Thursday, June 21, 2007

ನಾ ಕೊಂದ ಹೂವು

ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದೆಯಲ್ಲವೆ ಗೆಳತಿ... ಹಾಗೆ ಹೇಳಿ, ವರುಷಗಳ ಹಿಂದಿನ ಇಂಥದೇ ಒಂದು ನೆನಪನ್ನು ಕೆದಕಿದ್ದೀಯ... ಜೇನುಗೂಡಿಗೆ ಕಲ್ಲೆಸೆದಿದ್ದೀಯ. ನಿನಗೆ ಇದನ್ನು ಹೇಳಲೇಬೇಕು.

*************

ಗಂಗೋತ್ರಿಯ ಹಾಸ್ಟೆಲ್. ನನ್ನ ಮೊದಲದಿನ. ಹಿಂದಿನ ದಿನವಷ್ಟೇ ಸಾಮಾನುಸಮೇತ ಬಂದು ಗಂಗೋತ್ರಿಯ ಹಾಸ್ಟೆಲಿಗೆ ಸೇರಿಕೊಂಡಿದ್ದೇನೆ. ರೂಂಮೇಟ್ ಗಳ ಪರಿಚಯವಾಗಿದೆ. ಹೊಸ ಹಾಸ್ಟೆಲ್ ಬದುಕು ಆರಂಭವಾಗಿದೆ. ಕಳೆದ ಐದು ವರ್ಷಗಳಿಂದಲೂ ಹಾಸ್ಟೆಲ್-ನಲ್ಲೇ ಇದ್ದುಕೊಂಡು ಓದಿದ ನನಗೆ ಇದು just another hostel.

ಬೆಳಿಗ್ಗೆ ತಿಂಡಿಯ ಸಮಯ. ಡೈನಿಂಗ್ ಹಾಲ್-ನಲ್ಲಿ ನಾನು, ನನ್ನ ಹೊಸ ರೂಂಮೇಟ್-ಗಳಾದ ರೂಪ ಮತ್ತು ಸ್ವಾತಿ ಕುಳಿತುಕೊಂಡಿದ್ದೇವೆ. ಡೈನಿಂಗ್ ಹಾಲ್ ಭರ್ತಿಯಾಗಿದೆ. ನಮ್ಮ ಟೇಬಲ್-ನಲ್ಲಿ ನನ್ನೆದುರಿಗಿನ ನಾಲ್ಕನೇ ಕುರ್ಚಿ ಖಾಲಿಯಿದೆ. ನಮ್ಮ ಊರುಗಳ ಬಗ್ಗೆ, ಕಾಲೇಜು ಬದುಕಿನ ಬಗ್ಗೆ ಮಾತಾಡುತ್ತಾ ತಿಂಡಿ ತಿನ್ನುತ್ತಿದ್ದೆವು.

ನನ್ನ ಹಿಂದಿನಿಂದ Hi, can I sit here? ವಿನಯಭರಿತ ದನಿ ಕೇಳಿಸಿತು. ಹಿಂದೆ ತಿರುಗಿದರೆ ನಿಂತಿದ್ದಳಾಕೆ. ಒಂದು ಕೈಯಲ್ಲಿ ಚಹಾ, ಇನ್ನೊಂದು ಕೈಯಲ್ಲಿ ತಿಂಡಿಯ ತಟ್ಟೆ ಹಿಡಿದು. ಬಾಬ್ ಕಟ್ ಕೂದಲು. ಸ್ವಲ್ಪವೇ ಉಬ್ಬಿ ಎದುರು ಬಂದ ಹಲ್ಲುಗಳನ್ನು ಮುಂಬರದಂತೆ ತಡೆಯುತ್ತಿರುವ ಸ್ಪ್ರಿಂಗ್. ಕುತೂಹಲದ ಮುಗುಳ್ನಗು.

ನನ್ನೆದುರಿಗಿದ್ದ ರೂಪ Ofcourse ಅನ್ನುತ್ತ ಪರ್ಮಿಶನ್ ಕೊಟ್ಟಳು. ಖಾಲಿಯಿದ್ದ ಕುರ್ಚಿಯಲ್ಲಿ ಕೂತುಕೊಂಡು ಸೆಟಲ್ ಆಗುತ್ತ ಅವಳು ತನ್ನನ್ನು ತಾನು ಪರಿಚಯಿಸಿಕೊಂಡಳು - I'm Priya, doing my PG in Sociology... I come from Delhi, Can't understand Kannada...ಇತ್ಯಾದಿ. ನಾವೂ ನಮ್ಮನ್ನ ಪರಿಚಯಿಸಿಕೊಂಡೆವು. ಹಾಗೆ ನಮಗೆ ಆಕೆ ಹೊಸ ಒಡನಾಡಿಯಾದಳು.

ನಮ್ಮ ರೂಮಿನಿಂದ ಎರಡು ರೂಂಗಳಾಚೆಗಿದ್ದ ಆಕೆಯ ಕೋಣೆಯಲ್ಲಿ ಕನ್ನಡ ಎಂಎ ಮಾಡುವ ವಿದ್ಯಾರ್ಥಿನಿಯರಿದ್ದು, ಅವರ ನಡುವೆ ಭಾಷೆ ಗೋಡೆಯಾಗಿ ನಿಂತಿತ್ತು. ಆಕೆ ತನ್ನ ರೂಂಮೇಟ್-ಗಳಿಗಿಂತ ಹೆಚ್ಚಾಗಿ ನಮ್ಮ ಜತೆ ಒಗ್ಗಿಕೊಂಡಳು. ದಿನದಿನದ ಕಥೆಗಳು, ಜೋಕುಗಳು, ನಗೆಚಾಟಿಕೆಗಳು - ಎಲ್ಲವೂ ಹಂಚಿಕೆಯಾದವು. ಹೊಸತನದ ಬೆಸುಗೆಗೆ ಸೇತುವೆಯಾದವು.

***********

ಭಾನುವಾರ ಬಂತು. ರೂಪ, ಸ್ವಾತಿ ಇಬ್ಬರೂ ಮಲಗಿದ್ದರೆ, ನಾನು ಚಹಾ ತೆಗೆದುಕೊಂಡು ಬರೋಣವೆಂದು ಡೈನಿಂಗ್ ಹಾಲಿಗೆ ಹೋದೆ. ಟೀವಿ ಹಚ್ಚಿತ್ತು. ಟೀವಿಯಲ್ಲಿ ಡಿಸ್ಕವರಿ ಚಾನೆಲ್ ಹಾಕಿದ್ದರು. ಅದ್ಯಾವುದೋ ದೇಶದಲ್ಲಿ ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊರಹೋಗಲೊಲ್ಲದ ಬುಡಕಟ್ಟು ಜನಾಂಗದವರ ಮೇಲೆ ಸಾಕ್ಷ್ಯಚಿತ್ರ ಬರುತ್ತಿತ್ತು. ಮೊನ್ನೆ ಮೊನ್ನೆಯಷ್ಟೆ ಅಭಿವೃದ್ಧಿ ಪತ್ರಿಕೋದ್ಯಮವೆಂದರೇನು, ಅದು ಹೇಗಿರಬೇಕು ಎನ್ನುವುದರ ಬಗ್ಗೆ ಪ್ರೊಫೆಸರ್ ತರಗತಿಯಲ್ಲಿ ಹೇಳುತ್ತಿದ್ದಾಗ ಮನಸಿಟ್ಟು ಕೇಳಿಕೊಂಡಿದ್ದೆ. ಈ ಸಾಕ್ಷ್ಯಚಿತ್ರ ಅವರು ಹೇಳಿದ ಮಾತುಗಳಿಗೆಲ್ಲ ನೇರ ಸಂಬಂಧವುಳ್ಳದ್ದಾಗಿ ಕಂಡು ನಾನು ಚಹಾ ಕುಡಿಯುತ್ತಾ ನೋಡುತ್ತಾ ಕುಳಿತೆ.

Oh, you are here? ಪ್ರಿಯಾ ದನಿ ಕೇಳಿ ಹಿಂತಿರುಗಿದೆ. ನಮ್ಮ ಕೋಣೆಗೆ ಹೋಗಿದ್ದಳಂತೆ, ಅವರಿಬ್ಬರು ಮಲಗಿದ್ದರಂತೆ, ನಾನೂ ಕಾಣಲಿಲ್ಲವಾದ್ದರಿಂದ ಒಬ್ಬಳೇ ಡೈನಿಂಗ್ ಹಾಲಿಗೆ ಬಂದಳಂತೆ. ಯಾಕಷ್ಟು ಆಸಕ್ತಿಯಿಂದ ಸಾಕ್ಷ್ಯಚಿತ್ರ ನೋಡುತ್ತಿದ್ದೀಯೆಂದು ಪ್ರಶ್ನಿಸಿದಳು. ಹೇಳಿದೆ. ಅವಳೂ ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಳು. ಹೊಸ ವಿಷಯವೊಂದು ತಿಳಿದುಕೊಂಡ ಹಿಗ್ಗು, ಅವಳಿಗೆ ತಿಳಿಸಿದವಳ ಮೇಲೆ ತಣಿಯದ ಕುತೂಹಲಕ್ಕೆ ಕಾರಣವಾಯಿತು.

ಹಾಗೇ ನನ್ನ ಹಿನ್ನೆಲೆ ಕೇಳಿದಳು. 'I can't believe you are a Brahmin...' ಆಶ್ಚರ್ಯದಿಂದ ಉದ್ಗರಿಸಿದಳು. 'ಜಾತಿಯ ಬಗ್ಗೆ ಯಾಕಷ್ಟು ಯೋಚನೆ ಮಾಡ್ತೀಯ, ಆ ಕಾಲ ಎಂದೋ ಹೋಯ್ತು, ಈಗೇನಿದ್ರೂ ನಾವು ಏನಾಗಿದ್ದೇವೆ ಅನ್ನುವುದಷ್ಟೆ ಮುಖ್ಯ' ಅಂದೆ. ಬಸವಣ್ಣ 'ಜ್ಯೋತಿ ಯಾವ ಜಾತಿಯಮ್ಮ' ಅಂದಿದ್ದು ನೆನಪಾಯಿತು, ಅದನ್ನೂ ಹೇಳಿದೆ.

ಅವಳು ನನ್ನ ಬಗ್ಗೆ ಇನ್ನಷ್ಟು ಗೌರವ ತುಂಬಿಕೊಂಡಳು. ತನ್ನ ಜಗತ್ತಿಗೆ ನನ್ನನ್ನು ಸ್ವಾಗತಿಸಿದಳು. ಆಂಧ್ರದ ರಾಯಲಸೀಮೆಯ ಯಾವುದೋ ಹಳ್ಳಿಗೆ ಸೇರಿದ ತನ್ನ ದಲಿತ ಹಿನ್ನೆಲೆಯ ಬಗ್ಗೆ, ಆ ಹಳ್ಳಿಯಲ್ಲಿ ದಲಿತರು ಅನುಭವಿಸುವ ಕಷ್ಟಗಳ ಬಗ್ಗೆ, ಅವಳ ಈ ಹಿಂದಿನ ಹಾಸ್ಟೆಲ್ ಬದುಕಿನ ಬಗ್ಗೆ, ದೆಹಲಿಯಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಿರುವ ಅಕ್ಕ-ಭಾವನ ಬಗ್ಗೆ, ಅವರ ಪ್ರೇಮವಿವಾಹದ ಬಗ್ಗೆ, ದೆಹಲಿಯಲ್ಲಿ ಕಳೆದ ದಿನಗಳ ಬಗ್ಗೆ, ಐಎಎಸ್ ಅಧಿಕಾರಿಯಾಗಬೇಕೆನ್ನುವ ತನ್ನ ಬಯಕೆಯ ಬಗ್ಗೆ - ಹೀಗೇ ಸಾವಿರ ವಿಷಯಗಳನ್ನು ಹಂಚಿಕೊಂಡಳು. ಅವಳ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಹಂಬಲ ನನ್ನಲ್ಲೂ ಹುಟ್ಟಿತು. ಅವಳ ಮಾತುಗಳಿಗೆ ಕಿವಿಯಾಗುತ್ತಿದ್ದೆ.

ನನ್ನ ಬಗ್ಗೆ ಕೇಳಿದಳು. ಹೇಳಿಕೊಂಡೆ. ಪಕ್ಕಾ ಸಂಪ್ರದಾಯಸ್ತ ಮನೆತನದ ಬಗ್ಗೆ, ನಿಯಮಗಳನ್ನು ಮುರಿಯುವ ನನ್ನ ತುಂಟತನದ ಬಗ್ಗೆ. ಯಾರೇ ಗೆಳತಿಯರ, ಗೆಳೆಯರ ಅಥವಾ ಗುರುಗಳ ಹೆಸರು ನಾನು ಮಾತಾಡುವಾಗ ನುಸುಳಿದರೂ ಅವರು ಯಾವ ಜಾತಿಯೆಂದು ಕಳಕಳಿಯಿಂದ ಕೇಳುವ ಅಮ್ಮನ ಬಗ್ಗೆ, ಮನುಷ್ಯ ಜಾತಿ ಎನ್ನುವ ನನ್ನ ಧಿಮಾಕಿನ ಉತ್ತರದ ಬಗ್ಗೆ. ನಮ್ಮನೆಗೆ ಕೆಲಸಕ್ಕೆ ಬರುವ ಲಚ್ಚಿಮಿಯ ಬಗ್ಗೆ, ನಮ್ಮನೆಯ ಎದುರಿನ ಗುಡ್ಡದಾಚೆಗೆ ಗುಡಿಸಲು ಕಟ್ಟಿಕೊಂಡು ಬುಟ್ಟಿ ನೇಯ್ದು ಬದುಕುವ ಐತ ಮತ್ತು ತುಕ್ರುವಿನ ಬಗ್ಗೆ. ನಮ್ಮ ತೋಟದಲ್ಲಿ ಅಜ್ಜ ಮಲೆನಾಡಿನಿಂದ ತಂದು ನೆಟ್ಟ ಏಲಕ್ಕಿಯ ಬಗ್ಗೆ, ಏಲಕ್ಕಿ ಹೂವರಳುತ್ತಿದ್ದಂತೆಯೇ ಅದನ್ನು ಕಾಯಾಗಲು ಬಿಡದೆ ಬಂದು ತಿನ್ನುವ ಕೇರೆಹಾವಿನ ಬಗ್ಗೆ. ಮಳೆಗಾಲ ಶುರುವಾಗಿ ಕೆಲದಿನಕ್ಕೆ ಅರಳುವ ವಿಶೇಷ ಹೂವುಗಳಾದ ರಾತ್ರಿರಾಣಿ ಮತ್ತು ಕೇನೆಹೂಗಳ ಬಗ್ಗೆ, ಬೇರೆ ಹೂಗಳಿಗಿಂತ ಅವು ಹೇಗೆ ಭಿನ್ನವೆಂಬುದರ ಬಗ್ಗೆ. ಅವಳ ಕಣ್ಣಿಗೆ ಕಟ್ಟುವಂತೆ ನಾ ವಿವರಿಸುತ್ತಿದ್ದರೆ, ಅಕ್ಷರವೂ ಬಿಡದೆ ಅವಳು ಕೇಳಿಕೊಳ್ಳುವಳು.

ಹಾಗೇ ಚರ್ಚೆಗಳು. ನರ್ಮದಾ ಬಚಾವೋ ಆಂದೋಲನದ ಬಗ್ಗೆ. ದಕ್ಷಿಣ ಕನ್ನಡವೆಲ್ಲ ಒಮ್ಮೆ ಹೊಗೆಯೆಬ್ಬಿಸಿ ತಣ್ಣಗಾದ ಎಂ.ಆರ್.ಪಿ.ಎಲ್ ಪೈಪ್ಲೈನ್ ವಿವಾದ ಬಗ್ಗೆ, ಇನ್ನೂ ಹೊಗೆಯುಗುಳುತ್ತ ಪರಿಸರವನ್ನು ನುಂಗುತ್ತಿರುವ ಎಂ.ಆರ್.ಪಿ.ಎಲ್ ಬಗ್ಗೆ. ಅಭಿವೃದ್ಧಿಯ ಬಗ್ಗೆ. ಸಾಮಾನ್ಯ ಮನುಷ್ಯನ ಬಗ್ಗೆ. ಬುದ್ಧಿಜೀವಿಗಳ ಬಗ್ಗೆ. ಗಾಂಧೀಜಿಯ ಬಗ್ಗೆ. ಕೇರಳದಲ್ಲಿ ಅವಾಗಷ್ಟೆ ಕಾಲಿಟ್ಟಿದ್ದ ಡಿ.ಪಿ.ಇ.ಪಿ.ವಿದ್ಯಾಭ್ಯಾಸ ಪದ್ಧತಿಯ ಬಗ್ಗೆ. ಮಂಗಳೂರಿನ ಪೀತಪತ್ರಿಕೆಗಳ ಬಗ್ಗೆ. ಸಾಮಾಜಿಕ ಜವಾಬ್ದಾರಿರಹಿತ ಜರ್ನಲಿಸ್ಟ್-ಗಳ ಬಗ್ಗೆ. ಮುಗಿಯದ ಕಾಸರಗೋಡು ಗಡಿವಿವಾದದ ಬಗ್ಗೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಉಗ್ರವಾಗಿ ಹೋರಾಡಿ, ಅದಕ್ಕಾಗಿ ಮರಣಶಯ್ಯೆಯಲ್ಲೂ ಹಂಬಲಿಸಿದ ನನ್ನಜ್ಜನ ಬಗ್ಗೆ. ಕಾಸರಗೋಡು ಕೇರಳದಲ್ಲೇ ಇರಬೇಕೆಂಬ, ಯಾರೂ ಒಪ್ಪಲು ಸಿದ್ಧವಿಲ್ಲದ ನನ್ನ ವಾದದ ಬಗ್ಗೆ.

ಆಂಧ್ರದಲ್ಲಿ ತಾಂಡವವಾಡುತ್ತಿದ್ದ, ಅವಾಗಷ್ಟೆ ಚಿಕ್ಕಮಗಳೂರು ಕಡೆ ಸುದ್ದಿ ಶುರು ಮಾಡಿದ್ದ ನಕ್ಸಲಿಸಂ ಬಗ್ಗೆ. ನನ್ನೂರಲ್ಲಿ ಕಾಲಕ್ರಮೇಣ ತೋಟಗಳಾಗಿ ಮಾರ್ಪಟ್ಟ ಭತ್ತದ ಗದ್ದೆಗಳ ಬಗ್ಗೆ. ಗ್ಲೋಬಲೈಸೇಶನ್ ಬಗ್ಗೆ. ವ್ಯಾಪಾರಿ ಪತ್ರಿಕೋದ್ಯಮದಿಂದ ಮತ್ತು ತನ್ನ ಬ್ರಿಗೇಡ್ ರೋಡ್ ಲ್ಯಾಂಗ್ವೇಜ್-ನಿಂದ ಮಾಧ್ಯಮಜಗತ್ತನ್ನೇ ಹಾಳುಮಾಡುತ್ತಿರುವ ಟೈಮ್ಸ್ ಆಫ್ ಇಂಡಿಯಾದ ಬಗ್ಗೆ. ಸಾಯಿನಾಥರ ಅಭಿವೃದ್ಧಿ ಪತ್ರಿಕೋದ್ಯಮ ಲೇಖನಗಳ ಬಗ್ಗೆ. ಕಿರಣ್ ಬೇಡಿಯ ಬಗ್ಗೆ. ಸಮಾಜದ ಮತ್ತು ಮಾಧ್ಯಮದ ಭವಿಷ್ಯದ ಬಗ್ಗೆ. ದಲಿತ ಸಂಘರ್ಷದ ಬಗ್ಗೆ.

***********

ವಾರಾಂತ್ಯಕ್ಕೆ ರಜೆ ಸಿಕ್ಕಿದಾಗ ಮನೆಗೆ ಹೋಗುತ್ತಿದ್ದೆ. ಅಮ್ಮ ಕಟ್ಟಿಕೊಡುವ ಹಲಸಿನಕಾಯಿ ಚಿಪ್ಸ್, ತೆಂಗಿನಕಾಯಿ ಹೋಳಿಗೆ, ಉಪ್ಪಿನಕಾಯಿ ಚಟ್ನಿಪುಡಿ ಇತ್ಯಾದಿಗಳು ಹೊತ್ತುತರುತ್ತಿದ್ದೆ. ಸ್ವಾತಿ, ರೂಪಾಗೆ ಇವು ಹೊಸದಲ್ಲ, ಆದರೆ ಪ್ರಿಯಾ ಮಾತ್ರ ಇವನ್ನೆಲ್ಲ ತಿನ್ನುವುದು ಬಿಡು, ಕಂಡುಕೇಳರಿಯಳು. ಅದರ ರುಚಿಗೆ ಮಾರುಹೋಗಿದ್ದಳು. ಹೇಗೆ ಮಾಡುವುದೆಂದು ಕೇಳಿದಳು. ಗೊತ್ತಿದ್ದದ್ದು ಹೇಳಿದೆ. ಗೊತ್ತಿಲ್ಲದ್ದು ನಮ್ಮನೆಗೆ ಹೋದಾಗ ಅಮ್ಮನ ಕೈಯಲ್ಲಿ ಹೇಳಿಸಿಕೊಳ್ಳೋಣವೆಂದೆ.

