ ಎಚ್ಚತ್ತ ನಾನು, ನಾನು ಖರೀದಿಸಿಯೇ ಇಲ್ಲವೆಂದು ಹೇಳಿದೆ. ಸ್ವಲ್ಪ ವಿಚಾರಣೆ ನಡೆಸಿ ನಾನು ಆಸಮಯದಲ್ಲಿ ಬೇರೇನೋ ಮಾಡುತ್ತಿದ್ದೆ, ಮತ್ತು ಕ್ರೆಡಿಟ್ ಕಾರ್ಡ್ ನನ್ನ ಹತ್ತಿರವೇ ಇತ್ತು, ಬೇರೆಲ್ಲೂ ಹೋಗಿರಲಿಲ್ಲ ಎಂಬ ಉತ್ತರ ಪಡೆದ ನಂತರ, ಆಕೆ ನನಗೆ ಕೂಡಲೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಡಿವಿಜನ್ನಿಗೆ ಟ್ರಾನ್ಸಾಕ್ಷನ್ ಡಿಸ್ಪ್ಯೂಟ್ ಹಾಕಲು ಹೇಳಿದಳು. ಕೊನೆಗೆ ಅದೇನೇನು ಮಾಡಬೇಕೋ ಎಲ್ಲಾ ಮಾಡಿ, ಬ್ಯಾಂಕಿಗೆ ನಾನು ಮಾಡಿದ ಖರೀದಿಯಲ್ಲವೆಂಬುದನ್ನು ತಿಳಿಯಪಡಿಸಿದೆ. ಅವರು ಒಪ್ಪಿಕೊಂಡು ನನ್ನ ಬಿಲ್-ನಿಂದ ತಾತ್ಕಾಲಿಕವಾಗಿ ಅದನ್ನು ತೆಗೆಯುತ್ತೇವೆಂದರು. ಒಂದು ವೇಳೆ ತಮ್ಮ ತನಿಖೆಯಲ್ಲಿ ನಾನೇ ಖರೀದಿಸಿದ್ದೆಂದು ಪ್ರೂವ್ ಆದರೆ ಮಾತ್ರ ಅದನ್ನು ನಾನೇ ಕಟ್ಟಬೇಕಾಗುತ್ತದೆಂದು ಎಚ್ಚರಿಸಿದರು. ನಾನು ಖರೀದಿಯೇ ಮಾಡಿಲ್ಲವಾದ ಕಾರಣ ಅವರು ಸಾಧಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ನಾನು ಭರವಸೆ ನೀಡಿದೆ.

ಕೆಲ ದಿನ ಬಿಟ್ಟು ಕ್ರೆಡಿಟ್ ಕಾರ್ಡ್ ಬಿಲ್ ಬಂತು. ಅದರಲ್ಲಿ ನಾನು ಕಟ್ಟಬೇಕಿರುವ ದುಡ್ಡು ಸೊನ್ನೆ ರೂಪಾಯಿಯಿತ್ತು, ನನಗೆ ದುಡ್ಡು ಬರಬೇಕಿತ್ತು. ಏನೆಂದು ಚೆಕ್ ಮಾಡಿದರೆ, ವಿಮಾನ ಟಿಕೆಟ್ ಖರೀದಿಸಿದಾಗ ಅದರಲ್ಲಿ 5% cash-back offer ಇದ್ದುದರಿಂದ 1800 ರೂಪಾಯಿಯಷ್ಟು ನನ್ನ ಅಕೌಂಟಿಗೆ ವಾಪಸ್ ಬಂದು, ನಾ ಕಟ್ಟಬೇಕಿರುವ 1700+ರಷ್ಟು ದುಡ್ಡು ಮಾಫಿಯಾಗಿತ್ತು..!

--------------------------------

ಇವತ್ತು ಶಿವಾಜಿನಗರದಲ್ಲಿ ಬಸ್ಸಿಗೆ ಕಾದುನಿಂತಿದ್ದೆ. ಬಸ್ ಬಂತು, ಸಹಜವಾಗಿಯೇ ರಶ್ ಇತ್ತು. ನೂಕುನುಗ್ಗಲಿನಲ್ಲಿ ಬಸ್ಸಿಗೆ ಹತ್ತುವಾಗ ನನ್ನ ಹಿಂದಿದ್ದವಳ ಕೈ ನನ್ನ ಹ್ಯಾಂಡ್ ಬ್ಯಾಗಿನ ಬದಿಯಲ್ಲಿ ಝಿಪ್ ತೆರೆಯಲು ಯತ್ನಿಸುತ್ತಿದ್ದುದು ಅನುಭವಕ್ಕೆ ಬಂತು. ಮೆಲ್ಲಗೆ ನೋಡಿ ವಿಷಯ ಹೌದೆಂದು ಕನ್-ಫರ್ಮ್ ಮಾಡಿಕೊಂಡೆ. ಬ್ಯಾಗ್ ಹಾಕಿಕೊಂಡಿದ್ದ ಕೈಯಿಂದ ಆಕೆಯ ಕೈಹಿಡಿದೆ. ಬಿಡಿಸಿಕೊಳ್ಳಲು ಯತ್ನಿಸಿದಳು. ನಾ ಬಿಡಲಿಲ್ಲ. ಹಾಗೇ ಹಿಂತಿರುಗಿ ನೋಡಿ "ಏನ್ರೀ ಮಾಡ್ತಿದೀರಾ, ಮರ್ಯಾದಸ್ತರ ಥರ ಕಾಣ್ತೀರಾ, ಮಾಡೋದು ಇಂಥಾ ಕಚಡಾ ಕೆಲಸಾನಾ" ಅಂತ ರೋಪ್ ಹಾಕಿದೆ.

ಆಕೆ ತಕ್ಷಣ ಕೈಬಿಡಿಸಿಕೊಂಡಳು, "ನಾನೇನು ಮಾಡಿದೀನಿ, ನನ್ನ ಪಾಡಿಗೆ ಬಸ್ಸಿಗೆ ಹತ್ತುತಾ ಇದ್ದೀನಿ" ಅಂದಳು. ಬಸ್ಸಿಗೆ ಹತ್ತೋರು ನನ್ "ಬ್ಯಾಗಿಗೆ ಯಾಕ್ ಕೈಹಾಕ್ತಿದೀರಾ" ಅಂದೆ. "ಹಿಡ್ಕೊಳ್ಳೋಕೆ ಏನೂ ಸಿಕ್ಕಿಲ್ಲ, ಹಾಗಾಗಿ ಬ್ಯಾಗ್ ಹಿಡಿದೆ" ಎಂದಳು. ಉಳಿದವರು ನಮ್ಮ ಜಗಳ ನೋಡುತ್ತಿದ್ದರು. ಆದರೆ ಆಕೆ ಕದಿಯಲು ಹೊರಟವಳೆಂದು ಸಾಧಿಸಲು ನನ್ನಲ್ಲೇನೂ ಇರಲಿಲ್ಲವಾದ ಕಾರಣ ಕೊನೆಗೆ ನಾನೇ ಸುಮ್ಮನಾದೆ. ಆಕೆ ತನ್ನನ್ನು ಕಳ್ಳಿಯೆಂದ ನನಗೆ ಹಿಡಿಶಾಪ ಹಾಕುತ್ತಿದ್ದಳು.

---------------------------------

ಕಳ್ಳರು ಬೇರೆ ಬೇರೆ ರೀತಿಯಲ್ಲಿರುತ್ತಾರೆ. ಕೆಲವರಿಗೆ ದೋಚುವುದು ಬದುಕಲಿಕ್ಕಿರುವ ಅನಿವಾರ್ಯತೆ. ಇನ್ನು ಕೆಲವರಿಗೆ ಕದಿಯುವುದು ಚಟ. ಕೆಲವರು ದೋಚಿದ್ದು ಗೊತ್ತೇ ಆಗುವುದಿಲ್ಲ - ತುಂಬಾ ಸೊಫಿಸ್ಟಿಕೇಟೆಡ್ ಆಗಿ ಕೃತ್ಯವನ್ನು ಗೈದಿರುತ್ತಾರೆ, ಮತ್ತು ಅದಕ್ಕೇನಾದರೂ ಹೆಸರು ಕೂಡ ಇಟ್ಟಿರುತ್ತಾರೆ. ಕದ್ದಿದ್ದನ್ನು ಅಥವಾ ದೋಚಿದ್ದನ್ನು ಒಪ್ಪಿಕೊಳ್ಳುವ ಕಳ್ಳರು ತುಂಬಾ ಕಡಿಮೆ. ಕದಿಸಿಕೊಳ್ಳುವುದು, ಕಳೆದುಕೊಳ್ಳುವುದು ನನಗೆ ಅಭ್ಯಾಸವಾಗಿಹೋಗಿದೆ.

