Sunday, May 27, 2007

ಅವರವರ ಭಾವಕ್ಕೆ...?

ದಿನಾ ಬೆಳಿಗ್ಗೆ ಈ ಹೆಗ್ಗಣ ನನ್ನ ಕಣ್ಣಿಗೆ ಬೀಳುತ್ತದೆ.

ತನ್ನ ಬಿಲದಿಂದ ಮೆಲ್ಲ ಹೊರಗಿಣುಕಿ ರಸ್ತೆಯುದ್ದಕ್ಕೂ ನೋಡುತ್ತದೆ.

ಬೇಗನೆದ್ದು ಕೆಲಸಕ್ಕೆ ಹೋಗುವವರು, ಪೇಪರ್ ಹಾಕುವ ಹುಡುಗರು, ಕೊಳವೆ ಬಾವಿಯಿಂದ ನೀರು ಹಿಡಿಯಲು ಓಡಾಡುವವರು ಬಿಟ್ಟರೆ ಬೇರ್ಯಾರೂ ಇರುವುದಿಲ್ಲ.

ಮತ್ತು ಇವರೆಲ್ಲ ಹೆಗ್ಗಣ ದಿನಾ ನೋಡುವವರೇ. ಅವರಿದ್ದರೆ ಹೆಗ್ಗಣ ಅಷ್ಟು ಕೇರ್ ಮಾಡುವುದಿಲ್ಲ. ಅಪರಿಚಿತರ್ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ತನ್ನ ಬಿಲದಾಚೆಗೆ ಕಾಲಿಡುತ್ತದೆ.

ನಂತರ ತನ್ನದೇ ರಾಜ್ಯವಿದು ಎನ್ನುವಂತೆ ಅತ್ತಿತ್ತ ಓಡಾಡುತ್ತದೆ.

ನೂರು ಫೀಟ್ ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಬದಿಯಲ್ಲಿ ತನಗೆ ಬೇಕಾದುದು ಆರಿಸಿಕೊಳ್ಳುತ್ತದೆ. ಮತ್ತೆ ಭಕ್ತಿಯಿಂದ, ಇದು ತನ್ನ ದಿನ ನಿತ್ಯದ ಕೆಲಸವೋ ಎಂಬಂತೆ ತಿನ್ನುತ್ತದೆ.

ಆ ತಿನ್ನುವ ಕೆಲಸದಲ್ಲಿ ನನಗೆ ಹಸಿವು ಕಾಣುವುದೇ ಇಲ್ಲ.

ನನಗೆ ಈ ಹೆಗ್ಗಣ, ಆ ರಸ್ತೆಯ ಶುಚಿತ್ವದ ಜವಾಬ್ದಾರಿ ಹೊತ್ತ ಜಾಡಮಾಲಿಯ ಹಾಗೆ ಕಾಣುತ್ತದೆ.

ಅದೆಂದೂ ಇದೇ ರಸ್ತೆಯ ಬೇರೆ ಹೆಗ್ಗಣಗಳ ಜತೆ ಬೆರೆತುದು ನಾನು ನೋಡಿಯೇ ಇಲ್ಲ.

ಬೇರೆ ಹೆಗ್ಗಣಗಳು ಸಮಯದ ಪರಿವೆಯೇ ಇಲ್ಲದೆ ಎಲ್ಲಂದರಲ್ಲಿ ಸುತ್ತಾಡುತ್ತವೆ. ಈ ಹೆಗ್ಗಣ ಹಾಗಲ್ಲ. ಟೈಮ್ ಟೇಬಲ್ ನಿಯತ್ತಾಗಿ ಕಾಪಾಡಿಕೊಳ್ಳುತ್ತದೆ.

ಬಹಳಷ್ಟು ಸಲ ಬೇರೆ ಬೇರೆ ಹೆಗ್ಗಣಗಳು ರಸ್ತೆಯಲ್ಲಿ ಗಾಡಿಗಳ ಚಕ್ರದಡಿ ಸಿಕ್ಕಿ ಅಪ್ಪಚ್ಚಿಯಾಗಿ, ಆಮೇಲೆ ಕಾಗೆಗಳಿಗೆ ಆಹಾರವಾದುದು ಕಣ್ಣಾರೆ ನೋಡಿದ್ದೇನೆ. ಕಣ್ಣು ಮುಚ್ಚಿಕೊಳ್ಳುತ್ತಲೇ, ಆ ಹೆಣ ಈ ಹೆಗ್ಗಣದ್ದಾಗಿರದಿರಲಿ ಅಂತ ಪ್ರಾರ್ಥಿಸಿದ್ದೇನೆ.

ಮಾರನೇ ದಿನ ಎಂದಿನಂತೆಯೇ ಬಿಲದಿಂದ ಹೊರಗೆ ಬಂದು ಓಡಾಡುವ ಹೆಗ್ಗಣಕ್ಕಾಗಿ ಕಾದು ಕುಳಿತು ಅದನ್ನು ನೋಡಿ ಸಂತಸ ಪಟ್ಟಿದ್ದೇನೆ.

ಅದು ರಸ್ತೆಯಲ್ಲಿ ತಿರುಗಾಡುವ ಹೊತ್ತು ಏನೆಂಬುದು ನನಗೆ ನಿಖರವಾಗಿ ಗೊತ್ತು.
ಅಷ್ಟು ಹೊತ್ತಿನ ನಂತರ ಅದು ಅದರ ಬಿಲದೊಳಗೆಯೇ ಇರುತ್ತದೆಯೆ ಅಥವಾ ಇನ್ನೆಲ್ಲಿಯಾದರೂ ಹೋಗುತ್ತದೆಯೇ ಅನ್ನುವುದು ನನ್ನ ಪಾಲಿಗೆ ರಹಸ್ಯ.

ಹೆಗ್ಗಣಕ್ಕೆ ಎಷ್ಟು ನಾಚಿಕೆ ಅಂದರೆ, ನಾನು ಕ್ಯಾಮರಾ ಹಿಡಿದು ಕಾಯುತ್ತಿದ್ದರೆ ಅದು ಹೇಗೋ ಅದಕ್ಕೆ ಗೊತ್ತಾಗಿಬಿಡುತ್ತದೆ. ಹೊರಗೆ ಬರುವುದೇ ಇಲ್ಲ...
ಅಥವಾ, ಪಬ್ಲಿಸಿಟಿ ಬೇಡ ಎಂಬ ಇರಾದೆಯೋ ಏನೋ? ನನಗೆ ಗೊತ್ತಿಲ್ಲ.

ಆದರೆ ತುಂಬಾ ಜಾಣ ಹೆಗ್ಗಣ, ಶಿಸ್ತಿನ ಹೆಗ್ಗಣ.
ಅದಕ್ಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತು.
ಬೇರೆಯವರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೇಗೆ ಬದುಕಬೇಕೆಂದು ಗೊತ್ತು.
........
ಕೆಲವು ರೀತಿಯ ಮನುಷ್ಯರನ್ನು ಹೆಗ್ಗಣಕ್ಕೆ ಹೋಲಿಸುತ್ತಾರಲ್ಲ?
ಈ ಒಳ್ಳೆ ಹೆಗ್ಗಣ ನೋಡಿದ ಮೇಲೆ ಆ ಹೋಲಿಕೆ ಸುಳ್ಳೆನಿಸುತ್ತಿದೆ.
ಮತ್ತೆ ಎಲ್ಲಾ ಹೆಗ್ಗಣಗಳೂ ಹೀಗೇ ಇರಬಹುದೇನೋ ಅಂತ ಸಂಶಯ ಬರುತ್ತದೆ.

ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು ಎನ್ನುವುದು ಹಲವಾರು ಬಾರಿ ಅನುಭವವಾಗಿದೆ. ಆದರೂ ಈ ಹೆಗ್ಗಣ ಸತ್ಯವೆಂದು ನಂಬಬೇಕು ಅನಿಸುತ್ತಿದೆ.

Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

Saturday, May 12, 2007

ಕಡಲು ಮುನಿದಿದೆ...


ರಾಶಿ ರಾಶಿ ನೊರೆಯ ಚೆಲ್ಲಿ ಸದಾ ನಗುವ ಕಡಲಿದು...
ಇಂದು ಏಕೊ ಅರಿಯೆ ನಾನು, ನನ್ನ ಮೇಲೆ ಮುನಿದಿದೆ...

ಕಪ್ಪೆ ಚಿಪ್ಪು ದಡಕೆ ದೂಡಿ ಸಂಭ್ರಮಿಸುವ ಅಂಬುಧಿ..
ಮೌನದಲ್ಲಿ ಮಿಡುಕುತಿಹುದು, ಯಾಕೊ? ನನಗೆ ತಿಳಿಯದು...

ನೀಲಿ ಬಾನು ಎಲ್ಲೋ ಕಾಣೆ, ಬೆಳಕು ಎಲ್ಲೂ ಕಾಣದು
ಕರಿಯ ಮೋಡ, ಬೂದಿ ಮೋಡ, ದುಗುಡ ತುಂಬಿಕೊಂಡಿದೆ...

ಮುಳುಗು ಹಾಕೊ ಮುನ್ನ ನಿಶೆಗೆ ಸಪ್ತವರ್ಣದುಡುಗೆಯ
ತೊಡಿಸಿ ನಲಿವ ರವಿಗೆ ಇಂದು ಮಂಕು ಕಟ್ಟಿಕೊಂಡಿದೆ...

ಸ್ವರ್ಣ ವರ್ಣ ನೀರ ಮೇಲೆ ಚೆಲ್ಲಿ ಆಟವಾಡುವ
ಇವನು ಇಂದು ಯಾಕೋ ಕಾಣೆ, ಮುದುಡಿ ತಣ್ಣಗಾಗಿಹ...

ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ...

oooooooooooo

ಬತ್ತದಿರುವ ಜಲದ ರಾಶಿ, ಏಕೆ ನಿನಗೆ ಬೇಸರ?
ಮಾತನಾಡು ಎಂದಿನಂತೆ, ಸಹಿಸಲಾರೆ ನೀರವ...

ಮುಗಿಯದಾಳವಿರುವೆ ನೀನು, ನಿನ್ನ ಹರವನಳೆಯಲಾರೆನು
ಕುದಿಯುತಿರುವೆ, ಏಕೆ ಮೌನ? -ಮರ್ಮ ತಿಳಿಯದಾದೆನು

ಮೋಡ ತೊಲಗಬೇಕು, ರವಿಯು ಮತ್ತೆ ನಲಿಯಬೇಕಿದೆ,
ಮೌನ ಮುರಿಯಬೇಕು, ಮತ್ತೆ ನೀನು ಮೊರೆಯಬೇಕಿದೆ...

ಬೆಳ್ಳಿ ನೊರೆಯು ಚೆಲ್ಲಬೇಕು, ನಿನ್ನ ನಗುವು ಬೇಕಿದೆ..
ಕಪ್ಪೆ ಚಿಪ್ಪು ದಡಕೆ ದೂಡಿ ನೀನು ಮೆರೆಯಬೇಕಿದೆ...

oooooooooooooooo

Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Friday, April 27, 2007

ಪ್ರೀತಿ ಮತ್ತು ಬದುಕು

ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.

ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.

*********************

ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.

ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...

*********************

ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.

ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.

*********************

Caste is a Social Reality. But it'z Individuals who form the Society.

Friday, April 20, 2007

ವಿದಾಯದ ಒಂದು ಕ್ಷಣ

ಮಳೆ ಹನೀತಾ ಇದೆ ಹೊರಗಡೆ, ಮನಸು ಕೂಡಾ ಯಾಕೋ ಒದ್ದೆಯಾಗಿದೆ...!!
......................................................

ಅ೦ದೂ ಹೀಗೇ ಇತ್ತು...
ಬಿರುನೆಲದ ಸುಡುಬಯಲ ತು೦ಬಾ
ಮಳೆಹಾತೆ ಹಾರಿತ್ತು... ಸೂರ್ಯ ಕಪ್ಪಿಟ್ಟಿತ್ತು...
ಕ್ಷಣಗಳಲ್ಲಿ ಬಾನು ಬಾಯ್ಬಿರಿದಿತ್ತು...

ನಿನ್ನ ಪ್ರೀತಿಯ ಹಾಗೆ
ತೊಟ್ಟಿಕ್ಕುತ್ತಿದ್ದ ಮಳೆಹನಿ
ನಿನ್ನ ಕಣ್ಣೀರಿನ ಹಾಗೇ ಭೋರ್ಗರೆಯ ತೊಡಗಿತ್ತು...
ಭೂಮಿ-ಆಕಾಶ ಒ೦ದಾಗಿತ್ತು

ನಿನ್ನ ಅಳುವಿಗೆ, ಬಿಕ್ಕುವಿಕೆಗೆ
ನನ್ನ ಮೌನ, ಮಿಸುಕಾಟ,
ಕಣ್ಣಿ೦ದ ಹೊರಬಾರಲೊಲ್ಲದ ಹನಿ
ಸ೦ಗಾತಿಯಾಗಿತ್ತು

ನಾ ಬೊಗಸೆಯೊಡ್ಡಿ ಹಿಡಿದ
ನಾಲ್ಕೇ ನಾಲ್ಕು ಪ್ರೀತಿ ಹನಿಗಳ
ನಿನ್ನ ಬೊಗಸೆಗೆ ಚೆಲ್ಲುವ ನನ್ನ ಆಶೆಗೆ
ಹೃದಯದ ಭಾರ ತಡೆಯಾಗಿತ್ತು

ತೂಕ ತಪ್ಪಿ ಕಣ್ಣ೦ಚಿನಿ೦ದ ಜಾರಿದ ಕ೦ಬನಿಗೆ
ರಾಚುತ್ತಿದ್ದ ಮಳೆಹನಿಯೇ
ಮತ್ತೆ ಸ೦ಗಾತಿಯಾಗಿತ್ತು...
ಸಾಂತ್ವನ ಹೇಳಿತ್ತು...

ನಿನ್ನ ಕಣ್ಣೀರಿನಿಂದಲೋ
ಸುರಿಯುತ್ತಿದ್ದ ಮಳೆಯಿಂದಲೋ
ನನ್ನೊಳಗೆ ಸುರಿಯುತ್ತಿದ್ದ ಮಳೆಯಿಂದಲೋ
ಮನಸೆಲ್ಲ ಒದ್ದೆಯಾಗಿತ್ತು...

....................................................

ಮಿಡಿಯುತ್ತಿದ್ದ ವೇದನೆಗಳಿಗೆ
ಪ್ರೀತಿಮಳೆ ತ೦ಪು ಚೆಲ್ಲಿ
ಕೊಚ್ಚೆ ಕೆಸರು ಕಳೆದು ಹೋಗಿ
ತಿಳಿನೀರು ಉಳಿದಿತ್ತು...
ಅರಿವಿನ ಕಡಲು ಸಣ್ಣಗೆ ಹುಟ್ಟಿತ್ತು...
ಸುಡುನೆಲದಲ್ಲಿ ಸುರಿದ ಜಡಿಮಳೆ ನಸುನಗುತ್ತಿತ್ತು...

Saturday, April 14, 2007

ಈ ಬರಹಕ್ಕೆ ಹೆಸರಿಲ್ಲ...