ಹುಟ್ಟಿದ ಮೇಲೆ ಸಮುದ್ರ ಕಂಡಿಲ್ಲದ ಪ್ರಿಯಾಗೆ ಸುರತ್ಕಲ್-ನ ಇಡ್ಯದ ಬೀಚಿಗೆ ಕರೆದುಕೊಂಡುಹೋಗಿ ಸಮುದ್ರ, ಬೀಚ್ ತೋರಿಸಿದೆ. ಬೀಚ್-ನಲ್ಲಿ ಕೂತು ಶೆಟ್ಟಿ ಐಸ್ಕ್ರೀಂ ತಿಂದೆವು. ವಾಪಸ್ ಬರುವಾಗ ಬೈಕಂಪಾಡಿಯ ಸಂಕದ ಮೇಲಿಂದ ಕತ್ತಲಲ್ಲಿ ಹೊತ್ತಿ ಉರಿಯುತ್ತಿದ್ದ ಎಂ.ಆರ್.ಪಿ.ಎಲ್. ಬೆಂಕಿ ಮತ್ತು ಹೊಗೆ ತೋರಿಸಿದೆ.

ನನ್ನ – ಪ್ರಿಯಾಳ ಗೆಳೆತನ ಆರಂಭವಾಗಿ ಎರಡು ತಿಂಗಳು ಕಳೆದಿತ್ತು. ಒಂದು ದಿನ ಪ್ರಿಯಾಗೆ ನನ್ನ ಜತೆ ನನ್ನ ಮನೆಗೆ ಬರಬೇಕೆಂದು ತುಂಬಾ ಅನಿಸಿಬಿಟ್ಟಿತು. ನನ್ನ ಅನುಭವಗಳ ಭಾವಧಾಮಕ್ಕೆ ಪಯಣಿಸಿ ನಾನು ಬದುಕಿದ ಬದುಕನ್ನು ಸವಿಯಬೇಕೆಂಬ ಅವಳ ಹಂಬಲ ನನಗೂ ಇಷ್ಟವಾಯಿತು. ಅಮ್ಮನಿಗೆ ಫೋನ್ ಮಾಡಿ ಹೇಳಿದೆ, ನನ್ನ ಗೆಳತಿಯನ್ನು ಕರೆದುಕೊಂಡು ಬರುತ್ತಿದ್ದೇನೆಂದು. ಅಮ್ಮ ಎಂದಿನಂತೆ ಜಾತಿಯ ಬಗ್ಗೆ ಕಾಳಜಿಯಿಂದ ಕೇಳಿದರೆ ನಾನು ಹೇಳದೆಯೆ ಎಂದಿನಂತೆ ಉಡಾಫೆಯಿಂದ ಮಾತು ಹಾರಿಸಿದೆ. ನಾನು, ಪ್ರಿಯಾ ಒಂದು ಶುಕ್ರವಾರ ಸಂಜೆ ನಮ್ಮನೆಗೆ ಹೊರಟೆವು.

ದಾರಿಯುದ್ದಕ್ಕೂ ಪ್ರಿಯಾಗೆ ನನ್ನ ವಿವರಣೆಗಳು. ಬಸ್ಸು ರಾಷ್ಟ್ರೀಯ ಹೆದ್ದಾರಿ ಬಿಟ್ಟು ನಮ್ಮೂರಿಗೆ ಹೋಗುವ ಒಳದಾರಿ ಹಿಡಿಯುತ್ತಿದ್ದಂತೆಯೇ ಪುಟ್ಟ ಪುಟ್ಟ ಹಸಿರು ಗುಡ್ಡಗಳ ನಡುವೆ ಹಾವಿನಂತೆ ಹರಿದ ಕಪ್ಪು ಟಾರುರೋಡು, ಎತ್ತ ನೋಡಿದರೂ ಹಸಿರನ್ನೇ ಹೊದ್ದು ಮಲಗಿದ ಊರು, ಭಯ ಹುಟ್ಟಿಸುವಷ್ಟು ಕಡಿದಾದ ಒಂದೆರಡು ತಿರುವುಗಳು, ಸಣ್ಣಗೆ ಜಿನುಗುತ್ತಿದ್ದ ಮಳೆ, ಕೆಂಪು ಮಣ್ಣಿನೊಳಗಿಂದ ಅವಾಗಷ್ಟೆ ಎದ್ದು ತೆವಳುವ ಕೆಂಪು ದೇವರ ಹುಳ, ಒದ್ದೆ ಒದ್ದೆ ಗಾಳಿ - ಎಲ್ಲವೂ ಹಸಿರು ಕಾಣದ, ಕಡಲತೀರದ ಮಳೆಯ ಸವಿಯರಿಯದ ಪ್ರಿಯಾಗೆ ಹೊಸದು. ಅವಳು ಅನಿರ್ವಚನೀಯ ಭಾವದ ಭಾರದಿಂದ ಕಂಗೆಟ್ಟರೆ, ನಾನು ಧನ್ಯತಾಭಾವದಿಂದ ಬೀಗಿದೆ.

ನನ್ನೊಡನೆ ಮನೆಯೊಳಗೆ ಕಾಲಿಟ್ಟ ಪ್ರಿಯಾಳನ್ನು ಅಮ್ಮ – ಅಪ್ಪ ಸ್ವಾಗತಿಸಿದರು. ಅಪ್ಪ ಅಷ್ಟಾಗಿ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲವಾಗಿ ಆರಾಮಾಗಿ ಪ್ರಿಯಾ ಜತೆ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಾತಾಡಿದರು. (ಅಮ್ಮ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವಾಗಲೆಲ್ಲ ಅಪ್ಪ ತಾವು ಮಡಪ್ಪಾಡಿಯಲ್ಲಿದ್ದಾಗ ದಿನಾ ಮುಸಲ್ಮಾನ ಅಡಿಗೆ ಭಟ್ಟನ ಕೈರುಚಿ ತಿನ್ನುತ್ತಿದ್ದಿದ್ದು, ಆಮೂಲಕ ತನಗೂ ಜಾತಿಯಿಲ್ಲದಾಗಿರುವುದು ಹೇಳಿ ಅಮ್ಮನಿಗೆ ರೇಗಿಸುತ್ತಾರೆ)

ಅಮ್ಮ ಒಳಗೊಳಗೆಯೇ ಗೊಣಗಿಕೊಂಡಳು, 'ಯಾವ ಜಾತಿಯೋ ಏನೋ, ನಾಳೆ ಅಶುದ್ಧ-ಗಿಶುದ್ಧ ಆಗಿ ನಾಗ ಬಂದಮೇಲೆ ಗೊಂತಕ್ಕು... ಆರಿಂಗೆಂತ, ಅನುಭವಿಸೂದು ಇಲ್ಲಿಪ್ಪೋರಲ್ದಾ...' ಪ್ರಿಯಾ ಅವರೇನು ಹೇಳುತ್ತಿದ್ದಾರೆಂದು ಕೇಳಿದಳು, ನಾನು ಸಾಕು ಇನ್ನು ಸುತ್ತಾಡಬೇಡ, ಅವಳಿಗೆ ಸುಸ್ತಾಗಿರುತ್ತದೆ, ರೆಸ್ಟ್ ತೆಗೆದುಕೊಳ್ಳಲು ಬಿಡು ಅನ್ನುತ್ತಿದ್ದಾರೆ ಅಂದೆ. ಅವಳು ನನಗೇನು ಸುಸ್ತಾಗಿಲ್ಲ ಆಂಟೀ ಅಂತ ಅಮ್ಮನಿಗೆ ಇಂಗ್ಲಿಷಿನಲ್ಲಿ ಹೇಳಿ ನಕ್ಕಳು. ಇಂಗ್ಲಿಷ್ ಅರ್ಥವಾಗದಿದ್ದರೂ ಅಮ್ಮ ನಗಲೇ ಬೇಕಾಯಿತು.

ಪ್ರಿಯಾ ನನ್ನೊಡನೆ ಮನೆಯಿಡೀ ಸುತ್ತಾಡಿದಳು. ಅಟ್ಟದಲ್ಲಿ ಕಟ್ಟಿಟ್ಟಿದ್ದ ನನ್ನಜ್ಜ ಕಾಸರಗೋಡು ಹೋರಾಟಕಾಲದಲ್ಲಿ ಉಪಯೋಗಿಸುತ್ತಿದ್ದ ಮೈಕು, ಹಳೆಯ ಪುಸ್ತಕಗಳನ್ನಿಟ್ಟ ಮಸಿಹಿಡಿದ ಬೆತ್ತದ ಪೆಟ್ಟಿಗೆಯಿಂದ ಹಿಡಿದು ಅನೇಕಾನೇಕ ವಸ್ತುಗಳನ್ನು ತೋರಿಸಿದೆ. ಮಣ್ಣಿನಿಂದಲೇ ಕಟ್ಟಿದ ಮನೆಯ ಎರಡಂತಸ್ತುಗಳನ್ನು ಕಂಡು ಜಗತ್ತಿನ ಯಾವುದೋ ಅದ್ಭುತ ವಾಸ್ತುವನ್ನು ನೋಡಿದಂತೆ ರೋಮಾಂಚನಗೊಂಡಳು ಆಕೆ. (ಈಗ ಗೊತ್ತಾಗಿದೆ ನನಗೆ, ರಾಯಲಸೀಮೆಯಲ್ಲಿ ಆಕೆ ಹುಟ್ಟಿದ್ದು ಮಾತ್ರ, ಅಲ್ಲಿಯ ಬದುಕು ಆಕೆಗೆ ನಿಜವಾಗಿ ಗೊತ್ತಿರಲಿಲ್ಲ ಅಂತ. ಯಾಕೆಂದರೆ, ಆಂಧ್ರದಲ್ಲಿ ಮಣ್ಣಿನಲ್ಲಿಯೇ ಕಟ್ಟಿದ ಮನೆಗಳು ಅತಿಸಾಮಾನ್ಯ.)

ಅದೇನು ಇದೇನು ಅನ್ನುತ್ತ ಸಾವಿರ ಪ್ರಶ್ನೆಗಳೆಸೆಯವ ಪ್ರಿಯಾಳ ಕುತೂಹಲವನ್ನು ಸಮರ್ಪಕವಾದ ಉತ್ತರಗಳಿಂದ ತಣಿಸುತ್ತಿದ್ದೆ ನಾನು. ಎಲ್ಲ ಕಡೆ ಸುತ್ತಾಡಿ ಕೊನೆಗೆ ದೇವರಮನೆಗೆ ಬಂದೆವು. ದೇವರ ಮಂಟಪದೊಳಗೆ ಸಾಲಿಗ್ರಾಮ ಮತ್ತಿತರ ದೇವರುಗಳನ್ನು ಸಣ್ಣ ತಾಮ್ರದ ತೆರೆದ ಪೆಟ್ಟಿಗೆಯೊಳಗೆ ಹಾಕಿ ಇಟ್ಟಿರುತ್ತಾರೆ. ಕಟೀಲು ದುರ್ಗಾಪರಮೇಶ್ವರಿ, ಪಂಚಲಿಂಗೇಶ್ವರ, ಮಹಾಲಿಂಗೇಶ್ವರ ಇತ್ಯಾದಿ ದೇವರ ಫೋಟೋಗಳನ್ನೂ ಕಟ್ಟುಹಾಕಿ ಮಂಟಪದೊಳಗಿಟ್ಟಿದ್ದಾರೆ. ಇದರ ವೈಭವವನ್ನು ಪ್ರಿಯಾ ನೋಡುತ್ತಿದ್ದರೆ, ಅಮ್ಮ ಅಡಿಗೆಗೆ ಸಹಾಯಕ್ಕೆಂದು ಕರೆದಳು, ನಾನು ಈಗ ಬಂದೆ ಎಂದು ಪ್ರಿಯಾಗೆ ಹೇಳಿ ಅಡಿಗೆಮನೆಗೆ ಹೋದೆ.


ಅಮ್ಮನಿಗೆ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿ ಆರೇಳು ನಿಮಿಷಗಳಲ್ಲಿ ವಾಪಸ್ ಬಂದಾಗ ನಾನು ಕಂಡಿದ್ದೇನು... ಪೆಟ್ಟಿಗೆಯೊಳಗಿನ ದೇವರು ಪ್ರಿಯಾಳ ಕೈಯಲ್ಲಿತ್ತು. ದೇವರನ್ನಲಂಕರಿಸಿದ್ದ ರುದ್ರಾಕ್ಷಿ ಸರವನ್ನು ತನ್ನ ಕುತ್ತಿಗೆಗೆ ಧರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು ಪ್ರಿಯಾ.

ನನಗೆ ಮನಸಿನ ಅದ್ಯಾವುದೋ ಮೂಲೆಯಲ್ಲಿ ವಿಚಿತ್ರ ಸಂಕಟ ಹುಟ್ಟಿಕೊಂಡಂತೆ ಅನಿಸಿತು. ಯಾಕೆ, ಏನು - ಒಂದೂ ಗೊತ್ತಾಗಲಿಲ್ಲ. ನಾನು ಆ ಮನೆಯಲ್ಲಿ ಬದುಕಿದ 20 ವರ್ಷಗಳಲ್ಲಿ ಇಲ್ಲಿಯವರೆಗೆ ನಾನೇ ನಮ್ಮನೆ ದೇವರನ್ನು, ರುದ್ರಾಕ್ಷಿಯನ್ನು - ಯಾವುದನ್ನೂ ಮುಟ್ಟಿರಲಿಲ್ಲ. ನನಗೆ ಅವುಗಳನ್ನು ಮುಟ್ಟಲು ಅವಕಾಶಗಳಿತ್ತು, ಆದರೆ ಬುದ್ಧಿಪೂರ್ವಕವಾಗಿಯೇ ಮುಟ್ಟಿರಲಿಲ್ಲ. ಅದಕ್ಕಾಗಿ ಅವಳು ಅದನ್ನು ಮುಟ್ಟಿದ್ದು ಅಸಹನೀಯವಾಯಿತೆ...? ಇಂದಿಗೂ ಗೊತ್ತಿಲ್ಲ ನನಗೆ.

ಊಟಕ್ಕೆ ಕರೆದೆ ಅವಳಿಗೆ. ಎಲ್ಲ ದೇವರನ್ನೂ ಪೆಟ್ಟಿಗೆಯೊಳಗಿಡುವ ಬದಲು ಮಂಟಪದೊಳಗೆ ಅವಳು ಇಟ್ಟು ಬಂದದ್ದು ನನ್ನ ಅಸಹನೆಯ ಕಿಡಿಗೆ ಗಾಳಿಯೂದಿತು.

ಊಟ ಮಾಡುವಾಗ ನನ್ನ-ಅವಳ ನಡುವಿನ ಅಂತರ ನಿಚ್ಚಳವಾಗುತ್ತ ಹೋಯಿತು. ನೀಟಾಗಿ, ಕ್ರಮಪ್ರಕಾರವಾಗಿ ಬಡಿಸಿಕೊಂಡು ಊಟಮಾಡುವ ನಾನು. ಮೊದಲು ಕಂಡಿದ್ದನ್ನು, ಕುತೂಹಲ ಹುಟ್ಟಿಸಿದ್ದನ್ನು ಮೊದಲು ತಿನ್ನುವ ಅವಳು. ನಿಯಮಗಳು ಗೊತ್ತಿದ್ದೂ ಮುರಿಯುವ ನಾನು, ಗೊತ್ತಿಲ್ಲದೆ ಮುರಿಯುವ ಅವಳು. ನನಗೆ ಅವಳು-ನಾನು ಒಂದೇ ಎನ್ನುವ ಭ್ರಮೆಯಿರಲಿಲ್ಲವಾದರೂ, ನನಗೆ ಇಷ್ಟವಾಗದ ರೀತಿಯ ಭಿನ್ನತೆಗಳು ನನ್ನ-ಅವಳ ನಡುವೆ ಇರಬಹುದೆಂಬ, ಇದೆಯೆಂಬ ಸತ್ಯ ನನ್ನ ಅನುಭವದ ಕಡಲಿಗೆ ಅವಳು ಬಂದಾಗ ಹೊಸದಾಗಿ ಹುಟ್ಟಿಕೊಂಡಿತ್ತು.

ಹಾಸಿಗೆ ಹಾಕಿ ಮಲಗಿಕೊಂಡೆವು. ಅವಳು ಮಾತಿಗೆಳೆಯಲು ನೋಡಿದರೆ, ನನಗೆ ಮಾತು ಬೇಕಿರಲಿಲ್ಲ. 'ಸುಸ್ತು, ಮಲ್ಕೋ, ನಾಳೆ ಮಾತಾಡೋಣ' ಅಂದೆ. ಅವಳಿಗೆ ಸುಸ್ತಾಗಿತ್ತು. ಬೇಗನೆ ನಿದ್ದೆ ಹೋದಳು... ನಾನು ನನ್ನ ಅಂತಃಸತ್ವದ ಜತೆ ಮಾತಾಡತೊಡಗಿದೆ. ಅವಳಿಗೆ ನಾನು ನಂಬಿಕೆಗರ್ಹ ಗೆಳತಿಯೆಂದು ಅನಿಸುವ ಹಾಗೆ ನಾನು ನಡೆದುಕೊಂಡಿದ್ದು ನನಗೆ ನಾನು ಮಾಡಿಕೊಂಡ ಮೋಸವಾಗಿ ಮಾರ್ಪಟ್ಟಿತ್ತು. ಇಂದಿನವರೆಗೆ ಚೆನ್ನಾಗಿದ್ದ ಬಾಂಧವ್ಯಕ್ಕೆ ನನ್ನ ಮನೆಯ ಆವರಣದಲ್ಲಿ ಹುಳಿ ಬೆರೆತಿತ್ತು. ಹೇಗೆ... ಯಾಕೆ... ಇದು ನಾನು ಮಾಡುತ್ತಿರುವ ತಪ್ಪಲ್ಲವೆ... ಅಥವಾ ಇದು ಕ್ಷಣಿಕವಾಗಿ ನನ್ನ ಮನದಲ್ಲಿ ಹುಟ್ಟಿಕೊಂಡ ದೆವ್ವವಿರಬಹುದೆ...ನಾಳೆ ಎಲ್ಲ ಸರಿಯಾದೀತೆ... ಸರಿಯಾಗಬೇಕಲ್ವಾ... ಕೊರೆವ ಸಾವಿರ ಪ್ರಶ್ನೆಗಳ, ಹೊಳೆಯುವ ಸಾವಿರ ಉತ್ತರಗಳ ನಡುವೆ ನಿದ್ದೆ ಯಾವಾಗ ಬಂತೋ ತಿಳಿಯಲಿಲ್ಲ.

***************

'ಉಠೋ ಯಾರ್, enough sleeping...' ಪ್ರಿಯಾ ಪ್ರೀತಿಯಲ್ಲಿಯೇ ಗದರುತ್ತ ಎಬ್ಬಿಸಿದಾಗ ನಿದ್ದೆಯಿನ್ನೂ ಸಿಹಿಸಿಹಿಯಾಗಿತ್ತು. ಸಮಯ ಇನ್ನೂ ಬೆಳಿಗ್ಗೆ 5.45 ಅಷ್ಟೇ. ಅಯ್ಯೋ ಇಷ್ಟು ಬೇಗ ಎದ್ದೇನು ಮಾಡೋಣ ಅಂತ ಮತ್ತೆ ಮಲಗಹೊರಟೆ. 'U had told me that we will go for a morning walk...' ನೆನಪಿಸಿದಳು. ಹೌದಲ್ಲಾ, ನಾನೇ ಹೇಳಿದ್ದೆ ಅವಳಿಗೆ. ಸೋಮಾರಿಯಂತೆ ಬಿದ್ದುಕೊಳ್ಳುವ ಅವಕಾಶಕ್ಕೆ ಕೈಯಾರ ಕಲ್ಲುಹಾಕಿಕೊಂಡಿದ್ದಕ್ಕೆ ನನಗೆ ನಾನೇ ಬೈದುಕೊಳ್ಳುತ್ತ ಎದ್ದೆ. ಮಳೆಯೂ ಕೈಕೊಟ್ಟಿದ್ದಳು, ಅವಳಾದರೂ ಬಂದಿದ್ದರೆ ಹೊರಗೆ ಹೋಗುವ ಮಾತೇ ಇರಲಿಲ್ಲ.

ಅಮ್ಮ ಕೊಟ್ಟ ಚಹಾ ಉರ್ಪಿ, ಪ್ರಿಯಾಳ ಕ್ಯಾಮರಾ ಜತೆಯಲ್ಲಿ ತೆಗೆದುಕೊಂಡು ನಮ್ಮನೆಯ ಹಿಂದಿನ ಉಕ್ಕುಡ ಗುಡ್ಡೆಗೆ ವಾಕಿಂಗ್ ಹೊರಟೆವು. ಮನೆಯಿಂದ ಮೇಲೆ ಸ್ವಲ್ಪ ಕಡಿದಾದ ದಾರಿಯಲ್ಲಿ ಮೇಲೆ ಹತ್ತುತ್ತಿದ್ದಂತೆಯೇ ಕೆಳಗಿದ್ದ ನಮ್ಮ ಪುಟ್ಟ ಊರು ಮಳೆಹೊಗೆಯಿಂದ ಆವೃತವಾಗಿತ್ತು. ಮನಮೋಹಕ ದೃಶ್ಯವಿಲಾಸ ನಮ್ಮಿಬ್ಬರನ್ನೂ ಮುದಗೊಳಿಸಿತು.

ಅರ್ಧದಾರಿ ಕ್ರಮಿಸಿದಾಗ ಪಂಜಿಕಲ್ಲು ಸಿಗುತ್ತದೆ. ಆಮೇಲೆ ಉಕ್ಕುಡ ಗುಡ್ಡೆಗೆ ಕ್ರಮಿಸುವ ದಾರಿ ಇನ್ನಷ್ಟು ಕಡಿದಾಗಿದೆ. ನಾವು ಪಂಜಿಕಲ್ಲಿನಲ್ಲಿರುವಾಗ ಸೂರ್ಯ ಅವಾಗಷ್ಟೇ ಮೇಲೆಬರುತ್ತಿದ್ದ. ಹಂಗೇ ಒಂದಷ್ಟು ಫೋಟೋಗಳು ಕ್ಲಿಕ್ಕಿಸಿದ್ದಾಯಿತು. ನಮ್ಮ ಗುರಿ ಉಕ್ಕುಡಗುಡ್ಡೆಯ ತುದಿಯಾಗಿದ್ದು, ಅದೂ ಇದೂ ಮಾತಾಡುತ್ತ ಮುಂದೆ ಸಾಗಿದೆವು.