ಹಾಗೆಂದು ಬದುಕಲ್ಲಿ ಕಳೆದುಕೊಳ್ಳಲು ಬೇಜಾರಿರಲಿಲ್ಲ ನನಗೆ... ಬದುಕೆಂದರೆ ಕಳೆಯುವ-ಕೂಡುವ ಲೆಕ್ಕಾಚಾರ ಎಂಬ ಮಾತು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದವಳು ನಾನು.

ಆದರೆ, ಇತ್ತೀಚೆಗೆ ಮಾತ್ರ, ನಿಜ, ಬದುಕೆಂದರೆ ಕೂಡುವುದು - ಕಳೆಯುವುದು ಬಿಟ್ರೆ ಇನ್ನೇನೂ ಇಲ್ಲ ಅಂತ ಅನಿಸ್ತಿದೆ. ಬರೀ ಕಳೆದುಕೊಳ್ಳುವುದರಿಂದ ಏನು ಸಾಧಿಸ್ತೀನಿ, ಬದುಕಿಡೀ ಇದೇ ಆದರೆ, ಪಡೆದುಕೊಳ್ಳುವುದು ಯಾವಾಗ ಅಂತ ಅನಿಸ್ತಿದೆ. ಏನು ಪಡೆದೆವೋ ಅದು ಮಾತ್ರ ಕೊನೆಗೆ ಬದುಕ ಬುತ್ತಿಯಲ್ಲುಳಿಯುತ್ತದೆ, ನಮ್ಮನ್ನು ಅಳೆಯುವವರೂ ಅದರ ಮೂಲಕವೇ ಅಳೆಯುತ್ತಾರೆ... ಕಳೆದುಕೊಂಡಿದ್ದಕ್ಕೆ ಕಣ್ಣೀರಿಡುವುದು ಉಪಯೋಗವಿಲ್ಲ, ಪಡೆಯಲಿಕ್ಕೆ ಪ್ಲಾನ್ ಮಾಡಬೇಕು ಅಂತನಿಸುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ, ಮನುಷ್ಯ ಮೂಲತಹ ತುಂಬಾ ಸ್ವಾರ್ಥಿ, ಸ್ವಾರ್ಥ ಬಿಟ್ಟು ಬದುಕುವುದು ಅಪರೂಪದ ಕೆಲಸ, ಅದು ಮಾಡಿ ನಾನ್ಯಾಕೆ ಬುದ್ಧನ ಶ್ರೇಣಿಗೇರಬೇಕು, ಅದರಿಂದೇನಾಗುತ್ತದೆ - ಅಂತಲೂ ಅನಿಸ್ತಿದೆ. ನಮ್ಮ ಆತ್ಮದ ಒಳಗಿರುವ ಅಹಂ ಯಾವಾಗಲೂ ಲೆಕ್ಕಾಚಾರ ಹಾಕುತ್ತಿರುತ್ತದೆ - ಅದಕ್ಕೆ ಸ್ವಾರ್ಥದಿಂದಲೇ ತೃಪ್ತಿ - ಅಲ್ವಾ...?

Monday, May 18, 2009

ಇದಪ್ಪಾ ಗೂಳಿಕುಣಿತ...!

ಈಬಾರಿ ಕೂಡ ಚೌಚೌ ಗವರ್ಮೆಂಟೇ ಬರುತ್ತೆ ಸೆಂಟರಲ್ಲಿ ಅಂತ ಎಲ್ಲಾ ಎಕ್ಸಿಟ್ ಪೋಲುಗಳೂ ಹೇಳುತ್ತಾ ಇದ್ದ ಹಾಗೆ, ಮಾರ್ಕೆಟ್ ಸ್ವಲ್ಪ ಏರಿದ ಸಮಯ ನೋಡಿ ನಾನು ಕೈಯಲ್ಲಿದ್ದ ಲಾಭದ ಸ್ಕ್ರಿಪ್ ಎಲ್ಲಾ ಮಾರಿಬಿಟ್ಟೆ. ನಾನು ಮಾರಿದ್ದು ಮಾತ್ರವಲ್ಲ, ನನ್ನಜತೆ ಆಗಾಗ ಡಿಸ್ಕಸ್ ಮಾಡುವ ಗೌಡ್ರಿಗೆ ಕೂಡ ನಾನು ಮಾಡಿದ್ದನ್ನು ಹೇಳಿದೆ, ಅವರು ಕೂಡ ಆಗಲೇ ಕೈಯಲ್ಲಿದ್ದುದೆಲ್ಲ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದರು. ಚೌಚೌ ಗವರ್ಮೆಂಟು ಬಂದ ಕೂಡಲೇ ಮಾರ್ಕೆಟ್ಟು ಹೇಗೂ ಬೀಳುತ್ತದಲ್ಲ, ಆಗ ಕಡಿಮೆಗೆ ಸಿಗುವ ಒಳ್ಳೆ ಕಂಪೆನಿ ಶೇರುಗಳನ್ನು ಕೊಳ್ಳಬೇಕೆಂಬುದು ನಮ್ಮ ಪ್ಲಾನಾಗಿತ್ತು.

ಆದರೇನು ಮಾಡಲಿ, 16ನೇ ತಾರೀಖು ಶನಿವಾರ ಫಲಿತಾಂಶ ಬರುತ್ತಾ ಬರುತ್ತಾ ಕಾಂಗ್ರೆಸ್ ಸೀಟುಗಳು 180 ದಾಟುತ್ತಿದ್ದ ಹಾಗೆ ನನಗೆ ಚಳಿ ಶುರುವಾಯಿತು... ಮಾರ್ಕೆಟ್ ಮೇಲೇರಲಿರುವುದರ ಬಗ್ಗೆ ಖುಷಿಯ ಬದಲು ದು:ಖವಾಯಿತು. ಛೇ, ಅನ್ಯಾಯವಾಗಿ ರಿಲಯನ್ಸ್ ಮತ್ತು ಐಸಿಐಸಿಐ ತುಂಬಾ ಕಡಿಮೆ ಲಾಭಕ್ಕೆ ಮಾರಿಬಿಟ್ಟೆನಲ್ಲಾ ಅಂತ ಪಶ್ಚಾತ್ತಾಪವಾಗತೊಡಗಿತು... ಬುದ್ಧ ಹೇಳಿದ ಆಸೆಯೇ ದು:ಖಕ್ಕೆ ಮೂಲ ಎಂಬ ಮಾತು ನಂಗೆ ಆದಿನ ತನ್ನ ವಿವಿಧ ಬಣ್ಣಗಳಲ್ಲಿ ಚೆನ್ನಾಗಿ ಅರ್ಥವಾಗತೊಡಗಿತು. ಒಂದು ಕಡೆ ಸ್ಥಿರ ಸರಕಾರ ಬರುವ ಸೂಚನೆಗೆ ಖುಷಿಯಾದರೆ, ಇನ್ನೊಂದು ಕಡೆ ಛೇ, ಲೆಕ್ಕಾಚಾರ ತಪ್ಪಿತಲ್ಲಾ ಅಂತ ವಿಪರೀತ ದು:ಖ... ಮನಸ್ಸಿನಲ್ಲೇ ಶೋಕಾಚರಣೆ ಮಾಡಿದೆ. ಪಾಪ, ಗೌಡರದೂ ಅದೇ ಪರಿಸ್ಥಿತಿಯಾಗಿತ್ತೇನೋ, ಸಮಾನದು:ಖಿಗಳಾಗಿದ್ದರೂ ನಾವಿಬ್ಬರೂ ಆದಿನ ಮಾತಾಡಿಕೊಳ್ಳಲಿಲ್ಲ.

