Monday, August 25, 2008

ಕೊನೆಗೂ ಅಣ್ಣಾವ್ರನ್ನು ಭೇಟಿಯಾದೆ...


ನಾನಾಗ ತುಂಬಾ ಚಿಕ್ಕವಳು, ಅದು ಸಿನಿಮಾ ಅಂದರೆ ನನಗೆ ಏನೇನೂ ಗೊತ್ತಿರದಿದ್ದ ಕಾಲ. ಥಿಯೇಟರುಗಳಿಗೆ ಹೋಗಿ ಸಿನಿಮಾ ನೋಡ್ತಿದ್ದಿದ್ದು ತುಂಬಾ ಅಪರೂಪ. ಅಜ್ಜನ ಮನೆಗೆ ಹೋದಾಗ ಒಂದು ಸಲ ಅಜ್ಜ ನಮ್ಮನ್ನು ಸಿನಿಮಾ ನೋಡಲು ಕರೆದುಕೊಂಡು ಹೋದರು. ಪುತ್ತೂರಿನ ಸಿನಿಮಾ ಥಿಯೇಟರ್. ಸಿಪಾಯಿ ರಾಮು ಅನ್ನುವ ಆ ಚಿತ್ರದಲ್ಲಿ ನಟ-ನಟಿಯರು ಯಾರು, ಚಿತ್ರದ ಕಥೆ ಏನು, ಯಾವುದೂ ಅರ್ಥ ಮಾಡಿಕೊಳ್ಳಲು ಗೊತ್ತಾಗದಿದ್ದ ಪ್ರಾಯ ನನ್ನದು...

ಸಿನಿಮಾ ಥಿಯೇಟರಿನೊಳಗೆ ಹೋಗಿ ಕೂತು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸ್ಕ್ರೀನಿನಲ್ಲಿ ಇಬ್ಬರು ಕತ್ತಿ ಹಿಡಿದುಕೊಂಡು ಜೋರಾಗಿ ಯುದ್ಧ ಮಾಡುತ್ತಿದ್ದಂತೆ ನೆನಪು. ಇನ್ನೇನೂ ನೆನಪಿಲ್ಲ, ಅವರು ಬಡಿದಾಡಿಕೊಳ್ಳುತ್ತಿದ್ದಾರೆ, ನಾವು ಹೋಗುವ ಇಲ್ಲಿಂದ ಅಂತ ಹಠಮಾಡಿದ್ದು ಬಿಟ್ಟರೆ... ಹೋಗಿ ಅರ್ಧವೇ ಗಂಟೆಯಲ್ಲಿ ರಚ್ಚೆಹಿಡಿದು, ಹಠ ಮಾಡಿ, ಸಿನಿಮಾ ಥಿಯೇಟರಿನಿಂದ ವಾಪಸ್ ಬಂದಿದ್ದು ಮಾತ್ರ ಗೊತ್ತು. ಪಾಪ, ನನ್ನಿಂದಾಗಿ ನಮ್ಮಮ್ಮ, ಅಜ್ಜನಿಗೆ ಕೂಡ ಸಿನಿಮಾ ಮಿಸ್ ಆಯಿತು. ಅದರಲ್ಲಿದ್ದ ನಟ ರಾಜ್ಕುಮಾರ್ ಅಂತ ಗೊತ್ತಾಗಿದ್ದು ಎಷ್ಟೋ ವರ್ಷಗಳ ನಂತರ. ಆದರೆ ಆ ಸಿನಿಮಾ ನಾನಿನ್ನೂ ನೋಡಲು ಸಾಧ್ಯವಾಗಿಲ್ಲ.

ನಾನಾಗ 6ನೇ ಕ್ಲಾಸೋ 7ನೇ ಕ್ಲಾಸೋ ಇರಬೇಕು. ಅತ್ತೆಮನೆಗೆ ಹೋದಾಗ ಅಲ್ಲಿದ್ದ ಸನಾದಿ ಅಪ್ಪಣ್ಣದ ಧ್ವನಿಮುದ್ರಿಕೆಯನ್ನು ಕೇಳುತ್ತಿದ್ದೆ. ಅದರಲ್ಲಿ ಅಪ್ಪಣ್ಣನ ಪಾತ್ರದ ದನಿಗೆ ನಾನು ಮರುಳಾಗಿ ಬಿಟ್ಟೆ. ಕೇಳುತ್ತಾ ಕೇಳುತ್ತಾ ಆ ದನಿ ತುಂಬಾ ಆತ್ಮೀಯವಾಗುತ್ತ ಹೋಯಿತು. ಅದರ ಡೈಲಾಗು ಡೈಲಾಗೂ ಮನಸ್ಸಲ್ಲಿ ಉಳಿಯುವಷ್ಟು ಸಲ ಕೇಳಿದ್ದೆ.


+++++++++

ನಾನು ಎಂಟನೇ ಕ್ಲಾಸಿರಬಹುದು. ಅದು ನಮ್ಮೂರಲ್ಲಿ ಟಿವಿ ಯುಗ ಇನ್ನೂ ಆರಂಭವಾಗುತ್ತಿದ್ದ ಕಾಲ. ನಮ್ಮ ಪಕ್ಕದ ಮನೆಯಲ್ಲೇ ಟಿವಿ ತಂದರು. ದೂರದರ್ಶನ ಮಾತ್ರ ಅದರಲ್ಲಿ ಕಾಣುತ್ತಿತ್ತು. ನನ್ನನ್ನು
ಸೇರಿದಂತೆ ಅಕ್ಕಪಕ್ಕದ ಮನೆಗಳ ಚಿಳ್ಳೆಪಿಳ್ಳೆಗಳಿಗೆಲ್ಲಾ ಟೀವಿ ನೋಡಲು ಅಲ್ಲಿ ಹೋಗುವ ಸಂಭ್ರಮ. ನಾನಂತೂ ಏನಿದ್ದರೂ ಇಲ್ಲದಿದ್ದರೂ ಶುಕ್ರವಾರ ಚಿತ್ರಮಂಜರಿ, ಭಾನುವಾರ ಚಲನಚಿತ್ರ - ಇವೆರಡನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಓದು, ಹೋಂವರ್ಕ್, ಕೊನೆಗೆ ಪರೀಕ್ಷೆಗೆ ಓದುವುದನ್ನೂ ಬಿಟ್ಟು ಶ್ರದ್ಧೆಯಿಂದ ಸಿನಿಮಾ ನೋಡಿದ ದಿನಗಳಿತ್ತು.

ಈ ಎಲ್ಲಾ ವ್ಯವಹಾರದಲ್ಲಿ ನನಗೆ ರಾಜ್ಕುಮಾರ ಮತ್ತಷ್ಟು ಆತ್ಮೀಯವಾಗಿದ್ದ. ರಾಜ್ಕುಮಾರ್ ಸಿನಿಮಾ ದೂರದರ್ಶನದಲ್ಲಿ ಹಾಕಿದರೆ ಸಾಕು, ಬೇರೆಲ್ಲವನ್ನೂ ಮಿಸ್ ಮಾಡ್ಕೊಂಡಾದರೂ ಅದನ್ನು ನೋಡಿಯೇ ನೋಡುತ್ತಿದ್ದೆ. ಅಪರೇಶನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿಐಡಿ 999, ನಾಂದಿ ಇತ್ಯಾದಿ ಚಿತ್ರಗಳಿಂದ ಶುರುವಾಗಿ, ದಾರಿ ತಪ್ಪಿದಮಗ, ಶ್ರಾವಣ ಬಂತು ವರೆಗೆ ದೂರದರ್ಶನ ಯಾವ್ಯಾವ ಚಿತ್ರಗಳನ್ನು ಹಾಕಿದ್ದರೋ ಅದೆಲ್ಲವನ್ನೂ ನೋಡಿದ ಸಾಧನೆ ನನ್ನದು. ರಾಜ್ಕುಮಾರನ ಜೇನುದನಿಯ ಜತೆಗೆ ಆ ಉದ್ದ ಮೂಗು ಕೂಡ ಆತ್ಮೀಯವೆನಿಸಿತು.

ಬರಬರುತ್ತಾ ನನ್ನ ರಾಜ್ಕುಮಾರ್ ಅಭಿಮಾನ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ಸಿನಿಮಾದಲ್ಲಿ ರಾಜ್ಕುಮಾರ್ ಅತ್ತುಬಿಟ್ಟರೆ ನಾನೂ ಅತ್ತುಬಿಡುತ್ತಿದ್ದೆ. ಆಗ ಚಾಲ್ತಿಯಲ್ಲಿದ್ದ ಚಲನಚಿತ್ರ ಪತ್ರಿಕೆಗಳಾದ ವಿಜಯಚಿತ್ರ, ರೂಪತಾರಾ ಇತ್ಯಾದಿಗಳನ್ನು ಸುರತ್ಕಲ್ಲಿನಲ್ಲಿದ್ದ ಅತ್ತೆ ಮನೆಗೆ ತರಿಸುತ್ತಿದ್ದರು. ನಾನು ಅಲ್ಲಿ ರಜೆಯಲ್ಲಿ ಹೋದಾಗೆಲ್ಲ ಹಳೆಯ ಪತ್ರಿಕೆಗಳೆಲ್ಲವನ್ನೂ ಅಲ್ಲಿಂದ ತಂದು ಭಕ್ತಿಯಿಂದ ಓದುತ್ತಿದ್ದೆ. ಆಮೇಲೆ ಅದರಲ್ಲಿರುತ್ತಿದ್ದ ಚಿತ್ರನಟ-ನಟಿಯರ ಚಿತ್ರಗಳನ್ನು ಕತ್ತರಿಸಿ ಆಲ್ಬಂ ಮಾಡುವ ಹುಚ್ಚು ಹತ್ತಿಕೊಂಡಿತು. ಇದರಲ್ಲಿಯೂ ರಾಜ್ಕುಮಾರ್-ಗೆ ಮಾತ್ರ ವಿಶೇಷ ಸ್ಥಾನ. ರಾಜಕುಮಾರ್ ಸಿನಿಮಾಗಳ ಪಟ್ಟಿಯೊಂದನ್ನು ರೆಡಿ ಮಾಡಿದ್ದೆ. ಅದರಲ್ಲಿ ಯಾರು ಸಂಗೀತ ನಿರ್ದೇಶಕರಿದ್ದರು, ಯಾರು ಹೀರೋಯಿನ್, ಯಾವ್ಯಾವ ಹಾಡಿತ್ತು, ಯರು ಹಾಡಿದ್ದರು ಇತ್ಯಾದಿಗಳೆಲ್ಲವನ್ನೂ ಪಟ್ಟಿ ಮಾಡಿ ಇಟ್ಟುಕೊಂಡಿದ್ದೆ. ರಾಜ್ಕುಮಾರ್ ಜೀವನದ ಬಗ್ಗೂ ಸ್ವಲ್ಪ ಹೆಚ್ಚು ತಿಳಿಯಿತು. ಏನು ತಿಳಿದರೂ ತಿಳಿಯದಿದ್ದರೂ ಅವರ ಮೇಲಿದ್ದ ಅಭಿಮಾನ ಮಾತ್ರ ಹೆಚ್ಚುತ್ತಲೇ ಹೋಯಿತು.


+++++++++


ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆ ನಮ್ಮನೆಯಲ್ಲಿ ನಿಜವಾಗಲಿಲ್ಲ. ನನ್ನ ಹಾಗೇ ಟೀವಿ ನೋಡುತ್ತಿದ್ದ ತಮ್ಮ ನಟ ಅಂಬರೀಷ್-ನ ಅಭಿಮಾನಿಯಾಗಿ ಬೆಳೆದ. ಅಂಬರೀಷ್ ನಟರಲ್ಲಿ ಶ್ರೇಷ್ಠಾತಿಶ್ರೇಷ್ಠನೆಂದು ತಮ್ಮ ವಾದಿಸಿದರೆ, ನಾನು ಇಲ್ಲ, ಅಂಬರೀಷೆಂದರೆ ಕೆಂಗಣ್ಣಿನ ಕುಡುಕ, ರಾಜ್ಕುಮಾರನೇ ಶ್ರೇಷ್ಠನೆಂದು ವಾದಿಸುತ್ತಿದ್ದೆ. ನನಗಿಂತ ಆರು ವರ್ಷ ಚಿಕ್ಕವನಾದರೂ ವಾದ ಮಾಡುವುದರಲ್ಲಿ ನನ್ನ ತಮ್ಮನನ್ನು ಬಿಟ್ಟರಿಲ್ಲ... ಈ ವಿಚಾರವಾಗಿ ನಾವಿಬ್ಬರು ಸೇರಿ ಮನೆಯನ್ನು ಕುರುಕ್ಷೇತ್ರ ಮಾಡಿದ್ದೂ ಇತ್ತು. ಕೊನೆಗೆ ಅಮ್ಮ ಬಂದು ನೀನ್ ದೊಡ್ಡೋಳು, ತಮ್ಮನ ಜತೆ ಜಗಳವಾಡಲು ನಾಚಿಕೆಯಾಗುವುದಿಲ್ವಾ ಅಂತ ನನಗೆ ಬಯ್ಯುವುದರೊಡನೆ ಪರ್ಯವಸಾನವಾಗುತ್ತಿತ್ತು.

ಚಿಕ್ಕಂದಿನಲ್ಲಿ ನನಗೆ ಚಿತ್ರ ಬಿಡಿಸುವ ಗೀಳು ಕೂಡ ಇತ್ತು. ಆಗ ಅದ್ಯಾಕೋ ಗೊತ್ತಿಲ್ಲ, ಪದೇ ಪದೇ, ಸದಾ ಕಣ್ಣಲೀ ಪ್ರಣಯದಾ ಗೀತೆ ಹಾಡಿದೇ... ಹಾಡಿನ ಕಣ್ಣೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ... ಹಾಡು ನೆನಪಿಸಿಕೊಳ್ಳುತ್ತಿದ್ದೆ. ಅದರಲ್ಲಿ ಇಂಟ್ರ್-ಲ್ಯೂಡ್ ಆಗಿ ಬರುವ ಸಂಗೀತ ನನಗೆ ಇವತ್ತಿಗೂ ಇಷ್ಟ.

ಇದರ ಜತೆ ಅಂಟಿಕೊಂಡಿದ್ದು ರೇಡಿಯೋ ಕೇಳುವ ಚಾಳಿ. ರಾತ್ರಿ ರೇಡಿಯೋ ಹಾಕಿ, ಅದರಲ್ಲಿ 11 ಗಂಟೆಗೆ ಬರುತ್ತಿದ್ದ ಹಳೆ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಕೇಳದೆ ನಾನು ಮಲಗುತ್ತಲೇ ಇರಲಿಲ್ಲ. ಇತರೆಲ್ಲಾ ಹಾಡುಗಳ ಜತೆಗೆ ಅದರಲ್ಲಿ ಬರುವ ರಾಜ್ಕುಮಾರ್ ಸಿನಿಮಾದ ಹಾಡುಗಳನ್ನು ಕೂಡ ಭಕ್ತಿಯಿಂದ ಕೇಳುತ್ತಿದ್ದೆ. ಅದರ ಲಿರಿಕ್ಸ್ ನೆನಪಿಟ್ಟುಕೊಳ್ಳುತ್ತಿದ್ದೆ. ಹಾಡುಗಳಿಗೆ ರಾಜ್ಕುಮಾರ್-ದೇ ದನಿಯಿದ್ದರಂತೂ ಕೇಳುವುದೇ ಬೇಡ, ನನಗೆ ಫುಲ್ ಖುಷಿಯೋ ಖುಷಿ.

+++++++++

ಕಾಲ ಉರುಳಿತು. ನಾನು 10ನೇ ತರಗತಿ ಮುಗಿಸಿ ಕಾಲೇಜಿಗೆಂದು ದೂರದ ಉಜಿರೆಗೆ ಸೇರಿಕೊಂಡೆ. ಆಗ ಟೀವಿಯಲ್ಲಿ ಸಿನಿಮಾ ಬಿಟ್ಟು ಬೇರೆ ಕಾರ್ಯಕ್ರಮಗಳೂ ಕುತೂಹಲಕರವಾಗಿಬಲ್ಲವು ಅಂತ ಗೊತ್ತಾಯಿತು. ಪಿಯುಸಿ ಮತ್ತು ಡಿಗ್ರಿ ದಿನಗಳಲ್ಲಿ ನನ್ನ ಟೀವಿ ನೋಡುವಿಕೆ ಕ್ರಿಕೆಟ್ ಮ್ಯಾಚ್-ಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಎಂಎ ಮಾಡುವಾಗ ಸಿದ್ಧಾರ್ಥಕಾಕ್ ಮತ್ತು ರೇಣುಕಾ ಶಹಾಣೆ ನಡೆಸಿಕೊಡುತ್ತಿದ್ದ 'ಸುರಭಿ' ಕಾರ್ಯಕ್ರಮಕ್ಕೆ, ಹಾಗೂ ಒಂದು ಸೀರಿಯಲ್ ನೂರ್-ಜಹಾನ್-ಗೆ ಮೀಸಲಾಯಿತು. ಇವುಗಳ ನಡುವೆ, ಮತ್ತು ಓದಿನ ಸೀರಿಯಸ್-ನೆಸ್ ನಡುವೆ ನನ್ನ ಆರಾಧ್ಯದೇವತೆ ರಾಜ್ಕುಮಾರ ಮಸುಕಾಗಿ ಹೋದ. ನಾನು ಟೀವಿಯೇ ನೋಡದಿದ್ದ ಕಾಲವೂ ಇತ್ತು. ಇದೇ ರೀತಿ ನನ್ನ ಪೋಸ್ಟ್ ಗ್ರಾಜುವೇಶನ್ ಕಳೆಯುವ ತನಕವೂ ಮುಂದುವರಿಯಿತು.

ನಡುನಡುವೆ ರಜೆಯಲ್ಲಿ ಊರಿಗೆ ಹೋದಾಗ ಮಾತ್ರ ಹಳೆಯ ಚಾಳಿ ಬೆಂಬಿಡದೆ ಕಾಡುತ್ತಿತ್ತು, ರಾಜ್ಕುಮಾರ ಸಿನಿಮಾ ಇದ್ದರೆ ತಪ್ಪದೇ ನೋಡುತ್ತಿದ್ದೆ. ಹಾಡುಗಳನ್ನಂತೂ ತಪ್ಪದೇ ಕೇಳುತ್ತಿದ್ದೆ. ಪ್ರತಿ ಸಲವೂ ಆ ದನಿಗೆ, ಆ ನಟನಾಕೌಶಲ್ಯಕ್ಕೆ ಬೆರಗಾಗುತ್ತಿದ್ದೆ. ಅದು ಹೇಗೆ ಇಷ್ಟೆಲ್ಲ ಶ್ರೇಷ್ಠಗುಣಗಳು ಒಂದೇ ವ್ಯಕ್ತಿಯಲ್ಲಿರುವಂತೆ ಮಾಡಿದ ಆ ಸೃಷ್ಟಿಕರ್ತ ಅಂದುಕೊಳ್ಳುತ್ತಿದ್ದೆ.

+++++++++
ಪೋಸ್ಟ್ ಗ್ರಾಜುವೇಶನ್ ಮುಗಿದು, ಇಂಟರ್ನ್-ಶಿಪ್-ಗೋಸ್ಕರ ಬೆಂಗಳೂರಿಗೆ ಬಂದೆ. 2000ನೇ ಇಸವಿಯ ಮೇ ತಿಂಗಳ ಆ ಮುಂಜಾವು, ನಾನಿನ್ನೂ ಮರೆತಿಲ್ಲ. ಮೊದಲ ಬಾರಿ ನಾನು ಬೆಂಗಳೂರಿಗೆ ಬರುವ ಉತ್ಸಾಹಕ್ಕೆ ಹೊರಗೆ ಬೆಳಕು ಮೂಡುವ ಮೊದಲೇ ಬಸ್ಸಿನಲ್ಲಿ ಎದ್ದು ಕುಳಿತು ಚನ್ನಪಟ್ನ ದಾಟಿ ಬೆಂಗಳೂರಿನತ್ತ ಬರುವ ದಾರಿಯಲ್ಲಿ ಮುಂಜಾವಿನ ಸೊಬಗನ್ನು ಸವಿಯುತ್ತಿದ್ದೆ. ಹಾಗೇ ಬೆಂಗಳೂರಿನಲ್ಲಿ ನಾನಿರುವ ಎರಡು ತಿಂಗಳಲ್ಲಿ ಮಾಡಬೇಕಿರುವ ಕಾರ್ಯಗಳ ಬಗ್ಗೆ ಲಿಸ್ಟ್ ಹಾಕಿಕೊಳ್ಳುತ್ತಿದ್ದೆ. ಅದರಲ್ಲಿ ರಾಜ್ಕುಮಾರ್ ಭೇಟಿಯೂ ಒಂದು.

ಈ ಸಮಯಕ್ಕೆ ಹುಚ್ಚು ಅಭಿಮಾನವೆ
ಲ್ಲ ಕೊಚ್ಚಿ ಹೋಗಿ, ರಾಜ್ಕುಮಾರ್ ವ್ಯಕ್ತಿತ್ವದ ಮೇಲೊಂದು ಬಗೆಯ ಗೌರವ ಹುಟ್ಟಿತ್ತು ನನಗೆ. ಇಂಟರ್ನ್-ಶಿಪ್ ಮಾಡುತ್ತಿದ್ದಾಗಲೊಂದು ದಿನ, ಅದ್ಯಾವುದೋ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಇಟ್ಟಿದ್ದ ಪ್ರೆಸ್ ಟ್ರಿಪ್-ನ ಮೂಲಕ ದೇವನಹಳ್ಳಿಯ ಆಸುಪಾಸಿನಲ್ಲಿರುವ ಕೆಂಪತಿಮ್ಮನಹಳ್ಳಿ ಎಂಬ ಊರಿಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿ ಹೋದಾಗ, ಬೆಳ್ಳಿ ಮೂಡಿತೋ ಕೋಳಿ ಕೂಗಿತು ಅಂತ ಕುಣಿಯುತ್ತಿದ್ದ ರಾಜ್ಕುಮಾರ್ ದನಿ ನಮ್ಮನ್ನು ಸ್ವಾಗತಿಸಿತು. ರಾಜ್ಕುಮಾರ್ ಅಭಿಮಾನಿ ಸಂಘಗಳ ಬಗೆಗೆ ಬಹಳವಾಗಿ ಕೇಳಿದ್ದ ನನಗೆ ಅದನ್ನು ನೋಡುವ, ಅನುಭವಿಸುವ ಅವಕಾಶ ಸಿಕ್ಕಿತು. ನಮ್ಮೂರ ಫಂಕ್ಷನುಗಳಲ್ಲಿ ದೇವರ ಭಜನೆಗಳನ್ನು ಹಾಕಿಟ್ಟಿರುತ್ತಾರಲ್ಲ, ಅದೇ ರೀತಿ ಅಲ್ಲಿ ರಾಜ್ಕುಮಾರ್ ಹಾಡಿದ ಹಾಡುಗಳ ಸುರಿಮಳೆಯಾಗುತ್ತಿತ್ತು. ಆ ಊರಲ್ಲೆಲ್ಲ ರಾಜ್ಕುಮಾರ್ ಅಭಿಮಾನಿಗಳು ತುಂಬಿ ಹೋಗಿದ್ದರು.

ಇದನ್ನೆಲ್ಲ ನೋಡಿದ ಮೇಲೆ ನನಗೆ ರಾಜ್ಕುಮಾರನ್ನು ಒಂದ್ಸಲವಾದರೂ ಭೇಟಿಯಾಗಬೇಕೆಂಬ ಆಸೆ ಬಲವಾಗುತ್ತ ಹೋಯಿತು. ಆದರೆ ನನ್ನ ಹೊಸ ದಿನಚರಿಯ ನಡುವೆ ಕಾಲ ಕೂಡಿ ಬರಲಿಲ್ಲ. ಹೀಗೆ ತಿಂಗಳೊಂದು ಕಳೆದಿರಬಹುದೇನೋ... ಗೆಳತಿಯೊಬ್ಬಳ ಮನೆಗೆ ಹೋಗುತ್ತಿದ್ದ ಸಮಯ ಸಂಭವಿಸಿದ ಅಪಘಾತದಲ್ಲಿ ನನ್ನ ಕೈ ಫ್ರಾಕ್ಚರ್ ಆಯಿತು. ಗುಣಪಡಿಸಿಕೊಂಡು ಬರೋಣವೆಂದು ಊರಿಗೆ ಹೊರಟುಹೋದೆ. ನಂತರ ಇಂಟರ್ನ್-ಶಿಪ್ ಮುಗಿಸಲು ಪುನಃ ಬೆಂಗಳೂರಿಗೆ ಬಂದೆ.

ಹಾಗೆ ನಾನು ಬರುವ ಹಿಂದಿನ ದಿನವೇ ರಾಜ್ಕುಮಾರನ ಕಿಡ್ನ್ಯಾಪ್ ಅಗಿತ್ತು. ಬೆಂಗಳೂರೆಲ್ಲ ಬಂದ್... ಗಲಾಟೆಯೋ ಗಲಾಟೆ... ಸರಿ, ಆ ಪರಿಸ್ಥಿತಿಯಲ್ಲಿ ಏನು ಮಾಡಲೂ ಸಾಧ್ಯವಿಲ್ಲದೆ, ಇಂಟರ್ನ್-ಶಿಪ್ ಮುಗಿಸುವುದೂ ಕಷ್ಟವಾದ ಕಾರಣ ವಾಪಸ್ ಊರಿಗೆ ಹೊರಟುಹೋದೆ. ನಂತರ ಬೆಂಗಳೂರಿಗೆ ಬರಲಾಗಲಿಲ್ಲ. ಹಾಗಾಗಿ ರಾಜ್ಕುಮಾರ್ ನೋಡುವ ಮಹದಾಸೆ ಮೂಲೆಸರಿಯಿತು.

+++++++++
ರಾಜ್ಕುಮಾರ್ ಕ್ಷೇಮವಾಗಿ ವೀರಪ್ಪನ್ ಕೈಯಿಂದ ತಪ್ಪಿಸಿಕೊಂಡು ವಾಪಸ್ ಬರಲೆಂದು ಬೇಡಿಕೊಂಡವರಲ್ಲಿ ನಾನೂ ಒಬ್ಬಳು. ರಾಜ್ಕುಮಾರ್ ವಾಪಸ್ ಬರುವ ಸಮಯದಲ್ಲಿ ನಾನು ಮಾಧ್ಯಮ ಜಗತ್ತಿನೊಳಗೆ ಪ್ರವೇಶ ಪಡೆದಿದ್ದೆ, ಹೈದರಾಬಾದಿಗೆ ವಲಸೆ ಹೋದೆ. ಆ ಸಮಯದ ಕಥೆಗಳನ್ನೆಲ್ಲ ಮಾಧ್ಯಮದೊಳಗಿನಿಂದಲೇ ಕುತೂಹಲದಿಂದ ಕೇಳಿದೆ, ನೋಡಿದೆ. ವೀರಪ್ಪನ್, ನಕ್ಕೀರನ್ ಗೋಪಾಲನ್, ಕರುಣಾನಿಧಿ, ಎಸ್ಸೆಂ ಕೃಷ್ಣ ಇತ್ಯಾದಿ ಪಾತ್ರಗಳು ನನಗೆ ಹೊಸದಾಗಿ ಪರಿಚಯವಾದವು. ದಿನಕರ್ ಅವರು ಬರೆದ ರಾಜರಹಸ್ಯ - ರಾಜ್ಕುಮಾರ್ ಬಿಡುಗಡೆಗಾಗಿ ನಡೆದ ನಾಟಕಗಳನ್ನೆಲ್ಲ ಅನಾವರಣಗೊಳಿಸಿದ ಪುಸ್ತಕವನ್ನೂ ಓದಿದೆ. ಇವೆಲ್ಲದರ ನಡುವೆ, ರಾಜ್ಕುಮಾರ್ ನೋಡುವ, ಮಾತಾಡುವ ಆಸೆ ಮಾತ್ರ ಆಸೆಯಾಗಿಯೇ ಉಳಿಯಿತು.

+++++++++
ಮತ್ತೆ ನಾಲ್ಕು ವರ್ಷಗಳು ಕಳೆದವು. ಬದುಕಿನ ಹೊಳೆಯಲ್ಲಿ ಸಾಕಷ್ಟು ನೀರು ಹರಿದಿತ್ತು. ಎಪ್ರಿಲ್ 4, 2006. ಹೈದರಾಬಾದಿನ ನಂಟು ಮುಗಿದು ಬೆಂಗಳೂರಿಗೆ ಕಾಲಿಟ್ಟಿದ್ದೆ. ಇನ್ನೇನು, ಇಲ್ಲೇ ಟೆಂಟು, ಯಾವಾಗ ಬೇಕಾದರೂ ರಾಜ್ಕುಮಾರ್ ನೋಡಬಹುದು ಅಂದುಕೊಂಡೆ.