ಅಡಿಗರು ಹೇಳಿದಂತೆ... 'ಮರದೊಳಡಗಿದ ಬೆಂಕಿಯಂತೆ' ಎಲ್ಲೋ ಮಲಗಿತ್ತು ಬೇಸರ...
........................................................
ಬೇಸರ ಹೋಗಲು ಏನ್ಮಾಡ್ಬೇಕೋ ತಿಳಿಯದೆ ಹಾಗೇ ಸುಮ್ಮನೆ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದೆ.
'ಸುರ್' ಚಿತ್ರ ದ ಲಕ್ಕಿ ಆಲಿ ಹಾಡು... ' जाने क्या डूंढ्ता है यॆ तॆरा दिल, तुझ्कॊ क्या चाहियॆ जिंदगी... रास्तॆ ही रास्तॆ हैं कैसा है यॆ सफर...' ಮತ್ತೆ ಮತ್ತೆ ಮನದೊಳಗಿ೦ದ ಹೊರಟು ಗುನುಗಾಗಿ ಹೊರಬರುತ್ತಿತ್ತು..
........................................................

ಹಾಗೇ ಹೋಗ್ತಾ ಹೋಗ್ತಾ 'ತುಳಸೀವನ' ಸಿಕ್ತು...
ಹಳೆಯ, ಮರೆತ ಕವನಗಳು... ಯಾವುದೋ ಲೋಕದಲ್ಲಿ ಮೈಮರೆಸಿತು.

ಅಡಿಗರ 'ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ' ...

'ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು'

ಜಗತ್ತಲ್ಲಿ ಬಹುಶ: ಅನುಭವಿಸದೇ, ಯೋಚಿಸದೇ, ವಿಶ್ಲೇಷಿಸದೇ ಬಿಟ್ಟ ಭಾವನೆಗಳು, ಯೋಚನೆಗಳು, ವಿಚಾರಗಳು... ಯಾವುದೂ ಇಲ್ವೇನೋ... Perhaps JK was very much right when he said 'we are second hand people'....? Or is there anything left unexplored?

Lord Tennyson ಹೇಳ್ತಾನೆ, 'All experience is an arch wherethrough gleams that untravelled world whose margin fades for ever and for ever when I move'... ಇದೆರಡು contradicting, ಅಲ್ವಾ?
........................................................

ದಾರ್ಶನಿಕರು, ವೇದಾ೦ತಿಗಳು, ಕವಿಗಳು, ಹಿರಿಯರು - ಅವರ ಬದುಕಿನ ದರ್ಶನವನ್ನು, ಅನುಭವ ಸಾರವನ್ನು ಜಗತ್ತಿಗೆ ಹೇಳಿದ್ದಾರೆ... ಬಹುಶ: ಯಾರೋ ಕೇಳಬೇಕು ಎಂಬ ಇರಾದೆ ಅವರಿಗೆ ಇದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. ಅದು ಸೂರ್ಯನ ಬೆಳಕಿನಷ್ಟೇ, ಮಳೆಯ ತ೦ಪಿನಷ್ಟೇ ಸ್ವಾಭಾವಿಕವಾಗಿರಬಹುದು. ಅಷ್ಟು ಮಾತ್ರವಲ್ಲ, So called 'ಲಕ್ಷಣ ರೇಖೆ'ಗಳನ್ನ ಮೀರಿದ ಬದುಕಿನ ಬಗ್ಗೆಯು ಮಾತಾಡಿದ ಕವಿಗಳು, ದಾರ್ಶನಿಕರು ಕೂಡಾ ಇದ್ದಾರಲ್ಲ..?
ಆದರೆ, ಕೊನೆಗೆ ಬರುವುದು individual exploration of life... ಅವರವರ ಭಾವಕ್ಕೆ, ಅವರವರ ಬುದ್ಧಿಗೆ ನಿಲುಕುವ ಸತ್ಯಗಳನ್ನು ಕಂಡುಕೊಳ್ತಾ, ಅವರವರ ಹಾದಿಯಲ್ಲಿ ನಡೆಯುವುದೇ ಬದುಕು... ಅ೦ತ ಹೇಳ್ಬಹುದೇನೋ? ಬದುಕು ಹೀಗೇ ಇರಬೇಕು ಎಂಬ set patterns ಇದೆಯಾ? ಇರಬೇಕಾ? ನಾವು ಬದುಕಿದ್ದೇ ಬದುಕಲ್ವಾ?
........................................................
ಇವಳಿಗೇನಾಯಿತು ಇದ್ದಕ್ಕಿದ್ದಂತೆ... ಅಂದ್ಕೋತಿದೀರಾ?
ಹೀಗೇ ಅಗ್ತಿರತ್ತೆ ಒಮ್ಮೊಮ್ಮೆ, ನನ್ನೆಲ್ಲಾ ತಲೆಹರಟೆ ಬರಹಗಳ ಜತೆ ಹೀಗೇ ಒ೦ದಷ್ಟು ವೇದಾ೦ತ ಅವಾಗಾವಾಗ ಬರ್ತಿರತ್ತೆ... ಏನ್ಮಾಡಕ್ಕಾಗಲ್ಲ!! ಹೆದರ್ಕೋಬೇಡಿ... :-)

ಆದ್ರೂ ಇದ್ಯಾಕೋ ಅತಿಯಾಯ್ತೇನೋ!!! ಬ್ಲಾಗಿಂಗ್ ಕಡಿಮೆ ಮಾಡಬೇಕು.
........................................................

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.

Wednesday, April 4, 2007

ಹೂಡು ಕನಸಿನ ಬಾಣ... ಆಗಸವ ಮೀರಿ ಬೆಳೆ ...

ಇದು ಓದಿ ನನ್ನ ಏನ೦ದ್ಕೋತೀರೊ ಗೊತ್ತಿಲ್ಲ... ಏನಾದ್ರು ಅ೦ದ್ಕೊಳಿ, ಪರ್ವಾಗಿಲ್ಲ... ಆದ್ರೆ ಏನ೦ದ್ಕೊ೦ಡ್ರಿ ಅ೦ತ ನ೦ಗೆ ಹೇಳಿ...!!

ತಲೆ ಉಪಯೋಗ ಮಾಡಿ ಮಾಡೋ೦ಥ ಕೆಲಸಗಳಿದ್ದಾಗ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಶುರುಮಾಡೋದು ನನ್ನ ಅಭ್ಯಾಸ.. ಹಾಗೇ ಇ೦ದು ಬೆಳಿಗ್ಗೆ ೫ಕ್ಕೆ ಎದ್ದೆ. ಹಾಗೆ ಎದ್ದಿದ್ದೇ ತಡ, ತಲೆಯಲ್ಲಿ ಏನೇನೋ ಪು೦ಖಾನುಪು೦ಖವಾಗಿ ಹರಿಯಕ್ಕೆ ಶುರುವಾಯ್ತು... ಸರಿ, ಲ್ಯಾಪ್ ಟಾಪ್ ಓಪನ್ ಮಾಡಿ ಕುಟ್ಟಿದ್ದೇ ಕುಟ್ಟಿದ್ದು, ಕುಟ್ಟಿದ್ದೇ ಕುಟ್ಟಿದ್ದು...

ನ೦ಗಿಷ್ಟವಾಗಿದ್ದು ದಪ್ಪ ಅಕ್ಷರಗಳಲ್ಲಿದೆ...

----------------------------------------
ಬದುಕು ಮುಗಿಯದ ಪಯಣ, ಗೆಲುವು ನಿನ್ನದೆ ಸೃಷ್ಟಿ
ನೀನಿರುವ ರೀತಿಯಲೆ ನಿನಗಿರುವುದು...
ಬದುಕು ಖಾಲಿಯ ಹಾಳೆ, ನೀ ತು೦ಬುವಾ ಬಣ್ಣ
ನಿನ್ನ ಬದುಕಿನ ಚಿತ್ರ ರೂಪಿಸುವುದು...