ಹೂಂ, ಇರಲಿ, ಹೇಗೂ ಸೋಮವಾರ ಮಾರ್ಕೆಟ್ ಮೇಲೇರುವುದೇ ಆದರೆ, ಇರುವ ಚೂರುಪಾರನ್ನು ಬೇಗನೇ ಮಾರಿ ಹೊಸದು ತೆಗೆದುಕೊಂಡುಬಿಡುವುದು, ಮತ್ತೆ ಹೊಸ ಸರಕಾರದ ಬಜೆಟ್ ಬಂದಾಗ ಹೇಗೂ ಮತ್ತೊಂದು ಏರಿಕೆ ಇದ್ದೇ ಇರುತ್ತದೆ, ಆಗ ಮತ್ತೆ ಮಾರಿದರಾಯಿತು ಅಂತೆಲ್ಲ ಲೆಕ್ಕಹಾಕಿ ಆದಿತ್ಯವಾರವನ್ನು ಕಷ್ಟದಲ್ಲಿ ಕಳೆದಿದ್ದಾಯಿತು. ಎಲ್ಲಾ ಎಕ್ಸ್-ಪರ್ಟುಗಳೂ 500ರಿಂದ 1000 ಪಾಯಿಂಟು ಮೇಲೆ ಹೋಗಬಹುದು ಸೆನ್ಸೆಕ್ಸು ಅಂತಿದ್ರು. ಶೇಕಡಾ ಹತ್ತರಷ್ಟು ಲಾಭಕ್ಕೇನೂ ಮೋಸವಿಲ್ಲ ಅಂತ ಅಂದುಕೊಂಡು, ಸೋಮವಾರದ 9.50ರ ಶುಭಗಳಿಗೆ ಬರಲಿಕ್ಕೇ ಕಾದುಕೂತಿದ್ದೆ.


ಬಂದೇ ಬಂತು ಶುಭಸೋಮವಾರ... The Golden Monday! 9.00 ಆಗುತ್ತಿದ್ದಂತೇ CNBCTV18 ಹಾಕಿ ಉದಯನ್ ಮುಖರ್ಜಿ ಮತ್ತು ಮಿತಾಲಿ ಶೋ ನೋಡ್ತಾ ಕೂತಿದ್ದೆ. ಉದಯನ್ ಮತ್ತು ಮಿತಾಲಿ ಮಾರ್ಕೆಟ್ ಬಿದ್ದರೆ ಮುಖ ಜೋತುಹಾಕುವ Anchorಗಳು. ನೋಡುಗರ ಭಾವನೆಗಳು ಅವರಲ್ಲೂ reflect ಆಗುತ್ತಿರುತ್ತವೆ. ಅವರು ಮಾತಾಡುತ್ತಿದ್ದಂತೇ, ಮಾರುಕಟ್ಟೆ 10% ಮೇಲೆ ಹೋದರೆ 1 ಗಂಟೆ ಟ್ರೇಡಿಂಗ್ ಇರುವುದಿಲ್ಲ, 15% ಮೇಲೇರಿದರೆ 2 ಗಂಟೆ ಬಂದ್ ಇತ್ಯಾದಿ ಮಾಹಿತಿಗಳು ಬರ್ತಾ ಇತ್ತು.

ಆಯ್ತು, 9.50 ಆಗಿಯೇ ಹೋಯ್ತು... ಅಷ್ಟೆ. ಏನಾಗುತ್ತಿದೆ ಎಂದು ತಿಳಿಯುವುದರೊಳಗಾಗಿ ಸೆನ್ಸೆಕ್ಸ್ 1300 ಅಂಕ ಮೇಲೇರಿತು, ಕೂಡಲೇ ಟ್ರೇಡಿಂಗ್ ಬಂದ್! ಇಷ್ಟಾಗಲಿಕ್ಕೆ ಮಾರ್ಕೆಟ್ ಓಪನ್ ಆಗಿ 20 ಸೆಕೆಂಡ್ ಕೂಡ ತೆಗೆದುಕೊಳ್ಳಲಿಲ್ಲ.

ನಾನು ಇಂಗು ತಿಂದ ಮಂಗನಂತೆ ಏನಾಗುತ್ತಿದೆಯೆಂದೇ ಅರ್ಥವಾಗದೆ ಉದಯನ್ ಮತ್ತು ಮಿತಾಲಿ ಹೇಳುವುದನ್ನೇ ಕೇಳುತ್ತ ಕೂತೆ. ಒಂದು ಗಂಟೆಯ ನಂತರ ಮತ್ತೆ ಮಾರುಕಟ್ಟೆ ತೆರೆಯಲಿದೆ ಎಂದು ಒಂದು ಸಾರಿ ಹೇಳಿದರೆ ಮತ್ತೆ ಎರಡು ಗಂಟೆಯ ನಂತರ ತೆರೆಯಲಿದೆ ಎಂದರು. ಇದಕ್ಕೆ ಕಾದು ಕೂತರೆ ಅಷ್ಟೇ ಗತಿ ಮತ್ತೆ ಅಂತ ನನಗೆ ನಾನೇ ಬುದ್ಧಿ ಹೇಳಿಕೊಂಡು ಆಫೀಸಿಗೆ ಹೊರಟೆ.

ಆಫೀಸಲ್ಲಿದ್ದರೂ, ಕೆಲಸ ಶುರುಮಾಡಿಕೊಂಡರೂ ಮಾರುಕಟ್ಟೆ ಏನಾಗುತ್ತದೋ ಎಂಬ ಕಪಿಕುತೂಹಲ ಸುಮ್ಮನೆ ಕೂರಲು ಬಿಡಲಿಲ್ಲ. ಸಮಾನಮನಸ್ಕರೆಲ್ಲ ಜತೆ ಸೇರಿ 11.45 ಆಗುತ್ತಿದ್ದಂತೆಯೇ ಐಬಿಎನ್ ಹಾಕಿ ಕೂತೆವು. 11.50 ಆಗುತ್ತಿದ್ದಂತೇ ಅಲ್ಲಿ CNBCTV18 ಪಂಚ್ ಆಯಿತು. ಈಗಲೂ ಅಷ್ಟೇ. ಮಾರುಕಟ್ಟೆ ಓಪನ್ ಆದಕೂಡಲೇ 700ರಷ್ಟು ಅಂಕಗಳು ಮೇಲೇರಿತು... And trading halted for the day!


Historical. Fantastic. Amazing. Wonderful. Unbelievable. Unpredictable. ಇನ್ನೇನು ಹೇಳಬಹುದೋ ಗೊತ್ತಿಲ್ಲ. ನಿಫ್ಟಿಯನ್ನು 650 ಅಂಕಗಳಿಂದ, ಸೆನ್ಸೆಕ್ಸನ್ನು 2110 ಅಂಕಗಳಿಂದ ಏರಿಸಿ, ಎಲ್ಲಾ ಮಿತಿಗಳನ್ನ ದಾಟಿ ನರ್ತಿಸಿತ್ತು ಗೂಳಿ! ಕರಡಿಗಳಿಗೆಲ್ಲ ಬೇಸರವಾಗಬೇಕಾದದ್ದೇ. ನಾನು 520ಕ್ಕೆ ಮಾರಿದ್ದ ಐಸಿಐಸಿಐ 745 ಮುಟ್ಟಿತ್ತು. ಇಷ್ಟರಲ್ಲಿ ನಾನು ಬುದ್ಧನ ಮಾತನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ನಂಗೆ ಬೇಸರವಾಗಲಿಲ್ಲ, ಬದಲಿಗೆ ಸಖತ್ ಖುಷಿಯಾಯಿತು.

Anchor ಮಿತಾಲಿ ನಗುನಗುತ್ತಾ ಏನೇನೋ ಹೇಳಿದಳು, ಒಂದು ಬಾರಿ ತನ್ನ anchoring seatನಿಂದ ಎದ್ದು ಮೈಮುರಿದಳು, ಅವಳು ಅಷ್ಟು ಖುಷಿಯಾಗಿದ್ದು ನಾ ಎಂದೂ ನೋಡಿರಲಿಲ್ಲ. ಇನ್ನು ನಂಗೆ ಇವತ್ತಿಗೆ anchoring ಮಾಡುವ ಕೆಲಸವಿಲ್ಲ, ಇವತ್ತೆಲ್ಲಾ ಆರಾಮ, ಇನ್ನು ಟ್ರೇಡಿಂಗ್ ಇಲ್ಲ, ಇನ್ನು ಕರಡಿ ಕುಣಿತವಿಲ್ಲ, ಮಾರ್ಕೆಟ್ ಏರುತ್ತಿದೆ, ನಾನಿನ್ನು ಮುಖ ಬಾಡಿಸಲಿಕ್ಕಿಲ್ಲ ಇತ್ಯಾದಿ ಅವಳು ಹೇಳಿದ ಹಾಗೆ ನನಗನಿಸಿತು. ಉದಯನ್ ಅಂತೂ ...! ತನ್ನ ಲ್ಯಾಪ್ಟಾಪ್ ಎತ್ತಿ ಅದಕ್ಕೊಂದು ಕಿಸ್ ಕೊಟ್ಟು, ಫುಲ್ ಖುಷ್ ಆಗಿ ಹಲ್ಲುಬಿಟ್ಟು... ಅವರ ಖುಷಿಯನ್ನು ವೈರಸ್ ಥರಾ ನಮ್ಮಮೇಲೆಲ್ಲ ಬಿಟ್ಟು... ಆಹಾ! ಖುಷಿಗೆ ಅವರಿಬ್ಬರು ಹಾರ್ಟ್ ಫೇಲ್ ಒಂದು ಮಾಡಿಕೊಂಡಿಲ್ಲ ನೋಡಿ.