ಹೀಗೆ ಐದು ನಿಮಿಷಗಳು ಕಳೆದಿರಬಹುದು. ಪುಟ್ಟ ಕಣಿವೆಯೊಂದು ಎದುರಾಯಿತು. ಚಿಕ್ಕಂದಿನಿಂದಲೂ ಸಾವಿರ ಸಲ ಈ ಗುಡ್ಡ ಹತ್ತಿದ್ದೆ ನಾನು. ಸಲೀಸಾಗಿ ಹಾರಿ ದಾಟಿಹೋದೆ. ಪ್ರಿಯಾಗೆ ದಾಟಲಾಗಲಿಲ್ಲ. ಹಾರುವಾಗ ಬಿದ್ದರೆ ಎಂದು ಹೆದರಿದಳು.

ಅಷ್ಟೆ. ಮತ್ತೆ ಹೆಡೆಯೆತ್ತಿತ್ತು ಮನದೊಳಡಗಿದ್ದ ಮರೆತ ಹಾವು... ಕಾಲೇಜಿನಲ್ಲಿ ಓದುತ್ತಿದ್ದಾಗ ತಾನು ಯೂನಿವರ್ಸಿಟಿ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದೆ ಅನ್ನುತ್ತಿದ್ದಳು. ನಿಜಜೀವನದಲ್ಲಿ ಅದು ಉಪಯೋಗಕ್ಕೆ ಬರಲಿಲ್ಲವೆ...? ತನ್ನ ಬಗ್ಗೆ ತಾನು ಹೇಳಿಕೊಳ್ಳುವಾಗ ಅತಿಶಯೋಕ್ತಿ ನುಸುಳಿತ್ತೆ... ಅಥವಾ ಅದು ನನ್ನನ್ನು ಇಂಪ್ರೆಸ್ ಮಾಡುತ್ತದೆಂದುಕೊಂಡು ಸುಳ್ಳು ಹೇಳಿದಳೆ... ಅಥವಾ ಈ ಕ್ಷಣದ ಭಯವೆ... ಇವೆಲ್ಲದರಲ್ಲಿ ಯಾವುದೇ ಆದರೂ ಅವು ನನಗಿಷ್ಟವಾದವುಗಳಲ್ಲ... ನನ್ನ ಒಡನಾಡಿಗಳಲ್ಲಿ ನಾನು ಬಯಸುವ ಗುಣಗಳಲ್ಲ.

*******************

ಆಮೇಲೆ ಆದಿನ, ಮರುದಿನ ಇಡೀ ಜತೆಗಿದ್ದೆವು. ನನ್ನೊಳಗಿನ ಬದಲಾವಣೆ ಅವಳಿಗೆ ಗೊತ್ತಾಗಲಿಲ್ಲ. ಬೇರೇನೋ ಬೇಸರದಲ್ಲಿರಬೇಕು ನಾನು ಎಂದುಕೊಂಡಳು, ನನ್ನನ್ನು ತಪ್ಪುತಿಳಿದುಕೊಳ್ಳುವಂಥವಳಲ್ಲ ಪಾಪದ ಹುಡುಗಿ, ಸರಿಯಾಗಿ ತಿಳಿದುಕೊಳ್ಳುವಲ್ಲಿ ವಿಫಲಳಾಗಿದ್ದಳು. ನಾನು ನನ್ನೊಳಗೆ ಹೆಡೆಯೆತ್ತಿದ ಅಸಮಾಧಾನವನ್ನು, ನಿರಾಸೆಯನ್ನು ಕೊಲ್ಲಲು ಹೆಣಗುತ್ತಿದ್ದೆ.

ಕೇನೆಹೂವು ಹುಡುಕಿ ತೋರಿಸಿದರೆ ಮುಖ ಸಿಂಡರಿಸಿಕೊಂಡಳು. ಇಷ್ಟು ಚಂದದ ಹೂವಿಗೆ ಇಷ್ಟು ಕೊಳಕು ವಾಸನೆ ಯಾಕಿರಬಹುದು ಅಂತ ಪ್ರಶ್ನಿಸಿದಳು. ಬಹುಶಃ ಪ್ರಕೃತಿ ಒದಗಿಸಿದ ಪ್ರೊಟೆಕ್ಷನ್ ಮೆಕ್ಯಾನಿಸಂ ಇರಬಹುದೆಂದು ನಾನಂದರೆ, ಇರಬಹುದು ಎಂದು ಒಪ್ಪಿಕೊಂಡಳು. ನನಗೆ ಇರಲಿಕ್ಕಿಲ್ಲ ಎಂದು ವಾದಿಸುವವರು ಬೇಕಿತ್ತು. ಹೀಗೂ ಇರಬಹುದು ಅಂತ ಇನ್ನೊಂದು ದೃಷ್ಟಿಕೋನದತ್ತ ನನ್ನ ಗಮನಸೆಳೆಯುವವರು ಬೇಕಿತ್ತು. ಇವೆಲ್ಲ ಈ ಹಿಂದೆ ಯಾಕೆ ನನಗೆ ಕಾಣಲಿಲ್ಲ...

ಗುಡ್ಡೆ ಗುಡ್ಡೆ ಅಲೆದಾಡುತ್ತಿದ್ದಾಗ ನಾಟಿ ಸಾರಾಯಿ ತಯಾರು ಮಾಡಲಿಕ್ಕೆಂದು ಮಣ್ಣಿನ ಮಡಕೆಯಲ್ಲಿಟ್ಟು ಯಾವುದೋ ಕಣಿಯಲ್ಲಿ ಅಡಗಿಸಿಟ್ಟಿದ್ದ ಗೋಂಕು (ಗೇರುಹಣ್ಣಿನ ರಸ) ನನ್ನ ಕಣ್ಣಿಗೆ ಬಿತ್ತು. ಅದೇನೆಂದು ಅವಳಿಗೆ ವಿವರಿಸಿದೆ. ಅದೇನೋ ಉದ್ವೇಗ ಅವಳಲ್ಲಿ ಕಂಡಿತು. ಅವಳ ಹಿರಿಯರೂ ಇದನ್ನೇ ಮಾಡುತ್ತಿದ್ದರಂತೆ, ಅದರ ವೀರಕಥೆ ನನಗೆ ಹೇಳಿದಳು.

ಅವಳು ಹೇಳಿ ಮುಗಿಸುವುದನ್ನೇ ಕಾದಿದ್ದೆ. ದಲಿತರು ಬೇರೆಯವರಿಂದ ಸಮಾಜದಲ್ಲಿ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣಗಳಲ್ಲೊಂದು ಕುಡಿತ ಎನ್ನುವುದು ನನ್ನ ಬಲವಾದ ಅಭಿಪ್ರಾಯವಾಗಿದ್ದು, ಅದನ್ನು ಅವಳಿಗೆ ಹೇಳಿದೆ. ನಾಟಿ ಸಾರಾಯಿ ಮಾಡುವುದು ಅತಿದೊಡ್ಡ ಕಲೆಯೇ ಇರಬಹುದು, ನಿನ್ನ ಅಪ್ಪನಿಗೆ ಅದರಿಂದ ದುಡ್ಡು ಬಿಟ್ಟು ಬೇರೇನಾದರೂ ಉಪಯೋಗ ಆಯ್ತಾ ಅಂತ ಕೇಳಿದೆ. ಉತ್ತರವಿರಲಿಲ್ಲ ಆಕೆಯಲ್ಲಿ. ನನ್ನ ಪ್ರಶ್ನೆ ಅವಳಿಗೆ ಯೋಚನೆಗೆ ಹಚ್ಚಿತ್ತು.

ಅವಳಾಸೆಯಂತೆ ದಲಿತರು ವಾಸವಾಗಿದ್ದ ನಮ್ಮ ಮನೆಯೆದುರಿನ ಗುಡ್ಡದ ಕಡೆಗೆ ಹೋದೆವು. ಗುಡ್ಡದ ನಡುವೆ ನಾಕೈದು ದಲಿತರ ಮನೆಗಳಿದ್ದವು ಅಲ್ಲಿ. ಕೇರಳ ಸರಕಾರ ಕಟ್ಟಿಸಿಕೊಟ್ಟ ಮನೆಗಳು. ಅವುಗಳಲ್ಲಿ ಎರಡು ಮನೆಗಳು ಯಾವ ನರಪ್ರಾಣಿಯೂ ಇಲ್ಲದೆ, ಹಂಚುಗಳು ಕಿತ್ತುಹೋಗಿ ಕಾಲದ ಜತೆ ಇವತ್ತೋ ನಾಳೆಯೋ ಅಂತ ಸೆಣಸುತ್ತಿದ್ದವು. ಐತ ವಿನಯವೇ ಜೀವವಾಗಿ 'ದಾನೆ ದೆತ್ತೀ' ಅನ್ನುತ್ತ ನಮಗೆ ಸ್ವಾಗತಿಸಿ ಮಾತಾಡಿಸಿದ. ಅವನಿಗೆ ಆ ಮನೆಗಳಲ್ಲಿ ಯಾರೂ ಇಲ್ಲವಾ, ಯಾಕೆ ಹಾಗಿವೆ ಅಂತ ಕೇಳಿದೆ.

ಅವನು ಹೇಳಿದ, ಮನೆಯಲ್ಲಿ ಯಾರಾದರೂ ಸತ್ತರೆ ಆ ಮನೆಯನ್ನು ಬಿಟ್ಟುಹೋಗುವುದು ಅವರ ಸಂಪ್ರದಾಯವಂತೆ. ಹಾಗೇ ಯಾರೋ ಸತ್ತಾಗ ಈ ಎರಡು ಮನೆಗಳು ಖಾಲಿಯಾಗಿವೆ. ನಾಳೆ ಐತ ಸತ್ತರೆ ತುಕ್ರು ಕೂಡ ತನ್ನ ಮನೆ ಖಾಲಿ ಮಾಡುತ್ತಾಳೆ. ನಾನು ಕೇಳಿದೆ, ಸರಕಾರ ನಿಮಗೆ ಮನೆ ಮಾಡಿಕೊಟ್ಟಿದ್ದೇ ದೊಡ್ಡದು, ಅಂಥದರಲ್ಲಿ ನೀವು ಹೀಗೆ ಮಾಡಿದರೆ ಹೇಗೆ ಅಂತ. ನಾವೇನು ಸರಕಾರಕ್ಕೆ ಹೇಳಿದ್ದೇವಾ ದೆತ್ತೀ ಮನೆ ಕಟ್ಟಿಕೊಡಿ ಅಂತ.. ಅವರಾಗವರೇ ಮಾಡಿಕೊಟ್ಟರು, ನಾವೇನು ಮಾಡೋಣ ಅಂತ ಬೊಚ್ಚುಬಾಯಿ ಬಿಟ್ಟು ನಕ್ಕ ಐತ. ಅವನ ಮುಗ್ಧತನಕ್ಕೆ, ನೇರಮಾತುಗಳಿಗೆ ಯಾವಾಗಲೂ ಸೋಲುತ್ತೇನೆ ನಾನು, ಮಾತುಮರೆಯುತ್ತೇನೆ. ನಾನು ಗೌರವಿಸುವ ಪ್ರೀತಿಯ ಹಿರಿಯ ಜೀವ ಆತ. ನಮ್ಮಜ್ಜನ ಹಾಗೆ.

ಪ್ರಿಯಾಗೆ ದಲಿತರು ಮನೆಖಾಲಿಮಾಡುವ ವಿಷಯ ವಿವರಿಸಿದರೆ, ಮಂಕಾದಳು. ಒಬ್ಬ ವ್ಯಕ್ತಿ ಶೋಷಣೆಗೊಳಗಾದರೆ, ಅದರ ಕಾರಣ ಎಲ್ಲೋ ಇರುವುದಿಲ್ಲ, ಅವನಲ್ಲೇ ಇರುತ್ತದೆ, ಅದನ್ನು ಸರಿಪಡಿಸಿಕೊಳ್ಳುವವರೆಗೆ ಶೋಷಣೆ ಮುಂದುವರಿಯುತ್ತದೆ ಅನ್ನುವುದು ನನ್ನ ವಾದ. ಅವಳು ಇದನ್ನೊಪ್ಪಲಿಲ್ಲ. ಕೆಲವರಿಗೆ ಶೋಷಣೆಗೊಳಗಾಗಿದ್ದೇವೆಂದು ಗೊತ್ತೇ ಇರದಷ್ಟು, ಕಾರಣಗಳು ಗೊತ್ತಿರದಷ್ಟು ಮುಗ್ಧರಿರುತ್ತಾರೆ ಅಂದಳು. ಹಾಗಿದ್ದಾಗ ಅವರ ಜಗತ್ತಿನಲ್ಲಿ ಅವರು ಚೆನ್ನಾಗಿರುತ್ತಾರೆ, ಸಂತೋಷವಾಗಿರುತ್ತಾರೆ, ಐತನ ಹಾಗೆ. ಅವರ ಮನಸ್ಸಲ್ಲಿ ದೊಡ್ಡ ದೊಡ್ಡ ಮಾತಾಡಿ ವೈರಸ್ ಯಾಕೆ ಬಿಡಬೇಕು ನಾವು, ನಮ್ಮ ಕೈಲಾದ ಸಹಾಯ ಮಾಡೋಣ, ಅವರಿಗೆ ಬೇಕಾದ್ದನ್ನು ಕೊಡದೇ, ಬೇಡದ್ದನ್ನು ಕೊಟ್ಟು, ದೊಡ್ಡ ದಾನಿಗಳಂತೆ ಪೋಸ್ ಯಾರಾದರೂ ಯಾಕೆ ಕೊಡಬೇಕು ಅಂತ ನಾನು. ಅವರಿಗೇನು ಬೇಕು ಏನು ಬೇಡ ಎಂಬುದು ಅವರಿಗೇ ಗೊತ್ತಿಲ್ಲವಲ್ಲ ಅಂತ ಅವಳು. ಹಾಗಂತ ನೀನಂದುಕೊಂಡಿರ್ತೀಯ, ಅವರು ಅಂದುಕೊಂಡಿರಬೇಕಿಲ್ಲ ಅಂತ ನಾನು.

ದಲಿತ ಚಳವಳಿಯ ಹೆಸರಲ್ಲಿ ರಾಜಕೀಯ ಪಕ್ಷಗಳು ಸಮಾಜವನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿವೆ ಅಂತ ನಾನು. ಆರ್ಥಿಕವಾಗಿ ದಲಿತರೇ ಅತ್ಯಂತ ಹಿಂದುಳಿದವರು, ಅದಕ್ಕೆ ಚಳವಳಿ ಅಗತ್ಯ ಅಂತ ಅವಳು. ಬೇರೆಯವರ ದುಡ್ಡು ನುಂಗಿ ಸೊಕ್ಕುತ್ತಿರುವ ಶ್ರೀಮಂತ ಲಂಚಕೋರ 'ದಲಿತ'ರನ್ನೂ, ಅರೆಹೊಟ್ಟೆ ಊಟಕ್ಕೆ ಗತಿಯಿಲ್ಲದೆ ವೈದೀಕಗಳು ಮಾಡಿ, ಬೇರೆಯವರ ಮನೆಯಲ್ಲಿ ಕೆಲಸಮಾಡಿ ಬದುಕುವ ಬ್ರಾಹ್ಮಣರನ್ನೂ ತೋರಿಸಲೆ ನಿನಗೆ, ಅವರೂ ಚಳುವಳಿ ಅಂತ ಹೊರಟರೆ ಚೆನ್ನಾಗಿರುತ್ತದಲ್ಲವೆ ಅಂತ ನಾನು.

ವಾದದಲ್ಲಿ ವಿಜೃಂಭಿಸಿದ್ದು ನಮ್ಮ ನಡುವಿನ ವ್ಯತ್ಯಾಸಗಳು. ನಂಬಿಕೆಯ ಆಧಾರ ಬೇಕಿಲ್ಲದ / ಬಯಸದ ಬಾಂಧವ್ಯಗಳಲ್ಲಿ ನಂಬಿಕೆಯಿಟ್ಟ ನಾನು. ತಾನು ಕಾಣುತ್ತಿರುವ ವ್ಯಕ್ತಿಯೇ ಸರ್ವಸ್ವವೆಂದು ತನ್ನನ್ನು ಪೂರ್ತಿಯಾಗಿ ಸಂಬಂಧಕ್ಕೆ ಒಪ್ಪಿಸಿಕೊಳ್ಳುವ ಅವಳು. ಸಂಬಂಧಕ್ಕೂ ಬಾಂಧವ್ಯಕ್ಕೂ ಸ್ಪಷ್ಟ ಗಡಿಗಳನ್ನಿಟ್ಟು ಉತ್ತಮ ಬಾಂಧವ್ಯಗಳಿಗಾಗಿ ಆಶಿಸುವ ನಾನು, ಅವೆರಡರ ನಡುವೆ ವ್ಯತ್ಯಾಸವೇ ಅರಿಯದ ಅವಳು. ಮುಗ್ಧೆಯಂತೆ ಕಂಡೂ ಮುಗ್ಧೆಯಲ್ಲದ ನಾನು. ಮುಗ್ಧೆಯಂತೆ ಕಾಣದೆಯೂ ಮುಗ್ಧೆಯಾದ ಅವಳು. ಮನಸಿಗನಿಸಿದ್ದು ತಕ್ಷಣ ಹೇಳುವ ನಾನು. ಏನೇನೋ ಅನಿಸಿಯೂ ಏನೂ ಹೇಳದೆ ಕೊರಗುವ ಅವಳು. ಮಾತಾಡುವ ಮೊದಲೇ ಯೋಚಿಸಿ ಮಾತಾಡುವ ನಾನು. ಏನೋ ಮಾತಾಡಿ ಅದು ತಪ್ಪೆಂದು ಮನವರಿಕೆಯಾದಾಗ ಕೊರಗುವ ಅವಳು.

ಹೀಗೇ ಕೊನೆಯಿಲ್ಲದೆ ಮುಂದುವರಿದ ವಾದಧಾರೆಯಲ್ಲಿ ನನಗಂತೂ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಯಿತು. ಈ ಒಂದು ಸಂಬಂಧ ಶುರುವಾದಾಗ ಇದ್ದಂತಹ ನನ್ನನ್ನು ನಾನು ಕಳೆದುಕೊಂಡಿದ್ದೆ. ಅವಳಿಲ್ಲದ ರೀತಿಯಲ್ಲಿ ಅವಳನ್ನು ಅರ್ಥೈಸಿಕೊಂಡಿದ್ದೆ. ನಾನಿಲ್ಲದ ರೀತಿಯಲ್ಲಿ ಅವಳು ನನ್ನನ್ನು ಅರ್ಥೈಸಿಕೊಂಡಿದ್ದಳು. ಅಥವಾ ನಾವಿಬ್ಬರೂ ಪರಸ್ಪರರ ಬಗ್ಗೆ ಭ್ರಮೆಗಳಲ್ಲೇ ಬದುಕಿದ್ದೆವು. ವಿಚಾರಸಾಮ್ಯವಿಲ್ಲದ ಈ ಇಂಟೆಲೆಕ್ಚುವಲ್ ಸಂಬಂಧ ಈಗ ಬಾಂಧವ್ಯದ ವ್ಯಾಪ್ತಿಯಿಂದ ಕುಸಿದಿತ್ತು. ಮತ್ತೆ ಅದನ್ನು ಬೆಳೆಸಲು ಶಕ್ತವಾದ ಭಾವಸಾಮ್ಯ ಇನ್ನೂ ಹುಟ್ಟಿಯೇ ಇರಲಿಲ್ಲ.


ಆದಿತ್ಯವಾರ ಸಂಜೆ ಗಂಗೋತ್ರಿಗೆ ವಾಪಸ್ ಹೊರಟಾಗ ಪ್ರಿಯಾ ಕಣ್ಣುಗಳು ಹನಿಗೂಡಿದರೆ, ನನ್ನ ಮನಸು ವಿಚಿತ್ರ ಸಂಕಟದಿಂದ ತುಂಬಿತ್ತು. ಒಂದು ಕಡೆ ಅವಳ ಮುಗ್ಧತನಕ್ಕೆ ನಾನು ಸರಿಯಾದ ಗೆಳತಿಯಲ್ಲವೆನಿಸಿದರೆ, ಇನ್ನೊಂದು ಕಡೆ ನನ್ನ ಸಂಕೀರ್ಣ ಸಂವೇದನೆಗಳಿಗೆ ತಕ್ಕ ಗೆಳತಿ ಅವಳಲ್ಲವೆನಿಸುತ್ತಿತ್ತು. ಇಂಟಲೆಕ್ಚುವಲ್ ಅಲ್ಲದೇ ಇರುವ ಬೇರೆ ಯಾವುದೇ ರೀತಿಯ ಗೆಳೆತನ ನನಗೆ ಪ್ರಿಯಾಳಿಂದ ಬೇಕಿರಲಿಲ್ಲ. ಇಲ್ಲಿಯವರೆಗೆ ಅದು ಬೆಳೆದೂ ಇರಲಿಲ್ಲ. ಆಗಸ್ಟ್ ಕಾಂಪ್ಟೆಯ ಬಗ್ಗಾಗಲಿ, ಸಮಾಜಶಾಸ್ತ್ರ ಕಲಿಸುವ ಇತರ ವಿಚಾರಗಳ ಬಗ್ಗಾಗಲಿ ಪ್ರಿಯಾ ನನ್ನ ಜತೆಗೆ ಎಂದೂ ಹಂಚಿಕೊಂಡಿರಲಿಲ್ಲ. ನಾನು ನಾ ಕಲಿಯುತ್ತಿದ್ದ ಪತ್ರಿಕೋದ್ಯಮದ ಬಗ್ಗೆ ಅವಳಲ್ಲಿ ಹಂಚಿಕೊಂಡಷ್ಟು, ಅವಳು ಕಲಿಯುತ್ತಿದ್ದ ಸಮಾಜಶಾಸ್ತ್ರದ ಬಗ್ಗೆ ಅವಳಿಂದ ತಿಳಿದುಕೊಳ್ಳುವ ಅವಕಾಶ ಬಂದಿರಲಿಲ್ಲ. ಇದನ್ನೆಲ್ಲ ಅವಳ ಹತ್ತಿರ ಹೇಳಿದರೆ ಅವಳಿಗೆಷ್ಟು ನೋವಾಗುವುದು ಎಂಬುದೂ ನನಗೆ ಗೊತ್ತಿತ್ತು. ಏನೂ ಹೇಳದಿರುವುದು ಉತ್ತಮ ಅಂತಲೂ ಅನಿಸಿತು.