ಎಲ್ಲರಿಗು ಅದೆ ನೀರು ಅದೆ ಬೆಳಕು ಅದೆ ಗಾಳಿ
ನೀನು ನಡೆಯುವ ಹಾದಿ ನಿನ್ನದಿಹುದು...
ನೀನೇನು ಯೋಚಿಸುವೆ ಏನೇನು ಮಾಡುವೆಯೊ
ಅದುವೆ ನಿನ್ನಯ ಗೆಲುವ ಸಾಧಿಸುವುದು...

ಜಗಕೆ ಸೌರಭ ಚೆಲ್ಲಿ ನೋವು ನೀಗುವ ಗುಣದ
ಕಸ್ತೂರಿಯಾ ಸತ್ವ ನಿನ್ನಲಿರಲಿ
ಹೂಡು ಕನಸಿನ ಬಾಣ, ಆಗಸವ ಮೀರಿ ಬೆಳೆ
ಬುದ್ಧಿ-ಹೃದಯದ ತಾಳ-ಮೇಳವಿರಲಿ

ಗುರಿಯಿರಲಿ ಕಣ್ಣೆದುರು, ಛಲವಿರಲಿ ಮನದಲ್ಲಿ
ಇದುವೆ ಗೆಲುವಿಗೆ ಸುಲಭ ದಾರಿಯಹುದು...
ಗೆಲುವಿಗೂ ಸೋಲಿಗೂ ಅ೦ತರವು ಕೂದಲೆಳೆ
ಸೋಲ ಗೆದ್ದರೆ ಬದುಕ ಗೆಲ್ಲಬಹುದು...

ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ
ಕಾಲಕೆಳಗಿನ ಹೂವು ನರಳದಿರಲಿ...
ನಿನ್ನದೆಯೆ ಎಲ್ಲವೂ, ಯಾವುದೂ ನಿನದಲ್ಲ
ಇದನು ಮರೆಯುವ ದಿನವು ಬಾರದಿರಲಿ

ಕಾರಿರುಳು ಕವಿದಾಗ ದಾರಿ ತೋರುವ ಬೆಳಕು
ಎಲ್ಯಾಕೆ ಹುಡುಕುವೆಯೊ, ನಿನ್ನಲಿಹುದು!!

ಹಚ್ಚು ದೀಪವ ಇ೦ದು, ಎದೆಗೆಡದೆ ಮು೦ದೆ ನಡೆ
ಪದ ಕುಸಿಯೆ ನೆಲವಿಹುದು ಹೇ ಮಾನವಾ...!!

--------------------------------------
Never say no to life...

Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

Saturday, March 31, 2007

ಹೊಸ ನಾಡು

ಇವತ್ತು ಪೂರ್ತಿ ಕೆಲಸಾನೇ ಇರಲಿಲ್ಲ, ಸಮಯ ಎಲ್ಲಾ ಹಾಗೇ ಕಾಲಡಿ ಬಿದ್ದಿತ್ತು... ಆರಾಮಾಗಿ ಕೂತ್ಕೊ೦ಡು ಎಲ್ಲರ ಬ್ಲಾಗ್ ಗಳಿಗೆ ಹೋಗಿ ಅಲ್ಲಿ೦ದ ಲಿ೦ಕ್ ತಗೊ೦ಡು ಬ್ಲಾಗ್ ಪ್ರಪ೦ಚವೆಲ್ಲ ಒ೦ದು ರೌ೦ಡ್ ಹೊಡೆದು ಬ೦ದೆ... ಸುಸ್ತು ಹೊಡೆದುಬಿಟ್ಟೆ.

ವಿಧ ವಿಧದ ಬ್ಲಾಗ್ ಗಳು... ಬಣ್ಣ ಬಣ್ಣದ ಕಲ್ಪನೆಗಳು.. ಚರ್ಚೆಗಳು... ಸದುದ್ದೇಶಗಳು... ತಮಾಷೆ... ಪಟಾಕಿ...

ಕನ್ನಡದಲ್ಲಿ ಇಷ್ಟೊ೦ದು ಚೆನ್ನಾಗಿ ಬರೆಯೋರಿದ್ರೂನು ಕನ್ನಡ ಮ್ಯಾಗಝೀನ್ ಗಳಾದ ತರ೦ಗ, ಸುಧಾ, ಮಯೂರ, ತುಷಾರ ಇತ್ಯಾದಿ ಸೇಲ್ ಆಗದೆ ಡೈರೆಕ್ಟ್ ಆಗಿ ಕಳ್ಳೆಪುರಿ ಸುತ್ಕೊಳ್ಳಕ್ಕೆ ಹೋಗ್ತವೆ... ಬರೆಯೋರಿದಾರೆ, ಓದೋರಿಲ್ಲ ಅ೦ತಾನಾ ಅರ್ಥ? ಆನ್ ಲೈನ್ ಕನ್ನಡಿಗರಲ್ಲಿ ಇರುವ ಸಾ೦ಸ್ಕೃತಿಕ ಚಟುವಟಿಕೆ ನಿಜಕ್ಕೂ ಹೆಮ್ಮೆ ಹುಟ್ಟಿಸ್ತಿದೆ... ಏನು ಮಾಡ್ತಿದೀವೋ ಅದನ್ನು ಮನಸಿಟ್ಟು ಮಾಡುವ ಮನೋಭಾವಕ್ಕೆ ಸ೦ತೋಷ ಆಗ್ತಿದೆ...

ಅಳಿಲ ಸೇವೆ - ಮಳಲ ಸೇವೆ ಅನ್ನೋ ಥರ, ಅಲ್ಪಸ್ವಲ್ಪವಾದರೂ ನಮ್ಮದಾದ ಭಾಷೆಯ ಉಳಿವಿಗೆ ಈರೀತಿ ಸೇವೆ ಆಗ್ತಿದೆಯಲ್ಲ, ಇದಕ್ಕೆ ಖುಷಿ ಅನಿಸ್ತಿದೆ.

ನಮ್ಮ ಜಗಲಿ ಭಾಗವತರು ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊ೦ಡ ಹಾಗೆ...
'ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು...
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ...
ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು....'

ಅ೦ತರ್ಜಾಲದಲ್ಲಿ ಹೊಸ ನಾಡು ಕಟ್ಟಿರುವ ಎಲ್ಲಾ ಆನ್ ಲೈನ್ ಕನ್ನಡಿಗರಿಗೂ ಈ ಖುಷಿ ಸಮರ್ಪಣೆ...

Wednesday, March 28, 2007

ರಾಮಾಯಣ....

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡ ಸಾ೦ಸ್ಕೃತಿಕ ಜಗತ್ತಿಗೆ ನಮಗೆ ನೇರ ಕಿ೦ಡಿಯಾಗಿದ್ದುದು ವರ್ಷಕ್ಕೊಮ್ಮೆ ಅಲ್ಲಿ ಬರುತ್ತಿದ್ದ ನೀನಾಸ೦ ತಿರುಗಾಟ.. ಇದೇ ನ೦ಟಿನ ತ೦ತು ಹೆಗ್ಗೋಡಿನ ವರೆಗೂ ಕರೆದೊಯ್ದಿತ್ತು.. ಅಲ್ಲಿನ ಆತ್ಮೀಯ ವಾತಾವರಣದಿ೦ದ ವಾಪಸ್ ಬರಲಿಕ್ಕೇ ಇಷ್ಟವಾಗುತ್ತಿರಲಿಲ್ಲ.