ಸ್ಟಾಕ್ ಮಾರ್ಕೆಟ್ ಹಿಸ್ಟರಿಯಲ್ಲೇ ಇದು ಐತಿಹಾಸಿಕ ದಿನವಂತೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋ ಖುಷಿ. ಗೌಡ್ರೂ ನನ್ನದೇ ಪರಿಸ್ಥಿತಿಯಲ್ಲಿದ್ದರು, ಹಾಗೆ ಮುಕ್ತವಾಗಿ ನಾಕುಮಾತು ಸುಖದು:ಖ ಹಂಚಿಕೊಂಡು ಹಗುರಾದೆವು.

ಸದ್ಯದ ಆರ್ಥಿಕ ಹಿಂಜರಿತದಿಂದ ಮೇಲೇಳಲಿಕ್ಕಾಗಿ ಇಡೀ ಜಗತ್ತು ಭಾರತ ಮತ್ತು ಚೀನಾದೆಡೆಗೆ ನೋಡುತ್ತಿರುವ ಈ ಕಾಲಘಟ್ಟ... ಎಡ-ಬಲಗಳನ್ನು ಬಿಟ್ಟು ಮಧ್ಯವನ್ನು ಆಯ್ಕೆ ಮಾಡಿ ಸುಭದ್ರತೆಯ ತೀರ್ಪು ನೀಡಿದೆ ಭಾರತ. ನಾಳೆ ಮಾರುಕಟ್ಟೆ ಮತ್ತೂ ಮೇಲೇರಬಹುದೇನೋ... ಏನಾಗಬಹುದೆಂದು ಊಹಿಸುವುದು ಸದ್ಯಕ್ಕೆ ನನ್ನ ಮಿತಿಗೆ ಮೀರಿದ್ದು. ಆದರೆ ಇವತ್ತು ಮಾತ್ರ ನಾನು ಖುಷ್... :-)

Wednesday, May 13, 2009

ನೀರಿಲ್ಲ, ಮಾತಿಲ್ಲ

ಇಲ್ಲ
ಎತ್ತೆತ್ತ ನೋಡಿದರೂ ನೀರೇ ನೀರು... ಆದರೆ, ನನಗೆ ಕುಡಿಯಲಿಕ್ಕೆ ಗುಟುಕು ನೀರಿಲ್ಲ.
ಸುತ್ತಲಿರುವುದು ಬಲುದೊಡ್ಡದಾದ ಸಮುದ್ರ... ಉಪ್ಪುನೀರು, ಎಷ್ಟಿದ್ದರೇನು, ಬಾಯಾರಿಕೆ ಹಿಂಗೀತೇ?

---------

ಮಾತು
ಹೋಗಬೇಕಾದ ದಾರಿಯಿನ್ನೂ ಬಲುದೂರ ಬಾಕಿಯುಳಿದಿದೆ.  ಮಾತಾಡಿದ್ದು ಹೆಚ್ಚೇನಿಲ್ಲ, ಆದರೆ ಮನಸೆಲ್ಲ ಖಾಲಿಯಾಗಿದೆ, ಮಾತು ಮುಗಿದುಹೋಗಿದೆ. ಮೌನದಲ್ಲಿ ಮಾತಾಡುವಾತ ನೀನಲ್ಲದಿರುವಾಗ, ಇನ್ನುಳಿದ ದೂರ ಮೌನದಲ್ಲಿ ಹೇಗೆ ಕ್ರಮಿಸಲಿ?

Tuesday, May 5, 2009

ತಿಳಿವಿನತ್ತಲಿನ ಪಯಣಕ್ಕೊಂದು ವಿದಾಯ...

'ಜಾಗೃತಿ ನಿಲ್ಲುತ್ತಿದೆ...' ಹೀಗೊಂದು ಸಂದೇಶ ಇವತ್ತು ಬೆಳಬೆಳಿಗ್ಗೆ ಮೊಬೈಲಿನಲ್ಲಿ ಬಂದು ಕೂತಿದೆ. ನೋಡಿದ ಕೂಡಲೇ ಯಾಕೋ ತುಂಬಾ ಸಂಕಟ, ತಳಮಳ ಶುರುವಾಗಿದೆ.

++++++++++++

ಅಭಿವೃದ್ಧಿ ಪತ್ರಿಕೋದ್ಯಮ ಯಾವುದೇ ಮಾಧ್ಯಮದಲ್ಲಾದರೂ ಇರಲೇಬೇಕು, ಅದು ಮಾಧ್ಯಮದ ಜವಾಬ್ದಾರಿ ಅಂತಲೇ ಪತ್ರಿಕೋದ್ಯಮ ಕಲಿಯುತ್ತಿದ್ದ ದಿನಗಳಿಂದ ಇಂದಿನವರೆಗೂ ನಂಬಿರುವ ನನಗೆ, ಕಸ್ತೂರಿ ಸೇರಿದಾಗ ಸಿಕ್ಕಿದ್ದು ಜಾಗೃತಿ ಎನ್ನುವ ಹೆಸರು, ವಾರಕ್ಕೆ ಏಳು ದಿನವೂ ಬೆಳಗಿನ 10.30ಕ್ಕೆ ಹೊಂದುವ ರೀತಿಯಲ್ಲಿ ಅರ್ಧ ಗಂಟೆ ಕಾರ್ಯಕ್ರಮ ಕೊಡಬೇಕು ಎಂಬ ನಿಯಮ... ಜತೆಗೆ ಓಂಕಾರ್, ಅರುಣ್, ಅಂಬುಕೇಶ್ ಶೂಟಿಂಗ್ ಮಾಡಿದ್ದ ಒಂದಿಷ್ಟು ಸಂದರ್ಶನಗಳು ಕೂಡ.

ಜಾಗೃತಿ ಹೆಸರಿನಡಿಯಲ್ಲಿ ಏನಿರಬೇಕು, ಹೇಗಿರಬೇಕೆಂದು ಹಿರಿಯರ ಜತೆ ಚರ್ಚಿಸಿ, ಅದಕ್ಕೊಂದು ರೂಪ ಕೊಟ್ಟು, ಮೊದಲ ಎಪಿಸೋಡ್ ಸಿದ್ಧಪಡಿಸಿ, ಹಿರಿಯರಿಗೆ ತೋರಿಸಿ, ಅವರು ಸೂಚಿಸಿದ ಬದಲಾವಣೆಗಳು ಮಾಡಿಸಿ... ಅದಕ್ಕೊಂದು ಆಶಯ ಸಂಚಿಕೆ (ಕರ್ಟನ್-ರೈಸರ್) ಎಪಿಸೋಡ್ ಕೂಡ ಮಾಡಿದ್ದು, ಮಾಂಟೇಜ್ ಗ್ರಾಫಿಕ್ಸ್ ಹೀಗೇ ಬೇಕು ಅಂತ ಹಠಹಿಡಿದು ಮತ್ತೆಮತ್ತೆ ಆದಿತ್ಯ ಕೈಲಿ ಮಾಡಿಸಿ ಕೊನೆಗೆ ಅಂತಿಮಗೊಳಿಸಿದ್ದು... ಮೊದಲ ಬಾರಿಗೆ ಕಾರ್ಯಕ್ರಮ ಪ್ರಸಾರವಾದಾಗ ಫೀಡ್-ಬ್ಯಾಕ್-ಗಾಗಿ ಒದ್ದಾಡಿದ್ದು... ಚೆನ್ನಾಗಿಲ್ಲ ಅಂತ ಕೆಲವರು ಅಂದಾಗ ಕುಗ್ಗಿದ್ದು, ಮತ್ತೆ ಚೆನ್ನಾಗಿ ಮಾಡಬೇಕು ಅಂತ ಹುರುಪು ತುಂಬಿಕೊಂಡು ಹೊರಟಿದ್ದು... ನಿನ್ನೆ-ಮೊನ್ನೆಯಷ್ಟೇ ಆದಂತಿದೆ.