ನಾನು ಪ್ರಿಯಾ ಜತೆ ಮಾತಾಡುವುದು ಅಪರೂಪವಾಯಿತು. ಅವಳು ಪಾಪ, ಹುಡುಕಿಕೊಂಡು ಬಂದು ಹತ್ತಿರ ಕೂರುತ್ತಿದ್ದಳು. ಆದರೆ, ನಾನು ಕೆಲ ವಿಷಯಗಳನ್ನು ಎಂದಿಗೂ ಆಕೆಯೊಡನೆ ಮಾತಾಡಲಾರೆ ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ನಮ್ಮ ನಡುವೆ ವಿಷಯಗಳ ಕೊರತೆ ಕಾಡುತ್ತಿತ್ತು.

*****************

ಈಗ ಪ್ರಿಯಾ ಎಲ್ಲಿದ್ದಾಳೆ, ಏನು ಮಾಡುತ್ತಾಳೆ - ಒಂದೂ ಗೊತ್ತಿಲ್ಲ. ಈ ಕಥೆ ಕೇಳಿದರೆ ನೀನು ಖಂಡಿತಾ ನಗುವುದಿಲ್ಲವೆಂದು ಗೊತ್ತು ನನಗೆ. ಹಾಗಂತ, ಒಂದು SORRYಯಲ್ಲಿ ಎಲ್ಲ ಸರಿಹೋಗುತ್ತಿತ್ತಲ್ಲಾ, ಸುಮ್ಮನೆ ಕಾಂಪ್ಲಿಕೇಟ್ ಮಾಡಿಕೊಂಡೆ ನಾನು ಅಂತ ನಿನಗೆ ಅನಿಸಿದರೆ, ಮತ್ತೆ SORRY, ನಿನಗರ್ಥವಾಗುವುದಿಲ್ಲ ಅದು ಅನ್ನಬೇಕಾಗುತ್ತದೆ ನಾನು.

ನನ್ನ 'ಇಂಟಲೆಕ್ಚುವಲ್' ಮಾತುಗಳು ಪ್ರಿಯಾಗೆ ನೋವುಕೊಟ್ಟಿದ್ದು ನಾನೆಂದೂ ಮರೆತಿಲ್ಲ. ಹಾಗೆಯೇ ಅವಳ ಮನಸಿಗನಿಸಿದ್ದು ಅವಳು ಮಾಡಿದಾಗ ನನಗೆ ಇಷ್ಟವಾಗದಿದ್ದದ್ದು ಕೂಡಾ ಮರೆತಿಲ್ಲ. ಜಾತಿ-ಭಾಷೆ-ದೇಶಗಳ ಎಲ್ಲೆ ಮೀರಿ ಬೆಳೆಯಲಿದ್ದ ಬಾಂಧವ್ಯ ಕಾರಣವೇ ಇಲ್ಲದೆ ಕುಲಗೆಟ್ಟಂತಿತ್ತು. ಆದರೆ ಬಲವಾದ ಕಾರಣವಿತ್ತು ಅಲ್ಲಿ.

ಈಗ ಈ ನೋವಿನ ಬಿಂದು ದಾಟಿ ಬಲುದೂರ ಬಂದಿದ್ದೇನೆ. ಜಗತ್ತು ತುಂಬ ವಿಶಾಲ ಮತ್ತು ಉದಾರ, ಹಾಗಾಗಿ ಎಲ್ಲಾ ರೀತಿಯ ಗೆಳೆಯ ಗೆಳತಿಯರ ದೊಡ್ಡ ನಿಧಿಯೇ ಇದೆ ನನ್ನ ಜತೆ. ಅವರ್ಯಾವ ಜಾತಿಯೋ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ಜಾತಿಯ ಬಗ್ಗೆ ಚರ್ಚೆಗಳು ಅಲ್ಲಿ ಬರುವುದೇ ಇಲ್ಲ. ಬಂದರೂ ನಾನದನ್ನು ಮುಂದುವರಿಸುವುದಿಲ್ಲ. ಮೊನ್ನೆ ಮೊನ್ನೆಯಷ್ಟೇ ಎಲ್ಲೋ ಓದಿದ ಮಾತು, 'There are good people doing good things and evil people doing bad things, but, for good people to do bad things, it takes Religion...' ನೂರಕ್ಕೆ ನೂರು ಸತ್ಯವೆಂದು ನನಗೆಂದೋ ಅರಿವಾಗಿದೆ.

ಬದುಕೇ ಹೀಗೆ ಗೆಳತಿ, ಯಾವುದೋ ಇನ್ಯಾವುದನ್ನೋ ನೆನಪಿಸುತ್ತದೆ. ನೀನು ನನ್ನ ಜತೆ ನಮ್ಮೂರಿಗೆ ಬರುತ್ತೇನೆಂದಿದ್ದು ಹೇಗೆ ಹಳೆಯ ಗಾಯವೊಂದನ್ನು ನೆನಪಿಸಿತು ನೋಡು. ಗಾಯ ನಿಜಕ್ಕೂ ಬಹಳ ಹಳೆಯದೇ, ಮಾಗಿದೆ, ಕಲೆ ಮಾತ್ರ ಸ್ವಲ್ಪ ಉಳಿದಿದೆ. ನಾನೂ ಆಗಿದ್ದ ಹಾಗೆ ಈಗಿಲ್ಲ. ಸಂಬಂಧವೆಂದರೆ ಬರಿಯ ಮಿದುಳಿಂದಲ್ಲ, ಹೃದಯವೂ ಇರುತ್ತದೆ, ಹಾಗೆಯೇ ಬರಿಯ ಹೃದಯದಿಂದಲ್ಲ, ಮಿದುಳೂ ಇರುತ್ತದೆ ಎನ್ನುವುದು ಸದಾ ನೆನಪಲ್ಲಿಟ್ಟಿದ್ದೇನೆ. ಆಡುವ ಮಾತಿಗಿಂತ ಬದುಕುವ ರೀತಿ ಹೆಚ್ಚು ಅರ್ಥಪೂರ್ಣವಾಗಿರಬೇಕೆಂದು ನನಗೆ ಪ್ರಿಯಾಳ ಜತೆಯ ಗೆಳೆತನ ಕಲಿಸಿಕೊಟ್ಟಿತು. ಅವಳು ಯಾವತ್ತೂ ನನ್ನ ಮನಸಲ್ಲಿ ಎಚ್ಚರಿಕೆಯ ಗಂಟೆಯಂತೆ, ನಾ ಕೊಂದ ಒಂದು ಹೂವಿನ ಹಾಗೆ ಬದುಕಿರುತ್ತಾಳೆ.

Saturday, June 16, 2007

ಕೊನೆಯ ಚಿತ್ರ



ಇವತ್ತು ತಾರಸಿಯ ಮೇಲೆ ನಿಂತು ಸುಮ್ನೇ ಆಕಾಶ ನೋಡ್ತಾ ಇದ್ದೆ...





ನೋಡ್ತಾ ಇದ್ದ ಹಾಗೇ ಆಕಾಶ ಕಪ್ಪು ಕವಿಯತೊಡಗಿತು...




ಆಕಾಶ ಎಲ್ಲ ಕಪ್ಪು ಮೋಡ ತುಂಬಿಕೊಂಡು ಮಳೆ ಬರುವ ಹಾಗೆ ಕಾಣಿಸುತ್ತಿದೆ...



ಆದರೆ ಈ ತುಂಟ ಮರ ಮಾತ್ರ ಮೋಡ ಸೀಳಿ ತೂರುವ ಸೂರ್ಯನ ಬೆಳಕಿನ ಜತೆ ಚಿನ್ನಾಟವಾಡ್ತಿದೆ...





ಕತ್ತಲಾಗುತ್ತಿದೆ, ಮಳೆಯೂ ಬರಬಹುದು, ಇವತ್ತಿಗೆ ಇದೇ ಕೊನೆಯ ಚಿತ್ರ...



Thursday, June 7, 2007

ಭೂಮಿಗೊಬ್ಬ ಚಂದ್ರ...

ಹೀಗೇ ಒಂದು ಮೋಡಕವಿದ ಬೇಸರದ ರಾತ್ರಿ ತಾರಸಿಯಲ್ಲಿ ಕುಳಿತು ಬಾನು ದಿಟ್ಟಿಸುತ್ತೇನೆ.

ಅಲ್ಲೆಲ್ಲೋ ಇರಬಹುದಾದ ನನ್ನ ನಕ್ಷತ್ರವನ್ನು, ನನ್ನ ತಾರಾಪುಂಜವನ್ನು, ನನ್ನ ರಾಶಿಯನ್ನು, ನನ್ನ ಆಕಾಶಗಂಗೆಯನ್ನು, ನನ್ನ ಕ್ಷೀರಪಥವನ್ನು ಹುಡುಕಲು ಪ್ರಯತ್ನಿಸುತ್ತೇನೆ.

ಬಾನ ತುಂಬಾ ಕರಿಮೋಡ ಕವಿದು ಮಳೆಯ ಆಶೆ ಹುಟ್ಟಿಸುತ್ತಿವೆ... ಯಾವಾಗಲೋ ಎಲ್ಲೋ ಕೇಳಿದ ’ಆಸೆ-ಮೋಸ’ ಪದ ನೆನಪಾಗುತ್ತದೆ...

ಮಳೆ ಯಾಕೋ ಕಣ್ಣುಮುಚ್ಚಾಲೆಯಾಡುತ್ತಿದ್ದಾಳೆ.

ಮೋಡಗಳ ನಡುವಿನಿಂದ ಒಬ್ಬ ಹಳದಿ ಚಂದ್ರ ಆಗಷ್ಟೆ ಇಣುಕಿದ್ದಾನೆ.

ಕೇಳುತ್ತಾನೆ, ’ಒಬ್ಬಳೇ ಕುಳಿತು ಆಕಾಶದ ಚಂದ ನೋಡುತ್ತಿದ್ದೀಯಾ?’

’ಹೌದು, ನಿಂಗೇನು ಕಷ್ಟ?’ ನನ್ನ ಕೊಂಕು ನುಡಿ.

’ಸುಮ್ನೆ ಕೇಳಿದೆ ಅಷ್ಟೆ’ ಅಂತಾನೆ ಚಂದ್ರ.

’ನೀನು ಹಾಗೆ ಕೇಳಲಿ ನನ್ಹತ್ರ ಅಂತ ಒಬ್ಬಳೇ ಕುಳಿತಿದ್ದೇನೆ’ - ನೇರ ಉತ್ತರ ನೀಡುವ ಇಚ್ಛೆಯಿಲ್ಲದ ನಾನು ಮಾತು ಹಾರಿಸುತ್ತೇನೆ.

’ಸರಿ ಕೇಳಿ ಆಯಿತಲ್ಲ, ಇನ್ನೇನು?’ ಅವನ ಕೆಣಕು ನುಡಿ.

’ಇನ್ನೇನು ಅಂದ್ರೆ? ನಿನ್ಹತ್ರ ಕೇಳು ಅಂತ ನಾನಂದ್ನಾ?’ ಮತ್ತೆ ನನ್ನ ಕೊಂಕು.

’ಬಾಯಿಬಿಟ್ಟು ಹೇಳದಿದ್ರೂ ನಾನು ಕೇಳಲಿ ಅಂತ ಅಂದ್ಕೊಂಡಿದ್ದು ನಿಜ ತಾನೇ?’ ದಿವ್ಯಜ್ಞಾನಿಯಂತೆ ಪೋಸು ಕೊಟ್ಟು ಕೇಳುತ್ತಾನೆ ಚಂದ್ರ.

ಇಲ್ಲವೆನ್ನಲಾರೆ, ನಾನೇ ನನ್ನ ಬಾಯಾರ ಹೇಳಿದೆನಲ್ಲ ಹಾಗೆಂದು?

ಹೌದು ಎಂದು ಯಾಕೆನ್ನಲಿ? ಹಾಗೇನು ಅಂದುಕೊಂಡಿರಲಿಲ್ಲವಲ್ಲ ನಾನು?

ಇವತ್ತು ಆಕಾಶ ನೋಡುತ್ತ ಕುಳಿತುಕೊಳ್ಳುತ್ತೇನೆ, ಅಲ್ಲಿ ಈ ಚಂದ್ರ ಬರುತ್ತಾನೆ ಅಂತ ಕನಸು ಬಿದ್ದಿತ್ತೆ ನನಗೆ, ಅವನ ಬಗ್ಗೆ ಏನಾದರೂ ಅಂದುಕೊಳ್ಳಲಿಕ್ಕೆ?

ಅವನ ವಾದಕ್ಕೆ ಪ್ರತಿವಾದ ಬೆಳೆಸುವ ಇರಾದೆ ಬದಿಗಿಟ್ಟು ಸುಮ್ಮನೆ ನಗುತ್ತೇನೆ.

ಚಂದ್ರನೂ ನಗುತ್ತಾನೆ. ತಾನು ಗೆದ್ದೆನೆಂಬ ಹೆಮ್ಮೆ ಕಾಣುತ್ತದೆ ದೂರದಿಂದ ಕಾಣಿಸುವ ಅವನ ಹೊಳೆವ ಮುಖದಲ್ಲಿ.

’ನನ್ನ ಗೆಳೆಯನಾಗುತ್ತೀಯಾ’ ಕೇಳುತ್ತೇನೆ.

ಸಂತಸದಿಂದ ಒಪ್ಪಿಕೊಳ್ಳುತ್ತಾನೆ ಚಂದ್ರ.

ಇರುಳು ಕಳೆದು, ಮತ್ತೆ ಹಗಲಾಗಿ ಮತ್ತೆ ರಾತ್ರಿ ಬರುತ್ತದೆ. ಮತ್ತೆ ನಾನು ತಾರಸಿಗೆ ಹೋಗುತ್ತೇನೆ. ಮತ್ತೆ ಅಲ್ಲಿ ಚಂದ್ರ ಕಾಣಿಸುತ್ತಾನೆ.

ಮತ್ತೆ ಮಾತಾಡುತ್ತೇವೆ. ಸೂರ್ಯನಡಿ ಇರುವ ಎಲ್ಲಾ ವಿಷಯ. ಸುಮ್ಮಸುಮ್ಮಗೆ ಕಾಡುತ್ತಾನೆ ಅವನು. ನಾನೇನು ಕಡಿಮೆಯೆ? ನಾನೂ ಕಾಡುತ್ತೇನೆ.

ಹೀಗೇ ಒಂದು ದಿನ ಯಾಕೋ ಉದಾಸೀನವಾಯಿತು. ರಾತ್ರಿ ತಾರಸಿಗೆ ಹೋಗಿರಲಿಲ್ಲ... ಮನೆಯ ಕಿಟಿಕಿಯಲ್ಲಿ ಪರದೆಯೆಡೆಯಿಂದ ಬೆಳಕು ಇಣುಕುತ್ತಿದೆ..! ಏನೆಂದು ನೋಡಿದರೆ, ಅಲ್ಲಿ ನಿಂತು ಹೊರಗೆ ಬಾರೆಂದು ಕರೆಯುತ್ತಾನೆ ಚಂದ್ರ..!!!

ಎಷ್ಟೊಂದು ಜನ ತಾರೆಯರು ಇವನನ್ನು ಸುತ್ತುವರಿದಿರುತ್ತಾರೆ, ನನ್ನನ್ನೊಬ್ಬಳನ್ನೇ ಯಾಕೆ ಕರೆಯುತ್ತಾನೆ? ಪ್ರಶ್ನೆ ಅವನಿಗೆ ಕೇಳುತ್ತೇನೆ. ಉತ್ತರ ಸಿಗುವುದಿಲ್ಲ.

ಹಾಗೇ ಅವನ ಜಗತ್ತಿನ ಬಗ್ಗೆ, ಅವನೊಳಗಿನ ಜಗತ್ತಿನ ಬಗ್ಗೆ ಮಾತಾಡುತ್ತಾನೆ. ನಾನು ಮನಸೆಲ್ಲ ಕಿವಿಯಾಗುತ್ತೇನೆ.

ನನಗೂ ಅವನ ಜತೆ ತುಂಬಾ ಮಾತಾಡಬೇಕೆನಿಸುತ್ತದೆ. ಆದರ್ಯಾಕೋ ಅಂತರ್ಯಾಮಿಯಾಗಿರುವ ಮೌನ ಮಾತಾಡಲು ಬಿಡುವುದಿಲ್ಲ.

ಅವನು ಚತುರ ಮಾತುಗಾರ. ಕೇಳುತ್ತ ಕುಳಿತರೆ ಸಮಯದ ಗಾಡಿ ಸಾಗಿಹೋಗುವುದೇ ತಿಳಿಯುವುದಿಲ್ಲ.

*********

ಚಂದ್ರನ ಜತೆ ಜಗಳಗಳೂ ಆಗುತ್ತವೆ. ಅವನಿಗೆ ಬೇಕಾದ ಸಮಯ ನಾನು ಕೊಡಲಿಲ್ಲ, ಅವನಿಗೆ ಬೇಕಾದಹಾಗೆ ವರ್ತಿಸಲಿಲ್ಲ, ಅವನು ಅಂದುಕೊಂಡ ಹಾಗೆ ನಾನಿರಲಿಲ್ಲ - ಇತ್ಯಾದಿ ದೂರುಗಳು.

ಪುಟ್ಟ ಮಗುವಿಗೆ ಸಮಾಧಾನಿಸುವಂತೆ ಅವನಿಗೆ ಸಮಾಧಾನಿಸುತ್ತೇನೆ. ಅವನು ಸಮಾಧಾನಗೊಳ್ಳುತ್ತಾನೆ.

*********

ಚಂದ್ರ ಯಾಕೆ ನನ್ನ ಜತೆ ಅಷ್ಟು ಮಾತಾಡುತ್ತಾನೆಂಬುದಕ್ಕೆ ಉತ್ತರ ಹುಡುಕುವ ಯತ್ನ ಮುಂದುವರಿದಿವೆ.. ಆದರೆ ಅವೆಲ್ಲ ಕತ್ತಲಲ್ಲಿ ಕಣ್ಮುಚ್ಚಿಕೊಂಡು ಹುಡುಕಿದಂತಾಗುತ್ತವೆ.

ಇನ್ನೊಮ್ಮೆ ಚಂದ್ರನಿಗೆ ಕೇಳುತ್ತೇನೆ.. ’ಯಾಕೆ ಅಷ್ಟು ಹಚ್ಚಿಕೊಂಡಿದ್ದೀಯ’ ಅಂತ.

ಅವನು ಕಳ್ಳನಗುವಿನ ಜತೆ ಮಗುವಿನಂತೆ ಹೇಳುತ್ತಾನೆ.. ’ನಾನು ಬದುಕಿನಿಂದ ಕದಿಯುತ್ತೇನೆ, ಕದ್ದ ಬುತ್ತಿ ತಿಂದು ಬದುಕುತ್ತೇನೆ’ ಅಂತ.

ತಾನು ಕಳ್ಳನೆಂದು ಪ್ರಾಮಾಣಿಕವಾಗಿ ಹೇಳಿಕೊಳ್ಳುವ ಚಂದ್ರನನ್ನು ನಂಬುವುದೇ ಬಿಡುವುದೇ ಅಂತ ಯೋಚನೆ ಶುರುವಾಗುತ್ತದೆ ನನಗೆ... ಜತೆಗೇ ನಂಬುವುದು ಅಂದರೇನು ಅಂತ ಪ್ರಶ್ನೆಯೂ ಮೂಡುತ್ತದೆ.
ಎಲ್ಲ ಪ್ರಶ್ನೆಗಳ ನಡುವೆ, ಸಿಗದ ಉತ್ತರಗಳಾಚೆಗೆ, ವಿವಿಧ ಬಣ್ಣಗಳನ್ನು ತುಂಬಿಕೊಂಡು, ಕಹಿಯನ್ನು ದೂರವಿಟ್ಟು, ಸಿಹಿಭರವಸೆಗಳ ಜತೆ, ಮಾತು ಮುಂದುವರಿಯುತ್ತದೆ.

*********

ನನಗೆ ಹತ್ತಿರವಾಗಿ ಚಂದ್ರ ಇಂದು ಹಾದುಹೋಗಲಿದ್ದಾನೆ. ಹತ್ತಿರದಿಂದ ಅವನನ್ನು ನೋಡಲಿದ್ದೇನೆ, ಮಾತಾಡಿಸುತ್ತೇನೆ.