ಆದರೆ, ಕಾಲ ಯಾರಿಗೂ ಕಾಯದ ಕ್ರೂರಿ... ನಾನಿನ್ನೂ ಸರಿಯಾಗಿ ರಾಜ್ಕುಮಾರ್ ನೋಡುವ ಪ್ಲಾನ್ ಹಾಕುವ ಮೊದಲೇ ಕಾದಿತ್ತು ನನಗೆ ಆಘಾತ... ಎಪ್ರಿಲ್ 13, 2006ರಂದು, ರಾಜ್ಕುಮಾರ್ ಇದ್ದಕ್ಕಿದ್ದಂತೆ ಇನ್ನಿಲ್ಲವಾದರು.

+++++++++
ಅಣ್ಣಾವ್ರು ಇನ್ನಿಲ್ಲವಾದ ದಿನ ಎಲ್ಲೆಲ್ಲೂ ಗಲಾಟೆ... ಯಾಕೆ ಗಲಾಟೆ ಅಂತ ಯಾರಿಗೂ ಗೊತ್ತಿಲ್ಲ. ರಸ್ತೆಯಲ್ಲೆಲ್ಲ ಗ್ಲಾಸಿನ ಚೂರುಚೂರು, ಮುಚ್ಚಿದ ಕಟ್ಟಡಗಳು... ಒಡೆದ ಗಾಜಿನ ಕಿಟಿಕಿಗಳು... ರಸ್ತೆಯಲ್ಲಿ ಅಲ್ಲಲ್ಲಿ ಬೆಂಕಿ... ಸುಡುತ್ತಿದ್ದ ಟಯರುಗಳು... ರಸ್ತೆಗಳಲ್ಲಿ ವಾಹನಸಂಚಾರ ಬಲುವಿರಳ... ಜನರ ಸುಳಿವೇ ಇಲ್ಲ... ಎಲ್ಲೆಡೆ ಹಾರುತ್ತಿದ್ದ ಹಳದಿ-ಕೆಂಪು ಬಣ್ಣದ ಬಾವುಟ...
ಆರ್. ಟಿ. ನಗರದಿಂದ ವಿಜಯನಗರಕ್ಕೆ ಕಾರ್ಡ್ ರೋಡಿನಲ್ಲಿ ಆಟೋವೊಂದರಲ್ಲಿ ಕುಳಿತು ಓಡುತ್ತಿದ್ದ ನಾನು, ಎಲ್ಲಿ ಕಲ್ಲು ಬೀಳುತ್ತದೋ, ಎಲ್ಲಿ ಗೂಂಡಾಗಳು ಬರುತ್ತಾರೋ, ಏನು ಮಾಡುತ್ತಾರೋ ಅಂತ ಹೆದರಿ ಜೀವ ಕೈಲಿ ಹಿಡ್ಕೊಂಡು ಕೂತಿದ್ದೆ... ಹಿಂಸೆಯನ್ನು ಎಂದೂ ಬೆಂಬಲಿಸದ ಸಾಧು ರಾಜ್ಕುಮಾರ್ ಹೆಸರಲ್ಲಿ, ಕನ್ನಡತನದ ಹೆಸರಲ್ಲಿ ಆದಿನ ಬೆಂಕಿ ಹಚ್ಚಿದವರನ್ನು, ಗಲಾಟೆ ಮಾಡಿದವರನ್ನು, ಗ್ಲಾಸು ಒಡೆದವರನ್ನು, ದುಡ್ಡು ಕಿತ್ತವರನ್ನು, ನಾನೆಷ್ಟು ದ್ವೇಷಿಸುತ್ತೇನೆಂದರೆ, ಕೆಂಪು-ಹಳದಿ ಬಣ್ಣದ 'ಕನ್ನಡ' ಬಾವುಟವೇನಾದರೂ ಕಣ್ಣಿಗೆ ಕಂಡರೆ ಇಂದಿಗೂ ನನಗೆ ಸಿಟ್ಟು ನೆತ್ತಿಗೇರುತ್ತದೆ. ಆ ಬಾವುಟದ ಜತೆ ಗುರುತಿಸಿಕೊಂಡ ಗೂಂಡಾಗಳು ಮಾಡುತ್ತಿರುವ ಅನ್ಯಾಯವನ್ನು ಹತ್ತಿಕ್ಕಲು ಯಾರೂ ಇಲ್ಲವಲ್ಲಾ ಅನಿಸುತ್ತದೆ.
+++++++++
ಕೊನೆಗೂ ನಾನು ಅಣ್ಣಾವ್ರನ್ನು ಭೇಟಿಯಾದೆ... ಅವರು ಸತ್ತು ಒಂದು ವಾರದ ನಂತರ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಅವರ ಸಮಾಧಿಯ ಎದುರು ಫೋಟೋವಾಗಿ ಕುಳಿತಿದ್ದರು ಅಣ್ಣಾವ್ರು... 80ರ ದಶಕದ ಫೋಟೋ ಇರಬೇಕು. ಇನ್ನೂ ತಲೆ ಬೋಳಾಗುತ್ತಿದ್ದಂತಿತ್ತು. ಆದರೆ ಅದೇ ತುಂಬು ನಗು... ಅದೇ ಉದ್ದ ಮೂಗು... ನೋಡುತ್ತಿದ್ದರೆ ಅವರ ಜೇನುದನಿಯೂ ಕೇಳಿದಂತಾಗುತ್ತಿತ್ತು. ಭೇಟಿಯಾಗಿದ್ದರೆ ಏನು ಮಾತಾಡುತ್ತಿದ್ದೆನೋ ಗೊತ್ತಿಲ್ಲ. ಆದರೆ, ಜಗದಲ್ಲಿಲ್ಲದೆಯೂ ಮನದಲ್ಲುಳಿದುಹೋದವರ ಭಾವಚಿತ್ರದೆದುರು ನಿಂತ ಕ್ಷಣ ಯೋಚನೆಗಳೆಲ್ಲ ಫುಲ್-ಸ್ಟಾಪ್ ಹೂಡಿ ನಿಂತವು. ರಾಜ್ ಸಮಾಧಿಯ ಸಾನ್ನಿಧ್ಯದ ತಂಗಾಳಿಗೆ ಖಾಲಿ ಮನಸ್ಸು ಅಂತರ್ಮುಖಿಯಾಗಿತ್ತು... ಸ್ಮೃತಿಯಲ್ಲಿ ಅಚ್ಚೊತ್ತಿ ಕುಳಿತಿದ್ದ ಹಾಡೊಂದು ಸುಮ್ಮನೇ ಸುಳಿದಾಡತೊಡಗಿತು...
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು...
ನಾವು ಬಯಸಿದಂತೆ ಬಾಳಲೇನು ನಡೆಯದು...
ವಿಷಾದವಾಗಲೀ ವಿನೋದವಾಗಲಿ...
ಅದೇನೆ ಆಗಲೀ ಅವನೆ ಕಾರಣ...

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು...
ಬಯಸಿದಾಗ ಕಾಣದಿರುವ ಎರಡು ಮುಖಗಳು...
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ...
ಹೂವು ಮುಳ್ಳು ಎರಡು ಉಂಟು ಬಾಳಲತೆಯಲಿ...
ದುರಾಸೆಯೇತಕೆ... ನಿರಾಸೆಯೇತಕೆ...
ಅದೇನೆ ಬಂದರೂ ಅವನ ಕಾಣಿಕೆ...
+++++++++
ಇಂದು ರಾಜ್ ಇಲ್ಲದಿರಬಹುದು. ಆದರೆ, ಆ ಜೇನ ದನಿ, ಆ ವಿನೀತ ಭಾವ, ಮೇರು ವ್ಯಕ್ತಿತ್ವ.. ಎಂದೆಂದೂ ಮರೆಯದ ಸ್ಮೃತಿಯಾಗಿ ನೆಲೆಯಾಗಿದೆ.

Friday, July 18, 2008

ಬೆಳಕಿಲ್ಲದ ದಾರಿಯಲ್ಲಿ...

ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು... ಅದರ ನಡುವೆಯೂ ಗುಡ್ಡ... ಬೆಟ್ಟ... ಕಾಡು... ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು...

ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ... ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು... ಜೀರುಂಡೆಗಳ ಜೀರ್ಗುಟ್ಟುವಿಕೆ... ಹೆಸರು ತಿಳಿಯದ ಹಕ್ಕಿಗಳು ಮಾಡುವ ಇಲ್ಲಿವರೆಗೆ ಕೇಳದ ಶಬ್ದಗಳು...

ಇವೆಲ್ಲವನ್ನೂ ತೂರಿಕೊಂಡು, ಮೀರಿಕೊಂಡು ರೈಲು ತನ್ನದೇ ಆದ ಹದದಲ್ಲಿ ಸಾಗುತ್ತದೆ... ಅದರಲ್ಲಿರುವವರಲ್ಲಿ ಕೆಲವರಿಗೆ ತಮ್ಮದೇ ಚಿಂತೆ.. ಇನ್ನು ಕೆಲವರಿಗೆ ಯಾವುದೋ ಧ್ಯಾನ... ಗುಂಪುಗಳಿದ್ದ ಕಂಪಾರ್ಟ್-ಮೆಂಟುಗಳಲ್ಲಿ ತಡೆಯಿಲ್ಲದೆ ಸಾಗಿದ ಹರಟೆಗಳು... ಯಾವ ಉಸಾಬರಿಯೂ ಬೇಡವೆಂದು ಆಗಲೇ ಮುಸುಕು ಹೊದ್ದು ಮಲಗಿರುವ ಹಲವರು... ಇವರೆಲ್ಲರ ನಡುವೆ, ಕಿಟಿಕಿ ತೆಗೆದು ಕುಳಿತಿರುವವರು ಅಲ್ಲೊಬ್ಬರು, ಇಲ್ಲೊಬ್ಬರು...

ಹೌದು, ಕಿಟಿಕಿ ತೆಗೆದು ಹೆಚ್ಚಿನವರು ಹೊರನೋಡಲಿಕ್ಕಿಲ್ಲ... ಯಾಕೆಂದರೆ, ಆಗಾಗ ತಿರುವಿನಲ್ಲಿ ಕಾಣುವ ಅಲ್ಪಸ್ವಲ್ಪ ಬೆಳಕಲ್ಲಿ ರೈಲು ಹೋಗುವ ಹಾದಿ ನೋಡಿದರೆ ಸಾಕು, ಎಂಟೆದೆಯವರಿಗೂ ಒಂದು ಕ್ಷಣ ಎದೆ ಝಲ್ಲೆನ್ನಬಹುದು... ಗುಡ್ಡಗಳನ್ನೇ ಕಡಿದು ಮಾಡಿದ ರೈಲಿನ ಹಾದಿ, ಕೊರಕಲಿದ್ದಲ್ಲಿ ಅದು ಹೇಗೋ ಅದರ ಮೇಲೆಯೇ ಹಾದುಹೋಗುತ್ತದೆ... ಇದರ ಬಗ್ಗೆ ನಾ ಹೇಳುವುದನ್ನು ಕೇಳುವ ಬದಲು, ನೀವೇ ಅನುಭವಿಸಿದರೆ ಚೆನ್ನ...

ದೂರದೂರದವರೆಗೂ ಸುತ್ತ ಬರೀ ಕಾಡು... ಮರ... ಗುಡ್ಡ... ರಾತ್ರಿ ಮಾಡಿದ ಕರಾಮತ್ತೋ ಅಥವಾ ನಿಜವಾಗಿಯೂ ಅದು ಹಾಗೆಯೋ, ಮನುಷ್ಯರ ಅಥವಾ ಜನವಾಸದ ಸುಳಿವೇ ಇಲ್ಲ... ಯಾಮಿನಿ ತನ್ನೆಲ್ಲಾ ಸೌಂದರ್ಯದೊಡನೆ ಕಾಲುಮುರಿದುಕೊಂಡು ಬಿದ್ದ ಹಾಗಿದೆ ಇಲ್ಲಿ... ಹತ್ತಿಯ ಹಾಗೆ ಹರಡಿದ ಬಿಳಿಮೋಡಗಳು ಇನ್ನೇನು, ಕೈಚಾಚಿದರೆ ಕೈಗೆ ಸಿಕ್ಕೇಬಿಡುತ್ತವೇನೋ ಎಂಬ ಭ್ರಮೆ ಹುಟ್ಟಿಸುತ್ತವೆ... ಒಂದು ಗುಡ್ಡದಿಂದ ಇನ್ನೊಂದಕ್ಕಿರುವ ನಡುವಿನ ಅಂತರದಲ್ಲೆಲ್ಲ ಈ ಹತ್ತಿಮೋಡಗಳದೇ ಕಾರುಬಾರು...

ಮತ್ತೂ ಮೇಲೆ ಆಗಸಕ್ಕೆ ದೃಷ್ಟಿ ತೂರಿದರೆ ಕಾಣುವುದು, ಇನ್ನೇನು ಮಳೆ ಸುರಿಸಿಯೇ ಬಿಡುತ್ತವೆನ್ನುವ ಭಾರವಾದ ಕರಿಮೋಡಗಳ ರಾಶಿ ರಾಶಿ... ಚಂದ್ರನ ತಣ್ಣಗಿನ ಮಂದ ಬೆಳಕಿನ ಹೊನಲು ಆಗೀಗ ಇವುಗಳ ನಡುವೆ ಇಣುಕಿ ತಾನಿದ್ದೇನೆನ್ನುತ್ತದೆ...

ಬೆಟ್ಟಗಳ ನಡುವಿನ ಕೊರಕಲಿನಲ್ಲಿ ತಿರುವಿನ ದಾರಿಯಲ್ಲಿ ನಿಧಾನವಾಗಿ ರೈಲು ಸಾಗುವಾಗ ಮೆಲ್ಲನೆದ್ದು ಕಂಪಾರ್ಟ್ಮೆಂಟಿನ ಬಾಗಿಲು ತೆಗೆಯುವ ಸಾಹಸಕ್ಕಿಳಿಯುತ್ತೇನೆ. ಮೆಲ್ಲಗಿಣುಕಿದರೆ, ಆ ಕಡೆಯೂ ದೂರದಲ್ಲಿ ಬೆಟ್ಟ, ಈ ಕಡೆಯೂ ದೂರದಲ್ಲಿಯೇ ಬೆಟ್ಟ... ಹಿಂದೆ ಬೆಟ್ಟದ ನಡುವೆ ಕಾಣುವ ಸಾಗಿ ಬಂದ ದಾರಿ, ಮುಂದೆ ಕಾಣುವುದು ಇನ್ನೊಂದು ಬೆಟ್ಟ, ಮತ್ತು ಹೋಗಲಿರುವ ದಾರಿ. ಕೆಳಗೆ ಕೆಲವು ಅಡಿಗಳ ಆಳದಲ್ಲಿ ಸುಮ್ಮನೇ ಜುಳುಜುಳು ಹರಿವ ನೀರು ಚಂದ್ರನ ಬೆಳಕಿಗೆ ಪ್ರತಿಫಲಿಸುತ್ತದೆ. ಅಷ್ಟರಲ್ಲಿಯೇ ಅಲ್ಲಿ ಬಂದ ಗಾರ್ಡ್ ಕೈಲಿ ಬೈಗುಳ ತಿಂದು ಬಾಗಿಲು ಮುಚ್ಚಿ ತೆಪ್ಪಗೆ ನನ್ನ ಜಾಗದಲ್ಲಿ ಹೋಗಿ ಕೂರುತ್ತೇನೆ.

ಇದೊಂದು ಏಕಾಂಗಿ ಜಗತ್ತು. ಯಾವುದೋ ಲೋಕಕ್ಕೆ ಹೋಗುವ ದಾರಿಯಿದು ಎನ್ನುವ ಭ್ರಮೆ ಹುಟ್ಟಿಸುವ ಮಾಯಾಪ್ರಪಂಚ. ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬೇಕೆಂದರೆ ಇಲ್ಲಿ ಏನೇನೂ ಇಲ್ಲ... ದೂರದೂರದ ವರೆಗೆ ರೈಲು ಹೋಗುವ ದಾರಿಯಲ್ಲೆಲ್ಲೂ ಮೊಬೈಲ್ ನೆಟ್-ವರ್ಕ್ ಇಲ್ಲ... ಟೆಲಿಫೋನ್ ಅಂತೂ ಇಲ್ಲವೇ ಇಲ್ಲ. ಸುಮ್ಮಸುಮ್ಮನೇ ಮೊಬೈಲಿನಿಂದ SOS ಕಾಲ್ ಪ್ರಯತ್ನಿಸಿ ವಿಫಲಳಾಗುತ್ತೇನೆ.

ಇಲ್ಲಿ ಎಲ್ಲೂ ವಿದ್ಯುತ್ ಸಂಪರ್ಕವಿಲ್ಲ, ಬೆಳಕೇ ಇಲ್ಲ.. ಹಾಂ, ಬೆಳಕು ಇಲ್ಲವೇ ಇಲ್ಲವೆನ್ನುವುದು ಸುಳ್ಳು. ಅಲ್ಲಲ್ಲಿ, ಕೆಲವು ಕಿಲೋಮೀಟರುಗಳಿಗೊಮ್ಮೆ, ರೈಲ್ವೇ ಕಟ್ಟಿಸಿದ ಚಿಕ್ಕಚಿಕ್ಕ ನಿಲ್ದಾಣಗಳಂತಹ ಕಟ್ಟಡಗಳು ಕಾಣಬರುತ್ತವೆ... ಪ್ರತಿ ಕಟ್ಟಡಕ್ಕೊಬ್ಬ ರೈಲ್ವೇ ಸಿಬ್ಬಂದಿಯಿರುತ್ತಾನೆ... ಆತ ರೈಲು ಬರುವವರೆಗೆ ಎಚ್ಚರವಿದ್ದು, ಸಿಳ್ಳೆ ಹಾಕಿ ರೈಲು ಮುಂದೆ ಹೋಗಬಹುದೆನ್ನುವ ಸೂಚನೆ ನೀಡುತ್ತಾನೆ. ಬೆಳಕೇ ಇಲ್ಲದ ಈ ವಾತಾವರಣದಲ್ಲಿ ಒಂದು ರೀತಿಯಲ್ಲಿ ಈತನೇ ಬೆಳಕು... ಅರೆಬೆಳಕಿನ ದಾರಿಯನ್ನು ಕಾಯುತ್ತಿರುವ ಇಂತಹ ಹಲವಾರು ಮಾನವರೂಪದ ದೇವದೂತರಿಗೆ ಬೆಳಕು ನೀಡಲು ಸೋಲಾರ್ ಅಳವಡಿಸಿದ ಕಂಬಗಳಲ್ಲಿರುವ ದೀಪ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ. ಇವರನ್ನು ಬಿಟ್ಟರೆ ಸುತ್ತಮುತ್ತ ಎಲ್ಲೂ ನರಮಾನವರೆನ್ನುವವರ ಕುರುಹೇ ಇಲ್ಲ... ಅದ್ಯಾಕೋ ಭಾರತೀಯ ರೈಲ್ವೇ ಬಗೆಗೆ ಹೆಮ್ಮೆ ಮೂಡುತ್ತದೆ.

ಈ ಜಗತ್ತಿನ ಮಾಯೆಗೆ ಮರುಳಾಗಿ ಕಳೆದು ಹೋಗಿದ್ದೇನೆ... ಇದ್ದಕ್ಕಿದ್ದಂತೆ, ದೂರದಲ್ಲಿ, ಗುಡ್ಡಗಳ ನಡುವಿನ ತಳಭಾಗದಲ್ಲಿ, ಕತ್ತಲನ್ನು ಸೀಳಿ, ಸಾಲುಸಾಲು ಬೆಳಕಿನ ಮಾಲೆ ಗೋಚರಿಸುತ್ತದೆ...

ಕತ್ತಲ ಸೀಳಿ ಬೆಳಕು ನುಗ್ಗಿದರೆ ಅದಕ್ಕೊಂದು ಒಳ್ಳೆಯ ಅರ್ಥವಿದೆ... ಬೆಳಕು ಬದುಕಿನ ಸಂಕೇತ. ಇದಕ್ಕಾಗಿಯೇ ತಮಸೋಮಾ ಜ್ಯೋತಿರ್ಗಮಯ ಅಂತ ಮಾತೇ ಇದೆ... ಆದರೆ, ಇಲ್ಲಿ ಕಾಣುವ ಬೆಳಕು ಯಾಕೋ ಕ್ರೂರವಾಗಿದೆ... ಈ ಬೆಳಕು ಸುತ್ತ ಹೊನಲಾಗಿ ಸೂಸುತ್ತಿರುವ ಚಂದ್ರಧಾರೆಯ ಜತೆಗೆ ಬೆರೆಯದಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಮಾಯಾಜಾಲದ ಪ್ರಪಂಚಕ್ಕೆ ಸೇರದಾಗಿದೆ... ಕೃತಕವಾದ ಬೆಳಕು ಏನೋ ಅಪಶಕುನದಂತೆ ತೋರುತ್ತದೆ.

ಅಷ್ಟೊಂದು ಬೆಳಕು ಚೆಲ್ಲುತ್ತ ದೂರದ ಗುಡ್ಡದ ತಪ್ಪಲಲ್ಲಿ ಕಾಣುತ್ತಿರುವುದು ಸಾಲು ಸಾಲಾಗಿ ಹೋಗುತ್ತಿರುವ ವಾಹನಗಳ ಫ್ಲಡ್ ಲೈಟ್-ಗಳ ಬೆಳಕು. ಗಂಟೆ ನೋಡುತ್ತೇನೆ. ಸರಿಯಾಗಿ ಒಂದು. ಅಷ್ಟು ಹೊತ್ತಿನಲ್ಲಿ ಆ ಗುಡ್ಡಗಳ ತಪ್ಪಲಲ್ಲಿ ಅಷ್ಟೊಂದು ವಾಹನಗಳಿಗೇನು ಕೆಲಸ? ಈ ಅಪರಾತ್ರಿಯಲ್ಲಿ ಏನು ಮಾಡುತ್ತಿರಬಹುದು? ಇತ್ಯಾದಿ ತರ್ಕಗಳು ಮನದಲ್ಲಿ ಮೂಡಲಾರಂಭಿಸುತ್ತವೆ...

ರಸಭಂಗವೆಂದರೆ ಇದೇ ಇರಬೇಕು. ಹಾಗೇ ಹೊರಗೆ ಕಣ್ಣು ತೂರಿಸಿ ಕೂರುವ ಯತ್ನ ಮಾಡುತ್ತೇನೆ. ಝರಿ-ತೊರೆಗಳ ಜುಳುಜುಳ ಆಗಲೇ ಕಡಿಮೆಯಾಗಿಬಿಟ್ಟಿದೆ. ಸ್ವಲ್ಪವೇ ಸಮಯದಲ್ಲಿ ಗುಡ್ಡ-ಬೆಟ್ಟಗಳ ಶ್ರೇಣಿಯೂ ಬರಬರುತ್ತ ಕಡಿಮೆಯಾಗಿ, ಅಲ್ಲೊಂದು-ಇಲ್ಲೊಂದು ಮನೆಗಳು ಕಾಣಲಾರಂಭ... ಯಾವುದೋ ಪಟ್ಟಣದ ಕುರುಹುಗಳು ಇಲ್ಲಿವರೆಗೆ ನೋಡಿದ್ದೆಲ್ಲ ಕನಸೆಂಬಷ್ಟು ಸತ್ಯವಾಗಿ ಕಣ್ಣಿಗೆದುರಾಗುತ್ತವೆ... ಸರಿ, ಇನ್ನೇನೂ ನೋಡಲು ಉಳಿದಿಲ್ಲ, ಕಿಟಿಕಿ ಹಾಕಿ ಮಲಗಿ ಕಣ್ಣು ಮುಚ್ಚುತ್ತೇನೆ...

ಕಣ್ಮುಚ್ಚಿದವಳೇ, ಇಲ್ಲಿವರೆಗೆ ನೋಡಿದ್ದರಲ್ಲಿ ಒಳ್ಳೆಯದು ಕನಸಲ್ಲದಿರಲಿ, ಕೆಟ್ಟದು ನನಸಾಗದಿರಲಿ ಎಂದು ಜಗತ್ತನ್ನು ನಡೆಸುವ ಶಕ್ತಿಯೊಡನೆ ಬೇಡಿಕೊಳ್ಳುತ್ತೇನೆ...

Sunday, July 6, 2008

ಲೆಕ್ಕವಿಲ್ಲದ ಕನಸುಗಳಲ್ಲಿ ಇದು 50ನೆಯದು... :-)

ಕರುಳ ಚಿಗುರು ಕಳಚಿದಾಗ
ದೇಹ ಬರಿದು ಬರಿದು...
ಮಮತೆಯೊರತೆಯೊಸರಬೇಕು
ಮನಸು ಬರಿದು ಬರಿದು...!

ನಲಿಯುತಿರಲಿ ಮಗುವು, ಬೇಲಿ
ಮೀರಿ ಬೆಳೆದು ಹೊಳೆಯಲಿ...
ಬಂಧವೆಂದು ಬಂಧನದಲಿ
ಅಂತ್ಯ ಕಾಣದಿರಲಿ...!

ಇಂತು ತಿಳಿದ ತಾಯಿ ಮಗುವ
ಹೊರಗೆ ಆಡಬಿಟ್ಟಳು...
ಬರಿದು ಮನವು, ಖಾಲಿ ಹೃದಯ
ಅಡಗಿಸುತಲೆ ನಕ್ಕಳು...

Thursday, June 12, 2008

ಕರಿಪರದೆ...

ಬಾನ ಕವಿದಿದೆ ಮುಗಿಲು
ಕತ್ತಲಾಗಿದೆ ಹಗಲು

ಬೆಳಕು ಕಾಣದ ಬದುಕು
ದಾರಿ ಮುಚ್ಚಿದೆ ಮುಸುಕು

ಮನಸಿನೊಳಗಿನ ಮುನಿಸು
ಸುಟ್ಟುಬಿಟ್ಟಿದೆ ಕನಸು...

Sunday, May 25, 2008

ಬಿಸಿ ಬಿಸಿ ಸುದ್ದಿ ತಣಿದ ಮೇಲೆ....