This is a program where Content is the Hero ಅಂತ ಅಂದುಕೊಂಡರೂ ಇತರ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಡಿಮೆಯೇನಲ್ಲ... ಹಿನ್ನೆಲೆ ದನಿ ಹೀಗೇ ಬೇಕು ಅಂತ ಚೇತನಾ, ಹೇಮಲತಾ, ರೂಪಾಗೆ ಕಾಟ ಕೊಟ್ಟು ಬೋರ್ ಹೊಡಿಯೋಷ್ಟು ಸಲ ರೀಟೇಕ್ ತಗೊಂಡಿದ್ದು, ಸಪ್ನಾ ದನಿಯಲ್ಲಿರೋ ಅಭಿವ್ಯಕ್ತಿಗೆ ಮರುಳಾಗಿದ್ದು, ಎಲ್ಲಿ emotional ಆಗಿ ಅಥವಾ ಖಡಕ್ ಆಗಿ ಬೇಕೋ ಅಲ್ಲಿ ಅವಳದೇ ದನಿಗೆ ಕಾದು ಕೂತು ತಗೊಂಡಿದ್ದು... ನಂತರ ಹೋಗುತ್ತ ಹೋಗುತ್ತ ಸುಕನ್ಯಾ, ಪ್ರತೀಕ್, ವಿನುತಾ, ಕೃತ್ತಿಕಾ ಮುಂತಾದವರ ದನಿಯನ್ನೂ ಸೇರಿಸಿಕೊಂಡಿದ್ದು...

ಹಂಗೇ ಬೇಕು ಹಿಂಗೇ ಬೇಕು ಅಂತ ಕಿರಿಕಿರಿ ಮಾಡಿ, ಕ್ಯಾಮರಾಮನ್ನುಗಳಿಗೆಲ್ಲ ಏನಿದ್ರೂ ಸರಿ, ಜಾಗೃತಿ ಡ್ಯೂಟಿ ಮಾತ್ರ ಬೇಡಪ್ಪಾ ಅಂತ ಅನ್ಕೊಳೋ ಥರ ಮಾಡಿದ್ದು, ಅದರೂ ನಿರೀಕ್ಷಿತವಾದದ್ದು ಕೊಡಲಿಕ್ಕೆ ಅವರೆಲ್ಲ ಪ್ರಯತ್ನಿಸಿದ್ದು... ಕ್ಯಾಮರಾ ಹಿಡಿದು ಹೋದಾಗಲೆಲ್ಲ ಅಳಿಲು ಸಿಗುತ್ತಾ ಅಂತ ಹುಡುಕುವ ರಮೇಶ್ ಸರ್, ಕ್ಯಾಮರಾದಲ್ಲಿ ಮುಳುಗಿದ್ದಾಗ ಡಿಸ್ಟರ್ಬ್ ಮಾಡಿದರೆ ಹಿಡಿದು ಬಾರಿಸಲಿಕ್ಕೂ ಹಿಂಜರಿಯದ ಸುರೇಶ್... ಪೆರುಮಾಳ್, ರಾಜಶೇಖರ್, ತುಷಾರ್... ಬೆಳ್ಳಂಬೆಳಗಿನ ಏರುಬಿಸಿಲು ಮತ್ತು ಇಳಿಹೊತ್ತಿನ ಹಳದಿ ಬೆಳಕಿನ ಉತ್ತಮ ಶಾಟ್-ಗಳಿಗಾಗಿ ಕಾತರಿಸುತ್ತಿದ್ದ ನಾವುಗಳು...

ತಾಳ್ಮೆಯಿಂದ ಎಡಿಟಿಂಗ್ ಟೇಬಲ್ಲಿನಲ್ಲಿ ಕಾರ್ಯಕ್ರಮಕ್ಕೆ ಅಂತಿಮ ರೂಪ ಕೊಡುತ್ತಿದ್ದ ಶಿವು ಸರ್, ಬಾಲು ಸರ್... ಜಗಳಾಡುತ್ತಲೇ ಎಡಿಟಿಂಗ್ ಮಾಡಿಕೊಡುತ್ತಿದ್ದ ಕಿಶೋರ್... ಪ್ರೊಡಕ್ಷನ್-ನಲ್ಲಿ ಸಹಕಾರ ನೀಡಿದ ಗೌಡರು, ವಿಲಾಸ್, ಜಗದೀಶ್... ಎಪಿಸೋಡ್ ಪ್ರಿವ್ಯೂ ಮಾಡಿ ಕಾಲೆಳೆಯುತ್ತಲೇ ಫೀಡ್-ಬ್ಯಾಕ್ ನೀಡುತ್ತಿದ್ದ ಪ್ರಕಾಶ್ ಅಡಿಗ, ವಿಜಯರಾಘವನ್ ಸರ್... ಪಿಸಿಆರ್ ಸ್ಟಾಫ್-ನಿಂದ ಹಿಡಿದು ರಿಸೆಪ್ಶನ್, ಡ್ರೈವರ್ ವರೆಗೆ ಚಾನೆಲ್ ಒಳಗಡೆ ಕೂಡ ಇದ್ದಂತಹ ಅಸಂಖ್ಯ ಅಭಿಮಾನಿಗಳು.. ಕಾರ್ಯಕ್ರಮದ ಮೇಲೆ ಇವರಲ್ಲಿ ಪ್ರತಿಯೊಬ್ಬರೂ ಇಟ್ಟ ಅಭಿಮಾನ, ನೀಡುತ್ತಿದ್ದ ಅಮೂಲ್ಯ ಸಲಹೆಗಳು... ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನೋಡಿ ರೇಟಿಂಗ್ ಮೂಲಕ, ಸಂದೇಶಗಳ ಮೂಲಕ ಮೆಚ್ಚಿಕೊಂಡಿದ್ದೇವೆಂದು ಗೊತ್ತುಪಡಿಸುತ್ತಿದ್ದ ವೀಕ್ಷಕರು... ಮಾಹಿತಿ ಆಧರಿತವಾದ ಈ ಕಾರ್ಯಕ್ರಮವನ್ನು ಬೆಂಬಲಿಸಿ ಬೇಕಾಗಿರುವುದೆಲ್ಲ ಮಾಡಿಕೊಟ್ಟ ನಮ್ಮ ಚಾನೆಲ್..... ಪ್ರತಿಫಲವಾಗಿ ಮೊದಲಿಗೆ ಅಂಬೆಗಾಲಲ್ಲಿ ಆರಂಭಿಸಿದ ಪಯಣವನ್ನು ತಲೆಯೆತ್ತಿ ನಿಂತು ಮುಂದುವರಿಸಿದ ಜಾಗೃತಿ...

ಬೆಳಗಿನ ಹತ್ತು ಗಂಟೆ ಬೇಡ, ಯಾರೂ ಆಗ ಟೀವಿ ನೋಡಲ್ಲ, ಒಳ್ಳೇ ಟೈಮು ಕೊಡಿ ಎಂದು ಕೇಳಿಕೊಂಡಿದ್ದು, ಸಿಗದಿದ್ದಾಗ, ಬೆಳಗಿನ ಹತ್ತು ಗಂಟೆಗೆ ತಿಳಿವಿನತ್ತ ಪಯಣ ಎಂದು ಪ್ರೋಮೋ ಬಿಟ್ಟು, ಇದ್ದಿದ್ದರಲ್ಲಿಯೇ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಯತ್ನಿಸಿದ್ದು...