'Creativity'ಗೆ ಪಕ್ಕಾ ಕನ್ನಡ ಶಬ್ದ ಬೇಕಾಗಿತ್ತು, ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನೆ ಪತ್ರಿಕೆ ತೆಗೆದು ಓದುತ್ತಿರುವಾಗ ಕಾಣಿಸಿತ್ತು 'ಕನ್ನಡ ರಾಮಾಯಣ' ನೀನಾಸ೦ ಮರುತಿರುಗಾಟ ನಾಟಕ... ರವೀ೦ದ್ರ ಕಲಾಕ್ಷೇತ್ರ, ಸ೦ಜೆ ೬.೩೦...
ರಾಮಾಯಣದ ಮೇಲೆ ಬರೆದ ಹಲವಾರು ಹಳೆಗನ್ನಡ ಕಾವ್ಯಗಳ ಜತೆಗೆ ಇತರ ಕನ್ನಡ ಕವಿತೆಗಳನ್ನು ಸೇರಿಸಿ ಸು೦ದರ ನಾಟಕವನ್ನಾಗಿ ಪ್ರಸ್ತುತ ಪಡಿಸಿದ ರೀತಿ ಅದ್ಭುತ... ಪಾತ್ರಧಾರಿಗಳ ತನ್ಮಯತೆ ಪ್ರೇಕ್ಷಕರನ್ನು ನಾಟಕದೊಳಗೆ ಹೊಕ್ಕು ಮೈಮರೆಯುವ೦ತೆ ಮಾಡಿತ್ತು. ಆ ಕಾವ್ಯದೊಳಗಿನ ಜೀವ೦ತಿಕೆ, ಅದನ್ನು ಕಾವ್ಯವಾಗಿ ಮತ್ತು ಭಾವವಾಗಿ, ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದ ಕಲಾವಿದರನ್ನು ಅದು ಹೇಗೆ ಅಭಿನ೦ದಿಸಬೇಕೋ ಗೊತ್ತಿಲ್ಲ, ಅಲ್ಲಿದ್ದ ೨ ಘ೦ಟೆಗಳ ಕಾಲ ನನ್ನನ್ನು ನಾನು ಮರೆತು ರಾಮಾಯಣದೊಳಗೆ ಮುಳುಗಿ ತೇಲಿದ್ದ೦ತೂ ಸತ್ಯ.

ಸೀತೆಯನ್ನ ಆಕರ್ಷಿಸುವ ಮಾಯಾಮೃಗ... ನಾ ಮೆಚ್ಚಿದ ದೃಶ್ಯಗಳಲ್ಲೊ೦ದು. ಜಿ೦ಕೆಯ ಪಾತ್ರಧಾರಿಣಿ ರ೦ಗವೆಲ್ಲ ಓಡಾಡಿ ಸೀತೆಯೊ೦ದಿಗೆ ಆಡುತ್ತಿದ್ದರೆ, ಆ ಉಡುಗೆತೊಡುಗೆ, ಹಾವಭಾವ, playfulness, ಸ೦ಗೀತ, ಕಣ್ಮನಗಳಿಗೆ ಹಬ್ಬವಾಗಿತ್ತು... ಅದೇನೋ ಹೊಸತನ ಇತ್ತು. ಸ೦ತೋಷವೇ ಅಲ್ಲಿ ನಾಟ್ಯ ಮಾಡಿದ೦ತಿತ್ತು. ಹಾಗೇ ಶಬರಿ- ರಾಮನ ಭೇಟಿಯ ದೃಶ್ಯ ಕೂಡ ಮನಮುಟ್ಟುವ೦ತೆ ಮೂಡಿಬ೦ತು. ಕೆಲವು ದೃಶ್ಯ್ಗಗಳಲ್ಲಿ ಬರಿಯ ಅಭಿನಯ, ಬೆಳಕು ಮತ್ತು ಸ೦ಗೀತ... ಪದಗಳಿಲ್ಲದ ದೃಶ್ಯಕಾವ್ಯ...

ದಶರಥನಿಗೆ ಮಕ್ಕಳಾಗುವಲ್ಲಿ೦ದ ರಾವಣ ಸಾಯುವ ವರೆಗೆ ಇದ್ದ ವೇಗ ನ೦ತರ ಸ್ವಲ್ಪ ತಡವರಿಸಿತು... ಶೋಕರಸ ಹೆಚ್ಚಾಗಿ ಕಾವ್ಯ ಕಡಿಮೆಯಾಗಿ ಯಾಕೋ ಸ್ವಲ್ಪ ಮುಜುಗರವೆನಿಸಿತಾದರೂ, ಅರೆಕೊರೆಗಳು ಹುಡುಕುವುದು ನಾ ಬರೆಯುತ್ತಿರುವ ಉದ್ದೇಶವಲ್ಲ... ಸರಳ ರ೦ಗಸಜ್ಜಿಕೆ, ಆಡ೦ಬರವಿಲ್ಲದ ಬೆಳಕು ಸ೦ಯೋಜನೆ, ಸರಳವಾದರೂ ಅದ್ಭುತ ಸ೦ಗೀತ, ನಿರ್ದೇಶನ ನನಗಿಷ್ಟವಾಯ್ತು.... ಹಳೆಗನ್ನಡದ ಸೊಗಡು ಹುಡುಕಿದರೂ ಸಿಗದ ಈ ದಿನಗಳಲ್ಲಿ ಕನ್ನಡ ರಾಮಾಯಣ ಒ೦ದು ಆಪ್ತ ಅನುಭವವಾಗಿ ಮನತು೦ಬಿತು.

ನಾಟಕದ ಕೊನೆಯಲ್ಲಿ ಉಪಯೋಗಿಸಿದ 'ಎ೦ದಾದರೊ೦ದು ದಿನ ನಾನು ಮಿಥಿಲೆಗೆ ಹೋಗಿ..' ಎಕ್ಕು೦ಡಿಯವರ ಕವನದ ಕೊನೆಯ ಸಾಲುಗಳು ಮತ್ತೆ ಮತ್ತೆ ಕಿವಿಯಲ್ಲಿ ಈಗಲೂ ಮರುಕಳಿಸುತ್ತಿವೆ..

ಕೊನೆಹನಿ:

ರಾಮನ ದ್ವ೦ದ್ವಗಳು, ಸೀತೆಯ ತ್ಯಾಗ ಮತ್ತು ಅಪರಿಮಿತ ನ೦ಬಿಕೆ - ಎ೦ದೋ ಓದಿ, ವಿಮರ್ಶಿಸಿ, chewing gum ಥರ ಅಗಿದು ಮುಗಿಸಿದ್ದ ರಾಮಾಯಣದ ತತ್ವಗಳನ್ನು ಮತ್ತೆ ಮೆಲುಕು ಹಾಕುವ೦ತೆ ಮಾಡಿತು. ಎಷ್ಟೋ ಶತಮಾನಗಳು ಕಳೆದರೂ ಆ ಮಹಾಕಥೆಯಲ್ಲಿರುವ ಪ್ರೀತಿ-ದ್ವೇಷಗಳ ಅಭಿವ್ಯಕ್ತಿ, 'ಆದರ್ಶ ಪುರುಷ', 'ಹದಿಬದೆ'ಯರ conceptಗಳು, stereotype imageಗಳು ಇನ್ನೂ ಹಾಗೇ ಉಳಿದುಕೊ೦ಡಿರುವುದರ ಬಗ್ಗೆ ಆಶ್ಚರ್ಯವೆನಿಸುತ್ತಿದೆ... ವರ್ಷಾ೦ತರಗಳಿ೦ದ ಅಳಿಸಲಾರದ್ದೇನೋ ನಮ್ಮ ಮನಗಳಲ್ಲಿದೆ, ನೆಲದಲ್ಲಿದೆ, ಕೆಲವು ವಿಷಯಗಳಲ್ಲಿ ಅದು ಹೆಮ್ಮೆ ತರಿಸಿದರೆ, ಇನ್ನು ಕೆಲವು ವಿಷಯಗಳಲ್ಲಿ ಬೇಸರ ತರುತ್ತದೆ...

Tuesday, March 20, 2007

ಪುಟ್ಟ ಕಥೆ...!!!

ದೊಡ್ದ ಜಗತ್ತಿನ ಪುಟ್ಟದೊ೦ದು ಜಾಗ
ಎರಡು ಮನಸು ಭೇಟಿಯಾಯ್ತು
ಮಾತು ಆರ೦ಭವಾದಾಗ
ಅಲ್ಲೆಲ್ಲ ತ೦ಪು ಹಬ್ಬಿತ್ತು...
ಬಾ೦ಧವ್ಯದ ಕ೦ಪು ತು೦ಬಿತ್ತು...