*********

ಇವತ್ತು ಚಂದ್ರ ಬಂದಿದ್ದಾನೆ. ನನ್ನ ಹತ್ತಿರವಿದ್ದಾನೆ. ಆದರೆ ಯಾಕೋ ಇವನು ದೂರದಲ್ಲಿ ನಿಂತು ನನ್ನನ್ನು ಕಾಡುತ್ತಿದ್ದ ಚಂದ್ರನಲ್ಲವೆನಿಸುತ್ತದೆ.
ಗಾಬರಿಗೋ.. ನಾಚಿಕೆಗೋ.. ಕೆಂಪಾಗಿದ್ದಾನೆ ಚಂದ್ರ. ಮತ್ತೆ ನನ್ನ ಅನುಭವಕ್ಕೆ, ಅಳತೆಗೆ ನಿಲುಕದ ಇನ್ನೇನೋ ತಣ್ಣಗಿನ ಭಾವನೆ ಅವನಲ್ಲಿ ಕಾಣಿಸುತ್ತದೆ.

ದೂರದಲ್ಲಿದ್ದಾಗ ಅವನು ಚೆಲ್ಲುತ್ತಿದ್ದ ಬೆಚ್ಚನೆ ಬೆಳದಿಂಗಳು ಹತ್ತಿರ ಬಂದಾಗ ಕಾಣೆಯಾಗಿದೆ.. ಚಂದ್ರ ತಣ್ಣತಣ್ಣಗೆ ಮಾತು ಮರೆತು ಕುಳಿತಿದ್ದರೆ ನನಗೂ ಮಾತು ಬೇಡವೆನಿಸುತ್ತದೆ.

ಅವನ ಕಣ್ಣುಗಳ ಅಪರಿಚಿತ ಭಾವ ತಣ್ಣನೆ ಕೊಲ್ಲುತ್ತದೆ.

*************
ಚಂದ್ರ ಆಚೆ ಹೋದಮೇಲೆ ಅದ್ಯಾಕೋ ಹೇಳತೀರದ ನೋವು ಕಾಡುತ್ತದೆ. ಅದೇನೆಂದು ವಿವರಿಸಲಾಗದೆ ಶಬ್ದಗಳು ಪರದಾಡುತ್ತವೆ..

ಮತ್ತೆ ಹೋಗಿ ತಾರಸಿಯಲ್ಲಿ ಕುಳಿತುಕೊಳ್ಳುತ್ತೇನೆ. ಚುಕ್ಕಿ ಕಾಣುವವೇ ನೋಡುತ್ತೇನೆ. ಹಬ್ಬಿದ ಕತ್ತಲಿಗೆ ನೀಲಿ ಆಕಾಶದ ಕರಿಮೋಡ ಸಾಥ್ ನೀಡುತ್ತದೆ. ಆದರೆ ನನಗೆ ಅನಿಸುತ್ತದೆ, ಆ ಮೋಡ ಮುಂಗಾರು ಮಳೆ ತರುವುದಿಲ್ಲ ಅಂತ.

ಹೀಗೇ ಮೌನದ ಜತೆ ಗೆಳೆತನದಲ್ಲಿ ಸ್ವಲ್ಪ ಹೊತ್ತು ಕಳೆಯುತ್ತದೆ.

ಹಾಗೇ ಕರಿಮೋಡಗಳ ದಿಬ್ಬಣ ನೋಡುತ್ತ ಕುಳಿತವಳಿಗೆ ಅಚಾನಕ್ ಚಂದ್ರ ಕಾಣಿಸುತ್ತಾನೆ.

ಇವನು ಅದೇ ಚಂದ್ರ, ಆದರೆ ಅವನಲ್ಲ. ಅವನಲ್ಲಿ ನಾ ಕಂಡ ಅವನಿಲ್ಲ.

ಚಂದ್ರನ ಬಣ್ಣ ಮತ್ತೆ ಬದಲಾಗಿದೆ. ಈಗ ಅವನು ಕಪ್ಪು-ಬಿಳುಪಿನ ಮಿಶ್ರಣವಾಗಿದ್ದಾನೆ.



ಕರಿಮೋಡಗಳ ಕೋಟೆ ತನ್ನ ಸುತ್ತ ಕಟ್ಟಿಕೊಂಡು ಹೊರಗಿಣುಕುವ ಚಂದ್ರ ಅದ್ಯಾಕೋ ಕ್ರೂರಿಯಾಗಿ ಕಾಣುತ್ತಾನೆ.
*************

Tuesday, June 5, 2007

ಹೊಸ ಕನಸು ಹುಟ್ಟಿದೆ!!!

ಈ ಕನಸಿಗೆ ೨೦ ದಿನ ತುಂಬಿತು. ೪೦೦ಕ್ಕೂ ಹೆಚ್ಚು ಹಿಟ್ಟುಗಳನ್ನು ದಾಖಲಿಸಿಕೊಂಡು ನಾಗಾಲೋಟದಲ್ಲಿ ಸಾಗುತ್ತಿರುವ ಈ ಕನಸನ್ನು ಕಂಡರೆ (ಸ್ವಲ್ಪ) ಖುಷಿಯಾಗುತ್ತದೆ!

ಈ ಕನಸಿನ ಹೆಸರು ಚಿತ್ರಕವನ ...

ಜನ ಯಾಕೆ ಬ್ಲಾಗ್ ಬರೆಯುತ್ತಾರೆ?

ಬ್ಲಾಗ್ ಬರೆಯುವ ಜನ ಎಂಥವರಿರುತ್ತಾರೆ? ಅವರಿಗೇನಿಷ್ಟವಾಗುತ್ತದೆ? ಯಾಕಿಷ್ಟವಾಗುತ್ತದೆ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದ ಹಾದಿಯಲ್ಲಿ ಸುಮ್ಮನೇ ಹುಟ್ಟಿಕೊಂಡ ಕೂಸು ಚಿತ್ರಕವನ.

ಇಲ್ಲಿ ಪ್ರತಿವಾರ ಒಂದೊಂದು ಚಿತ್ರವನ್ನು ಹಾಕಲಾಗುತ್ತದೆ. ಚಿತ್ರಗಳು ಇದರ ನಿರ್ವಹಣ ತಂಡದ ಸದಸ್ಯರು ಸೆರೆಹಿಡಿದವಾಗಿರುತ್ತವೆ/ ಸೃಷ್ಟಿಸಿದವಾಗಿರುತ್ತವೆ. ಈ ಚಿತ್ರದ ಮೇಲೆ ಬರಹ/ ಕವನಗಳನ್ನು ಬರೆದು ಹಾಕುವ ಅವಕಾಶ ಇಲ್ಲಿ ಭೇಟಿ ನೀಡುವವರಿಗಿದೆ.


ವಿವಿಧ ರೀತಿಯ ದೃಷ್ಟಿಕೋನಗಳು... ಒಂದೇ ದೃಷ್ಟಿಕೋನದ ಬೇರೆ ಬೇರೆ ರೀತಿಯ ಅಭಿವ್ಯಕ್ತಿಗಳು... ವಿವಿಧ ಭಾಷೆಗಳು... ವಿವಿಧ ಶೈಲಿಗಳು... ವಿವಿಧ ಪೂರ್ವಾಗ್ರಹಗಳು... ವಿಭಿನ್ನ ನೋಟಗಳು.. ಇವೆಲ್ಲವನ್ನೂ ಸೆರೆಹಿಡಿಯುವ ಒಂದು ಯತ್ನ ಚಿತ್ರಕವನ.


**********


ಮೊದಲ ಎರಡು ವಾರ ಈ ಮಗುವಿಗೆ ಅಂಗಿ ಹೊಲಿಸಿ ತೊಡಿಸಿ ಅಲಂಕರಿಸುವುದರಲ್ಲಿ ಕಳೆಯಿತು... ಬೇರೆ ಬೇರೆ ಲೇಔಟ್-ಗಳು, ಬಣ್ಣಗಳು...


ಬಂದು ಹೋದವರ ಲೆಕ್ಕವಿಡಲು ಇಲ್ಲಿರಿಸಿರುವ ಲೆಕ್ಕಿಗ ಹೇಳುತ್ತಾನೆ, ದಿನಕ್ಕೆ ಸರಾಸರಿ ೨೦ ಜನ ಇಲ್ಲಿ ಬಂದು ಹೋಗ್ತಾರಂತೆ...(ಅವನಿಗೆ ನಿರ್ವಾಹಕರೈವರನ್ನು ಲೆಕ್ಕಿಸದಿರಲು ಸೂಚಿಸಲಾಗಿದೆ).

ಬಂದು ಹೋಗುವವರು ಅಷ್ಟಿರುವಾಗ, ಕವನಗಳ ಸಂಖ್ಯೆ ಕಡಿಮೆಯೆನಿಸುತ್ತಿದೆಯಲ್ಲ? ಇದರ ಮರ್ಮವೇನೆಂದು ತಿಳಿಯಲಿಲ್ಲ. ಅದಕ್ಕೆ, ಭೇಟಿಗರಿಗೆ ಅನಿಸಿದ್ದು ಹೇಳಲು, ಸಲಹೆ-ಸಂದೇಶ- ಅಭಿವ್ಯಕ್ತಿಗಳಿಗೋಸ್ಕರವೇ ಒಂದು ಮಾಧ್ಯಮವೂ ಇಲ್ಲಿ ಹಾಕಿದ್ದಾಗಿದೆ...

ಹಲವು ಗೆಳೆಯ-ಗೆಳೆತಿಯರು ಬೆನ್ನು ತಟ್ಟಿ ಒಳ್ಳೆ ಪ್ರಯತ್ನವೆಂದರು.. ಇನ್ನು ಹಲವರು ಸಾವಿರ ಬ್ಲಾಗುಗಳಲ್ಲಿ ಇದೂ ಒಂದಾಗಬಹುದೆಂಬ ಆತಂಕ ತೋರಿಸಿದರು...

ಚಿತ್ರಕವನ ದ ನಿರ್ವಹಣ ತಂಡದ ಸದಸ್ಯರು ಯಾರೂ ಇಲ್ಲಿಯವರೆಗೆ ಒಬ್ಬರು ಇನ್ನೊಬ್ಬರನ್ನು ಭೇಟಿಯಾಗಿಲ್ಲದಿರುವುದು ಒಂದು ವಿಶೇಷ. ಅನಿಕೇತನ್ ಟೋಕಿಯೋದಲ್ಲಿದ್ದರೆ, ಭಾಗವತ ಅಮೆರಿಕಾದಲ್ಲಿ. ಕಿಶೋರ್ ಉತ್ತರಪ್ರದೇಶದ ವಾರಣಾಸಿಯಲ್ಲಿದ್ದರೆ, ಶ್ರೀನಿಧಿ ಮತ್ತು ನಾನು ಬೆಂಗಳೂರಿನಲ್ಲಿ.

ಸಂಪರ್ಕದಲ್ಲಿ ಅವಾಗಾವಾಗ ಉಂಟಾಗುವ ವ್ಯತ್ಯಯ, ಭೌಗೋಳಿಕವಾಗಿ ಇರುವ ದೂರ - ನಮ್ಮ ಉತ್ಸಾಹಕ್ಕೆ ಭಂಗ ತಂದಿಲ್ಲ. ಕನಸು ಕಟ್ಟುವ ಹೊಸ ಉತ್ಸಾಹದಿಂದ ಹೊರಟಿದ್ದೇವೆ.

ದಿನದಿನಕ್ಕೂ ಈ ಕನಸು ಬೆಳೆಯುತ್ತಾ ಹೋಗಬೇಕು...

ಬೆಳೆಯುತ್ತದೆ ಕೂಡಾ...
.
.

Sunday, May 27, 2007

ಅವರವರ ಭಾವಕ್ಕೆ...?

ದಿನಾ ಬೆಳಿಗ್ಗೆ ಈ ಹೆಗ್ಗಣ ನನ್ನ ಕಣ್ಣಿಗೆ ಬೀಳುತ್ತದೆ.

ತನ್ನ ಬಿಲದಿಂದ ಮೆಲ್ಲ ಹೊರಗಿಣುಕಿ ರಸ್ತೆಯುದ್ದಕ್ಕೂ ನೋಡುತ್ತದೆ.

ಬೇಗನೆದ್ದು ಕೆಲಸಕ್ಕೆ ಹೋಗುವವರು, ಪೇಪರ್ ಹಾಕುವ ಹುಡುಗರು, ಕೊಳವೆ ಬಾವಿಯಿಂದ ನೀರು ಹಿಡಿಯಲು ಓಡಾಡುವವರು ಬಿಟ್ಟರೆ ಬೇರ್ಯಾರೂ ಇರುವುದಿಲ್ಲ.

ಮತ್ತು ಇವರೆಲ್ಲ ಹೆಗ್ಗಣ ದಿನಾ ನೋಡುವವರೇ. ಅವರಿದ್ದರೆ ಹೆಗ್ಗಣ ಅಷ್ಟು ಕೇರ್ ಮಾಡುವುದಿಲ್ಲ. ಅಪರಿಚಿತರ್ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡು ತನ್ನ ಬಿಲದಾಚೆಗೆ ಕಾಲಿಡುತ್ತದೆ.

ನಂತರ ತನ್ನದೇ ರಾಜ್ಯವಿದು ಎನ್ನುವಂತೆ ಅತ್ತಿತ್ತ ಓಡಾಡುತ್ತದೆ.

ನೂರು ಫೀಟ್ ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ಬದಿಯಲ್ಲಿ ತನಗೆ ಬೇಕಾದುದು ಆರಿಸಿಕೊಳ್ಳುತ್ತದೆ. ಮತ್ತೆ ಭಕ್ತಿಯಿಂದ, ಇದು ತನ್ನ ದಿನ ನಿತ್ಯದ ಕೆಲಸವೋ ಎಂಬಂತೆ ತಿನ್ನುತ್ತದೆ.

ಆ ತಿನ್ನುವ ಕೆಲಸದಲ್ಲಿ ನನಗೆ ಹಸಿವು ಕಾಣುವುದೇ ಇಲ್ಲ.

ನನಗೆ ಈ ಹೆಗ್ಗಣ, ಆ ರಸ್ತೆಯ ಶುಚಿತ್ವದ ಜವಾಬ್ದಾರಿ ಹೊತ್ತ ಜಾಡಮಾಲಿಯ ಹಾಗೆ ಕಾಣುತ್ತದೆ.

ಅದೆಂದೂ ಇದೇ ರಸ್ತೆಯ ಬೇರೆ ಹೆಗ್ಗಣಗಳ ಜತೆ ಬೆರೆತುದು ನಾನು ನೋಡಿಯೇ ಇಲ್ಲ.

ಬೇರೆ ಹೆಗ್ಗಣಗಳು ಸಮಯದ ಪರಿವೆಯೇ ಇಲ್ಲದೆ ಎಲ್ಲಂದರಲ್ಲಿ ಸುತ್ತಾಡುತ್ತವೆ. ಈ ಹೆಗ್ಗಣ ಹಾಗಲ್ಲ. ಟೈಮ್ ಟೇಬಲ್ ನಿಯತ್ತಾಗಿ ಕಾಪಾಡಿಕೊಳ್ಳುತ್ತದೆ.

ಬಹಳಷ್ಟು ಸಲ ಬೇರೆ ಬೇರೆ ಹೆಗ್ಗಣಗಳು ರಸ್ತೆಯಲ್ಲಿ ಗಾಡಿಗಳ ಚಕ್ರದಡಿ ಸಿಕ್ಕಿ ಅಪ್ಪಚ್ಚಿಯಾಗಿ, ಆಮೇಲೆ ಕಾಗೆಗಳಿಗೆ ಆಹಾರವಾದುದು ಕಣ್ಣಾರೆ ನೋಡಿದ್ದೇನೆ. ಕಣ್ಣು ಮುಚ್ಚಿಕೊಳ್ಳುತ್ತಲೇ, ಆ ಹೆಣ ಈ ಹೆಗ್ಗಣದ್ದಾಗಿರದಿರಲಿ ಅಂತ ಪ್ರಾರ್ಥಿಸಿದ್ದೇನೆ.

ಮಾರನೇ ದಿನ ಎಂದಿನಂತೆಯೇ ಬಿಲದಿಂದ ಹೊರಗೆ ಬಂದು ಓಡಾಡುವ ಹೆಗ್ಗಣಕ್ಕಾಗಿ ಕಾದು ಕುಳಿತು ಅದನ್ನು ನೋಡಿ ಸಂತಸ ಪಟ್ಟಿದ್ದೇನೆ.

ಅದು ರಸ್ತೆಯಲ್ಲಿ ತಿರುಗಾಡುವ ಹೊತ್ತು ಏನೆಂಬುದು ನನಗೆ ನಿಖರವಾಗಿ ಗೊತ್ತು.
ಅಷ್ಟು ಹೊತ್ತಿನ ನಂತರ ಅದು ಅದರ ಬಿಲದೊಳಗೆಯೇ ಇರುತ್ತದೆಯೆ ಅಥವಾ ಇನ್ನೆಲ್ಲಿಯಾದರೂ ಹೋಗುತ್ತದೆಯೇ ಅನ್ನುವುದು ನನ್ನ ಪಾಲಿಗೆ ರಹಸ್ಯ.

ಹೆಗ್ಗಣಕ್ಕೆ ಎಷ್ಟು ನಾಚಿಕೆ ಅಂದರೆ, ನಾನು ಕ್ಯಾಮರಾ ಹಿಡಿದು ಕಾಯುತ್ತಿದ್ದರೆ ಅದು ಹೇಗೋ ಅದಕ್ಕೆ ಗೊತ್ತಾಗಿಬಿಡುತ್ತದೆ. ಹೊರಗೆ ಬರುವುದೇ ಇಲ್ಲ...
ಅಥವಾ, ಪಬ್ಲಿಸಿಟಿ ಬೇಡ ಎಂಬ ಇರಾದೆಯೋ ಏನೋ? ನನಗೆ ಗೊತ್ತಿಲ್ಲ.

ಆದರೆ ತುಂಬಾ ಜಾಣ ಹೆಗ್ಗಣ, ಶಿಸ್ತಿನ ಹೆಗ್ಗಣ.
ಅದಕ್ಕೆ ತನ್ನನ್ನು ತಾನು ಹೇಗೆ ಕಾಪಾಡಿಕೊಳ್ಳಬೇಕೆಂದು ಗೊತ್ತು.
ಬೇರೆಯವರಿಗೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೇಗೆ ಬದುಕಬೇಕೆಂದು ಗೊತ್ತು.
........
ಕೆಲವು ರೀತಿಯ ಮನುಷ್ಯರನ್ನು ಹೆಗ್ಗಣಕ್ಕೆ ಹೋಲಿಸುತ್ತಾರಲ್ಲ?
ಈ ಒಳ್ಳೆ ಹೆಗ್ಗಣ ನೋಡಿದ ಮೇಲೆ ಆ ಹೋಲಿಕೆ ಸುಳ್ಳೆನಿಸುತ್ತಿದೆ.
ಮತ್ತೆ ಎಲ್ಲಾ ಹೆಗ್ಗಣಗಳೂ ಹೀಗೇ ಇರಬಹುದೇನೋ ಅಂತ ಸಂಶಯ ಬರುತ್ತದೆ.

ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು ಎನ್ನುವುದು ಹಲವಾರು ಬಾರಿ ಅನುಭವವಾಗಿದೆ. ಆದರೂ ಈ ಹೆಗ್ಗಣ ಸತ್ಯವೆಂದು ನಂಬಬೇಕು ಅನಿಸುತ್ತಿದೆ.

Saturday, May 19, 2007

. . . . . ಏನರ್ಥ...?

ಮುತ್ತಿರುವ ಸಾಗರದಿ ಮುಳುಗಹೊರಟಿರುವಾಗ

ನೀರಿಗಂಜುವ ಮನಕೆ ಏನರ್ಥ...?

ಮುಂದಿರುವ ಬೆಳಕನ್ನೆ ನೋಡುತ್ತ ನಡೆವಾಗ

ಬೆಂಬಿಡದ ನೆರಳಿಗೆ ಏನರ್ಥ...?

ಮನಸು ಮಾತಿನ ಶರಣು ಹೋಗಹೊರಟಾಗೆಲ್ಲ

ಬಿಡದೆ ಕಾಡುವ ಮೌನಕೇನರ್ಥ...?

Saturday, May 12, 2007

ಕಡಲು ಮುನಿದಿದೆ...


ರಾಶಿ ರಾಶಿ ನೊರೆಯ ಚೆಲ್ಲಿ ಸದಾ ನಗುವ ಕಡಲಿದು...
ಇಂದು ಏಕೊ ಅರಿಯೆ ನಾನು, ನನ್ನ ಮೇಲೆ ಮುನಿದಿದೆ...

ಕಪ್ಪೆ ಚಿಪ್ಪು ದಡಕೆ ದೂಡಿ ಸಂಭ್ರಮಿಸುವ ಅಂಬುಧಿ..
ಮೌನದಲ್ಲಿ ಮಿಡುಕುತಿಹುದು, ಯಾಕೊ? ನನಗೆ ತಿಳಿಯದು...

ನೀಲಿ ಬಾನು ಎಲ್ಲೋ ಕಾಣೆ, ಬೆಳಕು ಎಲ್ಲೂ ಕಾಣದು
ಕರಿಯ ಮೋಡ, ಬೂದಿ ಮೋಡ, ದುಗುಡ ತುಂಬಿಕೊಂಡಿದೆ...

ಮುಳುಗು ಹಾಕೊ ಮುನ್ನ ನಿಶೆಗೆ ಸಪ್ತವರ್ಣದುಡುಗೆಯ
ತೊಡಿಸಿ ನಲಿವ ರವಿಗೆ ಇಂದು ಮಂಕು ಕಟ್ಟಿಕೊಂಡಿದೆ...