ಮೊನ್ನೆ ಮೊನ್ನೆ ಎಲ್ಲಾ ಟಿವಿ ಚಾನೆಲಲ್ಲೂ ಸುದ್ದಿಯಾಗಿ, ಇಂದಿಗೂ ಬಗೆಹರಿಯದಿರುವ, ಸುದ್ದಿಯಾಗುತ್ತಲೇ ಇರುವ ಪ್ರಕರಣ ಆರುಶಿ ಕೊಲೆ ಪ್ರಕರಣ. NOIDAದಲ್ಲಿ ಒಂದು ತಣ್ಣನೆಯ ರಾತ್ರಿ, ಆಗಷ್ಟೆ ಹದಿಹರೆಯಕ್ಕೆ ಕಾಲಿಟ್ಟಿದ್ದ ಚಂದದ ಹುಡುಗಿ ಆರುಶಿಯ ಕೊಲೆಯಾಗಿತ್ತ್ತು. ಆಕೆ ಕೊಲೆಯಾದ ಸಮಯ ಮನೆಯಲ್ಲೇ ಇದ್ದ್ದ ಹೆತ್ತವರು ಮಾಧ್ಯಮ ಮತ್ತು ಪೊಲೀಸರಿಗೆ ಹೇಳಿಕೆ ಕೊಡುವಾಗ ಸಂಶಯ ವ್ಯಕ್ತಪಡಿಸಿದ್ದು ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ (domestic help) ಹೇಮರಾಜ್ ಮೇಲೆ. ಇಷ್ಟು ಸುದ್ದಿ ಸಿಕ್ಕಿದ್ದೇ ತಡ, ಎಲ್ಲಾ ಟಿವಿ ಚಾನೆಲ್-ಗಳಲ್ಲೂ ಶುರು ಬ್ರೇಕಿಂಗ್ ನ್ಯೂಸ್... WHO KILLED ARUSHI ಅಂತ ಹೆಡ್ ಲೈನ್ ಕೊಟ್ಕೊಂಡು ಕೊಲೆಯ ಕುರಿತು ಚರ್ಚೆಗಳು ನಡೆದವು.
ಎಲ್ಲಾ ಚಾನೆಲ್-ಗಳು ಸೇರಿಕೊಂಡು, ಯಾವ ಹಂತಕ್ಕೆ ಮುಟ್ಟಿದವು ಎಂದರೆ, ಈ ಹಿಂದೆ ಮನೆಯಲ್ಲಿ ಕೆಲಸ ಮಾಡುವ ಸಹಾಯಕರು ನಡೆಸಿದ ವಿವಿಧ ಅಪರಾಧ ಕೃತ್ಯಗಳ ಕೇಸ್ ಸ್ಟಡೀಸ್ ಎಲ್ಲ ತೆಗೆದುಕೊಂಡು ಅವುಗಳ ಚರಿತ್ರೆಯನ್ನು ಬಿಚ್ಚಿಟ್ಟರು. TIMES NOW ಅಂತೂ ಇಷ್ಟು ಸುದ್ದಿ ಸಿಕ್ಕಿದ್ದೇ ಹಬ್ಬ ಅಂತ ಸೆಲೆಬ್ರೇಟ್ ಮಾಡಿತು. ಅದಕ್ಕೆ ಇದ್ದಿದ್ದು ಇಲ್ಲದ್ದು ಉಪ್ಪು ಖಾರ ಮಸಾಲೆ ಹಚ್ಚಿ ಇನ್ನಷ್ಟು ಬಣ್ಣ ತುಂಬಿತು.
ಹೋಗಲಿ ಬಿಡಿ, TIMES NOW ಇರುವುದೇ ಹಾಗೆ, ಎಷ್ಟಂದರೂ times of india ಸಂತತಿಯಲ್ಲವೇ ಅಂತ ನಾನು ಚಾನೆಲ್ ಬದಲಾಯಿಸಿ NDTV ಕಡೆ ಹೊರಟೆ. ಅಲ್ಲಿ ನೋಡುತ್ತೇನೆ, ಒಬ್ಬ ಕ್ರಿಮಿನಾಲಜಿಸ್ಟು, ಇನ್ನೊಬ್ಬ ಸೈಕಾಲಜಿಸ್ಟು, ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ, ಮತ್ತೊಬ್ಬ ಮನೆಕೆಲಸದವರಿಂದ ದರೋಡೆಗೊಳಗಾದ ವ್ಯಕ್ತಿ - ಇವರ ಜತೆಗೆ ಒಬ್ಬಳು ಮನೆ ಕೆಲಸ ಮಾಡುವ ಬೇಬಿ ಎಂಬ ಹೆಸರಿನ ಹುಡುಗಿಯನ್ನು ಕೂರಿಸಿಕೊಂಡು ಗಂಭೀರವಾದ ಚರ್ಚೆ ನಡೀತಿತ್ತು.
ಉಳಿದವರೆಲ್ಲ ಇಂಗ್ಲಿಶಿನಲ್ಲಿ ಬಡಬಡಿಸುತ್ತಿದ್ದರೆ, ಬೇಬಿ ಹಿಂದಿ ಮಾತ್ರ ಮಾತಾಡಬಲ್ಲವಳಾಗಿದ್ದಳು. ಅವಳಿಗೆ ಇತರರು ಮಾತಾಡಿದ್ದು ಅರ್ಥವಾಗಿತ್ತೋ ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇತರರ ಜತೆ ಈರೀತಿಯ ಅಪರಾಧ ಕೃತ್ಯಗಳ ವಿವಿಧ ಆಯಾಮಗಳ ಕುರಿತು ಮಾತಾಡಿಸಿದ್ದಾದ ಮೇಲೆ ANCHOR ಅವಳಿಗೆ ಹಿಂದಿಯಲ್ಲಿ ಪ್ರಶ್ನೆ ಆರಂಭಿಸಿದಳು... 'ಬೇಬಿ, ಕ್ಯಾ ಆಪ್ ಬತಾ ಸಕ್ತೀ ಹೈಂ ಕಿ ಐಸಾ ಅಪರಾಧ್ ಕೃತ್ಯ್ ಕ್ಯೂಂ ಹೋತಾ ಹೈ...' ಇದಕ್ಕೆ ಉತ್ತರವಾಗಿ ಬೇಬಿ, ಮನೆಯವರು ಕೆಲಸ ಮಾಡಿಸಿಕೊಳ್ಳುವಾಗ ಕೆಲಸದವರಿಗೆ ಸರಿಯಾದ ಮರ್ಯಾದೆ ಕೊಡುವುದಿಲ್ಲ, ಅದರಿಂದ ಹುಟ್ಟುವ ರೋಷ ಈರೀತಿಯ ಕೃತ್ಯಗಳಿಗೆ ಕಾರಣವಾಗುತ್ತದೆಂದು ಹೇಳಿದಳು. ಆಗ ಅಲ್ಲಿ ಕೂತಿದ್ದ ಪ್ರೇಕ್ಷಕರಲ್ಲಿ ಒಬ್ಬಾಕೆ ತಾನು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಕೆಲಸದಾತ ತನಗೆ ಮೋಸ ಮಾಡಿ ಮನೆ ದೋಚಿದ್ದನ್ನು ಹೇಳಿಕೊಂಡು, ಬಲುಬೇಗನೆ ಧನವಂತರಾಗುವ ಹುಚ್ಚಿನಿಂದ ಕೆಲಸದವರು ಇಂತಹ ಅಪರಾಧಗಳನ್ನು ಮಾಡುತ್ತಾರೆಂಬ ಕನ್-ಕ್ಲೂಶನ್-ಗೆ ಬಂದಳು. ಇದಕ್ಕೆ ಬೇಬಿ ತೀವ್ರವಾಗಿ ವಿರೋಧಿಸಿ, ಸಾಧ್ಯವೇ ಇಲ್ಲ, ನೀವು ಎಲ್ಲಾದರೂ ತಪು ಮಾಡಿರುತ್ತೀರಿ ಎಂಬರ್ಥದ ಮಾತುಗಳನ್ನು ಆಡಿದಳು. ಆಗ ಅಲ್ಲಿದ್ದವರೆಲ್ಲ ಒಗ್ಗಟ್ಟಾಗಿ ಅವಳನ್ನು ವಿರೋಧಿಸಹೊರಟರು. Anchor ಪರಿಸ್ಥಿತಿ ಹತೋಟಿಗೆ ತರಲು ಹೆಣಗಾಡತೊಡಗುತ್ತಿದ್ದಂತೆಯೇ ನಾನು ಚಾನೆಲ್ ಬದಲಾಯಿಸಿದೆ.
ಮತ್ತೆ TIMES NOWಗೆ ಬಂದೆ. ಅಲ್ಲಿ ನೋಡಿದರೆ, ಆಗಷ್ಟೆ ಹೊಸಾ ಬಿಸಿ ಬಿಸಿ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.. ARUSHI’S SUSPECTED KILLER HEMRAJ FOUND DEAD... DEAD BODY FOUND ON THE TERRACE OF ARUSHI'S HOME... NEIGHBOUR FINDS BODY TWO DAYS LATER AFTER DEATH... POLICE FAILED TO FIND THE DEAD BODY EARLIER .... ETC ETC...

----------

ಸಮಯ 7.30 ಬೆಳಿಗ್ಗೆ, ಆದಿತ್ಯವಾರ, ಮೇ 25. ಚುನಾವಣಾ ಮತ ಎಣಿಕೆ ಕಾರ್ಯ 8 ಘಂಟೆಗೆ ಸರಿಯಾಗಿ ಆರಂಭವಾಗಲಿತ್ತು... ಎಲ್ಲಾ ಚಾನೆಲ್-ಗಳಲ್ಲೂ ಬಿಸಿ ಬಿಸಿ ಸುದ್ದಿ ವೀಕ್ಷಕರಿಗೆ ನೀಡಲು ಎಲ್ಲ್ಕಾ ತಯಾರಿಯೂ ಆಗಿತ್ತು. ಹಾಗೆಯೇ ಎಲ್ಲಾ ಚಾನೆಲ್-ಗಳನ್ನೂ ಸುಮ್ಮನೆ ನೋಡುತ್ತಾ ಸಾಗುತ್ತಿದ್ದರೆ, TIMES NOWನಲ್ಲಿ ರಿಮೋಟ್ ನಿಂತುಬಿಟ್ಟಿತು. ಅಲ್ಲಿ ಹಿಂದಿನ ದಿನ ರಾತ್ರಿ ನಡೆಸಿದ ಚರ್ಚೆಯ ಮರುಪ್ರಸಾರ ನಡೆದಿತ್ತು. ರಿಮೋಟ್ ನಿಂತಿದ್ದು ಮಾತ್ರ ಅದಕ್ಕಲ್ಲ. ಇನ್ನೂ ಯಾವ ಕನ್ನಡ ಚಾನೆಲಲ್ಲೂ ಮತ ಎಣಿಕೆ ಕಾರ್ಯ ಆರಂಭವಾದ ಬಗ್ಗೆ ಸುದ್ದಿಯೇ ಇಲ್ಲ, ಎಷ್ಟು ಸ್ಥಾನಗಳಲ್ಲಿ ಯಾವ ಪಕ್ಷ ಮುಂದಿದೆ ಅಂತ ತಿಳಿಸುವ ಕೌಂಟರ್ TIMES NOWನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿತ್ತು. ಈಗಿನ್ನೂ 7.30, ಅದಾಗಲೇ ಕಾಂಗ್ರೆಸ್ - 1 ಅಂತ ತೋರಿಸುತ್ತ ಅಕೌಂಟ್ ಓಪನ್ ಮಾಡಿತ್ತು. ತಕ್ಷಣ ಎಲ್ಲಾ ವರದಿಗಾರರ ಮೂಲಕ ಕ್ರಾಸ್ ಚೆಕ್ ಮಾಡಿ TIMES NOW ಸುಳ್ಳು ಹೇಳುತ್ತಿದೆಯೆಂದು ಖಚಿತಪಡಿಸಿಕೊಂಡಿದ್ದಾಯಿತು.
ಘಂಟೆ 8 ಆಗುತ್ತಿದ್ದಂತೆಯೇ ಎಲ್ಲೆಲ್ಲಿ ಮತ ಎಣಿಕೆ ಕಾರ್ಯ ಆರಂಭವಾಯಿತೋ ಅಲ್ಲಿಂದೆಲ್ಲ ಮೆಲ್ಲಗೆ ಸುದ್ದಿ ಆರಂಭವಾಯಿತು. ಹಾಗೆಯೇ ಬಣ್ಡ್ಣಬಣ್ಣದ ಸುದ್ದಿಗಳೂ ಕೂಡ ಆರಂಭವಾಯಿತು. ಒಂದು ಚಾನೆಲ್ ಕನಕಪುರದಲ್ಲಿ ಡಿಕೆಶಿ ಹಿನ್ನಡೆ ಅಂತ ಕೊಟ್ಟರೆ ಇನ್ನೊಂದು ಮುನ್ನಡೆ ಅಂದಿತು. ಒಂದು ಚಾನೆಲ್-ನಲ್ಲಿ ಅಂಬರೀಶು ಹಿನ್ನಡೆ ಅನುಭವಿಸಿದರೆ ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದರು.
ಒಂದು ಐದು-ಹತ್ತು ನಿಮಿಷ ಯಾವುದು ಸತ್ಯ ಯಾವುದು ಸುಳ್ಳು ಅಂತಲೇ ತಿಳಿಯದ ಹಾಗೆ ಸುದ್ದಿಗಳು ಓಡಿದವು. ಈ ಓಟದಲ್ಲಿ ಇಂಗ್ಲಿಷ್ ಚಾನೆಲುಗಳು ಕೂಡ ಹಿಂದುಳಿಯಲಿಲ್ಲ. ಆಮೇಲೆ, ಒಂದು ಹಂತಕ್ಕೆ ಬಂದ ಮೇಲೆ ಎಲ್ಲಾ ಚಾನೆಲ್-ನಲ್ಲೂ ಹೆಚ್ಚುಕಡಿಮೆ ಒಂದೇ ವಿಧವಾದ ಸುದ್ದಿಗಳು ಹೋಗಲಾರಂಭಿಸಿದವು. ಹತ್ತಿರವೆನಿಸಬಹುದಾದ ಸಂಖ್ಯೆಗಳು ಕೌಂಟರ್-ನಲ್ಲಿ ಬರಲು ಆರಂಭವಾಯಿತು.
ಕೊನೆಗೆ ಮಧ್ಯಾಹ್ನ 3.30ಕ್ಕೆ ಹೆಚ್ಚು ಕಡಿಮೆ ಎಲ್ಲಾ ಸ್ಥಾನಗಳಲ್ಲೂ ಫಲಿತಾಂಶ ಘೋಷಿತವಾಯಿತು. ಎಲ್ಲಾ ಕನ್ನಡ ಚಾನೆಲುಗಳೂ ಒಂದು ಸ್ಕೋರು ತೋರಿಸುತ್ತಿದ್ದರೆ ಎಲ್ಲಾ ಇಂಗ್ಲಿಷ್ ಚಾನೆಲುಗಳೂ ಇನ್ನೊಂದು ಸ್ಕೋರು ತೋರಿಸುತ್ತಿದ್ದವು. ನಮ್ಮಕ್ಕ ಫೋನ್ ಮಾಡಿ ಯಾವುದು ಸರಿ ಅಂತ ಕೇಳಿದರೆ, ನಾನು ಹೇಳಿದೆ, ಕನ್ನಡ ಚಾನೆಲುಗಳು ತೋರಿಸುತ್ತಿರುವ ಸ್ಕೋರು ಸತ್ಯ, ಅದನ್ನು ನಂಬಬಹುದು ಅಂತ. ಕೊನೆಗೆ ಬಂದಿದ್ದೂ ಅದೇ ಸ್ಕೋರು - 110-80-28-6.

------------

ಜನಾದೇಶ ಅನ್ನಬಹುದೋ, ಚುನಾವಣೆ ಅನ್ನಬಹುದೋ, ರಣರಂಗ ಅನ್ನಬಹುದೋ, ಚದುರಂಗ ಅನ್ನಬಹುದೋ - ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದು ಕರೆಯಲ್ಪಡುವ ಕಾರ್ಯಕ್ರಮದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಕೊಟ್ಟೂ ಕೊಡದ ಹಾಗೆ ಬಹುಮತ ಕೊಟ್ಟಿದ್ದಾನೆ ಜಾಣ ಮತದಾರ. ಹಿಂದುತ್ವದ ಹೆಸರಲ್ಲಿ ಕೋಮುಗಲಭೆ ಎಬ್ಬಿಸಿದವರು, 36 ವರ್ಷಗಳಿಂದಲೂ ತಮ್ಮ ಕ್ಷೇತ್ರಕ್ಕೆ ಏನೂ ಉಪಕಾರ ಮಾಡದವರು, ಟಿಕೆಟ್ ಸಿಕ್ಕಲಿಲ್ಲವೆಂದು ಬೇರೆ ಪಕ್ಷಕ್ಕೆ ಹಾರಿದವರು, ಪಾರ್ಲಿಮೆಂಟಿನಿಂದ ಹೊರಬಂದು ವಿಧಾನಸೌಧದೊಳಗೆ ಕಾಲಿಟ್ಟು ಅದನ್ನು ಪಾವನವಾಗಿಸುವ ಆಸೆಹೊತ್ತವರು, ಇದೇ ಕೊನೆ ಚುನಾವಣೆಯೆನ್ನುತ್ತ ಓಟಿಗೆ ನಿಂತವರು, ಎಲ್ಲರ ಕಣ್ಣಿಗೆ ಸುಲಭವಾಗಿ ಕಾಣುವಂತಹ ಕೆಲಸಗಳನ್ನು ಮಾತ್ರ ಮಾಡಿ ಕೆಲಸ ಮಾಡಿದ್ದೇವೆಂದು ಕೊಚ್ಚಿಕೊಂಡವರು, ದುಡ್ಡು ಹ್ಚೆಲ್ಲಿ ಗೆಲ್ಲಬಹುದೆಂದು ತಿಳಿದವರು, ದೂರದಿಂದ ಹಾರಿಬಂದು ಬೆಂಗಳೂರನ್ನು ಉದ್ಧಾರ ಮಾಡುತ್ತೇನೆಂದು ಚುನಾವಣೆಗೆ ನಿಂತು, ಕ್ಯಾಂಪೇನ್ ಮಾಡಬೇಕಾದ ಸಮಯದಲ್ಲಿ ಟೀವಿ ಚಾನೆಲ್-ನಲ್ಲಿ ಚರ್ಚೆ ನಡೆಸುತ್ತಾ ಕೂತವರು - ಎಲ್ಲರಿಗೂ ತನಗೆ ಸಾಧ್ಯವಾದಷ್ಟು ಸರಿಯಾದ ರೀತಿಯಲ್ಲಿ ಮಣ್ಣುಮುಕ್ಕಿಸಿದ್ದಾನೆ ಮತದಾರ. ಆತನ ಎಲ್ಲಾ ಆಯ್ಕೆಗಳೂ ಉತ್ತಮವಾಗಿವೆಯೆಂದಲ್ಲ, ಆದರೆ ತನ್ನ ಮಿತಿಯಲ್ಲಿ, ತನಗೆ ಸಿಕ್ಕ ಅಪರೂಪದ ಒಂದೇ ಅವಕಾಶದಲ್ಲಿ, ಎಲ್ಲರಿಗೂ ಬುದ್ಧಿ ಕಲಿಸಿದ್ದಾನೆ. ಆದರೆ ಯಾರೂ, ಯಾವ ಪಕ್ಷವೂ, ಹೆಚ್ಚು ಹಾರಾಡಲು ಸಾಧ್ಯವಿಲ್ಲದ ರೀತಿಯಲ್ಲಿದೆ ಈ ಸಾರಿಯ ಚುನಾವಣಾಫಲಿತಾಂಶ.

------------

ಈಗ ಅಧಿಕಾರ ಹಿಡಿಯಲಿರುವುದು ಯಾರು ಅಂತ ಹೆಚ್ಚು ಕಡಿಮೆ ತೀರ್ಮಾನವಾಗಿದೆ - ರಾಜಕೀಯದ 'ಆಟ'ಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಬೆಳವಣಿಗೆಗಳ ಹೊರತಾಗಿ. ಆದರೆ, ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳು ಇವು -

೧. ಅಕ್ರಮ ಗಣಿಗಾರಿಕೆಯ ಮೇಲೆ ಲೋಕಾಯುಕ್ತರು ಸರಕಾರಕ್ಕೆ ನೀಡಿದ ವರದಿಯ ಗತಿ ಏನಾಗಬಹುದು?
೨. ಹಣದುಬ್ಬರ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತೇನೆಂಬ ಆಶ್ವಾಸನೆಯ ಗಾಳವನ್ನು ಮತದಾರನಿಗೆ ಎಸೆದು ಅಧಿಕಾರಕ್ಕೆ ಬಂದ ಬಿಜೆಪಿ, ಇವುಗಳನ್ನು ಹೇಗೆ ನಿಯಂತ್ರಿಸಬಹುದು? ಹಣದುಬ್ಬರ-ಬೆಲೆಯೇರಿಕೆಗಳು ಒಂದು ರಾಜ್ಯದ ಒಳಗೆ ನಿಯಂತ್ರಿಸಬಹುದಾದ ಸಂಗತಿಗಳೇ?
೩. ಸರಕಾರ ಬಂದ ಕೂಡಲೇ ಇಂಡಸ್ಟ್ರಿಯಲೈಸೇಶನಿಗೆ ಸಹಾಯ ಮಾಡುತ್ತೇನೆಂದು ಬಹುಮತ ಸಿಕ್ಕಿದಕೂಡಲೇ ನಡೆಸಿದ ಪತ್ರಿಕಾಗೋಷ್ಟಿಯಲ್ಲ್ಲಿ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಸಿಎನ್ ಬಿಸಿ, NDTV PROFIT ಇತ್ಯಾದಿಗಳು ಹೆಡ್ಲೈನ್ ಆಗಿ ತೋರಿಸುತ್ತಿವೆ. ಇದರ ಅರ್ಥ ಏನಿರಬಹುದು?
೪. ಎಲ್ಲಕ್ಕಿಂತ ಹೆಚ್ಚಾಗಿ, ಭೂಮಿ ಖರೀದಿಯ ನಿಯಮಾವಳಿಗಳನ್ನು ಸಡಿಲಗೊಳಿಸುತ್ತೇನೆಂದು ಈಗಾಗಲೇ ಬಿಜೆಪಿ ಹೇಳಿದೆ. ಎಲ್ಲರೂ ಸುಮ್ಮನಿದ್ದರೆ ಅದನ್ನು ಮಾಡಿಯೂ ಮಾಡುತ್ತದೆ. ಇದರಿಂದಾಗಿ ರೈತರು ಭೂಮಿ ಕಳೆದುಕೊಂಡು ನೆಲೆ ಕಳೆದುಕೊಂಡು ಯಾವುದೋ ನಗರದ ಸ್ಲಮ್ಮಿಗೋ ಕಾರ್ಮಿಕವರ್ಗಕ್ಕೋ ಸೇರಿಹೋಗಬಹುದಾದ ಸಾಧ್ಯತೆ - ಅನಿವಾರ್ಯವಾಗಲಿದೆಯೇ?

Sunday, May 11, 2008

ಚುನಾವಣೆ, ಮತ್ತು ಒಂದಿಷ್ಟು ಕೊರೆತಪುರಾಣ... :)

ಇದೇನಪ್ಪಾ ಇದ್ದಕ್ಕಿದ್ದಂತೆ ರಾಜಕೀಯದ ಬಗ್ಗೆ ಇಷ್ಟೊಂದು ಕೊರೆತ ಶುರುಮಾಡಿದಾಳಲ್ಲ ಅಂತ ಅನ್ಕೋಬೇಡಿ, ಇದರಷ್ಟು ಕಲರ್-ಫುಲ್ ವಿಷಯ ಇನ್ಯಾವುದೂ ಇಲ್ಲ!

++++++++++++++++

ಕನ್ನಡ ಟೀವಿ ಚಾನೆಲ್-ಗಳಲ್ಲಿ ಇತ್ತೀಚೆಗೆ ಬರ್ತಾ ಇರುವ ರಾಜಕೀಯ ಪಕ್ಷಗಳ ಜಾಹೀರಾತುಗಳನ್ನು ನೋಡ್ತಾ ಇದ್ರೆ ಮಜಾ ಅನ್ನಿಸುತ್ತದೆ. ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.

ಕಾಂಗ್ರೆಸ್ ’20 ತಿಂಗಳುಗಳ ದುರಾಡಳಿತ’ದ ಬಗ್ಗೆ ತನ್ನ ಬೇಸರವನ್ನು ಒಂದು ಜಾಹೀರಾತಿನಲ್ಲಿ ಹೇಳಿಕೊಂಡರೆ, ಇನ್ನೊಂದು ಜಾಹೀರಾತಿನಲ್ಲಿ ತನ್ನ ಭರವಸೆಗಳನ್ನು ಹೇಳಿಕೊಂಡಿದೆ... ಕಲರ್ ಟೀವಿ, ಎರಡು ರುಪಾಯಿಗೆ ಅಕ್ಕಿ ಇತ್ಯಾದಿ ಇತ್ಯಾದಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡ ಬಡವರಿಗೆ ಅಪೀಲ್ ಆಗುವಂತಹ ಅಂಶಗಳನ್ನೇ ಜಾಹೀರಾತಿನಲ್ಲಿ ಹಾಕಿಕೊಂಡಿದೆ. ಇದರಲ್ಲಿ ಹೇಳುವಂತಹದೇನೂ ಇಲ್ಲ.

ಬಿಜೆಪಿಯ ಎಲ್ಲಾ ಜಾಹೀರಾತುಗಳು ನೇರವಾಗಿ ಐವತ್ತು ವರ್ಷ ಆಳಿದ ಪಕ್ಷಕ್ಕೆ ಸಡ್ಡು ಹೊಡೆಯುತ್ತವೆ. ಮೊದಲಿಗೆ ಕಾಂಗ್ರೆಸ್ ಪಕ್ಷದ ಹೆಸರು ನೇರವಾಗಿ ಬರ್ತಾ ಇತ್ತು, ಆಮೇಲೆ ಚುನಾವಣಾ ಆಯೋಗ ಕತ್ತರಿ ಹಾಕಿದ ಮೇಲೆ ಅದು ’ಐವತ್ತು ವರ್ಷ ಆಳಿದ ಪಕ್ಷ’ ಆಯಿತು.

ಇದರಲ್ಲಿ ಮೊದಲ ಜಾಹೀರಾತು ಸುಷ್ಮಾ ಸ್ವರಾಜ್ ಭಾಷಣವಿತ್ತು. ಕಾಂಗ್ರೆಸ್-ಗೆ ಹಿಗ್ಗಾಮುಗ್ಗ ಬೈದ ಕಾರಣ ಸೆನ್ಸಾರ್ ಆಗಿ ಕಾಂಗ್ರೆಸ್ ಅಂತ ಇದ್ದಲ್ಲೆಲ್ಲ ’ಟುಂಯ್’ ಅಂತ ಶಬ್ದ ಹಾಕಿಸಿಕೊಂಡು ಒಂದು ವಾರ ಟೆಲಿಕಾಸ್ಟ್ ಆಯಿತು. ನಂತರ ನಿಂತ ಹಾಗಿದೆ.

ಮುಂದಿನ ಜಾಹೀರಾತುಗಳ ಟಾರ್ಗೆಟ್ ನೇರವಾಗಿ ಮಧ್ಯಮವರ್ಗ. ಆಹಾರವಸ್ತುಗಳ ಬೆಲೆ ಹೆಚ್ಚಳ ಒಂದು ಜಾಹೀರಾತಿನಲ್ಲಿ, ಇನ್ನೊಂದ್ರಲ್ಲಿ ಗೃಹಸಾಲ ಬಡ್ಡಿ, ಮನೆ ಕಟ್ಟುವ ಸಾಮಗ್ರಿಗಳ ಬೆಲೆ ದುಬಾರಿ. ಇವೆಲ್ಲದಕ್ಕೂ ’ಐವತ್ತು ವರ್ಷ ಆಳಿದ ಪಕ್ಷ’ ಹೊಣೆಯಾಗಿದೆ. ಹಿನ್ನೆಲೆಯಲ್ಲಿ ಮೆಲುವಾಗಿ ’ದೋಣಿ ಸಾಗಲಿ ಮುಂದೆ ಹೋಗಲಿ’ ಹಾಡಿನ ಸಂಗೀತ ಕೇಳಿಬರುತ್ತದೆ, ನೋಡಿದವರೆಲ್ಲ ಹೌದು ಹೌದು ಅನ್ನುವ ಹಾಗಿದೆ ಜಾಹೀರಾತು.

ಇನ್ನೊಂದು ಜಾಹೀರಾತಿನಲ್ಲಿ ಭಯೋತ್ಪಾದನೆಯನ್ನು ಮುಖ್ಯವಾಗಿ ತೆಗೆದುಕೊಳ್ಳಲಾಗಿದ್ದು, ಬಿಜೆಪಿಯ ಟ್ರೇಡ್-ಮಾರ್ಕ್ ಆಗಿರುವ ಹಿಂದುತ್ವಕ್ಕೆ ಬದ್ಧತೆಯ agendaಕ್ಕೆ ಲೈಟಾಗಿ ಬಣ್ಣ ಬಳಿದು ಕೂಡಿಸಲಾಗಿದೆ. ಕೇಂದ್ರ ಸರಕಾರದ್ದು ಮುಸ್ಲಿಂ ತುಷ್ಟೀಕರಣ ಧೋರಣೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ’ಐವತ್ತು ವರ್ಷ ಆಳಿದ ಪಕ್ಷ’ಕ್ಕೆ ಯಾವುದು ಮುಖ್ಯ, ಅವರ ಸಗಟು ಮತಗಳೋ ಅಥವಾ ನಮ್ಮ ಅಮೂಲ್ಯ ಜೀವಗಳೋ’ ಅಂತ ಕೇಳಿ, ಕೊನೆಗೆ ’ಬಿಜೆಪಿಯೇ ಪರಿಹಾರ’ ಅನ್ನುತ್ತದೆ ಈ ಜಾಹೀರಾತು.