ಹೆದರಿಕೊಂಡೇ ಜಾಗೃತಿ ತಂಡ ಸೇರಿದ ಚೈತ್ರಾ ಪುಟ್ಟಿ, ಹಿಂಜರಿಯುತ್ತಲೇ ಸಂಶಯಗಳನ್ನು ಕೇಳುವ, ಬಗೆಹರಿಯದ ಹೊರತು ಸಮಾಧಾನ ಮಾಡಿಕೊಳ್ಳದ ಮಸೂದ್, ಸದಾ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರಬೇಕೆನ್ನುವ ಸುನಿಲ್, ಅದ್ಭುತ ಪ್ರದರ್ಶನ ಪ್ರತಿಭೆಯ ದಾಮು, ನಗುವಿನಲ್ಲಿಯೇ ಎಲ್ಲ ಮರೆಸುವ ವಿನುತಾ, ಅಭಿಪ್ರಾಯವ್ಯತ್ಯಾಸದಲ್ಲೂ ಆತ್ಮೀಯತೆ ಮೆರೆದ ಶೀಲಾ, ಯಾವುದಕ್ಕಾದರೂ ಹೊಂದಿಕೊಂಡು ಹೋಗುವ ನಿಧಿ... ಜಾಗೃತಿ ತಂಡವೆಂದರೆ ಒಂದು ಕುಟುಂಬ. ದಿನಾ ಸಂಜೆ ಕ್ಯಾಂಟೀನಿನಲ್ಲಿ ಹೋಗಿ ನಮ್ಮ ಗ್ಯಾಂಗ್ ಜತೆ ಕೂತು ಪಟ್ಟಾಂಗ, ಚರ್ಚೆ, ಮೀಟಿಂಗುಗಳು... ಜತೆಗೆ ಮೂರ್ತಿಯ ಸಮೋಸಾ, ಟೀ.. ಶೂಟಿಂಗ್ ಹೋಗಿ ಬಂದವರಿಂದ ಕಥೆ ಕೇಳೋದು, ಭಿಕ್ಷುಕರ ಮೇಲೆ ಎಪಿಸೋಡ್-ಗೆ ಅವರನ್ನ ಚಿತ್ರಿಸಲಿಕ್ಕೆ ಹೋಗಿದ್ದ ಸುನಿಲ್ ಮತ್ತು ಮಂಜು ಅವರ ಕೈಲಿ ಹೊಡೆಸಿಕೊಂಡು ಬಂದಾಗ ಕಳವಳ ಪಟ್ಟಿದ್ದು...

ಅರ್ಥಶಾಸ್ತ್ರದಿಂದ ಹಿಡಿದು ಚುನಾವಣೆಯವರೆಗೆ, ಅಡಿಗೆ, ಆರೋಗ್ಯದಿಂದ ಹಿಡಿದು ಮನೆಕಟ್ಟುವುದರ ವರೆಗೆ, ಸಿಇಟಿಯಿಂದ ಹಿಡಿದು ಪವಾಡದ ಹಿಂದಿನ ವಿಜ್ಞಾನದವರೆಗೆ ಸೂರ್ಯನಡಿಯ ಎಲ್ಲಾ ಟಾಪಿಕ್ಸೂ ಕೈಗೆತ್ತಿಕೊಂಡಿದ್ದು, ಕೆಲವು ಹಿಟ್, ಇನ್ನು ಕೆಲವು ಫ್ಲಾಪ್... ಇದರ ನಡುವೆ ಕಲಿತಿದ್ದು, ಕಲಿಸಿದ್ದು... ವಿವಿಧ ರೀತಿಯ ಪ್ರಯೋಗಗಳು... ಪವಾಡಗಳ ಅನಾವರಣಕ್ಕಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿ ಹುಲಿಕಲ್ ನಟರಾಜ್ ಅವರ ಸಹಕಾರದಲ್ಲಿ ಶೂಟಿಂಗ್ ಮುಗಿಸಿದ್ದು... ಎಂಥೆಂಥಾ ಬಾಬಾಗಳು ಮಾಡುವ ಪವಾಡಗಳನ್ನೆಲ್ಲಾ ಇವು ಇಷ್ಟೇ ಎಂದು ತೋರಿಸಿ, ನಮಗೆಲ್ಲಾ ಇಷ್ಟವಾಗುವ ಜತೆಗೆ ಜನಮನ ಕೂಡ ಗೆದ್ದ ಸರಣಿ... ವೈಜ್ಞಾನಿಕ ತಳಹದಿ, ತರ್ಕಬದ್ಧ ವಿವರಣೆ, ಸಮದೃಷ್ಟಿಯ ಪ್ರಸ್ತುತಿಯನ್ನು ಜಾಗೃತಿಯ ಯಾವುದೇ ಎಪಿಸೋಡಿನಲ್ಲೂ ಬಿಟ್ಟುಕೊಡದಿರಲು ಯತ್ನ... ಹೀಗೆ ತಿಳಿವಿನತ್ತಲಿನ ಪಯಣದಲ್ಲಿ ಸಾಗುತ್ತ ಸಾಗುತ್ತ 300 ಎಪಿಸೋಡ್ ಆಗಿದ್ದೇ ಗೊತ್ತಾಗಿರಲಿಲ್ಲ... 300ರ ಸಂಭ್ರಮಕ್ಕೆ ಒಂದು ರಾತ್ರಿ ಕೂತು ಖುದ್ದಾಗಿ ತಯಾರಿಸಿದ ಥ್ಯಾಂಕ್ಯೂ ಕಾರ್ಡ್...
++++++++++++

300ರ ನಂತರ ಜಾಗೃತಿಯಿಂದ ನಾ ದೂರವಾದೆ, ಕಾರ್ಯಕ್ರಮ ಅದರ ಪಾಡಿಗದು ನಡೆಯುತ್ತಿತ್ತು. ಬೇರೆ ಕೆಲಸಗಳೆಡೆಯಲ್ಲಿ ನನಗೆ ನೋಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಅಪಾರ ಅನುಭವದ ಬುತ್ತಿ ಕಟ್ಟಿಕೊಟ್ಟಿದ್ದ, ಅದಕ್ಕಾಗಿ ಕೆಲಸ ಮಾಡಿದವರೆಲ್ಲರ ಜಗತ್ತನ್ನು ಶ್ರೀಮಂತವಾಗಿಸಿದ್ದ ಜಾಗೃತಿ, ತನ್ನ ಪಯಣ ಮುಕ್ತಾಯಗೊಳಿಸುತ್ತಿದೆಯೆಂಬ ಸಂದೇಶ ಇದೀಗ ಬಂದಿದೆ...

ನಿಂತಿದ್ದು ಕಾರ್ಯಕ್ರಮ ಮಾತ್ರ, ಅದರ ಹಿಂದಿನ ತತ್ವಗಳಲ್ಲ, ನೀತಿಗಳೂ ಅಲ್ಲ. ಇಷ್ಟೊಂದು ವಿಶಾಲವಾದ ದೃಶ್ಯಮಾಧ್ಯಮದಲ್ಲಿ, ಅಸಂಖ್ಯ ಪ್ರತಿಭೆಗಳಿರುವ ಕನ್ನಡ ದೂರದರ್ಶನಲೋಕದಲ್ಲಿ ಮತ್ತೆ ಅಂತಹದ್ದು ಮೂಡಿಬರುವುದು ಖಂಡಿತ ಕಷ್ಟವಲ್ಲ. ಆದರೆ, ಜಾಗೃತಿ ಪಯಣ ನಿಲ್ಲಿಸುತ್ತಿದೆಯೆಂದು ತಿಳಿದ ಈ ಕ್ಷಣ ಮಾತ್ರ ನಿಜಕ್ಕೂ ಸಂಕಟವಾಗುತ್ತಿದೆ, ಕಣ್ಣಾಲಿ ತುಂಬಿಕೊಂಡಿದೆ.

++++++++++++

Wednesday, April 22, 2009

ಅವಳು, ಬಳ್ಳಿ ಮತ್ತು ನಾನು...