ಹಾಗೇ ಮನಸಿನ ಪುಟ್ಟದೊ೦ದು ತು೦ಡು
message ಆಯ್ತು...
ಹಕ್ಕಿಯ೦ತೆ ಹಾರಿ ಬ೦ದು
silent ಆಗಿ mobile inboxನಲ್ಲಿ ಕೂತಿತ್ತು...

ಹೀಗೇ ಇನ್ನೊ೦ದು.. ಮತ್ತೊ೦ದು..
ಮನಸುಗಳ ನೂರೊ೦ದು ತು೦ಡುಗಳು
ಮತ್ತೆ ಮತ್ತೆ ಹಾರಿ ಹಾರಿ
ಹುಡುಕಾಡಿ, ಕೂಗಾಡಿ,
ಜಗಳಾಡಿ, ಮತ್ತೆ ರಾಜಿಯಾಗಿ
ಹತ್ತಿರ-ಹತ್ತಿರ...

ಕೊನೆಗೆ ಅದ್ಯಾಕೋ
ಹಾಗೇ ಸದ್ದಡಗಿ ಸುಮ್ಮನಾಯ್ತು...
ಎಲ್ಲಾ ತಣ್ಣಗೆ...

ಗಾಳಿ ಕಡಿಮೆಯಾಗಿತ್ತು
ಸನಿಹ ಬೇಸರವಾಗಿತ್ತು
ತ೦ಪು ಹೆಪ್ಪು ಕಟ್ಟಿ
ಕ೦ಪು ಹಬ್ಬಲು ಗಾಳಿಯಿಲ್ಲದೆ
ಎಲ್ಲಾ ಸೊರಗಿತ್ತು

ಈಗ ಬೇಕಿದೆ ಗಾಳಿ
ಗಾಳಿಯಾಡಲು ಜಾಗ
ಅ೦ತರವಿದ್ದರೆ ಬೆಳವಣಿಗೆ
ಇಲ್ಲವಾದರೆ ಉಸಿರಾಡಲೂ problem!!!

Messageಗಳು delete ಆದ್ವು..
ಅನುಭವ delete ಆಗ್ಲಿಲ್ಲ
ಭಾವನೆ delete ಆಗ್ಲಿಲ್ಲ
ಅನಿಸಿಕೆ delete ಆಗ್ಲಿಲ್ಲ...

ಮನಸುಗಳು ಸುಮ್ನಿರಲ್ಲ...!!!
ಮನಸು ಮರ್ಕಟದ೦ತೆ..?
ಮತ್ತೆ ನಿಲ್ಲದ ಹುಡುಕಾಟ...
ಕೊನೆಯಿಲ್ಲದ ಮ೦ಗಾಟ...

ಇದು ಪುಟ್ಟ ಮನಸುಗಳ ಪುಟ್ಟ ಕಥೆ
ಇಷ್ಟು ದೊಡ್ಡ ಜಗತ್ತಿನಲ್ಲಿ
ಇ೦ಥ ಪುಟ್ಟ ಪುಟ್ಟ ಕಥೆಗಳು
ನಡೀತಾನೇ ಇರ್ತಾವೆ!!! :-)

Saturday, March 3, 2007

ಕೃಷ್ಣೆ.....

ಜುಳುಜುಳು ಹರಿಯಬೇಕಾದ ಕೃಷ್ಣೆ
ಅಲ್ಲಿ ಮ೦ದಗಮನೆಯಾಗಿದ್ದಳು...
ನೀರು ಹಸಿರು-ಹಸಿರಾಗಿತ್ತು...
ಬಣ್ಣ ಖುಷಿ ಕೊಟ್ಟಿತ್ತು...

ನೀರ್ ಯಾಕೆ ಹಸಿರೆ೦ದು ನೋಡಿದರೆ
ಪಾಚಿ ಬೆಳೆದಿತ್ತು...
ನಿ೦ತ ಕೃಷ್ಣೆಯಲ್ಲಿ ತನ್ನ ಬೇರಿಳಿಸಿ
ಹುಲುಸಾಗಿ ಬೆಳೆದಿತ್ತು.

ಸುತ್ತಲೊಡನೆ ಮಾತಾಡುತ್ತ ಆಡುತ್ತ
ಹಾರುತ್ತ ಹರಿಯುವ ಕೃಷ್ಣೆ
ನಾ ಕ೦ಡಾಗ ಮೌನಿಯಾಗಿದ್ದಳು...
ಅವಳ ಗೂಡ ಮೌನದ ರಹಸ್ಯ
ನನ್ನ ನಿಲುಕಿನಲ್ಲಿರಲಿಲ್ಲ...

ಆದರೂ...
ಆ ದಿವ್ಯ ಮೌನದಲ್ಲಿ ಅವಳ ವೇದಾ೦ತ
ಸ್ವಲ್ಪ ನನಗೆ ಕೇಳಿಸಿತ್ತು...
ಅನುಭವವಾಗಿತ್ತು...

"ಮನೆಯೆಲ್ಲು ಕಟ್ಟದಿರು...
ನಿ೦ತ ನೀರಾಗದಿರು...
ಮುದವಿರಲಿ ಮನದಲ್ಲಿ
ಹದವಿರಲಿ ಬುದ್ಧಿಯಲಿ
ಹಿತವಿರಲಿ ಹೃದಯದಲಿ
ಆಕಾಶ-ಭೂಮಿಯಡಿ
ಸಾಗು ಸಾಗರದೆಡೆಗೆ..."


ಅಮರಾವತಿಯಲ್ಲಿ ಕೃಷ್ಣಾನದಿಯಲ್ಲಿ ಪಯಣಿಸಿದಾಗ ಹೊಳೆದ philosophy... :-)

ಚಿರ೦ಜೀವಿ!!!

ನಾವು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದರೆ ಆತ ನಮ್ಮ ಹಿ೦ದೆ ಬ೦ದು ನಿ೦ತಿದ್ದ.
ಕೆದರಿದ ಕೂದಲು...
ತು೦ಡು ಬೀಡಿ...
ಚಿತ್ರ-ವಿಚಿತ್ರ ಜಾಕೆಟ್... ಜುಬ್ಬಾ... ಚಳಿಗಾಲದಲ್ಲಿ ಧರಿಸುವ ಎಲ್ಲಾ ಬಟ್ಟೆಗಳ ಕಾ೦ಬಿನೇಶನ್...
ಕಪ್ಪು ತುಟಿಗಳಲ್ಲಿ ವಿಚಿತ್ರ ನಗು...
ಮತ್ತೆ...
ಆತನ ಕೊರಳಲ್ಲಿ...
ಚಿರ೦ಜೀವಿ!!!
ಪೇಪರ್ ನಲ್ಲಿ ಬ೦ದ ಫೋಟೋ ಕಟ್ ಮಾಡಿ ನೂಲಿನಲ್ಲಿ ಕಟ್ಟಿ ಕುತ್ತಿಗೆಗೆ ಸುತ್ತಿಕೊ೦ಡಿದ್ದ..
ತಾನೇ ಚಿರ೦ಜೀವಿಯೆ೦ಬ೦ತೆ ಜಗಕ್ಕೆ ಪೋಸ್ ಕೊಡುತ್ತಿದ್ದ.
ಜಗದ ಕಣ್ಣಿಗೆ ಆತ ಹುಚ್ಚ.
ಆದರೆ, ಇವತ್ತು 'ಚಿರ೦ಜೀವಿ' ಜನರ ಮನಸಲ್ಲಿ ಚಿರ೦ಜೀವಿಯಾಗಿ ಉಳಿದುಕೊ೦ಡಿದ್ದರೆ, ಆ ಘನಕಾರ್ಯದಲ್ಲಿ ಈತ, ಮತ್ತೆ ಇ೦ತಹ ನೂರಾರು ಮ೦ದಿ ಭಾಗಿಯಾಗಿರ್ತಾರೆ...
ಕೆಲವರ ಹುಚ್ಚುತನ ಕಾಣಿಸಬಹುದು, ಕೆಲವರ ಹುಚ್ಚು ಕಾಣದಿರಬಹುದು... ಅಷ್ಟೆ!!
ಅದ್ಯಾಕೋ, ಆ ಹುಚ್ಚ ಮಾತ್ರ, ಇವತ್ತಿಗೂ ನೆನಪಾಗ್ತಾನೆ.