ಇದ್ದಿದ್ದರಲ್ಲಿ ಜೆಡಿ ಎಸ್ ಜಾಹೀರಾತೇ ವಾಸಿ. ಬೇರೆ ಪಕ್ಷಗಳ ಕುರಿತು ಮಾತೇ ಆಡದೆ ತಮ್ಮ ಪಕ್ಷ ಮತ್ತು ನಾಯಕನನ್ನು ಬಿಂಬಿಸುವ ಯತ್ನ ಮಾತ್ರ ಇಲ್ಲಿ ನಡೆದಿದೆ. ಆದರೆ ಹೆಚ್ಚಿನ ಚಾನೆಲ್-ಗಳಲ್ಲಿ ಹೆಚ್ಚು ದಿನ ಈ ಜಾಹೀರಾತು ಬರಲಿಲ್ಲ. ಬಹುಷ ಪಾರ್ಟಿ ಪಾಪರ್ ಆಗಿರುವುದು ಕಾರಣವಿರಬಹುದು, ೧೦ ಸೆಕೆಂಡಿಗೆ ಟೀವಿ ಚಾನೆಲ್-ನಲ್ಲಿ ಪ್ರೈಮ್ ಟೈಮ್-ನಲ್ಲಿ 14000 ರೂಪಾಯಿಯಷ್ಟು ಬೆಲೆಇರುವಾಗ, ಎಷ್ಟಂದರೂ ಪ್ರಾದೇಶಿಕ ಪಕ್ಷವಲ್ಲವೇ, ರಾಷ್ಟ್ರೀಯ ಪಕ್ಷಗಳಷ್ಟು ಕಾಸು ಎಲ್ಲಿಂದ ಬರಬೇಕು... :(

++++++++++++++++

ಏನೇ ಹೇಳಿ, ಇದ್ದಿದ್ರಲ್ಲಿ ಶಿಸ್ತುಬದ್ಧವಾಗಿ campaign ಮಾಡ್ತಾ ಇರೋದು ಈಸಾರಿ ಬಿಜೆಪಿಯೇ. ಮೊದಲ ಹಂತ ಕಳೆದ ಕೂಡಲೇ ಉತ್ತರದ ಕಡೆಗೆ ಹೆಚ್ಚು ಗಮನ ಕೊಡಲಿಕ್ಕಾಗಿ ತಾತ್ಕಾಲಿಕವಾಗಿ ಹುಬ್ಬಳ್ಳಿಗೆ ಪಕ್ಷದ ಆಫೀಸು ಸ್ಥಳಾಂತರಗೊಳ್ತಾ ಇದೆ. ಕಾಕತಾಳೀಯವಾಗಿ, ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮೊದಲ ಹಂತದ ಮತದಾನದ ದಿನವೇ ಕೋರ್ಟಿನಲ್ಲಿ ಸಿಡಿದ ಬಾಂಬು ಬೇರೇನು ಮಾಡದಿದ್ದರೂ ಜನತೆಯಲ್ಲಿ ಭಯವನ್ನಂತೂ ಖಂಡಿತಾ ಹುಟ್ಟಿಸಿದೆ. ಇಂತಹಾ ಸಮಯದಲ್ಲಿ ಭಯೋತ್ಪಾದನೆಯ ಕುರಿತ ಬಿಜೆಪಿಯೇ ಪರಿಹಾರ ಜಾಹೀರಾತು ಕೆಲವರಿಗಾದರೂ ಪರಿಹಾರ ಸೂಚಿಸಿದರೆ ಆಶ್ಚರ್ಯವಿಲ್ಲ. ಸರಿಯಾದ ಸಮಯಕ್ಕೆ ಸರಿಯಾದ ಜಾಹೀರಾತು.

++++++++++++++++

ಇನ್ನೊಂದು ನನಗೆ ಮಜಾ ಅನಿಸಿದ್ದು ಪ್ರಣಾಳಿಕೆಗಳು. ಸಿಕ್ಕಿದರೆ ಒಂದು ಸಲ ಎಲ್ಲಾ ಪಕ್ಷಗಳ ಪ್ರಣಾಳಿಕೆಗಳನ್ನೂ ತೆಗೆದು ನೋಡಿ, ನನ್ನ ಹಾಗೆಯೇ ನೀವೂ ನಗಬೇಕೋ ಅಳಬೇಕೋ ತಿಳಿಯದೆ ಕಂಗಾಲಾಗುತ್ತೀರಿ. ಒಬ್ಬರು ಕಡುಬಡವರಿಗೆ 3 ರೂಪಾಯಿಗೆ ಅಕ್ಕಿ ಕೊಟ್ಟರೆ ಇನ್ನೊಬ್ಬರು ಅದನ್ನು 2 ರೂಪಾಯಿಗೆ ಇಳಿಸುತ್ತಾರೆ. ಕಡುಬಡವರು ಅಂದರೆ ಯಾರು ಗೊತ್ತಾ... ತಿಂಗಳಿಗೆ 1000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು - ದಿನಕ್ಕೆ 34 ರೂಪಾಯಿಗಿಂತ ಕಡಿಮೆ ಆದಾಯ ಇರುವವರು. ತಿಂಗಳಿಗೆ 1000 ರೂಪಾಯಿಗಳಿಗಿಂತ ನಿಮ್ಮ ಆದಾಯ ಹೆಚ್ಚಿದ್ದಲ್ಲಿ ನೀವು ಬಡತನದ ರೇಖೆಗಿಂತ ಮೇಲಿದ್ದೀರಿ ಅಂತ ಅರ್ಥ :) ಎಲ್ಲಾ ಪಕ್ಷಗಳೂ ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರಣಾಳಿಕೆ ರಚಿಸಿದರೆ, ಬಿಜೆಪಿ ಚೂರು ಜಾಣತನ ತೋರಿಸಿತು. ಕಡುಬಡವರ ಆದಾಯಮಿತಿಯನ್ನು ವರ್ಷಕ್ಕೆ 30,000ಕ್ಕೆ ಹೆಚ್ಚಿಸಿ, 30,000ದಿಂದ 60,000ದ ವರೆಗೆ ಆದಾಯವಿರುವವರನ್ನು ಬಡವರು ಅಂತ ವರ್ಗೀಕರಿಸುವ ಭರವಸೆ ನೀಡಿತು, ಪ್ರಣಾಳಿಕೆಯಲ್ಲಿ ಈ ಅಂಶವನ್ನು bold ಮಾಡಿ ಮೊದಲಿಗೇ ಹಾಕಿತು.ಆದರೆ ಅದ್ಯಾಕೋ ಏನೋ, ಇದನ್ನು ಹೆಚ್ಚಿನ ಮಾಧ್ಯಮಗಳು ಗುರುತಿಸಲೇ ಇಲ್ಲವಾಗಿ, ಇತರ ಅಂಶಗಳ ಬಗ್ಗೆಯೇ ಚರ್ಚೆ ಹೆಚ್ಚಾಯಿತು.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಕಾಂಗ್ರೆಸ್-ದಾದರೆ, ಬಿಜೆಪಿ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿಯ ಜತೆಗೆ ತರಬೇತಿಭತ್ಯೆ (ಸ್ಟೈಫಂಡ್) ನೀಡುವ ಆಶ್ವಾಸನೆ. ಆದರೆ ಇದನ್ನು ಕೂಡ ಕೆಲವು ಮಾಧ್ಯಮಗಳು ನಿರುದ್ಯೋಗ ಭತ್ಯೆ ಅಂತ ವರದಿ ಮಾಡಿದ ಕಾರಣ ಜೆಡಿಎಸ್ ನಾಯಕರು ’ಯುವಕರನ್ನು ಸೋಮಾರಿಯಾಗಿಸುವ ಯೋಜನೆ ಅದು’ ಅಂತ ಎರಡೂ ಪಕ್ಷಗಳಿಗೂ ಸೇರಿಸಿ ಬೈದರು. ಹೀಗೆ ಬಿಜೆಪಿ ಧರ್ಮಕ್ಕೆ ಬೈಗಳು ತಿಂದಹಾಗಾಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪ್ರಣಾಳಿಕೆಗಳಲ್ಲಿ ಇನ್ನೊಂದು ಗಮನ ಸೆಳೆದ ಅಂಶವೆಂದರೆ, ಪಂಪ್ ಸೆಟ್-ಗಳಿಗೆ ಉಚಿತ ವಿದ್ಯುತ್ ಪೂರೈಕೆ. ಇದಕ್ಕೆ ಜೆಡಿಎಸ್ ನಾಯಕರು, ’ಯೂನಿಟ್ಟಿಗೆ 7-8 ರೂಪಾಯಿ ಕೊಟ್ಟು ವಿದ್ಯುತ್ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಇರುವಾಗ ಅದು ಹೇಗೆ ಉಚಿತವಾಗಿ ವಿದ್ಯುತ್ ಕೊಡ್ತಾರೆ’ ಅಂತ ವಾಗ್ದಾಳಿ ನಡೆಸಿದರು.ಕೊನೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆಯಾದಾಗ ಅದರಲ್ಲೂ ಒಂದು ಆಫರ್ ಇತ್ತು, ಕಡುಬಡವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕದ ಜತೆಗೆ ಉಚಿತ ಸ್ಟವ್ ನೀಡುವ ಆಫರ್.

ನಮ್ಮ ಮನೆಯಲ್ಲಿ ಗ್ಯಾಸ್ ಬುಕ್ ಮಾಡಿ ಕಡಿಮೆಯೆಂದರೂ ಒಂದು ವಾರ ಕಾಯಬೇಕಾಗುತ್ತದೆ, ಇನ್ನು ಕೆಲ ವರ್ಷಗಳ ನಂತರ ಗ್ಯಾಸ್, ವಿದ್ಯುತ್ ಸಿಕ್ಕಾಪಟ್ಟೆ ದುಬಾರಿಯಾಗುವ ನಿರೀಕ್ಷೆ ಇದೆ, ಜಗತ್ತಿನಲ್ಲಿ ಕೆಲವುಕಡೆಯಾದರೂ alternative renewable energy sources ಹುಡುಕಾಟ ಆರಂಭವಾಗಿದೆ, ಹಾಗಿರುವಾಗ ನಾವು ಇರುವುದು ಯಾವ ಶತಮಾನದಲ್ಲಿ?

++++++++++++++++

ಇನ್ನೊಂದು ಖತರ್-ನಾಕ್ ಯೋಜನೆ ಕಂಡುಬಂದಿದ್ದು ಬಿಜೆಪಿ ಪ್ರಣಾಳಿಕೆಯಲ್ಲಿ. ನಮ್ಮದೇಶದಲ್ಲಿ ನೆಲವನ್ನು ಕೊಳ್ಳಬೇಕೆಂದರೆ land purchase policies ಸುಲಭವಾಗಿ ಬಿಡುವುದಿಲ್ಲ. ಕೃಷಿಗಾಗಿ ಭೂಮಿ ಕೊಳ್ಳುವವರಿಗೆ ಮಾತ್ರ ಸುಲಭವಾಗಿ ಭೂಮಿ ಸಿಗುವ ಕಾರಣ ಅಮಿತಾಭ್ ಬಚ್ಚನ್ ಕೂಡ ’ಕೃಷಿಕ’ ಆದದ್ದು ಇಂದು ಇತಿಹಾಸ. ಈ ಪಾಲಿಸಿಗೆ ತಿದ್ದುಪಡಿ ತಂದು ಯಾರು ಬೇಕಾದರೂ ಭೂಮಿ ಕೊಳ್ಳಲು ಅನುಕೂಲವಾಗುವಂತೆ ಮಾಡುವ ಭರವಸೆ ಬಿಜೆಪಿಯದು. ಮೇಲುನೋಟಕ್ಕೆ ಇದು ಎಲ್ಲರಿಗೂ (ಕೃಷಿಕರಲ್ಲದವರಿಗೆ) ಖುಷಿಕೊಡುವ ವಿಚಾರ. ಆದರೆ, ಈಗಾಗಲೇ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬಿಸಿನೆಸ್-ನಿಂದಾಗಿ ಭೂಮಿಯ ದರ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ, ಕೃಷಿಭೂಮಿ ಕಡಿಮೆಯಾಗ್ತಿದೆ, ಆಹಾರ ಧಾನ್ಯ ಉತ್ಪಾದನೆ ಕಡಿಮೆಯಾಗ್ತಿದೆ, ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇವಾಗಲೇ ಇದೆ, ಕಾಡು ಕಡಿಮೆಯಾಗ್ತಿದೆ, ಮಳೆ ಕಡಿಮೆಯಾಗ್ತಿದೆ, ನೀರು ಕಡಿಮೆಯಾಗ್ತಿದೆ, ಕೆಲವು ಪ್ರದೇಶಗಳಲ್ಲಿ ಬರ ಇದೆ... ಹೀಗಿರುವಾಗ ಯಾರು ಬೇಕಾದರೂ ಭೂಮಿ ಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು ಅಂತ ರೂಲ್ಸ್ ಬಂದ್ರೆ ಗತಿ ಏನು? ಮನೆಗಳ, ಅಪಾರ್ಟ್ಮೆಟುಗಳ contruction ಇನ್ನೂ ಹೆಚ್ಚಾಗ್ತವೆ, demand ಇದ್ದಾಗ ಬೆಲೆಯೂ ಹೆಚ್ಚಾಗ್ತದೆ,ಹ್ಾಗಾಗಿ ಮನೆ ಕಟ್ಟುವ ಸಾಮಗ್ರಿಗಳ ದರ ಕೂಡ ಹೆಚ್ಚಾಗೋದೆ... ಅದೂ, ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ, ಹೆಚ್ತಾ ಇರೋ ಮನೆಸಾಲ ಬಡ್ದಿದರ, ಮನೆಕಟ್ಟೋ ಖರ್ಚಿಗೆ ಇನ್ನೊಂದು ಪಕ್ಷವನ್ನು ಹೊಣೆಯಾಗಿಸಿ ಜಾಹೀರಾತು ಕೊಟ್ಟ ಪಕ್ಷದಿಂದಲೇ ಈ ಘೋಷಣೆ..! ಶಿವಶಿವಾ!

++++++++++++++++

ರಾಜಕಿಯ ಪಕ್ಷಗಳನ್ನ ಬೈದು ಏನು ಉಪಯೋಗ, ಇದು ಹೀಗೆಲ್ಲಾ ಇರ್ಲಿಕ್ಕೆ ನಾವು ನೀವೇ ಕಾರಣ. ಹೆಸರಿಗೆ ನಾಗರಿಕರಾದ ನಮಗೆ ಏನು ಬೇಕು ಅಂತ ನಮಗೇ ಗೊತ್ತಿಲ್ಲ. ಏನಿದೆ ಅಂತ ಸುಮ್ನೆ ನೋಡ್ತೀವಿ. ಇಷ್ಟ ಆದ್ರೆ ಓಕೆ. ಕಷ್ಟ ಆದ್ರೂ ಓಕೆ. ಸಹಿಸ್ಕೋತೀವಿ. ದೂರದೃಷ್ಟಿ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಇದ್ರೂ ಅದು ಉಪಯೋಗಕ್ಕಿಲ್ಲದ ಹಾಗೆ ಆಗಿದೆ. ಎಲ್ಲಾ ಪಕ್ಷಗಳು ಹೇಳುವುದು ಹಸಿಹಸಿ ಸುಳ್ಳು ಅಂತ ಗೊತ್ತಿದ್ದೂ ನಾವೆಲ್ಲ ಸುಮ್ನಿರ್ತೀವಿ.

ಇದಕ್ಕೇನು ಪರಿಹಾರ ಇಲ್ವಾ?

Thursday, May 1, 2008

ಒಡೆದು ಬಿದ್ದ ಕೊಳಲು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ
ವಿನೋದವಿರದು ನನ್ನಲಿ...

ಕಿವಿಯನೇಕೆ ತೆರೆಯುತಿರುವೆ
ಎದೆಯೊಳೇನ ಹುಡುಕುತಿರುವೆ
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ...
ದೊರೆಯದೇನು ನನ್ನಲಿ !

ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು...
ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು...

ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು...
ಕೊಳಲು ಬೇಸರಾಯಿತೇನೊ
ಹೊಸ ಹಂಬಲವಾಯಿತೇನೊ
ಎದೆಯ ಗಾಯ ಮಾಯಿತೇನೊ
ಬಿಸುಟೆದ್ದಳು ಕೊಳಲನು...

ಒಡೆದು ಬಿದ್ದ ಕೊಳಲು ನಾನು
ನಾದ ಬರದು ನನ್ನಲಿ..
ವಿನೋದವಿರದು ನನ್ನಲಿ...

+++++++++++++++++++++++++++++++++++++++

ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು... ಕೇಳುವುದು ಬಿಟ್ಟು ಹೆಚ್ಚು-ಕಡಿಮೆ 8 ವರ್ಷ ಆಗಿರಬೇಕೇನೋ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು. ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ! ಕೆಲವು ಹಾಡುಗಳೇ ಹಾಗೆ, ಮರೆಯಲಾಗದ ಹಾಡುಗಳು... ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ, ಭಾವಗೀತೆ, ಪೂರ್ತಿ ಇಲ್ಲ ಅನಿಸ್ತಿದೆ, ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು, ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ :) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ!

(ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ, ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು... ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ, For invited readers only ಅಂತ ಬರ್ತಿದೆ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್...:) )

Friday, April 18, 2008

ಅಧರ್ಮ

ಕಾಸರಗೋಡಿನಲ್ಲಿ ಕೋಮು ಗಲಭೆ ಅನ್ನುವಾಗ ಮನಸ್ಸು ಅದ್ಯಾಕೋ ಹುಳಿ ಹುಳಿಯಾಗುತ್ತದೆ. ನಾನು ಹಲ ವರ್ಷಗಳ ಹಿಂದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಬಿಟ್ಟು ಬಂದ ನನ್ನ ಹುಟ್ಟೂರಿನಲ್ಲಿ ಇನ್ನೂ ಅದೇ ನಡೆಯುತ್ತಿದೆ ಎನ್ನುವ ಸತ್ಯ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

++++++++++

ನಮ್ಮ ಊರಲ್ಲಿ ಇರುವುದು ೪೦-೫೦ ಮನೆಗಳು. ಹಲವಾರು ಹಿಂದು ಮನೆಗಳ ನಡುವೆ ಒಂದೇ ಒಂದು ಮುಸ್ಲಿಂ ಮನೆ ಇದೆ. ನಮ್ಮ ಊರಿನಿಂದ ಬೇರೆಲ್ಲಿ ಹೋಗಬೇಕಾದರೂ ಗುಡ್ಡ ಹತ್ತಿ ಇನ್ನೊಂದು ಸಣ್ಣ ಊರಿಗೆ ಇಳಿಯಬೇಕು, ೨೦ ನಿಮಿಷದ ನಡಿಗೆ. ಆ ಊರಿನಲ್ಲಿ ಹೆಚ್ಚಿರುವುದು ಮುಸ್ಲಿಂ ಮನೆಗಳು. ಬಸ್ಸಿಗೆ ಕಾಯುವಾಗ ಅಲ್ಲೆ ಪಕ್ಕದ ಮನೆಯಲಿ ನೀರು ಕುಡಿಯುವಾಗ, ಯಾರಿಗೂ ಅದು ಮುಸ್ಲಿಂ ಮನೆಯ ನೀರಾಗಿ ಕಾಣುತ್ತಿರಲಿಲ್ಲ. ಹಾಗೆಯೇ, ಮೊಳಕೆ ಬರಿಸಿದ ತೆಂಗಿನ ಗಿಡಗಳನ್ನು ನಮ್ಮಪ್ಪ ಅಲ್ಲಿನ ದರ್ಗಾಕ್ಕೆ ಹರಿಕೆಯೆಂದು ಕೊಡುವಾಗ ಆ ದೇವರು ಮುಸ್ಲಿಂ ದೇವರಾಗಿರುತ್ತಿರಲಿಲ್ಲ. ಅಲ್ಲಿಂದ ಅಪ್ಪ ಪ್ರಸಾದವೆಂದು ತರುವ ಖರ್ಜೂರವನ್ನು ತಿನ್ನುವುದೇ ನಮಗೆಲ್ಲ ಒಂದು ದೊಡ್ಡ ಸಂಭ್ರಮ. ಹಾಗೆಯೇ ವಿಷುವಿನ ಸಂಭ್ರಮ ಸವಿಯಲು ಮತ್ತು ಆಗಾಗ ನಡೆಯುವ ಭೂತ ಕೋಲಗಳಿಗೆ, ನಾಗನ ತಂಬಿಲಕ್ಕೆ ಹರಿಕೆ ತೆಗೆದುಕೊಂಡು ಬರುವ ಮೋಞಿ ಬ್ಯಾರಿ, ಹಮೀದ್ ಮುಂತಾದವರು ನಮ್ಮನ್ನು ಬೇರೆಯವರೆಂದು ಎಣಿಸಿರಲಿಲ್ಲ.

ಅದೊಂದು ರಾತ್ರಿ. ಹುಂಬಾ ಚಿಕ್ಕವಳಿದ್ದೆ, ಅಜ್ಜ, ಅಜ್ಜಿ, ಅಮ್ಮ ಇದ್ದರು ಮನೆಯಲ್ಲಿ. ಕರೆಂಟು, ಫೋನು ಏನೂ ಇಲ್ಲದ ಕಾಲ. ಸಂಜೆ ಹೊತ್ತಿಗೆ ಪಕ್ಕದ ಮನೆಯ ಮಾಸ್ತರು ಮಾವ ಶಾಲೆಯಿಂದ ಎಂದಿಗಿಂತ ಬೇಗನೆ ಬಂದವರು, ನಮ್ಮನೆ ಅಂಗಳದಲ್ಲಿ ಹೋಗುವಾಗ, ಅಜ್ಜನಿಗೆ ಹೇಳಿದರು, ಹಿಂದು ಮುಸ್ಲಿಂ ಗಲಾಟೆ ಶುರುವಾಗಿದೆ ಕಾಸರಗೋಡಲ್ಲಿ, ಸೆಕ್ಷನ್ ಹಾಕಿದ್ದಾರೆ, ಹಾಗಾಗಿ ನಾಳೆ ಹೊರಗೆಲ್ಲೂ ಹೋಗಬೇಡಿ ಅಂತ. ಇದ್ದಕ್ಕಿದ್ದಂತೆ ಎಲ್ಲರಲ್ಲೂ ಭಯ ಹುಟ್ಟಿಕೊಂಡಿತು. ಬಹುಶ ಅವರು ಕೋಮು ಗಲಭೆ ಅಂದ್ರೆ ಹೇಗಿರುತ್ತದೆ ಅಂತ ಕಣ್ಣಾರೆ ನೋಡಿರಬೇಕೇನೋ... ಬೇಗ ಬೇಗನೆ ಕೆಲಸ ಮುಗಿಸಿ ಬಾಗಿಲು ಹಾಕಿಕೊಂಡರು. ಯಾಕೋ ಏನೋ ಒಂದು ರೀತಿಯ ಉದ್ವಿಗ್ನತೆ ಇತ್ತು. ಏನೂ ಗೊತ್ತಿಲ್ಲದ ನಾನು ಅಮ್ಮನಿಗೆ ಕೇಳಿದೆ, ಹಿಂದು ಮುಸ್ಲಿಂ ಗಲಾಟೆಯಲ್ಲಿ ಏನಾಗ್ತದೆ, ಅದು ಯಾಕೆ ಆಗ್ತದೆ ಅಂತ. ಯಾಕೆ ಆಗ್ತದೆ ಅಂತ ಹೇಳಲಿಕ್ಕೆ ಬೇಕಾದ ಲೋಕಜ್ಞಾನ ಅಮ್ಮನಿಗಿರಲಿಲ್ಲ, ಆದರೆ, ರಾತ್ರಿಯಾಗುತ್ತಿದ್ದಂತೆ ಪಕ್ಕದ ಊರಿನಿಂದ ದೊಂದಿ ಹಿಡ್ಕೊಂಡು ಕಳ್ರು ಬರ್ತಾರೆ ಅದಕ್ಕೆ ಬೇಗ ಬೇಗ ಉಂಡು ಮಲಗಬೇಕು ಅಂತ ಹೇಳಿ ನಂಗೆ ಅಮ್ಮ ಸಮಾಧಾನ ಮಾಡಿದಳು.

ಆನಂತರ ಹಲವು ಸಲ ಕಾಸರಗೋಡಿನಲ್ಲಿ ಈರೀತಿಯ ಗಲಭೆಗಳು, ಪರಿಣಾಮವಾಗಿ ಬಂದ್, ಸರ್ವೇ ಸಾಮಾನ್ಯವಾಗಿತ್ತು. ಬಂದ್ ಇದ್ದಾಗ ಶಾಲೆಗೆ ರಜೆ ಇರುತ್ತಿತ್ತು ಅನ್ನುವುದು ಬಿಟ್ಟರೆ ಗಲಭೆಯ ಜ್ವಾಲೆ ನಮ್ಮೂರ ತನಕ ಎಂದೂ ಬಂದಿದ್ದು ನನಗೆ ನೆನಪಿಲ್ಲ. ಆದರೆ, ೧೦ನೇ ತರಗತಿ ಮುಗಿಸಿದ ಮೇಲೆ ಕಾಸರಗೋಡಿನಲ್ಲೇ ಕೇರಳದ ಸಿಲೇಬಸ್ ಪ್ರಕಾರ ಓದು ಮುಂದುವರಿಸುವ ಅವಕಾಶವಿದ್ದ ನನ್ನಂತಹ ಹಲವಾರು ಮಂದಿ, ವಿಶೇಷವಾಗಿ ಹುಡುಗಿಯರು ಓದು ಮುಂದುವರಿಸಲು ಕರ್ನಾಟಕಕ್ಕೆ ವಲಸೆ ಬರುತ್ತಿದ್ದುದಕ್ಕೆ ಈ ಹಿಂದು ಮುಸ್ಲಿಂ ಗಲಾಟೆಯೂ ಒಂದು ಕಾರಣ. ಹೆತ್ತವರಿಗೆ ಕಾಳಜಿ, ಯಾವಾಗೆಂದರವಾಗ ಕಾರಣವೇ ಇಲ್ಲದೆ ಹುಟ್ಟಿಕೊಳ್ಳುತ್ತಿದ್ದ ಕಿಚ್ಚು ತೊಂದರೆ ಕೊಟ್ಟರೆ ಅಂತ. ಹಾಗಾಗಿ ಪಕ್ಕದ ದಕ್ಷಿಣ ಕನ್ನಡದ ಒಳ್ಳೆಯ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ( ಹಾಗೆ ನಾನೂ ಕರ್ನಾಟಕಕ್ಕೆ ಬಂದು, ಓದಿ, ಬೆಳೆದು, ಈ ಬ್ಲಾಗು ನೀವು ಓದುವಂತಾಗಿದೆ :) ಇಲ್ಲವಾದರೆ ನಾನು ಈ ಹೊತ್ತಿಗೆ ಕೇರಳದ ಯಾವುದೋ ಮೂಲೆಯಲ್ಲೋ ನಗರದಲ್ಲೋ ಸುಖವಾಗಿರುತ್ತಿದ್ದೆ :) )

+++++++++++++

ಹಿಂದು ಮುಸ್ಲಿಂ ಗಲಭೆ ಅಂದರೆ ಏನು ಅಂತ ಕಣ್ಣಾರೆ ನಾನು ನೋಡಿಲ್ಲದಿದ್ದರೂ ತಿಳಿಯುವ ಕುತೂಹಲಕ್ಕೆ ಓದಿದ್ದು ಖುಶ್ವಂತ್ ಸಿಂಗರ "ಟ್ರೈನ್ ಟು ಪಾಕಿಸ್ತಾನ್"... ಡಿಗ್ರಿಯಲ್ಲಿದ್ದಾಗ ಓದಿದ್ದೆ, ಅತ್ತುಬಿಟ್ಟಿದ್ದೆ. ಆಮೇಲೆ ನೋಡಿದ್ದು "EARTH - 1947". ದೀಪಾ ಮೆಹ್ತಾ ನಿರ್ದೇಶನದ ಈ ಚಿತ್ರ, ಮಾನವತ್ವ ಮಾಸಿ ಹೋಗಿ ದಾನವ ಹುಟ್ಟುವ ಕ್ಷಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು... ಇದರಲ್ಲಿನ ಈ ಹಾಡು ನನಗೆ ಎಂದಿಗೂ ಇಷ್ಟದ ಹಾಡು.

+++++++++++++

ಝಾರ್ಖಂಡದ ರಾಂಚಿಗೆ ಮೂರು ವರ್ಷದ ಹಿಂದೆ, ಚುನಾವಣೆಯ ಸಮಯ ಭೇಟಿ ನೀಡಿದ್ದೆ. ಆಗ ಮೊಹರಂ ಹಬ್ಬ ನಡೀತಾ ಇತ್ತು. ಅದರ ಮೆರವಣಿಗೆ ಹೋಗುತ್ತಿತ್ತು. ಸರಿ, ಕ್ಯಾಮರಾಮನ್ ಕ್ಯಾಮರಾ ಹಿಡಿದುಕೊಂಡು ಶೂಟಿಂಗ್ ಮಾಡಲು ಹೊರಟ, ನಾನೂ ಅವನ ಜತೆ ಹೊರಟೆ. ಮೆರವಣಿಗೆಯ ಶಾಟ್ಸ್ ತೆಗೆದಿದ್ದಾಯಿತು. ನಂತರ ಅದನ್ನು ನೋಡುತ್ತಿದ್ದ ಜನಜಂಗುಳಿಯ ಶಾಟ್ಸ್ ತೆಗೆಯಬೇಕಿತ್ತು. ಕ್ಯಾಮರಾ ಜನರತ್ತ ತಿರುಗಿಸಿದ್ದೇ ತಡ. ನಾಲ್ಕೈದು ಯುವಕರು ಮೆರವಣಿಗೆಯೊಳಗಿಂದ ಈಚೆಗೆ ಬಂದು ಕ್ಯಾಮರಾಮನ್-ನನ್ನು ತಡೆದರು. "ಹಮಾರೇ ಔರತೋಂಕೋ ತುಮಾರೇ ಟಿವಿ ಮೇ ಮತ್ ದಿಖಾವೋ, ಶೂಟಿಂಗ್ ಮತ್ ಕರ್ನಾ" ಅಂತ ಹೇಳಿದರು. ಕ್ಯಾಮರಾಮನ್ ಒಪ್ಪಿ, ಬುರ್ಖಾಧಾರಿ ಹೆಂಗಸರನ್ನು ಶೂಟ್ ಮಾಡದೆ ಬಿಟ್ಟ. ಬೇರೆ ಗಂಡಸರ ಶಾಟ್ಸ್ ತೆಗೆದುಕೊಂಡ.