ಮೂರು ತಿಂಗಳ ಹಿಂದೊಂದು ದಿನ. ಹೊಸಮನೆಗೆ ಬಂದ ಸಂಭ್ರಮ. ಆಫೀಸಿಗೆ ರಜೆ ಹಾಕಿದ್ದೆ. ಪ್ಯಾಕಿಂಗ್ ಬಿಡಿಸುವುದು ಸಾಮಾನು ಹೊಂದಿಸುವುದು ಎಲ್ಲಾ ಮುಗಿದು ನಿರಾಳವಾಗಿತ್ತು. ಸಂಜೆ ಹೊತ್ತು ನಮ್ಮಲ್ಲಿದ್ದ ಒಂದೇ ಒಂದು ಚಟ್ಟಿಯಲ್ಲಿರುವ ಒಂದೇ ಒಂದು ಕರವೀರದ ಗಿಡಕ್ಕೆ ಒಂದಿಷ್ಟು ಕಿಚನ್ ಕಾಂಪೋಸ್ಟ್ ಗೊಬ್ಬರ ಹಾಕುತ್ತಿದ್ದೆ. ಆಗ ಕಂಡಿದ್ದು, ಮನೆಯ ಕಾಂಪೌಂಡ್ ಮೇಲೆ ಜೊಂಪೆಯಾಗಿ ಬೆಳೆದು ನಿಂತಿದ್ದ ಮಲ್ಲಿಗೆ ಗಿಡ. ಪುಟ್ಟ ಚಟ್ಟಿಯಲ್ಲಿ ಅದರ ಬೇರುಗಳು ಹಿಡಿಸಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು.
ಬೇರುಗಳ ನಡುವಲ್ಲಿ ಇನ್ನೂ ಏನೇನೋ ಪುಟ್ಟಪುಟ್ಟ ಗಿಡಗಳು. ಅದರಲ್ಲೊಂದು ಮೆಣಸಿನ ಗಿಡದ ಹಾಗಿತ್ತು. ನೋಡಿ ನಂಗೆ ಆಶ್ಚರ್ಯವಾಯ್ತು. ಅದನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ. ನನ್ನ ಕೈಲುಳಿದಿದ್ದ ಗೊಬ್ಬರದ ಪುಡಿಯನ್ನು ಅದಕ್ಕೂ ಸ್ವಲ್ಪ ಹಾಕಿ ಮುಗಿಸಿದೆ.
ಅಷ್ಟರಲ್ಲಿ ಆಕೆ ಕೈಯಲ್ಲೊಂದು ಪಾತ್ರೆ ಹಿಡಿದು ಬಂದು, ಗಿಡದ ಹತ್ತಿರ ನಿಂತಳು. ಕೈಯಲ್ಲಿದ್ದ ಪಾತ್ರೆಯಲ್ಲಿ, ತೊಳೆಯಲೆಂದು ನೀರಲ್ಲಿ ಹಾಕಿದ ಅಕ್ಕಿ. ಚೆನ್ನಾಗಿ ಅಕ್ಕಿ ತೊಳೆದು, ನೀರನ್ನು ಜಾಗ್ರತೆಯಾಗಿ ಗಿಡದ ಬುಡಕ್ಕೆ ಚೆಲ್ಲಿದಳು.
ಓಹ್, ಹಾಗಾದ್ರೆ ದಿನಾ ಈಕೆ ಅಕ್ಕಿ-ಬೇಳೆ ತೊಳೆದ ನೀರಲ್ಲೇ ಮಲ್ಲಿಗೆ ಗಿಡ ಬದುಕುತ್ತಿದೆ - ಎಂದು ಗೊತ್ತಾಯ್ತು. ಅದರ ಬುಡದಲ್ಲಿದ್ದ ಪುಟ್ಟಪುಟ್ಟ ಗಿಡಗಳೂ ಹೇಗೆ ಹುಟ್ಟಿರಬಹುದು ಅಂತ ಒಂದು ಐಡಿಯಾ ಬಂತು. ಇಂಥಾ ಐಡಿಯಾಗಳು ನಂಗೆ ಹೊಳೆಯಲೇ ಇಲ್ಲವಲ್ಲ ಅಂತನಿಸಿತು.
ಆಕೆ ನಮ್ಮನೆ ಹಿಂದಿನ ಮನೆಯಲ್ಲಿ ಬಾಡಿಗೆಗಿರುವವಳು. ನಂಗಿನ್ನೂ ಅವಳ ಪರಿಚಯವಾಗಿರಲಿಲ್ಲ. ನಾನು ಗೊಬ್ಬರ ಹಾಕಿದ್ದು ಗಮನಿಸಿದ ಆಕೆ ಅದೇನು, ಎಲ್ಲಿಂದ ಅಂತ ಕೇಳಿದಳು. ಹೇಳಿದೆ. ಕೇಳಿಸಿಕೊಂಡ ಆಕೆ ಹೀಗೂ ಮಾಡ್ಬಹುದು ಅಂತ ಗೊತ್ತಿರಲಿಲ್ಲ ಅಂತ ಖುಷಿಪಟ್ಟಳು. ನಮ್ಮ ಚಟ್ಟಿಯನ್ನು ಕೂಡ ಬಿಸಿಲಿಗೋಸ್ಕರ ಕಾಂಪೌಂಡ್ ಮೇಲೇರಿಸುವಂತೆ ಸಲಹೆ ಕೊಟ್ಟಳು. ನಾನು ಪಾಲಿಸಿದೆ.
ಹಾಗೇ ಮನೆಗೆ ಬೇಕಾದ ಕೊತ್ತಂಬ್ರಿ ಸೊಪ್ಪು ಅದರಲ್ಲೇ ಬೆಳೆಸಿಕೊಳ್ಳಬಹುದು, ಚಟ್ಟಿಯಲ್ಲಿ ನಾಲ್ಕು ಕಾಳು ಕೊತ್ತಂಬರಿ ಹಾಕಿ ಎಂದು ಸಲಹೆ ಕೊಟ್ಟಳು. ನಂಗೆ ಎಲ್ಲಿಲ್ಲದ ಉತ್ಸಾಹ ಬಂತು, ಇಷ್ಟೆಲ್ಲ ಮಾಡಬಹುದು, ಆದ್ರೂ ಇಷ್ಟು ದಿನ ಸುಮ್ನಿದ್ನಲ್ಲ, ಅಂತನಿಸಿತು. ಖುಷಿಯಿಂದಲೇ ನಾನದನ್ನು ಪಾಲಿಸಿದೆ. ಕೊತ್ತಂಬರಿ ಮಾತ್ರವಲ್ಲ, ಅಡಿಗೆ ಮನೆಯಲ್ಲಿ ಏನೇನು ಸಿಕ್ಕಿತೋ ಎಲ್ಲದರದ್ದೂ ನಾಲ್ಕು ನಾಲ್ಕು ಕಾಳು, ಜತೆಗೆ ಕಸದ ಬುಟ್ಟಿಗೆ ಬಿಸಾಡಲೆಂದು ಇಟ್ಟಿದ್ದ ಕಲ್ಲಂಗಡಿ ಹಣ್ಣಿನ ಬೀಜಗಳು, ಎಲ್ಲವನ್ನೂ ಹಾಕಿ, ಗೊಬ್ಬರದ ಜತೆಗೆ ಸೇರಿಸಿ ಕೆದಕಿದೆ. ಅಡಿಗೆಗೆಂದು ಕಟ್ ಮಾಡಿಟ್ಟಿದ್ದ ಪಾಲಕ್ ಸೊಪ್ಪಿನ ಬೇರನ್ನು ಅದರ ಮೇಲಿಂದ ಹಾಕಿ ಮುಚ್ಚಿ, ನೀರು ಹಾಕಿದೆ.
+++++++++++++++++++
ದಿನಾ ಬೆಳಿಗ್ಗೆ ಬೇಗ ಎದ್ದು ಮನೆಹೊರಗೆ ನೀರು ಹಾಕಿ ಗುಡಿಸುವಾಗ ಎರಡೂ ಗಿಡಗಳಿಗೆ ನೀರು ಹಾಕುತ್ತಿದ್ದೆ. ಆಕೆಯೂ ಅಕ್ಕಿ -ಬೇಳೆ ತೊಳೆದ ನೀರನ್ನು ಎರಡೂ ಚಟ್ಟಿಗಳಿಗೆ ಹಂಚುತ್ತಿದ್ದಳು. ಈ unsaid understanding ನಂಗೆ ಖುಷಿ ಕೊಟ್ಟಿತು. ಕೆಲ ದಿನಗಳ ನಂತರ ಚಟ್ಟಿಯಲ್ಲಿ ಎರಡು ಮೂರು ಥರದ ಮೊಳಕೆಗಳು ಕಾಣಿಸಿಕೊಂಡವು. ಅದು ಯಾವುದರದ್ದು ಎಂದು ನಂಗೆ ಗೊತ್ತಾಗಲಿಲ್ಲ.
ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ 'ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ, ಕಿತ್ತು ಬಿಸಾಕಿದ್ದೇನೆ, ಮನೆಮುಂದೆ ಸಾಸಿವೆ ಗಿಡ ಇರಬಾರದು' ಅಂದಳು.
ಸಾಸಿವೆ ಕಾಳು ಚಟ್ಟಿಗೆ ಸೇರಿಸಿದ್ದು ನಾನೇ ಆಗಿದ್ದರಿಂದ ಸುಮ್ಮನೆ ತಲೆಯಲ್ಲಾಡಿಸಿದೆ. ಆದರೆ ಇನ್ನೂ ಒಂದೆರಡು ಗಿಡಗಳು ಉಳಿದುಕೊಂಡಿತ್ತು. ಅದೇನು ಅಂತ ಕೇಳಿದೆ. ಒಂದು ಹೆಸರು ಕಾಳಿನ ಗಿಡವಿರಬೇಕು, ಇನ್ನೊಂದು ನಂಗೂ ಗೊತ್ತಾಗ್ತಿಲ್ಲ, ಕೊತ್ತಂಬರಿ ಮಾತ್ರ ಬಂದಿಲ್ಲ ಅಂದಳು. ಅದೇನಾದ್ರೂ ಇರಲಿ, ಅದಾಗಿ ಬೆಳೆದಿದ್ದು ಬೆಳೆಯಲಿ ಎಂದು ಸುಮ್ಮನಾದೆ.
+++++++++++++++++++
ನಂತರ ನನ್ನ ಶಿಫ್ಟ್ ಬದಲಾಯ್ತು, ರಾತ್ರಿ ಪಾಳಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಎಳೆಯುತ್ತಿರುತ್ತಿತ್ತು. ಬಿದ್ದುಕೊಂಡರೆ ಸಾಕೆನಿಸುತ್ತಿತ್ತು. ಸಂಜೆ ಎದ್ದನಂತರ ಮನೆಯಿಂದಲೇ ಕೆಲಸ ಆರಂಭವಾಗುತ್ತಿತ್ತು. ಈ ಬದಲಾದ ದಿನಚರಿಯಲ್ಲಿ ಗಿಡದ ಕುರಿತು ಗಮನವೇ ಹೊರಟುಹೋಯ್ತು. ದಿನಕ್ಕೆ ಐದು ನಿಮಿಷ ಹೊರಗೆ ಹೋಗಿ ಗಿಡಗಳು ಏನಾಯ್ತು ಅಂತ ನೋಡುವಷ್ಟು ಕೂಡಾ ಪುರುಸೊತ್ತಿಲ್ಲದಷ್ಟು ನಾನು 'ಬ್ಯುಸಿ' ಆಗಿಬಿಟ್ಟಿದ್ದೆ... busy for nothing ofcourse.
+++++++++++++++++++
ಮೊನ್ನೆ ಬೆಳಿಗ್ಗೆ ಮನೆಯ ಗೇಟ್ ತೆಗೆದು ಒಳನುಗ್ಗುತ್ತಿದ್ದಂತೆಯೇ ಕಣ್ಣು ಅದ್ಯಾಕೋ ಕಾಂಪೌಂಡ್ ಗೋಡೆ ಮೇಲೆ ಹರಿಯಿತು. ಬಳ್ಳಿಯಾಗಿ ಮೆಲ್ಲಮೆಲ್ಲಗೆ ಹಬ್ಬಲಾರಂಭಿಸಿದ್ದ ಗಿಡ ಕಂಡು ಆಶ್ಚರ್ಯವಾಯಿತು. ಅದರ ಪಕ್ಕದಲ್ಲಿದ್ದ ಮತ್ತೊಂದು ಗಿಡ ಹೆಸರಿನ ಗಿಡವೆಂದು ಗೊತ್ತಾಯಿತು, ಆದರೆ ಏನೇನೋ ಬೀಜಗಳನ್ನು ಹಾಕಿದ್ದೆನಾದ್ದರಿಂದ ಬಳ್ಳಿಯಾಗಿದ್ದು ಯಾವುದರ ಗಿಡವೆಂದು ಗೊತ್ತಾಗಲಿಲ್ಲ.
ಮೆಲ್ಲಮೆಲ್ಲಗೆ ಚಿಗುರೊಡೆದು ಹಬ್ಬುತ್ತಿದ್ದ ಬಳ್ಳಿ, ಇನ್ನು ತನ್ನನ್ನು ಹಾಗೇ ಬೇಕಾಬಿಟ್ಟಿ ಬಿಟ್ಟಲ್ಲಿ ಎಲ್ಲೆಲ್ಲಿಗೂ ಹಬ್ಬಿಯೇನು ಅಂತ ಮೌನದಲ್ಲೇ ವಾರ್ನಿಂಗ್ ಕೊಡುತ್ತಿತ್ತು. ಇದಕ್ಕೇನಾದ್ರೂ ಮಾಡಬೇಕು, ಏನಾದ್ರೂ ಸಪೋರ್ಟ್ ಕೊಟ್ಟು ಸರಿಯಾದ ರೀತಿ ಹಬ್ಬಲಿಕ್ಕೆ ಸಹಾಯ ಮಾಡಬೇಕು ಅಂದುಕೊಂಡು ಒಳಗೆ ಬಂದೆ. ಅಷ್ಟೆ. ಮತ್ತೆ busy for nothing. ಮರೆತೇ ಹೋಯಿತು.
+++++++++++++++++++
ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು... ಎದ್ದು ನೋಡುತ್ತೇನೆ, ಹೊರಗೆ ಜೋರು ಮಳೆ. ಒಳಗೂ ಮಳೆ.
ಬಾಗಿಲು ತೆರೆದು ಹೋಗಿ ಸುಮ್ಮನೆ ಮಳೆ ನೋಡುತ್ತ ನಿಂತೆ. ಹಾಗೇ ಬಳ್ಳಿಯ ಕಡೆಗೂ ಗಮನ ಹರಿಯಿತು. ಅದು ಮಲ್ಲಿಗೆ ಬಳ್ಳಿಗೆ ಸುತ್ತಿಕೊಳ್ಳಲಾರಂಭಿಸಿತ್ತು. ಮತ್ತೆ ಅದೇ ಯೋಚನೆ, ಇದು ಹೇಗೆಹೇಗೋ ಬೆಳೆದರೆ ಸುಮ್ಮನೇ ತೊಂದರೆ. ಜತೆಗೆ ಓನರ್ ಕೈಲಿ ಬೇರೆ ಬೈಸಿಕೊಳ್ಳಬೇಕು. ಏನ್ ಮಾಡಲಿ? ಕಾಂಪೌಂಡ್ ಮುಂದೆ ನೇರವಾಗಿ ರಸ್ತೆ. ಕಾಂಪೌಂಡ್ ಒಳಗಿರುವುದು ಹೋಗುವ-ಬರುವ ದಾರಿ. ಹಬ್ಬಿಸಿದರೆ ಮೇಲಕ್ಕೆ ಹಬ್ಬಿಸಬೇಕು, ಅದಕ್ಕೆ ಓನರ್ ಅನುಮತಿ ಬೇಕು.
ಆಕೆ ಕೂಡ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಳು. ಅವಳಿಗೂ ಅದೇ ಚಿಂತೆಯಿತ್ತು... ಮಲ್ಲಿಗೆ ಬಳ್ಳಿಗೆ ಹಬ್ಬಿದ್ದನ್ನು ಮೆಲ್ಲಗೆ ಬಿಡಿಸಿ ಕೆಳಗೆ ನೇತಾಡಬಿಟ್ಟಳು.. ಇದಕ್ಕೊಂದು ವ್ಯವಸ್ಥೆ ಆಗಬೇಕು ಎಂದಳು, ನನ್ನನ್ನುದ್ದೇಶಿಸಿ. ನಾನು ಸುಮ್ಮನೇ ನಕ್ಕು ತಲೆಯಲ್ಲಾಡಿಸಿದೆ.
ಮಳೆ ಜೋರಾಗಿ ಹನಿಯುತ್ತಿತ್ತು. ಬಳ್ಳಿ ಇದ್ಯಾವುದರ ಗಮನವಿಲ್ಲದೆ ರಾಚುತ್ತಿದ್ದ ಹನಿಗಳಿಗೆ ಮೈಯೊಡ್ಡಿ ಸುಖವಾಗಿ ನಗುತ್ತಿತ್ತು.