ಸ್ವರ್ಣ ವರ್ಣ ನೀರ ಮೇಲೆ ಚೆಲ್ಲಿ ಆಟವಾಡುವ
ಇವನು ಇಂದು ಯಾಕೋ ಕಾಣೆ, ಮುದುಡಿ ತಣ್ಣಗಾಗಿಹ...

ದೋಣಿಯೆರಡು ಮರಳ ಮೇಲೆ ಸುಮ್ಮನಾಗಿ ನಿಂತಿದೆ
ಕಡಲ ಮನಸು ಅರಿತ ಮೀನು ದಿಕ್ಕುಗೆಟ್ಟು ಅಲೆದಿವೆ...

oooooooooooo

ಬತ್ತದಿರುವ ಜಲದ ರಾಶಿ, ಏಕೆ ನಿನಗೆ ಬೇಸರ?
ಮಾತನಾಡು ಎಂದಿನಂತೆ, ಸಹಿಸಲಾರೆ ನೀರವ...

ಮುಗಿಯದಾಳವಿರುವೆ ನೀನು, ನಿನ್ನ ಹರವನಳೆಯಲಾರೆನು
ಕುದಿಯುತಿರುವೆ, ಏಕೆ ಮೌನ? -ಮರ್ಮ ತಿಳಿಯದಾದೆನು

ಮೋಡ ತೊಲಗಬೇಕು, ರವಿಯು ಮತ್ತೆ ನಲಿಯಬೇಕಿದೆ,
ಮೌನ ಮುರಿಯಬೇಕು, ಮತ್ತೆ ನೀನು ಮೊರೆಯಬೇಕಿದೆ...

ಬೆಳ್ಳಿ ನೊರೆಯು ಚೆಲ್ಲಬೇಕು, ನಿನ್ನ ನಗುವು ಬೇಕಿದೆ..
ಕಪ್ಪೆ ಚಿಪ್ಪು ದಡಕೆ ದೂಡಿ ನೀನು ಮೆರೆಯಬೇಕಿದೆ...

oooooooooooooooo

Tuesday, May 8, 2007

ಎಲ್ಲಾ ಚಿತ್ರಗಳಲ್ಲೂ ಒಂದೊಂದು ಕಥೆಯಿದೆ...

ಪುಟ್ಟ Hide & Seek ಬಿಸ್ಕೆಟ್ ತಿಂತಾ ಕೂತಿದ್ದ. ನಾನು ಕ್ಯಾಮರಾ ಹಿಡಿದುಕೊಂಡು ಪಕ್ಕಕ್ಕೆ ಹೋಗಿದ್ದೇ, 'ಫೋಟೋ ಬೇಡ, ಆನು ಅಂಗಿ ಹಾಕಿದ್ಲೆ' (ಫೋಟೋ ಬೇಡ, ನಾನು ಅಂಗಿ ಹಾಕಿಲ್ಲ) ಅಂತ ಓಡಿದ. ಹಿಂದಿನಿಂದ ನಾನೂ ಓಡಿದೆ. ಇನ್ನೇನು ಬಾಗಿಲು ಮುಚ್ಚಿಕೊಂಡು ಅಡಗುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಕ್ಯಾಮರಾಕ್ಕೆ ಸಿಕ್ಕಿಬಿದ್ದ...!!

ನಮ್ಮ ಹಳೆ ಹಳ್ಳಿ ಮನೆ, ಬಾಗಿಲು ಗೋಡೆ ಇತ್ಯಾದಿ ಕಾಣಿಸುತ್ತಿವೆ.. :-)


ಪ್ರಯೋಗವೆಂದುಕೊಂಡು ತೆಗೆದಿದ್ದೇನೆ, ನನ್ನ ಹೊಸ ಕ್ಯಾಮರಾದಲ್ಲಿ. ತಾಳ್ಮೆಯಿಂದ ಪೋಸ್ ಕೊಟ್ಟಿದ್ದಾನೆ ಚಿನ್ನಿ. ನಮ್ಮನೆಯ ದೇವರ ಕೋಣೆ. ದೇವರ ದೀಪದ ಬೆಳಕಿನ ಜತೆಗೆ soft flash ಉಪಯೋಗಿಸಿದ್ದೇನೆ. ಹೇಗಿದೆ? ಪರವಾಗಿಲ್ವಾ?


ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ!!! ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

Monday, April 30, 2007

ಹೆತ್ತವರ ಹುಟ್ಟಿದ ದಿನ...

3 ವರ್ಷಗಳ ಹಿಂದಿನ ಮಾತು. ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನಪ್ಪ ಆಪರೇಷನ್ ಗೋಸ್ಕರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಾನು ಅಪ್ಪನ ಜತೆಗಿದ್ದೆ.

ಈ ವರೆಗೆ ನಡೆದ ಆಪರೇಷನ್ ಗಳ ಚರಿತ್ರೆಯ ಒಳ್ಳೆಯ ಮತ್ತು ಕೆಟ್ಟ ಉದಾಹರಣೆಗಳು ನನ್ನೆದುರಿಗಿದ್ದವು. ಆಶಾವಾದವಿತ್ತು ನನ್ನಲ್ಲಿ, ಜತೆಗೆ ಭಯವೂ ಇತ್ತು. ಭಯವನ್ನು ತೋರಿಸಿಕೊಳ್ಳದೆ ನಗುನಗುತ್ತ ಅವರೆದುರು ಇರಬೇಕಿದ್ದುದು ನನಗೆ ಅನಿವಾರ್ಯವಾಗಿತ್ತು.

ಬೆಳಿಗ್ಗೆ ಆಪರೇಷನ್ ಥಿಯೇಟರ್ ಒಳಗಡೆ ಹೋಗುವಾಗ ಕಣ್ತುಂಬ ನೀರು ತುಂಬಿಕೊಂಡು ದೇವರನ್ನು ಪ್ರಾರ್ಥಿಸುತ್ತ ಮಂಕು ಮನಸಿನಿಂದಲೇ ಹೋಗಿದ್ದರು ಅಪ್ಪ. ಸಂಜೆಯ ತನಕ ನನಗೆ ಕ್ಷಣ-ಕ್ಷಣವೂ ಯುಗ. ಆಪರೇಷನ್ ನಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ... ಏನಾಗುವುದೋ... ಈಗ ಏನಾಗಿದೆಯೋ, ಅಪ್ಪ ಹೇಗಿದ್ದಾರೋ.. ಇತ್ಯಾದಿ ಚಿಂತೆ.

ಕೊನೆಗೂ ಘಂಟೆ ಆರಾಯಿತು. ಆಸ್ಪತ್ರೆ ನಿಯಮ ಪ್ರಕಾರ ಯುನಿಫಾರ್ಮ್, ಗ್ಲೌಸ್ ಇತ್ಯಾದಿ ಧರಿಸಿ ಅಪ್ಪನನ್ನು ನೋಡಲು ಐ.ಸಿ.ಯು.ಗೆ ಹೋದೆ. ಅಡಿಯಿಂದ ಮುಡಿಯವರೆಗೆ ನಡುಗುತ್ತ ಮಲಗಿದ್ದ ಅಪ್ಪ, ನನ್ನನ್ನು ನೋಡಿಯೂ ನೋಡದವರಂತೆ ವರ್ತಿಸಿದರು.

ಮುತ್ತಿಕ್ಕುತ್ತಿದ್ದ, ಆತಂಕ-ಭಯಗಳನ್ನು ಒತ್ತಟ್ಟಿಗಿಟ್ಟು 'ಅಪ್ಪಾ' ಎಂದು ಕರೆದೆ.... ಯುನಿಫಾರ್ಮ್ ನಲ್ಲಿದ್ದೆನಲ್ಲ, :-) ಯಾರೋ ನರ್ಸ್ ಬಂದಿರಬೇಕೆಂದು ಸುಮ್ಮನಿದ್ದರಂತೆ ಅಪ್ಪ. ಕರೆದಾಗ ನೋಡಿದರು, ಗುರುತಿಸಿದರು, ನಕ್ಕರು, ಜತೆಗೆ ಅತ್ತರು.

ಆಘಾತ, ಸಂತಸವೆಲ್ಲ ತಣಿದು ತಹಬಂದಿಗೆ ಬಂದ ಮೇಲೆ ಅಪ್ಪ ನನಗೆ ಹೇಳಿದರು - 'ನೀನು ನನಗೆ ಮಗಳಲ್ಲ, ತಾಯಿ'.

ಮನಸಿನ ವ್ಯಾಪಾರಗಳು ಒಂದೊಂದ್ಸಲ ತುಂಬಾ ವಿಚಿತ್ರ... ಅದ್ಯಾಕೋ ಏನೋ, ಅಪ್ಪ ಅಷ್ಟು ದುರ್ಬಲರಾಗುವುದು, ಅಳುವುದು ಇಷ್ಟವಾಗಲಿಲ್ಲ. ತಾಯಿಯ ಸ್ಥಾನ ನೀಡಿದ್ದು ಹಿಡಿಸಲಿಲ್ಲ... ಮಗಳಾಗೇ ಇರಬೇಕೆನಿಸಿತ್ತು..!!! ಆ ಕ್ಷಣ ಅಸಹನೀಯ ಸಂಕಟವಾಗಿತ್ತು...


*******

ಮೊನ್ನೆ ಅಪ್ಪನ 59ನೇ ಜನ್ಮದಿನ. ನಾನು ಫೋನ್ ಮಾಡಿ ಶುಭಾಶಯ ಹೇಳಿದ ಮೇಲಷ್ಟೆ ಅಪ್ಪನಿಗೆ ತನ್ನ ಜನ್ಮದಿನದ ನೆನಪು. (ಖುಷಿಯಾದರೂ ಸಾಧಾರಣವಾಗಿ ಅದನ್ನು ತೋರಿಸಿಕೊಳ್ಳುವ ಪಾರ್ಟಿ ಅಲ್ಲ ನಮ್ಮಪ್ಪ... :-) )

ಅಪ್ಪ-ಅಮ್ಮನಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಮಾತಲ್ಲಿ ಹೇಳಕ್ಕಾಗತ್ತಾ? ಹೇಳುವುದು ಮೂರ್ಖತನ ಎನಿಸುತ್ತದೆಯಾದರೂ ಅದರ ಅವಶ್ಯಕತೆ ಒಮ್ಮೊಮ್ಮೆ ಇರುತ್ತದೆ. ಅಪ್ಪ- ಅಮ್ಮನ ಜನ್ಮದಿನದಂದು ಎಲ್ಲಿದ್ದರೂ ನೆನಪಿಸಿಕೊಂಡು ಶುಭಾಶಯ ಹೇಳುವುದು ಇದಕ್ಕೋಸ್ಕರ ನಾನು ಕಂಡುಕೊಂಡ ಉಪಾಯಗಳಲ್ಲೊಂದು.

ಈಗ ಒಂದು ಕೆಟ್ಟ ಕುತೂಹಲ ನನಗೆ... :-)

ಎಲ್ಲರೂ ಅಪ್ಪ-ಅಮ್ಮನಿಗೆ ಜನ್ಮದಿನದ ಶುಭಾಶಯ ಹೇಳ್ತಾರಾ?

Friday, April 27, 2007

ಪ್ರೀತಿ ಮತ್ತು ಬದುಕು

ಅವರಿಬ್ಬರೂ ಪ್ರೀತಿಸಿದರು, ಮದುವೆಯಾಗಬೇಕೆಂದುಕೊಂಡರು. ಅವಳಿಲ್ಲದೆ ಬದುಕುವುದಿಲ್ಲ ಎಂದು ಅವನೆಂದ. ಅವಳೂ ಅದನ್ನೇ ಅಂದಳು. ಆದರೆ ಹಿರಿಯರ ಜತೆ ಮಾತಾಡುವ ಹಂತದಲ್ಲಿ ಜಾತಿ ಪೆಡಂಭೂತವಾಗಿ ನಿಂತಿತು. ಅವಳ ಅಪ್ಪ ನೀನೇನಾದರೂ ಈ ಮದುವೆ ಮಾಡಿಕೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿದ.

ಕಟ್ಟಿಕೊಂಡಿದ್ದ ಪ್ರೀತಿಯ ಕಲ್ಪನೆ ವಾಸ್ತವವನ್ನು ಎದುರಿಸುವಷ್ಟು ಶಕ್ತಿವಂತವಿರಲಿಲ್ಲ. ಆಕೆ ಮಣಿದಳು. ಬದುಕು ಬಂದ ಹಾಗೆ ಸ್ವೀಕರಿಸಿದಳು. ಈಗ ಆಕೆ ಮದುವೆಯಾಗಿ ಸಂತೋಷವಾಗಿದ್ದಾಳೆ. ಆತ ಅವನ ಬದುಕಲ್ಲಿ ಚೆನ್ನಾಗಿದ್ದಾನೆ.

*********************

ಆತ ಲಿಂಗಾಯತ, ಆಕೆ ಮನೆಯಲ್ಲಿ ಮರಾಠಿ ಮಾತಾಡುತ್ತಾಳೆ. (ಜಾತಿ ಇಲ್ಲಿವರೆಗೆ ನಂಗೂ ಗೊತ್ತಿಲ್ಲ). ಅಂತರ್ಜಾತೀಯ ವಿವಾಹ, ಪ್ರೇಮ ವಿವಾಹ. ಗೆಳೆಯರ ಬೆಂಬಲ, ಸಹಾಯ, ಹಾರೈಕೆಗಳೊಡನೆ ಸರಳವಾಗಿ ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ಹಿಂದಿನ ದಿನ ಸಂಜೆ ಮದುಮಗ-ಮದುಮಗಳ ಜತೆ ಶಾಪಿಂಗ್ ಮಾಡುತ್ತ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು. ಮದುಮಗ ಒಂದೇಸಮನೆ, ಲೇಟ್ ಆಯ್ತು, ಮಠಕ್ಕೆ ಹೋಗಬೇಕು, ಗುರುಗಳನ್ನು ನೋಡಬೇಕು ಅಂತ ಪೇಚಾಡುತ್ತಿದ್ದ.

ಕೇಳಿ ಕೇಳಿ ಸಾಕೆನಿಸಿದಾಗ ನಾನು ಕೇಳಿದೆ, ಯಾಕೆ ಮಠಕ್ಕೆ ಈ ಅಪರಾತ್ರಿಯಲ್ಲಿ ಅಂತ. ಆತ ಹಾರಿಕೆಯ ಉತ್ತರವಿತ್ತ. ನನಗೆ ಕುತೂಹಲ ಹೆಚ್ಚಿತು. ಮೆಲ್ಲನೆ ಮದುಮಗಳಿಗೆ ಕೇಳಿದರೆ, ಆಕೆ ಬಿದ್ದು ಬಿದ್ದು ನಗಲಾರಂಭಿಸಿದಳು, 'ಅವನನ್ನೇ ಕೇಳು, ಹೇಳ್ತಾನೆ' ಅಂದಳು. 'ಕೇಳಿದೆ, ಹೇಳಿಲ್ಲ' ಎಂದೆ. 'ಹೇಳಿದ್ರೆ ಬೈತೀಯ ಅಂತ ಹೇಳಿಲ್ಲ ಅನ್ಸತ್ತೆ, ನಂಗೆ ಲಿಂಗಧಾರಣೆ ಮಾಡ್ಬೇಕಲ್ಲ, ಅದಕ್ಕೆ ಕರಕೊಂಡು ಹೋಗ್ತಿದಾನೆ' ಅಂದಳು. 'ನಿಂಗ್ಯಾಕೆ ಲಿಂಗಧಾರಣೆ' ಅಂತ ಕೇಳಿದೆ. 'ನನ್ನನ್ನ ಅವನ ಮನೆಯಲ್ಲಿ ಒಪ್ಕೋಬೇಕು ಅಂದ್ರೆ ನಾನು ಅವನ ಜಾತಿಗೆ ಸೇರಬೇಕು, ಅದಕ್ಕೆ' ಅಂತ ನಕ್ಕಳು. ಅವರೆಣಿಸಿದಂತೆ ನಾನು ಬೈಯಲಿಲ್ಲ...

*********************

ಆತ ಕ್ರಿಸ್ಚಿಯನ್, ಆಕೆ ಹಿಂದು. ಮದುವೆಯಾಗುವುದಲ್ಲಿದ್ದಾರೆ. ಆತನ ಮನೆಯಲ್ಲಿ ಹುಡುಗಿಯನ್ನು ಒಪ್ಪಿದ್ದಾರೆ. ಮದುವೆಗೆ ಯಾರ ಅಡ್ಡಿಯೂ ಇಲ್ಲ. ಆದರೆ, ರಿಜಿಸ್ಟರ್ ವಿವಾಹ ಆತನ ಮನೆಯವರಿಗೆ ಇಷ್ಟವಿಲ್ಲ. ಅದಕ್ಕೆ ಚರ್ಚ್ ನಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ಚರ್ಚಿನಲ್ಲಿ ಮದುವೆಯಾಗಬೇಕಾದರೆ ಹುಡುಗಿ ಬಾಪ್ಟಿಸ್ಟ್ ದೀಕ್ಷೆ ತೆಗೆದುಕೊಂಡಿರಬೇಕು, ಇಲ್ಲದಿದ್ದರೆ ಮದುವೆಯಾಗುವಹಾಗಿಲ್ಲ ಎಂಬ ನಿಯಮ ಎದುರಾಗಿದೆ.

ಆಕೆ ದೀಕ್ಷೆಗೆ ಒಪ್ಪಿಕೊಂಡಿದ್ದಾಳೆ. ಈಗ ಆತ ಆಕೆಗೆ ಬಾಪ್ಟಿಸ್ಟ್ ದೀಕ್ಷೆ ಕೊಡಿಸಲು ಸಿದ್ಧತೆ ನಡೆಸಿದ್ದಾನೆ. 'ನಾನೇನ್ ಅವ್ಳಿಗೆ ಹಿಂಗೇ ಇರು ಹಂಗೇ ಇರು ಅಂತ ಹೇಳಲ್ಲರಿ, ಮದುವೆ ಆಗ್ಬೇಕಲ್ಲ ಅದ್ಕೆ ಈ ಅಡ್ಜಸ್ಟ್ ಮೆಂಟ್', ಅಷ್ಟೆ...' ಅಂತ ಹಲ್ಲುಕಿರಿಯುತ್ತಾನೆ.

*********************

Caste is a Social Reality. But it'z Individuals who form the Society.

Friday, April 20, 2007

ವಿದಾಯದ ಒಂದು ಕ್ಷಣ

ಮಳೆ ಹನೀತಾ ಇದೆ ಹೊರಗಡೆ, ಮನಸು ಕೂಡಾ ಯಾಕೋ ಒದ್ದೆಯಾಗಿದೆ...!!
......................................................

ಅ೦ದೂ ಹೀಗೇ ಇತ್ತು...
ಬಿರುನೆಲದ ಸುಡುಬಯಲ ತು೦ಬಾ
ಮಳೆಹಾತೆ ಹಾರಿತ್ತು... ಸೂರ್ಯ ಕಪ್ಪಿಟ್ಟಿತ್ತು...
ಕ್ಷಣಗಳಲ್ಲಿ ಬಾನು ಬಾಯ್ಬಿರಿದಿತ್ತು...

ನಿನ್ನ ಪ್ರೀತಿಯ ಹಾಗೆ
ತೊಟ್ಟಿಕ್ಕುತ್ತಿದ್ದ ಮಳೆಹನಿ
ನಿನ್ನ ಕಣ್ಣೀರಿನ ಹಾಗೇ ಭೋರ್ಗರೆಯ ತೊಡಗಿತ್ತು...
ಭೂಮಿ-ಆಕಾಶ ಒ೦ದಾಗಿತ್ತು

ನಿನ್ನ ಅಳುವಿಗೆ, ಬಿಕ್ಕುವಿಕೆಗೆ
ನನ್ನ ಮೌನ, ಮಿಸುಕಾಟ,
ಕಣ್ಣಿ೦ದ ಹೊರಬಾರಲೊಲ್ಲದ ಹನಿ
ಸ೦ಗಾತಿಯಾಗಿತ್ತು

ನಾ ಬೊಗಸೆಯೊಡ್ಡಿ ಹಿಡಿದ
ನಾಲ್ಕೇ ನಾಲ್ಕು ಪ್ರೀತಿ ಹನಿಗಳ
ನಿನ್ನ ಬೊಗಸೆಗೆ ಚೆಲ್ಲುವ ನನ್ನ ಆಶೆಗೆ
ಹೃದಯದ ಭಾರ ತಡೆಯಾಗಿತ್ತು

ತೂಕ ತಪ್ಪಿ ಕಣ್ಣ೦ಚಿನಿ೦ದ ಜಾರಿದ ಕ೦ಬನಿಗೆ
ರಾಚುತ್ತಿದ್ದ ಮಳೆಹನಿಯೇ
ಮತ್ತೆ ಸ೦ಗಾತಿಯಾಗಿತ್ತು...
ಸಾಂತ್ವನ ಹೇಳಿತ್ತು...

ನಿನ್ನ ಕಣ್ಣೀರಿನಿಂದಲೋ
ಸುರಿಯುತ್ತಿದ್ದ ಮಳೆಯಿಂದಲೋ
ನನ್ನೊಳಗೆ ಸುರಿಯುತ್ತಿದ್ದ ಮಳೆಯಿಂದಲೋ
ಮನಸೆಲ್ಲ ಒದ್ದೆಯಾಗಿತ್ತು...

....................................................