+++++++++++++

ಮೆರವಣಿಗೆ ಹೋಗುತ್ತಿದ್ದವರಲ್ಲಿ ಹಲವು ಚಿಣ್ಣರು ಕೂಡ ದಂಡ, ಕತ್ತಿ ಹಿಡಿದು ವರಸೆ (ಕತ್ತಿಯುದ್ಧವಾ? ಏನು ಹೇಳ್ತಾರೋ ಗೊತ್ತಿಲ್ಲ.) ಅಭ್ಯಾಸ ಮಾಡುತ್ತ ಸಾಗಿದ್ದರು. ನಾನು ಮೆಲ್ಲನೆ ಒಬ್ಬ ೫-೬ ವರ್ಷದ ಪುಟ್ಟ ಪೋರನನ್ನು ನಿಲ್ಲಿಸಿ ಕೇಳಿದೆ, "ಯೇ ಕ್ಯೂಂ ಪಕಡೇ ಹೋ" ಅಂತ. ಆತ ಹೇಳಿದ ಒಂದೇ ಶಬ್ದದಲ್ಲಿ ಉತ್ತರ - "ಜೆಹಾದ್ ಕೇ ಲಿಯೇ".

ನಾನು ದಂಗು ಬಡಿದವಳು ಮತ್ತೆ ಕೇಳಿದೆ, "ಜೆಹಾದ್ ಕ್ಯಾ ಹೈ" ಅಂತ. ಆ ಪುಟ್ಟ ಚಂದಕ್ಕೆ ನಕ್ಕು ಉತ್ತರ ಕೊಡದೆ ಮುಂದೆ ಸಾಗಿದ.

+++++++++++++

ಏನೇ ಆದರೂ, ನನ್ನ ಸುತ್ತಲ ವಾತಾವರಣದಲ್ಲಿ ನನ್ನ ಕಣ್ಣೆದುರಿಗೆ ಕೋಮು ಗಲಭೆಗಳು ಆದದ್ದಿಲ್ಲ. ಧರ್ಮದ ಹೆಸರಲ್ಲಿ ಜಗಳಗಳು ಯಾಕೆ ಆಗುತ್ತವೆಂಬುದಕ್ಕೆ ಲಾಜಿಕಲ್ ಉತ್ತರ ನನಗಿನ್ನೂ ಸಿಕ್ಕಿಲ್ಲ.

Sunday, April 6, 2008

28ರಲ್ಲಿ ಗುಂಪಿಗೆ ಸೇರದವರು..!

1998 ಅಥವಾ 1999ನೇ ಇಸವಿ. ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದ ಕಾಲ. ರಜದಲ್ಲಿ ಇರಬೇಕು, ಸರಿಯಾಗಿ ನೆನಪಿಲ್ಲ, ಅಜ್ಜನ ಮನೆಗೆ ಒಂದು ಸಾರಿ ಹೋಗಿದ್ದೆ. ಅಲ್ಲಿ ಮಾವಂದಿರ ಮಕ್ಕಳೊಡನೆ ಮಾತಾಡುತ್ತಿದ್ದಾಗ ನಾನು ಜರ್ನಲಿಸಂ ಸೇರಲಿರುವುದನ್ನು, ಆಮೇಲೆ ನನಗೆ ಜರ್ನಲಿಸ್ಟ್ ಉದ್ಯೋಗ ಸಿಗಲಿರುವುದನ್ನು ತಿಳಿಸಿದೆ. ಆಗ ನನ್ನ ಪುಟ್ಟ ಭಾವ, 6-7 ವರ್ಷದ ಪ್ರಶಾಂತ, ’ಜರ್ನಲಿಸ್ಟಾ?’ ಎಂಬ ಉದ್ಗಾರ ತೆಗೆದ. ಯಾಕೋ ಎಂದು ಕೇಳಿದರೆ, ಸಿಕ್ಕಾಪಟ್ಟೆ ನಾಚಿಕೊಂಡ.


ಸ್ವಲ್ಪ ಒತ್ತಾಯ ಮಾಡಿದ ಮೇಲೆ, ಅವನ ಬಾಯಿಂದ ಕಾರಣ ಹೊರಬಂತು. ಕೆಲದಿನಗಳ ಹಿಂದೆ ಉದಯ ಟಿವಿಯಲ್ಲಿ ಬರುತ್ತಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ನಿಜಲಿಂಗಪ್ಪನವರ ಸಂದರ್ಶನ ನೋಡಿದ್ದನಂತೆ. ಅದರಲ್ಲಿ ಇಂಟರ್ವ್ಯೂ ಮಾಡುತ್ತಿದ್ದ ತೇಜಸ್ವಿನಿ ಎಂಬ ಪತ್ರಕರ್ತೆಯ ಹಣೆಗೆ, ಇಂಟರ್ವ್ಯೂ ಮುಗಿಸಿ ಏಳುವಾಗ ನಿಜಲಿಂಗಪ್ಪನವರು ಮುತ್ತು ಕೊಟ್ಟಿದ್ದರಂತೆ... :) ಅದಕ್ಕೆ ಪುಟ್ಟ ತನ್ನ ಅತ್ತಿಗೆಗೆ ಎಲ್ಲಿ ಹಾಗಾಗುತ್ತದೋ ಅಂತ ಭಯಪಟ್ಟು, ಜರ್ನಲಿಸಂ ಬಿಟ್ಟುಬಿಡಲು ಸಲಹೆ ನೀಡಿದ್ದ... :)


++++++++++++++++++


ಕನ್ನಡ ದೃಶ್ಯ ಪತ್ರಿಕೋದ್ಯಮದಲ್ಲಿ ’ಜರ್ನಲಿಸ್ಟ್’ ಆಗಿರುವ, extra-ordinary ಎನ್ನುವಂತಹ ಮಹಿಳೆಯರ ಹೆಸರು ಹೆಚ್ಚೇನೂ ಕೇಳಿಬರುವುದಿಲ್ಲ. ಇಂತಹದರಲ್ಲಿ, ತೇಜಸ್ವಿನಿ ತನ್ನ ವೃತ್ತಿಪರತೆಯಿಂದಲೇ ಪ್ರಸಿದ್ಧಿ ಪಡೆದಿದ್ದರು. ಅದರ ಜತೆಗೆ ಬೆಳೆದ ರಾಜಕೀಯದ ನಂಟು 2004ರಲ್ಲಿ ಅವರನ್ನು ದೇವೇಗೌಡರ ವಿರುದ್ಧ ಗೆದ್ದು ಸಂಸದೆಯಾಗುವಂತೆ ಮಾಡಿತು.


ಮೊನ್ನೆ ಮೊನ್ನೆ ಒಂದು ದಿನ ನನ್ನ ಹಣೆಬರಹ ನನ್ನನ್ನು ಕೊನೆಗೂ ಅದೇ ತೇಜಸ್ವಿನಿಯ ಎದುರು ತಂದು ನಿಲ್ಲಿಸಿತು :) ಅಲ್ಲಿ ಕಂಡವರು, ಒಬ್ಬ ಬಿಸಿರಕ್ತದ, ಆದರ್ಶಗಳೇನೆಂದು ಗೊತ್ತಿರುವ, ಕನಸುಗಳನ್ನು ಕಾಣುವ ಶಕ್ತಿಯಿರುವ ರಾಜಕಾರಣಿ, ಸಂಸದೆ. ಆಕೆಯೊಳಗಿನ ಪತ್ರಕರ್ತೆ ಮಾತ್ರ ಸ್ವಲ್ಪ ನಿರಾಶರಾಗಿದ್ದುದನ್ನು ಈ ಹಿಂದೆ ಬೇರ್ಯಾವುದೋ ಸಂದರ್ಶನದಲ್ಲಿ ನೋಡಿದ್ದೆ. ರಾಜಕಾರಣಿಯಾಗಿ ಕನಸು ಕಾಣುವ ಹಕ್ಕು ಕಳೆದುಕೊಂಡಿದ್ದೇನೆ ಎಂದಿದ್ದರು ಆಕೆ. ಬಂದಿದ್ದನ್ನು ಎದುರಿಸಲೇಬೇಕಾದ ಅನಿವಾರ್ಯತೆಯನ್ನು ಆಕೆ ಒಪ್ಪಿಕೊಂಡಿದ್ದರು.


ಕರ್ನಾಟಕದ ಜನ ಆರಿಸಿ ದೆಹಲಿಗೆ ಕಳುಹಿಸಿದ 28 ಮಂದಿಯಲ್ಲಿ ಆಟಿಗೊಮ್ಮೆ, ಹುಣ್ಣಿಮೆಗೊಮ್ಮೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಹಾಜರಾಗಿ ತುಟಿ ಹೊಲಿದುಕೊಂಡು ಕೂರುವವರೇ ಹೆಚ್ಚು. ಕೆಲವೇ ಕೆಲವು ಮಂದಿ ಮಾತ್ರ ನಿಯಮಿತವಾಗಿ ಸದನಕ್ಕೆ ಹಾಜರಾಗುವವರು, ಹಾಜರಾದರೂ ಮಾತಾಡುವವರ, ಚರ್ಚೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯೇ ಇದೆ.

ಪರಿಸ್ಥಿತಿ ಹೀಗಿರುವಾಗ ರೆಗ್ಯುಲರ್ ಆಗಿ ಸಿನ್ಸಿಯರ್ ಆಗಿ ಉತ್ಸಾಹ ಕಳೆದುಕೊಳ್ಳದೆ ಸದನದ ಕಲಾಪಗಳಲ್ಲಿ ಭಾಗವಹಿಸುವ ಈ‍ ಅಪರೂಪದ ಸಂಸದೆಗೆ ಇನ್ನೂ ಹೆಚ್ಚು ಮಹಿಳೆಯರನ್ನು ಸದನದಲ್ಲಿ ನೋಡುವ ಆಸೆಯಿದೆ. ಪಾರ್ಲಿಮೆಂಟಿನಲ್ಲಿ ಎಂದೋ ಚರ್ಚೆಗೆ ಬರಬೇಕಾಗಿದ್ದ 33% ಮಹಿಳಾ ಮೀಸಲಾತಿ ಮಸೂದೆಗಾಗಿ ಇವತ್ತಿಗೂ ಹೋರಾಡುತ್ತಿರುವವರಲ್ಲಿ ಈಕೆಯೂ ಒಬ್ಬರು. ಮಹಿಳೆಯರನ್ನು ಬದಿಗೊತ್ತಿಯೇ ಸಾಗುತ್ತಿರುವ ವ್ಯವಸ್ಥೆಯ ಬಗೆಗೆ ಸಾಧ್ಯವಾದಾಗಲೆಲ್ಲ ದನಿಯೆತ್ತುವ ಈಕೆ, ಪಾರ್ಲಿಮೆಂಟ್ ಅಧಿವೇಶನದಲ್ಲಿ ಅತಿ ಹೆಚ್ಚು ಹಾಜರಾತಿಯಿರುವ ಕರ್ನಾಟಕದ ಸಂಸದೆ.


ರಾಜಕೀಯವೆಂದರೆ ತನ್ನೊಳಗೆ ಇಳಿದವರಿಗೆಲ್ಲ ಕೊಳಕಿನ ಕೆಸರು ಮೆತ್ತುವ ಕೂಪವೆಂಬುದು ಒಂದು ಹಂತದ ತನಕ ಒಪ್ಪಬಹುದಾದ ಮಾತು. ಆದರೆ ಈ ದೇಶದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ರಾಜಕೀಯದಿಂದ ಮಾತ್ರ ಸಾಧ್ಯ. ಬಹುಶ: ಈ ಸಿದ್ದಾಂತದ ಬೆನ್ನಹಿಂದೆ ಬಿದ್ದು ರಾಜಕೀಯಕ್ಕೆ ಇಳಿದಿರಬೇಕು ತೇಜಸ್ವಿನಿ... ಮೆತ್ತಿದ ಕೆಸರಿನ ನಡುವೆಯೂ ನಗು ಮರೆಯದ ಈಕೆ ಮುಂದೆಯೂ ಹೀಗೆಯೇ ಇರಲಿ, ಸಂಸತ್ ಸದನದಲ್ಲಿ ಇಂತಹ ಬಿಸಿರಕ್ತ-ಹೊಸ ಯೋಚನೆಗಳು ತುಂಬಿದ ಮಹಿಳೆಯರ ಸಂಖ್ಯೆ ಹೆಚ್ಚಲಿ ಅಂತ (ಇಲ್ಲಿವರೆಗೆ ಓಟೇ ಹಾಕದ ಕಾರಣ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ನೈತಿಕ ಹಕ್ಕು ನನಗೆ ಇಲ್ಲದಿದ್ದರೂ) ಮನದುಂಬಿ ಹಾರೈಸ್ತೀನಿ... :)

(ಚಿತ್ರ ಕೃಪೆ : ಶ್ರೀನಿಧಿ ಡಿ.ಎಸ್.)

Sunday, March 23, 2008

ನೀವೇನಂತೀರಾ?

ಬ್ಲಾಗರ್ಸ್ ಮೀಟು ಕಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಲಿ ಮಾತಾಡಿದ ಹೆಚ್ಚಿನವರು ಹೇಳಿದ್ದು, ಬ್ಲಾಗುಗಳು ಭಾವನೆಗಳ ತೀರದಿಂದಾಚೆಗೆ ಕಾಲಿಟ್ಟು ಗಂಭೀರ ವಿಚಾರಗಳ ಕುರಿತು ಮಾತಾಡಬೇಕು, ಮಾಹಿತಿ ನೀಡುವಂತಹ ಬರಹಗಳು ಹೆಚ್ಚಬೇಕು ಅಂತ. ಈ ಹಿನ್ನೆಲೆಯಲ್ಲಿ ಈ ಬರಹ.

++++++++++

ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಹತ್ತಿರ ಹತ್ತಿರ ಎರಡು ವರ್ಷಗಳಾಯಿತು. ನನಗೆ ಅನಿಸಿದ ಗಂಭೀರ ವಿಚಾರಗಳನ್ನು ಮಾತ್ರ ಬ್ಲಾಗಿನಲ್ಲಿ ಬರೆಯುತ್ತಿದ್ದೆ. ಆಗ ನನಗೆ ಇಂಟರ್ನೆಟ್ಟಿನಲ್ಲಿ ಕನ್ನಡ ಟೈಪು ಮಾಡಬಹುದು ಎಂದಾಗಲೀ, ಕನ್ನಡ ಬ್ಲಾಗರುಗಳ ಸಮುದಾಯವೊಂದು ರೂಪುಗೊಳ್ಳುತ್ತಿರುವುದಾಗಲೀ ಯಾವುದೂ ತಿಳಿದಿರಲಿಲ್ಲ. ನನ್ನ ಬರಹಗಳಿಗೆ ಸಿಗುತ್ತಿದ್ದ ಓದುಗರು ಮತ್ತು ಪ್ರೋತ್ಸಾಹ ಅಷ್ಟೇನಿರಲಿಲ್ಲ. ಬರೆಯಲೇಬೇಕು ಅನಿಸಿದಾಗ ಮಾತ್ರ ಮನಸಿಟ್ಟು ಬರೆಯುತ್ತಿದ್ದೆ.

ಒಂದು ಸಲ ಏನೂ ಬರೆಯದೆಯೇ ತಿಂಗಳುಗಟ್ಟಲೆ ಕಾಲ ಬ್ಲಾಗು ತೆಪ್ಪಗಿತ್ತು. ಹಾಗಿದ್ದಾಗ ರಾಧಾಕೃಷ್ಣ ನನಗೆ ಸಿಂಧು ಮತ್ತು ಶ್ರೀಮಾತಾರ ಬ್ಲಾಗುಗಳನ್ನು ತೋರಿಸಿದ. ಹಲವು ದಿನ ಅವುಗಳನ್ನು ನೋಡಿದೆ. ಅವುಗಳಲ್ಲಿದ್ದ ಲಿಂಕುಗಳಿಂದ ಇನ್ನಿತರ ಹಲವಾರು ಬ್ಲಾಗುಗಳಿಗೆ ಹೋದೆ. ಹೊಸ ಲೋಕವಿತ್ತು ಅಲ್ಲಿ. ಕೊನೆಗೆ ನಾನೂ ಕನ್ನಡ ಕುಟ್ಟುವುದು ಹೇಗೆ ಅಂತ ತಿಳಿದುಕೊಂಡೆ, ಹಲವರಿಗೆ ಅನಿಸಿದ್ದನ್ನು ಕಮೆಂಟು ಮಾಡಿ ಕುಟ್ಟಿದೆ. ನಾನು ಕನ್ನಡ ಕಲಿತಿದ್ದನ್ನು ಜಗತ್ತಿಗೆ ತಿಳಿಸಲಿಕ್ಕಾಗಿ ಮನಸು ಮಾತಾಡ್ತಿದೆ ಅಂತ ಶುರು ಮಾಡಿದೆ.

ಇಷ್ಟೆಲ್ಲ ಆದ ಮೇಲೆ ಒಂದು ದಿನ ಕುಳಿತು ನನ್ನ ಹಳೆಯ ಬ್ಲಾಗು ನೋಡಿದರೆ ಅದರಲ್ಲಿ ನನಗೆ ಬರುವ ಹರಕು ಮುರುಕು ಇಂಗ್ಲಿಷಿನಲ್ಲಿ ಬರೆದ, ನಾನು ಇಂಟರ್-ನೆಟ್ಟಿಗಾಗಿ ಟಾಟಾ ಇಂಡಿಕಾಂ ಮೊರೆಹೋಗಿ ಪಟ್ಟ ಕಷ್ಟಕೋಟಲೆಗಳಿಂದ ಹಿಡಿದು, ರೇಡಿಯೋ-ಟಿವಿ ಜಾಹೀರಾತು ಜಗತ್ತಿನ ಕುರಿತು, ನನ್ನ ಮನೆಯೆದುರು ದಿನಾ ಬರುವ ಮಾಟ ತೆಗೆಯುವವಳ ವರೆಗೆ ಒಂದಿಷ್ಟು ವಿಚಾರಗಳ ಕುರಿತು ಬರಹಗಳಿದ್ದವು. ಅವೆಲ್ಲವೂ ನನಗೆ ಆಗ ಮುಖ್ಯವಾಹಿನಿಯಲ್ಲಿದ್ದ ಬ್ಲಾಗುಗಳಿಗಿಂತ ತುಂಬಾ ಭಿನ್ನವಾಗಿಯೂ ಜಗತ್ತಿನ ಕಷ್ಟಗಳನ್ನೆಲ್ಲಾ ನಾನೊಬ್ಬಳೇ ತಲೆಮೇಲೆ ಹೊತ್ತಿದ್ದೇನೆ ಅನ್ನುವಂತಹ ಭಾವನೆ ಬರುವಂತಹವಾಗಿಯೂ ಕಾಣತೊಡಗಿದವು. ಬಹುಶ: ಇವೆಲ್ಲ ಬ್ಲಾಗಿನಲ್ಲಿ ಹೇಳಿಕೊಳ್ಳುವಂತಹವಲ್ಲ ಅನಿಸಿತು. ಸರಿ, ನಿರ್ದಾಕ್ಷಿಣ್ಯವಾಗಿ ಆ ಬ್ಲಾಗ್ ಡಿಲೀಟ್ ಮಾಡಿದೆ. ಅದಕ್ಕೆ ರೆಗ್ಯುಲರ್ ಆಗಿ ಬಂದು ಓದಿ ಹೋಗುತ್ತಿದ್ದಿದ್ದು ಭಾಗವತರು ಮಾತ್ರ ಅಂತ ನೆನಪು. ನಾನು ಮಾತ್ರ ನನಗೆ ಗೊತ್ತಿರುವುದನ್ನು ನಾನು ಬರೆದು ಕಡಿದು ಕಟ್ಟೆ ಹಾಕುವುದು ಏನೂ ಇಲ್ಲವೆಂದುಕೊಂಡೆ.

++++++++++

ಈಗ ಅನಿಸುತ್ತಿದೆ, ಬಹುಶ ಆ ಕಾಲಕ್ಕೆ ಟ್ರೆಂಡ್ ಹಾಗೆ ಇತ್ತು ಅಂತ. ಆದರೆ ಈ ಕಾಲದಲ್ಲಿ ಮಾಹಿತಿಯುಕ್ತ ಅಥವಾ ಯೋಚನೆಗೆ ಹಚ್ಚುವ ಬರಹಗಳಿಗೆ ಪ್ರೋತ್ಸಾಹ ಇದೆಯೇನೋ ಅಂತ ಮೊನ್ನೆ ಮೊನ್ನೆ ಟೀನಾ, ಚೇತನಾ ಬ್ಲಾಗುಗಳಲ್ಲಿ ವಿಹರಿಸುತ್ತಿದ್ದಾಗ ಅನಿಸಿತು. ಏನು ಮಾಡಬಹುದು? ಅಂತ ಟೀನಾ ಕೇಳಿಕೊಂಡಿದ್ದಾರೆ. ಮಹಿಳಾದಿನ ಮತ್ತು ಅಮೃತಾಳ ಬಗೆಗೆ ಚೇತನಾ ಬರೆದಿದ್ದು ಕೂಡ ಎಲ್ಲರನ್ನೂ ಯೋಚನೆಗೆ ಹಚ್ಚುವ ವಿಷಯವನ್ನೇ.

++++++++++

ನಿಜಕ್ಕೂ ಬ್ಲಾಗಿಂಗ್-ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ, ಇನ್ನೂ ಏನೇನೋ ಆಗಬೇಕಿದೆ. ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ, ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು. ಮಾಹಿತಿ ನೀಡುವ, ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ.

ಆದರೆ, ಯಾವುದೇ ಸೆನ್ಸೇಶನಲ್ ವಿಚಾರಗಳ ಹಂಗಿಲ್ಲದೆ, ಬರೆಯಬೇಕೆಂಬ ಪ್ರೀತಿಗೆ ಮತ್ತು ಹಂಚಿಕೊಳ್ಳಬೇಕೆಂಬ ತುಡಿತಕ್ಕೆ ಶರಣಾಗಿ ಬರೆಯುವ ಬರಹಗಳು ಹೆಚ್ಚಬೇಕಿದೆ. ಇದು ಸಾಧ್ಯವಾಗುವುದು ಸಂಖ್ಯೆಯಲ್ಲಿ ೩೫೦ಕ್ಕೂ ಹೆಚ್ಚಿರುವ ಬ್ಲಾಗರುಗಳ, ಮತ್ತು ಕಮೆಂಟು ಹಾಕಿ ಚರ್ಚಿಸುವ, ಪ್ರೋತ್ಸಾಹಿಸುವ, ಅಥವಾ ಭೇಟಿಕೊಟ್ಟು ಓದುವ- ಆದರೆ ಏನೂ ಹೇಳಲು ಇಷ್ಟ ಪಡದ ಇನ್ನೆಷ್ಟೋ ಅಂತರ್ಜಾಲಿ ಕನ್ನಡಿಗರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಅದು ಆಗಬೇಕಿದೆ.

++++++++++

ಇಷ್ಟು ಮಾತ್ರವಲ್ಲ. ಬರಹದ ತೂಕದ ಮೇಲೆ ಬರಹಗಾರನನ್ನು ಅಥವಾ ಬರಹಗಾರ್ತಿಯನ್ನು ಅಳೆಯುವ ಕೆಲಸ ಆಗಬೇಕು. ಬರಹಗಾರ ಅಥವಾ ಬರಹಗಾರ್ತಿಯ ಹೆಸರಿನ ಮೇಲೆ ಬರಹವನ್ನು ಅಳೆಯುವುದು ತಪ್ಪು ಅಂತ ಹೇಳ್ತಿಲ್ಲ ನಾನು, ಆದ್ರೆ ಸಹೃದಯತೆಯ ಮಟ್ಟ ನಮ್ಮಲ್ಲಿ ಇನ್ನೂ ಹೆಚ್ಚಬೇಕಿದೆ ಅಂತ ನಂಗೆ ಅನಿಸ್ತಿದೆ.

++++++++++

ಕನ್ನಡ ಬ್ಲಾಗುಗಳ ಸಂಖ್ಯೆ ೩೫೦ ದಾಟಿದೆ ಅಂತ ಮೊನ್ನೆ ಸುಶ್ರುತ ಮಾಡಿದ ಪಟ್ಟಿ ನೋಡುವಾಗ ತಿಳಿಯಿತು. ಆ ಪಟ್ಟಿಯಿಂದಲೂ ಅನೇಕ ಬ್ಲಾಗುಗಳು ಮಿಸ್ ಆಗಿವೆ. ಅವುಗಳಲ್ಲಿ ಮುಕ್ಕಾಲುಪಾಲು ನಾನು ನೋಡೇ ಇರಲಿಲ್ಲ, ಅಷ್ಟು ಅಗಾಧವಾಗಿ ಇಂದು ಕನ್ನಡದಲ್ಲಿ ಬ್ಲಾಗಿಂಗ್ ಬೆಳೆದಿದೆ. ಇಷ್ಟು ಜನರಲ್ಲಿ ಅರ್ಧ ಸೇರ್ಕೊಂಡ್ರೂ ಏನಾದ್ರೂ ಒಳ್ಳೆ ಕೆಲಸ ಮಾಡಬಹುದಲ್ವಾ? ಕಥೆ-ಕವನ ಬರೆಯುವುದು ಒಳ್ಳೆಯದು ಅನ್ನುವುದು ನಿಜ. ಆದರೆ ಬರೀ ಬರೆಯುತ್ತಾ ಕೂತರೆ ಅದು ಥಿಯರಿಯ ಹಂತದಲ್ಲಿಯೇ ಕೊನೆಯಾಗುವ ಅಪಾಯ ಇದೆಯೇನೋ ಅಂತ ಇತ್ತೀಚೆಗೆ ನಂಗೆ ಅನಿಸ್ತಿದೆ... ಬರಹಕ್ಕೆ ಉದ್ದೇಶ ಇರಬೇಕೆ ಇರಬೇಡವೆ ಅಂತ ನನ್ನಲ್ಲೇ ಲೆಕ್ಕಾಚಾರ ಶುರುವಾಗಿದೆ! ನೀವೇನಂತೀರಾ?

Thursday, March 6, 2008

LET'S MEET...!!!


ಇಂಟರ್ನೆಟ್ಟಲ್ಲಿ ಒಬ್ರು ಬರೆದಿದ್ದು ಇನ್ನೊಬ್ರು ಓದಿ ಖುಶಿ ಪಡ್ತೀವಿ, ಒಬ್ರಿಗೊಬ್ರು ಪರಿಚಯ ಇರ್ತೀವಿ.. ಆದ್ರೆ, ನಿಜಜಗತ್ತಿನಲ್ಲಿ ಒಬ್ರಿಗೊಬ್ರು ಭೇಟಿ ಆದಾಗ ಆ ಮಜಾನೇ ಬೇರೆ!

ನವ ಪ್ರಕಾಶನ ಸಂಸ್ಥೆ 'ಪ್ರಣತಿ', blogger's meet ಮಾಡ್ಬೇಕು ಅಂತ ಹೊರಟಿದೆ. ಮಾರ್ಚ್ ೧೬ರ ಭಾನುವಾರ ಸಂಜೆ ನಾವೆಲ್ಲ ಪರಸ್ಪರ ಭೇಟಿಯಾಗಬಹುದಾದ ಅವಕಾಶ ಒದಗಿ ಬಂದಿದೆ...

ದಿನ - ೧೬ ಮಾರ್ಚ್ ೨೦೦೮
ಸಮಯ - ಸಂಜೆ ನಾಲ್ಕು ಗಂಟೆ
ಜಾಗ - ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಬರ್ತಾರೆ, ಇರ್ತಾರೆ, ಮಾತಾಡ್ತಾರೆ. ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ನಂಗೆ 'ಪ್ರಣತಿ' ತಂಡ ಪ್ರೀತಿಯಿಂದ ಆಹ್ವಾನಿಸಿದೆ... ನೀವೂ ಬನ್ನಿ.

ಈ ಪೋಸ್ಟ್ ನೋಡಿದವರೆಲ್ರಿಗೂ ಜಾಲಿಗರ GET-TOGETHERಗೆ ಸುಸ್ವಾಗತ...
:-)

Saturday, February 16, 2008

ಎರಡು ಹನಿಗಳು...