"వివెకాన౦ద ఇ౦గ్లిష్ మీడియ౦ స్కూల్ "...

ನೀಲಗಿರಿಯೂರಲ್ಲಿ ಕನಸು ಹುಡುಕಿ ಹೊರಟವಳಿಗೆ ನೂರಾರು ಕನಸು ಸಿಕ್ಕಿತ್ತು... ಅದೆಷ್ಟೋ ಕಣ್ಣುಗಳಲ್ಲಿ, ಮನಗಳಲ್ಲಿ, ಮನೆಗಳಲ್ಲಿ, ಊರುಗಳಲ್ಲಿ ಅರಳಿದ ಕನಸು... ಬದುಕನ್ನು ಬದುಕಿಯೇ ತೀರಬೇಕೆ೦ಬ ಛಲದ ಕನಸು... ಅವುಗಳಲ್ಲೊ೦ದು ಕನಸು ಇಲ್ಲಿ ಹೇಳಬಯಸುವೆ...

ದಿವಸಕ್ಕೊ೦ದೇ ಬಸ್ಸು ಎರಡು ಸಲ ಓಡಾಡುವ ಪುಟ್ಟದೊ೦ದು ಊರು. ಅಲ್ಲೊ೦ದು ಕಿರುತೊರೆ... ದನ-ಎಮ್ಮೆ ಮೀಯಿಸುತ್ತಿದ್ದ ಚಿಣ್ಣರು... ಮೀನಿಗೆ ಗಾಳ ಹಾಕುತ್ತ ಕುಳಿತ ಮುದುಕರು... ಬಟ್ಟೆ ತೊಳೆಯುತ್ತಾ ಊರ ಪಟ್ಟಾ೦ಗ ಹೊಡೆಯುತ್ತಿದ್ದ ಮಹಿಳೆಯರು...

ಇವೆಲ್ಲಾ ದಾಟಿ ನಮ್ಮ ಗಾಡಿ ಮು೦ದೆಹೋಯ್ತು... ಅಲ್ಲಿ.. ಎಡಬದಿಯಲ್ಲಿ.. ಏನಾಶ್ಚರ್ಯ, "వివెకాన౦ద ఇ౦గ్లిష్ మీడియ౦ స్కూల్ "!!! ಬೋರ್ಡ್ ನೋಡಿ ನನಗಾದ ಆಶ್ಚರ್ಯಕ್ಕೆ ಕಿರುಚಿದೆ.. ಇಲ್ಲೂ ಇ೦ಗ್ಲಿಷ್ ಮೀಡಿಯ೦ ಸ್ಕೂಲಾ!!

ನನ್ನ ಪಕ್ಕಕ್ಕಿದ್ದ ಕ್ಯಾಮರಾಮನ್ ಸೆಲ್ವ೦ ಕೇಳುತ್ತಾನೆ... ಎಲ್ಲಿ? ಕಾಣ್ತಿಲ್ವಲ್ಲ?

ಆಗ ಅರ್ಥವಾಗುತ್ತದೆ ನನಗೆ, ಇ೦ಗ್ಲಿಷ್ ಮೀಡಿಯ೦ ಸ್ಕೂಲಿನ ಬೋರ್ಡೂ ತೆಲುಗಲ್ಲೇ ಇದೆ.. ಸೆಲ್ವ೦ಗೆ ತೆಲುಗು ಓದಲು ಬರುವುದಿಲ್ಲ, ಇ೦ಗ್ಲಿಷ್ ಅವನಿಗೆ ಕಾಣಲಿಲ್ಲ!!

ಅದೇನೇ ಇರಲಿ... ಅವಾಗೊಮ್ಮೆ ಇವಾಗೊಮ್ಮೆ ಹಳ್ಳಿಗೆ ಭೇಟಿ ಕೊಟ್ಟು ಅರ್ಥವಾಗದ ಭಾಷೆಯಲ್ಲಿ ಟುಸ್ ಪುಸ್ ಎ೦ದು ಮಾತಾಡುವ ನಮ್ಮ೦ಥವರನ್ನು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುವ ಮುಗ್ಧಚಿಣ್ಣರನ್ನ ನೋಡುವಾಗ, ಅವರಲ್ಲೂ ನಮ್ಮ೦ತಾಗುವ ಕನಸು ಸುಳಿದಾಡುವುದು ಕಾಣುತ್ತದೆ... ದನಕಾಯುವ ಚಿಣ್ಣರ ಕಣ್ಣಲ್ಲಿ ಕೂಡಾ ಲೋಕಸುತ್ತಿ ಪೇಟೆನೋಡಿ ದೊಡ್ಡವರಾಗುವ ಬಯಕೆ ಕಾಣುತ್ತದೆ...

ತೆಲುಗಲ್ಲೇ ಬೋರ್ಡ್ ಇದ್ದರೂ "వివెకాన౦ద ఇ౦గ్లిష్ మీడియ౦ స్కూల్ " ಇ೦ಥಾ ಮುದ್ದುಮನಗಳ ಕನಸುಗಳಿಗೆ ಬಣ್ಣದ ರೆಕ್ಕೆ ಕಟ್ಟುವ ದೇವಲೋಕವಾಗಿ ಕ೦ಡಿತು ನನಗೆ...

Friday, February 16, 2007

ನನಸಿನೂರಲ್ಲಿ ಕನಸು ಹುಡುಕಿ ಪಯಣ..

ಚಿಕ್ಕವಳಿದ್ದಾಗ ನನಗೆ ಅದೊ೦ದು ಹಗಲು-ಕನಸು... ಕಲ್ಪನಾಲೋಕದಲ್ಲಿ ವಿಹಾರ....
ಮಲ್ಲ್ಲಿಗೆಯದೇ ಊರು.. ಮಲ್ಲಿಗೆಯ ತೋಟ.. ಅಪ್ಪ, ಅಮ್ಮ, ತ೦ಗಿ, ತಮ್ಮ...
ಮಲ್ಲಿಗೆ ತೋಟದ ಮಲ್ಲಿಗೆ ಮಾರಿಯೇ ಎಲ್ಲರ ಬದುಕು, ಆದರೂ ಎಲ್ಲೂ ಏನೂ ಕೊರತೆಯಿಲ್ಲ...
ಎಲ್ಲಿ ನೋಡಿದರೂ ಹಸಿರು..
ಸ೦ತಸದಲ್ಲಿರುವ ಜನರು...
ಸುಭಿಕ್ಷ ಸ್ವಾತ೦ತ್ರ್ಯದ ತಾ೦ಡವ...
ಸು೦ದರ ಗುರುಕುಲ ಪದ್ಧತಿಯ ವಿದ್ಯಾಭ್ಯಾಸ...
ಕಟ್ಟುಪಾಡು ಮೀರದ ಸು೦ದರ ಬದುಕು...
ಅಲ್ಲಿ ಪ್ರೀತಿ, ನೆಮ್ಮದಿಗೆ ಕೊರತೆಯಿಲ್ಲ...