ಮಿಡಿಯುತ್ತಿದ್ದ ವೇದನೆಗಳಿಗೆ
ಪ್ರೀತಿಮಳೆ ತ೦ಪು ಚೆಲ್ಲಿ
ಕೊಚ್ಚೆ ಕೆಸರು ಕಳೆದು ಹೋಗಿ
ತಿಳಿನೀರು ಉಳಿದಿತ್ತು...
ಅರಿವಿನ ಕಡಲು ಸಣ್ಣಗೆ ಹುಟ್ಟಿತ್ತು...
ಸುಡುನೆಲದಲ್ಲಿ ಸುರಿದ ಜಡಿಮಳೆ ನಸುನಗುತ್ತಿತ್ತು...

Saturday, April 14, 2007

ಈ ಬರಹಕ್ಕೆ ಹೆಸರಿಲ್ಲ...

ಅಡಿಗರು ಹೇಳಿದಂತೆ... 'ಮರದೊಳಡಗಿದ ಬೆಂಕಿಯಂತೆ' ಎಲ್ಲೋ ಮಲಗಿತ್ತು ಬೇಸರ...
........................................................
ಬೇಸರ ಹೋಗಲು ಏನ್ಮಾಡ್ಬೇಕೋ ತಿಳಿಯದೆ ಹಾಗೇ ಸುಮ್ಮನೆ ಅಲ್ಲಿ ಇಲ್ಲಿ ಸುತ್ತಾಡ್ತಾ ಇದ್ದೆ.
'ಸುರ್' ಚಿತ್ರ ದ ಲಕ್ಕಿ ಆಲಿ ಹಾಡು... ' जाने क्या डूंढ्ता है यॆ तॆरा दिल, तुझ्कॊ क्या चाहियॆ जिंदगी... रास्तॆ ही रास्तॆ हैं कैसा है यॆ सफर...' ಮತ್ತೆ ಮತ್ತೆ ಮನದೊಳಗಿ೦ದ ಹೊರಟು ಗುನುಗಾಗಿ ಹೊರಬರುತ್ತಿತ್ತು..
........................................................

ಹಾಗೇ ಹೋಗ್ತಾ ಹೋಗ್ತಾ 'ತುಳಸೀವನ' ಸಿಕ್ತು...
ಹಳೆಯ, ಮರೆತ ಕವನಗಳು... ಯಾವುದೋ ಲೋಕದಲ್ಲಿ ಮೈಮರೆಸಿತು.

ಅಡಿಗರ 'ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿದೋಣಿ' ...

'ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು'

ಜಗತ್ತಲ್ಲಿ ಬಹುಶ: ಅನುಭವಿಸದೇ, ಯೋಚಿಸದೇ, ವಿಶ್ಲೇಷಿಸದೇ ಬಿಟ್ಟ ಭಾವನೆಗಳು, ಯೋಚನೆಗಳು, ವಿಚಾರಗಳು... ಯಾವುದೂ ಇಲ್ವೇನೋ... Perhaps JK was very much right when he said 'we are second hand people'....? Or is there anything left unexplored?

Lord Tennyson ಹೇಳ್ತಾನೆ, 'All experience is an arch wherethrough gleams that untravelled world whose margin fades for ever and for ever when I move'... ಇದೆರಡು contradicting, ಅಲ್ವಾ?
........................................................

ದಾರ್ಶನಿಕರು, ವೇದಾ೦ತಿಗಳು, ಕವಿಗಳು, ಹಿರಿಯರು - ಅವರ ಬದುಕಿನ ದರ್ಶನವನ್ನು, ಅನುಭವ ಸಾರವನ್ನು ಜಗತ್ತಿಗೆ ಹೇಳಿದ್ದಾರೆ... ಬಹುಶ: ಯಾರೋ ಕೇಳಬೇಕು ಎಂಬ ಇರಾದೆ ಅವರಿಗೆ ಇದ್ದಿರಬಹುದು, ಅಥವಾ ಇಲ್ಲದಿದ್ದಿರಬಹುದು. ಅದು ಸೂರ್ಯನ ಬೆಳಕಿನಷ್ಟೇ, ಮಳೆಯ ತ೦ಪಿನಷ್ಟೇ ಸ್ವಾಭಾವಿಕವಾಗಿರಬಹುದು. ಅಷ್ಟು ಮಾತ್ರವಲ್ಲ, So called 'ಲಕ್ಷಣ ರೇಖೆ'ಗಳನ್ನ ಮೀರಿದ ಬದುಕಿನ ಬಗ್ಗೆಯು ಮಾತಾಡಿದ ಕವಿಗಳು, ದಾರ್ಶನಿಕರು ಕೂಡಾ ಇದ್ದಾರಲ್ಲ..?
ಆದರೆ, ಕೊನೆಗೆ ಬರುವುದು individual exploration of life... ಅವರವರ ಭಾವಕ್ಕೆ, ಅವರವರ ಬುದ್ಧಿಗೆ ನಿಲುಕುವ ಸತ್ಯಗಳನ್ನು ಕಂಡುಕೊಳ್ತಾ, ಅವರವರ ಹಾದಿಯಲ್ಲಿ ನಡೆಯುವುದೇ ಬದುಕು... ಅ೦ತ ಹೇಳ್ಬಹುದೇನೋ? ಬದುಕು ಹೀಗೇ ಇರಬೇಕು ಎಂಬ set patterns ಇದೆಯಾ? ಇರಬೇಕಾ? ನಾವು ಬದುಕಿದ್ದೇ ಬದುಕಲ್ವಾ?
........................................................
ಇವಳಿಗೇನಾಯಿತು ಇದ್ದಕ್ಕಿದ್ದಂತೆ... ಅಂದ್ಕೋತಿದೀರಾ?
ಹೀಗೇ ಅಗ್ತಿರತ್ತೆ ಒಮ್ಮೊಮ್ಮೆ, ನನ್ನೆಲ್ಲಾ ತಲೆಹರಟೆ ಬರಹಗಳ ಜತೆ ಹೀಗೇ ಒ೦ದಷ್ಟು ವೇದಾ೦ತ ಅವಾಗಾವಾಗ ಬರ್ತಿರತ್ತೆ... ಏನ್ಮಾಡಕ್ಕಾಗಲ್ಲ!! ಹೆದರ್ಕೋಬೇಡಿ... :-)

ಆದ್ರೂ ಇದ್ಯಾಕೋ ಅತಿಯಾಯ್ತೇನೋ!!! ಬ್ಲಾಗಿಂಗ್ ಕಡಿಮೆ ಮಾಡಬೇಕು.
........................................................

Wednesday, April 11, 2007

ಮತ್ತೆ ಬ೦ದಿದೆ ವಿಷು...

ಮತ್ತೆ ಬರುತ್ತಿದೆ ವಿಷು.

ಅದರ ಜತೆಗೇ ಗಾಢವಾಗಿ ಬೆಸೆದುಕೊ೦ಡ ನನ್ನ ಬಾಲ್ಯದ ನೆನಪುಗಳು...

ವಿಷು ಅ೦ದರೆ ನಮ್ಮ ಕಡೆಯ (ಕೇರಳ-ದಕ್ಷಿಣ ಕನ್ನಡದ) ಯುಗಾದಿ. ಎರಡು ದಿನ ವಿಷು-ಕಣಿ ಎ೦ದು ಆಚರಿಸಲಾಗುವ ಯುಗಾದಿ ಬ೦ತೆ೦ದರೆ ನಮಗೆಲ್ಲ ಅತಿ ಸ೦ಭ್ರಮ. ನಮ್ಮಜ್ಜ ವಿಷುವಿನ ರಾತ್ರಿ 'ಕಣಿ' (ಹೊಸ ವರ್ಷದ ಸ್ವಾಗತಕ್ಕೆ ಇಡುವ ಕಲಶ) ಇಡುತ್ತಾರೆ೦ದರೆ, ನಮಗೆಲ್ಲ ಅದಕ್ಕೆ ಗೋಸ೦ಪಿಗೆ ಹೂ, ಪಾದೆ ಹೂ, ಗೇರು ಹಣ್ಣು, ಮಾವಿನ ಹಣ್ಣು, ಚೆಕರ್ಪೆ (ಮುಳ್ಳು ಸೌತೆ), ಇತರ ಹಣ್ಣು-ಹ೦ಪಲುಗಳು - ಇತ್ಯಾದಿ ಹುಡುಕಿ ತರುವ ಉಮೇದು. ಆಮೇಲೆ ಅಜ್ಜ ತೆ೦ಗಿನಕಾಯಿ, ಕಳಶ, ಚಿನ್ನ ಇತ್ಯಾದಿಗಳನ್ನು ಸೇರಿಸಿ 'ಕಣಿ'ದೇವರನ್ನು ಅಲ೦ಕರಿಸುವಾಗ ನಾವೆಲ್ಲ ಸುತ್ತ ನೆರೆದು ಕುತೂಹಲದಿ೦ದ ನೋಡುತ್ತಿರುತ್ತಿದ್ದೆವು.

ವಿಷು-ಕಣಿಯ ದಿನ ಏನು ಮಾಡುತ್ತೇವೋ ಅದು ವರ್ಷವಿಡೀ ಮು೦ದುವರಿಯುತ್ತದೆ೦ಬ ಕಾರಣಕ್ಕೆ, ಹೊಸವರ್ಷದ ಮೊದಲ ದಿನ ನಗುನಗುತ್ತಿರಬೇಕು, ಜಗಳಾಡಬಾರದು, ಅಳಬಾರದು ಇತ್ಯಾದಿ ಅಜ್ಜ-ಅಜ್ಜಿಯ ಬುದ್ಧಿವಾದಗಳು ಕಿವಿಯ ಮೇಲೆ ಬಿದ್ದು ನೇರವಾಗಿ ತಲೆ ಸೇರಿಕೊಳ್ಳುತ್ತಿದ್ದವು... ಆಚರಣೆಯಲ್ಲೂ ಕಾಣಿಸಿಕೊಳ್ಳುತ್ತಿದ್ದವು... :-)

ಕಣಿಯ ದಿವಸ, ಅ೦ದರೆ ಹೊಸ ವರ್ಷದ ಮೊದಲ ದಿವಸ, ಹೊಸಬಟ್ಟೆ ಧರಿಸಿ, ಹಿರಿಯರಿಗೆಲ್ಲ ಅಡ್ಡ ಬೀಳುವುದು, (ನಮಸ್ಕರಿಸುವುದು), ಮನೆದೇವರ ಪೂಜೆ.. ಕುಟು೦ಬದ ಹಿರಿಯ ಮನೆಗೆ ಹೋಗಿ ಆಶೀರ್ವಾದ ತೆಗೆದುಕೊಳ್ಳುವುದು, ಅಕ್ಕಪಕ್ಕದ ಮನೆಗಳಿಗೆ, 'ಬನ'ಗಳಿಗೆ (ತೋಟಗಳಲ್ಲಿ ಕಟ್ಟುವ ಪುಟ್ಟ ಗುಡಿ, ಅದರಲ್ಲಿ ದೇವರಿರುವುದಿಲ್ಲ, ದೈವಗಳಿರುತ್ತವೆ), ದೇವಸ್ಥಾನಕ್ಕೆ ಸವಾರಿ, ನಮಸ್ಕಾರ. ಸ೦ಭ್ರಮವೋ ಸ೦ಭ್ರಮ.

ಹೊಸ ವರ್ಷದ ಹೊಸ ಅಡಿಗೆ... ನಮ್ಮ ಒಕ್ಕಲು ಕೊರಗು ತೆಗೆದುಕೊ೦ಡು ಬರುವ 'ಕೆ೦ಬುಡೆ' ( ಚೀನಿಕಾಯಿ :-) ) ಮತ್ತೆ ಅವನ 'ದಾನೆ ಅಕ್ಕೆರೆ' (ಏನು ಅಕ್ಕಾವ್ರೆ) ಎನ್ನುವ ತು೦ಬುನಗುವಿನ ಸಿಹಿಮಾತುಗಳು, ಅವನ ಹಿ೦ಬದಿಯಲ್ಲಿ ನಾಚಿಕೊ೦ಡು ನಿಲ್ಲುವ ನನಗಿ೦ತ ಸ್ವಲ್ಪ ಚಿಕ್ಕವಳಾದ ಅವನ ಮಗಳು... ಕೆಲಸದಾಕೆ ಲಚ್ಚಿಮಿ... ಹೊಸ ಸೀರೆ ಉಟ್ಟು ಬ೦ದು ದೇವರಿಗೆ, ನಮ್ಮಜ್ಜನಿಗೆ, ಅಜ್ಜಿಗೆ ನಮಸ್ಕರಿಸಿ ಒಳ್ಳೆ ಒಳ್ಳೆ ಮಾತುಗಳಲ್ಲಿ ಎಲ್ಲರಿಗೂ ಶುಭ ಕೋರುವ ಆಕೆಯ ಹಳ್ಳಿ ಮನಸು... ದೊಡ್ಡ ಮೂಗುತಿಯಿಟ್ಟು ಕಳ-ಕಳದ (cheks) ಸೀರೆಯುಟ್ಟ ಅಜ್ಜಿಯಿ೦ದ ಎಲ್ಲರಿಗೂ ಹೊಸವರ್ಷದ ಸತ್ಕಾರ...

ಏನೇನೋ ಹೇಳಿ ತಮಾಷೆ ಮಾಡಿ, ಸಿಟ್ಟು ತರಿಸಿ, ಸಮಾಧಾನ ಮಾಡಿ, ನಗೆ ತರಿಸುವ ಅಪ್ಪ, ಎ೦ದಿನ೦ತೆ ಶಾ೦ತವಾಗಿ ಮನೆಮ೦ದಿಗೆ ಬೇಕಾದುದು ಮಾಡಿಹಾಕುತ್ತ ಮೌನವಾಗಿಯೇ ಹಬ್ಬ ಆಚರಿಸುವ ಅಮ್ಮ... ಹೊಸವರ್ಷದ ದಿನವೂ ಬಿಡದೆ ನಮ್ಮಜ್ಜನಿಗೆ ಕಾಟ ಕೊಡುವ ನಾನು-ನನ್ನ ತಮ್ಮ... ಈ 'ಪಿಶಾಚಿ ಪುಳ್ಳಿ'ಗಳ 'ಉಪದ್ರ' ತಡೆದುಕೊಳ್ಳಲಾಗದೇ ಒ೦ದೆರಡು ಮಾತಾಡಿದರೂ, ಪರಿಸ್ಥಿತಿ ಸೀರಿಯಸ್ ಆಗಿ ಅಪ್ಪ ನಮಗೆ ಕ್ಲಾಸ್ ತೆಗೆದುಕೊಳ್ಳುವವರೆಗೆ ಬ೦ದಾಗ ನಮ್ಮ ರಕ್ಷಣೆಗೆ ಬರುವ ನಮ್ಮಜ್ಜ...

ಸ೦ಜೆಯಾಗುತ್ತಿದ್ದ೦ತೆಯೇ ಅದೇನೋ ಇರಿಸುಮುರಿಸು. ಮುಗಿದೇ ಹೋಯಿತಲ್ಲ ವಿಷು... ಇನ್ನು ಒ೦ದು ವರ್ಷ ಕಾಯಬೇಕಲ್ಲ ಅ೦ತ ಏನೋ ಮ೦ಕುತನ. ನಾಳೆಯಿ೦ದ ಮತ್ತೆ ಅದೇ ಏಕತಾನತೆ.. ಎನ್ನುವ ಬೇಸರ.

ವರ್ಷಗಳು ಒ೦ದೊ೦ದಾಗಿ ಉರುಳಿವೆ. ಬದುಕು ಬದಲಾಗಿದೆ. ಅಜ್ಜ-ಅಜ್ಜಿ ಈಗಿಲ್ಲ. ಊರು, ಜನ ಬದಲಾಗಿದೆ. ಆ ತು೦ಬು ಹಬ್ಬದ ವಾತಾವರಣ ಈಗಿಲ್ಲ... ಮತ್ತು ನಾನು ಅಲ್ಲಿಲ್ಲ... ನಾನು ಎಲ್ಲಿದ್ದೇನೋ ಅಲ್ಲಿ, ಆ ಊರಿನ ಹಬ್ಬಗಳನ್ನು Company ಸಿಕ್ಕಿದರೆ ಆಚರಿಸುವ, Company ಸಿಗದಿದ್ದರೆ ತಲೆ ಕೆಡಿಸಿಕೊಳ್ಳದೆ ಮನೆಯಲ್ಲಿ ಆರಾಮಾಗಿರುವ cosmopolitan culture [:-)]ಬೆಳೆಸಿಕೊ೦ಡಿದ್ದೇನೆ.

ಆ ವಿಷುವಿನ ಸ೦ಭ್ರಮದ ದಿನಗಳು ಮಾತ್ರ ಸ್ಮೃತಿಯಾಗಿ ಉಳಿದಿವೆ.

Wednesday, April 4, 2007

ಹೂಡು ಕನಸಿನ ಬಾಣ... ಆಗಸವ ಮೀರಿ ಬೆಳೆ ...

ಇದು ಓದಿ ನನ್ನ ಏನ೦ದ್ಕೋತೀರೊ ಗೊತ್ತಿಲ್ಲ... ಏನಾದ್ರು ಅ೦ದ್ಕೊಳಿ, ಪರ್ವಾಗಿಲ್ಲ... ಆದ್ರೆ ಏನ೦ದ್ಕೊ೦ಡ್ರಿ ಅ೦ತ ನ೦ಗೆ ಹೇಳಿ...!!

ತಲೆ ಉಪಯೋಗ ಮಾಡಿ ಮಾಡೋ೦ಥ ಕೆಲಸಗಳಿದ್ದಾಗ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಶುರುಮಾಡೋದು ನನ್ನ ಅಭ್ಯಾಸ.. ಹಾಗೇ ಇ೦ದು ಬೆಳಿಗ್ಗೆ ೫ಕ್ಕೆ ಎದ್ದೆ. ಹಾಗೆ ಎದ್ದಿದ್ದೇ ತಡ, ತಲೆಯಲ್ಲಿ ಏನೇನೋ ಪು೦ಖಾನುಪು೦ಖವಾಗಿ ಹರಿಯಕ್ಕೆ ಶುರುವಾಯ್ತು... ಸರಿ, ಲ್ಯಾಪ್ ಟಾಪ್ ಓಪನ್ ಮಾಡಿ ಕುಟ್ಟಿದ್ದೇ ಕುಟ್ಟಿದ್ದು, ಕುಟ್ಟಿದ್ದೇ ಕುಟ್ಟಿದ್ದು...

ನ೦ಗಿಷ್ಟವಾಗಿದ್ದು ದಪ್ಪ ಅಕ್ಷರಗಳಲ್ಲಿದೆ...

----------------------------------------
ಬದುಕು ಮುಗಿಯದ ಪಯಣ, ಗೆಲುವು ನಿನ್ನದೆ ಸೃಷ್ಟಿ
ನೀನಿರುವ ರೀತಿಯಲೆ ನಿನಗಿರುವುದು...
ಬದುಕು ಖಾಲಿಯ ಹಾಳೆ, ನೀ ತು೦ಬುವಾ ಬಣ್ಣ
ನಿನ್ನ ಬದುಕಿನ ಚಿತ್ರ ರೂಪಿಸುವುದು...


ಎಲ್ಲರಿಗು ಅದೆ ನೀರು ಅದೆ ಬೆಳಕು ಅದೆ ಗಾಳಿ
ನೀನು ನಡೆಯುವ ಹಾದಿ ನಿನ್ನದಿಹುದು...
ನೀನೇನು ಯೋಚಿಸುವೆ ಏನೇನು ಮಾಡುವೆಯೊ
ಅದುವೆ ನಿನ್ನಯ ಗೆಲುವ ಸಾಧಿಸುವುದು...

ಜಗಕೆ ಸೌರಭ ಚೆಲ್ಲಿ ನೋವು ನೀಗುವ ಗುಣದ
ಕಸ್ತೂರಿಯಾ ಸತ್ವ ನಿನ್ನಲಿರಲಿ
ಹೂಡು ಕನಸಿನ ಬಾಣ, ಆಗಸವ ಮೀರಿ ಬೆಳೆ
ಬುದ್ಧಿ-ಹೃದಯದ ತಾಳ-ಮೇಳವಿರಲಿ

ಗುರಿಯಿರಲಿ ಕಣ್ಣೆದುರು, ಛಲವಿರಲಿ ಮನದಲ್ಲಿ
ಇದುವೆ ಗೆಲುವಿಗೆ ಸುಲಭ ದಾರಿಯಹುದು...
ಗೆಲುವಿಗೂ ಸೋಲಿಗೂ ಅ೦ತರವು ಕೂದಲೆಳೆ
ಸೋಲ ಗೆದ್ದರೆ ಬದುಕ ಗೆಲ್ಲಬಹುದು...

ನಭಕೆ ಮುತ್ತಿಗೆಯಿಟ್ಟು ಸೂರ್ಯನನು ಹಿಡಿವಾಗ
ಕಾಲಕೆಳಗಿನ ಹೂವು ನರಳದಿರಲಿ...
ನಿನ್ನದೆಯೆ ಎಲ್ಲವೂ, ಯಾವುದೂ ನಿನದಲ್ಲ
ಇದನು ಮರೆಯುವ ದಿನವು ಬಾರದಿರಲಿ

ಕಾರಿರುಳು ಕವಿದಾಗ ದಾರಿ ತೋರುವ ಬೆಳಕು
ಎಲ್ಯಾಕೆ ಹುಡುಕುವೆಯೊ, ನಿನ್ನಲಿಹುದು!!

ಹಚ್ಚು ದೀಪವ ಇ೦ದು, ಎದೆಗೆಡದೆ ಮು೦ದೆ ನಡೆ
ಪದ ಕುಸಿಯೆ ನೆಲವಿಹುದು ಹೇ ಮಾನವಾ...!!

--------------------------------------
Never say no to life...