*************************
ಕೇಳದೇ ಇದ್ದಿದ್ದು
ನೂರಾರು ಕೊಟ್ಟು
ಕೇಳಿದ್ದೊಂದೂ ಕೊಡದೆ
ಆಟವಾಡಿಸುವ ಬದುಕಿಗೆ

ಕೊನೆಯದಾಗಿ ಕೇಳಿದ್ದು
ನಿನ್ನನ್ನು...

ಕೇಳದೆ ಇದ್ದಿದ್ದು
ನಿನ್ನನ್ನು...

***************************

ಇಲ್ಲಿರುವುದೆಲ್ಲ ಕೋಮಾಗಳೇ...
ಎಂದು ತಿಳಿದೂ ತಿಳಿದೂ
ಒಂದೇ ಒಂದು
ಪೂರ್ಣವಿರಾಮ
ಕಾಣುವಾಸೆ

ಕೋಮಾದೊಡನೆ
ಮುಂದೆ ಹೋಗಲೇ ಬೇಕು

ಪೂರ್ಣವಿರಾಮದೊಡನೆಯೂ
ಮುಂದೋಡುವಾಸೆ!!!
**********************

Saturday, January 26, 2008

ಈ ಕನಸಿಗೆ ನೂರು ತುಂಬಿತು...!



ನಮ್ಮೆಲ್ಲರ ಕನಸಿಗೆ ಆದಿತ್ಯ ಬಣ್ಣ ಹಚ್ಚುತ್ತಿದ್ದಾಗ ತೆಗೆದ ಚಿತ್ರ...
========================================

ಜನವರಿ ೨೯ಕ್ಕೆ ಈ ಕನಸಿಗೆ ನೂರು ತುಂಬಿತು...!

Saturday, January 19, 2008

ಬೇಸರವಾದಾಗ..!

ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ!!

ಬಣ್ಣ ಹಚ್ಚುವವರು...

ಚಿತ್ರ ಯಾರದಾದರೇನು,
ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ...
ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ.
ನಮ್ಮದೇ ಚಿತ್ರ ಕೂಡ.
ಇವೆಲ್ಲ ಆಟ ನಡೆಯುವುದು
ನಮಗೆ ಬೇಕಾದ ಬಣ್ಣ
ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ!!


ಯಾಕೆ?

ಹೂಗಿಡಕ್ಕೆ ನೀರು ಹೊಯ್ದು,
ಗೊಬ್ಬರ ಹಾಕಿ,
ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ
ಪ್ರೀತಿಯಿಂದ ಬೆಳೆಸುವುದು
ಯಾಕೆ?
ಕೊನೆಗೊಂದು ದಿನ ಹೂಬಿಟ್ಟಾಗ
ಕೊಯ್ದು ಕೊಲ್ಲಲಿಕ್ಕೆಯೇ?


ಬದುಕು ಅಡಗಿರುವುದೇ
ಅಡಗಿರುವುದನ್ನು ಹುಡುಕುವುದರಲ್ಲಿ...


ಅಡಗಿರುವುದನ್ನು ಹುಡುಕುವುದೇ
ಒಂದು ದೊಡ್ಡ ಸಂಭ್ರಮ...
ಆದರೆ,
ಅಡಗಿರುವುದು ಎದುರಿಗೆ ತೆರೆದು ನಿಂತಾಗ
ಇನ್ಯಾವುದೋ ಅಡಗಿರುವುದರ ಕಡೆಗೆ
ಸೆಳೆಯುತ್ತದೆ ಮನ.

ನೋವು

ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು.
ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು.
ನನಗೆ ಮಾತ್ರ
ಸಿಹಿ ಬೇಕಾಗಿಲ್ಲ
ಬೆಳೆಯೋದೂ ಬೇಕಾಗಿಲ್ಲ
ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ..!! :-(

Tuesday, December 11, 2007

ಬಹಳ ದಿನಗಳ ಬಳಿಕ

ಬಹಳ ದಿನಗಳ ಬಳಿಕ
ಶಕುಂತಲೆಯ ನೆನಪಾದ ದುಶ್ಯಂತ
ಕಾಡಿಗೆ ಹೋದ
ಅಲ್ಲೇ
ಆತ ಬಿಟ್ಟು ಹೋದಲ್ಲೆ
ಅದೇ ಆಶ್ರಮದಂಗಳದಲ್ಲೆ
ಕುಳಿತಿದ್ದಳು ಆಕೆ...

ಬಳಿಸಾರಿ
ಕಣ್ಣಲ್ಲಿ ಕಣ್ಣಿಟ್ಟು
ನೋಡಹೊರಟನಾತ
ಆಕೆಯ ಕಣ್ಣಲ್ಲಿ
ಅವನಿಗೆ ಕಂಡಿದ್ದು
ಅವಳಲ್ಲ...

ಸತ್ತ ಶಾಕುಂತಲೆ
ಮತ್ತು
ಶೂನ್ಯ

Wednesday, August 8, 2007

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು...

ಬಣ್ಣ ಹಚ್ಚುವವರಿಗೆ ಯಾರು ಬರೆದ ಚಿತ್ರವಾದರೇನು, ಬಣ್ಣ ಹಚ್ಚುವುದೇ ಕೆಲಸವಾಗಿರುವಾಗ? ಕಥೆ ಹೇಳುವವರಿಗೆ ಎಲ್ಲಾದರೇನು, ಕೇಳಲು ಜನವಿದ್ದರಾಯಿತು. ಬದುಕಿಗದ್ದಿದ ಮನಸಿನ ಕುಂಚ ತನಗೆ ಸಿಕ್ಕ ಕ್ಯಾನ್ವಾಸಿನಲ್ಲಿ ಬಣ್ಣ ತುಂಬಹೊರಟಿದೆ, ಮತ್ತೆ ತನಗೆ ಬೇಕಾದ ಕ್ಯಾನ್ವಾಸು ಮನಸಿಗೆ ಸಿಗುವ ತನಕ ಕನಸು ರೆಕ್ಕೆ ಮುಚ್ಚಿರುತ್ತದೆ, ಬ್ಲಾಗು ತಣ್ಣಗಿರುತ್ತದೆ.

ತಾನೇ ಕಥೆಯಾಗಹೊರಟ ಬದುಕಿಗೆ ಕಥೆ ಬರೆಯುವ ಹುಚ್ಚು... ಇನ್ನೊಬ್ಬರ ಕಥೆಯಾಳಕ್ಕಿಳಿಯುವ ಹುಚ್ಚು. ಹಾಗೆ ನೋಡಿದರೆ ಬದುಕೇ ದೊಡ್ಡ ಕ್ಯಾನ್ವಾಸು... ಇದರಲ್ಲಿ ಬ್ಲಾಗ್ ಪ್ರಪಂಚ ಬಿಡಿಸಿದ ಚಿತ್ರಗಳು ಹಲವು, ನೀಡಿದ ನೋಟಗಳು ನೂರು, ಪರಿಚಯವಾದ ಸಹಪಯಣಿಗರು ಹಲವರು. ಕಲ್ಪನೆಯ ಲೋಕದಲ್ಲಿ ಗರಿಬಿಚ್ಚಿ ಹಾರುವಾಗ ಹಕ್ಕಿ, ಕನಸು, ಚಂದ್ರ, ಬೇಸರ, ಮೆಸೇಜು, ನೆನಪು, ಕುಡುಕ, ಕರಿಪರದೆ, ಚಿನ್ನು, ಮೀನು ಇತ್ಯಾದಿ ಜೀವತಾಳಿದ್ದವು.. ಅಲ್ಲೊಂದು ಇಲ್ಲೊಂದು ಹನಿಗಳು, ಹರಟೆಗಳು ಹುಟ್ಟಿಕೊಂಡಿದ್ದವು.

ರಶೀದ್ ಅಂಕಲ್-ರ ಟ್ರೇಡ್-ಮಾರ್ಕ್ ಪದ್ಯಚಿತ್ರಗಳು, ಜೋಗಿಯವರ ಅದ್ಭುತ ಕಥೆಗಳು, ಮಯ್ಯರ(ಭಾಗವತ್ರ) ಕುಂದಾಪ್ರ ಕನ್ನಡ ಕ್ಲಾಸು, ಸಿಂಧುವಿನ ಭಾವಯಾನದ ಬರಹಗಳು, ಹತ್ವಾರರ ಮಾಯಾಜಗತ್ತು, ತುಳಸೀವನ, ಕುಂಟಿನಿಯವರ ನಾಲ್ಕೇ ನಾಲ್ಕು ಸಾಲುಗಳು, ಸತೀಶರ ಎನ್ನಾರೈ ಕನ್ನಡಿಗನ ಮನದಾಳದ ಹಲುಬುಗಳು, ಈಗಷ್ಟೆ ಮತ್ತೆ ಚಿಗುರಿಕೊಂಡ ಇಸ್ಮಾಯಿಲ್, ನಾಡಿಗ್ ಮತ್ತು ಪಿಚ್ಚರ್ ಬ್ಲಾಗ್ಸ್ ಮತ್ತು ಹಲವಾರು ಬ್ಲಾಗರ್ಸ್ ಬರೆಯುವ ನೂರಾರು ಭರವಸೆ ಮೂಡಿಸುವ ಬರಹಗಳು - ಎಲ್ಲಾ ಇಷ್ಟಪಟ್ಟು ಓದುತ್ತಿದ್ದೆ, ಎಲ್ಲಾದರಿಂದಲೂ ಸ್ವಲ್ಪ ಸಮಯ ನಾನು ದೂರ.

ಮತ್ತೆ ಸಮಯ ಸಿಕ್ಕಾಗ, ಕನಸು ಕರೆದಾಗ, ಕಲ್ಪನೆ ಪದಗಳಲ್ಲಿ ಗೂಡುಕಟ್ಟಿಕೊಳ್ಳುತ್ತ ಕಾಯುವಾಗ, ಇಲ್ಲಿ ಬರುವೆ, ಮನಸಿನ ಮಾತುಗಳನ್ನು ಹಂಚಿಕೊಳ್ಳಲು. ಅಲ್ಲೀತನಕ ನನ್ನ ಕೊರೆತಪುರಾಣದಿಂದ ಮುಕ್ತಿ ಸಿಕ್ಕಿತೆಂದು, ಒಂದು ಬ್ಲಾಗು ಓದುವ ಕಷ್ಟ ಕಡಿಮೆಯಾಯಿತೆಂದು ಖುಷಿ ಪಡಿ :) ಆಮೇಲೆ ಇದ್ದೇ ಇದೆ!!!

Thursday, August 2, 2007

ನಿಶೆ, ನಶೆ, ಉಷೆ... ಮತ್ತು ಹೀಗೊಬ್ಬ ಪ್ರೀತಿಕಾರ :)

ಇಳೆಯನ್ನು ನಿಶೆ ತಬ್ಬಿಕೊಳ್ಳುತ್ತಿರುವ ತಂಪು ಹೊತ್ತಿನಲ್ಲಿ ನಶೆಯ ರಂಗೇರಿಸಿಕೊಂಡ ನಿಶಾಚರನೊಬ್ಬ ರಸ್ತೆ ಬದಿಯ ಮಸುಕು ದೀಪದಡಿ ಮಿಸುಕಾಡುತ್ತ ಕುಳಿತಿದ್ದ. ಅವನ ಜೋಶ್-ಬಾರಿತನಕ್ಕೆ ಕೈಲಿದ್ದ ಮೊಬೈಲು ಕಂಪೆನಿ ನೀಡಿತ್ತು.

ಮೊಬೈಲಿನ ಎಲ್ಲಾ ನಂಬರುಗಳನ್ನೂ ಒಂದರ ನಂತರ ಒಂದರಂತೆ ನೋಡುತ್ತ ಕುಳಿತವನಿಗೆ ಒಂದು ನಂಬರು ಸಿಕ್ಕಾಪಟ್ಟೆ ಸೆಳೆಯಿತು. ಅದು ಚಂದದ ನಂಬರಾಗಿ ಕಂಡಿತು. ಹಾಗೇ ಅದರಲ್ಲಿದ್ದ ಎಲ್ಲಾ ನಂಬರನ್ನೂ ಒಂದಕ್ಕೊಂದು ಕೂಡಿಸಿದ. ಒಂದೊಂದು ಸರ್ತಿ ಕೂಡಿಸಿದಾಗ ಒಂದೊಂದು ಉತ್ತರ ಬಂತು. ಅವನಿಗೆ ಪ್ರತಿಸಲ ಕೂಡಿಸಿದಾಗವೂ ಬೇರೆ ಬೇರೆ ಉತ್ತರ ಕೊಡುವ ಅದ್ಭುತ ನಂಬರು ಅಂತನಿಸಿತು... ಏನೋ ಕಂಡುಹಿಡಿದ ಹಾಗೆ ಸಿಕ್ಕಾಪಟ್ಟೆ ಖುಷಿಯಾಯಿತು.

ಬೇರೆಬೇರೆ ದಿಕ್ಕಿನಲ್ಲಿ ಮೊಬೈಲು ಹಿಡಿದು ತಿರುಗಿಸಿ ತಿರುಗಿಸಿ ನೋಡಿದ ಕುಡುಕ. ಹೇಗೆ ನೋಡಿದರೂ ಆ ನಂಬರಿನ ಚಂದ ಮತ್ತು ರಹಸ್ಯ ಇಮ್ಮಡಿಸುತ್ತ ಹೋಯಿತು. ಕೊನೆಗೆ ಮನಸೋತ ಕುಡುಕ ಆ ನಂಬರಿಗೆ ಒಂದು ಎಸ್ಸೆಮ್ಮೆಸ್ಸು ಕಳಿಸಿದ... 'ನೀನಂದ್ರೆ ನಂಗೆ ತುಂಬಾ ಪ್ರೀತಿ'!!

ಅಷ್ಟು ಕಳಿಸಿದ್ದೇ ತಡ, ಕುಡುಕನ ಹೃದಯ ಹಕ್ಕಿಯಾಗಿ ಡವಡವನೆ ಹೊಡೆದುಕೊಂಡಿತು... ಏನೋ ಸಂಭ್ರಮಕ್ಕೆ ಕಾಯತೊಡಗಿತು... ಚೂರು ಹೊತ್ತಿನ ನಂತರ ಆ ನಂಬರು ಮಾರುತ್ತರ ಕೊಟ್ಟಿತು... 'ಈ ಸಮಯದಲ್ಲಿ ಈ ಮಾತಾ? ಅದೂ ನಿನ್ನಿಂದ?'

ಕುಡುಕ ಡವಗುಟ್ಟುವ ಎದೆಯನ್ನು ಒಂದು ಕೈಯಲ್ಲಿ ನೀವಿಕೊಳ್ಳುತ್ತ ಉತ್ತರಿಸಿದ... 'ಹೌದು... ನನಗೆ ಹೇಳಲು ಭಯ... ನನಗೆ ಕೆಲದಿನಗಳಿಂದ ಹೊಸದಾಗಿ ನೀನು ಕಾಡುತ್ತಿದ್ದೀಯ... ಇದನ್ನು ಹೇಳಲು ಈಗ ಧೈರ್ಯ ಬಂದಿದೆ...'

ನಂಬರು ಸ್ವಲ್ಪ ಸಮಯದ ನಂತರ ಉತ್ತರಿಸಿತು... 'ತಿಂಗಳ ಬೆಳಕು, ತಂಪು ಗಾಳಿ, ರಾತ್ರಿಯ ಅಮಲು ಹುಟ್ಟಿಸುವ ಮ್ಯಾಜಿಕ್, ಬೆಳಗಿನ ಸೂರ್ಯ ಹುಟ್ಟಿದಾಗ ನಿಜದ ಬಿಸಿಲಿಗೆ ಕರಗಿಹೋಗುತ್ತೆ... ಎಲ್ಲೋ ಒಂದು ಸ್ವರ ಮನಸನ್ನ ಮಿಡಿಯುತ್ತೆ... ಇನ್ನೆಲ್ಲೋ ಒಂದು ಮುಖ ಕನಸಾಗಿ ಕಾಡುತ್ತೆ... ಇವತ್ತು ಮನಸಲ್ಲೇನೋ ಹುಟ್ಕೊಳ್ಳುತ್ತೆ... ನಾಳೆ ಅದೃಶ್ಯವಾಗುತ್ತೆ... ಹಗಲನ್ನ ಮತ್ತು ನಿಜವನ್ನ ಎದುರಿಸೋ ಧೈರ್ಯ ಇರೋದು ಮಾತ್ರ ಉಳ್ಕೊಳ್ಳತ್ತೆ...'

ಕುಡುಕ ಇದನ್ನು ಒಂದು ಸಲ ಓದಿದ. ಅರ್ಥವಾಗಲಿಲ್ಲ. ಎರಡು ಸಲ ಓದಿದ. ಅರ್ಥವಾಗಲಿಲ್ಲ. ಮೂರು ಸಲ ಓದಿದ. ಅರ್ಥವಾಗಲಿಲ್ಲ. ನಾಲ್ಕನೇ ಸಲವೂ ಅರ್ಥವಾಗಲಿಲ್ಲ. ಐದನೇ ಸಲ ಎಲ್ಲವೂ ಕಲಸುಮೇಲೋಗರವಾಯಿತು, ತಲೆ ಕೆರೆದುಕೊಂಡ ರಭಸಕ್ಕೆ ನಾಲ್ಕು ಕೂದಲು ಕಿತ್ತುಬಂತು.

ಯಾಕೋ ಇವತ್ತು ಪರಮಾತ್ಮ ಸ್ವಲ್ಪ ಹೆಚ್ಚಾದ ಹಾಗಿದೆ, ಇದೇನು ಅಂತಲೇ ಅರ್ಥವಾಗುತ್ತಿಲ್ಲವಲ್ಲ... ಇಷ್ಟು ಚಂದದ ನಂಬರು ಹೀಗ್ಯಾಕೆ ಮೆಸೇಜು ಕಳಿಸುತ್ತೆ ಅಂತ ಮೂಗಿನ ಮೇಲೆ ಬೆರಳಿಟ್ಟು ಯೋಚಿಸಿದ... 'ಹಂಗಂದ್ರೇನು, ಅರ್ಥವಾಗಲಿಲ್ಲ, ನಾನು ದಡ್ಡ, ಬಿಡಿಸಿ ಹೇಳು' ಅಂತ ಮತ್ತೆ ಮೆಸೇಜು ಮಾಡಿ ನಂಬರಿಗೆ ಕೇಳಿದ.

ನಂಬರು 'ಅರ್ಥಗಳು ನೀನು ಕಟ್ಟಿಕೊಂಡ ಹಾಗಿರುತ್ತವೆ' ಅಂತ ಉತ್ತರಿಸಿತು.

ಅರ್ಥಗಳನ್ನು ನಾನು ಕಟ್ಟಿಕೊಳ್ಳುವುದೆಂದರೇನು, ಹೇಗೆ? ಈ ನಂಬರೇ ಹಾಗೆ ಹೇಳುತ್ತದಾದರೆ ಅರ್ಥ ಕಾಣುತ್ತದೆ ಅಂತಾಯಿತಲ್ಲ. ಇಲ್ಲೇ ಎಲ್ಲಿಯೋ ಇರಬೇಕು. ಕಂಡರೆ ಕಟ್ಟಬಹುದು, ಕಾಣದಿದ್ದರೆ ಹುಡುಕಿಕೊಂಡು ಎಲ್ಲಿ ಹೋಗುವುದು, ಹೇಗೆ ಕಟ್ಟುವುದು ಅಂತೆಲ್ಲ ಯೋಚಿಸಿ ತಲೆಬಿಸಿಯಾಯಿತು.

ಇರಲಿರಲಿ, ಈಗ ರಾತ್ರಿ ಬಹಳವಾಗಿದೆ, ಏನೂ ಕಾಣಿಸುತ್ತಿಲ್ಲ, ರಸ್ತೆದೀಪದ ಬೆಳಕು ಸಾಲುತ್ತಿಲ್ಲ, ನಾಳೆ ಸೂರ್ಯ ಹುಟ್ಟಲಿ, ಅರ್ಥ ಎಲ್ಲಿದ್ದರೂ ಹುಡುಕಿ ಕಟ್ಟುತ್ತೇನೆ ಅಂತ ಪ್ರತಿಜ್ಞೆ ಮಾಡಿ ಕುಡುಕ ರಸ್ತೆಬದಿಯಲ್ಲೇ ಬಿದ್ದುಕೊಂಡು ನಿದ್ದೆ ಹೋದ.

........................

ತಿಂಗಳ ಬೆಳಕು ಕರಗಿ ಉಷೆ ಮೆಲ್ಲನೆ ಮುಸುಕು ತೆಗೆದು ಹೊರಗಿಣುಕಿದಳು. ಅವಳ ಕಿರುನಗುವಿನ ಎಳೆಬಿಸಿಲು ಜಗವೆಲ್ಲ ಹಬ್ಬಿ, ರಸ್ತೆಬದಿಯಲ್ಲಿ ಮಲಗಿದವನ ಮುಖದ ಮೇಲೆ ತುಂಟುತುಂಟಾಗಿ ಕುಣಿದು ಎಬ್ಬಿಸಿತು. ಆತ ಎದ್ದು ಕುಳಿತ. ನಿದ್ರೆ ರಾತ್ರಿಯ ನೆನಪೆಲ್ಲ ಅಳಿಸಿ ಹಾಕಿದ್ದಳು. ಅರ್ಥವನ್ನು ಹುಡುಕಿ ಕಟ್ಟಬೇಕೆಂದು ಆತ ಮಾಡಿದ ಪ್ರತಿಜ್ಞೆ ಅಲ್ಲೇ ಪಕ್ಕದ ಚರಂಡಿ ಪಾಲಾದಳು. ಮೈಮುರಿಯುತ್ತ ಎದ್ದು ಮನೆಯ ಹಾದಿ ಹಿಡಿದು ನಡೆದ ಆತ.

ಹೀಗೆ ಅಮಲು ಇಳಿದಿತ್ತು. ಪ್ರೀತಿ ಅಳಿದಿತ್ತು. ತಿಂಗಳ ಬೆಳಕಿನ ಜತೆ ಹಾರಿ ಬಂದು ಮೊಬೈಲಿನಲ್ಲಿ ಕುಳಿತಿದ್ದ ಮೆಸೇಜು, ನಿಶೆನಶೆಯರು ಹುಟ್ಟಿಸಿದ ಪ್ರೀತಿ ಉಷೆಗೆ ಹೆದರಿ ಕಾಣೆಯಾಗಿದ್ದು ಕಂಡು ಸದ್ದಿಲ್ಲದೆ ನಗುತ್ತಿತ್ತು.

Thursday, July 26, 2007

ಒಂದಿಷ್ಟು ಮಳೆಗಾಲ, ಮೀನು ಮತ್ತು ಚಿನ್ನು

ಕಮಲನ ಮನೆಯಲ್ಲಿದ್ದ ದೊಡ್ಡ ಕರಿ ಭೂತಬೆಕ್ಕು ಕಳೆದ ಬೇಸಗೆ ಶುರುವಾಗುತ್ತಿದ್ದಂತೆ ಒಂದೇ ಸಲಕ್ಕೆ ಆರು ಮರಿ ಹಾಕಿತ್ತು. ಅಲ್ಲೇ ಇದ್ದ ಪುಟ್ಟಣ್ಣಜ್ಜನ ಮನೆಗೆ ಹಾಲು ತರಲು ಅಮ್ಮನ ಜತೆ ಚಿನ್ನು ಹೋಗಿದ್ದಾಗ 'ಪುಚ್ಚೆ ಕಿಞ್ಞಿ ದೀತುಂಡು, ತೂಪರಾ ಅಕ್ಕ' ಅಂತ ಕಮಲ ಕರೆದಿದ್ದಳು. ಚಿನ್ನುವಿಗೆ ಬೆಕ್ಕೆಂದರೆ ತುಂಬ ಇಷ್ಟವಾದ ಕಾರಣ ಅಮ್ಮನಿಗೂ ಮನೆಗೊಂದು ಬೆಕ್ಕಿನ ಮರಿ ತರೋಣವೆಂದು ಮನಸಿತ್ತು. ಹಾಗೆ ಚಿನ್ನು ಮತ್ತೆ ಅಮ್ಮ ಕಮಲನ ಮನೆಗೆ ಹೋದರು.

ಇನ್ನೂ ಪೂರ್ತಿ ಕಣ್ಣು ಬಿಡದ ಕರಿಯ ಮತ್ತು ಕಪ್ಪು-ಬಿಳಿ ಚುಕ್ಕೆಯಿದ್ದ ಮರಿಗಳ ಜತೆಗೆ ಹಾಲು ಬಣ್ಣದ ಮರಿಯೊಂದಿತ್ತು. ಕಣ್ಣುಗಳು ಅವಾಗಷ್ಟೆ ಚೂರೇ ಚೂರು ಬಿರಿಯುತ್ತ, ತನ್ನ ಗುಲಾಬಿ ಬಣ್ಣದ ತುಟಿಗಳನ್ನು ಅರೆತೆರೆದು ಅದೇನನ್ನೋ ಹುಡುಕುತ್ತಿದ್ದ ಮುದ್ದು ಬಿಳಿ ಮರಿ ಚಿನ್ನುಗೆ ಮೊದಲ ನೋಟಕ್ಕೇ ಆತ್ಮೀಯವಾಗಿಬಿಟ್ಟಿತು. ಚಿನ್ನು ಮೆಲ್ಲನೆ ತನ್ನ ಕಿರಿಬೆರಳು ಅದರ ಬಾಯಿಯ ಹತ್ತಿರ ತಂದರೆ ತುಂಟುಮರಿ ತನ್ನ ಪುಟ್ಟಪುಟ್ಟ ಬಿಳಿಯ ಹಲ್ಲುಗಳಿಂದ ಬೆರಳನ್ನು ಮೆತ್ತಗೆ ಕಚ್ಚಿತು. ಚಿನ್ನುಗೆ ಖುಷಿಯೋ ಖುಷಿ.

ಆಮೇಲಿನ ದಿನಗಳಲ್ಲಿ ಚಿನ್ನು ದಿನಾ ಸಂಜೆಯಾಗಲು ಕಾಯುತ್ತಿದ್ದಳು. ಅಮ್ಮನ ಜತೆ ಹಾಲಿಗೆಂದು ಹೋಗಿ, ತಾನು ಕಮಲನ ಮನೆಯಲ್ಲುಳಿದು, ಪುಟ್ಟಮರಿಗಳ ಜತೆ ಅಮ್ಮ ಬರುವವರೆಗೆ ಆಡುತ್ತಿದ್ದಳು. ಮರಿಗಳು ಸ್ವಲ್ಪ ದೊಡ್ಡದಾಗತೊಡಗಿದಾಗ ಚಿನ್ನು ಮತ್ತು ಅಮ್ಮ ಹಾಲು ಬಣ್ಣದ ಮರಿಯನ್ನು ಮನೆಗೆ ತಂದರು. ಚುರುಕು ಚುರುಕಾಗಿ ಮೀನಿನಂತೆ ಅತ್ತಿತ್ತ ಓಡಾಡುತ್ತಿದ್ದ ಅದಕ್ಕೆ ಮೀನು ಅಂತ ಹೆಸರಿಟ್ಟರು.
ooooooooooooooooooooooooooooooo

ಮೀನು ಬಂದಮೇಲೆ ಚಿನ್ನುವಿನ ದಿನಚರಿಯೇ ಬದಲಾಯಿತು. ಚಿನ್ನು ಬೆಳಿಗ್ಗೆ ಎದ್ದು ಸ್ನಾನಕ್ಕೆ ಹೋದಾಗ ಹಿಂಬಾಲಿಸಿ ಬಚ್ಚಲೊಳಗೆ ಸೇರಿಕೊಳ್ಳುವ ಮೀನು, ಬಚ್ಚಲುಮನೆಯ ಕಟ್ಟೆಯ ಮೇಲೆ ಕುಳಿತು ಕಣ್ಣು ಪಿಳಿಪಿಳಿ ಬಿಡುತ್ತಾ ನೋಡುತ್ತಿದ್ದರೆ, ಚಿನ್ನು ಪ್ರೀತಿಯಿಂದ ಮೀನುಗೆ ಬೈಯುತ್ತಿದ್ದಳು. ಚಿನ್ನು ರಾತ್ರಿ ಮಲಗುವಾಗ ತನ್ನ ಜತೆ ಮೀನುವನ್ನೂ ಮಲಗಿಸಿಕೊಳ್ಳುತ್ತಿದ್ದಳು. ಅದು ಅಮ್ಮನಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲ. ಆದರೆ ಅದು ಹೇಗೋ ಅಮ್ಮನ ಕಣ್ಣು ತಪ್ಪಿಸಿ ಚಿನ್ನುವಿನ ಹೊದಿಕೆಯೊಳಗೆ ತೂರಿಕೊಂಡು ಪುರುಗುಡುತ್ತ ಬೆಚ್ಚಗೆ ಮಲಗುತ್ತಿದ್ದಳು ಮೀನು, ಬೆಳಗ್ಗೆ ಅಮ್ಮನಿಗೆ ಗೊತ್ತಾಗದಂತೆ ಚಿನ್ನುವಿನ ಪಕ್ಕದಿಂದ ಜಾರಿಕೊಳ್ಳುತ್ತಿದ್ದಳು. ಇವರ ಕಣ್ಣು ಮುಚ್ಚಾಲೆಯಾಟವನ್ನು ಅಮ್ಮ ನೋಡಿಯೂ ನೋಡದಂತಿರುತ್ತಿದ್ದಳು.