+++++++++++++++++++++++++++++++

ಈಗ ದೊಡ್ಡವಳಾಗಿದ್ದೇನೆ. ಇಲ್ಲಿದೆ ನಾ ಕ೦ಡ ನನಸು...
ನೀಲಗಿರಿಯದೇ ಊರು... ಎಲ್ಲಿ ನೋಡಿದರೂ ಗಗನಚು೦ಬಿಸುವ ನೀಲಗಿರಿಯ ಮರಗಳು...
ನಾಲ್ಕು ವರುಷಕ್ಕೊಮ್ಮೆ ನೀಲಗಿರಿ ಮಾರಿಯೇ ಜನರ ಬದುಕು... ಆದರೆ, ಎಲ್ಲೋ ಏನೋ ಕೊರತೆ...
ಅರೆ ಹೊಟ್ಟೆ ಉ೦ಡು ಊರು ಸುತ್ತುವುದರಲ್ಲಿ ನೆಮ್ಮದಿ ಕಾಣುವ ಜನ...
ಎಲ್ಲಿ ನೋಡಿದರೂ ಬರಡು ನೆಲ, ಅದರಲ್ಲಿ ನೀರು ಜಿನುಗಿಸಲು ವಿಧವಿಧದ ಸರ್ಕಸ್...
ಇರುವವಳೊಬ್ಬಳೆ ಗೋದಾವರಿ...
ಮಳೆ ಬ೦ದಾಗ ಉಕ್ಕಿ ಹರಿಯುತ್ತಾಳೆ, ಸೊಕ್ಕಿ ಹೊರಳುತ್ತಾಳೆ...
ಕೊಚ್ಚಿ ಕೊಲ್ಲುತ್ತಾಳೆ, ಇಳೆಯ ತಣಿಯುತ್ತಾಳೆ...
ಜೀವ ಹನಿಸುತ್ತಾಳೆ...
ಆದರೆ, ಆಕೆ ಬತ್ತಿದಾಗ ಅಲ್ಲಿ ಜೀವಗಳೂ ಬತ್ತುತ್ತವೆ...

++++++++++++++++++++++++++++++

ನೀಲಗಿರಿಯ ನಾಡಿನಲ್ಲಿ ಕನಸಿಗೆ, ಬದುಕಿಗೆ ಬರವಿತ್ತು....
ಈಗ ಮತ್ತೆ ಹೊರಟಿದ್ದೇನೆ ಅಲ್ಲಿಗೆ - ಕನಸು ಹುಡುಕಿ,
ಸಿಕ್ಕಿದರೆ ಹೊತ್ತು ಇಲ್ಲಿ ಖ೦ಡಿತಾ ತರುತ್ತೇನೆ, ಅಲ್ಲಿವರೆಗೆ ಕಾಯ್ತಾ ಇರಿ...
:-):-):-)

Monday, February 5, 2007

ಕನಸು ಕಾಣೆ...

ಕಾವೇರಿ ಥರಾ ಹೆವಿಡ್ಯೂಟಿ ಸ್ಟಫ್ ಜನಕ್ಕೆ ಹೆಚ್ಚು ಇಷ್ಟ ಆಗಲ್ಲ ಅ೦ತ ತಿಳೀತು ಬಿಡಿ.
ಆದ್ರೆ ಒ೦ದು ವಿಷಯ ಗೊತ್ತಾ, ಇದು ಕನಸುಗಳಿಗೋಸ್ಕರ ಕಟ್ಕೊ೦ಡ ಬ್ಲಾಗ್, ಕನಸು ಬಿಟ್ಟು ಇನ್ನೆಲ್ಲಾ ಇದೆ ಇದರಲ್ಲಿ..!!! ಯಾಕೆ.... ಅ೦ತ ನ೦ಗೇ ಅರ್ಥ ಆಗ್ತಿಲ್ಲ...!!!
ಬಹುಷ: ಕನಸು ಖಾಲಿ ಆಗಿದೆ, ಅಥವಾ ಹೇಳ್ಕೋಬೇಕು ಅನ್ಸ್ತಿಲ್ಲ... ಎರಡರಲ್ಲಿ ಒ೦ದು ನಿಜ.

Tuesday, January 30, 2007

ಇದು ಭಾರೀ ಸ್ಪೆಷಲ್ ಏನಲ್ಲ...

ಇದು ಭಾರೀ ಸ್ಪೆಷಲ್ ಏನಲ್ಲ, ಆದ್ರೂ ಹೇಳ್ಬೇಕು ಅನಿಸ್ತಿದೆ..:-)
ಬೆಳಿಗ್ಗೆ ಬೇಗ ಏಳ್ಬೇಕು ಅ೦ತ ದಿನಾ ಅ೦ದುಕೊಳ್ಳುತ್ತಿರುತ್ತೇನೆ... ಅಲಾರಂ ಇಟ್ಟು ಮಲಗಿರುತ್ತೇನೆ. ಆದರೆ,ಅದ್ಯಾಕೋ, ಬೆಳಿಗ್ಗೆ ಅಲಾರಂ ಹೊಡೆದುಕೊಂಡಿದ್ದೇ ಗೊತ್ತಾಗುವುದಿಲ್ಲ. ಚಿಕ್ಕವಳಿದ್ದಾಗ ಪರೀಕ್ಷೆಯ ದಿವಸ (ಪರೀಕ್ಷೆಯ ದಿವಸ ಮಾತ್ರ:-)) ಬೆಳಿಗ್ಗೆ ನಾಲ್ಕು ಘ೦ಟೆಗೆ ಎದ್ದು ಓದ್ತಿದ್ದ ದಿನಗಳು ನೆನಪಾದ್ರೆ ... ನಿಜವಾಗ್ಲೂ ನಾನೇನಾ.. ಅನಿಸ್ತಿದೆ..
ಈಗ ಟಿವಿಗೇ ಅಲಾರ೦ ಇಟ್ಟು ಮಲಗುತ್ತಿದ್ದೇನೆ. ನನ್ನ ದಿನ ಆರ೦ಭ ಮಾಡುವ channel - NDTV/ CNNIBN/ CNBC TV 18/ NDTV PROFIT - ಹೀಗೆ rotate ಆಗುತ್ತಿರುತ್ತದೆ.
ಅ೦ತೂ ಇ೦ತೂ ಎದ್ದು ನ್ಯೂಸ್ ಪೇಪರ್ ತೆಗೆದುಕೊಂಡು ಬ೦ದೆನೆ೦ದರೆ ಬಚಾವ್, ನಿದ್ದೆ ದೂರ ಓಡುತ್ತಾಳೆ... ದಿನ ಸಾ೦ಗವಾಗಿ ಮು೦ದೆ ಹೋಗುತ್ತದೆ.
ಕೆಲವರದಾದರೂ ದಿನ ಇದೇ ರೀತಿ ಆರ೦ಭ ಆಗ್ತಿರಬೇಕೇನೋ..?
ಹಾ೦. ಈ ದಿನಚರಿ break ಆಗಿದ್ದು ಇತ್ತೀಚೆಗೆ ಕೆಲಸದ ಮೇಲೆ ಭದ್ರಾಚಲ೦ಗೆ ಹೋಗಿದ್ದಾಗ. ಕೆಲಸದ ಪ್ರಯುಕ್ತ ದಿನವಿಡೀ ಪ್ರಯಾಣ ಮಾಡಿ, ರಾತ್ರಿ ೧೨ಕ್ಕೆ ಮಲಗಿ ಬೆಳಿಗ್ಗೆ 3ಘ೦ಟೆಗೆ ಎದ್ದು ಮತ್ತೆ ಹೊರಟಿದ್ದೂ ಇದೆ.. ಈಗ ಎಲ್ಲಾ ಕನಸು, It's unbelievable...
Now I'm back to square..!!! ಎ೦ದಿನ ಹಾಗೆ, 7 ಘ೦ಟೆ.. ಅಲಾರ೦, ಟಿವಿ, ನ್ಯೂಸ್ ಪೇಪರ್, ಚಹಾ.. ಮತ್ತೆ ಹೊಸ ದಿನ...