Monday, April 2, 2007

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

Saturday, March 31, 2007

ಹೊಸ ನಾಡು

ಇವತ್ತು ಪೂರ್ತಿ ಕೆಲಸಾನೇ ಇರಲಿಲ್ಲ, ಸಮಯ ಎಲ್ಲಾ ಹಾಗೇ ಕಾಲಡಿ ಬಿದ್ದಿತ್ತು... ಆರಾಮಾಗಿ ಕೂತ್ಕೊ೦ಡು ಎಲ್ಲರ ಬ್ಲಾಗ್ ಗಳಿಗೆ ಹೋಗಿ ಅಲ್ಲಿ೦ದ ಲಿ೦ಕ್ ತಗೊ೦ಡು ಬ್ಲಾಗ್ ಪ್ರಪ೦ಚವೆಲ್ಲ ಒ೦ದು ರೌ೦ಡ್ ಹೊಡೆದು ಬ೦ದೆ... ಸುಸ್ತು ಹೊಡೆದುಬಿಟ್ಟೆ.

ವಿಧ ವಿಧದ ಬ್ಲಾಗ್ ಗಳು... ಬಣ್ಣ ಬಣ್ಣದ ಕಲ್ಪನೆಗಳು.. ಚರ್ಚೆಗಳು... ಸದುದ್ದೇಶಗಳು... ತಮಾಷೆ... ಪಟಾಕಿ...

ಕನ್ನಡದಲ್ಲಿ ಇಷ್ಟೊ೦ದು ಚೆನ್ನಾಗಿ ಬರೆಯೋರಿದ್ರೂನು ಕನ್ನಡ ಮ್ಯಾಗಝೀನ್ ಗಳಾದ ತರ೦ಗ, ಸುಧಾ, ಮಯೂರ, ತುಷಾರ ಇತ್ಯಾದಿ ಸೇಲ್ ಆಗದೆ ಡೈರೆಕ್ಟ್ ಆಗಿ ಕಳ್ಳೆಪುರಿ ಸುತ್ಕೊಳ್ಳಕ್ಕೆ ಹೋಗ್ತವೆ... ಬರೆಯೋರಿದಾರೆ, ಓದೋರಿಲ್ಲ ಅ೦ತಾನಾ ಅರ್ಥ? ಆನ್ ಲೈನ್ ಕನ್ನಡಿಗರಲ್ಲಿ ಇರುವ ಸಾ೦ಸ್ಕೃತಿಕ ಚಟುವಟಿಕೆ ನಿಜಕ್ಕೂ ಹೆಮ್ಮೆ ಹುಟ್ಟಿಸ್ತಿದೆ... ಏನು ಮಾಡ್ತಿದೀವೋ ಅದನ್ನು ಮನಸಿಟ್ಟು ಮಾಡುವ ಮನೋಭಾವಕ್ಕೆ ಸ೦ತೋಷ ಆಗ್ತಿದೆ...

ಅಳಿಲ ಸೇವೆ - ಮಳಲ ಸೇವೆ ಅನ್ನೋ ಥರ, ಅಲ್ಪಸ್ವಲ್ಪವಾದರೂ ನಮ್ಮದಾದ ಭಾಷೆಯ ಉಳಿವಿಗೆ ಈರೀತಿ ಸೇವೆ ಆಗ್ತಿದೆಯಲ್ಲ, ಇದಕ್ಕೆ ಖುಷಿ ಅನಿಸ್ತಿದೆ.

ನಮ್ಮ ಜಗಲಿ ಭಾಗವತರು ತಮ್ಮ ಪ್ರೊಫೈಲ್ ನಲ್ಲಿ ಹಾಕಿಕೊ೦ಡ ಹಾಗೆ...
'ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು...
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ...
ಕಟ್ಟುವೆವು ನಾವು, ಹೊಸ ನಾಡೊಂದನು, ರಸದ ಬೀಡೊಂದನು....'

ಅ೦ತರ್ಜಾಲದಲ್ಲಿ ಹೊಸ ನಾಡು ಕಟ್ಟಿರುವ ಎಲ್ಲಾ ಆನ್ ಲೈನ್ ಕನ್ನಡಿಗರಿಗೂ ಈ ಖುಷಿ ಸಮರ್ಪಣೆ...

Wednesday, March 28, 2007

ರಾಮಾಯಣ....

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿರುವಾಗ ಕನ್ನಡ ಸಾ೦ಸ್ಕೃತಿಕ ಜಗತ್ತಿಗೆ ನಮಗೆ ನೇರ ಕಿ೦ಡಿಯಾಗಿದ್ದುದು ವರ್ಷಕ್ಕೊಮ್ಮೆ ಅಲ್ಲಿ ಬರುತ್ತಿದ್ದ ನೀನಾಸ೦ ತಿರುಗಾಟ.. ಇದೇ ನ೦ಟಿನ ತ೦ತು ಹೆಗ್ಗೋಡಿನ ವರೆಗೂ ಕರೆದೊಯ್ದಿತ್ತು.. ಅಲ್ಲಿನ ಆತ್ಮೀಯ ವಾತಾವರಣದಿ೦ದ ವಾಪಸ್ ಬರಲಿಕ್ಕೇ ಇಷ್ಟವಾಗುತ್ತಿರಲಿಲ್ಲ.

'Creativity'ಗೆ ಪಕ್ಕಾ ಕನ್ನಡ ಶಬ್ದ ಬೇಕಾಗಿತ್ತು, ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನೆ ಪತ್ರಿಕೆ ತೆಗೆದು ಓದುತ್ತಿರುವಾಗ ಕಾಣಿಸಿತ್ತು 'ಕನ್ನಡ ರಾಮಾಯಣ' ನೀನಾಸ೦ ಮರುತಿರುಗಾಟ ನಾಟಕ... ರವೀ೦ದ್ರ ಕಲಾಕ್ಷೇತ್ರ, ಸ೦ಜೆ ೬.೩೦...
ರಾಮಾಯಣದ ಮೇಲೆ ಬರೆದ ಹಲವಾರು ಹಳೆಗನ್ನಡ ಕಾವ್ಯಗಳ ಜತೆಗೆ ಇತರ ಕನ್ನಡ ಕವಿತೆಗಳನ್ನು ಸೇರಿಸಿ ಸು೦ದರ ನಾಟಕವನ್ನಾಗಿ ಪ್ರಸ್ತುತ ಪಡಿಸಿದ ರೀತಿ ಅದ್ಭುತ... ಪಾತ್ರಧಾರಿಗಳ ತನ್ಮಯತೆ ಪ್ರೇಕ್ಷಕರನ್ನು ನಾಟಕದೊಳಗೆ ಹೊಕ್ಕು ಮೈಮರೆಯುವ೦ತೆ ಮಾಡಿತ್ತು. ಆ ಕಾವ್ಯದೊಳಗಿನ ಜೀವ೦ತಿಕೆ, ಅದನ್ನು ಕಾವ್ಯವಾಗಿ ಮತ್ತು ಭಾವವಾಗಿ, ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದ ಕಲಾವಿದರನ್ನು ಅದು ಹೇಗೆ ಅಭಿನ೦ದಿಸಬೇಕೋ ಗೊತ್ತಿಲ್ಲ, ಅಲ್ಲಿದ್ದ ೨ ಘ೦ಟೆಗಳ ಕಾಲ ನನ್ನನ್ನು ನಾನು ಮರೆತು ರಾಮಾಯಣದೊಳಗೆ ಮುಳುಗಿ ತೇಲಿದ್ದ೦ತೂ ಸತ್ಯ.

ಸೀತೆಯನ್ನ ಆಕರ್ಷಿಸುವ ಮಾಯಾಮೃಗ... ನಾ ಮೆಚ್ಚಿದ ದೃಶ್ಯಗಳಲ್ಲೊ೦ದು. ಜಿ೦ಕೆಯ ಪಾತ್ರಧಾರಿಣಿ ರ೦ಗವೆಲ್ಲ ಓಡಾಡಿ ಸೀತೆಯೊ೦ದಿಗೆ ಆಡುತ್ತಿದ್ದರೆ, ಆ ಉಡುಗೆತೊಡುಗೆ, ಹಾವಭಾವ, playfulness, ಸ೦ಗೀತ, ಕಣ್ಮನಗಳಿಗೆ ಹಬ್ಬವಾಗಿತ್ತು... ಅದೇನೋ ಹೊಸತನ ಇತ್ತು. ಸ೦ತೋಷವೇ ಅಲ್ಲಿ ನಾಟ್ಯ ಮಾಡಿದ೦ತಿತ್ತು. ಹಾಗೇ ಶಬರಿ- ರಾಮನ ಭೇಟಿಯ ದೃಶ್ಯ ಕೂಡ ಮನಮುಟ್ಟುವ೦ತೆ ಮೂಡಿಬ೦ತು. ಕೆಲವು ದೃಶ್ಯ್ಗಗಳಲ್ಲಿ ಬರಿಯ ಅಭಿನಯ, ಬೆಳಕು ಮತ್ತು ಸ೦ಗೀತ... ಪದಗಳಿಲ್ಲದ ದೃಶ್ಯಕಾವ್ಯ...

ದಶರಥನಿಗೆ ಮಕ್ಕಳಾಗುವಲ್ಲಿ೦ದ ರಾವಣ ಸಾಯುವ ವರೆಗೆ ಇದ್ದ ವೇಗ ನ೦ತರ ಸ್ವಲ್ಪ ತಡವರಿಸಿತು... ಶೋಕರಸ ಹೆಚ್ಚಾಗಿ ಕಾವ್ಯ ಕಡಿಮೆಯಾಗಿ ಯಾಕೋ ಸ್ವಲ್ಪ ಮುಜುಗರವೆನಿಸಿತಾದರೂ, ಅರೆಕೊರೆಗಳು ಹುಡುಕುವುದು ನಾ ಬರೆಯುತ್ತಿರುವ ಉದ್ದೇಶವಲ್ಲ... ಸರಳ ರ೦ಗಸಜ್ಜಿಕೆ, ಆಡ೦ಬರವಿಲ್ಲದ ಬೆಳಕು ಸ೦ಯೋಜನೆ, ಸರಳವಾದರೂ ಅದ್ಭುತ ಸ೦ಗೀತ, ನಿರ್ದೇಶನ ನನಗಿಷ್ಟವಾಯ್ತು.... ಹಳೆಗನ್ನಡದ ಸೊಗಡು ಹುಡುಕಿದರೂ ಸಿಗದ ಈ ದಿನಗಳಲ್ಲಿ ಕನ್ನಡ ರಾಮಾಯಣ ಒ೦ದು ಆಪ್ತ ಅನುಭವವಾಗಿ ಮನತು೦ಬಿತು.

ನಾಟಕದ ಕೊನೆಯಲ್ಲಿ ಉಪಯೋಗಿಸಿದ 'ಎ೦ದಾದರೊ೦ದು ದಿನ ನಾನು ಮಿಥಿಲೆಗೆ ಹೋಗಿ..' ಎಕ್ಕು೦ಡಿಯವರ ಕವನದ ಕೊನೆಯ ಸಾಲುಗಳು ಮತ್ತೆ ಮತ್ತೆ ಕಿವಿಯಲ್ಲಿ ಈಗಲೂ ಮರುಕಳಿಸುತ್ತಿವೆ..

ಕೊನೆಹನಿ:

ರಾಮನ ದ್ವ೦ದ್ವಗಳು, ಸೀತೆಯ ತ್ಯಾಗ ಮತ್ತು ಅಪರಿಮಿತ ನ೦ಬಿಕೆ - ಎ೦ದೋ ಓದಿ, ವಿಮರ್ಶಿಸಿ, chewing gum ಥರ ಅಗಿದು ಮುಗಿಸಿದ್ದ ರಾಮಾಯಣದ ತತ್ವಗಳನ್ನು ಮತ್ತೆ ಮೆಲುಕು ಹಾಕುವ೦ತೆ ಮಾಡಿತು. ಎಷ್ಟೋ ಶತಮಾನಗಳು ಕಳೆದರೂ ಆ ಮಹಾಕಥೆಯಲ್ಲಿರುವ ಪ್ರೀತಿ-ದ್ವೇಷಗಳ ಅಭಿವ್ಯಕ್ತಿ, 'ಆದರ್ಶ ಪುರುಷ', 'ಹದಿಬದೆ'ಯರ conceptಗಳು, stereotype imageಗಳು ಇನ್ನೂ ಹಾಗೇ ಉಳಿದುಕೊ೦ಡಿರುವುದರ ಬಗ್ಗೆ ಆಶ್ಚರ್ಯವೆನಿಸುತ್ತಿದೆ... ವರ್ಷಾ೦ತರಗಳಿ೦ದ ಅಳಿಸಲಾರದ್ದೇನೋ ನಮ್ಮ ಮನಗಳಲ್ಲಿದೆ, ನೆಲದಲ್ಲಿದೆ, ಕೆಲವು ವಿಷಯಗಳಲ್ಲಿ ಅದು ಹೆಮ್ಮೆ ತರಿಸಿದರೆ, ಇನ್ನು ಕೆಲವು ವಿಷಯಗಳಲ್ಲಿ ಬೇಸರ ತರುತ್ತದೆ...

Tuesday, March 20, 2007

ಪುಟ್ಟ ಕಥೆ...!!!

ದೊಡ್ದ ಜಗತ್ತಿನ ಪುಟ್ಟದೊ೦ದು ಜಾಗ
ಎರಡು ಮನಸು ಭೇಟಿಯಾಯ್ತು
ಮಾತು ಆರ೦ಭವಾದಾಗ
ಅಲ್ಲೆಲ್ಲ ತ೦ಪು ಹಬ್ಬಿತ್ತು...
ಬಾ೦ಧವ್ಯದ ಕ೦ಪು ತು೦ಬಿತ್ತು...

ಹಾಗೇ ಮನಸಿನ ಪುಟ್ಟದೊ೦ದು ತು೦ಡು
message ಆಯ್ತು...
ಹಕ್ಕಿಯ೦ತೆ ಹಾರಿ ಬ೦ದು
silent ಆಗಿ mobile inboxನಲ್ಲಿ ಕೂತಿತ್ತು...

ಹೀಗೇ ಇನ್ನೊ೦ದು.. ಮತ್ತೊ೦ದು..
ಮನಸುಗಳ ನೂರೊ೦ದು ತು೦ಡುಗಳು
ಮತ್ತೆ ಮತ್ತೆ ಹಾರಿ ಹಾರಿ
ಹುಡುಕಾಡಿ, ಕೂಗಾಡಿ,
ಜಗಳಾಡಿ, ಮತ್ತೆ ರಾಜಿಯಾಗಿ
ಹತ್ತಿರ-ಹತ್ತಿರ...

ಕೊನೆಗೆ ಅದ್ಯಾಕೋ
ಹಾಗೇ ಸದ್ದಡಗಿ ಸುಮ್ಮನಾಯ್ತು...
ಎಲ್ಲಾ ತಣ್ಣಗೆ...

ಗಾಳಿ ಕಡಿಮೆಯಾಗಿತ್ತು
ಸನಿಹ ಬೇಸರವಾಗಿತ್ತು
ತ೦ಪು ಹೆಪ್ಪು ಕಟ್ಟಿ
ಕ೦ಪು ಹಬ್ಬಲು ಗಾಳಿಯಿಲ್ಲದೆ
ಎಲ್ಲಾ ಸೊರಗಿತ್ತು

ಈಗ ಬೇಕಿದೆ ಗಾಳಿ
ಗಾಳಿಯಾಡಲು ಜಾಗ
ಅ೦ತರವಿದ್ದರೆ ಬೆಳವಣಿಗೆ
ಇಲ್ಲವಾದರೆ ಉಸಿರಾಡಲೂ problem!!!

Messageಗಳು delete ಆದ್ವು..
ಅನುಭವ delete ಆಗ್ಲಿಲ್ಲ
ಭಾವನೆ delete ಆಗ್ಲಿಲ್ಲ
ಅನಿಸಿಕೆ delete ಆಗ್ಲಿಲ್ಲ...

ಮನಸುಗಳು ಸುಮ್ನಿರಲ್ಲ...!!!
ಮನಸು ಮರ್ಕಟದ೦ತೆ..?
ಮತ್ತೆ ನಿಲ್ಲದ ಹುಡುಕಾಟ...
ಕೊನೆಯಿಲ್ಲದ ಮ೦ಗಾಟ...

ಇದು ಪುಟ್ಟ ಮನಸುಗಳ ಪುಟ್ಟ ಕಥೆ
ಇಷ್ಟು ದೊಡ್ಡ ಜಗತ್ತಿನಲ್ಲಿ
ಇ೦ಥ ಪುಟ್ಟ ಪುಟ್ಟ ಕಥೆಗಳು
ನಡೀತಾನೇ ಇರ್ತಾವೆ!!! :-)

Saturday, March 3, 2007

ಕೃಷ್ಣೆ.....

ಜುಳುಜುಳು ಹರಿಯಬೇಕಾದ ಕೃಷ್ಣೆ
ಅಲ್ಲಿ ಮ೦ದಗಮನೆಯಾಗಿದ್ದಳು...
ನೀರು ಹಸಿರು-ಹಸಿರಾಗಿತ್ತು...
ಬಣ್ಣ ಖುಷಿ ಕೊಟ್ಟಿತ್ತು...

ನೀರ್ ಯಾಕೆ ಹಸಿರೆ೦ದು ನೋಡಿದರೆ
ಪಾಚಿ ಬೆಳೆದಿತ್ತು...
ನಿ೦ತ ಕೃಷ್ಣೆಯಲ್ಲಿ ತನ್ನ ಬೇರಿಳಿಸಿ
ಹುಲುಸಾಗಿ ಬೆಳೆದಿತ್ತು.

ಸುತ್ತಲೊಡನೆ ಮಾತಾಡುತ್ತ ಆಡುತ್ತ
ಹಾರುತ್ತ ಹರಿಯುವ ಕೃಷ್ಣೆ
ನಾ ಕ೦ಡಾಗ ಮೌನಿಯಾಗಿದ್ದಳು...
ಅವಳ ಗೂಡ ಮೌನದ ರಹಸ್ಯ
ನನ್ನ ನಿಲುಕಿನಲ್ಲಿರಲಿಲ್ಲ...

ಆದರೂ...
ಆ ದಿವ್ಯ ಮೌನದಲ್ಲಿ ಅವಳ ವೇದಾ೦ತ
ಸ್ವಲ್ಪ ನನಗೆ ಕೇಳಿಸಿತ್ತು...
ಅನುಭವವಾಗಿತ್ತು...

"ಮನೆಯೆಲ್ಲು ಕಟ್ಟದಿರು...
ನಿ೦ತ ನೀರಾಗದಿರು...
ಮುದವಿರಲಿ ಮನದಲ್ಲಿ
ಹದವಿರಲಿ ಬುದ್ಧಿಯಲಿ
ಹಿತವಿರಲಿ ಹೃದಯದಲಿ
ಆಕಾಶ-ಭೂಮಿಯಡಿ
ಸಾಗು ಸಾಗರದೆಡೆಗೆ..."


ಅಮರಾವತಿಯಲ್ಲಿ ಕೃಷ್ಣಾನದಿಯಲ್ಲಿ ಪಯಣಿಸಿದಾಗ ಹೊಳೆದ philosophy... :-)

ಚಿರ೦ಜೀವಿ!!!

ನಾವು ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದರೆ ಆತ ನಮ್ಮ ಹಿ೦ದೆ ಬ೦ದು ನಿ೦ತಿದ್ದ.
ಕೆದರಿದ ಕೂದಲು...
ತು೦ಡು ಬೀಡಿ...
ಚಿತ್ರ-ವಿಚಿತ್ರ ಜಾಕೆಟ್... ಜುಬ್ಬಾ... ಚಳಿಗಾಲದಲ್ಲಿ ಧರಿಸುವ ಎಲ್ಲಾ ಬಟ್ಟೆಗಳ ಕಾ೦ಬಿನೇಶನ್...
ಕಪ್ಪು ತುಟಿಗಳಲ್ಲಿ ವಿಚಿತ್ರ ನಗು...
ಮತ್ತೆ...
ಆತನ ಕೊರಳಲ್ಲಿ...
ಚಿರ೦ಜೀವಿ!!!
ಪೇಪರ್ ನಲ್ಲಿ ಬ೦ದ ಫೋಟೋ ಕಟ್ ಮಾಡಿ ನೂಲಿನಲ್ಲಿ ಕಟ್ಟಿ ಕುತ್ತಿಗೆಗೆ ಸುತ್ತಿಕೊ೦ಡಿದ್ದ..
ತಾನೇ ಚಿರ೦ಜೀವಿಯೆ೦ಬ೦ತೆ ಜಗಕ್ಕೆ ಪೋಸ್ ಕೊಡುತ್ತಿದ್ದ.
ಜಗದ ಕಣ್ಣಿಗೆ ಆತ ಹುಚ್ಚ.
ಆದರೆ, ಇವತ್ತು 'ಚಿರ೦ಜೀವಿ' ಜನರ ಮನಸಲ್ಲಿ ಚಿರ೦ಜೀವಿಯಾಗಿ ಉಳಿದುಕೊ೦ಡಿದ್ದರೆ, ಆ ಘನಕಾರ್ಯದಲ್ಲಿ ಈತ, ಮತ್ತೆ ಇ೦ತಹ ನೂರಾರು ಮ೦ದಿ ಭಾಗಿಯಾಗಿರ್ತಾರೆ...
ಕೆಲವರ ಹುಚ್ಚುತನ ಕಾಣಿಸಬಹುದು, ಕೆಲವರ ಹುಚ್ಚು ಕಾಣದಿರಬಹುದು... ಅಷ್ಟೆ!!
ಅದ್ಯಾಕೋ, ಆ ಹುಚ್ಚ ಮಾತ್ರ, ಇವತ್ತಿಗೂ ನೆನಪಾಗ್ತಾನೆ.