ಅಲ್ಲಿಯ ವರೆಗೆ ದಿನಾ ಸಂಜೆಹೊತ್ತು ಅಜ್ಜನಿಗೆ ರಾಮಾಯಣ, ಭಾಗವತ, ಜೈಮಿನಿ ಭಾರತ ಓದಿಹೇಳುತ್ತ ಹೆಚ್ಚಿನ ಸಮಯ ಕಳೆಯುತ್ತಿದ್ದ ಚಿನ್ನು ಈಗ ಹೆಚ್ಚಿನ ಸಮಯ ಮೀನುವಿನ ಜತೆ ಆಟದಲ್ಲಿ ಕಳೆಯುತ್ತಿದ್ದಳು. ಅಜ್ಜ ಕಟ್ಟಿಟ್ಟಿದ್ದ ಕನ್ನಡಕವನ್ನು ಮತ್ತೆ ಹಾಕಿಕೊಂಡು ಸಂಜೆಹೊತ್ತು ತಾವೇ ಏನಾದರೂ ಓದುತ್ತ ಕೂರುವುದು ಆರಂಭವಾಯಿತು.

ಚಿನ್ನು ಮೀನು ಹೋದಲ್ಲೆಲ್ಲ ಹೋಗುತ್ತಿದ್ದಳು. ಚಿಟ್ಟೆ ಹಿಡಿಯಲು ನೋಟ ಹಾಕುತ್ತ ಮೀನು ಕೂತಿದ್ದರೆ, ಚಿನ್ನು ಅಲ್ಲಿ ಹೋಗುವಳು. ಅವಳು ಮೆಲ್ಲಮೆಲ್ಲಗೆ ಹೆಜ್ಜೆಯಿಟ್ಟಲ್ಲಿ ಹುಲ್ಲುಗಳು ಮೆಲ್ಲಗೆ ಅಲುಗಾಡಿರೂ ಚಿಟ್ಟೆಗಳಿಗೆ ಯಾರೋ ಬಂದರು ಅಂತ ಗೊತ್ತಾಗಿ ಅಲ್ಲಿಂದ ಎದ್ದು ಹಾರುವವು. ಅಷ್ಟು ಹೊತ್ತು ಸಮಯ ಕಾಯುತ್ತ ನೋಟ ಹಾಕುತ್ತಿದ್ದ ಮೀನುಗೆ ನಿರಾಸೆ. ಮತ್ತೆ ಎದ್ದು ಬಂದು ಪಕ್ಕಕ್ಕೆ ನಿಂದು ಚಿನ್ನುವಿನ ಕಾಲಿಗೆ ಜೋರಾಗಿ ತಲೆ ಉಜ್ಜುತ್ತ ತನ್ನ ಭಾಷೆಯಲ್ಲಿ ಬೈದುಕೊಳ್ಳುತ್ತ ಏನೋ ಹೇಳುತ್ತಿದ್ದಳು. ಚಿನ್ನು ಇನ್ನೆಲ್ಲಿ ಚಿಟ್ಟೆ ಕೂತಿದೆ ಅಂತ ಹುಡುಕುತ್ತಿದ್ದಳು.

ಪ್ರತಿ ವರ್ಷ ಮನೆಯ ಕೆಳಗೆ ಹರಿಯುವ ಪುಟ್ಟ ತೋಡಿಗೆ ಕಟ್ಟ ಕಟ್ಟುತ್ತಾರೆ. ಆ ನೀರಿನಿಂದ ಚಳಿಗಾಲದಲ್ಲಿ ಮತ್ತು ಬೇಸಗೆಯಲ್ಲಿ ತೋಟಕ್ಕೆ ನೀರು ಹಾಯಿಸುತ್ತಾರೆ. ಕಟ್ಟದಲ್ಲಿ ನೀರು ತುಂಬಿದಾಗ ಅದು ಒಂದು ಪುಟ್ಟ ತೂಬಿನ ಮೂಲಕ ಹರಿಯುತ್ತ ಮತ್ತೆ ತೋಡಿಗೆ ಸೇರಿ ತೋಡು ಮುಂದೆ ಹರಿಯುತ್ತದೆ. ಈ ತೋಡಿನ ಆರಂಭದ ಜಾಗದಲ್ಲಿ ಚಿನ್ನು ಯಾವಾಗಲೂ ಹೋಗಿ ಕುಳಿತು ನೀರಿನಲ್ಲಿ ಆಡುತ್ತಿರುತ್ತಾಳೆ.

ಅಲ್ಲಿ ಓಡಾಡುವ ಪುಟ್ಟ ಪುಟ್ಟ ಮೀನುಗಳನ್ನು ನೋಡುವುದು, ಅವಕ್ಕೆ ಅಕ್ಕಿಕಾಳು, ಅನ್ನ, ಅರಳು ಇತ್ಯಾದಿ ಹಾಕುವುದು, ಪಾದದಿಂದ ಸ್ವಲ್ಪವೇ ಮೇಲಕ್ಕೆ ಬರುವ ನೀರಿನಲ್ಲಿ ನಿಂತು, ಮೀನುಗಳಿಂದ ಕಾಲಿಗೆ ಕಚ್ಚಿಸಿಕೊಳ್ಳುವುದು, ಕಚಗುಳಿ ಅನುಭವಿಸುವುದು ಚಿನ್ನುಗೆ ಸಂತೋಷ ಕೊಡುವ ದಿನನಿತ್ಯದ ಆಟ. ಅದರಲ್ಲೂ ಒಂದು ಪುಟ್ಟ ಮರಿಮೀನು, ಸಣ್ಣ ಕೆಂಪು ಚುಕ್ಕೆಯಿರುವ ಮೀನುಮರಿ ಭಯಂಕರ ತುಂಟ. ಚಿನ್ನುವಿನ ಬಿಳೀ ಕಾಲಿಗೆ ಸಿಕ್ಕಾಪಟ್ಟೆ ಕಚ್ಚಿ ಕಚ್ಚಿ ಕಚಗುಳಿಯಿಡುತ್ತದೆ. ಈ ತುಂಟಮೀನನ್ನೂ ಸೇರಿಸಿದಂತೆ ಪುಟ್ಟ ಪುಟ್ಟ ಮೀನುಮರಿಗಳನ್ನು ಕೈಯಲ್ಲೇ ಅಟ್ಟಿಸಿ ಅಟ್ಟಿಸಿ ನೀರು ಸ್ವಲ್ಪ ಕಡಿಮೆಯಿದ್ದಲ್ಲಿಗೆ ತಂದು, ಅವುಗಳ ಸುತ್ತ ಹೊಯಿಗೆಯ ಕೋಟೆ ಕಟ್ಟಿ ಕೂಡಿಹಾಕಿ ಅವುಗಳ ಓಡಾಟ ಹತ್ತಿರದಿಂದ ನೋಡಿ ಮಜಾ ಮಾಡುವುದು ಚಿನ್ನುಗೆ ಅಭ್ಯಾಸ.

ಮೀನು ಬಂದ ಮೇಲೆ ಚಿನ್ನು ಅವಳನ್ನೂ ಜತೆಗೆ ಕರೆದುಕೊಂಡು ಹೋಗತೊಡಗಿದಳು. ಚಿನ್ನು ನೀರಿನಲ್ಲಿ ಆಡುತ್ತಿದ್ದರೆ ಮೊದಮೊದಲು ನೀರಿಗೆ ಹೆದರಿ ದೂರ ನಿಂತು ನೋಡುತ್ತಿದ್ದಳು ಮೀನು. ನಿಧನಿಧಾನವಾಗಿ ತಾನೂ ನೀರಿಗಿಳಿಯದೆ, ಕೈಕಾಲು ಒದ್ದೆ ಮಾಡಿಕೊಳ್ಳದೆ ಗಮ್ಮತ್ತು ಮಾಡತೊಡಗಿದಳು. ಚಿನ್ನು ಹೊಯಿಗೆ ಕೋಟೆ ಕಟ್ಟಿ ಮೀನುಮರಿಗಳನ್ನು ಕೂಡಿಹಾಕುತ್ತ ಸಂಭ್ರಮಿಸಿದರೆ, ಮೀನು ಅದರ ಹತ್ತಿರ ನೀರಿಲ್ಲದ ಜಾಗದಲ್ಲಿ ಕುಳಿತು ಮೀನುಗಳ ಓಡಾಟಕ್ಕೆ ಸರಿಯಾಗಿ ತಾನೂ ತಲೆ ಕುಣಿಸುತ್ತ ಕೂರುತ್ತಿದ್ದಳು.
ooooooooooooooooooooooooooooooo

ಹೀಗೇ ಒಂದು ದಿನ ಚಿನ್ನು ಮತ್ತು ಮೀನು ನೀರಲ್ಲಿ ಆಡುತ್ತಿದ್ದರು. ಹೊಯಿಗೆಕೋಟೆಯೊಳಗೆ ನಾಲ್ಕೈದು ಮೀನು ಮರಿಗಳನ್ನು ಕೂಡಿಹಾಕಿ ಗಮ್ಮತ್ತುಮಾಡುತ್ತಿದ್ದಳು ಚಿನ್ನು. ಮೀನು ಎಂದಿನಂತೆ ಬದಿಯಲ್ಲಿ ಕುಳಿತು ಮೀನುಗಳಾಟವನ್ನು ಗಮನವಿಟ್ಟು ನೋಡುತ್ತಿದ್ದಳು. ಅವಾಗ ಅಕಸ್ಮಾತ್ತಾಗಿ ಆ ಕೆಂಪು ಚುಕ್ಕೆಯ ತುಂಟ ಮೀನಿನ ಮರಿ ಮರಳುಕೋಟೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಹಾರಿ, ನೀರಿಲ್ಲದಲ್ಲಿ ಹೊಯಿಗೆಕಲ್ಲುಗಳ ಮೇಲೆ ಬಿದ್ದಿತು. ವಿಲವಿಲನೆ ಒದ್ದಾಡಿ ಎತ್ತರೆತ್ತರಕ್ಕೆ ಹಾರಿತು.

ಅಷ್ಟೇ ಅನಿರೀಕ್ಷಿತವಾಗಿ ಟಪಕ್ಕನೆ ಕೂತಲ್ಲಿಂದ ಜಿಗಿದ ಮೀನು ಆ ಮೀನುಮರಿ ಹಾರಿದಂತೆಲ್ಲ ಹಾರಿ, ಕೊನೆಗೂ ಅದನ್ನು ಹಿಡಿದು, ಹೊಡೆದು, ಬೀಳಿಸಿ, ಕಚ್ಚಿ, ಬಾಯಿಯೊಳಗೆ ಹಾಕಿಕೊಂಡು 'ಮುರ್ರ್...' ಅಂತ ಶಬ್ದ ಮಾಡುತ್ತ, ತುಂಟು ಮೀನಿನ ಮರಿಯನ್ನು ತಿಂದೇ ಬಿಟ್ಟಳು. ಚಿನ್ನುಗೆ ಏನೂ ಯೋಚಿಸುವ ಅವಕಾಶವೇ ಕೊಡದೆ ನಡೆದ ಈ ಎಲ್ಲ ಘಟನೆಗಳನ್ನೆಲ್ಲಾ ನೋಡುತ್ತ ಏನು ಮಾಡಬೇಕೋ ತಿಳಿಯದೆ ಚಿನ್ನು ಸುಮ್ಮನೆ ಕೂತುಬಿಟ್ಳು.

ಮೀನು ತಿಂದಾದಮೇಲೆ ಮೀನು ಹೊಯಿಗೆ ಮೇಲೆ ಕುಕ್ಕರಗಾಲಲ್ಲಿ ಕುಳಿತು ಒಂದು ಕೈ ನೆಲಕ್ಕೂರಿ ಕಣ್ಣುಮುಚ್ಚಿ ಇನ್ನೊಂದು ಕೈಯಲ್ಲಿ ಸುಖವಾಗಿ ಮುಖ ಉಜ್ಜಿಕೊಳ್ಳುತ್ತ ಕೈಯನ್ನು ನೆಕ್ಕತೊಡಗಿದಳು. ಹೀಗೆ ಮೀನು ದಿವ್ಯ ಆನಂದವನ್ನು ಅನುಭವಿಸುತ್ತಿದ್ದರೆ, ಅದೇನೋ ತಪ್ಪುಮಾಡಿದ ಭಾವ ಚಿನ್ನುವಿನಲ್ಲಿ. ಛೆ, ತಾನು ಹೊಯಿಗೆ ಕೋಟೆ ಕಟ್ಟಿ ಆ ತುಂಟುಮೀನನ್ನು ಕೂಡುಹಾಕದಿದ್ದರೆ ಮೀನುಗೆ ಅದನ್ನು ಹಿಡಿದು ತಿನ್ನಲು ಸಿಗುತ್ತಲೇ ಇರಲಿಲ್ಲ, ತಾನು ಹೊಯಿಗೆಕೋಟೆ ಕಟ್ಟಿ ಆಡಬಾರದಿತ್ತೇನೋ ಅನ್ನುವ ಸಂಶಯ. ಜತೆಗೆ ಆ ಪುಟ್ಟ ಮೀನಿನ ಮರಿಗೆ ಅದೆಷ್ಟು ನೋವಾಯಿತೋ, ಕೊಂದು ತಿಂದೇ ಬಿಟ್ಟಳು ರಾಕ್ಷಸಿ ಅಂತ ಮೀನುಳ ಮೇಲೆ ಕೋಪ. ಕೆಂಪು ಚುಕ್ಕೆಯ ತುಂಟು ಮೀನುಮರಿಯಿಂದ ಕಚ್ಚಿಸಿಕೊಳ್ಳುವುದು ಇನ್ನೆಂದಿಗೂ ಇಲ್ಲ ಅಂತ ಸಂಕಟ. ಅಜ್ಜನಿಗೆ ಇದೆಲ್ಲವನ್ನ ಹೇಳಿದರೆ, ಅಜ್ಜ ನಕ್ಕುಬಿಟ್ಟರು.

ಆದರೆ ಎಷ್ಟು ಬೈದುಕೊಂಡರೂ ತುಂಟು ಮೀನಿನ ಮರಿಯ ಮೇಲೆ ಎಷ್ಟು ಪ್ರೀತಿ ಇತ್ತೋ ಮೀನುಳ ಮೇಲೆ ಅದಕ್ಕಿಂತ ಒಂದು ತೊಲ ಹೆಚ್ಚೇ ಪ್ರೀತಿ ಚಿನ್ನುಗೆ. ಎಷ್ಟಂದರೂ ನನ್ನ ಮೀನು ತಾನೆ ಅಂತ.

ಮರುದಿನ ಚಿನ್ನು ಸುಮ್ಮನೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಮೀನು ಪಕ್ಕಕ್ಕೆ ಬಂದು, ಮಡಿಲೇರಿ ನಿಂದು ಅವಳ ಗದ್ದಕ್ಕೆ ತನ್ನ ಮುಖವನ್ನು ತಾಡಿಸುತ್ತ ನೀರಲ್ಲಿ ಆಡಲು ಹೋಗೋಣ ಅಂತ ಹಠ ಮಾಡಿದಳು. ಮೀನಿನ ರುಚಿ ಸಿಕ್ಕಿದೆ ನಿಂಗೆ ರಕ್ಕಸಿ ಅಂತ ಬೈದಳು ಚಿನ್ನು. ಹಾಗೇ ಕೊನೆಗೆ ಮೀನುನ ರಗಳೆ ತಡೆಯದೆ ನೀರಲ್ಲಾಡಲು ಹೋದಳು ಚಿನ್ನು. ಅಲ್ಲಿ ಹೋಗಿ ನೀರಲ್ಲಿ ಕಾಲು ಮುಳುಗಿಸಿ ನಿಂತಳು ಚಿನ್ನು, ಕಾಲಿಗೆ ಮೀನು ಕಚ್ಚತೊಡಗಿದವು. ಹಾಗೇ ನೋಡುತ್ತಾಳೆ, ಬೇರೆಲ್ಲಾ ಮೀನುಗಳ ಜತೆ ಕೆಂಪು ಚುಕ್ಕೆಯ ಎರಡು ಮೀನುಗಳಿವೆ..! ಯಾಕೋ ಚಿನ್ನುಗೆ ತುಂಬ ಸಮಾಧಾನವಾಯಿತು. ಅಜ್ಜನಿಗೆ ಹೇಳಿದರೆ ಅಜ್ಜ 'ಆ ಸತ್ ಹೋದ ಮೀನು ಸ್ವರ್ಗಂದ ಇನ್ನೆರಡ್ ಮೀನ್ ಕಳ್ಸಿಂತ್ ಕಾಣ್' ಅಂತ ವೀಳ್ಯದೆಲೆ ತಿಂದು ಕೆಂಪಾದ ಬೊಚ್ಚು ಬಾಯಿ ಬಿಟ್ಟು ನಕ್ಕರು.
ooooooooooooooooooooooooooooooo

ಚಿನ್ನು ಮತ್ತು ಮೀನು ಆಡುತ್ತಿದ್ದ ಇನ್ನೊಂದು ಆಟವೆಂದರೆ, ಅಡಿಕೆ ಅಂಗಳದಲ್ಲಿ. ಬಿದಿರುಮುಳ್ಳಿನ ಬೇಲಿ ಹಾಕಿ ಅಂಗಳದ ಭಾಗವೊಂದನ್ನು ಅಡಿಕೆ ಒಣಗಿಸಲು ಮೀಸಲಿಡುತ್ತಿದ್ದರು. ಸಂಜೆ ಹೊತ್ತು ಮೀನು ಹೋಗಿ ಹರವಿದ್ದ ಅಡಿಕೆಯ ನಡುವೆ ಕೂರುವಳು. ಎಲ್ಲಾ ಕಡೆ ದೃಷ್ಟಿ ಬೀರುವಳು. ಇದ್ದಕ್ಕಿದ್ದಂತೆ ತನ್ನ ಪಕ್ಕದಲ್ಲಿರುವ ಕಿತ್ತಳೆ ಬಣ್ಣದ ಸಿಪ್ಪೆ ಜೂಲುಜೂಲಾಗಿ ಹೊರಬಂದ ಹೊಸ ಹಣ್ಣಡಿಕೆಯನ್ನು ಕಚ್ಚಿಕೊಂಡು ಆಟವಾಡತೊಡಗುವಳು. ಅದನ್ನು ಮುಂಗೈಯಲ್ಲಿ ಹೊತ್ತು ಬಾಯಿಂದ ಕಚ್ಚುತ್ತ ನೆಲದಲ್ಲಿ ಉರುಳಿ ಉರುಳಿ ಜಗಳಾಡುವಳು. ಯಾವುದೋ ಹಾವಿನೊಡನೆಯೋ ಹಲ್ಲಿಯೊಡನೆಯೋ ಕಾದಾಡುವ ರೀತಿಯಲ್ಲಿ ಜೀವವಿಲ್ಲದ ಹಣ್ಣಡಿಕೆಯೊಂದಿಗೆ ಮೀನು ಜಗಳಾಡುತ್ತಿದ್ದರೆ, ಚಿನ್ನುವಿಗೆ ಅದು ನೋಡಲು ಎಲ್ಲಿಲ್ಲದ ಸಂಭ್ರಮ.

ಚಿನ್ನು ಮೀನುನೆದುರಿಗೆ ನಿಂತು ಅಜ್ಜನ ಊರುಗೋಲನ್ನೋ ದಾರವನ್ನೋ ಅಲ್ಲಾಡಿಸುತ್ತ ಮೀನುಳಿಗೆ ಅದು ಹಾವು ಅಥವಾ ಜೀವವಿರುವ ಪ್ರಾಣಿ ಅಂತ ಭ್ರಮೆ ತರಿಸುವಳು. ಮೀನು ಹಾರಿ ಹಾರಿ ಅದನ್ನು ಹಿಡಿಯ ಹೊರಟಾಗ ಅವಳಿಗೆ ಎಟುಕಗೊಡದೆ ಎತ್ತರೆತ್ತರಕ್ಕೆ ಅಲ್ಲಾಡಿಸುವಳು. ಅಜ್ಜ ಇವರ ಎಲ್ಲಾ ಆಟಗಳನ್ನು ದೂರ ನಿಂತು ನೋಡುವರು.
ooooooooooooooooooooooooooooooo

ಬೇಸಗೆ ಮುಗಿಯುತ್ತ ಬಂದಿತ್ತು. ಆಳುಗಳು ಅಂಗಳದಲ್ಲಿದ್ದ ಅಡಿಕೆಯನ್ನೆಲ್ಲ ಬಾಚಿ ಗೋಣಿಯಲ್ಲಿ ಕಟ್ಟಿ, ಬಿದಿರುಮುಳ್ಳಿನ ಬೇಲಿಯನ್ನು ತೆಗೆದು ಮನೆಯ ಬದಿಯಲ್ಲಿಟ್ಟು ಅಂಗಳವನ್ನು ಖಾಲಿ ಮಾಡಿದರು. ಚಿನ್ನು ಮತ್ತು ಮೀನುನಿಗೆ ಆಡಲು ಅಡಿಕೆಯಂಗಳ ಇಲ್ಲವಾಯಿತು. ಅಷ್ಟರಲ್ಲಿ ಗಂಗಾವತಾರವಾಗಿ ಮಳೆಗಾಲ ಬಂದುಬಿಟ್ಟಿತು. ಅಜ್ಜ ಚಿನ್ನುವಿಗೆ ಶಾಲೆಗೆ ಸೇರಿಸಿದರು. ಚಿನ್ನು ಶಾಲೆಚೀಲ ಹೆಗಲಿಗೇರಿಸಿ ಮಳೆಗೆ ನೆನೆಯದ ಹಾಗೆ ರೈನ್-ಕೋಟ್ ಹಾಕಿಕೊಂಡು ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೆ ಶಾಲೆಗೆ ಹೋಗತೊಡಗಿದಳು.

ಆಟಿಯ ಮಳೆ ಎಡೆಬಿಡದೆ ಸುರಿಯಿತು. ಗುಡ್ಡದ ನೀರೆಲ್ಲ ತೋಡಿಗೆ ಬಂದು, ಕಟ್ಟ ಕಡಿದು, ತೋಡಿನ ಎಂದಿನ ಸೌಮ್ಯರೂಪ ಕಳೆದು, ಸಿಕ್ಕಸಿಕ್ಕಿದ್ದೆಲ್ಲ ಕೊಚ್ಚಿಕೊಂಡು ಕೆಂಪಾಗಿ ಮೈದುಂಬಿ ಹರಿಯಿತು. ಚಿನ್ನು ಮತ್ತು ಮೀನು ಜತೆಗೆ ಕಳೆಯಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಸಿಕ್ಕಿದ ಕಾಲವನ್ನು ಮನೆಯೊಳಗೇ ಕಳೆಯಬೇಕಾಗುತ್ತಿತ್ತು. ಅವಾಗಾವಾಗ ಮಳೆ ಬಿಟ್ಟಾಗ ಮೀನು ಹೊರಗೆ ಹೋಗಿ ಹಿತ್ತಲಿನಲ್ಲಿ ಹುಲ್ಲಿನ ನಡುವೆ, ಕೂರುತ್ತಿದ್ದಳು. ಅಲ್ಲಿ ಹಾವೋ ಹರಣೆಯೋ ಹರಿದಾಡಿದಾಗ ಬೆಂಬತ್ತಿ ಹೋಗುತ್ತಿದ್ದಳು. ಅವಳು ಓಡಾಡುವಾಗ ಚಿನ್ನುವೂ ದೂರ ನಿಂತು ನೋಡುವಳು. ಎಲ್ಲೆಂದರಲ್ಲಿ ಹೋಗುವ ಮೀನುವಿನ ಜತೆ ಸಾಧ್ಯವಾದಲ್ಲೆಲ್ಲ ತಾನೂ ಹೋಗುತ್ತಿದ್ದಳು.

oooooooooooooooooooooooooooooo

ಅದೊಂದು ದಿನ ರೈನ್-ಕೋಟಿದ್ದರೂ ಮಳೆಗೆ ಒದ್ದೆ ಮುದ್ದೆಯಾಗಿ ಚಳಿಗೆ ಗಡಗಡನೆ ನಡುಗುತ್ತ ಮನೆ ಜಗಲಿ ಹತ್ತಿದ ಚಿನ್ನು ನೀರು ಬಸಿಯುತ್ತಿದ್ದ ರೈನ್-ಕೋಟ್ ಬಿಚ್ಚಿ ಜಗಲಿಯ ಬದಿಗಿಟ್ಟಳು. ಅಮ್ಮ ಬಂದು 'ನಿಂಗೆ ರೈನ್-ಕೋಟ್ ಇದ್ರೂ ಒಂದೆ ಹೆಣ್ಣೆ, ಇಲ್ಲದಿದ್ರೂ ಒಂದೆ' ಅಂತ ಪ್ರೀತಿಯಲ್ಲಿ ಬೈಯುತ್ತ ಚಿನ್ನುವಿನ ಬೆನ್ನಿಂದ ಶಾಲೆಚೀಲವನ್ನು ತೆಗೆದು ಚಾವಡಿಯಲ್ಲಿಟ್ಟಳು, ಮನೆಯಲ್ಲಿ ಹಾಕುವ ಬೆಚ್ಚನೆಯ ಹಳೆಬಟ್ಟೆ ಕೊಟ್ಟಳು. ಚಿನ್ನು ಶಾಲೆಯ ಚೀಲವನ್ನು ಚಾವಡಿಯಲ್ಲಿಟ್ಟು ಒಳಮನೆಗೆ ನಡೆದಳು.

ಬಟ್ಟೆ ಬದಲಾಯಿಸುತ್ತ ಅತ್ತಿತ್ತ ಹುಡುಕುನೋಟ ಬೀರಿದ ಚಿನ್ನು, ಮಿಯಾಂವ್ ಅಂತ ಮೆಲ್ಲನೆ ಕೂಗಿದಳು. 'ಮೊದ್ಲು ಬಿಸಿಬಿಸಿ ಕಾಫಿ ಕುಡಿ, ಹಪ್ಪಳ ತಿನ್ನು, ಮತ್ತೆ ಎಷ್ಟು ಹೊತ್ತು ಬೇಕಾರೂ ಪುಚ್ಚೆಯೊಟ್ಟಿಗೆ ಆಡು' ಅಂತ ಅಂದ ಅಮ್ಮ ಬೆಚ್ಚನೆಯ ಬೈರಾಸಿನಲ್ಲಿ ಚಿನ್ನುವಿನ ತಲೆಯೊರಸತೊಡಗಿದಳು.

ಅಡಿಗೆಮನೆಯಾಚೆಗಿನ ಚಾವಡಿಯಲ್ಲಿ ಚಕ್ಕಳಮಕ್ಕಳ ಹಾಕಿ ಕೂತ ಚಿನ್ನು ಬಿಸಿಬಿಸಿ ಕಾಫಿ ಕುಡಿಯುತ್ತ, ಕೆಂಡದಲ್ಲಿ ಕಾಯಿಸಿದ ಹಪ್ಪಳದಿಂದ ಪುಟ್ಟ ತುಂಡೊಂದನ್ನು ಕರಕ್ಕೆಂದು ಮುರಿದಳು. ಅಲ್ಲೆಲ್ಲ ಘಮ್ಮೆಂದು ಹಪ್ಪಳದ ಕಂಪು ಹಬ್ಬಿತು. ಕರಕ್ಕೆಂಬ ಸದ್ದು ಕೇಳುತ್ತಲೂ ಅಲ್ಲಿವರೆಗೆ ಆಡಿಗೆಮನೆಯ ಕತ್ತಲಲ್ಲಿ ಒಲೆಯ ಪಕ್ಕ ಬೆಚ್ಚಗೆ ಮೈಕಾಸಿಕೊಳ್ಳುತ್ತಿದ್ದ ಮೀನು ಮಿಯಾಂವ್ ಅನ್ನುತ್ತ ಓಡಿ ಬಂದು ಚಿನ್ನುವಿನ ಮಡಿಲೇರಿದಳು. ಚಿನ್ನು ಖುಷಿಯಿಂದ ನಗುತ್ತ ಮೀನುವಿನ ಮೈಸವರಿ ಮಡಿಲಲ್ಲಿ ಕೂರಿಸಿ ಹಪ್ಪಳದ ಚೂರುಗಳನ್ನು ಒಂದೊಂದೇ ಅವಳ ಬಾಯಿಗಿಡತೊಡಗಿದಳು. ಮೀನು ಕಣ್ಣುಮುಚ್ಚಿ ಆ ಚೂರುಗಳನ್ನು ತಿನ್ನತೊಡಗಿದಳು.

ರಾತ್ರಿಯ ಅಡಿಗೆಗೆ ತಯಾರು ಮಾಡಲಾರಂಭಿಸಿದ ಅಮ್ಮ ಇವರ ಸಂಭ್ರಮವನ್ನು ನೋಡುತ್ತ, 'ಅದಕ್ಕೆ ಆಗಲೂ ಹಾಕಿದೆ ನಾನು ಹಪ್ಪಳ, ಹೆಚ್ಚು ತಿಂದ್ರೆ ನಾಳೆ ಮತ್ತೆ ಹೊಟ್ಟೆ ಉಬ್ಬರಿಸ್ತ್ ಕಾಣ್ ಪುಚ್ಚೆಗೆ', ಅಂದಳು. 'ಪಾಪ ಮೀನುಂಗೆ ನನ್ನೊಟ್ಟಿಗೆ ತಿನ್ನದೆ ಉದಾಸೀನ ಆತಿಲ್ಯಾ ಅಮ್ಮ', ಅನ್ನುತ್ತ ಮೀನುಳ ತಲೆಸವರಿದ ಚಿನ್ನು, 'ಅಲ್ದಾ ಮೀನು' ಅಂತ ಮೀನುಳ ಹತ್ತಿರ ಕೇಳಿದಳು. ಭಾವಸಮಾಧಿಗೆ ಭಂಗ ಬಂದವರ ಹಾಗೆ, ನಿದ್ರೆಯಿಂದ ಎದ್ದವರ ಹಾಗೆ ಹೂಂ ಎಂದು ಮುಲುಗಿದ ಮೀನು ಕಣ್ಣು ಮುಚ್ಚಿ ಚಿನ್ನು ಕೊಟ್ಟ ಇನ್ನೊಂದು ಚೂರು ಹಪ್ಪಳ ತಿನ್ನತೊಡಗಿದಳು. 'ನೋಡಮ್ಮ, ಮೀನು ಹೌದು ಹೇಳ್ತ್-ಳ್ ಕಾಣ್' ಅಂತ ಚಿನ್ನು ಸಂಭ್ರಮಿಸಿದಳು. 'ಪುಚ್ಚೆಗೆ ಮಾತಾಡ್-ಗೆ ಕಲ್ಸಿಯಲ್ಲ ನೀನ್, ಹುಷಾರಿ ಹೆಣ್ಣ್' ಅಂತ ಅಜ್ಜ ಬೊಚ್ಚುಬಾಯಿ ಬಿಟ್ಟು ನಕ್ಕರು.

ತಿಂಡಿಯ ಕಾರ್ಯಕ್ರಮ ಮುಗಿದಮೇಲೆ ಮೆಲ್ಲಗೆ ಹೊರಗಿಣುಕುತ್ತಾಳೆ ಚಿನ್ನು, ಬಿಸಿಲು ಮೂಡಿತ್ತು! ಮಳೆಬಂದುದರ ಕುರುಹೇ ಇಲ್ಲದ ಹಾಗೆ ಜಗತ್ತೆಲ್ಲ ನಗುತ್ತಿತ್ತು. ಮನೆಯ ಹಿಂದಿನ ಗುಡ್ಡದಾಚೆಗೆ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು. ಮನೆಯ ಕೆಳಗಿನ ಅಡಿಕೆ ತೋಟ, ತೆಂಗಿನ ಮರಗಳು, ಮರಗಳಿಗೆ ಸುತ್ತಿಕೊಂಡ ಕರಿಮೆಣಸಿನ ಗಿಡಗಳು, ಮನೆಯೆದುರಿನ ದಾಸವಾಳದ ಗಿಡ, ಬಯ್ಯಮಲ್ಲಿಗೆ, ದುಂಡುಮಲ್ಲಿಗೆ, ರಾತ್ರಿರಾಣಿಗಿಡ, ತೋಡಿನ ಮತ್ತು ಅಂಗಳದ ನಡುವೆ ಬೇಲಿಯಾಗಿ ನೆಟ್ಟಿದ್ದ ಬಣ್ಣ ಬಣ್ಣದ ಕ್ರೋಟನ್ ಗಿಡಗಳು - ಎಲ್ಲವೂ ಸಂಜೆಬಿಸಿಲಿನ ಚಿನ್ನದ ರಂಗಿಗೆ ತಿರುಗಿ ಶೋಭಿಸುತ್ತಿತ್ತು. ರಾತ್ರಿರಾಣಿ ಗಿಡದಲ್ಲೆರಡು ಮೊಗ್ಗು ಈ ಸಂಜೆಗೆ ಅರಳುವ ತಯಾರಿ ನಡೆಸಿತ್ತು. ಇದ್ಯಾವುದರ ಪರಿವೆಯಿಲ್ಲದೆ ಮನೆಯ ಕೆಳಗಿನ ತೋಡು ತನ್ನಪಾಡಿಗೆ ತಾನು ಮೈದುಂಬಿ ಧೋ ಎಂದು ಹರಿಯುತ್ತಿತ್ತು. ಅಂಗಳದ ನೀರು ಮತ್ತು ತೋಡಿನ ನೀರಿನ 'ಧೋ..' ಶಬ್ದ ಬಿಟ್ಟರೆ ಮಳೆ ಬಂದದ್ದಕ್ಕೆ ಸಾಕ್ಷಿಯೇ ಇರದ ಹಾಗಿತ್ತು.

ಚಿನ್ನುವಿಗೆ ಈ ಸುಂದರ ಸಂಜೆಯ ವೈಭವ ಕಂಡು ತುಂಬಾ ಖುಷಿಯಾಯಿತು. ಮೀನುಗೂ ಸಿಕ್ಕಾಪಟ್ಟೆ ಖುಷಿಯಾಗಿ ಛಂಗನೆ ಜಿಗಿದು ಹೂಗಿಡಗಳ ನಡುವೆ ಓಡಿದಳು. ಅಲ್ಲಿ ಬಯ್ಯಮಲ್ಲಿಗೆ ಹೂಗಳ ಮೇಲೆ ಅವಾಗಷ್ಟೆ ಬಂದು ಕೂತಿದ್ದ ಹಳದಿ ಹಾತೆಯ ಹಿಂದೆ ಬಿದ್ದು ಬೆನ್ನಟ್ಟಿದಳು. ಅಂಗಳದಲ್ಲಿ ಹರಡಿದ ಮಳೆನೀರನ್ನು ಕಾಲಲ್ಲಿ ಚಿಮ್ಮುತ್ತ ಚಿನ್ನು ಹಿಂಬಾಲಿಸಿದಳು. ಅಜ್ಜ ಜಗಲಿಯಲ್ಲಿ ನಿಂತು ಇವರಾಟ ನೋಡುತ್ತಿದ್ದರು.

ಮೀನು ಎಲ್ಲಾಕಡೆ ಓಡಾಡಿದಳು. ದೊಡ್ಡದೊಡ್ಡ ರೆಕ್ಕೆಗಳಿದ್ದ ಆ ಹಳದಿ ಹಾತೆ ಅಲ್ಲಿದ್ದ ಎಲ್ಲ ಗಿಡಗಳ ಮೇಲೆ ಹೂಗಳ ಮೇಲೆ ಹಾರಿ ಹಾರಿ ಮೀನುವನ್ನು ಆಟವಾಡಿಸಿತು. ಕೊನೆಗೆ ಅಂಗಳದ ಬದಿಗೆ ಬೇಲಿಗಿಡವಾಗಿ ನೆಟ್ಟಿದ್ದ ಕ್ರೋಟನ್ ಗಿಡಗಳ ಕಡೆ ಹಾರಿತು. ಮೀನು ಕೂಡ ಅದರ ಜತೆಗೆ ಹಾರಿದಳು. ಚಿನ್ನುವೂ ಗಿಡಗಳ ನಡುವೆ ದಾರಿಮಾಡಿಕೊಂಡು ಅಲ್ಲಿಗೆ ತಲುಪಿದಳು.

ತೋಡಿನ ಬದಿಯಿಂದ ಮೇಲಕ್ಕೆ ಬೆಳೆದ ಸಂಪಿಗೆ ಮರದ ಕೊಂಬೆಯೊಂದು ಕ್ರೋಟನ್ ಗಿಡಕ್ಕೆ ತಾಗಿಕೊಂಡಂತೆ ಅಂಗಳಕ್ಕೆ ಇಣುಕಿತ್ತು. ಮಾಯಾಮೃಗದಂತಹ ಹಳದಿ ಹಾತೆ ಹಾರಿ ಹೋಗಿ ಸಂಪಿಗೆ ಮೊಗ್ಗಿನ ಮೇಲೆ ಕುಳಿತಿತು. ಮೀನು ಹಠ ಬಿಡದೆ ತಾನೂ ಹೋಗಿ ಸಂಪಿಗೆ ಗಿಡದ ಕಡೆಗೆ ಹಾರಿದಳು. ಹಾತೆ ಅಲ್ಲಿಂದಲೂ ಹಾರಿತು. ಅದನ್ನು ಹಿಡಿಯಲು ಮತ್ತೆ ಹಾರಿದ ಮೀನುಳ ಕೈಗೆ ಸಂಪಿಗೆ ಗಿಡದ ರೆಂಬೆಯೊಂದು ಆಧಾರವಾಗಿ ಸಿಕ್ಕಿ ಅದಕ್ಕೆ ನೇತಾಡಿದಳು. ರೆಂಬೆ ಅವಳ ಭಾರಕ್ಕೆ ಜಗ್ಗಿ ನೇರವಾಗಿ ಕೆಳಗಿದ್ದ ತೋಡಿನ ಮೇಲೆ ನೇತಾಡತೊಡಗಿತು. ಈಗ ಮೀನು ಏನಾದರೂ ಕೈಬಿಟ್ಟು ಹೋದರೆ ನೇರ ಕೆಳಗೆ ತೋಡಿಗೆ ಬೀಳುತ್ತಾಳೆ.

ಚಿನ್ನುವಿಗೆ ಕಳವಳವಾಯಿತು. ಮೀನು ಅದು ಹೇಗೆ ಈಚೆ ಬರುತ್ತಾಳೋ ಅಂತ ಗಡಿಬಿಡಿಯಲ್ಲಿ ಕ್ರೋಟನ್ ಗಿಡಗಳನ್ನು ದಾಟಿ ಹೋಗಿ ದರೆಯ ಬದಿಯಲ್ಲಿ ನಿಂತ ಚಿನ್ನು ನೇತಾಡುತ್ತಿದ್ದ ಮೀನುವನ್ನು ಕೈಗೆಟಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ, ಕಾಲಕೆಳಗಿನ ಸಡಿಲ ಮಣ್ಣು ಜಾರಿ ಕುಸಿಯಿತು. ಕಾಲೂ ಜಾರಿತು. ಅಮ್ಮಾ ಎಂದು ಕಿರುಚುತ್ತ ದರೆಯ ಬದಿಯಲ್ಲಿ ಕೆಳಗಡೆ ಬೀಳುತ್ತಾ ಇದ್ದಾಗ ಚಿನ್ನುವಿನ ಕಣ್ಣಿಗೆ ಕಂಡಿದ್ದು ಮೇಲೆ ಸಂಪಿಗೆ ರೆಂಬೆಯಲ್ಲಿ ನೇತಾಡುತ್ತಿದ್ದ ಮೀನು, ಮತ್ತೆ ಹತ್ತಡಿ ಜಾರಿದಾಗ ಹತ್ತಿರವಾಗುತ್ತಿದ್ದ ಇಪ್ಪತ್ತಡಿ ಆಳದಲ್ಲಿ ರಭಸವಾಗಿ ಹರಿಯುತ್ತಿದ್ದ ತೋಡಿನ ಕೆಂಪುನೀರು.

ooooooooooooooooooooooooooooooo

ಅಮ್ಮಾ... ಅಂತ ನರಳುತ್ತ ಚಿನ್ನು ಕಣ್ಣುಬಿಟ್ಟಾಗ ಮೊದಲು ಕಂಡಿದ್ದು ಪಕ್ಕದಲ್ಲಿ ಕುಳಿತು ಕನ್ನಡಕವಿಟ್ಟು ಏನೋ ಪುಸ್ತಕ ಕೈಯಲ್ಲಿ ಹಿಡಿದಿದ್ದ ಅಜ್ಜ. ತಾನು ಮನೆಯೊಳಗಿನ ಬೆಡ್-ರೂಮಿನಲ್ಲಿ ಮೆತ್ತಗಿನ ಹಾಸಿಗೆಯ ಮೇಲೆ ಮಲಗಿದ್ದೇನೆ ಅಂತ ಅರಿವಾಯಿತು. ಅವಳು ಕಣ್ಣುಬಿಟ್ಟಿದ್ದು ಕಂಡ ಅಜ್ಜ 'ಎಚ್ರಾಯ್ತ ಚಿನ್ನೂ, ಮಾತಾಡ್ ಮಗಾ' ಅಂತ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡುತ್ತಿದ್ದರು. ಮೈಕೈಯಲ್ಲ ಅಸಾಧ್ಯ ನೋವು, ತಡೆಯಲಾರದೆ ಚಿನ್ನು ಮುಲುಗಿದಳು. 'ಮುಗು ಕಣ್ ಬಿಟ್ಲ್ ಕಾಣ್ ' ಅನ್ನುತ್ತ ಅಜ್ಜ ಅಮ್ಮನನ್ನು ಕರೆದರು.

ಅಮ್ಮ ಬಂದವಳು ಚಿನ್ನುಗೆ ಮೆಲ್ಲಗೆ ಎಬ್ಬಿಸಿ ಕೂರಿಸಿದಳು. ಬಿಸಿ ಹಾಲು ಕುಡಿಸಿದಳು. ನೋವಿನಿಂದ ಮುಖ ಕಿವಿಚಿಕೊಳ್ಳುತ್ತಿದ್ದಂತೆಯೇ ಚಿನ್ನುವಿಗೆ ಥಟ್ಟಂತ ನೆನಪಾಯಿತು, ಮೀನು ಎಲ್ಲಿ? ತಾನು ಬಿದ್ದಿದ್ದು, ಬೀಳುತ್ತಾ ಮೀನು ಸಂಪಿಗೆ ರೆಂಬೆಗೆ ನೇತಾಡುತ್ತಿದ್ದಿದ್ದು ನೋಡಿದ್ದು ಎಲ್ಲಾ ನೆನಪಾಯಿತು. 'ಮೀನು ಎಲ್ಲಿದ್ಲಮ್ಮಾ' ಅಂತ ಕೇಳಿದಳು. 'ಆ ಹಾಳು ಪುಚ್ಚೆಂದಾಗಿಯೇ ಇಷ್ಟೆಲ್ಲಾ ಆದ್ದ್, ಇನ್ನೊಂದ್ ಸರ್ತಿ ಪುಚ್ಚೆ ಸಾವಾಸ ಮಾಡ್ರೆ ಕಾಣ್ ನಿಂಗೆ... ಅಜ್ಜ ಕಾಣದೇ ಇದ್ದಿದ್ರೆ, ಆಚಮನೆ ಅಣ್ಣ ತೋಡಿಗೆ ಹಾರಿ ನಿನ್ನ ಹಿಡ್ಕಣದೇ ಇದ್ದಿದ್ರೆ ಈಗ ಆಯಿಪ್ಪ್ ಕಥೆ ನಂಗೆ ಜನ್ಮಕ್ಕೆ ಅನುಭವಿಸ್-ಗೆ, ಮೀನು ಅಂಬ್ರ್ ಮೀನು' ಅಂತ ಕಣ್ಣೀರಿನ ಜತೆ ಕಾಳಜಿ ಸೇರಿಸಿ ಬೈಯುತ್ತ ಚಿನ್ನುಗೆ ಬ್ರೆಡ್ ತಿನಿಸತೊಡಗಿದಳು ಅಮ್ಮ.

ಹಂಗಾದ್ರೆ ಮೀನು ಏನಾದ್ಲು? ನೀರಿಗೆ ಬಿದ್ದುಹೋದ್ಲಾ? ಗೊತ್ತಾಗ್ಲಿಲ್ಲ ಚಿನ್ನುಗೆ. ಅಮ್ಮ ಅಳುತ್ತಿದ್ದಾಳೆ, ಸಹಸ್ರನಾಮಾರ್ಚನೆ ಮಾಡುತ್ತಿದ್ದಾಳೆ ವಿನಹ ಮೀನುಗೇನಾಯಿತು ಅಂತ ಹೇಳುತ್ತಿಲ್ಲ. ಕಲ್ಪಿಸಿಕೊಳ್ಳಹೊರಟರೆ, ಏನಾಗಿರಬಹುದು ಅಂತ? ಊಹೂಂ.. ಭಯವಾಯ್ತು ಚಿನ್ನುಗೆ. ದಿಕ್ಕುತೋಚದೆ ಚಿನ್ನು ಸುಮ್ಮನಾದಳು. ಅಮ್ಮ ಚಿನ್ನುವಿಗೆ ಮಾತ್ರೆ ತಿನಿಸಿ, ಮದ್ದು ಕುಡಿಸಿ ಮೈತುಂಬ ಹೊದಿಸಿ ಹೊರಗಡೆ ಹೋದಳು.

ಚಿನ್ನುವಿಗೆ ಹಾಗೇ ಮೆಲ್ಲನೆ ಮಂಪರು ಕವಿದು ನಿದ್ರೆ ಬರಲಾರಂಭಿಸಿತು. ಸ್ವಲ್ಪ ಸ್ವಲ್ಪವೇ ಮಂಪರಿಗೆ ಜಾರುತ್ತಿದ್ದ ಹಾಗೆ ಯಾರೋ ಪಕ್ಕದಲ್ಲಿ ಬಂದು ಆತ್ಮೀಯವಾಗಿ ಕೂತಂತೆ, ಪ್ರೀತಿಯಲ್ಲಿ ಮುಖ ಸವರಿದಂತೆ, ಮೈಯನ್ನೆಲ್ಲ ನೇವರಿಸಿದಂತೆನಿಸಿ ಚಿನ್ನು ಮೆಲ್ಲನೆ ಯಾರೆಂದು ಕಣ್ಣು ಬಿಟ್ಟು ನೋಡಿದರೆ... ಅಜ್ಜ ಚಿನ್ನುವಿನ ಒಂದು ಬದಿಗೆ ಕೂತು ಕನ್ನಡಕ ಕೈಯಲ್ಲಿ ಹಿಡಿದು ಸಂತೋಷವಾಗಿ ನಗುತ್ತಿದ್ದರು. ಇನ್ನೊಂದು ಬದಿ... ಹಾಸಿಗೆಯ ಮೇಲೆ ನಿಂತುಕೊಂಡು ತನ್ನ ತಲೆಯನ್ನು ಚಿನ್ನುವಿನ ಹೊದಿಕೆಗೆ ಜೋರಾಗಿ ಉಜ್ಜುತ್ತ ಗುಟುರ್ರ್.ರ್ರ್ ಅಂತ ಮೈಯೊಳಗಿಂದ ಸಂಗೀತ ಹೊರಡಿಸುತ್ತ ಚಿನ್ನುವಿನ ಹೊದಿಕೆಯೊಳಗೆ ಸೇರಿಕೊಳ್ಳುವ ಪ್ರಯತ್ನ ನಡೆಸಿದ್ದಳು, ತುಂಟಿ ಮೀನು... :) :) :)

Tuesday, July 17, 2007

ರೆಕ್ಕೆ ಇದ್ದರೂ ಹಕ್ಕಿ...


ಈ ಹಕ್ಕಿ ಏನು ಮಾಡುತ್ತಿದೆ?

ಹಕ್ಕಿ ವಿಶ್ರಮಿಸುತ್ತಿದೆ.
ಅಲ್ಲ, ಬರಲಿರುವ ಪ್ರೀತಿಯ ಒಡನಾಡಿಗಾಗಿ ಕಾಯುತ್ತಿದೆ.
ರೆಕ್ಕೆಯ ಬಲ ಕುಂದಿ ಶಕ್ತಿ ರಿಚಾರ್ಜ್ ಮಾಡಿಕೊಳ್ಳಲೆಂದು ಸುಮ್ಮನೆ ಕೂತಿದೆ.

ಆಟವಾಡಲು ಒಡಹುಟ್ಟುಗಳು ಬರಲೆಂದು ಕಾಯುತ್ತಿದೆ.
ಹೊರಗೆ ಹೋದ ಅಮ್ಮನಿಗೆ ಕಾಯುತ್ತಿದೆ.
ಪ್ರಿಯನ ಸಂದೇಶ ಒಪ್ಪಿಸಲು ಪ್ರಿಯತಮೆಗಾಗಿ ಕಾಯುತ್ತಿದೆ.
ಮಳೆ ಬರಲಿದೆಯಲ್ಲ, ನೆನೆದು ಹಾಡಲಿಕ್ಕಾಗಿ ಕಾದಿದೆ.

ಅಲ್ಲಲ್ಲ, ಮಳೆ ಬರಲಿದೆ, ಇನ್ನೇನಪ್ಪಾ ಅಂತ ಕಂಗಾಲಾಗಿ ಕೂತಿದೆ.
ಈ ಬಿಲ್ಡಿಂಗ್ ಎಷ್ಟು ಎತ್ತರವಪ್ಪಾ ಅಂತ ಆಶ್ಚರ್ಯಪಡುತ್ತಾ ಕೂತಿದೆ.
ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾದುಕೂತಿದೆ.

ಇದು ಪ್ರಸಿದ್ಧ ಜೊನಾಥನ್ ಸೀಗಲ್ ಥರಾ, ಹಾರುವ ಮುನ್ನ ಆಕಾಶದ ಉದ್ದಗಲ ಮನದಲ್ಲೇ ಅಳೆಯುತ್ತ ತನ್ನ ಹೋಂವರ್ಕ್ ಮಾಡುತ್ತ ಕೂತಿದೆ...

ಇಲ್ಲ, ಇದು ಹಿಚ್-ಕಾಕ್-ನ ಸಿನಿಮಾದಲ್ಲಿರುವ ಹಕ್ಕಿಗಳಂತೆ ಯಾರಿಗೋ ಹೋಗಿ ಕುಕ್ಕಲು ಕಾಯುತ್ತಿದೆ.
ಇದು ಯಾವುದೋ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಟ್ಟು, ಹೊರಬರಲಿರುವ ಮರಿಗಾಗಿ ಕಾಯುತ್ತಿರುವ ಕೋಗಿಲೆ.
ಇದ್ಯಾವುದೂ ಅಲ್ಲ, ಸುಶ್ರುತನ ಚುಂಚು ಇದು, ಸುಶ್ರುತ ಬರ್ಲಿ, ವಾಕಿಂಗ್ ಹೋಗೋಣ ಅಂತ ಕಾಯ್ತಿದೆ. (ಜುಟ್ಟಿನ ರಿಬ್ಬನ್, ಹಣೆಯ ಮೇಲಿನ ಬಿಂದಿ, ಕಣ್ಣಹುಬ್ಬಿನ ಕಪ್ಪು, ಕೊಕ್ಕಿನ ಲಿಪ್-ಸ್ಟಿಕ್ ವಿವರವಾಗಿ ಕಾಣಿಸುವಷ್ಟು ಹತ್ತಿರ ನನ್ನ ಕ್ಯಾಮರಾ ಇರಲಿಲ್ಲ :) )

ಕಟ್ಟಿಕೊಳ್ಳಬಹುದಾದ, ಕಟ್ಟಿಕೊಡಬಹುದಾದ ಅರ್ಥಗಳು ನೂರಾರಿರುತ್ತವೆ.
ಆದರೆ, ಹಕ್ಕಿ ಮಾತ್ರ ತನ್ನದೇ ಆದ ಕಾರಣಕ್ಕೆ ಕೂತಿದೆ ಇಲ್ಲಿ.

----------------

ಅರ್ಥಗಳ ಹುಡುಕಾಟ ಸಾಕಾಗಿದೆ. ಹೈಗನ್ಸ್-ಬರ್ಗನ Uncertainty principle ನೆನಪಾಗುತ್ತಿದೆ.
ನಾವೇನು ಹುಡುಕುತ್ತೇವೋ ಅದೇ ಎಲ್ಲೆಲ್ಲೂ ಕಾಣಿಸುತ್ತದೆ.

ಅನರ್ಥಕೋಶ ಶ್ರೀಮಂತವಾಗುತ್ತಿದೆ.
ಅದರದೇ ಹುಡುಕಾಟ ಸಾಗಿರುವಾಗ ಮಾತು ಬರಿದಾಗುತ್ತದೆ. ಮೌನದ ಸಂಗ ಪ್ರಿಯವಾಗುತ್ತದೆ.

ದೂರ, ದೂರ ಹಾರಬೇಕಿದೆ ಹಕ್ಕಿ...
ಕಾಣುತ್ತಿರುವ ಬಾನಿನುದ್ದಗಲಕ್ಕೆ...
ತಿಳಿದಿರುವುದರಾಚೆಗೆ.
ಕಾಣುವುದರಾಚೆಗಿರುವ ಸ್ವಾತಂತ್ರ್ಯದ ಕಡೆಗೆ...
ಅನಂತವಾದ ಜೀವನಪ್ರೀತಿಯ ಕಡೆಗೆ.

ಆದರೆ...

ಜಬ್ ಕದಂ ಹೀ ಸಾಥ್ ನಾ ದೇ... ತೋ ಮುಸಾಫಿರ್ ಕ್ಯಾ ಕರೇಂ? ಅನ್ನುವಂತಾಗಿದೆ.
ಎಷ್ಟು ಹಾರಿದರೇನು, ಬಾನು ತುಂಬಿದ ಶೂನ್ಯವನ್ನು ಅಳೆಯಲಾಗುವುದೇ? ಅಥವಾ ತುಂಬಲಾಗುವುದೇ?
ರೆಕ್ಕೆಗಳು ಬಡಿಯುತ್ತ ಕಷ್ಟಪಟ್ಟು ಹಾರುವಾಗ ಹಕ್ಕಿ ಮನಸು ಸುಮ್ಮನಿರಬೇಕಿದೆ.
ಅಥವಾ ಹಕ್ಕಿ ಹಾರದೆ ಸುಮ್ಮನಿರಬೇಕಿದೆ.

----------------

ರೆಕ್ಕೆ ಇದ್ದರೆ ಸಾಕೆ, ಹಕ್ಕಿಗೆ ಬೇಕು ಬಾನು, ಮೇಲೆ ಹಾರೋಕೆ...

ಹಕ್ಕಿಗೆ ರೆಕ್ಕೆ ಇದೆ.
ಬಾನಿದ್ದರೂ ಇರದಂತಿದೆ.

ಬೆಳಕು ಇದೆ. ಮೋಡವಿದೆ.
ಕಾಣದ ಸಂಕಲೆಯ ಬಂಧವಿದೆ.
ಗಾಳಿ ಸುಮ್ಮನಿದೆ. ಮನಸು ಸುಮ್ಮನಿದೆ.
ಹಕ್ಕಿ ಸುಮ್ಮನಿದೆ. ಸುಮ್ಮನೆ ಕುಳಿತಿದೆ.

ಜೀವನ್ಮುಖಿ ಸೂರ್ಯ ಮೋಡ ಸೀಳಿ ಮತ್ತೆ ಹುಟ್ಟುವ ತನಕ.
ಚಳಿಬೆಳಗಿನ ಗಾಳಿ ಮತ್ತೆ ತಣ್ಣನೆ ಬೀಸಿ ಮನಸೋಕುವ ತನಕ.
ಬಂಧನ ಕಳಚಿ ಹಾರುವ ತವಕ ಮತ್ತೆ ಚಿಗುರುವ ತನಕ.
ರೆಕ್ಕೆಗಳು ಇಷ್ಟಪಟ್ಟು ತಾವಾಗಿ ಹಾರಲಿರುವ ಕ್ಷಣ ಮತ್ತೆ ಬರುವ ತನಕ.
ಮನದೊಳಗೆ ಮನೆ ಮಾಡಿ ಕಾಡಿದ ಹಕ್ಕಿ
ಮತ್ತೆ ಹಾರುವ ತನಕ ವಿಶ್ರಮಿಸುತ್ತದೆ.

ಜೋಗಿ ಹೇಳಿದಂತೆ - ಹೇಳದೆಯು ಇದ್ದಂತೆ...
ಇದು ಪೂರ್ಣವಿರಾಮವಲ್ಲ... 'ಕೋಮಾ'....